Posts Tagged ‘ಕನ್ನಡ ನುಡಿ’

ನಿಮ್ಮ ಮಗುವಿಗೆ ಇಂಗ್ಲಿಶ್ ನುಡಿ ಮಾತ್ರ ಸಾಕೇ?

ನುಡಿಯರಿಮೆಯ ಇಣುಕುನೋಟ – 6

ಇವತ್ತು ಹಲವು ಜನರು ತಮ್ಮ ಮಕ್ಕಳನ್ನು ಇಂಗ್ಲಿಶ್ಕಲಿಕೆನುಡಿಯ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ; ಇಂತಹ ಹಲವು ಶಾಲೆಗಳಲ್ಲಿ ಮಕ್ಕಳು ಇಂಗ್ಲಿಶ್ ನುಡಿಯನ್ನು ಮಾತ್ರ ಬಳಸಬೇಕು, ಕನ್ನಡವನ್ನು ಬಳಸಲೇ ಕೂಡದು ಎಂಬ ಒಂದು ಕಟ್ಟಲೆಯನ್ನು ಮಾಡಿರುತ್ತಾರೆ. ಮಕ್ಕಳು ಶಾಲೆಯಲ್ಲಿ ಇಂಗ್ಲಿಶ್ ನುಡಿಯನ್ನು ಮಾತ್ರವೇ ಬಳಸುತ್ತಿದ್ದಲ್ಲಿ ಅವರಿಗೆ ಅದನ್ನು ಬೇಗನೆ ಮತ್ತು ತಪ್ಪಿಲ್ಲದೆ ಬಳಸಲು ಬರಬಹುದೆಂಬ ತಪ್ಪು ಅನಿಸಿಕೆಯೇ ಈ ಕಟ್ಟಲೆಗೆ ಕಾರಣ.

ಕೆಲವು ಮನೆಗಳಲ್ಲಿಯೂ ಇದೇ ಕಾರಣಕ್ಕಾಗಿ ಮಕ್ಕಳೊಂದಿಗೆ ಅವರ ತಾಯ್ತಂದೆಯರು ಇಂಗ್ಲಿಶ್ ನುಡಿಯನ್ನೇ ಬಳಸತೊಡಗುತ್ತಾರೆ. ಆದರೆ, ಹೀಗೆ ಮಾಡುವುದರಿಂದ ಮಕ್ಕಳು ಚಿಕ್ಕಂದಿನಲ್ಲಿ ಕಲಿತಿದ್ದ ಕನ್ನಡ ನುಡಿಯನ್ನು ಮರೆಯುತ್ತಾ ಹೋಗುತ್ತಾರೆ, ಮತ್ತು ಕೊನೆಗೆ ಅವರಿಗೆ ಅದರಲ್ಲಿ ಮಾತನಾಡಲು ಬರುವುದಿಲ್ಲವೆಂದೇ ಆಗುತ್ತದೆ.

ಮಕ್ಕಳ ಬೆಳವಣಿಗೆಯ ಮಟ್ಟಿಗೆ ಇದು ಸರಿಯೇ ಎಂಬುದನ್ನು ಈ ಶಾಲೆಗಳನ್ನು ನಡೆಸುವವರಾಗಲಿ, ಇಲ್ಲವೇ ಮಕ್ಕಳ ತಾಯಿತಂದೆಯರಾಗಲಿ ಪರಿಶೀಲಿಸಿದ ಹಾಗಿಲ್ಲ. ಇಂಗ್ಲಿಶ್ ಕಲಿಯುವ ಮಕ್ಕಳು ಅದರೊಂದಿಗೆ ತರಗತಿಯಲ್ಲಿ ತಮ್ಮ ತಾಯ್ನುಡಿಯನ್ನೂ ಬಳಸುತ್ತಿದ್ದರೆ ಅವರಿಗೆ ಸರಿಯಾಗಿ ಇಂಗ್ಲಿಶ್ ಕಲಿಯಲು ಬರುವುದಿಲ್ಲ ಎಂಬ ಅನಿಸಿಕೆ ಹಿಂದಿನ ಕಾಲದಲ್ಲಿತ್ತು; ಆದರೆ, ಕಳೆದ ಕೆಲವು ವರ‍್ಶಗಳಲ್ಲಿ, ಅದರಲ್ಲೂ ಕಳೆದ ಹತ್ತು-ಹದಿನಯ್ದು ವರ‍್ಶಗಳಲ್ಲಿ ನಡೆಸಿದ ಅರಕೆಗಳೆಲ್ಲವೂ ಇದು ತಪ್ಪು ಅನಿಸಿಕೆಯೆಂಬುದನ್ನು ತೋರಿಸಿಕೊಟ್ಟಿವೆ.

ಒಂದು ನುಡಿಯನ್ನು ಶಾಲೆಗೆ ಬರುವ ಮೊದಲೇ ಕಲಿತಿರುವ ಮಕ್ಕಳು ಎರಡನೇ ನುಡಿಯನ್ನು ಆ ನುಡಿಯ ಮೂಲಕವೇನೇ ಕಲಿಯಬೇಕಾಗುತ್ತದೆ; ಮೊದಲಿಗೆ ಅವರು ತಮ್ಮ ತಾಯ್ನುಡಿಯ ಪದಗಳನ್ನು ಮತ್ತು ಕಟ್ಟಲೆಗಳನ್ನು ಎರಡನೇ ನುಡಿಯ ಮಾತುಗಳಲ್ಲಿ ಸೇರಿಸಿ ಹೇಳಬಹುದು; ಆದರೆ, ಇದು ಅವರ ಕಲಿಕೆಯ ಒಂದು ಹಂತವನ್ನು ಸೂಚಿಸುತ್ತದೆಯಲ್ಲದೆ, ಅವರು ಕಲಿಕೆಯಲ್ಲಿ ಗೊಂದಲಗೊಂಡಿರುವುದನ್ನಾಗಲಿ, ತಪ್ಪು ದಾರಿ ಹಿಡಿದಿರುವುದನ್ನಾಗಲಿ ಸೂಚಿಸುವುದಿಲ್ಲ. ಕಲಿಕೆ ಮುಂದುವರಿದಂತೆಲ್ಲ ಅವರು ಈ ಎರಡು ನುಡಿಗಳ ಪದಗಳನ್ನು ಮತ್ತು ಕಟ್ಟಲೆಗಳನ್ನು ಬೇರೆ ಬೇರಾಗಿ ಇರಿಸಿಕೊಳ್ಳಲು ಕಲಿಯುತ್ತಾರೆ.

ಮೊದಲನೇ ನುಡಿಯನ್ನು ಅವರು ಶಾಲೆಯಲ್ಲಿ ಬಳಸಲೇಬಾರದೆಂಬುದಾಗಿ ಅವರ ಮೇಲೆ ಒತ್ತಾಯ ಹೇರಿದರೆ, ಅವರಿಗೆ ಅದರ ಮೇಲೆ ಕೀಳರಿಮೆಯುಂಟಾಗುತ್ತದೆ ಮಾತ್ರವಲ್ಲ, ಅವರ ಎರಡನೇ ನುಡಿಯ ಕಲಿಕೆಯೂ ತೊಡಕಿನದಾಗುತ್ತದೆ. ಮಕ್ಕಳಿಗೆ ಚನ್ನಾಗಿ ತಿಳಿದಿರುವ ನುಡಿಯನ್ನು ಉಳಿಸಿ, ಅದರ ಮೂಲಕ ಎರಡನೆಯ ನುಡಿಯನ್ನು ಕಲಿಸುವುದೇ ಸರಿಯಾದ ದಾರಿ.

ಇದಲ್ಲದೆ, ಈ ಎರಡು ನುಡಿಗಳ ಬಳಕೆಯಲ್ಲೂ ಮಕ್ಕಳು ಒಂದೇ ರೀತಿಯಲ್ಲಿ ಪಳಗುವಂತೆ ಮಾಡುವ ಮೂಲಕ, ಅವರು ಒಂದು ನುಡಿಯನ್ನು ಮಾತ್ರವೇ ಬಳಸಬಲ್ಲ ಮಕ್ಕಳಿಗಿಂತ ಜಾಣತನದಲ್ಲಿ, ಬುದ್ದಿವಂತಿಕೆಯಲ್ಲಿ, ಮತ್ತು ನುಡಿಯನ್ನು ಬಳಸಲು ಬೇಕಾಗುವ ಹಲವು ಬಗೆಯ ಚಳಕಗಳಲ್ಲಿ ಮುಂದೆ ಹೋಗುತ್ತಾರೆ ಎಂಬುದನ್ನು ಇತ್ತೀಚೆಗೆ ನಡೆಸಿದ ಹಲವು ಅರಕೆಗಳು ತೋರಿಸಿಕೊಟ್ಟಿವೆ.

ಎರಡು ನುಡಿಗಳನ್ನು ಬಳಸುವವರು ಎರಡು ಬಗೆಯ ಪದಗಳನ್ನು ಮತ್ತು ಕಟ್ಟಲೆಗಳನ್ನು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅವುಗಳಲ್ಲಿ ಒಂದು ನುಡಿಯನ್ನು ಬಳಸುವಾಗ ಆ ನುಡಿಗೆ ಸಂಬಂದಿಸಿದ ಪದಗಳು ಮತ್ತು ಕಟ್ಟಲೆಗಳು ಮಾತ್ರ ಬಳಕೆಯಾಗುವಂತೆ, ಮತ್ತು ಇನ್ನೊಂದು ನುಡಿಗೆ ಸಂಬಂದಿಸಿದ ಪದಗಳು ಮತ್ತು ಕಟ್ಟಲೆಗಳು ಬಳಕೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಮಾಡುವಲ್ಲಿ ಪಳಗಿರುವ ಮಕ್ಕಳು ತಾವು ಕಲಿತ ಈ ಚಳಕವನ್ನು ಬೇರೆ ಕೆಲಸಗಳಲ್ಲೂ ಬಳಸಬಲ್ಲರು.

ಎತ್ತುಗೆಗಾಗಿ, ಯಾವುದಾದರೊಂದು ತೊಡಕನ್ನು ಬಗೆಹರಿಸಬೇಕಾದಾಗ, ಈ ಮಕ್ಕಳು ಅದಕ್ಕೆ ಸಂಬಂದಿಸಿದ ವಿಶಯಗಳನ್ನು ಮಾತ್ರವೇ ಗಮನದಲ್ಲಿರಿಸಿಕೊಂಡು, ಅದಕ್ಕೆ ಸಂಬಂದಿಸದ ವಿಶಯಗಳನ್ನು ದೂರ ಇರಿಸಬಲ್ಲರು. ಹಾಗಾಗಿ, ತೊಡಕುಗಳನ್ನು ಬಗೆಹರಿಸುವಲ್ಲಿ ಅವರು ಒಂದು ನುಡಿಯಲ್ಲಿ ಮಾತ್ರವೇ ಪಳಗಿರುವ ಮಕ್ಕಳಿಗಿಂತ ಮುಂದಿರುತ್ತಾರೆ.

ಎರಡು ನುಡಿಗಳಲ್ಲಿ ಪಳಗಿರುವ ಮಕ್ಕಳು ಸಂದರ‍್ಬಕ್ಕನುಸಾರವಾಗಿ ಒಂದು ನುಡಿಯಿಂದ ಇನ್ನೊಂದು ನುಡಿಗೆ ನೆಗೆಯುತ್ತಿರಬಲ್ಲರು; ಒಂದು ಮಾತನ್ನು ಒಂದು ನುಡಿಯಲ್ಲಿ ಹೇಳಿ, ಒಡನೆಯೇ ಇನ್ನೊಂದು ಮಾತನ್ನು ಇನ್ನೊಂದು ನುಡಿಯಲ್ಲಿ ಹೇಳಬಲ್ಲರು; ಎಂದರೆ, ಒಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸುತ್ತಿರುವವರು ಒಡನೆಯೇ ಇನ್ನೊಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸಲು ತೊಡಗಬಲ್ಲರು. ಯಾವ ಸಂದರ‍್ಬದಲ್ಲಿ ಯಾವ ನುಡಿಯನ್ನು ಬಳಸಬೇಕು ಎಂಬುದೂ ಅವರಿಗೆ ತಿಳಿದಿರುತ್ತದೆ.

ಎರಡು ನುಡಿಗಳಲ್ಲಿ ಪಳಗುತ್ತಿರುವಾಗ ಪಡೆದ ಈ ಚಳಕವನ್ನೂ ಅವರು ಬೇರೆ ಕೆಲಸಗಳನ್ನು ನಡೆಸುವಲ್ಲಿ ಬಳಸಿಕೊಳ್ಳಬಲ್ಲರು. ಹಾಗಾಗಿ, ಒಂದು ನುಡಿಯನ್ನು ಮಾತ್ರವೇ ತಿಳಿದಿರುವ ಮಕ್ಕಳ ಮನಸ್ಸಿಗಿಂತ ಅವರ ಮನಸ್ಸು ಹೊಸ ಹೊಸ ಸಂದರ‍್ಬಗಳಿಗೆ ಹೊಂದಿಕೊಳ್ಳುವಂತಹ ಗುಣವನ್ನು ಹೆಚ್ಚು ಪಡೆದಿರುತ್ತದೆ, ಮತ್ತು ಈ ಕಾರಣಕ್ಕಾಗಿ ಅವರಿಗೆ ಹೆಚ್ಚು ತಾಳ್ಮೆಯಿರುತ್ತದೆ.

ಬೇರ‍್ಪಡಿಸುವುದು ಮತ್ತು ಒಂದೆಡೆ ಸೇರಿಸುವುದು ಎಂಬುದಾಗಿ ಎರಡು ಬಗೆಯ ಬಗೆತಗಳಿವೆ: ಒಂದು ವಸ್ತುವಿಗೆ ಎಶ್ಟೆಲ್ಲಾ ಬಳಕೆಗಳಿವೆ ಎಂಬುದನ್ನು ಕಂಡುಕೊಳ್ಳುವುದು ಬೇರ‍್ಪಡಿಸುವ ಬಗೆತ, ಮತ್ತು ಒಂದು ತೊಡಕಿಗೆ ಸಂಬಂದಿಸಿದ ಹಲವಾರು ವಿಶಯಗಳನ್ನು ಒಟ್ಟು ಸೇರಿಸಿ ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದು ಒಂದೆಡೆ ಸೇರಿಸುವ ಬಗೆತ. ಈ ಎರಡು ಬಗೆಯ ಬಗೆತಗಳನ್ನೂ ಎರಡು ನುಡಿಗಳನ್ನು ತಿಳಿದಿರುವ ಮಕ್ಕಳು ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಹೆಚ್ಚು ಚನ್ನಾಗಿ ನಡೆಸಬಲ್ಲರು.

ಒಂದೇ ನುಡಿಯನ್ನು ತಿಳಿದಿರುವ ಮಕ್ಕಳು ಓದುತ್ತಿರುವಾಗ, ಅವರ ಗಮನ ಪದಗಳ ಉಲಿಗಳ ಮೇಲಿರುತ್ತದೆ;  ಇದಕ್ಕೆ ಬದಲು, ಎರಡು ನುಡಿಗಳನ್ನು ಚನ್ನಾಗಿ ತಿಳಿದಿರುವ ಮಕ್ಕಳ ಗಮನ ಪದಗಳ ಹುರುಳಿನ ಮೇಲಿರುತ್ತದೆ. ಹಾಗಾಗಿ, ಈ ಮಕ್ಕಳು ಬರಹಗಳ ಹುರುಳನ್ನು ತಿಳಿದುಕೊಳ್ಳುವಲ್ಲಿ ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಎರಡು-ಮೂರು ತರಗತಿಗಳಶ್ಟು ಮುಂದಿರುತ್ತಾರೆ.

ಎರಡು ನುಡಿಗಳ ತಿಳಿವು ಮಕ್ಕಳ ಮುಂದೆ ಎರಡು ಸಂಸ್ಕ್ರುತಿಗಳನ್ನು ತೆರೆದಿಡುತ್ತದೆ; ಆ ಎರಡು ನುಡಿಗಳ ಬರಹಗಳನ್ನೂ ಓದಲು ಕಲಿತಲ್ಲಿ, ಎರಡು ಬಗೆಯ ಬರಹ ಸಂಸ್ಕ್ರುತಿಗಳೂ ಅವರದಾಗುತ್ತವೆ. ಈ ತಿಳಿವು ಮುಂದೆ ಜೀವನದುದ್ದಕ್ಕೂ ಅವರ ನೆರವಿಗೆ ಬರುತ್ತದೆ.

ತಮಗೆ ತಿಳಿದಿರುವ ನುಡಿಯಲ್ಲಿ ಮಕ್ಕಳು ಹೆಚ್ಚು ಸುಲಬವಾಗಿ ಓದಲು ಮತ್ತು ಬರೆಯಲು ಕಲಿಯಬಲ್ಲರು. ಹಾಗಾಗಿ, ಮಕ್ಕಳಿಗೆ ಮೊದಲು ಅವರಿಗೆ ತಿಳಿದಿರುವ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಸಿ, ಆಮೇಲೆ ಇಂಗ್ಲಿಶ್‌ನಲ್ಲಿ ಕಲಿಸುವುದೇ ಸರಿಯಾದ ದಾರಿ. ಯಾಕೆಂದರೆ, ಮೊದಲನೇ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಯುವಾಗ ಪಡೆದ ಚಳಕಗಳನ್ನು ಅವರು ಸುಲಬವಾಗಿ ತಮ್ಮ ಎರಡನೇ ನುಡಿಯ ಕಲಿಕೆಯಲ್ಲೂ ಬಳಸಿಕೊಳ್ಳಬಲ್ಲರು.

ಇಂಗ್ಲಿಶ್‌ನಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆಯಿಂದಾಗಿ, ಅದರ ಪದಗಳ ಬರವಣಿಗೆಯಲ್ಲಿ ಬರುವ ಬರಿಗೆಗಳಿಗೂ ಅವುಗಳ ಓದಿನಲ್ಲಿ ಬರುವ ಉಲಿಗಳಿಗೂ ನಡುವೆ ಸಂಬಂದವಿದೆಯೆಂಬುದು ಅದನ್ನು ಓದಲು ಕಲಿಯುವವರಲ್ಲಿ ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ. ಆದರೆ, ಇದನ್ನು ಗಮನಿಸಲು ಬಾರದಿರುವ ಮಕ್ಕಳಿಗೆ ಬರಹಗಳನ್ನು ಸಲೀಸಾಗಿ ಓದಲು ಬರುವುದಿಲ್ಲ.

ಕನ್ನಡ ಬರಹದಲ್ಲಿ ಬರಿಗೆಗಳಿಗೂ ಉಲಿಗಳಿಗೂ ನಡುವೆ ನೇರವಾದ ಸಂಬಂದವಿದೆ. ಸಂಸ್ಕ್ರುತದ ಎರವಲು ಪದಗಳು ಮಾತ್ರ ಇದಕ್ಕೆ ಹೊರಪಡಿಕೆಗಳಾಗಿವೆ. ಹಾಗಾಗಿ, ಮಕ್ಕಳಿಗೆ ಮೊದಲು ಕನ್ನಡದವೇ ಆದ ಪದಗಳು ಮಾತ್ರ ಇರುವ ಬರಹಗಳನ್ನು ಓದಲು ಕಲಿಸಿದಲ್ಲಿ, ಅವರು ಬಹಳ ಬೇಗನೆ ಅವನ್ನು ಸಲೀಸಾಗಿ ಓದುವುದು ಹೇಗೆಂಬುದನ್ನು ತಿಳಿದುಕೊಳ್ಳಬಲ್ಲರು.

ಅವರಿಗೆ ಇಂಗ್ಲಿಶ್ ಬರಹಗಳನ್ನು ಓದಲು ಆಮೇಲೆ ಕಲಿಸಿದಲ್ಲಿ, ಕನ್ನಡದ ಓದಿನಲ್ಲಿ ತಾವು ಪಡೆದ ಚಳಕವನ್ನು ಅವರು ಅಲ್ಲಿಯೂ ಬಳಸಿ ಹೆಚ್ಚು ಬೇಗನೆ ಅವನ್ನು ಸರಿಯಾಗಿ ಓದಲು ಕಲಿಯಬಲ್ಲರು.

ಬರೆಯುವ ಕೆಲಸವನ್ನೂ ಮಕ್ಕಳು ತಮಗೆ ಚನ್ನಾಗಿ ತಿಳಿದಿರುವ ಕನ್ನಡದಲ್ಲಿ ಹೆಚ್ಚು ಬೇಗನೆ ನಡೆಸಲು ಕಲಿಯಬಲ್ಲರು, ಮತ್ತು ಆಮೇಲೆ ಇಂಗ್ಲಿಶ್‌ನಲ್ಲಿ ಬರೆಯಬೇಕಾದಾಗ, ಆ ಚಳಕವನ್ನೇ ಅಲ್ಲಿಯೂ ಬಳಸಿಕೊಳ್ಳಬಲ್ಲರು.

ಇಂಗ್ಲಿಶ್ ನುಡಿಯ ಮೇಲಿರುವ ವ್ಯಾಮೋಹದಿಂದಾಗಿ, ಕನ್ನಡ ನುಡಿ ಕೊಡಬಲ್ಲ ಈ ಎಲ್ಲಾ ಪ್ರಯೋಜನಗಳನ್ನೂ ಮಕ್ಕಳು ಕಳೆದುಕೊಳ್ಳುವಂತೆ ಮಾಡುವುದು ಹೆಡ್ಡತನವಲ್ಲವೇ?

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಯಾವುದು ಕನ್ನಡದ ಸೊಗಡು?

ನುಡಿಯರಿಮೆಯ ಇಣುಕುನೋಟ – 5

ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳನ್ನು ಕನ್ನಡ ಬರಹದಿಂದ ತೆಗೆದುಹಾಕಿದರೆ ಕನ್ನಡದಸೊಗಡು (ಎಂದರೆ ಸಂಸ್ಕ್ರುತಿ) ಅಳಿದುಹೋಗುತ್ತದೆಯೆಂದು ಕೆಲವರಿಗೆ ಅನಿಸುತ್ತದೆ. ಆದರೆ, ನಿಜಕ್ಕೂ ಈ ಮಾರ‍್ಪಾಡು ಕನ್ನಡದ ಸೊಗಡನ್ನು ಉಳಿಸುತ್ತದೆಯಲ್ಲದೆ ಅಳಿಸುವುದಿಲ್ಲ.

ಕನ್ನಡ ಕಾವ್ಯಗಳಲ್ಲಿ ತುಂಬಾ ಸಂಸ್ಕ್ರುತ (ತತ್ಸಮ) ಪದಗಳನ್ನು ಬಳಸಿದೆವಾದರೆ ಅವು ಕಕ್ಕಸ(ಕರ‍್ಕಶ)ವಾಗುತ್ತವೆಯೆಂದು ಕವಿರಾಜಮಾರ‍್ಗದಲ್ಲಿ ಹೇಳಲಾಗಿದೆ; ಆ ರೀತಿ ಕಕ್ಕಸವಾಗದಂತೆ ತನ್ನ ಕಾವ್ಯಗಳಲ್ಲಿ ತದ್ಬವ ಪದಗಳನ್ನು ಮಾತ್ರವೇ ಬಳಸಿರುವ ಆಂಡಯ್ಯನಿಗೆ ‘ಕನ್ನಡದ ಕಾವ’ ಎಂದರೆ, ಕನ್ನಡದ ಸೊಗಡನ್ನು (ಸಂಸ್ಕ್ರುತಿಯನ್ನು) ಕಾಪಾಡಿದವನು ಎಂಬ ಬಿರುದನ್ನು ಕೊಡಲಾಗಿದೆ. ತತ್ಸಮ ಪದಗಳನ್ನು ಬಳಸದುದರಿಂದಾಗಿ ಆತನು ಕನ್ನಡದ ಸೊಗಡನ್ನು ಕಳೆದಿದ್ದಾನೆಂದು ಯಾರೂ ಆತನನ್ನು ದೂರಿಲ್ಲ.

ಸಂಸ್ಕ್ರುತ ಎರವಲುಗಳನ್ನು ಕನ್ನಡಿಗರು ಹೇಗೆ ಓದುತ್ತಾರೋ ಹಾಗೆಯೇ ಬರೆಯೋಣ ಎನ್ನುವುದೂ ಇದೇ ರೀತಿಯಲ್ಲಿ ಕನ್ನಡದ ಸೊಗಡನ್ನು ಉಳಿಸುವ ಪ್ರಯತ್ನವಲ್ಲದೆ ಅಳಿಸುವ ಪ್ರಯತ್ನವಲ್ಲ. ಯಾಕೆಂದರೆ, ಸಂಸ್ಕ್ರುತ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆದಲ್ಲಿ, ಅವು ತದ್ಬವ ಪದಗಳ ಹಾಗೆ ಕನ್ನಡದ ಸೊಗಡನ್ನು ಕಾಪಾಡುತ್ತವೆ.

ಸಂಸ್ಕ್ರುತ ಎರವಲುಗಳನ್ನು ತದ್ಬವರೂಪದಲ್ಲಿ ಬರೆಯುವಾಗ, ಅವುಗಳಲ್ಲಿರುವ ಶ-ಷಗಳ ನಡುವಿನ ವ್ಯತ್ಯಾಸ, ರು-ಋಗಳ ನಡುವಿನ ವ್ಯತ್ಯಾಸ, ಮತ್ತು ಅಲ್ಪಪ್ರಾಣ-ಮಹಾಪ್ರಾಣಗಳ ನಡುವಿನ ವ್ಯತ್ಯಾಸಗಳು ಇಲ್ಲವಾಗುತ್ತವೆ; ಸಂಸ್ಕ್ರುತ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಓದುವ ಹಾಗೆ ಬರೆಯುವಾಗಲೂ ಇಂತಹವೇ ವ್ಯತ್ಯಾಸಗಳು ಇಲ್ಲವಾಗುತ್ತವೆ. ಹಾಗಾಗಿ, ತದ್ಬವ ಪದಗಳ ಬಳಕೆಯಿಂದ ಹೇಗೆ ಕನ್ನಡ ನುಡಿಯ ಸಂಸ್ಕ್ರುತಿ ನಾಶವಾಗುವುದಿಲ್ಲವೋ ಹಾಗೆಯೇ ಸಂಸ್ಕ್ರುತ ಎರವಲುಗಳನ್ನು ಓದುವ ಹಾಗೆ ಬರೆಯುವುದರಿಂದಲೂ ಕನ್ನಡ ನುಡಿಯ ಸಂಸ್ಕ್ರುತಿ ನಾಶವಾಗುವುದಿಲ್ಲ.

ಹೆಚ್ಚಿನ ಕನ್ನಡಿಗರೂ ಮಹಾಪ್ರಾಣ, ಷಕಾರ, ಋಕಾರ ಮೊದಲಾದುವನ್ನು ಮಾತನಾಡುವಾಗ ಇಲ್ಲವೇ ಓದುವಾಗ ಬಳಸುವುದಿಲ್ಲ ಎಂಬುದಾಗಿ ನಾನು ಹೇಳಿರುವುದು ಬರಿಯ ಊಹೆಯ ಮೇಲಲ್ಲ. ಅದಕ್ಕೆ ಸಾಕಶ್ಟು ಅರಕೆಯ ಆದಾರವಿದೆ: ಸುಮಾರು ಒಂದೂವರೆ ತಿಂಗಳು ಮಯ್ಸೂರು ಜಿಲ್ಲೆಯಲ್ಲೆಲ್ಲ ಸುತ್ತಾಡಿ, ಅಲ್ಲಿನ ಬೇರೆ ಬೇರೆ ಜಾತಿ ಮತ್ತು ಪಂಗಡಗಳ ಜನರ ಮಾತನ್ನು ಗಮನಿಸಿದ್ದೇನೆ. ಆಮೇಲೆ, ಅಂತಹದೇ ಅರಕೆಯನ್ನು ದಕ್ಶಿಣ ಕನ್ನಡ ಮತ್ತು ಗುಲ್ಬರ‍್ಗ ಜಿಲ್ಲೆಗಳಲ್ಲೂ ನಡೆಸಿದ್ದೇನೆ.

ಇದಲ್ಲದೆ, ಹಲವು ಮಂದಿ ಸಂಸ್ಕ್ರುತ ಪಂಡಿತರ ಕನ್ನಡ ಮಾತನ್ನೂ ನಾನು ಗಮನಿಸಿದ್ದೇನೆ. ಬರಿಯ ಪದಗಳನ್ನು ಉಲಿದು ತೋರಿಸುವಾಗ ಅವರು ಈ ವ್ಯತ್ಯಾಸಗಳನ್ನು ಹೆಚ್ಚುಕಡಿಮೆ ಸರಿಯಾಗಿಯೇ ಉಳಿಸಿಕೊಳ್ಳುತ್ತಾರೆ; ಆದರೆ, ಅವನ್ನೇ ಮಾತಿನಲ್ಲಿ ಬಳಸುವಾಗ ಈ ಎಲ್ಲಾ ವ್ಯತ್ಯಾಸಗಳೂ ಇಲ್ಲವಾಗುತ್ತವೆ.

ನಿಜಕ್ಕೂ ಶ-ಷಗಳ ನಡುವೆ, ಇಲ್ಲವೇ ಮಹಾಪ್ರಾಣ-ಅಲ್ಪಪ್ರಾಣಗಳ ನಡುವೆ ಕನ್ನಡಿಗರ ಮಾತಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ; ಯಾರಾದರೂ ಈ ವ್ಯತ್ಯಾಸ ಕೇಳಿಸುವ ಹಾಗೆ ಮಾತನಾಡಿದರೆ, ಕೇಳುವವರಿಗೆ ಅದು ಅಸ್ವಾಬಾವಿಕವೆಂದು ಅನಿಸುತ್ತದೆ.

ಕನ್ನಡಿಗರ ಮಾತಿನಲ್ಲಿ ಇಲ್ಲವೇ ಓದಿನಲ್ಲಿಲ್ಲದ ಈ ಸಂಸ್ಕ್ರುತ ಪದಗಳ ವ್ಯತ್ಯಾಸವನ್ನು ಕನ್ನಡ ಬರಹದಲ್ಲಿ ಸುಮಾರು ಒಂದೂವರೆ ಸಾವಿರ ವರ‍್ಶಗಳಿಂದಲೂ ಉಳಿಸಿಕೊಂಡು ಬರಲಾಗಿದೆ. ಮೊನ್ನೆ ಮೊನ್ನೆಯ ವರೆಗೂ ಕನ್ನಡ ಬರಹವನ್ನು ಮೇಲ್ವರ‍್ಗದ ಕೆಲವೇ ಕೆಲವು ಮಂದಿ ಮಾತ್ರ ಬಳಸುತ್ತಿದ್ದರಾದ ಕಾರಣ, ಇದು ಅಂತಹ ತೊಡಕಿನ ಸಂಗತಿಯೆಂದು ಯಾರಿಗೂ ಅನಿಸಿರಲಿಲ್ಲ.

ಆದರೆ, ಇವತ್ತು ಎಲ್ಲಾ ವರ‍್ಗದ ಜನರೂ ಕನ್ನಡ ಬರಹವನ್ನು ಕಲಿತು ಬಳಸಲು ತೊಡಗಬೇಕಾಗಿದೆ; ಯಾಕೆಂದರೆ, ಬರಹವನ್ನು ಬಳಸಲಾರದವರು ತಮ್ಮ ಜೀವನದಲ್ಲಿ ಒಂದು ಅತ್ಯಮೂಲ್ಯವಾದ ಸಾದನದಿಂದ ವಂಚಿತರಾಗುತ್ತಾರೆ. ಒಂದು ನಾಡಿನಲ್ಲಿ ಅಂತಹ ಜನ ಹೆಚ್ಚು ಇದ್ದಶ್ಟೂ ಆ ನಾಡು ಹಿಂದೆಯೇ ಉಳಿದಿರುತ್ತದೆ. ಇವತ್ತು ಬರಹಕ್ಕೆ ಅಂತಹ ಪ್ರಾಮುಕ್ಯತೆ ಬಂದಿದೆ.

ಹಾಗಾಗಿ, ಕನ್ನಡ ಬರಹವನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ಒಂದು ದೊಡ್ಡ ತೊಡಕಾಗಿರುವ ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡುವುದೇ ಇವತ್ತು ನಮ್ಮ ಮುಂದಿರುವ ಸರಿಯಾದ ದಾರಿ. ಹಾಗೆ ಮಾಡುವುದರಿಂದ ಕನ್ನಡ ಬರಹದ ಸೊಗಡು ಇಲ್ಲವೇ ಸಂಸ್ಕ್ರುತಿ ಉಳಿಯುತ್ತದೆಯಲ್ಲದೆ ಅಳಿಯುವುದಿಲ್ಲ; ಅದರ ಮೇಲೆ ಹೊರಿಸಲಾಗಿರುವ ಬೇರೊಂದು ಸಂಸ್ಕ್ರುತಿಯ ಹೊರೆ ಮಾತ್ರ ಇಲ್ಲವಾಗುತ್ತದೆ.

ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಟ್ಟಲ್ಲಿ ಮದ್ಯ-ಮಧ್ಯ, ದನ-ಧನ ಎಂಬಂತಹ ಹಲವು ಪದಗಳ ನಡುವಿನ ವ್ಯತ್ಯಾಸ ಇಲ್ಲವಾಗಿ, ಗೊಂದಲವುಂಟಾಗಬಲ್ಲುದು ಎಂಬುದಾಗಿ ಕೆಲವರು ವಾದಿಸುತ್ತಾರೆ; ಆದರೆ, ಈ ವಾದದಲ್ಲಿ ನಿಜಕ್ಕೂ ತಿರುಳಿಲ್ಲ. ಯಾಕೆಂದರೆ, ಕನ್ನಡಿಗರ ಮಾತಿನಲ್ಲಿ ಇಲ್ಲವೇ ಓದಿನಲ್ಲಿ, ಮೇಲೆ ವಿವರಿಸಿದ ಹಾಗೆ, ಈ ವ್ಯತ್ಯಾಸ ಹೇಗಿದ್ದರೂ ಇಲ್ಲ, ಮತ್ತು ಇದರಿಂದಾಗಿ ಯಾವ ಗೊಂದಲವೂ ಆಗುತ್ತಾ ಇಲ್ಲ.

ಇದಲ್ಲದೆ, ಯಾವುದೇ ಒಂದು ನುಡಿಯ ಪದನೆರಕೆಯನ್ನು ಬಿಡಿಸಿ ನೋಡಿದರೂ ಅದರಲ್ಲಿ ಒಂದಕ್ಕಿಂತ ಹೆಚ್ಚು ಹುರುಳಿರುವ ನೂರಾರು ಪದಗಳು ಕಾಣಲು ಸಿಗುತ್ತವೆ. ಸಂಸ್ಕ್ರುತದಲ್ಲಂತೂ ಇದು ಇನ್ನೂ ಹೆಚ್ಚು; ಅದರ ಹೆಚ್ಚಿನ ಪದಗಳಿಗೂ ಅಯ್ದು ಇಲ್ಲವೇ ಹೆಚ್ಚು ಹುರುಳುಗಳಿವೆಯೆಂದು ಹೇಳಲಾಗುತ್ತದೆ.

ಸಂಸ್ಕ್ರುತದ ಅರ್ಥ ಪದಕ್ಕೆ ‘ಹುರುಳು’ ಮತ್ತು ‘ಹಣ’ ಎಂಬವುಗಳು ಮಾತ್ರವಲ್ಲದೆ, ‘ಉದ್ದೇಶ’, ‘ಕಾರಣ’, ‘ವಸ್ತು’ ಮೊದಲಾದ ಬೇರೆಯೂ ಹಲವು ಹುರುಳುಗಳಿವೆ; ವಿಷ ಪದಕ್ಕೆ ‘ನಂಜು’ ಎಂಬ ಹುರುಳು ಮಾತ್ರವಲ್ಲದೆ, ‘ನೀರು’ ಮತ್ತು ‘ಸೇವಕ’ ಎಂಬ ಹುರುಳುಗಳೂ ಇವೆ (ಮೋನಿಯರ್ ವಿಲ್ಲಿಯಂಸ್ ಅವರ ಸಂಸ್ಕ್ರುತ-ಇಂಗ್ಲಿಶ್ ಡಿಕ್ಶ್‌ನರಿ ನೋಡಿ). ಆದರೆ, ಈ ರೀತಿ ಒಂದೇ ಪದಕ್ಕೆ ಹಲವು ಹುರುಳುಗಳಿರುವುದನ್ನು ಯಾರೂ ಸಂಸ್ಕ್ರುತದ ಕೊರತೆಯೆಂದು ಹೇಳುವುದಿಲ್ಲ; ಅದಕ್ಕೆ ಬದಲಾಗಿ, ಅದು ಸಂಸ್ಕ್ರುತದ ಶ್ರೀಮಂತಿಕೆಯೆಂದು ಹೇಳುತ್ತಾರೆ.

ಸಾಮಾನ್ಯವಾಗಿ ಪದಗಳನ್ನು ಬಳಸಿರುವ ಸಂದರ‍್ಬವೇ ಅವುಗಳನ್ನು ಯಾವ ಹುರುಳಿನಲ್ಲಿ ಬಳಸಲಾಗಿದೆ ಎಂಬುದನ್ನು ತಿಳಿಸುತ್ತದೆ; ‘ಹುಡುಗ ಮಾರ‍್ಗದ ಮದ್ಯದಲ್ಲಿ ನಿಂತಿದ್ದಾನೆ’ ಎಂದು ಬರೆದರೆ, ಅದರಲ್ಲಿ ಮದ್ಯದಲ್ಲಿ ಎಂಬುದನ್ನು ‘ನಡುವೆ’ ಎಂಬ ಹುರುಳಿನಲ್ಲಿ ಬಳಸಲಾಗಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ; ಇಲ್ಲಿ ಮದ್ಯ ಎಂಬುದಕ್ಕೆ ‘ಸಾರಾಯಿ’ ಎಂಬ ಹುರುಳಿರಬಹುದೆಂದು ಯಾರಿಗೂ ಅನಿಸುವುದಿಲ್ಲ. ಇದನ್ನು ಮಧ್ಯದಲ್ಲಿ ಎಂಬುದಾಗಿ ನೋಡಿ ಬಳಕೆಯಾದವರಿಗೆ ಮಾತ್ರ ಇದು ತಪ್ಪೆಂದು ಅನಿಸುತ್ತದೆ, ಅಶ್ಟೆ. ಹುರುಳಿನ ಗೊಂದಲವೇನೂ ಉಂಟಾಗುವುದಿಲ್ಲ.

ಎರಡು ಹುರುಳುಗಳಿರುವ ಪದಗಳನ್ನು ಅವುಗಳ ಎರಡು ಹುರುಳೂ ಒಟ್ಟಿಗೆ ಬರುವ ಹಾಗೆ ಬರೆಯುವುದು ಕವಿಗಳು, ಮತ್ತು ಬೇಕೆಂದೇ ತಮ್ಮ ಓದುಗರನ್ನು ಗೊಂದಲದಲ್ಲಿ ಸಿಲುಕಿಸಲು ಬಯಸುವವರು ಮಾತ್ರ. ಬಾಕಿ ಉಳಿದವರೆಲ್ಲ ಓದುಗರ ಗಮನಕ್ಕೆ ತಮ್ಮ ಮನಸ್ಸಿನಲ್ಲಿರುವ ಒಂದು ಹುರುಳು ಮಾತ್ರ ಬರುವ ಹಾಗೆ ಬರೆಯುತ್ತಾರೆ; ಈ ವಿಶಯದಲ್ಲಿ ಗೊಂದಲವೇನಾದರೂ ಉಂಟಾಗಬಹುದೆಂಬ ಸಂಶಯ ಅವರಿಗೆ ಇದೆಯಾದಲ್ಲಿ, ಅವರು ಬೇರೆಯೇ ಪದವನ್ನು ಬಳಸುತ್ತಾರೆ, ಇಲ್ಲವೇ ಗೊಂದಲವಾಗದಂತೆ ಸೊಲ್ಲನ್ನು ಮಾರ‍್ಪಡಿಸಿ ಬರೆಯುತ್ತಾರೆ.

ಇದಲ್ಲದೆ, ಸಾಮಾನ್ಯವಾಗಿ ಅಂತಹ ಪದಗಳಿಗಿರುವ ಎರಡು (ಇಲ್ಲವೇ ಹೆಚ್ಚು) ಹುರುಳುಗಳಲ್ಲಿ ಸಂದರ‍್ಬಕ್ಕೆ ಹೊಂದಿಕೆಯಾಗುವಂತಹ ಒಂದು ಹುರುಳು ಮಾತ್ರ ಓದುಗರ ಗಮನಕ್ಕೆ ಬರುತ್ತದೆ. ಅವಕ್ಕೆ ಇನ್ನೊಂದು ಹುರುಳೂ ಇದೆಯೆಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಕೆಲವೊಮ್ಮೆ ಈ ವಿಶಯವನ್ನು ಅವರ ಗಮನಕ್ಕೆ ತರಬೇಕಿದ್ದಲ್ಲಿ, ಆ ಪದಗಳನ್ನು ಅವುಗಳ ಇನ್ನೊಂದು ಹುರುಳಿಗೆ ಹೊಂದಿಕೆಯಾಗುವಂತಹ ಬೇರೊಂದು ಸೊಲ್ಲಿನಲ್ಲಿ ಬಳಸಿ ತೋರಿಸಬೇಕಾಗುತ್ತದೆ.

ಮಹಾಪ್ರಾಣ, ಷಕಾರ, ಋಕಾರ ಮೊದಲಾದವುಗಳನ್ನು ಬಳಸದಿದ್ದರೆ ಹುರುಳಿನ ಮಟ್ಟಿಗೆ ಯಾವ ಗೊಂದಲವೂ ಉಂಟಾಗುವುದಿಲ್ಲ ಎಂಬ ಈ ಮಾತನ್ನು ಬೆಂಬಲಿಸುವ ಇನ್ನೊಂದು ವಿಶಯವೇನೆಂದರೆ, 2006 ರ ಬಳಿಕ ನಾನು ಬರೆದ ಎಲ್ಲಾ ಒಂಬತ್ತು ಪುಸ್ತಕಗಳಲ್ಲೂ (ಒಟ್ಟು 2600 ಪುಟಗಳು) ಈ ಬರಿಗೆಗಳನ್ನು ಬಳಸಿಲ್ಲ; ಹಾಗಿದ್ದರೂ, ಇದುವರೆಗೆ ಅವನ್ನು ಓದಿದವರಲ್ಲಿ ಯಾರೊಬ್ಬರೂ ಅದರಿಂದಾಗಿ ವಿಶಯವನ್ನು ತಿಳಿದುಕೊಳ್ಳುವಲ್ಲಿ ತಮಗೆ ತೊಂದರೆಯಾಗಿದೆಯೆಂದು ಹೇಳಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter