Posts Tagged ‘ನಾಮಪದ’

ಪದ ಮತ್ತು ಅದರ ಹುರುಳು

ನುಡಿಯರಿಮೆಯ ಇಣುಕುನೋಟ – 27

ನುಡಿಗಳಲ್ಲಿ ಬಳಕೆಯಾಗುವ ಪದಗಳನ್ನು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗುತ್ತದೆ; ಮ್, ಅ, ನ್ ಮತ್ತು ಎ ಎಂಬ ನಾಲ್ಕು ಉಲಿಗಳ ಸೇರಿಕೆಯಿಂದ ‘ಮನೆ’ ಎಂಬ ಪದವನ್ನು ಉಂಟುಮಾಡಲಾಗಿದೆ; ಆದರೆ, ಈ ಉಲಿಗಳಲ್ಲಿ ಯಾವುದಕ್ಕೂ ಅದರದೇ ಆದ ಹುರುಳಿಲ್ಲ; ಅವುಗಳ ಸೇರಿಕೆಯಿಂದ ಉಂಟಾದ ‘ಮನೆ’ ಎಂಬ ಪದಕ್ಕೆ ಮಾತ್ರ ಹುರುಳಿದೆ. ಯಾಕೆಂದರೆ, ‘ಮ್’ ಎಂಬುದು ಮನೆ ಎಂಬ ಪದದಲ್ಲಿ ಮಾತ್ರವಲ್ಲದೆ, ಮಂಗ, ಮಜ್ಜಿಗೆ, ಕಡಿಮೆ, ಮಿಂಚು, ಕಮಟು, ಅಮ್ಮ ಮೊದಲಾದ ಬೇರೆಯೂ ಹಲವು ಪದಗಳಲ್ಲಿ ಬರುತ್ತದೆ, ಮತ್ತು ಈ ಎಲ್ಲಾ ಪದಗಳಿಗೂ ಸಮಾನವಾಗಿರುವ ಹುರುಳೊಂದನ್ನು ಕಂಡುಹಿಡಿದು, ಅದು ‘ಮ್’ ಎಂಬ ಉಲಿಯ ಹುರುಳು ಎಂಬುದಾಗಿ ತೋರಿಸಿಕೊಡಲು ಸಾದ್ಯವೇ ಇಲ್ಲ.

ಇದಲ್ಲದೆ, ಪದಗಳ ಅಂಗಗಳಾಗಿರುವ ಉಲಿಗಳು ಮಾರ‍್ಪಟ್ಟಾಗಲೂ ಅವುಗಳ ಹುರುಳು ಮಾರ‍್ಪಡದೆ ಉಳಿಯುತ್ತದೆ; ಈ ವಿಶಯವೂ ಹುರುಳೆಂಬುದು ಪದಗಳಿಗಿದೆಯಲ್ಲದೆ ಉಲಿಗಳಿಗಿಲ್ಲ ಎಂಬುದನ್ನು ಬೆಂಬಲಿಸುತ್ತದೆ. ಹಳೆಗನ್ನಡದ ಪಾಲ್ ಎಂಬುದು ಹಾಲು ಎಂಬುದಾಗಿ, ಬೞ್ದುಂಕು ಎಂಬುದು ಬದುಕು ಎಂಬುದಾಗಿ, ಬೆರಲ್ ಎಂಬುದು ಬೆರಳ್ ಎಂಬುದಾಗಿ ಹೊಸಗನ್ನಡದಲ್ಲಿ ಮಾರ‍್ಪಟ್ಟಾಗ, ಅದರಿಂದಾಗಿ ಆ ಪದಗಳಿಗೆ ಮೊದಲಿಗಿದ್ದ ಹುರುಳುಗಳಲ್ಲಿ ಮಾರ‍್ಪಾಡುಗಳೇನೂ ಆಗಿರಲಿಲ್ಲ.

ಉಲಿಗಳಿಗೆ ಅವುಗಳದೇ ಆದ ಹುರುಳಿಲ್ಲದಿದ್ದರೂ ಪದಗಳಿಗೆ ಅವುಗಳದೇ ಆದ ಹುರುಳಿದೆಯೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ; ಅದರೆ, ಇಲ್ಲೂ ಕೆಲವು ಸಮಸ್ಯೆಗಳಿವೆ; ಪದನೆರಕೆ(ಡಿಕ್ಶನರಿ)ಗಳಲ್ಲಿ ಹೆಚ್ಚಿನ ಪದಗಳಿಗೂ ಎರಡು ಇಲ್ಲವೇ ಹೆಚ್ಚು ಹುರುಳುಗಳನ್ನು ಕೊಡಲಾಗುತ್ತದೆಯೆಂಬುದನ್ನು ಗಮನಿಸಬಹುದು; ಆದರೆ, ಈ ಪದಗಳನ್ನು ಸೊಲ್ಲುಗಳಲ್ಲಿ ಬಳಸಿದಾಗ, ಅವುಗಳ ಈ ಹಲವು ಹುರುಳುಗಳಲ್ಲಿ ಒಂದು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎತ್ತುಗೆಗಾಗಿ, ಕಾಯು ಎಂಬ ಪದಕ್ಕೆ ಕಾಪಾಡು ಎಂಬ ಹುರುಳೂ ಇದೆ, ಬಿಸಿಮಾಡು ಎಂಬ ಹುರುಳೂ ಇದೆ; ಆದರೆ, ‘ನಾಯಿ ಮನೆಯನ್ನು ಕಾಯುತ್ತಿದೆ’ ಎಂಬ ಸೊಲ್ಲನ್ನು ಬಳಸಿದಾಗ ಕಾಯು ಪದದ ಮೊದಲನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದಲ್ಲದೆ, ಎರಡನೆಯ ಹುರುಳು ಗಮನಕ್ಕೆ ಬರುವುದಿಲ್ಲ.

ಇದೇ ರೀತಿಯಲ್ಲಿ ‘ಹಂಡೆಯಲ್ಲಿ ನೀರು ಕಾಯುತ್ತಿದೆ’ ಎಂಬ ಬೇರೊಂದು ಸೊಲ್ಲನ್ನು ಬಳಸಿದಾಗ ಅದರ ಎರಡನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎಂದರೆ, ಒಂದು ಪದ ನಮಗೆ ಎಂತಹ ಹುರುಳನ್ನು ಕೊಡುತ್ತದೆ ಎಂಬುದು ಅದನ್ನು ಎಂತಹ ಸೊಲ್ಲಿನಲ್ಲಿ ಬಳಸಲಾಗಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ. ಕೆಲವೊಮ್ಮೆ ಈ ರೀತಿ ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದು ತೊಂದರೆಯನ್ನೂ ಕೊಡಬಲ್ಲುದು. ಎತ್ತುಗೆಗಾಗಿ, ‘ಅವನು ಕರೆಯಲು ಬಂದಿದ್ದಾನೆ’ ಎಂದಿಶ್ಟೇ ಹೇಳಿದಲ್ಲಿ ಅವನು ಎಲ್ಲಿಗಾದರೂ ಬರಬೇಕೆಂದು ಹೇಳಲು ಬಂದಿದ್ದಾನೋ ಇಲ್ಲವೇ ದನವನ್ನು ಕರೆಯಲು ಬಂದಿದ್ದಾನೋ ಎಂಬ ವಿಶಯದಲ್ಲಿ ಗೊಂದಲವುಂಟಾಗಬಲ್ಲುದು. ಆದರೆ, ಸಾಮಾನ್ಯವಾಗಿ ನಾವು ಮಾತನ್ನು ಬಳಸುವಾಗ ಆ ರೀತಿ ಗೊಂದಲವುಂಟಾಗದಂತೆ ನೋಡಿಕೊಳ್ಳುತ್ತೇವೆ.

ಮಾತಿನಲ್ಲಿ ಬಳಕೆಯಾಗುವ ಪದಗಳಲ್ಲಿ ಹಲವಕ್ಕೆ (ಹೆಸರುಪದಗಳಿಗೆ) ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುವ ಕಸುವಿರುತ್ತದೆ. ‘ಸುರೇಶ ಒಂದು ಹಣ್ಣು ತಿಂದ’ ಎಂಬ ಸೊಲ್ಲಿನಲ್ಲಿ ಎರಡು ಹೆಸರುಪದಗಳು ಬಂದಿದ್ದು, ಅವುಗಳಲ್ಲಿ ‘ಹಣ್ಣು’ ಎಂಬ ಪದ ಒಂದು ವಸ್ತುವನ್ನು ಗುರುತಿಸುತ್ತದೆ ಮತ್ತು ‘ಸುರೇಶ’ ಎಂಬ ಪದ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಪದಗಳ ಮೂಲಕ ಮಾತ್ರವಲ್ಲದೆ ಪದಕಂತೆಗಳ ಮೂಲಕವೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಬರುತ್ತದೆ. ‘ಕುರ‍್ಚಿಯಲ್ಲಿ ಕುಳಿತಿರುವ ಮುದುಕ’ ಎಂಬ ಪದಕಂತೆ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ, ಮತ್ತು ‘ರಾಜು ಕೊಟ್ಟ ಪುಸ್ತಕ’ ಎಂಬ ಇನ್ನೊಂದು ಪದಕಂತೆ ಒಂದು ವಸ್ತುವನ್ನು ಗುರುತಿಸುತ್ತದೆ.

ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ಪದಗಳ ಮೂಲಕ ಗುರುತಿಸುವುದಕ್ಕೂ ಪದಕಂತೆಗಳ ಮೂಲಕ ಗುರುತಿಸುವುದಕ್ಕೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ. ಪದಕಂತೆಗಳ ಮೂಲಕ ಗುರುತಿಸುವಾಗ ಅವುಗಳ ಹುರುಳು ಬಳಕೆಯಾಗುತ್ತದೆ, ಆದರೆ ಪದಗಳ ಮೂಲಕ ಗುರುತಿಸುವಾಗ ಆ ರೀತಿ ಅವುಗಳ ಹುರುಳು ಬಳಕೆಯಾಗುವುದಿಲ್ಲ. ಅದಕ್ಕೆ ಬದಲು, ಪದಗಳಿಗೂ ಅವು ತಿಳಿಸಬಲ್ಲ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ಸಂಬಂದ ಬಳಕೆಯಾಗುತ್ತದೆ.

ನಿಜಕ್ಕೂ ಒಂದು ಹೆಸರುಪದದ ಹುರುಳೇನು ಎಂಬುದನ್ನು ತಿಳಿಯಬೇಕಿದ್ದಲ್ಲಿ ಮೊದಲಿಗೆ ಅದು ಎಂತಹ ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ‘ನಾಯಿ’ ಎಂಬ ಪದ ಎಂತಹ ಪ್ರಾಣಿಯನ್ನು ಗುರುತಿಸಲು ಬಳಕೆಯಾಗುತ್ತದೆ, ಮತ್ತು ಆ ಪ್ರಾಣಿಯ ಪರಿಚೆ(ಗುಣ)ಗಳು ಎಂತಹವು ಎಂಬುದನ್ನು ತಿಳಿದಾಗ ಮಾತ್ರ ನಮಗೆ ಆ ಪದದ ಹುರುಳೇನು ಎಂಬುದು ಗೊತ್ತಾಗುತ್ತದೆ; ಹಾಗಾಗಿ, ಆ ಪ್ರಾಣಿಯ ಪರಿಚೆಗಳನ್ನೇ ಒಟ್ಟಾಗಿ ‘ನಾಯಿ’ ಎಂಬ ಪದದ ಹುರುಳು ಎಂದು ಹೇಳಬೇಕಾಗುತ್ತದೆ.

ಒಳರಚನೆಯಿರುವ ಪದಗಳ ಹುರುಳನ್ನೂ ಇದೇ ರೀತಿಯಲ್ಲಿ ಅವು ತಿಳಿಸುವ ವಸ್ತು, ವ್ಯಕ್ತಿ ಮೊದಲಾದವುಗಳ ಪರಿಚೆಗಳು ಎಂತಹವು ಎಂಬುದರಿಂದ ತಿಳಿಯಬೇಕಾಗುತ್ತದಲ್ಲದೆ ಅವುಗಳ ಒಳರಚನೆ ಎಂತಹದು ಎಂಬುದರಿಂದ ತಿಳಿಯಲು ಬರುವುದಿಲ್ಲ. ‘ಹೊಸಮನೆ’ ಎಂಬ ಪದದಲ್ಲಿ ‘ಹೊಸ’ ಮತ್ತು ‘ಮನೆ’ ಎಂಬ ಎರಡು ಪದಗಳು ಸೇರಿಕೊಂಡಿವೆ; ಆದರೆ, ಅದು ಗುರುತಿಸುವ ಮನೆ ಹೊಸದಾಗಿರಬಲ್ಲುದು, ಇಲ್ಲವೇ ತುಂಬಾ ಹಳೆಯದಾಗಿರಬಲ್ಲುದು; ಯಾಕೆಂದರೆ, ಒಮ್ಮೆ ಒಂದು ಮನೆಯನ್ನು ಆ ಹೆಸರಿನಿಂದ ಕರೆಯತೊಡಗಿದ ಮೇಲೆ, ಅದು ತುಂಬಾ ಹಳೆಯದಾದಾಗಲೂ ಆ ಹೆಸರನ್ನು ನಾವು ಬದಲಾಯಿಸಹೋಗುವುದಿಲ್ಲ; ಎಂದರೆ, ‘ಹೊಸಮನೆ’ ಎಂಬ ಪದದ ಹುರುಳು ಅದು ಗುರುತಿಸುವ ಮನೆಯ ಪರಿಚೆಗಳು ಬದಲಾದ ಹಾಗೆಲ್ಲ ಬದಲಾಗುತ್ತಾ ಹೋಗುತ್ತದೆ. ‘ಹಳೆಮನೆ’ ಎಂಬ ಹೆಸರಿರುವ ಇನ್ನೊಂದು ಮನೆಯನ್ನು ಕೆಡವಿ ಅಲ್ಲೊಂದು ಹೊಸಮನೆಯನ್ನು ಕಟ್ಟಿದಾಗಲೂ ಅದಕ್ಕೆ ಮೊದಲು ಬಳಕೆಯಲ್ಲಿದ್ದ ‘ಹಳೆಮನೆ’ ಎಂಬ ಹೆಸರು ಹಾಗೆಯೇ ಉಳಿದಿರುತ್ತದೆ; ಆ ಪದದ ಹುರುಳು ಮಾತ್ರ ಮಾರ‍್ಪಟ್ಟಿರುತ್ತದೆ.

ಹೆಸರುಪದಗಳಿಗೆ ಅವುಗಳ ಹುರುಳಿನೊಂದಿಗಿರುವ ಸಂಬಂದಕ್ಕಿಂತಲೂ ಅವು ಸೂಚಿಸುವ ವ್ಯಕ್ತಿ, ವಸ್ತು, ಸಂಗತಿ ಮೊದಲಾದವುಗಳೊಂದಿಗಿರುವ ಸಂಬಂದವೇ ಹೆಚ್ಚು ಮುಕ್ಯವಾದುದು ಎಂಬ ವಿಶಯ ಇದರಿಂದ ಸ್ಪಶ್ಟವಾಗುತ್ತದೆ. ಕೆಲವೆಡೆಗಳಲ್ಲಿ ಪದಗಳ ಒಳರಚನೆಯನ್ನು ಬಳಸಿ ಅವುಗಳ ಹುರುಳನ್ನು ಊಹಿಸಿಕೊಳ್ಳಬಲ್ಲೆವಾದರೂ ಈ ವಿಶಯದಲ್ಲಿ ಕೊನೆಯ ತೀರ‍್ಮಾನಕ್ಕೆ ಬರಲು ಇಂತಹ ಸಂಬಂದದ ನೆರವು ಬೇಕೇ ಬೇಕು.

ಸೊಲ್ಲುಗಳಲ್ಲಿ ಬರುವ ಎಸಕ(ಕ್ರಿಯಾ)ಪದ, ಪರಿಚೆ(ಗುಣ)ಪದ ಮೊದಲಾದವುಗಳ ಹುರುಳೇನೆಂಬುದನ್ನು ತೀರ‍್ಮಾನಿಸುವುದು ಇದಕ್ಕಿಂತಲೂ ಹೆಚ್ಚು ತೊಡಕಿನ ಕೆಲಸ. ಯಾಕೆಂದರೆ, ಅದಕ್ಕಾಗಿ ಅವು ಬರುವ ಪದಕಂತೆಗಳ ಇಲ್ಲವೇ ಸೊಲ್ಲುಗಳ ಹುರುಳೇನೆಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಆ ಹುರುಳಿನಲ್ಲಿ ಯಾವುದೇ ಒಂದು ಎಸಕಪದದ ಇಲ್ಲವೇ ಪರಿಚೆಪದದ ಕೊಡುಗೆ ಎಂತಹದು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ. ಪದಗಳೊಂದಿಗೆ ಬರುವ ಒಟ್ಟು(ಪ್ರತ್ಯಯ)ಗಳ ಹುರುಳನ್ನೂ ಇದೇ ರೀತಿಯಲ್ಲಿ ಆ ಪದಗಳ ಬಳಕೆಯಲ್ಲಿ ಅವುಗಳ ಕೊಡುಗೆ ಎಂತಹದು ಎಂಬುದನ್ನು ಪರಿಶೀಲಿಸುವ ಮೂಲಕ ತಿಳಿಯಬೇಕಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಬರಹದಲ್ಲಿ ಯಾವುದು ಸರಿ, ಯಾವುದು ತಪ್ಪು?

ನುಡಿಯರಿಮೆಯ ಇಣುಕುನೋಟ – 20

ಕನ್ನಡದಲ್ಲಿ ಬಳಕೆಯಾಗುವ ಪದಗಳು ಮತ್ತು ಪದರೂಪಗಳುಸರಿಯೋ ತಪ್ಪೋ ಎಂಬುದನ್ನು ತೀರ‍್ಮಾನಿಸುವಲ್ಲಿ ನಾವು ಯಾವ ಕಟ್ಟಲೆಗಳನ್ನು ಬಳಸಬೇಕು? ಕನ್ನಡದ ಕಟ್ಟಲೆಗಳನ್ನೇ ಬಳಸಬೇಕೆಂದು ಯಾರೂ ಹೇಳಬಹುದು. ಆದರೆ, ಇವತ್ತು ಹಲವು ಮಂದಿ ಕನ್ನಡದ ವಿದ್ವಾಂಸರಿಗೆ ಇದು ಒಪ್ಪಿಗೆಯಾಗುವುದಿಲ್ಲ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬಳಸುವಾಗ ಸಂಸ್ಕ್ರುತದ ಕಟ್ಟಲೆಗಳನ್ನೇ ತಪ್ಪದೆ ಬಳಸಬೇಕೆಂಬುದಾಗಿ ಅವರು ಹೇಳುತ್ತಾರೆ. ಕನ್ನಡದ ವಿದ್ವಾಂಸರಲ್ಲಿ ಹಿಂದಿನ ಕಾಲದಿಂದಲೂ ಬೆಳೆದುಬಂದಿರುವ ಕನ್ನಡದ ಕುರಿತಾಗಿರುವ ಕೀಳರಿಮೆ ಮತ್ತು ಸಂಸ್ಕ್ರುತದ ಕುರಿತಾಗಿರುವ ಅತಿಯಾದ ಆದರ ಮತ್ತು ಅಬಿಮಾನಗಳೇ ಇದಕ್ಕೆ ಕಾರಣ.

ಎತ್ತುಗೆಗಾಗಿ, ಸೊಲ್ಲರಿಗರನ್ನು ಸೂಚಿಸಲು ಸಂಸ್ಕ್ರುತದಲ್ಲಿ ಎರಡು ಪದಗಳಿವೆ. ಇವುಗಳಲ್ಲಿ ‘ವಯ್ಯಾಕರಣಃ’ ಎಂಬುದು ಗಂಡಸರನ್ನು ಸೂಚಿಸುತ್ತದೆ ಮತ್ತು ‘ವಯ್ಯಾಕರಣೀ’ ಎಂಬುದು ಹೆಂಗಸರನ್ನು ಸೂಚಿಸುತ್ತದೆ. ಆದರೆ, ಕನ್ನಡದಲ್ಲಿ ಗಂಡಸರನ್ನು ಸೂಚಿಸುವುದಕ್ಕಾಗಿಯೂ ‘ವಯ್ಯಾಕರಣಿ’ ಎಂಬ ಪದವೇ ಬಳಕೆಗೆ ಬಂದಿದೆ. ಇದನ್ನು ಕಿಟ್ಟೆಲ್ ಅವರ ಡಿಕ್ಶನರಿಯಲ್ಲಿ ನೋಡಬಹುದು. ಆದರೆ ಇದು ತಪ್ಪು, ಗಂಡಸರನ್ನು ಸೂಚಿಸಲು ‘ವಯ್ಯಾಕರಣ’ ಎಂಬುದನ್ನೇ ಬಳಸಬೇಕು ಎಂಬುದಾಗಿ ಕೆಲವರು ಕನ್ನಡದ ವಿದ್ವಾಂಸರು ವಾದಿಸುತ್ತಾರೆ.

ಇದಕ್ಕೆ ಅವರಿಗೆ ಸಂಸ್ಕ್ರುತ ವ್ಯಾಕರಣದ ಕಟ್ಟಲೆಯೇ ಆದಾರ. ಆದರೆ ನಿಜಕ್ಕೂ ಇದು ಸರಿಯಲ್ಲ. ಯಾಕೆಂದರೆ, ಯಾವ ನುಡಿಯಿಂದಲೇ ಆಗಲಿ ಒಂದು ಪದವನ್ನು ಎರವಲಾಗಿ ಪಡೆದ ಮೇಲೆ, ಅದನ್ನು ಯಾವ ರೀತಿಯಲ್ಲಿ ಮತ್ತು ಯಾವ ರೂಪದಲ್ಲಿ ಬಳಸಬೇಕು ಎಂಬುದಕ್ಕೆ ಎರವಲಾಗಿ ಪಡೆದ ನುಡಿಯಲ್ಲಿರುವ ಬಳಕೆಯ ಕಟ್ಟಲೆಗಳೇ ಆದಾರವಾಗಬೇಕಲ್ಲದೆ ಎರವಲು ಕೊಟ್ಟ ನುಡಿಯ ಕಟ್ಟಲೆಗಳಲ್ಲ.

ಎತ್ತುಗೆಗಾಗಿ, ಸಂಸ್ಕ್ರುತದಿಂದ ಹಲವು ನಾಮಪದಗಳನ್ನು ನಾವು ಕನ್ನಡಕ್ಕೆ ಎರವಲಾಗಿ ಪಡೆದು ಬಳಸುತ್ತೇವೆ. ಇವುಗಳಲ್ಲಿ ಕೆಲವಕ್ಕೆ ಇಸು ಒಟ್ಟನ್ನು ಸೇರಿಸಿ ಕ್ರಿಯಾಪದಗಳಾಗಿ ಮಾಡಿಯೂ ಬಳಸುತ್ತೇವೆ (ಜಪ-ಜಪಿಸು, ಕೋಪ-ಕೋಪಿಸು, ರುಚಿ-ರುಚಿಸು). ಆದರೆ, ಈ ಬಳಕೆಗೆ ಕನ್ನಡದ ಕಟ್ಟಲೆಗಳು ಆದಾರವಲ್ಲದೆ ಸಂಸ್ಕ್ರುತದ ಕಟ್ಟಲೆಗಳಲ್ಲ.

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ಲಿಂಗವನ್ನು ನಿರ‍್ದರಿಸುವಲ್ಲೂ ನಾವು ಕನ್ನಡದ ಕಟ್ಟಲೆಗಳನ್ನು ಬಳಸುತ್ತೇವಲ್ಲದೆ ಸಂಸ್ಕ್ರುತದ ಕಟ್ಟಲೆಗಳನ್ನಲ್ಲ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಪುಲ್ಲಿಂಗದಲ್ಲಿರುವ ದೇಶ, ಮಾರ‍್ಗ, ದೀಪ ಮೊದಲಾದ ಪದಗಳನ್ನು, ಮತ್ತು ಸ್ತ್ರೀಲಿಂಗದಲ್ಲಿರುವ ನದಿ, ಲಿಪಿ, ಚರ‍್ಚೆ ಮೊದಲಾದ ಪದಗಳನ್ನು ನಾವು ನಪುಂಸಕ ಲಿಂಗದಲ್ಲಿ ಬಳಸುತ್ತೇವಲ್ಲದೆ ಪುಲ್ಲಿಂಗ ಇಲ್ಲವೇ ಸ್ತ್ರೀಲಿಂಗದಲ್ಲಲ್ಲ. ಸಂಸ್ಕ್ರುತದಲ್ಲಿ ನಾಮಪದಗಳಿಂದ ಬೇರಾದ ಗುಣಪದಗಳೆಂಬ ಪದಗಳಿಲ್ಲ.

ಹೀಗಿದ್ದರೂ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ವ್ಯಾವಹಾರಿಕ, ಸಾಮಾಜಿಕ, ಯಾಂತ್ರಿಕ ಮೊದಲಾದ ಹಲವು ಪದಗಳನ್ನು ನಾವು ನಾಮಪದಗಳಿಂದ ಬೇರಾಗಿರುವ ಗುಣಪದಗಳಾಗಿ ಬಳಸುತ್ತೇವೆ. ಹಾಗಾಗಿ, ವಯ್ಯಾಕರಣಿಯಂತಹ ಪದಗಳ ಮಟ್ಟಿಗೂ ನಾವು ಇದೇ ಕ್ರಮವನ್ನು ಅನುಸರಿಸುವುದು ಸರಿಯಾದ ದಾರಿ. ಕನ್ನಡದಲ್ಲಿ ಅವು ಯಾವ ರೀತಿಯಲ್ಲಿ ಬಳಕೆಗೆ ಬಂದಿವೆ ಎಂಬುದು ನಮಗೆ ಮುಕ್ಯವಲ್ಲದೆ ಆ ಬಳಕೆ ಸಂಸ್ಕ್ರುತದ ನಿಯಮಗಳಿಗೆ ಅನುಸಾರವಾಗಿದೆಯೇ ಇಲ್ಲವೇ ಎಂಬುದು ಮುಕ್ಯವಲ್ಲ.

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ಬರುವ ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳು ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದಿಲ್ಲ; ಹಾಗಿದ್ದರೂ ‘ಅವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು; ಇಲ್ಲವಾದರೆ ಅದು ತಪ್ಪಾಗುತ್ತದೆ’ ಎಂದು ಹೇಳುವುದೂ ಸಂಸ್ಕ್ರುತದ ಕಟ್ಟಲೆಗಳನ್ನು ಕನ್ನಡದ ಮೇಲೆ ಹೊರಿಸುವ ತಪ್ಪು ದಾರಿಯಾಗಿದೆ. ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಈ ಎರವಲು ಪದಗಳು ಹೇಗೆ ಕಾಣಿಸುತ್ತವೆಯೋ ಹಾಗೆ ಬರೆಯುವುದೇ ಕನ್ನಡದ ಮಟ್ಟಿಗೆ ಸರಿಯಾದ ದಾರಿ.

ಇನ್ನೊಂದು ಬಗೆಯ ‘ತಪ್ಪು’ಗಳು ಆಡುನುಡಿಯಿಂದ ಪದಗಳನ್ನು ಇಲ್ಲವೇ ಪದರೂಪಗಳನ್ನು ಬರಹಕ್ಕೆ ತಂದು ಬಳಸುವಲ್ಲಿ ಕಾಣಿಸಿಕೊಳ್ಳುತ್ತವೆ. ಆಡುನುಡಿಯೆಂಬುದು ಊರಿನಿಂದ ಊರಿಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿರುತ್ತದೆ. ಆದರೆ, ಬರಹದ ನುಡಿ ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕೆಂದು ನಾವು ಬಯಸುತ್ತೇವೆ. ಯಾಕೆಂದರೆ, ಹಾಗಿಲ್ಲವಾದರೆ ಒಂದು ಊರಿನ ಮತ್ತು ಜಾತಿಯ ಬರಹಗಾರರು ಬರೆದುದನ್ನು ಇನ್ನೊಂದು ಊರಿನ ಮತ್ತು ಜಾತಿಯ ಜನರಿಗೆ ಓದಿ ಅರ‍್ತಮಾಡಿಕೊಳ್ಳಲು ಕಶ್ಟವಾಗುತ್ತದೆ.

ಈ ಸಮಾನತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಬರಹದ ನುಡಿಯಲ್ಲಿ ಎಂತಹ ಮಾರ‍್ಪಾಡನ್ನು ನಡೆಸುವುದಿದ್ದರೂ ಅದು ಎಲ್ಲಾ ಊರು ಮತ್ತು ಜಾತಿಗಳಿಗೆ ಸೇರಿದ ಜನರಿಗೂ ಒಪ್ಪಿಗೆಯಾಗುವಂತಹದಾಗಿರಬೇಕು. ಎಲ್ಲಾ ಬರಹಗಾರರೂ ತಮಗೆ ಅನಿಸಿದ ಹಾಗೆ ತಮ್ಮ ಬರಹದ ನುಡಿಯಲ್ಲಿ ಮಾರ‍್ಪಾಡುಗಳನ್ನು ಮಾಡಹೊರಟರೆ ಈ ಸಮಾನತೆ ಪೂರ‍್ತಿ ಅಳಿದು ಹೋದೀತು.

ಬರಹದಲ್ಲಿ ತಪ್ಪು-ಸರಿ ಎಂಬ ಪರಿಕಲ್ಪನೆಯನ್ನು ಈ ಅರ‍್ತದಲ್ಲಿ ಬಳಸಲು ಸಾದ್ಯವಿದೆ. ಕನ್ನಡದ ಕೆಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಬಿದ್ದುಹೋಗಿದೆ; ಹಾಲು ಎಂಬುದು ಆಲು ಎಂದಾಗಿದೆ, ಹಣ್ಣು ಎಂಬುದು ಅಣ್ಣು ಎಂದಾಗಿದೆ, ಹುಳ ಎಂಬುದು ಉಳ ಎಂದಾಗಿದೆ. ಈ ರೀತಿ ಕೆಲವರು ಕನ್ನಡಿಗರು ತಮ್ಮ ಆಡುನುಡಿಯ ಪದಗಳಲ್ಲಿದ್ದ ಹಕಾರವನ್ನು ಕಳೆದುಕೊಂಡುದರಲ್ಲಿ ತಪ್ಪಾಗಿರುವಂತಹದು ಏನೂ ಇಲ್ಲ. ಅದು ಅವರ ಆಡುನುಡಿಯಲ್ಲಿ ಸ್ವಾಬಾವಿಕವಾಗಿ ನಡೆದಿರುವ ಒಂದು ಮಾರ‍್ಪಾಡು ಮಾತ್ರ. ಇದಲ್ಲದೆ, ಅದು ಅವರ ಆಡುನುಡಿಯನ್ನು ಕೆಡಿಸಿಲ್ಲ; ಅದರ ಜೀವಂತಿಕೆಯನ್ನು ಉಳಿಸಿದೆ.

ಆದರೆ, ಕನ್ನಡದ ಬೇರೆ ಹಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಈ ರೀತಿ ಬಿದ್ದುಹೋಗಿಲ್ಲ; ಹಾಗಾಗಿ, ಇವತ್ತು ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕಾದ ಬರಹದ ಕನ್ನಡದಲ್ಲಿ ಹಕಾರವನ್ನು ಉಳಿಸಿಕೊಳ್ಳಬೇಕೇ ಇಲ್ಲವೇ ಬಿದ್ದುಹೋಗಲು ಬಿಡಬೇಕೇ ಎಂಬುದನ್ನು ನಿರ‍್ದರಿಸಬೇಕಾಗುತ್ತದೆ. ಉಳಿಸಬೇಕೆಂದು ಹೆಚ್ಚಿನ ಕನ್ನಡಿಗರೂ ಬಯಸುವುದಾದರೆ, ಬರಹದಲ್ಲಿ ಹಕಾರವನ್ನು ಬಳಸದಿರುವುದು (ಇಲ್ಲವೇ ಬೇಡದಲ್ಲಿ ಬಳಸುವುದು) ‘ತಪ್ಪಾ’ಗುತ್ತದೆ.

ಇದೇ ರೀತಿಯಲ್ಲಿ, ಇವತ್ತು ಬಡಗ ಕರ‍್ನಾಟಕದ ಕೆಲವು ಆಡುನುಡಿಗಳಲ್ಲಿ ನಾಮಪದಗಳ ಕೊನೆಯಲ್ಲಿದ್ದ ಎಕಾರ ಇಕಾರವಾಗಿದೆ. ಮನೆ ಎಂಬುದು ಮನಿ ಎಂದಾಗಿದೆ, ಕಾಗೆ ಎಂಬುದು ಕಾಗಿ ಎಂದಾಗಿದೆ, ಕುದುರೆ ಎಂಬುದು ಕುದ್ರಿ ಎಂದಾಗಿದೆ. ಆದರೆ ಕನ್ನಡದ ಬೇರೆ ಆಡುನುಡಿಗಳಲ್ಲಿ ಈ ಮಾರ‍್ಪಾಡು ನಡೆದಿಲ್ಲ. ಇಲ್ಲೂ ಕೂಡ, ಎಲ್ಲರಿಗೂ ಸಮಾನವಾಗಿರಬೇಕಾದ ಬರಹದ ಕನ್ನಡಕ್ಕೆ ಈ ಮಾರ‍್ಪಾಡನ್ನು ತರಬೇಕೇ ಬೇಡವೇ ಎಂಬುದನ್ನು ತೀರ‍್ಮಾನಿಸಬೇಕಾಗುತ್ತದೆ, ಮತ್ತು ಬೇಡವೆಂದು ತೀರ‍್ಮಾನಿಸಿದಲ್ಲಿ ಹಾಗೆ ತರುವುದು ಬರಹದ ಮಟ್ಟಿಗೆ ‘ತಪ್ಪು’ ಎಂಬುದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಬೇಕಾಗುತ್ತದೆ.

ಆದರೆ, ಇಂತಹ ಯಾವ ಮಾರ‍್ಪಾಡೂ ಬರಹದ ಕನ್ನಡವನ್ನು ಕೆಡಿಸುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಆಲು ಇಲ್ಲವೇ ಮನಿ ಎಂಬ ಪದರೂಪದಲ್ಲಿಲ್ಲದಂತಹ ನುಡಿಯ ಬಳಕೆಗೆ ಅವಶ್ಯವಾಗಿರುವ ಯಾವ ಅಂಶವೂ ಹಾಲು ಇಲ್ಲವೇ ಮನೆ ಎಂಬ ಪದರೂಪದಲ್ಲಿಲ್ಲ. ಇಲ್ಲಿ ತಪ್ಪು ಮತ್ತು ಸರಿ ಎಂಬವುಗಳು ಎಂತಹ ಬರಹ ನಮ್ಮೊಳಗೆ ಸಮಾನವಾಗಿ ಉಳಿಯಬೇಕು ಎಂಬ ತೀರ‍್ಮಾನವನ್ನಶ್ಟೇ ಅವಲಂಬಿಸಿದೆ. ಇವತ್ತು ಬಳಕೆಯಲ್ಲಿರುವ ತೀರ‍್ಮಾನವನ್ನು ನಾವು ಅವಶ್ಯವೆಂದೆನಿಸಿದಲ್ಲಿ ಮಾರ‍್ಪಡಿಸಬಲ್ಲೆವು, ಮತ್ತು ಹಾಗೆ ಮಾರ‍್ಪಡಿಸಿದಾಗ ಇವತ್ತು ತಪ್ಪು ಎಂದು ತಿಳಿದಿರುವ ಪದರೂಪಗಳು ಸರಿಯೆಂದೆನಿಸಬಲ್ಲುವು.

ಸಂಸ್ಕ್ರುತ ಎರವಲುಗಳನ್ನು ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬ ಕಟ್ಟಲೆ ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾದುದು ಮಾತ್ರವಲ್ಲ, ಕನ್ನಡ ಬರಹವನ್ನು ಎಲ್ಲಾ ಕನ್ನಡಿಗರೂ ಸುಲಬವಾಗಿ ಕಲಿತು ತಮ್ಮದಾಗಿಸಿಕೊಳ್ಳುವಲ್ಲಿ ಒಂದು ದೊಡ್ಡ ತೊಡಕಾಗಿದೆ; ಕೆಲವೇ ಕೆಲವು ಜನರಶ್ಟೇ ಬರಹವನ್ನು ಬಳಸುತ್ತಿದ್ದ ಹಿಂದಿನ ಕಾಲದಲ್ಲಿ ಈ ಕಟ್ಟಲೆ ಹೆಚ್ಚು ತೊಡಕಿನದೆಂದು ಅನಿಸುತ್ತಿರಲಿಲ್ಲ. ಆದರೆ, ಇವತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗಬೇಕಾಗಿದೆ; ಹಾಗಾಗಿ, ಕನ್ನಡಕ್ಕೆ ಬೇಡದ ಈ ಸಂಸ್ಕ್ರುತದ ಹೊರೆಯನ್ನು ತೆಗೆದುಹಾಕುವುದೇ ಒಳ್ಳೆಯದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಯಾವುದು ಕನ್ನಡ ವ್ಯಾಕರಣ?

ನುಡಿಯರಿಮೆಯ ಇಣುಕುನೋಟ – 12

ಕೇಶಿರಾಜನ ಕಾಲದಿಂದಲೂ ಕನ್ನಡ ಪಂಡಿತರು ಯಾವುದನ್ನು‘ಕನ್ನಡ ವ್ಯಾಕರಣ’ ಎಂಬುದಾಗಿ ಕರೆಯುತ್ತ ಬಂದಿದ್ದಾರೋ ಅದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲ; ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳು ಕನ್ನಡದಲ್ಲೂ ಇರಬಹುದು, ಇಲ್ಲವೇ ಇರಬೇಕು ಎಂಬ ತಪ್ಪು ಕಲ್ಪನೆಯಲ್ಲಿ ಆ ಕಟ್ಟಲೆಗಳನ್ನು ಕನ್ನಡದಲ್ಲಿ ಕಾಣಲು ನಡೆಸಿದ ಒಂದು ವ್ಯರ‍್ತ ಪ್ರಯತ್ನ ಮಾತ್ರ.

ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಇದೇ ಕನ್ನಡದ್ದಲ್ಲದ ವ್ಯಾಕರಣವನ್ನು ಕಲಿಸಲಾಗುತ್ತಿದೆ. ಅದನ್ನು ಯಾಕೆ ‘ಕನ್ನಡ ವ್ಯಾಕರಣ’ವೆಂದು ಕರೆಯಬೇಕು ಎಂಬುದನ್ನು ಮಕ್ಕಳೂ ತಿಳಿಯಲಾರರು, ಅದನ್ನು ಕಲಿಸುವ ಮಾಸ್ತರರೂ ತಿಳಿಸಿಕೊಡಲಾರರು. ಇನ್ನು ಅದರಿಂದ ಪ್ರಯೋಜನವನ್ನೇನಾದರೂ ಪಡೆಯುವುದಂತೂ ದೂರವೇ ಉಳಿಯಿತು.

ನಿಜಕ್ಕೂ ಈ ‘ವ್ಯಾಕರಣ’ ಎಂಬುದು ಏನು ಮಾಡಬೇಕು? ಒಂದು ನುಡಿಯಲ್ಲಿ ಬರುವ ಪದಗಳ ಒಳರಚನೆ ಎಂತಹದು, ಪದಗಳನ್ನು ಬಳಸಿ ಆ ನುಡಿಯಲ್ಲಿ ಸೊಲ್ಲು(ವಾಕ್ಯ)ಗಳನ್ನು ಉಂಟುಮಾಡುವುದು ಹೇಗೆ, ಮತ್ತು ಸೊಲ್ಲುಗಳನ್ನು ಬಳಸಿ ಅದರಲ್ಲಿ ಬರಹಗಳನ್ನು ಬರೆಯುವುದು ಹೇಗೆ ಎಂಬಂತಹ ಸೊಲ್ಲುಗಳ ಕುರಿತಾಗಿರುವ ತಿಳಿವನ್ನು ಅದು ನಮಗೆ ಒದಗಿಸಬೇಕು.
ಕನ್ನಡದ ಕುರಿತಾಗಿರುವ ಇಂತಹ ತಿಳಿವನ್ನು ನಾವು ಇಲ್ಲಿ ‘ಕನ್ನಡದ ಸೊಲ್ಲರಿಮೆ’ ಎಂದು ಕರೆಯೋಣ; ಯಾಕೆಂದರೆ, ‘ಕನ್ನಡ ವ್ಯಾಕರಣ’ ಎಂಬುದಕ್ಕೆ ಇವತ್ತು ಮೇಲೆ ವಿವರಿಸಿದಂತಹ ಬೇರೆಯೇ ಹುರುಳಿದೆ.

ಪಾಣಿನಿಯೇ ಮೊದಲಾದ ಸಂಸ್ಕ್ರುತದ ಪಂಡಿತರು ಆ ನುಡಿಯಲ್ಲಿ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗುತ್ತದೆ, ಅವುಗಳ ಹಿಂದಿರುವ ಕಟ್ಟಲೆಗಳು ಎಂತಹವು ಎಂಬುದನ್ನು ಕಂಡುಹಿಡಿದಿದ್ದರು, ಮತ್ತು ಅಂತಹ ಕಟ್ಟಲೆಗಳನ್ನು ಒಟ್ಟುಗೂಡಿಸಿ, ಅದನ್ನು ‘ಸಂಸ್ಕ್ರುತ ವ್ಯಾಕರಣ’ ಎಂಬುದಾಗಿ ಕರೆದಿದ್ದರು; ಅಂತಹದೇ ಕೆಲಸವನ್ನು ಇವತ್ತು ನಾವು ಕನ್ನಡದಲ್ಲಿ ನಡೆಸಬೇಕಾಗಿದೆ.
ಸೊಲ್ಲುಗಳನ್ನು ಕಟ್ಟುವ ಬಗೆ ಸಂಸ್ಕ್ರುತದಲ್ಲಿರುವುದಕ್ಕಿಂತ ಕನ್ನಡದಲ್ಲಿ ತೀರ ಬೇರಾಗಿದೆ; ಹಾಗಾಗಿ, ಸಂಸ್ಕ್ರುತ ವ್ಯಾಕರಣದಲ್ಲಿ ಬರುವ ಕಟ್ಟಲೆಗಳಿಗಿಂತ ತೀರ ಬೇರಾಗಿರುವ ಕಟ್ಟಲೆಗಳು ‘ಕನ್ನಡದ ಸೊಲ್ಲರಿಮೆ’ಯಲ್ಲಿ ಬರಬೇಕಾಗುತ್ತದೆ.

ಸಂಸ್ಕ್ರುತದಲ್ಲಿ ಎರಡು (ಇಲ್ಲವೇ ಹೆಚ್ಚು) ಪದಗಳನ್ನು ಒಟ್ಟುಸೇರಿಸಿ ಹೊಸಪದವನ್ನು ಉಂಟುಮಾಡುವ ಹೊಲಬನ್ನು ‘ಸಮಾಸ’ ಎಂಬುದಾಗಿ ಕರೆಯಲಾಗುತ್ತದೆ; ನಾಮಪದಗಳನ್ನು ಮಾತ್ರ ಈ ರೀತಿ ಸಂಸ್ಕ್ರುತದಲ್ಲಿ ಒಟ್ಟುಸೇರಿಸಲು ಬರುತ್ತದೆ. ಹಾಗಾಗಿ, ಒಟ್ಟುಸೇರಿಸಿದ ಪದಗಳಲ್ಲಿ ಯಾವುದು ಮುಕ್ಯ ಎಂಬುದರ ಮೇಲೆ ಈ ಸಮಾಸಗಳನ್ನು ತತ್ಪುರುಶ (ಎರಡನೆಯದು ಮುಕ್ಯ), ಅವ್ಯಯೀಬಾವ (ಮೊದಲನೆಯದು ಮುಕ್ಯ), ದ್ವಂದ್ವ (ಎರಡೂ ಮುಕ್ಯ) ಮತ್ತು ಬಹುವ್ರೀಹಿ (ಎರಡೂ ಮುಕ್ಯವಲ್ಲ, ಬೇರೊಂದು ಪದ ಮುಕ್ಯ) ಎಂಬ ನಾಲ್ಕು ಬಗೆಗಳಲ್ಲಿ ಗುಂಪಿಸಬಹುದೆಂದು ಸಂಸ್ಕ್ರುತ ವ್ಯಾಕರಣಗಳು ಹೇಳುತ್ತವೆ.

ಆದರೆ, ಕನ್ನಡದಲ್ಲಿ ಎರಡು ಪದಗಳನ್ನು ಒಟ್ಟುಸೇರಿಸಿ ಹೊಸದೊಂದು ಪದವನ್ನು ಉಂಟುಮಾಡುವ ಬಗೆ ಇದರಿಂದ ತೀರ ಬೇರಾದುದು. ನಾಮಪದ, ಕ್ರಿಯಾಪದ, ಮತ್ತು ಗುಣಪದಗಳೆಂಬ ಮೂರು ಬಗೆಯ ಪದಗಳನ್ನು ಇಂತಹ ಹೊಸಪದಗಳ ಮೊದಲನೆಯ ಪದವಾಗಿ ಬಳಸಲು ಬರುತ್ತದೆ; ಅವುಗಳ ಎರಡನೆಯ ಪದ ಮಾತ್ರ ಯಾವಾಗಲೂ ಹೆಸರುಪದವಾಗಿರುತ್ತದೆ.

ಕಯ್ಮಗ್ಗ, ಬಯಲಾಟ, ನೆಲಗಡಲೆ ಎಂಬಂತಹ ಪದಗಳಲ್ಲಿ ಎರಡು ನಾಮಪದಗಳು ಒಟ್ಟುಸೇರಿವೆ; ಕಡೆಗೋಲು, ಸಿಡಿಮದ್ದು, ಬಿಚ್ಚುಕತ್ತಿ ಎಂಬಂತಹ ಪದಗಳಲ್ಲಿ ಕ್ರಿಯಾಪದ ಮತ್ತು ನಾಮಪದಗಳು ಒಟ್ಟುಸೇರಿವೆ (ಕಡೆ, ಸಿಡಿ ಮತ್ತು ಬಿಚ್ಚು ಎಂಬವು ಕ್ರಿಯಾಪದಗಳು); ಬಿಸಿನೀರು, ದೊಡ್ಡಮ್ಮ, ಬೆಳ್ಳುಳ್ಳಿ ಎಂಬಂತಹ ಪದಗಳಲ್ಲಿ ಗುಣಪದ ಮತ್ತು ನಾಮಪದಗಳು ಒಟ್ಟುಸೇರಿವೆ.
ಹಾಗಾಗಿ, ಕನ್ನಡದಲ್ಲಿ ಬರುವ ‘ಸಮಾಸ’ ಯಾವ ಬಗೆಯದು ಎಂಬುದನ್ನು ತಿಳಿಯಬೇಕಿದ್ದಲ್ಲಿ ಅಂತಹ ಹೊಸಪದಗಳಲ್ಲಿ ಮೊದಲಿಗೆ ಯಾವ ಬಗೆಯ ಪದ ಬಂದಿದೆ ಎಂಬುದನ್ನು ತಿಳಿಯಬೇಕಲ್ಲದೆ, ಸಂಸ್ಕ್ರುತದ ಹಾಗೆ ಯಾವ ಪದ ಮುಕ್ಯ ಎಂಬುದನ್ನಲ್ಲ.

ಇಂಗ್ಲಿಶ್‌ನಂತಹ ಬೇರೆ ನುಡಿಗಳಿಂದ ಹೊಸ ಹೊಸ ವಿಶಯಗಳನ್ನು ಕನ್ನಡಕ್ಕೆ ತರಬೇಕಾದಾಗ, ಅದಕ್ಕಾಗಿ ಹಲವಾರು ಹೊಸ ಪದಗಳನ್ನು ಕನ್ನಡದಲ್ಲಿ ಉಂಟುಮಾಡಿಕೊಳ್ಳಬೇಕಾಗುತ್ತದೆ. ನಿಜಕ್ಕೂ ಕನ್ನಡ ಪದಗಳ ಒಳರಚನೆಯೆಂತಹದು ಎಂಬುದನ್ನು ತಿಳಿದವರು ಮಾತ್ರ ಈ ಕೆಲಸವನ್ನು ಸರಿಯಾಗಿ ನಡೆಸಬಲ್ಲರು.

ಸಂಸ್ಕ್ರುತ ಪದಗಳ ಒಳರಚನೆಯೇ ಕನ್ನಡ ಪದಗಳಿಗೂ ಇದೆ ಎಂಬ ತಪ್ಪು ತಿಳಿವನ್ನು ‘ಕನ್ನಡ ವ್ಯಾಕರಣ’ಗಳಿಂದ ಪಡೆದಿರುವ ಕನ್ನಡ ಪಂಡಿತರಿಗೆ ಇಂತಹ ಹೊಸಪದಗಳನ್ನು ಕನ್ನಡದಲ್ಲೇನೇ ಉಂಟುಮಾಡುವುದು ಹೇಗೆ ಎಂಬುದು ಗೊತ್ತೇ ಇರುವುದಿಲ್ಲ. ಹಾಗಾಗಿ, ಹೊಸಪದಗಳು ಬೇಕಾದಾಗಲೆಲ್ಲ ಅವರು ಅವನ್ನು ಸಂಸ್ಕ್ರುತದಲ್ಲಿ ಉಂಟುಮಾಡಿ ಕನ್ನಡದೊಳಗೆ ತುರುಕುತ್ತಾರೆ, ಮತ್ತು ಸಂಸ್ಕ್ರುತದ ನೆರವಿಲ್ಲದೆ ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡಲು ಸಾದ್ಯವೇ ಇಲ್ಲ ಎಂಬ ತಪ್ಪು ತೀರ‍್ಮಾನಕ್ಕೆ ಬರುತ್ತಾರೆ.

ಕ್ರಿಯಾಪದಗಳನ್ನು ನಾಮಪದಗಳೊಂದಿಗೆ ಸೇರಿಸಿ ಹೊಸಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಲು ಬರುವುದಿಲ್ಲವಾದರೂ ಕನ್ನಡದಲ್ಲಿ ಬರುತ್ತದೆ ಎಂಬ ಕನ್ನಡದ್ದೇ ಆದ ಸೊಲ್ಲರಿಮೆಯ ಕಟ್ಟಲೆಯನ್ನು ತಿಳಿದವರಿಗೆ ನೂರಾರು ಹೊಸಪದಗಳನ್ನು ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ. ಇಂಗುಗುಂಡಿ, ಇಡುಗಂಟು, ಇಳಿನೀರು, ಉಜ್ಜುಗಾಯ, ಉಬ್ಬುಗನ್ನಡಿ, ಕಟ್ಟುಪಟ್ಟಿ, ಕರೆಸಾಲ, ತಡೆಯೋಟ, ತೇಲುಮನೆ, ತಳ್ಳುಗುಂಡಿ ಮೊದಲಾದ ಇಂತಹ ಪದಗಳು ಕನ್ನಡ ಬರಹದಲ್ಲೂ ತುಂಬಾ ಚನ್ನಾಗಿ ಹೊಂದಿಕೊಳ್ಳುತ್ತವೆ.

ಕನ್ನಡದ ಆಡುನುಡಿಗಳಲ್ಲಿಯೂ ಈ ಹೊಲಬನ್ನು ಬಳಸಿ ಉಂಟುಮಾಡಿರುವ ತುಂಬುಕಡಬು, ಬಿಚ್ಚೋಲೆ, ತೂಗುದೀಪ ಎಂಬಂತಹ ಹಲವಾರು ಪದಗಳು ಬಳಕೆಯಲ್ಲಿವೆ; ಆದರೆ, ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳೇ ಕನ್ನಡದಲ್ಲೂ ಇವೆಯೆಂಬುದಾಗಿ ಬ್ರಮಿಸುವ ‘ಕನ್ನಡ ವ್ಯಾಕರಣ’ಗಳಿಂದಾಗಿ ದಾರಿತಪ್ಪಿರುವ ಕನ್ನಡ ಪಂಡಿತರು ತಮ್ಮಲ್ಲಿ ಸ್ವಾಬಾವಿಕವಾಗಿ ಬೆಳೆದುಬಂದಿರಬಹುದಾದ ಈ ತಾಯ್ನುಡಿಯ ಅಳವನ್ನೇ ಕಳೆದುಕೊಂಡಿದ್ದಾರೆ.

ಸಂಸ್ಕ್ರುತದ ವಾಕ್ಯಗಳಲ್ಲಿ ಏಳು ವಿಬಕ್ತಿಗಳು ಬಳಕೆಯಾಗುತ್ತವೆ ಎಂಬುದನ್ನು ಸಂಸ್ಕ್ರುತದ ಪಂಡಿತರು ಕಂಡುಕೊಂಡಿದ್ದಾರೆ; ಕನ್ನಡದ ಸೊಲ್ಲುಗಳನ್ನು ಪರಿಶೀಲಿಸಿದೆವಾದರೆ, ಅವುಗಳಲ್ಲಿ ಬರುವ ಪದಗಳಿಗೆ ಒಟ್ಟು ನಾಲ್ಕು ವಿಬಕ್ತಿರೂಪಗಳು ಮಾತ್ರ ಕಾಣಿಸುತ್ತವಲ್ಲದೆ, ಏಳು ವಿಬಕ್ತಿ ರೂಪಗಳು ಕಾಣಿಸುವುದಿಲ್ಲ; ಹಾಗಿರುವಾಗ, ಸಂಸ್ಕ್ರುತದ ಹಾಗೆ ಕನ್ನಡದಲ್ಲೂ ಏಳು ವಿಬಕ್ತಿಗಳಿರಬೇಕು ಎಂದು ಬ್ರಮಿಸಿ, ಅವನ್ನು ಕಾಣಲು ಪ್ರಯತ್ನಿಸುವ ‘ಕನ್ನಡದ ವ್ಯಾಕರಣ’ ಕನ್ನಡದ್ದಾಗುವುದು ಹೇಗೆ?

ಕನ್ನಡದಲ್ಲಿ ಮೂರು ಕಾಲಗಳಿವೆಯೆಂದು ‘ಕನ್ನಡ ವ್ಯಾಕರಣ’ಗಳು ಹೇಳುತ್ತವೆ; ಇದರಂತೆ, ಮಾಡುತ್ತೇನೆ ಎಂಬ ರೂಪ ಈಗ ನಡೆಯುತ್ತಿರುವ ಕೆಲಸವನ್ನು ತಿಳಿಸಬೇಕು, ಮತ್ತು ಮಾಡುವೆನು ಎಂಬ ರೂಪ ಮುಂದೆ ನಡೆಯಲಿರುವ ಕೆಲಸವನ್ನು ತಿಳಿಸಬೇಕು.

ಆದರೆ, ನಿಜಕ್ಕೂ ಕನ್ನಡದಲ್ಲಿ ನಾಳೆ ಮಾಡುತ್ತೇನೆ, ಬರುವ ವರ‍್ಶ ಮಾಡುತ್ತೇನೆ ಎಂಬಂತಹ ಸೊಲ್ಲುಗಳಲ್ಲಿ ಕಾಣಿಸುವ ಹಾಗೆ, ಮಾಡುತ್ತೇನೆ ಎಂಬುದು ಮುಂದೆ ನಡೆಯಲಿರುವ ಕೆಲಸವನ್ನು ತಿಳಿಸುತ್ತದೆ; ಈಗ ನಡೆಯುತ್ತಿರುವ ಕೆಲಸವನ್ನು ತಿಳಿಸಲು ಮಾಡುತ್ತಿದ್ದೇನೆ ಎಂಬ ಮಾಡು ಪದಕ್ಕೆ ಇರು ಪದವನ್ನು ಸೇರಿಸಿರುವ ಬೇರೆಯೇ ಪದರೂಪವನ್ನು ಬಳಸಲಾಗುತ್ತದೆ. ಇಂತಹ ಕಣ್ಣಿಗೆ ಹೊಡೆದು ಕಾಣಿಸುವಂತಹ ತಪ್ಪುಗಳಿರುವ ‘ಕನ್ನಡ ವ್ಯಾಕರಣ’ ಕನ್ನಡದ್ದಾಗುವುದು ಹೇಗೆ?

ಕಂಪ್ಯೂಟರ್‌ಗಳನ್ನು ಬಳಸಿ ಒಂದು ನುಡಿಯ ಸೊಲ್ಲುಗಳನ್ನು ಇನ್ನೊಂದು ನುಡಿಗೆ ಅನುವಾದಿಸಲು ಬರುತ್ತದೆ; ಆದರೆ, ಹೀಗೆ ಮಾಡಬೇಕಿದ್ದಲ್ಲಿ, ಆ ಎರಡು ನುಡಿಗಳ ವಿವರವಾದ ಸೊಲ್ಲರಿಮೆಗಳನ್ನು ಕಂಪ್ಯೂಟರ್‌ಗಳಿಗೆ ಒದಗಿಸಿಕೊಡಬೇಕಾಗುತ್ತದೆ. ಇಂಗ್ಲಿಶ್ ನುಡಿಗೆ ಈಗಾಗಲೇ ಸಾಕಶ್ಟು ವಿವರವಾದ ವ್ಯಾಕರಣವನ್ನು ಬರೆಯಲಾಗಿದ್ದು, ಅದನ್ನು ಕಂಪ್ಯೂಟರ್‌ಗಳಿಗೆ ಒದಗಿಸಿಕೊಡಲಾಗಿದೆ; ಕನ್ನಡಕ್ಕೂ ಇಂತಹದೊಂದು ವಿವರವಾದ ಸೊಲ್ಲರಿಮೆಯನ್ನು ಬರೆದಲ್ಲಿ, ಇಂಗ್ಲಿಶ್ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವಲ್ಲಿಯೂ ಕಂಪ್ಯೂಟರನ್ನು ಬಳಸಲು ಸಾದ್ಯವಾಗಬಹುದು.

ಆದರೆ, ಇಂತಹ ಕೆಲಸಕ್ಕೆ ಸಂಸ್ಕ್ರುತ ವ್ಯಾಕರಣವನ್ನೇ ‘ಕನ್ನಡ ವ್ಯಾಕರಣ’ವೆಂದು ಬ್ರಮಿಸುವ ಕೇಶಿರಾಜನ ಕನ್ನಡ ವ್ಯಾಕರಣವಾಗಲಿ, ಇವತ್ತು ಶಾಲೆಗಳಲ್ಲಿ ಕಲಿಸುವ ‘ಕನ್ನಡ ವ್ಯಾಕರಣ’ವಾಗಲಿ ಯಾವ ನೆರವನ್ನೂ ನೀಡಲಾರದು. ಕನ್ನಡದಲ್ಲಿ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಬಲ್ಲ ‘ಕನ್ನಡದ ಸೊಲ್ಲರಿಮೆ’ಯೊಂದೇ ಈ ಕೆಲಸದಲ್ಲಿ ನೆರವನ್ನು ನೀಡಬಲ್ಲುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter