Posts Tagged ‘ಪದನೆರಕೆ’
ನುಡಿಯರಿಮೆಯ ಇಣುಕುನೋಟ – 30
ಒಂದು ಪದವನ್ನು ಕೇಳಿದಾಗ ಅದರ ಅರ‍್ತವೇನೆಂದು ನಮಗೆ ಗೊತ್ತಾಗುತ್ತದೆ; ಆದರೆ, ನಿಜಕ್ಕೂ ಈ ‘ಅರ‍್ತ’ ಎಂದರೇನು? ಪದನೆರಕೆ(ಪದಕೋಶ)ಗಳಲ್ಲಿ ಪದಗಳ ಅರ‍್ತವೇನೆಂದು ಕೊಡಲಾಗುತ್ತದೆ; ಆದರೆ ಅವು ಇದಕ್ಕಾಗಿ ಒಂದು ಪದದ ಬದಲು ಅದೇ ಅರ‍್ತದ ಇಲ್ಲವೇ ಅದಕ್ಕೆ ಹತ್ತಿರದ ಅರ‍್ತದ ಬೇರೊಂದು ಪದವನ್ನು ಕೊಡುತ್ತವೆ. ‘ಎಲ್ಲೆ’ ಎಂಬ ಪದಕ್ಕೆ ಕನ್ನಡದ ಒಂದು ಪದಕೋಶ ‘ಗಡಿ’ ಎಂಬ ಇನ್ನೊಂದು ಪದವನ್ನು ಅದರ ಅರ‍್ತವೆಂದು ಕೊಡಬಹುದು.
ಆದರೆ ‘ಗಡಿ’ ಎಂಬುದೂ ಕನ್ನಡದಲ್ಲಿ ಬಳಕೆಯಾಗುವ ಒಂದು ಪದವಾದ ಕಾರಣ, ಅದಕ್ಕೂ ಅದರದೇ ಆದ ಅರ‍್ತ ಇದೆ. ಹಾಗಾಗಿ, ನಿಜಕ್ಕೂ ಅದು ‘ಎಲ್ಲೆ’ ಪದದ ಅರ‍್ತ ಏನು ಎಂಬುದನ್ನು ನಮಗೆ ತಿಳಿಸುವುದಿಲ್ಲ. ಆ ಎರಡು ಪದಗಳ ಅರ‍್ತ ಒಂದೇ ಎಂದಶ್ಟೇ ಅದು ತಿಳಿಸುತ್ತದೆ. ಹಾಗಾಗಿ, ‘ಎಲ್ಲೆ’ ಎಂಬುದಕ್ಕೆ ‘ಗಡಿ’ ಎಂಬ ಅರ‍್ತವನ್ನು ಕೊಡುವ ಪದನೆರಕೆ ‘ಗಡಿ’ ಎಂಬುದಕ್ಕೆ ‘ಎಲ್ಲೆ’ ಎಂಬ ಅರ‍್ತವನ್ನೂ ಕೊಟ್ಟಿರಬಹುದು!
ಕನ್ನಡ ಪದಕ್ಕೆ ಇಂಗ್ಲಿಶ್ ಪದ ಇಲ್ಲವೇ ಪದಕಂತೆಯ ಮೂಲಕವಾಗಲಿ ಇಲ್ಲವೇ ಬೇರೊಂದು ನುಡಿಯ ಪದದ ಮೂಲಕವಾಗಲಿ ಅರ‍್ತ ಹೇಳುವ ಪದನೆರಕೆಗಳೂ ಇವೆ. ಆದರೆ, ಇಂತಹ ಪದನೆರಕೆಗಳೂ ಎರಡು ಪದಗಳ ಅರ‍್ತ ಹೆಚ್ಚುಕಡಿಮೆ ಒಂದೇ ಎಂಬುದಾಗಿ ತಿಳಿಸುತ್ತವಲ್ಲದೆ ನಿಜಕ್ಕೂ ಆ ಅರ‍್ತ ಎಂತಹದು ಎಂಬುದನ್ನು ತಿಳಿಸುವುದಿಲ್ಲ. ನಾನು ಹೇಳಿದ್ದು ಅರ‍್ತವಾಯಿತೋ? ಎಂದು ಯಾರಾದರೂ ಕೇಳಿದರೆ ನಾವು ಅರ‍್ತವಾಯಿತು ಎಂದು ಹೇಳಬಹುದು. ಆದರೆ ಏನು ಅರ‍್ತವಾಯಿತು? ಎಂದು ಕೇಳಿದರೆ ಅಂತಹದೇ ಇನ್ನೊಂದು ಮಾತನ್ನು ಹೇಳಬಲ್ಲೆವಲ್ಲದೆ ಬೇರೇನೂ ಮಾಡಲಾರೆವು.
ಒಂದು ಮಾತನ್ನು ಕೇಳಿದ ಮೇಲೆ ನಾವು ಏನು ಮಾಡುತ್ತೇವೆ ಎಂಬುದರಿಂದ ನಮಗೆ ಆ ಮಾತು ಅರ‍್ತವಾಗಿದೆಯೋ ಇಲ್ಲವೋ ಎಂಬುದು ತಿಳಿದೀತು. ‘ಕುಳಿತುಕೊಳ್ಳಿ’ ಎಂದು ಹೇಳಿದಾಗ ಎದುರಿಗಿದ್ದವನು ಕುಳಿತುಕೊಂಡನಾದರೆ ಅವನಿಗೆ ಆ ಮಾತು ಅರ‍್ತವಾಗಿದೆಯೆಂದು ಹೇಳಬಹುದು. ಆದರೆ, ಆತ ಕುಳಿತುಕೊಳ್ಳದಿದ್ದರೂ ಆ ಮಾತು ಅವನಿಗೆ ಅರ‍್ತವಾಗಿಲ್ಲವೆಂದು ಹೇಳಲು ಬರುವುದಿಲ್ಲ. ಇದಲ್ಲದೆ ಹಾಗೆ ಮಾಡಬೇಕೆಂಬುದು ಆ ಮಾತಿನ ಅರ‍್ತವಲ್ಲದೆ ಹಾಗೆ ಮಾಡುವುದು ಅದರ ‘ಅರ‍್ತ’ವಲ್ಲ.
ಮೇಲಿನಿಂದ ಮೇಲೆ ನೋಡುವಾಗ ತೀರ ಸುಲಬವೆಂದು ಕಾಣಿಸಿದರೂ ವಿವರಿಸಹೊರಟಾಗ ತೀರ ತೊಡಕಿನದಾಗುವ ಈ ‘ಅರ‍್ತ’ ಎಂಬುದರ ಕುರಿತು ಹಲವಾರು ಮಂದಿ ತತ್ವಜ್ನಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಇಲ್ಲಿ ನಮಗೆದುರಾಗುವ ಈ ತೊಡಕಿಗೆ ಮುಕ್ಯ ಕಾರಣವೇನೆಂದರೆ, ನಾವು ಬಳಸುವ ‘ಅರ‍್ತ’ ಇಲ್ಲವೇ ‘meaning’ ಎಂಬ ಪದ ಎರಡು ತೀರ ಬೇರಾಗಿರುವ ಪರಿಕಲ್ಪನೆಗಳನ್ನು ಸೂಚಿಸುತ್ತದೆ. ಒಂದು ಮಾತನ್ನು ಕೇಳಿದಾಗ ನಮಗೆ ಅದು ಅರ‍್ತವಾಗುತ್ತದೆ, ಮತ್ತು ಇದು ನಮ್ಮ ಅರಿವಿಗೆ ಎಟಕದ ರೂಪದಲ್ಲಿರುವ ಅರ‍್ತ.
ಈ ರೀತಿ ನಾವು ಮಾಡಿಕೊಂಡಿರುವ ಅರ‍್ತವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂದಿದ್ದಲ್ಲಿ ಅದನ್ನು ಬೇರೊಂದು ರೀತಿಯ ಮಾತಿನ ಮೂಲಕವಾಗಲಿ ಇಲ್ಲವೇ ಸನ್ನೆ, ಚಿತ್ರ ಮೊದಲಾದವುಗಳ ಮೂಲಕವಾಗಲೀ ಸೂಚಿಸಬೇಕಾಗುತ್ತದೆ, ಮತ್ತು ಇದು ನಮ್ಮ ಅರಿವಿಗೆ ಎಟಕುವ ರೂಪದಲ್ಲಿರುವ ಅರ‍್ತ. ಈ ರೀತಿ ‘ಅರಿವಿಗೆ ಎಟಕದಿರುವ ಅರ‍್ತ’ ಮತ್ತು ‘ಅರಿವಿಗೆ ಎಟಕುವ ಅರ‍್ತ’ ಎಂಬುದಾಗಿ ಎರಡು ರೀತಿಯ ‘ಅರ‍್ತ’ಗಳು ಪದಗಳಿಗಿವೆ.
ಪದನೆರಕೆಗಳು ಕೊಡುವುದು ಅರಿವಿಗೆ ಎಟಕುವ ಅರ‍್ತಗಳನ್ನು ಮಾತ್ರ. ಅರಿವಿಗೆ ಎಟಕದ ಅರ‍್ತಗಳು ಅವಕ್ಕೂ ಎಟಕಲಾರವು. ಈ ಎರಡು ರೀತಿಯ ‘ಅರ‍್ತ’ಗಳ ನಡುವೆ ಹಲವು ರೀತಿಯ ವ್ಯತ್ಯಾಸಗಳಿದ್ದು ಅವನ್ನು ಸರಿಯಾಗಿ ತಿಳಿದುಕೊಳ್ಳದುದರಿಂದಾಗಿ ಅರಿವಿಗರು ಹಲವು ಬಗೆಯ ಗೊಂದಲಗಳಿಗೆ ಒಳಗಾಗಿದ್ದಾರೆ. ಅರಿವಿಗೆ ಎಟಕದ ಅರ‍್ತವನ್ನು ‘ತಿಳಿವು’ ಎಂಬುದಾಗಿ, ಮತ್ತು ಅರಿವಿಗೆ ಎಟಕುವ ಅರ‍್ತವನ್ನು ‘ಹುರುಳು’ ಎಂಬುದಾಗಿ ಹೆಸರಿಸಿದಲ್ಲಿ ಈ ಗೊಂದಲ ತಾನಾಗಿಯೇ ಇಲ್ಲವಾಗುತ್ತದೆ.
ಪದಗಳ ‘ತಿಳಿವು’ ಎನ್ನುವುದು ಅವನ್ನು ತಿಳಿದಿರುವವರ ಮಿದುಳಿನಲ್ಲಿ ಕೆಲವು ವಿಶಿಶ್ಟವಾದ ನರಗಳ ವಿನ್ಯಾಸಗಳಾಗಿ ಉಂಟಾಗಿರುತ್ತವೆ. ಯಾರಾದರೊಬ್ಬ ಆಡುಗನು ಒಂದು ಪದವನ್ನು ಬಳಸಿದಾಗ ಕೇಳುಗನ ಮಿದುಳಿನಲ್ಲಿ ಆ ಪದಕ್ಕಿರುವ ನರಗಳ ವಿನ್ಯಾಸ ಜೀವಂತವಾಗುತ್ತದೆ; ಎಂದರೆ ಅದು ಮಿಂಚುತ್ತದೆ. ನರಗಳ ವಿನ್ಯಾಸವೊಂದು ಈ ರೀತಿ ಮಿಂಚಿದಾಗ ಆತನಿಗೆ ತನಗೆ ತಿಳಿದಿರುವ ಪದವೊಂದನ್ನು ಕೇಳಿದಹಾಗಾಗುತ್ತದೆ.
ಒಂದು ನುಡಿಯನ್ನು ಕಲಿಯುವುದೆಂದರೆ ಮಿದುಳಿನಲ್ಲಿ ಇಂತಹ ಹಲವಾರು ನರಗಳ ವಿನ್ಯಾಸಗಳನ್ನು ಹೊಸದಾಗಿ ಉಂಟುಮಾಡಿಕೊಳ್ಳುವುದಲ್ಲದೆ ಬೇರೇನಲ್ಲ. ಒಬ್ಬ ವ್ಯಕ್ತಿ ಕಲಿಯದಿರುವ ನುಡಿಯ ಪದಗಳನ್ನು ಕೇಳಿದಾಗ ಅವನ ಮಿದುಳಿನಲ್ಲಿರುವ ನರಗಳ ವಿನ್ಯಾಸಗಳಲ್ಲಿ ಯಾವುದೂ ಮಿಂಚುವುದಿಲ್ಲ. ಅಂತಹ ಪದಗಳಿಗೆ ಮಿಂಚಬಲ್ಲ ನರಗಳ ವಿನ್ಯಾಸಗಳು ಆತನ ಮಿದುಳಿನಲ್ಲಿ ಉಂಟಾಗಿಲ್ಲವೆಂಬುದೇ ಇದಕ್ಕೆ ಕಾರಣ.
ಒಂದು ಪದದ ಹುರುಳು ಇದಕ್ಕಿಂತ ತೀರ ಬೇರಾದುದು. ‘ಎಲ್ಲೆ’ ಎಂಬ ಪದದ ಹುರುಳನ್ನು ‘ಗಡಿ’ ಎಂಬುದಾಗಿ ಕೊಡಬಹುದು. ಇಲ್ಲಿ ಎರಡು ಪದಗಳಿವೆ; ಅವುಗಳಲ್ಲಿ ಒಂದು ಇನ್ನೊಂದರ ಹುರುಳು. ಎರಡೂ ಪದಗಳೇ. ಆದರೆ ಅವುಗಳಲ್ಲಿ ಒಂದು ಪದದ (‘ಗಡಿ’ ಎಂಬುದರ) ತಿಳಿವು ಕೇಳುಗನಲ್ಲಿದೆ ಮತ್ತು ಇನ್ನೊಂದರ (‘ಎಲ್ಲೆ’ ಎಂಬುದರ) ತಿಳಿವು ಆತನಲ್ಲಿಲ್ಲ ಎಂಬ ಕಾರಣಕ್ಕಾಗಿ ಒಂದನ್ನು ಇನ್ನೊಂದರ ಹುರುಳು ಎಂಬುದಾಗಿ ಪರಿಗಣಿಸಲಾಗಿದೆ.
ಕೇಳುಗನಲ್ಲಿ ತಿಳಿವಿಲ್ಲದಿರುವ ಪದಕ್ಕೆ ಆತನಲ್ಲಿ ತಿಳಿವಿರುವ ಪದದ ಮೂಲಕ ಪದನೆರಕೆಗಳು ತಿಳಿವನ್ನು ಕೊಡಲು ಪ್ರಯತ್ನಿಸುತ್ತವೆ. ‘ಎಲ್ಲೆ’ ಪದದ ತಿಳಿವಿಲ್ಲದವರು ಮಾತ್ರವೇ ಪದನೆರಕೆಗಳಲ್ಲಿ ಅದರ ಅರ‍್ತವನ್ನು ಹುಡುಕಲು ಹೋಗುತ್ತಾರೆ. ಹಾಗೆ ಹುಡುಕುವವರಿಗೆ ‘ಗಡಿ’ ಎಂಬುದರ ತಿಳಿವು ಇರಬಹುದು ಎಂಬುದಾಗಿ ಪದನೆರಕೆಯನ್ನು ರಚಿಸುವವರು ಕಲ್ಪಿಸಿಕೊಂಡು ಆ ಪದವನ್ನು ಅದರ ಹುರುಳಾಗಿ ಕೊಡುತ್ತಾರೆ. ಇದಕ್ಕೆ ಬದಲು, ‘ಗಡಿ’ ಪದದ ತಿಳಿವಿಲ್ಲದವರು ಆ ಪದದ ಅರ‍್ತವನ್ನು ಪದನೆರಕೆಗಳಲ್ಲಿ ಹುಡುಕುತ್ತಾರೆ ಮತ್ತು ಅವರಿಗೆ ‘ಎಲ್ಲೆ’ ಎಂಬ ಪದದ ತಿಳಿವಿರಬಹುದೆಂದು ಪದನೆರಕೆಗಳನ್ನು ರಚಿಸುವವರು ಕಲ್ಪಿಸಿಕೊಂಡು ಆ ಪದವನ್ನು ಅದರ ಹುರುಳಾಗಿ ಕೊಡುತ್ತಾರೆ. ಎರಡರ ತಿಳಿವೂ ಇಲ್ಲದವರಿಗೆ ಅಂತಹ ಪದನೆರಕೆ ಯಾವ ನೆರವನ್ನೂ ನೀಡಲಾರದು.
ತಿಳಿವು ಮತ್ತು ಹುರುಳುಗಳ ನಡುವಿರುವ ಈ ವ್ಯತ್ಯಾಸ ಹುರುಳುಗಳ ನಡುವಿನ ಸಂಬಂದವೆಂತಹದು ಎಂಬುದನ್ನು ತಿಳಿಯುವಲ್ಲಿ ಬಹಳ ಪ್ರಯೋಜನಕ್ಕೆ ಬರುತ್ತದೆ. ಎರಡು ಪದಗಳಿಗೆ (‘ಎಲ್ಲೆ’ ಮತ್ತು ‘ಗಡಿ’ ಎಂಬವುಗಳಿಗೆ) ಒಂದೇ ಅರ‍್ತವಿದೆ ಎಂದು ಹೇಳುವಾಗ ನಾವು ಅವುಗಳಲ್ಲಿ ಒಂದನ್ನು ಇನ್ನೊಂದರ ಹುರುಳಾಗಿ ಬಳಸಬಲ್ಲೆವು ಎಂದಶ್ಟೇ ಹೇಳುತ್ತೇವಲ್ಲದೆ ನಿಜಕ್ಕೂ ಆ ಎರಡು ಪದಗಳಿಗೆ ನಮ್ಮಲ್ಲಿ ಒಂದೇ ರೀತಿಯ ತಿಳಿವಿದೆ ಎಂದೇನೂ ಹೇಳುವುದಿಲ್ಲ. ಯಾಕೆಂದರೆ, ಒಂದು ಪದದ ತಿಳಿವಿಗೆ ಹಲವು ಆಯಾಮಗಳಿದ್ದು ಅವೆಲ್ಲವುಗಳಲ್ಲೂ ಅದು ಇನ್ನೊಂದು ಪದದ ಹಾಗೆಯೇ ಇರಲು ಸಾದ್ಯವೇ ಇಲ್ಲ. ಎತ್ತುಗೆಗಾಗಿ, ‘ಗಡಿ’ ಪದವನ್ನು ಹೊತ್ತಿಗೆ ಸಂಬಂದಿಸಿದಂತೆಯೂ ‘ಗಡಿ’ ಇಲ್ಲವೇ ‘ಗಡುವು’ ಎಂಬ ರೂಪದಲ್ಲಿ ಬಳಸಲು ಬರುತ್ತದೆ; ಆದರೆ, ‘ಎಲ್ಲೆ’ ಎಂಬ ಪದಕ್ಕೆ ಅಂತಹ ಹೊತ್ತಿಗೆ ಸಂಬಂದಿಸಿದ ಬಳಕೆಯಿಲ್ಲ. ಇವೆರಡರೊಳಗೆ ಇಂತಹ ಇನ್ನೂ ಹಲವು ವ್ಯತ್ಯಾಸಗಳಿವೆಯಾದ ಕಾರಣ, ಅವೆರಡರ ಅರ‍್ತ ಒಂದೇ ಎನ್ನುವುದು ಹುರುಳಿಗೆ ಸಂಬಂದಿಸಿದ ಪರಿಕಲ್ಪನೆಯಲ್ಲದೆ ತಿಳಿವಿಗೆ ಸಂಬಂದಿಸಿದ ಪರಿಕಲ್ಪನೆಯಲ್ಲ.
ಒಂದು ಪದದ ಹುರುಳನ್ನು ಪದಕಂತೆ ಇಲ್ಲವೇ ಸೊಲ್ಲಿನ ಮೂಲಕ ವಿವರಿಸುವಲ್ಲೂ ಇಂತಹದೇ ಸಮಸ್ಯೆ ನಮ್ಮೆದುರಿಗಿದೆ. ನಾವು ಕೊಡುವ ಪದಕಂತೆ ಇಲ್ಲವೇ ಸೊಲ್ಲು ಆ ಪದದ ತಿಳಿವಿನ ಕೆಲವು ಅಂಶಗಳನ್ನು ಮಾತ್ರವೇ ಸೂಚಿಸಬಲ್ಲುದಲ್ಲದೆ ಎಲ್ಲಾ ಅಂಶಗಳನ್ನೂ ಸೂಚಿಸಲಾರದು. ಕೆಲವು ಪದಗಳ ಹಿಂದಿರುವ ತಿಳಿವನ್ನು ಸರಿಯಾಗಿ ತಿಳಿಸಬೇಕಿದ್ದಲ್ಲಿ ಒಂದು ದೊಡ್ಡ ಪ್ರಬಂದವನ್ನೇ ಬರೆಯಬೇಕಾದೀತು. ಹಾಗಾಗಿ, ಇಲ್ಲೂ ನಮ್ಮೆದುರಿಗಿರುವುದು ಹುರುಳಿಗೆ ಸಂಬಂದಿಸಿದ ಪರಿಕಲ್ಪನೆಯೇ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 27
ನುಡಿಗಳಲ್ಲಿ ಬಳಕೆಯಾಗುವ ಪದಗಳನ್ನು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗುತ್ತದೆ; ಮ್, ಅ, ನ್ ಮತ್ತು ಎ ಎಂಬ ನಾಲ್ಕು ಉಲಿಗಳ ಸೇರಿಕೆಯಿಂದ ‘ಮನೆ’ ಎಂಬ ಪದವನ್ನು ಉಂಟುಮಾಡಲಾಗಿದೆ; ಆದರೆ, ಈ ಉಲಿಗಳಲ್ಲಿ ಯಾವುದಕ್ಕೂ ಅದರದೇ ಆದ ಹುರುಳಿಲ್ಲ; ಅವುಗಳ ಸೇರಿಕೆಯಿಂದ ಉಂಟಾದ ‘ಮನೆ’ ಎಂಬ ಪದಕ್ಕೆ ಮಾತ್ರ ಹುರುಳಿದೆ. ಯಾಕೆಂದರೆ, ‘ಮ್’ ಎಂಬುದು ಮನೆ ಎಂಬ ಪದದಲ್ಲಿ ಮಾತ್ರವಲ್ಲದೆ, ಮಂಗ, ಮಜ್ಜಿಗೆ, ಕಡಿಮೆ, ಮಿಂಚು, ಕಮಟು, ಅಮ್ಮ ಮೊದಲಾದ ಬೇರೆಯೂ ಹಲವು ಪದಗಳಲ್ಲಿ ಬರುತ್ತದೆ, ಮತ್ತು ಈ ಎಲ್ಲಾ ಪದಗಳಿಗೂ ಸಮಾನವಾಗಿರುವ ಹುರುಳೊಂದನ್ನು ಕಂಡುಹಿಡಿದು, ಅದು ‘ಮ್’ ಎಂಬ ಉಲಿಯ ಹುರುಳು ಎಂಬುದಾಗಿ ತೋರಿಸಿಕೊಡಲು ಸಾದ್ಯವೇ ಇಲ್ಲ.
ಇದಲ್ಲದೆ, ಪದಗಳ ಅಂಗಗಳಾಗಿರುವ ಉಲಿಗಳು ಮಾರ‍್ಪಟ್ಟಾಗಲೂ ಅವುಗಳ ಹುರುಳು ಮಾರ‍್ಪಡದೆ ಉಳಿಯುತ್ತದೆ; ಈ ವಿಶಯವೂ ಹುರುಳೆಂಬುದು ಪದಗಳಿಗಿದೆಯಲ್ಲದೆ ಉಲಿಗಳಿಗಿಲ್ಲ ಎಂಬುದನ್ನು ಬೆಂಬಲಿಸುತ್ತದೆ. ಹಳೆಗನ್ನಡದ ಪಾಲ್ ಎಂಬುದು ಹಾಲು ಎಂಬುದಾಗಿ, ಬೞ್ದುಂಕು ಎಂಬುದು ಬದುಕು ಎಂಬುದಾಗಿ, ಬೆರಲ್ ಎಂಬುದು ಬೆರಳ್ ಎಂಬುದಾಗಿ ಹೊಸಗನ್ನಡದಲ್ಲಿ ಮಾರ‍್ಪಟ್ಟಾಗ, ಅದರಿಂದಾಗಿ ಆ ಪದಗಳಿಗೆ ಮೊದಲಿಗಿದ್ದ ಹುರುಳುಗಳಲ್ಲಿ ಮಾರ‍್ಪಾಡುಗಳೇನೂ ಆಗಿರಲಿಲ್ಲ.
ಉಲಿಗಳಿಗೆ ಅವುಗಳದೇ ಆದ ಹುರುಳಿಲ್ಲದಿದ್ದರೂ ಪದಗಳಿಗೆ ಅವುಗಳದೇ ಆದ ಹುರುಳಿದೆಯೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ; ಅದರೆ, ಇಲ್ಲೂ ಕೆಲವು ಸಮಸ್ಯೆಗಳಿವೆ; ಪದನೆರಕೆ(ಡಿಕ್ಶನರಿ)ಗಳಲ್ಲಿ ಹೆಚ್ಚಿನ ಪದಗಳಿಗೂ ಎರಡು ಇಲ್ಲವೇ ಹೆಚ್ಚು ಹುರುಳುಗಳನ್ನು ಕೊಡಲಾಗುತ್ತದೆಯೆಂಬುದನ್ನು ಗಮನಿಸಬಹುದು; ಆದರೆ, ಈ ಪದಗಳನ್ನು ಸೊಲ್ಲುಗಳಲ್ಲಿ ಬಳಸಿದಾಗ, ಅವುಗಳ ಈ ಹಲವು ಹುರುಳುಗಳಲ್ಲಿ ಒಂದು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎತ್ತುಗೆಗಾಗಿ, ಕಾಯು ಎಂಬ ಪದಕ್ಕೆ ಕಾಪಾಡು ಎಂಬ ಹುರುಳೂ ಇದೆ, ಬಿಸಿಮಾಡು ಎಂಬ ಹುರುಳೂ ಇದೆ; ಆದರೆ, ‘ನಾಯಿ ಮನೆಯನ್ನು ಕಾಯುತ್ತಿದೆ’ ಎಂಬ ಸೊಲ್ಲನ್ನು ಬಳಸಿದಾಗ ಕಾಯು ಪದದ ಮೊದಲನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದಲ್ಲದೆ, ಎರಡನೆಯ ಹುರುಳು ಗಮನಕ್ಕೆ ಬರುವುದಿಲ್ಲ.
ಇದೇ ರೀತಿಯಲ್ಲಿ ‘ಹಂಡೆಯಲ್ಲಿ ನೀರು ಕಾಯುತ್ತಿದೆ’ ಎಂಬ ಬೇರೊಂದು ಸೊಲ್ಲನ್ನು ಬಳಸಿದಾಗ ಅದರ ಎರಡನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎಂದರೆ, ಒಂದು ಪದ ನಮಗೆ ಎಂತಹ ಹುರುಳನ್ನು ಕೊಡುತ್ತದೆ ಎಂಬುದು ಅದನ್ನು ಎಂತಹ ಸೊಲ್ಲಿನಲ್ಲಿ ಬಳಸಲಾಗಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ. ಕೆಲವೊಮ್ಮೆ ಈ ರೀತಿ ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದು ತೊಂದರೆಯನ್ನೂ ಕೊಡಬಲ್ಲುದು. ಎತ್ತುಗೆಗಾಗಿ, ‘ಅವನು ಕರೆಯಲು ಬಂದಿದ್ದಾನೆ’ ಎಂದಿಶ್ಟೇ ಹೇಳಿದಲ್ಲಿ ಅವನು ಎಲ್ಲಿಗಾದರೂ ಬರಬೇಕೆಂದು ಹೇಳಲು ಬಂದಿದ್ದಾನೋ ಇಲ್ಲವೇ ದನವನ್ನು ಕರೆಯಲು ಬಂದಿದ್ದಾನೋ ಎಂಬ ವಿಶಯದಲ್ಲಿ ಗೊಂದಲವುಂಟಾಗಬಲ್ಲುದು. ಆದರೆ, ಸಾಮಾನ್ಯವಾಗಿ ನಾವು ಮಾತನ್ನು ಬಳಸುವಾಗ ಆ ರೀತಿ ಗೊಂದಲವುಂಟಾಗದಂತೆ ನೋಡಿಕೊಳ್ಳುತ್ತೇವೆ.
ಮಾತಿನಲ್ಲಿ ಬಳಕೆಯಾಗುವ ಪದಗಳಲ್ಲಿ ಹಲವಕ್ಕೆ (ಹೆಸರುಪದಗಳಿಗೆ) ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುವ ಕಸುವಿರುತ್ತದೆ. ‘ಸುರೇಶ ಒಂದು ಹಣ್ಣು ತಿಂದ’ ಎಂಬ ಸೊಲ್ಲಿನಲ್ಲಿ ಎರಡು ಹೆಸರುಪದಗಳು ಬಂದಿದ್ದು, ಅವುಗಳಲ್ಲಿ ‘ಹಣ್ಣು’ ಎಂಬ ಪದ ಒಂದು ವಸ್ತುವನ್ನು ಗುರುತಿಸುತ್ತದೆ ಮತ್ತು ‘ಸುರೇಶ’ ಎಂಬ ಪದ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಪದಗಳ ಮೂಲಕ ಮಾತ್ರವಲ್ಲದೆ ಪದಕಂತೆಗಳ ಮೂಲಕವೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಬರುತ್ತದೆ. ‘ಕುರ‍್ಚಿಯಲ್ಲಿ ಕುಳಿತಿರುವ ಮುದುಕ’ ಎಂಬ ಪದಕಂತೆ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ, ಮತ್ತು ‘ರಾಜು ಕೊಟ್ಟ ಪುಸ್ತಕ’ ಎಂಬ ಇನ್ನೊಂದು ಪದಕಂತೆ ಒಂದು ವಸ್ತುವನ್ನು ಗುರುತಿಸುತ್ತದೆ.
ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ಪದಗಳ ಮೂಲಕ ಗುರುತಿಸುವುದಕ್ಕೂ ಪದಕಂತೆಗಳ ಮೂಲಕ ಗುರುತಿಸುವುದಕ್ಕೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ. ಪದಕಂತೆಗಳ ಮೂಲಕ ಗುರುತಿಸುವಾಗ ಅವುಗಳ ಹುರುಳು ಬಳಕೆಯಾಗುತ್ತದೆ, ಆದರೆ ಪದಗಳ ಮೂಲಕ ಗುರುತಿಸುವಾಗ ಆ ರೀತಿ ಅವುಗಳ ಹುರುಳು ಬಳಕೆಯಾಗುವುದಿಲ್ಲ. ಅದಕ್ಕೆ ಬದಲು, ಪದಗಳಿಗೂ ಅವು ತಿಳಿಸಬಲ್ಲ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ಸಂಬಂದ ಬಳಕೆಯಾಗುತ್ತದೆ.
ನಿಜಕ್ಕೂ ಒಂದು ಹೆಸರುಪದದ ಹುರುಳೇನು ಎಂಬುದನ್ನು ತಿಳಿಯಬೇಕಿದ್ದಲ್ಲಿ ಮೊದಲಿಗೆ ಅದು ಎಂತಹ ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ‘ನಾಯಿ’ ಎಂಬ ಪದ ಎಂತಹ ಪ್ರಾಣಿಯನ್ನು ಗುರುತಿಸಲು ಬಳಕೆಯಾಗುತ್ತದೆ, ಮತ್ತು ಆ ಪ್ರಾಣಿಯ ಪರಿಚೆ(ಗುಣ)ಗಳು ಎಂತಹವು ಎಂಬುದನ್ನು ತಿಳಿದಾಗ ಮಾತ್ರ ನಮಗೆ ಆ ಪದದ ಹುರುಳೇನು ಎಂಬುದು ಗೊತ್ತಾಗುತ್ತದೆ; ಹಾಗಾಗಿ, ಆ ಪ್ರಾಣಿಯ ಪರಿಚೆಗಳನ್ನೇ ಒಟ್ಟಾಗಿ ‘ನಾಯಿ’ ಎಂಬ ಪದದ ಹುರುಳು ಎಂದು ಹೇಳಬೇಕಾಗುತ್ತದೆ.
ಒಳರಚನೆಯಿರುವ ಪದಗಳ ಹುರುಳನ್ನೂ ಇದೇ ರೀತಿಯಲ್ಲಿ ಅವು ತಿಳಿಸುವ ವಸ್ತು, ವ್ಯಕ್ತಿ ಮೊದಲಾದವುಗಳ ಪರಿಚೆಗಳು ಎಂತಹವು ಎಂಬುದರಿಂದ ತಿಳಿಯಬೇಕಾಗುತ್ತದಲ್ಲದೆ ಅವುಗಳ ಒಳರಚನೆ ಎಂತಹದು ಎಂಬುದರಿಂದ ತಿಳಿಯಲು ಬರುವುದಿಲ್ಲ. ‘ಹೊಸಮನೆ’ ಎಂಬ ಪದದಲ್ಲಿ ‘ಹೊಸ’ ಮತ್ತು ‘ಮನೆ’ ಎಂಬ ಎರಡು ಪದಗಳು ಸೇರಿಕೊಂಡಿವೆ; ಆದರೆ, ಅದು ಗುರುತಿಸುವ ಮನೆ ಹೊಸದಾಗಿರಬಲ್ಲುದು, ಇಲ್ಲವೇ ತುಂಬಾ ಹಳೆಯದಾಗಿರಬಲ್ಲುದು; ಯಾಕೆಂದರೆ, ಒಮ್ಮೆ ಒಂದು ಮನೆಯನ್ನು ಆ ಹೆಸರಿನಿಂದ ಕರೆಯತೊಡಗಿದ ಮೇಲೆ, ಅದು ತುಂಬಾ ಹಳೆಯದಾದಾಗಲೂ ಆ ಹೆಸರನ್ನು ನಾವು ಬದಲಾಯಿಸಹೋಗುವುದಿಲ್ಲ; ಎಂದರೆ, ‘ಹೊಸಮನೆ’ ಎಂಬ ಪದದ ಹುರುಳು ಅದು ಗುರುತಿಸುವ ಮನೆಯ ಪರಿಚೆಗಳು ಬದಲಾದ ಹಾಗೆಲ್ಲ ಬದಲಾಗುತ್ತಾ ಹೋಗುತ್ತದೆ. ‘ಹಳೆಮನೆ’ ಎಂಬ ಹೆಸರಿರುವ ಇನ್ನೊಂದು ಮನೆಯನ್ನು ಕೆಡವಿ ಅಲ್ಲೊಂದು ಹೊಸಮನೆಯನ್ನು ಕಟ್ಟಿದಾಗಲೂ ಅದಕ್ಕೆ ಮೊದಲು ಬಳಕೆಯಲ್ಲಿದ್ದ ‘ಹಳೆಮನೆ’ ಎಂಬ ಹೆಸರು ಹಾಗೆಯೇ ಉಳಿದಿರುತ್ತದೆ; ಆ ಪದದ ಹುರುಳು ಮಾತ್ರ ಮಾರ‍್ಪಟ್ಟಿರುತ್ತದೆ.
ಹೆಸರುಪದಗಳಿಗೆ ಅವುಗಳ ಹುರುಳಿನೊಂದಿಗಿರುವ ಸಂಬಂದಕ್ಕಿಂತಲೂ ಅವು ಸೂಚಿಸುವ ವ್ಯಕ್ತಿ, ವಸ್ತು, ಸಂಗತಿ ಮೊದಲಾದವುಗಳೊಂದಿಗಿರುವ ಸಂಬಂದವೇ ಹೆಚ್ಚು ಮುಕ್ಯವಾದುದು ಎಂಬ ವಿಶಯ ಇದರಿಂದ ಸ್ಪಶ್ಟವಾಗುತ್ತದೆ. ಕೆಲವೆಡೆಗಳಲ್ಲಿ ಪದಗಳ ಒಳರಚನೆಯನ್ನು ಬಳಸಿ ಅವುಗಳ ಹುರುಳನ್ನು ಊಹಿಸಿಕೊಳ್ಳಬಲ್ಲೆವಾದರೂ ಈ ವಿಶಯದಲ್ಲಿ ಕೊನೆಯ ತೀರ‍್ಮಾನಕ್ಕೆ ಬರಲು ಇಂತಹ ಸಂಬಂದದ ನೆರವು ಬೇಕೇ ಬೇಕು.
ಸೊಲ್ಲುಗಳಲ್ಲಿ ಬರುವ ಎಸಕ(ಕ್ರಿಯಾ)ಪದ, ಪರಿಚೆ(ಗುಣ)ಪದ ಮೊದಲಾದವುಗಳ ಹುರುಳೇನೆಂಬುದನ್ನು ತೀರ‍್ಮಾನಿಸುವುದು ಇದಕ್ಕಿಂತಲೂ ಹೆಚ್ಚು ತೊಡಕಿನ ಕೆಲಸ. ಯಾಕೆಂದರೆ, ಅದಕ್ಕಾಗಿ ಅವು ಬರುವ ಪದಕಂತೆಗಳ ಇಲ್ಲವೇ ಸೊಲ್ಲುಗಳ ಹುರುಳೇನೆಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಆ ಹುರುಳಿನಲ್ಲಿ ಯಾವುದೇ ಒಂದು ಎಸಕಪದದ ಇಲ್ಲವೇ ಪರಿಚೆಪದದ ಕೊಡುಗೆ ಎಂತಹದು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ. ಪದಗಳೊಂದಿಗೆ ಬರುವ ಒಟ್ಟು(ಪ್ರತ್ಯಯ)ಗಳ ಹುರುಳನ್ನೂ ಇದೇ ರೀತಿಯಲ್ಲಿ ಆ ಪದಗಳ ಬಳಕೆಯಲ್ಲಿ ಅವುಗಳ ಕೊಡುಗೆ ಎಂತಹದು ಎಂಬುದನ್ನು ಪರಿಶೀಲಿಸುವ ಮೂಲಕ ತಿಳಿಯಬೇಕಾಗುತ್ತದೆ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 16
ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ತಾವಾಗಿಯೇ ಕಲಿತುಕೊಳ್ಳುತ್ತಾರೆ; ಕೆಲವರು ಈ ಕಲಿಕೆಯನ್ನು ಬೇಗನೆ ನಡೆಸಬಹುದು, ಮತ್ತು ಕೆಲವರು ಅದಕ್ಕಾಗಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಮಿದುಳಿನ ತೊಂದರೆಯಿಲ್ಲದ ಯಾವ ಮಗುವೂ ತನ್ನ ತಾಯ್ನುಡಿಯಲ್ಲಿ ಮಾತನಾಡಲು ಕಲಿಯದಿರುವುದಿಲ್ಲ.
ಹಾಗಾಗಿ, ಮಾತಿನ ಕಲಿಕೆಯನ್ನು ಮಕ್ಕಳು ಹುಟ್ಟಿನಿಂದಲೇ ಪಡೆದುಕೊಂಡು ಬಂದ ಅಳವೆಂದು ಹೇಳಲಾಗುತ್ತದೆ. ಆದರೆ, ಓದಿನ ಕಲಿಕೆ ಆ ರೀತಿಯದಲ್ಲ; ಹೆಚ್ಚಿನ ಮಕ್ಕಳಿಗೂ ಓದುವ ಬಗೆಯನ್ನು ಯಾರಾದರೂ ಕಲಿಸಿಕೊಟ್ಟಲ್ಲಿ ಮಾತ್ರ ಅವರು ಅದನ್ನು ಕಲಿಯುತ್ತಾರೆ. ಸಯ್ಕಲ್ ತುಳಿಯುವುದು, ಈಜುವುದು ಮೊದಲಾದವುಗಳ ಹಾಗೆ, ಓದು ಹುಟ್ಟಿನಿಂದ ಬರುವ ಅಳವಲ್ಲ; ಕಲಿತು ಪಡೆಯುವ ಅಳವು.
ಬರಹಗಳನ್ನು ಸಲೀಸಾಗಿ ಓದಲು ಕಲಿಯಬೇಕಾದರೆ, ಮಕ್ಕಳು ಕೆಲವು ಚಳಕ(ಕವ್ಶಲ್ಯ)ಗಳನ್ನು ತಮ್ಮದಾಗಿಸಿಕೊಳ್ಳಬೇಕಾಗುತ್ತದೆ: ಮಾತಿನಲ್ಲಿ ಬರುವ ಪದಗಳನ್ನೆಲ್ಲ ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬುದನ್ನು ಅವರು ಗಮನಿಸಬೇಕು, ಮತ್ತು ಪುಟಗಳಲ್ಲಿ ಬರುವ ಗುರುತುಗಳಿಗೂ ಈ ಮಾತಿನ ಉಲಿಗಳಿಗೂ ನಡುವೆ ಎಂತಹ ಸಂಬಂದವಿದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.
ಇದಲ್ಲದೆ, ಪುಟಗಳಲ್ಲಿ ಬರುವ ಈ ಗುರುತುಗಳ ಜೋಡಣೆಗಳಲ್ಲಿ ಪದ, ಪದಕಂತೆ ಮತ್ತು ಸೊಲ್ಲುಗಳನ್ನು ಕಾಣಲು, ಮತ್ತು ಅವುಗಳಿಂದ ಬರಹಗಾರನು ಏನು ಹೇಳುತ್ತಿದ್ದಾನೆ ಎಂಬುದನ್ನು (ಎಂದರೆ ಬರಹದ ಹುರುಳನ್ನು) ತಿಳಿಯಲು ಅವರು ಕಲಿಯಬೇಕು.
ಮಾತಿನಲ್ಲಿ ಬರುವ ಪದಗಳು ಉಲಿಗಳ ಸೇರಿಕೆಯಿಂದ ಉಂಟಾಗುತ್ತವೆ ಎಂಬುದನ್ನು ಗಮನಿಸುವಂತೆ ಮಾಡಲು ಮಕ್ಕಳಿಗೆ ಕೆಲವು ಆಟಗಳನ್ನು ಕಲಿಸಬಹುದು: ಮನೆ, ಮಾತು, ಮೋಡ, ಮುಗಿಲು ಎಂಬಂತಹ ಪದಗಳಲ್ಲೆಲ್ಲ ಮೊದಲಿಗೆ ಮಕಾರ ಬಂದಿದೆ, ಕೆಲವು ಪದಗಳಿಂದ ಈ ಮಕಾರವನ್ನು ತೆಗೆದು ಹಾಕಿದರೆ ಬೇರೊಂದು ಪದ ಸಿಗುತ್ತದೆ (ಮತ್ತೆ-ಅತ್ತೆ, ಮಾಡು-ಆಡು, ಮಿಡಿ-ಇಡಿ), ಕೆಲವು ಪದಗಳಲ್ಲಿ ಮಕಾರದ ಬದಲು ಕಕಾರವನ್ನು ಬಳಸಿದರೆ ಬೇರೆ ಪದ ಸಿಗುತ್ತದೆ (ಮತ್ತೆ-ಕತ್ತೆ, ಮಾಡು-ಕಾಡು, ಮಿಡಿ-ಕಿಡಿ) ಎಂಬಂತಹ ವಿಶಯಗಳನ್ನು ಅವರು ಗಮನಿಸುವ ಹಾಗೆ ಮಾಡಬಹುದು, ಮತ್ತು ಪದಗಳನ್ನು ಉಲಿಗಳಾಗಿ ಒಡೆಯುವ ಬಗೆಯನ್ನು ಕಲಿಸಬಹುದು. ಇದರಿಂದ, ಪದಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಅವರು ತಿಳಿಯುವ ಹಾಗೆ ಮಾಡಬಹುದು.
ಕನ್ನಡ ಬರಹದ ಪುಟಗಳಲ್ಲಿ ಕಾಣಿಸುವ ಗುರುತು(ಬರಿಗೆ)ಗಳಿಗೂ ಅವನ್ನು ಓದುವಲ್ಲಿ ಬಳಕೆಯಾಗುವ ಉಲಿಗಳಿಗೂ ನಡುವೆ ನೇರವಾದ ಸಂಬಂದವಿದೆ; ಇಂಗ್ಲಿಶ್ ಬರಹದಲ್ಲಿರುವ ಹಾಗೆ ಅದು ತೊಡಕು ತೊಡಕಾಗಿಲ್ಲ. ಹಾಗಾಗಿ, ಕನ್ನಡ ಬರಹಗಳನ್ನು ಓದಲು ಕಲಿಯುವ ಮಕ್ಕಳು ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಗಮನಿಸುವಂತೆ ಮಾಡುವುದು ಹೆಚ್ಚು ತೊಡಕಿನ ಕೆಲಸವಲ್ಲ. ಆದರೆ, ಸಂಸ್ಕ್ರುತದ ಎರವಲು ಪದಗಳಲ್ಲಿ ಬಳಕೆಯಾಗುತ್ತಿರುವ ಅಲ್ಪಪ್ರಾಣ-ಮಹಾಪ್ರಾಣ, ರು-ಋ, ಶ-ಷ ಮೊದಲಾದ ಹಲವು ವ್ಯತ್ಯಾಸಗಳು ಓದಿನಲ್ಲಿ ಕಾಣಿಸುವುದಿಲ್ಲ, ಮತ್ತು ಇವುಗಳಿಂದಾಗಿ ಉಲಿಗಳಿಗೂ ಬರಿಗೆಗಳಿಗೂ ನಡುವಿರುವ ಸಂಬಂದವನ್ನು ಗಮನಿಸುವಲ್ಲಿ ಹೆಚ್ಚಿನ ಮಕ್ಕಳೂ ಗೊಂದಲದಲ್ಲಿ ಬೀಳುತ್ತಾರೆ. ಹಾಗಾಗಿ, ಕನ್ನಡದ ಮಟ್ಟಿಗೆ ಅನವಶ್ಯಕವಾಗಿರುವ ಈ ವ್ಯತ್ಯಾಸಗಳನ್ನು ಮಕ್ಕಳ ಓದಿನಿಂದ ದೂರ ಇರಿಸುವುದು ಒಳ್ಳೆಯದು.
ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ತಿಳಿಯುವುದು ಬರಹವನ್ನು ಓದಲು ಕಲಿಯುವಲ್ಲಿ ತುಂಬಾ ಮುಕ್ಯವಾದ ಕೆಲಸ. ಈ ನಂಟನ್ನು ತಿಳಿದುಕೊಂಡವರಿಗೆ ತಮಗೆ ಗೊತ್ತಿರುವ ಪದಗಳನ್ನು ಮಾತ್ರವಲ್ಲದೆ ಗೊತ್ತಿಲ್ಲದ ಪದಗಳನ್ನೂ ಓದಲು ಬರುತ್ತದೆ. ಈ ನಂಟನ್ನು ತಿಳಿಯದ ಮಕ್ಕಳು ಪದಗಳನ್ನು ಚಿತ್ರಗಳ ಹಾಗೆ ಇಡಿ ಇಡಿಯಾಗಿ ಓದಲು ಹೋಗುತ್ತಾರೆ, ಮತ್ತು ಇದರಿಂದಾಗಿ ಬರಹದಲ್ಲಿ ಹೊಸ ಪದಗಳು ಕಾಣಿಸಿಕೊಂಡಾಗ ಅವರ ಓದು ಮುಂದೆ ಸಾಗುವುದಿಲ್ಲ.
ಇತ್ತೀಚೆಗೆ ನಡೆಸಿದ ಹಲವು ಮಿದುಳಿನ ಅರಕೆಗಳು ಓದಿನಲ್ಲಿ ಬೇಗನೆ ಮುಂದೆ ಹೋಗುವ ಮಕ್ಕಳಿಗೂ ಹಿಂದೆ ಬೀಳುವ ಮಕ್ಕಳಿಗೂ ನಡುವೆ ಅವರು ಪದಗಳನ್ನು ಓದುವ ಬಗೆಯಲ್ಲೇ ಇಂತಹ ವ್ಯತ್ಯಾಸವಿದೆಯೆಂಬುದನ್ನು ಸ್ಪಶ್ಟವಾಗಿ ತೋರಿಸಿಕೊಟ್ಟಿವೆ. ಓದಿನಲ್ಲಿ ಬೇಗನೆ ಮುಂದೆ ಹೋಗುವ ಮಕ್ಕಳು ಓದುತ್ತಿರುವಾಗ, ಅವರ ಮಿದುಳಿನಲ್ಲಿ ಮೂರು ಜಾಗಗಳು ಮಿಂಚುತ್ತಿರುತ್ತವೆ: ಬರಿಗೆಗಳನ್ನು ಗುರುತಿಸುವ ಕಣ್ಣಿಗೆ ಸಂಬಂದಿಸಿದ ಜಾಗ, ಅವನ್ನು ಉಲಿಗಳೊಂದಿಗೆ ಜೋಡಿಸುವ ಕಿವಿಗೆ ಸಂಬಂದಿಸಿದ ಜಾಗ, ಮತ್ತು ಅವನ್ನು ಹುರುಳಿನೊಂದಿಗೆ ಸಂಬಂದಿಸುವ ಮಿದುಳಿನ ಹಿಂಬಾಗದಲ್ಲಿರುವ ಜಾಗ. ಓದಿನಲ್ಲಿ ಹಿಂದೆ ಬೀಳುವ ಮಕ್ಕಳು ಓದುತ್ತಿರುವಾಗ, ಅವರ ಮಿದುಳಿನಲ್ಲಿ ಕಣ್ಣಿಗೆ ಮತ್ತು ಹುರುಳಿಗೆ ಸಂಬಂದಿಸಿದ ಜಾಗಗಳು ಮಾತ್ರ ಮಿಂಚುತ್ತಿರುತ್ತವಲ್ಲದೆ, ಕಿವಿಗೆ ಸಂಬಂದಿಸಿದ ಜಾಗ ಮಿಂಚುತ್ತಿರುವುದಿಲ್ಲ. ಎಂದರೆ, ಪದಗಳನ್ನು ಬರಿಗೆಗಳಾಗಿ ಒಡೆದು, ಅವನ್ನು ಉಲಿಗಳೊಂದಿಗೆ ಸಂಬಂದಿಸಿ ಓದುವುದು ಹೇಗೆ ಎಂಬುದನ್ನು ಅವರು ಕಲಿತಿಲ್ಲ.
ಒಮ್ಮೆ ಪದಗಳನ್ನು ಬರಿಗೆಗಳಾಗಿ ಬಿಡಿಸಿ, ಅವನ್ನು ಉಲಿಗಳೊಂದಿಗೆ ಸಂಬಂದಿಸಲು ಕಲಿತಮೇಲೆ, ಆಗಾಗ ಬರುವ ಪದಗಳನ್ನು ಇಡಿ ಇಡಿಯಾಗಿ ಗುರುತಿಸಿ ಓದುವ ಬಗೆಯನ್ನೂ ಮಕ್ಕಳು ಕಲಿತುಕೊಳ್ಳಬೇಕಾಗುತ್ತದೆ; ಯಾಕೆಂದರೆ, ಬರಹಗಳನ್ನು ಬೇಗನೆ ಮತ್ತು ಸಲೀಸಾಗಿ ಓದಲು ಇಂತಹ ಕಲಿಕೆಯೂ ಬೇಕಾಗುತ್ತದೆ. ಆದರೆ, ಆಮೇಲೆಯೂ, ಅಪರೂಪಕ್ಕೆ ಬರುವ ಪದಗಳನ್ನು ಮತ್ತು ಹೊಸ ಪದಗಳನ್ನು ಓದಲು ಅವನ್ನು ಬರಿಗೆಗಳಾಗಿ ಒಡೆದು ಉಲಿಗಳೊಂದಿಗೆ ಸಂಬಂದಿಸುವ ಬಗೆ ಅವರಿಗೆ ಬೇಕಾಗುತ್ತದೆ.
ಬರಹಗಳಲ್ಲಿ ಬರುವ ಪದಗಳನ್ನು ಓದುವ ಬಗೆ ಹೇಗೆ ಎಂಬುದನ್ನು ಕಲಿತರೆ ಸಾಲದು, ಅವನ್ನು ಪದಕಂತೆಗಳಾಗಿ ಮತ್ತು ಸೊಲ್ಲುಗಳಾಗಿ ಜೋಡಿಸಿ, ಅವುಗಳಿಂದ ಹುರುಳನ್ನು ಪಡೆಯುವುದು ಹೇಗೆ ಎಂಬುದನ್ನೂ ಮಕ್ಕಳು ಕಲಿಯಬೇಕಾಗುತ್ತದೆ. ಅವರ ಓದು ಬೇಗನೆ ಮತ್ತು ಸಲೀಸಾಗಿ ನಡೆಯುತ್ತಿದೆಯಾದರೆ ಮಾತ್ರ ಅವರಿಗೆ ಈ ರೀತಿ ತಮ್ಮ ಓದಿನಿಂದ ಹುರುಳನ್ನು ಪಡೆಯಲು ಬರುತ್ತದೆ. ತುಂಬಾ ಮೆಲ್ಲಗೆ ಓದುವ ಮಕ್ಕಳಿಗೆ ಪದಗಳು ಮಾತ್ರ ಕಾಣಿಸುತ್ತವಲ್ಲದೆ ಪದಕಂತೆಗಳು ಇಲ್ಲವೇ ಸೊಲ್ಲುಗಳು ಕಾಣಿಸುವುದಿಲ್ಲ.
ಓದಲು ಕಲಿಯುತ್ತಿರುವ ಮಕ್ಕಳ ಮಿದುಳಿನಲ್ಲಿ ಮಾತಿನ ಪದನೆರಕೆ (ಪದಕೋಶ) ಮತ್ತು ಓದಿನ ಪದನೆರಕೆ ಎಂಬುದಾಗಿ ಎರಡು ಬಗೆಯ ಪದನೆರಕೆಗಳು ನೆಲೆಗೊಳ್ಳುತ್ತವೆ; ಇವುಗಳಲ್ಲಿ ಓದಿನ ಪದನೆರಕೆಯನ್ನು ಹಿಗ್ಗಿಸುವ ಮೂಲಕ ಮಕ್ಕಳು ಓದಿನಲ್ಲಿ ಮುಂದೆ ಬರುವಂತೆ ಮಾಡಬಹುದು. ಬಗೆ ಬಗೆಯ ಬರಹಗಳನ್ನು, ಮತ್ತು ಹೆಚ್ಚು ಹೆಚ್ಚು ಬರಹಗಳನ್ನು ಅವರು ಓದುವ ಹಾಗೆ ಮಾಡುವ ಮೂಲಕ ಅವರ ಈ ಓದಿನ ಪದನೆರಕೆಯನ್ನು ಹಿಗ್ಗಿಸಲು ಬರುತ್ತದೆ.
ಕೆಲವು ಮಂದಿ ತಾಯ್ತಂದೆಯರು ಪಟ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಮಕ್ಕಳು ಓದಬಾರದೆಂದು ಕಟ್ಟಲೆ ಮಾಡುತ್ತಾರೆ; ಕತೆ ಕಾದಂಬರಿಗಳನ್ನು ಓದಿ ಸಮಯ ಹಾಳುಮಾಡಬಾರದೆಂದು ಆಗಾಗ ಮಕ್ಕಳಿಗೆ ಹೇಳುತ್ತಿರುತ್ತಾರೆ. ಆದರೆ, ಬರೇ ಪಟ್ಯಪುಸ್ತಕಗಳನ್ನು ಮಾತ್ರವೇ ಓದುತ್ತಿದ್ದರೆ ಮಕ್ಕಳ ಓದಿನ ಪದನೆರಕೆ ತುಂಬಾ ಚಿಕ್ಕದಾಗಿಯೇ ಉಳಿಯುತ್ತದೆ. ಅದನ್ನು ಹಿಗ್ಗಿಸಬೇಕಿದ್ದಲ್ಲಿ ಅವರು ಎಲ್ಲಾ ಬಗೆಯ ಬರಹಗಳನ್ನೂ ಓದುತ್ತಿರಬೇಕು. ಹಾಗಾಗಿ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಮತ್ತು ಬೇರೆ ಬಗೆಯ ಬರಹಗಳನ್ನು ಅವರು ಓದುವಂತೆ ಮಾಡಬೇಕು.
ಓದಿನಲ್ಲಿ ತಮಗೆ ತಿಳಿಯದ ಪದ ಬಂದಾಗ, ಅದರ ಹುರುಳನ್ನು ಪದನೆರಕೆಯ ನೆರವಿನಿಂದ ಕಂಡುಹಿಡಿಯುವುದು ಹೇಗೆ ಎಂಬುದನ್ನೂ ಅವರಿಗೆ ತೋರಿಸಿಕೊಡಬೇಕು. ಪದನೆರಕೆಗಳಲ್ಲಿ ಪದಗಳಿಗೆ ಹಲವು ಹುರುಳುಗಳನ್ನು ಕೊಟ್ಟಿರುತ್ತಾರೆ. ಇವುಗಳಲ್ಲಿ ತಮ್ಮ ಓದಿಗೆ ಹೊಂದಿಕೆಯಾಗುವಂತಹದನ್ನು ಆರಿಸಿಕೊಳ್ಳುವುದು ಹೇಗೆ ಎಂಬುದನ್ನೂ ಅವರಿಗೆ ತೋರಿಸಿಕೊಡಬೇಕು. ಈ ರೀತಿ ತಮ್ಮ ಓದಿಗೆ ಪದನೆರಕೆಯ ನೆರವನ್ನು ಪಡೆಯಲು ಕಲಿತ ಮಕ್ಕಳ ಓದಿನ ಪದನೆರಕೆಯೂ ಬೇಗನೆ ಹಿಗ್ಗುತ್ತದೆ.
ಓದಿನಲ್ಲಿ ಹಿಂದೆ ಬೀಳುವ ಮಕ್ಕಳು ಬೇರೆ ವಿಶಯಗಳಲ್ಲೂ ಹಿಂದೆ ಬೀಳುತ್ತಾರೆ; ಯಾಕೆಂದರೆ, ಈ ಎಲ್ಲಾ ವಿಶಯಗಳ ಕಲಿಕೆಯನ್ನೂ ಅವರು ಓದಿನ ಮೂಲಕವೇ ನಡೆಸಬೇಕಾಗುತ್ತದೆ. ಹಾಗಾಗಿ, ಮಕ್ಕಳು ಬೇಗನೆ ಮತ್ತು ಸಲೀಸಾಗಿ ಓದಲು ಕಲಿಯುವಂತೆ ಮಾಡುವುದು, ಮತ್ತು ಇದಕ್ಕಾಗಿ ಅವರ ಓದು ಸರಿಯಾದ ಕ್ರಮದಲ್ಲಿ ಮುಂದುವರಿಯುವಂತೆ ಮಾಡುವುದು ತುಂಬಾ ಮುಕ್ಯವಾದ ಕೆಲಸವಾಗಿದೆ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 7
ಎಲ್ಲರೂ ಬಳಸಬೇಕಿರುವ ಕನ್ನಡ ಬರಹದಲ್ಲಿ ಮಹಾಪ್ರಾಣ, ಋಕಾರ, ಷಕಾರ ಮೊದಲಾದ ಕೆಲವು ಕನ್ನಡಕ್ಕೆ ಬೇಡದ ಬರಿಗೆಗಳನ್ನು ಬಿಟ್ಟುಕೊಡುವುದು ಒಳ್ಳೆಯದು ಎಂಬುದಾಗಿ, ಇಲ್ಲವೇ ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಒಂದು ಮಿತಿಯಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು ಎಂಬುದಾಗಿ ಹೇಳಿದಾಗ, ಇದು ತಮಿಳಿನ ದ್ರಾವಿಡ ಕಳಗಂ ಹಿಡಿದ ದಾರಿ ಎಂಬ ಮರುನುಡಿ ಕೇಳಿಬರುತ್ತದೆ.
ಆದರೆ, ಈ ಮರುನುಡಿ ಸರಿಯಲ್ಲ. ನಾವು ತಮಿಳರಿಂದಕಲಿಯಬಹುದಾದ ವಿಶಯಗಳೂ ಕೆಲವಿವೆ; ಆದರೆ ಹಾಗೆಂದು, ಎಲ್ಲಾ ವಿಶಯಗಳಲ್ಲೂ ಅವರನ್ನು ಕಣ್ಣುಮುಚ್ಚಿ ಹಿಂಬಾಲಿಸಬೇಕೆಂದೇನಿಲ್ಲ. ನಮಗೆ ಸರಿಯೆಂದು ಕಂಡುದನ್ನು ಅವರಿಂದ ಕಲಿಯೋಣ, ಮತ್ತು ಬೇರೆ ವಿಶಯಗಳಲ್ಲಿ ನಮ್ಮದೇ ಆದ ದಾರಿಯನ್ನೂ ಕಂಡುಕೊಳ್ಳೋಣ.
ತಮ್ಮ ನುಡಿಯ ಕುರಿತಾಗಿ ತಮಿಳರಿಗೆ ಎಲ್ಲೆಯಿಲ್ಲದ ಹೆಮ್ಮೆ ಮತ್ತು ಒಲುಮೆಗಳಿವೆ; ಆದರೆ, ಕನ್ನಡದ ತಿಳಿವಿಗರಿಗೆ ತಮ್ಮ ನುಡಿಯ ಕುರಿತು ಕೀಳರಿಮೆಯಿದೆ. ಎಂತಹ ಹೊಸ ಪದವನ್ನು ಬೇಕಿದ್ದರೂ ತಮ್ಮ ನುಡಿಯಲ್ಲಿ ಉಂಟುಮಾಡಲು ಬರುತ್ತದೆ ಎಂಬುದನ್ನು ತಮಿಳರು ಕಂಡುಕೊಂಡಿದ್ದಾರೆ, ಮತ್ತು ಅದನ್ನು ಬಳಕೆಗೂ ತಂದಿದ್ದಾರೆ; ಆದರೆ, ಕನ್ನಡದ ತಿಳಿವಿಗರು ಹೊಸ ಪದಗಳನ್ನುಂಟುಮಾಡಲು ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬುದಾಗಿ ಕಯ್ಚೆಲ್ಲಿ ಕುಳಿತಿದ್ದಾರೆ.
ತಮಿಳಿನ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ತೊಂಬತ್ತಯ್ದರಶ್ಟು ತಮಿಳು ಪದಗಳಿವೆ; ಆದರೆ, ಕನ್ನಡದ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ಹತ್ತರಶ್ಟೂ ಕನ್ನಡದ ಪದಗಳಿಲ್ಲ! ಇಂತಹ ಕೆಲವು ವಿಶಯಗಳಲ್ಲಿ ನಾವು ತಮಿಳರನ್ನು ಹಿಂಬಾಲಿಸಿದಲ್ಲಿ, ಅದು ನಮ್ಮ ನುಡಿಯ ಮತ್ತು ಸಮಾಜದ ಏಳಿಗೆಗೆ ನೆರವಾಗಬಲ್ಲುದು.
ಆದರೆ, ಬೇರೆ ಕೆಲವು ವಿಶಯಗಳಲ್ಲಿ ಅವರು ಹಿಡಿದ ದಾರಿ ನಮಗೆ ಬೇಕಿಲ್ಲ. ದ್ರಾವಿಡ ಕಳಗಗಳು ನಡೆಸಿದ ಚಳವಳಿಯಿಂದಾಗಿ, ತಮಿಳು ಬರಹದಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳು ತುಂಬಾ ಕಡಿಮೆಯಾದುವೇನೋ ನಿಜ; ಆದರೆ, ಇದರಿಂದ ಬರಹದ ತಮಿಳಿಗೂ ತಮಿಳಿನ ಆಡುನುಡಿಗಳಿಗೂ ನಡುವಿದ್ದ ಅಂತರ ಕಡಿಮೆಯಾಗುವ ಬದಲು ಹೆಚ್ಚಾಗಿದೆ.
ಯಾಕೆಂದರೆ, ಬರಹದಿಂದ ತೆಗೆದು ಹಾಕಿದ ಸಂಸ್ಕ್ರುತ ಪದಗಳಿಗೆ ಬದಲಾಗಿ ಇವರು ಹಳೆತಮಿಳಿನ ಪದಗಳನ್ನೇ ಬಳಕೆಗೆ ತಂದಿದ್ದಾರೆ; ಇವು ಹೊಸತಮಿಳಿನ ಪದಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿವೆ. ಇದಲ್ಲದೆ, ಹೆಚ್ಚುಕಡಿಮೆ ಹದಿಮೂರನೇ ಶತಮಾನದ ತಮಿಳನ್ನೇ ಬರಹಗಳಲ್ಲಿ ಬಳಸಲು ತೊಡಗಿದ್ದಾರೆ. ಇದು ಕನ್ನಡ ಬರಹಗಳಲ್ಲಿ ಇವತ್ತು ಹೊಸಗನ್ನಡದ ಬದಲು ಹಳೆಗನ್ನಡವನ್ನು ಬಳಸಲು ಹೊರಡುವ ಹಾಗೆ ಎನ್ನಬಹುದು.
ಇಂತಹ ತಮಿಳರ ದಾರಿ ನಮಗೆ ಬೇಕಾಗಿಲ್ಲ. ಕನ್ನಡ ಬರಹದಲ್ಲಿ ಯಾವ ಮಾರ‍್ಪಾಡನ್ನು ಮಾಡುವುದಿದ್ದರೂ ಅದಕ್ಕೆ ಕನ್ನಡ ಬರಹಕ್ಕೂ ಕನ್ನಡದ ಆಡುನುಡಿಗಳಿಗೂ ನಡುವಿರುವ ವ್ಯತ್ಯಾಸವನ್ನು ಕಡಿಮೆಮಾಡುವುದೇ ಮುಕ್ಯ ಗುರಿಯಾಗಿರಬೇಕು. ಕನ್ನಡಕ್ಕೆ ಬೇಕಿಲ್ಲದ ಮಹಾಪ್ರಾಣ, ಋಕಾರ, ಷಕಾರಗಳನ್ನು ಬರಹದಲ್ಲಿ ಬಳಸದಿರುವುದು, ಮತ್ತು ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸುವುದು ಎಂಬ ಈ ಎರಡು ಮಾರ‍್ಪಾಡುಗಳಿಗೂ ಇದೇ ಮುಕ್ಯ ಗುರಿಯಾಗಿದೆ.
ಇನ್ನು ತಮಿಳು ಬರಹದಲ್ಲಿ ಮಹಾಪ್ರಾಣ, ಋಕಾರ, ಗಜಡದಬ ಮೊದಲಾದ ಕೆಲವು ಬರಿಗೆಗಳು ಬಳಕೆಯಾಗದಿರುವುದಕ್ಕೆ ದ್ರಾವಿಡ ಕಳಗಗಳು ಕಾರಣವಲ್ಲ. ಇತ್ತೀಚೆಗೆ ನಡೆಸಿದ ಯಾವ ಮಾರ‍್ಪಾಡೂ ಅದಕ್ಕೆ ಕಾರಣವಲ್ಲ. ಬ್ರಾಹ್ಮೀಲಿಪಿಯನ್ನು ತಮಿಳಿಗೆ ಅಳವಡಿಸುವ ಸಮಯದಲ್ಲೇನೇ, ಎಂದರೆ ಸುಮಾರು ಎರಡು ಸಾವಿರ ವರ‍್ಶಗಳಶ್ಟು ಹಿಂದೆಯೇ ತಮಿಳು ಬರಹದಲ್ಲಿ ಈ ಬರಿಗೆಗಳನ್ನು ಬಳಸದಿರಲು ತೀರ‍್ಮಾನಿಸಲಾಗಿತ್ತು.
ಆವತ್ತಿನ ತಮಿಳು ಓದಿಗೆ ಈ ಬರವಣಿಗೆ ಸರಿಯಾಗಿಯೂ ಇದ್ದಿರಬೇಕು; ಆದರೆ, ಆಮೇಲೆ ತಮಿಳು ನುಡಿಯಲ್ಲಿ ಹಲವಾರು ಮಾರ‍್ಪಾಡುಗಳು ನಡೆದಿದ್ದು, ಇದರಿಂದಾಗಿ ಇವತ್ತಿನ ಓದಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳು ಮೂಡಿಬಂದಿವೆ. ಈ ವ್ಯತ್ಯಾಸಗಳನ್ನನುಸರಿಸಿ ತಮಿಳು ಬರಹದಲ್ಲಿ ಹೆಚ್ಚಿನ ಮಾರ‍್ಪಾಡನ್ನೇನೂ ನಡೆಸಿಲ್ಲವಾದ ಕಾರಣ, ಅದರ ಬಳಕೆಯಲ್ಲಿ ಇವತ್ತು ಕೆಲವು ತೊಡಕುಗಳು ಕಾಣಿಸಿಕೊಳ್ಳುತ್ತಿವೆ.
ಸಂಸ್ಕ್ರುತ ಕಾವ್ಯಗಳನ್ನು ಇಲ್ಲವೇ ಬೇರೆ ಸಂಸ್ಕ್ರುತ ಬರಹಗಳನ್ನು ಬರೆಯಲು ಬೇಕಾಗುವ ಹಲವು ಹೆಚ್ಚಿನ ಬರಿಗೆಗಳನ್ನು ತಮಿಳು ಬರಹದಲ್ಲೇನೇ ಉಳಿಸಿಕೊಳ್ಳುವ ಬದಲು, ಅವರು ಗ್ರಂತ ಲಿಪಿಯೆಂಬ ಬೇರೆಯೇ ಒಂದು ಬಗೆಯ ಬರಹವನ್ನು ಬಳಕೆಗೆ ತಂದಿದ್ದರು. ಹಾಗಾಗಿ, ಈ ಬರಿಗೆಗಳ ತೊಡಕು ಅವರ ಬರಹವನ್ನು ತಟ್ಟಿಲ್ಲ.
ಕನ್ನಡ ಬರಹ ಉತ್ತರದಿಂದ ವಲಸೆಬಂದ ಬ್ರಾಹ್ಮಣರ ಕೊಡುಗೆಯಾಗಿದೆ; ಈ ಬ್ರಾಹ್ಮಣರು ಆರ‍್ಯರಾಗಿದ್ದು, ಸಂಸ್ಕ್ರುತದ ಮೇಲೆ ಅವರಿಗೆ ಹೆಚ್ಚಿನ ಮಮತೆ ಮತ್ತು ಪೂಜ್ಯಬಾವವಿತ್ತು. ಹಾಗಾಗಿ, ಅವರು ಕನ್ನಡದ ಬರಹದಲ್ಲಿ ಸಂಸ್ಕ್ರುತ ಬರಹಕ್ಕೆ ಬೇಕಾಗುವ ಎಲ್ಲಾ ಬರಿಗೆಗಳನ್ನೂ, ಅವು ಕನ್ನಡಕ್ಕೆ ಬೇಡವಾಗಿದ್ದರೂ, ಉಳಿಸಿಕೊಂಡಿದ್ದರು, ಮತ್ತು ಕನ್ನಡಕ್ಕೆ ಬೇಕಾಗುವ ಎ, ಒ, ಱ, ೞದಂತಹ ಕೆಲವು ಹೆಚ್ಚಿನ ಬರಿಗೆಗಳನ್ನೂ ಹೊಸದಾಗಿ ಸೇರಿಸಿಕೊಂಡಿದ್ದರು.
ಮೊನ್ನೆ ಮೊನ್ನೆವರೆಗೂ ಕನ್ನಡ ಬರಹ ಮುಕ್ಯವಾಗಿ ಬ್ರಾಹ್ಮಣರ ಬಳಕೆಯಲ್ಲೇ ಉಳಿದುಕೊಂಡಿತ್ತು; ಕೆಳವರ‍್ಗದ ಜನರು ಅದರಿಂದ ದೂರವೇ ಉಳಿದಿದ್ದರು. ತುಂಬಾ ಸಂಸ್ಕ್ರುತ ಪದಗಳನ್ನು ಬಳಸುವ, ಮತ್ತು ಕನ್ನಡಕ್ಕೆ ಬೇಕಿಲ್ಲದ ಹಲವು ಬರಿಗೆಗಳನ್ನು ಬಳಸುವ ಈ ಬರಹವೂ ಅವರು ಈ ರೀತಿ ಅದರಿಂದ ದೂರ ಉಳಿಯಲು ಒಂದು ಕಾರಣವಾಗಿತ್ತು.
ಆದರೆ, ಇವತ್ತು ಬರಹಕ್ಕೆ ಕಳೆದ ಎರಡು ಸಾವಿರ ವರ‍್ಶಗಳಲ್ಲೂ ಇಲ್ಲದಿದ್ದಂತಹ ಮೇಲ್ಮೆ ದೊರೆತಿದೆ; ಇವತ್ತಿನ ಸಮಾಜದಲ್ಲಿ ಬರಹದ ಅರಿವಿಲ್ಲದವರು ಯಾರೂ ಮುಂದೆ ಬರಲು ಸಾದ್ಯವೇ ಇಲ್ಲ ಎಂಬಂತಹ ಪರಿಸ್ತಿತಿಯುಂಟಾಗಿದೆ; ಇದಲ್ಲದೆ, ಎಲ್ಲಾ ಜನರೂ ಬರಹಬಲ್ಲವರಾಗದೆ ಇವತ್ತು ಯಾವ ಸಮಾಜವೂ ಏಳಿಗೆಹೊಂದಲಾರದು. ಹಾಗಾಗಿ, ಕನ್ನಡಿಗರ, ಅವರ ಸಮಾಜದ, ಮತ್ತು ಅವರ ಬರಹದ ಏಳಿಗೆಗಾಗಿ, ಇವತ್ತು ಕನ್ನಡ ಬರಹ ಎಲ್ಲರನ್ನೂ ತಲಪುವಂತೆ ಮಾಡಬೇಕಾಗಿದೆ, ಮತ್ತು ಇದಕ್ಕಾಗಿ ಕನ್ನಡಕ್ಕೆ ಬೇಕಿಲ್ಲದ ಹಲವು ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡಬೇಕಾಗಿದೆ.
ಇಲ್ಲಿ ಇನ್ನೊಂದು ವಿಶಯವನ್ನೂ ಗಮನಿಸಬೇಕಾಗಿದೆ: ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಕಡಿಮೆಮಾಡಬೇಕು ಎಂದು ಹೇಳಿದರೆ, ದ್ರಾವಿಡ ಕಳಗಂನವರು ಹೇಳುತ್ತಿದ್ದ ಹಾಗೆ, ಸಂಸ್ಕ್ರುತ ಪದಗಳನ್ನು ಬರಹಗಳಲ್ಲಿ ಬಳಸಲೇ ಕೂಡದು ಎಂದು ಹೇಳಿದ ಹಾಗಾಗುವುದಿಲ್ಲ. ನಿಜಕ್ಕೂ ಹಾಗೆ ಹೇಳಲಾಗಿದೆಯಾದರೆ, ಸಂಸ್ಕ್ರುತ ಎರವಲುಗಳನ್ನು ಕನ್ನಡದಲ್ಲಿ ಬರೆಯುವಾಗ ಮಹಾಪ್ರಾಣ, ಋಕಾರ ಮೊದಲಾದವುಗಳನ್ನು ಬಳಸಬೇಕಾಗಿಲ್ಲ ಎಂಬ ಇನ್ನೊಂದು ಹೇಳಿಕೆ ಬೇಕಾಗುವುದೇ ಇಲ್ಲ!
ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳ ಎಣಿಕೆ ಹೆಚ್ಚಾದಾಗಲೆಲ್ಲ, ಅದನ್ನು ಕಡಿಮೆ ಮಾಡಬೇಕೆಂಬುದಾಗಿ ಹಿಂದಿನಿಂದಲೂ ಕನ್ನಡದ ಬರಹಗಾರರು ಹೇಳುತ್ತಾ ಬಂದಿದ್ದಾರೆ. ಕವಿರಾಜಮಾರ‍್ಗಕಾರನಿಂದ ಹಿಡಿದು ಬಿಎಂಶ್ರೀಯವರ ವರೆಗೂ ಹಲವು ಮಂದಿ ಈ ವಿಶಯದಲ್ಲಿ ತಮ್ಮ ಬೇಸರವನ್ನು ಹೊರಗೆಡಹಿದ್ದಾರೆ.
ಇವತ್ತು ಅರಿಮೆಯ (ವಿಜ್ನಾನದ) ಬರಹಗಳಿಗೆ ಬೇಕಾಗುವ ಹೊಸ ಪದಗಳನ್ನೆಲ್ಲ ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸದಾಗಿ ಉಂಟುಮಾಡಿಕೊಳ್ಳಲಾಗುತ್ತಿದೆ; ಕನ್ನಡದ ಪದ ಮತ್ತು ಒಟ್ಟುಗಳನ್ನು ತುಂಬಾ ಅಪರೂಪವಾಗಿ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ, ಅರಿಮೆಯ ಪದನೆರಕೆಗಳಲ್ಲಿ ಕನ್ನಡದವೇ ಆದ ಪದಗಳಿರುವುದು ತೀರಾ ಕಡಿಮೆ.
ಇಂತಹ ಪದನೆರಕೆಗಳನ್ನು ‘ಕನ್ನಡ’ದವೆಂದು ಹೇಳುವುದೇ ವಿಚಿತ್ರವಾಗಿ ಕಾಣಿಸುತ್ತದೆ. ನಿಜಕ್ಕೂ ಈ ರೀತಿ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಬದಲು, ಇಂಗ್ಲಿಶ್ ಪದಗಳನ್ನು ಹಾಗೆಯೇ ಎರವಲು ಪಡೆಯುವುದೇ ಕನ್ನಡಿಗರ ಮಟ್ಟಿಗೆ ಹೆಚ್ಚು ನೆರವಾಗಬಲ್ಲುದು; ಯಾಕೆಂದರೆ, ಮುಂದೆ ಹೆಚ್ಚಿನ ತಿಳಿವನ್ನು ಪಡೆಯಲು ಅವರು ಇಂಗ್ಲಿಶ್ ಬರಹಗಳನ್ನು ಓದಬೇಕಾಗುತ್ತದೆಯಲ್ಲದೆ, ಸಂಸ್ಕ್ರುತದಲ್ಲಿ ಅವರಿಗೆ ಇವತ್ತಿನ ಅರಿಮೆಗಳ ಕುರಿತಾಗಿ ಎಂತಹ ಓದೂ ದೊರಕಲಾರದು.
ಆದರೆ, ಈ ವಿಶಯಗಳ ಕುರಿತಾಗಿ ಮಕ್ಕಳಿಗೆ ಅಡಿಕಲಿಕೆ ದೊರೆಯುವಂತೆ ಮಾಡಲು, ಮತ್ತು ಆಳವಾದ ತಿಳಿವು ದೊರೆಯುವಂತೆ ಮಾಡಲು, ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಬಳಸುವ ಬದಲು ನಮ್ಮವೇ ಆದ ಕನ್ನಡ ಪದಗಳನ್ನು ಬಳಸುವುದೇ ಸರಿಯಾದ ದಾರಿ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)