ಮಾತು ಮತ್ತು ಬರಹದ ನಡುವಿನ ಗೊಂದಲ
ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 142
ಅಚ್ಚು: ಮೊದಲನೇ ಅಚ್ಚು, 2011
ಹೊರಪಡಿಕೆ: ಬಾಶಾ ಪ್ರಕಾಶನ
ವಿವರಗಳು
ಮಾತು ಮತ್ತು ಬರಹಗಳ ನಡುವಿನ ಸಂಬಂದವೆಂತಹುದು, ಮತ್ತು ಅವಕ್ಕೂ ನುಡಿ ಇಲ್ಲವೇ ಬಾಶೆಗೂ ನಡುವಿರುವ ಸಂಬಂದವೆಂತಹುದು ಎಂಬುದರ ಕುರಿತಾಗಿ ಜನರಲ್ಲಿ ಗೊಂದಲವಿದೆ; ಈ ಗೊಂದಲದಿಂದಾಗಿ, ಅವರಲ್ಲಿ ನುಡಿಯ ಕುರಿತಾಗಿ ಹಲವು ತಪ್ಪು ಅನಿಸಿಕೆಗಳು ಮೂಡಿಬಂದಿವೆ. ಇವನ್ನು ಹೋಗಲಾಡಿಸುವುದಕ್ಕಾಗಿ, ಈ ಎರಡು ಬಗೆಯ ಸಂಬಂದಗಳು ಎಂತಹವು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ನುಡಿ ಎಂಬುದು ಮಾತಲ್ಲದೆ ಬರಹವಲ್ಲ; ನುಡಿಯ ಇಲ್ಲವೇ ಮಾತಿನ ಒಂದು ಕ್ರುತಕ ರೂಪವೇ ಬರಹ. ಮಾತು ಮಕ್ಕಳ ಬೆಳವಣಿಗೆಯ ಅಂಗವಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಾ ಹೋಗುತ್ತದೆ; ಹಾಗಾಗಿ, ಅದು ಯಾವಾಗಲೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.
ಬರಹವನ್ನು ಮಕ್ಕಳಿಗೆ ಕಲಿಸಬೇಕಾಗುತ್ತದೆಯಾದ ಕಾರಣ, ಅದು ಸಮಯ ಕಳೆದಂತೆಲ್ಲ ಹೆಚ್ಚು ಹೆಚ್ಚು ಕ್ರುತಕವಾಗುತ್ತಾ ಹೋಗಿ, ತನ್ನ ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ; ಅದರಲ್ಲಿ ಜೀವಂತಿಕೆಯನ್ನು ತುಂಬಲು ಅದಕ್ಕೂ ಮಾತಿಗೂ ನಡುವಿರುವ ಅಂತರವನ್ನು ಬರಹಗಾರರು ಕಡಿಮೆ ಮಾಡುತ್ತಿರಬೇಕಾಗುತ್ತದೆ.
ಬರಹವನ್ನು ಬಳಸಬಲ್ಲವರಿಗೂ ಅದನ್ನು ಬಳಸದಿರುವವರಿಗೂ ನಡುವೆ ಆಲೋಚಿಸುವ ಬಗೆಯಲ್ಲೇ ವ್ಯತ್ಯಾಸಗಳಿರುತ್ತವೆ; ಒಂದು ಸಮಾಜದಲ್ಲಿ ಕೆಲವರು ಮಾತ್ರ ಬರಹಬಲ್ಲವರಾಗಿದ್ದಾರೆ, ಅವರಿಗೂ ಉಳಿದವರಿಗೂ ನಡುವೆ ಹೊಂದಾಣಿಕೆಯಾಗಲಾರದು. ಹಾಗಾಗಿ, ಒಂದು ಸಮಾಜದ ಏಳಿಗೆಯಾಗಬೇಕಿದ್ದಲ್ಲಿ, ಅದರಲ್ಲಿರುವವರೆಲ್ಲರೂ ಬರಹಬಲ್ಲವರಾಗಬೇಕು.