Posts Tagged ‘ವಯ್ಯಾಕರಣಿ’

ಬರಹದಲ್ಲಿ ಯಾವುದು ಸರಿ, ಯಾವುದು ತಪ್ಪು?

ನುಡಿಯರಿಮೆಯ ಇಣುಕುನೋಟ – 20

ಕನ್ನಡದಲ್ಲಿ ಬಳಕೆಯಾಗುವ ಪದಗಳು ಮತ್ತು ಪದರೂಪಗಳುಸರಿಯೋ ತಪ್ಪೋ ಎಂಬುದನ್ನು ತೀರ‍್ಮಾನಿಸುವಲ್ಲಿ ನಾವು ಯಾವ ಕಟ್ಟಲೆಗಳನ್ನು ಬಳಸಬೇಕು? ಕನ್ನಡದ ಕಟ್ಟಲೆಗಳನ್ನೇ ಬಳಸಬೇಕೆಂದು ಯಾರೂ ಹೇಳಬಹುದು. ಆದರೆ, ಇವತ್ತು ಹಲವು ಮಂದಿ ಕನ್ನಡದ ವಿದ್ವಾಂಸರಿಗೆ ಇದು ಒಪ್ಪಿಗೆಯಾಗುವುದಿಲ್ಲ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬಳಸುವಾಗ ಸಂಸ್ಕ್ರುತದ ಕಟ್ಟಲೆಗಳನ್ನೇ ತಪ್ಪದೆ ಬಳಸಬೇಕೆಂಬುದಾಗಿ ಅವರು ಹೇಳುತ್ತಾರೆ. ಕನ್ನಡದ ವಿದ್ವಾಂಸರಲ್ಲಿ ಹಿಂದಿನ ಕಾಲದಿಂದಲೂ ಬೆಳೆದುಬಂದಿರುವ ಕನ್ನಡದ ಕುರಿತಾಗಿರುವ ಕೀಳರಿಮೆ ಮತ್ತು ಸಂಸ್ಕ್ರುತದ ಕುರಿತಾಗಿರುವ ಅತಿಯಾದ ಆದರ ಮತ್ತು ಅಬಿಮಾನಗಳೇ ಇದಕ್ಕೆ ಕಾರಣ.

ಎತ್ತುಗೆಗಾಗಿ, ಸೊಲ್ಲರಿಗರನ್ನು ಸೂಚಿಸಲು ಸಂಸ್ಕ್ರುತದಲ್ಲಿ ಎರಡು ಪದಗಳಿವೆ. ಇವುಗಳಲ್ಲಿ ‘ವಯ್ಯಾಕರಣಃ’ ಎಂಬುದು ಗಂಡಸರನ್ನು ಸೂಚಿಸುತ್ತದೆ ಮತ್ತು ‘ವಯ್ಯಾಕರಣೀ’ ಎಂಬುದು ಹೆಂಗಸರನ್ನು ಸೂಚಿಸುತ್ತದೆ. ಆದರೆ, ಕನ್ನಡದಲ್ಲಿ ಗಂಡಸರನ್ನು ಸೂಚಿಸುವುದಕ್ಕಾಗಿಯೂ ‘ವಯ್ಯಾಕರಣಿ’ ಎಂಬ ಪದವೇ ಬಳಕೆಗೆ ಬಂದಿದೆ. ಇದನ್ನು ಕಿಟ್ಟೆಲ್ ಅವರ ಡಿಕ್ಶನರಿಯಲ್ಲಿ ನೋಡಬಹುದು. ಆದರೆ ಇದು ತಪ್ಪು, ಗಂಡಸರನ್ನು ಸೂಚಿಸಲು ‘ವಯ್ಯಾಕರಣ’ ಎಂಬುದನ್ನೇ ಬಳಸಬೇಕು ಎಂಬುದಾಗಿ ಕೆಲವರು ಕನ್ನಡದ ವಿದ್ವಾಂಸರು ವಾದಿಸುತ್ತಾರೆ.

ಇದಕ್ಕೆ ಅವರಿಗೆ ಸಂಸ್ಕ್ರುತ ವ್ಯಾಕರಣದ ಕಟ್ಟಲೆಯೇ ಆದಾರ. ಆದರೆ ನಿಜಕ್ಕೂ ಇದು ಸರಿಯಲ್ಲ. ಯಾಕೆಂದರೆ, ಯಾವ ನುಡಿಯಿಂದಲೇ ಆಗಲಿ ಒಂದು ಪದವನ್ನು ಎರವಲಾಗಿ ಪಡೆದ ಮೇಲೆ, ಅದನ್ನು ಯಾವ ರೀತಿಯಲ್ಲಿ ಮತ್ತು ಯಾವ ರೂಪದಲ್ಲಿ ಬಳಸಬೇಕು ಎಂಬುದಕ್ಕೆ ಎರವಲಾಗಿ ಪಡೆದ ನುಡಿಯಲ್ಲಿರುವ ಬಳಕೆಯ ಕಟ್ಟಲೆಗಳೇ ಆದಾರವಾಗಬೇಕಲ್ಲದೆ ಎರವಲು ಕೊಟ್ಟ ನುಡಿಯ ಕಟ್ಟಲೆಗಳಲ್ಲ.

ಎತ್ತುಗೆಗಾಗಿ, ಸಂಸ್ಕ್ರುತದಿಂದ ಹಲವು ನಾಮಪದಗಳನ್ನು ನಾವು ಕನ್ನಡಕ್ಕೆ ಎರವಲಾಗಿ ಪಡೆದು ಬಳಸುತ್ತೇವೆ. ಇವುಗಳಲ್ಲಿ ಕೆಲವಕ್ಕೆ ಇಸು ಒಟ್ಟನ್ನು ಸೇರಿಸಿ ಕ್ರಿಯಾಪದಗಳಾಗಿ ಮಾಡಿಯೂ ಬಳಸುತ್ತೇವೆ (ಜಪ-ಜಪಿಸು, ಕೋಪ-ಕೋಪಿಸು, ರುಚಿ-ರುಚಿಸು). ಆದರೆ, ಈ ಬಳಕೆಗೆ ಕನ್ನಡದ ಕಟ್ಟಲೆಗಳು ಆದಾರವಲ್ಲದೆ ಸಂಸ್ಕ್ರುತದ ಕಟ್ಟಲೆಗಳಲ್ಲ.

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ಲಿಂಗವನ್ನು ನಿರ‍್ದರಿಸುವಲ್ಲೂ ನಾವು ಕನ್ನಡದ ಕಟ್ಟಲೆಗಳನ್ನು ಬಳಸುತ್ತೇವಲ್ಲದೆ ಸಂಸ್ಕ್ರುತದ ಕಟ್ಟಲೆಗಳನ್ನಲ್ಲ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಪುಲ್ಲಿಂಗದಲ್ಲಿರುವ ದೇಶ, ಮಾರ‍್ಗ, ದೀಪ ಮೊದಲಾದ ಪದಗಳನ್ನು, ಮತ್ತು ಸ್ತ್ರೀಲಿಂಗದಲ್ಲಿರುವ ನದಿ, ಲಿಪಿ, ಚರ‍್ಚೆ ಮೊದಲಾದ ಪದಗಳನ್ನು ನಾವು ನಪುಂಸಕ ಲಿಂಗದಲ್ಲಿ ಬಳಸುತ್ತೇವಲ್ಲದೆ ಪುಲ್ಲಿಂಗ ಇಲ್ಲವೇ ಸ್ತ್ರೀಲಿಂಗದಲ್ಲಲ್ಲ. ಸಂಸ್ಕ್ರುತದಲ್ಲಿ ನಾಮಪದಗಳಿಂದ ಬೇರಾದ ಗುಣಪದಗಳೆಂಬ ಪದಗಳಿಲ್ಲ.

ಹೀಗಿದ್ದರೂ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ವ್ಯಾವಹಾರಿಕ, ಸಾಮಾಜಿಕ, ಯಾಂತ್ರಿಕ ಮೊದಲಾದ ಹಲವು ಪದಗಳನ್ನು ನಾವು ನಾಮಪದಗಳಿಂದ ಬೇರಾಗಿರುವ ಗುಣಪದಗಳಾಗಿ ಬಳಸುತ್ತೇವೆ. ಹಾಗಾಗಿ, ವಯ್ಯಾಕರಣಿಯಂತಹ ಪದಗಳ ಮಟ್ಟಿಗೂ ನಾವು ಇದೇ ಕ್ರಮವನ್ನು ಅನುಸರಿಸುವುದು ಸರಿಯಾದ ದಾರಿ. ಕನ್ನಡದಲ್ಲಿ ಅವು ಯಾವ ರೀತಿಯಲ್ಲಿ ಬಳಕೆಗೆ ಬಂದಿವೆ ಎಂಬುದು ನಮಗೆ ಮುಕ್ಯವಲ್ಲದೆ ಆ ಬಳಕೆ ಸಂಸ್ಕ್ರುತದ ನಿಯಮಗಳಿಗೆ ಅನುಸಾರವಾಗಿದೆಯೇ ಇಲ್ಲವೇ ಎಂಬುದು ಮುಕ್ಯವಲ್ಲ.

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ಬರುವ ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳು ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದಿಲ್ಲ; ಹಾಗಿದ್ದರೂ ‘ಅವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು; ಇಲ್ಲವಾದರೆ ಅದು ತಪ್ಪಾಗುತ್ತದೆ’ ಎಂದು ಹೇಳುವುದೂ ಸಂಸ್ಕ್ರುತದ ಕಟ್ಟಲೆಗಳನ್ನು ಕನ್ನಡದ ಮೇಲೆ ಹೊರಿಸುವ ತಪ್ಪು ದಾರಿಯಾಗಿದೆ. ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಈ ಎರವಲು ಪದಗಳು ಹೇಗೆ ಕಾಣಿಸುತ್ತವೆಯೋ ಹಾಗೆ ಬರೆಯುವುದೇ ಕನ್ನಡದ ಮಟ್ಟಿಗೆ ಸರಿಯಾದ ದಾರಿ.

ಇನ್ನೊಂದು ಬಗೆಯ ‘ತಪ್ಪು’ಗಳು ಆಡುನುಡಿಯಿಂದ ಪದಗಳನ್ನು ಇಲ್ಲವೇ ಪದರೂಪಗಳನ್ನು ಬರಹಕ್ಕೆ ತಂದು ಬಳಸುವಲ್ಲಿ ಕಾಣಿಸಿಕೊಳ್ಳುತ್ತವೆ. ಆಡುನುಡಿಯೆಂಬುದು ಊರಿನಿಂದ ಊರಿಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿರುತ್ತದೆ. ಆದರೆ, ಬರಹದ ನುಡಿ ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕೆಂದು ನಾವು ಬಯಸುತ್ತೇವೆ. ಯಾಕೆಂದರೆ, ಹಾಗಿಲ್ಲವಾದರೆ ಒಂದು ಊರಿನ ಮತ್ತು ಜಾತಿಯ ಬರಹಗಾರರು ಬರೆದುದನ್ನು ಇನ್ನೊಂದು ಊರಿನ ಮತ್ತು ಜಾತಿಯ ಜನರಿಗೆ ಓದಿ ಅರ‍್ತಮಾಡಿಕೊಳ್ಳಲು ಕಶ್ಟವಾಗುತ್ತದೆ.

ಈ ಸಮಾನತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಬರಹದ ನುಡಿಯಲ್ಲಿ ಎಂತಹ ಮಾರ‍್ಪಾಡನ್ನು ನಡೆಸುವುದಿದ್ದರೂ ಅದು ಎಲ್ಲಾ ಊರು ಮತ್ತು ಜಾತಿಗಳಿಗೆ ಸೇರಿದ ಜನರಿಗೂ ಒಪ್ಪಿಗೆಯಾಗುವಂತಹದಾಗಿರಬೇಕು. ಎಲ್ಲಾ ಬರಹಗಾರರೂ ತಮಗೆ ಅನಿಸಿದ ಹಾಗೆ ತಮ್ಮ ಬರಹದ ನುಡಿಯಲ್ಲಿ ಮಾರ‍್ಪಾಡುಗಳನ್ನು ಮಾಡಹೊರಟರೆ ಈ ಸಮಾನತೆ ಪೂರ‍್ತಿ ಅಳಿದು ಹೋದೀತು.

ಬರಹದಲ್ಲಿ ತಪ್ಪು-ಸರಿ ಎಂಬ ಪರಿಕಲ್ಪನೆಯನ್ನು ಈ ಅರ‍್ತದಲ್ಲಿ ಬಳಸಲು ಸಾದ್ಯವಿದೆ. ಕನ್ನಡದ ಕೆಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಬಿದ್ದುಹೋಗಿದೆ; ಹಾಲು ಎಂಬುದು ಆಲು ಎಂದಾಗಿದೆ, ಹಣ್ಣು ಎಂಬುದು ಅಣ್ಣು ಎಂದಾಗಿದೆ, ಹುಳ ಎಂಬುದು ಉಳ ಎಂದಾಗಿದೆ. ಈ ರೀತಿ ಕೆಲವರು ಕನ್ನಡಿಗರು ತಮ್ಮ ಆಡುನುಡಿಯ ಪದಗಳಲ್ಲಿದ್ದ ಹಕಾರವನ್ನು ಕಳೆದುಕೊಂಡುದರಲ್ಲಿ ತಪ್ಪಾಗಿರುವಂತಹದು ಏನೂ ಇಲ್ಲ. ಅದು ಅವರ ಆಡುನುಡಿಯಲ್ಲಿ ಸ್ವಾಬಾವಿಕವಾಗಿ ನಡೆದಿರುವ ಒಂದು ಮಾರ‍್ಪಾಡು ಮಾತ್ರ. ಇದಲ್ಲದೆ, ಅದು ಅವರ ಆಡುನುಡಿಯನ್ನು ಕೆಡಿಸಿಲ್ಲ; ಅದರ ಜೀವಂತಿಕೆಯನ್ನು ಉಳಿಸಿದೆ.

ಆದರೆ, ಕನ್ನಡದ ಬೇರೆ ಹಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಈ ರೀತಿ ಬಿದ್ದುಹೋಗಿಲ್ಲ; ಹಾಗಾಗಿ, ಇವತ್ತು ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕಾದ ಬರಹದ ಕನ್ನಡದಲ್ಲಿ ಹಕಾರವನ್ನು ಉಳಿಸಿಕೊಳ್ಳಬೇಕೇ ಇಲ್ಲವೇ ಬಿದ್ದುಹೋಗಲು ಬಿಡಬೇಕೇ ಎಂಬುದನ್ನು ನಿರ‍್ದರಿಸಬೇಕಾಗುತ್ತದೆ. ಉಳಿಸಬೇಕೆಂದು ಹೆಚ್ಚಿನ ಕನ್ನಡಿಗರೂ ಬಯಸುವುದಾದರೆ, ಬರಹದಲ್ಲಿ ಹಕಾರವನ್ನು ಬಳಸದಿರುವುದು (ಇಲ್ಲವೇ ಬೇಡದಲ್ಲಿ ಬಳಸುವುದು) ‘ತಪ್ಪಾ’ಗುತ್ತದೆ.

ಇದೇ ರೀತಿಯಲ್ಲಿ, ಇವತ್ತು ಬಡಗ ಕರ‍್ನಾಟಕದ ಕೆಲವು ಆಡುನುಡಿಗಳಲ್ಲಿ ನಾಮಪದಗಳ ಕೊನೆಯಲ್ಲಿದ್ದ ಎಕಾರ ಇಕಾರವಾಗಿದೆ. ಮನೆ ಎಂಬುದು ಮನಿ ಎಂದಾಗಿದೆ, ಕಾಗೆ ಎಂಬುದು ಕಾಗಿ ಎಂದಾಗಿದೆ, ಕುದುರೆ ಎಂಬುದು ಕುದ್ರಿ ಎಂದಾಗಿದೆ. ಆದರೆ ಕನ್ನಡದ ಬೇರೆ ಆಡುನುಡಿಗಳಲ್ಲಿ ಈ ಮಾರ‍್ಪಾಡು ನಡೆದಿಲ್ಲ. ಇಲ್ಲೂ ಕೂಡ, ಎಲ್ಲರಿಗೂ ಸಮಾನವಾಗಿರಬೇಕಾದ ಬರಹದ ಕನ್ನಡಕ್ಕೆ ಈ ಮಾರ‍್ಪಾಡನ್ನು ತರಬೇಕೇ ಬೇಡವೇ ಎಂಬುದನ್ನು ತೀರ‍್ಮಾನಿಸಬೇಕಾಗುತ್ತದೆ, ಮತ್ತು ಬೇಡವೆಂದು ತೀರ‍್ಮಾನಿಸಿದಲ್ಲಿ ಹಾಗೆ ತರುವುದು ಬರಹದ ಮಟ್ಟಿಗೆ ‘ತಪ್ಪು’ ಎಂಬುದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಬೇಕಾಗುತ್ತದೆ.

ಆದರೆ, ಇಂತಹ ಯಾವ ಮಾರ‍್ಪಾಡೂ ಬರಹದ ಕನ್ನಡವನ್ನು ಕೆಡಿಸುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಆಲು ಇಲ್ಲವೇ ಮನಿ ಎಂಬ ಪದರೂಪದಲ್ಲಿಲ್ಲದಂತಹ ನುಡಿಯ ಬಳಕೆಗೆ ಅವಶ್ಯವಾಗಿರುವ ಯಾವ ಅಂಶವೂ ಹಾಲು ಇಲ್ಲವೇ ಮನೆ ಎಂಬ ಪದರೂಪದಲ್ಲಿಲ್ಲ. ಇಲ್ಲಿ ತಪ್ಪು ಮತ್ತು ಸರಿ ಎಂಬವುಗಳು ಎಂತಹ ಬರಹ ನಮ್ಮೊಳಗೆ ಸಮಾನವಾಗಿ ಉಳಿಯಬೇಕು ಎಂಬ ತೀರ‍್ಮಾನವನ್ನಶ್ಟೇ ಅವಲಂಬಿಸಿದೆ. ಇವತ್ತು ಬಳಕೆಯಲ್ಲಿರುವ ತೀರ‍್ಮಾನವನ್ನು ನಾವು ಅವಶ್ಯವೆಂದೆನಿಸಿದಲ್ಲಿ ಮಾರ‍್ಪಡಿಸಬಲ್ಲೆವು, ಮತ್ತು ಹಾಗೆ ಮಾರ‍್ಪಡಿಸಿದಾಗ ಇವತ್ತು ತಪ್ಪು ಎಂದು ತಿಳಿದಿರುವ ಪದರೂಪಗಳು ಸರಿಯೆಂದೆನಿಸಬಲ್ಲುವು.

ಸಂಸ್ಕ್ರುತ ಎರವಲುಗಳನ್ನು ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬ ಕಟ್ಟಲೆ ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾದುದು ಮಾತ್ರವಲ್ಲ, ಕನ್ನಡ ಬರಹವನ್ನು ಎಲ್ಲಾ ಕನ್ನಡಿಗರೂ ಸುಲಬವಾಗಿ ಕಲಿತು ತಮ್ಮದಾಗಿಸಿಕೊಳ್ಳುವಲ್ಲಿ ಒಂದು ದೊಡ್ಡ ತೊಡಕಾಗಿದೆ; ಕೆಲವೇ ಕೆಲವು ಜನರಶ್ಟೇ ಬರಹವನ್ನು ಬಳಸುತ್ತಿದ್ದ ಹಿಂದಿನ ಕಾಲದಲ್ಲಿ ಈ ಕಟ್ಟಲೆ ಹೆಚ್ಚು ತೊಡಕಿನದೆಂದು ಅನಿಸುತ್ತಿರಲಿಲ್ಲ. ಆದರೆ, ಇವತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗಬೇಕಾಗಿದೆ; ಹಾಗಾಗಿ, ಕನ್ನಡಕ್ಕೆ ಬೇಡದ ಈ ಸಂಸ್ಕ್ರುತದ ಹೊರೆಯನ್ನು ತೆಗೆದುಹಾಕುವುದೇ ಒಳ್ಳೆಯದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಕಲಿಕೆ ಮತ್ತು ಅರಕೆ

ನುಡಿಯರಿಮೆಯ ಇಣುಕುನೋಟ – 19

ಯಾವುದಾದರೂ ಒಂದು ವಿಶಯವನ್ನು ಕಲಿಯುವುದಕ್ಕೂ, ಅದರ ಮೇಲೆ ಅರಕೆ (ಸಂಶೋದನೆ) ನಡೆಸುವುದಕ್ಕೂ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ; ನಾವು ಎತ್ತಿಕೊಂಡ ವಿಶಯದ ಮೇಲೆ ಬೇರೆ ಬೇರೆ ಹೊತ್ತಗೆಗಳಲ್ಲಿ, ಬಿಡಿ ಬರಹಗಳಲ್ಲಿ, ಮತ್ತು ಅವನ್ನು ಓದಿ ತಿಳಿದುಕೊಂಡಿರುವ ತಿಳಿವಿಗರಲ್ಲಿ ಸಾಕಶ್ಟು ತಿಳಿವುಗಳು ಕಲೆತಿರುತ್ತವೆ. ಅಂತಹ ಹೊತ್ತಗೆ ಮತ್ತು ಬಿಡಿ ಬರಹಗಳನ್ನು ಓದಿ, ತಿಳಿವಿಗರು ಹೇಳುವುದನ್ನು ಕೇಳಿ, ಆ ವಿಶಯದ ಕುರಿತು ತಿಳಿವನ್ನು ಕಲೆಹಾಕುವುದಕ್ಕೆ ಕಲಿಕೆ ಎಂದು ಹೆಸರು.

ಅರಕೆ ಎಂಬುದು ಇದಕ್ಕಿಂತ ತೀರ ಬೇರಾದುದು; ಒಂದು ವಿಶಯದ ಕುರಿತು ತಮ್ಮ ಸಮಾಜದಲ್ಲಿ ಕಲೆತಿರುವ ತಿಳಿವಿನಲ್ಲಿ ತಪ್ಪುಗಳು ಏನಾದರೂ ಇವೆಯೇ, ಮತ್ತು ಆ ವಿಶಯದ ಕುರಿತಾಗಿ ಯಾರಿಗೂ ತಿಳಿಯದಿರುವಂತಹ ಹೊಸ ಸಂಗತಿಗಳೇನಾದರೂ ಇವೆಯೇ ಎಂಬುದನ್ನು ಕಂಡುಹಿಡಿಯುವುದೇ ಅರಕೆ.

ಈ ವ್ಯತ್ಯಾಸದಂತೆ, ಒಂದು ವಿಶಯವನ್ನು ನಮಗೆ ಕಲಿಯಬೇಕೆಂದಿದ್ದಲ್ಲಿ ಅದಕ್ಕೆ ಕಲಿಸುಗರ ನೆರವು ಬೇಕಾಗುತ್ತದೆ; ಆದರೆ, ಒಂದು ವಿಶಯದ ಕುರಿತು ಅರಕೆಯನ್ನು ನಡೆಸಬೇಕೆಂದಿದ್ದಲ್ಲಿ, ಅದಕ್ಕೆ ನಮಗೆ ‘ದಾರಿತೋರುಗರ’ ನೆರವು ಬೇಕಾಗುತ್ತಲ್ಲದೆ ಕಲಿಸುಗರ ನೆರವು ಬೇಕಾಗುವುದಿಲ್ಲ.

ಕಲಿಯುವವರ ಮಟ್ಟಿಗೆ ಕಲಿಸುಗರೆಂದರೆ ಎಲ್ಲವನ್ನೂ ತಿಳಿದವರು; ಕಲಿಯುವವರಲ್ಲಿ ಏಳುವ ಸಂಶಯಗಳನ್ನೆಲ್ಲ ಇಲ್ಲವಾಗಿಸುವ ಅಳವು ಅವರಿಗಿದೆ; ಹಾಗಾಗಿ, ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕಿವಿಗೊಟ್ಟು ಕೇಳಿ, ಅದನ್ನು ಸರಿಯಾಗಿ ತಿಳಿದುಕೊಳ್ಳುವುದೇ ಕಲಿಗರು ಮಾಡಬೇಕಾಗಿರುವ ಮುಕ್ಯ ಕೆಲಸ.

ಆದರೆ, ಅರಕೆಯನ್ನು ನಡೆಸುವವರ ಮಟ್ಟಿಗೆ ಎಲ್ಲವನ್ನೂ ತಿಳಿದವರು ಯಾರೂ ಇಲ್ಲ; ದಾರಿತೋರುಗರು ಅವರಿಗೆ ಯಾವ ರೀತಿಯಲ್ಲಿ ಅರಕೆಯನ್ನು ನಡೆಸಬಹುದು ಎಂಬುದನ್ನು ತಿಳಿಸಬಲ್ಲರಲ್ಲದೆ, ಅರಕೆಯ ಕೊನೆಯ ತೀರ‍್ಮಾನ ಹೇಗಿರಬಹುದು, ಇಲ್ಲವೇ ಹೇಗಿರಬೇಕು ಎಂಬುದನ್ನು ತಿಳಿಸಲಾರರು. ಅದನ್ನು ತಮ್ಮ ಅರಕೆಗಳ ಮೂಲಕ ಹೊಸದಾಗಿ ಕಂಡುಹಿಡಿಯುವುದೇ ಅರಕೆಯನ್ನು ನಡೆಸುವವರ ಮುಕ್ಯ ಕೆಲಸ. ಈ ರೀತಿ, ಯಾರಿಗೂ ಗೊತ್ತಿಲ್ಲದಿರುವ ಸಂಗತಿಗಳನ್ನು ಕಂಡುಹಿಡಿಯುವ ಮೂಲಕ, ಮತ್ತು ತಪ್ಪು ತಪ್ಪಾಗಿ ತಿಳಿದುಕೊಂಡಿರುವ ಸಂಗತಿಗಳನ್ನು ಸರಿಪಡಿಸುವ ಮೂಲಕ ಸಮಾಜದಲ್ಲಿರುವ ತಿಳಿವಿನ ಬೊಕ್ಕಸವನ್ನು ಹಿರಿದಾಗಿಸುವುದೇ ಅರಕೆ ನಡೆಸುವವರ ಕೆಲಸವಾಗಿದೆ.

ಕಲಿಕೆಗೂ ಅರಕೆಗೂ ನಡುವೆ ವ್ಯತ್ಯಾಸವಿರುವ ಹಾಗೆ, ಕಲಿಕೆಯನ್ನು ಕೊಡಿಸುವ ಕಲಿಸುಗರಿಗೂ ಅರಕೆಯನ್ನು ನಡೆಸಲು ದಾರಿತೋರುಗರಿಗೂ ನಡುವೆ ವ್ಯತ್ಯಾಸವಿರುವುದು ಅವಶ್ಯ. ಕಲಿಸುಗನೊಬ್ಬ ತಾನು ಕಲಿಸುವ ವಿಶಯವನ್ನು ಸರಿಯಾಗಿ ತಿಳಿದಿರಬೇಕು ಮಾತ್ರವಲ್ಲ, ತಾನು ತಿಳಿದಿರುವುದೆಲ್ಲವೂ ಸರಿ ಎಂಬ ಆತ್ಮವಿಶ್ವಾಸವೂ ಆತನಲ್ಲಿರಬೇಕು. ಈ ವಿಶಯದಲ್ಲಿ ಸ್ವಲ್ಪವಾದರೂ ಸಂಶಯವಿದೆಯಾದರೆ, ಆತ ಎದೆಗಾರಿಕೆಯಿಂದ ಕಲಿಗರಿಗೆ ಕಲಿಸಿಕೊಡಲಾರ.

ಆದರೆ, ಅರಕೆಯನ್ನು ನಡೆಸುವವರು, ಮತ್ತು ಅರಕೆಗೆ ದಾರಿ ತೋರಿಸುವವರು ಯಾವ ಹೇಳಿಕೆಯನ್ನೂ ಪೂರ‍್ತಿಯಾಗಿ ಸರಿಯೆಂದು ತಿಳಿದುಕೊಳ್ಳಬಾರದು. ಎಲ್ಲವನ್ನೂ ಸಂಶಯದಿಂದ ನೋಡಿದಾಗ ಮಾತ್ರ ಅವರ ಅರಕೆ ಮುಂದೆ ಹೋಗಬಲ್ಲುದು. ಎಂತಹ ದೊಡ್ಡ ತಿಳಿವಿಗರು ಹೇಳಿದ್ದನ್ನೂ ಹಾಗೆಯೇ ಒಪ್ಪಿಕೊಳ್ಳದೆ ವಿಚಾರಣೆಗೆ ಒಳಪಡಿಸಲು ಅವರು ಅಣಿಯಾಗಿರಬೇಕು.

ಈ ಕಾರಣಕ್ಕಾಗಿ, ಪರೀಕ್ಶೆಗಳಲ್ಲಿ ರ‍್ಯಾಂಕ್ ಗಳಿಸುವ ಕಲಿಗ ಉತ್ತಮ ಅರಕೆಗಾರನಾಗಬೇಕೆಂದೇನಿಲ್ಲ. ಇದೇ ರೀತಿಯಲ್ಲಿ, ಕಲಿಗರ ಅಚ್ಚುಮೆಚ್ಚಿನ ಕಲಿಸುಗ ಅರಕೆಗಳಿಗೆ ಒಳ್ಳೆಯ ದಾರಿತೋರುಗನಾಗಬೇಕೆಂದೂ ಇಲ್ಲ. ಕಲಿಯುವುದಕ್ಕೆ ಮತ್ತು ಕಲಿಸುವುದಕ್ಕೆ ಬೇಕಾಗುವ ಮನೋಬಾವ ಅರಕೆಗೆ ಮತ್ತು ಅದರ ದಾರಿತೋರಿಕೆಗೆ ಬೇಕಾಗುವ ಮನೋಬಾವಕ್ಕಿಂತ ತೀರ ಬೇರಾಗಿರುವುದೇ ಇದಕ್ಕೆ ಕಾರಣ.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಈ ಎರಡು ಕೆಲಸಗಳನ್ನೂ ಒಬ್ಬರೇ ಮಾಡಬೇಕಾಗುವುದರಿಂದ, ಹೆಚ್ಚಿನೆಡೆಗಳಲ್ಲೂ ಅರಕೆಯ ಹೆಸರಿನಲ್ಲಿ ಕಲಿಕೆ ಮಾತ್ರ ನಡೆಯುವುದು ಕಾಣಿಸುತ್ತದೆ. ಈ ಎರಡು ಬಗೆಯ ಕೆಲಸಗಳನ್ನು ಒಬ್ಬರಿಗೇನೇ ನಡೆಸಿಕೊಂಡು ಹೋಗಲು ಹೆಚ್ಚಿನವರಿಗೂ ಸಾದ್ಯವಾಗದಿರುವುದೇ ಇದಕ್ಕೆ ಕಾರಣ.

ಒಮ್ಮೆ ನನ್ನ ಮಿತ್ರರೊಬ್ಬರು ಡಾಕ್ಟರೇಟ್ ಪದವಿಗಾಗಿ ತಾವು ಬರೆದ ಪೆರ‍್ಬರಹವನ್ನು ನನಗೆ ತೋರಿಸಿದರು. ಅದನ್ನು ಓದಿದಾಗ ನನಗೆ ತುಂಬಾ ಆಶ್ಚರ‍್ಯವಾಯಿತು: ಮೂವತ್ತು ವರ‍್ಶಗಳಶ್ಟು ಹಳೆಯ ಸಿದ್ದಾಂತಗಳನ್ನು ಬಳಸಿ ಅವರು ಅದನ್ನು ಬರೆದಿದ್ದರು. ಆ ಸಿದ್ದಾಂತಗಳಲ್ಲಿ ಹೆಚ್ಚಿನವೂ ಸರಿಯಲ್ಲ ಎಂದು ಅವರಿಗೆ ಸ್ಪಶ್ಟವಾಗಿ ತಿಳಿದಿದ್ದರೂ ಅವರು ಹೀಗೆ ಮಾಡಿದ್ದರು. “ಇದು ಯಾಕೆ ಹೀಗೆ?” ಎಂದು ನಾನು ಕೇಳಿದಾಗ ಅವರು ಹೇಳಿದರು, “ನನ್ನ ದಾರಿತೋರುಗರು ತಮ್ಮ ಡಾಕ್ಟರೇಟ್ ಪೆರ‍್ಬರಹದಲ್ಲಿ ಈ ಸಿದ್ದಾಂತಗಳನ್ನು ಬಳಸಿದ್ದಾರೆ; ಈಗ ನಾನು ಹೊಸ ಸಿದ್ದಾಂತಗಳನ್ನು ಬಳಸಿದಲ್ಲಿ, ಅವರು ಹಿಂದೆ ಬರೆದಿದ್ದ ಪೆರ‍್ಬರಹ ಸರಿಯಲ್ಲ ಎಂಬುದಾಗಿ ನಾನು ಹೇಳಿದ ಹಾಗಾದೀತು. ಹಾಗೆ ಮಾಡಿದಲ್ಲಿ, ನನ್ನ ಪೆರ‍್ಬರಹಕ್ಕೆ ಅವರ ಒಪ್ಪಿಗೆ ಸಿಗಲಾರದು.”

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಜಾಗತಿಕ ಮಟ್ಟದ ಅರಕೆಗಳು ನಡೆಯದಿರುವುದಕ್ಕೆ ಒಂದು ಮುಕ್ಯವಾದ ಕಾರಣವನ್ನು ಇದು ಬಹಳ ಸ್ಪಶ್ಟವಾಗಿ ತಿಳಿಸುತ್ತದೆ. ತಮ್ಮ ದಾರಿತೋರಿಕೆಯಲ್ಲಿ ಪೆರ‍್ಬರಹಗಳನ್ನು ಬರೆಯುತ್ತಿರುವ ಅರಕೆಗಾರರು ತಾವು ಬರೆದಿರುವ ಪೆರ‍್ಬರಹಕ್ಕಿಂತ ಒಂದು ಹೆಜ್ಜೆ ಮುಂದೆ ಹೋದರೂ ಬೇಸರಪಟ್ಟುಕೊಳ್ಳುವ ತಿಳಿವಿಗರಿರುವಶ್ಟು ದಿವಸ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅರಕೆಗಳನ್ನು ನಡೆಸುವುದು ಅಸಾದ್ಯವೆಂದೇ ಹೇಳಬಹುದು. ತನ್ನ ಕಲಿಗನಿಂದ ಸೋಲನ್ನು ಬಯಸುವ ತಿಳಿವಿಗರು ಮಾತ್ರ ನಿಜಕ್ಕೂ ಅರಕೆಗೆ ದಾರಿತೋರಿಸಬಲ್ಲರು. ಅಂತಹ ತಿಳಿವಿಗರು ನಮ್ಮಲ್ಲಿ ಬೆರಳೆಣಿಕೆಯಶ್ಟೂ ಇಲ್ಲ ಎಂಬುದು ಬೇಸರದ ಸಂಗತಿ.

ಈ ಮಾತು ಎಶ್ಟು ಸರಿ ಎಂಬುದನ್ನು ಕನ್ನಡದ ಸೊಲ್ಲರಿಮೆಯ (ವ್ಯಾಕರಣದ) ಕುರಿತಾಗಿ ನಡೆದಿರುವ ಅರಕೆಗಳನ್ನು ಪರಿಶೀಲಿಸಿದಲ್ಲಿ ಗೊತ್ತಾಗಬಹುದು. ಕೇಶಿರಾಜನೇ ಮೊದಲಾದ ಕನ್ನಡದ ಸೊಲ್ಲರಿಗರು ಏನು ಹೇಳಿದ್ದಾರೆ ಎಂಬುದನ್ನು ಚರ‍್ಚಿಸುವುದು ಸೊಲ್ಲರಿಮೆಯ ಕಲಿಕೆಯಲ್ಲದೆ ಅರಕೆಯಲ್ಲ. ಅವರು ಬರೆದಿರುವ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ತಪ್ಪುಗಳೇನಾದರೂ ಇವೆಯೇ? ಇದ್ದರೆ ಅವನ್ನು ಇಲ್ಲವಾಗಿಸುವುದು ಹೇಗೆ? ಅವರು ಹೇಳದೇ ಇರುವಂತಹ ಸೊಲ್ಲರಿಮೆಯ ಕಟ್ಟಲೆಗಳು ಯಾವುವಾದರೂ ಇವೆಯೇ? ಇದ್ದರೆ ಅವು ಎಂತಹವು? ಎಂಬಂತಹ ವಿಶಯಗಳ ಕುರಿತು ಚರ‍್ಚೆ ನಡೆದಲ್ಲಿ ಮಾತ್ರ ಈ ಸೊಲ್ಲರಿಮೆಗಳ ಮೇಲೆ ಅರಕೆ ನಡೆದಿದೆಯೆಂದು ಹೇಳಬಹುದು.

ಹಳೆಗನ್ನಡದಲ್ಲಿ ದ, ದಪ, ಮತ್ತು ವ ಎಂಬ ಮೂರು ಹೊತ್ತಿನ ಒಟ್ಟುಗಳು (ಕಾಲಪ್ರತ್ಯಯಗಳು) ಬಳಕೆಯಾಗುತ್ತವೆ, ಮತ್ತು ಇವು ಹಿಂಬೊತ್ತು (ಬೂತ), ಈಪೊತ್ತು (ವರ‍್ತಮಾನ), ಮತ್ತು ಮುಂಬೊತ್ತು (ಬವಿಶ್ಯತ್) ಎಂಬ ಮೂರು ಹೊತ್ತುಗಳನ್ನು ತಿಳಿಸುತ್ತವೆ ಎಂಬುದಾಗಿ ಕೇಶಿರಾಜನೇ ಮೊದಲಾದ ಎಲ್ಲಾ ಕನ್ನಡದ ಸೊಲ್ಲರಿಗರೂ ಹೇಳುತ್ತಾರೆ. ಆದರೆ, ನಿಜಕ್ಕೂ ಈ ಹೇಳಿಕೆ ಸರಿಯಲ್ಲ; ಎತ್ತುಗೆಗಾಗಿ, ಪಂಪಬಾರತದ “ಸೆರಗಂ ಬಗೆದೊಡೆ ಸಾವಾದಪುದು” ಎಂಬ ಸೊಲ್ಲಿಗೆ ‘ಸಹಾಯವನ್ನು ಬಯಸಿದರೆ ಸಾವಾಗುತ್ತದೆ’ ಎಂಬ ಹುರುಳಿದ್ದು, ಅದರಲ್ಲಿ ಬಂದಿರುವ ದಪ ಒಟ್ಟಿಗೆ ಮುಂದೆ ಏನಾಗಬಲ್ಲುದು ಎಂಬುದನ್ನು ತಿಳಿಸುವ ಮುಂಬೊತ್ತಿನ ಹುರುಳಿದೆಯಲ್ಲದೆ ಈಗ ಏನಾಗುತ್ತಿದೆ ಎಂಬುದನ್ನು ತಿಳಿಸುವ ಈಪೊತ್ತಿನ ಹುರುಳಿಲ್ಲ.

ಆದರೆ, ಹಳೆಗನ್ನಡದ ಸೊಲ್ಲರಿಮೆಯ ಕುರಿತಾಗಿ ಅರಕೆ ನಡೆಸಿದವರು ಯಾರೂ ಇದನ್ನು ಗಮನಿಸಿದ ಹಾಗೆ ಕಾಣಿಸುವುದಿಲ್ಲ. ಇಂತಹ ಇನ್ನೂ ಹಲವಾರು ತಪ್ಪುಗಳು ಕೇಶಿರಾಜನೇ ಮೊದಲಾದ ಕನ್ನಡದ ಸೊಲ್ಲರಿಗರು ತಿಳಿಸುವ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಕಾಣಿಸುತ್ತವೆ; ಇದಲ್ಲದೆ, ಅವರು ಹೇಳದಿರುವಂತಹ ಬೇರೆ ಹಲವು ಕಟ್ಟಲೆಗಳೂ ಹಳೆಗನ್ನಡದ ಸೊಲ್ಲರಿಮೆಯನ್ನು ವಿವರಿಸಲು ಬೇಕಾಗುತ್ತವೆ. ಇವುಗಳಲ್ಲಿ ಕೆಲವನ್ನಾದರೂ ಪಟ್ಟಿಮಾಡಬಲ್ಲವರು ಮಾತ್ರ ನಿಜಕ್ಕೂ ಹಳೆಗನ್ನಡದ ಮೇಲೆ ಅರಕೆ ನಡೆಸಿದ್ದಾರೆಂದು ಹೇಳಲು ಬರುತ್ತದೆ.

ಬೇರೆ ಬಗೆಯ ತಿಳಿವುಗಳ ಕುರಿತಾಗಿಯೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಮತ್ತು ಬೇರೆ ಬಗೆಯ ಅರಕೆಮನೆಗಳಲ್ಲಿ ಇವತ್ತು “ಅರಕೆ”ಗಳು ನಡೆಯುತ್ತಿವೆ; ಆದರೆ, ಇವುಗಳಲ್ಲಿ ಹೆಚ್ಚಿನವೂ ಮೇಲೆ ವಿವರಿಸಿದ ಹಾಗೆ ದಾರಿತಪ್ಪಿರುವ ಅರಕೆಗಳು; ಹೊಸ ತಿಳಿವನ್ನು ಕಂಡುಹಿಡಿಯುವ ಇಲ್ಲವೇ ಹಳೇ ತಿಳಿವನ್ನು ಸಾಣೆಗೆ ಹಿಡಿಯುವ ಉದ್ದೇಶ ಅವಕ್ಕಿಲ್ಲ. ಹಾಗಾಗಿ, ಅರಕೆಗಾರರಿಗೆ ಒಂದು ಡಿಗ್ರಿಯನ್ನು ಕೊಡಿಸುವ ಕೆಲಸವನ್ನಶ್ಟೇ ಅವು ನಡೆಸಬಲ್ಲುವು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter