ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 1

shabdamanidarpana

ಹಳೆಗನ್ನಡದ ಮೇಲೆ ಕೇಶಿರಾಜನು 13ನೇ ಶತಮಾನದಲ್ಲಿ ಬರೆದಿದ್ದ ಶಬ್ದಮಣಿದರ‍್ಪಣವೆಂಬ ವ್ಯಾಕರಣ ಒಂದು ಒಳ್ಳೆಯ ಕನ್ನಡ ವ್ಯಾಕರಣವೆಂಬುದಾಗಿ ನಂಬಿಕೊಂಡಿರುವವರು ಇವತ್ತಿಗೂ ಹಲವು ಮಂದಿ ಇದ್ದಾರೆ. ಆದರೆ, ಈ ನಂಬಿಕೆಗೆ ಆದಾರವೇನಿಲ್ಲ.

ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳನ್ನು ಕನ್ನಡಕ್ಕೆ ಎಶ್ಟು ಸಾದ್ಯವೋ ಅಶ್ಟರ ಮಟ್ಟಿಗೆ ಅಳವಡಿಸುವಂತಹ ಒಂದು ಪ್ರಯತ್ನವನ್ನಶ್ಟೇ ಆತ ಈ ವ್ಯಾಕರಣದಲ್ಲಿ ನಡೆಸಿದ್ದ. ಕನ್ನಡ ವ್ಯಾಕರಣ, ಅದು ಹಳೆಗನ್ನಡದ್ದಿರಲಿ, ಹೊಸಗನ್ನಡದ್ದಿರಲಿ, ಸಂಸ್ಕ್ರುತ ವ್ಯಾಕರಣಕ್ಕಿಂತ ತೀರಾ ಬೇರಾದುದು; ಹಲವು ತಳಮಟ್ಟದ ವಿಶಯಗಳಲ್ಲೇನೇ ಈ ಎರಡು ವ್ಯಾಕರಣಗಳ ಕಟ್ಟಲೆಗಳ ನಡುವೆ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನೆಲ್ಲ ಗಮನಿಸಿ, ಹಳೆಗನ್ನಡಕ್ಕೆ ಅದರದೇ ಆದ ವ್ಯಾಕರಣವೊಂದನ್ನು ಬರೆದಲ್ಲಿ ಮಾತ್ರ ಅದನ್ನೊಂದು ಒಳ್ಳೆಯ ಹಳೆಗನ್ನಡ ವ್ಯಾಕರಣವೆಂದು ಕರೆಯಲು ಬರುತ್ತದೆ.

ಹಳೆಗನ್ನಡ ವ್ಯಾಕರಣಕ್ಕೂ ಸಂಸ್ಕ್ರುತ ವ್ಯಾಕರಣಕ್ಕೂ ನಡುವೆ ಇರುವ ಇಂತಹ ತಳಮಟ್ಟದ ವ್ಯತ್ಯಾಸಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಪರಿಶೀಲಿಸಲಾಗಿದೆ, ಮತ್ತು ಇವನ್ನು ಗಮನಿಸುವಲ್ಲಿ ಕೇಶಿರಾಜನ ಶಬ್ದಮಣಿದರ‍್ಪಣ ಹೇಗೆ ಸೋತುಹೋಗಿದೆ, ಮತ್ತು ಆ ರೀತಿ ಸೋತುಹೋದುದರಿಂದಾಗಿ ಅದು ಹೇಗೆ ಒಂದು ಒಳ್ಳೆಯ ಹಳೆಗನ್ನಡ ವ್ಯಾಕರಣವಾಗಲಾರದು ಎಂಬುದನ್ನು ಕೆಳಗೆ ವಿವರಿಸಲಾಗಿದೆ:

(1) ಪದಗಳ ಬಗೆಗಳು:

ಹಳೆಗನ್ನಡದಲ್ಲಿ ಮುಕ್ಯವಾಗಿ ಮೂರು ಬಗೆಯ ಪದಗಳು ಬಳಕೆಯಾಗುತ್ತವೆ; ಇವನ್ನು ಹೆಸರುಪದ (ಕೊಳ, ಬಿಲ್, ಕೋಂಟೆ, ತುಂಬಿ), ಎಸಕಪದ (ಎಱಗು, ಮೊಱೆ, ನೋಡು, ಎನ್), ಮತ್ತು ಪರಿಚೆಪದ (ಬಡ, ಚೆನ್ನ, ಎಳ, ನಲ್, ಪೊಸ) ಎಂಬುದಾಗಿ ಇವನ್ನು ಕರೆಯಬಹುದು. ಇದಕ್ಕೆ ಬದಲು, ಸಂಸ್ಕ್ರುತದಲ್ಲಿ ಹೆಸರು(ನಾಮ)ಪದ ಮತ್ತು ಎಸಕ(ಕ್ರಿಯಾ)ಪದ ಎಂಬುದಾಗಿ ಎರಡು ಬಗೆಯ ಪದಗಳು ಮಾತ್ರ ಇವೆ.

ಹಳೆಗನ್ನಡದಲ್ಲಿ ಪರಿಚೆಪದಗಳಿಗೂ ಉಳಿದ ಎರಡು ಬಗೆಯ ಪದಗಳಿಗೂ ನಡುವಿರುವ ಮುಕ್ಯವಾದ ವ್ಯತ್ಯಾಸವೇನೆಂದರೆ, ಪರಿಚೆಪದಗಳನ್ನು ನೇರವಾಗಿ ಹೆಸರುಪದಗಳೊಂದಿಗೆ ಅವುಗಳ ವಿಶೇಶಣಗಳಾಗಿ ಬಳಸಲು ಬರುತ್ತದೆ (ಬಡ ಪಾರ‍್ವಂ, ನಲ್ಲಂಬು, ಬೆಳ್ಮುಗಿಲ್); ಆದರೆ, ಹೆಸರುಪದ ಇಲ್ಲವೇ ಎಸಕಪದಗಳನ್ನು ಆ ರೀತಿ ನೇರವಾಗಿ ಹೆಸರುಪದಗಳೊಂದಿಗೆ ಅವುಗಳ ವಿಶೇಶಣಗಳಾಗಿ ಬಳಸಲು ಬರುವುದಿಲ್ಲ; ಇದಕ್ಕಾಗಿ ಅವಕ್ಕೆ ಪತ್ತುಗೆಯ ಅ ಒಟ್ಟನ್ನು (ಪ್ರತ್ಯಯವನ್ನು) ಸೇರಿಸಬೇಕಾಗುತ್ತದೆ (ಕೊಳನ ತಡಿ, ಬಿಲ್ಲ ಗೊಲೆ, ತುಂಬಿಯ ಬಂಬಲ್ಗಳ್; ಎಱಗಿದ ತರುಗಳ್, ಮೊರೆವ ತುಂಬಿಗಳ್, ಅಱಿಯದ ಮಾತು). ಇದಲ್ಲದೆ, ಪರಿಚೆಪದಗಳನ್ನು ಹೆಸರುಪದಗಳ ಜಾಗದಲ್ಲಿ ಬಳಸಬೇಕಿದ್ದರೆ ಅವಕ್ಕೆ ಒಟ್ಟುಗಳನ್ನು ಸೇರಿಸಿ ಹೆಸರುಪದವನ್ನಾಗಿ ಮಾರ‍್ಪಡಿಸಬೇಕಾಗುತ್ತದೆ (ಬಡವನ್ ವೇಡಿದನ್, ಇನಿಯಳ್ಗೆ ಅರಿಪಿದೊಡೆ, ಪೊಸತಂ ಮಾಡಿದುದು). ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ಹೆಸರುಪದ ಮತ್ತು ಎಸಕಪದಗಳಿಗೂ ಪರಿಚೆಪದಗಳಿಗೂ ನಡುವೆ ಹಳೆಗನ್ನಡದಲ್ಲಿವೆ.

ಸಂಸ್ಕ್ರುತದಲ್ಲಿ ಪರಿಚೆಪದಗಳೆಂಬ ಮೂರನೇ ಬಗೆಯ ಪದಗಳಿಲ್ಲ; ಹಳೆಗನ್ನಡದಲ್ಲಿ ಪರಿಚೆ ಪದಗಳು ಎಂತಹ ಕೆಲಸವನ್ನು ನಡೆಸಬೇಕಾಗಿದೆಯೋ ಅವನ್ನು ಸಂಸ್ಕ್ರುತದಲ್ಲಿ ಹೆಸರು(ನಾಮ)ಪದಗಳೇ ನಡೆಸುತ್ತವೆ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಹೆಸರುಪದಗಳ ವಿಶೇಶಣಗಳಾಗಿ ಹೆಸರುಪದಗಳನ್ನೇ ಬಳಸಲಾಗುತ್ತದೆ, ಮತ್ತು ಈ ಕಾರಣಕ್ಕಾಗಿ ಅವಕ್ಕೂ ವಿಬಕ್ತಿಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ (ಕೃಷ್ಣಃ ಸರ್ಪಃ, ಕೃಷ್ಣಂ ಸರ್ಪಂ, ಕೃಷ್ಣೇನ ಸರ್ಪೇಣ). ಅವೆರಡನ್ನೂ ಸಮಾಸದ ಮೂಲಕ ಒಂದೇ ಪದವನ್ನಾಗಿ ಮಾಡಲಾಗಿದೆಯಾದರೆ ಮಾತ್ರ ಈ ರೀತಿ ಎರಡು ಬಾರಿ ವಿಬಕ್ತಿ ಪ್ರತ್ಯಯಗಳನ್ನು ಬಳಸಬೇಕಾಗುವುದಿಲ್ಲ.

ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸುವಲ್ಲಿ ಕೇಶಿರಾಜನ ಶಬ್ದಮಣಿದರ‍್ಪಣ ಸೋತುಹೋಗಿದೆ, ಮತ್ತು ಇದರಿಂದಾಗಿ ಅದು ಹಲವಾರು ಕಡೆಗಳಲ್ಲಿ ಗೊಂದಲಕ್ಕೊಳಗಾಗಿರುವುದನ್ನು ಕಾಣಬಹುದು.

ಎತ್ತುಗೆಗಾಗಿ, ಹಳೆಗನ್ನಡದಲ್ಲಿ ಎಸಕಪದಗಳ ಪರಿಚೆರೂಪ(ಕೃದಂತ)ಗಳಿಗೂ ಹೆಸರುರೂಪ(ಕೃಲ್ಲಿಂಗ)ಗಳಿಗೂ ನಡುವೆ ವ್ಯತ್ಯಾಸವಿದೆ; ಇರ‍್ದ, ಈಯದ ಎಂಬಂತಹವು ಪರಿಚೆರೂಪಗಳು, ಮತ್ತು ಇರ‍್ದನ್, ಇರ‍್ದರ್, ಈಯದನ್, ಈಯದುದು ಎಂಬಂತಹವು ಹೆಸರುರೂಪಗಳು. ಆದರೆ, ಸಂಸ್ಕ್ರುತದಲ್ಲಿ ಇಂತಹ ವ್ಯತ್ಯಾಸವಿಲ್ಲ. ಇದನ್ನು ಗಮನಿಸಲಾಗದ ಶಬ್ದಮಣಿದರ‍್ಪಣದಲ್ಲಿ ಕೃದಂತ ಮತ್ತು ಕೃಲ್ಲಿಂಗಗಳ ಕುರಿತಾಗಿ ಕೊಡುವ ಹೇಳಿಕೆಗಳೆಲ್ಲ ಸಿಕ್ಕಲು ಸಿಕ್ಕಲಾಗಿವೆ.

ಕೊಳನ, ಮರದ, ಅರಸಿನ ಎಂಬಂತಹವು ಹಳೆಗನ್ನಡದಲ್ಲಿ ಹೆಸರುಪದಗಳ ಪರಿಚೆರೂಪಗಳಲ್ಲದೆ ವಿಬಕ್ತಿರೂಪಗಳಲ್ಲ; ಅವು ಬೇರೆ ಪರಿಚೆಪದಗಳ ಹಾಗೆ ಗುರ‍್ತ (ಲಿಂಗ) ಮತ್ತು ಎಣಿಕೆ (ವಚನ) ಒಟ್ಟುಗಳೊಂದಿಗೆ ಬಳಕೆಯಾಗಬಲ್ಲುವು (ಮನೆಯನ್ ಬಂದನ್, ರಥದನ್ ಅಶ್ವತ್ಥಾಮನ್), ಮತ್ತು ಅವುಗಳ ಹೆಸರುರೂಪಗಳ ಬಳಿಕ ಪತ್ತುಗೆ (ವಿಬಕ್ತಿ) ಒಟ್ಟುಗಳನ್ನು ಬಳಸಲು ಬರುತ್ತದೆ (ಬರ‍್ದಿನಂಗೆ ಸೆರಪು ಗೆಯ್ದರ್ – ಬರ‍್ದಿನನ್+ಗೆ). ಈ ವ್ಯತ್ಯಾಸವನ್ನು ಗಮನಿಸುವಲ್ಲಿ ಶಬ್ದಮಣಿದರ‍್ಪಣ ಸೋತುಹೋಗಿದೆ.

ಸಂಸ್ಕ್ರುತದಲ್ಲಿ ಮೃತ, ಕೃತ ಎಂಬಂತಹ ಕೃದಂತಗಳು, ಕೃಷ್ಣ, ಶ್ವೇತ ಎಂಬಂತಹ ಪರಿಚೆಯನ್ನು ತಿಳಿಸಬಲ್ಲ ಹೆಸರುಪದಗಳು, ಏಕ, ದ್ವಿ, ತ್ರಿ ಎಂಬಂತಹ ಎಣಿಕೆಪದಗಳು, ಸ, ತತ್ ಎಂಬಂತಹ ತೋರುಪದ(ಸರ‍್ವನಾಮ)ಗಳು ಇವೆಲ್ಲವೂ ಹೆಸರುಪದಗಳ ಹಾಗೆ ಬಳಕೆಯಾಗುತ್ತವೆ; ಅವನ್ನು ಇನ್ನೊಂದು ಹೆಸರುಪದದೊಂದಿಗೆ ಬಳಸಬೇಕಿದ್ದಲ್ಲಿ ಹೆಸರುಪದಗಳಿಗೆ ಮಾತ್ರವಲ್ಲದೆ ಅವಕ್ಕೂ ವಚನ-ವಿಬಕ್ತಿ ಒಟ್ಟುಗಳನ್ನು ಸೇರಿಸಬೇಕಾಗುತ್ತದೆ (ಮೃತಂ ಸರ‍್ಪಂ, ಕೃಷ್ಣಂ ಸರ‍್ಪಂ, ಏಕಂ ಸರ‍್ಪಂ, ತಂ ಸರ‍್ಪಂ); ಹಾಗಾಗಿ, ಹೆಸರುಪದಗಳೊಂದಿಗೆ ಅವನ್ನು ವಚನ-ವಿಬಕ್ತಿ ಒಟ್ಟುಗಳಿಲ್ಲದೆ ಬಳಸಿದಾಗ (ಮೃತಸರ‍್ಪಂ, ಕೃಷ್ಣಸರ‍್ಪಂ, ಏಕಸರ‍್ಪಂ) ಅಂತಹ ಬಳಕೆಗಳಲ್ಲಿ ಸಮಾಸ ನಡೆದಿದೆಯೆಂದು ಹೇಳಲು ಬರುತ್ತದೆ.

ಆದರೆ, ಹಳೆಗನ್ನಡದಲ್ಲಿ ಕೃದಂತಗಳು, ಪರಿಚೆಪದಗಳು, ಎಣಿಕೆಪದಗಳು ಇಲ್ಲವೇ ತೋರುಪದಗಳು ಹೆಸರುಪದಗಳೊಂದಿಗೆ ಬರುವಾಗ ಅವಕ್ಕೆ ವಿಬಕ್ತಿ ಒಟ್ಟುಗಳನ್ನು ಸೇರಿಸಲು ಬರುವುದಿಲ್ಲ; ಅವು ನೇರವಾಗಿ ಹೆಸರುಪದಗಳೊಂದಿಗೆ ಬರುತ್ತವೆ, ಮತ್ತು ಆ ರೀತಿ ನೇರವಾಗಿ ಬರುವವುಗಳೇ ಹಳೆಗನ್ನಡದ ಪದಕಂತೆಗಳಾಗಿರುತ್ತವೆ (ಬಂದ ಬಟ್ಟೆ, ಪೊಸ ಗೊಂಚಲು, ಓರಡಿ, ಆ ಪೂಗಳ್). ಸಂಸ್ಕ್ರುತಕ್ಕೂ ಹಳೆಗನ್ನಡಕ್ಕೂ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದೆ ಶಬ್ದಮಣಿದರ‍್ಪಣ ಈ ಎಲ್ಲಾ ಪದಕಂತೆಗಳನ್ನೂ ಸಮಾಸಗಳೆಂದು ಹೇಳುವ ಮೂಲಕ ಒಂದು ದೊಡ್ಡ ಗೊಂದಲವನ್ನೇ ಉಂಟುಮಾಡಿದೆ.

ಇಂತಹ ಬೇರೆಯೂ ಹಲವು ವಿಶಯಗಳಲ್ಲಿ ಮೇಲಿನ ಪರಿಚೆಪದ-ಹೆಸರುಪದ ವ್ಯತ್ಯಾಸವನ್ನು ಗಮನಿಸದಿರುವುದರಿಂದಾಗಿ ಶಬ್ದಮಣಿದರ‍್ಪಣ ಗೊಂದಲದ ಗೂಡಾಗಿದೆ.

facebooktwitter

Comments are closed.