May
2017
ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 3
(3) ಜೋಡುಪದಗಳು ಮತ್ತು ಪದಕಂತೆಗಳು:
ಹಳೆಗನ್ನಡದಲ್ಲಿ ಜೋಡುಪದಗಳಿಗೂ ಪದಕಂತೆಗಳಿಗೂ ನಡುವೆ ವ್ಯತ್ಯಾಸವಿದೆ; ಎರಡು ಪದಗಳು ಸೇರಿ ಹೊಸದೊಂದು ಪದವಾಗಿದೆಯಾದರೆ ಅದನ್ನೊಂದು ಜೋಡುಪದವೆಂದು ಕರೆಯಬಹುದು. ಎತ್ತುಗೆಗಾಗಿ, ಬೆಳ್ ಮತ್ತು ತಿಂಗಳ್ ಎಂಬ ಎರಡು ಪದಗಳನ್ನು ಸೇರಿಸಿ ಉಂಟುಮಾಡಿರುವ ಬೆಳ್ದಿಂಗಳ್ ಎಂಬುದು ಒಂದು ಹೊಸಪದ; ಅದು ತಿಂಗಳ ಬೆಳಕನ್ನು ತಿಳಿಸುತ್ತದಲ್ಲದೆ, ಬಿಳಿಯಾದ ತಿಂಗಳನ್ನು ತಿಳಿಸುವುದಿಲ್ಲ. ಹಾಗಾಗಿ, ಅದನ್ನೊಂದು ಜೋಡುಪದವೆಂದು ಕರೆಯಲು ಬರುತ್ತದೆ. ಆದರೆ, ಬೆಳ್ ಮತ್ತು ಮುಗಿಲ್ ಎಂಬ ಎರಡು ಪದಗಳನ್ನು ಸೇರಿಸಿ ಉಂಟುಮಾಡಿರುವ ಬೆಳ್ಮುಗಿಲ್ ಎಂಬುದು ಒಂದು ಹೆಸರುಕಂತೆಯಲ್ಲದೆ ಹೊಸಪದವಲ್ಲ; ಯಾಕೆಂದರೆ, ಅದು ಮುಗಿಲು ಎಂತಹದು ಎಂಬುದನ್ನಶ್ಟೇ ತಿಳಿಸುತ್ತದೆ.
ಇಂತಹ ಜೋಡುಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ವೇದಕಾಲದ ಸಂಸ್ಕ್ರುತದಲ್ಲಿತ್ತು; ಆದರೆ, ಕಾವ್ಯ-ಶಾಸ್ತ್ರಗಳ ಕಾಲದ ಸಂಸ್ಕ್ರುತದಲ್ಲಿ ಅದು ಹೆಚ್ಚುಕಡಿಮೆ ಅಳಿದುಹೋಗಿದೆ; ಆ ಸಮಯಕ್ಕಾಗುವಾಗ, ಬರಹದ ಸಂಸ್ಕ್ರುತಕ್ಕೂ ಆಡುನುಡಿಗಳಿಗೂ ನಡುವಿರುವ ಹೊಂದಾಣಿಕೆ ಹೆಚ್ಚುಕಡಿಮೆ ಇಲ್ಲವಾದುದೇ ಇದಕ್ಕೆ ಕಾರಣವಿರಬೇಕು; ಅಂತಹ ಹೊಂದಾಣಿಕೆಯಿದ್ದಲ್ಲಿ ಮಾತ್ರ ಒಂದು ಬರಹ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳಬಲ್ಲುದು. ಜೋಡುಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ಇಲ್ಲವಾದುದರಿಂದಾಗಿ ಕಾವ್ಯಗಳ ಕಾಲದ ಸಂಸ್ಕ್ರುತದಲ್ಲಿ ಎರಡು ಇಲ್ಲವೇ ಹೆಚ್ಚು ಪದಗಳು ಒಟ್ಟಿಗೆ ಸೇರಿಕೊಂಡಿರುವಲ್ಲೆಲ್ಲ ಸಮಾಸ ನಡೆದಿದೆಯೆಂದು ಹೇಳಬೇಕಾಗುತ್ತದೆ.
ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವಿರುವ ಈ ವ್ಯತ್ಯಾಸವನ್ನು ಗಮನಿಸದ ಶಬ್ದಮಣಿದರ‍್ಪಣ ಹಳೆಗನ್ನಡದಲ್ಲಿ ಎರಡು ಪದಗಳು ಒಟ್ಟಿಗೆ ಸೇರಿರುವಲ್ಲೆಲ್ಲ ಸಮಾಸವನ್ನು ಕಾಣಲು ಹೊರಟಿದೆ. ಎಳಗೊಂಬು, ಪೇರಾನೆ, ಪೊಸನೆತ್ತರ್, ನಿಡುಗಣ್ ಮೊದಲಾದುವು ಹಳೆಗನ್ನಡದಲ್ಲಿ ನಿಜಕ್ಕೂ ಪದಕಂತೆಗಳಲ್ಲದೆ ಜೋಡುಪದಗಳಲ್ಲ. ಇದಲ್ಲದೆ, ಹಳೆಗನ್ನಡದಲ್ಲಿ ಪೊಸ, ಕಿಱಿ, ಬೆಳ್, ನಿಡು ಮೊದಲಾದವುಗಳೇ ಪರಿಚೆಪದಗಳ ಮೂಲರೂಪಗಳು; ಪೊಸತು, ಕಿಱಿಯರ್, ಕಿಱಿದು ಮೊದಲಾದುವು ಅವುಗಳ ಹೆಸರುರೂಪಗಳು. ಇವುಗಳಲ್ಲಿ ಹೆಸರುರೂಪಗಳೇ ಮೂಲರೂಪಗಳೆಂದೂ, ಪರಿಚೆರೂಪಗಳು ಸಮಾಸದಲ್ಲಿ ಬಳಕೆಯಾಗುವ ಅವುಗಳ ಅಡಕರೂಪಗಳೆಂದೂ ಹೇಳುವುದೆಂದರೆ ಹಳೆಗನ್ನಡದ ವ್ಯಾಕರಣವನ್ನು ತಿರುಚಿ ಹೇಳಿದಂತೆ.
(4) ಗುರ‍್ತಗಳ ನಡುವಿನ ವ್ಯತ್ಯಾಸ:
ಹೆಸರುಪದಗಳನ್ನು ಅವುಗಳ ಬಳಕೆಗೆ ಸಂಬಂದಿಸಿದಂತೆ ಕೆಲವು ಮುಕ್ಯ ಗುಂಪುಗಳಲ್ಲಿ ವಿಂಗಡಿಸಲು ಬರುತ್ತದೆ; ಈ ವಿಂಗಡಣೆಯನ್ನು ಸಂಸ್ಕ್ರುತದಲ್ಲಿ ಲಿಂಗ ಎಂಬುದಾಗಿ ಕರೆಯಲಾಗುತ್ತದೆ; ಇದನ್ನು ಕನ್ನಡದಲ್ಲಿ ಗುರ‍್ತ ಎಂಬುದಾಗಿ ಕರೆಯಬಹುದು. ಈ ವಿಂಗಡಣೆಯ ವಿಶಯದಲ್ಲಿ ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವೆ ತಳಮಟ್ಟದ ವ್ಯತ್ಯಾಸಗಳಿವೆ:
ಹಳೆಗನ್ನಡದಲ್ಲಿ ಹೆಸರುಪದಗಳನ್ನು ಮೂರು ಗುರ‍್ತಗಳಲ್ಲಿ ವಿಂಗಡಿಸಲು ಬರುತ್ತದೆ: ಮನುಶ್ಯರನ್ನು ಗುರುತಿಸುವ ಹೆಸರುಪದಗಳು ಗಂಡಸರನ್ನು ಗುರುತಿಸುವುದಿದ್ದಲ್ಲಿ ಅವನ್ನು ಗಂಡುಗುರ‍್ತ(ಪುಲ್ಲಿಂಗ)ವೆಂಬ ಗುಂಪಿನಲ್ಲಿ ಗುಂಪಿಸಬಹುದು, ಮತ್ತು ಹೆಂಗಸರನ್ನು ಗುರುತಿಸುವುದಿದ್ದಲ್ಲಿ ಅವನ್ನು ಹೆಣ್ಣುಗುರ‍್ತ(ಸ್ತ್ರೀಲಿಂಗ)ವೆಂಬ ಗುಂಪಿನಲ್ಲಿ ಗುಂಪಿಸಬಹುದು; ಉಳಿದ ಎಲ್ಲಾ ಹೆಸರುಪದಗಳನ್ನೂ ಉಳಿಕೆಗುರ‍್ತ(ನಪುಂಸಕಲಿಂಗ)ವೆಂಬ ಮೂರನೆಯ ಗುಂಪಿನಲ್ಲಿ ಗುಂಪಿಸಬಹುದು. ಈ ರೀತಿ ಹಳೆಗನ್ನಡದಲ್ಲಿ ಪದಗಳ ಗುಂಪಿಸುವಿಕೆ (ಎಂದರೆ ಅವುಗಳ ಲಿಂಗಬೇದ) ಅವುಗಳ ಹುರುಳನ್ನು ಮಾತ್ರ ಅವಲಂಬಿಸಿರುತ್ತದೆ.
ಕೆಲವೊಮ್ಮೆ ಮನುಶ್ಯರಲ್ಲದವರನ್ನು ಸೂಚಿಸುವ ಪದಗಳ ಮೇಲೆ ಮನುಶ್ಯತನವನ್ನು ಹೊರಿಸಲಾಗುತ್ತದೆ (ರವಿ ಮೂಡಿದಂ, ಸಿರಿಯೊಲ್ವಳು), ಮತ್ತು ಮನುಶ್ಯರನ್ನು ಸೂಚಿಸುವ ಪದಗಳ ಮೇಲೂ ಪ್ರಾಣಿತನವನ್ನು ಹೊರಿಸಲಾಗುತ್ತದೆ (ಪೆಣ್ ಬಂದುದು); ಆದರೆ, ಇಂತಹ ಕಡೆಗಳಲ್ಲೂ ಪದಗಳಿಗೆ ಕೊಟ್ಟಿರುವ ಹುರುಳೇ ಅವುಗಳ ಗುರ‍್ತ ಎಂತಹದು ಎಂಬುದನ್ನು ತಿಳಿಸುತ್ತದೆ.
ಸಂಸ್ಕ್ರುತದಲ್ಲಿಯೂ ಹೆಸರುಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ಮತ್ತು ನಪುಂಸಕಲಿಂಗ ಎಂಬ ಮೂರು ಗುರ‍್ತಗಳಲ್ಲಿ ಗುಂಪಿಸಲಾಗುತ್ತದೆ; ಆದರೆ, ಇದು ಹಳೆಗನ್ನಡದ ಹಾಗೆ ಪದಗಳ ಹುರುಳನ್ನು ಅವಲಂಬಿಸಿಲ್ಲ; ‘ಹೆಂಡತಿ’ ಎಂಬ ಒಂದೇ ಹುರುಳಿರುವ ದಾರ ಪದ ಪುಲ್ಲಿಂಗ, ಪತ್ನಿ ಪದ ಸ್ತ್ರೀಲಿಂಗ, ಮತ್ತು ಕಲತ್ರ ಪದ ನಪುಂಸಕಲಿಂಗ. ಮನುಶ್ಯರಲ್ಲದವನ್ನು ಗುರುತಿಸುವ ಪದಗಳೂ ಈ ಮೂರು ಗುರ‍್ತಗಳಲ್ಲಿ ಬರಬಲ್ಲುವು (ಪವನ, ಪಾದ, ವಾಯು ಮೊದಲಾದವು ಪುಲ್ಲಿಂಗ; ನೌ, ನದಿ, ವಿಭಕ್ತಿ, ಮತಿ ಮೊದಲಾದವು ಸ್ತ್ರೀಲಿಂಗ; ಮತ್ತು ಹೃದಯ, ಮಧು, ಜಗತ್ ಮೊದಲಾದವು ನಪುಂಸಕಲಿಂಗ).
ಇದಲ್ಲದೆ, ಸಂಸ್ಕ್ರುತದ ಕೆಲವು ಹೆಸರುಪದಗಳು ಯಾವಾಗಲೂ ಒಂದೇ ಗುರ‍್ತದಲ್ಲಿ ಬಳಕೆಯಾಗುತ್ತವೆಯಾದರೆ, ಇನ್ನು ಕೆಲವು ಅವುಗಳೊಂದಿಗೆ ಬರುವ ಬೇರೆ ಹೆಸರುಪದಗಳ ಗುರ‍್ತವನ್ನವಲಂಬಿಸಿ ಎರಡು ಇಲ್ಲವೇ ಮೂರು ಗುರ‍್ತಗಳಲ್ಲೂ ಬರಬಲ್ಲುವು. ಈ ರೀತಿ ಒಂದಕ್ಕಿಂತ ಹೆಚ್ಚು ಗುರ‍್ತಗಳಲ್ಲಿ ಬರಬಲ್ಲ ಹೆಸರುಪದಗಳು ಒಂದೇ ಗುರ‍್ತದಲ್ಲಿ ಬರಬಲ್ಲ ಹೆಸರುಪದಗಳೊಂದಿಗೆ ಯಾವ ಗುರ‍್ತರೂಪದಲ್ಲಿ ಬರುತ್ತವೆ ಎಂಬುದರ ಮೇಲೆ ಒಂದೇ ರೂಪದಲ್ಲಿ ಬರುವ ಹೆಸರುಪದಗಳ ಗುರ‍್ತ ಯಾವುದು ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ಶುಕ್ಲ ಪದ ವರ‍್ಣ ಪದದೊಂದಿಗೆ ಪುಲ್ಲಿಂಗ ರೂಪದಲ್ಲಿ (ಶುಕ್ಲಃ ವರ‍್ಣಃ), ನೌ ಪದದೊಂದಿಗೆ ಸ್ತ್ರೀಲಿಂಗದಲ್ಲಿ (ಶುಕ್ಲಾ ನೌಃ), ಮತ್ತು ವಾಸಃ ಪದದೊಂದಿಗೆ ನಪುಂಸಕಲಿಂಗದಲ್ಲಿ (ಶುಕ್ಲಂ ವಾಸಃ) ಬರುವುದರಿಂದ ವರ‍್ಣ, ನೌ, ಮತ್ತು ವಾಸ ಪದಗಳ ಗುರ‍್ತ ಪುಂ, ಸ್ತ್ರೀ ಮತ್ತು ನಪುಂಸಕ ಎಂದು ಹೇಳಬೇಕಾಗುತ್ತದೆ.
ಸಂಸ್ಕ್ರುತದಲ್ಲಿ ಹೆಸರುಪದಗಳ ಗುರ‍್ತಗಳ ಕುರಿತಾಗಿರುವ ಕಟ್ಟಲೆಗಳು ಈ ರೀತಿ ತುಂಬಾ ಸಿಕ್ಕಲು ಸಿಕ್ಕಲಾಗಿವೆಯಾದ ಕಾರಣ, ಅದರ ಪದಕೋಶಗಳಲ್ಲಿ ಪ್ರತಿಯೊಂದು ಹೆಸರುಪದದ ಎದುರೂ ಅದು ಯಾವ ಗುರ‍್ತದಲ್ಲಿ ಇಲ್ಲವೇ ಗುರ‍್ತಗಳಲ್ಲಿ ಬರಬಲ್ಲುದು ಎಂಬುದನ್ನು ತಿಳಿಸಬೇಕಾಗುತ್ತದೆ; ಇದಕ್ಕೆ ಬದಲು, ಹಳೆಗನ್ನಡದಲ್ಲಿ ಹೆಸರುಪದಗಳ ಗುರ‍್ತ ಅವುಗಳ ಹುರುಳನ್ನವಲಂಬಿಸಿದೆಯಾದ ಕಾರಣ ಅದನ್ನು ಪದಕೋಶಗಳಲ್ಲಿ ತಿಳಿಸಬೇಕಾಗಿಲ್ಲ.
ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದೆ, ಸಂಸ್ಕ್ರುತದಂತಹದೇ ಒಂಬತ್ತು ಬಗೆಯ ಗುರ‍್ತಗಳನ್ನು ಹಳೆಗನ್ನಡದಲ್ಲೂ ಕಾಣಲು ಶಬ್ದಮಣಿದರ‍್ಪಣ ಪ್ರಯತ್ನಿಸುತ್ತದೆ; ಆದರೆ, ಹಾಗೆ ಕಾಣಲು ಬರುವುದಿಲ್ಲವಾದ ಕಾರಣ, ಈ ವಿಶಯದಲ್ಲಿ ಶಬ್ದಮಣಿದರ‍್ಪಣ ಗೊಂದಲದ ಗೂಡಾಗಿದೆ.