ಕನ್ನಡ ವ್ಯಾಕರಣವನ್ನು ಕಲಿಸುವುದು ಹೇಗೆ?
ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 186
ಅಚ್ಚು: ಮೊದಲನೇ ಅಚ್ಚು, 2016
ಹೊರಪಡಿಕೆ: ಸಪ್ನ ಬುಕ್ ಹೌಸ್
ವಿವರಗಳು
ಮಕ್ಕಳಿಗೆ ವ್ಯಾಕರಣವನ್ನು ನೇರವಾಗಿ ಒಂದು ವಿಶಯದ ಹಾಗೆ ಕಲಿಸಿದಲ್ಲಿ ಅವರಿಗೆ ಅದನ್ನು ತಮ್ಮ ಓದಿನಲ್ಲಿ ಇಲ್ಲವೇ ಬರವಣಿಗೆಯಲ್ಲಿ ಬಳಸಿಕೊಳ್ಳಲು ಬರುವುದಿಲ್ಲ. ಹಾಗೇ ಕಲಿಸುವ ಬದಲು, ವ್ಯಾಕರಣದ ಕಟ್ಟಲೆಗಳನ್ನು ಓದಿನ ಇಲ್ಲವೇ ಬರಹದ ಚೂಟಿಗಳನ್ನಾಗಿ ಮಾರ‍್ಪಡಿಸಿ, ಅದನ್ನು ಬಳಸಲು ಕಲಿಸಿದಲ್ಲಿ, ಅವರು ಅವನ್ನು ಸುಲಬವಾಗಿ ಕಲಿಯಬಲ್ಲರು ಮತ್ತು ತಮ್ಮ ಓದು ಮತ್ತು ಬರಹಗಳನ್ನು ಮೇಲ್ಮಟ್ಟಕ್ಕೇರಿಸಿಕೊಳ್ಳುವಲ್ಲೂ ಬಳಸಬಲ್ಲರು.
ಈ ಕೆಲಸವನ್ನು ನಡೆಸುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ. ಇದಲ್ಲದೇ, ಇವತ್ತು ಶಾಲೆಗಳಲ್ಲಿ ಕನ್ನಡ ವ್ಯಾಕರಣವೆಂಬ ಹೆಸರಿನಲ್ಲಿ ಕಲಿಸುತ್ತಿರುವುದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲ. ಅದು ಸಂಸ್ಕ್ರುತ ವ್ಯಾಕರಣ ಕಟ್ಟಲೆಗಳನ್ನು ಕನ್ನಡಕ್ಕೆ ಅಳವಡಿಸಿಕೊಳ್ಳಲು ಒಂದು ಕೆಟ್ಟ ಪ್ರಯತ್ನ ಅಶ್ಟೇ. ಅಂತಹ ವ್ಯಾಕರಣದ ಕಟ್ಟಲೆಗಳನ್ನು ಮಕ್ಕಳಿಗೆ ಓದಿನ ಇಲ್ಲವೇ ಬರಹದ ಚೂಟಿಗಳನ್ನಾಗಿ ಮಾರ‍್ಪಡಿಸಿ ಕಲಿಸಲು ಬರುವುದಿಲ್ಲ. ಇವತ್ತಿನ ಹಾಗೆ, ಅವನ್ನು ನೇರವಾಗಿಯಶ್ಟೇ ಕಲಿಸಲು ಬರುತ್ತದೆ ಮತ್ತು ಮಕ್ಕಳಿಗೆ ಅಂತಹ ಕಲಿಕೆಯಿಂದ ಯಾವ ಪ್ರಯೋಜನವೂ ಸಿಗುವುದಿಲ್ಲ.
ಇದಕ್ಕೆ ಕಾರಣವೇನೆಂದರೆ, ಕನ್ನಡಕ್ಕೆ ಸಂಸ್ಕ್ರುತ ವ್ಯಾಕರಣಕ್ಕಿಂತ ತೀರ ಬೇರೆಯಾಗಿರುವ ಅದರದೇ ಆದ ವ್ಯಾಕರಣ (ಸೊಲ್ಲರಿಮೆ) ಇದೆ. ಇದು ಎಂತಹದು ಎಂಬುದನ್ನು, ಇದರ ಕಟ್ಟಲೆಗಳನ್ನು ಓದಿನ ಇಲ್ಲವೇ ಬರಹದ ಚೂಟಿಗಳನ್ನಾಗಿ ಮಾರ‍್ಪಡಿಸುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.