Oct
2014
ಇಂಬಿನ ಮುನ್ನೊಟ್ಟುಗಳು
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-9
ಇಂಬಿನ ಹುರುಳನ್ನು ತಿಳಿಸಲು ಇಂಗ್ಲಿಶ್ನಲ್ಲಿ ಬಳಕೆಯಾಗುವ fore, inter, out, over, sub, super, trans, under, ex, ಮತ್ತು extra ಎಂಬ ಹತ್ತು ಮುನ್ನೊಟ್ಟುಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಎಂತಹ ಪದಗಳನ್ನು ಇಲ್ಲವೇ ಬೇರುಗಳನ್ನು ಬಳಸಲು ಬರುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:
(1) fore ಒಟ್ಟು:
ಈ ಒಟ್ಟಿಗೆ ಮುಂದಿನ ಎಂಬ ಇಂಬಿನ ಹುರುಳು ಮಾತ್ರವಲ್ಲದೆ, ಮೊದಲಿನ ಇಲ್ಲವೇ ಹಿಂದಿನ ಎಂಬ ಹೊತ್ತಿನ ಹುರುಳೂ ಇದೆ; ಇವುಗಳಲ್ಲಿ ಹೊತ್ತಿನ ಹುರುಳನ್ನು ಮುಂದೆ (3)ರಲ್ಲಿ ವಿವರಿಸಲಾಗಿದೆ; ಮುಂದಿನ ಎಂಬ ಇಂಬಿನ ಹುರುಳಿನಲ್ಲಿ ಇದನ್ನು ಬಳಸಿರುವಲ್ಲಿ ಮುನ್ ಎಂಬ ಪರಿಚೆಬೇರನ್ನು ಪದಗಳ ಮುಂದೆ ಬಳಸಲು ಬರುತ್ತದೆ:
| land | ನೆಲ | foreland | ಮುನ್ನೆಲ | |
| name | ಹೆಸರು | forename | ಮುಂಬೆಸರು | |
| mast | ಕೂವೆಮರ | foremast | ಮುಂಕೂವೆಮರ |
(2) inter ಒಟ್ಟು:
ಈ ಒಟ್ಟಿಗೆ ಮುಕ್ಯವಾಗಿ (ಕ) ಎರಡಕ್ಕೂ ತಾಗು, ಮತ್ತು (ಚ) ಎರಡರ ನಡುವೆ ಎಂಬ ಎರಡು ಹುರುಳುಗಳಿವೆ; ಇವುಗಳಲ್ಲಿ ಮೊದಲನೆಯ ಹುರುಳಿನಲ್ಲಿ ಕನ್ನಡದ ಒಡ ಎಂಬ ಪದವನ್ನು ಮತ್ತು ಎರಡನೆಯ ಹುರುಳಿನಲ್ಲಿ ನಡು ಎಂಬ ಪದವನ್ನು ಮೊನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
(ಕ) ಎರಡನ್ನೂ ತಾಗು ಎಂಬ ಹುರುಳಿನಲ್ಲಿ:
| lace | ಹೆಣೆ | interlace | ಒಡಹೆಣೆ | |
| mingle | ಬೆರೆ | intermingle | ಒಡಬೆರೆ | |
| twine | ಹೊಸೆ | intertwine | ಒಡಹೊಸೆ |
(ಚ) ಎರಡರ ನಡುವೆ ಎಂಬ ಹುರುಳಿನಲ್ಲಿ:
| leaf | ಹಾಳೆ | interleaf | ನಡುಹಾಳೆ | |
| net | ಬಲೆ | internet | ನಡುಬಲೆ | |
| national | ನಾಡಿನ | international | ನಡುನಾಡಿನ | |
| connect | ತೆರು | interconnect | ನಡುತೆರು | |
| mediate | ಹೊಂದಿಸು | intermediate | ನಡುಹೊಂದಿಸು |
(3) out ಒಟ್ಟು:
ಮೇಲೆ ವಿವರಿಸಿದ ಹಾಗೆ, ಈ ಒಟ್ಟಿಗೆ ಹೊರ ಮತ್ತು ಮೀರು ಎಂಬ ಎರಡು ಹುರುಳುಗಳಲ್ಲಿ ಬಳಕೆಯಿದ್ದು, ಅವುಗಳಲ್ಲಿ ಮೊದಲನೆಯದು ಮಾತ್ರ ಇಂಬಿಗೆ ಸಂಬಂದಿಸಿದುದಾಗಿದೆ; ಈ ಹುರುಳಿನಲ್ಲಿ ಕನ್ನಡದ ಹೊರ ಎಂಬ ಪದವನ್ನೇ ಇದಕ್ಕೆ ಸಾಟಿಯಾಗಿ ಪದಗಳ ಮೊದಲಿಗೆ ಬಳಸಲು ಬರುತ್ತದೆ:
| flow | ಹರಿವು | outflow | ಹೊರಹರಿವು | |
| house | ಮನೆ | outhouse | ಹೊರಮನೆ | |
| post | ಪಾಳೆಯ | outpost | ಹೊರಪಾಳೆಯ | |
| going | ಹೋಗುವ | outgoing | ಹೊರಹೋಗುವ | |
| pour | ಸುರಿ | outpour | ಹೊರಸುರಿ | |
| burst | ಸಿಡಿ | outburst | ಹೊರಸಿಡಿ | |
| cast | ತಳ್ಳು | outcast | ಹೊರತಳ್ಳಿದ |
(4) over ಒಟ್ಟು:
ಹೆಚ್ಚಿನ ಬಳಕೆಗಳಲ್ಲೂ ಮೀರು ಇಲ್ಲವೇ ಮೀರಿದ ಎಂಬ ಅಳವಿನ ಹುರುಳಿದೆ; ಆದರೆ, ಕೆಲವು ಬಳಕೆಗಳಲ್ಲಿ ಮೇಲೆ ಇಲ್ಲವೇ ಮೇಲಿನ ಎಂಬ ಇಂಬಿನ ಹುರುಳೂ ಇದೆ:
| arm | ತೋಳು | overarm | ಮೇಲ್ತೋಳಿನ (ಎಸೆತ) | |
| ground | ನೆಲ | overground | ಮೇಲ್ನೆಲದ | |
| lord | ಆಳ್ಮ | overlord | ಮೇಲಾಳ್ಮ | |
| shoe | ಕೆರ | overshoe | ಮೇಲ್ಕೆರ |
(5) sub ಒಟ್ಟು:
ಈ ಒಟ್ಟಿಗೆ ಮುಕ್ಯವಾಗಿ ಒಳ ಮತ್ತು ಕೆಳ ಎಂಬ ಎರಡು ಹುರುಳುಗಳಿದ್ದು, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಇವೇ ಪದಗಳನ್ನು ಬಳಸಲು ಬರುತ್ತದೆ; ಕೆಳ ಎಂಬುದಕ್ಕೆ ಬದಲಾಗಿ ಕಿಳ್/ಕೀಳ್ ಎಂಬ ಪರಿಚೆಬೇರನ್ನು ಬಳಸಿ ಹೆಚ್ಚು ಅಡಕವಾದ ಪದಗಳನ್ನೂ ಪಡೆಯಲು ಬರುತ್ತದೆ:
| group | ಗುಂಪು | subgroup | ಒಳಗುಂಪು | |
| tenant | ಬಾಡಿಗೆಗಾರ | subtenant | ಒಳಬಾಡಿಗೆಗಾರ | |
| total | ಮೊತ್ತ | subtotal | ಒಳಮೊತ್ತ | |
| routine | ಹಮ್ಮುಗೆ | subroutine | ಒಳಹಮ್ಮುಗೆ | |
| way | ಹಾದಿ | subway | ಕೆಳಹಾದಿ | |
| script | ಬರಿಗೆ | subscript | ಕೆಳಬರಿಗೆ | |
| soil | ಮಣ್ಣು | subsoil | ಕೆಳಮಣ್ಣು | |
| sonic | ಉಲಿಯ | subsonic | ಕೀಳುಲಿಯ |
(6) super ಒಟ್ಟು:
ಈ ಒಟ್ಟಿಗೆ ಮೇಲೆ ಎಂಬ ಇಂಬಿನ ಹುರುಳಿದ್ದು, ಕನ್ನಡದಲ್ಲಿ ಇದಕ್ಕೆ ಸಾಟಿಯಾಗಿ ಮೇಲೆ ಎಂಬ ಪದವನ್ನೇ ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
| impose | ಹೇರು | superimpose | ಮೇಲೆಹೇರು | |
| script | ಬರಿಗೆ | superscript | ಮೇಲ್ಬರಿಗೆ | |
| structure | ಕಟ್ಟಡ | superstructure | ಮೇಲ್ಕಟ್ಟಡ |
(7) trans ಒಟ್ಟು:
ಈ ಒಟ್ಟಿಗೆ ಆಚೆ ಎಂಬ ಹುರುಳು ಮಾತ್ರವಲ್ಲದೆ ಮಾರ್ಪಡಿಸು ಎಂಬ ಹುರುಳೂ ಇದೆ; ಹಾಗಾಗಿ, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಆಚೆ ಎಂಬುದನ್ನು ಪದದ ಬಳಿಕ, ಮತ್ತು ಮರು/ಮಾರ್ ಎಂಬುದನ್ನು ಎಸಕಪದಗಳ ಮೊದಲು ಇಲ್ಲವೇ ಹೆಸರುಪದಗಳ ಬಳಿಕ ಬಳಸಲು ಬರುತ್ತದೆ:
| continent | ಪೆರ್ನೆಲ | transcontinental | ಪೆರ್ನೆಲದಾಚೆಯ | |
| nation | ನಾಡು | transnational | ನಾಡಿನಾಚೆಯ | |
| plant | ನಾಟು | transplant | ಮರುನಾಟು | |
| act | ಎಸಗು | transact | ಮಾರೆಸಗು | |
| scribe | ಬರೆಗ | transcribe | ಮಾರ್ಬರೆ | |
| form | ಪರಿಜು | transform | ಪರಿಜುಮಾರು |
(8) under ಒಟ್ಟು:
ಈ ಒಟ್ಟಿಗೆ ಕೆಳ ಮತ್ತು ಒಳ ಎಂಬ ಎರಡು ಇಂಬಿನ ಹುರುಳುಗಳಿವೆ; ಇದಲ್ಲದೆ, ಕೊರೆ ಎಂಬ ಅಳವಿನ ಹುರುಳೂ ಇದಕ್ಕಿದೆ.
ಇಂಬಿನ ಹುರುಳಿನಲ್ಲಿ ಇದಕ್ಕೆ ಸಾಟಿಯಾಗಿ ಕೆಳ(ಗೆ) ಮತ್ತು ಒಳ(ಗೆ) ಎಂಬ ಪದಗಳನ್ನೇ ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
(ಕ) ಕೆಳ ಎಂಬ ಹುರುಳಿನಲ್ಲಿ ಬಳಕೆ:
| lay | ಇಡು | underlay | ಕೆಳಗಿಡು | |
| cut | ಕಡಿ | undercut | ಕೆಳ ಕಡಿ | |
| belly | ಹೊಟ್ಟೆ | underbelly | ಕೆಳ ಹೊಟ್ಟೆ | |
| growth | ಬೆಳವಿ | undergrowth | ಕೆಳ ಬೆಳವಿ | |
| arm | ತೋಳು | underarm | ಕೆಳತೋಳಿನ |
(ಚ) ಒಳ ಎಂಬ ಹುರುಳಿನಲ್ಲಿ ಬಳಕೆ:
| clothing | ಉಡುಪು | underclothing | ಒಳ ಉಡುಪು | |
| current | ಹರಿವು | undercurrent | ಒಳ ಹರಿವು | |
| coat | ಹಚ್ಚುಗೆ | undercoat | ಒಳಹಚ್ಚುಗೆ |
ಕೆಲವು ಕಡೆಗಳಲ್ಲಿ ಕೆಳ(ಗೆ) ಎಂಬುದನ್ನು ಹೆಸರುಪದಗಳ ಬಳಿಕ ಬಳಸಬೇಕಾಗುತ್ತದೆ:
| foot | ಕಾಲು | underfoot | ಕಾಲ್ಕೆಳಗೆ | |
| ground | ನೆಲ | underground | ನೆಲದ ಕೆಳಗೆ | |
| water | ನೀರು | underwater | ನೀರ ಕೆಳಗೆ |
(9) ex ಒಟ್ಟು:
ಇಂಗ್ಲಿಶ್ನ ex ಒಟ್ಟನ್ನು ಮೊದಲಿನ ಎಂಬ ಹೊತ್ತಿನ ಹುರುಳಿನಲ್ಲಿ ಮಾತ್ರವಲ್ಲದೆ ಹೊರಗಿನ ಎಂಬ ಇಂಬಿನ ಹುರುಳಿನಲ್ಲೂ ಬಳಸಲಾಗುತ್ತದೆ; ಈ ಎರಡನೆಯ ಬಳಕೆಯಲ್ಲಿ ಅದು ಒಳಗಿನ ಎಂಬ ಹುರುಳಿರುವ in ಎಂಬ ಒಟ್ಟಿಗೆ ಬದಲಾಗಿ ಬರುತ್ತದೆ (import : export).
ಇಂತಹ ಕಡೆಗಳಲ್ಲಿ ಇಂಗ್ಲಿಶ್ನ in ಎಂಬುದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಒಳ ಎಂಬ ಪದವನ್ನು, ಮತ್ತು ex ಎಂಬುದಕ್ಕೆ ಸಾಟಿಯಾಗಿ ಹೊರ ಎಂಬ ಪದವನ್ನು ಬಳಸಲು ಬರುತ್ತದೆ; ಆದರೆ, ಕೆಲವೆಡೆಗಳಲ್ಲಿ ಈ ರೀತಿ ಒಳ-ಹೊರ ಎಂಬ ಪದಗಳನ್ನು ಬಳಸುವಲ್ಲಿ ಅವುಗಳ ಬಳಿಕ ಬರುವ ಎಸಕಪದವನ್ನೂ ಬದಲಾಯಿಸಬೇಕಾಗುತ್ತದೆ:
| implode | ಒಳಸಿಡಿ | explode | ಹೊರಸಿಡಿ | |
| interior | ಒಳಮಯ್ | exterior | ಹೊರಮಯ್ | |
| import | ಒಳತರು | export | ಹೊರಕಳಿಸು | |
| inhale | ಒಳಸೆಳೆ | exhale | ಹೊರಬಿಡು |
(10) extra ಒಟ್ಟು:
ಇದಕ್ಕೆ ಹೊರಗಿನ ಎಂಬ ಹುರುಳಿದ್ದು, ಕನ್ನಡದಲ್ಲಿ ಈ ಹುರುಳನ್ನು ಪಡೆಯಲು ಹೊರಗಿನ ಎಂಬ ಪದವನ್ನು ಹೆಸರುಪದದ ಬಳಿಕ ಬಳಸಬೇಕಾಗುತ್ತದೆ:
| marital | ಮದುವೆಯ | extramarital | ಮದುವೆಹೊರಗಿನ | |
| intestinal | ಕರುಳಿನ | extraintestinal | ಕರುಳುಹೊರಗಿನ | |
| linguistic | ನುಡಿಯ | extralinguistic | ನುಡಿಯ ಹೊರಗಿನ | |
| official | ಮಣಿಹದ | extraofficial | ಮಣಿಹದ ಹೊರಗಿನ |
(11) tele ಒಟ್ಟು:
ದೂರದ ಎಂಬ ಹುರುಳಿರುವ ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಗೆಂಟು ಎಂಬ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
| care | ಆರಯ್ಕೆ | telecare | ಗೆಂಟಾರಯ್ಕೆ | |
| learning | ಕಲಿಕೆ | telelearning | ಗೆಂಟುಕಲಿಕೆ | |
| sale | ಮಾರಾಟ | telesale | ಗೆಂಟುಮಾರಾಟ | |
| screen | ತೆರೆ | telescreen | ಗೆಂಟುತೆರೆ |
ತಿರುಳು:
ಇಂಗ್ಲಿಶ್ನಲ್ಲಿ ಹಲವು ಇಂಬಿನ ಮುನ್ನೊಟ್ಟುಗಳು ಬಳಕೆಯಾಗುತ್ತಿದ್ದು, ಇವಕ್ಕೆ ಸಾಟಿಯಾಗಿ ಹೆಚ್ಚಿನೆಡೆಗಳಲ್ಲೂ ಕನ್ನಡದ ಮುನ್, ಎಡ, ನಡು, ಹೊರ, ಒಳ, ಕೆಳ, ಮೇಲ್, ಗೆಂಟು ಎಂಬಂತಹ ಪರಿಚೆಬೇರುಗಳನ್ನು ಇಲ್ಲವೇ ಪದಗಳನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ.