Archive of ‘ನುಡಿಯರಿಮೆ’ category
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-೫
ಎಸಕವನ್ನು ಇಲ್ಲವೇ ಎಸಕದ ದೊರೆತವನ್ನು ಗುರುತಿಸುವ ಹೆಸರುಪದಗಳು:
ಇಂಗ್ಲಿಶ್‌ನ ಎಸಕಪದದಿಂದ ಪಡೆದ ಹೆಸರುಪದಗಳು ಎಸಕವನ್ನು ಹೆಸರಿಸುತ್ತಿವೆಯೇ ಇಲ್ಲವೇ ಎಸಕದ ದೊರೆತವನ್ನು ಹೆಸರಿಸುತ್ತಿವೆಯೇ ಎಂಬುದನ್ನು ಅವುಗಳನ್ನು ಪಡೆಯುವಲ್ಲಿ ಬಳಕೆಯಾಗುವ ಒಟ್ಟುಗಳು ತಿಳಿಸುವುದಿಲ್ಲ. ಯಾಕೆಂದರೆ, ಎಸಕವನ್ನು ಹೆಸರಿಸಬಲ್ಲ ಹೆಚ್ಚಿನ ಹೆಸರುಪದಗಳೂ ಎಸಕದ ದೊರೆತವನ್ನೂ ಹೆಸರಿಸಬಲ್ಲುವು.
ಆದರೆ, ಅವು ಗುರುತಿಸುವ ದೊರೆತಗಳು ಮೊದಲನೆಯ ಹಂತದ, ಎಂದರೆ ನನಸಿನ (concrete) ಪಾಂಗುಗಳೇ ಇಲ್ಲವೇ ಮೇಲಿನ ಹಂತದ, ಎಂದರೆ ನೆನಸಿನ (abstract) ಪಾಂಗುಗಳೇ ಎಂಬುದನ್ನು ಕೆಲವು ಒಟ್ಟುಗಳ ನಡುವಿನ ವ್ಯತ್ಯಾಸ ತಿಳಿಸಬಲ್ಲುದು. ಎತ್ತುಗೆಗಾಗಿ, ing ಮತ್ತು ant/ent ಎಂಬ ಒಟ್ಟುಗಳಿಂದ ಪಡೆದ ಹೆಸರುಪದಗಳು ಎಸಕದ ದೊರೆತವನ್ನು ಹೆಸರಿಸುವುದಿದ್ದಲ್ಲಿ ಮುಕ್ಯವಾಗಿ ನನಸಿನ ಪಾಂಗುಗಳನ್ನು ಹೆಸರಿಸುತ್ತವೆ, ಮತ್ತು ation, al, ment, ಮತ್ತು age ಒಟ್ಟುಗಳಿಂದ ಪಡೆದ ಹೆಸರುಪದಗಳು ಮುಕ್ಯವಾಗಿ ನೆನಸಿನ ಪಾಂಗುಗಳನ್ನು ಹೆಸರಿಸುತ್ತವೆ.
ನನಸಿನ ದೊರೆತ
|
ನೆನಸಿನ ದೊರೆತ
|
build |
building |
resign |
resignation |
swell |
swelling |
locate |
location |
lubricate |
lubricant |
propose |
proposal |
cool |
coolant |
marry |
marriage |
repel |
repellent |
arrange |
arrangement |
ಕನ್ನಡದಲ್ಲಿಯೂ ಎಸಕಪದಗಳಿಂದ ಹೆಸರುಪದಗಳ ಪಡೆಯುವಲ್ಲಿ ಬಳಕೆಯಾಗುವ ಒಟ್ಟುಗಳ ನಡುವೆ ಇಂತಹದೇ ವ್ಯತ್ಯಾಸವಿದೆ; ಇಕೆ ಮತ್ತು ತ ಒಟ್ಟುಗಳು ಮುಕ್ಯವಾಗಿ ಎಸಕವನ್ನು ಇಲ್ಲವೇ ನೆನಸಿನ ದೊರೆತವನ್ನು ಹೆಸರಿಸುವುದಕ್ಕಾಗಿ ಬಳಕೆಯಾಗುತ್ತವೆ, ಮತ್ತು ಗೆ ಹಾಗೂ ತೆ ಒಟ್ಟುಗಳು ಮುಕ್ಯವಾಗಿ ಎಸಕದಿಂದ ಪಡೆದ ನನಸಿನ ದೊರೆತಗಳನ್ನು ಇಲ್ಲವೇ ಎಸಕವನ್ನು ನಡೆಸುವಲ್ಲಿ ಬಳಸುವ ಮುಟ್ಟನ್ನು ಹೆಸರಿಸುವುದಕ್ಕಾಗಿ ಬಳಕೆಯಗುತ್ತವೆ. ಇಂಗ್ಲಿಶ್‌ನಲ್ಲಿ ಕಾಣಿಸುವ ಹಾಗೆ, ಕನ್ನಡದಲ್ಲೂ ಇದು ಒಟ್ಟುಗಳ ಬಳಕೆಯಲ್ಲಿ ಕಾಣಿಸುವ ಒಲವು ಮಾತ್ರ; ಇದರ ಹಿಂದೆ ಕಟ್ಟುನಿಟ್ಟಾದ ಕಟ್ಟಳೆಯೇನೂ ಇಲ್ಲ.
ಹಾಗಾಗಿ, ಇಂಗ್ಲಿಶ್‌ನ ಎಸಕಪದಗಳಿಂದ ಪಡೆದ ಹೆಸರುಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಹೊಸದಾಗಿ ಉಂಟುಮಾಡುವಲ್ಲಿ, ಅವು ಎಸಕವನ್ನು ಇಲ್ಲವೇ ಎಸಕದ ನೆನಸಿನ ದೊರೆತವನ್ನು ಹೆಸರಿಸುತ್ತಿವೆಯಾದರೆ ಇಕೆ ಇಲ್ಲವೇ ತ ಒಟ್ಟನ್ನು ಬಳಸಬಹುದು, ಮತ್ತು ಎಸಕದ ನನಸಿನ ದೊರೆತವನ್ನು ಹೆಸರಿಸುತ್ತಿವೆಯಾದರೆ ಗೆ ಇಲ್ಲವೇ ತೆ ಒಟ್ಟನ್ನು ಬಳಸಬಹುದು.
ಕನ್ನಡದ ಎಸಕಪದಗಳು ಎಕಾರ ಇಲ್ಲವೇ ಇಕಾರದಲ್ಲಿ ಕೊನೆಗೊಳ್ಳುತ್ತಿವೆಯಾದರೆ (ಇಲ್ಲವೇ ಅವುಗಳ ಕೊನೆಯ ಬರಿಗೆಕಂತೆಯಲ್ಲಿ ಯಕಾರ ಇದೆಯಾದರೆ), ಅವುಗಳ ಬಳಿಕ ಸಾಮಾನ್ಯವಾಗಿ ತ ಇಲ್ಲವೇ ತೆ ಒಟ್ಟು ಬರುತ್ತದೆ, ಮತ್ತು ಉಕಾರದಲ್ಲಿ ಕೊನೆಗೊಳ್ಳುತ್ತಿವೆಯಾದರೆ ಅವುಗಳ ಬಳಿಕ ಸಾಮಾನ್ಯವಾಗಿ ಇಕೆ ಇಲ್ಲವೇ ಗೆ ಒಟ್ಟು ಬರುತ್ತದೆ; ಎಂದರೆ, ಇಕೆ ಮತ್ತು ತ ಒಟ್ಟುಗಳ ನಡುವೆ ಹಾಗೂ ಗೆ ಮತ್ತು ತೆ ಒಟ್ಟುಗಳ ನಡುವೆ ಹುರುಳಿನಲ್ಲಿ ವ್ಯತ್ಯಾಸವಿಲ್ಲ. (ಇದೂ ಒಂದು ಒಲವಲ್ಲದೆ ಕಟ್ಟಲೆಯಲ್ಲ; ಯಾಕೆಂದರೆ, ಇದಕ್ಕೂ ಕೆಲವು ಹೊರಪಡಿಕೆಗಳಿವೆ).
ಉಕಾರದ ಪದಗಳು
|
ಎ, ಇ, ಯಗಳ ಪದಗಳು
|
ಬೆಚ್ಚು |
ಬೆಚ್ಚಿಕೆ |
ಅಗೆ |
ಅಗೆತ |
ಅಂಜು |
ಅಂಜಿಕೆ |
ಉರಿ |
ಉರಿತ |
ನಾಚು |
ನಾಚಿಕೆ |
ಗೆಯ್ಯು |
ಗೆಯ್ತ |
ಕೆತ್ತು |
ಕೆತ್ತುಗೆ |
ನಡೆ |
ನಡತೆ |
ಅಪ್ಪು |
ಅಪ್ಪುಗೆ |
ಮಿಡಿ |
ಮಿಡಿತೆ |
ಎಸಕಪದಗಳಿಂದ ಅವು ತಿಳಿಸುವ ಎಸಕವನ್ನು ಗುರುತಿಸುವಂತಹ ಹೆಸರುಪದಗಳನ್ನು ಪಡೆಯಲು ಇಂಗ್ಲಿಶ್‌ನಲ್ಲಿ ಮೇಲೆ ತಿಳಿಸಿದಂತಹ ಎರಡು ಬಗೆಯ ಒಟ್ಟುಗಳನ್ನೂ ಬಳಸಲಾಗುತ್ತದೆ, ಮತ್ತು ಈ ಪದಗಳಿಗೆ ಸಾಟಿಯಾಗುವಂತಹ ಹೆಸರುಪದಗಳನ್ನು ಕನ್ನಡದಲ್ಲಿ ಹೊಸದಾಗಿ ಉಂಟುಮಾಡಲು ಕನ್ನಡದ ಎಸಕಪದಗಳಿಗೆ ಇಕೆ ಇಲ್ಲವೇ ತ ಒಟ್ಟನ್ನು ಸೇರಿಸಬಹುದು:
-ing |
read |
ಓದು |
reading |
ಓದಿಕೆ |
|
pierce |
ಇರಿ |
piercing |
ಇರಿತ |
|
search |
ಅರಸು |
searching |
ಅರಕೆ |
|
weigh |
ತೂಗು |
weighing |
ತೂಗಿಕೆ |
-ation |
embark |
ಏರು |
embarkation |
ಏರಿಕೆ |
|
vaccinate |
ತಡೆಚುಚ್ಚು |
vaccination |
ತಡೆಚುಚ್ಚಿಕೆ |
|
narrate |
ಕೊಗೆ |
narration |
ಕೊಗೆತ |
|
tempt |
ಸೆಳೆ |
temptation |
ಸೆಳೆತ |
-al |
remove |
ತೆಗೆ |
removal |
ತೆಗೆತ |
|
renew |
ಮುಂದುವರಿಸು |
renewal |
ಮುಂದುವರಿಕೆ |
|
arrive |
ತಲಪು |
arrival |
ತಲಪಿಕೆ |
|
deny |
ಅಲ್ಲಗಳೆ |
denial |
ಅಲ್ಲಗಳೆತ |
|
propose |
ನೀಡು |
proposal |
ನೀಡಿಕೆ |
-age |
assemble |
ನೆರೆ |
assemblage |
ನೆರೆತ |
|
shrink |
ಮುರುಟು |
shrinkage |
ಮುರುಟಿಕೆ |
|
slip |
ಜಾರು |
slippage |
ಜಾರಿಕೆ |
|
equip |
ಒದಗಿಸು |
equippage |
ಒದಗಿಕೆ |
-ment |
allot |
ಹಂಚು |
allotment |
ಹಂಚಿಕೆ |
|
invest |
ಹೂಡು |
investment |
ಹೂಡಿಕೆ |
|
establish |
ನೆಲಸು |
establishment |
ನೆಲಸಿಕೆ |
ಇದಲ್ಲದೆ, ಎಸಕವನ್ನು ನಡೆಸುವ ಬೇರೆ ಬಗೆಯ ನನಸಿನ ಪಾಂಗುಗಳನ್ನು ಹೆಸರಿಸುವುದಕ್ಕಾಗಿಯೂ ant/ent ಒಟ್ಟಿನಿಂದ ಪಡೆದ ಕೆಲವು ಹೆಸರುಪದಗಳು ಬಳಕೆಯಾಗುತ್ತಿದ್ದು, ಇವುಗಳಿಗೆ ಸಾಟಿಯಾಗಬಲ್ಲ ಹೆಸರುಪದಗಳನ್ನು ಕನ್ನಡದಲ್ಲಿ ಹೊಸದಾಗಿ ಉಂಟುಮಾಡಲು ಕ ಒಟ್ಟನ್ನು ಬಳಸಲು ಬರುತ್ತದೆ ಎಂಬುದನ್ನೂ ಮೇಲೆ ನೋಡಿರುವೆವು (anticoagulant ಹೆಪ್ಪಳಿಕ).
(ಕ) ant/ent ಒಟ್ಟಿನಿಂದ ಪಡೆದ ಹೆಸರುಪದಗಳು ಎಸಕವನ್ನು ನಡೆಸುವ ಮಂದಿಯನ್ನೂ ಹೆಸರಿಸಬಲ್ಲುವು ಎಂಬುದನ್ನು, ಮತ್ತು ಇಂತಹ ಹೆಸರುಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಉಂಟುಮಾಡಲು ಗ ಒಟ್ಟನ್ನು ಬಳಸಬೇಕಾಗುತ್ತದೆ ಎಂಬುದನ್ನು ಮೇಲೆ ನೋಡಿರುವೆವು (contestant ಸೆಣಸುಗ).
(ಚ) ing ಒಟ್ಟನ್ನು ಬಳಸಿ ಉಂಟುಮಾಡಿದ ಕೆಲವು ಹೆಸರುಪದಗಳು ಎಸಕಗಳ ದೊರೆತಗಳಾಗಿರುವಂತಹ ನನಸಿನ ಪಾಂಗುಗಳನ್ನು ಗುರುತಿಸುತ್ತಿದ್ದು, ಅವಕ್ಕೆ ಸಾಟಿಯಾಗಬಲ್ಲ ಹೆಸರುಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಗೆ/ಇಗೆ ಒಟ್ಟನ್ನು ಬಳಸಬಹುದು:
knit |
ಹೆಣೆ |
knitting |
ಹೆಣಿಗೆ |
fill |
ತುಂಬು |
filling |
ತುಂಬಿಗೆ |
shoot |
ಎಸು |
shooting |
ಎಸುಗೆ |
sew |
ಹೊಲಿ |
sewing |
ಹೊಲಿಗೆ |
write |
ಬರೆ |
writing |
ಬರವಣಿಗೆ |
(ಟ) ಮೇಲೆ ತಿಳಿಸಿದ ಹಾಗೆ, ಎಸಕಪದಗಳಿಂದ ಹೆಸರುಪದಗಳನ್ನು ಪಡೆಯಲು ಇಂಗ್ಲಿಶ್‌ನಲ್ಲಿ ಮೇಲೆ ವಿವರಿಸಿದ ಒಟ್ಟುಗಳಲ್ಲದೆ ಬೇರೆಯೂ ಹಲವು ಒಟ್ಟುಗಳನ್ನು ಬಳಸಲಾಗುತ್ತದೆ; ance/ence, ety/ry, ion ಮೊದಲಾದವು ಇಂತಹ ಒಟ್ಟುಗಳು. ಆದರೆ, ಇವುಗಳ ಹರವು ಮೇಲಿನ ಒಟ್ಟುಗಳ ಹರವಿನಶ್ಟಿಲ್ಲ. ಹಾಗಾಗಿ, ಅವನ್ನು ಇಲ್ಲಿ ಬೇರೆ ಬೇರಾಗಿ ವಿವರಿಸಿಲ್ಲ. ಅವುಗಳನ್ನು ಬಳಸಿರುವ ಹೆಸರುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಅವು ಕೊಡುವ ಹುರುಳನ್ನವಲಂಬಿಸಿ ಮೇಲೆ ವಿವರಿಸಿದಂತಹ ಒಟ್ಟುಗಳನ್ನೇ ಬಳಸಲು ಬರುತ್ತದೆ:
absorb |
ಹೀರು |
absorbacne |
ಹೀರಿಕೆ |
rid |
ತೊಲಗಿಸು |
riddance |
ತೊಲಗಿಕೆ |
exist |
ಇರು |
existence |
ಇರುವಿಕೆ |
eat |
ತಿನ್ನು |
eatery |
ತಿಂಡಿಮನೆ |
starve |
ಹಸಿ |
starvation |
ಹಸಿತ |
colonize |
ನೆಲಸು |
colonization |
ನೆಲಸಿಕೆ |
(ಈ ಪಸುಗೆ ಇಂಗ್ಲಿಶ್ ಪದಗಳಿಗೆ…-6ರಲ್ಲಿ ಮುಂದುವರಿಯುತ್ತದೆ)
<< ಬಾಗ-4
ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವ ಬಗೆ-4
ಇಂಗ್ಲಿಶ್ ಎಸಕಪದ(verb)ಗಳಿಂದ ಹೆಸರುಪದ(noun)ಗಳನ್ನು ಪಡೆಯುವಲ್ಲಿ ಹಲವು ಹಿನ್ನೊಟ್ಟುಗಳು ಬಳಕೆಯಾಗುತ್ತವೆ. ಇವುಗಳಲ್ಲಿ er/or, ation, ಮತ್ತು ing ಎಂಬವುಗಳು ಮುಕ್ಯವಾದವುಗಳು:
ಎಸಕಪದ
|
ಹೆಸರುಪದ
|
kill
|
killer |
select
|
selector
|
migrate
|
migration
|
teach |
teaching
|
ಇದಲ್ಲದೆ, ment, ee, al, ant/ent, age ಎಂಬಂತಹ ಬೇರೆಯೂ ಕೆಲವು ಹಿನ್ನೊಟ್ಟುಗಳು ಇದೇ ಕೆಲಸದಲ್ಲಿ ಬಳಕೆಯಾಗುತ್ತವೆ:
ಎಸಕಪದ |
ಹೆಸರುಪದ |
replace |
replacement |
absent |
absentee |
propose |
proposal |
attend |
attendant |
inform |
informant |
waste |
wastage |
ಎಸಕಪದಗಳಿಂದ ಹೆಸರುಪದಗಳನ್ನು ಉಂಟುಮಾಡುವಲ್ಲಿ ಬಳಕೆಯಾಗುವ ಈ ಒಟ್ಟುಗಳ ಕುರಿತಾಗಿ ಕೆಲವು ವಿವರಗಳನ್ನು ಕೆಳಗೆ ಕೊಡಲಾಗಿದೆ:
(1) er ಮತ್ತು or ಎಂಬವು ಒಂದೇ ಒಟ್ಟಿನ ಎರಡು ರೂಪಗಳು; ಇವುಗಳಲ್ಲಿ or ಎಂಬುದು ಲ್ಯಾಟಿನ್‌ನಿಂದ ಬಂದ, ಮತ್ತು ಮುಕ್ಯವಾಗಿ t ಇಲ್ಲವೇ s ಬರಿಗೆಯಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಬರುತ್ತದೆ (conductor, compressor). ಹೆಚ್ಚಿನೆಡೆಗಳಲ್ಲೂ er/or ಒಟ್ಟು ಎಸಕವನ್ನು ನಡೆಸುವ ಮಂದಿಯನ್ನು ಹೆಸರಿಸುತ್ತದೆ (teacher, singer, writer); ಆದರೆ, mixer, heater, retainer, wrapper, suspender ಎಂಬಂತಹ ಕೆಲವು ಪದಗಳಲ್ಲಿ ಅದು ಬೇರೆ ಬಗೆಯ ಹುರುಳುಗಳನ್ನು ಕೊಡುತ್ತದೆ.
(2) ation ಎಂಬುದು ಮುಕ್ಯವಾಗಿ ಎಸಕಪದ ತಿಳಿಸುವ ಎಸಕವನ್ನು ಹೆಸರಿಸುವುದು (isolation, penitration, hesitation), ಮತ್ತು ಎಸಕದ ದೊರೆತವನ್ನು ಹೆಸರಿಸುವುದು (regulation, accommodation, resignation) ಎಂಬುದಾಗಿ ಎರಡು ಬಗೆಯ ಹುರುಳುಗಳನ್ನು ಕೊಡಬಲ್ಲುದು.
(3) ing ಎಂಬುದು ಎಸಕವನ್ನಾಗಲಿ (begging, running, sleeping) ಇಲ್ಲವೇ ಎಸಕದ ದೊರೆತವನ್ನಾಗಲಿ (building, wrapping, stuffing) ಗುರುತಿಸುವಂತಹ ಹೆಸರುಪದಗಳನ್ನು ಪಡೆಯುವಲ್ಲಿ ಬಳಕೆಯಾಗುತ್ತದೆ. ಎಸಕದ ದೊರೆತಗಳಲ್ಲಿ ಇದು ಮುಕ್ಯವಾಗಿ ಮೊದಲನೇ ಹಂತದ (ಎಂದರೆ ನನಸಿನ) ಪಾಂಗುಗಳನ್ನು ಹೆಸರಿಸುತ್ತದೆ.
(4) ment ಎಂಬುದು ಎಸಕದ ದೊರೆತವನ್ನು ಹೆಸರಿಸುವ ಹೆಸರುಪದಗಳನ್ನು ಕೊಡುತ್ತದೆ.
(5) ee ಎಂಬುದು ಹೆಚ್ಚಿನ ಬಳಕೆಯಲ್ಲೂ ಮಂದಿಯನ್ನು ಹೆಸರಿಸುತ್ತದೆ, ಮತ್ತು ಆತ ಎಸಕಪದ ತಿಳಿಸುವ ಎಸಕಕ್ಕೆ ಒಳಗಾದವನು, ಎಂದರೆ ಎಸಕದ ಈಡು ಎಂಬುದನ್ನು ಅದು ತಿಳಿಸುತ್ತದೆ.
(6) al ಎಂಬುದು ಎಸಕವನ್ನಾಗಲಿ ಇಲ್ಲವೇ ಎಸಕದ ದೊರೆತವನ್ನಾಗಲಿ ಹೆಸರಿಸುವಂತಹ ಪದಗಳನ್ನು ಉಂಟುಮಾಡುತ್ತದೆ; ಈ ಪದಗಳು ಗುರುತಿಸುವ ಎಸಕದ ದೊರೆತಗಳು ಎರಡನೇ ಹಂತದ ಇಲ್ಲವೇ ಅದಕ್ಕೆ ಮೇಲಿನ ಹಂತಗಳ (ಎಂದರೆ ನೆನಸಿನ) ಪಾಂಗುಗಳಾಗಿರುತ್ತವೆ (proposal, recital).
(7) ant/ent ಎಂಬುದು ನನಸಿನ ಹೆಸರುಪದಗಳನ್ನು ಉಂಟುಮಾಡುತ್ತದೆ; ಈ ಪದಗಳು ಗುರುತಿಸುವ ಪಾಂಗುಗಳು ಮಂದಿಗಳಾಗಿರಬಹುದು (informant, occupant, servant) ಇಲ್ಲವೇ ಬೇರೆಯೂ ಇರಬಹುದು (lubricant, repellent).
(8) age ಎಂಬುದು ಎಸಕಪದ ತಿಳಿಸುವ ಎಸಕವನ್ನು ಇಲ್ಲವೇ ಅದರ ದೊರೆತವನ್ನು ಹೆಸರಿಸುವಲ್ಲಿ ಬಳಕೆಯಾಗುತ್ತದೆ. ಇದರ ಬಳಕೆಯಿಂದ ಪಡೆದ ಪದಗಳು ಎಸಕದ ದೊರೆತಗಳನ್ನು ಹೆಸರಿಸುವುದಿದ್ದಲ್ಲಿ, ಅವು ಮುಕ್ಯವಾಗಿ ನೆನಸಿನ ಪಾಂಗುಗಳಾಗಿರುತ್ತವೆ (marriage, leakage).
ಮೇಲಿನ ಎಂಟು ಹಿನ್ನೊಟ್ಟುಗಳು ಮಾತ್ರವಲ್ಲದೆ ಬೇರೆಯೂ ಹಲವು ಹಿನ್ನೊಟ್ಟುಗಳು ಇಂಗ್ಲಿಶ್‌ನ ಎಸಕಪದಗಳಿಂದ ಹೆಸರುಪದಗಳನ್ನು ಪಡೆಯುವಲ್ಲಿ ಬಳಕೆಯಾಗುತ್ತವೆ; ಆದರೆ, ಅವುಗಳ ಹರವು ಹೆಚ್ಚಿಲ್ಲವಾದುದರಿಂದ ಅವನ್ನಿಲ್ಲಿ ಬೇರೆ ಬೇರಾಗಿ ವಿವರಿಸಿಲ್ಲ; ಅವು ಕೊಡುವ ಹುರುಳುಗಳನ್ನವಲಂಬಿಸಿ, ಮೇಲಿನ ಹೆಸರುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಉಂಟುಮಾಡುವಂತೆಯೇ ಅವಕ್ಕೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನೂ ಉಂಟುಮಾಡಲು ಬರುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಮುಂದೆ ಕೊಡಲಾಗುವುದು.
ಕನ್ನಡದಲ್ಲಿಯೂ ಎಸಕಪದಗಳಿಂದ ಹೆಸರುಪದಗಳನ್ನು ಪಡೆಯುವಲ್ಲಿ ಗ, ಇಕೆ, ಗೆ, ತ, ತೆ, ಕ, ಅಲು, ಅ, ಪು/ವು/ಹು, ಮೆ/ವೆ, ವಳಿ ಮೊದಲಾದ ಹಲವು ಹಿನ್ನೊಟ್ಟುಗಳು ಬಳಕೆಯಾಗುತ್ತವೆ; ಹೊಸಪದಗಳನ್ನು ಉಂಟುಮಾಡುವಾಗ ಇವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕು ಎಂಬುದನ್ನು ಮುಕ್ಯವಾಗಿ ಇಂಗ್ಲಿಶ್ ಒಟ್ಟುಗಳು ಕೊಡುವ ಹುರುಳಿನ ಮೇಲೆ ತೀರ‍್ಮಾನಿಸಬೇಕಾಗುತ್ತದೆ.
ಈ ಕೆಲಸಕ್ಕೆ ಸಾಮಾನ್ಯವಾಗಿ ಗ, ಇಕೆ, ಕ, ಗೆ, ತ ಮತ್ತು ತೆ ಎಂಬ ಆರು ಒಟ್ಟುಗಳು ಸಾಕಾಗುತ್ತವೆ. ಈ ಆರು ಒಟ್ಟುಗಳು ಕೊಡಲಾಗದಂತಹ ಕೆಲವು ಹೆಚ್ಚಿನ ಹುರುಳುಗಳನ್ನು ತಿಳಿಸಬೇಕಾಗಿರುವಲ್ಲಿ ಮಾತ್ರ ಬೇರೆ ಒಟ್ಟುಗಳನ್ನು ಇಲ್ಲವೇ ಪದಗಳನ್ನು ಬಳಸಬೇಕಾಗುತ್ತದೆ.
ಎಲ್ಲಾ ಬಗೆಯ ಇಂಗ್ಲಿಶ್ ಎಸಕಪದಗಳಿಗೂ ಸಾಟಿಯಾಗಬಲ್ಲ ಎಸಕಪದಗಳು ಕನ್ನಡದಲ್ಲಿ ಸಿಗುವುದಿಲ್ಲ; ಕೆಲವೆಡೆಗಳಲ್ಲಿ ಕೂಡುಪದಗಳನ್ನು ಬಳಸಬೇಕಾಗುತ್ತದೆ (blink ಎವೆಯಿಕ್ಕು, bluff ಸುಳ್ಳಾಡು, cheat ಕಯ್ಕೊಡು, christen ಹೆಸರಿಡು), ಮತ್ತು ಇನ್ನು ಕೆಲವೆಡೆಗಳಲ್ಲಿ ಹೆಸರುಪದ ಇಲ್ಲವೇ ಪರಿಚೆಪದಗಳಿಗೆ ಇಸು ಒಟ್ಟನ್ನು ಸೇರಿಸಿ ಎಸಕಪದಗಳನ್ನು ಉಂಟುಮಾಡಬೇಕಾಗುತ್ತದೆ (warn ಎಚ್ಚರಿಸು, decide ತೀರ‍್ಮಾನಿಸು, identify ಗುರುತಿಸು). ಆದರೆ, ಈ ಎರಡು ಕಡೆಗಳಲ್ಲೂ ಹೆಸರುಪದಗಳನ್ನು ಪಡೆಯುವ ಬಗೆ ಎಸಕಪದಗಳಿರುವಲ್ಲಿ ಬಳಸುವಂತಹದೇ ಆಗಿರುತ್ತದೆ.
ಎಸಕಪದಗಳಿಂದ ಹೆಸರುಪದಗಳನ್ನು ಪಡೆಯುವಲ್ಲಿ ಬಳಕೆಯಾಗಿರುವ ಇಂಗ್ಲಿಶ್ ಒಟ್ಟುಗಳಿಗೆ ಬದಲಾಗಿ ಕನ್ನಡದಲ್ಲಿ ಎಂತಹ ಒಟ್ಟುಗಳನ್ನು (ಇಲ್ಲವೇ ಪದಗಳನ್ನು) ಬಳಸಲು ಬರುತ್ತದೆ ಎಂಬುದನ್ನು ಕೆಳಗೆ ಮುಕ್ಯವಾಗಿ ಈ ಒಟ್ಟುಗಳು ಕೊಡುವ ಹುರುಳಿನ ಮೇಲೆ ವಿವರಿಸಲಾಗಿದೆ:
(1) ಮಂದಿಯನ್ನು ಗುರುತಿಸುವ ಪದಗಳು:
ಎಸಕಪದಗಳಿಂದ ಪಡೆದ ಇಂಗ್ಲಿಶ್ ಹೆಸರುಪದಗಳು ಮಂದಿಯನ್ನು ಗುರುತಿಸುತ್ತಿವೆಯಾದರೆ, ಅವಕ್ಕೆ ಸಾಟಿಯಾದ ಪದಗಳನ್ನು ಪಡೆಯಲು ಕನ್ನಡದಲ್ಲಿ ಗ ಒಟ್ಟನ್ನು ಬಳಸಬಹುದು. ಇಂಗ್ಲಿಶ್‌ನಲ್ಲಿ ಈ ಕೆಲಸವನ್ನು ನಡೆಸಲು ಮುಕ್ಯವಾಗಿ er/or ಎಂಬ ಒಟ್ಟು ಬಳಕೆಯಾಗುತ್ತದೆ; ಮೇಲೆ ತಿಳಿಸಿದ ಹಾಗೆ, ಅದನ್ನು ಬಳಸಿ ಪಡೆದ ಪದಗಳು ಒಂದು ಎಸಕವನ್ನು ನಡೆಸುವ ಮಂದಿಯನ್ನು ಹೆಸರಿಸುತ್ತವೆ:
read |
ಓದು |
reader |
ಓದುಗ |
purchase |
ಕೊಳ್ಳು |
purchaser |
ಕೊಳ್ಳುಗ |
support |
ಬೆಂಬಲಿಸು |
supporter |
ಬೆಂಬಲಿಗ |
lose |
ಸೋಲು |
loser |
ಸೋಲುಗ |
object |
ಮರುನುಡಿ |
objector |
ಮರುನುಡಿಗ |
narrate |
ಕೊಗೆ |
narrator |
ಕೊಗೆಗ |
announce |
ಸಾರು |
announcer |
ಸಾರುಗ |
teach |
ಕಲಿಸು |
teacher |
ಕಲಿಸುಗ |
speak |
ಆಡು |
speaker |
ಆಡುಗ |
pack |
ಕಟ್ಟು |
packer |
ಕಟ್ಟುಗ |
advise |
ಅರಿವೀಯು |
advisor |
ಅರಿವೀಯುಗ |
solicit |
ಕೋರು |
solicitor |
ಕೋರುಗ |
edit |
ಅಳವಡಿಸು |
editor |
ಅಳವಡಿಸುಗ |
ant/ent ಎಂಬ ಇನ್ನೊಂದು ಒಟ್ಟನ್ನು ಬಳಸಿಯೂ ಇಂಗ್ಲಿಶ್‌ನಲ್ಲಿ ಎಸಕಪದಗಳಿಂದ ಮಂದಿಯನ್ನು ಹೆಸರಿಸುವ ಹೆಸರುಪದಗಳನ್ನು ಪಡೆಯಲಾಗುತ್ತದೆ, ಮತ್ತು ಇಂತಹ ಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನೂ ಕನ್ನಡದಲ್ಲಿ ಎಸಕಪದಗಳಿಗೆ ಗ ಒಟ್ಟನ್ನು ಸೇರಿಸಿ ಪಡೆಯಬಲ್ಲೆವು:
contest |
ಸೆಣಸು |
contestant |
ಸೆಣಸುಗ |
hesitate |
ಹಿಂಜರಿ |
hesitant |
ಹಿಂಜರಿಗ |
reside |
ನೆಲಸು |
resident |
ನೆಲಸುಗ |
relax |
ನಾಂಬು |
relaxant |
ನಾಂಬುಗ |
combat |
ಹೋರು |
combatant |
ಹೋರುಗ |
accept |
ಒಪ್ಪು |
acceptant |
ಒಪ್ಪುಗ |
complain |
ದೂರು |
complainant |
ದೂರುಗ |
accuse |
ತೆಗಳು |
accusant |
ತೆಗಳುಗ |
observe |
ಒಮ್ಮು |
observant |
ಒಮ್ಮುಗ |
tolerate |
ತಾಳು |
tolerant |
ತಾಳುಗ |
err |
ತಪ್ಪು |
errant |
ತಪ್ಪುಗ |
participate |
ಪಾಲ್ಗೊಳ್ಳು |
participant |
ಪಾಲ್ಗೊಳ್ಳುಗ |
ee ಎಂಬ ಇನ್ನೊಂದು ಒಟ್ಟನ್ನು ಬಳಸಿಯೂ ಎಸಕಪದಗಳಿಂದ ಮಂದಿಯನ್ನು ಹೆಸರಿಸುವ ಹೆಸರುಪದಗಳನ್ನು ಪಡೆಯಲು ಬರುತ್ತದೆ; ಆದರೆ, ಇಲ್ಲಿ ಒಂದು ತೊಡಕಿದೆ: ಇಂತಹ ಹೆಸರುಪದಗಳನ್ನು ಮುಕ್ಯವಾಗಿ ಎಸಕಕ್ಕೆ ಒಳಗಾದವರನ್ನು, ಎಂದರೆ ಎಸಕದ ಈಡನ್ನು ಹೆಸರಿಸಲು ಬಳಸಲಾಗುತ್ತದೆ.
ಕೆಲವು ಎಸಕಪದಗಳ ಬಳಿಕ er ಮತ್ತು ee ಎಂಬ ಈ ಎರಡು ಒಟ್ಟುಗಳನ್ನೂ ಬಳಸಲು ಬರುತ್ತಿದ್ದು, ಅವುಗಳಿಂದ ಪಡೆದ ಪದಗಳ ನಡುವೆ ಹುರುಳಿನಲ್ಲಿ ವ್ಯತ್ಯಾಸ ಕಾಣಿಸುತ್ತದೆ: er ಎಂಬುದನ್ನು ಬಳಸಿರುವಲ್ಲಿ ಎಸಕದ ಮಾಡುಗರನ್ನು ಹೆಸರಿಸಲಾಗುತ್ತದೆ, ಮತ್ತು ee ಒಟ್ಟನ್ನು ಬಳಸಿರುವಲ್ಲಿ ಎಸಕದ ಈಡನ್ನು ಹೆಸರಿಸಲಾಗುತ್ತದೆ (employer : employee).
ಆದರೆ, ಕನ್ನಡದಲ್ಲಿ ಈ ವ್ಯತ್ಯಾಸವನ್ನು ನೇರವಾಗಿ ಒಟ್ಟುಗಳ ಬಳಕೆಯ ಮೂಲಕ ತಿಳಿಸಲು ಬರುವುದಿಲ್ಲ. ಅದರ ಗ ಒಟ್ಟು ಎಸಕದ ಮಾಡುಗರನ್ನು (ಇಲ್ಲವೇ ಆಗುಗರನ್ನು) ಹೆಸರಿಸಬಲ್ಲುದು; ಆದರೆ, ಅದಕ್ಕಿಂತ ಬೇರಾಗಿರುವ ಈಡನ್ನು ತಿಳಿಸಬಲ್ಲ ಒಟ್ಟು ಕನ್ನಡದಲ್ಲಿಲ್ಲ. ಹಾಗಾಗಿ, ಈ ವ್ಯತ್ಯಾಸವನ್ನು ತಿಳಿಸಬೇಕಾಗಿರುವ ಕಡೆಗಳಲ್ಲಿ (1) ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸುವುದು ಮತ್ತು
(2) ಕೊಡು ಇಲ್ಲವೇ ಪಡೆ ಎಂಬುದನ್ನು ಬಳಸುವುದು ಎಂಬ ಎರಡು ಹಮ್ಮುಗೆಗಳಲ್ಲಿ ಒಂದನ್ನು ಬಳಸಬೇಕಾಗುತ್ತದೆ (ಕೆಲವೆಡೆಗಳಲ್ಲಿ ಕೊಡು ಪದದ ಬದಲು ಬೇರೆ ಎಸಕಪದಗಳನ್ನು ಬಳಸಬೇಕಾಗಿಯೂ ಬರಬಲ್ಲುದು):
ಎಸಕದ ಮಾಡುಗ
|
ಎಸಕದ ಈಡು
|
provoker |
ಕೆರಳಿಸುಗ |
provokee |
ಕೆರಳುಗ |
transferor |
ಮಾರೆಡೆಗೊಳಿಸುಗ |
transferee |
ಮಾರೆಡೆಗೊಳ್ಳುಗ |
trainer |
ಪಳಗಿಸುಗ |
trainee |
ಪಳಗು |
payer |
ಹಣ ಕೊಡುಗ |
payee |
ಹಣ ಪಡೆಗ |
employer |
ಕೆಲಸ ಕೊಡುಗ |
employee |
ಕೆಲಸ ಪಡೆಗ |
briber |
ಗಿಂಬಳ ಕೊಡುಗ |
bribee |
ಗಿಂಬಳ ಪಡೆಗ |
examiner |
ಒರೆತ ಕೊಡುಗ |
examinee |
ಒರೆತ ಪಡೆಗ |
interviewer |
ಕಾಣ್ಮೆ ಕೊಡುಗ |
interviewee |
ಕಾಣ್ಮೆ ಪಡೆಗ |
questioner |
ಕೇಳ್ವಿ ಕೊಡುಗ |
questionee |
ಕೇಳ್ವಿ ಪಡೆಗ |
protector |
ಕಾಪು ಕೊಡುಗ |
protectee |
ಕಾಪು ಪಡೆಗ |
abuser |
ಕೊಂಡೆಯಿಕ್ಕುಗ |
abusee |
ಕೊಂಡೆ ಪಡೆಗ |
adviser |
ಅರಿವು ಕೊಡುಗ |
advisee |
ಅರಿವು ಪಡೆಗ |
assessor |
ಬೆಲೆ ಕಟ್ಟುಗ |
assessee |
ಬೆಲೆ ಪಡೆಗ |
referee ತೀರ‍್ಪು ಕೊಡುಗ ಮತ್ತು trustee ಅಂಕ ಕೊಡುಗ ಎಂಬ ಎರಡು ಪದಗಳಲ್ಲಿ ee ಒಟ್ಟು ಬಂದಿರುವ ಪದಕ್ಕೆ ಕೊಡು ಎಂಬ ಹುರುಳು ಸಿಗುತ್ತದೆ; ಇದಲ್ಲದೆ, ಬೇರೆ ಕೆಲವು ಪದಜೋಡಿಗಳಲ್ಲಿ er ಬಂದಿರುವಲ್ಲಿ ಮಾಡು ಎಂಬುದನ್ನು ಮತ್ತು ee ಬಂದಿರುವಲ್ಲಿ ನೇರವಾಗಿ ಗೆ ಒಟ್ಟನ್ನು ಬಳಸಬೇಕಾಗುತ್ತದೆ:
rescuer |
ಪಾರುಮಾಡುಗ |
rescuee |
ಪಾರುಗ |
addresser |
ಒಕ್ಕಣೆ ಮಾಡುಗ |
addressee |
ಒಕ್ಕಣೆಗ |
er ಒಟ್ಟನ್ನು ಬಳಸಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಉಂಟುಮಾಡುವಲ್ಲಿ ಬೇರೆಯೂ ಕೆಲವು ತೊಡಕುಗಳಿವೆ:
(ಕ) ಇಂಗ್ಲಿಶ್‌ನ ಕೆಲವು ಎಸಕಪದಗಳಿಗೆ ಸಾಟಿಯಾಗುವಂತಹ ಎಸಕಪದಗಳು ಕನ್ನಡದಲ್ಲಿರುವುದಿಲ್ಲ; ಹಾಗಾಗಿ, ಅಂತಹ ಕಡೆಗಳಲ್ಲಿ ಕೂಡುಪದಗಳನ್ನು ಬಳಸಬೇಕಾಗುತ್ತದೆ; ಹೀಗೆ ಬಳಸಿರುವಲ್ಲಿ ಎಸಕವನ್ನು ನಡೆಸುವ ಮಂದಿಯನ್ನು ಹೆಸರಿಸಲು ಬೇಕಾಗುವ ಹೆಸರುಪದಗಳನ್ನು ಕೂಡುಪದಗಳಲ್ಲಿ ಬಂದಿರುವ ಹೆಸರುಪದಗಳಿಗೆ ನೇರವಾಗಿ ಗ (ಇಲ್ಲವೇ ಗಾರ) ಒಟ್ಟನ್ನು ಸೇರಿಸಿ ಪಡೆಯಲು ಬರುತ್ತದೆ (ಕನ್ನಡದಲ್ಲಿ ಹೆಸರುಪದಗಳ ಬಳಿಕ ಮಂದಿಯನ್ನು ಹೆಸರಿಸಲು ಗ ಒಟ್ಟಿನ ಹಾಗೆ ಗಾರ ಒಟ್ಟನ್ನೂ ಬಳಸಲಾಗುತ್ತದೆ):
loot |
ಕೊಳ್ಳೆಹೊಡೆ |
looter |
ಕೊಳ್ಳೆಗಾರ |
print |
ಅಚ್ಚುಹಾಕು |
printer |
ಅಚ್ಚುಗಾರ |
hunt |
ಬೇಟೆಯಾಡು |
hunter |
ಬೇಟೆಗಾರ |
jest |
ಗೇಲಿಮಾಡು |
jester |
ಗೇಲಿಗಾರ |
labour |
ಕೂಲಿಮಾಡು |
labourer |
ಕೂಲಿಗಾರ |
speak |
ಮಾತನಾಡು |
speaker |
ಮಾತುಗಾರ |
lodge |
ಬೀಡುಗೊಳ್ಳು |
lodger |
ಬೀಡುಗ |
help |
ನೆರವಾಗು |
helper |
ನೆರವುಗ |
legislate |
ಕಟ್ಟಲೆಕಟ್ಟು |
legislator |
ಕಟ್ಟಲೆಗ |
ಆದರೆ, ಬೇರೆ ಕೆಲವು ಕಡೆಗಳಲ್ಲಿ ಕೂಡುಪದಗಳನ್ನು ಹಾಗೆಯೇ ಉಳಿಸಿ, ಅವಕ್ಕೆ ಗ ಒಟ್ಟನ್ನು ಸೇರಿಸಲಾಗಿದೆ:
page |
ಕರೆಕೂಗು |
pager |
ಕರೆಕೂಗುಗ |
publish |
ಹೊರತರು |
publisher |
ಹೊರತರುಗ |
translate |
ನುಡಿಮಾರು |
translator |
ನುಡಿಮಾರುಗ |
prompt |
ಎತ್ತಿಕೊಡು |
prompter |
ಎತ್ತಿಕೊಡುಗ |
advise |
ಅರಿವೀಯು |
advisor |
ಅರಿವೀಯುಗ |
ಇಂಗ್ಲಿಶ್‌ನಲ್ಲಿಯೂ ಕೆಲವೆಡೆಗಳಲ್ಲಿ ಕನ್ನಡದ ಕೂಡುಪದಗಳಲ್ಲಿ ಕಾಣಿಸುವ ಹಾಗೆ ಹೆಸರುಪದ ಮತ್ತು ಎಸಕಪದಗಳೆರಡನ್ನೂ ಒಟ್ಟಾಗಿ ಬಳಸಲಾಗಿದ್ದು, ಅವಕ್ಕೆ er ಒಟ್ಟನ್ನು ಸೇರಿಸಿ ಹೊಸ ಹೆಸರುಪದಗಳನ್ನು ಉಂಟುಮಾಡಲಾಗಿದೆ. ಆದರೆ, ಇವು ಕನ್ನಡದ ಕೂಡುಪದಗಳ ಹಾಗೆ ಎಸಕಪದಗಳಾಗಿ ಬಳಕೆಯಾಗುವುದಿಲ್ಲ (fruit seller ಎಂಬ ಹೆಸರುಪದ ಇದೆ, ಆದರೆ fruit sell ಎಂಬ ಎಸಕಪದ ಇಲ್ಲ); ಇಂತಹ ಕಡೆಗಳಲ್ಲೂ ಕನ್ನಡದಲ್ಲಿ ಗ/ಇಗ ಒಟ್ಟನ್ನು ನೇರವಾಗಿ ಹೆಸರುಪದದೊಂದಿಗೆ ಬಳಸಲು ಬರುತ್ತದೆ:
fruit seller |
ಪಣ್ಣಿಗ |
grain dealer |
ಕಾಳುಗ |
root seller |
ಬೇರುಗ |
ಬೇರೆ ಕೆಲವೆಡೆಗಳಲ್ಲಿ ಎಸಕಪದಗಳಿಗೆ ನೇರವಾಗಿ ಗ ಒಟ್ಟನ್ನು ಸೇರಿಸಿ ಮಂದಿಯನ್ನು ಹೆಸರಿಸುವ ಪದಗಳನ್ನು ಪಡೆಯುವ ಬದಲು ಅವುಗಳಿಂದ ಪಡೆದ ಹೆಸರುಪದಗಳಿಗೆ ಗಾರ ಒಟ್ಟನ್ನು ಸೇರಿಸಿ ಪಡೆಯಲಾಗಿದೆ (ಗಾರ ಒಟ್ಟನ್ನು ನೇರವಾಗಿ ಎಸಕಪದಗಳಿಗೆ ಸೇರಿಸಲು ಬಾರದಿರುವುದು ಇದಕ್ಕೆ ಕಾರಣವಿರಬಹುದು):
kill |
ಕೊಲ್ಲು |
killer |
ಕೊಲೆಗಾರ |
run |
ಓಡು |
runner |
ಓಟಗಾರ |
reap |
ಕೊಯ್ಯು |
reaper |
ಕೊಯಿಲುಗಾರ |
write |
ಬರೆ |
writer |
ಬರಹಗಾರ |
mine |
ಅಗೆ |
miner |
ಅಗೆತಗಾರ |
ಹೊಸಪದಗಳನ್ನು ಕಟ್ಟುವಲ್ಲಿ ಈ ಮೂರು ಬಗೆಯ ಹಮ್ಮುಗೆಗಳನ್ನೂ ಬಳಸಿಕೊಳ್ಳಲು ಬರುತ್ತದೆ.
ಇದಲ್ಲದೆ, ಹೆಸರುಪದಗಳನ್ನು ಕಟ್ಟುವಲ್ಲಿ ಗ ಮತ್ತು ಗಾರ ಎಂಬ ಎರಡು ಒಟ್ಟುಗಳನ್ನೂ ಬಳಸಲು ಬರುತ್ತದೆ ಎಂಬ ಈ ಆಯ್ಕೆಯನ್ನು ಬಳಸಿ, ಬೇಕಿರುವಲ್ಲಿ ಒಂದು ಬಗೆಯ ಹುರುಳಿನ ವ್ಯತ್ಯಾಸವನ್ನೂ ಪಡೆಯಲು ಬರುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು:
ಗ ಎಂಬುದನ್ನು ಬಳಸಿರುವಲ್ಲಿ ಎಸಕಪದ ತಿಳಿಸುವ ಎಸಕವನ್ನು ನಡೆಸುವವನು ಎಂಬುದನ್ನಶ್ಟೇ ತಿಳಿಸಲಾಗುತ್ತಿದೆ; ಆದರೆ, ಗಾರ ಎಂಬುದನ್ನು ಬಳಸಿರುವಲ್ಲಿ ಹಾಗೆ ನಡೆಸುವುದನ್ನು ಒಂದು ಪಳಗಿಕೆ ಇಲ್ಲವೇ ಬಾಳಿಕೆಯಾಗಿ ಮಾಡಿಕೊಂಡಿರುವವನು ಎಂಬ ಹೆಚ್ಚಿನ ಹುರುಳನ್ನು ತಿಳಿಸಲಾಗುತ್ತದೆ (ಓಡುಗ : ಓಟಗಾರ, ಓದುಗ : ಓದುಗಾರ, ಬರೆಗ : ಬರಹಗಾರ).
(ಚ) ಕೆಲವು ಬಗೆಯ ಎಸಕಗಳನ್ನು ಮಂದಿಯಲ್ಲದ ಪಾಂಗುಗಳೂ ನಡೆಸಬಲ್ಲುವು, ಮತ್ತು ಇಂತಹ ಕಡೆಗಳಲ್ಲೂ ಇಂಗ್ಲಿಶ್‌ನಲ್ಲಿ er/or ಮತ್ತು ant/ent ಒಟ್ಟುಗಳನ್ನು ಬಳಸಿ ಎಸಕಪದಗಳಿಂದ ಹೆಸರುಪದಗಳನ್ನು ಪಡೆಯಲಾಗಿದೆ; ಕನ್ನಡದಲ್ಲಿ ಇವುಗಳಿಗೆ ಸಾಟಿಯಾಗುವ ಪದಗಳನ್ನು ಪಡೆಯುವಲ್ಲಿ ಕ ಎಂಬ ಬೇರೆಯೇ ಒಟ್ಟನ್ನು ಬಳಸಲು ಬರುತ್ತದೆ:
peel |
ಸುಲಿ |
peeler |
ಸುಲಿಕ |
propel |
ತಳ್ಳು |
propeller |
ತಳ್ಳುಕ |
— |
|
painkiller |
ನೋವಳಿಕ |
compute |
ಎಣ್ಣು |
computer |
ಎಣ್ಣುಕ |
accelerate |
ಉರುಹೆಚ್ಚಿಸು |
accelerator |
ಉರುಹೆಚ್ಚುಕ |
accumulate |
ನೆರಸು |
accumulator |
ಮಿಂಚುನರಕ |
radiate |
ಬೀರು |
radiator |
ಬಿಸಿಬೀರುಕ |
ಇಂತಹ ಹೆಸರುಪದಗಳನ್ನು ಉಂಟುಮಾಡುವಲ್ಲಿ er/or ಒಟ್ಟಿಗಿಂತಲೂ ant/ent ಒಟ್ಟನ್ನು ಇಂಗ್ಲಿಶ್‌ನಲ್ಲಿ ಹೆಚ್ಚು ಬಳಸಲಾಗುತ್ತದೆ; ಉಸಿರಿಯರಿಮೆ (biology), ಪುರುಳರಿಮೆ (physics), ಮತ್ತು ಇರ‍್ಪರಿಮೆ(chemistry)ಗಳಿಗೆ ಬೇಕಾಗುವ ಹಲವು ಅರಿಮೆಯ ಪದಗಳನ್ನು ಉಂಟುಮಾಡುವಲ್ಲಿ ಈ ಒಟ್ಟನ್ನು ಬಳಸಲಾಗಿದೆ. ಇಂತಹ ಹೆಸರುಪದಗಳಿಗೆ ಸಾಟಿಯಾಗುವ ಹೆಸರುಪದಗಳನ್ನು ಕನ್ನಡದಲ್ಲಿ ಹೊಸದಾಗಿ ಉಂಟುಮಾಡಲು ಕ ಒಟ್ಟನ್ನೇ ಬಳಸಲು ಬರುತ್ತದೆ:
absorb |
ಹೀರು |
absorbent |
ಹೀರುಕ |
cool |
ತಣಿಸು |
coolant |
ತಣಿಸುಕ |
color |
ಹೊಗರಿಸು |
colorant |
ಹೊಗರಿಸುಕ |
seal |
ಮುಚ್ಚು |
sealant |
ಮುಚ್ಚುಕ |
repel |
ಹಿಮ್ಮೆಟ್ಟಿಸು |
repellent |
ಹಿಮ್ಮೆಟ್ಟಿಸುಕ |
depress |
ಕೊರಗು |
antidepressant |
ಕೊರಗಳಿಕ |
coagulate |
ಹೆಪ್ಪುಗಟ್ಟು |
anticoagulant |
ಹೆಪ್ಪಳಿಕ |
detoxicate |
ನಂಜಳಿಸು |
detoxicant |
ನಂಜಳಿಕ |
(ಈ ಪಸುಗೆ ಇಂಗ್ಲಿಶ್ ಪದಗಳಿಗೆ…-5ರಲ್ಲಿ ಮುಂದುವರಿಯುತ್ತದೆ)
<< ಬಾಗ-3
ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-೩
ಇಂಗ್ಲಿಶ್‌ನಲ್ಲಿ ಮುಕ್ಯವಾಗಿ ness ಮತ್ತು ity ಎಂಬ ಎರಡು ಹಿನ್ನೊಟ್ಟುಗಳನ್ನು ಬಳಸಿ ಪರಿಚೆಪದಗಳಿಂದ ಹೆಸರುಪದಗಳನ್ನು ಪಡೆಯಲಾಗುತ್ತದೆ, ಮತ್ತು ಇವು ಪರಿಚೆಪದಗಳು ತಿಳಿಸುವ ಪರಿಚೆಗಳನ್ನು ಹೆಸರಿಸಲು ಬಳಕೆಯಾಗುತ್ತವೆ:
ಇದಕ್ಕೆ ಬದಲು, ness ಎಂಬುದು ಎಲ್ಲಾ ಬಗೆಯ ಪರಿಚೆಪದಗಳೊಂದಿಗೂ ಬರಬಲ್ಲುದಾಗಿದ್ದು, ಪರಿಚೆಯನ್ನು ಹೆಸರಿಸುವುದೇ ಅದರ ಮುಕ್ಯ ಕೆಲಸವಾಗಿದೆ. ಇದಲ್ಲದೆ, ಪರಿಚೆಪದ ತಿಳಿಸುವ ಪರಿಚೆಯನ್ನು ಅದು ಹೆಚ್ಚು ನೇರವಾಗಿ ತಿಳಿಸಬಲ್ಲುದು. ity ಎಂಬುದು ಮುಕ್ಯವಾಗಿ ಲ್ಯಾಟಿನ್‌ನಿಂದ ಎರವಲಾಗಿ ಪಡೆದ ಪರಿಚೆಪದಗಳ ಬಳಿಕ, ಅದರಲ್ಲೂ able, al ಮತ್ತು ar ಎಂಬವುಗಳಲ್ಲಿ ಕೊನೆಗೊಳ್ಳುವವುಗಳ ಬಳಿಕ ಬರುತ್ತದೆ. ಹೆಚ್ಚಿನೆಡೆಗಳಲ್ಲೂ ಈ ಒಟ್ಟಿನಿಂದ ಪಡೆದ ಹೆಸರುಪದಗಳು ಪರಿಚೆಪದ ತಿಳಿಸುವ ಪರಿಚೆಯನ್ನು ಹೆಸರಿಸುವ ಕೆಲಸವನ್ನಶ್ಟೇ ನಡೆಸುತ್ತವೆ; ಆದರೆ, ಹಲವು ಪದಗಳಲ್ಲಿ ಅವಕ್ಕೆ ಬೇರೆಯೇ ಹುರುಳು ಬಂದಿದೆ.
ಈ ಎರಡು ಒಟ್ಟುಗಳಿರುವ ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಕನ್ನಡದ ಪರಿಚೆಪದಗಳಿಗೆ ತನ ಎಂಬ ಒಟ್ಟನ್ನು ಸೇರಿಸುವ ಒಂದು ಹಮ್ಮುಗೆಯನ್ನು ಬಳಸಿದರೆ ಸಾಕು; ಆದರೆ ಬೇರೊಂದು ಕಾರಣಕ್ಕಾಗಿ, ಕನ್ನಡದಲ್ಲೂ ಎರಡು ಬಗೆಯ ಹಮ್ಮುಗೆಗಳನ್ನು ಬಳಸಬೇಕಾಗುತ್ತದೆ:
ಇಂಗ್ಲಿಶ್ ಪರಿಚೆಪದಗಳು ತಿಳಿಸುವ ಪರಿಚೆಯನ್ನು ಕನ್ನಡದಲ್ಲಿ ಪರಿಚೆಪದಗಳೇ ತಿಳಿಸುತ್ತಿರಬಲ್ಲುವು, ಇಲ್ಲವೇ ಹೆಸರುಪದಗಳೂ ತಿಳಿಸುತ್ತಿರಬಲ್ಲುವು. ಎತ್ತುಗೆಗಾಗಿ, ಇಂಗ್ಲಿಶ್‌ನ good, novel, nice ಎಂಬಂತಹ ಪರಿಚೆಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಒಳ್ಳೆ, ಹೊಸ, ಚೊಕ್ಕ ಎಂಬಂತಹ ಪರಿಚೆಪದಗಳಿವೆ; ಆದರೆ, ಇಂಗ್ಲಿಶ್‌ನ happy, regular, similar ಎಂಬಂತಹ ಪರಿಚೆಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಪರಿಚೆಪದಗಳಿಲ್ಲ; ಇದಕ್ಕೆ ಬದಲು, ಅವು ತಿಳಿಸುವ ಪರಿಚೆಯನ್ನು ಹೆಸರಿಸುವಂತಹ ಸೊಮ್ಮು, ಓಜೆ, ಹೋಲಿಕೆ ಎಂಬಂತಹ ಹೆಸರುಪದಗಳು ಬಳಕೆಯಲ್ಲಿವೆ.
ಹಾಗಾಗಿ, ಕೆಳಗೆ ವಿವರಿಸಿದ ಹಾಗೆ, ಇಂಗ್ಲಿಶ್ ಪರಿಚೆಪದಗಳಿಗೆ ಸಾಟಿಯಾಗಬಲ್ಲ ಪದಗಳು ಕನ್ನಡದಲ್ಲಿ ಇವೆಯೋ ಇಲ್ಲವೋ ಎಂಬುದರ ಮೇಲೆ ಹೊಸಪದಗಳನ್ನು ಕಟ್ಟುವಲ್ಲಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಬೇಕಾಗುತ್ತದೆ:
(ಕ) ಇಂಗ್ಲಿಶ್‌ನ ಪರಿಚೆಪದಗಳಿಗೆ ಸಾಟಿಯಾಗುವ ಪರಿಚೆಪದಗಳು ಕನ್ನಡದಲ್ಲಿ ಇವೆಯಾದರೆ, ಅವಕ್ಕೆ ತನ ಒಟ್ಟನ್ನು ಸೇರಿಸಿ ಇಂಗ್ಲಿಶ್‌ನ ness ಇಲ್ಲವೇ ity ಒಟ್ಟುಗಳಿರುವ ಪದಗಳಿಗೆ ಸಾಟಿಯಾಗಿರುವಂತಹ ಪದಗಳನ್ನು ಪಡೆಯಲು ಬರುತ್ತದೆ:
(ಚ) ಇಂಗ್ಲಿಶ್‌ನ ಪರಿಚೆಪದಗಳು ತಿಳಿಸುವ ಪರಿಚೆಯನ್ನು ಹೆಸರಿಸುವಂತಹ ಹೆಸರುಪದಗಳೇ ಕನ್ನಡದಲ್ಲಿವೆಯಾದರೆ, ಅವನ್ನೇ ಇಂಗ್ಲಿಶ್‌ನ ness ಇಲ್ಲವೇ ity ಒಟ್ಟುಗಳಿರುವ ಪದಗಳಿಗೆ ಸಾಟಿಯಾಗುವಂತೆ ಬಳಸಬಹುದು, ಮತ್ತು ಒಟ್ಟುಗಳಿಲ್ಲದ ಇಂಗ್ಲಿಶ್ ಪರಿಚೆಪದಗಳಿಗೆ ಸಾಟಿಯಾಗುವಂತೆ ಈ ಹೆಸರುಪದಗಳಿಗೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪದರೂಪಗಳನ್ನು ಉಂಟುಮಾಡಿಕೊಳ್ಳಬಹುದು; ಎಂದರೆ, ಇಂತಹ ಕಡೆಗಳಲ್ಲಿ ness ಇಲ್ಲವೇ ity ಒಟ್ಟುಗಳಿರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದಲ್ಲಿ ಒಟ್ಟುಗಳಿಲ್ಲದ ಪದಗಳನ್ನು ಬಳಸಬೇಕಾಗುತ್ತದೆ, ಮತ್ತು ಒಟ್ಟುಗಳಿಲ್ಲದ ಪದಗಳಿಗೆ ಬದಲಾಗಿ ಒಟ್ಟುಗಳಿರುವ ಪದಗಳನ್ನು ಬಳಸಬೇಕಾಗುತ್ತದೆ:
ಕೆಲವು ಕಡೆಗಳಲ್ಲಿ ಇಂಗ್ಲಿಶ್ ಪರಿಚೆಪದಗಳಿಗೆ ಮತ್ತು ಅವುಗಳಿಗೆ ಒಟ್ಟುಗಳನ್ನು ಸೇರಿಸಿ ಪಡೆದ ಹೆಸರುಪದಗಳಿಗೆ ಬೇರೆ ಬೇರೆ ಪದಗಳು ಕನ್ನಡದಲ್ಲಿರುವುದನ್ನು ಕಾಣಬಹುದು; ಇಂತಹ ಕಡೆಗಳಲ್ಲಿ ಪರಿಚೆಪದಗಳಿಗೆ ತನ್ನ ಒಟ್ಟನ್ನು ಸೇರಿಸಿ ಹೆಸರುಪದಗಳನ್ನು ಮತ್ತು ಹೆಸರುಪದಗಳಿಗೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪರಿಚೆಪದರೂಪಗಳನ್ನು ಬೇರೆ ಬೇರಾಗಿ ಪಡೆಯಲು ಬರುತ್ತದೆ:
ಇಂಗ್ಲಿಶ್‌ನ ness ಇಲ್ಲವೇ ity ಒಟ್ಟುಗಳಿರುವ ಪದಗಳಿಗೆ ಸಾಟಿಯಾದ ಕನ್ನಡ ಪದಗಳಲ್ಲಿ ಬೇರೆಯೂ ಕೆಲವು ಒಟ್ಟುಗಳು ಬಳಕೆಯಾಗಿರುವುದನ್ನು ಕಾಣಬಹುದು:
ಮೇಲಿನ ಕನ್ನಡ ಪದಗಳಲ್ಲಿ ಪು ಮತ್ತು ಮೆ ಎಂಬ ಒಟ್ಟುಗಳು ಇಂಗ್ಲಿಶ್‌ನ ness ಮತ್ತು ity ಒಟ್ಟುಗಳಿಗೆ ಬದಲಾಗಿ ಬಳಕೆಯಾಗಿವೆ. ಆದರೆ, ಇವು ತನ ಒಟ್ಟಿನಶ್ಟು ಹರವಿನವಲ್ಲ; ಹಾಗಾಗಿ, ಇಂಗ್ಲಿಶ್ ಪದಗಳಿಗೆ ಸಾಟಿಯಾಗುವ ಹೊಸ ಪದಗಳನ್ನು ಉಂಟುಮಾಡುವಲ್ಲಿ ಇವನ್ನು ಬಳಸಹೋಗುವ ಬದಲು ಉದ್ದಕ್ಕೂ ತನ ಎ೦ಬುದನ್ನೇ ಬಳಸುವುದು ಒಳ್ಳೆಯದು.
ಇಂಗ್ಲಿಶ್‌ನಲ್ಲಿಯೂ ness ಮತ್ತು ity ಎಂಬ ಹಿನ್ನೊಟ್ಟುಗಳನ್ನು ಮಾತ್ರವಲ್ಲದೆ cy/ce, ance/ence, ism ಎಂಬಂತಹ ಬೇರೆಯೂ ಕೆಲವು ಹಿನ್ನೊಟ್ಟುಗಳನ್ನು ಪರಿಚೆಪದಗಳಿಂದ ಹೆಸರುಪದಗಳನ್ನು ಪಡೆಯುವಲ್ಲಿ ಬಳಸಲಾಗುತ್ತದೆ (adequacy, convergence, importance, idealism), ಮತ್ತು ಕನ್ನಡದ ಪು, ಹು ಮತ್ತು ಮೆ ಒಟ್ಟುಗಳ ಹಾಗೆ ಅವುಗಳಿಗೆ ಹೆಚ್ಚಿನ ಹರವಿಲ್ಲ.
ಈ ಹೆಚ್ಚಿನ ಒಟ್ಟುಗಳು ಬಂದಿರುವಲ್ಲೂ (ಕ) ಇಂಗ್ಲಿಶ್ ಪರಿಚೆಪದಗಳಿಗೆ ಸಾಟಿಯಾಗಬಲ್ಲ ಪರಿಚೆಪದಗಳು ಕನ್ನಡದಲ್ಲಿದ್ದರೆ, ಅವಕ್ಕೆ ತನ ಒಟ್ಟನ್ನು ಸೇರಿಸಿ ಹೊಸ ಹೆಸರುಪದಗಳನ್ನು ಪಡೆಯಬಹುದು, ಮತ್ತು (ಚ) ಇಂಗ್ಲಿಶ್‌ನ ಹೆಸರುಪದಗಳಿಗೆ ಸಾಟಿಯಾಗಬಲ್ಲ ಹೆಸರುಪದಗಳಿದ್ದರೆ, ಅವಕ್ಕೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪರಿಚೆರೂಪಗಳನ್ನು ಪಡೆಯಬಹುದು:
ತಿರುಳು:
ಇಂಗ್ಲಿಶ್ ಪರಿಚೆಪದ(adjective)ಗಳಿಂದ ಹೆಸರುಪದ(noun)ಗಳನ್ನು ಪಡೆಯಲು ಮುಕ್ಯವಾಗಿ ity ಮತ್ತು ness ಎಂಬ ಎರಡು ಒಟ್ಟುಗಳನ್ನು ಬಳಸಲಾಗುತ್ತದೆ; ಈ ಒಟ್ಟುಗಳಿರುವ ಹೆಸರುಪದಗಳಿಗೆ ಸಾಟಿಯಾಗಬಲ್ಲ ಹೊಸ ಪದಗಳನ್ನು ಕನ್ನಡದಲ್ಲಿ ಕಟ್ಟಲು ತನ ಎಂಬ ಒಟ್ಟನ್ನು ಬಳಸಲು ಬರುತ್ತದೆ.
ಆದರೆ, ಕೆಲವೆಡೆಗಳಲ್ಲಿ ಇಂಗ್ಲಿಶ್ ಪರಿಚೆಪದಗಳಿಗೆ ಸಾಟಿಯಾಗಬಲ್ಲ ಪರಿಚೆಪದಗಳು ಕನ್ನಡದಲ್ಲಿ ಸಿಗುವುದಿಲ್ಲ; ಇದಕ್ಕೆ ಬದಲು, ಪರಿಚೆಯನ್ನು ಹೆಸರಿಸುವ ಮತ್ತು ity ಇಲ್ಲವೇ ness ಒಟ್ಟುಗಳಿರುವ ಪದಗಳಿಗೆ ಸಾಟಿಯಾಗಬಲ್ಲ ಹೆಸರುಪದಗಳು ಕನ್ನಡದಲ್ಲಿ ಇರುತ್ತವೆ, ಇಲ್ಲವೇ ಅಂತಹವನ್ನು ಹೊಸದಾಗಿ (ಮುಕ್ಯವಾಗಿ ಎಸಕಪದ(verb)ಗಳಿಂದ) ಕಟ್ಟಲು ಬರುತ್ತದೆ; ಇಂತಹ ಕಡೆಗಳಲ್ಲಿ ಹೀಗೆ ಕಟ್ಟಿದ ಹೆಸರುಪದಗಳಿಗೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪರಿಚೆರೂಪಗಳನ್ನು ಪಡೆಯಬಹುದು.
(ಇಂಗ್ಲಿಶ್ ನುಡಿಯ ಹಿನ್ನೊಟ್ಟುಗಳು ಎಂಬ ಈ ಪಸುಗೆ ಇಂಗ್ಲಿಶ್ ಪದಗಳಿಗೆ…-೪ರಲ್ಲಿ ಮುಂದುವರಿಯುತ್ತದೆ)
<< ಬಾಗ-2
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವ ಬಗೆ-2:
ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ ಎಂಬ ನನ್ನ ಈ ಕಡತದಲ್ಲಿ ಎರಡು ತುಂಡು(part)ಗಳಿವೆ; ಇವುಗಳಲ್ಲಿ ಮೊದಲನೆಯ ತುಂಡು ಕನ್ನಡದಲ್ಲಿ ಹೊಸಪದಗಳನ್ನು ಕಟ್ಟಲು ಎಂತಹ ಹಮ್ಮುಗೆ(method)ಗಳನ್ನು ಬಳಸಲಾಗುತ್ತದೆ, ಮತ್ತು ಈ ಬಳಕೆಯಲ್ಲಿ ಕನ್ನಡದ ಒಲವೇನು ಎಂಬುದನ್ನು ವಿವರಿಸಲಾಗಿದೆ.
ಎರಡನೆಯ ತುಂಡಿನಲ್ಲಿ ಬೇರೆ ಬೇರೆ ಬಗೆಯ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ. ಈ ಎರಡನೆಯ ತುಂಡಿನ ಕೆಲವು ಪಸುಗೆ(chapter)ಗಳನ್ನು ಇಲ್ಲಿ ಕೊಡಲಾಗಿದೆ. ಇವುಗಳಲ್ಲಿ ಮುಕ್ಯವಾಗಿ ಕೆಳಗೆ ಕೊಟ್ಟಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ:
(1) ಹಿನ್ನೊಟ್ಟು(suffix)ಗಳನ್ನು ಬಳಸಿ ಪಡೆದಿರುವ ಪದಗಳು
(2) ಮುನ್ನೊಟ್ಟು(prefix)ಗಳನ್ನು ಬಳಸಿ ಪಡೆದಿರುವ ಪದಗಳು
(3) ಎರಡು ಪದಗಳನ್ನು ಒಟ್ಟುಸೇರಿಸಿ ಪಡೆದಿರುವ ಜೋಡುಪದ(compound)ಗಳು
(4) ಈ ಮೂರು ಬಗೆಯ ಹಮ್ಮುಗೆಗಳನ್ನೂ ಬಳಸದಿರುವ ಉಳಿದ ಪದಗಳು
ಕಡತದಲ್ಲಿ ಈ ತಿಳುವಳಿಕೆಯನ್ನು ಕೊಡುವುದರೊಂದಿಗೆ ಹೊಸಪದಗಳನ್ನು ಕಟ್ಟುವಲ್ಲಿ ಪಳಗಿಕೆ(training)ಯನ್ನು ಪಡೆಯಬೇಕೆಂದಿರುವವರಿಗೆ ನೆರವಾಗುವಂತೆ ಕೆಲವು ಎತ್ತುಗೆಗಳನ್ನೂ ಕೊಡಲಾಗಿದೆ; ಆದರೆ, ಅವನ್ನಿಲ್ಲಿ ಕೊಟ್ಟಿಲ್ಲ.
ಇಂಗ್ಲಿಶ್ ನುಡಿಯ ಹಿನ್ನೊಟ್ಟುಗಳು:
ಇಂಗ್ಲಿಶ್ ಪದಗಳಲ್ಲಿ ಹಿನ್ನೊಟ್ಟು(suffix)ಗಳನ್ನು ಮುಕ್ಯವಾಗಿ ಒಂದು ಪದಗುಂಪಿನಲ್ಲಿರುವ ಪದಗಳನ್ನು ಇನ್ನೊಂದು ಪದಗುಂಪಿಗೆ ಮಾರೆಡೆಗೊಳಿಸುವುದಕ್ಕಾಗಿ ಬಳಸಲಾಗುತ್ತದೆ. ಎತ್ತುಗೆಗಾಗಿ, -able ಎಂಬ ಹಿನ್ನೊಟ್ಟನ್ನು ಎಸಕಪದಗಳಿಗೆ ಸೇರಿಸಿ ಅವನ್ನು ಪರಿಚೆಪದಗಳನ್ನಾಗಿ ಮಾರ್‍ಪಡಿಸಲಾಗುತ್ತದೆ:
ಎಸಕಪದಗಳು ಪರಿಚೆಪದಗಳು
read readable
like likeable
work workable
ಇದೇ ರೀತಿಯಲ್ಲಿ, ಎಸಕಪದಗಳನ್ನು ಹೆಸರುಪದಗಳಾಗಿ ಮಾಡಲು, ಪರಿಚೆಪದಗಳನ್ನು ಹೆಸರುಪದಗಳಾಗಿ ಮಾಡಲು, ಹೆಸರುಪದಗಳನ್ನು ಎಸಕಪದಗಳಾಗಿ ಮಾಡಲು, ಮತ್ತು ಪರಿಚೆಪದಗಳನ್ನು ಎಸಕಪದಗಳಾಗಿ ಮಾಡಲು ಬೇರೆ ಬೇರೆ ಬಗೆಯ ಹಿನ್ನೊಟ್ಟುಗಳನ್ನು ಬಳಸಲಾಗುತ್ತದೆ.
ಇಂತಹ ಮಾರ್‍ಪಾಡುಗಳನ್ನು ನಡೆಸುವಲ್ಲಿ ಒಂದೊಂದು ಮಾರ್‍ಪಾಡಿಗೂ ಒಂದಕ್ಕಿಂತ ಹೆಚ್ಚು ಹಿನ್ನೊಟ್ಟುಗಳು ಬಳಕೆಯಾಗುತ್ತಿದ್ದು, ಅವುಗಳಲ್ಲಿ ಕೆಲವು ಹೆಚ್ಚುಕಡಿಮೆ ಒಂದೇ ಬಗೆಯ ಹುರುಳನ್ನು ಕೊಡುತ್ತವೆ. ಎತ್ತುಗೆಗಾಗಿ, er ಮತ್ತು or ಎಂಬ ಎರಡು ಹಿನ್ನೊಟ್ಟುಗಳೂ ಎಸಕಪದಗಳಿಂದ ಹೆಸರುಪದಗಳನ್ನು ಪಡೆಯುವುದಕ್ಕಾಗಿ ಬಳಕೆಯಾಗುತ್ತವೆ, ಮತ್ತು ಈ ಎರಡು ಬಗೆಯ ಹೆಸರುಪದಗಳೂ ಮುಕ್ಯವಾಗಿ ಎಸಕವನ್ನು ನಡೆಸುವ ಮಂದಿಯನ್ನು ಗುರುತಿಸುವಂತಹ ಹುರುಳನ್ನು ಕೊಡುತ್ತವೆ (sing > singer, sail > sailor). ಪರಿಚೆಪದಗಳಲ್ಲೇನೇ ಹೆಸರುಪರಿಚೆ(adjective)ಗಳನ್ನು ಎಸಕಪರಿಚೆ(adverb)ಗಳಾಗಿ ಮಾರ್‍ಪಡಿಸುವುದಕ್ಕೂ ly ಎಂಬ ಹಿನ್ನೊಟ್ಟಿನ ಬಳಕೆಯಾಗುತ್ತದೆ (harsh>harshly, sweet>sweetly).
ಇದಲ್ಲದೆ, ಕೆಲವು ಹಿನ್ನೊಟ್ಟುಗಳನ್ನು ಬೇರೆ ಬೇರೆ ಪದಗುಂಪಿನ ಪದಗಳು ಒಂದೇ ಪದಗುಂಪಿನಡಿಯಲ್ಲಿ ಬರುವಂತೆ ಮಾಡುವುದಕ್ಕಾಗಿಯೂ ಬಳಸಲಾಗುತ್ತದೆ. ಎತ್ತುಗೆಗಾಗಿ, ize ಹಿನ್ನೊಟ್ಟನ್ನು ಬಳಸಿ ಪರಿಚೆಪದಗಳು ಮತ್ತು ಹೆಸರುಪದಗಳು ಎಸಕಪದಗಳ ಗುಂಪಿನಡಿಯಲ್ಲಿ ಬರುವಂತೆ ಮಾಡಲಾಗುತ್ತದೆ (legal>legalize, author>authorize). ಈ ರೀತಿ, ಇಂಗ್ಲಿಶ್ನ ಒಂದು ಹಿನ್ನೊಟ್ಟು ಒಂದಕ್ಕಿಂತ ಹೆಚ್ಚು ಗುಂಪುಗಳ ಪದಗಳೊಂದಿಗೆ ಬರಬಲ್ಲುದಾದರೂ ಅದರ ಬಳಕೆಯಿಂದ ದೊರಕುವ ಪದಗಳೆಲ್ಲ ಒಂದೇ ಗುಂಪಿಗೆ ಸೇರಿದವುಗಳಾಗಿರುತ್ತವೆ.
ಕೆಲವು ಹಿನ್ನೊಟ್ಟುಗಳಿಗೆ ಪದಗಳ ಹುರುಳನ್ನು ತುಸುಮಟ್ಟಿಗೆ ಮಾರ್‍ಪಡಿಸುವ ಅಳವೂ ಇರುತ್ತದೆ. ಎತ್ತುಗೆಗಾಗಿ, -able ಎಂಬ ಹಿನ್ನೊಟ್ಟು ಎಸಕಪದಗಳನ್ನು ಪರಿಚೆಪದಗಳಾಗಿ ಮಾರ್‍ಪಡಿಸುವುದರೊಂದಿಗೆ ಅದಕ್ಕೆ ಕೆಲವು ಕಡೆಗಳಲ್ಲಿ ಬಲ್ಲ ಎಂಬ ಹುರುಳನ್ನು (imaginable ನೆನೆಸಬಲ್ಲ) ಮತ್ತು ಇನ್ನು ಕೆಲವು ಕಡೆಗಳಲ್ಲಿ ತಕ್ಕ ಎಂಬ ಹುರುಳನ್ನು (notable ಗಮನಿಸತಕ್ಕ) ಸೇರಿಸುತ್ತದೆ.
ಹಾಗಾಗಿ, ಹಿನ್ನೊಟ್ಟುಗಳಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಕಟ್ಟುವಲ್ಲಿ ಅವುಗಳ ಈ ಎರಡು ಬಗೆಯ ಪರಿಚೆಗಳನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ: ಅವು ಎಂತಹ ಪದಗುಂಪಿಗೆ ಸೇರಿದ ಪದಗಳನ್ನು ಉಂಟುಮಾಡಿವೆ ಎಂಬುದೊಂದು, ಮತ್ತು ಹೀಗೆ ಉಂಟುಮಾಡುವಲ್ಲಿ ಅವು ಪದಗಳಿಗೆ ಎಂತಹ ಹೆಚ್ಚಿನ ಹುರುಳನ್ನು ಸೇರಿಸಿವೆ ಎಂಬುದಿನ್ನೊಂದು.
ಈ ಎರಡು ಪರಿಚೆಗಳಲ್ಲಿ ಮೊದಲನೆಯದನ್ನು ಬಳಸಿ, ಕೆಳಗೆ ಹೆಸರುಪದಗಳ ಹಿನ್ನೊಟ್ಟುಗಳು, ಎಸಕಪದಗಳ ಹಿನ್ನೊಟ್ಟುಗಳು, ಮತ್ತು ಪರಿಚೆಪದಗಳ ಹಿನ್ನೊಟ್ಟುಗಳು ಎಂಬ ಮೂರು ಒಳಪಸುಗೆಗಳನ್ನು ಉಂಟುಮಾಡಲಾಗಿದೆ, ಮತ್ತು ಈ ಹಿನ್ನೊಟ್ಟುಗಳನ್ನು ಯಾವ ಗುಂಪಿನ ಪದಗಳಿಗೆ ಸೇರಿಸಲಾಗುತ್ತದೆ ಎಂಬ ಬೇರೆಯೇ ಒಂದು ವಿಶಯವನ್ನು ಬಳಸಿ ಈ ಒಳಪಸುಗೆಗಳಲ್ಲಿ ಕೆಲವು ಕೊಯ್ತಗಳನ್ನು ಉಂಟುಮಾಡಲಾಗಿದೆ.
ಇಂಗ್ಲಿಶ್ನಲ್ಲಿ ಪರಿಚೆಪದಗಳಿಗೆ ಮತ್ತು ಎಸಕಪದಗಳಿಗೆ ಮಾತ್ರವಲ್ಲದೆ, ಕೆಲವು ಹೆಸರುಪದಗಳಿಗೂ ಒಟ್ಟುಗಳನ್ನು ಸೇರಿಸಿ ಬೇರೆ ಹೆಸರುಪದಗಳನ್ನು ಉಂಟುಮಾಡಲಾಗಿದೆ; ಹಾಗಾಗಿ, ಹೆಸರುಪದಗಳನ್ನು ಉಂಟುಮಾಡಬಲ್ಲ ಹಿನ್ನೊಟ್ಟುಗಳನ್ನು ಪರಿಚೆಪದಗಳೊಂದಿಗೆ ಬರುವವು, ಎಸಕಪದಗಳೊಂದಿಗೆ ಬರುವವು, ಮತ್ತು ಹೆಸರುಪದಗಳೊಂದಿಗೆ ಬರುವವು ಎಂಬುದಾಗಿ ಮೂರು ಒಳಪಸುಗೆಗಳಲ್ಲಿ ವಿವರಿಸಲಾಗಿದೆ.
ಇವುಗಳಲ್ಲಿ ಎಸಕಪದಗಳೊಂದಿಗೆ ಬರುವ ಹಿನ್ನೊಟ್ಟುಗಳನ್ನು ಅವು ಮಂದಿಯನ್ನು ಹೆಸರಿಸುತ್ತವೆಯೋ ಇಲ್ಲವೇ ಎಸಕವನ್ನು (ಇಲ್ಲವೇ ಎಸಕದ ದೊರೆತವನ್ನು) ಹೆಸರಿಸುತ್ತವೆಯೋ ಎಂಬುದರ ಮೇಲೆ ಎರಡು ಒಳಗುಂಪುಗಳಲ್ಲಿ ಕೊಡಲಾಗಿದೆ. ಇದಲ್ಲದೆ, ಹಲವು ಎಸಕಪದಗಳನ್ನು ಅವಕ್ಕೆ ಯಾವ ಒಟ್ಟನ್ನೂ ಸೇರಿಸದೆ ಹಾಗೆಯೇ ಹೆಸರುಪದಗಳಾಗಿ ಬಳಸಲು ಬರುತ್ತಿದ್ದು, ಈ ಬಳಕೆಯಲ್ಲಿ ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನೂ ಅಲ್ಲಿಯೇ ವಿವರಿಸಲಾಗಿದೆ.
ಇಂಗ್ಲಿಶ್ ಎಸಕಪದಗಳನ್ನು ಉಂಟುಮಾಡುವಲ್ಲಿ ಕೆಲವೇ ಕೆಲವು ಒಟ್ಟುಗಳು ಬಳಕೆಯಾಗುತ್ತಿದ್ದು, ಅವುಗಳ ಬಳಕೆಯನ್ನು ಮತ್ತು ಅವುಗಳಿಗೆ ಸಾಟಿಯಾಗುವಂತೆ ಕನ್ನಡ ಪದಗಳನ್ನು ಹೊಸದಾಗಿ ಕಟ್ಟುವ ಬಗೆಯನ್ನು ಎರಡನೇ ಒಳಪಸುಗೆಯಲ್ಲಿ ವಿವರಿಸಲಾಗಿದೆ.
ಇಂಗ್ಲಿಶ್ ಪರಿಚೆಪದಗಳನ್ನು ಹೆಸರುಪರಿಚೆಗಳು (adjectives) ಮತ್ತು ಎಸಕಪರಿಚೆಗಳು (adverbs) ಎಂಬ ಎರಡು ಗುಂಪುಗಳಲ್ಲಿ ಗುಂಪಿಸಲಾಗುತ್ತದೆ; ಇವುಗಳಲ್ಲಿ ಹಲವು ಹೆಸರುಪರಿಚೆಗಳನ್ನು ಎಸಕಪದಗಳಿಗೆ ಮತ್ತು ಹೆಸರುಪದಗಳಿಗೆ ಹಿನ್ನೊಟ್ಟುಗಳನ್ನು ಸೇರಿಸಿ ಪಡೆಯಲಾಗಿದೆ, ಮತ್ತು ಈ ಪದಗಳ ಬಳಕೆಯನ್ನು ಮತ್ತು ಅವುಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಕಟ್ಟುವ ಬಗೆಯನ್ನು ಎರಡು ಒಳಪಸುಗೆಗಳಲ್ಲಿ ವಿವರಿಸಲಾಗಿದೆ.
ಇದಲ್ಲದೆ, ಇಂಗ್ಲಿಶ್ನಲ್ಲಿ ಹೆಚ್ಚಿನ ಎಸಕಪರಿಚೆಗಳನ್ನೂ ಹೆಸರುಪರಿಚೆಗಳಿಗೆ ly ಎಂಬ ಒಟ್ಟನ್ನು ಸೇರಿಸಿ ಪಡೆಯಲಾಗುತ್ತದೆ; ಕನ್ನಡದಲ್ಲಿ ಈ ಎಸಕಪರಿಚೆಗಳಿಗೆ ಸಾಟಿಯಾಗುವಂತೆ ಹೊಸಪದಗಳನ್ನು ಕಟ್ಟುವಲ್ಲಿ ಹಲವು ಬಗೆಯ ಹಮ್ಮುಗೆಗಳನ್ನು ಬಳಸಬೇಕಾಗಿದ್ದು, ಅವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕು ಎಂಬುದು ಇಂಗ್ಲಿಶ್ನಲ್ಲಿ ly ಒಟ್ಟನ್ನು ಸೇರಿಸಿರುವ ಹೆಸರುಪರಿಚೆಗೆ ಸಾಟಿಯಾಗಿ ಕನ್ನಡದಲ್ಲಿ ಎಂತಹ ಪರಿಚೆಪದ ಬರುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ.
(ಈ ಪಸುಗೆ ಇಂಗ್ಲಿಶ್ ಪದಗಳಿಗೆ…-3ರಲ್ಲಿ ಮುಂದುವರಿಯುತ್ತದೆ)
<< ಬಾಗ-1
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವುದು ಹೇಗೆ ಎಂಬುದರ ಕುರಿತಾಗಿ ನಾನು ಬರೆದಿರುವ, ಮತ್ತು ಇನ್ನು ಕೆಲವೇ ದಿನಗಳಲ್ಲಿ ಹೊರಬರಲಿರುವ ಕಡತದ ಕೆಲವು ಪಸುಗೆಗಳನ್ನು ಇಲ್ಲಿ ನನ್ನ ಮಿಂತಾಣದ ಓದುಗರಿಗಾಗಿ ಕೊಡುತ್ತಿದ್ದೇನೆ.
ಇಂಗ್ಲಿಶ್ ಪದಗಳಿಗೆ ಕನ್ನಡದಲ್ಲೇನೇ ಪದಗಳನ್ನು ಕಟ್ಟುವ ಬಗೆ-1
ಕಡತದ ಗುರಿ:
ಕನ್ನಡ ಬರಹದ ಮೇಲೆ ಸಂಸ್ಕ್ರುತ ಎರವಲುಗಳ ಹೊರೆಯನ್ನು ಕಡಿಮೆ ಮಾಡಬೇಕೆಂಬ ಕಳಕಳಿಯಿರುವವರಿಗೆ ನೆರವಾಗಬೇಕೆಂಬುದೇ ಈ ಕಡತದ ಮುಕ್ಯ ಗುರಿಯಾಗಿದೆ. ಈ ಸಂಸ್ಕ್ರುತದ ಹೊರೆ ಇವತ್ತಿನ ಬರಹಗಳಲ್ಲಿ ತುಂಬಾ ಹೆಚ್ಚಿದೆ. ಅದರಲ್ಲೂ ಅರಿಮೆಯ (scientific) ಬರಹಗಳಲ್ಲಿ ಇದು ಎಲ್ಲೆಮೀರಿದೆ. ಈ ಹೊರೆಯಿಂದಾಗಿ ಅರಿಮೆಯ ತಿಳಿವುಗಳು ಹೆಚ್ಚಿನ ಕನ್ನಡಿಗರಿಂದಲೂ ದೂರ ಉಳಿದಿವೆ. ಇದಲ್ಲದೆ, ಇಂತಹ ಬರಹಗಳಲ್ಲಿ ಬರುವ ಹೊಸ ಹೊಸ ವಿಶಯಗಳನ್ನು ಎಲ್ಲರಿಗೂ ತಿಳಿಯುವಂತೆ ಸುಳುವಾಗಿ ವಿವರಿಸುವ ಅಳವನ್ನೂ ಕನ್ನಡ ಬರಹ ಪಡೆಯಲೇ ಇಲ್ಲ.
ಅರಿಮೆಯ ಬರಹಗಳಲ್ಲಿ ಕನ್ನಡದ ದಿನಬಳಕೆಯ ಪದಗಳನ್ನು ಬಳಸಿದರೆ ಓದುಗರಿಗೆ ಗೊಂದಲವಾಗುತ್ತದೆಯೆಂಬ ತಪ್ಪು ಅನಿಸಿಕೆಯ ಮೇಲೆ ಕನ್ನಡದ ಅರಿವಿಗರ ಈ ಸಂಸ್ಕ್ರುತ ಒಲವು ನೆಲೆನಿಂತಿದೆ; ಹೊಸ ಪದ ಬೇಕಾದಾಗಲೆಲ್ಲ ಅವರು ಸಂಸ್ಕ್ರುತ ಎರವಲುಗಳನ್ನು ಬಳಸುತ್ತಿದ್ದಾರೆ, ಮತ್ತು ತಮಗೆ ಬೇಕಾಗಿರುವ ಪದ ಸಂಸ್ಕ್ರುತದಲ್ಲಿಲ್ಲದಿದ್ದರೆ, ಸಂಸ್ಕ್ರುತದ್ದೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸ ಪದಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಇಂತಹ ಬರಹಗಳಲ್ಲಿ ಸಂಸ್ಕ್ರುತ ಪದಗಳು ತುಂಬಿ ತುಳುಕುತ್ತಿವೆ.
ಎತ್ತುಗೆಗಾಗಿ, ಕನ್ನಡದ ಕೆಲವು ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ಎಂಬತ್ತರಶ್ಟು ಸಂಸ್ಕ್ರುತದ ಎರವಲು ಪದಗಳಿವೆ! ನಿಜಕ್ಕೂ ಇವನ್ನು ಕನ್ನಡದ ಪದನೆರಕೆಗಳೆಂದು ಹೇಳಿಕೊಳ್ಳುತ್ತಿರುವುದೇ ಒಂದು ಅಚ್ಚರಿಯ ಸಂಗತಿಯಾಗಿದೆ! ಕನ್ನಡ ಬರಿಗೆಗಳನ್ನು ಬಳಸಿ ಅಚ್ಚುಹಾಕಲಾಗಿದೆ ಎಂಬುದರಿಂದಶ್ಟೇ ಇವನ್ನು ಕನ್ನಡ ಪದನೆರಕೆಗಳೆಂದು ಹೇಳಬೇಕಾಗಿದೆ.
ಕನ್ನಡದ ಅರಿವಿಗರಲ್ಲಿರುವ ಮೇಲಿನ ಅನಿಸಿಕೆಗೆ ಯಾವ ನೆಲೆಯೂ ಇಲ್ಲ. ಒಂದು ನುಡಿಯ ಪದಗಳಿಗಿರುವ ಹುರುಳುಗಳು ಹೆಚ್ಚಾದಶ್ಟೂ ಅವುಗಳ ಅಳವು ಹೆಚ್ಚುತ್ತದಲ್ಲದೆ ಗೊಂದಲವೇನೂ ಉಂಟಾಗುವುದಿಲ್ಲ. ಇಂಗ್ಲಿಶ್‌ನ ಹಲವು ಪದಗಳಿಗೆ ಹತ್ತಿಪ್ಪತ್ತು ಹುರುಳುಗಳಿವೆ; ಸಂಸ್ಕ್ರುತದಲ್ಲೂ ಹೀಗೆಯೇ. ಆದರೆ, ಇದರಿಂದಾಗಿ ಅವುಗಳ ಬಳಕೆಯಲ್ಲಿ ಗೊಂದಲವೇನೂ ಉಂಟಾಗಿಲ್ಲ. ಒಂದು ಪದಕ್ಕೆ ಎಶ್ಟೇ ಹುರುಳುಗಳಿರಲಿ, ಅದನ್ನು ಎಂತಹ ಕುಳ್ಳಿಹ(context)ದಲ್ಲಿ ಬಳಸಲಾಗಿದೆ ಎಂಬುದರ ಮೇಲೆ ಅದನ್ನು ಯಾವ ಹುರುಳಿನಲ್ಲಿ ಬಳಸಲಾಗಿದೆ ಎಂಬುದನ್ನು ಓದುಗರು ಸುಳುವಾಗಿ ತಿಳಿದುಕೊಳ್ಳಬಲ್ಲರು.
ಇಂಗ್ಲಿಶ್‌ನ ಅರಿಮೆಯ ಬರಹಗಳಲ್ಲಿ ಲ್ಯಾಟಿನ್ ಮತ್ತು ಗ್ರೀಕ್ ಪದಗಳನ್ನು ಬಳಸಿದ ಹಾಗೆ ತಾವು ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸುತ್ತಿದ್ದೇವೆ ಎಂಬುದು ಈ ಅರಿವಿಗರ ಇನ್ನೊಂದು ತಪ್ಪನಿಸಿಕೆ. ಇಂಗ್ಲಿಶ್ ಮತ್ತು ಲ್ಯಾಟಿನ್ (ಇಲ್ಲವೇ ಗ್ರೀಕ್) ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆ; ಆದರೆ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರಿವೆ. ಹಾಗಾಗಿ, ಲ್ಯಾಟಿನ್ ಪದಗಳು ಇಂಗ್ಲಿಶ್ ಬರಹಗಳಲ್ಲಿ ಹೊಂದಿಕೊಳ್ಳುವ ಹಾಗೆ ಸಂಸ್ಕ್ರುತ ಪದಗಳು ಕನ್ನಡ ಬರಹಗಳಲ್ಲಿ ಹೊಂದಿಕೊಳ್ಳುವುದಿಲ್ಲ. ಅವು ಹಲವು ಬಗೆಯ ತೊಡಕುಗಳನ್ನು ತಂದೊಡ್ಡುತ್ತವೆ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಹೆಸರುಪದ (noun)-ಪರಿಚೆಪದ (adjective) ವ್ಯತ್ಯಾಸ ಇಲ್ಲದಿರುವುದು ಮತ್ತು ಕನ್ನಡದಲ್ಲಿ (ಹಾಗೂ ಇಂಗ್ಲಿಶ್‌ನಲ್ಲಿ) ಇರುವುದು ಇಂತಹದೊಂದು ತೊಡಕಿಗೆ ಎಡೆಕೊಡುತ್ತದೆ.
ಇದಲ್ಲದೆ, ಇಂಗ್ಲಿಶ್‌ನ ಇರ‍್ಪರಿಮೆ (ಕೆಮಿಸ್ಟ್ರಿ), ಗಿಡದರಿಮೆ (ಬಾಟನಿ) ಮೊದಲಾದ ಕೆಲವು ಬಗೆಯ ಅರಿಮೆಯ ಬರಹಗಳಲ್ಲಶ್ಟೇ ಲ್ಯಾಟಿನ್ ಎರವಲುಗಳನ್ನು ಹೆಚ್ಚು ಬಳಸಲಾಗಿದೆ. ಎಣಿಕೆಯರಿಮೆ, ಎಣ್ಣುಕದರಿಮೆಯಂತಹ ಬೇರೆ ಹಲವು ಬಗೆಯ ಅರಿಮೆಯ ಬರಹಗಳಲ್ಲಿ ಇವನ್ನು ತುಂಬಾ ಕಡಿಮೆ ಎಣಿಕೆಯಲ್ಲಿ ಬಳಸಲಾಗಿದೆ. ಇವುಗಳಲ್ಲೆಲ್ಲ ಹೆಚ್ಚು ಹೆಚ್ಚು ಇಂಗ್ಲಿಶ್‌ನವೇ ಆದ ಪದಗಳನ್ನು ಬಳಸಲಾಗಿದೆ.
ಆದರೆ, ಕನ್ನಡದಲ್ಲಿ ಎಲ್ಲಾ ಬಗೆಯ ಅರಿಮೆಯ ಬರಹಗಳಲ್ಲೂ ಸಂಸ್ಕ್ರುತ ಎರವಲುಗಳನ್ನು ತುಂಬಲಾಗಿದೆ. ಇಂತಹ ಬರಹಗಳಿಗೆಲ್ಲ ಕನ್ನಡ ಪದಗಳು ತಕ್ಕುವಲ್ಲ ಎಂಬ ತಪ್ಪು ಅನಿಸಿಕೆ ಅರಿವಿಗರಲ್ಲಿದ್ದುದೇ ಇದಕ್ಕೆ ಮುಕ್ಯ ಕಾರಣ. ಇಂಗ್ಲಿಶ್‌ನಿಂದ ಈ ಅರಿಮೆಗಳಿಗೆ ಸಂಬಂದಿಸಿದ ಬರಹಗಳನ್ನು ಕನ್ನಡಕ್ಕೆ ತರುವಾಗ ಹಲವಾರು ಹೊಸಪದಗಳನ್ನು ಕನ್ನಡದಲ್ಲಿ ಕಟ್ಟಿಕೊಳ್ಳಬೇಕಾಗುತ್ತದೆ. ಇಂತಹ ಕಡೆಗಳಲ್ಲೆಲ್ಲ ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಲಾಗಿದೆಯಲ್ಲದೆ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿರುವುದು ತುಂಬಾ ಕಡಿಮೆ. ಹಾಗಾಗಿ, ಕನ್ನಡ ಬರಹಗಳ ಮೇಲಿರುವ ಸಂಸ್ಕ್ರುತ ಎರವಲುಗಳ ಹೊರೆ ಇಂಗ್ಲಿಶ್‌ನ ಮೇಲಿರುವ ಲ್ಯಾಟಿನ್ ಪದಗಳ ಹೊರೆಗಿಂತ ಎಶ್ಟೋ ಪಾಲು ಹೆಚ್ಚಿನದು.
ಕನ್ನಡದ ಜಾನಪದಗಳ ಕುರಿತಾಗಿ, ಎಂದರೆ ಕನ್ನಡದ್ದೇ ಆದ ಕೊಡುಗೆಗಳ ಕುರಿತಾಗಿ, ತಾವು ಹೇಳಬೇಕಿರುವುದನ್ನು ತಿಳಿಸುವುದಕ್ಕೂ ಈ ಅರಿವಿಗರಿಗೆ ಹಲವಾರು ಸಂಸ್ಕ್ರುತ ಎರವಲುಗಳು ಬೇಕಾಗುತ್ತದೆ; ಜಾನಪದ ಎಂಬ ಪದವೇ ಇದನ್ನು ತೋರಿಸಿಕೊಡುತ್ತದೆ. ನಾವು ಕನ್ನಡವನ್ನು ಎಂತಹ ಕೀಳ್ನೆಲೆಗೆ ಇಳಿಸಿದ್ದೇವೆ ಎಂಬುದು ಇದರಿಂದ ತುಂಬಾ ಚನ್ನಾಗಿ ಗೊತ್ತಾಗುತ್ತದೆ.
ಕನ್ನಡ ಬರಹಕ್ಕೆ ಬೇಕಿಲ್ಲದಂತಹ ಈ ಹೊರೆಯಿಂದಾಗಿ ಕನ್ನಡ ಬರಹಗಳ ಮತ್ತು ಅವುಗಳಲ್ಲಿ ಬಳಕೆಯಾಗುವ ಪದಗಳ ಬೆಳವಣಿಗೆಯೇ ನಿಂತುಹೋಗಿದೆ. ಹೊಸ ಹೊಸ ವಿಶಯಗಳನ್ನು ಇಂಗ್ಲಿಶ್‌ನಲ್ಲಿ ಸುಳುವಾಗಿ ವಿವರಿಸಿ ಹೇಳಲು ಬರುತ್ತದೆ; ಆದರೆ, ಇವನ್ನೇ ಕನ್ನಡದಲ್ಲಿ ವಿವರಿಸಬೇಕೆಂದರೆ ಬರಹ ಮುಂದೆ ಹೋಗುವುದೇ ಇಲ್ಲ. ತಿರುತಿರುಗಿ ಸಂಸ್ಕ್ರುತದ ಎರವಲುಗಳನ್ನು ತಂದು ತುಂಬಬೇಕಾಗುತ್ತದೆ. ಇದರಿಂದಾಗಿ ಓದುವವರಿಗೆ ಅದು ಕನ್ನಡ ಬರಹವೆಂದೇ ಅನಿಸುವುದಿಲ್ಲ.
ಕನ್ನಡದ ಒಂದು ಪದನೆರಕೆಯನ್ನು ಇಂಗ್ಲಿಶ್‌ನ ಒಂದು ಚಿಕ್ಕ ಪದನೆರಕೆಯೊಂದಿಗೆ ಹೋಲಿಸಿ ನೋಡಿದರೂ ಈ ತೊಡಕಿನ ನೆಲೆ ಯಾವುದೆಂದು ಗೊತ್ತಾಗುತ್ತದೆ. ಇಂಗ್ಲಿಶ್‌ನ ಒಂದು ಪದಕ್ಕೆ ಏಳೆಂಟು ಹುರುಳುಗಳಿವೆಯಾದರೆ, ಅಂತಹದೇ ಕನ್ನಡ ಪದಕ್ಕೆ ಒಂದೆರಡು ಹುರುಳುಗಳು ಮಾತ್ರ ಕಾಣಿಸುತ್ತವೆ. ಇಂಗ್ಲಿಶ್ ಪದಗಳು ಹುರುಳಿನ ಹರವನ್ನು ಹೆಚ್ಚಿಸಿಕೊಂಡ ಹಾಗೆ ಕನ್ನಡ ಪದಗಳು ಹೆಚ್ಚಿಸಿಕೊಂಡಿಲ್ಲ. ಅವು ಹೆಚ್ಚಿಸಿಕೊಳ್ಳದಂತೆ ಅಡ್ಡಗಾಲಿಟ್ಟವರು ಈ ಸಂಸ್ಕ್ರುತದೊಲವಿಗರಾದ ಕನ್ನಡದ ಅರಿವಿಗರೇ!
ಇಂಗ್ಲಿಶ್‌ನ ಹಲವಾರು ಪದಗಳಿಗೆ ದಿನಬಳಕೆಯ ಹುರುಳು ಮಾತ್ರವಲ್ಲದೆ ಬೇರೆ ಬೇರೆ ಅರಿಮೆಗಳಿಗೆ ತಕ್ಕುದಾದಂತಹ ಹುರುಳುಗಳೂ ಇವೆ. ಆದರೆ, ಕನ್ನಡದ ಯಾವ ದಿನಬಳಕೆಯ ಪದಕ್ಕೂ ಇಂತಹ ಅರಿಮೆಯ ಹುರುಳಿಲ್ಲ. ಯಾಕೆಂದರೆ, ಅರಿಮೆಯ ಹುರುಳು ಬೇಕಾಗಿರುವಲ್ಲೆಲ್ಲ ಕನ್ನಡದ ಅರಿವಿಗರು ಬೇಕೆಂದೇ ಸಂಸ್ಕ್ರುತದ ಮೊರೆಹೋಗಿದ್ದಾರೆ.
ಎತ್ತುಗೆಗಾಗಿ, ಇಂಗ್ಲಿಶ್‌ನಲ್ಲಿ salt ಎಂಬ ಪದಕ್ಕೆ ಅಡಿಗೆಯ ಉಪ್ಪು ಎಂಬ ಹುರುಳು ಮಾತ್ರವಲ್ಲದೆ ಇರ‍್ಪರಿಮೆಗೆ ಸಂಬಂದಿಸಿದಂತೆ ಎಲ್ಲಾ ಬಗೆಯ saltಗಳೆಂಬ ಹುರುಳೂ ಇದೆ; ಆದರೆ, ಕನ್ನಡದ ಉಪ್ಪು ಪದಕ್ಕೆ ಈ ಎರಡನೆಯ ಹುರುಳಿಲ್ಲ; ಯಾಕೆಂದರೆ, ಈ ಹುರುಳನ್ನು ತಿಳಿಸಲು ಕನ್ನಡದ ಅರಿಮೆಯ ಬರಹಗಳಲ್ಲಿ ಲವಣ ಎಂಬ ಸಂಸ್ಕ್ರುತ ಎರವಲನ್ನು ಬಳಸಲಾಗಿದೆ. ಇಂತಹ ನೂರಾರು ಇಂಗ್ಲಿಶ್ ದಿನಬಳಕೆಯ ಪದಗಳಿಗೆ ಅರಿಮೆಯ ಹುರುಳುಗಳು ದೊರೆತಿವೆ; ಆದರೆ, ಕನ್ನಡದ ದಿನಬಳಕೆಯ ಪದಗಳನ್ನೆಲ್ಲ ಅರಿಮೆಯ ಬರಹಗಳಿಂದ ದೂರ ಇರಿಸಲಾಗಿದೆ.
ಅರಿಮೆಯ ಬರಹಗಳಲ್ಲಿ ಎಸಕಗಳನ್ನು ತಿಳಿಸುವ ಎಸಕಪದ(verb)ಗಳನ್ನು ಮಾತ್ರವಲ್ಲದೆ, ಎಸಕಗಳನ್ನು ಹೆಸರಿಸುವ ಹೆಸರುಪದ(noun)ಗಳನ್ನೂ ಆಗಾಗ ಬಳಸುತ್ತಿರಬೇಕಾಗುತ್ತದೆ. ಎತ್ತುಗೆಗಾಗಿ, ಒಂದು ಎಸಕವನ್ನು ತಿಳಿಸುವ add ಎಂಬ ಎಸಕಪದದೊಂದಿಗೆ ಅದೇ ಎಸಕವನ್ನು ಹೆಸರಿಸುವ addition ಎಂಬ ಹೆಸರುಪದವನ್ನೂ ಅರಿಮೆಯ ಬರಹಗಳಲ್ಲಿ ಆಗಾಗ ಬಳಸಲಾಗುತ್ತದೆ. ಇಂಗ್ಲಿಶ್‌ನ ಅರಿಮೆಯ ಬರಹಗಳಲ್ಲಿ ಇಂತಹ ನೂರಾರು ಎಸಕಗಳನ್ನು ಹೆಸರಿಸುವ ಹೆಸರುಪದಗಳ ಬಳಕೆಯನ್ನು ಕಾಣಬಹುದು.
ಆದರೆ, ಕನ್ನಡದ ಅರಿಮೆಯ ಬರಹಗಳಲ್ಲಿ ಈ ರೀತಿ ಎಸಕವನ್ನು ಹೆಸರಿಸುವ ಕನ್ನಡದವೇ ಆದ ಹೆಸರುಪದಗಳ ಬದಲು ಸಂಸ್ಕ್ರುತದಿಂದ ಎರವಲು ಪಡೆದ ಹೆಸರುಪದಗಳನ್ನು ಬಳಸಲಾಗುತ್ತದೆ; ಕೂಡಿಸು ಎಂಬ ಎಸಕಪದದಿಂದ ಪಡೆಯಬಲ್ಲ ಕೂಡಿಕೆ ಎಂಬ ಹೆಸರುಪದವನ್ನು ಬಳಸುವ ಬದಲು, ಸಂಕಲನ ಎಂಬ ಸಂಸ್ಕ್ರುತದ ಎರವಲು ಪದವನ್ನು ಬಳಸಲಾಗುತ್ತದೆ. ಇದರಿಂದಾಗಿಯೂ ಕನ್ನಡದ ಅರಿಮೆಯ ಬರಹಗಳಲ್ಲಿ ಸಂಸ್ಕ್ರುತ ಎರವಲುಗಳ ಹೊರೆ ತುಂಬಾ ಹೆಚ್ಚಾಗಿದೆ.
ಕನ್ನಡ ಅರಿವಿಗರ ಈ ತಪ್ಪು ಕೆಲಸದಿಂದಾಗಿ, ಕನ್ನಡ ಬರಹದ ಓದುಗರಲ್ಲೂ ಒಂದು ವಿಚಿತ್ರವಾದ ಅನಿಸಿಕೆ ಬೆಳೆದುಬಂದಿದೆ. ಒಂದು ಬರಹದಲ್ಲಿ ಹಲವಾರು ತಮಗೆ ತಿಳಿದಿಲ್ಲದಂತಹ ಸಂಸ್ಕ್ರುತ ಎರವಲುಗಳನ್ನು ಬಳಸಿದರೂ ಓದುಗರು ಅದನ್ನು ದೂರುವುದಿಲ್ಲ; ಬರಹ ಚನ್ನಾಗಿದೆ, ಆದರೆ ಅದನ್ನು ಓದಿ ತಿಳಿದುಕೊಳ್ಳುವ ಅಳವು ತನ್ನಲ್ಲಿಲ್ಲ ಎಂಬುದಾಗಿ ಅವರು ತಮ್ಮನ್ನೇ ದೂರಿಕೊಳ್ಳುತ್ತಾರೆ. ಇದಕ್ಕೆ ಬದಲು, ಇನ್ನೊಂದು ಬರಹದಲ್ಲಿ ಕೆಲವೇ ಕೆಲವು ಅವರಿಗೆ ತಿಳಿದಿಲ್ಲದಂತಹ ಕನ್ನಡ ಪದಗಳನ್ನು ಬಳಸಲಾಗಿದೆಯಾದರೆ, ಆ ಬರಹವೇ ಚನ್ನಾಗಿಲ್ಲವೆಂದು ಹೇಳುತ್ತಾರೆ!
ಇದು ಸಂಸ್ಕ್ರುತ ಪದಗಳ ಕುರಿತಾಗಿ ಓದುಗರಲ್ಲಿ ಬೆಳೆದುಬಂದಿರುವ ಮೇಲರಿಮೆ ಮತ್ತು ಕನ್ನಡ ಪದಗಳ ಕುರಿತಾಗಿ ಅವರಲ್ಲಿ ಬೆಳೆದುಬಂದಿರುವ ಕೀಳರಿಮೆಗಳನ್ನು ತಿಳಿಸುತ್ತದೆ. ಕನ್ನಡ ಓದುಗರಲ್ಲಿ ಕನ್ನಡ ಪದಗಳ ಕುರಿತಾಗಿರುವ ಈ ಕೀಳರಿಮೆ ಹೋಗಬೇಕು, ಮತ್ತು ಕನ್ನಡ ಬರಹಗಾರರೇ ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸುವ ಮೂಲಕ ಹೀಗಾಗುವಂತೆ ಮಾಡಬೇಕು. ಈ ಕೆಲಸದಲ್ಲಿ ನೆರವಾಗುವುದೇ ಈ ಕಡತದ ಮುಕ್ಯ ಗುರಿಯಾಗಿದೆ.
ನುಡಿಯರಿಮೆಯ ಇಣುಕುನೋಟ – 36
ನಾವು ಯಾವ ರೀತಿಯಲ್ಲಿ ಬಗೆಯಬಲ್ಲೆವು (ಆಲೋಚಿಸಬಲ್ಲೆವು) ಎಂಬುದರ ಮೇಲೆ ನಮ್ಮ ತಾಯ್ನುಡಿಯ ಹತೋಟಿಯಿದೆಯೇ, ಇದ್ದರೆ ಅದು ಎಶ್ಟರ ಮಟ್ಟಿಗೆ ಇದೆ ಎಂಬುದರ ಕುರಿತಾಗಿ ಹಲವು ಮಂದಿ ತಿಳಿವಿಗರು ಅರಕೆಗಳನ್ನು ನಡೆಸುತ್ತಿದ್ದಾರೆ. ಪ್ರಯತ್ನಪಟ್ಟರೆ ನಾವು ಯಾವ ರೀತಿಯಲ್ಲಿ ಬೇಕಿದ್ದರೂ ಬಗೆಯಬಲ್ಲೆವು; ಆದರೆ, ಸಾಮಾನ್ಯವಾಗಿ ನಮ್ಮ ಬಗೆತದಲ್ಲಿ ಎಂತಹ ವಿಶಯಗಳ ಮೇಲೆ ಒತ್ತು ಬೀಳುತ್ತದೆ, ಮತ್ತು ಎಂತಹ ವಿಶಯಗಳನ್ನು ನಾವು ಕಡೆಗಣಿಸುತ್ತೇವೆ ಎಂಬುದು ನಮ್ಮ ತಾಯ್ನುಡಿಯನ್ನು ಅವಲಂಬಿಸಿರುತ್ತದೆ ಎಂಬ ತೀರ್‍ಮಾನಕ್ಕೆ ಹೆಚ್ಚಿನವರೂ ಬಂದಿರುವ ಹಾಗೆ ಕಾಣಿಸುತ್ತದೆ.
ಎತ್ತುಗೆಗಾಗಿ, ಕನ್ನಡದಲ್ಲಿ ಮನುಶ್ಯರನ್ನು ಹೆಸರಿಸುವ ಪದಗಳ ಬಳಕೆಯಲ್ಲಿ ಮಾತ್ರ ಹೆಣ್ಣು-ಗಂಡು ವ್ಯತ್ಯಾಸವನ್ನು ಕಾಣುತ್ತೇವೆ; ಮರ, ಮೇಜು, ಪೆನ್ನು, ಗಾಡಿ, ತಿಳಿವು ಮೊದಲಾದ ಉಳಿದ ಪದಗಳ ಬಳಕೆಯಲ್ಲಿ ಇಂತಹ ವ್ಯತ್ಯಾಸವಿಲ್ಲ. ಆದರೆ, ಸಂಸ್ಕ್ರುತ, ಹಿಂದಿ ಮೊದಲಾದ ನುಡಿಗಳಲ್ಲಿ, ಮತ್ತು ಅವುಗಳೊಂದಿಗೆ ನಂಟಿರುವ ಜರ್‍ಮನ್, ಸ್ಪಾನಿಶ್ ಮೊದಲಾದ ಬೇರೆ ಹಲವು ನುಡಿಗಳಲ್ಲಿ ಎಲ್ಲಾ ಬಗೆಯ ಪದಗಳಲ್ಲೂ ಪುಲ್ಲಿಂಗ-ಸ್ತ್ರೀಲಿಂಗ ವ್ಯತ್ಯಾಸವನ್ನು ಕಾಣಲಾಗುತ್ತದೆ. ಈ ವ್ಯತ್ಯಾಸ ಇವನ್ನು ತಾಯ್ನುಡಿಯಾಗಿ ಪಡೆದಿರುವ ಜನರ ಬಗೆತದ ಮೇಲೂ ಪರಿಣಾಮಗಳನ್ನು ಬೀರುವ ಹಾಗೆ ಕಾಣಿಸುತ್ತದೆ.
ಸೇತುವೆಯನ್ನು ಹೆಸರಿಸುವ ಪದ ಜರ್‍ಮನ್ ನುಡಿಯಲ್ಲಿ ಸ್ತ್ರೀಲಿಂಗದಲ್ಲಿದೆ, ಮತ್ತು ಪ್ರೆಂಚ್ ನುಡಿಯಲ್ಲಿ ಪುಲ್ಲಿಂಗದಲ್ಲಿದೆ; ಜರ್‍ಮನರು ಒಂದು ಹೊಸ ಸೇತುವೆಯನ್ನು ಬಣ್ಣಿಸುವಾಗ ಅದರ ಅಂದ, ಮಾಟ, ಹಗುರತನ ಮೊದಲಾದ ಪರಿಚೆಗಳ ಮೇಲೆ ಒತ್ತು ಕೊಡುತ್ತಾರೆ; ಅದನ್ನೇ ಪ್ರೆಂಚರು ಬಣ್ಣಿಸುವಾಗ ಅದು ಎಶ್ಟು ದೊಡ್ಡದು, ಎಶ್ಟೊಂದು ಗಟ್ಟಿಯಾಗಿದೆ, ಹೇಗೆ ಒಂದು ದಯ್ತ್ಯ ರಕ್ಕಸನ ಹಾಗೆ ಕಾಣಿಸುತ್ತದೆ ಎಂಬುದಾಗಿ ಅದರ ಬೇರೆಯೇ ಪರಿಚೆಗಳ ಮೇಲೆ ಒತ್ತು ಕೊಡುತ್ತಾರೆ. ಸೇತುವೆ ಎಂಬ ಪದಕ್ಕೆ ಲಿಂಗವನ್ನು ಕೊಡುವಲ್ಲಿ ಅವರ ನುಡಿಗಳ ನಡುವಿರುವ ವ್ಯತ್ಯಾಸವೇ ಈ ರೀತಿ ಅದನ್ನು ಅವರು ಬೇರೆ ಬೇರೆ ಬಗೆಗಳಲ್ಲಿ ಬಣ್ಣಿಸುವ ಹಾಗೆ ಮಾಡಿದೆ.
ನುಡಿಗಳ ನಡುವೆ ಕಾಣಿಸುವ ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ಅವುಗಳನ್ನಾಡುವ ಜನರ ಬಗೆತದ ಮೇಲೆ ಪರಿಣಾಮಗಳನ್ನು ಬೀರಬಲ್ಲುವು ಎಂಬುದನ್ನು ಅರಕೆಗಳು ತೋರಿಸಿಕೊಟ್ಟಿವೆ. ಎತ್ತುಗೆಗಾಗಿ, ಒಂದು ವಸ್ತು ಎಲ್ಲಿದೆ ಎಂಬುದನ್ನು ಅದಕ್ಕೂ ನಮಗೂ (ಇಲ್ಲವೇ ಇನ್ನೊಂದು ವಸ್ತುವಿಗೂ) ನಡುವಿರುವ ಸಂಬಂದ ಎಂತಹದು ಎಂಬುದರ ಮೇಲೆ ತಿಳಿಸಬಲ್ಲೆವು: ‘ಮಾವಿನ ಮರ ಮನೆಯ ಎದುರಿಗಿದೆ’ ಎಂದು ಹೇಳುವಲ್ಲಿ, ಇಲ್ಲವೇ ‘ನಮ್ಮ ಮನೆ ಅವರ ಮನೆಯ ಎಡಕ್ಕಿದೆ’ ಎಂದು ಹೇಳುವಲ್ಲಿ ನಾವು ಈ ರೀತಿ ಮನೆಗೂ ಮರಕ್ಕೂ ನಡುವಿರುವ ಸಂಬಂದವನ್ನು ಬಳಸುತ್ತೇವೆ; ಇದಕ್ಕೆ ಬದಲು, ಮೂಡ, ತೆಂಕ, ಪಡು, ಬಡಗ ಎಂಬ ನೆಲದರಿಮೆಯ ಪದಗಳನ್ನು ಬಳಸಿಯೂ ಈ ವಿಶಯವನ್ನು ತಿಳಿಸಬಲ್ಲೆವು: ‘ಮಾವಿನ ಮರ ಮನೆಯ ತೆಂಕಕ್ಕಿದೆ’ ಎಂದು ಹೇಳುವಲ್ಲಿ, ಇಲ್ಲವೇ ‘ನಮ್ಮ ಮನೆ ಅವರ ಮನೆಯ ಪಡುವಕ್ಕಿದೆ’ ಎಂದು ಹೇಳುವಲ್ಲಿ ಇಂತಹ ನೆಲದರಿಮೆಯ ಪದಗಳನ್ನು ಬಳಸಲಾಗುತ್ತದೆ.
ಜಗತ್ತಿನಲ್ಲಿರುವ ಹೆಚ್ಚಿನ ನುಡಿಗಳಲ್ಲೂ ವಸ್ತುಗಳ ಜಾಗವನ್ನು ತಿಳಿಸಬೇಕಾದಾಗ ಅವುಗಳ ನಡುವಿರುವ ಸಂಬಂದವನ್ನು ಇಲ್ಲವೇ ಆಡುಗನಿಗೂ ಅವಕ್ಕೂ ನಡುವಿರುವ ಸಂಬಂದವನ್ನು ತಿಳಿಸುವ ಎಡಕ್ಕೆ, ಬಲಕ್ಕೆ, ಹಿಂದೆ, ಮುಂದೆ ಎಂಬಂತಹ ಪದಗಳನ್ನು ಬಳಸುವುದೇ ಹೆಚ್ಚು. ಆದರೆ, ನೆಲದರಿಮೆಯ ಮೂಡ, ತೆಂಕ, ಪಡು ಎಂಬಂತಹ ಪದಗಳನ್ನೇ ಜಾಗವನ್ನು ತಿಳಿಸಬೇಕಾಗುವ ಹೆಚ್ಚಿನ ಕಡೆಗಳಲ್ಲೂ ಬಳಸುವ ನುಡಿಗಳೂ ಹಲವಿವೆ. ಆಸ್ಟ್ರೇಲಿಯಾದ ಗೂಗು ಯಿಮ್ದಿರ್‍ನಂತಹ ಕೆಲವು ಬುಡಕಟ್ಟಿನ ನುಡಿಗಳು, ತೆಂಕು ಮೆಹಿಕೋದ ತ್ಸೆಲ್ತಲ್, ಮತ್ತು ಬೇರೆಯೂ ಹಲವು ನುಡಿಗಳು ಇಂತಹವು.
ಈ ನುಡಿಗಳಲ್ಲಿ ಚಿಕ್ಕ ಚಿಕ್ಕ ವಸ್ತುಗಳ ಜಾಗವನ್ನು ತಿಳಿಸುವಾಗಲೂ ಮೂಡ, ತೆಂಕ, ಪಡು ಎಂಬಂತಹ ಪದಗಳನ್ನು ಬಳಸಲಾಗುತ್ತದೆ; ಒಂದು ಚಿತ್ರದಲ್ಲಿ ಕಾಣಿಸುವ ಇಬ್ಬರು ವ್ಯಕ್ತಿಗಳ ಜಾಗವನ್ನು ಬಣ್ಣಿಸುವಲ್ಲೂ ಒಬ್ಬನು ಇನ್ನೊಬ್ಬನ ಮೂಡಕ್ಕಿದ್ದಾನೆ ಎನ್ನಲಾಗುತ್ತದೆ; ಚಿತ್ರವನ್ನು ತುಸು ತಿರುಗಿಸಿ ಹಿಡಿದರೆ, ಅವರ ಜಾಗ ಬದಲಾಗುತ್ತದೆ, ಮತ್ತು ಅದಕ್ಕೆ ಸರಿಯಾಗಿ ಮಾತನ್ನೂ ಬದಲಿಸಬೇಕಾಗುತ್ತದೆ (ಮೂಡಕ್ಕಿದ್ದಾನೆ ಎನ್ನುವ ಬದಲು ಪಡುವಕ್ಕಿದ್ದಾನೆ ಇಲ್ಲವೇ ತೆಂಕಕ್ಕಿದ್ದಾನೆ ಎನ್ನಬೇಕಾದೀತು). ಆದರೆ, ಈ ರೀತಿ ಎಲ್ಲೆಡೆಗಳಲ್ಲೂ ನೆಲದರಿಮೆಯ ಪದಗಳನ್ನು ಬಳಸಬೇಕಿದ್ದಲ್ಲಿ, ಈ ನುಡಿಗಳನ್ನಾಡುವವರಿಗೆ ಯಾವಾಗಲೂ ತಮ್ಮ ಮೂಡ ಯಾವುದು, ಪಡು ಯಾವುದು ಎಂಬುದು ಕಚಿತವಾಗಿ ಗೊತ್ತಿರಬೇಕು. ಆಸ್ಟೇಲಿಯಾದ ಮರಳುಗಾಡುಗಳಲ್ಲಿ ನೆಲೆಸಿರುವ ಬುಡಕಟ್ಟಿನ ಜನರಿಗೆ, ಇಲ್ಲವೇ ತೆಂಕು ಅಮೆರಿಕಾದ ದಟ್ಟವಾದ ಕಾಡುಗಳಲ್ಲಿ ನೆಲೆಸಿರುವ ಜನರಿಗೆ ಈ ರೀತಿ ಯಾವಾಗಲೂ ದಿಕ್ಕುಗಳ ಅರಿವಿರುವುದು ತುಂಬಾ ಉಪಯುಕ್ತವಾಗಿದೆ.
ನುಡಿಗಳ ನಡುವೆ ಎಣಿಕೆಪದಗಳ ಬಳಕೆಯಲ್ಲಿ ಕಾಣಿಸುವ ವ್ಯತ್ಯಾಸಗಳೂ ಆ ನುಡಿಗಳನ್ನಾಡುವ ಜನರ ಬಗೆತದ ಮೇಲೆ ಪರಿಣಾಮಗಳನ್ನು ಬೀರುವ ಹಾಗೆ ಕಾಣಿಸುತ್ತದೆ. ಪಿರಹ ಎಂಬ ನುಡಿಯೊಂದನ್ನು ಆಡುವ ಜನಾಂಗ ಅಮೆಜೋನ್ ಕಾಡುಗಳಲ್ಲಿ ನೆಲೆಸಿದೆ; ಈ ನುಡಿಯಲ್ಲಿ ಮೂರು ಎಣಿಕೆಪದಗಳು ಮಾತ್ರ ಬಳಕೆಯಲ್ಲಿವೆ: ಒಂದೆರಡು ವಸ್ತುಗಳ ಎಣಿಕೆಯನ್ನು ತಿಳಿಸುವ ಪದವೊಂದು; ತುಸು ಹೆಚ್ಚು ಎಣಿಕೆಯಲ್ಲಿರುವ ವಸ್ತುಗಳನ್ನು ಬಣ್ಣಿಸುವ ಪದ ಇನ್ನೊಂದು; ಮತ್ತು ತುಂಬಾ ಹೆಚ್ಚು ಎಣಿಕೆಯ ವಸ್ತುಗಳನ್ನು ಬಣ್ಣಿಸುವ ಪದ ಮತ್ತೊಂದು. ಇಂತಹ ಮೂರು ಪದಗಳು ಮಾತ್ರ ಈ ನುಡಿಯಲ್ಲಿ ಇರುವ ಕಾರಣ, ಅದರ ಆಡುಗರು ಯಾವುದೇ ಒಂದು ಗುಂಪಿನಲ್ಲಿರುವ ವಸ್ತುಗಳ ಎಣಿಕೆಯನ್ನು ಕಚಿತವಾಗಿ ತಿಳಿಸಲಾರರು.
ಹಾಗಾಗಿ, ಈ ನುಡಿಯನ್ನಾಡುವ ಜನರಿಗೆ ಒಂದು ಗುಂಪಿನಲ್ಲಿರುವ ವಸ್ತುಗಳ ಎಣಿಕೆ ಇನ್ನೊಂದು ಗುಂಪಿನಲ್ಲಿರುವ ವಸ್ತುಗಳ ಎಣಿಕೆಗಿಂತ ಹೆಚ್ಚಿದೆಯೇ ಇಲ್ಲವೇ ಕಡಿಮೆಯಿದೆಯೇ ಎಂಬುದನ್ನು ಆ ಎರಡು ಗುಂಪುಗಳನ್ನು ಬೇರೆ ಬೇರಾಗಿ ನೋಡಿ ಕಚಿತವಾಗಿ ಹೇಳಲು ಬರುವುದಿಲ್ಲ. ಅವುಗಳಲ್ಲಿ ಒಂದು ಗುಂಪಿನಲ್ಲಿರುವ ಒಂದೊಂದು ವಸ್ತುವನ್ನೂ ಇನ್ನೊಂದು ಗುಂಪಿನ ವಸ್ತುಗಳ ಎದುರಿಗಿರಿಸಿ ಅದನ್ನು ತಿಳಿಯಬೇಕಾಗುತ್ತದೆ. ಇದೇ ರೀತಿಯಲ್ಲಿ, ಒಂದು ಗುಂಪಿನಲ್ಲಿ ಹತ್ತು ಚೆಂಡುಗಳನ್ನಿರಿಸಿ, ಅಶ್ಟೇ ಹಣ್ಣುಗಳಿರುವ ಇನ್ನೊಂದು ಗುಂಪನ್ನು ಉಂಟುಮಾಡಲು ಹೇಳಿದರೆ, ಮೊದಲನೇ ಗುಂಪಿನಲ್ಲಿರುವ ಒಂದೊಂದು ಚೆಂಡನ್ನೂ ಎತ್ತಿಹಿಡಿದು, ಅವುಗಳೆದುರು ಒಂದೊಂದು ಹಣ್ಣನ್ನು ಇರಿಸಿ ಎರಡನೆಯ ಗುಂಪನ್ನು ಅವರು ಉಂಟುಮಾಡಬೇಕಾಗುತ್ತದೆ. ಹಾಗೆ ಮಾಡದೆ ನೇರವಾಗಿ ಹತ್ತು ಹಣ್ಣುಗಳ ಒಂದು ಗುಂಪನ್ನು ಮಾಡಲು ಅವರಿಗೆ ಬರುವುದಿಲ್ಲ.
ಒಂದು ನುಡಿಯಲ್ಲಿ ಹೊತ್ತಿನ ವ್ಯತ್ಯಾಸಗಳನ್ನು ತಿಳಿಸಲು ಎಂತಹ ಪದಗಳನ್ನು ಬಳಸಲಾಗುತ್ತದೆ ಎಂಬುದೂ ಅದರ ಆಡುಗರ ಬಗೆತದ ಮೇಲೆ ಪರಿಣಾಮ ಬೀರುವ ಹಾಗೆ ಕಾಣಿಸುತ್ತದೆ. ಇಂಗ್ಲಿಶ್ನಲ್ಲಿ ಹೊತ್ತನ್ನು ತಿಳಿಸಲು ಹೆಚ್ಚಿನೆಡೆಗಳಲ್ಲೂ ಹಿಂದೆ ಮತ್ತು ಮುಂದೆ ಎಂಬ ಪದಗಳನ್ನು ಬಳಸಲಾಗುತ್ತದೆ (ಕನ್ನಡದಲ್ಲೂ ಹೀಗೆಯೇ); ‘ಅವನು ಹಿಂದೆ ಏನು ಮಾಡುತ್ತಿದ್ದ? ಮುಂದೆ ಏನು ಮಾಡಲಿದ್ದಾನೆ?’ ಎಂಬಂತಹ ಮಾತುಗಳಲ್ಲಿ ಈ ಬಳಕೆಯನ್ನು ಕಾಣಬಹುದು; ಇದಕ್ಕೆ ಬದಲು, ಚಯ್ನೀಸ್ನಲ್ಲಿ ಹೆಚ್ಚಾಗಿ ಮೇಲೆ ಮತ್ತು ಕೆಳಗೆ ಎಂಬ ಪದಗಳನ್ನು ಬಳಸಲಾಗುತ್ತದೆ.
ಹೊತ್ತಿನ ಕುರಿತಾಗಿರುವ ಕೇಳ್ವಿಗಳಿಗೆ ಒಂದರ ಬಲಕ್ಕೆ ಒಂದರಂತಿರುವ ಚಿತ್ರಗಳನ್ನು ನೋಡಿದ ಬಳಿಕ ಇಂಗ್ಲಿಶ್ ನುಡಿಗರು ಹೆಚ್ಚು ಬೇಗನೆ ಉತ್ತರಿಸಬಲ್ಲರು, ಮತ್ತು ಒಂದರ ಕೆಳಗೆ ಒಂದರಂತಿರುವ ಚಿತ್ರಗಳನ್ನು ನೋಡಿದ ಬಳಿಕ ಚಯ್ನೀಸ್ ನುಡಿಗರು ಹೆಚ್ಚು ಬೇಗನೆ ಉತ್ತರಿಸಬಲ್ಲರು; ಈ ವ್ಯತ್ಯಾಸಕ್ಕೆ ಮೇಲೆ ತಿಳಿಸಿದ ಹೊತ್ತಿನ ಪದಗಳ ನಡುವಿನ ವ್ಯತ್ಯಾಸವೇ ಕಾರಣವಿರಬೇಕು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 35
ಕನ್ನಡ, ತಮಿಳು, ಮಲಯಾಳ, ತೆಲುಗು ಮತ್ತು ತುಳು ಎಂಬುದಾಗಿ ಒಟ್ಟು ದ್ರಾವಿಡ ನುಡಿಗಳ ಎಣಿಕೆ ಅಯ್ದು ಮಾತ್ರ (ಪಂಚದ್ರಾವಿಡ) ಎಂಬ ಅನಿಸಿಕೆ ಇವತ್ತಿಗೂ ಹಲವು ಜನರಲ್ಲಿದೆ. ಕೆಲವರು ಈ ಪಟ್ಟಿಯಲ್ಲಿ ತುಳುವಿನ ಬದಲು ಮರಾಟಿಯನ್ನು ಸೇರಿಸುತ್ತಾರೆ; ಆದರೆ, ಮರಾಟಿ ದ್ರಾವಿಡ ನುಡಿಯಲ್ಲ, ಇಂಡೋ-ಆರ‍್ಯನ್ ನುಡಿ.
ಕರ‍್ನಾಟಕದಲ್ಲೇನೇ ಕೊಡಗು ಎಂಬ ಇನ್ನೊಂದು ದ್ರಾವಿಡ ನುಡಿ ಇರುವುದನ್ನು ಈ ದ್ರಾವಿಡ ನುಡಿಗಳ ಪಟ್ಟಿಯನ್ನು ಕೊಡುವವರು ಮರೆತಂತಿದೆ. ದಕ್ಶಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೊರಗ ಎಂಬ ಮತ್ತೊಂದು ದ್ರಾವಿಡ ನುಡಿಯೂ ಬಳಕೆಯಲ್ಲಿದೆ. ಇದಲ್ಲದೆ, ನೀಲಗಿರಿಯ ಗುಡ್ಡಕಾಡುಗಳಲ್ಲಿ ತೊದ, ಕೋತ, ಕುರುಂಬ, ಮತ್ತು ಇರುಳ ಎಂಬ ಬೇರೆಯೂ ನಾಲ್ಕು ದ್ರಾವಿಡ ನುಡಿಗಳು ಬಳಕೆಯಲ್ಲಿವೆ.
ಮೇಲಿನ ಈ ಹನ್ನೊಂದು ನುಡಿಗಳಲ್ಲಿ ತೆಲುಗು ನುಡಿಯೊಂದನ್ನು ಬಿಟ್ಟು ಉಳಿದ ಹತ್ತು ನುಡಿಗಳನ್ನು ತೆಂಕುದ್ರಾವಿಡ ಎಂಬ ನುಡಿಗುಂಪಿನಲ್ಲಿ ಸೇರಿಸಿ ಹೇಳಲಾಗುತ್ತದೆ, ಮತ್ತು ತೆಲುಗು ನುಡಿಯನ್ನು ಬೇರೆ ಏಳು ನುಡಿಗಳೊಂದಿಗೆ ಸೇರಿಸಿ ತೆಂಕು-ನಡುದ್ರಾವಿಡವೆಂಬ ಬೇರೊಂದು ನುಡಿಗುಂಪನ್ನು ಮಾಡಲಾಗುತ್ತದೆ. ಈ ತೆಂಕು-ನಡುದ್ರಾವಿಡ ಗುಂಪಿನಲ್ಲಿ ತೆಲುಗು ನುಡಿಯಲ್ಲದೆ ಸುಮಾರು 24 ಲಕ್ಶ ಜನರ ಮಾತಾಗಿರುವ ಗೋಂಡಿ ಮತ್ತು ಆರೂವರೆ ಲಕ್ಶ ಜನರ ಮಾತಾಗಿರುವ ಕೂಯಿ ನುಡಿಗಳು ಬರುತ್ತವೆ. ಉಳಿದಂತೆ, ಕುವಿ, ಕೊಂಡ, ಪೆಂಗೊ, ಮತ್ತು ಮಂಡ ಎಂಬ ನುಡಿಗಳೂ ಈ ಗುಂಪಿನಲ್ಲಿ ಸೇರುತ್ತವೆ.
ಕೋಲಾಮಿ, ನಾಯ್ಕಿ, ಪಾರ‍್ಜಿ, ಒಲ್ಲಾರಿ, ಮತ್ತು ಗದಬ ಎಂಬ ಅಯ್ದು ನುಡಿಗಳನ್ನು ನಡುದ್ರಾವಿಡವೆಂಬ ಬೇರೆಯೇ ಒಂದು ನುಡಿಗುಂಪಿನಲ್ಲಿ ಸೇರಿಸಲಾಗುತ್ತದೆ. ಈ ನುಡಿಗಳನ್ನಾಡುವವರು ಮುಕ್ಯವಾಗಿ ಆಂದ್ರಪ್ರದೇಶ, ಮದ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿ ನೆಲೆಸಿದ್ದಾರೆ. ಇದಲ್ಲದೆ, ಕುಡುಕ್, ಮಾಲ್ಟೋ, ಮತ್ತು ಬ್ರಾಹುಯೀ ಎಂಬ ಬೇರೆ ಮೂರು ನುಡಿಗಳನ್ನು ಬಡಗುದ್ರಾವಿಡವೆಂಬ ಇನ್ನೊಂದು ನುಡಿಗುಂಪಿನಲ್ಲಿ ಸೇರಿಸಲಾಗುತ್ತದೆ. ಈ ಮೂರು ನುಡಿಗಳಲ್ಲಿ ಕುಡುಕ್ ನುಡಿಯನ್ನು ಸುಮಾರು 20 ಲಕ್ಶ ಮಂದಿ ಆಡುತ್ತಿದ್ದು, ಇವರು ಮುಕ್ಯವಾಗಿ ಒರಿಸ್ಸಾದಲ್ಲಿ ನೆಲೆಸಿದ್ದಾರೆ; ನೇಪಾಳದ ದನಗರ‍್ ಜನಾಂಗದವರೂ ಇದೇ ನುಡಿಯನ್ನಾಡುತ್ತಾರೆ. ಮಾಲ್ಟೋ ನುಡಿಯನ್ನಾಡುವ ಒಂದು ಲಕ್ಶ ಮಂದಿ ಬಿಹಾರದ ರಾಜಮಹಲ್ ಗುಡ್ಡಗಳಲ್ಲಿ ನೆಲೆಸಿದ್ದಾರೆ, ಮತ್ತು ಬ್ರಾಹುಯೀ ನುಡಿಯನ್ನಾಡುವ 20 ಲಕ್ಶ ಮಂದಿ ಮುಕ್ಯವಾಗಿ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನೆಲೆಸಿದ್ದಾರೆ; ಅಪ್ಗಾನಿಸ್ತಾನ ಮತ್ತು ಇರಾನ್ನಲ್ಲೂ ಬ್ರಾಹುಯೀ ನುಡಿಯನ್ನಾಡುವವರು ಹಲವರಿದ್ದಾರೆ.
ಈ ರೀತಿ, ನಾಲ್ಕು ಮುಕ್ಯ ಗುಂಪುಗಳಲ್ಲಿ ಸೇರುವ ದ್ರಾವಿಡ ನುಡಿಗಳ ಒಟ್ಟು ಎಣಿಕೆ ಇಪ್ಪತ್ತಾರು ಎಂದು ಹೇಳಬಹುದು. ಆದರೆ, ಹಲವೆಡೆಗಳಲ್ಲಿ ಯಾವುದನ್ನು ಒಂದು ನುಡಿ ಎಂದು ಕರೆಯಬೇಕು, ಮತ್ತು ಯಾವುದನ್ನು ಬರಿಯ ಒಳನುಡಿ ಎಂದು ತಿಳಿಯಬೇಕು ಎಂಬುದನ್ನು ಕಚಿತವಾಗಿ ತೀರ‍್ಮಾನಿಸಲು ಬರುವುದಿಲ್ಲ. ಎತ್ತುಗೆಗಾಗಿ, ನೀಲಗಿರಿಯಲ್ಲಿ ಬಳಕೆಯಲ್ಲಿರುವ ಬಡಗ ಜನರ ಮಾತನ್ನು ಕೆಲವರು ಕನ್ನಡದ ಒಳನುಡಿಯೆಂದು ಕರೆಯುತ್ತಾರೆ, ಮತ್ತು ಬೇರೆ ಕೆಲವರು ಅದೊಂದು ಬೇರೆಯೇ ನುಡಿಯೆಂದೂ ಹೇಳುತ್ತಾರೆ. ಹಾಗಾಗಿ, ಒಟ್ಟು ದ್ರಾವಿಡ ನುಡಿಗಳು ಎಶ್ಟಿವೆ ಎಂಬುದನ್ನು ಕಚಿತವಾಗಿ ಹೇಳಲು ಬರುವುದಿಲ್ಲ; ಹಾಗಿದ್ದರೂ, ಅದು ಅಯ್ದಕ್ಕಿಂತ ಹೆಚ್ಚು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.
ಹಿಂದಿನ ಒಂದು ಕಾಲದಲ್ಲಿ ದ್ರಾವಿಡರು ಬಾರತದಲ್ಲಿ ಎಲ್ಲೆಡೆಗಳಲ್ಲೂ ನೆಲೆಸಿದ್ದಿರಬೇಕು, ಮತ್ತು ಇಂಡೋ-ಆರ‍್ಯನ್ ನುಡಿಗಳನ್ನಾಡುವ ಜನರು ಬಡಗು ನಾಡುಗಳಿಂದ ಬಾರತಕ್ಕೆ ವಲಸೆ ಬಂದ ಮೇಲೆ, ಹಲವಾರು ಮಂದಿ ದ್ರಾವಿಡ ನುಡಿಗಳನ್ನಾಡುವ ಜನರು ತಮ್ಮ ನುಡಿಗಳನ್ನು ಕಳೆದುಕೊಂಡು ಮರಾಟಿ, ಗುಜರಾತಿ, ಒಡಿಯಾ, ಹಿಂದಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳನ್ನಾಡುವಂತಾಗಿರಬೇಕೆಂದು ಹಲವು ಮಂದಿ ಅರಿವಿಗರು ತೀರ‍್ಮಾನಕ್ಕೆ ಬಂದಿದ್ದಾರೆ. ಬಾರತದಲ್ಲಿ ಬಳಕೆಯಲ್ಲಿರುವ ಈ ಇಂಡೋ-ಆರ‍್ಯನ್ ನುಡಿಗಳು ಹಲವು ವಿಶಯಗಳಲ್ಲಿ ದ್ರಾವಿಡ ನುಡಿಗಳನ್ನು ಹೋಲುತ್ತಿರುವುದಕ್ಕೆ ಅವುಗಳ ಆಡುಗರು ಮೊದಲಿಗೆ ದ್ರಾವಿಡ ನುಡಿಗಳನ್ನಾಡುತ್ತಿದ್ದುದೇ ಕಾರಣವಿರಬೇಕೆಂದೂ ತಿಳಿಯಲಾಗುತ್ತಿದೆ.
ಬಾರತದಲ್ಲಿ ಬಳಕೆಯಲ್ಲಿರುವ ಹಿಂದಿ, ಮರಾಟಿ, ಗುಜರಾತಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳನ್ನು ಯುರೋಪಿನ ಇಂಗ್ಲಿಶ್, ಜರ‍್ಮನ್, ಸ್ಪೇನಿಶ್, ಇಟೇಲಿಯನ್ ಮೊದಲಾದ ನುಡಿಗಳೊಂದಿಗೆ ಸಂಬಂದಿಸಲು ಸಾದ್ಯವಾಗಿದೆ; ಆದರೆ, ದ್ರಾವಿಡ ನುಡಿಗಳನ್ನು ಆ ರೀತಿ ಬೇರೆ ಯಾವ ನುಡಿಗಳೊಂದಿಗೂ ಎಲ್ಲರಿಗೂ ಒಪ್ಪಿಗೆಯಾಗುವಂತೆ ಇದುವರೆಗೆ ಸಂಬಂದಿಸಲು ಸಾದ್ಯವಾಗಿಲ್ಲ. ಹಾಗಾಗಿ, ಇಂಡೋ-ಆರ‍್ಯನ್ ನುಡಿಗಳು ಬಾರತಕ್ಕೆ ಹೊರಗಿನಿಂದ ಬಂದುವೆಂದು ಹೇಳಲು ಸಾದ್ಯವಾಗುವಂತೆ ದ್ರಾವಿಡ ನುಡಿಗಳು ಹೊರಗಿನಿಂದ ಬಂದುವೆಂದು ಹೇಳಲು ಸಾದ್ಯವಾಗುವುದಿಲ್ಲ.
ನುಡಿಗಳ ಎಣಿಕೆಯ ಕುರಿತು ಮಾತನಾಡುವಾಗ ಇನ್ನೊಂದು ಸಂಶಯವೂ ಹಲವರನ್ನು ಕಾಡುತ್ತದೆ; ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳ ಎಂಬ ನಾಲ್ಕು ನುಡಿಗಳಿಗೆ ಅವುಗಳದೇ ಆದ ಲಿಪಿಯಿದೆ; ಆದರೆ, ಉಳಿದವುಗಳಲ್ಲಿ ಯಾವುದಕ್ಕೂ ಅದರದೇ ಆದ ಲಿಪಿಯಿಲ್ಲ (ಇತ್ತೀಚೆಗೆ ಅವುಗಳಲ್ಲಿ ಕೆಲವಕ್ಕೆ ಲಿಪಿಗಳನ್ನು ಅಳವಡಿಸಲಾಗಿದೆ). ಲಿಪಿಯಿಲ್ಲದ ನುಡಿಗಳನ್ನು ಲಿಪಿಯಿರುವವುಗಳೊಂದಿಗೆ ಸರಿದೂಗಿಸಬಹುದೇ ಎಂಬುದೇ ಈ ಸಂಶಯ. ಅಯ್ದನೆಯ ದ್ರಾವಿಡ ನುಡಿಯಾಗಿ ಕೆಲವರು ತುಳುವಿನ ಬದಲು ಮರಾಟಿಯನ್ನು ಹೆಸರಿಸುತ್ತಿರುವುದಕ್ಕೆ ಇದೇ ಕಾರಣವಿರಬಹುದು.
ಆದರೆ, ನುಡಿಗಳ ಎಣಿಕೆಗೂ ಅವಕ್ಕೆ ಲಿಪಿಯಿದೆಯೇ, ಎಂದರೆ ಅವನ್ನು ಬರಹಕ್ಕೆ ಇಳಿಸಲಾಗಿದೆಯೇ ಎಂಬುದಕ್ಕೂ ನಡುವೆ ಯಾವ ಸಂಬಂದವೂ ಇಲ್ಲ. ಮುಕ್ಯವಾಗಿ, ಎರಡು ನುಡಿಗಳ ನಡುವೆ ವ್ಯತ್ಯಾಸ ಎಶ್ಟಿದೆ ಎಂಬುದರ ಮೇಲೆ ಅವೆರಡು ಒಂದೇ ನುಡಿಯ ಒಳನುಡಿಗಳೇ ಇಲ್ಲವೇ ಬೇರೆ ಬೇರೆ ನುಡಿಗಳೇ ಎಂಬುದನ್ನು ತೀರ‍್ಮಾನಿಸಲಾಗುತ್ತದೆ. ಇದಲ್ಲದೆ, ಇಂಡೋ-ಆರ‍್ಯನ್, ದ್ರಾವಿಡ ಎಂಬಂತಹ ನುಡಿಗಳ ಗುಂಪಿಸುವಿಕೆಗೂ ಅವು ಬಳಸುವ ಲಿಪಿಗಳಿಗೂ ನಡುವೆ ಯಾವ ಸಂಬಂದವೂ ಇಲ್ಲ. ನಿಜಕ್ಕೂ ಬಾರತದ ನುಡಿಗಳು ಬಳಸುವ ಲಿಪಿಗಳಲ್ಲಿ ಹೆಚ್ಚಿನವೂ ಬ್ರಾಹ್ಮೀ ಲಿಪಿ ಎಂಬ ಒಂದೇ ಮೂಲದಿಂದ ಬಂದಿವೆ.
ಹಲವು ನುಡಿಗಳು ಒಂದೇ ಲಿಪಿಯನ್ನು ಬಳಸುತ್ತಿರಬಲ್ಲುವು, ಮತ್ತು ಒಂದೇ ನುಡಿ ಹಲವು ಲಿಪಿಗಳನ್ನು ಬಳಸುತ್ತಿರಬಲ್ಲುದು: ಮರಾಟಿ, ಹಿಂದಿ, ಮತ್ತು ನೇಪಾಲಿ ನುಡಿಗಳು ಬಳಸುವ ಲಿಪಿಗಳ ನಡುವೆ ಹೆಚ್ಚಿನ ವ್ಯತ್ಯಾಸವೇನಿಲ್ಲ, ಮತ್ತು ತೆಲುಗು ಹಾಗೂ ಕನ್ನಡ ಲಿಪಿಗಳು ಹದಿನೆಂಟನೇ ಶತಮಾನದ ವರೆಗೆ ಒಂದೇ ಲಿಪಿಯಾಗಿದ್ದುವು. ಕೊಂಕಣಿ ನುಡಿ ರೋಮನ್, ನಾಗರಿ, ಮತ್ತು ಕನ್ನಡ ಲಿಪಿಗಳನ್ನು ಬಳಸುತ್ತಿದೆ, ಮತ್ತು ಸಿಂದಿ ನುಡಿ ನಾಗರಿ ಮತ್ತು ಪರ‍್ಸೋ-ಅರೇಬಿಕ್ ಲಿಪಿಗಳನ್ನು ಬಳಸುತ್ತಿದೆ. ಇದಲ್ಲದೆ, ಮಣಿಪುರಿ, ಮಲಯಾಳ ಮೊದಲಾದ ಬೇರೆ ಕೆಲವು ನುಡಿಗಳು ತಮ್ಮಲ್ಲಿ ಬಳಕೆಯಲ್ಲಿದ್ದ ಲಿಪಿಯನ್ನು ಬಿಟ್ಟುಕೊಟ್ಟು ಬೇರೆ ಲಿಪಿಯನ್ನು ಬಳಸತೊಡಗಿವೆ. ಹಾಗಾಗಿ, ನುಡಿಗಳು ಲಿಪಿಯನ್ನು ಬಳಸುವುದು ಒಂದು ಮಟ್ಟಿಗೆ ಜನರು ಉಡುಪನ್ನು ಬಳಸುವ ಹಾಗೆ ಎನ್ನಬಹುದು.
ಆದರೆ, ದ್ರಾವಿಡ ಮತ್ತು ಇಂಡೋ-ಆರ‍್ಯನ್ ಎಂಬ ನುಡಿಗಳ ವಿಂಗಡನೆಗೆ ಅವುಗಳ ನಡುವಿನ ವ್ಯತ್ಯಾಸವೇ ಮುಕ್ಯ ಆದಾರವಾಗಿದೆ: ಎರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ಹೇಳಬೇಕಿದ್ದಲ್ಲಿ, ಅವೆರಡರ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವೂ ಅವುಗಳ ಹಿನ್ನಡವಳಿಯಲ್ಲಿ ನಡೆದ ಮಾರ‍್ಪಾಡುಗಳಿಂದಾಗಿ ಮೂಡಿಬಂದಿವೆಯೆಂಬುದನ್ನು ತೋರಿಸಿಕೊಡಲು ಸಾದ್ಯವಾಗಬೇಕು. ಮೇಲೆ ಪಟ್ಟಿಮಾಡಿದ ಇಪ್ಪತ್ತಾರು ದ್ರಾವಿಡ ನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಈ ರೀತಿ ಅವುಗಳ ಹಿನ್ನಡವಳಿಯಲ್ಲಿ ನಡೆದಿವೆಯೆಂದು ಹೇಳಹುದಾದ ಮಾರ‍್ಪಾಡುಗಳ ಮೂಲಕ ವಿವರಿಸಲು ಸಾದ್ಯವಾಗಿದೆ. ಹಾಗಾಗಿ, ಅವನ್ನೆಲ್ಲ ಒಟ್ಟಿಗೆ ಒಂದೇ ನುಡಿಕುಟುಂಬದಲ್ಲಿ ಗುಂಪಿಸಲಾಗಿದೆ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 34
ಒಂದು ನುಡಿಯಲ್ಲಿರುವ ಬರಹವನ್ನು ಇನ್ನೊಂದು ನುಡಿಗೆ ಮಾರ್ಪಡಿಸುವುದನ್ನು ನುಡಿಮಾರಿಕೆ (ಅನುವಾದ) ಎಂದು ಕರೆಯಬಹುದು. ಈ ಕೆಲಸವನ್ನು ನಡೆಸಲು ಸಾಮಾನ್ಯವಾಗಿ ತುಂಬಾ ಸಮಯ ತಗಲುತ್ತದೆ; ಗಂಟೆಗೆ ಅಯ್ದಾರು ಪುಟಗಳನ್ನಶ್ಟೇ ನುಡಿಮಾರಲು ಬರುತ್ತದೆ. ಕೆಲವು ಬಗೆಯ ಬರಹಗಳನ್ನು ತುಸು ಬೇಗನೆ ನುಡಿಮಾರಬಹುದು, ಆದರೆ ಬೇರೆ ಕೆಲವು ಬಗೆಯ ಬರಹಗಳನ್ನು ನುಡಿಮಾರಲು ಇನ್ನಶ್ಟು ಹೊತ್ತು ತಗಲಬಹುದು. ಇವತ್ತು ನುಡಿಮಾರಬೇಕಾಗಿರುವ ಬರಹಗಳ ಎಣಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇಂಗ್ಲಿಶ್ನಂತಹ ನುಡಿಗಳಿಂದ ಸಾವಿರಾರು ಬರಹಗಳನ್ನು ನುಡಿಮಾರುತ್ತಲೇ ಇರಬೇಕಾಗುತ್ತದೆ. ಕೊನೆಯಿಲ್ಲದ ಈ ಕೆಲಸಕ್ಕೆ ಎಶ್ಟು ಮಂದಿ ನುಡಿಮಾರುಗರಿದ್ದರೂ ಸಾಕಾಗುವುದಿಲ್ಲ.
ಹಾಗಾಗಿ, ಎಣ್ಣುಕ(ಕಂಪ್ಯೂಟರ್)ಗಳನ್ನು ಬಳಸಿ ಈ ಕೆಲಸವನ್ನು ಹೆಚ್ಚು ಬೇಗನೆ ಮತ್ತು ಕಡಿಮೆ ವೆಚ್ಚದಲ್ಲಿ ನಡೆಸಬಹುದಲ್ಲವೇ ಎಂಬುದಾಗಿ ಹಲವರಲ್ಲಿ ಆಸಕ್ತಿ ಮೂಡಿದ್ದು, ಕಳೆದ ಅಯ್ವತ್ತು ವರ್ಶಗಳಿಂದ ಈ ವಿಶಯದಲ್ಲಿ ಅರಕೆಗಳು ನಡೆಯುತ್ತಿವೆ. ಗಂಟೆಗೆ ನೂರಿನ್ನೂರು ಪುಟಗಳಶ್ಟು ಬರಹಗಳನ್ನು ಇವತ್ತಿನ ಎಣ್ಣುಕಗಳು ನುಡಿಮಾರಿಕೊಡಬಲ್ಲುವು. ಆದರೆ, ಅವು ನುಡಿಮಾರಿದ ಈ ಬರಹಗಳಲ್ಲಿ ಹಲವು ತಪ್ಪುಗಳೂ ಉಳಿದಿರುತ್ತವೆ, ಮತ್ತು ಈ ತಪ್ಪುಗಳನ್ನೆಲ್ಲ ಕಯ್ಯಿಂದಲೇ ತಿದ್ದಿ ಸರಿಪಡಿಸಬೇಕಾಗುತ್ತದೆ. ಯಾಕೆಂದರೆ, ನುಡಿಮಾರುವ ಸಮಯದಲ್ಲಿ ನಾವು ನಡೆಸಬೇಕಾಗಿರುವ ಹಲವು ಕೆಲಸಗಳಲ್ಲಿ ಕೆಲವನ್ನು ನಡೆಸಲು ಎಣ್ಣುಕಗಳಿಗೆ ಸಾದ್ಯವೇ ಆಗುವುದಿಲ್ಲ, ಮತ್ತು ಅಂತಹ ವಿಶಯಗಳಲ್ಲಿ ಅವು ಹಲವು ತಪ್ಪುಗಳನ್ನು ಮಾಡುತ್ತವೆ. ಕೆಲವು ಬಗೆಯ ಬರಹಗಳ ಮಟ್ಟಿಗಂತೂ ಈ ರೀತಿ ಎಣ್ಣುಕಗಳು ಕೊಡುವ ನುಡಿಮಾರಿಕೆಯನ್ನು ತಿದ್ದಲು ಹೋಗುವುದಕ್ಕಿಂತಲೂ ಎಣ್ಣುಕಗಳ ನೆರವಿಲ್ಲದೆ ನೇರವಾಗಿ ನುಡಿಮಾರುವುದೇ ಸುಳುವಾದ ಕೆಲಸವೆಂದು ಅನಿಸಬಲ್ಲುದು.
ಎಣ್ಣುಕಗಳು ಬರಹಗಳನ್ನು ನುಡಿಮಾರಬೇಕಿದ್ದಲ್ಲಿ ಅವಕ್ಕೆ ಹಲವು ಬಗೆಯ ಅರಿವುಗಳು ಬೇಕಾಗುತ್ತವೆ. ಬರಹದಲ್ಲಿ ಬಳಕೆಯಾಗುವ ಪದಗಳಿಗೆ ಎಂತಹ ಹುರುಳುಗಳೆಲ್ಲ ಇವೆ ಎಂಬುದನ್ನು ಅವು ಅರಿತಿರಬೇಕು, ಮತ್ತು ಇದಕ್ಕಾಗಿ ಅವುಗಳಲ್ಲಿ ಪದನೆರಕೆಗಳಿರಬೇಕು. ಪದಗಳು ಸೊಲ್ಲುಗಳಲ್ಲಿ ಹೇಗೆ ಬಳಕೆಯಾಗುತ್ತವೆ, ಮತ್ತು ಅವುಗಳ ಹಲವು ಹುರುಳುಗಳಲ್ಲಿ ಒಂದು ಹುರುಳು ಹೇಗೆ ಆಯ್ಕೆಗೊಳ್ಳುತ್ತದೆ ಎಂಬುದನ್ನು ಅವು ಅರಿತಿರಬೇಕು, ಮತ್ತು ಇದನ್ನು ಅವಕ್ಕೆ ತಿಳಿಸಬಲ್ಲ ಸೊಲ್ಲರಿಮೆಯ (ವ್ಯಾಕರಣದ) ಕಟ್ಟಲೆಗಳು ಅವುಗಳಲ್ಲಿ ಇರಬೇಕು. ಬರಹಗಳಲ್ಲಿ ಬರುವ ಪದಗಳ ಹುರುಳು ಅವನ್ನು ಬಳಸಿರುವ ಕುಳ್ಳಿಹ(ಸಂದರ್ಬ)ದ ಮೇಲೂ ಅವಲಂಬಿಸಿರುತ್ತದೆ. ಮಾನವನ ಮಿದುಳು ಈ ವ್ಯತ್ಯಾಸವನ್ನು ಸುಳುವಾಗಿ ಅರಿತುಕೊಂಡು, ಕುಳ್ಳಿಹಕ್ಕೆ ಹೊಂದಿಕೆಯಾಗುವಂತಹ ಹುರುಳನ್ನು ಆಯ್ದುಕೊಳ್ಳಬಲ್ಲುದು. ಆದರೆ, ಈ ಕೆಲಸವನ್ನು ನಡೆಸಲು ಬೇಕಾಗುವ ಅರಿವನ್ನು ಎಣ್ಣುಕಗಳಿಗೆ ಕೊಡಿಸುವುದು ಹೇಗೆ ಎಂಬುದಿನ್ನೂ ತಿಳಿವಿಗರಿಗೆ ಗೊತ್ತಾಗಿಲ್ಲ. ಹಾಗಾಗಿ, ಈ ವಿಶಯದಲ್ಲಿ ಎಣ್ಣುಕಗಳು ತುಂಬಾ ತಪ್ಪು ಮಾಡುತ್ತಿವೆ.
ಇವತ್ತು ನುಡಿಮಾರುವ ಕೆಲಸಕ್ಕಾಗಿ ಎಣ್ಣುಕಗಳಲ್ಲಿ ಮುಕ್ಯವಾಗಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಲಾಗುತ್ತದೆ. ಇವನ್ನು ಮಾರೆಡೆ ಹಮ್ಮುಗೆ ಮತ್ತು ಎಡೆನುಡಿ ಹಮ್ಮುಗೆ ಎಂಬುದಾಗಿ ಕರೆಯಬಹುದು. ಇವುಗಳಲ್ಲಿ ಮೊದಲನೆಯದನ್ನು ಬಳಸುವವರು ತಿಳಿವನ್ನು ನೇರವಾಗಿ ಮೂಲನುಡಿಯಿಂದ ಈಡುನುಡಿಗೆ ಮಾರೆಡೆಗೊಳಿಸು(ವರ್ಗಾಯಿಸು)ತ್ತಾರೆ, ಮತ್ತು ಎರಡನೆಯದನ್ನು ಬಳಸುವವರು ತಿಳಿವನ್ನು ಮೊದಲಿಗೆ ಒಂದು ಕಲ್ಪಿತವಾಗಿರುವ ಎಡೆನುಡಿಗೆ ಮಾರೆಡೆಗೊಳಿಸಿ, ಅಲ್ಲಿಂದ ಈಡುನುಡಿಗೆ ಮಾರೆಡೆಗೊಳಿಸುತ್ತಾರೆ.
ಮಾರೆಡೆ ಹಮ್ಮುಗೆಯಲ್ಲಿ ಮೂರು ಹಂತಗಳಿರುತ್ತವೆ: ಮೊದಲನೆಯ ಹಂತದಲ್ಲಿ ಮೂಲ ಬರಹದ ಹುರುಳೇನು ಎಂಬುದನ್ನು ಕಂಡುಹಿಡಿದು, ಅದನ್ನು ಮೂಲನುಡಿಯದೇ ಆದ ಒಂದು ಕಲ್ಪಿತ ರೂಪಕ್ಕೆ ಬದಲಾಯಿಸಲಾಗುತ್ತದೆ; ಎರಡನೆಯ ಹಂತದಲ್ಲಿ ಅದನ್ನು ಅಂತಹದೇ ಆದ ಒಂದು ಈಡುನುಡಿಯ ಕಲ್ಪಿತ ರೂಪಕ್ಕೆ ಮಾರೆಡೆಗೊಳಿಸಲಾಗುತ್ತದೆ; ಮತ್ತು ಮೂರನೆಯ ಹಂತದಲ್ಲಿ ಈಡುನುಡಿಯ ಈ ಕಲ್ಪಿತ ರೂಪವನ್ನು ಅದರ ಬರಹರೂಪಕ್ಕೆ ಮಾರ್ಪಡಿಸಲಾಗುತ್ತದೆ.
ಮಾರೆಡೆ ಹಮ್ಮುಗೆಗಿಂತ ಎಡೆನುಡಿ ಹಮ್ಮುಗೆ ಸೊಲ್ಲುಗಳಿಗೆ ಕಲ್ಪಿತ ರೂಪವನ್ನು ಕೊಡುವಲ್ಲಿ ಮಾತ್ರ ಬೇರಾಗಿರುತ್ತದೆ. ಮೂಲನುಡಿಯ ಬರಹವನ್ನು ಅದರದೇ ಆದ ಕಲ್ಪಿತ ರೂಪಕ್ಕೆ ಮಾರ್ಪಡಿಸುವ ಬದಲು, ಈ ಹಮ್ಮುಗೆಯಲ್ಲಿ ಅದನ್ನು ಒಂದು ಎಡೆನುಡಿಗೆ (ಕಲ್ಪಿತವಾಗಿರುವ ನುಡಿಗೆ) ಮಾರ್ಪಡಿಸಲಾಗುತ್ತದೆ. ಹೀಗೆ ಮಾಡುವುದರಿಂದ ಸಿಗುವ ಪ್ರಯೋಜನವೇನೆಂದರೆ, ಆಮೇಲೆ ಈ ಎಡೆನುಡಿಯಿಂದ ಬೇರೆ ಯಾವ ನುಡಿಗೆ ಬೇಕಿದ್ದರೂ ಬರಹವನ್ನು ನುಡಿಮಾರಬಹುದು. ಎತ್ತುಗೆಗಾಗಿ, ಕನ್ನಡದ ಒಂದು ಬರಹವನ್ನು ಎಡೆನುಡಿಯ ಬರಹವಾಗಿ ಮಾರ್ಪಡಿಸಿದಲ್ಲಿ, ಆಮೇಲೆ ಅದನ್ನು ನೇರವಾಗಿ ತಮಿಳು, ತೆಲುಗು, ಮಲಯಾಳ, ಹಿಂದಿ ಮೊದಲಾದ ಬೇರೆ ಹಲವು ನುಡಿಗಳಲ್ಲಿ ಯಾವುದರ ಬರಹವಾಗಿ ಬೇಕಿದ್ದರೂ ಮಾರ್ಪಡಿಸಿಕೊಳ್ಳಬಹುದು.
ಇದಕ್ಕೆ ಬದಲು, ಮಾರೆಡೆ ಹಮ್ಮುಗೆಯಲ್ಲಿ ಒಂದೊಂದು ನುಡಿಜೋಡಿಗೂ ನುಡಿಮಾರಲು ಬೇಕಾಗುವ ಕೆಲಸಗಳನ್ನೆಲ್ಲ ಬೇರೆ ಬೇರಾಗಿ ಮಾಡಿಕೊಳ್ಳಬೇಕಾಗುತ್ತದೆ. ಜಗತ್ತಿನ ಎಲ್ಲಾ ನುಡಿಗಳಿಗೂ ಸಮಾನವಾಗಬಹುದಾದಂತಹ, ಎಂದರೆ ಯಾವುದೇ ಒಂದು ನುಡಿಯ ಪರಿಚೆಯನ್ನೂ ಬಳಸದಿರುವಂತಹ ಎಡೆನುಡಿಯೊಂದನ್ನು ಉಂಟುಮಾಡಬಲ್ಲೆವು ಎಂಬ ಹುಚ್ಚು ಉತ್ಸಾಹ ಈ ಎಡೆನುಡಿ ಹಮ್ಮುಗೆಯನ್ನು ಹಮ್ಮಿಕೊಳ್ಳಲು ಹೊರಟಿದ್ದ ತಿಳಿವಿಗರಲ್ಲಿತ್ತು. ಆದರೆ ಸಮಯ ಕಳೆದಂತೆಲ್ಲ, ಇದು ತಲಪಲಾಗದ ಗುರಿ ಎಂಬುದು ಸ್ಪಶ್ಟವಾಗುತ್ತಿದೆ.
ಮೇಲಿನ ಎರಡು ಬಗೆಯ ಹಮ್ಮುಗೆಗಳಿಂತ ತೀರ ಬೇರಾಗಿರುವ ಇನ್ನೊಂದು ಬಗೆಯ ಹಮ್ಮುಗೆಯನ್ನೂ ಕೆಲವರು ತಿಳಿವಿಗರು ಬಳಕೆಗೆ ತಂದಿದ್ದಾರೆ. ಇದರಲ್ಲಿ ಈಗಾಗಲೇ ಉಂಟುಮಾಡಿರುವ ನುಡಿಮಾರಿಕೆಗಳನ್ನು ಬಳಸಿಕೊಳ್ಳುವಂತಹ ಅಳವನ್ನು ಎಣ್ಣುಕಗಳಿಗೆ ಕೊಡಿಸಲಾಗುತ್ತದೆ. ಈ ಅಳವಿನ ನೆರವಿನಿಂದ, ಎಣ್ಣುಕಗಳು ಎರಡು ನುಡಿಗಳ ನಡುವೆ ಈಗಾಗಲೇ ನಡೆಸಿರುವ ನುಡಿಮಾರಿಕೆಗಳಲ್ಲಿ ಒಂದು ನುಡಿಯ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದವುಗಳಿಗೆ ಬದಲಾಗಿ ಇನ್ನೊಂದು ನುಡಿಯಲ್ಲಿ ಯಾವ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದವುಗಳನ್ನು ಹೆಚ್ಚಿನೆಡೆಗಳಲ್ಲೂ ಬಳಸಲಾಗಿದೆ ಎಂಬುದನ್ನು ಕಂಡುಕೊಳ್ಳುತ್ತವೆ, ಮತ್ತು ಈ ವಿಶಯವನ್ನು ನೆನಪಿನಲ್ಲಿರಿಸಿಕೊಂಡು, ಅಂತಹವೇ ಆದ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದುವನ್ನು ಬೇಕಾದಾಗ ಬಳಸುವ ಅಳವನ್ನು ತಾವೇ ಉಂಟುಮಾಡಿಕೊಳ್ಳುತ್ತವೆ.
ಎತ್ತುಗೆಗಾಗಿ, ಇಂಗ್ಲಿಶ್ ಮತ್ತು ಫ಼್ರೆಂಚ್ ನುಡಿಗಳ ನಡುವೆ ಹಲವಾರು ಬರಹಗಳನ್ನು ಈಗಾಗಲೇ ನುಡಿಮಾರಲಾಗಿದೆ. ಈ ಬರಹಗಳಲ್ಲಿ ಯಾವ ಇಂಗ್ಲಿಶ್ ಪದಗಳಿಗೆ ಬದಲಾಗಿ ಯಾವ ಫ಼್ರೆಂಚ್ ಪದಗಳು ಅತಿ ಹೆಚ್ಚು ಕಡೆಗಳಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಎಣ್ಣುಕಗಳು ಗಮನಿಸಿಕೊಳ್ಳುತ್ತವೆ. ಹೊಸದಾಗಿ ಬರಹವೊಂದನ್ನು ಇಂಗ್ಲಿಶ್ನಿಂದ ಫ಼್ರೆಂಚ್ ನುಡಿಗೆ ಇಲ್ಲವೇ ಫ಼್ರೆಂಚ್ನಿಂದ ಇಂಗ್ಲಿಶ್ ನುಡಿಗೆ ನುಡಿಮಾರಬೇಕಾದಾಗ, ಈ ಎಣ್ಣುಕಗಳು ಒಂದೊಂದು ಪದಕ್ಕೂ ಸಮನಾಗಿರುವ ಪದಗಳಲ್ಲಿ ಆ ರೀತಿ ತುಂಬಾ ಹೆಚ್ಚು ಬಾರಿ ಬಳಕೆಯಾಗಿರುವ ಪದವನ್ನೇ ಆರಿಸಿಕೊಳ್ಳುತ್ತವೆ, ಮತ್ತು ಇದರಿಂದಾಗಿ, ಅವು ನಡೆಸುವ ನುಡಿಮಾರಿಕೆ ಓದುಗರಿಗೆ ಹೆಚ್ಚು ಮೆಚ್ಚುಗೆಯಾಗುವ ಹಾಗಾಗುತ್ತದೆ.
ಎಣ್ಣುಕಗಳು ನುಡಿಮಾರಿರುವ ಬರಹಗಳನ್ನು ಅರಿವಿಗರು ತಿದ್ದುತ್ತಿರುವಂತೆ, ಅವು ತಮ್ಮ ನುಡಿಮಾರಿಕೆಯ ಅಳವನ್ನು ಹೆಚ್ಚಿಸಿಕೊಳ್ಳುವಂತಹ ಹಮ್ಮುಗೆಯನ್ನೂ ಉಂಟುಮಾಡಲಾಗಿದೆ. ಇದರಿಂದಾಗಿ, ಹೆಚ್ಚು ಹೆಚ್ಚು ಬರಹಗಳನ್ನು ಎಣ್ಣುಕಗಳ ನೆರವಿನಿಂದ ನುಡಿಮಾರಿದಂತೆ, ಮತ್ತು ಅಂತಹ ಹೆಚ್ಚು ಹೆಚ್ಚು ಬರಹಗಳನ್ನು ಸರಿಪಡಿಸಿದಂತೆ, ಹೆಚ್ಚು ಹೆಚ್ಚು ಚನ್ನಾಗಿರುವ ನುಡಿಮಾರಿಕೆಯನ್ನು ಅವು ನಡೆಸುವಂತಾಗುತ್ತದೆ. ಗೂಗಲ್ನಂತಹ ಸರ್ವರ್ಗಳಲ್ಲಿ ಇಂತಹ ನುಡಿಮಾರಿಕೆಗಳನ್ನು ಅಳವಡಿಸಲಾಗಿದೆ. ಕನ್ನಡಕ್ಕೆ ಹೆಚ್ಚು ಚನ್ನಾಗಿರುವ ಎಣ್ಣುಕದ ನುಡಿಮಾರಿಕೆ ದೊರಕಲು ಇವನ್ನು ನಾವು ಹೆಚ್ಚು ಹೆಚ್ಚು ಬಳಸುತ್ತಿರಬೇಕು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 33
ಎಲ್ಲಾ ನುಡಿಗಳಿಗೂ ಅವುಗಳದೇ ಆದ ಒಂದು ಸೊಗಡುಎಂಬುದಿರುತ್ತದೆ. ಇದನ್ನು ಬರಹಗಳು ಹೆಚ್ಚು ಕೆಡದಂತೆ ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವು ತಮ್ಮ ಜೀವಂತಿಕೆಯನ್ನು ಕಳೆದುಕೊಳ್ಳುತ್ತವೆ, ಮತ್ತು ಸಾಮಾನ್ಯ ಜನರಿಂದ ದೂರವಾಗುತ್ತವೆ. ಅಂತಹ ಬರಹಗಳನ್ನು ಕಲಿಯುವ ಮತ್ತು ಬಳಸುವ ಕೆಲಸವೂ ಆ ನುಡಿಯನ್ನಾಡುವ ಜನರಿಗೆ ತುಂಬಾ ತೊಡಕಿನದಾಗುತ್ತದೆ. ನುಡಿಗಳಿಗಿರುವ ಈ ಸೊಗಡು ಅವುಗಳ ಪದಗಳಲ್ಲಿ ಬರುವ ಉಲಿಗಳಲ್ಲಿ, ಉಲಿಗಳ ಓರಣಗಳಲ್ಲಿ, ಪದಗಳಿಗೆ ಒಟ್ಟು(ಪ್ರತ್ಯಯ)ಗಳನ್ನು ಇಲ್ಲವೇ ಬೇರೆ ಪದಗಳನ್ನು ಸೇರಿಸಿದಾಗ ಅವುಗಳ ಉಲಿಗಳಲ್ಲಿ ನಡೆಯುವ ಮಾರ್ಪಾಡುಗಳಲ್ಲಿ, ಪದಗಳನ್ನು ಸೇರಿಸಿ ಬೇರೆ ಪದಗಳನ್ನು ಉಂಟುಮಾಡುವ ಬಗೆಗಳಲ್ಲಿ, ಮತ್ತು ಪದಗಳಿಂದ ಪದಕಂತೆಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವ ಬಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಕನ್ನಡಕ್ಕೂ ಇಂತಹ ತನ್ನದೇ ಆದ ಒಂದು ಸೊಗಡಿದೆ, ಮತ್ತು ಅದು ಸಂಸ್ಕ್ರುತ, ಹಿಂದಿ, ಇಂಗ್ಲಿಶ್ ಮೊದಲಾದ ಬೇರೆ ನುಡಿಗಳಿಗಿರುವ ಸೊಗಡಿಗಿಂತ ತೀರ ಬೇರಾಗಿದೆ; ಕನ್ನಡದ ಉಲಿಗಳು, ಅವುಗಳ ಓರಣಗಳು, ಅವುಗಳ ಸೇರಿಕೆಯ ಮಾರ್ಪಾಡುಗಳು, ಕನ್ನಡದಲ್ಲಿ ಪದ, ಪದಕಂತೆ ಮತ್ತು ಸೊಲ್ಲುಗಳನ್ನು ಉಂಟುಮಾಡುವ ಬಗೆಗಳು ಮೊದಲಾದುವನ್ನು ಸಂಸ್ಕ್ರುತದಂತಹ ಬೇರೆ ನುಡಿಗಳಲ್ಲಿ ಕಾಣಿಸುವ ಬಗೆಗಳೊಂದಿಗೆ ಹೋಲಿಸಿ ನೋಡಿದಾಗ, ನಿಜಕ್ಕೂ ಕನ್ನಡದ ಸೊಗಡು ಎಂತಹದು ಎಂಬುದು ಗೊತ್ತಾಗುತ್ತದೆ.
(1) ಸಂಸ್ಕ್ರುತ ಪದಗಳಲ್ಲಿ ಬಳಕೆಯಾಗುವ ಖಛಠಥಫ ಮತ್ತು ಘಝಢಧಭಗಳೆಂಬ ಒತ್ತುಸಿರಿನ ಬರಿಗೆಗಳು (ಮಹಾಪ್ರಾಣಾಕ್ಶರಗಳು) ಕನ್ನಡ ಪದಗಳಲ್ಲಿಲ್ಲ; ಆದರೆ, ಸಂಸ್ಕ್ರುತ ಪದಗಳಲ್ಲಿ ಕಾಣಿಸದಿರುವ ಗಿಡ್ಡ ಎಕಾರ ಮತ್ತು ಒಕಾರಗಳು ಕನ್ನಡ ಪದಗಳಲ್ಲಿವೆ. ಸಂಸ್ಕ್ರುತದಲ್ಲಿರುವ ಋಕಾರ ಮತ್ತು ಷಕಾರಗಳು ಕನ್ನಡದಲ್ಲಿಲ್ಲ; ಆದರೆ, ಸಂಸ್ಕ್ರುತದಲ್ಲಿಲ್ಲದ ಎಯ್, ಒಯ್, ಉಯ್, ಆಯ್, ಒವ್, ಇವ್ ಮೊದಲಾದ ಹಲವು ಸ್ವರ ಮತ್ತು ಯಕಾರ ಇಲ್ಲವೇ ವಕಾರಗಳ ಜೋಡಿಗಳು ಕನ್ನಡದಲ್ಲಿವೆ.
(2) ಈ ಎರಡು ನುಡಿಗಳಿಗೂ ಸಮಾನವಾಗಿರುವ ಅಕ್ಶರಗಳು ಹಲವಿವೆಯಾದರೂ ಅವು ಒಂದೇ ರೀತಿಯಾಗಿ ಬಳಕೆಯಾಗುವುದಿಲ್ಲ. ಸಂಸ್ಕ್ರುತದಲ್ಲಿ ಒತ್ತಕ್ಶರಗಳಿಂದ ಮೊದಲಾಗುವ ಪದಗಳು ಸಾಕಶ್ಟಿವೆ (ಕ್ರಾಂತಿ, ಕ್ಷಮೆ, ಜ್ಞಾನ, ಜ್ಯೋತಿ, ದ್ವೇಷ, ಮ್ಲೇಚ್ಛ). ಆದರೆ ಕನ್ನಡದವೇ ಆದ ಪದಗಳಲ್ಲಿ ಆ ರೀತಿ ಒತ್ತಕ್ಶರಗಳು ಪದಗಳ ಮೊದಲಿಗೆ ಬರುವುದಿಲ್ಲ. ಪದಗಳ ನಡುವೆ ಬರಬಲ್ಲ ಒತ್ತಕ್ಶರಗಳಲ್ಲೂ ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ವ್ಯತ್ಯಾಸವಿದೆ. ಸಂಸ್ಕ್ರುತದ ಭಕ್ತ, ಅಜ್ಞಾನ, ವತ್ಸ, ಮತ್ಸ್ಯ ಮೊದಲಾದ ಪದಗಳಲ್ಲಿ ನಡುವೆ ಬಂದಿರುವ ಕ್ತ್, ಜ್ಞ್, ತ್ಸ್, ತ್ಸ್ಯ್ ಮೊದಲಾದ ಹಲವು ಬಗೆಯ ಒತ್ತಕ್ಶರಗಳು ಕನ್ನಡ ಪದಗಳಲ್ಲಿ ಕಾಣಿಸುವುದಿಲ್ಲ.
(3) ಎರಡು ಇಲ್ಲವೇ ಹೆಚ್ಚು ಪದಗಳನ್ನು ಒಟ್ಟುಸೇರಿಸಿ ಹೊಸ ಪದಗಳನ್ನು ತಯಾರಿಸುವ ಹೊಲಬುಗಳು ಈ ಎರಡು ನುಡಿಗಳಲ್ಲಿ ಬೇರೆ ಬೇರಾಗಿವೆ. ಸಂಸ್ಕ್ರುತದಲ್ಲಿ ಸಾಮಾನ್ಯವಾಗಿ ಹೆಸರುಪದಗಳನ್ನು ಮಾತ್ರ ಇಂತಹ ರಚನೆಗಳಲ್ಲಿ ಬಳಸಲಾಗುತ್ತದೆ; ಆದರೆ, ಕನ್ನಡದಲ್ಲಿ ಹೆಸರುಪದ (ತಲೆಗೂದಲು, ಬಯಲಾಟ), ಎಸಕಪದ (ಚುಚ್ಚುಮದ್ದು, ಕಡೆಗೋಲು) ಮತ್ತು ಪರಿಚೆಪದಗಳೆಂಬ (ದೊಡ್ಡಮ್ಮ, ಬಿಸಿನೀರು) ಮೂರು ಬಗೆಯ ಪದಗಳನ್ನೂ ಇಂತಹ ರಚನೆಗಳಲ್ಲಿ ಬಳಸಲು ಬರುತ್ತದೆ.
(4) ಕನ್ನಡದಲ್ಲಿ ಸಾಮಾನ್ಯವಾಗಿ ಎರಡಕ್ಕಿಂತ ಹೆಚ್ಚು ಪದಗಳನ್ನು ಈ ರೀತಿ ಜೋಡಿಸುವುದು ಅಪರೂಪ; ಆದರೆ, ಸಂಸ್ಕ್ರುತದಲ್ಲಿ ಮೂರು-ನಾಲ್ಕು ಪದಗಳನ್ನು ಸೇರಿಸಿ ರಚಿಸಿರುವ ಜೋಡುಪದಗಳೂ ಬೇಕಾದಶ್ಟಿವೆ (ಪೂರ್ವಜನ್ಮಕೃತಂ, ಮತ್ತಮಾತಂಗಗಾಮಿ, ಸಕಲನೀತಿಶಾಸ್ತ್ರತತ್ವಜ್ಞಃ).
(5) ಒಟ್ಟು(ಪ್ರತ್ಯಯ)ಗಳನ್ನು ಸೇರಿಸಿ ಹೊಸ ಪದಗಳನ್ನು ತಯಾರಿಸುವ ವಿಶಯದಲ್ಲೂ ಕನ್ನಡ ಸಂಸ್ಕ್ರುತಕ್ಕಿಂತ ಬೇರಾಗಿದೆ. ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚು ಒಟ್ಟುಗಳನ್ನು ಸೇರಿಸಿ ರಚಿಸಿರುವ ಪದಗಳು ತುಂಬಾ ಕಡಿಮೆ; ಆದರೆ, ಸಂಸ್ಕ್ರುತದ ಹೆಚ್ಚಿನ ಪದಗಳಲ್ಲೂ ಎರಡು ಇಲ್ಲವೇ ಹೆಚ್ಚು ಒಟ್ಟುಗಳು ಸೇರಿರುವುದನ್ನು ಕಾಣಬಹುದು (ಅ-ಜ್ಞಾನ್-ಇ, ಕರ್-ತೃ-ತ್ವ). ಕನ್ನಡದಲ್ಲಿ ಒಟ್ಟುಗಳನ್ನು ಪದಗಳ ಕೊನೆಯಲ್ಲಿ ಮಾತ್ರ ಬಳಸಲು ಬರುತ್ತದೆ; ಆದರೆ, ಸಂಸ್ಕ್ರುತದಲ್ಲಿ ಅವನ್ನು ಪದಗಳ ಮೊದಲಿಗೂ ಬಳಸಬಹುದು (ಸತ್ಯ-ಅಸತ್ಯ, ಸ್ವಾಗತ-ಸುಸ್ವಾಗತ, ಜೀವಿ-ನಿರ್ಜೀವಿ, ರಕ್ಷಣೆ-ಸಂರಕ್ಷಣೆ).
(6) ಪದಕ್ಕೆ ಪದ ಸೇರಿದಾಗ, ಇಲ್ಲವೇ ಪದಕ್ಕೆ ಒಟ್ಟು ಸೇರಿದಾಗ, ಅವುಗಳಲ್ಲಿ ನಡೆಯುವ ಸೇರಿಕೆಯ ಬದಲಾವಣೆಗಳು ಕನ್ನಡ ಮತ್ತು ಸಂಸ್ಕ್ರುತ ನುಡಿಗಳಲ್ಲಿ ಬೇರೆ ಬೇರಾಗಿವೆ: ಇಕಾರದ ಅನಂತರ ಅಕಾರ ಬಂದಾಗ, ಕನ್ನಡದಲ್ಲಿ ಇಕಾರ ಬಿದ್ದುಹೋಗಿ ಅಕಾರ ಉಳಿಯುತ್ತದೆ (ಅಲ್ಲಿ+ಅಲ್ಲಿ=ಅಲ್ಲಲ್ಲಿ); ಆದರೆ, ಸಂಸ್ಕ್ರುತದಲ್ಲಿ ಇಕಾರ ಯಕಾರವಾಗುತ್ತದೆ (ಅತಿ+ಅಲ್ಪ=ಅತ್ಯಲ್ಪ). ಅಕಾರದ ಅನಂತರ ಇಕಾರ ಬಂದರೂ ಕನ್ನಡದಲ್ಲಿ ಇಂತಹದೇ ಮೊದಲನೆಯ ಸ್ವರ ಬಿದ್ದುಹೋಗಿ ಎರಡನೆಯದು ಉಳಿಯುತ್ತದೆ (ಅಲ್ಲಿಂದ+ಇಳಿದು=ಅಲ್ಲಿಂದಿಳಿದು); ಆದರೆ, ಸಂಸ್ಕ್ರುತದಲ್ಲಿ ಅವೆರಡೂ ಬಿದ್ದುಹೋಗಿ ಹೊಸದೊಂದು ಸ್ವರ (ಏಕಾರ) ಬಂದುಸೇರುತ್ತದೆ (ರಾಜ+ಇಂದ್ರ=ರಾಜೇಂದ್ರ).
(7) ಒಟ್ಟುಗಳನ್ನು ಸೇರಿಸಿ ಹೊಸಪದಗಳನ್ನು ರಚಿಸುವಲ್ಲಿ ಕನ್ನಡ ಮತ್ತು ಸಂಸ್ಕ್ರುತಗಳ ನಡುವೆ ಹಲವು ಮುಕ್ಯವಾದ ವ್ಯತ್ಯಾಸಗಳಿವೆ: ಸಂಸ್ಕ್ರುತ ಪದಗಳಿಗೆ ಯ ಇಲ್ಲವೇ ಇಕ ಒಟ್ಟನ್ನು ಸೇರಿಸಿದಾಗ, ಹಲವು ತೊಡಕಾದ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಪದಗಳ ಮೊದಲಿಗೆ ಬರುವ ಗಿಡ್ಡ ಅಕಾರ ಉದ್ದ ಆ ಎಂದಾಗುವುದು (ಚಪಲ-ಚಾಪಲ್ಯ, ಪ್ರಮಾಣ-ಪ್ರಾಮಾಣಿಕ), ಇ, ಈ ಮತ್ತು ಏ ಸ್ವರಗಳು ಐ ಎಂದಾಗುವುದು (ನಿಸರ್ಗ-ನೈಸರ್ಗಿಕ, ದೀನ-ದೈನ್ಯ, ಚೇತನ-ಚೈತನ್ಯ), ಉ, ಊ ಮತ್ತು ಓ ಸ್ವರಗಳು ಔ ಎಂದಾಗುವುದು (ಸುಖ-ಸೌಖ್ಯ, ಪೂರ್ವಾಹ್ನ-ಪೌರ್ವಾಹ್ನಿಕ, ಲೋಕ-ಲೌಕಿಕ) ಮೊದಲಾದವು ಇಂತಹ ಕೆಲವು ಸಂಸ್ಕ್ರುತದ ನಿಯಮಗಳು.
ಆದರೆ, ಕನ್ನಡದಲ್ಲಿ ಒಟ್ಟುಗಳನ್ನು ಸೇರಿಸಿ ಪದಗಳನ್ನು ರಚಿಸುವಲ್ಲಿ ಇವಕ್ಕಿಂತ ತೀರ ಬೇರಾಗಿರುವ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಇವು (ಕನ್ನಡಿಗರ ಮಟ್ಟಿಗೆ) ಸಂಸ್ಕ್ರುತದ ಸೇರಿಕೆಯ ನಿಯಮಗಳಶ್ಟು ತೊಡಕಿನವಾಗಿಲ್ಲ. ಕನ್ನಡ ಪದಗಳಿಗೆ ಇಕೆ ಒಟ್ಟನ್ನು ಸೇರಿಸಿದಾಗ ಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ (ಬಳಲು-ಬಳಲಿಕೆ, ಹೊಗಳು-ಹೊಗಳಿಕೆ, ಅಂಜು-ಅಂಜಿಕೆ) ಮತ್ತು ಪದಗಳ ಕೊನೆಯ ಇಕಾರ ಹಾಗೆಯೇ ಉಳಿದು ಇಕೆ ಒಟ್ಟಿನ ಮೊದಲ ಸ್ವರ ಬಿದ್ದುಹೋಗುತ್ತದೆ (ಇರಿ-ಇರಿಕೆ, ತಿರಿ-ತಿರಿಕೆ, ಇಳಿ-ಇಳಿಕೆ).
ಕನ್ನಡದ ಸೊಗಡು ಸಂಸ್ಕ್ರುತದ ಸೊಗಡಿಗಿಂತ ತೀರ ಬೇರಾದುದು ಎಂಬುದನ್ನು ಅವು ಬಳಸುವ ಪದಗಳ ಸ್ವರೂಪದಲ್ಲಿ ಕಾಣಿಸುವಂತಹ ಈ ವ್ಯತ್ಯಾಸಗಳು ತುಂಬಾ ಸ್ಪಶ್ಟವಾಗಿ ತೋರಿಸಿಕೊಡುತ್ತವೆ. ಕನ್ನಡ ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಅವುಗಳಲ್ಲಿ ಸ್ವಲ್ಪವೂ ಬದಲಾವಣೆಯನ್ನು ಮಾಡದೆ ಬಳಸಿದಲ್ಲಿ ಅಂತಹ ಬರಹ ತನ್ನದೇ ಆದ ಸೊಗಡನ್ನು ಪೂರ್ತಿ ಕಳೆದುಕೊಳ್ಳುತ್ತದೆ. ಈ ರೀತಿ ತನ್ನ ಹುಟ್ಟುಸೊಗಡನ್ನು ಕಳೆದುಕೊಳ್ಳುವ ಬರಹ ತನ್ನತನವನ್ನೂ ಕಳೆದುಕೊಳ್ಳುತ್ತದೆ, ಮತ್ತು ಅದರ ಜೀವಂತಿಕೆ ನಶ್ಟವಾಗಿ ಅದರಲ್ಲಿ ಕ್ರುತಕತೆ ತುಂಬಿಕೊಳ್ಳುತ್ತದೆ. ಇದಲ್ಲದೆ, ಅಂತಹ ಬರಹಕ್ಕೂ ಹೆಚ್ಚಿನ ಕನ್ನಡಿಗರ ಮಾತಿಗೂ ನಡುವೆ ದೊಡ್ಡ ಕಂದಕವೇರ್ಪಟ್ಟು, ಅದು ಅವರೆಲ್ಲರಿಂದಲೂ ದೂರವಾಗುತ್ತದೆ. ಯಾಕೆಂದರೆ, ಬರಹ ಆ ರೀತಿ ಬದಲಾದಾಗಲೂ ಜನರ ಆಡುನುಡಿ ಅದಕ್ಕನುಗುಣವಾಗಿ ಬದಲಾಗುವುದಿಲ್ಲ. ಅದು ತನ್ನ ಪದಸ್ವರೂಪವನ್ನು ಮತ್ತು ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.
ಇದಕ್ಕೆ ಕಾರಣವೇನೆಂದರೆ, ಆಡುನುಡಿಯನ್ನು ಮಕ್ಕಳು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುತ್ತಾರೆ; ಅದನ್ನು ಮಕ್ಕಳಿಗೆ ಯಾರೂ ಕಲಿಸಿಕೊಡಬೇಕಾಗಿಲ್ಲ. ಹಾಗಾಗಿ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮಾರೆಡೆಗೊಳ್ಳುವಾಗ, ಅದು ತಿರುತಿರುಗಿ ಹೊಸತನವನ್ನು ಮತ್ತು ಜೀವಂತಿಕೆಯನ್ನು ಪಡೆಯುತ್ತಿರುತ್ತದೆ. ಆದರೆ, ಬರಹವನ್ನು ಮಕ್ಕಳು ಶಾಲೆಯಲ್ಲಿ ದೊಡ್ಡವರ ನೆರವಿನಿಂದ ಕಲಿಯಬೇಕಾಗುತ್ತದೆ; ಅದನ್ನು ಅವರು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುವುದಿಲ್ಲ.
ಹಾಗಾಗಿ, ಬರಹಗಾರರು ಕಾಲದಿಂದ ಕಾಲಕ್ಕೆ ಅದನ್ನು ಹೊಸದಾಗಿಸಿಕೊಳ್ಳದಿದ್ದರೆ, ಮತ್ತು ಆಡುನುಡಿಗೆ ಹತ್ತಿರವಾಗುವಂತೆ ಮಾರ್ಪಡಿಸಿಕೊಳ್ಳದಿದ್ದರೆ, ಅದು ಕ್ರುತಕವಾಗುತ್ತಾ ಹೋಗಿ ತನ್ನ ಹುಟ್ಟುಸೊಗಡನ್ನು ಮತ್ತು ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ. ಕನ್ನಡದಲ್ಲಿ ಕತೆ-ಕಾದಂಬರಿಗಳನ್ನು ಬರೆಯುವವರು ತಮ್ಮ ಬರಹ ಈ ರೀತಿ ಕ್ರುತಕವಾಗದಂತೆ ನೋಡಿಕೊಳ್ಳುತ್ತಾರೆ; ಆದರೆ, ಬೇರೆ ಬಗೆಯ ಬರಹಗಳನ್ನು ಬರೆಯುವವರು ಇದನ್ನು ಮಾಡಲು ಹೋಗದುದರಿಂದಾಗಿ ಇವತ್ತು ಅಂತಹ ಬರಹಗಳು ತುಂಬಾ ಕ್ರುತಕವಾಗಿದ್ದು ಸಾಮಾನ್ಯ ಜನರಿಗೆ ತಿಳಿಯದ ಹಾಗಾಗಿವೆ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 32
ಕನ್ನಡ ಬರಹಗಳಲ್ಲಿ ಇತ್ತೀಚೆಗೆ ಸಂಸ್ಕ್ರುತದ ‘ಕರಣ’ ಎಂಬ ಪದದ ಬಳಕೆ ತುಂಬಾ ಹೆಚ್ಚಾಗುತ್ತಿದೆ; ಅದನ್ನು ಬಳಸುವವರು ನಿಜಕ್ಕೂ ಅದು ಬೇಕೇ ಇಲ್ಲವೇ ಬೇಡವೇ ಎಂಬುದನ್ನು ಗಮನಿಸುವುದೇ ಇಲ್ಲ. ಹಲವೆಡೆಗಳಲ್ಲಿ ಅದಕ್ಕೆ ಬದಲು ಕನ್ನಡದ್ದೇ ಆದ ‘ಇಸು’ ಒಟ್ಟನ್ನು ಬಳಸುವುದೇ ಕನ್ನಡದ ಮಟ್ಟಿಗೆ ಒಳ್ಳೆಯದು. ಯಾಕೆಂದರೆ, ‘ಕರಣ’ ಪದದ ಬಳಕೆಯಿಂದಾಗಿ ಮೂಡುವ ಹಲವು ಬಗೆಯ ಗೊಂದಲಗಳು ‘ಇಸು’ ಒಟ್ಟಿನ ಬಳಕೆಯಲ್ಲಿ ಕಾಣಿಸುವುದಿಲ್ಲ. ಇದಲ್ಲದೆ, ಕನ್ನಡದ್ದೇ ಆದ ‘ಇಸು’ ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆಗಳು ಎಲ್ಲಾ ಕನ್ನಡಿಗರಿಗೂ ತಿಳಿದಿರುತ್ತವೆ; ಹಾಗಾಗಿ, ‘ಕರಣ’ ಪದದ ಬಳಕೆಯ ಹಾಗೆ ಹೊಸ ಕಟ್ಟಲೆಗಳನ್ನು ಅವರು ಕಲಿಯಬೇಕಾಗುವುದಿಲ್ಲ.
ಸಂಸ್ಕ್ರುತದ ಎರವಲುಗಳೊಂದಿಗೆ ಮಾತ್ರವಲ್ಲದೆ ಇಂಗ್ಲಿಶ್, ಪರ್ಶಿಯನ್ ಮೊದಲಾದ ಬೇರೆ ಎರವಲು ಪದಗಳೊಂದಿಗೆ, ಮತ್ತು ಕನ್ನಡದವೇ ಆದ ಪದಗಳೊಂದಿಗೂ ಈ ‘ಕರಣ’ ಎಂಬುದನ್ನು ಬಳಸಲಾಗುತ್ತದೆ; ಸಬಲೀಕರಣ, ಉದಾರೀಕರಣ, ಪ್ರಮಾಣೀಕರಣ ಎಂಬ ಪದಗಳ ಹಾಗೆ, ಡಿಜಿಟಲೀಕರಣ, ಅಯಾನೀಕರಣ, ಕಾಸಗೀಕರಣ, ದಾಕಲೀಕರಣ ಎಂಬಂತಹ ಪದಗಳನ್ನೂ ಉಂಟುಮಾಡಲಾಗಿದೆ.
ಕನ್ನಡದ ಹಸಿರು ಪದದಿಂದ ಹಸಿರೀಕರಣ, ಅಗಲ ಪದದಿಂದ ಅಗಲೀಕರಣ, ಮತ್ತು ಕಯ್ಗಾರಿಕೆ ಪದದಿಂದ ಕಯ್ಗಾರಿಕೀಕರಣ ಎಂಬಂತಹ ಪದಗಳನ್ನೂ ಉಂಟುಮಾಡಲಾಗಿದೆ. ಇಂತಹ ಹಲವು ಕಡೆಗಳಲ್ಲಿ ಸಬಲಿಸು, ಪ್ರಮಾಣಿಸು, ಡಿಜಿಟಲಿಸು, ಅಯಾನಿಸು, ದಾಕಲಿಸು, ಹಸಿರಿಸು, ಅಗಲಿಸು ಎಂಬಂತಹ ಪದಗಳನ್ನು ಮತ್ತು ಅವುಗಳ ಹೆಸರುರೂಪಗಳಾದ ಪ್ರಮಾಣಿಸುವಿಕೆ, ದಾಕಲಿಸುವಿಕೆ, ಅಯಾನಿಸುವಿಕೆ, ಹಸಿರಿಸುವಿಕೆ ಎಂಬಂತಹ ಪದಗಳನ್ನೂ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ.
‘ಕರಣ’ ಎಂಬುದನ್ನು ಬಳಸುವವರಲ್ಲಿ ಹಲವರಿಗೆ ಅದರೊಂದಿಗೆ ಬರುವ ಹೆಸರುಪದದಲ್ಲಿ ಎಂತಹ ಮಾರ್ಪಾಡುಗಳನ್ನೆಲ್ಲ ಮಾಡಬೇಕು ಎಂಬ ವಿಶಯದಲ್ಲೂ ಗೊಂದಲಗಳಿವೆ; ಕೆಲವರು ಆದುನಿಕೀಕರಣ, ಜಾಗತಿಕೀಕರಣ, ಯಾಂತ್ರಿಕೀಕರಣ ಎಂದು ಬರೆದರೆ, ಇನ್ನು ಕೆಲವರು ಆದುನೀಕರಣ, ಜಗತೀಕರಣ, ಯಾಂತ್ರೀಕರಣ ಎಂಬುದಾಗಿ ಬರೆಯುತ್ತಾರೆ. ಸಾಮಾಜೀಕರಣವೂ ಇದೆ, ಸಮಾಜೀಕರಣವೂ ಇದೆ; ಸಾದ್ರುಶೀಕರಣವೂ ಇದೆ, ತುರ್ತುಕರಣವೂ ಇದೆ. ಮೇಲಿನ ಪದಗಳಲ್ಲಿ ಬಳಕೆಯಾಗಿರುವ ಮಹಾಪ್ರಾಣಾಕ್ಶರಗಳನ್ನು ಈ ಅಂಕಣದಲ್ಲಿ ಕಯ್ಬಿಡಲಾಗಿದೆ; ಆದರೆ, ಅದರ ಬಳಕೆಯಲ್ಲೂ ಸಾಕಶ್ಟು ಗೊಂದಲಗಳಿವೆ.
‘ಕರಣ’ ಪದವನ್ನು ಬಳಸುವವರೂ ಆ ಪದಗಳಿಂದ ಎಸಕ(ಕ್ರಿಯಾ)ಪದಗಳನ್ನು ಉಂಟುಮಾಡಬೇಕಿದ್ದಲ್ಲಿ ಕನ್ನಡದ ‘ಇಸು’ ಒಟ್ಟನ್ನು ಬಳಸಲೇಬೇಕಾಗುತ್ತದೆ; ಸಬಲೀಕರಣ, ದಾಕಲೀಕರಣ, ಡಿಜಿಟಲೀಕರಣ ಎಂಬಂತಹ ಪದಗಳನ್ನು ಬಳಸುವವರು ಅವುಗಳಿಂದ ಎಸಕಪದವನ್ನು ಪಡೆಯಬೇಕಿದ್ದಲ್ಲಿ ಸಬಲೀಕರಿಸು, ದಾಕಲೀಕರಿಸು, ಡಿಜಿಟಲೀಕರಿಸು ಎಂಬುದಾಗಿ ಇಸು ಒಟ್ಟನ್ನು ಸೇರಿಸಿಯೇ ಹೇಳಬೇಕಾಗುತ್ತದೆ; ಇದಕ್ಕೆ ಬದಲು ಸಬಲಿಸು, ದಾಕಲಿಸು, ಡಿಜಿಟಲಿಸು ಎಂದಶ್ಟೇ ಹೇಳಿದರೆ ಸಾಕಾಗುವುದಿಲ್ಲವೇ? ಅವುಗಳ ನಡುವೆ ಕರಣವನ್ನು ಯಾಕೆ ತಂದುಹಾಕಬೇಕು? ಸ್ತಿರೀಕರಣಗೊಳ್ಳು ಎಂಬುದೂ ಇಂತಹದೇ ಇನ್ನೊಂದು ಅನವಶ್ಯಕವಾದ ಕರಣ ಪದವನ್ನು ಸೇರಿಸಿರುವ ಪದರೂಪ; ಸ್ತಿರಗೊಳ್ಳು ಎಂಬುದು ಹೆಚ್ಚು ಅಡಕವಾಗಿ ಅದೇ ಹುರುಳನ್ನು ಕೊಡಬಲ್ಲುದು.
ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡುವಲ್ಲೂ ಕನ್ನಡದ ಅರಿವಿಗರು ಈ ‘ಕರಣ’ ಪದವನ್ನು ಹಲವೆಡೆಗಳಲ್ಲಿ ಬಳಸಿದ್ದಾರೆ; ಕಾರ್ಬನೀಕರಣ, ನಯ್ಟ್ರೀಕರಣ, ಪಾಲಿಮರೀಕರಣ ಎಂಬಂತಹ ಈ ಪದಗಳನ್ನು ಬಳಸಿದಲ್ಲಿ, ಅವಕ್ಕೆ ಸಂಬಂದಿಸಿದಂತೆ ಕರಿಸು (ಅಯಾನೀಕರಿಸು), ಕ್ರುತ (ಅಯಾನೀಕ್ರುತ), ಕಾರಕ (ಅಯಾನೀಕಾರಕ), ಕಾರಿ (ಅಯಾನೀಕಾರಿ) ಎಂಬಂತಹ ಕರಣ ಪದಕ್ಕೆ ಸಂಬಂದಿಸಿದಂತಹ ಬೇರೆ ಕೆಲವು ಪದಗಳನ್ನೂ ಬಳಸಬೇಕಾಗುತ್ತದೆ, ಮತ್ತು ಅವು ಕನ್ನಡದ್ದಲ್ಲವಾದ ಕಾರಣ, ಅವನ್ನು ಬಳಸುವಲ್ಲಿ ಹಲವಾರು ತಪ್ಪುಗಳೂ ಕಾಣಿಸಿಕೊಳ್ಳುತ್ತವೆ; ಇದಕ್ಕೆ ಬದಲು ಇಸು ಎಂಬುದನ್ನಶ್ಟೇ ಬಳಸಿದಲ್ಲಿ ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಮತ್ತು ಎಲ್ಲಾ ಕನ್ನಡಿಗರಿಗೂ ತಿಳಿದಿರುವ ಇಸುವಿಕೆ (ಅಯಾನಿಸುವಿಕೆ), ಇಸಿದ (ಅಯಾನಿಸಿದ), ಇಸುವ (ಅಯಾನಿಸುವ) ಎಂಬಂತಹ ರೂಪಗಳನ್ನು ಬಳಸಲು ಬರುತ್ತದೆ.
ಇಂತಹ ಕಡೆಗಳಲ್ಲಿ ಅರಿವಿಗರು ಇನ್ನೂ ಒಂದು ತೊಡಕನ್ನು ಎದುರಿಸಬೇಕಾಗುತ್ತದೆ: ಇಂಗ್ಲಿಶ್ನ ಅಯ್ಸ್ ಎಂಬ ಒಟ್ಟು ಬಂದಿರುವಲ್ಲಿ ಕರಿಸು ಎಂಬುದನ್ನು ಬಳಸುವ (ಪೋಲರಯ್ಸ್ – ದ್ರುವೀಕರಿಸು, ಅನೊಡಯ್ಸ್ – ಅನೊಡೀಕರಿಸು) ಈ ಅರಿವಿಗರು ಇಂಗ್ಲಿಶ್ನ ಅಯ್ಸ್ ಎಂಬುದಕ್ಕಿರುವ ಮಾಡುವಿಕೆ ಮತ್ತು ಆಗುವಿಕೆ ಎಂಬ ಎರಡು ಹುರುಳುಗಳಲ್ಲಿ ಒಂದನ್ನು ಮಾತ್ರ ತಿಳಿಸಬಲ್ಲರು; ಇದಕ್ಕೆ ಬದಲು ಇಸು ಎಂಬುದನ್ನಶ್ಟೇ ಬಳಸಿದರೆ ಆ ಎರಡು ಹುರುಳುಗಳನ್ನೂ ತಿಳಿಸಬಲ್ಲರು. ಯಾಕೆಂದರೆ, ಕರಣ ಎಂಬುದಕ್ಕೆ ಆಗುವಿಕೆ ಎಂಬ ಹುರುಳು ಸಿಗಲಾರದು; ಆದರೆ, ಇಸು ಎಂಬುದನ್ನು ಬಳಸಿರುವ ಅನೋಡಿಸು, ಅಲ್ಯೂಮಿನಿಸು ಎಂಬುವಕ್ಕೆ ಆಗುವಿಕೆಯ ಹುರುಳೂ ಸಿಗಬಲ್ಲುದು.
ಅರಿಮೆಯ (ಪಾರಿಬಾಶಿಕ)ಪದಗಳನ್ನು ಉಂಟುಮಾಡುವಲ್ಲಿ ಆತ್ಮಕ ಎಂಬುದನ್ನು ಬಳಸುವುದೂ ಇಂತಹದೇ ಒಂದು ಬೇಕಿಲ್ಲದ ಚಾಳಿ. ನುಡಿಯರಿಮೆಯ ಒಂದು ಪದನೆರಕೆಯಲ್ಲಿ ಈ ರೀತಿ ಆತ್ಮಕ ಎಂಬುದನ್ನು ಬಳಸಿರುವ ಇನ್ನೂರಯ್ವತ್ತಕ್ಕಿಂತಲೂ ಹೆಚ್ಚು (ಎಂದರೆ, ಸುಮಾರು ನೂರಕ್ಕೆ ಹದಿಮೂರರಶ್ಟು) ಪದಗಳಿವೆ! ಇವುಗಳಲ್ಲಿ ಹೆಚ್ಚಿನವುಗಳಲ್ಲಿಯೂ ಆತ್ಮಕ ಎಂಬುದನ್ನು ಬಳಸಬೇಕಾಗಿಯೇ ಇಲ್ಲ (ವ್ಯಾಕರಣಾತ್ಮಕ ನಿಯಮ – ವ್ಯಾಕರಣ ನಿಯಮ, ದ್ವನ್ಯಾತ್ಮಕ ರಚನೆ – ದ್ವನಿರಚನೆ, ಪ್ರೇರಣಾತ್ಮಕ ವಾಕ್ಯ – ಪ್ರೇರಣ ವಾಕ್ಯ). ಅರಿಮೆಯ ಪದಗಳು ಸಿಕ್ಕಲಾಗಿದ್ದಶ್ಟೂ ಒಳ್ಳೆಯದು ಎಂಬ ಅನಿಸಿಕೆ ಈ ಪದಗಳನ್ನು ಉಂಟುಮಾಡಿರುವ ಅರಿವಿಗರಲ್ಲಿರುವ ಹಾಗೆ ಕಾಣಿಸುತ್ತದೆ.
ಇದಲ್ಲದೆ, ತಮ್ಮ ಬರಹಗಳಲ್ಲಿ ಎಲ್ಲರಿಗೂ ಗೊತ್ತಾಗುವ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು ಸಂಸ್ಕ್ರುತದ ಎರವಲುಗಳನ್ನು ತಂದು ತುಂಬಿಸಿದರೆ ಅವುಗಳ ಮಟ್ಟ ಮೇಲೇರುತ್ತದೆಯೆಂದು ಕೆಲವರು ತಿಳಿದ ಹಾಗಿದೆ. ಆದರೆ, ಹಲವು ಮಂದಿ ಹೀಗೆ ಮಾಡುವಲ್ಲಿ ಹಲವು ಬಗೆಯ ತಪ್ಪುಗಳನ್ನೂ ಮಾಡಿ ನಗುವಿಗೆ ಎಡೆಮಾಡಿಕೊಡುತ್ತಾರೆ. ‘ಕಾರಣ’ ಎಂಬ ಪದದ ಬದಲು ಹಲವು ಮಂದಿ ‘ಸಕಾರಣ’ ಎಂಬ ಪದವನ್ನು ಬಳಸುತ್ತಾರೆ; ಆದರೆ, ಇವೆರಡರ ನಡುವೆ ಹುರುಳಿನಲ್ಲಿ ವ್ಯತ್ಯಾಸವಿದೆ ಎಂಬುದನ್ನು ಅವರು ಗಮನಿಸುವುದಿಲ್ಲ. ಸಕಾರಣ ಎಂಬುದಕ್ಕೆ ‘ಕಾರಣವಿರುವ’ ಎಂಬ ಹುರುಳಿದೆ. ಇದನ್ನು ಗಮನಿಸದ ಕೆಲವರ ಬರಹಗಳಲ್ಲಿ ಸಕಾರಣವಿಲ್ಲದೆ, ಸಕಾರಣ ನೀಡದೆ, ಸಕಾರಣಗಳಿರಲಿಲ್ಲ ಎಂಬಂತಹ ಬಳಕೆಗಳನ್ನು ಕಾಣಬಹುದು! ಆದರೆ, ಇಂತಹದೇ ಬಳಕೆ ಮುಂದುವರಿದರೆ, ಸಕಾರಣ ಎಂಬುದಕ್ಕೆ ಕನ್ನಡದಲ್ಲಿ ಬರಿಯ ಕಾರಣ ಎಂಬುದರ ಹುರುಳೇ ಇರುವಂತಾದೀತು.
ಇಹಲೋಕ ಮತ್ತು ಪರಲೋಕ ಎಂಬ ಬೇರೆ ಎರಡು ಸಂಸ್ಕ್ರುತ ಎರವಲುಗಳ ಬಳಕೆಯೂ ಇಂತಹದೇ. ಅವುಗಳ ನಿಜವಾದ ಹುರುಳು ಏನೆಂದು ತಿಳಿಯದಿದ್ದರೂ ಬಳಸುವ ಆಸೆ. ಆತನನ್ನು ಕಚ್ಚಿದ ಹಾವೇ ಸತ್ತುಹೋಯಿತು ಎಂಬುದನ್ನು ಹೇಳಬೇಕಿರುವಲ್ಲಿ ಕಚ್ಚಿದ ಹಾವೇ ಇಹಲೋಕಕ್ಕೆ ಹೋಯಿತು ಎಂಬುದಾಗಿ ಬರೆದಿರುವುದನ್ನು ಕಾಣಬಹುದು! ಇಹಲೋಕ ಮತ್ತು ಪರಲೋಕಗಳೆಂಬ ಈ ಪದಗಳ ಬದಲು ಈ ಲೋಕ ಮತ್ತು ಬೇರೆ ಲೋಕ ಎಂಬ ಎಲ್ಲರಿಗೂ ಗೊತ್ತಾಗುವ ಪದಕಂತೆಗಳನ್ನು ಬಳಸಿದ್ದರೆ, ಇಂತಹ ತಪ್ಪು ಮಾಡಿ ನಗೆಪಾಟಲಾಗುವ ಹಾಗಾಗುತ್ತಿರಲಿಲ್ಲ.
ದಿನಪತ್ರಿಕೆಗಳಲ್ಲಿ ತಲೆಬರಹವನ್ನು ಬರೆಯುವವರೂ ಇಂತಹದೇ ಕೀಳರಿಮೆಯಿಂದ ಬಳಲುತ್ತಿರುವ ಹಾಗೆ ಕಾಣಿಸುತ್ತದೆ. ಒಂದು ಬರಹದಲ್ಲಿ ಉದ್ದಕ್ಕೂ ನಾಯಿ, ಬೆಕ್ಕು, ಕೋಳಿ, ಮೀನು ಎಂಬಂತಹ ಕನ್ನಡದವೇ ಆದ ಪದಗಳನ್ನು ಬರುತ್ತವೆ; ಆದರೆ, ತಲೆಬರಹದಲ್ಲಿ ಮಾತ್ರ ಶ್ವಾನ, ಮಾರ್ಜಾಲ, ಕುಕ್ಕುಟ, ಮತ್ಸ್ಯ ಎಂಬಂತಹ ಸಂಸ್ಕ್ರುತ ಎರವಲುಗಳು ಬರುತ್ತವೆ. ತಲೆಬರಹದಲ್ಲಿ ಎಲ್ಲರಿಗೂ ಗೊತ್ತಿರುವ ನಾಯಿ, ಬೆಕ್ಕು, ಮೀನು ಮೊದಲಾದ ಕನ್ನಡ ಪದಗಳು ಬಂದರೆ ದಿನಪತ್ರಿಕೆಯ ತಕ್ಕಮೆ ಇಲ್ಲವಾಗಬಹುದೆಂಬ ಹೆದರಿಕೆ ಅವರಿಗಿರುವಂತೆ ತೋರುತ್ತದೆ. ತನ್ನ ಮುದಿ ತಂದೆಯನ್ನು ಅಪ್ಪ ಎನ್ನಲು ಹಿಂಜರಿಯುವ ದೊಡ್ಡ ಅದಿಕಾರಿಯ ಕೀಳು ಸಂಸ್ಕ್ರುತಿಯಿದು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)