Posts Tagged ‘ಬ್ರಾಹ್ಮಣ’

ಉಲಿ ಮಾರ‍್ಪಾಡಿನ ಗೆರೆಗಳು

ನುಡಿಯರಿಮೆಯ ಇಣುಕುನೋಟ – 26

ಕನ್ನಡ ನುಡಿ ಹಳ್ಳಿಯಿಂದ ಹಳ್ಳಿಗೆ, ಜಿಲ್ಲೆಯಿಂದ ಜಿಲ್ಲೆಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿದೆಯೆಂಬುದು ನಮಗೆಲ್ಲ ಗೊತ್ತಿದೆ. ಮಯ್ಸೂರಿನವರ ಕನ್ನಡ ಒಂದು ತರವಾದರೆ ಮಂಗಳೂರಿನವರದು ಇನ್ನೊಂದು ತರ, ಮತ್ತು ದಾರವಾಡದವರದು ಮತ್ತೊಂದು ತರ. ಇಶ್ಟೇ ಅಲ್ಲ, ಮಯ್ಸೂರಿನಂತಹ ಒಂದೇ ಜಿಲ್ಲೆಯಲ್ಲೂ ಎಲ್ಲಾ ಕಡೆ ಒಂದೇ ರೀತಿಯ ಕನ್ನಡ ಬಳಕೆಯಲ್ಲಿಲ್ಲ. ಕೊಳ್ಳೇಗಾಲದ ಕನ್ನಡಕ್ಕೂ ನಂಜನಗೂಡಿನ ಕನ್ನಡಕ್ಕೂ ನಡುವೆ ವ್ಯತ್ಯಾಸವಿದೆ, ಮತ್ತು ಹೆಗ್ಗಡದೇವನ ಕೋಟೆಯ ಕನ್ನಡಕ್ಕೂ ಕೆ. ಆರ್. ನಗರದ ಕನ್ನಡಕ್ಕೂ ನಡುವೆ ವ್ಯತ್ಯಾಸವಿದೆ.

ಇದಲ್ಲದೆ, ಒಂದೇ ಹಳ್ಳಿಯಲ್ಲಿ ವಾಸಿಸುವ ಜನರಲ್ಲೂ ಬ್ರಾಹ್ಮಣರ ಕನ್ನಡ, ಒಕ್ಕಲಿಗರ ಕನ್ನಡ, ಆದಿಕರ‍್ನಾಟಕರ ಕನ್ನಡ ಎಂದೆಲ್ಲಾ ವ್ಯತ್ಯಾಸಗಳು ಕಾಣಿಸುತ್ತವೆ. ಆಡುಗನ್ನಡದಲ್ಲಿ ಇಂತಹ ಹಲವು ವ್ಯತ್ಯಾಸಗಳಿವೆಯೆಂಬುದನ್ನು ನಾವೆಲ್ಲ ತಿಳಿದಿರುವೆವಾದರೂ ಈ ವ್ಯತ್ಯಾಸಗಳು ನಿಜಕ್ಕೂ ಎಂತಹವು ಎಂಬುದನ್ನು ಇದುವರೆಗೆ ಯಾರೂ ಸರಿಯಾಗಿ ಮತ್ತು ವಿವರವಾಗಿ ತಿಳಿದುಕೊಳ್ಳಲು ಹೋಗಿಲ್ಲ. ಹಾಗೆ ತಿಳಿಯಲು ಹೋದಲ್ಲಿ, ಅವುಗಳ ಹಿಂದೆ ಹಲವಾರು ಕಟ್ಟುನಿಟ್ಟಾದ ಕಟ್ಟಲೆಗಳೇ ಅಡಗಿವೆ ಎಂಬುದರ ಅರಿವು ನಮಗಾಗದಿರದು.

ಎತ್ತುಗೆಗಾಗಿ, ಮಯ್ಸೂರಿನವರು ಮನೆ ಎನ್ನುವರಾದರೆ, ದಾರವಾಡದವರು ಮನಿ ಎನ್ನುತ್ತಾರೆ; ಮಯ್ಸೂರಿನ ಹಣೆ ದಾರವಾಡದಲ್ಲಿ ಹಣಿಯಾಗುತ್ತದೆ; ಕೆರೆ ಎಂಬುದು ಕೆರಿಯಾಗುತ್ತದೆ, ಗೆರೆ ಎಂಬುದು ಗೆರಿಯಾಗುತ್ತದೆ. ಎಕಾರದಲ್ಲಿ ಕೊನೆಗೊಳ್ಳುವ ಹೆಸರು(ನಾಮ)ಪದಗಳೆಲ್ಲ ದಾರವಾಡ ಕನ್ನಡದಲ್ಲಿ ಇಕಾರದಲ್ಲಿ ಕೊನೆಗೊಳ್ಳುತ್ತವೆ ಎಂಬ ಕಟ್ಟಲೆಯೊಂದು ಈ ವ್ಯತ್ಯಾಸದ ಹಿಂದೆ ಅಡಗಿದೆ. ಮಯ್ಸೂರು ಜಿಲ್ಲೆಯೊಳಗೇನೇ ಕೊಳ್ಳೇಗಾಲದಲ್ಲಿ ಬರೆ ಎಂದಿರುವುದು ನಂಜನಗೂಡಿನಲ್ಲಿ ಬರಿ ಎಂದಾಗುತ್ತದೆ, ಅಗೆ ಎಂಬುದು ಅಗಿಯಾಗುತ್ತದೆ, ಕರೆ ಎಂಬುದು ಕರಿಯಾಗುತ್ತದೆ, ಒಡೆ ಎಂಬುದು ಒಡಿಯಾಗುತ್ತದೆ. ಇದು ಅಂತಹದೇ ಇನ್ನೊಂದು ಮಾರ‍್ಪಾಡು.

ಆದರೆ ಈ ಮಾರ‍್ಪಾಡು ಎಕಾರದಲ್ಲಿ ಕೊನೆಗೊಳ್ಳುವ ಎಸಕ(ಕ್ರಿಯಾ)ಪದಗಳನ್ನು ಮಾತ್ರ ನಾಟುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳು ಮಯ್ಸೂರಿನಲ್ಲಿ ಎಲ್ಲ ಕಡೆಗಳಲ್ಲೂ (ನಂಜನಗೂಡಿನಲ್ಲೂ) ಬದಲಾಗದೆ ಉಳಿದಿವೆ. ಇದಲ್ಲದೆ, ದಾರವಾಡ ಕನ್ನಡದಲ್ಲಿ ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳ ಹಾಗೆ ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳೂ ಇಕಾರದಲ್ಲಿ ಕೊನೆಗೊಳ್ಳುವವುಗಳಾಗಿ ಮಾರ‍್ಪಟ್ಟಿವೆ. ಎಂದರೆ, ಹೆಸರುಪದಗಳ ಮಟ್ಟಿಗೆ ಕೊಳ್ಳೇಗಾಲದೊಂದಿಗೆ ಸೇರುವ ನಂಜನಗೂಡಿನ ಕನ್ನಡ ಎಸಕಪದಗಳ ಮಟ್ಟಿಗೆ ದಾರವಾಡ ಕನ್ನಡದೊಂದಿಗೆ ಸೇರುತ್ತದೆ.

ಒಂದು ಊರಿನಿಂದ ಇನ್ನೊಂದು ಊರಿಗೆ ಆಡುಗನ್ನಡದಲ್ಲಿ ತೋರಿಬರುವ ವ್ಯತ್ಯಾಸಗಳ ಹಿಂದೆ ಈ ರೀತಿ ಹಲವು ಕಟ್ಟಲೆಗಳಿವೆ ಮಾತ್ರವಲ್ಲ, ಅವುಗಳಿಗೊಂದು ನಿಶ್ಚಿತವಾದ ಹರವೂ ಇದೆ. ಎತ್ತುಗೆಗಾಗಿ, ಪದಗಳ ಮೊದಲಿಗೆ ಬರುವ ಹಕಾರ ಬಿದ್ದುಹೋಗುತ್ತದೆಯೆಂಬ ಕಟ್ಟಲೆಯನ್ನು ಗಮನಿಸಬಹುದು. ಮಯ್ಸೂರು ಜಿಲ್ಲೆಯ ಹುಣಸೂರಿನಲ್ಲಿ ಹಕ್ಕಿ ಎಂದು ಹೇಳುವುದಕ್ಕೆ ನಂಜನಗೂಡಿನಲ್ಲಿ ಅಕ್ಕಿ ಎನ್ನುತ್ತಾರೆ; ಹುಣಸೂರಿನ ಹಾಲು ನಂಜನಗೂಡಿನಲ್ಲಿ ಆಲು ಎಂದಾಗುತ್ತದೆ; ಹಂಬು ಎಂಬುದು ಅಂಬು ಎಂದಾಗುತ್ತದೆ, ಹಾವು ಎಂಬುದು ಆವು ಎಂದಾಗುತ್ತದೆ. ಪದಗಳ ಮೊದಲಿಗೆ ಬರುವ ಹಕಾರಗಳೆಲ್ಲ ನಂಜನಗೂಡಿನ ಕನ್ನಡದಲ್ಲಿ ಬಿದ್ದುಹೋಗಿವೆ ಎಂಬ ಕಟ್ಟಲೆ ಈ ವ್ಯತ್ಯಾಸದ ಹಿಂದೆ ಅಡಗಿದೆ.

ಹಕಾರ ಬಿದ್ದುಹೋಗುವ ಈ ಮಾರ‍್ಪಾಡಿಗೆ ಒಂದು ನಿಶ್ಚಿತವಾದ ಹರವೂ ಇದೆ. ಹುಣಸೂರು, ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣಗಳಲ್ಲಿ ಪದಗಳ ಮೊದಲಿಗೆ ಬರುವ ಹಕಾರವನ್ನು ಜನರು ಸರಿಯಾಗಿಯೇ ಉಲಿಯುತ್ತಾರೆ. ಹುಣಸೂರು ಬಿಟ್ಟು ಹೆಗ್ಗಡದೇವನ ಕೋಟೆಗೆ ಹೋದೆವಾದರೆ, ಅಲ್ಲಿ ಇಂತಹ ಹಕಾರಗಳೆಲ್ಲ ಬಿದ್ದುಹೋಗಿರುವುದನ್ನು ಕಾಣಬಹುದು. ಮುಂದೆ ಗುಂಡ್ಲುಪೇಟೆ, ಚಾಮರಾಜನಗರ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಾಲ ಮೊದಲಾದ ಕಡೆಗಳಲ್ಲೂ ಹಕಾರ ಹೀಗೆ ಬಿದ್ದುಹೋಗಿದೆ.

ಈ ರೀತಿ ಪದಗಳ ಮೊದಲಿನ ಹಕಾರ ಎಲ್ಲೆಲ್ಲ ಬಿದ್ದುಹೋಗಿದೆ ಮತ್ತು ಎಲ್ಲೆಲ್ಲ ಬಿದ್ದುಹೋಗಿಲ್ಲ ಎಂಬುದನ್ನು ಹಳ್ಳಿಯಿಂದ ಹಳ್ಳಿಗೆ ಸುತ್ತಾಡಿ ತಿಳಿದುಕೊಂಡು ಬಂದೆವಾದರೆ, ಮಯ್ಸೂರಿನ ನಕಾಶೆಯಲ್ಲಿ ಒಂದು ‘ಹಕಾರದ ಗೆರೆ’ಯನ್ನು ಎಳೆಯಲು ಸಾದ್ಯವಾದೀತು. ಈ ಗೆರೆ ನಂಜನಗೂಡು ಮತ್ತು ಹುಣಸೂರುಗಳ ನಡುವೆ ಹೆಗ್ಗಡದೇವನ ಕೋಟೆಯ ಪಡುವ ದಿಕ್ಕಿಗಾಗಿ ಹಾಯ್ದೀತು.

ಈ ಹಕಾರದ ಗೆರೆಗೆ ಬೇರೆಯೂ ಕೆಲವು ಕಟ್ಟುಗಳಿವೆ. ಎತ್ತುಗೆಗಾಗಿ, ಮಯ್ಸೂರು ಜಿಲ್ಲೆಯ ಬ್ರಾಹ್ಮಣರ ಆಡುನುಡಿಯಲ್ಲಿ ಹಕಾರ ಎಲ್ಲಿಯೂ (ನಂಜನಗೂಡು, ಕೊಳ್ಳೇಗಾಲ, ಚಾಮರಾಜಪುರ, ತಿ.ನರಸೀಪುರ ಮೊದಲಾದ ಕಡೆಗಳಲ್ಲೂ) ಬಿದ್ದುಹೋಗಿಲ್ಲ. ಹಾಗಾಗಿ ಈ ಹಕಾರದ ಗೆರೆ ಮಯ್ಸೂರು ಜಿಲ್ಲೆಯನ್ನು ಉದ್ದಕ್ಕೆ ಮಾತ್ರವಲ್ಲದೆ ನೆಟ್ಟಗೂ ಕತ್ತರಿಸುತ್ತದೆಯೆಂದು ಹೇಳಬೇಕಾಗುತ್ತದೆ. ಆಡುನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಇಂತಹ ಊರಿನ ಮತ್ತು ಜಾತಿಯ ಕಟ್ಟುಗಳು ಮಾತ್ರವಲ್ಲದೆ ಸಮಯದ ಕಟ್ಟೂ ಇದೆಯೆಂದು ಹೇಳಬಹುದು.

ಯಾಕೆಂದರೆ, ಎರಡು ಬೇರೆ ಬೇರೆ ಸಮಯಗಳಲ್ಲಿ ಬಳಕೆಯಲ್ಲಿದ್ದ ಆಡುನುಡಿಗಳ ನಡುವಿರುವ ವ್ಯತ್ಯಾಸಗಳ ಹಿಂದೆಯೂ ಮೇಲೆ ವಿವರಿಸಿದಂತಹ ಕಟ್ಟಲೆಗಳೇ ಕಾಣಿಸುತ್ತವೆ. ಎತ್ತುಗೆಗಾಗಿ, ಹಳೆಗನ್ನಡದ ಪಾಲ್ ಪದ ಹೊಸಗನ್ನಡದಲ್ಲಿ ಹಾಲು ಎಂಬುದಾಗಿ ಕಾಣಿಸುತ್ತದೆ; ಪಣ್ ಪದ ಹಣ್ಣು ಎಂಬುದಾಗಿ, ಪಲ್ ಪದ ಹಲ್ಲು ಎಂಬುದಾಗಿ ಮತ್ತು ಪುಲ್ ಪದ ಹುಲ್ಲು ಎಂಬುದಾಗಿ ಕಾಣಿಸುತ್ತದೆ. ಹಳೆಗನ್ನಡದ ಪದಗಳ ಮೊದಲಿಗಿದ್ದ ಪಕಾರಗಳೆಲ್ಲವೂ ಈ ರೀತಿ ಹೊಸಗನ್ನಡದಲ್ಲಿ ಹಕಾರಗಳಾಗಿ ಕಾಣಿಸಿಕೊಳ್ಳುತ್ತವೆ. ಹಳೆಗನ್ನಡ ಮತ್ತು ಹೊಸಗನ್ನಡಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಈ ಕಟ್ಟಲೆ ಮಯ್ಸೂರಿನ ಆಡುನುಡಿಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಹಕಾರದ ಕಟ್ಟಲೆಯ ಹಾಗೆಯೇ ಇದೆ.

ಆಡುನುಡಿಗಳ ನಡುವೆ ಕಾಣಿಸುವ ಇಂತಹ ವ್ಯತ್ಯಾಸಗಳು ಪದಗಳ ವ್ಯತ್ಯಾಸಗಳಲ್ಲ, ಉಲಿಗಳ ವ್ಯತ್ಯಾಸಗಳು ಎಂಬುದನ್ನು ಗಮನಿಸುವುದು ಅವಶ್ಯ. ಪದಗಳ ಮೊದಲಿನ ಪಕಾರ ಹಕಾರವಾಗುವ ಕಟ್ಟಲೆ ಹಳೆಗನ್ನಡದಲ್ಲಿ ಅಂತಹ ಪಕಾರವಿರುವ ಎಲ್ಲಾ ಎಂದರೆ ಸಾವಿರಕ್ಕೂ ಹೆಚ್ಚು ಪದಗಳನ್ನು ಮಾರ‍್ಪಡಿಸಿದೆ. ಇವತ್ತು ಈ ಕಟ್ಟಲೆಗೆ ಹೊರಪಡಿಕೆಗಳಾಗಿ ಕಾಣಿಸುವ ಪಾಲು, ಪಾರೆ, ಪೂನು ಮೊದಲಾದ ಪದಗಳು ಹಿಂದಿನ ಬರಹಗಳಿಂದ ಇಲ್ಲವೇ ಮಾರ‍್ಪಡದ ಆಡುನುಡಿಗಳಿಂದ ಎರವಲಾಗಿ ಪಡೆದ ಪದಗಳಲ್ಲದೆ ನಿಜಕ್ಕೂ ಆ ಕಟ್ಟಲೆಗೆ ಹೊರಪಡಿಕೆಗಳಲ್ಲ.

ಒಂದು ತಲೆಮಾರಿನ ಮಕ್ಕಳು ತಮ್ಮ ತಾಯ್ನುಡಿಯನ್ನು ತಮ್ಮದಾಗಿಸಿಕೊಳ್ಳುವ ಸಮಯದಲ್ಲಿ ಇಂತಹ ಮಾರ‍್ಪಾಡುಗಳು ಅವರು ಪಡೆಯುವ ಆಡುನುಡಿಯಲ್ಲಿ ನಡೆದುಹೋಗುತ್ತವೆಯೆಂದು ತೋರುತ್ತದೆ. ಈ ಮಕ್ಕಳ ನಡುವೆ ಯಾವ ರೀತಿಯ ಜಾತಿ, ಜಾಗ ಮೊದಲಾದ ಕಟ್ಟುಗಳಿದ್ದುವೋ ಅವು ಈ ಮಾರ‍್ಪಾಡುಗಳ ಹರವನ್ನು ನಿರ‍್ದರಿಸುತ್ತವೆ.

ನುಡಿಗಳಲ್ಲಿ ನಡೆಯುವ ಇಂತಹ ಕಟ್ಟುನಿಟ್ಟಾದ ಉಲಿಗಳ ಮಾರ‍್ಪಾಡುಗಳು ನುಡಿಗಳ ಹಿನ್ನಡವಳಿ(ಚರಿತ್ರೆ)ಯನ್ನು ತಿಳಿಯುವಲ್ಲಿ ಹೆಚ್ಚಿನ ನೆರವನ್ನು ನೀಡುತ್ತವೆ. ಒಂದು ಮೂಲ ನುಡಿಯಿಂದ ಹಲವಾರು ನುಡಿಗಳು ಯಾವ ರೀತಿಯಲ್ಲಿ ಕವಲೊಡೆದು ಬೇರೆ ಬೇರಾಗಿವೆ ಎಂಬುದನ್ನು ಮುಕ್ಯವಾಗಿ ಆ ನುಡಿಗಳಲ್ಲಿ ನಡೆದಿರುವ ಇಂತಹ ಕಟ್ಟುನಿಟ್ಟಾದ ಉಲಿಗಳ ಮಾರ‍್ಪಾಡುಗಳ ನೆರವಿನಿಂದ ತೀರ‍್ಮಾನಿಸಲಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಓದುವ ಹಾಗೆಯೇ ಬರೆಯುವುದು

ನುಡಿಯರಿಮೆಯ ಇಣುಕುನೋಟ – 10

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ ಓದುವ ಹಾಗೆಯೇ ಬರೆಯಬೇಕು ಎಂದು ಹೇಳಿದರೆ, ಎಲ್ಲರೂ ಅವರವರು ಹೇಗೆ ಓದುತ್ತಾರೋ ಹಾಗೆ ಬರೆಯಬಹುದು, ಇಲ್ಲವೇ ಎಲ್ಲರೂ ತಮಗೆ ಕುಶಿಬಂದ ಹಾಗೆ ಬರೆಯಬಹುದು ಎಂದು ಹೇಳಿದ ಹಾಗಾಗುವುದಿಲ್ಲ; ಅಂತಹ ಪ್ರತಿಕ್ರಿಯೆ ಬಾರದಂತೆ ನಾನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆಯಬೇಕು ಎಂಬುದಾಗಿ ಬರೆದಿದ್ದೆ. ಈ ಪದಗಳನ್ನು ಇವತ್ತು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಿದ್ದಾರೆ ಎಂಬುದನ್ನು ತಿಳಿವಿಗರು ಕಂಡುಹಿಡಿಯಬೇಕು, ಮತ್ತು ಅದಕ್ಕೆ ಅನುಸಾರವಾಗಿ, ಅವನ್ನು ಹೇಗೆ ಬರೆಯಬೇಕು ಎಂಬುದನ್ನು ತೀರ‍್ಮಾನಿಸಬೇಕು.

ಬರಹದ ಮೂಲಕ ನಾವು ನಮ್ಮ ಅನಿಸಿಕೆಗಳನ್ನು ಇನ್ನೊಬ್ಬರಿಗೆ ತಿಳಿಸುತ್ತೇವೆ, ಮತ್ತು ಬರಹ ರೂಪದಲ್ಲಿರುವ ಇನ್ನೊಬ್ಬರ ಅನಿಸಿಕೆಗಳನ್ನು ಓದಿನ ಮೂಲಕ ತಿಳಿದುಕೊಳ್ಳುತ್ತೇವೆ. ಈ ಎರಡು ಕೆಲಸಗಳೂ ಸರಿಯಾಗಿ ನಡೆಯಬೇಕಿದ್ದಲ್ಲಿ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವ ಮತ್ತು ಓದುವ ಕೆಲಸಗಳನ್ನು ನಡೆಸಬೇಕಾಗುತ್ತದೆ. ಈ ಕೆಲಸಗಳನ್ನು ಇವತ್ತು ಶಾಲೆಗಳಲ್ಲಿ ಕಲಿಸಲಾಗುತ್ತದೆಯಾದ ಕಾರಣ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವಂತೆ ಮತ್ತು ಓದುವಂತೆ ಮಾಡುವುದು ತೊಡಕಿನ ಕೆಲಸವೇನಲ್ಲ.

ಶಕಾರವನ್ನು ಹೆಚ್ಚಿನ ಕನ್ನಡಿಗರೂ ಶಕಾರವಾಗಿಯೇ ಓದುತ್ತಾರಲ್ಲದೆ ಸಕಾರವಾಗಿ ಬದಲಾಯಿಸಿ ಓದುವುದಿಲ್ಲ. ಆದರೆ, ಷಕಾರವನ್ನು ಹೆಚ್ಚಿನವರೂ ಶಕಾರವಾಗಿ ಬದಲಾಯಿಸಿ ಓದುತ್ತಾರೆ. ಹಾಗಾಗಿ, ಸಂಸ್ಕ್ರುತ ಎರವಲುಗಳಲ್ಲಿ ಬರುವ ಷಕಾರವನ್ನು ಶಕಾರವಾಗಿ ಬದಲಾಯಿಸಿ ಬರೆಯಬೇಕು, ಮತ್ತು ಶಕಾರವನ್ನು ಹಾಗೆಯೇ ಉಳಿಸಬೇಕು ಎಂಬ ತೀರ‍್ಮಾನಕ್ಕೆ ಬರಬೇಕಾಗುತ್ತದೆ.

ಇದೇ ರೀತಿಯಲ್ಲಿ, ಋಕಾರ, ಮಹಾಪ್ರಾಣ, ವಿಸರ‍್ಗ ಮೊದಲಾದ ಬೇರೆ ಕೆಲವು ಬರಿಗೆಗಳ ವಿಶಯದಲ್ಲೂ ಹೆಚ್ಚಿನ ಕನ್ನಡಿಗರ ಓದು ಹೇಗಿದೆಯೆಂಬುದನ್ನು ಕಂಡುಹಿಡಿದು, ಅದಕ್ಕನುಸಾರವಾಗಿ ಬರವಣಿಗೆಯನ್ನು ಬದಲಾಯಿಸಬೇಕು. ಹೀಗೆ ಮಾಡಿದಲ್ಲಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗಬಲ್ಲುದು, ಮತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗುವಂತೆ ಮಾಡುವ ಕೆಲಸವೂ ಸುಲಬವಾಗಬಲ್ಲುದು.

ಹಳೆಗನ್ನಡದ ಱಕಾರ ಮತ್ತು ೞಕಾರಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೆ ಎಂಬುದನ್ನು ಗಮನಿಸಿ, ಹೊಸಗನ್ನಡವನ್ನು ಬರಹದಲ್ಲಿ ಬಳಸಲು ತೊಡಗಿದ ಕಾಲದಲ್ಲಿ ಅವನ್ನು ರಕಾರ ಮತ್ತು ಳಕಾರಗಳಾಗಿ ಬದಲಾಯಿಸಿ ಬರೆಯಲು ತೊಡಗಲಾಯಿತು. ಈ ಮಾರ‍್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು. ಸಂಸ್ಕ್ರುತ ಎರವಲುಗಳಲ್ಲಿ ಬರುವ ಬರಿಗೆಗಳನ್ನು ಓದುವ ಹಾಗೆ ಬರೆಯುವಂತೆ ಮಾರ‍್ಪಡಿಸುವುದೂ ಇಂತಹದೇ ಒಂದು ಕೆಲಸ ಎಂಬುದನ್ನು ಇಲ್ಲಿ ಗಮನಿಸಬೇಕು.

ಇಶ್ಟರ ವರೆಗೆ ಈ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯುತ್ತಿದ್ದುದಕ್ಕೆ ಎರಡು ಮುಕ್ಯ ಕಾರಣಗಳಿದ್ದುವು: ಹಿಂದಿನ ಕಾಲದಲ್ಲಿ ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದವರೆಲ್ಲ ಅದನ್ನು ಸಂಸ್ಕ್ರುತದಲ್ಲಿ ಬರೆದಿರಿಸುತ್ತಿದ್ದರು; ಹಾಗಾಗಿ, ಯಾವುದೇ ಒಂದು ವಿಶಯದಲ್ಲಿ ಹೊಸ ತಿಳಿವನ್ನು ಪಡೆಯಬೇಕಿದ್ದರೂ ಸಂಸ್ಕ್ರುತದ ಮೊರೆಹೊಗಬೇಕಾಗಿತ್ತು.

ಇದರಿಂದಾಗಿ ಸಂಸ್ಕ್ರುತ ಬರಹಕ್ಕೆ ಒಂದು ಬಗೆಯ ಮೇಲ್ಮೆ ಬಂದಿತ್ತು; ಅದರ ಪದಗಳನ್ನು ಕನ್ನಡದಲ್ಲಿಯೂ ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿಸಿಕೊಳ್ಳುವುದರಿಂದ, ಮುಂದೆ ಸಂಸ್ಕ್ರುತ ಬರಹಗಳನ್ನು ಓದಲು ಕಲಿಯುವ ಕೆಲಸ ಕನ್ನಡಿಗರಿಗೆ ಸುಲಬವಾಗಬಹುದಾಗಿತ್ತು. ಕನ್ನಡ ಓದಿನ ಕಲಿಕೆ ಮುಂದೆ ನಡೆಸಲೇಬೇಕಾಗಿದ್ದ ಸಂಸ್ಕ್ರುತ ಓದಿಗೆ ಒಂದು ಮೆಟ್ಟಲಾಗಬಹುದಾಗಿತ್ತು. ಇದು ಒಂದು ಕಾರಣ.

ಆದರೆ, ಇವತ್ತು ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದಿರುವವರು ಯಾರೂ ಅದನ್ನು ಸಂಸ್ಕ್ರುತದಲ್ಲಿ ಬರೆಯಲು ಹೋಗುವುದಿಲ್ಲ; ಹಾಗಾಗಿ, ಹಿಂದಿನ ಕಾಲದಲ್ಲಿ ಅದಕ್ಕಿದ್ದ ಮೇಲ್ಮೆ ಇಂದು ಉಳಿದಿಲ್ಲ, ಮತ್ತು ಅದರ ಪದಗಳನ್ನು ಅದರ ಬರಹಗಳಲ್ಲಿರುವ ಹಾಗೆ ಬರೆಯಲು ಕಲಿಯುವ ಅವಶ್ಯಕತೆಯೂ ಇವತ್ತು ಕನ್ನಡಿಗರಿಗಿಲ್ಲ.

ಹಿಂದಿನ ಕಾಲದಲ್ಲಿ ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸವನ್ನು ಮುಕ್ಯವಾಗಿ ಉತ್ತರದಿಂದ ವಲಸೆಬಂದ ಮೇಲ್ವರ‍್ಗದ ಜನರು ನಡೆಸುತ್ತಿದ್ದರು; ಆರ‍್ಯರಾಗಿದ್ದ ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಆದರ ಮತ್ತು ಪೂಜ್ಯಬಾವಗಳಿದ್ದುವು. ಹಾಗಾಗಿ, ಅದರ ಪದಗಳನ್ನು ಮಾರ‍್ಪಡಿಸದೆ ಉಳಿಸುವುದು ಅವರ ಮಟ್ಟಿಗೆ ಅವಶ್ಯವಾಗಿತ್ತು. ಇದು ಇನ್ನೊಂದು ಕಾರಣ.

ಆದರೆ, ಇವತ್ತು ಎಲ್ಲಾ ವರ‍್ಗಗಳಿಗೆ ಸೇರಿದ ಕನ್ನಡಿಗರೂ ಕನ್ನಡ ಬರಹವನ್ನು ಬಳಸಲು ಕಲಿಯಬೇಕಾಗಿದೆ. ಇವರಲ್ಲಿ ಹೆಚ್ಚಿನವರೂ ದ್ರಾವಿಡ ಮೂಲದವರಾಗಿದ್ದು, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಮಾರ‍್ಪಡಿಸದೆ ಉಳಿಸಿಕೊಳ್ಳುವುದು ಅಂತಹ ಒಂದು ಪೂಜ್ಯವಾದ ವಿಶಯವೇ ಅಲ್ಲ; ಅದರಿಂದ ಅವರಿಗೆ ಬೇರೆ ಪ್ರಯೋಜನಗಳೂ ದೊರಕುವುದಿಲ್ಲ. ಹಾಗಾಗಿ, ಸಂಸ್ಕ್ರುತ ಎರವಲುಗಳನ್ನು ಕನ್ನಡದ ಸೊಗಡನ್ನು ಕೆಡಿಸದಂತೆ ಮಾರ‍್ಪಡಿಸುವುದಕ್ಕೆ ಹೆಚ್ಚಿನ ಕನ್ನಡಿಗರಿಂದಲೂ ವಿರೋದ ಬರಲಾರದು.

ಬೇರೆ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ಯಾವ ನುಡಿಯಲ್ಲೂ ಆ ನುಡಿಯಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ; ಇದಕ್ಕೆ ಕೆಲವೇ ಕೆಲವು ಹೊರಪಡಿಕೆಗಳು ಮಾತ್ರ ಇವೆ. ಎತ್ತುಗೆಗಾಗಿ, ಸಂಸ್ಕ್ರುತ ಇಲ್ಲವೇ ಪ್ರಾಕ್ರುತ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಬ್ರಾಹ್ಮೀ ಲಿಪಿಯನ್ನು ಕನ್ನಡದಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಸಂಸ್ಕ್ರುತದ ಎರವಲುಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಸಂಸ್ಕ್ರುತ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಇದೇ ರೀತಿಯಲ್ಲಿ, ಅರೇಬಿಕ್ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಲಿಪಿಯನ್ನು ಟರ‍್ಕಿಶ್‌ನಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಅರೇಬಿಕ್ ಎರವಲುಗಳನ್ನು ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಅರೇಬಿಕ್ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಆದರೆ, ಎಲ್ಲಾ ನುಡಿಗಳೂ ಈ ರೀತಿ ಬೇರೊಂದು ನುಡಿಯ ಲಿಪಿಯನ್ನು ತಮ್ಮ ನುಡಿಗೆ ಅಳವಡಿಸಿಕೊಳ್ಳುವಾಗ ಆ ನುಡಿಯ ಪದಗಳನ್ನು ಅದರಲ್ಲಿರುವಂತೆ ಬರೆಯಲು ಬೇಕಾಗುವ ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಿಲ್ಲ; ಎತ್ತುಗೆಗಾಗಿ, ನಾಗರಿ ಲಿಪಿಯನ್ನು ಪಂಜಾಬಿ ನುಡಿಗೆ ಅಳವಡಿಸುವಾಗ, ಷಕಾರ, ಋಕಾರ, ಹಲವು ಬಗೆಯ ಒತ್ತುಬರಿಗೆಗಳು ಮೊದಲಾದುವನ್ನು ಉಳಿಸಿಕೊಂಡಿಲ್ಲ; ಈ ಕಾರಣಕ್ಕಾಗಿ, ಸಂಸ್ಕ್ರುತ ಎರವಲು ಪದಗಳನ್ನು ಇವತ್ತು ಪಂಜಾಬಿ ಬರಹದಲ್ಲಿ ಓದುವ ಹಾಗೆ ಬರೆಯಲಾಗುತ್ತದೆಯಲ್ಲದೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯುವುದಿಲ್ಲ.

ಮಲಯಾಳ ಬರಹದಲ್ಲೂ ಮೊದಲಿಗೆ ಮಹಾಪ್ರಾಣಾಕ್ಶರಗಳು, ಗಜಡದಬ ಮೊದಲಾದ ಆ ನುಡಿಗೆ ಬೇಡದಿರುವ ಹಲವು ಬರಿಗೆಗಳು ಇರಲಿಲ್ಲ; ಸಂಸ್ಕ್ರುತ ಬರಹಗಳನ್ನು ಬರೆಯಲು, ಮತ್ತು ಕೆಲವೊಮ್ಮೆ ಸಂಸ್ಕ್ರುತ ಪದಗಳನ್ನು ಮಲಯಾಳ ಬರಹಗಳಲ್ಲಿ ಬರೆಯಲು ಆ ಸಮಯದಲ್ಲಿ ಗ್ರಂತಲಿಪಿಯೆಂಬ ಬೇರೆಯೇ ಒಂದು ಲಿಪಿಯನ್ನು ಬಳಸಲಾಗುತ್ತಿತ್ತು.

ಆದರೆ, ಹದಿನೇಳನೇ ಶತಮಾನಕ್ಕಾಗುವಾಗ, ಮಲಯಾಳ ಸಾಹಿತ್ಯದಲ್ಲಿ ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾಯಿತು; ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಒಲವಿದ್ದುದರಿಂದ, ಮತ್ತು ಇವರ ಬರಹಗಳಲ್ಲಿ ತುಂಬಾ ಸಂಸ್ಕ್ರುತ ಪದಗಳು ಬಳಕೆಯಾಗುತ್ತಿದ್ದುದರಿಂದ, ಇವರು ತಮ್ಮ ಮಲಯಾಳ ಬರಹಗಳಲ್ಲೂ ಗ್ರಂತ ಲಿಪಿಯನ್ನೇ ಬಳಸಲು ತೊಡಗಿದರು. ಇದರಿಂದಾಗಿ, ಇವತ್ತಿನ ಮಲಯಾಳ ಬರಹ ಕನ್ನಡ ಬರಹದ ಹಾಗೆಯೇ ಅನವಶ್ಯಕವಾಗಿ ತೊಡಕಿನದಾಗಿದೆ.

ಎಲ್ಲಾ ಜನರೂ ಬರಹಬಲ್ಲವರಾಗಬೇಕಿರುವ ಇವತ್ತಿನ ದಿನಗಳಲ್ಲಿ ಈ ರೀತಿ ಒಂದು ನುಡಿಯ ಬರವಣಿಗೆಗೆ ಅವಶ್ಯವಿಲ್ಲದ ಬರಿಗೆಗಳನ್ನು ಎರವಲು ಪದಗಳ ಬರವಣಿಗೆಗಾಗಿ ಉಳಿಸಿಕೊಳ್ಳುವುದು ಜಾಣತನವಲ್ಲ; ಇದನ್ನು ಮನಗಂಡ ತಿಳಿವಿಗರು ಟರ‍್ಕಿ, ಇಂಡೊನೇಶಿಯಾ, ಮಲಯೇಶಿಯಾ ಮೊದಲಾದ ನಾಡುಗಳಲ್ಲಿ ಅರೇಬಿಕ್ ಮೂಲದ ಲಿಪಿಯನ್ನೇ ಬಿಟ್ಟುಕೊಟ್ಟು ರೋಮನ್ ಮೂಲದ ಲಿಪಿಯನ್ನು ತಮ್ಮ ಬರಹಕ್ಕೆ ಅಳವಡಿಸಿಕೊಂಡಿದ್ದಾರೆ.

ಕೊರಿಯಾದಂತಹ ಬೇರೆ ಕೆಲವು ನಾಡುಗಳಲ್ಲಿ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯಲು ತೊಡಗುವ ಮೂಲಕ ಈ ತೊಡಕನ್ನು ನಿವಾರಿಸಿಕೊಳ್ಳಲಾಗಿದೆ. ಕನ್ನಡದಲ್ಲಿಯೂ ಇಂತಹದೇ ಮಾರ‍್ಪಾಡನ್ನು ನಾವು ಇವತ್ತು ನಡೆಸಬೇಕಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ತಮಿಳರ ದಾರಿ ಮತ್ತು ನಮ್ಮ ದಾರಿ

ನುಡಿಯರಿಮೆಯ ಇಣುಕುನೋಟ – 7

ಎಲ್ಲರೂ ಬಳಸಬೇಕಿರುವ ಕನ್ನಡ ಬರಹದಲ್ಲಿ ಮಹಾಪ್ರಾಣ, ಋಕಾರ, ಷಕಾರ ಮೊದಲಾದ ಕೆಲವು ಕನ್ನಡಕ್ಕೆ ಬೇಡದ ಬರಿಗೆಗಳನ್ನು ಬಿಟ್ಟುಕೊಡುವುದು ಒಳ್ಳೆಯದು ಎಂಬುದಾಗಿ, ಇಲ್ಲವೇ ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಒಂದು ಮಿತಿಯಲ್ಲಿ ಇರಿಸಿಕೊಳ್ಳುವುದು ಒಳ್ಳೆಯದು ಎಂಬುದಾಗಿ ಹೇಳಿದಾಗ, ಇದು ತಮಿಳಿನ ದ್ರಾವಿಡ ಕಳಗಂ ಹಿಡಿದ ದಾರಿ ಎಂಬ ಮರುನುಡಿ ಕೇಳಿಬರುತ್ತದೆ.

ಆದರೆ, ಈ ಮರುನುಡಿ ಸರಿಯಲ್ಲ. ನಾವು ತಮಿಳರಿಂದಕಲಿಯಬಹುದಾದ ವಿಶಯಗಳೂ ಕೆಲವಿವೆ; ಆದರೆ ಹಾಗೆಂದು, ಎಲ್ಲಾ ವಿಶಯಗಳಲ್ಲೂ ಅವರನ್ನು ಕಣ್ಣುಮುಚ್ಚಿ ಹಿಂಬಾಲಿಸಬೇಕೆಂದೇನಿಲ್ಲ. ನಮಗೆ ಸರಿಯೆಂದು ಕಂಡುದನ್ನು ಅವರಿಂದ ಕಲಿಯೋಣ, ಮತ್ತು ಬೇರೆ ವಿಶಯಗಳಲ್ಲಿ ನಮ್ಮದೇ ಆದ ದಾರಿಯನ್ನೂ ಕಂಡುಕೊಳ್ಳೋಣ.

ತಮ್ಮ ನುಡಿಯ ಕುರಿತಾಗಿ ತಮಿಳರಿಗೆ ಎಲ್ಲೆಯಿಲ್ಲದ ಹೆಮ್ಮೆ ಮತ್ತು ಒಲುಮೆಗಳಿವೆ; ಆದರೆ, ಕನ್ನಡದ ತಿಳಿವಿಗರಿಗೆ ತಮ್ಮ ನುಡಿಯ ಕುರಿತು ಕೀಳರಿಮೆಯಿದೆ. ಎಂತಹ ಹೊಸ ಪದವನ್ನು ಬೇಕಿದ್ದರೂ ತಮ್ಮ ನುಡಿಯಲ್ಲಿ ಉಂಟುಮಾಡಲು ಬರುತ್ತದೆ ಎಂಬುದನ್ನು ತಮಿಳರು ಕಂಡುಕೊಂಡಿದ್ದಾರೆ, ಮತ್ತು ಅದನ್ನು ಬಳಕೆಗೂ ತಂದಿದ್ದಾರೆ; ಆದರೆ, ಕನ್ನಡದ ತಿಳಿವಿಗರು ಹೊಸ ಪದಗಳನ್ನುಂಟುಮಾಡಲು ಸಂಸ್ಕ್ರುತದ ಮೊರೆಹೊಗದೆ ಬೇರೆ ದಾರಿಯೇ ಇಲ್ಲ ಎಂಬುದಾಗಿ ಕಯ್ಚೆಲ್ಲಿ ಕುಳಿತಿದ್ದಾರೆ.

ತಮಿಳಿನ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ತೊಂಬತ್ತಯ್ದರಶ್ಟು ತಮಿಳು ಪದಗಳಿವೆ; ಆದರೆ, ಕನ್ನಡದ ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ಹತ್ತರಶ್ಟೂ ಕನ್ನಡದ ಪದಗಳಿಲ್ಲ! ಇಂತಹ ಕೆಲವು ವಿಶಯಗಳಲ್ಲಿ ನಾವು ತಮಿಳರನ್ನು ಹಿಂಬಾಲಿಸಿದಲ್ಲಿ, ಅದು ನಮ್ಮ ನುಡಿಯ ಮತ್ತು ಸಮಾಜದ ಏಳಿಗೆಗೆ ನೆರವಾಗಬಲ್ಲುದು.

ಆದರೆ, ಬೇರೆ ಕೆಲವು ವಿಶಯಗಳಲ್ಲಿ ಅವರು ಹಿಡಿದ ದಾರಿ ನಮಗೆ ಬೇಕಿಲ್ಲ. ದ್ರಾವಿಡ ಕಳಗಗಳು ನಡೆಸಿದ ಚಳವಳಿಯಿಂದಾಗಿ, ತಮಿಳು ಬರಹದಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳು ತುಂಬಾ ಕಡಿಮೆಯಾದುವೇನೋ ನಿಜ; ಆದರೆ, ಇದರಿಂದ ಬರಹದ ತಮಿಳಿಗೂ ತಮಿಳಿನ ಆಡುನುಡಿಗಳಿಗೂ ನಡುವಿದ್ದ ಅಂತರ ಕಡಿಮೆಯಾಗುವ ಬದಲು ಹೆಚ್ಚಾಗಿದೆ.

ಯಾಕೆಂದರೆ, ಬರಹದಿಂದ ತೆಗೆದು ಹಾಕಿದ ಸಂಸ್ಕ್ರುತ ಪದಗಳಿಗೆ ಬದಲಾಗಿ ಇವರು ಹಳೆತಮಿಳಿನ ಪದಗಳನ್ನೇ ಬಳಕೆಗೆ ತಂದಿದ್ದಾರೆ; ಇವು ಹೊಸತಮಿಳಿನ ಪದಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿವೆ. ಇದಲ್ಲದೆ, ಹೆಚ್ಚುಕಡಿಮೆ ಹದಿಮೂರನೇ ಶತಮಾನದ ತಮಿಳನ್ನೇ ಬರಹಗಳಲ್ಲಿ ಬಳಸಲು ತೊಡಗಿದ್ದಾರೆ. ಇದು ಕನ್ನಡ ಬರಹಗಳಲ್ಲಿ ಇವತ್ತು ಹೊಸಗನ್ನಡದ ಬದಲು ಹಳೆಗನ್ನಡವನ್ನು ಬಳಸಲು ಹೊರಡುವ ಹಾಗೆ ಎನ್ನಬಹುದು.

ಇಂತಹ ತಮಿಳರ ದಾರಿ ನಮಗೆ ಬೇಕಾಗಿಲ್ಲ. ಕನ್ನಡ ಬರಹದಲ್ಲಿ ಯಾವ ಮಾರ‍್ಪಾಡನ್ನು ಮಾಡುವುದಿದ್ದರೂ ಅದಕ್ಕೆ ಕನ್ನಡ ಬರಹಕ್ಕೂ ಕನ್ನಡದ ಆಡುನುಡಿಗಳಿಗೂ ನಡುವಿರುವ ವ್ಯತ್ಯಾಸವನ್ನು ಕಡಿಮೆಮಾಡುವುದೇ ಮುಕ್ಯ ಗುರಿಯಾಗಿರಬೇಕು. ಕನ್ನಡಕ್ಕೆ ಬೇಕಿಲ್ಲದ ಮಹಾಪ್ರಾಣ, ಋಕಾರ, ಷಕಾರಗಳನ್ನು ಬರಹದಲ್ಲಿ ಬಳಸದಿರುವುದು, ಮತ್ತು ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸುವುದು ಎಂಬ ಈ ಎರಡು ಮಾರ‍್ಪಾಡುಗಳಿಗೂ ಇದೇ ಮುಕ್ಯ ಗುರಿಯಾಗಿದೆ.

ಇನ್ನು ತಮಿಳು ಬರಹದಲ್ಲಿ ಮಹಾಪ್ರಾಣ, ಋಕಾರ, ಗಜಡದಬ ಮೊದಲಾದ ಕೆಲವು ಬರಿಗೆಗಳು ಬಳಕೆಯಾಗದಿರುವುದಕ್ಕೆ ದ್ರಾವಿಡ ಕಳಗಗಳು ಕಾರಣವಲ್ಲ. ಇತ್ತೀಚೆಗೆ ನಡೆಸಿದ ಯಾವ ಮಾರ‍್ಪಾಡೂ ಅದಕ್ಕೆ ಕಾರಣವಲ್ಲ. ಬ್ರಾಹ್ಮೀಲಿಪಿಯನ್ನು ತಮಿಳಿಗೆ ಅಳವಡಿಸುವ ಸಮಯದಲ್ಲೇನೇ, ಎಂದರೆ ಸುಮಾರು ಎರಡು ಸಾವಿರ ವರ‍್ಶಗಳಶ್ಟು ಹಿಂದೆಯೇ ತಮಿಳು ಬರಹದಲ್ಲಿ ಈ ಬರಿಗೆಗಳನ್ನು ಬಳಸದಿರಲು ತೀರ‍್ಮಾನಿಸಲಾಗಿತ್ತು.

ಆವತ್ತಿನ ತಮಿಳು ಓದಿಗೆ ಈ ಬರವಣಿಗೆ ಸರಿಯಾಗಿಯೂ ಇದ್ದಿರಬೇಕು; ಆದರೆ, ಆಮೇಲೆ ತಮಿಳು ನುಡಿಯಲ್ಲಿ ಹಲವಾರು ಮಾರ‍್ಪಾಡುಗಳು ನಡೆದಿದ್ದು, ಇದರಿಂದಾಗಿ ಇವತ್ತಿನ ಓದಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳು ಮೂಡಿಬಂದಿವೆ. ಈ ವ್ಯತ್ಯಾಸಗಳನ್ನನುಸರಿಸಿ ತಮಿಳು ಬರಹದಲ್ಲಿ ಹೆಚ್ಚಿನ ಮಾರ‍್ಪಾಡನ್ನೇನೂ ನಡೆಸಿಲ್ಲವಾದ ಕಾರಣ, ಅದರ ಬಳಕೆಯಲ್ಲಿ ಇವತ್ತು ಕೆಲವು ತೊಡಕುಗಳು ಕಾಣಿಸಿಕೊಳ್ಳುತ್ತಿವೆ.

ಸಂಸ್ಕ್ರುತ ಕಾವ್ಯಗಳನ್ನು ಇಲ್ಲವೇ ಬೇರೆ ಸಂಸ್ಕ್ರುತ ಬರಹಗಳನ್ನು ಬರೆಯಲು ಬೇಕಾಗುವ ಹಲವು ಹೆಚ್ಚಿನ ಬರಿಗೆಗಳನ್ನು ತಮಿಳು ಬರಹದಲ್ಲೇನೇ ಉಳಿಸಿಕೊಳ್ಳುವ ಬದಲು, ಅವರು ಗ್ರಂತ ಲಿಪಿಯೆಂಬ ಬೇರೆಯೇ ಒಂದು ಬಗೆಯ ಬರಹವನ್ನು ಬಳಕೆಗೆ ತಂದಿದ್ದರು. ಹಾಗಾಗಿ, ಈ ಬರಿಗೆಗಳ ತೊಡಕು ಅವರ ಬರಹವನ್ನು ತಟ್ಟಿಲ್ಲ.

ಕನ್ನಡ ಬರಹ ಉತ್ತರದಿಂದ ವಲಸೆಬಂದ ಬ್ರಾಹ್ಮಣರ ಕೊಡುಗೆಯಾಗಿದೆ; ಈ ಬ್ರಾಹ್ಮಣರು ಆರ‍್ಯರಾಗಿದ್ದು, ಸಂಸ್ಕ್ರುತದ ಮೇಲೆ ಅವರಿಗೆ ಹೆಚ್ಚಿನ ಮಮತೆ ಮತ್ತು ಪೂಜ್ಯಬಾವವಿತ್ತು. ಹಾಗಾಗಿ, ಅವರು ಕನ್ನಡದ ಬರಹದಲ್ಲಿ ಸಂಸ್ಕ್ರುತ ಬರಹಕ್ಕೆ ಬೇಕಾಗುವ ಎಲ್ಲಾ ಬರಿಗೆಗಳನ್ನೂ, ಅವು ಕನ್ನಡಕ್ಕೆ ಬೇಡವಾಗಿದ್ದರೂ, ಉಳಿಸಿಕೊಂಡಿದ್ದರು, ಮತ್ತು ಕನ್ನಡಕ್ಕೆ ಬೇಕಾಗುವ ಎ, ಒ, ಱ, ೞದಂತಹ ಕೆಲವು ಹೆಚ್ಚಿನ ಬರಿಗೆಗಳನ್ನೂ ಹೊಸದಾಗಿ ಸೇರಿಸಿಕೊಂಡಿದ್ದರು.

ಮೊನ್ನೆ ಮೊನ್ನೆವರೆಗೂ ಕನ್ನಡ ಬರಹ ಮುಕ್ಯವಾಗಿ ಬ್ರಾಹ್ಮಣರ ಬಳಕೆಯಲ್ಲೇ ಉಳಿದುಕೊಂಡಿತ್ತು; ಕೆಳವರ‍್ಗದ ಜನರು ಅದರಿಂದ ದೂರವೇ ಉಳಿದಿದ್ದರು. ತುಂಬಾ ಸಂಸ್ಕ್ರುತ ಪದಗಳನ್ನು ಬಳಸುವ, ಮತ್ತು ಕನ್ನಡಕ್ಕೆ ಬೇಕಿಲ್ಲದ ಹಲವು ಬರಿಗೆಗಳನ್ನು ಬಳಸುವ ಈ ಬರಹವೂ ಅವರು ಈ ರೀತಿ ಅದರಿಂದ ದೂರ ಉಳಿಯಲು ಒಂದು ಕಾರಣವಾಗಿತ್ತು.

ಆದರೆ, ಇವತ್ತು ಬರಹಕ್ಕೆ ಕಳೆದ ಎರಡು ಸಾವಿರ ವರ‍್ಶಗಳಲ್ಲೂ ಇಲ್ಲದಿದ್ದಂತಹ ಮೇಲ್ಮೆ ದೊರೆತಿದೆ; ಇವತ್ತಿನ ಸಮಾಜದಲ್ಲಿ ಬರಹದ ಅರಿವಿಲ್ಲದವರು ಯಾರೂ ಮುಂದೆ ಬರಲು ಸಾದ್ಯವೇ ಇಲ್ಲ ಎಂಬಂತಹ ಪರಿಸ್ತಿತಿಯುಂಟಾಗಿದೆ; ಇದಲ್ಲದೆ, ಎಲ್ಲಾ ಜನರೂ ಬರಹಬಲ್ಲವರಾಗದೆ ಇವತ್ತು ಯಾವ ಸಮಾಜವೂ ಏಳಿಗೆಹೊಂದಲಾರದು. ಹಾಗಾಗಿ, ಕನ್ನಡಿಗರ, ಅವರ ಸಮಾಜದ, ಮತ್ತು ಅವರ ಬರಹದ ಏಳಿಗೆಗಾಗಿ, ಇವತ್ತು ಕನ್ನಡ ಬರಹ ಎಲ್ಲರನ್ನೂ ತಲಪುವಂತೆ ಮಾಡಬೇಕಾಗಿದೆ, ಮತ್ತು ಇದಕ್ಕಾಗಿ ಕನ್ನಡಕ್ಕೆ ಬೇಕಿಲ್ಲದ ಹಲವು ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಡಬೇಕಾಗಿದೆ.

ಇಲ್ಲಿ ಇನ್ನೊಂದು ವಿಶಯವನ್ನೂ ಗಮನಿಸಬೇಕಾಗಿದೆ: ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳನ್ನು ಕಡಿಮೆಮಾಡಬೇಕು ಎಂದು ಹೇಳಿದರೆ, ದ್ರಾವಿಡ ಕಳಗಂನವರು ಹೇಳುತ್ತಿದ್ದ ಹಾಗೆ, ಸಂಸ್ಕ್ರುತ ಪದಗಳನ್ನು ಬರಹಗಳಲ್ಲಿ ಬಳಸಲೇ ಕೂಡದು ಎಂದು ಹೇಳಿದ ಹಾಗಾಗುವುದಿಲ್ಲ. ನಿಜಕ್ಕೂ ಹಾಗೆ ಹೇಳಲಾಗಿದೆಯಾದರೆ, ಸಂಸ್ಕ್ರುತ ಎರವಲುಗಳನ್ನು ಕನ್ನಡದಲ್ಲಿ ಬರೆಯುವಾಗ ಮಹಾಪ್ರಾಣ, ಋಕಾರ ಮೊದಲಾದವುಗಳನ್ನು ಬಳಸಬೇಕಾಗಿಲ್ಲ ಎಂಬ ಇನ್ನೊಂದು ಹೇಳಿಕೆ ಬೇಕಾಗುವುದೇ ಇಲ್ಲ!

ಕನ್ನಡ ಬರಹಗಳಲ್ಲಿ ಬಳಕೆಯಾಗುವ ಸಂಸ್ಕ್ರುತ ಎರವಲುಗಳ ಎಣಿಕೆ ಹೆಚ್ಚಾದಾಗಲೆಲ್ಲ, ಅದನ್ನು ಕಡಿಮೆ ಮಾಡಬೇಕೆಂಬುದಾಗಿ ಹಿಂದಿನಿಂದಲೂ ಕನ್ನಡದ ಬರಹಗಾರರು ಹೇಳುತ್ತಾ ಬಂದಿದ್ದಾರೆ. ಕವಿರಾಜಮಾರ‍್ಗಕಾರನಿಂದ ಹಿಡಿದು ಬಿಎಂಶ್ರೀಯವರ ವರೆಗೂ ಹಲವು ಮಂದಿ ಈ ವಿಶಯದಲ್ಲಿ ತಮ್ಮ ಬೇಸರವನ್ನು ಹೊರಗೆಡಹಿದ್ದಾರೆ.

ಇವತ್ತು ಅರಿಮೆಯ (ವಿಜ್ನಾನದ) ಬರಹಗಳಿಗೆ ಬೇಕಾಗುವ ಹೊಸ ಪದಗಳನ್ನೆಲ್ಲ ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸದಾಗಿ ಉಂಟುಮಾಡಿಕೊಳ್ಳಲಾಗುತ್ತಿದೆ; ಕನ್ನಡದ ಪದ ಮತ್ತು ಒಟ್ಟುಗಳನ್ನು ತುಂಬಾ ಅಪರೂಪವಾಗಿ ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ, ಅರಿಮೆಯ ಪದನೆರಕೆಗಳಲ್ಲಿ ಕನ್ನಡದವೇ ಆದ ಪದಗಳಿರುವುದು ತೀರಾ ಕಡಿಮೆ.

ಇಂತಹ ಪದನೆರಕೆಗಳನ್ನು ‘ಕನ್ನಡ’ದವೆಂದು ಹೇಳುವುದೇ ವಿಚಿತ್ರವಾಗಿ ಕಾಣಿಸುತ್ತದೆ. ನಿಜಕ್ಕೂ ಈ ರೀತಿ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಬದಲು, ಇಂಗ್ಲಿಶ್ ಪದಗಳನ್ನು ಹಾಗೆಯೇ ಎರವಲು ಪಡೆಯುವುದೇ ಕನ್ನಡಿಗರ ಮಟ್ಟಿಗೆ ಹೆಚ್ಚು ನೆರವಾಗಬಲ್ಲುದು; ಯಾಕೆಂದರೆ, ಮುಂದೆ ಹೆಚ್ಚಿನ ತಿಳಿವನ್ನು ಪಡೆಯಲು ಅವರು ಇಂಗ್ಲಿಶ್ ಬರಹಗಳನ್ನು ಓದಬೇಕಾಗುತ್ತದೆಯಲ್ಲದೆ, ಸಂಸ್ಕ್ರುತದಲ್ಲಿ ಅವರಿಗೆ ಇವತ್ತಿನ ಅರಿಮೆಗಳ ಕುರಿತಾಗಿ ಎಂತಹ ಓದೂ ದೊರಕಲಾರದು.

ಆದರೆ, ಈ ವಿಶಯಗಳ ಕುರಿತಾಗಿ ಮಕ್ಕಳಿಗೆ ಅಡಿಕಲಿಕೆ ದೊರೆಯುವಂತೆ ಮಾಡಲು, ಮತ್ತು ಆಳವಾದ ತಿಳಿವು ದೊರೆಯುವಂತೆ ಮಾಡಲು, ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಬಳಸುವ ಬದಲು ನಮ್ಮವೇ ಆದ ಕನ್ನಡ ಪದಗಳನ್ನು ಬಳಸುವುದೇ ಸರಿಯಾದ ದಾರಿ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter