Posts Tagged ‘ಎರವಲು’
ನುಡಿಯರಿಮೆಯ ಇಣುಕುನೋಟ – 32
ಕನ್ನಡ ಬರಹಗಳಲ್ಲಿ ಇತ್ತೀಚೆಗೆ ಸಂಸ್ಕ್ರುತದ ‘ಕರಣ’ ಎಂಬ ಪದದ ಬಳಕೆ ತುಂಬಾ ಹೆಚ್ಚಾಗುತ್ತಿದೆ; ಅದನ್ನು ಬಳಸುವವರು ನಿಜಕ್ಕೂ ಅದು ಬೇಕೇ ಇಲ್ಲವೇ ಬೇಡವೇ ಎಂಬುದನ್ನು ಗಮನಿಸುವುದೇ ಇಲ್ಲ. ಹಲವೆಡೆಗಳಲ್ಲಿ ಅದಕ್ಕೆ ಬದಲು ಕನ್ನಡದ್ದೇ ಆದ ‘ಇಸು’ ಒಟ್ಟನ್ನು ಬಳಸುವುದೇ ಕನ್ನಡದ ಮಟ್ಟಿಗೆ ಒಳ್ಳೆಯದು. ಯಾಕೆಂದರೆ, ‘ಕರಣ’ ಪದದ ಬಳಕೆಯಿಂದಾಗಿ ಮೂಡುವ ಹಲವು ಬಗೆಯ ಗೊಂದಲಗಳು ‘ಇಸು’ ಒಟ್ಟಿನ ಬಳಕೆಯಲ್ಲಿ ಕಾಣಿಸುವುದಿಲ್ಲ. ಇದಲ್ಲದೆ, ಕನ್ನಡದ್ದೇ ಆದ ‘ಇಸು’ ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆಗಳು ಎಲ್ಲಾ ಕನ್ನಡಿಗರಿಗೂ ತಿಳಿದಿರುತ್ತವೆ; ಹಾಗಾಗಿ, ‘ಕರಣ’ ಪದದ ಬಳಕೆಯ ಹಾಗೆ ಹೊಸ ಕಟ್ಟಲೆಗಳನ್ನು ಅವರು ಕಲಿಯಬೇಕಾಗುವುದಿಲ್ಲ.
ಸಂಸ್ಕ್ರುತದ ಎರವಲುಗಳೊಂದಿಗೆ ಮಾತ್ರವಲ್ಲದೆ ಇಂಗ್ಲಿಶ್, ಪರ್ಶಿಯನ್ ಮೊದಲಾದ ಬೇರೆ ಎರವಲು ಪದಗಳೊಂದಿಗೆ, ಮತ್ತು ಕನ್ನಡದವೇ ಆದ ಪದಗಳೊಂದಿಗೂ ಈ ‘ಕರಣ’ ಎಂಬುದನ್ನು ಬಳಸಲಾಗುತ್ತದೆ; ಸಬಲೀಕರಣ, ಉದಾರೀಕರಣ, ಪ್ರಮಾಣೀಕರಣ ಎಂಬ ಪದಗಳ ಹಾಗೆ, ಡಿಜಿಟಲೀಕರಣ, ಅಯಾನೀಕರಣ, ಕಾಸಗೀಕರಣ, ದಾಕಲೀಕರಣ ಎಂಬಂತಹ ಪದಗಳನ್ನೂ ಉಂಟುಮಾಡಲಾಗಿದೆ.
ಕನ್ನಡದ ಹಸಿರು ಪದದಿಂದ ಹಸಿರೀಕರಣ, ಅಗಲ ಪದದಿಂದ ಅಗಲೀಕರಣ, ಮತ್ತು ಕಯ್ಗಾರಿಕೆ ಪದದಿಂದ ಕಯ್ಗಾರಿಕೀಕರಣ ಎಂಬಂತಹ ಪದಗಳನ್ನೂ ಉಂಟುಮಾಡಲಾಗಿದೆ. ಇಂತಹ ಹಲವು ಕಡೆಗಳಲ್ಲಿ ಸಬಲಿಸು, ಪ್ರಮಾಣಿಸು, ಡಿಜಿಟಲಿಸು, ಅಯಾನಿಸು, ದಾಕಲಿಸು, ಹಸಿರಿಸು, ಅಗಲಿಸು ಎಂಬಂತಹ ಪದಗಳನ್ನು ಮತ್ತು ಅವುಗಳ ಹೆಸರುರೂಪಗಳಾದ ಪ್ರಮಾಣಿಸುವಿಕೆ, ದಾಕಲಿಸುವಿಕೆ, ಅಯಾನಿಸುವಿಕೆ, ಹಸಿರಿಸುವಿಕೆ ಎಂಬಂತಹ ಪದಗಳನ್ನೂ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ.
‘ಕರಣ’ ಎಂಬುದನ್ನು ಬಳಸುವವರಲ್ಲಿ ಹಲವರಿಗೆ ಅದರೊಂದಿಗೆ ಬರುವ ಹೆಸರುಪದದಲ್ಲಿ ಎಂತಹ ಮಾರ್ಪಾಡುಗಳನ್ನೆಲ್ಲ ಮಾಡಬೇಕು ಎಂಬ ವಿಶಯದಲ್ಲೂ ಗೊಂದಲಗಳಿವೆ; ಕೆಲವರು ಆದುನಿಕೀಕರಣ, ಜಾಗತಿಕೀಕರಣ, ಯಾಂತ್ರಿಕೀಕರಣ ಎಂದು ಬರೆದರೆ, ಇನ್ನು ಕೆಲವರು ಆದುನೀಕರಣ, ಜಗತೀಕರಣ, ಯಾಂತ್ರೀಕರಣ ಎಂಬುದಾಗಿ ಬರೆಯುತ್ತಾರೆ. ಸಾಮಾಜೀಕರಣವೂ ಇದೆ, ಸಮಾಜೀಕರಣವೂ ಇದೆ; ಸಾದ್ರುಶೀಕರಣವೂ ಇದೆ, ತುರ್ತುಕರಣವೂ ಇದೆ. ಮೇಲಿನ ಪದಗಳಲ್ಲಿ ಬಳಕೆಯಾಗಿರುವ ಮಹಾಪ್ರಾಣಾಕ್ಶರಗಳನ್ನು ಈ ಅಂಕಣದಲ್ಲಿ ಕಯ್ಬಿಡಲಾಗಿದೆ; ಆದರೆ, ಅದರ ಬಳಕೆಯಲ್ಲೂ ಸಾಕಶ್ಟು ಗೊಂದಲಗಳಿವೆ.
‘ಕರಣ’ ಪದವನ್ನು ಬಳಸುವವರೂ ಆ ಪದಗಳಿಂದ ಎಸಕ(ಕ್ರಿಯಾ)ಪದಗಳನ್ನು ಉಂಟುಮಾಡಬೇಕಿದ್ದಲ್ಲಿ ಕನ್ನಡದ ‘ಇಸು’ ಒಟ್ಟನ್ನು ಬಳಸಲೇಬೇಕಾಗುತ್ತದೆ; ಸಬಲೀಕರಣ, ದಾಕಲೀಕರಣ, ಡಿಜಿಟಲೀಕರಣ ಎಂಬಂತಹ ಪದಗಳನ್ನು ಬಳಸುವವರು ಅವುಗಳಿಂದ ಎಸಕಪದವನ್ನು ಪಡೆಯಬೇಕಿದ್ದಲ್ಲಿ ಸಬಲೀಕರಿಸು, ದಾಕಲೀಕರಿಸು, ಡಿಜಿಟಲೀಕರಿಸು ಎಂಬುದಾಗಿ ಇಸು ಒಟ್ಟನ್ನು ಸೇರಿಸಿಯೇ ಹೇಳಬೇಕಾಗುತ್ತದೆ; ಇದಕ್ಕೆ ಬದಲು ಸಬಲಿಸು, ದಾಕಲಿಸು, ಡಿಜಿಟಲಿಸು ಎಂದಶ್ಟೇ ಹೇಳಿದರೆ ಸಾಕಾಗುವುದಿಲ್ಲವೇ? ಅವುಗಳ ನಡುವೆ ಕರಣವನ್ನು ಯಾಕೆ ತಂದುಹಾಕಬೇಕು? ಸ್ತಿರೀಕರಣಗೊಳ್ಳು ಎಂಬುದೂ ಇಂತಹದೇ ಇನ್ನೊಂದು ಅನವಶ್ಯಕವಾದ ಕರಣ ಪದವನ್ನು ಸೇರಿಸಿರುವ ಪದರೂಪ; ಸ್ತಿರಗೊಳ್ಳು ಎಂಬುದು ಹೆಚ್ಚು ಅಡಕವಾಗಿ ಅದೇ ಹುರುಳನ್ನು ಕೊಡಬಲ್ಲುದು.
ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡುವಲ್ಲೂ ಕನ್ನಡದ ಅರಿವಿಗರು ಈ ‘ಕರಣ’ ಪದವನ್ನು ಹಲವೆಡೆಗಳಲ್ಲಿ ಬಳಸಿದ್ದಾರೆ; ಕಾರ್ಬನೀಕರಣ, ನಯ್ಟ್ರೀಕರಣ, ಪಾಲಿಮರೀಕರಣ ಎಂಬಂತಹ ಈ ಪದಗಳನ್ನು ಬಳಸಿದಲ್ಲಿ, ಅವಕ್ಕೆ ಸಂಬಂದಿಸಿದಂತೆ ಕರಿಸು (ಅಯಾನೀಕರಿಸು), ಕ್ರುತ (ಅಯಾನೀಕ್ರುತ), ಕಾರಕ (ಅಯಾನೀಕಾರಕ), ಕಾರಿ (ಅಯಾನೀಕಾರಿ) ಎಂಬಂತಹ ಕರಣ ಪದಕ್ಕೆ ಸಂಬಂದಿಸಿದಂತಹ ಬೇರೆ ಕೆಲವು ಪದಗಳನ್ನೂ ಬಳಸಬೇಕಾಗುತ್ತದೆ, ಮತ್ತು ಅವು ಕನ್ನಡದ್ದಲ್ಲವಾದ ಕಾರಣ, ಅವನ್ನು ಬಳಸುವಲ್ಲಿ ಹಲವಾರು ತಪ್ಪುಗಳೂ ಕಾಣಿಸಿಕೊಳ್ಳುತ್ತವೆ; ಇದಕ್ಕೆ ಬದಲು ಇಸು ಎಂಬುದನ್ನಶ್ಟೇ ಬಳಸಿದಲ್ಲಿ ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಮತ್ತು ಎಲ್ಲಾ ಕನ್ನಡಿಗರಿಗೂ ತಿಳಿದಿರುವ ಇಸುವಿಕೆ (ಅಯಾನಿಸುವಿಕೆ), ಇಸಿದ (ಅಯಾನಿಸಿದ), ಇಸುವ (ಅಯಾನಿಸುವ) ಎಂಬಂತಹ ರೂಪಗಳನ್ನು ಬಳಸಲು ಬರುತ್ತದೆ.
ಇಂತಹ ಕಡೆಗಳಲ್ಲಿ ಅರಿವಿಗರು ಇನ್ನೂ ಒಂದು ತೊಡಕನ್ನು ಎದುರಿಸಬೇಕಾಗುತ್ತದೆ: ಇಂಗ್ಲಿಶ್ನ ಅಯ್ಸ್ ಎಂಬ ಒಟ್ಟು ಬಂದಿರುವಲ್ಲಿ ಕರಿಸು ಎಂಬುದನ್ನು ಬಳಸುವ (ಪೋಲರಯ್ಸ್ – ದ್ರುವೀಕರಿಸು, ಅನೊಡಯ್ಸ್ – ಅನೊಡೀಕರಿಸು) ಈ ಅರಿವಿಗರು ಇಂಗ್ಲಿಶ್ನ ಅಯ್ಸ್ ಎಂಬುದಕ್ಕಿರುವ ಮಾಡುವಿಕೆ ಮತ್ತು ಆಗುವಿಕೆ ಎಂಬ ಎರಡು ಹುರುಳುಗಳಲ್ಲಿ ಒಂದನ್ನು ಮಾತ್ರ ತಿಳಿಸಬಲ್ಲರು; ಇದಕ್ಕೆ ಬದಲು ಇಸು ಎಂಬುದನ್ನಶ್ಟೇ ಬಳಸಿದರೆ ಆ ಎರಡು ಹುರುಳುಗಳನ್ನೂ ತಿಳಿಸಬಲ್ಲರು. ಯಾಕೆಂದರೆ, ಕರಣ ಎಂಬುದಕ್ಕೆ ಆಗುವಿಕೆ ಎಂಬ ಹುರುಳು ಸಿಗಲಾರದು; ಆದರೆ, ಇಸು ಎಂಬುದನ್ನು ಬಳಸಿರುವ ಅನೋಡಿಸು, ಅಲ್ಯೂಮಿನಿಸು ಎಂಬುವಕ್ಕೆ ಆಗುವಿಕೆಯ ಹುರುಳೂ ಸಿಗಬಲ್ಲುದು.
ಅರಿಮೆಯ (ಪಾರಿಬಾಶಿಕ)ಪದಗಳನ್ನು ಉಂಟುಮಾಡುವಲ್ಲಿ ಆತ್ಮಕ ಎಂಬುದನ್ನು ಬಳಸುವುದೂ ಇಂತಹದೇ ಒಂದು ಬೇಕಿಲ್ಲದ ಚಾಳಿ. ನುಡಿಯರಿಮೆಯ ಒಂದು ಪದನೆರಕೆಯಲ್ಲಿ ಈ ರೀತಿ ಆತ್ಮಕ ಎಂಬುದನ್ನು ಬಳಸಿರುವ ಇನ್ನೂರಯ್ವತ್ತಕ್ಕಿಂತಲೂ ಹೆಚ್ಚು (ಎಂದರೆ, ಸುಮಾರು ನೂರಕ್ಕೆ ಹದಿಮೂರರಶ್ಟು) ಪದಗಳಿವೆ! ಇವುಗಳಲ್ಲಿ ಹೆಚ್ಚಿನವುಗಳಲ್ಲಿಯೂ ಆತ್ಮಕ ಎಂಬುದನ್ನು ಬಳಸಬೇಕಾಗಿಯೇ ಇಲ್ಲ (ವ್ಯಾಕರಣಾತ್ಮಕ ನಿಯಮ – ವ್ಯಾಕರಣ ನಿಯಮ, ದ್ವನ್ಯಾತ್ಮಕ ರಚನೆ – ದ್ವನಿರಚನೆ, ಪ್ರೇರಣಾತ್ಮಕ ವಾಕ್ಯ – ಪ್ರೇರಣ ವಾಕ್ಯ). ಅರಿಮೆಯ ಪದಗಳು ಸಿಕ್ಕಲಾಗಿದ್ದಶ್ಟೂ ಒಳ್ಳೆಯದು ಎಂಬ ಅನಿಸಿಕೆ ಈ ಪದಗಳನ್ನು ಉಂಟುಮಾಡಿರುವ ಅರಿವಿಗರಲ್ಲಿರುವ ಹಾಗೆ ಕಾಣಿಸುತ್ತದೆ.
ಇದಲ್ಲದೆ, ತಮ್ಮ ಬರಹಗಳಲ್ಲಿ ಎಲ್ಲರಿಗೂ ಗೊತ್ತಾಗುವ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು ಸಂಸ್ಕ್ರುತದ ಎರವಲುಗಳನ್ನು ತಂದು ತುಂಬಿಸಿದರೆ ಅವುಗಳ ಮಟ್ಟ ಮೇಲೇರುತ್ತದೆಯೆಂದು ಕೆಲವರು ತಿಳಿದ ಹಾಗಿದೆ. ಆದರೆ, ಹಲವು ಮಂದಿ ಹೀಗೆ ಮಾಡುವಲ್ಲಿ ಹಲವು ಬಗೆಯ ತಪ್ಪುಗಳನ್ನೂ ಮಾಡಿ ನಗುವಿಗೆ ಎಡೆಮಾಡಿಕೊಡುತ್ತಾರೆ. ‘ಕಾರಣ’ ಎಂಬ ಪದದ ಬದಲು ಹಲವು ಮಂದಿ ‘ಸಕಾರಣ’ ಎಂಬ ಪದವನ್ನು ಬಳಸುತ್ತಾರೆ; ಆದರೆ, ಇವೆರಡರ ನಡುವೆ ಹುರುಳಿನಲ್ಲಿ ವ್ಯತ್ಯಾಸವಿದೆ ಎಂಬುದನ್ನು ಅವರು ಗಮನಿಸುವುದಿಲ್ಲ. ಸಕಾರಣ ಎಂಬುದಕ್ಕೆ ‘ಕಾರಣವಿರುವ’ ಎಂಬ ಹುರುಳಿದೆ. ಇದನ್ನು ಗಮನಿಸದ ಕೆಲವರ ಬರಹಗಳಲ್ಲಿ ಸಕಾರಣವಿಲ್ಲದೆ, ಸಕಾರಣ ನೀಡದೆ, ಸಕಾರಣಗಳಿರಲಿಲ್ಲ ಎಂಬಂತಹ ಬಳಕೆಗಳನ್ನು ಕಾಣಬಹುದು! ಆದರೆ, ಇಂತಹದೇ ಬಳಕೆ ಮುಂದುವರಿದರೆ, ಸಕಾರಣ ಎಂಬುದಕ್ಕೆ ಕನ್ನಡದಲ್ಲಿ ಬರಿಯ ಕಾರಣ ಎಂಬುದರ ಹುರುಳೇ ಇರುವಂತಾದೀತು.
ಇಹಲೋಕ ಮತ್ತು ಪರಲೋಕ ಎಂಬ ಬೇರೆ ಎರಡು ಸಂಸ್ಕ್ರುತ ಎರವಲುಗಳ ಬಳಕೆಯೂ ಇಂತಹದೇ. ಅವುಗಳ ನಿಜವಾದ ಹುರುಳು ಏನೆಂದು ತಿಳಿಯದಿದ್ದರೂ ಬಳಸುವ ಆಸೆ. ಆತನನ್ನು ಕಚ್ಚಿದ ಹಾವೇ ಸತ್ತುಹೋಯಿತು ಎಂಬುದನ್ನು ಹೇಳಬೇಕಿರುವಲ್ಲಿ ಕಚ್ಚಿದ ಹಾವೇ ಇಹಲೋಕಕ್ಕೆ ಹೋಯಿತು ಎಂಬುದಾಗಿ ಬರೆದಿರುವುದನ್ನು ಕಾಣಬಹುದು! ಇಹಲೋಕ ಮತ್ತು ಪರಲೋಕಗಳೆಂಬ ಈ ಪದಗಳ ಬದಲು ಈ ಲೋಕ ಮತ್ತು ಬೇರೆ ಲೋಕ ಎಂಬ ಎಲ್ಲರಿಗೂ ಗೊತ್ತಾಗುವ ಪದಕಂತೆಗಳನ್ನು ಬಳಸಿದ್ದರೆ, ಇಂತಹ ತಪ್ಪು ಮಾಡಿ ನಗೆಪಾಟಲಾಗುವ ಹಾಗಾಗುತ್ತಿರಲಿಲ್ಲ.
ದಿನಪತ್ರಿಕೆಗಳಲ್ಲಿ ತಲೆಬರಹವನ್ನು ಬರೆಯುವವರೂ ಇಂತಹದೇ ಕೀಳರಿಮೆಯಿಂದ ಬಳಲುತ್ತಿರುವ ಹಾಗೆ ಕಾಣಿಸುತ್ತದೆ. ಒಂದು ಬರಹದಲ್ಲಿ ಉದ್ದಕ್ಕೂ ನಾಯಿ, ಬೆಕ್ಕು, ಕೋಳಿ, ಮೀನು ಎಂಬಂತಹ ಕನ್ನಡದವೇ ಆದ ಪದಗಳನ್ನು ಬರುತ್ತವೆ; ಆದರೆ, ತಲೆಬರಹದಲ್ಲಿ ಮಾತ್ರ ಶ್ವಾನ, ಮಾರ್ಜಾಲ, ಕುಕ್ಕುಟ, ಮತ್ಸ್ಯ ಎಂಬಂತಹ ಸಂಸ್ಕ್ರುತ ಎರವಲುಗಳು ಬರುತ್ತವೆ. ತಲೆಬರಹದಲ್ಲಿ ಎಲ್ಲರಿಗೂ ಗೊತ್ತಿರುವ ನಾಯಿ, ಬೆಕ್ಕು, ಮೀನು ಮೊದಲಾದ ಕನ್ನಡ ಪದಗಳು ಬಂದರೆ ದಿನಪತ್ರಿಕೆಯ ತಕ್ಕಮೆ ಇಲ್ಲವಾಗಬಹುದೆಂಬ ಹೆದರಿಕೆ ಅವರಿಗಿರುವಂತೆ ತೋರುತ್ತದೆ. ತನ್ನ ಮುದಿ ತಂದೆಯನ್ನು ಅಪ್ಪ ಎನ್ನಲು ಹಿಂಜರಿಯುವ ದೊಡ್ಡ ಅದಿಕಾರಿಯ ಕೀಳು ಸಂಸ್ಕ್ರುತಿಯಿದು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 29
ಕನ್ನಡದ ಯಾವ ಪದವನ್ನು ಬೇಕಿದ್ದರೂ ಸಂಸ್ಕ್ರುತದ ಪದಗಳಿಂದ ಬಂದುವೆಂಬುದಾಗಿ ತೋರಿಸಿಕೊಡಬಲ್ಲೆವು ಎಂಬ ನಂಬಿಕೆ ಕೆಲವರಲ್ಲಿದೆ; ಹೀಗೆ ತೋರಿಸಿಕೊಡುವುದಕ್ಕಾಗಿ ಅವರು ಪದಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಕಾಣಿಸುವ ಹೋಲಿಕೆಗಳನ್ನು ಮಾತ್ರವಲ್ಲದೆ ಹಲವಾರು ಬಗೆಯ ಕಯ್ಚಳಕಗಳನ್ನೂ ಬಳಸುತ್ತಾರೆ.
ಈ ಕಯ್ಚಳಕಗಳ ಮೂಲಕ ಅವರು ಉಲಿ ಇಲ್ಲವೇ ಹುರುಳುಗಳಲ್ಲಿ ಹೋಲಿಕೆಗಳು ಕಾಣಿಸದಿದ್ದರೂ ಸಂಬಂದವನ್ನು ಕಾಣಬಲ್ಲರು; ಎತ್ತುಗೆಗಾಗಿ, ಕನ್ನಡದ ‘ನೆತ್ತರು’ ಪದವನ್ನು ಸಂಸ್ಕ್ರುತದ ‘ರುಧಿರ’ ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯಿದ್ದರೂ ಉಲಿಯ ಹೋಲಿಕೆ ತುಂಬಾ ಕಡಿಮೆ; ಕನ್ನಡದ ‘ಕಟ್ಟೆ’ ಪದವನ್ನು ಸಂಸ್ಕ್ರುತದ ‘ಕಕ್ಷಾ’ (ಕಂಕುಳು) ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯೂ ತುಂಬಾ ಕಡಿಮೆ. ಹೀಗಿದ್ದರೂ, ಕಯ್ಚಳಕಗಳ ಮೂಲಕ ಅವರು ಇವನ್ನು ಒಂದಕ್ಕೊಂದು ಜೋಡಿಸಿ ಬಿಡುತ್ತಾರೆ. ಇಂತಹ ಕಯ್ಚಳಕಗಳು ಅವರಿಗೆ ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನೆರವಾಗುತ್ತವೆಯಾದರೂ, ನಿಜಕ್ಕೂ ಆ ಪದಗಳ ಹಿನ್ನಡವಳಿ (ಚರಿತ್ರೆ) ಎಂತಹದು ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವು ಯಾವ ನೆರವನ್ನೂ ನೀಡುವುದಿಲ್ಲ.
ಕನ್ನಡದ ಪದಗಳು ಎರಡು ಬಗೆಗಳಲ್ಲಿ ಸಂಸ್ಕ್ರುತ ಪದಗಳೊಂದಿಗೆ ಸಂಬಂದಿಸಿರಬಲ್ಲುವು: ಅವೆರಡೂ ಒಂದೇ ನುಡಿಕುಟುಂಬದ ನುಡಿಗಳೆಂಬುದೊಂದು ಬಗೆ, ಮತ್ತು ಅವುಗಳಲ್ಲಿ ಒಂದು ಇನ್ನೊಂದರಿಂದ ಪದಗಳನ್ನು ಎರವಲು ಪಡೆದಿದೆಯೆಂಬುದಿನ್ನೊಂದು ಬಗೆ. ಹಾಗಾಗಿ, ಯಾವ ಬಗೆಯ ಸಂಬಂದವನ್ನು ಅವುಗಳ ಪದಗಳ ನಡುವೆ ಕಾಣಲಾಗುತ್ತದೆ ಎಂಬುದನ್ನು ಮೊದಲು ತಿಳಿಸಬೇಕಾಗುತ್ತದೆ.
ನುಡಿಗಳಲ್ಲಿ ಕಾಲದಿಂದ ಕಾಲಕ್ಕೆ ಹಲವು ಬಗೆಯ ಮಾರ್‍ಪಾಡುಗಳು ನಡೆಯುತ್ತಲೇ ಇರುತ್ತವೆ; ಇವು ಉಲಿಗಳನ್ನು ಮಾರ್‍ಪಡಿಸಬಹುದು, ಪದಗಳನ್ನು ಇಲ್ಲವೇ ಅವುಗಳ ಹುರುಳುಗಳನ್ನು ಮಾರ್‍ಪಡಿಸಬಹುದು, ಮತ್ತು ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳನ್ನು ಮಾರ್‍ಪಡಿಸಬಹುದು. ಇಂತಹ ಹಲವು ಬಗೆಯ ಮಾರ್‍ಪಾಡುಗಳು ನಡೆದುದರಿಂದಾಗಿ ಹಳೆಗನ್ನಡವಿದ್ದುದು ನಡುಗನ್ನಡವಾಗಿ ಇವತ್ತು ಹೊಸಗನ್ನಡವಾಗಿದೆ, ಮತ್ತು ಹೊಸಗನ್ನಡವೂ ಹಲವು ಬಗೆಯ ಆಡುನುಡಿಗಳಾಗಿ ಒಡೆದುಕೊಂಡಿದೆ.
ಕಾಲದಿಂದ ಕಾಲಕ್ಕೆ ನಡೆಯುವ ಇಂತಹ ಮಾರ್‍ಪಾಡುಗಳಲ್ಲಿ ನುಡಿಯ ಉಲಿಗಳಲ್ಲಿ ನಡೆಯುವ ಮಾರ್‍ಪಾಡುಗಳೇ ತುಂಬಾ ಮುಕ್ಯವಾದವುಗಳು; ಯಾಕೆಂದರೆ, ಅವುಗಳಿಂದಾಗಿ ಪದಗಳ ಮತ್ತು ಒಟ್ಟು(ಪ್ರತ್ಯಯ)ಗಳ ರೂಪದಲ್ಲಿ ಮಾತ್ರವಲ್ಲದೆ, ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲೂ ಮಾರ್‍ಪಾಡುಗಳು ನಡೆಯುತ್ತವೆ. ಕನ್ನಡದ ಹಿನ್ನಡವಳಿಯಲ್ಲಿ ಇಂತಹ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳು ನಡೆದಿವೆ.
ಹಳೆಗನ್ನಡದ ಪಕಾರ ಹಕಾರವಾಗಿರುವುದು (ಪಾಲು>ಹಾಲು, ಪಳೆ>ಹಳೆ, ಪೋಗು>ಹೋಗು); ರ-ಱ, ಳ-ೞಗಳ ನಡುವಿನ ವ್ಯತ್ಯಾಸ ಇಲ್ಲವಾಗಿರುವುದು, ಉದ್ದ ತೆರೆಯುಲಿ (ಸ್ವರ) ಮತ್ತು ತಡೆಯುಲಿ(ಸ್ಪರ‍್ಶ)ಗಳ ನಡುವಿನ ಮೂಗುಲಿ (ಅನುನಾಸಿಕ) ಬಿದ್ದುಹೋಗಿರುವುದು (ನೂಂಕು>ನೂಕು, ದಾಂಟು>ದಾಟು) ಮೊದಲಾದುವು ಇಂತಹ ಉಲಿಗಳ ಮಾರ್‍ಪಾಡುಗಳು.
ಇವು ಉಲಿಗಳ ಮಾರ್‍ಪಾಡುಗಳಲ್ಲದೆ ಪದಗಳ ಮಾರ್‍ಪಾಡುಗಳಲ್ಲ ಎಂಬುದನ್ನು ಗಮನಿಸುವುದು ಅವಶ್ಯ; ಪಕಾರ ಹಕಾರವಾಗುವಂತಹ ಒಂದು ಮಾರ್‍ಪಾಡು ನಡೆದಾಗ, ಪಕಾರವಿದ್ದ ಎಲ್ಲಾ (ಸಾವಿರಕ್ಕಿಂತಲೂ ಹೆಚ್ಚು) ಪದಗಳೂ ಅದಕ್ಕೆ ಒಳಗಾಗಿರುತ್ತವೆ. ಇಂತಹ ಮಾರ್‍ಪಾಡುಗಳು ಒಂದು ಉಲಿಯನ್ನು ಎಲ್ಲೆಡೆಗಳಲ್ಲೂ ತಾಗಬಹುದು, ಇಲ್ಲವೇ ಕೆಲವೆಡೆಗಳಲ್ಲಿ ಮಾತ್ರ ತಾಗಬಹುದು; ಪಕಾರ ಹಕಾರವಾಗುವ ಮಾರ್‍ಪಾಡು ಪಕಾರವನ್ನು ಎಲ್ಲೆಡೆಗಳಲ್ಲೂ ತಾಗಿದೆ; ಆದರೆ, ಎಕಾರ ಇಕಾರವಾಗುವ ಇನ್ನೊಂದು ಮಾರ್‍ಪಾಡು ಎಕಾರದ ಬಳಿಕ ಒತ್ತೆ ಮುಚ್ಚುಲಿ (ವ್ಯಂಜನ) ಮತ್ತು ಇಕಾರ ಇಲ್ಲವೇ ಉಕಾರ ಬಂದಿರುವಲ್ಲಿ ಮಾತ್ರ ನಡೆದಿದೆ, ಬೇರೆಡೆಗಳಲ್ಲಿ ಎಕಾರ ಮಾರ್‍ಪಡದೆ ಉಳಿದಿದೆ (ಬಿಳಿ, ಬಿಸಿ, ನಿಡು ಎಂಬಂತಹ ಪದಗಳಲ್ಲಿ ಈ ಮಾರ್‍ಪಾಡು ನಡೆದಿದೆ. ಆದರೆ ಬೆಳ್ಳಗೆ, ಬೆಚ್ಚಗೆ, ನೆಟ್ಟಗೆ ಎಂಬಂತಹ ಪದಗಳಲ್ಲಿ ನಡೆದಿಲ್ಲ). ಇದಲ್ಲದೆ, ಇಂತಹ ಮಾರ್‍ಪಾಡುಗಳಿಗೆಲ್ಲ ಒಂದು ಗಡುವಿರುತ್ತದೆ; ಈ ಗಡುವು ಮುಗಿದ ಮೇಲೆ ಹಿಂದಿನ ಬರಹಗಳಿಂದ (ಪಾಲು, ಪುಟ್ಟ, ಪೆಟ್ಟು) ಇಲ್ಲವೇ ಬೇರೆ ನುಡಿಗಳಿಂದ (ಪಾಪ, ಪುಣ್ಯ, ಪೂಜೆ) ಪದಗಳು ಎರವಲಾಗಿ ಬಂದು ಈ ಮಾರ್‍ಪಾಡಿಗೆ ಹೊರಪಡಿಕೆಗಳಾಗಿ ಕಾಣಿಸಬಲ್ಲುವು.
ಎರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ತೀರ‍್ಮಾನಿಸುವಲ್ಲೆಲ್ಲ ಇಂತಹ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯವಾದ ನೆಲೆಯಾಗಿ ಬಳಸಿಕೊಳ್ಳಲಾಗುತ್ತದೆ. ಯಾಕೆಂದರೆ, ನುಡಿಗಳಲ್ಲಿ ನಡೆಯುವ ಹಲವು ಬಗೆಯ ಮಾರ್‍ಪಾಡುಗಳಲ್ಲಿ ಉಲಿಗಳ ಮಾರ್‍ಪಾಡುಗಳ ಮೇಲೆ ಮಾತ್ರ ಪದಗಳ ಹುರುಳುಗಳು ಯಾವ ಪ್ರಬಾವವನ್ನೂ ಬೀರುವುದಿಲ್ಲ; ನೇರವಾಗಿ ಪದಗಳಲ್ಲಿ ಇಲ್ಲವೇ ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲಿ ನಡೆಯುವ ಮಾರ್‍ಪಾಡುಗಳ ಮೇಲೆ ಅವು ಹಲವು ಬಗೆಗಳಲ್ಲಿ ಪ್ರಬಾವವನ್ನು ಬೀರುತ್ತವೆ, ಮತ್ತು ಈ ರೀತಿ ಹುರುಳುಗಳಿಂದ ಪ್ರಬಾವಿತವಾಗಿರುವ ಮಾರ್‍ಪಾಡುಗಳನ್ನು ಕಚಿತವಾದ ಕಟ್ಟಲೆಗಳಲ್ಲಿ ಸೆರೆಹಿಡಿಯಲು ಬರುವುದಿಲ್ಲ; ಯಾಕೆಂದರೆ, ಹುರುಳುಗಳಿಂದ ಪ್ರಬಾವಿತವಾದ ಮಾರ್‍ಪಾಡುಗಳಿಗೆ ಹಲವಾರು ಬಗೆಯ ಹೊರಪಡಿಕೆಗಳಿರುತ್ತವೆ.
ಹಾಗಾಗಿ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂಬ ತೀರ್‍ಮಾನಕ್ಕೆ ಬರಬೇಕಿದ್ದಲ್ಲಿ ಕನ್ನಡದ ಹಿನ್ನಡವಳಿಯಲ್ಲಿ ನಡೆದ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯ ನೆಲೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಎಂದರೆ, ಕನ್ನಡ ಮತ್ತು ಸಂಸ್ಕ್ರುತ ಪದಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಕನ್ನಡದ ಹಿನ್ನಡವಳಿಯಲ್ಲಿ ನಡೆದಿದ್ದ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳಿಂದಾಗಿ ಮೂಡಿಬಂದಿವೆ ಎಂಬುದಾಗಿ ತೋರಿಸಿಕೊಡಲು ಸಾದ್ಯವಾದಾಗ ಮಾತ್ರ ಕನ್ನಡ ಸಂಸ್ಕ್ರುತದಿಂದ ಬೆಳೆದುಬಂದಿದೆ ಎಂಬುದನ್ನು ಒಪ್ಪಿಕೊಳ್ಳಲು ಬರುತ್ತದೆ. ಆದರೆ, ಇದುವರೆಗೆ ಯಾರಿಗೂ ಆ ರೀತಿ ತೋರಿಸಿಕೊಡಲು ಸಾದ್ಯವಾಗಿಲ್ಲ.
ಹಾಗಾಗಿ, ಸದ್ಯಕ್ಕಂತೂ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿಲ್ಲವೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಮತ್ತು ಕನ್ನಡದಲ್ಲಿ ಮೂಲದ್ರಾವಿಡ ನುಡಿಯಿಂದ ಬಂದ ಕನ್ನಡದವೇ ಆದ ಪದಗಳು, ಮತ್ತು ಸಂಸ್ಕ್ರುತವೇ ಮೊದಲಾದ ಬೇರೆ ನುಡಿಗಳಿಂದ ಎರವಲಾಗಿ ಬಂದ ಪದಗಳು ಎಂಬುದಾಗಿ ಎರಡು ಬಗೆಯ ಪದಗಳು ಇವೆಯೆಂಬುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.
ಕನ್ನಡದ ಪದಗಳಿಗೂ ಸಂಸ್ಕ್ರುತದ ಪದಗಳಿಗೂ ನಡುವೆ ಅವುಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಹೋಲಿಕೆಯಿದೆಯಾದರೆ, ಅದಕ್ಕೆ ಹಲವು ಕಾರಣಗಳಿರಬಲ್ಲುವು. ಎತ್ತುಗೆಗಾಗಿ, ಈ ಎಲ್ಲಾ ಪದಗಳನ್ನೂ ಉಂಟುಮಾಡಿದವರು ಮಾನವರೇ ಎಂಬುದೊಂದು ಕಾರಣ; ಹೋಲಿಕೆ ಬರಿಯ ಆಕಸ್ಮಿಕವಾಗಿರಬಹುದೆಂಬುದಿನ್ನೊಂದು ಕಾರಣ. ಹಾಗಾಗಿ, ಒಂದು ನುಡಿ ಇನ್ನೊಂದರಿಂದ ಎರವಲು ಪಡೆದಿದೆಯೆಂಬುದು ಪದಗಳ ನಡುವಿರುವ ಹೋಲಿಕೆಗಳಿಗಿರುವ ಹಲವು ಕಾರಣಗಳಲ್ಲಿ ಒಂದು ಮಾತ್ರ. ಇದಲ್ಲದೆ, ಇಲ್ಲಿಯೂ ಒಂದು ಪದವನ್ನು ಯಾವ ನುಡಿ ಯಾವ ನುಡಿಯಿಂದ ಎರವಲಾಗಿ ಪಡೆದಿದೆ ಎಂಬುದನ್ನು ತೀರ್‍ಮಾನಿಸುವಲ್ಲಿ ಅರಕೆಗೆ ನೆಲೆಯಿದೆ.
ಸಾಮಾನ್ಯವಾಗಿ, ಒಂದು ಪದದ ಹರಹು ಎಂತಹದು ಎಂಬುದರ ಮೇಲೆ ಅದರ ಹಿನ್ನಡವಳಿಯೆಂತಹದು ಎಂಬುದನ್ನು ತೀರ್‍ಮಾನಿಸಲಾಗುತ್ತದೆ; ಎತ್ತುಗೆಗಾಗಿ, ಕನ್ನಡದ ಒಂದು ಪದಕ್ಕೆ ಸಮಾನವಾದ ಪದಗಳು ತಮಿಳು, ತೆಲುಗು, ಗೋಂಡಿ, ಕುಡುಕ್ ಮೊದಲಾದ ಬೇರೆ ಹಲವು ದ್ರಾವಿಡ ನುಡಿಗಳಲ್ಲೂ ಕಾಣಿಸಿಕೊಳ್ಳುತ್ತಿವೆಯಾದರೆ, ಮತ್ತು ಸಂಸ್ಕ್ರುತವನ್ನು ಹೊರತುಪಡಿಸಿ ಉಳಿದ ಲ್ಯಾಟಿನ್, ಗ್ರೀಕ್, ಪರ್‍ಶಿಯನ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳಲ್ಲಿ ಕಾಣಿಸುವುದಿಲ್ಲವಾದರೆ, ಅದು ಕನ್ನಡದ್ದೇ ಆದ ಪದ, ಮತ್ತು ಸಂಸ್ಕ್ರುತಕ್ಕೇನೇ ಅದು ದ್ರಾವಿಡ ನುಡಿಗಳಿಂದ ಎರವಲಾಗಿ ಬಂದಿದೆ ಎಂದು ಹೇಳಬೇಕಾಗುತ್ತದೆ.
ಇಂತಹ ಅರಕೆಗಳನ್ನು ನಡೆಸದೆ ಬರಿಯ ಹೋಲಿಕೆಯ ಮೇಲೆ ಎಲ್ಲವೂ ಸಂಸ್ಕ್ರುತದಿಂದ ಬಂದಿವೆಯೆಂದು ಹೇಳುವುದನ್ನು ಒಂದು ಅರಿಮೆಯ ಹೇಳಿಕೆಯೆಂದು ತಿಳಿಯಲು ಬರುವುದಿಲ್ಲ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 22
ಅರಿಮೆಯ (ವಿಜ್ನಾನದ) ಬರಹಗಳನ್ನು ಓದುತ್ತಿರುವವರಿಗೆ ಅವು ತುಂಬಾ ತೊಡಕಿನವಾಗಿ ಕಾಣಿಸಲು ಹಲವು ಕಾರಣಗಳಿವೆ; ಇವುಗಳಲ್ಲಿ ಎಸಕ(ಕ್ರಿಯೆ)ಗಳನ್ನು ತಿಳಿಸಲು ಎಸಕಪದಗಳನ್ನು ಬಳಸುವ ಬದಲು ಅವುಗಳ ಹೆಸರುರೂಪಗಳನ್ನು ಇಲ್ಲವೇ ಬೇರೆ ಹೆಸರುಕಂತೆಗಳನ್ನು ಬಳಸುವುದು ಒಂದು ಮುಕ್ಯ ಕಾರಣ. ಓಡು ಎಂಬುದು ಒಂದು ಎಸಕವನ್ನು ತಿಳಿಸುತ್ತದೆ; ರಾಜು ಓಡುತ್ತಿದ್ದಾನೆ ಎಂಬ ಸೊಲ್ಲಿನಲ್ಲಿ ಇದನ್ನು ಒಂದು ಎಸಕಪದದ ಮೂಲಕ ಒಂದು ಎಸಕವಾಗಿ ತಿಳಿಸಲಾಗಿದೆ. ಸಾಮಾನ್ಯವಾಗಿ ಮಾತಿನಲ್ಲಿ ಈ ರೀತಿ ಎಸಕಗಳನ್ನು ಎಸಕಗಳಾಗಿಯೇ ತಿಳಿಸಲಾಗುತ್ತದೆ; ಆದರೆ, ಅದನ್ನೊಂದು ವಿಶಯವಾಗಿಯೂ ತಿಳಿಸಲು ಬರುತ್ತದೆ, ಮತ್ತು ಇದಕ್ಕಾಗಿ ಮೇಲಿನ ಸೊಲ್ಲನ್ನು ರಾಜುವಿನ ಓಡುವಿಕೆ ಇಲ್ಲವೇ ರಾಜುವಿನ ಓಟ ಎಂಬ ಒಂದು ಹೆಸರುಕಂತೆಯಾಗಿ ಮಾರ‍್ಪಡಿಸಲು ಬರುತ್ತದೆ.
ಇಂತಹ ಮಾರ‍್ಪಡಿಸಿದ ಬಳಕೆಗಳು ಮಾತಿನಲ್ಲಿ ಇಲ್ಲವೇ ಸಾಮಾನ್ಯ ಬರಹಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ; ಆದರೆ, ಅರಿಮೆಯ ಬರಹಗಳಲ್ಲಿ ಅವನ್ನು ತುಂಬಾ ಹೆಚ್ಚು ಬಳಸಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಅವನ್ನು ಬಳಸುವ ಮೂಲಕ ಹೇಳಬೇಕೆಂದಿರುವ ಸಂಗತಿಯನ್ನು ತುಂಬಾ ಅಡಕವಾಗಿ ಹೇಳಲು ಬರುತ್ತದೆ; ಎತ್ತುಗೆಗಾಗಿ, ಮಕ್ಕಳನ್ನು ತಾಯಂದಿರು ಸಾಕುತ್ತಾರೆ ಎಂಬುದನ್ನು ಒಮ್ಮೆ ಸೂಚಿಸಿದ ಮೇಲೆ, ಅದರ ಕುರಿತಾಗಿ ಬೇರೆ ಸಂಗತಿಗಳನ್ನು ತಿಳಿಸಬೇಕಾದಾಗ ಅದನ್ನು ಅಡಕವಾಗಿ ಮಕ್ಕಳ ಸಾಕುವಿಕೆ ಇಲ್ಲವೇ ಬರೀ ಸಾಕುವಿಕೆ ಎಂಬುದಾಗಿ ಮಾರ‍್ಪಡಿಸಿ ಸೂಚಿಸಲು ಬರುತ್ತದೆ.
ಇದಲ್ಲದೆ, ಅರಿಮೆಯ ಬರಹಗಳ ಇಟ್ಟಳ (ರಚನೆ) ಬೇರೆ ಬರಹಗಳ ಇಟ್ಟಳಕ್ಕಿಂತ ಈ ವಿಶಯದಲ್ಲಿ ಬೇರಾಗಿದೆ; ಸಾಮಾನ್ಯ ಬರಹಗಳಲ್ಲಿ ಉದ್ದಕ್ಕೂ ಒಬ್ಬ ವ್ಯಕ್ತಿ ಇಲ್ಲವೇ ಕೆಲವು ವ್ಯಕ್ತಿಗಳು ಏನು ಮಾಡಿದ್ದಾರೆ ಎಂಬುದಾಗಿ ಹಲವು ಬಗೆಯ ಎಸಕಗಳು ಒಂದರ ಬಳಿಕ ಒಂದರಂತೆ ನಡೆದಿರುವುದನ್ನು ತಿಳಿಸಲಾಗುತ್ತದೆ; ಇದಕ್ಕೆ ಬದಲು, ಅರಿಮೆಯ ಬರಹಗಳಲ್ಲಿ ಒಂದು ಎಸಕವನ್ನು ತಿಳಿಸಿದ ಮೇಲೆ, ಆ ಎಸಕದ ಕುರಿತಾಗಿ ಹಲವಾರು ವಿಶಯಗಳನ್ನು ತಿಳಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಆ ಎಸಕವನ್ನು ಮುಂದಿನ ಸೊಲ್ಲುಗಳ ನೆಲೆಯಾಗಿ ಬಳಸಬೇಕಾಗುತ್ತದೆ; ಆದರೆ, ಹೆಸರುಪದಗಳು ಇಲ್ಲವೇ ಎಸಕಪದಗಳ ಹೆಸರುರೂಪಗಳು ಮಾತ್ರ ಸೊಲ್ಲುಗಳ ನೆಲೆಗಳಾಗಬಲ್ಲುವು; ಹಾಗಾಗಿ, ಆ ಎಸಕವನ್ನು ತಿಳಿಸಲು ಒಂದು ಹೆಸರುಕಂತೆಯನ್ನು ಬಳಸಬೇಕಾಗುತ್ತದೆ.
ಇಂತಹ ಮಾರ‍್ಪಡಿಸಿದ ಬಳಕೆಗಳು ತೊಡಕಿನವಾಗಿ ಕಾಣಿಸಲು ಮುಕ್ಯ ಕಾರಣವೇನೆಂದರೆ, ಸಾಮಾನ್ಯವಾಗಿ ನಮ್ಮ ಮಾತಿನಲ್ಲಿ ಎಸಕಪದಗಳು ಎಸಕಗಳನ್ನು ಸೂಚಿಸುತ್ತವೆ ಮತ್ತು ಹೆಸರುಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುತ್ತವೆ; ಆದರೆ, ಈ ಮಾರ‍್ಪಡಿಸಿದ ಬಳಕೆಗಳಲ್ಲಿ ಹೆಸರುಪದಗಳ ಮೂಲಕ ಎಸಕಗಳನ್ನು ಸೂಚಿಸಲಾಗುತ್ತದೆ. ಎಂದರೆ, ಇವು ನಾವು ಜಗತ್ತನ್ನು ನೋಡುವ ಬಗೆಯನ್ನೇ ಬೇರೆ ಮಾಡುತ್ತವೆ: ಅವು ಎಸಕಗಳನ್ನು ಹೆಸರುಗಳಾಗಿ, ಎಂದರೆ ವಸ್ತು ಇಲ್ಲವೇ ವಿಶಯಗಳಾಗಿ ನೋಡುವಂತೆ ಮಾಡುತ್ತವೆ. ಅರಿಮೆಯ ಬರಹಗಳನ್ನು ಓದುವವರು ಜಗತ್ತನ್ನು ಈ ರೀತಿ ಒಂದು ಹೊಸ ಬಗೆಯಲ್ಲಿ ನೋಡಲು ಕಲಿಯಬೇಕಾಗುತ್ತದೆ. ಇದು ಸುಲಬದ ಕೆಲಸವಲ್ಲ.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಇನ್ನೊಂದು ತೊಡಕೂ ಕಾಣಿಸಿಕೊಳ್ಳುತ್ತದೆ: ಅರಿಮೆಯ ಬರಹಗಳನ್ನು ಬರೆಯುವವರು ಎಸಕಪದಗಳನ್ನು ಹೆಸರುಕಂತೆಗಳಾಗಿ ಮಾರ‍್ಪಡಿಸುವಲ್ಲಿ ಕನ್ನಡದ ಕಸುವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾಗಾಗಿ, ಅವರು ಕನ್ನಡದವೇ ಆದ ಹೆಸರುಪದಗಳನ್ನು ಇಲ್ಲವೇ ಎಸಕಪದಗಳ ಹೆಸರುರೂಪಗಳನ್ನು ಬಳಸುವ ಬದಲು, ಸಂಸ್ಕ್ರುತದ ಪದ ಮತ್ತು ಪದರೂಪಗಳನ್ನು ಅನವಶ್ಯಕವಾಗಿ ಎರವಲು ಪಡೆದು ಬಳಸಹೋಗುತ್ತಾರೆ, ಮತ್ತು ಆ ಮೂಲಕ ತಮ್ಮ ಬರಹಗಳಲ್ಲಿ ಇನ್ನಶ್ಟು ತೊಡಕುಗಳನ್ನು ಸೇರಿಸಿಕೊಳ್ಳುತ್ತಾರೆ.
ಎತ್ತುಗೆಗಾಗಿ, ಈ ಮಣ್ಣಿನಲ್ಲಿ ಕ್ಶಾರ ಇದೆ ಎಂಬ ಸೊಲ್ಲನ್ನು ಕನ್ನಡದಲ್ಲೇನೇ ಕ್ಶಾರವಿರುವ (ಇಲ್ಲವೇ ಕ್ಶಾರವುಳ್ಳ) ಮಣ್ಣು ಎಂಬುದಾಗಿ ಮಾರ‍್ಪಡಿಸಬಹುದು. ಆದರೆ ಇದು ಕನ್ನಡದಲ್ಲಿ ಅರಿಮೆಯ ಬರಹಗಳನ್ನು ಬರೆಯುವವರ ಗಮನಕ್ಕೇ ಬರುವುದಿಲ್ಲ. ಅದಕ್ಕೆ ಬದಲಾಗಿ ಅವರು ಕ್ಶಾರಯುಕ್ತ ಮಣ್ಣು ಎಂಬುದಾಗಿ ಸಂಸ್ಕ್ರುತದಿಂದ ಯುಕ್ತ ಪದರೂಪವನ್ನು ಎರವಲು ಪಡೆದು ಬಳಸುತ್ತಾರೆ. ಜೀವ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯೊಂದನ್ನು ಕೇಳಿ, ಅದರ ಮುಂದಿನ ಸೊಲ್ಲಿನಲ್ಲಿ ಜೀವದ ಹುಟ್ಟು ಎಂಬುದಾಗಿ ಅದನ್ನು ಮಾರ‍್ಪಡಿಸಿಕೊಳ್ಳುವ ಬದಲು, ಜೀವದ ಉಗಮ ಎಂಬುದಾಗಿ ಬರೆಯುತ್ತಾರೆ; ಎಂದರೆ, ಸಂಸ್ಕ್ರುತದ ಉಗಮ ಪದವನ್ನು ಅನವಶ್ಯಕವಾಗಿ ಎರವಲಾಗಿ ಪಡೆದು ಬಳಸುತ್ತಾರೆ. ಇದರಿಂದಾಗಿ, ಮೊದಲೇ ತೊಡಕಿನದಾಗಿ ಕಾಣಿಸುವ ಅರಿಮೆಯ ಬರಹ ಇನ್ನಶ್ಟು ತೊಡಕಿನದಾಗುತ್ತದೆ.
ಎಸಕಗಳನ್ನು ತಿಳಿಸಲು ಹೆಸರುಕಂತೆಗಳನ್ನು ಬಳಸಿರುವಲ್ಲಿ ಓದುಗರು ಎಸಕದಿಂದ ವಿಶಯಕ್ಕೆ ನೆಗೆಯಬೇಕಾಗುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಸಕವನ್ನು ಇಲ್ಲಿ ಎಸಕಪದದ ಮೂಲಕ ಒಂದು ಎಸಕವಾಗಿ ಸೂಚಿಸದೆ, ಹೆಸರುಪದದ ಮೂಲಕ ಒಂದು ವಿಶಯವಾಗಿ ಸೂಚಿಸಲಾಗುತ್ತದೆ. ಇದಲ್ಲದೆ, ಆ ರೀತಿ ಬದಲಾವಣೆಯನ್ನು ಮಾಡಲಾಗಿದೆ ಎಂಬುದನ್ನು ಬರಹಗಳಲ್ಲಿ ಯಾವ ರೀತಿಯಲ್ಲೂ ಸೂಚಿಸಲಾಗುವುದಿಲ್ಲ. ಓದುಗರು ಈ ನೆಗೆತವನ್ನು ತಾವೇ ಮಾಡಿಕೊಳ್ಳಬಲ್ಲರು ಎಂಬುದಾಗಿ ತಿಳಿಯಲಾಗುತ್ತದೆ.
ಆದರೆ, ಅರಿಮೆಯ ಬರಹಗಳನ್ನು ಓದಿ ಪಳಗಿಲ್ಲದ ಓದುಗರಿಗೆ ಈ ನೆಗೆತ ತೊಂದರೆಯನ್ನು ಕೊಡುತ್ತದೆ. ಕನ್ನಡದ ಅರಿಮೆಯ ಬರಹಗಳಲ್ಲಿ ಈ ನೆಗೆತದೊಂದಿಗೆ ಇನ್ನೊಂದು ನೆಗೆತವನ್ನೂ ಓದುಗರ ಮೇಲೆ ಹೊರಿಸಲಾಗುತ್ತದೆ: ಅವರು ಎಸಕದಿಂದ ಹೆಸರಿಗೆ ನೆಗೆಯಬೇಕಾಗುತ್ತದೆ ಮಾತ್ರವಲ್ಲ, ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೂ ನೆಗೆಯಬೇಕಾಗುತ್ತದೆ. ಎತ್ತುಗೆಗಾಗಿ, ಒಂದು ಜೀವಿ ಇನ್ನೊಂದು ಜೀವಿಯನ್ನು ಹುಟ್ಟಿಸುತ್ತದೆ ಎಂಬಲ್ಲಿಂದ ಹುಟ್ಟಿಸುವಿಕೆ ಎಂಬುದಕ್ಕೆ ಹೋಗದೆ ನೇರವಾಗಿ ಪ್ರಜನನ ಕ್ರಿಯೆ ಎಂಬುದಕ್ಕೆ ನೆಗೆಯಬೇಕಾಗುತ್ತದೆ.
ಚಿಕ್ಕ ಮಕ್ಕಳಿಗಾಗಿ ಬರೆದ ಅರಿಮೆಯ ಬರಹಗಳಲ್ಲೂ ಇಂತಹ ಹಲವಾರು ಸಂಸ್ಕ್ರುತದ ಪದರೂಪಗಳನ್ನು ಕಾಣಬಹುದು. ಇವನ್ನು ಮಕ್ಕಳು ಕಣ್ಣು ಮುಚ್ಚಿ ಬಾಯಿಪಾಟ ಮಾಡುತ್ತಾರಲ್ಲದೆ, ಅವು ನಿಜಕ್ಕೂ ಏನು ಹೇಳುತ್ತವೆ ಎಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಯಾಕೆಂದರೆ, ಅವರಿಗೆ ಇವುಗಳಲ್ಲಿ ಬರುವ ಎಸಕದಿಂದ ಹೆಸರಿಗೆ ಹಾರುವ ಮೊದಲ ನೆಗೆತವೇ ತೊಡಕಿನದಾಗಿ ಕಾಣಿಸುತ್ತದೆ; ಇನ್ನು ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೆ ಹಾರುವ ಎರಡನೆಯ ನೆಗೆತ ಅವರ ಅಳವಿಗೆ ಮೀರಿದ್ದು.
ಅರಿಮೆಯ ಬರಹಗಳನ್ನು ಮಂದಿ ಮೆಚ್ಚುವ (ಜನಪ್ರಿಯವಾಗುವ) ಹಾಗೆ ಇಲ್ಲವೇ ಚಿಕ್ಕ ಮಕ್ಕಳಿಗೆ ಗೊತ್ತಾಗುವ ಹಾಗೆ ಬರೆಯಬೇಕಿದ್ದಲ್ಲಿ ಬರಹಗಾರರು ಕೆಳಗೆ ಕೊಟ್ಟಿರುವ ಉಪಾಯಗಳನ್ನು ಬಳಸಿಕೊಳ್ಳಬೇಕಾಗುತ್ತದೆ: (೧) ಆದಶ್ಟು ಮಟ್ಟಿಗೆ ಅವರು ಅರಿಮೆಯ (ಪಾರಿಬಾಶಿಕ) ಪದಗಳ ಬಳಕೆಯನ್ನು ಕಡಿಮೆ ಮಾಡಬೇಕು; (೨) ಎಸಕಗಳನ್ನು ತಿಳಿಸುವ ಹೆಸರುಕಂತೆಗಳನ್ನು ಸೊಲ್ಲುಗಳಾಗಿ ಬದಲಾಯಿಸಿಕೊಳ್ಳಬೇಕು; (೩) ಸಿಕ್ಕಲು ಸೊಲ್ಲುಗಳನ್ನು ಸುಳುಸೊಲ್ಲುಗಳಾಗಿ ಬಿಡಿಸಿ ಬರೆಯಬೇಕು; ಮತ್ತು (೪) ಸಂಸ್ಕ್ರುತ (ತತ್ಸಮ) ಪದಗಳ ಬದಲು ಆದಶ್ಟು ಮಟ್ಟಿಗೆ ಕನ್ನಡದವೇ ಆದ ಪದಗಳನ್ನು ಬಳಸಬೇಕು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 5
ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳನ್ನು ಕನ್ನಡ ಬರಹದಿಂದ ತೆಗೆದುಹಾಕಿದರೆ ಕನ್ನಡದಸೊಗಡು (ಎಂದರೆ ಸಂಸ್ಕ್ರುತಿ) ಅಳಿದುಹೋಗುತ್ತದೆಯೆಂದು ಕೆಲವರಿಗೆ ಅನಿಸುತ್ತದೆ. ಆದರೆ, ನಿಜಕ್ಕೂ ಈ ಮಾರ‍್ಪಾಡು ಕನ್ನಡದ ಸೊಗಡನ್ನು ಉಳಿಸುತ್ತದೆಯಲ್ಲದೆ ಅಳಿಸುವುದಿಲ್ಲ.
ಕನ್ನಡ ಕಾವ್ಯಗಳಲ್ಲಿ ತುಂಬಾ ಸಂಸ್ಕ್ರುತ (ತತ್ಸಮ) ಪದಗಳನ್ನು ಬಳಸಿದೆವಾದರೆ ಅವು ಕಕ್ಕಸ(ಕರ‍್ಕಶ)ವಾಗುತ್ತವೆಯೆಂದು ಕವಿರಾಜಮಾರ‍್ಗದಲ್ಲಿ ಹೇಳಲಾಗಿದೆ; ಆ ರೀತಿ ಕಕ್ಕಸವಾಗದಂತೆ ತನ್ನ ಕಾವ್ಯಗಳಲ್ಲಿ ತದ್ಬವ ಪದಗಳನ್ನು ಮಾತ್ರವೇ ಬಳಸಿರುವ ಆಂಡಯ್ಯನಿಗೆ ‘ಕನ್ನಡದ ಕಾವ’ ಎಂದರೆ, ಕನ್ನಡದ ಸೊಗಡನ್ನು (ಸಂಸ್ಕ್ರುತಿಯನ್ನು) ಕಾಪಾಡಿದವನು ಎಂಬ ಬಿರುದನ್ನು ಕೊಡಲಾಗಿದೆ. ತತ್ಸಮ ಪದಗಳನ್ನು ಬಳಸದುದರಿಂದಾಗಿ ಆತನು ಕನ್ನಡದ ಸೊಗಡನ್ನು ಕಳೆದಿದ್ದಾನೆಂದು ಯಾರೂ ಆತನನ್ನು ದೂರಿಲ್ಲ.
ಸಂಸ್ಕ್ರುತ ಎರವಲುಗಳನ್ನು ಕನ್ನಡಿಗರು ಹೇಗೆ ಓದುತ್ತಾರೋ ಹಾಗೆಯೇ ಬರೆಯೋಣ ಎನ್ನುವುದೂ ಇದೇ ರೀತಿಯಲ್ಲಿ ಕನ್ನಡದ ಸೊಗಡನ್ನು ಉಳಿಸುವ ಪ್ರಯತ್ನವಲ್ಲದೆ ಅಳಿಸುವ ಪ್ರಯತ್ನವಲ್ಲ. ಯಾಕೆಂದರೆ, ಸಂಸ್ಕ್ರುತ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆದಲ್ಲಿ, ಅವು ತದ್ಬವ ಪದಗಳ ಹಾಗೆ ಕನ್ನಡದ ಸೊಗಡನ್ನು ಕಾಪಾಡುತ್ತವೆ.
ಸಂಸ್ಕ್ರುತ ಎರವಲುಗಳನ್ನು ತದ್ಬವರೂಪದಲ್ಲಿ ಬರೆಯುವಾಗ, ಅವುಗಳಲ್ಲಿರುವ ಶ-ಷಗಳ ನಡುವಿನ ವ್ಯತ್ಯಾಸ, ರು-ಋಗಳ ನಡುವಿನ ವ್ಯತ್ಯಾಸ, ಮತ್ತು ಅಲ್ಪಪ್ರಾಣ-ಮಹಾಪ್ರಾಣಗಳ ನಡುವಿನ ವ್ಯತ್ಯಾಸಗಳು ಇಲ್ಲವಾಗುತ್ತವೆ; ಸಂಸ್ಕ್ರುತ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಓದುವ ಹಾಗೆ ಬರೆಯುವಾಗಲೂ ಇಂತಹವೇ ವ್ಯತ್ಯಾಸಗಳು ಇಲ್ಲವಾಗುತ್ತವೆ. ಹಾಗಾಗಿ, ತದ್ಬವ ಪದಗಳ ಬಳಕೆಯಿಂದ ಹೇಗೆ ಕನ್ನಡ ನುಡಿಯ ಸಂಸ್ಕ್ರುತಿ ನಾಶವಾಗುವುದಿಲ್ಲವೋ ಹಾಗೆಯೇ ಸಂಸ್ಕ್ರುತ ಎರವಲುಗಳನ್ನು ಓದುವ ಹಾಗೆ ಬರೆಯುವುದರಿಂದಲೂ ಕನ್ನಡ ನುಡಿಯ ಸಂಸ್ಕ್ರುತಿ ನಾಶವಾಗುವುದಿಲ್ಲ.
ಹೆಚ್ಚಿನ ಕನ್ನಡಿಗರೂ ಮಹಾಪ್ರಾಣ, ಷಕಾರ, ಋಕಾರ ಮೊದಲಾದುವನ್ನು ಮಾತನಾಡುವಾಗ ಇಲ್ಲವೇ ಓದುವಾಗ ಬಳಸುವುದಿಲ್ಲ ಎಂಬುದಾಗಿ ನಾನು ಹೇಳಿರುವುದು ಬರಿಯ ಊಹೆಯ ಮೇಲಲ್ಲ. ಅದಕ್ಕೆ ಸಾಕಶ್ಟು ಅರಕೆಯ ಆದಾರವಿದೆ: ಸುಮಾರು ಒಂದೂವರೆ ತಿಂಗಳು ಮಯ್ಸೂರು ಜಿಲ್ಲೆಯಲ್ಲೆಲ್ಲ ಸುತ್ತಾಡಿ, ಅಲ್ಲಿನ ಬೇರೆ ಬೇರೆ ಜಾತಿ ಮತ್ತು ಪಂಗಡಗಳ ಜನರ ಮಾತನ್ನು ಗಮನಿಸಿದ್ದೇನೆ. ಆಮೇಲೆ, ಅಂತಹದೇ ಅರಕೆಯನ್ನು ದಕ್ಶಿಣ ಕನ್ನಡ ಮತ್ತು ಗುಲ್ಬರ‍್ಗ ಜಿಲ್ಲೆಗಳಲ್ಲೂ ನಡೆಸಿದ್ದೇನೆ.
ಇದಲ್ಲದೆ, ಹಲವು ಮಂದಿ ಸಂಸ್ಕ್ರುತ ಪಂಡಿತರ ಕನ್ನಡ ಮಾತನ್ನೂ ನಾನು ಗಮನಿಸಿದ್ದೇನೆ. ಬರಿಯ ಪದಗಳನ್ನು ಉಲಿದು ತೋರಿಸುವಾಗ ಅವರು ಈ ವ್ಯತ್ಯಾಸಗಳನ್ನು ಹೆಚ್ಚುಕಡಿಮೆ ಸರಿಯಾಗಿಯೇ ಉಳಿಸಿಕೊಳ್ಳುತ್ತಾರೆ; ಆದರೆ, ಅವನ್ನೇ ಮಾತಿನಲ್ಲಿ ಬಳಸುವಾಗ ಈ ಎಲ್ಲಾ ವ್ಯತ್ಯಾಸಗಳೂ ಇಲ್ಲವಾಗುತ್ತವೆ.
ನಿಜಕ್ಕೂ ಶ-ಷಗಳ ನಡುವೆ, ಇಲ್ಲವೇ ಮಹಾಪ್ರಾಣ-ಅಲ್ಪಪ್ರಾಣಗಳ ನಡುವೆ ಕನ್ನಡಿಗರ ಮಾತಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ; ಯಾರಾದರೂ ಈ ವ್ಯತ್ಯಾಸ ಕೇಳಿಸುವ ಹಾಗೆ ಮಾತನಾಡಿದರೆ, ಕೇಳುವವರಿಗೆ ಅದು ಅಸ್ವಾಬಾವಿಕವೆಂದು ಅನಿಸುತ್ತದೆ.
ಕನ್ನಡಿಗರ ಮಾತಿನಲ್ಲಿ ಇಲ್ಲವೇ ಓದಿನಲ್ಲಿಲ್ಲದ ಈ ಸಂಸ್ಕ್ರುತ ಪದಗಳ ವ್ಯತ್ಯಾಸವನ್ನು ಕನ್ನಡ ಬರಹದಲ್ಲಿ ಸುಮಾರು ಒಂದೂವರೆ ಸಾವಿರ ವರ‍್ಶಗಳಿಂದಲೂ ಉಳಿಸಿಕೊಂಡು ಬರಲಾಗಿದೆ. ಮೊನ್ನೆ ಮೊನ್ನೆಯ ವರೆಗೂ ಕನ್ನಡ ಬರಹವನ್ನು ಮೇಲ್ವರ‍್ಗದ ಕೆಲವೇ ಕೆಲವು ಮಂದಿ ಮಾತ್ರ ಬಳಸುತ್ತಿದ್ದರಾದ ಕಾರಣ, ಇದು ಅಂತಹ ತೊಡಕಿನ ಸಂಗತಿಯೆಂದು ಯಾರಿಗೂ ಅನಿಸಿರಲಿಲ್ಲ.
ಆದರೆ, ಇವತ್ತು ಎಲ್ಲಾ ವರ‍್ಗದ ಜನರೂ ಕನ್ನಡ ಬರಹವನ್ನು ಕಲಿತು ಬಳಸಲು ತೊಡಗಬೇಕಾಗಿದೆ; ಯಾಕೆಂದರೆ, ಬರಹವನ್ನು ಬಳಸಲಾರದವರು ತಮ್ಮ ಜೀವನದಲ್ಲಿ ಒಂದು ಅತ್ಯಮೂಲ್ಯವಾದ ಸಾದನದಿಂದ ವಂಚಿತರಾಗುತ್ತಾರೆ. ಒಂದು ನಾಡಿನಲ್ಲಿ ಅಂತಹ ಜನ ಹೆಚ್ಚು ಇದ್ದಶ್ಟೂ ಆ ನಾಡು ಹಿಂದೆಯೇ ಉಳಿದಿರುತ್ತದೆ. ಇವತ್ತು ಬರಹಕ್ಕೆ ಅಂತಹ ಪ್ರಾಮುಕ್ಯತೆ ಬಂದಿದೆ.
ಹಾಗಾಗಿ, ಕನ್ನಡ ಬರಹವನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ಒಂದು ದೊಡ್ಡ ತೊಡಕಾಗಿರುವ ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡುವುದೇ ಇವತ್ತು ನಮ್ಮ ಮುಂದಿರುವ ಸರಿಯಾದ ದಾರಿ. ಹಾಗೆ ಮಾಡುವುದರಿಂದ ಕನ್ನಡ ಬರಹದ ಸೊಗಡು ಇಲ್ಲವೇ ಸಂಸ್ಕ್ರುತಿ ಉಳಿಯುತ್ತದೆಯಲ್ಲದೆ ಅಳಿಯುವುದಿಲ್ಲ; ಅದರ ಮೇಲೆ ಹೊರಿಸಲಾಗಿರುವ ಬೇರೊಂದು ಸಂಸ್ಕ್ರುತಿಯ ಹೊರೆ ಮಾತ್ರ ಇಲ್ಲವಾಗುತ್ತದೆ.
ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಟ್ಟಲ್ಲಿ ಮದ್ಯ-ಮಧ್ಯ, ದನ-ಧನ ಎಂಬಂತಹ ಹಲವು ಪದಗಳ ನಡುವಿನ ವ್ಯತ್ಯಾಸ ಇಲ್ಲವಾಗಿ, ಗೊಂದಲವುಂಟಾಗಬಲ್ಲುದು ಎಂಬುದಾಗಿ ಕೆಲವರು ವಾದಿಸುತ್ತಾರೆ; ಆದರೆ, ಈ ವಾದದಲ್ಲಿ ನಿಜಕ್ಕೂ ತಿರುಳಿಲ್ಲ. ಯಾಕೆಂದರೆ, ಕನ್ನಡಿಗರ ಮಾತಿನಲ್ಲಿ ಇಲ್ಲವೇ ಓದಿನಲ್ಲಿ, ಮೇಲೆ ವಿವರಿಸಿದ ಹಾಗೆ, ಈ ವ್ಯತ್ಯಾಸ ಹೇಗಿದ್ದರೂ ಇಲ್ಲ, ಮತ್ತು ಇದರಿಂದಾಗಿ ಯಾವ ಗೊಂದಲವೂ ಆಗುತ್ತಾ ಇಲ್ಲ.
ಇದಲ್ಲದೆ, ಯಾವುದೇ ಒಂದು ನುಡಿಯ ಪದನೆರಕೆಯನ್ನು ಬಿಡಿಸಿ ನೋಡಿದರೂ ಅದರಲ್ಲಿ ಒಂದಕ್ಕಿಂತ ಹೆಚ್ಚು ಹುರುಳಿರುವ ನೂರಾರು ಪದಗಳು ಕಾಣಲು ಸಿಗುತ್ತವೆ. ಸಂಸ್ಕ್ರುತದಲ್ಲಂತೂ ಇದು ಇನ್ನೂ ಹೆಚ್ಚು; ಅದರ ಹೆಚ್ಚಿನ ಪದಗಳಿಗೂ ಅಯ್ದು ಇಲ್ಲವೇ ಹೆಚ್ಚು ಹುರುಳುಗಳಿವೆಯೆಂದು ಹೇಳಲಾಗುತ್ತದೆ.
ಸಂಸ್ಕ್ರುತದ ಅರ್ಥ ಪದಕ್ಕೆ ‘ಹುರುಳು’ ಮತ್ತು ‘ಹಣ’ ಎಂಬವುಗಳು ಮಾತ್ರವಲ್ಲದೆ, ‘ಉದ್ದೇಶ’, ‘ಕಾರಣ’, ‘ವಸ್ತು’ ಮೊದಲಾದ ಬೇರೆಯೂ ಹಲವು ಹುರುಳುಗಳಿವೆ; ವಿಷ ಪದಕ್ಕೆ ‘ನಂಜು’ ಎಂಬ ಹುರುಳು ಮಾತ್ರವಲ್ಲದೆ, ‘ನೀರು’ ಮತ್ತು ‘ಸೇವಕ’ ಎಂಬ ಹುರುಳುಗಳೂ ಇವೆ (ಮೋನಿಯರ್ ವಿಲ್ಲಿಯಂಸ್ ಅವರ ಸಂಸ್ಕ್ರುತ-ಇಂಗ್ಲಿಶ್ ಡಿಕ್ಶ್‌ನರಿ ನೋಡಿ). ಆದರೆ, ಈ ರೀತಿ ಒಂದೇ ಪದಕ್ಕೆ ಹಲವು ಹುರುಳುಗಳಿರುವುದನ್ನು ಯಾರೂ ಸಂಸ್ಕ್ರುತದ ಕೊರತೆಯೆಂದು ಹೇಳುವುದಿಲ್ಲ; ಅದಕ್ಕೆ ಬದಲಾಗಿ, ಅದು ಸಂಸ್ಕ್ರುತದ ಶ್ರೀಮಂತಿಕೆಯೆಂದು ಹೇಳುತ್ತಾರೆ.
ಸಾಮಾನ್ಯವಾಗಿ ಪದಗಳನ್ನು ಬಳಸಿರುವ ಸಂದರ‍್ಬವೇ ಅವುಗಳನ್ನು ಯಾವ ಹುರುಳಿನಲ್ಲಿ ಬಳಸಲಾಗಿದೆ ಎಂಬುದನ್ನು ತಿಳಿಸುತ್ತದೆ; ‘ಹುಡುಗ ಮಾರ‍್ಗದ ಮದ್ಯದಲ್ಲಿ ನಿಂತಿದ್ದಾನೆ’ ಎಂದು ಬರೆದರೆ, ಅದರಲ್ಲಿ ಮದ್ಯದಲ್ಲಿ ಎಂಬುದನ್ನು ‘ನಡುವೆ’ ಎಂಬ ಹುರುಳಿನಲ್ಲಿ ಬಳಸಲಾಗಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ; ಇಲ್ಲಿ ಮದ್ಯ ಎಂಬುದಕ್ಕೆ ‘ಸಾರಾಯಿ’ ಎಂಬ ಹುರುಳಿರಬಹುದೆಂದು ಯಾರಿಗೂ ಅನಿಸುವುದಿಲ್ಲ. ಇದನ್ನು ಮಧ್ಯದಲ್ಲಿ ಎಂಬುದಾಗಿ ನೋಡಿ ಬಳಕೆಯಾದವರಿಗೆ ಮಾತ್ರ ಇದು ತಪ್ಪೆಂದು ಅನಿಸುತ್ತದೆ, ಅಶ್ಟೆ. ಹುರುಳಿನ ಗೊಂದಲವೇನೂ ಉಂಟಾಗುವುದಿಲ್ಲ.
ಎರಡು ಹುರುಳುಗಳಿರುವ ಪದಗಳನ್ನು ಅವುಗಳ ಎರಡು ಹುರುಳೂ ಒಟ್ಟಿಗೆ ಬರುವ ಹಾಗೆ ಬರೆಯುವುದು ಕವಿಗಳು, ಮತ್ತು ಬೇಕೆಂದೇ ತಮ್ಮ ಓದುಗರನ್ನು ಗೊಂದಲದಲ್ಲಿ ಸಿಲುಕಿಸಲು ಬಯಸುವವರು ಮಾತ್ರ. ಬಾಕಿ ಉಳಿದವರೆಲ್ಲ ಓದುಗರ ಗಮನಕ್ಕೆ ತಮ್ಮ ಮನಸ್ಸಿನಲ್ಲಿರುವ ಒಂದು ಹುರುಳು ಮಾತ್ರ ಬರುವ ಹಾಗೆ ಬರೆಯುತ್ತಾರೆ; ಈ ವಿಶಯದಲ್ಲಿ ಗೊಂದಲವೇನಾದರೂ ಉಂಟಾಗಬಹುದೆಂಬ ಸಂಶಯ ಅವರಿಗೆ ಇದೆಯಾದಲ್ಲಿ, ಅವರು ಬೇರೆಯೇ ಪದವನ್ನು ಬಳಸುತ್ತಾರೆ, ಇಲ್ಲವೇ ಗೊಂದಲವಾಗದಂತೆ ಸೊಲ್ಲನ್ನು ಮಾರ‍್ಪಡಿಸಿ ಬರೆಯುತ್ತಾರೆ.
ಇದಲ್ಲದೆ, ಸಾಮಾನ್ಯವಾಗಿ ಅಂತಹ ಪದಗಳಿಗಿರುವ ಎರಡು (ಇಲ್ಲವೇ ಹೆಚ್ಚು) ಹುರುಳುಗಳಲ್ಲಿ ಸಂದರ‍್ಬಕ್ಕೆ ಹೊಂದಿಕೆಯಾಗುವಂತಹ ಒಂದು ಹುರುಳು ಮಾತ್ರ ಓದುಗರ ಗಮನಕ್ಕೆ ಬರುತ್ತದೆ. ಅವಕ್ಕೆ ಇನ್ನೊಂದು ಹುರುಳೂ ಇದೆಯೆಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಕೆಲವೊಮ್ಮೆ ಈ ವಿಶಯವನ್ನು ಅವರ ಗಮನಕ್ಕೆ ತರಬೇಕಿದ್ದಲ್ಲಿ, ಆ ಪದಗಳನ್ನು ಅವುಗಳ ಇನ್ನೊಂದು ಹುರುಳಿಗೆ ಹೊಂದಿಕೆಯಾಗುವಂತಹ ಬೇರೊಂದು ಸೊಲ್ಲಿನಲ್ಲಿ ಬಳಸಿ ತೋರಿಸಬೇಕಾಗುತ್ತದೆ.
ಮಹಾಪ್ರಾಣ, ಷಕಾರ, ಋಕಾರ ಮೊದಲಾದವುಗಳನ್ನು ಬಳಸದಿದ್ದರೆ ಹುರುಳಿನ ಮಟ್ಟಿಗೆ ಯಾವ ಗೊಂದಲವೂ ಉಂಟಾಗುವುದಿಲ್ಲ ಎಂಬ ಈ ಮಾತನ್ನು ಬೆಂಬಲಿಸುವ ಇನ್ನೊಂದು ವಿಶಯವೇನೆಂದರೆ, 2006 ರ ಬಳಿಕ ನಾನು ಬರೆದ ಎಲ್ಲಾ ಒಂಬತ್ತು ಪುಸ್ತಕಗಳಲ್ಲೂ (ಒಟ್ಟು 2600 ಪುಟಗಳು) ಈ ಬರಿಗೆಗಳನ್ನು ಬಳಸಿಲ್ಲ; ಹಾಗಿದ್ದರೂ, ಇದುವರೆಗೆ ಅವನ್ನು ಓದಿದವರಲ್ಲಿ ಯಾರೊಬ್ಬರೂ ಅದರಿಂದಾಗಿ ವಿಶಯವನ್ನು ತಿಳಿದುಕೊಳ್ಳುವಲ್ಲಿ ತಮಗೆ ತೊಂದರೆಯಾಗಿದೆಯೆಂದು ಹೇಳಿಲ್ಲ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)