Posts Tagged ‘ಮಕ್ಕಳು’

ಕಿವುಡರ ಸನ್ನೆನುಡಿಯೂ ಒಂದು ನುಡಿಯೇ

ನುಡಿಯರಿಮೆಯ ಇಣುಕುನೋಟ – 24

ನಾವು ಮಾತನಾಡುವಾಗ ಉಲಿಗಳನ್ನು ಬಳಸುತ್ತೇವೆ. ಈ ಉಲಿಗಳು ಕಿವುಡರಿಗೆ ಕೇಳಿಸುವುದಿಲ್ಲವಾದ ಕಾರಣ, ಕಿವುಡರಾಗಿರುವ ಚಿಕ್ಕ ಮಕ್ಕಳು ಉಲಿಗಳಿರುವ ಮಾತುಗಳನ್ನು ಕಲಿಯಲಾರರು. ಹಾಗಾಗಿ, ದೊಡ್ಡವರಾಗುತ್ತಿರುವಂತೆ ಅಂತಹ ಮಾತುಗಳನ್ನು ಬಳಸಲೂ ಅವರಿಗೆ ಸಾದ್ಯವಾಗುವುದಿಲ್ಲ. ಹೆಚ್ಚು ಕಿವುಡಿಲ್ಲದ ಮಕ್ಕಳಿಗೆ ಚಿಕ್ಕಂದಿನಲ್ಲೇನೇ ಕೇಳಿಸುವ ಉಪಕರಣವನ್ನು ತೊಡಿಸಿದಲ್ಲಿ ಅವರೂ ಇತರ ಮಕ್ಕಳ ಹಾಗೆ ಮಾತನಾಡಲು ಕಲಿಯಬಲ್ಲರು. ಆದರೆ ಏನೂ ಕೇಳಿಸದ ಮಕ್ಕಳಿಗೆ ಹೀಗೆ ಮಾಡಲು ಸಾದ್ಯವಾಗುವುದಿಲ್ಲ. ಹೀಗಿದ್ದರೂ, ಅಂತಹ ಮಕ್ಕಳಿಗೆ ಉಲಿಗಳ ಬದಲು ಸನ್ನೆಗಳನ್ನು ಬಳಸುವ ಮಾತನ್ನು ಕಲಿಸಿದಲ್ಲಿ ಅವರು ಅದನ್ನು ಕಲಿಯಬಲ್ಲರು. ಈ ರೀತಿ ಉಲಿಗಳ ಬದಲು ಸನ್ನೆಗಳನ್ನು ಬಳಸುವ ಕಿವುಡರ ನುಡಿಯನ್ನು ಸನ್ನೆನುಡಿಯೆಂದು ಕರೆಯಬಹುದು.

ಕಿವುಡರ ಈ ಸನ್ನೆನುಡಿ ನಾವಾಡುವ ಉಲಿನುಡಿಗಿಂತ ಒಂದು ಮುಕ್ಯವಾದ ವಿಶಯದಲ್ಲಿ ಬೇರಾಗಿದೆ. ಅದು ಕಣ್ಣಿಗೆ ಕಾಣಿಸುವ ಸನ್ನೆಗಳ ನುಡಿಯಾದ ಕಾರಣ, ಅದರಲ್ಲಿ ಒಂದೇ ಬಾರಿಗೆ ಕಯ್ಸನ್ನೆ, ಕಣ್ಣುಸನ್ನೆ, ಹುಬ್ಬುಗಳ ಕುಣಿತ, ತುಟಿಗಳ ಚಲನೆ, ನಿಲ್ಲುವ ಕ್ರಮ ಮೊದಲಾದ ಹಲವು ಬಗೆಯ ಸನ್ನೆಗಳನ್ನು ಒಟ್ಟಾಗಿ ಬಳಸಿಕೊಳ್ಳಲಾಗುತ್ತದೆ. ನಮ್ಮ ಮಾತುಗಳಲ್ಲಿ ಬಳಕೆಯಾಗುವ ಉಲಿಗಳು ಒಂದರ ಅನಂತರ ಒಂದರಂತೆ ಬರಬಲ್ಲುವಲ್ಲದೆ ಹಾಗೆ ಒಟ್ಟಾಗಿ ಬರಲಾರವು. ಈ ವಿಶಯದಲ್ಲಿ ಸನ್ನೆನುಡಿಗೆ ಉಲಿನುಡಿಗಿಂತ ಹೆಚ್ಚಿನ ಕಸುವಿದೆ. ಆದರೆ, ಇನ್ನೊಂದು ವಿಶಯದಲ್ಲಿ ಉಲಿನುಡಿಗೇನೇ ಹೆಚ್ಚಿನ ಕಸುವಿದೆ; ಸನ್ನೆನುಡಿಯಲ್ಲಿ ಒಬ್ಬರು ನುಡಿದ ಮಾತನ್ನು ಇನ್ನೊಬ್ಬರು ತಿಳಿಯಬೇಕಿದ್ದಲ್ಲಿ ಅವರಿಬ್ಬರೂ ಎದುರೆದುರಿಗೇನೇ ಇರಬೇಕಾಗುತ್ತದೆ; ಆದರೆ, ಉಲಿನುಡಿಯಲ್ಲಿ ಆ ರೀತಿ ಎದುರೆದುರಿಗಿರಬೇಕಾಗಿಲ್ಲ.

ಈ ಎರಡು ವಿಶಯಗಳನ್ನು ಹೊರತುಪಡಿಸಿ, ಬೇರೆಲ್ಲಾ ವಿಶಯಗಳಲ್ಲೂ ಕಿವುಡರ ಸನ್ನೆನುಡಿಗೆ ಕಿವಿ ಕೇಳುವವರ ಉಲಿನುಡಿಯಂತಹದೇ ಕಸುವಿದೆ. ಅದರಲ್ಲಿ ಬಳಕೆಯಾಗುವ ಸನ್ನೆಗಳಿಗೆ ಉಲಿನುಡಿಯ ಉಲಿಗಳ ಹಾಗೆ ನೇರವಾದ ಅರ‍್ತವಿರುವುದಿಲ್ಲ, ಮತ್ತು ಅಂತಹ ಅರ‍್ತವಿಲ್ಲದ ಸನ್ನೆಗಳ ಮೂಲಕ ಉಲಿನುಡಿಯ ಹಾಗೆ ಸನ್ನೆನುಡಿಯಲ್ಲೂ ಸಾವಿರಾರು ಅರ‍್ತವಿರುವ ಪದಗಳನ್ನು ರಚಿಸಿಕೊಳ್ಳಲಾಗುತ್ತದೆ. ಇದಲ್ಲದೆ, ಉಲಿನುಡಿಯ ಹಾಗೆ ಸನ್ನೆನುಡಿಯಲ್ಲೂ ಬಹಳ ಸಿಕ್ಕಲು ಸಿಕ್ಕಲಾದ ನೂರಾರು ಸೊಲ್ಲರಿಮೆಯ ಕಟ್ಟಲೆಗಳನ್ನು ಬಳಸಲಾಗುತ್ತದೆ. ಅವುಗಳ ಮೂಲಕ ಎಂತಹ ವಿಶಯವನ್ನು ಬೇಕಿದ್ದರೂ ಸನ್ನೆನುಡಿಯಲ್ಲಿ ತಿಳಿಸಿ ಹೇಳಲು ಬರುತ್ತದೆ.

ಆದರೆ ಒಂದೇ ಸಮಾಜದಲ್ಲಿ ಬಳಕೆಯಾಗುವ ಉಲಿನುಡಿಯ ಕಟ್ಟಲೆಗಳಿಗೂ ಸನ್ನೆನುಡಿಯ ಕಟ್ಟಲೆಗಳಿಗೂ ನಡುವೆ ಯಾವ ಸಂಬಂದವೂ ಇರುವುದಿಲ್ಲ. ಅವೆರಡು ಒಂದಕ್ಕಿಂತ ಒಂದು ತೀರಾ ಬೇರಾಗಿರುತ್ತವೆ. ಎತ್ತುಗೆಗಾಗಿ, ಅಮೆರಿಕಾದ ಕಿವುಡರು ಬಳಸುವ ಸನ್ನೆನುಡಿಗಿರುವ ಸೊಲ್ಲರಿಮೆಯ ಕಟ್ಟಲೆಗಳು ಅಲ್ಲಿ ಇತರರು ಬಳಸುವ ಇಂಗ್ಲಿಶ್ ನುಡಿಯ ಕಟ್ಟಲೆಗಳಿಗಿಂತ ತೀರ ಬೇರಾಗಿವೆ. ಇಂಗ್ಲಿಶ್ ನುಡಿಯಲ್ಲಿ ಬಳಕೆಯಾಗುವ ಪದಗಳಿಗೆ ಹೆಚ್ಚು ಸಿಕ್ಕಲಾದ ರೂಪಾವಳಿಗಳಿಲ್ಲ. ಆದರೆ, ಅಮೆರಿಕಾದ ಸನ್ನೆನುಡಿಯಲ್ಲಿ ಬಳಕೆಯಾಗುವ ಪದಗಳಿಗೆ ಬಹಳ ಸಿಕ್ಕಲಾದ ರೂಪಾವಳಿಗಳಿವೆ. ಅವುಗಳಲ್ಲಿ ಬರುವ ಎಸಕ(ಕ್ರಿಯಾ)ಪದಗಳ ರೂಪಗಳಿಂದ ಒಂದು ಇಡೀ ಸೊಲ್ಲಿನಲ್ಲಿ ಬರುವ ವಿಶಯಗಳೆಲ್ಲವನ್ನೂ ಸೂಚಿಸಲು ಬರುತ್ತದೆ: ಒಂದು ಕೆಲಸವನ್ನು ಮಾಡಿದವನು, ಅದರಿಂದ ತೊಂದರೆಗೊಳಗಾದವನು, ಆ ಕೆಲಸಕ್ಕೆ ಬಳಸಿದ ವಸ್ತು, ಸಮಯ, ಜಾಗ ಮೊದಲಾದ ಹಲವು ವಿಶಯಗಳನ್ನು ಅಂತಹ ಒಂದೇ ಒಂದು ಎಸಕರೂಪದೊಳಗೆ ಹಿಡಿಸಲು ಬರುತ್ತದೆ.

ಇದಲ್ಲದೆ, ಅಮೆರಿಕಾದ ಈ ಸನ್ನೆನುಡಿಯಲ್ಲಿ ಪದಗಳನ್ನು ಜೋಡಿಸಿ ಸೊಲ್ಲುಗಳನ್ನಾಗಿ ಮಾಡುವ ಬಗೆ ಇಂಗ್ಲಿಶ್ ನುಡಿ ಬಳಸುವ ಹೊಲಬಿಗಿಂತ ತೀರ ಬೇರಾಗಿದೆ: ಅದರಲ್ಲಿ ಒಂದು ವಿಶಯವನ್ನು ಮೊದಲು ತಿಳಿಸಿ, ಅದರ ಕುರಿತಾಗಿ ಹೇಳಬೇಕಾಗಿರುವುದನ್ನು ಆಮೇಲೆ ಹೇಳಲಾಗುತ್ತದೆ; ಎತ್ತುಗೆಗಾಗಿ, ಆ ನುಡಿಯ ಒಂದು ಸೊಲ್ಲು ‘ಮನೆ, ನಾನು ಹೋಗುತ್ತೇನೆ’ ಎಂದಿರಬಲ್ಲುದು, ಮತ್ತು ಇನ್ನೊಂದು ‘ಹಣ್ಣು, ನಾನು ತಿಂದಿದ್ದೇನೆ’ ಎಂದಿರಬಲ್ಲುದು. ಇವುಗಳಲ್ಲಿ ಯಾವುದರ ಕುರಿತಾಗಿ ಮಾತನಾಡಬೇಕಾಗಿದೆ ಎಂಬುದನ್ನು (‘ಮನೆ’ ಇಲ್ಲವೇ ‘ಹಣ್ಣು’ ಎಂಬುದನ್ನು) ಮೊದಲು ತಿಳಿಸಲಾಗಿದೆ, ಮತ್ತು ಆಮೇಲೆ ಅದರ ಕುರಿತಾಗಿ ಏನು ಹೇಳಬೇಕಾಗಿದೆಯೋ ಅದನ್ನು ಹೇಳಲಾಗಿದೆ.

ಅಮೆರಿಕಾದ ಈ ಸನ್ನೆನುಡಿಯಲ್ಲಿ ಪದಗಳು ಸನ್ನೆರೂಪದಲ್ಲಿದ್ದು, ಅವುಗಳಿಗೆ ಸೇರಿಸಬೇಕಾಗಿರುವ ಒಟ್ಟು(ಪ್ರತ್ಯಯ)ಗಳು ಚಲನೆಗಳ ರೂಪದಲ್ಲಿರುತ್ತವೆ. ಅದರಲ್ಲಿ ಬಳಕೆಯಾಗುವ ಕಟ್ಟಲೆಗಳು ಆ ದೇಶದ ಬುಡಕಟ್ಟಿನ ಜನಾಂಗಗಳಲ್ಲಿ ಬಳಕೆಯಲ್ಲಿರುವ ಹೋಪಿ, ನವಹೋ ಮೊದಲಾದ ಕೆಲವು ಉಲಿನುಡಿಗಳ ಕಟ್ಟಲೆಗಳನ್ನು ಹೋಲುತ್ತವೆ. ಈ ಸನ್ನೆನುಡಿಯಲ್ಲಿ ಈಗಾಗಲೇ ಕತೆ, ಕವಿತೆ, ನಾಟಕ, ಪ್ರಬಂದ ಮೊದಲಾದುವನ್ನು ರಚಿಸಲಾಗಿದೆ. ಕಣ್ಣಿಗೆ ಕಾಣಿಸುವಂತಹ ಕಯ್ಸನ್ನೆ, ಕಯ್ಯ ಚಲನೆ, ಹುಬ್ಬಿನ ಕುಣಿತ, ಮೋರೆಯಲ್ಲಿ ಕಾಣಿಸುವ ಅನಿಸಿಕೆಗಳು ಮೊದಲಾದ ಉಲಿನುಡಿಗಳಿಗಿಂತ ತೀರ ಬೇರಾಗಿರುವ ಅಂಶಗಳನ್ನು ಈ ನುಡಿಗಳು ಬಳಸುವುವಾದ ಕಾರಣ, ಸಾಹಿತ್ಯ ರಚನೆಯಲ್ಲಿ ಅವುಗಳಿಗಿರುವ ಕಸುವು ಉಲಿನುಡಿಗಳ ಕಸುವಿಗಿಂತ ತೀರ ಬೇರಾದುದಾಗಿದೆ.

ಎಲ್ಲಾ ಸಮಾಜಗಳಲ್ಲಿರುವ ಕಿವುಡರೂ ಸನ್ನೆನುಡಿಯನ್ನು ಬಳಸಲು ಕಲಿತಿರುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಆ ರೀತಿ ಕಲಿಯಲು ಹಲವು ಮಂದಿ ಕಿವುಡು ಮಕ್ಕಳು ಚಿಕ್ಕಂದಿನಲ್ಲಿ ಒಟ್ಟಿಗೆ ವಾಸಿಸುತ್ತಿರುವುದು ಅವಶ್ಯ. ಬೇರೆ ಬೇರಾಗಿ ಉಲಿನುಡಿಯನ್ನು ಬಳಸುವ ತಾಯಿತಂದೆಯರೊಂದಿಗೆ ಮತ್ತು ಒಡಹುಟ್ಟಿದವರೊಂದಿಗೆ ಬೆಳೆಯುವ ಕಿವುಡು ಮಗುವಿಗೆ ಸನ್ನೆನುಡಿಯನ್ನು ಕಲಿಯಲು ಸಂದರ‍್ಬವೇ ಸಿಗುವುದಿಲ್ಲ. ಕಿವುಡರಿಗೇನೇ ಬೇರೆ ಶಾಲೆಗಳನ್ನು ತೆರೆದು ಕಿವುಡು ಮಕ್ಕಳು ಚಿಕ್ಕಂದಿನಲ್ಲೇನೇ ಒಟ್ಟಿಗೆ ಬೆಳೆಯುವಂತೆ ಮಾಡಿದಲ್ಲಿ ಅವರು ತಮ್ಮೊಳಗೆ ಸನ್ನೆನುಡಿಯನ್ನು ಬಳಸಲು ಕಲಿತುಕೊಳ್ಳಬಲ್ಲರು ಮತ್ತು ಅದರ ಮೂಲಕ ಅವರ ಜೀವನ ಹೆಚ್ಚು ಅರ‍್ತವತ್ತಾಗಬಲ್ಲುದು.

ಚಿಕ್ಕಂದಿನಲ್ಲೇನೇ ಈ ರೀತಿ ಕಿವುಡು ಮಕ್ಕಳು ಒಟ್ಟಿಗೆ ಬೆಳೆಯುವಂತೆ ಮಾಡಿದಲ್ಲಿ ಅವರು ತಾವಾಗಿಯೇ ತಮಗೊಂದು ಸನ್ನೆನುಡಿಯನ್ನು ಉಂಟುಮಾಡಿಕೊಳ್ಳಬಲ್ಲರು ಎಂಬುದನ್ನು ನಿಕಾರಗುವಾದ ಕಿವುಡು ಮಕ್ಕಳು ತೋರಿಸಿಕೊಟ್ಟಿದ್ದಾರೆ. ಆ ನಾಡಿನಲ್ಲಿ ಒಂದು ಕಿವುಡು ಮಕ್ಕಳ ಶಾಲೆಯನ್ನು ೧೯೮೧ರಲ್ಲಿ ಹೊಸದಾಗಿ ತೆರೆಯಲಾಗಿತ್ತು; ಅಲ್ಲಿದ್ದ ದೊಡ್ಡ ಮಕ್ಕಳು ತಮ್ಮ ನಡುವೆ ಕೆಲವು ಸನ್ನೆಗಳನ್ನು ಬಳಸುತ್ತಿದ್ದರಾದರೂ ಅವುಗಳ ಹಿಂದೆ ನಿಶ್ಚಿತವಾದ ಕಟ್ಟಲೆಗಳಿರಲಿಲ್ಲ. ಹಾಗಾಗಿ, ಅದನ್ನೊಂದು ಸನ್ನೆನುಡಿ ಎನ್ನಲು ಬರುವಂತಿರಲಿಲ್ಲ.

ಅದರೆ, ಅವರೊಂದಿಗೆ ಬೆಳೆಯುತ್ತಿದ್ದ ಚಿಕ್ಕ ಮಕ್ಕಳು ದೊಡ್ಡವರು ಬಳಸುತ್ತಿದ್ದ ಸನ್ನೆಗಳನ್ನೇ ಬಳಸಿ ಹೊಸದಾದ ಮತ್ತು ಸಂಪೂರ‍್ಣವಾದ ಒಂದು ಸನ್ನೆನುಡಿಯನ್ನೇ ಉಂಟುಮಾಡಿಕೊಂಡಿದ್ದರು. ಈ ಚಿಕ್ಕ ಮಕ್ಕಳ ಸನ್ನೆನುಡಿಯನ್ನು ಪರಿಶೀಲಿಸಿದ ಅರಿವಿಗರು ನಿಜಕ್ಕೂ ದಂಗಾಗಿದ್ದಾರೆ. ದೊಡ್ಡ ಮಕ್ಕಳು ಬಳಸುತ್ತಿದ್ದ ಸನ್ನೆಗಳಲ್ಲಿಲ್ಲದಿದ್ದ ನೂರಾರು ಸಿಕ್ಕಲು ಸಿಕ್ಕಲಾದ ಸೊಲ್ಲರಿಮೆಯ ಕಟ್ಟಲೆಗಳನ್ನು ಈ ಚಿಕ್ಕ ಮಕ್ಕಳು ಎಲ್ಲಿಂದ ಪಡೆದರು? ಹುಟ್ಟಿನಿಂದಲೇ ಮಕ್ಕಳು ಪಡೆದುಕೊಂಡು ಬರುವಂತಹ ‘ಮಾತು ಪಡೆಯುವ ಅಳವೇ’ ಅವರಿಗೆ ಈ ಸನ್ನೆನುಡಿಯನ್ನು ಹುಟ್ಟಿಸುವಲ್ಲಿ ನೆರವಾಗಿರಬೇಕು ಎಂಬ ತೀರ‍್ಮಾನಕ್ಕೆ ಅರಿವಿಗರು ಬರಬೇಕಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಅರಿಮೆಯ ಬರಹಗಳ ತೊಡಕುಗಳು

ನುಡಿಯರಿಮೆಯ ಇಣುಕುನೋಟ – 22

ಅರಿಮೆಯ (ವಿಜ್ನಾನದ) ಬರಹಗಳನ್ನು ಓದುತ್ತಿರುವವರಿಗೆ ಅವು ತುಂಬಾ ತೊಡಕಿನವಾಗಿ ಕಾಣಿಸಲು ಹಲವು ಕಾರಣಗಳಿವೆ; ಇವುಗಳಲ್ಲಿ ಎಸಕ(ಕ್ರಿಯೆ)ಗಳನ್ನು ತಿಳಿಸಲು ಎಸಕಪದಗಳನ್ನು ಬಳಸುವ ಬದಲು ಅವುಗಳ ಹೆಸರುರೂಪಗಳನ್ನು ಇಲ್ಲವೇ ಬೇರೆ ಹೆಸರುಕಂತೆಗಳನ್ನು ಬಳಸುವುದು ಒಂದು ಮುಕ್ಯ ಕಾರಣ. ಓಡು ಎಂಬುದು ಒಂದು ಎಸಕವನ್ನು ತಿಳಿಸುತ್ತದೆ; ರಾಜು ಓಡುತ್ತಿದ್ದಾನೆ ಎಂಬ ಸೊಲ್ಲಿನಲ್ಲಿ ಇದನ್ನು ಒಂದು ಎಸಕಪದದ ಮೂಲಕ ಒಂದು ಎಸಕವಾಗಿ ತಿಳಿಸಲಾಗಿದೆ. ಸಾಮಾನ್ಯವಾಗಿ ಮಾತಿನಲ್ಲಿ ಈ ರೀತಿ ಎಸಕಗಳನ್ನು ಎಸಕಗಳಾಗಿಯೇ ತಿಳಿಸಲಾಗುತ್ತದೆ; ಆದರೆ, ಅದನ್ನೊಂದು ವಿಶಯವಾಗಿಯೂ ತಿಳಿಸಲು ಬರುತ್ತದೆ, ಮತ್ತು ಇದಕ್ಕಾಗಿ ಮೇಲಿನ ಸೊಲ್ಲನ್ನು ರಾಜುವಿನ ಓಡುವಿಕೆ ಇಲ್ಲವೇ ರಾಜುವಿನ ಓಟ ಎಂಬ ಒಂದು ಹೆಸರುಕಂತೆಯಾಗಿ ಮಾರ‍್ಪಡಿಸಲು ಬರುತ್ತದೆ.

ಇಂತಹ ಮಾರ‍್ಪಡಿಸಿದ ಬಳಕೆಗಳು ಮಾತಿನಲ್ಲಿ ಇಲ್ಲವೇ ಸಾಮಾನ್ಯ ಬರಹಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ; ಆದರೆ, ಅರಿಮೆಯ ಬರಹಗಳಲ್ಲಿ ಅವನ್ನು ತುಂಬಾ ಹೆಚ್ಚು ಬಳಸಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಅವನ್ನು ಬಳಸುವ ಮೂಲಕ ಹೇಳಬೇಕೆಂದಿರುವ ಸಂಗತಿಯನ್ನು ತುಂಬಾ ಅಡಕವಾಗಿ ಹೇಳಲು ಬರುತ್ತದೆ; ಎತ್ತುಗೆಗಾಗಿ, ಮಕ್ಕಳನ್ನು ತಾಯಂದಿರು ಸಾಕುತ್ತಾರೆ ಎಂಬುದನ್ನು ಒಮ್ಮೆ ಸೂಚಿಸಿದ ಮೇಲೆ, ಅದರ ಕುರಿತಾಗಿ ಬೇರೆ ಸಂಗತಿಗಳನ್ನು ತಿಳಿಸಬೇಕಾದಾಗ ಅದನ್ನು ಅಡಕವಾಗಿ ಮಕ್ಕಳ ಸಾಕುವಿಕೆ ಇಲ್ಲವೇ ಬರೀ ಸಾಕುವಿಕೆ ಎಂಬುದಾಗಿ ಮಾರ‍್ಪಡಿಸಿ ಸೂಚಿಸಲು ಬರುತ್ತದೆ.

ಇದಲ್ಲದೆ, ಅರಿಮೆಯ ಬರಹಗಳ ಇಟ್ಟಳ (ರಚನೆ) ಬೇರೆ ಬರಹಗಳ ಇಟ್ಟಳಕ್ಕಿಂತ ಈ ವಿಶಯದಲ್ಲಿ ಬೇರಾಗಿದೆ; ಸಾಮಾನ್ಯ ಬರಹಗಳಲ್ಲಿ ಉದ್ದಕ್ಕೂ ಒಬ್ಬ ವ್ಯಕ್ತಿ ಇಲ್ಲವೇ ಕೆಲವು ವ್ಯಕ್ತಿಗಳು ಏನು ಮಾಡಿದ್ದಾರೆ ಎಂಬುದಾಗಿ ಹಲವು ಬಗೆಯ ಎಸಕಗಳು ಒಂದರ ಬಳಿಕ ಒಂದರಂತೆ ನಡೆದಿರುವುದನ್ನು ತಿಳಿಸಲಾಗುತ್ತದೆ; ಇದಕ್ಕೆ ಬದಲು, ಅರಿಮೆಯ ಬರಹಗಳಲ್ಲಿ ಒಂದು ಎಸಕವನ್ನು ತಿಳಿಸಿದ ಮೇಲೆ, ಆ ಎಸಕದ ಕುರಿತಾಗಿ ಹಲವಾರು ವಿಶಯಗಳನ್ನು ತಿಳಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಆ ಎಸಕವನ್ನು ಮುಂದಿನ ಸೊಲ್ಲುಗಳ ನೆಲೆಯಾಗಿ ಬಳಸಬೇಕಾಗುತ್ತದೆ; ಆದರೆ, ಹೆಸರುಪದಗಳು ಇಲ್ಲವೇ ಎಸಕಪದಗಳ ಹೆಸರುರೂಪಗಳು ಮಾತ್ರ ಸೊಲ್ಲುಗಳ ನೆಲೆಗಳಾಗಬಲ್ಲುವು; ಹಾಗಾಗಿ, ಆ ಎಸಕವನ್ನು ತಿಳಿಸಲು ಒಂದು ಹೆಸರುಕಂತೆಯನ್ನು ಬಳಸಬೇಕಾಗುತ್ತದೆ.

ಇಂತಹ ಮಾರ‍್ಪಡಿಸಿದ ಬಳಕೆಗಳು ತೊಡಕಿನವಾಗಿ ಕಾಣಿಸಲು ಮುಕ್ಯ ಕಾರಣವೇನೆಂದರೆ, ಸಾಮಾನ್ಯವಾಗಿ ನಮ್ಮ ಮಾತಿನಲ್ಲಿ ಎಸಕಪದಗಳು ಎಸಕಗಳನ್ನು ಸೂಚಿಸುತ್ತವೆ ಮತ್ತು ಹೆಸರುಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುತ್ತವೆ; ಆದರೆ, ಈ ಮಾರ‍್ಪಡಿಸಿದ ಬಳಕೆಗಳಲ್ಲಿ ಹೆಸರುಪದಗಳ ಮೂಲಕ ಎಸಕಗಳನ್ನು ಸೂಚಿಸಲಾಗುತ್ತದೆ. ಎಂದರೆ, ಇವು ನಾವು ಜಗತ್ತನ್ನು ನೋಡುವ ಬಗೆಯನ್ನೇ ಬೇರೆ ಮಾಡುತ್ತವೆ: ಅವು ಎಸಕಗಳನ್ನು ಹೆಸರುಗಳಾಗಿ, ಎಂದರೆ ವಸ್ತು ಇಲ್ಲವೇ ವಿಶಯಗಳಾಗಿ ನೋಡುವಂತೆ ಮಾಡುತ್ತವೆ. ಅರಿಮೆಯ ಬರಹಗಳನ್ನು ಓದುವವರು ಜಗತ್ತನ್ನು ಈ ರೀತಿ ಒಂದು ಹೊಸ ಬಗೆಯಲ್ಲಿ ನೋಡಲು ಕಲಿಯಬೇಕಾಗುತ್ತದೆ. ಇದು ಸುಲಬದ ಕೆಲಸವಲ್ಲ.

ಕನ್ನಡದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಇನ್ನೊಂದು ತೊಡಕೂ ಕಾಣಿಸಿಕೊಳ್ಳುತ್ತದೆ: ಅರಿಮೆಯ ಬರಹಗಳನ್ನು ಬರೆಯುವವರು ಎಸಕಪದಗಳನ್ನು ಹೆಸರುಕಂತೆಗಳಾಗಿ ಮಾರ‍್ಪಡಿಸುವಲ್ಲಿ ಕನ್ನಡದ ಕಸುವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾಗಾಗಿ, ಅವರು ಕನ್ನಡದವೇ ಆದ ಹೆಸರುಪದಗಳನ್ನು ಇಲ್ಲವೇ ಎಸಕಪದಗಳ ಹೆಸರುರೂಪಗಳನ್ನು ಬಳಸುವ ಬದಲು, ಸಂಸ್ಕ್ರುತದ ಪದ ಮತ್ತು ಪದರೂಪಗಳನ್ನು ಅನವಶ್ಯಕವಾಗಿ ಎರವಲು ಪಡೆದು ಬಳಸಹೋಗುತ್ತಾರೆ, ಮತ್ತು ಆ ಮೂಲಕ ತಮ್ಮ ಬರಹಗಳಲ್ಲಿ ಇನ್ನಶ್ಟು ತೊಡಕುಗಳನ್ನು ಸೇರಿಸಿಕೊಳ್ಳುತ್ತಾರೆ.

ಎತ್ತುಗೆಗಾಗಿ, ಈ ಮಣ್ಣಿನಲ್ಲಿ ಕ್ಶಾರ ಇದೆ ಎಂಬ ಸೊಲ್ಲನ್ನು ಕನ್ನಡದಲ್ಲೇನೇ ಕ್ಶಾರವಿರುವ (ಇಲ್ಲವೇ ಕ್ಶಾರವುಳ್ಳ) ಮಣ್ಣು ಎಂಬುದಾಗಿ ಮಾರ‍್ಪಡಿಸಬಹುದು. ಆದರೆ ಇದು ಕನ್ನಡದಲ್ಲಿ ಅರಿಮೆಯ ಬರಹಗಳನ್ನು ಬರೆಯುವವರ ಗಮನಕ್ಕೇ ಬರುವುದಿಲ್ಲ. ಅದಕ್ಕೆ ಬದಲಾಗಿ ಅವರು ಕ್ಶಾರಯುಕ್ತ ಮಣ್ಣು ಎಂಬುದಾಗಿ ಸಂಸ್ಕ್ರುತದಿಂದ ಯುಕ್ತ ಪದರೂಪವನ್ನು ಎರವಲು ಪಡೆದು ಬಳಸುತ್ತಾರೆ. ಜೀವ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯೊಂದನ್ನು ಕೇಳಿ, ಅದರ ಮುಂದಿನ ಸೊಲ್ಲಿನಲ್ಲಿ ಜೀವದ ಹುಟ್ಟು ಎಂಬುದಾಗಿ ಅದನ್ನು ಮಾರ‍್ಪಡಿಸಿಕೊಳ್ಳುವ ಬದಲು, ಜೀವದ ಉಗಮ ಎಂಬುದಾಗಿ ಬರೆಯುತ್ತಾರೆ; ಎಂದರೆ, ಸಂಸ್ಕ್ರುತದ ಉಗಮ ಪದವನ್ನು ಅನವಶ್ಯಕವಾಗಿ ಎರವಲಾಗಿ ಪಡೆದು ಬಳಸುತ್ತಾರೆ. ಇದರಿಂದಾಗಿ, ಮೊದಲೇ ತೊಡಕಿನದಾಗಿ ಕಾಣಿಸುವ ಅರಿಮೆಯ ಬರಹ ಇನ್ನಶ್ಟು ತೊಡಕಿನದಾಗುತ್ತದೆ.

ಎಸಕಗಳನ್ನು ತಿಳಿಸಲು ಹೆಸರುಕಂತೆಗಳನ್ನು ಬಳಸಿರುವಲ್ಲಿ ಓದುಗರು ಎಸಕದಿಂದ ವಿಶಯಕ್ಕೆ ನೆಗೆಯಬೇಕಾಗುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಸಕವನ್ನು ಇಲ್ಲಿ ಎಸಕಪದದ ಮೂಲಕ ಒಂದು ಎಸಕವಾಗಿ ಸೂಚಿಸದೆ, ಹೆಸರುಪದದ ಮೂಲಕ ಒಂದು ವಿಶಯವಾಗಿ ಸೂಚಿಸಲಾಗುತ್ತದೆ. ಇದಲ್ಲದೆ, ಆ ರೀತಿ ಬದಲಾವಣೆಯನ್ನು ಮಾಡಲಾಗಿದೆ ಎಂಬುದನ್ನು ಬರಹಗಳಲ್ಲಿ ಯಾವ ರೀತಿಯಲ್ಲೂ ಸೂಚಿಸಲಾಗುವುದಿಲ್ಲ. ಓದುಗರು ಈ ನೆಗೆತವನ್ನು ತಾವೇ ಮಾಡಿಕೊಳ್ಳಬಲ್ಲರು ಎಂಬುದಾಗಿ ತಿಳಿಯಲಾಗುತ್ತದೆ.

ಆದರೆ, ಅರಿಮೆಯ ಬರಹಗಳನ್ನು ಓದಿ ಪಳಗಿಲ್ಲದ ಓದುಗರಿಗೆ ಈ ನೆಗೆತ ತೊಂದರೆಯನ್ನು ಕೊಡುತ್ತದೆ. ಕನ್ನಡದ ಅರಿಮೆಯ ಬರಹಗಳಲ್ಲಿ ಈ ನೆಗೆತದೊಂದಿಗೆ ಇನ್ನೊಂದು ನೆಗೆತವನ್ನೂ ಓದುಗರ ಮೇಲೆ ಹೊರಿಸಲಾಗುತ್ತದೆ: ಅವರು ಎಸಕದಿಂದ ಹೆಸರಿಗೆ ನೆಗೆಯಬೇಕಾಗುತ್ತದೆ ಮಾತ್ರವಲ್ಲ, ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೂ ನೆಗೆಯಬೇಕಾಗುತ್ತದೆ. ಎತ್ತುಗೆಗಾಗಿ, ಒಂದು ಜೀವಿ ಇನ್ನೊಂದು ಜೀವಿಯನ್ನು ಹುಟ್ಟಿಸುತ್ತದೆ ಎಂಬಲ್ಲಿಂದ ಹುಟ್ಟಿಸುವಿಕೆ ಎಂಬುದಕ್ಕೆ ಹೋಗದೆ ನೇರವಾಗಿ ಪ್ರಜನನ ಕ್ರಿಯೆ ಎಂಬುದಕ್ಕೆ ನೆಗೆಯಬೇಕಾಗುತ್ತದೆ.

ಚಿಕ್ಕ ಮಕ್ಕಳಿಗಾಗಿ ಬರೆದ ಅರಿಮೆಯ ಬರಹಗಳಲ್ಲೂ ಇಂತಹ ಹಲವಾರು ಸಂಸ್ಕ್ರುತದ ಪದರೂಪಗಳನ್ನು ಕಾಣಬಹುದು. ಇವನ್ನು ಮಕ್ಕಳು ಕಣ್ಣು ಮುಚ್ಚಿ ಬಾಯಿಪಾಟ ಮಾಡುತ್ತಾರಲ್ಲದೆ, ಅವು ನಿಜಕ್ಕೂ ಏನು ಹೇಳುತ್ತವೆ ಎಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಯಾಕೆಂದರೆ, ಅವರಿಗೆ ಇವುಗಳಲ್ಲಿ ಬರುವ ಎಸಕದಿಂದ ಹೆಸರಿಗೆ ಹಾರುವ ಮೊದಲ ನೆಗೆತವೇ ತೊಡಕಿನದಾಗಿ ಕಾಣಿಸುತ್ತದೆ; ಇನ್ನು ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೆ ಹಾರುವ ಎರಡನೆಯ ನೆಗೆತ ಅವರ ಅಳವಿಗೆ ಮೀರಿದ್ದು.

ಅರಿಮೆಯ ಬರಹಗಳನ್ನು ಮಂದಿ ಮೆಚ್ಚುವ (ಜನಪ್ರಿಯವಾಗುವ) ಹಾಗೆ ಇಲ್ಲವೇ ಚಿಕ್ಕ ಮಕ್ಕಳಿಗೆ ಗೊತ್ತಾಗುವ ಹಾಗೆ ಬರೆಯಬೇಕಿದ್ದಲ್ಲಿ ಬರಹಗಾರರು ಕೆಳಗೆ ಕೊಟ್ಟಿರುವ ಉಪಾಯಗಳನ್ನು ಬಳಸಿಕೊಳ್ಳಬೇಕಾಗುತ್ತದೆ: (೧) ಆದಶ್ಟು ಮಟ್ಟಿಗೆ ಅವರು ಅರಿಮೆಯ (ಪಾರಿಬಾಶಿಕ) ಪದಗಳ ಬಳಕೆಯನ್ನು ಕಡಿಮೆ ಮಾಡಬೇಕು; (೨) ಎಸಕಗಳನ್ನು ತಿಳಿಸುವ ಹೆಸರುಕಂತೆಗಳನ್ನು ಸೊಲ್ಲುಗಳಾಗಿ ಬದಲಾಯಿಸಿಕೊಳ್ಳಬೇಕು; (೩) ಸಿಕ್ಕಲು ಸೊಲ್ಲುಗಳನ್ನು ಸುಳುಸೊಲ್ಲುಗಳಾಗಿ ಬಿಡಿಸಿ ಬರೆಯಬೇಕು; ಮತ್ತು (೪) ಸಂಸ್ಕ್ರುತ (ತತ್ಸಮ) ಪದಗಳ ಬದಲು ಆದಶ್ಟು ಮಟ್ಟಿಗೆ ಕನ್ನಡದವೇ ಆದ ಪದಗಳನ್ನು ಬಳಸಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮಕ್ಕಳಿಗೆ ಬರೆಯಲು ಕಲಿಸುವ ಬಗೆ

ನುಡಿಯರಿಮೆಯ ಇಣುಕುನೋಟ – 17

ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಮಕ್ಕಳ ಮಟ್ಟಿಗೆ ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಬರೆಯಬೇಕಿದ್ದಲ್ಲಿ ಅವರು ಒಂದೇ ಬಾರಿಗೆ ಹಲವಾರು ತೀರ‍್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ: ಯಾವ ವಿಶಯಗಳ ಕುರಿತು ಬರೆಯಬೇಕು, ಆ ವಿಶಯಗಳನ್ನು ಯಾವ ರೀತಿಯಲ್ಲಿ ಜೋಡಿಸಿಕೊಳ್ಳಬೇಕು, ಎಂತಹ ಪದಗಳನ್ನು ಬಳಸಬೇಕು, ಅವನ್ನು ಒಟ್ಟುಗೂಡಿಸಿ ಸೊಲ್ಲುಗಳನ್ನು ಹೇಗೆ ಕಟ್ಟಬೇಕು, ಅವನ್ನು ಬರೆಯುವಲ್ಲಿ ಯಾವ ಬರಿಗೆಗಳನ್ನು ಬಳಸಬೇಕು ಎಂಬುದನ್ನೆಲ್ಲ ಅವರು ಒಂದೇ ಬಾರಿಗೆ ತೀರ‍್ಮಾನಿಸಿಕೊಳ್ಳಬೇಕಾಗುತ್ತದೆ. ಹೀಗೆ ಮಾಡಲು ಬರುವುದಿಲ್ಲವಾದಲ್ಲಿ, ಅವರ ಬರೆಯುವ ಕೆಲಸ ಮುಂದಕ್ಕೆ ಹೋಗುವುದೇ ಇಲ್ಲ.

ಹೆಚ್ಚಿನ ಮಕ್ಕಳಿಗೂ ಈ ತೊಡಕು ತೊಡಕಾದ ಕೆಲಸವನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ. ಅದಕ್ಕೆ ಬೇಕಾಗುವ ಚಳಕಗಳನ್ನು ಒಂದೊಂದಾಗಿ ಕಲಿಯುವಂತೆ ಯಾರಾದರೂ ಅವರಿಗೆ ನೆರವನ್ನಿತ್ತರೆ ಮಾತ್ರ, ಅವರು ಅದನ್ನು ಕಲಿಯಬಲ್ಲರು. ಇಲ್ಲವಾದರೆ, ಬರೆಯುವ ಕೆಲಸ ತಮಗೆ ಹೇಳಿದ್ದಲ್ಲ ಎಂಬುದಾಗಿ ಅವರು ಅದರಿಂದ ದೂರವೇ ಉಳಿಯುತ್ತಾರೆ. ಪರೀಕ್ಶೆಗಳಲ್ಲಿ ಬರೆಯಬೇಕಾದುದನ್ನೆಲ್ಲ ಉರುಹೊಡೆದು ಬರೆಯುವುದನ್ನಶ್ಟೇ ಅವರು ಮಾಡಬಲ್ಲರು.

ಹಾಗಾಗಿ, ಮಕ್ಕಳಿಗೆ ಬರೆಯಲು ಕಲಿಸುವವರು ಅದಕ್ಕೆ ಬೇಕಾಗುವ ಚಳಕಗಳನ್ನು ಒಂದೊಂದಾಗಿ ಹತೋಟಿಗೆ ತಂದುಕೊಳ್ಳುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕು. ಬರಿಗೆ(ಅಕ್ಶರ)ಗಳನ್ನು ಬರೆಯಲು ಕಲಿಯುವ ಸಮಯದಲ್ಲಿ ಅವರು ಈ ಕಲಿಕೆಯನ್ನು ಸರಿಯಾದ ಓರಣ(ಕ್ರಮ)ದಲ್ಲಿ ನಡೆಸುವ ಹಾಗೆ ನೋಡಿಕೊಳ್ಳಬೇಕು.

ಮಕ್ಕಳ ಕಯ್ಬರಹ ಓದಬಲ್ಲುದಾಗಿರಬೇಕು, ಮತ್ತು ಬರವಣಿಗೆ ಸಲೀಸಾಗಿರಬೇಕು. ಸಲೀಸಾಗಿ ಬರೆಯಲು ಬಾರದವರಿಗೆ ಬೇರೆ ವಿಶಯಗಳ ಕುರಿತು ಆಲೋಚಿಸಲು ಸಮಯವೇ ಸಿಗುವುದಿಲ್ಲ. ಸಲೀಸಾಗಿ ಬರೆಯಬೇಕಿದ್ದಲ್ಲಿ, ಮಕ್ಕಳು ಬರಿಗೆಗಳನ್ನು ಬರೆಯುವ ಬಗೆ, ಬಳಪವನ್ನು ಹಿಡಿಯುವ ಬಗೆ, ಮತ್ತು ಕಾಗದವನ್ನು ಎದುರು ಇರಿಸಿಕೊಳ್ಳುವ ಬಗೆ ಸರಿಯಾಗಿರಬೇಕು.

ಕೆಲವು ಮಕ್ಕಳು ಬರೆಯುವಾಗ ಬಲಗಯ್ಯನ್ನು ಬಳಸುವ ಬದಲು ಎಡಗಯ್ಯನ್ನು ಬಳಸುತ್ತಾರೆ. ಆದರೆ, ಇಂತಹ ಮಕ್ಕಳು ಬಲಗಯ್ಯಲ್ಲಿ ಬರೆಯುವವರನ್ನು ನೋಡಿ, ಅವರು ಬರೆಯುವ ಹಾಗೆಯೇ ಬರೆಯತೊಡಗುತ್ತಾರೆ. ಇದರಿಂದಾಗಿ ಅವರು ತೊಂದರೆಗೊಳಗಾಗುತ್ತಾರೆ. ಯಾಕೆಂದರೆ, ಹಾಗೆ ಬರೆಯುವಾಗ ಅವರಿಗೆ ತಮ್ಮ ಕಯ್ಬೆರಳು ಅಡ್ಡ ಬರುತ್ತದೆ, ಮತ್ತು ತಾವು ಬರೆದುದೇನೆಂಬುದು ಕಾಣಿಸುವುದಿಲ್ಲ. ಅದು ಕಾಣಿಸುವಂತೆ ಮಾಡಲು, ಅವರು ತಮ್ಮ ಮಣಿಗಂಟನ್ನು ಬಗ್ಗಿಸಿ ಬರೆಯಹೊರಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅವರ ಬರವಣಿಗೆ ತುಂಬಾ ತೊಡಕಿನದಾಗಿಬಿಡುತ್ತದೆ.

ಎಡಗಯ್ಯಲ್ಲಿ ಬರೆಯುವ ಮಕ್ಕಳಿಗೆ ಅವರು ಬರೆಯಬೇಕಾಗಿರುವ ಬಗೆ ಹೇಗೆ ಎಂಬುದನ್ನು ಕಲಿಸಿಕೊಡಬೇಕು. ಬರೆಯುವ ಕಾಗದವನ್ನು ಇಲ್ಲವೇ ಪುಸ್ತಕವನ್ನು ಅವರು ಬಲಗಯ್ಯವರ ಹಾಗೆ ಎಡಕ್ಕೆ ತಿರುಗಿಸಿ ಇರಿಸಿಕೊಳ್ಳುವ ಬದಲು, ಬಲಕ್ಕೆ ತಿರುಗಿಸಿ ಇರಿಸಿಕೊಳ್ಳುವ ಹಾಗೆ ಮಾಡಬೇಕು, ಮತ್ತು ಪೆನ್ನನ್ನು ತುದಿಯಿಂದ ತುಸು ಮೇಲೆ ಹಿಡಿದುಕೊಳ್ಳಲು ಹೇಳಬೇಕು. ಬರೆಯುವಾಗ ಅವರು ಮಣಿಗಂಟನ್ನು ಬಗ್ಗಿಸಬಾರದು. ಎಡಗಯ್ಯವರಿಗೆ ತಕ್ಕುದಾಗಿರುವಂತಹ ಈ ಬರೆಯುವ ಬಗೆಯನ್ನು ಕಲಿತುಕೊಂಡಲ್ಲಿ ಮಾತ್ರ, ಅವರಿಗೆ ಸಲೀಸಾಗಿ ಬರೆಯಲು ಬರುತ್ತದೆ.

ಮಾತಿಗೂ ಬರಹಕ್ಕೂ ನಡುವೆ ಸೊಲ್ಲುಗಳ ರಚನೆಯಲ್ಲಿ ವ್ಯತ್ಯಾಸಗಳಿವೆಯಾದ ಕಾರಣ, ಬರೆಯಲು ಕಲಿಯುವ ಮಕ್ಕಳಿಗೆ ಬರಹಗಳಲ್ಲಿ ಎಂತಹ ಸೊಲ್ಲುಗಳನ್ನು ಬಳಸಬೇಕು ಎಂಬುದನ್ನೂ ಕಲಿಸಬೇಕಾಗುತ್ತದೆ. ಇಡೀ ಸೊಲ್ಲುಗಳನ್ನು ಬರೆಯುವುದು ಹೇಗೆ, ಚಿಕ್ಕ ಚಿಕ್ಕ ಸೊಲ್ಲುಗಳನ್ನು ಜೋಡಿಸಿ ಉದ್ದ ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ, ಒಂದು ಚಿಕ್ಕ ಸೊಲ್ಲಿನ ಒಳಗೆ ಬೇರೆ ಚಿಕ್ಕ ಸೊಲ್ಲುಗಳನ್ನು ಇರಿಸಿ ಸಿಕ್ಕಲು ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕಾಗುತ್ತದೆ. ಎಲ್ಲಾ ಮಕ್ಕಳಿಗೂ ಇದನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ.

ಸೊಲ್ಲುಗಳನ್ನು ಸೇರಿಸಿ ಕುರಳು(ಪಾರಾ)ಗಳನ್ನು ರಚಿಸುವ ಬಗೆಯನ್ನೂ ಅವರಿಗೆ ಕಲಿಸಿಕೊಡಬೇಕಾಗುತ್ತದೆ. ಒಳ್ಳೇ ಮಾದರಿ ಕುರಳುಗಳಲ್ಲಿ ಮೊದಲಿಗೆ ಮುಕ್ಯ ವಿಶಯವನ್ನು ಮುಂದಿಡುವ ಚಿಕ್ಕ ಸೊಲ್ಲಿರುತ್ತದೆ; ಆಮೇಲೆ, ಅದನ್ನು ಹೆಚ್ಚು ವಿವರವಾಗಿ ತಿಳಿಸುವ, ಮತ್ತು ಅದಕ್ಕೆ ಬೆಂಬಲ ನೀಡುವ ವಿಶಯಗಳು ಬರುತ್ತವೆ; ಮತ್ತು ಕೊನೆಯಲ್ಲಿ, ಮುಕ್ತಾಯಗೊಳಿಸುವ ಸೊಲ್ಲು ಬರುತ್ತದೆ. ಸೊಲ್ಲುಗಳನ್ನು ಈ ರೀತಿ ಒಂದಕ್ಕೊಂದು ಹೊಂದಿಕೊಳ್ಳುವ ಹಾಗೆ ಬರೆಯುವುದು ಹೇಗೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.

ಬರಹದಲ್ಲಿ ಬರುವ ಕುರಳುಗಳನ್ನು ಹೇಗೆ ಅಣಿಗೊಳಿಸುವುದು ಎಂಬುದನ್ನೂ ಅವರು ಕಲಿಯಬೇಕಾಗುತ್ತದೆ. ಇದು ಬೇರೆ ಬೇರೆ ಗುರಿಗಳಿಗಾಗಿ ಬಳಕೆಯಾಗುವ ಬರಹಗಳಲ್ಲಿ ಬೇರೆ ಬೇರಾಗಿರುತ್ತದೆ. ಒಂದು ಕತೆಯನ್ನು ಬರೆಯುವವರು ಅದರ ನೆಗಳ್ತೆ ಮುಂದೆ ಹೋಗುವುದಕ್ಕೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇದಕ್ಕೆ ಬದಲು, ಒಂದು ವಿಶಯದ ಮಟ್ಟಿಗೆ ಇನ್ನೊಬ್ಬರ ಒಪ್ಪಿಗೆ ಇಲ್ಲವೇ ಒಲವನ್ನು ಪಡೆಯಬೇಕೆಂದಿರುವವರು ಆ ವಿಶಯವನ್ನು ಓದುಗರ ಮುಂದಿರಿಸುವ ಮತ್ತು ಅದನ್ನು ಬೆಂಬಲಿಸುವ ವಿಚಾರಗಳನ್ನು ಕೊಡುವ ಬಗೆ ಹೇಗೆ ಎಂಬುದಕ್ಕೆ ಗಮನ ಕೊಡಬೇಕಾಗುತ್ತದೆ.

ಒಮ್ಮೆ ಬರೆದುದನ್ನು ಓದಿ ನೋಡಿ, ಅದು ಸರಿಯಿಲ್ಲವೆಂದು ಅನಿಸಿದಲ್ಲಿ ಅದನ್ನು ತಿದ್ದಿ ಸರಿಪಡಿಸುವುದು ಹೇಗೆ ಎಂಬುದನ್ನೂ ಮಕ್ಕಳು ತಿಳಿದಿರಬೇಕು. ಇದಕ್ಕಾಗಿ ಅವರು ತಾವು ಬರೆದಿರುವ ಸೊಲ್ಲನ್ನು ಬೇರೆ ಬೇರೆ ಬಗೆಗಳಲ್ಲಿ ಮಾರ‍್ಪಡಿಸುವುದು ಹೇಗೆ ಎಂಬುದನ್ನು ಕಲಿತಿರಬೇಕಾಗುತ್ತದೆ. ತಾವು ಬರೆದಿರುವ ಸೊಲ್ಲಿನ ಇಟ್ಟಳ (ಒಳರಚನೆ) ಎಂತಹದು, ಆ ಸೊಲ್ಲನ್ನು ಬೇರೆ ಯಾವ ಇಟ್ಟಳಗಳಿಗೆ ಮಾರ‍್ಪಡಿಸಬಹುದು ಎಂಬಂತಹ ಸೊಲ್ಲರಿಮೆಯ (ವ್ಯಾಕರಣದ) ತಿಳಿವು ಅವರಿಗಿದ್ದಲ್ಲಿ, ತಾವು ಬರೆದಿರುವ ಬರಹವನ್ನು ತಿದ್ದಿ ಸರಿಪಡಿಸುವ ಕೆಲಸವನ್ನು ಅವರು ಹೆಚ್ಚು ಚನ್ನಾಗಿ ನಡೆಸಬಲ್ಲರು.

ಬರವಣಿಗೆಯಲ್ಲಿ ಮಾಡಿರುವ ತಪ್ಪನ್ನು ಬರೆದವರೇ ಓದಿ ನೋಡಿ ಕಂಡುಕೊಳ್ಳುವಂತೆ ಮಾಡಿದಲ್ಲಿ, ಮತ್ತು ಅವು ಯಾಕೆ ತಪ್ಪಾಗಿವೆ ಎಂಬುದನ್ನೂ ತಿಳಿಯುವಂತೆ ಮಾಡಿದಲ್ಲಿ ಅವರ ಬರವಣಿಗೆ ಬೇಗನೆ ಮುಂದೆ ಸಾಗುತ್ತದೆ. ಬರೆದಶ್ಟೂ ಬರವಣಿಗೆ ಚನ್ನಾಗುತ್ತಾ ಹೋಗುತ್ತದೆ. ಹಾಗಾಗಿ, ಬರೆಯುವ ಸಂದರ‍್ಬಗಳು ಮಕ್ಕಳಿಗೆ ಹೆಚ್ಚು ಹೆಚ್ಚು ದೊರಕುವಂತೆ ಮಾಡಬೇಕು.

ಮಕ್ಕಳಿಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟಬೇಕೆಂಬುದು ಎಲ್ಲಕ್ಕಿಂತಲೂ ಮುಕ್ಯವಾದ ವಿಶಯ. ಏನನ್ನೇ ಬರೆಯಲಿ, ಅದು ಅವರಿಗೆ ನಲಿವನ್ನು ಮತ್ತು ಮೆಚ್ಚುಗೆಯನ್ನು ಕೊಡುವಂತಿರಬೇಕು. ಬೇರೆಯವರ ಒತ್ತಾಯಕ್ಕೆ ಬರೆಯುವ ಬರಹದಿಂದ ಅವರ ಬರವಣಿಗೆ ಒಳ್ಳೆಯದಾಗಲಾರದು.

ಏನಾದರೂ ಒಂದು ವಿಶಯವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂಬ ತುಡಿತ ಮಕ್ಕಳಲ್ಲಿರುತ್ತದೆ. ಶಾಲೆಯಿಂದ ಮನೆಗೆ ಬಂದೊಡನೆ, ಶಾಲೆಯಲ್ಲಿ ಇಲ್ಲವೇ ಅಲ್ಲಿಂದ ಬರುವಾಗ ದಾರಿಯಲ್ಲಿ ಏನಾಯಿತು ಎಂಬುದನ್ನು ತಾಯಿಗೆ ಆದಶ್ಟು ಬೇಗನೆ ತಿಳಿಸಿಬಿಡಬೇಕೆಂಬ ಆತುರದಲ್ಲಿ ಮಕ್ಕಳಿರುತ್ತಾರೆ. ಗೆಳೆಯರನ್ನು ಕಂಡೊಡನೆ ತಮಗೆ ತಿಳಿದಿರುವ ಹೊಸ ವಿಶಯವೊಂದನ್ನು ಅವರಿಗೆ ತಿಳಿಸುವ ಆತುರವೂ ಅವರಿಗಿರುತ್ತದೆ.

ತಮ್ಮ ಮನಸ್ಸಿನಲ್ಲಿರುವ ಇಂತಹ ವಿಶಯಗಳನ್ನು ಮಾತಿನ ಮೂಲಕ ಇನ್ನೊಬ್ಬರಿಗೆ ತಿಳಿಸುವ ಹಾಗೆ ಬರಹದ ಮೂಲಕವೂ ತಿಳಿಸಲು ಬರುತ್ತದೆ ಎಂಬುದನ್ನು ಅವರಿಗೆ ತೋರಿಸಿಕೊಟ್ಟಲ್ಲಿ, ಅವರು ಬಹಳ ಬೇಗನೆ ಬರವಣಿಗೆಯಲ್ಲಿ ಮುಂದೆ ಹೋಗುತ್ತಾರೆ. ಮೊದಲಿಗೆ ಅವರ ಹತ್ತಿರ ಮಾತಿನ ಮೂಲಕ ಒಂದು ವಿಶಯವನ್ನು ತಿಳಿಸಲು ಹೇಳಿ, ಅದನ್ನು ಕಲಿಸುವವರೇ ಬರೆದು ತೋರಿಸಬಹುದು, ಮತ್ತು ಹಾಗೆ ಬರೆದುದನ್ನು ಅವರಿಗೆ ಓದಲು ಕೊಡಬಹುದು. ಹೀಗೆ ಮಾಡುವುದರಿಂದ ಅವರಿಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟುತ್ತದೆ.

ಬರೆಯಲು ಕಲಿಯಬೇಕೆಂದಿರುವವರಿಗೆ ಎರಡು ಬಗೆಯ ಕಲಿಕೆಗಳು ನೆರವು ನೀಡಬಲ್ಲುವು: ಮೊದಲನೆಯದಾಗಿ, ಬರೆಯಲಿರುವ ವಿಶಯದ ಕುರಿತು ಅವರು ಏನೆಲ್ಲಾ ಹೇಳಬಲ್ಲರೋ ಅದನ್ನೆಲ್ಲ ಹೇಳಲು ಬಿಡಬೇಕು. ಇದರಿಂದ ಅವರಲ್ಲಿ ಆಲೋಚಿಸುವ ಕಸುವು ಬೆಳೆಯುತ್ತದೆ. ಎರಡನೆಯದಾಗಿ, ಅವರಿಗೆ ಬೇರೆ ಯಾವುದಾದರೂ ಬರಹವನ್ನು ಎತ್ತಿಬರೆಯಲು ಕಲಿಸಬೇಕು. ಹೀಗೆ ಬರೆಯುವಾಗ, ಅಂತಹ ಬರಹಗಳಲ್ಲಿ ಸೊಲ್ಲುಗಳನ್ನು ಮತ್ತು ಕುರಲುಗಳನ್ನು ಯಾವ ರೀತಿಯಲ್ಲಿ ಅಳವಡಿಸಲಾಗಿದೆ ಎಂಬುದನ್ನು ಅವರು ಗಮನಿಸುವ ಹಾಗೆಯೂ ಮಾಡಬೇಕು.

ಓದುವ ಮತ್ತು ಬರೆಯುವ ಕೆಲಸಗಳೆರಡೂ ಬಹಳ ಮಟ್ಟಿಗೆ ಒಂದನ್ನೊಂದು ಅವಲಂಬಿಸಿವೆ. ಹಾಗಾಗಿ, ಅವೆರಡನ್ನೂ ಮಕ್ಕಳು ಒಟ್ಟೊಟ್ಟಾಗಿ ಕಲಿತುಕೊಳ್ಳುವಂತೆ ಮಾಡಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ನುಡಿಯ ಕಲಿಕೆ ಮತ್ತು ಕಲಿಕೆನುಡಿ

ನುಡಿಯರಿಮೆಯ ಇಣುಕುನೋಟ – 9

ಇಂಗ್ಲಿಶ್‌ನಂತಹ ಒಂದು ನುಡಿಯನ್ನು ಮಕ್ಕಳಿಗೆ ಕಲಿಸುವುದಕ್ಕೂ ಅದನ್ನೇ ಗಣಿತ, ವಿಜ್ನಾನ, ಚರಿತ್ರೆ ಮೊದಲಾದ ವಿಶಯಗಳನ್ನು ಕಲಿಸುವಲ್ಲಿ ಕಲಿಕೆನುಡಿಯಾಗಿ ಬಳಸುವುದಕ್ಕೂ ನಡುವೆ ತುಂಬಾ ವ್ಯತ್ಯಾಸವಿದೆ. ನಿಜಕ್ಕೂ ಇವತ್ತು ಹೆಚ್ಚಿನ ಜನರಿಗೂ ಬೇಕಾಗಿರುವುದು ಇಂಗ್ಲಿಶ್ ನುಡಿಯ ಕಲಿಕೆಯಲ್ಲದೆ, ಅದನ್ನು ಕಲಿಕೆನುಡಿಯಾಗಿ ಬಳಸಬೇಕೆಂಬುದಲ್ಲ. ಆದರೆ, ಈ ವ್ಯತ್ಯಾಸವನ್ನು ತಿಳಿದುಕೊಳ್ಳಲಾರದ ಜನರು ತಮ್ಮ ಮಕ್ಕಳನ್ನು ಎಶ್ಟೇ ಕಶ್ಟವಾದರೂ ಹೆದರದೆ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ‘ಇಂಗ್ಲಿಶ್ ಶಾಲೆ’ಗಳಿಗೆ ಕಳಿಸುತ್ತಿದ್ದಾರೆ.

ಆದರೆ, ಹೀಗೆ ಮಾಡುವುದರಿಂದ ಅವರಲ್ಲಿ ಹೆಚ್ಚಿನವರ ಆಸೆಯೂ ಕಯ್ಗೂಡುವುದಿಲ್ಲ. ಮೇಲ್ವರ‍್ಗದ ಮಕ್ಕಳು ಇಂತಹ ಶಾಲೆಗಳಿಗೆ ಹೋಗಿ ದೊಡ್ಡ ದೊಡ್ಡ ಕೆಲಸಗಳನ್ನು ಹಿಡಿದು ಲಕ್ಶ ಲಕ್ಶ ಸಂಪಾದಿಸುವುದನ್ನು ನೋಡಿ, ತಮ್ಮ ಮಕ್ಕಳೂ ಹಾಗೆಯೇ ಮುಂದೆ ಬರಬೇಕೆಂದು ಅವರು ಬಯಸುವುದು ಸಹಜ. ಆದರೆ, ಇಂಗ್ಲಿಶ್ ಶಾಲೆಗಳು ಅವರ ಈ ಬಯಕೆಯನ್ನು ಪೂರಯ್ಸಲಾರವು.

ಇದಕ್ಕೆ ಹಲವು ಕಾರಣಗಳಿವೆ: ಮೊದಲನೆಯದಾಗಿ, ಇಂಗ್ಲಿಶ್ ಶಾಲೆಗಳಲ್ಲೂ ಹಲವು ಬಗೆಗಳಿವೆ; ಇಂಗ್ಲಿಶ್ ನುಡಿಯನ್ನು ಮತ್ತು ಬೇರೆ ವಿಶಯಗಳನ್ನು ತುಂಬಾ ಚನ್ನಾಗಿ ಕಲಿಸಬಲ್ಲ ಶಾಲೆಗಳು ಕೆಲವಾದರೆ, ಯಾವುದನ್ನೂ ಸರಿಯಾಗಿ ಕಲಿಸಲಾಗದ ಶಾಲೆಗಳು ಹಲವು; ಕೆಳವರ‍್ಗದ ಮಕ್ಕಳಲ್ಲಿ ಹೆಚ್ಚಿನವರೂ ಇಂತಹ ಎರಡನೇ ಬಗೆಯ ಶಾಲೆಗಳಿಗೆ ಮಾತ್ರವೇ ಹೋಗಬಲ್ಲರಾದ ಕಾರಣ, ಅವರ ಕಲಿಕೆ ಅಲ್ಲಿಯೂ ಕುಂಟುತ್ತಲೇ ನಡೆಯುತ್ತದೆ.

ತಮಗೆ ಮಾತನಾಡಲು ತಿಳಿದಿರುವ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳು ತಮಗೆ ಸ್ವಲ್ಪವೂ ತಿಳಿಯದಿರುವ ಇಂಗ್ಲಿಶ್‌ನಂತಹ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳಿಗಿಂತ ಬೇಗನೆ ತಮ್ಮ ಕಲಿಕೆಯಲ್ಲಿ ಮುಂದೆ ಹೋಗಬಲ್ಲರೆಂಬುದನ್ನು ಎಲ್ಲಾ ಬಗೆಯ ಅರಕೆಗಳೂ ತೋರಿಸಿಕೊಟ್ಟಿವೆ; ಇಂಗ್ಲಿಶ್ ನುಡಿಯನ್ನು ಕಲಿಯುವಲ್ಲಿಯೂ ಅವರು ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳ ಮಕ್ಕಳಿಗಿಂತ ಬೇಗನೆ ಮುಂದೆ ಹೋಗಬಲ್ಲರು.

ದಕ್ಶಿಣ ಆಪ್ರಿಕಾದಲ್ಲಿ ಎಂಟನೇ ತರಗತಿಯ ವರೆಗೂ ಕಲಿಕೆನುಡಿಯಾಗಿ ತಾಯ್ನುಡಿಯನ್ನು ಬಳಸುತ್ತಿದ್ದ ಶಾಲೆಗಳಲ್ಲಿ ಮಕ್ಕಳು ಹನ್ನೆರಡನೇ ತರಗತಿಯಲ್ಲಿ ನೂರಕ್ಕೆ ೮೪ರಂತೆ ಪಾಸಾಗುತ್ತಿದ್ದರು. ತಾಯ್ತಂದೆಯವರ ಒತ್ತಾಯದ ಮೇಲೆ, ಅಯ್ದನೇ ತರಗತಿಯಿಂದಲೇ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಲು 1976ರಲ್ಲಿ ತೊಡಗಲಾಯಿತು. 1992ರಲ್ಲಿ ಈ ಮಕ್ಕಳ ಕಲಿಕೆಯನ್ನು ಪರೀಕ್ಶಿಸಿದಾಗ, ಹನ್ನೆರಡನೇ ತರಗತಿಯ ಮಕ್ಕಳು ನೂರಕ್ಕೆ 44ರಂತೆ ಪಾಸಾಗುವ ಮಟ್ಟಕ್ಕೆ ಇಳಿದಿದ್ದುದು ಕಂಡುಬಂತು. ಇಂಗ್ಲಿಶ್ ನುಡಿಯ ಕಲಿಕೆಯಲ್ಲೂ ಪಾಸಾಗುವವರ ಎಣಿಕೆ ಅಶ್ಟೇ ಕೆಳಗೆ ಇಳಿದಿತ್ತು.

ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಿಯೂ ಮೇಲ್ವರ‍್ಗದ ಮಕ್ಕಳು ಇವತ್ತು ಮುಂದೆ ಬರುತ್ತಿರುವುದಕ್ಕೆ ಕಾರಣ ಬೇರೆಯೇ ಇದೆ. ಅವರಿಗೆ ಶಾಲೆಯ ಕಲಿಕೆ ಮಾತ್ರವಲ್ಲದೆ ಬೇರೆಯೂ ಹಲವು ಬಗೆಯ ಕಲಿಕೆಗಳು ನೆರವು ನೀಡುತ್ತಿವೆ. ಇಂತಹ ನೆರವು ಕೆಳವರ‍್ಗದ ಮಕ್ಕಳಿಗೆ ಸಿಗುವುದಿಲ್ಲ. ಮಕ್ಕಳಿಗೆ ಎಶ್ಟು ಪದಗಳ ಮೇಲೆ ಹತೋಟಿಯಿದೆ ಎಂಬುದರ ಮೇಲೆ ಅವರು ತಮ್ಮ ಕಲಿಕೆಯಲ್ಲಿ ಎಶ್ಟು ಮುಂದೆ ಹೋಗಬಲ್ಲರು ಎಂಬುದು ಅವಲಂಬಿಸಿರುತ್ತದೆ, ಮತ್ತು ಸಾಮಾನ್ಯವಾಗಿ, ಮಕ್ಕಳ ಹತೋಟಿಯಲ್ಲಿರುವ ಪದಗಳ ಎಣಿಕೆ ಅವರ ತಾಯ್ತಂದೆಯರು ಬರಹಬಲ್ಲವರೋ ಇಲ್ಲವೇ ಬರಹಬಾರದವರೋ ಎಂಬುದರ ಮೇಲೆಯೂ ಅವಲಂಬಿಸಿರುತ್ತದೆ.

ಹೆಚ್ಚು ಪದಗಳ ಮೇಲೆ ಹತೋಟಿಯಿರುವ ಮಕ್ಕಳು ಹೆಚ್ಚು ಬರಹಗಳನ್ನು ಓದಿ ತಿಳಿದುಕೊಳ್ಳಬಲ್ಲರು, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ಬಹಳ ಬೇಗನೆ ಹೆಚ್ಚುತ್ತಾ ಹೋಗುತ್ತದೆ; ಇದಕ್ಕೆ ಬದಲು, ಕಡಿಮೆ ಪದಗಳ ಮೇಲೆ ಹತೊಟಿಯಿರುವ ಮಕ್ಕಳು ಪಟ್ಯಪುಸ್ತಕಗಳನ್ನು ಬಿಟ್ಟು ಬೇರೆ ಬರಹಗಳನ್ನು ಓದಲು ಹೋಗುವುದಿಲ್ಲ, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ತುಂಬಾ ಮೆಲ್ಲಗೆ ಹೆಚ್ಚುತ್ತಿರುತ್ತದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳಲ್ಲಿ ಕಲಿಯುವ ಮೇಲ್ವರ‍್ಗದವರ ಮಕ್ಕಳಿಗೆ ತಮ್ಮ ಹತೋಟಿಯಲ್ಲಿರುವ ಇಂಗ್ಲಿಶ್ ಪದಗಳನ್ನು ಹೆಚ್ಚಿಸಲು ಮನೆಯಲ್ಲಿಯೂ ನೆರವು ಸಿಗುತ್ತದೆ; ಆದರೆ, ಕೆಳವರ‍್ಗದ ಮಕ್ಕಳಿಗೆ ಇಂತಹ ಮನೆಯ ನೆರವು ಸಿಗುವುದಿಲ್ಲ. ಇದರಿಂದಾಗಿಯೂ ಅವರು ಇಂತಹ ಶಾಲೆಗಳಲ್ಲಿ ಹಿಂದೆ ಬೀಳುತ್ತಾರೆ.

ಇನ್ನೊಂದು ವಿಶಯವೇನೆಂದರೆ, ಎರಡು ಇಲ್ಲವೇ ಮೂರನೇ ತರಗತಿಯ ವರೆಗೆ ಮಕ್ಕಳು ಕಲಿಯುವುದು ಓದುವುದು ಮತ್ತು ಬರೆಯುವುದು ಹೇಗೆ ಎಂಬುದನ್ನು. ತಮಗೆ ತಿಳಿಯದಿರುವ ಇಂಗ್ಲಿಶ್ ನುಡಿಯಲ್ಲಿ ಇದನ್ನು ನಡೆಸುವುದು ಅವರಿಗೆ ಅಶ್ಟೊಂದು ತೊಡಕಿನದಾಗಿರುವುದಿಲ್ಲ. ಆದರೆ, ಮೂರು ಇಲ್ಲವೇ ನಾಲ್ಕನೇ ತರಗತಿಯಿಂದ ಅವರು ತಮ್ಮ ಓದಿನ ಮೂಲಕ ಗಣಿತ, ವಿಜ್ನಾನ ಮೊದಲಾದ ಹಲವು ಬಗೆಯ ವಿಶಯಗಳನ್ನು ತಿಳಿದುಕೊಳ್ಳಲು ತೊಡಗಬೇಕಾಗುತ್ತದೆ; ಕಣ್ಣಿಗೆ ಕಾಣದ ಮತ್ತು ಕಿವಿಗೆ ಕೇಳಿಸದ ಪರಿಕಲ್ಪನೆಗಳನ್ನು ಅರಿತುಕೊಳ್ಳಬೇಕಾಗುತ್ತದೆ.

ಇಂತಹ ಕೆಲಸಗಳನ್ನು ನಡೆಸಲು ಇಂಗ್ಲಿಶ್ ನುಡಿಯನ್ನು ತುಂಬಾ ಚನ್ನಾಗಿ ಕಲಿಸುವ ಶಾಲೆಗಳಲ್ಲೂ ಮಕ್ಕಳಿಗೆ ಆರೇಳು ವರ‍್ಶಗಳ ಕಲಿಕೆ ಬೇಕಾಗುತ್ತದೆಯೆಂದು ಕಂಡುಹಿಡಿಯಲಾಗಿದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವಲ್ಲಿ ಈ ಕೆಲಸಗಳನ್ನು ನಾಲ್ಕನೇ ತರಗತಿಯಿಂದಲೇ ನಡೆಸಬೇಕಾಗುತ್ತದೆಯಾದ ಕಾರಣ, ಹೆಚ್ಚಿನ ಮಕ್ಕಳೂ ಇದರಲ್ಲಿ ಸೋಲುತ್ತಾರೆ, ಮತ್ತು ಹಲವು ಮಂದಿ ಮಕ್ಕಳು ಈ ತೊಡಕನ್ನು ಎದುರಿಸಲಾಗದೆ ಶಾಲೆಯಿಂದ ಹೊರಬೀಳುತ್ತಾರೆ. ಇಲ್ಲಿಯೂ ಮೇಲ್ವರ‍್ಗದವರ ಮತ್ತು ಬಲ್ಲಿದರ ಮಕ್ಕಳಿಗಿಂತ ಕೆಳವರ‍್ಗದವರ ಮತ್ತು ಬಡವರ ಮಕ್ಕಳೇ ಹೆಚ್ಚು ಸೋಲುತ್ತಾರೆ.

ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಮಕ್ಕಳಿಗೆ ತಮ್ಮ ತಾಯ್ನುಡಿಯ ಮೇಲೆ, ಮತ್ತು ಅದನ್ನು ಬಳಸುವ ತಾಯ್ತಂದೆಯರು, ನೆಂಟರು, ನೆರೆಹೊರೆಯವರು ಮೊದಲಾದವರ ಮೇಲೆ ಕೀಳರಿಮೆ ಬೆಳೆಯುತ್ತದೆ; ತಮ್ಮ ಕಲಿಕೆ ಮುಂದುವರಿದಂತೆಲ್ಲ ಮಕ್ಕಳು ಇವರಿಂದ ದೂರವಾಗುತ್ತಾ ಹೋಗುತ್ತಾರೆ. ಈ ತೊಡಕು ಮೇಲ್ವರ‍್ಗದವರ ಮಕ್ಕಳಿಗಿಂತಲೂ ಕೆಳವರ‍್ಗದ ಮಕ್ಕಳನ್ನು ಹೆಚ್ಚು ಕಾಡುತ್ತದೆ. ಯಾಕೆಂದರೆ, ಮೇಲ್ವರ‍್ಗದ ಮಕ್ಕಳ ತಾಯ್ತಂದೆಯರು, ನೆಂಟರು ಮತ್ತು ನೆರೆಹೊರೆಯವರು ಸಾಮಾನ್ಯವಾಗಿ ಇಂಗ್ಲಿಶ್ ತಿಳಿದಿರುತ್ತಾರೆ.

ಇಂತಹ ಹಲವು ಸಮಸ್ಯೆಗಳಿರುವುದರಿಂದಾಗಿ, ಕೆಳವರ‍್ಗದ ಮಕ್ಕಳು ಮೇಲೆ ಬರಬೇಕಿದ್ದಲ್ಲಿ, ಮತ್ತು ತಮ್ಮೊಂದಿಗೆ ತಮ್ಮ ಸಮಾಜವನ್ನೂ ಮೇಲೆ ತರಬೇಕಿದ್ದಲ್ಲಿ, ಅವರಿಗೆ ಕಲಿಕೆನುಡಿಯಾಗಿ ಕನ್ನಡವನ್ನೇ ಬಳಸುತ್ತಿರಬೇಕು. ಇದರೊಂದಿಗೆ ಇಂಗ್ಲಿಶ್ ನುಡಿಯನ್ನೂ ಒಂದು ವಿಶಯವಾಗಿ ಮಾತ್ರ ಕಲಿಸುತ್ತಿರಬೇಕಲ್ಲದೆ ಕಲಿಕೆನುಡಿಯಾಗಿ ಬಳಸಲು ಹೋಗಬಾರದು.

ಇಂಗ್ಲಿಶ್ ನುಡಿಯ ಕಲಿಕೆಯಲ್ಲಿ ಅವರು ಹಿಂದೆ ಬೀಳುತ್ತಿರುವುದಕ್ಕೆ ಅವರ ಕಲಿಕೆನುಡಿಯಾಗಿ ಕನ್ನಡವನ್ನು ಬಳಸುತ್ತಿರುವುದು ಕಾರಣವಲ್ಲ; ಇಂಗ್ಲಿಶ್ ನುಡಿಯನ್ನು ಅವರಿಗೆ ಶಾಲೆಯಲ್ಲಿ ಸರಿಯಾಗಿ ಕಲಿಸದಿರುವುದೇ ಕಾರಣ. ಹಾಗಾಗಿ, ಕಲಿಕೆನುಡಿಯನ್ನು ಬದಲಾಯಿಸುವುದರಿಂದ ಅವರು ಇಂಗ್ಲಿಶ್ ಕಲಿಕೆಯಲ್ಲಿ ಮುಂದೆ ಹೋಗುವ ಬದಲು, ಬೇರೆ ವಿಶಯಗಳ ಕಲಿಕೆಯಲ್ಲೂ ಹಿಂದೆ ಬೀಳಲು ತೊಡಗುತ್ತಾರೆ.

ಇವತ್ತು ಮುಂದೆ ಬಂದಿರುವ ಎಲ್ಲಾ ನಾಡುಗಳಲ್ಲೂ ಮಕ್ಕಳ ಕಲಿಕೆನುಡಿ ಅವರ ತಾಯ್ನುಡಿಯಾಗಿದೆ; ಇಂಗ್ಲಿಶ್‌ನಂತಹ ಬೇರೊಂದು ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಯಾವ ನಾಡೂ ಇದುವರೆಗೆ ಮುಂದೆ ಬಂದಿಲ್ಲ. ಇದಕ್ಕೆ ಕಾರಣವೇನೆಂದರೆ, ತಮ್ಮ ನಾಡಿನದಲ್ಲದ ಕಲಿಕೆನುಡಿಯಲ್ಲಿ ಕಲಿತವರು ನಾಡಿನ ಸಾಮಾನ್ಯ ಜನರಿಂದ ಬೇರಾಗಿಯೇ ಉಳಿಯುತ್ತಾರೆ, ಮತ್ತು ಅವರ ಕಲಿಕೆಯಿಂದ ಸಾಮಾನ್ಯ ಜನರಿಗೆ ಯಾವ ಪ್ರಯೋಜನವೂ ದೊರಕುವುದಿಲ್ಲ.

ಹಾಗಾಗಿ, ಕಲಿಯುವ ಮಕ್ಕಳ ವಯ್ಯಕ್ತಿಕ ಏಳಿಗೆಗೆ ಮಾತ್ರವಲ್ಲದೆ, ಅವರ ಸಮಾಜದ ಮತ್ತು ನಾಡಿನ ಏಳಿಗೆಗಾಗಿಯೂ ಕಲಿಕೆನುಡಿಯಾಗಿ ಅವರ ತಾಯ್ನುಡಿ ಇಲ್ಲವೇ ಪರಿಸರದ ನುಡಿಯನ್ನು ಬಳಸುವುದೇ ಸರಿಯಾದ ದಾರಿ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ನಿಮ್ಮ ಮಗುವಿಗೆ ಇಂಗ್ಲಿಶ್ ನುಡಿ ಮಾತ್ರ ಸಾಕೇ?

ನುಡಿಯರಿಮೆಯ ಇಣುಕುನೋಟ – 6

ಇವತ್ತು ಹಲವು ಜನರು ತಮ್ಮ ಮಕ್ಕಳನ್ನು ಇಂಗ್ಲಿಶ್ಕಲಿಕೆನುಡಿಯ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ; ಇಂತಹ ಹಲವು ಶಾಲೆಗಳಲ್ಲಿ ಮಕ್ಕಳು ಇಂಗ್ಲಿಶ್ ನುಡಿಯನ್ನು ಮಾತ್ರ ಬಳಸಬೇಕು, ಕನ್ನಡವನ್ನು ಬಳಸಲೇ ಕೂಡದು ಎಂಬ ಒಂದು ಕಟ್ಟಲೆಯನ್ನು ಮಾಡಿರುತ್ತಾರೆ. ಮಕ್ಕಳು ಶಾಲೆಯಲ್ಲಿ ಇಂಗ್ಲಿಶ್ ನುಡಿಯನ್ನು ಮಾತ್ರವೇ ಬಳಸುತ್ತಿದ್ದಲ್ಲಿ ಅವರಿಗೆ ಅದನ್ನು ಬೇಗನೆ ಮತ್ತು ತಪ್ಪಿಲ್ಲದೆ ಬಳಸಲು ಬರಬಹುದೆಂಬ ತಪ್ಪು ಅನಿಸಿಕೆಯೇ ಈ ಕಟ್ಟಲೆಗೆ ಕಾರಣ.

ಕೆಲವು ಮನೆಗಳಲ್ಲಿಯೂ ಇದೇ ಕಾರಣಕ್ಕಾಗಿ ಮಕ್ಕಳೊಂದಿಗೆ ಅವರ ತಾಯ್ತಂದೆಯರು ಇಂಗ್ಲಿಶ್ ನುಡಿಯನ್ನೇ ಬಳಸತೊಡಗುತ್ತಾರೆ. ಆದರೆ, ಹೀಗೆ ಮಾಡುವುದರಿಂದ ಮಕ್ಕಳು ಚಿಕ್ಕಂದಿನಲ್ಲಿ ಕಲಿತಿದ್ದ ಕನ್ನಡ ನುಡಿಯನ್ನು ಮರೆಯುತ್ತಾ ಹೋಗುತ್ತಾರೆ, ಮತ್ತು ಕೊನೆಗೆ ಅವರಿಗೆ ಅದರಲ್ಲಿ ಮಾತನಾಡಲು ಬರುವುದಿಲ್ಲವೆಂದೇ ಆಗುತ್ತದೆ.

ಮಕ್ಕಳ ಬೆಳವಣಿಗೆಯ ಮಟ್ಟಿಗೆ ಇದು ಸರಿಯೇ ಎಂಬುದನ್ನು ಈ ಶಾಲೆಗಳನ್ನು ನಡೆಸುವವರಾಗಲಿ, ಇಲ್ಲವೇ ಮಕ್ಕಳ ತಾಯಿತಂದೆಯರಾಗಲಿ ಪರಿಶೀಲಿಸಿದ ಹಾಗಿಲ್ಲ. ಇಂಗ್ಲಿಶ್ ಕಲಿಯುವ ಮಕ್ಕಳು ಅದರೊಂದಿಗೆ ತರಗತಿಯಲ್ಲಿ ತಮ್ಮ ತಾಯ್ನುಡಿಯನ್ನೂ ಬಳಸುತ್ತಿದ್ದರೆ ಅವರಿಗೆ ಸರಿಯಾಗಿ ಇಂಗ್ಲಿಶ್ ಕಲಿಯಲು ಬರುವುದಿಲ್ಲ ಎಂಬ ಅನಿಸಿಕೆ ಹಿಂದಿನ ಕಾಲದಲ್ಲಿತ್ತು; ಆದರೆ, ಕಳೆದ ಕೆಲವು ವರ‍್ಶಗಳಲ್ಲಿ, ಅದರಲ್ಲೂ ಕಳೆದ ಹತ್ತು-ಹದಿನಯ್ದು ವರ‍್ಶಗಳಲ್ಲಿ ನಡೆಸಿದ ಅರಕೆಗಳೆಲ್ಲವೂ ಇದು ತಪ್ಪು ಅನಿಸಿಕೆಯೆಂಬುದನ್ನು ತೋರಿಸಿಕೊಟ್ಟಿವೆ.

ಒಂದು ನುಡಿಯನ್ನು ಶಾಲೆಗೆ ಬರುವ ಮೊದಲೇ ಕಲಿತಿರುವ ಮಕ್ಕಳು ಎರಡನೇ ನುಡಿಯನ್ನು ಆ ನುಡಿಯ ಮೂಲಕವೇನೇ ಕಲಿಯಬೇಕಾಗುತ್ತದೆ; ಮೊದಲಿಗೆ ಅವರು ತಮ್ಮ ತಾಯ್ನುಡಿಯ ಪದಗಳನ್ನು ಮತ್ತು ಕಟ್ಟಲೆಗಳನ್ನು ಎರಡನೇ ನುಡಿಯ ಮಾತುಗಳಲ್ಲಿ ಸೇರಿಸಿ ಹೇಳಬಹುದು; ಆದರೆ, ಇದು ಅವರ ಕಲಿಕೆಯ ಒಂದು ಹಂತವನ್ನು ಸೂಚಿಸುತ್ತದೆಯಲ್ಲದೆ, ಅವರು ಕಲಿಕೆಯಲ್ಲಿ ಗೊಂದಲಗೊಂಡಿರುವುದನ್ನಾಗಲಿ, ತಪ್ಪು ದಾರಿ ಹಿಡಿದಿರುವುದನ್ನಾಗಲಿ ಸೂಚಿಸುವುದಿಲ್ಲ. ಕಲಿಕೆ ಮುಂದುವರಿದಂತೆಲ್ಲ ಅವರು ಈ ಎರಡು ನುಡಿಗಳ ಪದಗಳನ್ನು ಮತ್ತು ಕಟ್ಟಲೆಗಳನ್ನು ಬೇರೆ ಬೇರಾಗಿ ಇರಿಸಿಕೊಳ್ಳಲು ಕಲಿಯುತ್ತಾರೆ.

ಮೊದಲನೇ ನುಡಿಯನ್ನು ಅವರು ಶಾಲೆಯಲ್ಲಿ ಬಳಸಲೇಬಾರದೆಂಬುದಾಗಿ ಅವರ ಮೇಲೆ ಒತ್ತಾಯ ಹೇರಿದರೆ, ಅವರಿಗೆ ಅದರ ಮೇಲೆ ಕೀಳರಿಮೆಯುಂಟಾಗುತ್ತದೆ ಮಾತ್ರವಲ್ಲ, ಅವರ ಎರಡನೇ ನುಡಿಯ ಕಲಿಕೆಯೂ ತೊಡಕಿನದಾಗುತ್ತದೆ. ಮಕ್ಕಳಿಗೆ ಚನ್ನಾಗಿ ತಿಳಿದಿರುವ ನುಡಿಯನ್ನು ಉಳಿಸಿ, ಅದರ ಮೂಲಕ ಎರಡನೆಯ ನುಡಿಯನ್ನು ಕಲಿಸುವುದೇ ಸರಿಯಾದ ದಾರಿ.

ಇದಲ್ಲದೆ, ಈ ಎರಡು ನುಡಿಗಳ ಬಳಕೆಯಲ್ಲೂ ಮಕ್ಕಳು ಒಂದೇ ರೀತಿಯಲ್ಲಿ ಪಳಗುವಂತೆ ಮಾಡುವ ಮೂಲಕ, ಅವರು ಒಂದು ನುಡಿಯನ್ನು ಮಾತ್ರವೇ ಬಳಸಬಲ್ಲ ಮಕ್ಕಳಿಗಿಂತ ಜಾಣತನದಲ್ಲಿ, ಬುದ್ದಿವಂತಿಕೆಯಲ್ಲಿ, ಮತ್ತು ನುಡಿಯನ್ನು ಬಳಸಲು ಬೇಕಾಗುವ ಹಲವು ಬಗೆಯ ಚಳಕಗಳಲ್ಲಿ ಮುಂದೆ ಹೋಗುತ್ತಾರೆ ಎಂಬುದನ್ನು ಇತ್ತೀಚೆಗೆ ನಡೆಸಿದ ಹಲವು ಅರಕೆಗಳು ತೋರಿಸಿಕೊಟ್ಟಿವೆ.

ಎರಡು ನುಡಿಗಳನ್ನು ಬಳಸುವವರು ಎರಡು ಬಗೆಯ ಪದಗಳನ್ನು ಮತ್ತು ಕಟ್ಟಲೆಗಳನ್ನು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅವುಗಳಲ್ಲಿ ಒಂದು ನುಡಿಯನ್ನು ಬಳಸುವಾಗ ಆ ನುಡಿಗೆ ಸಂಬಂದಿಸಿದ ಪದಗಳು ಮತ್ತು ಕಟ್ಟಲೆಗಳು ಮಾತ್ರ ಬಳಕೆಯಾಗುವಂತೆ, ಮತ್ತು ಇನ್ನೊಂದು ನುಡಿಗೆ ಸಂಬಂದಿಸಿದ ಪದಗಳು ಮತ್ತು ಕಟ್ಟಲೆಗಳು ಬಳಕೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಮಾಡುವಲ್ಲಿ ಪಳಗಿರುವ ಮಕ್ಕಳು ತಾವು ಕಲಿತ ಈ ಚಳಕವನ್ನು ಬೇರೆ ಕೆಲಸಗಳಲ್ಲೂ ಬಳಸಬಲ್ಲರು.

ಎತ್ತುಗೆಗಾಗಿ, ಯಾವುದಾದರೊಂದು ತೊಡಕನ್ನು ಬಗೆಹರಿಸಬೇಕಾದಾಗ, ಈ ಮಕ್ಕಳು ಅದಕ್ಕೆ ಸಂಬಂದಿಸಿದ ವಿಶಯಗಳನ್ನು ಮಾತ್ರವೇ ಗಮನದಲ್ಲಿರಿಸಿಕೊಂಡು, ಅದಕ್ಕೆ ಸಂಬಂದಿಸದ ವಿಶಯಗಳನ್ನು ದೂರ ಇರಿಸಬಲ್ಲರು. ಹಾಗಾಗಿ, ತೊಡಕುಗಳನ್ನು ಬಗೆಹರಿಸುವಲ್ಲಿ ಅವರು ಒಂದು ನುಡಿಯಲ್ಲಿ ಮಾತ್ರವೇ ಪಳಗಿರುವ ಮಕ್ಕಳಿಗಿಂತ ಮುಂದಿರುತ್ತಾರೆ.

ಎರಡು ನುಡಿಗಳಲ್ಲಿ ಪಳಗಿರುವ ಮಕ್ಕಳು ಸಂದರ‍್ಬಕ್ಕನುಸಾರವಾಗಿ ಒಂದು ನುಡಿಯಿಂದ ಇನ್ನೊಂದು ನುಡಿಗೆ ನೆಗೆಯುತ್ತಿರಬಲ್ಲರು; ಒಂದು ಮಾತನ್ನು ಒಂದು ನುಡಿಯಲ್ಲಿ ಹೇಳಿ, ಒಡನೆಯೇ ಇನ್ನೊಂದು ಮಾತನ್ನು ಇನ್ನೊಂದು ನುಡಿಯಲ್ಲಿ ಹೇಳಬಲ್ಲರು; ಎಂದರೆ, ಒಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸುತ್ತಿರುವವರು ಒಡನೆಯೇ ಇನ್ನೊಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸಲು ತೊಡಗಬಲ್ಲರು. ಯಾವ ಸಂದರ‍್ಬದಲ್ಲಿ ಯಾವ ನುಡಿಯನ್ನು ಬಳಸಬೇಕು ಎಂಬುದೂ ಅವರಿಗೆ ತಿಳಿದಿರುತ್ತದೆ.

ಎರಡು ನುಡಿಗಳಲ್ಲಿ ಪಳಗುತ್ತಿರುವಾಗ ಪಡೆದ ಈ ಚಳಕವನ್ನೂ ಅವರು ಬೇರೆ ಕೆಲಸಗಳನ್ನು ನಡೆಸುವಲ್ಲಿ ಬಳಸಿಕೊಳ್ಳಬಲ್ಲರು. ಹಾಗಾಗಿ, ಒಂದು ನುಡಿಯನ್ನು ಮಾತ್ರವೇ ತಿಳಿದಿರುವ ಮಕ್ಕಳ ಮನಸ್ಸಿಗಿಂತ ಅವರ ಮನಸ್ಸು ಹೊಸ ಹೊಸ ಸಂದರ‍್ಬಗಳಿಗೆ ಹೊಂದಿಕೊಳ್ಳುವಂತಹ ಗುಣವನ್ನು ಹೆಚ್ಚು ಪಡೆದಿರುತ್ತದೆ, ಮತ್ತು ಈ ಕಾರಣಕ್ಕಾಗಿ ಅವರಿಗೆ ಹೆಚ್ಚು ತಾಳ್ಮೆಯಿರುತ್ತದೆ.

ಬೇರ‍್ಪಡಿಸುವುದು ಮತ್ತು ಒಂದೆಡೆ ಸೇರಿಸುವುದು ಎಂಬುದಾಗಿ ಎರಡು ಬಗೆಯ ಬಗೆತಗಳಿವೆ: ಒಂದು ವಸ್ತುವಿಗೆ ಎಶ್ಟೆಲ್ಲಾ ಬಳಕೆಗಳಿವೆ ಎಂಬುದನ್ನು ಕಂಡುಕೊಳ್ಳುವುದು ಬೇರ‍್ಪಡಿಸುವ ಬಗೆತ, ಮತ್ತು ಒಂದು ತೊಡಕಿಗೆ ಸಂಬಂದಿಸಿದ ಹಲವಾರು ವಿಶಯಗಳನ್ನು ಒಟ್ಟು ಸೇರಿಸಿ ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದು ಒಂದೆಡೆ ಸೇರಿಸುವ ಬಗೆತ. ಈ ಎರಡು ಬಗೆಯ ಬಗೆತಗಳನ್ನೂ ಎರಡು ನುಡಿಗಳನ್ನು ತಿಳಿದಿರುವ ಮಕ್ಕಳು ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಹೆಚ್ಚು ಚನ್ನಾಗಿ ನಡೆಸಬಲ್ಲರು.

ಒಂದೇ ನುಡಿಯನ್ನು ತಿಳಿದಿರುವ ಮಕ್ಕಳು ಓದುತ್ತಿರುವಾಗ, ಅವರ ಗಮನ ಪದಗಳ ಉಲಿಗಳ ಮೇಲಿರುತ್ತದೆ;  ಇದಕ್ಕೆ ಬದಲು, ಎರಡು ನುಡಿಗಳನ್ನು ಚನ್ನಾಗಿ ತಿಳಿದಿರುವ ಮಕ್ಕಳ ಗಮನ ಪದಗಳ ಹುರುಳಿನ ಮೇಲಿರುತ್ತದೆ. ಹಾಗಾಗಿ, ಈ ಮಕ್ಕಳು ಬರಹಗಳ ಹುರುಳನ್ನು ತಿಳಿದುಕೊಳ್ಳುವಲ್ಲಿ ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಎರಡು-ಮೂರು ತರಗತಿಗಳಶ್ಟು ಮುಂದಿರುತ್ತಾರೆ.

ಎರಡು ನುಡಿಗಳ ತಿಳಿವು ಮಕ್ಕಳ ಮುಂದೆ ಎರಡು ಸಂಸ್ಕ್ರುತಿಗಳನ್ನು ತೆರೆದಿಡುತ್ತದೆ; ಆ ಎರಡು ನುಡಿಗಳ ಬರಹಗಳನ್ನೂ ಓದಲು ಕಲಿತಲ್ಲಿ, ಎರಡು ಬಗೆಯ ಬರಹ ಸಂಸ್ಕ್ರುತಿಗಳೂ ಅವರದಾಗುತ್ತವೆ. ಈ ತಿಳಿವು ಮುಂದೆ ಜೀವನದುದ್ದಕ್ಕೂ ಅವರ ನೆರವಿಗೆ ಬರುತ್ತದೆ.

ತಮಗೆ ತಿಳಿದಿರುವ ನುಡಿಯಲ್ಲಿ ಮಕ್ಕಳು ಹೆಚ್ಚು ಸುಲಬವಾಗಿ ಓದಲು ಮತ್ತು ಬರೆಯಲು ಕಲಿಯಬಲ್ಲರು. ಹಾಗಾಗಿ, ಮಕ್ಕಳಿಗೆ ಮೊದಲು ಅವರಿಗೆ ತಿಳಿದಿರುವ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಸಿ, ಆಮೇಲೆ ಇಂಗ್ಲಿಶ್‌ನಲ್ಲಿ ಕಲಿಸುವುದೇ ಸರಿಯಾದ ದಾರಿ. ಯಾಕೆಂದರೆ, ಮೊದಲನೇ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಯುವಾಗ ಪಡೆದ ಚಳಕಗಳನ್ನು ಅವರು ಸುಲಬವಾಗಿ ತಮ್ಮ ಎರಡನೇ ನುಡಿಯ ಕಲಿಕೆಯಲ್ಲೂ ಬಳಸಿಕೊಳ್ಳಬಲ್ಲರು.

ಇಂಗ್ಲಿಶ್‌ನಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆಯಿಂದಾಗಿ, ಅದರ ಪದಗಳ ಬರವಣಿಗೆಯಲ್ಲಿ ಬರುವ ಬರಿಗೆಗಳಿಗೂ ಅವುಗಳ ಓದಿನಲ್ಲಿ ಬರುವ ಉಲಿಗಳಿಗೂ ನಡುವೆ ಸಂಬಂದವಿದೆಯೆಂಬುದು ಅದನ್ನು ಓದಲು ಕಲಿಯುವವರಲ್ಲಿ ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ. ಆದರೆ, ಇದನ್ನು ಗಮನಿಸಲು ಬಾರದಿರುವ ಮಕ್ಕಳಿಗೆ ಬರಹಗಳನ್ನು ಸಲೀಸಾಗಿ ಓದಲು ಬರುವುದಿಲ್ಲ.

ಕನ್ನಡ ಬರಹದಲ್ಲಿ ಬರಿಗೆಗಳಿಗೂ ಉಲಿಗಳಿಗೂ ನಡುವೆ ನೇರವಾದ ಸಂಬಂದವಿದೆ. ಸಂಸ್ಕ್ರುತದ ಎರವಲು ಪದಗಳು ಮಾತ್ರ ಇದಕ್ಕೆ ಹೊರಪಡಿಕೆಗಳಾಗಿವೆ. ಹಾಗಾಗಿ, ಮಕ್ಕಳಿಗೆ ಮೊದಲು ಕನ್ನಡದವೇ ಆದ ಪದಗಳು ಮಾತ್ರ ಇರುವ ಬರಹಗಳನ್ನು ಓದಲು ಕಲಿಸಿದಲ್ಲಿ, ಅವರು ಬಹಳ ಬೇಗನೆ ಅವನ್ನು ಸಲೀಸಾಗಿ ಓದುವುದು ಹೇಗೆಂಬುದನ್ನು ತಿಳಿದುಕೊಳ್ಳಬಲ್ಲರು.

ಅವರಿಗೆ ಇಂಗ್ಲಿಶ್ ಬರಹಗಳನ್ನು ಓದಲು ಆಮೇಲೆ ಕಲಿಸಿದಲ್ಲಿ, ಕನ್ನಡದ ಓದಿನಲ್ಲಿ ತಾವು ಪಡೆದ ಚಳಕವನ್ನು ಅವರು ಅಲ್ಲಿಯೂ ಬಳಸಿ ಹೆಚ್ಚು ಬೇಗನೆ ಅವನ್ನು ಸರಿಯಾಗಿ ಓದಲು ಕಲಿಯಬಲ್ಲರು.

ಬರೆಯುವ ಕೆಲಸವನ್ನೂ ಮಕ್ಕಳು ತಮಗೆ ಚನ್ನಾಗಿ ತಿಳಿದಿರುವ ಕನ್ನಡದಲ್ಲಿ ಹೆಚ್ಚು ಬೇಗನೆ ನಡೆಸಲು ಕಲಿಯಬಲ್ಲರು, ಮತ್ತು ಆಮೇಲೆ ಇಂಗ್ಲಿಶ್‌ನಲ್ಲಿ ಬರೆಯಬೇಕಾದಾಗ, ಆ ಚಳಕವನ್ನೇ ಅಲ್ಲಿಯೂ ಬಳಸಿಕೊಳ್ಳಬಲ್ಲರು.

ಇಂಗ್ಲಿಶ್ ನುಡಿಯ ಮೇಲಿರುವ ವ್ಯಾಮೋಹದಿಂದಾಗಿ, ಕನ್ನಡ ನುಡಿ ಕೊಡಬಲ್ಲ ಈ ಎಲ್ಲಾ ಪ್ರಯೋಜನಗಳನ್ನೂ ಮಕ್ಕಳು ಕಳೆದುಕೊಳ್ಳುವಂತೆ ಮಾಡುವುದು ಹೆಡ್ಡತನವಲ್ಲವೇ?

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಇಂಗ್ಲಿಶ್ ಕಲಿಕೆಗೆ ಕನ್ನಡದ ನೆರವು ಬೇಕು

ನುಡಿಯರಿಮೆಯ ಇಣುಕುನೋಟ – 4

ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಶ್ ಕಲಿಸುವುದನ್ನು ಯಾವ ತರಗತಿಯಲ್ಲಿ ತೊಡಗಬೇಕು ಎಂಬ ವಿಶಯದಲ್ಲಿ ಇವತ್ತು ಬಹಳಶ್ಟು ಚರ‍್ಚೆಗಳು ನಡೆಯುತ್ತಿವೆ. ಎಲ್ಲರಿಗೂ ಮೊದಲನೇ ತರಗತಿಯಿಂದಲೇ ಕಲಿಸಲು ತೊಡಗಬೇಕೆಂದು ಕೆಲವರು ಹೇಳುತ್ತಾರೆ, ಮತ್ತು ಮೂರು ಇಲ್ಲವೇ ಅಯ್ದನೇ ತರಗತಿಯಿಂದ ಕಲಿಸಲು ತೊಡಗಿದರೆ ಸಾಕೆಂದು ಬೇರೆ ಕೆಲವರು ಹೇಳುತ್ತಾರೆ.

ಮೊದಲನೇ ತರಗತಿಯಿಂದಲೇ ಇಂಗ್ಲಿಶ್ ನುಡಿಯನ್ನು ಕಲಿಸಲು ತೊಡಗಬೇಕೆಂದು ಹೇಳುವವರು ನಿಜಕ್ಕೂ ಕೆಲವು ತಪ್ಪು ಅನಿಸಿಕೆಗಳನ್ನಿರಿಸಿಕೊಂಡು ಹಾಗೆ ಹೇಳುತ್ತಿದ್ದಾರೆ. ಚಿಕ್ಕಮಕ್ಕಳು ದೊಡ್ಡವರಿಗಿಂತ ಬೇಗನೆ ನುಡಿಯನ್ನು ಕಲಿತುಕೊಳ್ಳಬಲ್ಲರು; ಹಾಗಾಗಿ, ಚಿಕ್ಕವರಾಗಿರುವಾಗಲೇ ಇಂಗ್ಲಿಶ್ ಕಲಿಸಲು ತೊಡಗಿದರೆ, ಅವರು ಬೇಗನೆ ಮತ್ತು ಸುಲಬವಾಗಿ ಆ ನುಡಿಯನ್ನು ಕಲಿತುಕೊಳ್ಳಬಲ್ಲರೆಂಬುದು ಅವರ ಒಂದು ತಪ್ಪು ಅನಿಸಿಕೆ.

ಮೊದಲನೇ ತರಗತಿಯಿಂದಲೇ ಕಲಿಸತೊಡಗಿದರೆ, ಕಾಲೇಜಿಗೆ ಹೋಗುವಶ್ಟರ ಹೊತ್ತಿಗೆ ಅವರಿಗೆ ಹೆಚ್ಚು ಸಮಯದ ಇಂಗ್ಲಿಶ್ ಕಲಿಕೆ ದೊರೆಯುತ್ತದೆ; ಹಾಗಾಗಿ, ಆ ನುಡಿಯಲ್ಲಿ ಅವರಿಗೆ ಎಲ್ಲಾ ವಿಶಯಗಳನ್ನೂ ಇಂಗ್ಲಿಶ್‌ನಲ್ಲೇ ಕಲಿಯುತ್ತಿರುವ ಮಕ್ಕಳೊಂದಿಗೆ ಸೆಣಸಲು ಹೆಚ್ಚು ಅನುಕೂಲವಾಗುತ್ತದೆ ಎಂಬುದು ಇನ್ನೊಂದು ತಪ್ಪು ಅನಿಸಿಕೆ.

ಈ ಎರಡು ಅನಿಸಿಕೆಗಳೂ ತಪ್ಪೆಂಬುದಾಗಿ ಇದುವರೆಗೆ ನಡೆಸಿರುವ ಹಲವಾರು ಸಂಶೋದನೆಗಳು ತೋರಿಸಿಕೊಟ್ಟಿವೆ: ಶಾಲೆಯಲ್ಲಿ ಫ್ರೆಂಚ್ ನುಡಿಯನ್ನು ಕಲಿಯುತ್ತಿದ್ದ ಹದಿನೇಳು ಸಾವಿರ ಬ್ರಿಟಿಶ್ ಮಕ್ಕಳ ಕಲಿಕೆಯನ್ನು ಒಂದು ಅರಕೆಯಲ್ಲಿ ಗಮನಿಸಲಾಗಿತ್ತು. ಅವರಲ್ಲಿ ಕೆಲವು ಮಕ್ಕಳು ಈ ಕಲಿಕೆಯನ್ನು ಎಂಟನೇ ವರ‍್ಶದಲ್ಲೇನೇ ತೊಡಗಿದ್ದರು; ಆದರೆ, ಬೇರೆ ಕೆಲವು ಮಕ್ಕಳು ಈ ಕಲಿಕೆಯನ್ನು ತೊಡಗುವಾಗ ಹತ್ತು ಕಳೆದು ಹನ್ನೊಂದು ವರ‍್ಶವಾಗಿತ್ತು.

ಅಯ್ದು ವರ‍್ಶದ ಕಲಿಕೆಯ ಬಳಿಕ, ಎಂಟನೇ ವರ‍್ಶದಲ್ಲಿ ಕಲಿಯಲು ತೊಡಗಿದವರಿಗಿಂತಲೂ ಹನ್ನೊಂದನೇ ವರ‍್ಶದಲ್ಲಿ ಕಲಿಯಲು ತೊಡಗಿದವರೇ ಹೆಚ್ಚು ಚನ್ನಾಗಿ ಪ್ರೆಂಚ್ ಬಳಸಬಲ್ಲವರಾಗಿದ್ದರು. ಚಿಕ್ಕಮಕ್ಕಳು ದೊಡ್ಡವರಿಗಿಂತ ಬೇಗನೆ ತಮ್ಮ ಎರಡನೇ ನುಡಿಯನ್ನು ಕಲಿಯಬಲ್ಲರೆಂಬ ಅನಿಸಿಕೆ ತಪ್ಪು ಎಂಬುದು ಇದರಿಂದ ಗೊತ್ತಾಗುತ್ತದೆ.

ಇಂಗ್ಲಿಶ್ ಕಲಿಯುವ ಸ್ವೀಡಿಶ್ ಮತ್ತು ಡೇನಿಶ್ ಮಕ್ಕಳ ಕಲಿಕೆಯನ್ನು ಮತ್ತು ಫ್ರೆಂಚ್ ಕಲಿಯುವ ಸ್ವಿಸ್ ಮಕ್ಕಳ ಕಲಿಕೆಯನ್ನು ಪರಿಶೀಲಿಸಿದಾಗಲೂ ಚಿಕ್ಕ ಮಕ್ಕಳಿಗಿಂತ ದೊಡ್ಡ ಮಕ್ಕಳೇ ತಮ್ಮ ಎರಡನೇ ನುಡಿಯನ್ನು ಹೆಚ್ಚು ಸುಲಬವಾಗಿ ಮತ್ತು ಬೇಗನೆ ಕಲಿಯಬಲ್ಲರೆಂದು ಕಂಡುಬಂದಿದೆ.

ಹಲವು ಜನರಲ್ಲಿರುವ ಈ ಮೊದಲನೇ ತಪ್ಪು ಅನಿಸಿಕೆಗೆ ಚಿಕ್ಕ ಮಕ್ಕಳು ತಮ್ಮ ತಾಯ್ನುಡಿಯನ್ನು ಬಹಳ ಬೇಗನೆ ಯಾರ ಸಹಾಯವೂ ಇಲ್ಲದೆ ಪಡೆಯಬಲ್ಲರೆಂಬುದೇ ಆದಾರವಾಗಿರಬೇಕು. ಆದರೆ ಮಕ್ಕಳು ತಮ್ಮ ಮೊದಲನೆಯ ತಾಯ್ನುಡಿಯನ್ನು ಪಡೆಯುವುದಕ್ಕೂ, ಆಮೇಲೆ ಶಾಲೆಯಲ್ಲಿ ತಮ್ಮ ಎರಡನೆಯ ನುಡಿಯನ್ನು ಕಲಿಯುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ.

ಮೊದಲನೆಯ ನುಡಿಯನ್ನು ಪಡೆಯುವಾಗ ಮಕ್ಕಳಿಗೆ ಸಿಗುವಂತಹ ಹುಟ್ಟಿನಿಂದ ಬಂದ ಅಳವು ಎರಡನೆಯ ನುಡಿಯನ್ನು ಕಲಿಯುವಾಗ ದೊರಕುವುದಿಲ್ಲ. ಹಾಗಾಗಿ, ಎರಡನೆಯ ನುಡಿಯನ್ನು ಅವರು ಬೇರೆಯೇ ರೀತಿಯಲ್ಲಿ ಕಲಿಯಬೇಕಾಗುತ್ತದೆ.

ಇದಲ್ಲದೆ, ಎರಡನೆಯ ನುಡಿಯನ್ನು ಕಲಿಯುವ ಮಕ್ಕಳ ಮಿದುಳಿನಲ್ಲಿ ಮೊದಲನೆಯ ನುಡಿ ನೆಲೆನಿಂತಿರುತ್ತದೆ; ಹಾಗಾಗಿ, ಆ ನುಡಿಯ ಮೂಲಕವೇನೇ ಅವರು ಎರಡನೆಯ ನುಡಿಯನ್ನು ಕಲಿಯಬೇಕಾಗುತ್ತದೆ. ಮೊದಲನೆಯ ನುಡಿಯನ್ನು ಬಳಸುವಲ್ಲಿ ಸಾಕಶ್ಟು ಪಳಗುವ ಮೊದಲೇ ಎರಡನೆಯ ನುಡಿಯನ್ನು ಅವರ ಮೇಲೆ ಹೇರಿದಲ್ಲಿ, ಅವರು ತಡವರಿಸುತ್ತಾರೆ.  ಅದರಲ್ಲೂ ಮೊದಲನೆಯ ನುಡಿಯಲ್ಲಿ ಓದುವ ಮತ್ತು ಬರೆಯುವ ಕೆಲಸಗಳನ್ನು ನಡೆಸಲು ಕಲಿಯುವ ಮೊದಲೇ ಎರಡನೆಯ ನುಡಿಯಲ್ಲಿ ಅವನ್ನು ನಡೆಸುವಂತೆ ಮಾಡಿದಲ್ಲಿ, ಹೆಚ್ಚಿನ ಮಕ್ಕಳೂ ಹಿಂದೆ ಬೀಳುತ್ತಾರೆ.

ಇಂಗ್ಲಿಶ್ ಬಳಸಲು ಸಮಯ ಹೆಚ್ಚು ದೊರೆತಶ್ಟೂ ಮಕ್ಕಳು ಆ ನುಡಿಯನ್ನು ಹೆಚ್ಚು ಚನ್ನಾಗಿ ಕಲಿಯಬಲ್ಲರು ಎಂಬ ಎರಡನೆಯ ಅನಿಸಿಕೆಯೂ ತಪ್ಪು ಎಂಬುದಾಗಿ ಹಲವು ಸಂಶೋದನೆಗಳು ತೋರಿಸಿಕೊಟ್ಟಿವೆ: ಕೆಮರೂನ್‌ನ ಶಾಲೆಗಳಲ್ಲಿ ಇಂಗ್ಲಿಶ್ ಕಲಿಕೆನುಡಿಯಾಗಿರುವ ಮಕ್ಕಳು ವಾರಕ್ಕೆ ೨೨ ಗಂಟೆಗಳಶ್ಟು ಸಮಯ ಇಂಗ್ಲಿಶ್ ಬಳಸುತ್ತಿರುತ್ತಾರೆ, ಮತ್ತು ತಾಯ್ನುಡಿ ಕಲಿಕೆನುಡಿಯಾಗಿರುವ ಶಾಲೆಗಳಲ್ಲಿ ವಾರಕ್ಕೆ ಬರೇ ೩ ಗಂಟೆಗಳಶ್ಟು ಸಮಯ ಇಂಗ್ಲಿಶ್ ಬಳಸುತ್ತಿರುತ್ತಾರೆ.

ಹೀಗಿದ್ದರೂ, ೧೨ ಇಂಗ್ಲಿಶ್ ಶಾಲೆಗಳಲ್ಲಿರುವ ಮಕ್ಕಳ ಇಂಗ್ಲಿಶ್ ತಿಳಿವನ್ನು ೧೨ ತಾಯ್ನುಡಿ ಶಾಲೆಗಳಲ್ಲಿರುವ ಮಕ್ಕಳ ಇಂಗ್ಲಿಶ್ ತಿಳಿವಿನೊಂದಿಗೆ ಹೋಲಿಸಿ ನೋಡಿದಾಗ, ತಾಯ್ನುಡಿ ಶಾಲೆಗಳಲ್ಲಿರುವ ಮಕ್ಕಳೇ ಮುಂದಿರುವುದು ಕಂಡುಬಂದಿದೆ. ಅಮೆರಿಕಾದಲ್ಲಿ ನಡೆಸಿದ ಇಂತಹದೇ ಇನ್ನೊಂದು ಅರಕೆ, ಮತ್ತು ಬೇರೆಯೂ ಕೆಲವು ಅರಕೆಗಳು ಇದೇ ತೀರ‍್ಮಾನಕ್ಕೆ ಬಂದಿವೆ.

ಇಲ್ಲಿ ಒಂದು ಮುಕ್ಯವಾದ ವಿಶಯವನ್ನು ನಾವು ಗಮನಿಸುವುದು ಅವಶ್ಯ. ನುಡಿಯ ಕಲಿಕೆಯೆಂಬುದು ನಿಜಕ್ಕೂ ಎರಡು ರೀತಿಯದು. ದಿನಬಳಕೆಗೆ ಬೇಕಾಗುವ ಮಾತುಗಳನ್ನು ಸಲೀಸಾಗಿ ನುಡಿಯಲು ಕಲಿಯುವುದು ಒಂದು ರೀತಿಯ ಕಲಿಕೆ; ಮತ್ತು ಗಣಿತ, ವಿಜ್ನಾನ ಮೊದಲಾದ ವಿಶಯಗಳನ್ನು ತಿಳಿಯುವುದಕ್ಕಾಗಿ, ಮತ್ತು ಹಾಗೆ ತಿಳಿದುದನ್ನು ಇನ್ನೊಬ್ಬರಿಗೆ ವಿವರಿಸಿ ಹೇಳುವುದಕ್ಕಾಗಿ, ನುಡಿಯನ್ನು ಬಳಸಲು ಕಲಿಯುವುದು ಇನ್ನೊಂದು ರೀತಿಯ ಕಲಿಕೆ.

ಒಂದು ನುಡಿಯಲ್ಲಿ ಸಲೀಸಾಗಿ ಮಾತನಾಡಲು ಎರಡರಿಂದ ಮೂರು ವರ‍್ಶಗಳ ಕಲಿಕೆ ಸಾಕಾಗುತ್ತದೆ; ಆದರೆ, ಅದರ ಮೂಲಕ ಸಿಕ್ಕಲು ಸಿಕ್ಕಲಾದ ವಿಶಯಗಳನ್ನು ತಿಳಿಯುವ, ಮತ್ತು ಇತರರಿಗೆ ಅವನ್ನು ತಿಳಿಸುವ ಅಳವನ್ನು ಪಡೆಯಲು ಆರೇಳು ವರ‍್ಶಗಳ ಕಲಿಕೆ ಬೇಕಾಗುತ್ತದೆ. ಇಂಗ್ಲಿಶ್‌ನಲ್ಲಿ ಕಲಿಯುವ ಮಕ್ಕಳು ಮೊದಲನೆಯ ಕಲಿಕೆಯನ್ನು ಪಡೆಯುವಲ್ಲಿ ಇತರರಿಗಿಂತ ಮುಂದಿರುತ್ತಾರೆ; ಆದರೆ ಎರಡನೇ ರೀತಿಯ ಕಲಿಕೆಯನ್ನು ನಡೆಸಬೇಕಾದಾಗ, ಅವರು ಹಿಂದೆ ಬೀಳತೊಡಗುತ್ತಾರೆ, ಮತ್ತು ಆಮೇಲೆ ಅವರು ಮುಂದೆ ಹೋಗುವುದೇ ಇಲ್ಲ.

ಎರಡನೇ ರೀತಿಯ ಕಲಿಕೆಯನ್ನು ನಡೆಸಲು ಮಕ್ಕಳಿಗೆ ಅವರ ತಾಯ್ನುಡಿಯ ನೆರವು ಬೇಕಾಗುತ್ತದೆ ಎಂಬುದೇ ಇದಕ್ಕೆ ಕಾರಣ ಎಂಬುದನ್ನು ಕಂಡುಕೊಳ್ಳಲಾಗಿದೆ. ಸಾಮಾನ್ಯವಾಗಿ, ಇಂಗ್ಲಿಶ್ ಶಾಲೆಗಳಲ್ಲಿ ಮಕ್ಕಳಿಗೆ ಅವರ ತಾಯ್ನುಡಿಯ ಮೇಲೆ ಕೀಳರಿಮೆಯುಂಟಾಗುವ ಹಾಗೆ ಮಾಡಲಾಗುತ್ತದೆ; ಆ ನುಡಿಯ ಸಹಾಯವನ್ನು ಸ್ಪಲ್ಪವೂ ಪಡೆಯದೆ ಎರಡನೇ ನುಡಿಯನ್ನು ಕಲಿಯುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತದೆ. ಇದರಿಂದಾಗಿ ಅವರಿಗೆ ಇಂಗ್ಲಿಶ್‌ನಲ್ಲಿ ಎರಡನೇ ರೀತಿಯ ಕಲಿಕೆಯನ್ನು ನಡೆಸಲು ತುಂಬಾ ಕಶ್ಟವಾಗುತ್ತದೆ.

ತಾಯ್ನುಡಿಯಲ್ಲಿ ಮಾತನಾಡುವುದನ್ನು ಮಾತ್ರವಲ್ಲದೆ ಓದುವುದನ್ನು ಮತ್ತು ಬರೆಯುವುದನ್ನೂ ಕಲಿತಿರುವ ಮಕ್ಕಳಿಗೆ ಎರಡನೇ ನುಡಿಯಲ್ಲಿ ಅಂತಹದೇ ಕಲಿಕೆಯನ್ನು ನಡೆಸಲು ಆ ತಿಳಿವು ಒಂದು ಕೊಂಡಿಯಾಗಿ ಕೆಲಸ ಮಾಡುತ್ತದೆ. ಅಂತಹ ಕಲಿಕೆಯನ್ನು ನಡೆಸುವ ಮೊದಲೇ ಮಕ್ಕಳಿಂದ ಅವರ ತಾಯ್ನುಡಿಯನ್ನು ದೂರಮಾಡಿದಲ್ಲಿ ಅವರಿಗೆ ಈ ಕೊಂಡಿ ಸಿಗುವುದಿಲ್ಲ.

ಇದಲ್ಲದೆ, ಮಕ್ಕಳಲ್ಲಿ ತಿಳಿವಿನ ಬೆಳವಣಿಗೆ ಸರಿಯಾಗಿ ನಡೆಯಬೇಕಾದರೆ, ಅವರು ತಮ್ಮ ತಾಯ್ನುಡಿಯಲ್ಲಿ ತೊಡಗಿರುವಂತಹ ತಿಳಿವು ಪಡೆಯುವ ಕೆಲಸವನ್ನು ಅದರಲ್ಲೇನೇ ಮುಂದುವರಿಸಿಕೊಂಡು ಹೋಗುವ ಹಾಗೆ ಮಾಡುವುದು ಅವಶ್ಯ; ಅದನ್ನು ನಡುವೆಯೇ ನಿಲ್ಲಿಸಿ, ಆ ಕೆಲಸವನ್ನು ಬೇರೊಂದು ನುಡಿಯಲ್ಲಿ ನಡೆಸುವಂತೆ ಅವರ ಮೇಲೆ ಒತ್ತಡ ಹೇರಿದಲ್ಲಿ, ಹೆಚ್ಚಿನವರಲ್ಲೂ ಗೊಂದಲವುಂಟಾಗುತ್ತದೆ, ಮತ್ತು ಬಳಿಕ ಅವರಲ್ಲಿ ತಿಳಿವಿನ ಬೆಳವಣಿಗೆ ಸರಿಯಾಗಿ ನಡೆಯುವುದೇ ಇಲ್ಲ.

ಕಳೆದ ಹತ್ತು-ಹದಿನಯ್ದು ವರ‍್ಶಗಳಲ್ಲಿ ನಡೆಸಿದ ಎಲ್ಲಾ ಅರಕೆಗಳೂ ಮೇಲಿನ ತೀರ‍್ಮಾನಗಳನ್ನು ಬೆಂಬಲಿಸಿವೆ; ಶಾಲೆಗೆ ಬರುವ ಹೊತ್ತಿಗೆ ಚನ್ನಾಗಿ ಬಳಸಲು ತಿಳಿದಿರುವ ನುಡಿಯಲ್ಲಿ ಮಕ್ಕಳ ಕಲಿಕೆಯನ್ನು ಮುಂದುವರಿಸಿದಲ್ಲಿ ಮಾತ್ರ ಅವರು ಬೇರೊಂದು ನುಡಿಯ ಕಲಿಕೆಯನ್ನು ಚನ್ನಾಗಿ ನಡೆಸಬಲ್ಲರು. ಅದನ್ನು ಕಡೆಗಣಿಸುವಂತೆ ಮಾಡಿದಲ್ಲಿ, ಅವರು ಹಲವಾರು ತೊಡಕುಗಳಿಗೆ ಮತ್ತು ಗೊಂದಲಗಳಿಗೆ ಒಳಗಾಗುತ್ತಾರೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದಗಳನ್ನು ಓದುವ ಹಾಗೆಯೇ ಬರೆಯಬೇಕು

ನುಡಿಯರಿಮೆಯ ಇಣುಕುನೋಟ – 3

ಕನ್ನಡದಲ್ಲಿ ಕನ್ನಡದವೇ ಆದ ಪದಗಳನ್ನು ಓದುವ ಹಾಗೆಯೇ ಬರೆಯುತ್ತೇವೆ; ಆದರೆ, ಸಂಸ್ಕ್ರುತದಿಂದ ಎರವಲು ಪಡೆದ ಪದಗಳನ್ನು ಮಾತ್ರ ಓದುವ ಹಾಗೆ ಬರೆಯದೆ, ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುತ್ತೇವೆ: ವಿಶೇಶ ಎಂಬುದಾಗಿ ಓದಿದರೂ ವಿಶೇಷ ಎಂಬುದಾಗಿ ಬರೆಯುತ್ತೇವೆ, ಮತ್ತು ಅದಿಕಾರಿ ಎಂಬುದಾಗಿ ಓದಿದರೂ ಅಧಿಕಾರಿ ಎಂಬುದಾಗಿ ಬರೆಯುತ್ತೇವೆ.

ಸಂಸ್ಕ್ರುತವನ್ನು ಹೊರತುಪಡಿಸಿ ಬೇರೆ ನುಡಿಗಳಿಂದ ಎರವಲು ಪಡೆದ ಪದಗಳನ್ನೆಲ್ಲ ಓದುವ ಹಾಗೆ ಬರೆಯುತ್ತೇವಲ್ಲದೆ, ಆ ನುಡಿಗಳಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ. ಇಂಗ್ಲಿಶ್‌ನ ವಯ್ಪರ್ ಮತ್ತು ವಯ್ರಸ್ ಪದಗಳ ಮೊದಲ ಬರೆಗೆಗಳು ಇಂಗ್ಲಿಶ್‌ನಲ್ಲಿ ಬೇರಾಗಿವೆ, ಆದರೆ ಕನ್ನಡದಲ್ಲಿ ವ ಎಂಬ ಒಂದೇ ಬರಿಗೆಯನ್ನು ಬಳಸಲಾಗುತ್ತದೆ. ಅವೆರಡನ್ನೂ ಒಂದೇ ರೀತಿ ಓದುತ್ತಿರುವುದೇ ಇದಕ್ಕೆ ಕಾರಣ.

ಒಂದು ಬರಹದಲ್ಲಿ ಪದಗಳನ್ನು ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಬರೆಯಬೇಕಾಗಿದೆಯಾದರೆ, ಅದು ಅಂತಹ ಬರಹವನ್ನು ಕಲಿಯುವವರಿಗೆ ಮತ್ತು ಬಳಸುವವರಿಗೆ ಹಲವು ಬಗೆಯ ತೊಡಕುಗಳನ್ನು ತಂದೊಡ್ಡುತ್ತದೆ; ಕನ್ನಡ ಬರಹದ ಈ ಸಂಪ್ರದಾಯ ಮುಕ್ಯವಾಗಿ ಕೆಳಗೆ ಕೊಟ್ಟಿರುವಂತಹ ತೊಡಕುಗಳನ್ನು ಕೊಡುತ್ತಿದೆ:

(೧) ಓದಲು ಮತ್ತು ಬರೆಯಲು ಕಲಿಯಹೊರಡುವ ಮಕ್ಕಳು ಅನವಶ್ಯಕವಾಗಿ ಹದಿನೇಳು ಹೆಚ್ಚಿನ ಬರಿಗೆ(ಅಕ್ಶರ)ಗಳನ್ನು ಕಲಿಯಬೇಕಾಗುತ್ತದೆ.

(೨) ಸರಿಯಾಗಿ ಮತ್ತು ಸಲೀಸಾಗಿ ಓದಲು ಕಲಿಯಬೇಕಿದ್ದಲ್ಲಿ, ಪದಗಳನ್ನು ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ (ಎತ್ತುಗೆಗೆ, ಮನೆ ಎಂಬುದನ್ನು ಮ್, ಅ, ನ್ ಮತ್ತು ಎ ಎಂಬ ಉಲಿಗಳ ಜೋಡಣೆಯಿಂದ ಉಂಟುಮಾಡಲಾಗಿದೆ) ಎಂಬುದನ್ನು ಗಮನಿಸಬೇಕು, ಮತ್ತು ಈ ಉಲಿಗಳನ್ನು ಸೂಚಿಸುವುದಕ್ಕಾಗಿ ಬರಹದಲ್ಲಿ ಬರಿಗೆಗಳನ್ನು ಬಳಸಲಾಗುತ್ತದೆ ಎಂಬುದನ್ನೂ ಗಮನಿಸಬೇಕು. ಇವೆರಡನ್ನು ಗಮನಿಸಿದವರು ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗಲೂ ಅವನ್ನು ಸುಲಬವಾಗಿ ಓದಬಲ್ಲವರಾಗುತ್ತಾರೆ.

ಪದಗಳನ್ನು ಓದುವ ಹಾಗೆಯೇ ಬರೆದಿದೆಯಾದರೆ ಮಾತ್ರ, ಈ ರೀತಿ ಓದುವಾಗ ಬಳಸುವ ಉಲಿಗೂ ಬರಹದಲ್ಲಿ ಕಾಣಿಸುವ ಬರಿಗೆಗಳಿಗೂ ನಡುವೆ ಸಂಬಂದವಿದೆ ಎಂಬುದು ಓದಲು ಕಲಿಯುವವರ ಗಮನಕ್ಕೆ ಸುಲಬವಾಗಿ ಬರುತ್ತದೆ.

ಓದುವ ಹಾಗೆ ಬರೆಯದೆ ಬೇರೆ ಬಗೆಯಲ್ಲಿ ಪದಗಳನ್ನು ಬರೆದಿದೆಯಾದರೆ, ಅವುಗಳಲ್ಲಿ ಬರುವ ಬರಿಗೆಗಳಿಗೂ ಉಲಿಗಳಿಗೂ ನಡುವೆ ಇಂತಹದೊಂದು ಸಂಬಂದವಿದೆಯೆಂಬುದು ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ, ಮತ್ತು ಇದರಿಂದಾಗಿ ಎಶ್ಟು ಕಲಿತರೂ ಅವರಿಗೆ ಸಲೀಸಾಗಿ ಓದಲು ಬರುವುದೇ ಇಲ್ಲ. ಬರಹದಲ್ಲಿ ಹೊಸ ಹೊಸ ಪದಗಳು ಬಂದಾಗ ಅವನ್ನು ಹೇಗೆ ಓದಬೇಕೆಂಬುದು ಅವರಿಗೆ ಗೊತ್ತಾಗುವುದೂ ಇಲ್ಲ.

(೩) ಓದುವ ಹಾಗೆ ಬರೆಯುವ ಪದಗಳನ್ನು ಬರಹಗಳಲ್ಲಿ ಬಳಸುವುದು ಸುಲಬ; ಬೇರೆ ಬಗೆಯಲ್ಲಿ ಬರೆಯುವ ಒಂದೊಂದು ಪದವನ್ನೂ ಅದನ್ನು ಬರೆಯುವುದು ಹೇಗೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಮನೆ ಎಂಬ ಪದವನ್ನು ಓದುವ ಹಾಗೆಯೇ ಬರೆಯುವ ಕಾರಣ, ಅದನ್ನು ಹೇಗೆ ಬರೆಯುವುದೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿಲ್ಲ.
ಆದರೆ, ವಿಶೇಷ ಎಂಬ ಪದವನ್ನು ಬರೆಯುವಾಗ ಎರಡನೆಯ ಮುಚ್ಚುಲಿಯನ್ನು ಶ್ ಎಂಬುದಾಗಿ, ಮತ್ತು ಮೂರನೆಯ ಮುಚ್ಚುಲಿಯನ್ನು ಷ್ ಎಂಬುದಾಗಿ ಬರೆಯಬೇಕೆಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ; ಯಾಕೆಂದರೆ, ಅವೆರಡನ್ನೂ ಒಂದೇ ರೀತಿಯಲ್ಲಿ ಓದಲಾಗುತ್ತದೆ.ಇದನ್ನು ನೆನಪಿನಲ್ಲಿಟ್ಟುಕೊಳ್ಳಲಾರದವರು ಬರವಣಿಗೆಯಲ್ಲಿ ತಪ್ಪು ಮಾಡುತ್ತಾರೆ.

ಇವತ್ತು ದಿನಪತ್ರಿಕೆಗಳಲ್ಲಿ, ಕತೆ-ಕಾದಂಬರಿಗಳಲ್ಲಿ, ಮತ್ತು ಬೇರೆ ಬಗೆಯ ಬರಹಗಳಲ್ಲಿ ಅತಿ ಹೆಚ್ಚು ತಪ್ಪುಗಳು ಕಾಣಿಸುವುದು ಓದುವ ಹಾಗೆ ಬರೆಯದಿರುವ ಮಹಾಪ್ರಾಣಾಕ್ಶರ, ಷಕಾರ, ಋಕಾರ ಮೊದಲಾದ ಬರಿಗೆಗಳಿರುವ ಸಂಸ್ಕ್ರುತ ಪದಗಳ ಬಳಕೆಯಲ್ಲಿ ಎಂಬುದನ್ನು ಗಮನಿಸಬಹುದು.

(೪) ಸಾಮಾನ್ಯವಾಗಿ ಜನರು ಪದಕೋಶಗಳನ್ನು ನೋಡಲು ಹೋಗುವುದು ಹೊಸದಾಗಿ ಅವರ ಓದಿನಲ್ಲಿ ಕಾಣಿಸಿಕೊಳ್ಳುವ ಪದಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಾಗಿ; ಆದರೆ, ಓದುವ ಹಾಗೆ ಬರೆಯದಿರುವ ವಿಶೇಷ, ಅಧಿಕಾರಿ ಮೊದಲಾದ ಪದಗಳನ್ನು ಅವುಗಳ ಹುರುಳೇನೆಂಬುದನ್ನು ತಿಳಿಯುವುದಕ್ಕಿಂತಲೂ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯುವುದಕ್ಕಾಗಿ ಪದಕೋಶಗಳನ್ನು ನೋಡಬೇಕಾಗುತ್ತದೆ. ಓದುವ ಹಾಗೆಯೇ ಬರೆಯುವ ಯಾವ ಪದವನ್ನೂ ಈ ರೀತಿ ಅವನ್ನು ಬರೆಯುವುದು ಹೇಗೆ ಎಂಬುದನ್ನು ತಿಳಿಯಲು ಪದಕೋಶವನ್ನು ನೋಡಬೇಕಾಗುವುದಿಲ್ಲ.

(೫) ಕೆಳವರ‍್ಗದ ಮಕ್ಕಳಲ್ಲಿ ಇಂತಹ ಪದಗಳ ಕಲಿಕೆ ಕೀಳರಿಮೆಯನ್ನು ಉಂಟುಮಾಡುತ್ತದೆ; ಅವು ಕೊಡುವ ತೊಂದರೆಯಿಂದಾಗಿ ಕೆಲವರು ಬರಹದ ಕಲಿಕೆಯನ್ನು ನಡುವಿನಲ್ಲೇ ನಿಲ್ಲಿಸಿಬಿಡುತ್ತಾರೆ. ಓದಲು ಕಲಿತವರೂ ಅದನ್ನು ತುಂಬಾ ಅಪರೂಪವಾಗಿ ಮಾತ್ರ ಬಳಸುತ್ತಾರೆ. ಯಾಕೆಂದರೆ, ಅವರಿಗೆ ಸಲೀಸಾಗಿ ಓದುವುದು ಹೇಗೆ ಎಂಬುದು ತಿಳಿದಿರುವುದಿಲ್ಲ.
ಸಮಾಜಗಳಲ್ಲಿ ಹಲವಾರು ಬಗೆಯ ಸಂಪ್ರದಾಯಗಳು ಬೇರೆ ಬೇರೆ ಕಾರಣಗಳಿಗಾಗಿ ಬಳಕೆಗೆ ಬರುತ್ತವೆ, ಮತ್ತು ಅವುಗಳಿಂದ ಸಮಾಜಕ್ಕೆ ಪ್ರಯೋಜನಗಳೇನೂ ಇಲ್ಲದಿದ್ದರೂ, ಹೆಚ್ಚಿನ ತೊಂದರೆಯಿಲ್ಲವಾದಲ್ಲಿ ಅವು ಹಾಗೆಯೇ ವರ‍್ಶಗಟ್ಟಲೆ ಸಮಯ ಮುಂದುವರಿಯುತ್ತಿರುತ್ತವೆ.

ಸಂಸ್ಕ್ರುತದ ಎರವಲು ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬುದೂ ಇಂತಹದೇ ಒಂದು ಸಂಪ್ರದಾಯ. ಅದರಿಂದ ಕನ್ನಡ ಬರಹದ ಮಟ್ಟಿಗೆ ಯಾವ ಪ್ರಯೋಜನವೂ ಇಲ್ಲ. ಹಳೆಗನ್ನಡದ ಸಮಯದಲ್ಲಿ ಇಂತಹ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯಬಹುದಿತ್ತು, ಇಲ್ಲವೇ ಕನ್ನಡದ ಸೊಗಡನ್ನು ಕೆಡಿಸದಂತೆ ಅವನ್ನು ಮಾರ‍್ಪಡಿಸಿ ತದ್ಬವಗಳನ್ನಾಗಿ ಮಾಡಿಯೂ ಬಳಸಬಹುದಿತ್ತು. ಆಂಡಯ್ಯನ ಕಬ್ಬಿಗರ ಕಾವದಲ್ಲಿ ಅಂತಹ ತದ್ಬವ ಪದಗಳನ್ನು ಮಾತ್ರ ಬಳಸಲಾಗಿದೆ.

ಆದರೆ, ಇವತ್ತು ಹೊಸಗನ್ನಡದಲ್ಲಿ ಬರಹಗಾರರು ಈ ಆಯ್ಕೆಯನ್ನು ಕಳೆದುಕೊಂಡಿದ್ದಾರೆ. ಬಳಕೆಯಲ್ಲಿರುವ ಕೆಲವೇ ಕೆಲವು ತದ್ಬವ ಪದಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸಂಸ್ಕ್ರುತ ಪದಗಳನ್ನೂ ಇವತ್ತು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕಾಗಿದೆ. ಅವುಗಳಲ್ಲಿ ಯಾವುದೇ ಬಗೆಯ ಮಾರ‍್ಪಾಡನ್ನು ನಡೆಸಿದರೂ ಅದನ್ನು ತಪ್ಪೆಂದು ತಿಳಿಯಲಾಗುತ್ತದೆ.
ಮೊನ್ನೆ ಮೊನ್ನೆಯ ವರೆಗೂ ಈ ಸಂಪ್ರದಾಯ ಹೆಚ್ಚಿನ ತೊಂದರೆಯನ್ನೇನೂ ಕೊಡುತ್ತಿರಲಿಲ್ಲ. ಯಾಕೆಂದರೆ, ಸಮಾಜದಲ್ಲಿ ಮೇಲ್ವರ‍್ಗಕ್ಕೆ ಸೇರಿದ ಕೆಲವೇ ಕೆಲವು ಮಂದಿ ಮಾತ್ರ ಬರಹವನ್ನು ಬಳಸಬೇಕಾಗಿತ್ತು, ಮತ್ತು ಅವರಲ್ಲಿ ಹೆಚ್ಚಿನವರೂ ಕನ್ನಡದೊಂದಿಗೆ ಸಂಸ್ಕ್ರುತವನ್ನೂ ಕಲಿಯುತ್ತಿದ್ದರು; ಹಾಗಾಗಿ, ಈ ಸಂಪ್ರದಾಯವನ್ನು ಮುಂದುವರಿಸಿಕೊಂಡುಹೋಗುವುದು ಅವರಿಗೆ ತೊಡಕಿನದಾಗಿರಲಿಲ್ಲ.

ಆದರೆ, ಇವತ್ತು ಎಲ್ಲಾ ವರ‍್ಗದ ಜನರು ಮತ್ತು ಎಲ್ಲರೂ ಬರಹವನ್ನು ಬಳಸಬೇಕಾಗಿದೆ. ಯಾಕೆಂದರೆ, ಇವತ್ತು ಸಮಾಜದಲ್ಲಿ ಬರಹಕ್ಕೆ ಅಂತಹದೊಂದು ಪ್ರಾಮುಕ್ಯತೆ ಬಂದಿದೆ. ಬರಹವನ್ನು ಬಳಸಲು ತಿಳಿಯದವರು ಮುಂದೆ ಬರಲು ಸಾದ್ಯವೇ ಇಲ್ಲ, ಮತ್ತು ಅಂತಹ ಹಲವು ಮಂದಿ ಜನರಿರುವ ಸಮಾಜ ಏಳಿಗೆಯಾಗಲೂ ಸಾದ್ಯವೇ ಇಲ್ಲ ಎಂಬ ಪರಿಸ್ತಿತಿ ಇವತ್ತಿನದಾಗಿದೆ.

ಈ ರೀತಿ ಕನ್ನಡ ಬರಹವನ್ನು ಬಳಸಲು ಕಲಿಯಲೇ ಬೇಕಾಗಿರುವ ಜನರಲ್ಲಿ ಹೆಚ್ಚಿನವರಿಗೂ ಸಂಸ್ಕ್ರುತದ ಅರಿವು ಬೇಕಾಗಿಲ್ಲ; ಅದಕ್ಕಿಂತಲೂ ಅವರಿಗೆ ಇಂಗ್ಲಿಶ್ ನುಡಿಯ ಅರಿವು ಹೆಚ್ಚಿನ ನೆರವು ನೀಡಬಲ್ಲುದು. ಹಾಗಾಗಿ, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಮೇಲಿನ ಸಂಪ್ರದಾಯ ಒಂದು ಹೆಚ್ಚಿನ ತೊಡಕನ್ನು ಮಾತ್ರ ತಂದೊಡ್ಡುತ್ತದಲ್ಲದೆ, ಅದರಿಂದ ಅವರು ಪಡೆಯಬಹುದಾದ ಪ್ರಯೋಜನ ಯಾವುದೂ ಇಲ್ಲ.

ಈ ರೀತಿ ಕನ್ನಡದ ಮಟ್ಟಿಗೆ ಯಾವ ಪ್ರಯೋಜನವನ್ನೂ ನೀಡದ, ಹಲವು ಮಂದಿ ಕನ್ನಡಿಗರಿಗೆ ತೊಡಕನ್ನು ಮಾತ್ರವೇ ಕೊಡುವ, ಮತ್ತು ನಮ್ಮ ಸಮಾಜದ ಏಳಿಗೆಗೂ ತೊಡಕಾಗಿರುವ ಈ ಸಂಪ್ರದಾಯವನ್ನು ಬಿಟ್ಟುಕೊಡುವುದೇ ಜಾಣತನ. ಇದು ಒಂದೂವರೆ-ಎರಡು ಸಾವಿರ ವರ‍್ಶದ ಹಿಂದಿನ ಸಮಾಜಕ್ಕಾಗಿ ಮಾಡಿಕೊಂಡಿದ್ದ ಸಂಪ್ರದಾಯ. ಇಂದಿನ ಸಮಾಜ ಆಗಿನದಕ್ಕಿಂತ ತೀರ ಬೇರೆಯಾಗಿದೆ. ಹೀಗಿರುವಾಗಲೂ ಆ ಹಳೆಯ ಸಂಪ್ರದಾಯವನ್ನು ತೊರೆಯಲು ಹಿಂಜರಿಯುವುದೆಂದರೆ, ಅಪ್ಪ ನೆಟ್ಟ ಆಲದ ಮರವೆಂದು ನೇಣು ಹಾಕಿಕೊಳ್ಳುವ ಹಾಗೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter