Jul
2015
ಇಂಗ್ಲಿಶ್ ನುಡಿಯ ಪರಿಚೆಪದಗಳು
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-18
ಮುನ್ನೋಟ
ಇಂಗ್ಲಿಶ್‌ನಲ್ಲಿ adjective ಮತ್ತು adverb ಎಂಬ ಎರಡು ಬಗೆಯ ಪರಿಚೆಪದಗಳಿವೆ; ಕನ್ನಡದಲ್ಲಿ ಇವಕ್ಕೆ ಸಾಟಿಯಾಗಬಲ್ಲ ಪದಗಳನ್ನು ಒಟ್ಟಿಗೆ ಪರಿಚೆಪದ ಎಂಬುದಾಗಿ ಕರೆಯಲಾಗಿದೆ. ಅವುಗಳ ನಡುವೆ ವ್ಯತ್ಯಾಸವನ್ನು ತೋರಿಸಬೇಕಿರುವಲ್ಲಿ ಮೊದಲನೆಯದನ್ನು ಹೆಸರುಪರಿಚೆ ಎಂದು, ಮತ್ತು ಎರಡನೆಯದನ್ನು ಎಸಕಪರಿಚೆ ಎಂದು ಕರೆಯಲಾಗುತ್ತದೆ.
ಕನ್ನಡದ ಪರಿಚೆಪದಗಳು ಇಂಗ್ಲಿಶ್‌ನ adjective ಮತ್ತು adverbಗಳ ಹಾಗೆ ಹೆಸರುಪದ (noun) ಮತ್ತು ಎಸಕಪದ(verb)ಗಳಿಗಿಂತ ಬೇರಾಗಿವೆ; ಆದರೆ, ಅವುಗಳ ಎಣಿಕೆ ಇಂಗ್ಲಿಶ್‌ನಲ್ಲಿರುವುದಕ್ಕಿಂತ ಕನ್ನಡದಲ್ಲಿ ಕಡಿಮೆ. ಕನ್ನಡದಲ್ಲಿ ಹೆಸರುಪದಗಳ ಪತ್ತುಗೆರೂಪವನ್ನು (ಮರದ wooden, ಮರುಕದ piteous) ಮತ್ತು ಎಸಕಪದಗಳ ಪರಿಚೆರೂಪಗಳನ್ನು (ಕೆಟ್ಟ bad, ತಕ್ಕ suitable, ಬಯ್ಯುವ abusive, ಕಾಣುವ visible, ಕರಗಿದ molten) ಪರಿಚೆಪದಗಳ ಜಾಗದಲ್ಲಿ ಬಳಸಲಾಗುತ್ತದೆಯೆಂಬುದು ಇದಕ್ಕೆ ಒಂದು ಕಾರಣ.
ಇಂಗ್ಲಿಶ್‌ನ ಹಲವು ಎಸಕಪರಿಚೆಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಅಣಕುಪದಗಳನ್ನು ಬಳಸಲಾಗುತ್ತದೆ (ಸರಸರನೆ hastily, ಕಚಕ್ಕನೆ forcibly) ಎಂಬುದು ಇನ್ನೊಂದು ಕಾರಣ. ಹಾಗಾಗಿ, ಇಂಗ್ಲಿಶ್ ನುಡಿಯ ಪರಿಚೆಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಹೊಸದಾಗಿ ಉಂಟುಮಾಡುವವರು ಈ ಎರಡು ವಿಶಯಗಳನ್ನು ಗಮನದಲ್ಲಿರಿಸಿಕೊಳ್ಳುವುದು ಒಳ್ಳೆಯದು.
ಇಂಗ್ಲಿಶ್ ನುಡಿಯ ಹೆಸರುಪರಿಚೆಗಳು
ಇಂಗ್ಲಿಶ್‌ನ ಹೆಸರುಪರಿಚೆಗಳಲ್ಲಿ ಒಟ್ಟುಗಳಿರುವ ಕಟ್ಟುಪದಗಳಿಗೂ ಎರಡು ಪದಗಳನ್ನು ಸೇರಿಸಿರುವ ಜೋಡುಪದಗಳಿಗೂ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಮೇಲೆ 6.3 ಮತ್ತು 8.4ರಲ್ಲಿ ವಿವರಿಸಲಾಗಿದೆ. ಈ ಎರಡು ಬಗೆಯ ಹೆಸರುಪರಿಚೆಗಳಲ್ಲದ ಬೇರೆಯೂ ಹಲವು ಹೆಸರುಪರಿಚೆಗಳು ಇಂಗ್ಲಿಶ್‌ನಲ್ಲಿವೆ. ಎತ್ತುಗೆಗಾಗಿ, pink ಎಂಬ ಹೆಸರುಪರಿಚೆ ಕಟ್ಟುಪದವೂ ಅಲ್ಲ, ಜೋಡುಪದವೂ ಅಲ್ಲ. ಇಂತಹ ಹೆಸರುಪರಿಚೆಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ.
ಕನ್ನಡದಲ್ಲಿ ಅಲು ಮತ್ತು ಕು (ಮತ್ತು ಅವೆರಡನ್ನೂ ಸೇರಿಸಿರುವ ಕಲು) ಎಂಬ ಒಟ್ಟುಗಳನ್ನು ಬಳಸಿ ಎಸಕಪದಗಳಿಂದ ಹೆಸರುಪರಿಚೆಗಳನ್ನು ಪಡೆಯಲು ಬರುತ್ತದೆ. ಇಂಗ್ಲಿಶ್‌ನ ಕೆಲವು ಹೆಸರುಪರಿಚೆಗಳಿಗೆ ಸಾಟಿಯಾಗಿ ಇಂತಹ ಹೆಸರುಪರಿಚೆಗಳನ್ನು ಕನ್ನಡದಲ್ಲಿ ಬಳಸಲು ಬರುತ್ತದೆ:
stale | ಹಳಸಲು | skew | ತಿರುಚಲು | |
flabby | ಸುಕ್ಕಲು | morose | ಸಿಡುಕಲು | |
trite | ಸವಕಲು | pallid | ಬಿಳಿಚಲು |
ಆದರೆ, ಈ ಒಟ್ಟುಗಳನ್ನು ಬಳಸಿರುವಲ್ಲಿ ಪದಕ್ಕೆ ಕೆಟ್ಟುಹೋದ ಎಂಬ ಹೆಚ್ಚಿನ ಹುರುಳೂ ಸೇರಿಕೊಳ್ಳುತ್ತದೆ. ಹಾಗಾಗಿ, ಅಂತಹ ಹೆಚ್ಚಿನ ಹುರುಳು ಬೇಡದಿರುವಲ್ಲಿ ಇವನ್ನು ಬಳಸಲು ಬರುವುದಿಲ್ಲ.
ಹೆಚ್ಚಿನ ಇಂಗ್ಲಿಶ್ ಹೆಸರುಪರಿಚೆಗಳಿಗೂ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವಲ್ಲಿ ಹೆಸರುಪದಗಳ ಪತ್ತುಗೆರೂಪವನ್ನು ಇಲ್ಲವೇ ಎಸಕಪದಗಳ ಪರಿಚೆರೂಪಗಳನ್ನು ಬಳಸುವುದೇ ಒಳ್ಳೆಯ ಹೊಲಬೆಂದು ತೋರುತ್ತದೆ. ಜೋಡುಪದಗಳ ಪತ್ತುಗೆರೂಪವನ್ನು ಮತ್ತು ಕೂಡುಪದಗಳ ಪರಿಚೆರೂಪಗಳನ್ನೂ ಈ ಕೆಲಸದಲ್ಲಿ ತೊಡಗಿಸಲು ಬರುತ್ತದೆ.
(1) ಪತ್ತುಗೆರೂಪದ ಬಳಕೆ:
ಹೆಸರುಪದಗಳ ಪತ್ತುಗೆರೂಪವನ್ನು ಬಳಸಿ ಹಲವು ಇಂಗ್ಲಿಶ್ ಹೆಸರುಪರಿಚೆಗಳಿಗೆ ಸಾಟಿಯಾಗುವಂತಹ ಪದಗಳನ್ನು ಪಡೆಯಲು ಬರುತ್ತದೆ:
sacred | ಮದಿಪಿನ | staid | ನೆಮ್ಮದಿಯ | |
rapid | ಉರುಬಿನ | intrepid | ಕೆಚ್ಚಿನ | |
florid | ಬೆಡಗಿನ | torrid | ಕಾವರದ | |
fond | ಮುದ್ದಿನ | eerie | ಗುಂಬದ |
ಕೆಲವೆಡೆಗಳಲ್ಲಿ ಜೋಡುಪದಗಳ ಪತ್ತುಗೆರೂಪವನ್ನೂ ಬಳಸಲು ಬರುತ್ತದೆ:
manic | ಕಡುಹುಚ್ಚಿನ | kind | ಕೊಡುಗಯ್ಯ | |
exact | ಕಟ್ಟುನಿಟ್ಟಿನ | ribald | ಹೊಲಸುಮಾತಿನ | |
glum | ಒಳಮುನಿಸಿನ | align | ಹೊರನಾಡಿನ |
(2) ಪರಿಚೆರೂಪಗಳ ಬಳಕೆ:
ಎಸಕಪದಗಳಿಗೆ ಹಿಂಬೊತ್ತಿನ (ಒಡೆದ), ಮುಂಬೊತ್ತಿನ (ಒಡೆಯುವ) ಮತ್ತು ಅಲ್ಲಗಳೆಯುವ (ಒಡೆಯದ) ಎಂಬ ಮೂರು ಬಗೆಯ ಪರಿಚೆರೂಪಗಳಿದ್ದು, ಈ ಮೂರನ್ನೂ ಹೆಸರುಪರಿಚೆಗಳನ್ನು ಉಂಟುಮಾಡುವಲ್ಲಿ ಬಳಸಲು ಬರುತ್ತದೆ.
(ಕ) ಹಿಂಬೊತ್ತಿನ ಪರಿಚೆರೂಪದ ಬಳಕೆ:
rabid | ಕೆರಳಿದ | flaccid | ಬಾಗಿದ | |
turgid | ಬೀಗಿದ | pale | ಬಿಳಿಚಿದ | |
overt | ತೆರೆದ | mellow | ಮಾಗಿದ | |
skew | ತಿರುಚಿದ | taut | ಬಿಗಿದ | |
past | ಕಳೆದ | abstruse | ಹುದುಗಿದ |
(ಚ) ಮುಂಬೊತ್ತಿನ ಪರಿಚೆರೂಪದ ಬಳಕೆ:
fierce | ಬೆಚ್ಚಿಸುವ | lithe | ಬಳುಕುವ | |
supple | ಬಾಗುವ | sad | ಕೊರಗುವ | |
kindred | ಹೋಲುವ | fluid | ಹರಿಯುವ | |
milch | ಕರೆಯುವ | rotary | ತಿರುಗುವ | |
saucy | ಮಲೆವ | solemn | ಕಡಗುವ |
(ಟ) ಅಲ್ಲಗಳೆಯುವ ಪರಿಚೆರೂಪದ ಬಳಕೆ:
sound | ಕೆಡದ | staid | ಪಸಿಯಿಸದ | |
intrepid | ಹೆದರದ | meager | ಮಿಗದ | |
fair | ತಪ್ಪದ | feral | ಪಳಗದ | |
foul | ಸಯ್ಯದ | firm | ಅಲುಗದ | |
overt | ಅಡಗಿಸದ | steady | ಅಲ್ಲಾಡದ |
(ತ) ಕೂಡುಪದಗಳ ಪರಿಚೆರೂಪಗಳ ಬಳಕೆ:
ಕೂಡುಪದಗಳ ಈ ಮೂರು ಬಗೆಯ ರೂಪಗಳನ್ನೂ ಹೆಸರುಪರಿಚೆಗಳಿಗೆ ಸಾಟಿಯಾಗುವಂತೆ ಬಳಸಲು ಬರುತ್ತದೆ:
ಹಿಂಬೊತ್ತಿನ ಕೂಡುಪದಗಳು:
livid | ಕನಿಪೆಕಟ್ಟಿದ | genuine | ನಂಬತಕ್ಕ | |
morbid | ಕುತ್ತಹಿಡಿದ | florid | ಕೆಂಪಡರಿದ | |
hollow | ಕುಳಿಬಿದ್ದ | extinct | ಇರವಳಿದ | |
passe | ಬಳಕೆತಪ್ಪಿದ | irate | ಸಿಟ್ಟಿಗೆದ್ದ |
ಮುಂಬೊತ್ತಿನ ಕೂಡುಪದಗಳು:
vivid | ಎದ್ದುಕಾಣುವ | kind | ಮರುಕವುಳ್ಳ | |
finite | ಹದ್ದುಳ್ಳ | fickle | ಮಾರ‍್ಪಡುವ |
ಅಲ್ಲಗಳೆಯುವ ಕೂಡುಪದಗಳು:
safe | ಗಾಸಿಗೊಳ್ಳದ | fickle | ನೆಲೆನಿಲ್ಲದ | |
placid | ಅಲ್ಲಾಡದ | stolid | ತಲ್ಲಣಗೊಳ್ಳದ | |
solid | ಪೊಳ್ಳಲ್ಲದ | moot | ತಿಳಿಯಲಾಗದ | |
licit | ಕಟ್ಟಲೆತಪ್ಪದ | frank | ಮರೆಮಾಚದ |
ಇಂಗ್ಲಿಶ್ ನುಡಿಯ ಎಸಕಪರಿಚೆಗಳು
ಇಂಗ್ಲಿಶ್‌ನಲ್ಲಿ ಹೆಚ್ಚಿನ ಎಸಕಪರಿಚೆ(adverb)ಗಳೂ ly ಎಂಬ ಒಟ್ಟಿನಲ್ಲಿ ಕೊನೆಗೊಳ್ಳುತ್ತಿದ್ದು, ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಪರಿಚೆಪದಗಳನ್ನು ಕಟ್ಟುವ ಬಗೆ ಹೇಗೆ ಎಂಬುದನ್ನು ಈಗಾಗಲೇ ವಿವರಿಸಲಾಗಿದೆ.
ಇಂಗ್ಲಿಶ್‌ನಲ್ಲಿ ಬೇರೆಯೂ ಹಲವು ಬಗೆಯ ಎಸಕಪರಿಚೆಗಳಿವೆ. ಆದರೆ, ಅವು ಹಲವಾರು ಗುಂಪುಗಳಲ್ಲಿ ಬರುತ್ತಿದ್ದು, ಒಂದೊಂದು ಗುಂಪಿನವಕ್ಕೂ ಸಾಟಿಯಾಗುವಂತೆ ಕನ್ನಡದಲ್ಲಿ ಬೇರೆ ಬೇರೆ ಬಗೆಯ ಪದಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ.
ಇದಲ್ಲದೆ, ಅವುಗಳ ಬಳಕೆಯೂ ಸೊಲ್ಲರಿಮೆಯ ಕಟ್ಟಲೆಗಳೊಂದಿಗೆ ಹೆಚ್ಚು ಹೆಣೆದುಕೊಂಡಿದೆ, ಮತ್ತು ಅವುಗಳಿಗೆ ಸಾಟಿಯಾಗುವಂತಹ ಕನ್ನಡ ಪದಗಳಲ್ಲಿ ಯಾವೊಂದು ಬಗೆಯ ಒಲವನ್ನೂ ಕಾಣಲು ಬರುವುದಿಲ್ಲ. ಹಾಗಾಗಿ, ಅವನ್ನು ಕಟ್ಟುವ ಕುರಿತಾಗಿ ಇಲ್ಲಿ ಹೆಚ್ಚೇನೂ ಹೇಳಿಲ್ಲ.
ತಿರುಳು
ಇಂಗ್ಲಿಶ್ ನುಡಿಯ ಹೆಸರುಪರಿಚೆಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳಿಗೆ ಅಲು ಇಲ್ಲವೇ ಕು ಒಟ್ಟನ್ನು ಸೇರಿಸಿ ಹೊಸ ಪದಗಳನ್ನು ಉಂಟುಮಾಡಲು ಬರುತ್ತದೆ; ಇದಲ್ಲದೆ, ಹೆಸರುಪದಗಳ ಪತ್ತುಗೆರೂಪವನ್ನು ಇಲ್ಲವೇ ಎಸಕಪದಗಳ ಪರಿಚೆರೂಪಗಳನ್ನೂ ಈ ಕೆಲಸಕ್ಕಾಗಿ ಬಳಸಲು ಬರುತ್ತದೆ. ಎಸಕಪರಿಚೆಗಳಿಗೆ ಸಾಟಿಯಾಗಿ ಕಟ್ಟಬಲ್ಲ ಪದಗಳ ಕುರಿತು ಇಲ್ಲಿ ಏನೂ ಹೇಳಿಲ್ಲ.