Posts Tagged ‘ಎರವಲು ಪದಗಳು’

ಓದುವ ಹಾಗೆಯೇ ಬರೆಯುವುದು

ನುಡಿಯರಿಮೆಯ ಇಣುಕುನೋಟ – 10

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ ಓದುವ ಹಾಗೆಯೇ ಬರೆಯಬೇಕು ಎಂದು ಹೇಳಿದರೆ, ಎಲ್ಲರೂ ಅವರವರು ಹೇಗೆ ಓದುತ್ತಾರೋ ಹಾಗೆ ಬರೆಯಬಹುದು, ಇಲ್ಲವೇ ಎಲ್ಲರೂ ತಮಗೆ ಕುಶಿಬಂದ ಹಾಗೆ ಬರೆಯಬಹುದು ಎಂದು ಹೇಳಿದ ಹಾಗಾಗುವುದಿಲ್ಲ; ಅಂತಹ ಪ್ರತಿಕ್ರಿಯೆ ಬಾರದಂತೆ ನಾನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆಯಬೇಕು ಎಂಬುದಾಗಿ ಬರೆದಿದ್ದೆ. ಈ ಪದಗಳನ್ನು ಇವತ್ತು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಿದ್ದಾರೆ ಎಂಬುದನ್ನು ತಿಳಿವಿಗರು ಕಂಡುಹಿಡಿಯಬೇಕು, ಮತ್ತು ಅದಕ್ಕೆ ಅನುಸಾರವಾಗಿ, ಅವನ್ನು ಹೇಗೆ ಬರೆಯಬೇಕು ಎಂಬುದನ್ನು ತೀರ‍್ಮಾನಿಸಬೇಕು.

ಬರಹದ ಮೂಲಕ ನಾವು ನಮ್ಮ ಅನಿಸಿಕೆಗಳನ್ನು ಇನ್ನೊಬ್ಬರಿಗೆ ತಿಳಿಸುತ್ತೇವೆ, ಮತ್ತು ಬರಹ ರೂಪದಲ್ಲಿರುವ ಇನ್ನೊಬ್ಬರ ಅನಿಸಿಕೆಗಳನ್ನು ಓದಿನ ಮೂಲಕ ತಿಳಿದುಕೊಳ್ಳುತ್ತೇವೆ. ಈ ಎರಡು ಕೆಲಸಗಳೂ ಸರಿಯಾಗಿ ನಡೆಯಬೇಕಿದ್ದಲ್ಲಿ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವ ಮತ್ತು ಓದುವ ಕೆಲಸಗಳನ್ನು ನಡೆಸಬೇಕಾಗುತ್ತದೆ. ಈ ಕೆಲಸಗಳನ್ನು ಇವತ್ತು ಶಾಲೆಗಳಲ್ಲಿ ಕಲಿಸಲಾಗುತ್ತದೆಯಾದ ಕಾರಣ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವಂತೆ ಮತ್ತು ಓದುವಂತೆ ಮಾಡುವುದು ತೊಡಕಿನ ಕೆಲಸವೇನಲ್ಲ.

ಶಕಾರವನ್ನು ಹೆಚ್ಚಿನ ಕನ್ನಡಿಗರೂ ಶಕಾರವಾಗಿಯೇ ಓದುತ್ತಾರಲ್ಲದೆ ಸಕಾರವಾಗಿ ಬದಲಾಯಿಸಿ ಓದುವುದಿಲ್ಲ. ಆದರೆ, ಷಕಾರವನ್ನು ಹೆಚ್ಚಿನವರೂ ಶಕಾರವಾಗಿ ಬದಲಾಯಿಸಿ ಓದುತ್ತಾರೆ. ಹಾಗಾಗಿ, ಸಂಸ್ಕ್ರುತ ಎರವಲುಗಳಲ್ಲಿ ಬರುವ ಷಕಾರವನ್ನು ಶಕಾರವಾಗಿ ಬದಲಾಯಿಸಿ ಬರೆಯಬೇಕು, ಮತ್ತು ಶಕಾರವನ್ನು ಹಾಗೆಯೇ ಉಳಿಸಬೇಕು ಎಂಬ ತೀರ‍್ಮಾನಕ್ಕೆ ಬರಬೇಕಾಗುತ್ತದೆ.

ಇದೇ ರೀತಿಯಲ್ಲಿ, ಋಕಾರ, ಮಹಾಪ್ರಾಣ, ವಿಸರ‍್ಗ ಮೊದಲಾದ ಬೇರೆ ಕೆಲವು ಬರಿಗೆಗಳ ವಿಶಯದಲ್ಲೂ ಹೆಚ್ಚಿನ ಕನ್ನಡಿಗರ ಓದು ಹೇಗಿದೆಯೆಂಬುದನ್ನು ಕಂಡುಹಿಡಿದು, ಅದಕ್ಕನುಸಾರವಾಗಿ ಬರವಣಿಗೆಯನ್ನು ಬದಲಾಯಿಸಬೇಕು. ಹೀಗೆ ಮಾಡಿದಲ್ಲಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗಬಲ್ಲುದು, ಮತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗುವಂತೆ ಮಾಡುವ ಕೆಲಸವೂ ಸುಲಬವಾಗಬಲ್ಲುದು.

ಹಳೆಗನ್ನಡದ ಱಕಾರ ಮತ್ತು ೞಕಾರಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೆ ಎಂಬುದನ್ನು ಗಮನಿಸಿ, ಹೊಸಗನ್ನಡವನ್ನು ಬರಹದಲ್ಲಿ ಬಳಸಲು ತೊಡಗಿದ ಕಾಲದಲ್ಲಿ ಅವನ್ನು ರಕಾರ ಮತ್ತು ಳಕಾರಗಳಾಗಿ ಬದಲಾಯಿಸಿ ಬರೆಯಲು ತೊಡಗಲಾಯಿತು. ಈ ಮಾರ‍್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು. ಸಂಸ್ಕ್ರುತ ಎರವಲುಗಳಲ್ಲಿ ಬರುವ ಬರಿಗೆಗಳನ್ನು ಓದುವ ಹಾಗೆ ಬರೆಯುವಂತೆ ಮಾರ‍್ಪಡಿಸುವುದೂ ಇಂತಹದೇ ಒಂದು ಕೆಲಸ ಎಂಬುದನ್ನು ಇಲ್ಲಿ ಗಮನಿಸಬೇಕು.

ಇಶ್ಟರ ವರೆಗೆ ಈ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯುತ್ತಿದ್ದುದಕ್ಕೆ ಎರಡು ಮುಕ್ಯ ಕಾರಣಗಳಿದ್ದುವು: ಹಿಂದಿನ ಕಾಲದಲ್ಲಿ ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದವರೆಲ್ಲ ಅದನ್ನು ಸಂಸ್ಕ್ರುತದಲ್ಲಿ ಬರೆದಿರಿಸುತ್ತಿದ್ದರು; ಹಾಗಾಗಿ, ಯಾವುದೇ ಒಂದು ವಿಶಯದಲ್ಲಿ ಹೊಸ ತಿಳಿವನ್ನು ಪಡೆಯಬೇಕಿದ್ದರೂ ಸಂಸ್ಕ್ರುತದ ಮೊರೆಹೊಗಬೇಕಾಗಿತ್ತು.

ಇದರಿಂದಾಗಿ ಸಂಸ್ಕ್ರುತ ಬರಹಕ್ಕೆ ಒಂದು ಬಗೆಯ ಮೇಲ್ಮೆ ಬಂದಿತ್ತು; ಅದರ ಪದಗಳನ್ನು ಕನ್ನಡದಲ್ಲಿಯೂ ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿಸಿಕೊಳ್ಳುವುದರಿಂದ, ಮುಂದೆ ಸಂಸ್ಕ್ರುತ ಬರಹಗಳನ್ನು ಓದಲು ಕಲಿಯುವ ಕೆಲಸ ಕನ್ನಡಿಗರಿಗೆ ಸುಲಬವಾಗಬಹುದಾಗಿತ್ತು. ಕನ್ನಡ ಓದಿನ ಕಲಿಕೆ ಮುಂದೆ ನಡೆಸಲೇಬೇಕಾಗಿದ್ದ ಸಂಸ್ಕ್ರುತ ಓದಿಗೆ ಒಂದು ಮೆಟ್ಟಲಾಗಬಹುದಾಗಿತ್ತು. ಇದು ಒಂದು ಕಾರಣ.

ಆದರೆ, ಇವತ್ತು ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದಿರುವವರು ಯಾರೂ ಅದನ್ನು ಸಂಸ್ಕ್ರುತದಲ್ಲಿ ಬರೆಯಲು ಹೋಗುವುದಿಲ್ಲ; ಹಾಗಾಗಿ, ಹಿಂದಿನ ಕಾಲದಲ್ಲಿ ಅದಕ್ಕಿದ್ದ ಮೇಲ್ಮೆ ಇಂದು ಉಳಿದಿಲ್ಲ, ಮತ್ತು ಅದರ ಪದಗಳನ್ನು ಅದರ ಬರಹಗಳಲ್ಲಿರುವ ಹಾಗೆ ಬರೆಯಲು ಕಲಿಯುವ ಅವಶ್ಯಕತೆಯೂ ಇವತ್ತು ಕನ್ನಡಿಗರಿಗಿಲ್ಲ.

ಹಿಂದಿನ ಕಾಲದಲ್ಲಿ ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸವನ್ನು ಮುಕ್ಯವಾಗಿ ಉತ್ತರದಿಂದ ವಲಸೆಬಂದ ಮೇಲ್ವರ‍್ಗದ ಜನರು ನಡೆಸುತ್ತಿದ್ದರು; ಆರ‍್ಯರಾಗಿದ್ದ ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಆದರ ಮತ್ತು ಪೂಜ್ಯಬಾವಗಳಿದ್ದುವು. ಹಾಗಾಗಿ, ಅದರ ಪದಗಳನ್ನು ಮಾರ‍್ಪಡಿಸದೆ ಉಳಿಸುವುದು ಅವರ ಮಟ್ಟಿಗೆ ಅವಶ್ಯವಾಗಿತ್ತು. ಇದು ಇನ್ನೊಂದು ಕಾರಣ.

ಆದರೆ, ಇವತ್ತು ಎಲ್ಲಾ ವರ‍್ಗಗಳಿಗೆ ಸೇರಿದ ಕನ್ನಡಿಗರೂ ಕನ್ನಡ ಬರಹವನ್ನು ಬಳಸಲು ಕಲಿಯಬೇಕಾಗಿದೆ. ಇವರಲ್ಲಿ ಹೆಚ್ಚಿನವರೂ ದ್ರಾವಿಡ ಮೂಲದವರಾಗಿದ್ದು, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಮಾರ‍್ಪಡಿಸದೆ ಉಳಿಸಿಕೊಳ್ಳುವುದು ಅಂತಹ ಒಂದು ಪೂಜ್ಯವಾದ ವಿಶಯವೇ ಅಲ್ಲ; ಅದರಿಂದ ಅವರಿಗೆ ಬೇರೆ ಪ್ರಯೋಜನಗಳೂ ದೊರಕುವುದಿಲ್ಲ. ಹಾಗಾಗಿ, ಸಂಸ್ಕ್ರುತ ಎರವಲುಗಳನ್ನು ಕನ್ನಡದ ಸೊಗಡನ್ನು ಕೆಡಿಸದಂತೆ ಮಾರ‍್ಪಡಿಸುವುದಕ್ಕೆ ಹೆಚ್ಚಿನ ಕನ್ನಡಿಗರಿಂದಲೂ ವಿರೋದ ಬರಲಾರದು.

ಬೇರೆ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ಯಾವ ನುಡಿಯಲ್ಲೂ ಆ ನುಡಿಯಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ; ಇದಕ್ಕೆ ಕೆಲವೇ ಕೆಲವು ಹೊರಪಡಿಕೆಗಳು ಮಾತ್ರ ಇವೆ. ಎತ್ತುಗೆಗಾಗಿ, ಸಂಸ್ಕ್ರುತ ಇಲ್ಲವೇ ಪ್ರಾಕ್ರುತ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಬ್ರಾಹ್ಮೀ ಲಿಪಿಯನ್ನು ಕನ್ನಡದಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಸಂಸ್ಕ್ರುತದ ಎರವಲುಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಸಂಸ್ಕ್ರುತ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಇದೇ ರೀತಿಯಲ್ಲಿ, ಅರೇಬಿಕ್ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಲಿಪಿಯನ್ನು ಟರ‍್ಕಿಶ್‌ನಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಅರೇಬಿಕ್ ಎರವಲುಗಳನ್ನು ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಅರೇಬಿಕ್ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಆದರೆ, ಎಲ್ಲಾ ನುಡಿಗಳೂ ಈ ರೀತಿ ಬೇರೊಂದು ನುಡಿಯ ಲಿಪಿಯನ್ನು ತಮ್ಮ ನುಡಿಗೆ ಅಳವಡಿಸಿಕೊಳ್ಳುವಾಗ ಆ ನುಡಿಯ ಪದಗಳನ್ನು ಅದರಲ್ಲಿರುವಂತೆ ಬರೆಯಲು ಬೇಕಾಗುವ ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಿಲ್ಲ; ಎತ್ತುಗೆಗಾಗಿ, ನಾಗರಿ ಲಿಪಿಯನ್ನು ಪಂಜಾಬಿ ನುಡಿಗೆ ಅಳವಡಿಸುವಾಗ, ಷಕಾರ, ಋಕಾರ, ಹಲವು ಬಗೆಯ ಒತ್ತುಬರಿಗೆಗಳು ಮೊದಲಾದುವನ್ನು ಉಳಿಸಿಕೊಂಡಿಲ್ಲ; ಈ ಕಾರಣಕ್ಕಾಗಿ, ಸಂಸ್ಕ್ರುತ ಎರವಲು ಪದಗಳನ್ನು ಇವತ್ತು ಪಂಜಾಬಿ ಬರಹದಲ್ಲಿ ಓದುವ ಹಾಗೆ ಬರೆಯಲಾಗುತ್ತದೆಯಲ್ಲದೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯುವುದಿಲ್ಲ.

ಮಲಯಾಳ ಬರಹದಲ್ಲೂ ಮೊದಲಿಗೆ ಮಹಾಪ್ರಾಣಾಕ್ಶರಗಳು, ಗಜಡದಬ ಮೊದಲಾದ ಆ ನುಡಿಗೆ ಬೇಡದಿರುವ ಹಲವು ಬರಿಗೆಗಳು ಇರಲಿಲ್ಲ; ಸಂಸ್ಕ್ರುತ ಬರಹಗಳನ್ನು ಬರೆಯಲು, ಮತ್ತು ಕೆಲವೊಮ್ಮೆ ಸಂಸ್ಕ್ರುತ ಪದಗಳನ್ನು ಮಲಯಾಳ ಬರಹಗಳಲ್ಲಿ ಬರೆಯಲು ಆ ಸಮಯದಲ್ಲಿ ಗ್ರಂತಲಿಪಿಯೆಂಬ ಬೇರೆಯೇ ಒಂದು ಲಿಪಿಯನ್ನು ಬಳಸಲಾಗುತ್ತಿತ್ತು.

ಆದರೆ, ಹದಿನೇಳನೇ ಶತಮಾನಕ್ಕಾಗುವಾಗ, ಮಲಯಾಳ ಸಾಹಿತ್ಯದಲ್ಲಿ ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾಯಿತು; ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಒಲವಿದ್ದುದರಿಂದ, ಮತ್ತು ಇವರ ಬರಹಗಳಲ್ಲಿ ತುಂಬಾ ಸಂಸ್ಕ್ರುತ ಪದಗಳು ಬಳಕೆಯಾಗುತ್ತಿದ್ದುದರಿಂದ, ಇವರು ತಮ್ಮ ಮಲಯಾಳ ಬರಹಗಳಲ್ಲೂ ಗ್ರಂತ ಲಿಪಿಯನ್ನೇ ಬಳಸಲು ತೊಡಗಿದರು. ಇದರಿಂದಾಗಿ, ಇವತ್ತಿನ ಮಲಯಾಳ ಬರಹ ಕನ್ನಡ ಬರಹದ ಹಾಗೆಯೇ ಅನವಶ್ಯಕವಾಗಿ ತೊಡಕಿನದಾಗಿದೆ.

ಎಲ್ಲಾ ಜನರೂ ಬರಹಬಲ್ಲವರಾಗಬೇಕಿರುವ ಇವತ್ತಿನ ದಿನಗಳಲ್ಲಿ ಈ ರೀತಿ ಒಂದು ನುಡಿಯ ಬರವಣಿಗೆಗೆ ಅವಶ್ಯವಿಲ್ಲದ ಬರಿಗೆಗಳನ್ನು ಎರವಲು ಪದಗಳ ಬರವಣಿಗೆಗಾಗಿ ಉಳಿಸಿಕೊಳ್ಳುವುದು ಜಾಣತನವಲ್ಲ; ಇದನ್ನು ಮನಗಂಡ ತಿಳಿವಿಗರು ಟರ‍್ಕಿ, ಇಂಡೊನೇಶಿಯಾ, ಮಲಯೇಶಿಯಾ ಮೊದಲಾದ ನಾಡುಗಳಲ್ಲಿ ಅರೇಬಿಕ್ ಮೂಲದ ಲಿಪಿಯನ್ನೇ ಬಿಟ್ಟುಕೊಟ್ಟು ರೋಮನ್ ಮೂಲದ ಲಿಪಿಯನ್ನು ತಮ್ಮ ಬರಹಕ್ಕೆ ಅಳವಡಿಸಿಕೊಂಡಿದ್ದಾರೆ.

ಕೊರಿಯಾದಂತಹ ಬೇರೆ ಕೆಲವು ನಾಡುಗಳಲ್ಲಿ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯಲು ತೊಡಗುವ ಮೂಲಕ ಈ ತೊಡಕನ್ನು ನಿವಾರಿಸಿಕೊಳ್ಳಲಾಗಿದೆ. ಕನ್ನಡದಲ್ಲಿಯೂ ಇಂತಹದೇ ಮಾರ‍್ಪಾಡನ್ನು ನಾವು ಇವತ್ತು ನಡೆಸಬೇಕಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದಗಳನ್ನು ಓದುವ ಹಾಗೆಯೇ ಬರೆಯಬೇಕು

ನುಡಿಯರಿಮೆಯ ಇಣುಕುನೋಟ – 3

ಕನ್ನಡದಲ್ಲಿ ಕನ್ನಡದವೇ ಆದ ಪದಗಳನ್ನು ಓದುವ ಹಾಗೆಯೇ ಬರೆಯುತ್ತೇವೆ; ಆದರೆ, ಸಂಸ್ಕ್ರುತದಿಂದ ಎರವಲು ಪಡೆದ ಪದಗಳನ್ನು ಮಾತ್ರ ಓದುವ ಹಾಗೆ ಬರೆಯದೆ, ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುತ್ತೇವೆ: ವಿಶೇಶ ಎಂಬುದಾಗಿ ಓದಿದರೂ ವಿಶೇಷ ಎಂಬುದಾಗಿ ಬರೆಯುತ್ತೇವೆ, ಮತ್ತು ಅದಿಕಾರಿ ಎಂಬುದಾಗಿ ಓದಿದರೂ ಅಧಿಕಾರಿ ಎಂಬುದಾಗಿ ಬರೆಯುತ್ತೇವೆ.

ಸಂಸ್ಕ್ರುತವನ್ನು ಹೊರತುಪಡಿಸಿ ಬೇರೆ ನುಡಿಗಳಿಂದ ಎರವಲು ಪಡೆದ ಪದಗಳನ್ನೆಲ್ಲ ಓದುವ ಹಾಗೆ ಬರೆಯುತ್ತೇವಲ್ಲದೆ, ಆ ನುಡಿಗಳಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ. ಇಂಗ್ಲಿಶ್‌ನ ವಯ್ಪರ್ ಮತ್ತು ವಯ್ರಸ್ ಪದಗಳ ಮೊದಲ ಬರೆಗೆಗಳು ಇಂಗ್ಲಿಶ್‌ನಲ್ಲಿ ಬೇರಾಗಿವೆ, ಆದರೆ ಕನ್ನಡದಲ್ಲಿ ವ ಎಂಬ ಒಂದೇ ಬರಿಗೆಯನ್ನು ಬಳಸಲಾಗುತ್ತದೆ. ಅವೆರಡನ್ನೂ ಒಂದೇ ರೀತಿ ಓದುತ್ತಿರುವುದೇ ಇದಕ್ಕೆ ಕಾರಣ.

ಒಂದು ಬರಹದಲ್ಲಿ ಪದಗಳನ್ನು ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಬರೆಯಬೇಕಾಗಿದೆಯಾದರೆ, ಅದು ಅಂತಹ ಬರಹವನ್ನು ಕಲಿಯುವವರಿಗೆ ಮತ್ತು ಬಳಸುವವರಿಗೆ ಹಲವು ಬಗೆಯ ತೊಡಕುಗಳನ್ನು ತಂದೊಡ್ಡುತ್ತದೆ; ಕನ್ನಡ ಬರಹದ ಈ ಸಂಪ್ರದಾಯ ಮುಕ್ಯವಾಗಿ ಕೆಳಗೆ ಕೊಟ್ಟಿರುವಂತಹ ತೊಡಕುಗಳನ್ನು ಕೊಡುತ್ತಿದೆ:

(೧) ಓದಲು ಮತ್ತು ಬರೆಯಲು ಕಲಿಯಹೊರಡುವ ಮಕ್ಕಳು ಅನವಶ್ಯಕವಾಗಿ ಹದಿನೇಳು ಹೆಚ್ಚಿನ ಬರಿಗೆ(ಅಕ್ಶರ)ಗಳನ್ನು ಕಲಿಯಬೇಕಾಗುತ್ತದೆ.

(೨) ಸರಿಯಾಗಿ ಮತ್ತು ಸಲೀಸಾಗಿ ಓದಲು ಕಲಿಯಬೇಕಿದ್ದಲ್ಲಿ, ಪದಗಳನ್ನು ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ (ಎತ್ತುಗೆಗೆ, ಮನೆ ಎಂಬುದನ್ನು ಮ್, ಅ, ನ್ ಮತ್ತು ಎ ಎಂಬ ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ) ಎಂಬುದನ್ನು ಗಮನಿಸಬೇಕು, ಮತ್ತು ಈ ಉಲಿಗಳನ್ನು ಸೂಚಿಸುವುದಕ್ಕಾಗಿ ಬರಹದಲ್ಲಿ ಬರಿಗೆಗಳನ್ನು ಬಳಸಲಾಗುತ್ತದೆ ಎಂಬುದನ್ನೂ ಗಮನಿಸಬೇಕು. ಇವೆರಡನ್ನು ಗಮನಿಸಿದವರು ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗಲೂ ಅವನ್ನು ಸುಲಬವಾಗಿ ಓದಬಲ್ಲವರಾಗುತ್ತಾರೆ.

ಪದಗಳನ್ನು ಓದುವ ಹಾಗೆಯೇ ಬರೆದಿದೆಯಾದರೆ ಮಾತ್ರ, ಈ ರೀತಿ ಓದುವಾಗ ಬಳಸುವ ಉಲಿಗೂ ಬರಹದಲ್ಲಿ ಕಾಣಿಸುವ ಬರಿಗೆಗಳಿಗೂ ನಡುವೆ ಸಂಬಂದವಿದೆ ಎಂಬುದು ಓದಲು ಕಲಿಯುವವರ ಗಮನಕ್ಕೆ ಸುಲಬವಾಗಿ ಬರುತ್ತದೆ.

ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಪದಗಳನ್ನು ಬರೆದಿದೆಯಾದರೆ, ಅವುಗಳಲ್ಲಿ ಬರುವ ಬರಿಗೆಗಳಿಗೂ ಉಲಿಗಳಿಗೂ ನಡುವೆ ಇಂತಹದೊಂದು ಸಂಬಂದವಿದೆಯೆಂಬುದು ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ, ಮತ್ತು ಇದರಿಂದಾಗಿ ಎಶ್ಟು ಕಲಿತರೂ ಅವರಿಗೆ ಸಲೀಸಾಗಿ ಓದಲು ಬರುವುದೇ ಇಲ್ಲ. ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗ ಅವನ್ನು ಹೇಗೆ ಓದಬೇಕೆಂಬುದು ಅವರಿಗೆ ಗೊತ್ತಾಗುವುದೂ ಇಲ್ಲ.

(೩) ಓದುವ ಹಾಗೆ ಬರೆಯುವ ಪದಗಳನ್ನು ಬರಹಗಳಲ್ಲಿ ಬಳಸುವುದು ಸುಲಬ; ಬೇರೆ ಬಗೆಯಲ್ಲಿ ಬರೆಯುವ ಒಂದೊಂದು ಪದವನ್ನೂ ಅದನ್ನು ಬರೆಯುವುದು ಹೇಗೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಮನೆ ಎಂಬ ಪದವನ್ನು ಓದುವ ಹಾಗೆಯೇ ಬರೆಯುವ ಕಾರಣ, ಅದನ್ನು ಹೇಗೆ ಬರೆಯುವುದೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿಲ್ಲ.
ಆದರೆ, ವಿಶೇಷ ಎಂಬ ಪದವನ್ನು ಬರೆಯುವಾಗ ಎರಡನೆಯ ಮುಚ್ಚುಲಿಯನ್ನು ಶ್ ಎಂಬುದಾಗಿ, ಮತ್ತು ಮೂರನೆಯ ಮುಚ್ಚುಲಿಯನ್ನು ಷ್ ಎಂಬುದಾಗಿ ಬರೆಯಬೇಕೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಯಾಕೆಂದರೆ, ಅವೆರಡನ್ನೂ ಒಂದೇ ರೀತಿಯಲ್ಲಿ ಓದಲಾಗುತ್ತದೆ.ಇದನ್ನು ನೆನಪಿನಲ್ಲಿಟ್ಟುಕೊಳ್ಳಲಾರದವರು ಬರವಣಿಗೆಯಲ್ಲಿ ತಪ್ಪು ಮಾಡುತ್ತಾರೆ.

ಇವತ್ತು ದಿನಪತ್ರಿಕೆಗಳಲ್ಲಿ, ಕತೆ-ಕಾದಂಬರಿಗಳಲ್ಲಿ, ಮತ್ತು ಬೇರೆ ಬಗೆಯ ಬರಹಗಳಲ್ಲಿ ಅತಿ ಹೆಚ್ಚು ತಪ್ಪುಗಳು ಕಾಣಿಸುವುದು ಓದುವ ಹಾಗೆ ಬರೆಯದಿರುವ ಮಹಾಪ್ರಾಣಾಕ್ಶರ, ಷಕಾರ, ಋಕಾರ ಮೊದಲಾದ ಬರಿಗೆಗಳಿರುವ ಸಂಸ್ಕ್ರುತ ಪದಗಳ ಬಳಕೆಯಲ್ಲಿ ಎಂಬುದನ್ನು ಗಮನಿಸಬಹುದು.

(೪) ಸಾಮಾನ್ಯವಾಗಿ ಜನರು ಪದಕೋಶಗಳನ್ನು ನೋಡಲು ಹೋಗುವುದು ಹೊಸದಾಗಿ ಅವರ ಓದಿನಲ್ಲಿ ಕಾಣಿಸಿಕೊಳ್ಳುವ ಪದಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಾಗಿ; ಆದರೆ, ಓದುವ ಹಾಗೆ ಬರೆಯದಿರುವ ವಿಶೇಷ, ಅಧಿಕಾರಿ ಮೊದಲಾದ ಪದಗಳನ್ನು ಅವುಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಿಂತಲೂ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯುವುದಕ್ಕಾಗಿ ಪದಕೋಶಗಳನ್ನು ನೋಡಬೇಕಾಗುತ್ತದೆ. ಓದುವ ಹಾಗೆಯೇ ಬರೆಯುವ ಯಾವ ಪದವನ್ನೂ ಈ ರೀತಿ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯಲು ಪದಕೋಶವನ್ನು ನೋಡಬೇಕಾಗುವುದಿಲ್ಲ.

(೫) ಕೆಳವರ‍್ಗದ ಮಕ್ಕಳಲ್ಲಿ ಇಂತಹ ಪದಗಳ ಕಲಿಕೆ ಕೀಳರಿಮೆಯನ್ನು ಉಂಟುಮಾಡುತ್ತದೆ; ಅವು ಕೊಡುವ ತೊಂದರೆಯಿಂದಾಗಿ ಕೆಲವರು ಬರಹದ ಕಲಿಕೆಯನ್ನು ನಡುವಿನಲ್ಲೇ ನಿಲ್ಲಿಸಿಬಿಡುತ್ತಾರೆ. ಓದಲು ಕಲಿತವರೂ ಅದನ್ನು ತುಂಬಾ ಅಪರೂಪವಾಗಿ ಮಾತ್ರ ಬಳಸುತ್ತಾರೆ. ಯಾಕೆಂದರೆ, ಅವರಿಗೆ ಸಲೀಸಾಗಿ ಓದುವುದು ಹೇಗೆ ಎಂಬುದು ತಿಳಿದಿರುವುದಿಲ್ಲ.
ಸಮಾಜಗಳಲ್ಲಿ ಹಲವಾರು ಬಗೆಯ ಸಂಪ್ರದಾಯಗಳು ಬೇರೆ ಬೇರೆ ಕಾರಣಗಳಿಗಾಗಿ ಬಳಕೆಗೆ ಬರುತ್ತವೆ, ಮತ್ತು ಅವುಗಳಿಂದ ಸಮಾಜಕ್ಕೆ ಪ್ರಯೋಜನಗಳೇನೂ ಇಲ್ಲದಿದ್ದರೂ, ಹೆಚ್ಚಿನ ತೊಂದರೆಯಿಲ್ಲವಾದಲ್ಲಿ ಅವು ಹಾಗೆಯೇ ವರ‍್ಶಗಟ್ಟಲೆ ಸಮಯ ಮುಂದುವರಿಯುತ್ತಿರುತ್ತವೆ.

ಸಂಸ್ಕ್ರುತದ ಎರವಲು ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬುದೂ ಇಂತಹದೇ ಒಂದು ಸಂಪ್ರದಾಯ. ಅದರಿಂದ ಕನ್ನಡ ಬರಹದ ಮಟ್ಟಿಗೆ ಯಾವ ಪ್ರಯೋಜನವೂ ಇಲ್ಲ. ಹಳೆಗನ್ನಡದ ಸಮಯದಲ್ಲಿ ಇಂತಹ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯಬಹುದಿತ್ತು, ಇಲ್ಲವೇ ಕನ್ನಡದ ಸೊಗಡನ್ನು ಕೆಡಿಸದಂತೆ ಅವನ್ನು ಮಾರ‍್ಪಡಿಸಿ ತದ್ಬವಗಳನ್ನಾಗಿ ಮಾಡಿಯೂ ಬಳಸಬಹುದಿತ್ತು. ಆಂಡಯ್ಯನ ಕಬ್ಬಿಗರ ಕಾವದಲ್ಲಿ ಅಂತಹ ತದ್ಬವ ಪದಗಳನ್ನು ಮಾತ್ರ ಬಳಸಲಾಗಿದೆ.

ಆದರೆ, ಇವತ್ತು ಹೊಸಗನ್ನಡದಲ್ಲಿ ಬರಹಗಾರರು ಈ ಆಯ್ಕೆಯನ್ನು ಕಳೆದುಕೊಂಡಿದ್ದಾರೆ. ಬಳಕೆಯಲ್ಲಿರುವ ಕೆಲವೇ ಕೆಲವು ತದ್ಬವ ಪದಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸಂಸ್ಕ್ರುತ ಪದಗಳನ್ನೂ ಇವತ್ತು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕಾಗಿದೆ. ಅವುಗಳಲ್ಲಿ ಯಾವುದೇ ಬಗೆಯ ಮಾರ‍್ಪಾಡನ್ನು ನಡೆಸಿದರೂ ಅದನ್ನು ತಪ್ಪೆಂದು ತಿಳಿಯಲಾಗುತ್ತದೆ.
ಮೊನ್ನೆ ಮೊನ್ನೆಯ ವರೆಗೂ ಈ ಸಂಪ್ರದಾಯ ಹೆಚ್ಚಿನ ತೊಂದರೆಯನ್ನೇನೂ ಕೊಡುತ್ತಿರಲಿಲ್ಲ. ಯಾಕೆಂದರೆ, ಸಮಾಜದಲ್ಲಿ ಮೇಲ್ವರ‍್ಗಕ್ಕೆ ಸೇರಿದ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಬಳಸಬೇಕಾಗಿತ್ತು, ಮತ್ತು ಅವರಲ್ಲಿ ಹೆಚ್ಚಿನವರೂ ಕನ್ನಡದೊಂದಿಗೆ ಸಂಸ್ಕ್ರುತವನ್ನೂ ಕಲಿಯುತ್ತಿದ್ದರು; ಹಾಗಾಗಿ, ಈ ಸಂಪ್ರದಾಯವನ್ನು ಮುಂದುವರಿಸಿಕೊಂಡುಹೋಗುವುದು ಅವರಿಗೆ ತೊಡಕಿನದಾಗಿರಲಿಲ್ಲ.

ಆದರೆ, ಇವತ್ತು ಎಲ್ಲಾ ವರ‍್ಗದ ಜನರು ಮತ್ತು ಎಲ್ಲರೂ ಬರಹವನ್ನು ಬಳಸಬೇಕಾಗಿದೆ. ಯಾಕೆಂದರೆ, ಇವತ್ತು ಸಮಾಜದಲ್ಲಿ ಬರಹಕ್ಕೆ ಅಂತಹದೊಂದು ಪ್ರಾಮುಕ್ಯತೆ ಬಂದಿದೆ. ಬರಹವನ್ನು ಬಳಸಲು ತಿಳಿಯದವರು ಮುಂದೆ ಬರಲು ಸಾದ್ಯವೇ ಇಲ್ಲ, ಮತ್ತು ಅಂತಹ ಹಲವು ಮಂದಿ ಜನರಿರುವ ಸಮಾಜ ಏಳಿಗೆಯಾಗಲೂ ಸಾದ್ಯವೇ ಇಲ್ಲ ಎಂಬ ಪರಿಸ್ತಿತಿ ಇವತ್ತಿನದಾಗಿದೆ.

ಈ ರೀತಿ ಕನ್ನಡ ಬರಹವನ್ನು ಬಳಸಲು ಕಲಿಯಲೇ ಬೇಕಾಗಿರುವ ಜನರಲ್ಲಿ ಹೆಚ್ಚಿನವರಿಗೂ ಸಂಸ್ಕ್ರುತದ ಅರಿವು ಬೇಕಾಗಿಲ್ಲ; ಅದಕ್ಕಿಂತಲೂ ಅವರಿಗೆ ಇಂಗ್ಲಿಶ್ ನುಡಿಯ ಅರಿವು ಹೆಚ್ಚಿನ ನೆರವು ನೀಡಬಲ್ಲುದು. ಹಾಗಾಗಿ, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಮೇಲಿನ ಸಂಪ್ರದಾಯ ಒಂದು ಹೆಚ್ಚಿನ ತೊಡಕನ್ನು ಮಾತ್ರ ತಂದೊಡ್ಡುತ್ತದಲ್ಲದೆ, ಅದರಿಂದ ಅವರು ಪಡೆಯಬಹುದಾದ ಪ್ರಯೋಜನ ಯಾವುದೂ ಇಲ್ಲ.

ಈ ರೀತಿ ಕನ್ನಡದ ಮಟ್ಟಿಗೆ ಯಾವ ಪ್ರಯೋಜನವನ್ನೂ ನೀಡದ, ಹಲವು ಮಂದಿ ಕನ್ನಡಿಗರಿಗೆ ತೊಡಕನ್ನು ಮಾತ್ರವೇ ಕೊಡುವ, ಮತ್ತು ನಮ್ಮ ಸಮಾಜದ ಏಳಿಗೆಗೂ ತೊಡಕಾಗಿರುವ ಈ ಸಂಪ್ರದಾಯವನ್ನು ಬಿಟ್ಟುಕೊಡುವುದೇ ಜಾಣತನ. ಇದು ಒಂದೂವರೆ-ಎರಡು ಸಾವಿರ ವರ‍್ಶದ ಹಿಂದಿನ ಸಮಾಜಕ್ಕಾಗಿ ಮಾಡಿಕೊಂಡಿದ್ದ ಸಂಪ್ರದಾಯ. ಇಂದಿನ ಸಮಾಜ ಆಗಿನದಕ್ಕಿಂತ ತೀರ ಬೇರೆಯಾಗಿದೆ. ಹೀಗಿರುವಾಗಲೂ ಆ ಹಳೆಯ ಸಂಪ್ರದಾಯವನ್ನು ತೊರೆಯಲು ಹಿಂಜರಿಯುವುದೆಂದರೆ, ಅಪ್ಪ ನೆಟ್ಟ ಆಲದ ಮರವೆಂದು ನೇಣು ಹಾಕಿಕೊಳ್ಳುವ ಹಾಗೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮನೆಯ ಹೊರಗಡೆ ಅಡಿಗೆಮನೆ ಪಾಕಶಾಲೆಯಾಗಬೇಕೇ?

ನುಡಿಯರಿಮೆಯ ಇಣುಕುನೋಟ – 2

ಕನ್ನಡಿಗರ ಪದಬಳಕೆಯ ವಿಶಯದಲ್ಲಿ ಒಂದು ಸೋಜಿಗದ ಸಂಗತಿಯಿದೆ. ಅದೇನೆಂದು ತಿಳಿಯಲು ಕೆಲವು ಎತ್ತುಗೆಗಳನ್ನು ತೆಗೆದುಕೊಳ್ಳೋಣ:

ಮನೆಯಲ್ಲಿ ಅಡಿಗೆಮನೆ, ಊಟದಕೋಣೆ ಎನ್ನುವ ನಾವು ಸಮ್ಮೇಳನಗಳಂತಹ ಸಂದರ‍್ಬಗಳಲ್ಲಿ ಅವುಗಳ ಬದಲಾಗಿ ಪಾಕಶಾಲೆ, ಬೋಜನಶಾಲೆ ಎನ್ನುತ್ತೇವೆ. ಬಟ್ಟೆಯಂಗಡಿಗೆ ಹೋಗುತ್ತೇನೆ ಎನ್ನುತ್ತೇವೆ; ಆದರೆ, ಅಂತಹ ಅಂಗಡಿಗಳಿಗೆ ಹೆಸರು ಕೊಡಬೇಕಾದಾಗ, ವಸ್ತ್ರಾಲಯ ಇಲ್ಲವೇ ವಸ್ತ್ರಬಂಡಾರ ಎಂಬ ಹೆಸರುಗಳಶ್ಟೇ ಹೊಳೆಯುತ್ತವೆ. ತಿಂಡಿಗಳನ್ನು ಮಾರುವ ಅಂಗಡಿ ತಿಂಡಿಮನೆಯಾಗಿಬಿಟ್ಟರೆ ಅದೇನೋ ಮುಜುಗರ, ಉಪಹಾರಗ್ರುಹವೇ ಆಗಬೇಕು.

ನಾಯಿಯ ಕುರಿತು ಬರೆದ ಬರಹದಲ್ಲಿ ಉದ್ದಕ್ಕೂ ನಾಯಿ ಎಂಬ ಪದವೇ ಬಳಕೆಯಾಗಿದೆಯಾದರೂ, ತಲೆಬರಹದಲ್ಲಿ ಮಾತ್ರ ಶ್ವಾನವಿದ್ದರಶ್ಟೇ ನೆಮ್ಮದಿ. ಮದುವೆಯ ಕರೆಯೋಲೆ ಕಳುಹಿಸುವ ಬದಲು ವಿವಾಹ ಆಮಂತ್ರಣ ಕಳಿಸಿದರೆ ಮಾತ್ರ ಮದುವೆಗೆ ಬರುತ್ತಾರೇನೋ ಎಂಬ ಅನಿಸಿಕೆ ನಮ್ಮಲ್ಲಿ ಹಲವರಲ್ಲಿದ್ದಂತಿದೆ.

ಹಾಗೆಯೇ, ಪುಸ್ತಕಗಳಿಗೆ ಹೆಸರು ಕೊಡುವಲ್ಲೂ ಬಳಕೆಯಲ್ಲಿರುವ ಪದಗಳಿಗಿಂತ ಬಳಕೆಯಲ್ಲಿಲ್ಲದ ಮತ್ತು ಹೆಚ್ಚು ಮಂದಿಗೆ ತಿಳಿಯದ ಪದಗಳೇ ಚಂದವೆಂದು ಹಲವು ಬರಹಗಾರರಿಗೆ ಅನಿಸುತ್ತದೆ. ಮನೆಗಳಿಗೆ, ಅಂಗಡಿಗಳಿಗೆ, ಕೂಟಗಳಿಗೆ, ಇಲ್ಲವೇ ಹಲವು ಬಗೆಯ ಹಮ್ಮುಗೆಗಳಿಗೆ ಹೆಸರು ಕೊಡಬೇಕಾಗಿರುವಲ್ಲೂ ನಮ್ಮ ಒಡಲಿನಿಂದ ನೇರವಾಗಿ ಬರುವ ಪದಗಳು ತಕ್ಕವೆಂದು ತೋರುವುದೇ ಇಲ್ಲ; ದೂರದರ‍್ಶನ, ದಿನಪತ್ರಿಕೆ, ಉಚ್ಚಶಿಕ್ಶಣ, ನಿರುದ್ಯೋಗ ಸಮಸ್ಯೆ, ಜನಗಣನೆ, ಲೋಕಾಯುಕ್ತ, ಪಟ್ಯಪುಸ್ತಕ ಮೊದಲಾದ ಹಲವು ಬಗೆಯ ಪದಗಳನ್ನು ಉಂಟುಮಾಡುವಲ್ಲಿ ಕೂಡ ಇದೇ ಸೋಜಿಗವನ್ನು ಕಾಣಬಹುದು.

ಇಂತಹ ಹಲವಾರು ‘ಮೇಲ್ಮಟ್ಟದ’ ಸನ್ನಿವೇಶಗಳಲ್ಲಿ ನಮ್ಮ ನಾಲಿಗೆಗಳಿಗೆ ತಂತಾನೇ ಬರುವ ಪದಗಳು – ಎಂದರೆ ಕನ್ನಡದವೇ ಆದ ಪದಗಳು – ಬಳಕೆಗೆ ತಕ್ಕವಲ್ಲ, ಮೇಲೆ ಕಾಣಿಸಿದಂತೆ ಸಂಸ್ಕ್ರುತದಿಂದ ಎರವಲು ಪಡೆದ ಪದಗಳೇ ತಕ್ಕವು ಎಂಬ ಕೀಳರಿಮೆ ನಮ್ಮಲ್ಲಿ ಹೆಚ್ಚಿನವರಲ್ಲಿದೆ. ಇದೊಂದು ಸೋಜಿಗವಲ್ಲದೆ ಮತ್ತೇನು?

ಹಿಂದಿನ ಕಾಲದಲ್ಲಿ ಕನ್ನಡ ನುಡಿ ಸಂಸ್ಕ್ರುತದ ಕಳೆಗೆಟ್ಟ ರೂಪ ಎಂಬ ಅನಿಸಿಕೆ ಹಲವು ಕನ್ನಡ ಪಂಡಿತರಲ್ಲಿತ್ತು; ಕನ್ನಡ ಪದಗಳಿಗಿಂತ ಸಂಸ್ಕ್ರುತ ಪದಗಳು ಮೇಲ್ಮಟ್ಟದವು ಎಂಬುದಾಗಿ ಅವರು ತಿಳಿಯುತ್ತಿದ್ದುದಕ್ಕೆ ಈ ತಪ್ಪು ಅನಿಸಿಕೆ ಕಾರಣವಾಗಿತ್ತು; ಆದರೆ, ನಿಜಕ್ಕೂ ಕನ್ನಡ ಸಂಸ್ಕ್ರುತದ ಕಳೆಗೆಟ್ಟ ರೂಪ ಅಲ್ಲ, ಅದಕ್ಕಿಂತ ತೀರ ಬೇರಾಗಿರುವ ಒಂದು ಸ್ವತಂತ್ರವಾದ ನುಡಿ ಎಂಬುದನ್ನು ಇವತ್ತು ನಾವು ಕಂಡುಕೊಂಡಿದ್ದೇವೆ. ಹಾಗಾಗಿ, ಇವತ್ತಿಗೂ ಸಂಸ್ಕ್ರುತ ಪದಗಳು ಕನ್ನಡ ಪದಗಳಿಂದ ಮೇಲ್ಮಟ್ಟದವು ಎಂದು ಬಾವಿಸುವುದಕ್ಕೆ ಯಾವ ಆದಾರವೂ ಇಲ್ಲ.

ಈ ರೀತಿ ಹೊಸಪದಗಳನ್ನು ಉಂಟುಮಾಡಬೇಕಾಗಿರುವಲ್ಲಿ ಕನ್ನಡದವೇ ಆದ ಪದಗಳನ್ನು ಬಳಸದಿರುವುದಕ್ಕೆ ಅವುಗಳ ಕುರಿತಾಗಿ ಕೀಳರಿಮೆ ಇರುವುದು ಒಂದು ಕಾರಣವಾದರೆ, ತಮಗೆ ಬೇಕಾಗಿರುವ ಹೊಸ ಪದಗಳನ್ನು ಉಂಟುಮಾಡುವ ಅಳವು ಕನ್ನಡಕ್ಕಿಲ್ಲ ಎಂಬ ತಪ್ಪು ಕಲ್ಪನೆ ಇನ್ನೊಂದು ಕಾರಣ. ಸಂಸ್ಕ್ರುತದಲ್ಲಿರುವಶ್ಟು ಒಟ್ಟು(ಪ್ರತ್ಯಯ)ಗಳು ಮತ್ತು ಪದಗಳು ಕನ್ನಡದಲ್ಲಿಲ್ಲ; ಹಾಗಾಗಿ, ಹಲವು ಬಗೆಯ ಪದಗಳನ್ನು ಹೊಸದಾಗಿ ಉಂಟುಮಾಡುವಲ್ಲಿ ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬ ಅನಿಸಿಕೆ ಹಲವರಲ್ಲಿದೆ.

ಆದರೆ, ಇದು ತಪ್ಪು ಅನಿಸಿಕೆ. ಎಂತಹ ವಿಶಯವನ್ನು ಬೇಕಿದ್ದರೂ ತಿಳಿಸಲು ಬೇಕಾಗುವಂತಹ ಪದಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವ ಅಳವು ಕನ್ನಡಕ್ಕಿದೆ. ಎಲ್ಲಾ ಸ್ವಾಬಾವಿಕವಾಗಿ ಬೆಳೆದುಬಂದ ನುಡಿಗಳಿಗೂ ಇಂತಹ ಅಳವು ಇರುತ್ತದೆ. ಕನ್ನಡದ ಈ ಅಳವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡು, ಅದನ್ನು ಬಳಸಿ, ಕನ್ನಡಕ್ಕೆ ಬೇಕಾಗಿರುವ ಹೊಸ ಪದಗಳನ್ನು ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ. ಅಂತಹ ಹೊಸ ಪದಗಳಿರುವ ಬರವಣಿಗೆಯನ್ನು ಹೆಚ್ಚು ಹೆಚ್ಚು ಕನ್ನಡಿಗರು ಸುಲಬವಾಗಿ ಓದಿ ತಿಳಿದುಕೊಳ್ಳಬಲ್ಲರು, ಮತ್ತು ಬರವಣಿಗೆಯ ಮೂಲಕ ನಡೆಯುವ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲೂ ಬಲ್ಲರು. ಬರವಣಿಗೆಯ ಗುರಿಯೇ ಇದಲ್ಲವೆ?

ಎಲ್ಲಾ ನುಡಿಗಳಿಗೂ ಅವುಗಳದೇ ಆದ ಪದಗಳ ಸೊಗಡು ಎಂಬುದಿರುತ್ತದೆ; ಕನ್ನಡ ಪದಗಳ ಸೊಗಡು ಸಂಸ್ಕ್ರುತ ಪದಗಳ ಸೊಗಡಿಗಿಂತ ತೀರ ಬೇರಾಗಿದೆ. ಕನ್ನಡ ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸಿದಂತೆಲ್ಲ, ಅದರ ಪದಗಳ ಸೊಗಡು ಮರೆಯಾಗುತ್ತಾ ಹೋಗುತ್ತದೆ, ಮತ್ತು ಅದನ್ನು ಓದಿ ತಿಳಿಯುವ ಕೆಲಸ ಕನ್ನಡಿಗರಿಗೆ ಹೆಚ್ಚು ಹೆಚ್ಚು ತೊಡಕಿನದಾಗುತ್ತಾ ಹೋಗುತ್ತದೆ.

ಹಾಗಾಗಿ, ಕನ್ನಡ ಬರಹಗಳಲ್ಲಿ ಹೆಚ್ಚು ಹೆಚ್ಚು ಎರವಲು ಪದಗಳನ್ನು ಬಳಸಹೋಗದೆ, ಅದರ ಪದಗಳ ಸೊಗಡನ್ನು ಉಳಿಸಿಕೊಳ್ಳಬೇಕು ಎನ್ನುವುದು ಬರಿಯ ಅಬಿಮಾನದ ಪ್ರಶ್ನೆ ಮಾತ್ರ ಅಲ್ಲ; ಕನ್ನಡ ಬರಹ ಎಲ್ಲಾ ಕನ್ನಡಿಗರನ್ನೂ ತಲಪಬೇಕು ಮತ್ತು ಎಲ್ಲಾ ಕನ್ನಡಿಗರಿಂದಲೂ ಹೊರಬರಬೇಕೆಂಬ ಮುಕ್ಯವಾದ ಗುರಿಯನ್ನು ಮುಟ್ಟುವ ಪ್ರಶ್ನೆಯೂ ಹೌದು.

ಇತ್ತೀಚೆಗೆ ಕನ್ನಡದಲ್ಲಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡುವವರು ಈ ವಿಶಯವನ್ನು ಪೂರ‍್ತಿ ಮರೆತಿರುವಂತೆ ಕಾಣುತ್ತದೆ. ಕನ್ನಡದವೇ ಆದ ಪದಗಳು ಅವರ ಕಣ್ಣಿಗೆ ಕಾಣಿಸದೆ ಹೋಗುತ್ತಿವೆ. ಅವರು ಉಂಟುಮಾಡಿರುವ ಪದಕೋಶಗಳಲ್ಲಿ ನೂರಕ್ಕೆ ತೊಂಬತ್ತರಶ್ಟು ಸಂಸ್ಕ್ರುತದಿಂದ ಎರವಲು ಪಡೆದ, ಇಲ್ಲವೇ ಸಂಸ್ಕ್ರುತದಲ್ಲಿ ಹೊಸದಾಗಿ ಉಂಟುಮಾಡಿ ಕನ್ನಡಕ್ಕೆ ಎರವಲು ತಂದ ಪದಗಳೇ ಕಾಣಿಸಿಕೊಳ್ಳುತ್ತವೆ; ಇಂತಹ ಪದಕೋಶಗಳನ್ನು ಕನ್ನಡ ಪದಕೋಶಗಳೆಂದು ಕರೆಯುತ್ತಿರುವುದು ನಿಜಕ್ಕೂ ಅಚ್ಚರಿಯ ವಿಶಯವಾಗಿದೆ!

ಇಂಗ್ಲಿಶ್‌ನಲ್ಲಿರುವ ಹಲವು ಅರಿಮೆಯ ಪದಗಳು ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ, ಅವನ್ನು ಬಳಸಿದ ಸೊಲ್ಲುಗಳು ಸಿಕ್ಕಲು ಸಿಕ್ಕಲಾಗಿ ಕಾಣಿಸಿಕೊಳ್ಳುತ್ತವೆ, ಮತ್ತು ಅವನ್ನು ಓದಿ ತಿಳಿದುಕೊಳ್ಳುವ ಕೆಲಸ ಕನ್ನಡಿಗರಿಗೆ ತುಂಬಾ ತೊಡಕಿನದಾಗುತ್ತದೆ. ಹಾಗಾಗಿ, ನಾವು ಅವುಗಳ ಬದಲು ಬೇರೆ ಕನ್ನಡದವೇ ಆದ ಅರಿಮೆಯ ಪದಗಳನ್ನು ಉಂಟುಮಾಡಲು ಹೋಗುತ್ತೇವೆ.

ಆದರೆ, ಹಾಗೆ ಪದಗಳನ್ನು ಉಂಟುಮಾಡಬೇಕಿರುವಲ್ಲಿ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು ಸಂಸ್ಕ್ರುತ ಪದಗಳನ್ನು ಬಳಸಿದೆವಾದರೆ, ನಮ್ಮವೇ ಆದ ಪದಗಳನ್ನು ಉಂಟುಮಾಡುವುದರ ಹಿಂದಿರುವ ಮುಕ್ಯವಾದ ಗುರಿಯನ್ನು ನಾವು ತಲಪುವುದೇ ಇಲ್ಲ. ಯಾಕೆಂದರೆ, ಇಂಗ್ಲಿಶ್ ಎರವಲುಗಳ ಹಾಗೆ ಹಲವು ಸಂಸ್ಕ್ರುತ ಎರವಲುಗಳೂ ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವುದಿಲ್ಲ, ಮತ್ತು ಅವನ್ನು ಬಳಸಿದ ಸೊಲ್ಲುಗಳು ಸಿಕ್ಕಲು ಸಿಕ್ಕಲಾಗಿಯೇ ಉಳಿಯುತ್ತವೆ. ಅವನ್ನು ಓದಿ, ಅವು ತಿಳಿಸುವ ವಿಶಯಗಳನ್ನು ತಿಳಿದುಕೊಳ್ಳುವ ಕೆಲಸವೂ ತುಂಬಾ ತೊಡಕಿನದಾಗಿಯೇ ಉಳಿಯುತ್ತದೆ.

ಸಂಸ್ಕ್ರುತ ಪದಗಳನ್ನು ಬಳಸಿ ಪಳಗಿರುವ ಕನ್ನಡ ಬರಹಗಾರರಿಗೆ ಮತ್ತು ಓದುಗರಿಗೆ ತುಂಬಾ ಸಂಸ್ಕ್ರುತ ಪದಗಳನ್ನು ಬಳಸಿರುವ ಬರಹಗಳೂ ಅಶ್ಟೊಂದು ತೊಡಕಿನವೆಂದು ಅನಿಸದಿರಬಹುದು. ಇದಕ್ಕೆ ಕಾರಣವೇನೆಂದರೆ, ಅವರು ಕನ್ನಡ ಪದಗಳ ಸೊಗಡನ್ನು ಮಾತ್ರವಲ್ಲದೆ ಸಂಸ್ಕ್ರುತ ಪದಗಳ ಸೊಗಡನ್ನೂ ತಮ್ಮದಾಗಿಸಿಕೊಂಡಿರುತ್ತಾರೆ.

ಆದರೆ, ಹೆಚ್ಚಿನ ಕನ್ನಡಿಗರಿಗೂ ಅಂತಹ ಬರಹಗಳು ತೊಡಕಿನವಾಗಿ ಕಾಣಿಸುತ್ತವೆ; ಅವರ ಆಡುನುಡಿಗಳಲ್ಲಿ ತುಂಬಾ ಕಡಿಮೆ ಸಂಸ್ಕ್ರುತ ಎರವಲುಗಳು ಬಳಕೆಯಾಗುತ್ತಿರುವುದು, ಮತ್ತು ಹಾಗೆ ಬಳಕೆಯಾಗುತ್ತಿರುವವೂ ಕನ್ನಡ ಪದಗಳ ಸೊಗಡಿಗೆ ಹೊಂದಿಕೆಯಾಗುವಂತೆ ಮಾರ‍್ಪಟ್ಟಿರುವುದು ಇದಕ್ಕೆ ಕಾರಣ.

ಹಾಗಾಗಿ, ಕನ್ನಡ ಬರಹಗಳು ಎಲ್ಲಾ ಕನ್ನಡಿಗರನ್ನೂ ತಲಪಬೇಕಿದ್ದಲ್ಲಿ, ಮತ್ತು ಎಲ್ಲಾ ಕನ್ನಡಿಗರಿಂದಲೂ ಹೊರಹೊಮ್ಮಬೇಕಿದ್ದಲ್ಲಿ, ಅವುಗಳಲ್ಲಿ ಬಳಕೆಯಾಗುವ ಎರವಲು ಪದಗಳನ್ನು, ಅವು ಸಂಸ್ಕ್ರುತದವಿರಲಿ ಇಲ್ಲವೇ ಇಂಗ್ಲಿಶಿನವಿರಲಿ, ಆದಶ್ಟು ಕಡಿಮೆ ಮಾಡಲು ಪ್ರಯತ್ನಿಸಬೇಕು, ಮತ್ತು ಬಳಸಲೇಬೇಕೆಂದಿರುವವು ಕನ್ನಡದ ಸೊಗಡನ್ನು ಕೆಡಿಸದಂತೆ ಅವುಗಳಲ್ಲಿ ಮಾರ‍್ಪಾಡುಗಳನ್ನು ಮಾಡಿಕೊಳ್ಳಬೇಕು.

ಎಲ್ಲಾ ಮಟ್ಟದ ಬಳಕೆಗಳಿಗೂ ಕನ್ನಡ ಪದಗಳು ತಕ್ಕುದಾದುವು ಎಂಬುದನ್ನು ಕನ್ನಡದ ಬರಹಗಾರರು ಮತ್ತು ಕನ್ನಡದಲ್ಲಿ ಹೊಸ ಪದಗಳನ್ನು ಉಂಟುಮಾಡುವವರು ಮನಗಾಣಬೇಕು, ಮತ್ತು ಮೇಲ್ಮಟ್ಟದ ಬಳಕೆಗಳಿಗೆ ಕನ್ನಡದವೇ ಆದ ಪದಗಳನ್ನು ಬಳಸುವುದು ಹೆಮ್ಮೆಯ ವಿಶಯವಶ್ಟೇ ಅಲ್ಲ, ಬರವಣಿಗೆಯ ಮುಕ್ಯ ಗುರಿಯನ್ನು ಮುಟ್ಟುವ ಬಗೆಯೂ ಹೌದೆಂಬ ಅನಿಸಿಕೆ ಅವರಲ್ಲಿ ಬೆಳೆದುಬರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter