Posts Tagged ‘ವ್ಯಾಕರಣ’

ನುಡಿಮಾರಲು ಎಣ್ಣುಕಗಳ ಬಳಕೆ

ನುಡಿಯರಿಮೆಯ ಇಣುಕುನೋಟ – 34

ಒಂದು ನುಡಿಯಲ್ಲಿರುವ ಬರಹವನ್ನು ಇನ್ನೊಂದು ನುಡಿಗೆ ಮಾರ್ಪಡಿಸುವುದನ್ನು ನುಡಿಮಾರಿಕೆ (ಅನುವಾದ) ಎಂದು ಕರೆಯಬಹುದು. ಈ ಕೆಲಸವನ್ನು ನಡೆಸಲು ಸಾಮಾನ್ಯವಾಗಿ ತುಂಬಾ ಸಮಯ ತಗಲುತ್ತದೆ; ಗಂಟೆಗೆ ಅಯ್ದಾರು ಪುಟಗಳನ್ನಶ್ಟೇ ನುಡಿಮಾರಲು ಬರುತ್ತದೆ. ಕೆಲವು ಬಗೆಯ ಬರಹಗಳನ್ನು ತುಸು ಬೇಗನೆ ನುಡಿಮಾರಬಹುದು, ಆದರೆ ಬೇರೆ ಕೆಲವು ಬಗೆಯ ಬರಹಗಳನ್ನು ನುಡಿಮಾರಲು ಇನ್ನಶ್ಟು ಹೊತ್ತು ತಗಲಬಹುದು. ಇವತ್ತು ನುಡಿಮಾರಬೇಕಾಗಿರುವ ಬರಹಗಳ ಎಣಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇಂಗ್ಲಿಶ್ನಂತಹ ನುಡಿಗಳಿಂದ ಸಾವಿರಾರು ಬರಹಗಳನ್ನು ನುಡಿಮಾರುತ್ತಲೇ ಇರಬೇಕಾಗುತ್ತದೆ. ಕೊನೆಯಿಲ್ಲದ ಈ ಕೆಲಸಕ್ಕೆ ಎಶ್ಟು ಮಂದಿ ನುಡಿಮಾರುಗರಿದ್ದರೂ ಸಾಕಾಗುವುದಿಲ್ಲ.

ಹಾಗಾಗಿ, ಎಣ್ಣುಕ(ಕಂಪ್ಯೂಟರ್)ಗಳನ್ನು ಬಳಸಿ ಈ ಕೆಲಸವನ್ನು ಹೆಚ್ಚು ಬೇಗನೆ ಮತ್ತು ಕಡಿಮೆ ವೆಚ್ಚದಲ್ಲಿ ನಡೆಸಬಹುದಲ್ಲವೇ ಎಂಬುದಾಗಿ ಹಲವರಲ್ಲಿ ಆಸಕ್ತಿ ಮೂಡಿದ್ದು, ಕಳೆದ ಅಯ್ವತ್ತು ವರ್ಶಗಳಿಂದ ಈ ವಿಶಯದಲ್ಲಿ ಅರಕೆಗಳು ನಡೆಯುತ್ತಿವೆ. ಗಂಟೆಗೆ ನೂರಿನ್ನೂರು ಪುಟಗಳಶ್ಟು ಬರಹಗಳನ್ನು ಇವತ್ತಿನ ಎಣ್ಣುಕಗಳು ನುಡಿಮಾರಿಕೊಡಬಲ್ಲುವು. ಆದರೆ, ಅವು ನುಡಿಮಾರಿದ ಈ ಬರಹಗಳಲ್ಲಿ ಹಲವು ತಪ್ಪುಗಳೂ ಉಳಿದಿರುತ್ತವೆ, ಮತ್ತು ಈ ತಪ್ಪುಗಳನ್ನೆಲ್ಲ ಕಯ್ಯಿಂದಲೇ ತಿದ್ದಿ ಸರಿಪಡಿಸಬೇಕಾಗುತ್ತದೆ. ಯಾಕೆಂದರೆ, ನುಡಿಮಾರುವ ಸಮಯದಲ್ಲಿ ನಾವು ನಡೆಸಬೇಕಾಗಿರುವ ಹಲವು ಕೆಲಸಗಳಲ್ಲಿ ಕೆಲವನ್ನು ನಡೆಸಲು ಎಣ್ಣುಕಗಳಿಗೆ ಸಾದ್ಯವೇ ಆಗುವುದಿಲ್ಲ, ಮತ್ತು ಅಂತಹ ವಿಶಯಗಳಲ್ಲಿ ಅವು ಹಲವು ತಪ್ಪುಗಳನ್ನು ಮಾಡುತ್ತವೆ. ಕೆಲವು ಬಗೆಯ ಬರಹಗಳ ಮಟ್ಟಿಗಂತೂ ಈ ರೀತಿ ಎಣ್ಣುಕಗಳು ಕೊಡುವ ನುಡಿಮಾರಿಕೆಯನ್ನು ತಿದ್ದಲು ಹೋಗುವುದಕ್ಕಿಂತಲೂ ಎಣ್ಣುಕಗಳ ನೆರವಿಲ್ಲದೆ ನೇರವಾಗಿ ನುಡಿಮಾರುವುದೇ ಸುಳುವಾದ ಕೆಲಸವೆಂದು ಅನಿಸಬಲ್ಲುದು.

ಎಣ್ಣುಕಗಳು ಬರಹಗಳನ್ನು ನುಡಿಮಾರಬೇಕಿದ್ದಲ್ಲಿ ಅವಕ್ಕೆ ಹಲವು ಬಗೆಯ ಅರಿವುಗಳು ಬೇಕಾಗುತ್ತವೆ. ಬರಹದಲ್ಲಿ ಬಳಕೆಯಾಗುವ ಪದಗಳಿಗೆ ಎಂತಹ ಹುರುಳುಗಳೆಲ್ಲ ಇವೆ ಎಂಬುದನ್ನು ಅವು ಅರಿತಿರಬೇಕು, ಮತ್ತು ಇದಕ್ಕಾಗಿ ಅವುಗಳಲ್ಲಿ ಪದನೆರಕೆಗಳಿರಬೇಕು. ಪದಗಳು ಸೊಲ್ಲುಗಳಲ್ಲಿ ಹೇಗೆ ಬಳಕೆಯಾಗುತ್ತವೆ, ಮತ್ತು ಅವುಗಳ ಹಲವು ಹುರುಳುಗಳಲ್ಲಿ ಒಂದು ಹುರುಳು ಹೇಗೆ ಆಯ್ಕೆಗೊಳ್ಳುತ್ತದೆ ಎಂಬುದನ್ನು ಅವು ಅರಿತಿರಬೇಕು, ಮತ್ತು ಇದನ್ನು ಅವಕ್ಕೆ ತಿಳಿಸಬಲ್ಲ ಸೊಲ್ಲರಿಮೆಯ (ವ್ಯಾಕರಣದ) ಕಟ್ಟಲೆಗಳು ಅವುಗಳಲ್ಲಿ ಇರಬೇಕು. ಬರಹಗಳಲ್ಲಿ ಬರುವ ಪದಗಳ ಹುರುಳು ಅವನ್ನು ಬಳಸಿರುವ ಕುಳ್ಳಿಹ(ಸಂದರ್ಬ)ದ ಮೇಲೂ ಅವಲಂಬಿಸಿರುತ್ತದೆ. ಮಾನವನ ಮಿದುಳು ಈ ವ್ಯತ್ಯಾಸವನ್ನು ಸುಳುವಾಗಿ ಅರಿತುಕೊಂಡು, ಕುಳ್ಳಿಹಕ್ಕೆ ಹೊಂದಿಕೆಯಾಗುವಂತಹ ಹುರುಳನ್ನು ಆಯ್ದುಕೊಳ್ಳಬಲ್ಲುದು. ಆದರೆ, ಈ ಕೆಲಸವನ್ನು ನಡೆಸಲು ಬೇಕಾಗುವ ಅರಿವನ್ನು ಎಣ್ಣುಕಗಳಿಗೆ ಕೊಡಿಸುವುದು ಹೇಗೆ ಎಂಬುದಿನ್ನೂ ತಿಳಿವಿಗರಿಗೆ ಗೊತ್ತಾಗಿಲ್ಲ. ಹಾಗಾಗಿ, ಈ ವಿಶಯದಲ್ಲಿ ಎಣ್ಣುಕಗಳು ತುಂಬಾ ತಪ್ಪು ಮಾಡುತ್ತಿವೆ.

ಇವತ್ತು ನುಡಿಮಾರುವ ಕೆಲಸಕ್ಕಾಗಿ ಎಣ್ಣುಕಗಳಲ್ಲಿ ಮುಕ್ಯವಾಗಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಲಾಗುತ್ತದೆ. ಇವನ್ನು ಮಾರೆಡೆ ಹಮ್ಮುಗೆ ಮತ್ತು ಎಡೆನುಡಿ ಹಮ್ಮುಗೆ ಎಂಬುದಾಗಿ ಕರೆಯಬಹುದು. ಇವುಗಳಲ್ಲಿ ಮೊದಲನೆಯದನ್ನು ಬಳಸುವವರು ತಿಳಿವನ್ನು ನೇರವಾಗಿ ಮೂಲನುಡಿಯಿಂದ ಈಡುನುಡಿಗೆ ಮಾರೆಡೆಗೊಳಿಸು(ವರ್ಗಾಯಿಸು)ತ್ತಾರೆ, ಮತ್ತು ಎರಡನೆಯದನ್ನು ಬಳಸುವವರು ತಿಳಿವನ್ನು ಮೊದಲಿಗೆ ಒಂದು ಕಲ್ಪಿತವಾಗಿರುವ ಎಡೆನುಡಿಗೆ ಮಾರೆಡೆಗೊಳಿಸಿ, ಅಲ್ಲಿಂದ ಈಡುನುಡಿಗೆ ಮಾರೆಡೆಗೊಳಿಸುತ್ತಾರೆ.

ಮಾರೆಡೆ ಹಮ್ಮುಗೆಯಲ್ಲಿ ಮೂರು ಹಂತಗಳಿರುತ್ತವೆ: ಮೊದಲನೆಯ ಹಂತದಲ್ಲಿ ಮೂಲ ಬರಹದ ಹುರುಳೇನು ಎಂಬುದನ್ನು ಕಂಡುಹಿಡಿದು, ಅದನ್ನು ಮೂಲನುಡಿಯದೇ ಆದ ಒಂದು ಕಲ್ಪಿತ ರೂಪಕ್ಕೆ ಬದಲಾಯಿಸಲಾಗುತ್ತದೆ; ಎರಡನೆಯ ಹಂತದಲ್ಲಿ ಅದನ್ನು ಅಂತಹದೇ ಆದ ಒಂದು ಈಡುನುಡಿಯ ಕಲ್ಪಿತ ರೂಪಕ್ಕೆ ಮಾರೆಡೆಗೊಳಿಸಲಾಗುತ್ತದೆ; ಮತ್ತು ಮೂರನೆಯ ಹಂತದಲ್ಲಿ ಈಡುನುಡಿಯ ಈ ಕಲ್ಪಿತ ರೂಪವನ್ನು ಅದರ ಬರಹರೂಪಕ್ಕೆ ಮಾರ್ಪಡಿಸಲಾಗುತ್ತದೆ.

ಮಾರೆಡೆ ಹಮ್ಮುಗೆಗಿಂತ ಎಡೆನುಡಿ ಹಮ್ಮುಗೆ ಸೊಲ್ಲುಗಳಿಗೆ ಕಲ್ಪಿತ ರೂಪವನ್ನು ಕೊಡುವಲ್ಲಿ ಮಾತ್ರ ಬೇರಾಗಿರುತ್ತದೆ. ಮೂಲನುಡಿಯ ಬರಹವನ್ನು ಅದರದೇ ಆದ ಕಲ್ಪಿತ ರೂಪಕ್ಕೆ ಮಾರ್ಪಡಿಸುವ ಬದಲು, ಈ ಹಮ್ಮುಗೆಯಲ್ಲಿ ಅದನ್ನು ಒಂದು ಎಡೆನುಡಿಗೆ (ಕಲ್ಪಿತವಾಗಿರುವ ನುಡಿಗೆ) ಮಾರ್ಪಡಿಸಲಾಗುತ್ತದೆ. ಹೀಗೆ ಮಾಡುವುದರಿಂದ ಸಿಗುವ ಪ್ರಯೋಜನವೇನೆಂದರೆ, ಆಮೇಲೆ ಈ ಎಡೆನುಡಿಯಿಂದ ಬೇರೆ ಯಾವ ನುಡಿಗೆ ಬೇಕಿದ್ದರೂ ಬರಹವನ್ನು ನುಡಿಮಾರಬಹುದು. ಎತ್ತುಗೆಗಾಗಿ, ಕನ್ನಡದ ಒಂದು ಬರಹವನ್ನು ಎಡೆನುಡಿಯ ಬರಹವಾಗಿ ಮಾರ್ಪಡಿಸಿದಲ್ಲಿ, ಆಮೇಲೆ ಅದನ್ನು ನೇರವಾಗಿ ತಮಿಳು, ತೆಲುಗು, ಮಲಯಾಳ, ಹಿಂದಿ ಮೊದಲಾದ ಬೇರೆ ಹಲವು ನುಡಿಗಳಲ್ಲಿ ಯಾವುದರ ಬರಹವಾಗಿ ಬೇಕಿದ್ದರೂ ಮಾರ್ಪಡಿಸಿಕೊಳ್ಳಬಹುದು.

ಇದಕ್ಕೆ ಬದಲು, ಮಾರೆಡೆ ಹಮ್ಮುಗೆಯಲ್ಲಿ ಒಂದೊಂದು ನುಡಿಜೋಡಿಗೂ ನುಡಿಮಾರಲು ಬೇಕಾಗುವ ಕೆಲಸಗಳನ್ನೆಲ್ಲ ಬೇರೆ ಬೇರಾಗಿ ಮಾಡಿಕೊಳ್ಳಬೇಕಾಗುತ್ತದೆ. ಜಗತ್ತಿನ ಎಲ್ಲಾ ನುಡಿಗಳಿಗೂ ಸಮಾನವಾಗಬಹುದಾದಂತಹ, ಎಂದರೆ ಯಾವುದೇ ಒಂದು ನುಡಿಯ ಪರಿಚೆಯನ್ನೂ ಬಳಸದಿರುವಂತಹ ಎಡೆನುಡಿಯೊಂದನ್ನು ಉಂಟುಮಾಡಬಲ್ಲೆವು ಎಂಬ ಹುಚ್ಚು ಉತ್ಸಾಹ ಈ ಎಡೆನುಡಿ ಹಮ್ಮುಗೆಯನ್ನು ಹಮ್ಮಿಕೊಳ್ಳಲು ಹೊರಟಿದ್ದ ತಿಳಿವಿಗರಲ್ಲಿತ್ತು. ಆದರೆ ಸಮಯ ಕಳೆದಂತೆಲ್ಲ, ಇದು ತಲಪಲಾಗದ ಗುರಿ ಎಂಬುದು ಸ್ಪಶ್ಟವಾಗುತ್ತಿದೆ.

ಮೇಲಿನ ಎರಡು ಬಗೆಯ ಹಮ್ಮುಗೆಗಳಿಂತ ತೀರ ಬೇರಾಗಿರುವ ಇನ್ನೊಂದು ಬಗೆಯ ಹಮ್ಮುಗೆಯನ್ನೂ ಕೆಲವರು ತಿಳಿವಿಗರು ಬಳಕೆಗೆ ತಂದಿದ್ದಾರೆ. ಇದರಲ್ಲಿ ಈಗಾಗಲೇ ಉಂಟುಮಾಡಿರುವ ನುಡಿಮಾರಿಕೆಗಳನ್ನು ಬಳಸಿಕೊಳ್ಳುವಂತಹ ಅಳವನ್ನು ಎಣ್ಣುಕಗಳಿಗೆ ಕೊಡಿಸಲಾಗುತ್ತದೆ. ಈ ಅಳವಿನ ನೆರವಿನಿಂದ, ಎಣ್ಣುಕಗಳು ಎರಡು ನುಡಿಗಳ ನಡುವೆ ಈಗಾಗಲೇ ನಡೆಸಿರುವ ನುಡಿಮಾರಿಕೆಗಳಲ್ಲಿ ಒಂದು ನುಡಿಯ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದವುಗಳಿಗೆ ಬದಲಾಗಿ ಇನ್ನೊಂದು ನುಡಿಯಲ್ಲಿ ಯಾವ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದವುಗಳನ್ನು ಹೆಚ್ಚಿನೆಡೆಗಳಲ್ಲೂ ಬಳಸಲಾಗಿದೆ ಎಂಬುದನ್ನು ಕಂಡುಕೊಳ್ಳುತ್ತವೆ, ಮತ್ತು ಈ ವಿಶಯವನ್ನು ನೆನಪಿನಲ್ಲಿರಿಸಿಕೊಂಡು, ಅಂತಹವೇ ಆದ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದುವನ್ನು ಬೇಕಾದಾಗ ಬಳಸುವ ಅಳವನ್ನು ತಾವೇ ಉಂಟುಮಾಡಿಕೊಳ್ಳುತ್ತವೆ.

ಎತ್ತುಗೆಗಾಗಿ, ಇಂಗ್ಲಿಶ್ ಮತ್ತು ಫ಼್ರೆಂಚ್ ನುಡಿಗಳ ನಡುವೆ ಹಲವಾರು ಬರಹಗಳನ್ನು ಈಗಾಗಲೇ ನುಡಿಮಾರಲಾಗಿದೆ. ಈ ಬರಹಗಳಲ್ಲಿ ಯಾವ ಇಂಗ್ಲಿಶ್ ಪದಗಳಿಗೆ ಬದಲಾಗಿ ಯಾವ ಫ಼್ರೆಂಚ್ ಪದಗಳು ಅತಿ ಹೆಚ್ಚು ಕಡೆಗಳಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಎಣ್ಣುಕಗಳು ಗಮನಿಸಿಕೊಳ್ಳುತ್ತವೆ. ಹೊಸದಾಗಿ ಬರಹವೊಂದನ್ನು ಇಂಗ್ಲಿಶ್ನಿಂದ ಫ಼್ರೆಂಚ್ ನುಡಿಗೆ ಇಲ್ಲವೇ ಫ಼್ರೆಂಚ್ನಿಂದ ಇಂಗ್ಲಿಶ್ ನುಡಿಗೆ ನುಡಿಮಾರಬೇಕಾದಾಗ, ಈ ಎಣ್ಣುಕಗಳು ಒಂದೊಂದು ಪದಕ್ಕೂ ಸಮನಾಗಿರುವ ಪದಗಳಲ್ಲಿ ಆ ರೀತಿ ತುಂಬಾ ಹೆಚ್ಚು ಬಾರಿ ಬಳಕೆಯಾಗಿರುವ ಪದವನ್ನೇ ಆರಿಸಿಕೊಳ್ಳುತ್ತವೆ, ಮತ್ತು ಇದರಿಂದಾಗಿ, ಅವು ನಡೆಸುವ ನುಡಿಮಾರಿಕೆ ಓದುಗರಿಗೆ ಹೆಚ್ಚು ಮೆಚ್ಚುಗೆಯಾಗುವ ಹಾಗಾಗುತ್ತದೆ.

ಎಣ್ಣುಕಗಳು ನುಡಿಮಾರಿರುವ ಬರಹಗಳನ್ನು ಅರಿವಿಗರು ತಿದ್ದುತ್ತಿರುವಂತೆ, ಅವು ತಮ್ಮ ನುಡಿಮಾರಿಕೆಯ ಅಳವನ್ನು ಹೆಚ್ಚಿಸಿಕೊಳ್ಳುವಂತಹ ಹಮ್ಮುಗೆಯನ್ನೂ ಉಂಟುಮಾಡಲಾಗಿದೆ. ಇದರಿಂದಾಗಿ, ಹೆಚ್ಚು ಹೆಚ್ಚು ಬರಹಗಳನ್ನು ಎಣ್ಣುಕಗಳ ನೆರವಿನಿಂದ ನುಡಿಮಾರಿದಂತೆ, ಮತ್ತು ಅಂತಹ ಹೆಚ್ಚು ಹೆಚ್ಚು ಬರಹಗಳನ್ನು ಸರಿಪಡಿಸಿದಂತೆ, ಹೆಚ್ಚು ಹೆಚ್ಚು ಚನ್ನಾಗಿರುವ ನುಡಿಮಾರಿಕೆಯನ್ನು ಅವು ನಡೆಸುವಂತಾಗುತ್ತದೆ. ಗೂಗಲ್ನಂತಹ ಸರ್ವರ್ಗಳಲ್ಲಿ ಇಂತಹ ನುಡಿಮಾರಿಕೆಗಳನ್ನು ಅಳವಡಿಸಲಾಗಿದೆ. ಕನ್ನಡಕ್ಕೆ ಹೆಚ್ಚು ಚನ್ನಾಗಿರುವ ಎಣ್ಣುಕದ ನುಡಿಮಾರಿಕೆ ದೊರಕಲು ಇವನ್ನು ನಾವು ಹೆಚ್ಚು ಹೆಚ್ಚು ಬಳಸುತ್ತಿರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಸಾಹಿತಿಗೆ ವ್ಯಾಕರಣದ ತಿಳಿವು ಬೇಕೇ?

ನುಡಿಯರಿಮೆಯ ಇಣುಕುನೋಟ – 21

ಕತೆ, ಕಾದಂಬರಿ, ನಾಟಕ ಮೊದಲಾದ ನಲ್ಬರಹಗಳನ್ನು ಬರೆಯುವ ಸಾಹಿತಿಗಳಿಗೆ ಕನ್ನಡ ನುಡಿಯ ವ್ಯಾಕರಣದ ತಿಳಿವಿನಿಂದ ಯಾವ ಬಗೆಯ ನೆರವೂ ಸಿಗಲಾರದೆಂಬ ಅನಿಸಿಕೆ ಹಲವು ಮಂದಿ ಬರಹಗಾರರಲ್ಲಿದೆ. “ಕನ್ನಡ ವ್ಯಾಕರಣ”ವೆಂಬ ಹೆಸರಿನಲ್ಲಿ ಇವತ್ತು ಶಾಲೆಗಳಲ್ಲಿ ಕಲಿಸುತ್ತಿರುವುದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲದಿರುವುದು ಇದಕ್ಕೆ ಮುಕ್ಯ ಕಾರಣ; ನಿಜವಾದ ಕನ್ನಡದ ವ್ಯಾಕರಣ ಎಂತಹದು, ಅದು ಹೇಗೆ ಕನ್ನಡದಲ್ಲಿ ಪದಗಳನ್ನು ಮತ್ತು ಸೊಲ್ಲುಗಳನ್ನು ಕಟ್ಟುವ ಬಗೆಯನ್ನು ತಿಳಿಸಿಕೊಡುತ್ತದೆ, ಮತ್ತು ಈ ತಿಳಿವಿನ ಮೂಲಕ ಹೇಗೆ ಬರಹಗಳನ್ನು ಸರಿಯಾಗಿ ಬರೆಯಲು ಇಲ್ಲವೇ ಬರೆದುದನ್ನು ಸರಿಪಡಿಸಲು ಬರುತ್ತದೆ ಎಂಬುದನ್ನು ತಿಳಿಸಿಕೊಟ್ಟಲ್ಲಿ ಯಾರೂ ಅದರ ನೆರವನ್ನು ಅಲ್ಲಗಳೆಯಲಾರರು.

ಹಲವು ಜನರಿಗೆ ತುಂಬಾ ಸ್ವಾರಸ್ಯವಾದ ವಿಶಯಗಳು ಹೊಳೆಯುತ್ತಿರುತ್ತವೆ; ಆದರೆ, ಅವನ್ನು ಇತರರಿಗೆ ತಿಳಿಯುವ ಹಾಗೆ ಬರೆಯುವುದು ಹೇಗೆ ಎಂದು ಗೊತ್ತಾಗುವುದಿಲ್ಲ. ಕತೆ, ಕವಿತೆ ಮೊದಲಾದುವನ್ನು ಕಲ್ಪಿಸಿಕೊಳ್ಳುವಶ್ಟೇ ಓದುಗರಿಗೆ ತಲಪುವ ಹಾಗೆ ಅವನ್ನು ಬರೆಯುವುದೂ ಮುಕ್ಯವಾದ ಕೆಲಸವಾಗಿದೆ. ಈ ಎರಡನೇ ಕೆಲಸವನ್ನು ನಡೆಸುವುದು ಹೇಗೆ ಎಂಬುದನ್ನು ಕಲಿಯಬೇಕೆಂದಿರುವವರಿಗೆ ಸೊಲ್ಲರಿಮೆಯ (ವ್ಯಾಕರಣದ) ತಿಳಿವು ಹಲವು ಬಗೆಗಳಲ್ಲಿ ನೆರವಿಗೆ ಬರಬಲ್ಲುದು. ಇದಲ್ಲದೆ, ಹಲವು ಮಂದಿ ಬರಹಗಾರರಿಗೆ ತಮ್ಮ ಬರಹವನ್ನು ಸಾವಗಿಸುವುದು ಹೇಗೆ ಎಂಬುದು ತಿಳಿದಿರುವುದಿಲ್ಲ.

ಅವುಗಳಲ್ಲಿ ಬರುವ ಕೆಲವು ಕುರಳು(ಪಾರಾ)ಗಳನ್ನು ಅವರು ಒಂದೆರಡು ಪುಟಗಳಶ್ಟು ಉದ್ದಕ್ಕೂ ಎಳೆಯುತ್ತಿರುತ್ತಾರೆ. ಇದರಿಂದಾಗಿ ಅವನ್ನು ಓದುವವರಿಗೆ ಉಸಿರುಕಟ್ಟಿದ ಹಾಗಾಗುತ್ತದೆ. ತಡೆ(,), ಅರೆಕೊನೆ(;), ಅಡ್ಡಗೆರೆ(-) ಮೊದಲಾದ ಬರಹದ ಗುರುತುಗಳನ್ನೂ ಅವರು ಸರಿಯಾಗಿ ಬಳಸುವುದಿಲ್ಲ. ಹಾಗಾಗಿ, ಅವರ ಬರಹಗಳು ಚನ್ನಾಗಿದ್ದರೂ ಹೆಚ್ಚಿನ ಓದುಗರಿಗೂ ತೊಡಕಿನವಾಗಿ ಕಾಣಿಸುತ್ತವೆ. ಬರಹದ ಗುರುತುಗಳನ್ನು ಸರಿಯಾಗಿ, ಓದುಗರಿಗೆ ನೆರವಾಗುವ ಹಾಗೆ, ಬಳಸಬೇಕಿದ್ದಲ್ಲಿ ಅದಕ್ಕೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಬಣ್ಣಗಳ ಅರಿವು ಕಲೆಗಾರರಿಗೆ ಹೇಗೆ ನೆರವು ನೀಡಬಲ್ಲುದೋ ಹಾಗೆಯೇ ಸೊಲ್ಲುಗಳ ಅರಿವು ನಲ್ಬರಹಗಾರರಿಗೂ ನೆರವು ನೀಡಬಲ್ಲುದು.

ಕನ್ನಡದಲ್ಲಿ ಎಂತಹ ಸೊಲ್ಲುಗಳು ಬಳಕೆಯಲ್ಲಿವೆ, ಅವುಗಳ ನಡುವಿನ ವ್ಯತ್ಯಾಸಗಳು ಎಂತಹವು, ಓದುಗರ ಮೇಲೆ ಅವು ಎಂತಹ ಪರಿಣಾಮವನ್ನು ಬೀರುತ್ತವೆ ಎಂಬಂತಹ ವಿಶಯಗಳನ್ನು ತಿಳಿಯಲು ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ. ಎತ್ತುಗೆಗಾಗಿ, ಒಂದು ಕತೆಯಲ್ಲಿ ಒಬ್ಬ ವ್ಯಕ್ತಿಯ ಪರಿಚೆಯನ್ನು ಮಾಡಿಕೊಡಬೇಕಾದಾಗ, ಎಸಕ(ಕ್ರಿಯಾ)ಪದಗಳಿಲ್ಲದಿರುವ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬಳಸಬೇಕಾಗುತ್ತದೆ; ಇದಕ್ಕೆ ಬದಲು, ಕತೆ ಬಹಳ ಬೇಗನೆ ಮುಂದಕ್ಕೆ ಹೋಗುವಂತೆ ಮಾಡಬೇಕಿದ್ದಲ್ಲಿ ಎಸಕ ಪದಗಳಿರುವಂತಹ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬಳಸಬೇಕಾಗುತ್ತದೆ. ಇಂತಹ ಚಿಕ್ಕ ಚಿಕ್ಕ ಸೊಲ್ಲುಗಳ ಬದಲು, ಹಲವಾರು ಒಳಸೊಲ್ಲುಗಳಿರುವ ಉದ್ದುದ್ದವಾದ ಸಿಕ್ಕಲು ಸೊಲ್ಲುಗಳನ್ನು ಬಳಸಿದಲ್ಲಿ, ಕತೆಯ ವೇಗ ಕಡಿಮೆಯಾಗಿ, ಅದು ತುಂಬಾ ಮೆಲ್ಲನೆ ಸಾಗುವಂತಾಗುತ್ತದೆ.

ಎಸಕ ಪದಗಳಲ್ಲಿ ಕೆಲವು ತೀರಾ ಬಡವಾಗಿರುತ್ತವೆ; ಆದರೆ ಇನ್ನು ಕೆಲವು ತುಂಬಾ ಹುಲುಸಾಗಿದ್ದು, ಎಸಕಗಳನ್ನು ಎದ್ದುಕಾಣುವಂತೆ ಓದುಗರ ಮುಂದಿರಿಸಬಲ್ಲುವು. ಎತ್ತುಗೆಗಾಗಿ, ಇರು, ಮಾಡು, ಆಗು, ಹೇಳು, ತಿನ್ನು, ನಡೆ, ಬರು ಮೊದಲಾದುವು ತೀರಾ ಬಡವಾಗಿರುವ ಎಸಕ ಪದಗಳು. ಅವನ್ನು ಬಳಸಿರುವಲ್ಲೂ ಎಸಕಗಳು ಎದ್ದುಕಾಣಿಸುವ ಹಾಗೆ ಮಾಡಬೇಕಿದ್ದರೆ, ಅವಕ್ಕೆ ಯಾವುದಾದರೊಂದು ಪರಿಚೆಪದವನ್ನು ಸೇರಿಸಬೇಕಾಗುತ್ತದೆ (ಕತಕತನೆ ಕುದಿಯಿತು, ದೊಪ್ಪನೆ ಬಿತ್ತು, ತಟಕ್ಕನೆ ಹೇಳಿದಳು). ಆದರೆ ಈ ರೀತಿ ಪರಿಚೆ ಪದಗಳನ್ನು ಸೇರಿಸಿ ಹೇಳುವುದಕ್ಕಿಂತಲೂ, ಅಂತಹ ಪರಿಚೆಗಳನ್ನು ಒಳಗೊಂಡಿರುವ ಹುಲುಸುಪದಗಳನ್ನು ಬಳಸುವುದು ಹೆಚ್ಚು ಒಳ್ಳೆಯದು. ನುಗ್ಗು, ಮುತ್ತು, ಚಿವುಟು, ದುಮುಕು, ನುಸುಳು ಮೊದಲಾದುವು ಇಂತಹ ಪರಿಚೆಗಳನ್ನು ಒಳಗೊಂಡಿರುವ ಹುಲುಸುಪದಗಳು. ಅವನ್ನು ಬಳಸಿರುವಲ್ಲಿ ಸೊಲ್ಲುಗಳು ಹೆಚ್ಚು ಅಡಕವಾಗಿಯೂ ಇರುತ್ತವೆ.

ಜನರು ಒಳಗೆ ಹೋದರು ಎಂಬ ಸೊಲ್ಲು ತಿಳಿಸುವ ಎಸಕವನ್ನೇ ಜನರು ಒಳಗೆ ನುಗ್ಗಿದರು ಎಂಬುದು ನಿಜಕ್ಕೂ ಏನು ನಡೆಯಿತು ಎಂಬುದನ್ನು ಹೆಚ್ಚು ಚನ್ನಾಗಿ, ಕಣ್ಣಿಗೆ ಕಟ್ಟುವಂತೆ ತಿಳಿಸುತ್ತದೆ. ಇಂತಹದೇ ವ್ಯತ್ಯಾಸವನ್ನು ಅವನು ಕೆಳಗೆ ಹಾರಿದ ಎನ್ನುವುದಕ್ಕೂ ಅವನು ಕೆಳಗೆ ದುಮುಕಿದ ಎನ್ನುವುದಕ್ಕೂ ನಡುವೆ ಕಾಣಬಹುದು. ಸನ್ನಿವೇಶಕ್ಕೆ ತಕ್ಕ ಹಾಗೆ ಇಂತಹ ಹೆಚ್ಚು ಹುಲುಸಾಗಿರುವ ಪದಗಳನ್ನು ಆರಿಸಿಕೊಳ್ಳುವ ಜಾಣ್ಮೆ ಬರಹಗಾರರಿಗಿರಬೇಕು. ಈ ಅಳವನ್ನು ಪಡೆಯುವಲ್ಲಿ ಬರಹಗಾರರಿಗೆ ಸೊಲ್ಲರಿಮೆ ನೆರವು ನೀಡಬಲ್ಲುದು. ಹುಲುಸಾಗಿರುವ ಎಸಕಪದ ಸಿಗದಿದ್ದಲ್ಲಿ ಅಣಕು ಪದಗಳನ್ನು ಬಳಸಬೇಕಾಗುತ್ತದೆ.

ಕನ್ನಡದಲ್ಲಿ ಇಂತಹ ಎರಡು ಬಗೆಯ ಪದಗಳು ಬಳಕೆಯಲ್ಲಿವೆ: ಚಿಲ್ಲನೆ, ತಟ್ಟನೆ, ದುಡುಮ್ಮನೆ, ತಟಾರನೆ, ದಿಡೀರನೆ ಮೊದಲಾದ ಒತ್ತುಬರಿಗೆ ಇಲ್ಲವೇ ಉದ್ದ ತೆರೆಯುಲಿಯಿರುವ ಪದಗಳು, ಮತ್ತು ಚಟಚಟನೆ, ದಡದಡನೆ, ಪಳಪಳನೆ ಮೊದಲಾದ ಒತ್ತುಬರಿಗೆ ಇಲ್ಲವೇ ಉದ್ದ ತೆರೆಯುಲಿಯಿಲ್ಲದ ಪದಗಳು. ಇವುಗಳಲ್ಲಿ ಮೊದಲನೇ ಬಗೆಯ ಪದಗಳು ಒಮ್ಮೆಗೇನೇ ನಡೆದು ಹೋಗುವ ಎಸಕಗಳ ಪರಿಚೆಯನ್ನು ಸೂಚಿಸುತ್ತವೆ; ಇದನ್ನು ದೊಪ್ಪನೆ ಕೆಳಗೆ ಬಿತ್ತು, ಗಬಕ್ಕನೆ ಬಾಯಿ ಹಾಕಿತು, ಬುರ್ರನೆ ಹಾರಿಹೋಯಿತು ಮೊದಲಾದ ಎತ್ತುಗೆಗಳಲ್ಲಿ ಕಾಣಬಹುದು. ಎರಡನೇ ಬಗೆಯ ಪದಗಳು ತುಸು ಹೊತ್ತು ನಡೆಯುತ್ತಿರುವ ಎಸಕಗಳ ಪರಿಚೆಯನ್ನು ಸೂಚಿಸುತ್ತವೆ. ಎಲ್ಲರೂ ದಡದಡನೆ ಇಳಿದು ಬಂದರು, ಪಳಪಳನೆ ಹೊಳೆಯುತ್ತಿತ್ತು, ಗಬಗಬನೆ ತಿಂದುಮುಗಿಸಿದ ಮೊದಲಾದ ಎತ್ತುಗೆಗಳಲ್ಲಿ ಇದನ್ನು ಕಾಣಬಹುದು.

ಅಣಕುಪದಗಳ ನಡುವಿರುವ ಈ ವ್ಯತ್ಯಾಸವನ್ನು ಗಮನಿಸದಿದ್ದಲ್ಲಿ ತೊಂದರೆಯಾಗುತ್ತದೆ: ಎತ್ತುಗೆಗಾಗಿ, ದಡಕ್ಕೆಂದು ಗಾಡಿ ಕೊರಕಲಲ್ಲಿ ಬಿದ್ದು ಎದ್ದು ಕುಲುಕಾಡುತ್ತ ಸಾಗಿತ್ತು ಎಂಬ ಸೊಲ್ಲಿನಲ್ಲಿ ತುಸು ಹೊತ್ತು ನಡೆಯುತ್ತಿರುವ ಒಂದು ಎಸಕವನ್ನು ಸೂಚಿಸಲಾಗಿದೆ; ಆದರೆ, ಇದರಲ್ಲಿ ಒಮ್ಮೆಗೇನೇ ನಡೆದು ಹೋಗುವಂತಹ ಎಸಕದ ಪರಿಚೆಯನ್ನು ಸೂಚಿಸಬಲ್ಲ ದಡಕ್ಕನೆ ಎಂಬ ಅಣಕು ಪದವನ್ನು ಬಳಸಲಾಗಿದೆ, ಮತ್ತು ಇದರಿಂದಾಗಿ ಈ ಸೊಲ್ಲು ಅಶ್ಟು ಚನ್ನಾಗಿ ಓದಿಸಿಕೊಂಡು ಹೋಗುವುದಿಲ್ಲ. ಇದಕ್ಕೆ ಬದಲು, ತುಸು ಹೊತ್ತು ನಡೆಯುವಂತಹ ಎಸಕದ ಪರಿಚೆಯನ್ನೇ ತಿಳಿಸಬಲ್ಲ ದಡದಡನೆ ಎಂಬಂತಹ ಅಣಕು ಪದವನ್ನು ಬಳಸಿದಲ್ಲಿ ಅದು ಹೆಚ್ಚು ಚನ್ನಾಗಿ ಓದಿಸಿಕೊಂಡು ಹೋಗಬಲ್ಲುದು.

ಬರಹದಲ್ಲಿ ಬರುವ ಕೆಲವು ಸೊಲ್ಲುಗಳು ಯಾಕೆ ಅಶ್ಟು ಚನ್ನಾಗಿ ಓದಿಸಿ ಕೊಂಡು ಹೋಗುತ್ತವೆ, ಮತ್ತು ಬೇರೆ ಕೆಲವು ಸೊಲ್ಲುಗಳು ಯಾಕೆ ಆ ರೀತಿ ಓದಿಸಿಕೊಂಡು ಹೋಗುವುದಿಲ್ಲ ಎಂಬುದನ್ನು ತಿಳಿಯಲು, ಮತ್ತು ಚನ್ನಾಗಿ ಓದಿಸಿಕೊಂಡು ಹೋಗದಿರುವ ಸೊಲ್ಲೊಂದು ತಮ್ಮ ಬರಹದಲ್ಲಿ ಬಂದಿದೆಯಾದರೆ, ಅದನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯಲು ಸೊಲ್ಲರಿಮೆಯ ತಿಳಿವು ಈ ರೀತಿ ಬರಹಗಾರರ ನೆರವಿಗೆ ಬರಬಲ್ಲುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಕಲಿಕೆ ಮತ್ತು ಅರಕೆ

ನುಡಿಯರಿಮೆಯ ಇಣುಕುನೋಟ – 19

ಯಾವುದಾದರೂ ಒಂದು ವಿಶಯವನ್ನು ಕಲಿಯುವುದಕ್ಕೂ, ಅದರ ಮೇಲೆ ಅರಕೆ (ಸಂಶೋದನೆ) ನಡೆಸುವುದಕ್ಕೂ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ; ನಾವು ಎತ್ತಿಕೊಂಡ ವಿಶಯದ ಮೇಲೆ ಬೇರೆ ಬೇರೆ ಹೊತ್ತಗೆಗಳಲ್ಲಿ, ಬಿಡಿ ಬರಹಗಳಲ್ಲಿ, ಮತ್ತು ಅವನ್ನು ಓದಿ ತಿಳಿದುಕೊಂಡಿರುವ ತಿಳಿವಿಗರಲ್ಲಿ ಸಾಕಶ್ಟು ತಿಳಿವುಗಳು ಕಲೆತಿರುತ್ತವೆ. ಅಂತಹ ಹೊತ್ತಗೆ ಮತ್ತು ಬಿಡಿ ಬರಹಗಳನ್ನು ಓದಿ, ತಿಳಿವಿಗರು ಹೇಳುವುದನ್ನು ಕೇಳಿ, ಆ ವಿಶಯದ ಕುರಿತು ತಿಳಿವನ್ನು ಕಲೆಹಾಕುವುದಕ್ಕೆ ಕಲಿಕೆ ಎಂದು ಹೆಸರು.

ಅರಕೆ ಎಂಬುದು ಇದಕ್ಕಿಂತ ತೀರ ಬೇರಾದುದು; ಒಂದು ವಿಶಯದ ಕುರಿತು ತಮ್ಮ ಸಮಾಜದಲ್ಲಿ ಕಲೆತಿರುವ ತಿಳಿವಿನಲ್ಲಿ ತಪ್ಪುಗಳು ಏನಾದರೂ ಇವೆಯೇ, ಮತ್ತು ಆ ವಿಶಯದ ಕುರಿತಾಗಿ ಯಾರಿಗೂ ತಿಳಿಯದಿರುವಂತಹ ಹೊಸ ಸಂಗತಿಗಳೇನಾದರೂ ಇವೆಯೇ ಎಂಬುದನ್ನು ಕಂಡುಹಿಡಿಯುವುದೇ ಅರಕೆ.

ಈ ವ್ಯತ್ಯಾಸದಂತೆ, ಒಂದು ವಿಶಯವನ್ನು ನಮಗೆ ಕಲಿಯಬೇಕೆಂದಿದ್ದಲ್ಲಿ ಅದಕ್ಕೆ ಕಲಿಸುಗರ ನೆರವು ಬೇಕಾಗುತ್ತದೆ; ಆದರೆ, ಒಂದು ವಿಶಯದ ಕುರಿತು ಅರಕೆಯನ್ನು ನಡೆಸಬೇಕೆಂದಿದ್ದಲ್ಲಿ, ಅದಕ್ಕೆ ನಮಗೆ ‘ದಾರಿತೋರುಗರ’ ನೆರವು ಬೇಕಾಗುತ್ತಲ್ಲದೆ ಕಲಿಸುಗರ ನೆರವು ಬೇಕಾಗುವುದಿಲ್ಲ.

ಕಲಿಯುವವರ ಮಟ್ಟಿಗೆ ಕಲಿಸುಗರೆಂದರೆ ಎಲ್ಲವನ್ನೂ ತಿಳಿದವರು; ಕಲಿಯುವವರಲ್ಲಿ ಏಳುವ ಸಂಶಯಗಳನ್ನೆಲ್ಲ ಇಲ್ಲವಾಗಿಸುವ ಅಳವು ಅವರಿಗಿದೆ; ಹಾಗಾಗಿ, ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕಿವಿಗೊಟ್ಟು ಕೇಳಿ, ಅದನ್ನು ಸರಿಯಾಗಿ ತಿಳಿದುಕೊಳ್ಳುವುದೇ ಕಲಿಗರು ಮಾಡಬೇಕಾಗಿರುವ ಮುಕ್ಯ ಕೆಲಸ.

ಆದರೆ, ಅರಕೆಯನ್ನು ನಡೆಸುವವರ ಮಟ್ಟಿಗೆ ಎಲ್ಲವನ್ನೂ ತಿಳಿದವರು ಯಾರೂ ಇಲ್ಲ; ದಾರಿತೋರುಗರು ಅವರಿಗೆ ಯಾವ ರೀತಿಯಲ್ಲಿ ಅರಕೆಯನ್ನು ನಡೆಸಬಹುದು ಎಂಬುದನ್ನು ತಿಳಿಸಬಲ್ಲರಲ್ಲದೆ, ಅರಕೆಯ ಕೊನೆಯ ತೀರ‍್ಮಾನ ಹೇಗಿರಬಹುದು, ಇಲ್ಲವೇ ಹೇಗಿರಬೇಕು ಎಂಬುದನ್ನು ತಿಳಿಸಲಾರರು. ಅದನ್ನು ತಮ್ಮ ಅರಕೆಗಳ ಮೂಲಕ ಹೊಸದಾಗಿ ಕಂಡುಹಿಡಿಯುವುದೇ ಅರಕೆಯನ್ನು ನಡೆಸುವವರ ಮುಕ್ಯ ಕೆಲಸ. ಈ ರೀತಿ, ಯಾರಿಗೂ ಗೊತ್ತಿಲ್ಲದಿರುವ ಸಂಗತಿಗಳನ್ನು ಕಂಡುಹಿಡಿಯುವ ಮೂಲಕ, ಮತ್ತು ತಪ್ಪು ತಪ್ಪಾಗಿ ತಿಳಿದುಕೊಂಡಿರುವ ಸಂಗತಿಗಳನ್ನು ಸರಿಪಡಿಸುವ ಮೂಲಕ ಸಮಾಜದಲ್ಲಿರುವ ತಿಳಿವಿನ ಬೊಕ್ಕಸವನ್ನು ಹಿರಿದಾಗಿಸುವುದೇ ಅರಕೆ ನಡೆಸುವವರ ಕೆಲಸವಾಗಿದೆ.

ಕಲಿಕೆಗೂ ಅರಕೆಗೂ ನಡುವೆ ವ್ಯತ್ಯಾಸವಿರುವ ಹಾಗೆ, ಕಲಿಕೆಯನ್ನು ಕೊಡಿಸುವ ಕಲಿಸುಗರಿಗೂ ಅರಕೆಯನ್ನು ನಡೆಸಲು ದಾರಿತೋರುಗರಿಗೂ ನಡುವೆ ವ್ಯತ್ಯಾಸವಿರುವುದು ಅವಶ್ಯ. ಕಲಿಸುಗನೊಬ್ಬ ತಾನು ಕಲಿಸುವ ವಿಶಯವನ್ನು ಸರಿಯಾಗಿ ತಿಳಿದಿರಬೇಕು ಮಾತ್ರವಲ್ಲ, ತಾನು ತಿಳಿದಿರುವುದೆಲ್ಲವೂ ಸರಿ ಎಂಬ ಆತ್ಮವಿಶ್ವಾಸವೂ ಆತನಲ್ಲಿರಬೇಕು. ಈ ವಿಶಯದಲ್ಲಿ ಸ್ವಲ್ಪವಾದರೂ ಸಂಶಯವಿದೆಯಾದರೆ, ಆತ ಎದೆಗಾರಿಕೆಯಿಂದ ಕಲಿಗರಿಗೆ ಕಲಿಸಿಕೊಡಲಾರ.

ಆದರೆ, ಅರಕೆಯನ್ನು ನಡೆಸುವವರು, ಮತ್ತು ಅರಕೆಗೆ ದಾರಿ ತೋರಿಸುವವರು ಯಾವ ಹೇಳಿಕೆಯನ್ನೂ ಪೂರ‍್ತಿಯಾಗಿ ಸರಿಯೆಂದು ತಿಳಿದುಕೊಳ್ಳಬಾರದು. ಎಲ್ಲವನ್ನೂ ಸಂಶಯದಿಂದ ನೋಡಿದಾಗ ಮಾತ್ರ ಅವರ ಅರಕೆ ಮುಂದೆ ಹೋಗಬಲ್ಲುದು. ಎಂತಹ ದೊಡ್ಡ ತಿಳಿವಿಗರು ಹೇಳಿದ್ದನ್ನೂ ಹಾಗೆಯೇ ಒಪ್ಪಿಕೊಳ್ಳದೆ ವಿಚಾರಣೆಗೆ ಒಳಪಡಿಸಲು ಅವರು ಅಣಿಯಾಗಿರಬೇಕು.

ಈ ಕಾರಣಕ್ಕಾಗಿ, ಪರೀಕ್ಶೆಗಳಲ್ಲಿ ರ‍್ಯಾಂಕ್ ಗಳಿಸುವ ಕಲಿಗ ಉತ್ತಮ ಅರಕೆಗಾರನಾಗಬೇಕೆಂದೇನಿಲ್ಲ. ಇದೇ ರೀತಿಯಲ್ಲಿ, ಕಲಿಗರ ಅಚ್ಚುಮೆಚ್ಚಿನ ಕಲಿಸುಗ ಅರಕೆಗಳಿಗೆ ಒಳ್ಳೆಯ ದಾರಿತೋರುಗನಾಗಬೇಕೆಂದೂ ಇಲ್ಲ. ಕಲಿಯುವುದಕ್ಕೆ ಮತ್ತು ಕಲಿಸುವುದಕ್ಕೆ ಬೇಕಾಗುವ ಮನೋಬಾವ ಅರಕೆಗೆ ಮತ್ತು ಅದರ ದಾರಿತೋರಿಕೆಗೆ ಬೇಕಾಗುವ ಮನೋಬಾವಕ್ಕಿಂತ ತೀರ ಬೇರಾಗಿರುವುದೇ ಇದಕ್ಕೆ ಕಾರಣ.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಈ ಎರಡು ಕೆಲಸಗಳನ್ನೂ ಒಬ್ಬರೇ ಮಾಡಬೇಕಾಗುವುದರಿಂದ, ಹೆಚ್ಚಿನೆಡೆಗಳಲ್ಲೂ ಅರಕೆಯ ಹೆಸರಿನಲ್ಲಿ ಕಲಿಕೆ ಮಾತ್ರ ನಡೆಯುವುದು ಕಾಣಿಸುತ್ತದೆ. ಈ ಎರಡು ಬಗೆಯ ಕೆಲಸಗಳನ್ನು ಒಬ್ಬರಿಗೇನೇ ನಡೆಸಿಕೊಂಡು ಹೋಗಲು ಹೆಚ್ಚಿನವರಿಗೂ ಸಾದ್ಯವಾಗದಿರುವುದೇ ಇದಕ್ಕೆ ಕಾರಣ.

ಒಮ್ಮೆ ನನ್ನ ಮಿತ್ರರೊಬ್ಬರು ಡಾಕ್ಟರೇಟ್ ಪದವಿಗಾಗಿ ತಾವು ಬರೆದ ಪೆರ‍್ಬರಹವನ್ನು ನನಗೆ ತೋರಿಸಿದರು. ಅದನ್ನು ಓದಿದಾಗ ನನಗೆ ತುಂಬಾ ಆಶ್ಚರ‍್ಯವಾಯಿತು: ಮೂವತ್ತು ವರ‍್ಶಗಳಶ್ಟು ಹಳೆಯ ಸಿದ್ದಾಂತಗಳನ್ನು ಬಳಸಿ ಅವರು ಅದನ್ನು ಬರೆದಿದ್ದರು. ಆ ಸಿದ್ದಾಂತಗಳಲ್ಲಿ ಹೆಚ್ಚಿನವೂ ಸರಿಯಲ್ಲ ಎಂದು ಅವರಿಗೆ ಸ್ಪಶ್ಟವಾಗಿ ತಿಳಿದಿದ್ದರೂ ಅವರು ಹೀಗೆ ಮಾಡಿದ್ದರು. “ಇದು ಯಾಕೆ ಹೀಗೆ?” ಎಂದು ನಾನು ಕೇಳಿದಾಗ ಅವರು ಹೇಳಿದರು, “ನನ್ನ ದಾರಿತೋರುಗರು ತಮ್ಮ ಡಾಕ್ಟರೇಟ್ ಪೆರ‍್ಬರಹದಲ್ಲಿ ಈ ಸಿದ್ದಾಂತಗಳನ್ನು ಬಳಸಿದ್ದಾರೆ; ಈಗ ನಾನು ಹೊಸ ಸಿದ್ದಾಂತಗಳನ್ನು ಬಳಸಿದಲ್ಲಿ, ಅವರು ಹಿಂದೆ ಬರೆದಿದ್ದ ಪೆರ‍್ಬರಹ ಸರಿಯಲ್ಲ ಎಂಬುದಾಗಿ ನಾನು ಹೇಳಿದ ಹಾಗಾದೀತು. ಹಾಗೆ ಮಾಡಿದಲ್ಲಿ, ನನ್ನ ಪೆರ‍್ಬರಹಕ್ಕೆ ಅವರ ಒಪ್ಪಿಗೆ ಸಿಗಲಾರದು.”

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಜಾಗತಿಕ ಮಟ್ಟದ ಅರಕೆಗಳು ನಡೆಯದಿರುವುದಕ್ಕೆ ಒಂದು ಮುಕ್ಯವಾದ ಕಾರಣವನ್ನು ಇದು ಬಹಳ ಸ್ಪಶ್ಟವಾಗಿ ತಿಳಿಸುತ್ತದೆ. ತಮ್ಮ ದಾರಿತೋರಿಕೆಯಲ್ಲಿ ಪೆರ‍್ಬರಹಗಳನ್ನು ಬರೆಯುತ್ತಿರುವ ಅರಕೆಗಾರರು ತಾವು ಬರೆದಿರುವ ಪೆರ‍್ಬರಹಕ್ಕಿಂತ ಒಂದು ಹೆಜ್ಜೆ ಮುಂದೆ ಹೋದರೂ ಬೇಸರಪಟ್ಟುಕೊಳ್ಳುವ ತಿಳಿವಿಗರಿರುವಶ್ಟು ದಿವಸ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅರಕೆಗಳನ್ನು ನಡೆಸುವುದು ಅಸಾದ್ಯವೆಂದೇ ಹೇಳಬಹುದು. ತನ್ನ ಕಲಿಗನಿಂದ ಸೋಲನ್ನು ಬಯಸುವ ತಿಳಿವಿಗರು ಮಾತ್ರ ನಿಜಕ್ಕೂ ಅರಕೆಗೆ ದಾರಿತೋರಿಸಬಲ್ಲರು. ಅಂತಹ ತಿಳಿವಿಗರು ನಮ್ಮಲ್ಲಿ ಬೆರಳೆಣಿಕೆಯಶ್ಟೂ ಇಲ್ಲ ಎಂಬುದು ಬೇಸರದ ಸಂಗತಿ.

ಈ ಮಾತು ಎಶ್ಟು ಸರಿ ಎಂಬುದನ್ನು ಕನ್ನಡದ ಸೊಲ್ಲರಿಮೆಯ (ವ್ಯಾಕರಣದ) ಕುರಿತಾಗಿ ನಡೆದಿರುವ ಅರಕೆಗಳನ್ನು ಪರಿಶೀಲಿಸಿದಲ್ಲಿ ಗೊತ್ತಾಗಬಹುದು. ಕೇಶಿರಾಜನೇ ಮೊದಲಾದ ಕನ್ನಡದ ಸೊಲ್ಲರಿಗರು ಏನು ಹೇಳಿದ್ದಾರೆ ಎಂಬುದನ್ನು ಚರ‍್ಚಿಸುವುದು ಸೊಲ್ಲರಿಮೆಯ ಕಲಿಕೆಯಲ್ಲದೆ ಅರಕೆಯಲ್ಲ. ಅವರು ಬರೆದಿರುವ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ತಪ್ಪುಗಳೇನಾದರೂ ಇವೆಯೇ? ಇದ್ದರೆ ಅವನ್ನು ಇಲ್ಲವಾಗಿಸುವುದು ಹೇಗೆ? ಅವರು ಹೇಳದೇ ಇರುವಂತಹ ಸೊಲ್ಲರಿಮೆಯ ಕಟ್ಟಲೆಗಳು ಯಾವುವಾದರೂ ಇವೆಯೇ? ಇದ್ದರೆ ಅವು ಎಂತಹವು? ಎಂಬಂತಹ ವಿಶಯಗಳ ಕುರಿತು ಚರ‍್ಚೆ ನಡೆದಲ್ಲಿ ಮಾತ್ರ ಈ ಸೊಲ್ಲರಿಮೆಗಳ ಮೇಲೆ ಅರಕೆ ನಡೆದಿದೆಯೆಂದು ಹೇಳಬಹುದು.

ಹಳೆಗನ್ನಡದಲ್ಲಿ ದ, ದಪ, ಮತ್ತು ವ ಎಂಬ ಮೂರು ಹೊತ್ತಿನ ಒಟ್ಟುಗಳು (ಕಾಲಪ್ರತ್ಯಯಗಳು) ಬಳಕೆಯಾಗುತ್ತವೆ, ಮತ್ತು ಇವು ಹಿಂಬೊತ್ತು (ಬೂತ), ಈಪೊತ್ತು (ವರ‍್ತಮಾನ), ಮತ್ತು ಮುಂಬೊತ್ತು (ಬವಿಶ್ಯತ್) ಎಂಬ ಮೂರು ಹೊತ್ತುಗಳನ್ನು ತಿಳಿಸುತ್ತವೆ ಎಂಬುದಾಗಿ ಕೇಶಿರಾಜನೇ ಮೊದಲಾದ ಎಲ್ಲಾ ಕನ್ನಡದ ಸೊಲ್ಲರಿಗರೂ ಹೇಳುತ್ತಾರೆ. ಆದರೆ, ನಿಜಕ್ಕೂ ಈ ಹೇಳಿಕೆ ಸರಿಯಲ್ಲ; ಎತ್ತುಗೆಗಾಗಿ, ಪಂಪಬಾರತದ “ಸೆರಗಂ ಬಗೆದೊಡೆ ಸಾವಾದಪುದು” ಎಂಬ ಸೊಲ್ಲಿಗೆ ‘ಸಹಾಯವನ್ನು ಬಯಸಿದರೆ ಸಾವಾಗುತ್ತದೆ’ ಎಂಬ ಹುರುಳಿದ್ದು, ಅದರಲ್ಲಿ ಬಂದಿರುವ ದಪ ಒಟ್ಟಿಗೆ ಮುಂದೆ ಏನಾಗಬಲ್ಲುದು ಎಂಬುದನ್ನು ತಿಳಿಸುವ ಮುಂಬೊತ್ತಿನ ಹುರುಳಿದೆಯಲ್ಲದೆ ಈಗ ಏನಾಗುತ್ತಿದೆ ಎಂಬುದನ್ನು ತಿಳಿಸುವ ಈಪೊತ್ತಿನ ಹುರುಳಿಲ್ಲ.

ಆದರೆ, ಹಳೆಗನ್ನಡದ ಸೊಲ್ಲರಿಮೆಯ ಕುರಿತಾಗಿ ಅರಕೆ ನಡೆಸಿದವರು ಯಾರೂ ಇದನ್ನು ಗಮನಿಸಿದ ಹಾಗೆ ಕಾಣಿಸುವುದಿಲ್ಲ. ಇಂತಹ ಇನ್ನೂ ಹಲವಾರು ತಪ್ಪುಗಳು ಕೇಶಿರಾಜನೇ ಮೊದಲಾದ ಕನ್ನಡದ ಸೊಲ್ಲರಿಗರು ತಿಳಿಸುವ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಕಾಣಿಸುತ್ತವೆ; ಇದಲ್ಲದೆ, ಅವರು ಹೇಳದಿರುವಂತಹ ಬೇರೆ ಹಲವು ಕಟ್ಟಲೆಗಳೂ ಹಳೆಗನ್ನಡದ ಸೊಲ್ಲರಿಮೆಯನ್ನು ವಿವರಿಸಲು ಬೇಕಾಗುತ್ತವೆ. ಇವುಗಳಲ್ಲಿ ಕೆಲವನ್ನಾದರೂ ಪಟ್ಟಿಮಾಡಬಲ್ಲವರು ಮಾತ್ರ ನಿಜಕ್ಕೂ ಹಳೆಗನ್ನಡದ ಮೇಲೆ ಅರಕೆ ನಡೆಸಿದ್ದಾರೆಂದು ಹೇಳಲು ಬರುತ್ತದೆ.

ಬೇರೆ ಬಗೆಯ ತಿಳಿವುಗಳ ಕುರಿತಾಗಿಯೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಮತ್ತು ಬೇರೆ ಬಗೆಯ ಅರಕೆಮನೆಗಳಲ್ಲಿ ಇವತ್ತು “ಅರಕೆ”ಗಳು ನಡೆಯುತ್ತಿವೆ; ಆದರೆ, ಇವುಗಳಲ್ಲಿ ಹೆಚ್ಚಿನವೂ ಮೇಲೆ ವಿವರಿಸಿದ ಹಾಗೆ ದಾರಿತಪ್ಪಿರುವ ಅರಕೆಗಳು; ಹೊಸ ತಿಳಿವನ್ನು ಕಂಡುಹಿಡಿಯುವ ಇಲ್ಲವೇ ಹಳೇ ತಿಳಿವನ್ನು ಸಾಣೆಗೆ ಹಿಡಿಯುವ ಉದ್ದೇಶ ಅವಕ್ಕಿಲ್ಲ. ಹಾಗಾಗಿ, ಅರಕೆಗಾರರಿಗೆ ಒಂದು ಡಿಗ್ರಿಯನ್ನು ಕೊಡಿಸುವ ಕೆಲಸವನ್ನಶ್ಟೇ ಅವು ನಡೆಸಬಲ್ಲುವು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮಕ್ಕಳಿಗೆ ಬರೆಯಲು ಕಲಿಸುವ ಬಗೆ

ನುಡಿಯರಿಮೆಯ ಇಣುಕುನೋಟ – 17

ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಮಕ್ಕಳ ಮಟ್ಟಿಗೆ ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಬರೆಯಬೇಕಿದ್ದಲ್ಲಿ ಅವರು ಒಂದೇ ಬಾರಿಗೆ ಹಲವಾರು ತೀರ‍್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ: ಯಾವ ವಿಶಯಗಳ ಕುರಿತು ಬರೆಯಬೇಕು, ಆ ವಿಶಯಗಳನ್ನು ಯಾವ ರೀತಿಯಲ್ಲಿ ಜೋಡಿಸಿಕೊಳ್ಳಬೇಕು, ಎಂತಹ ಪದಗಳನ್ನು ಬಳಸಬೇಕು, ಅವನ್ನು ಒಟ್ಟುಗೂಡಿಸಿ ಸೊಲ್ಲುಗಳನ್ನು ಹೇಗೆ ಕಟ್ಟಬೇಕು, ಅವನ್ನು ಬರೆಯುವಲ್ಲಿ ಯಾವ ಬರಿಗೆಗಳನ್ನು ಬಳಸಬೇಕು ಎಂಬುದನ್ನೆಲ್ಲ ಅವರು ಒಂದೇ ಬಾರಿಗೆ ತೀರ‍್ಮಾನಿಸಿಕೊಳ್ಳಬೇಕಾಗುತ್ತದೆ. ಹೀಗೆ ಮಾಡಲು ಬರುವುದಿಲ್ಲವಾದಲ್ಲಿ, ಅವರ ಬರೆಯುವ ಕೆಲಸ ಮುಂದಕ್ಕೆ ಹೋಗುವುದೇ ಇಲ್ಲ.

ಹೆಚ್ಚಿನ ಮಕ್ಕಳಿಗೂ ಈ ತೊಡಕು ತೊಡಕಾದ ಕೆಲಸವನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ. ಅದಕ್ಕೆ ಬೇಕಾಗುವ ಚಳಕಗಳನ್ನು ಒಂದೊಂದಾಗಿ ಕಲಿಯುವಂತೆ ಯಾರಾದರೂ ಅವರಿಗೆ ನೆರವನ್ನಿತ್ತರೆ ಮಾತ್ರ, ಅವರು ಅದನ್ನು ಕಲಿಯಬಲ್ಲರು. ಇಲ್ಲವಾದರೆ, ಬರೆಯುವ ಕೆಲಸ ತಮಗೆ ಹೇಳಿದ್ದಲ್ಲ ಎಂಬುದಾಗಿ ಅವರು ಅದರಿಂದ ದೂರವೇ ಉಳಿಯುತ್ತಾರೆ. ಪರೀಕ್ಶೆಗಳಲ್ಲಿ ಬರೆಯಬೇಕಾದುದನ್ನೆಲ್ಲ ಉರುಹೊಡೆದು ಬರೆಯುವುದನ್ನಶ್ಟೇ ಅವರು ಮಾಡಬಲ್ಲರು.

ಹಾಗಾಗಿ, ಮಕ್ಕಳಿಗೆ ಬರೆಯಲು ಕಲಿಸುವವರು ಅದಕ್ಕೆ ಬೇಕಾಗುವ ಚಳಕಗಳನ್ನು ಒಂದೊಂದಾಗಿ ಹತೋಟಿಗೆ ತಂದುಕೊಳ್ಳುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕು. ಬರಿಗೆ(ಅಕ್ಶರ)ಗಳನ್ನು ಬರೆಯಲು ಕಲಿಯುವ ಸಮಯದಲ್ಲಿ ಅವರು ಈ ಕಲಿಕೆಯನ್ನು ಸರಿಯಾದ ಓರಣ(ಕ್ರಮ)ದಲ್ಲಿ ನಡೆಸುವ ಹಾಗೆ ನೋಡಿಕೊಳ್ಳಬೇಕು.

ಮಕ್ಕಳ ಕಯ್ಬರಹ ಓದಬಲ್ಲುದಾಗಿರಬೇಕು, ಮತ್ತು ಬರವಣಿಗೆ ಸಲೀಸಾಗಿರಬೇಕು. ಸಲೀಸಾಗಿ ಬರೆಯಲು ಬಾರದವರಿಗೆ ಬೇರೆ ವಿಶಯಗಳ ಕುರಿತು ಆಲೋಚಿಸಲು ಸಮಯವೇ ಸಿಗುವುದಿಲ್ಲ. ಸಲೀಸಾಗಿ ಬರೆಯಬೇಕಿದ್ದಲ್ಲಿ, ಮಕ್ಕಳು ಬರಿಗೆಗಳನ್ನು ಬರೆಯುವ ಬಗೆ, ಬಳಪವನ್ನು ಹಿಡಿಯುವ ಬಗೆ, ಮತ್ತು ಕಾಗದವನ್ನು ಎದುರು ಇರಿಸಿಕೊಳ್ಳುವ ಬಗೆ ಸರಿಯಾಗಿರಬೇಕು.

ಕೆಲವು ಮಕ್ಕಳು ಬರೆಯುವಾಗ ಬಲಗಯ್ಯನ್ನು ಬಳಸುವ ಬದಲು ಎಡಗಯ್ಯನ್ನು ಬಳಸುತ್ತಾರೆ. ಆದರೆ, ಇಂತಹ ಮಕ್ಕಳು ಬಲಗಯ್ಯಲ್ಲಿ ಬರೆಯುವವರನ್ನು ನೋಡಿ, ಅವರು ಬರೆಯುವ ಹಾಗೆಯೇ ಬರೆಯತೊಡಗುತ್ತಾರೆ. ಇದರಿಂದಾಗಿ ಅವರು ತೊಂದರೆಗೊಳಗಾಗುತ್ತಾರೆ. ಯಾಕೆಂದರೆ, ಹಾಗೆ ಬರೆಯುವಾಗ ಅವರಿಗೆ ತಮ್ಮ ಕಯ್ಬೆರಳು ಅಡ್ಡ ಬರುತ್ತದೆ, ಮತ್ತು ತಾವು ಬರೆದುದೇನೆಂಬುದು ಕಾಣಿಸುವುದಿಲ್ಲ. ಅದು ಕಾಣಿಸುವಂತೆ ಮಾಡಲು, ಅವರು ತಮ್ಮ ಮಣಿಗಂಟನ್ನು ಬಗ್ಗಿಸಿ ಬರೆಯಹೊರಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅವರ ಬರವಣಿಗೆ ತುಂಬಾ ತೊಡಕಿನದಾಗಿಬಿಡುತ್ತದೆ.

ಎಡಗಯ್ಯಲ್ಲಿ ಬರೆಯುವ ಮಕ್ಕಳಿಗೆ ಅವರು ಬರೆಯಬೇಕಾಗಿರುವ ಬಗೆ ಹೇಗೆ ಎಂಬುದನ್ನು ಕಲಿಸಿಕೊಡಬೇಕು. ಬರೆಯುವ ಕಾಗದವನ್ನು ಇಲ್ಲವೇ ಪುಸ್ತಕವನ್ನು ಅವರು ಬಲಗಯ್ಯವರ ಹಾಗೆ ಎಡಕ್ಕೆ ತಿರುಗಿಸಿ ಇರಿಸಿಕೊಳ್ಳುವ ಬದಲು, ಬಲಕ್ಕೆ ತಿರುಗಿಸಿ ಇರಿಸಿಕೊಳ್ಳುವ ಹಾಗೆ ಮಾಡಬೇಕು, ಮತ್ತು ಪೆನ್ನನ್ನು ತುದಿಯಿಂದ ತುಸು ಮೇಲೆ ಹಿಡಿದುಕೊಳ್ಳಲು ಹೇಳಬೇಕು. ಬರೆಯುವಾಗ ಅವರು ಮಣಿಗಂಟನ್ನು ಬಗ್ಗಿಸಬಾರದು. ಎಡಗಯ್ಯವರಿಗೆ ತಕ್ಕುದಾಗಿರುವಂತಹ ಈ ಬರೆಯುವ ಬಗೆಯನ್ನು ಕಲಿತುಕೊಂಡಲ್ಲಿ ಮಾತ್ರ, ಅವರಿಗೆ ಸಲೀಸಾಗಿ ಬರೆಯಲು ಬರುತ್ತದೆ.

ಮಾತಿಗೂ ಬರಹಕ್ಕೂ ನಡುವೆ ಸೊಲ್ಲುಗಳ ರಚನೆಯಲ್ಲಿ ವ್ಯತ್ಯಾಸಗಳಿವೆಯಾದ ಕಾರಣ, ಬರೆಯಲು ಕಲಿಯುವ ಮಕ್ಕಳಿಗೆ ಬರಹಗಳಲ್ಲಿ ಎಂತಹ ಸೊಲ್ಲುಗಳನ್ನು ಬಳಸಬೇಕು ಎಂಬುದನ್ನೂ ಕಲಿಸಬೇಕಾಗುತ್ತದೆ. ಇಡೀ ಸೊಲ್ಲುಗಳನ್ನು ಬರೆಯುವುದು ಹೇಗೆ, ಚಿಕ್ಕ ಚಿಕ್ಕ ಸೊಲ್ಲುಗಳನ್ನು ಜೋಡಿಸಿ ಉದ್ದ ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ, ಒಂದು ಚಿಕ್ಕ ಸೊಲ್ಲಿನ ಒಳಗೆ ಬೇರೆ ಚಿಕ್ಕ ಸೊಲ್ಲುಗಳನ್ನು ಇರಿಸಿ ಸಿಕ್ಕಲು ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕಾಗುತ್ತದೆ. ಎಲ್ಲಾ ಮಕ್ಕಳಿಗೂ ಇದನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ.

ಸೊಲ್ಲುಗಳನ್ನು ಸೇರಿಸಿ ಕುರಳು(ಪಾರಾ)ಗಳನ್ನು ರಚಿಸುವ ಬಗೆಯನ್ನೂ ಅವರಿಗೆ ಕಲಿಸಿಕೊಡಬೇಕಾಗುತ್ತದೆ. ಒಳ್ಳೇ ಮಾದರಿ ಕುರಳುಗಳಲ್ಲಿ ಮೊದಲಿಗೆ ಮುಕ್ಯ ವಿಶಯವನ್ನು ಮುಂದಿಡುವ ಚಿಕ್ಕ ಸೊಲ್ಲಿರುತ್ತದೆ; ಆಮೇಲೆ, ಅದನ್ನು ಹೆಚ್ಚು ವಿವರವಾಗಿ ತಿಳಿಸುವ, ಮತ್ತು ಅದಕ್ಕೆ ಬೆಂಬಲ ನೀಡುವ ವಿಶಯಗಳು ಬರುತ್ತವೆ; ಮತ್ತು ಕೊನೆಯಲ್ಲಿ, ಮುಕ್ತಾಯಗೊಳಿಸುವ ಸೊಲ್ಲು ಬರುತ್ತದೆ. ಸೊಲ್ಲುಗಳನ್ನು ಈ ರೀತಿ ಒಂದಕ್ಕೊಂದು ಹೊಂದಿಕೊಳ್ಳುವ ಹಾಗೆ ಬರೆಯುವುದು ಹೇಗೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.

ಬರಹದಲ್ಲಿ ಬರುವ ಕುರಳುಗಳನ್ನು ಹೇಗೆ ಅಣಿಗೊಳಿಸುವುದು ಎಂಬುದನ್ನೂ ಅವರು ಕಲಿಯಬೇಕಾಗುತ್ತದೆ. ಇದು ಬೇರೆ ಬೇರೆ ಗುರಿಗಳಿಗಾಗಿ ಬಳಕೆಯಾಗುವ ಬರಹಗಳಲ್ಲಿ ಬೇರೆ ಬೇರಾಗಿರುತ್ತದೆ. ಒಂದು ಕತೆಯನ್ನು ಬರೆಯುವವರು ಅದರ ನೆಗಳ್ತೆ ಮುಂದೆ ಹೋಗುವುದಕ್ಕೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇದಕ್ಕೆ ಬದಲು, ಒಂದು ವಿಶಯದ ಮಟ್ಟಿಗೆ ಇನ್ನೊಬ್ಬರ ಒಪ್ಪಿಗೆ ಇಲ್ಲವೇ ಒಲವನ್ನು ಪಡೆಯಬೇಕೆಂದಿರುವವರು ಆ ವಿಶಯವನ್ನು ಓದುಗರ ಮುಂದಿರಿಸುವ ಮತ್ತು ಅದನ್ನು ಬೆಂಬಲಿಸುವ ವಿಚಾರಗಳನ್ನು ಕೊಡುವ ಬಗೆ ಹೇಗೆ ಎಂಬುದಕ್ಕೆ ಗಮನ ಕೊಡಬೇಕಾಗುತ್ತದೆ.

ಒಮ್ಮೆ ಬರೆದುದನ್ನು ಓದಿ ನೋಡಿ, ಅದು ಸರಿಯಿಲ್ಲವೆಂದು ಅನಿಸಿದಲ್ಲಿ ಅದನ್ನು ತಿದ್ದಿ ಸರಿಪಡಿಸುವುದು ಹೇಗೆ ಎಂಬುದನ್ನೂ ಮಕ್ಕಳು ತಿಳಿದಿರಬೇಕು. ಇದಕ್ಕಾಗಿ ಅವರು ತಾವು ಬರೆದಿರುವ ಸೊಲ್ಲನ್ನು ಬೇರೆ ಬೇರೆ ಬಗೆಗಳಲ್ಲಿ ಮಾರ‍್ಪಡಿಸುವುದು ಹೇಗೆ ಎಂಬುದನ್ನು ಕಲಿತಿರಬೇಕಾಗುತ್ತದೆ. ತಾವು ಬರೆದಿರುವ ಸೊಲ್ಲಿನ ಇಟ್ಟಳ (ಒಳರಚನೆ) ಎಂತಹದು, ಆ ಸೊಲ್ಲನ್ನು ಬೇರೆ ಯಾವ ಇಟ್ಟಳಗಳಿಗೆ ಮಾರ‍್ಪಡಿಸಬಹುದು ಎಂಬಂತಹ ಸೊಲ್ಲರಿಮೆಯ (ವ್ಯಾಕರಣದ) ತಿಳಿವು ಅವರಿಗಿದ್ದಲ್ಲಿ, ತಾವು ಬರೆದಿರುವ ಬರಹವನ್ನು ತಿದ್ದಿ ಸರಿಪಡಿಸುವ ಕೆಲಸವನ್ನು ಅವರು ಹೆಚ್ಚು ಚನ್ನಾಗಿ ನಡೆಸಬಲ್ಲರು.

ಬರವಣಿಗೆಯಲ್ಲಿ ಮಾಡಿರುವ ತಪ್ಪನ್ನು ಬರೆದವರೇ ಓದಿ ನೋಡಿ ಕಂಡುಕೊಳ್ಳುವಂತೆ ಮಾಡಿದಲ್ಲಿ, ಮತ್ತು ಅವು ಯಾಕೆ ತಪ್ಪಾಗಿವೆ ಎಂಬುದನ್ನೂ ತಿಳಿಯುವಂತೆ ಮಾಡಿದಲ್ಲಿ ಅವರ ಬರವಣಿಗೆ ಬೇಗನೆ ಮುಂದೆ ಸಾಗುತ್ತದೆ. ಬರೆದಶ್ಟೂ ಬರವಣಿಗೆ ಚನ್ನಾಗುತ್ತಾ ಹೋಗುತ್ತದೆ. ಹಾಗಾಗಿ, ಬರೆಯುವ ಸಂದರ‍್ಬಗಳು ಮಕ್ಕಳಿಗೆ ಹೆಚ್ಚು ಹೆಚ್ಚು ದೊರಕುವಂತೆ ಮಾಡಬೇಕು.

ಮಕ್ಕಳಿಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟಬೇಕೆಂಬುದು ಎಲ್ಲಕ್ಕಿಂತಲೂ ಮುಕ್ಯವಾದ ವಿಶಯ. ಏನನ್ನೇ ಬರೆಯಲಿ, ಅದು ಅವರಿಗೆ ನಲಿವನ್ನು ಮತ್ತು ಮೆಚ್ಚುಗೆಯನ್ನು ಕೊಡುವಂತಿರಬೇಕು. ಬೇರೆಯವರ ಒತ್ತಾಯಕ್ಕೆ ಬರೆಯುವ ಬರಹದಿಂದ ಅವರ ಬರವಣಿಗೆ ಒಳ್ಳೆಯದಾಗಲಾರದು.

ಏನಾದರೂ ಒಂದು ವಿಶಯವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂಬ ತುಡಿತ ಮಕ್ಕಳಲ್ಲಿರುತ್ತದೆ. ಶಾಲೆಯಿಂದ ಮನೆಗೆ ಬಂದೊಡನೆ, ಶಾಲೆಯಲ್ಲಿ ಇಲ್ಲವೇ ಅಲ್ಲಿಂದ ಬರುವಾಗ ದಾರಿಯಲ್ಲಿ ಏನಾಯಿತು ಎಂಬುದನ್ನು ತಾಯಿಗೆ ಆದಶ್ಟು ಬೇಗನೆ ತಿಳಿಸಿಬಿಡಬೇಕೆಂಬ ಆತುರದಲ್ಲಿ ಮಕ್ಕಳಿರುತ್ತಾರೆ. ಗೆಳೆಯರನ್ನು ಕಂಡೊಡನೆ ತಮಗೆ ತಿಳಿದಿರುವ ಹೊಸ ವಿಶಯವೊಂದನ್ನು ಅವರಿಗೆ ತಿಳಿಸುವ ಆತುರವೂ ಅವರಿಗಿರುತ್ತದೆ.

ತಮ್ಮ ಮನಸ್ಸಿನಲ್ಲಿರುವ ಇಂತಹ ವಿಶಯಗಳನ್ನು ಮಾತಿನ ಮೂಲಕ ಇನ್ನೊಬ್ಬರಿಗೆ ತಿಳಿಸುವ ಹಾಗೆ ಬರಹದ ಮೂಲಕವೂ ತಿಳಿಸಲು ಬರುತ್ತದೆ ಎಂಬುದನ್ನು ಅವರಿಗೆ ತೋರಿಸಿಕೊಟ್ಟಲ್ಲಿ, ಅವರು ಬಹಳ ಬೇಗನೆ ಬರವಣಿಗೆಯಲ್ಲಿ ಮುಂದೆ ಹೋಗುತ್ತಾರೆ. ಮೊದಲಿಗೆ ಅವರ ಹತ್ತಿರ ಮಾತಿನ ಮೂಲಕ ಒಂದು ವಿಶಯವನ್ನು ತಿಳಿಸಲು ಹೇಳಿ, ಅದನ್ನು ಕಲಿಸುವವರೇ ಬರೆದು ತೋರಿಸಬಹುದು, ಮತ್ತು ಹಾಗೆ ಬರೆದುದನ್ನು ಅವರಿಗೆ ಓದಲು ಕೊಡಬಹುದು. ಹೀಗೆ ಮಾಡುವುದರಿಂದ ಅವರಿಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟುತ್ತದೆ.

ಬರೆಯಲು ಕಲಿಯಬೇಕೆಂದಿರುವವರಿಗೆ ಎರಡು ಬಗೆಯ ಕಲಿಕೆಗಳು ನೆರವು ನೀಡಬಲ್ಲುವು: ಮೊದಲನೆಯದಾಗಿ, ಬರೆಯಲಿರುವ ವಿಶಯದ ಕುರಿತು ಅವರು ಏನೆಲ್ಲಾ ಹೇಳಬಲ್ಲರೋ ಅದನ್ನೆಲ್ಲ ಹೇಳಲು ಬಿಡಬೇಕು. ಇದರಿಂದ ಅವರಲ್ಲಿ ಆಲೋಚಿಸುವ ಕಸುವು ಬೆಳೆಯುತ್ತದೆ. ಎರಡನೆಯದಾಗಿ, ಅವರಿಗೆ ಬೇರೆ ಯಾವುದಾದರೂ ಬರಹವನ್ನು ಎತ್ತಿಬರೆಯಲು ಕಲಿಸಬೇಕು. ಹೀಗೆ ಬರೆಯುವಾಗ, ಅಂತಹ ಬರಹಗಳಲ್ಲಿ ಸೊಲ್ಲುಗಳನ್ನು ಮತ್ತು ಕುರಲುಗಳನ್ನು ಯಾವ ರೀತಿಯಲ್ಲಿ ಅಳವಡಿಸಲಾಗಿದೆ ಎಂಬುದನ್ನು ಅವರು ಗಮನಿಸುವ ಹಾಗೆಯೂ ಮಾಡಬೇಕು.

ಓದುವ ಮತ್ತು ಬರೆಯುವ ಕೆಲಸಗಳೆರಡೂ ಬಹಳ ಮಟ್ಟಿಗೆ ಒಂದನ್ನೊಂದು ಅವಲಂಬಿಸಿವೆ. ಹಾಗಾಗಿ, ಅವೆರಡನ್ನೂ ಮಕ್ಕಳು ಒಟ್ಟೊಟ್ಟಾಗಿ ಕಲಿತುಕೊಳ್ಳುವಂತೆ ಮಾಡಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮಕ್ಕಳಿಗೆ ಓದಲು ಕಲಿಸುವ ಬಗೆ

ನುಡಿಯರಿಮೆಯ ಇಣುಕುನೋಟ – 16

ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ತಾವಾಗಿಯೇ ಕಲಿತುಕೊಳ್ಳುತ್ತಾರೆ; ಕೆಲವರು ಈ ಕಲಿಕೆಯನ್ನು ಬೇಗನೆ ನಡೆಸಬಹುದು, ಮತ್ತು ಕೆಲವರು ಅದಕ್ಕಾಗಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಮಿದುಳಿನ ತೊಂದರೆಯಿಲ್ಲದ ಯಾವ ಮಗುವೂ ತನ್ನ ತಾಯ್ನುಡಿಯಲ್ಲಿ ಮಾತನಾಡಲು ಕಲಿಯದಿರುವುದಿಲ್ಲ.

ಹಾಗಾಗಿ, ಮಾತಿನ ಕಲಿಕೆಯನ್ನು ಮಕ್ಕಳು ಹುಟ್ಟಿನಿಂದಲೇ ಪಡೆದುಕೊಂಡು ಬಂದ ಅಳವೆಂದು ಹೇಳಲಾಗುತ್ತದೆ. ಆದರೆ, ಓದಿನ ಕಲಿಕೆ ಆ ರೀತಿಯದಲ್ಲ; ಹೆಚ್ಚಿನ ಮಕ್ಕಳಿಗೂ ಓದುವ ಬಗೆಯನ್ನು ಯಾರಾದರೂ ಕಲಿಸಿಕೊಟ್ಟಲ್ಲಿ ಮಾತ್ರ ಅವರು ಅದನ್ನು ಕಲಿಯುತ್ತಾರೆ. ಸಯ್ಕಲ್ ತುಳಿಯುವುದು, ಈಜುವುದು ಮೊದಲಾದವುಗಳ ಹಾಗೆ, ಓದು ಹುಟ್ಟಿನಿಂದ ಬರುವ ಅಳವಲ್ಲ; ಕಲಿತು ಪಡೆಯುವ ಅಳವು.

ಬರಹಗಳನ್ನು ಸಲೀಸಾಗಿ ಓದಲು ಕಲಿಯಬೇಕಾದರೆ, ಮಕ್ಕಳು ಕೆಲವು ಚಳಕ(ಕವ್ಶಲ್ಯ)ಗಳನ್ನು ತಮ್ಮದಾಗಿಸಿಕೊಳ್ಳಬೇಕಾಗುತ್ತದೆ: ಮಾತಿನಲ್ಲಿ ಬರುವ ಪದಗಳನ್ನೆಲ್ಲ ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬುದನ್ನು ಅವರು ಗಮನಿಸಬೇಕು, ಮತ್ತು ಪುಟಗಳಲ್ಲಿ ಬರುವ ಗುರುತುಗಳಿಗೂ ಈ ಮಾತಿನ ಉಲಿಗಳಿಗೂ ನಡುವೆ ಎಂತಹ ಸಂಬಂದವಿದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.

ಇದಲ್ಲದೆ, ಪುಟಗಳಲ್ಲಿ ಬರುವ ಈ ಗುರುತುಗಳ ಜೋಡಣೆಗಳಲ್ಲಿ ಪದ, ಪದಕಂತೆ ಮತ್ತು ಸೊಲ್ಲುಗಳನ್ನು ಕಾಣಲು, ಮತ್ತು ಅವುಗಳಿಂದ ಬರಹಗಾರನು ಏನು ಹೇಳುತ್ತಿದ್ದಾನೆ ಎಂಬುದನ್ನು (ಎಂದರೆ ಬರಹದ ಹುರುಳನ್ನು) ತಿಳಿಯಲು ಅವರು ಕಲಿಯಬೇಕು.

ಮಾತಿನಲ್ಲಿ ಬರುವ ಪದಗಳು ಉಲಿಗಳ ಸೇರಿಕೆಯಿಂದ ಉಂಟಾಗುತ್ತವೆ ಎಂಬುದನ್ನು ಗಮನಿಸುವಂತೆ ಮಾಡಲು ಮಕ್ಕಳಿಗೆ ಕೆಲವು ಆಟಗಳನ್ನು ಕಲಿಸಬಹುದು: ಮನೆ, ಮಾತು, ಮೋಡ, ಮುಗಿಲು ಎಂಬಂತಹ ಪದಗಳಲ್ಲೆಲ್ಲ ಮೊದಲಿಗೆ ಮಕಾರ ಬಂದಿದೆ, ಕೆಲವು ಪದಗಳಿಂದ ಈ ಮಕಾರವನ್ನು ತೆಗೆದು ಹಾಕಿದರೆ ಬೇರೊಂದು ಪದ ಸಿಗುತ್ತದೆ (ಮತ್ತೆ-ಅತ್ತೆ, ಮಾಡು-ಆಡು, ಮಿಡಿ-ಇಡಿ), ಕೆಲವು ಪದಗಳಲ್ಲಿ ಮಕಾರದ ಬದಲು ಕಕಾರವನ್ನು ಬಳಸಿದರೆ ಬೇರೆ ಪದ ಸಿಗುತ್ತದೆ (ಮತ್ತೆ-ಕತ್ತೆ, ಮಾಡು-ಕಾಡು, ಮಿಡಿ-ಕಿಡಿ) ಎಂಬಂತಹ ವಿಶಯಗಳನ್ನು ಅವರು ಗಮನಿಸುವ ಹಾಗೆ ಮಾಡಬಹುದು, ಮತ್ತು ಪದಗಳನ್ನು ಉಲಿಗಳಾಗಿ ಒಡೆಯುವ ಬಗೆಯನ್ನು ಕಲಿಸಬಹುದು. ಇದರಿಂದ, ಪದಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಅವರು ತಿಳಿಯುವ ಹಾಗೆ ಮಾಡಬಹುದು.

ಕನ್ನಡ ಬರಹದ ಪುಟಗಳಲ್ಲಿ ಕಾಣಿಸುವ ಗುರುತು(ಬರಿಗೆ)ಗಳಿಗೂ ಅವನ್ನು ಓದುವಲ್ಲಿ ಬಳಕೆಯಾಗುವ ಉಲಿಗಳಿಗೂ ನಡುವೆ ನೇರವಾದ ಸಂಬಂದವಿದೆ; ಇಂಗ್ಲಿಶ್ ಬರಹದಲ್ಲಿರುವ ಹಾಗೆ ಅದು ತೊಡಕು ತೊಡಕಾಗಿಲ್ಲ. ಹಾಗಾಗಿ, ಕನ್ನಡ ಬರಹಗಳನ್ನು ಓದಲು ಕಲಿಯುವ ಮಕ್ಕಳು ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಗಮನಿಸುವಂತೆ ಮಾಡುವುದು ಹೆಚ್ಚು ತೊಡಕಿನ ಕೆಲಸವಲ್ಲ. ಆದರೆ, ಸಂಸ್ಕ್ರುತದ ಎರವಲು ಪದಗಳಲ್ಲಿ ಬಳಕೆಯಾಗುತ್ತಿರುವ ಅಲ್ಪಪ್ರಾಣ-ಮಹಾಪ್ರಾಣ, ರು-ಋ, ಶ-ಷ ಮೊದಲಾದ ಹಲವು ವ್ಯತ್ಯಾಸಗಳು ಓದಿನಲ್ಲಿ ಕಾಣಿಸುವುದಿಲ್ಲ, ಮತ್ತು ಇವುಗಳಿಂದಾಗಿ ಉಲಿಗಳಿಗೂ ಬರಿಗೆಗಳಿಗೂ ನಡುವಿರುವ ಸಂಬಂದವನ್ನು ಗಮನಿಸುವಲ್ಲಿ ಹೆಚ್ಚಿನ ಮಕ್ಕಳೂ ಗೊಂದಲದಲ್ಲಿ ಬೀಳುತ್ತಾರೆ. ಹಾಗಾಗಿ, ಕನ್ನಡದ ಮಟ್ಟಿಗೆ ಅನವಶ್ಯಕವಾಗಿರುವ ಈ ವ್ಯತ್ಯಾಸಗಳನ್ನು ಮಕ್ಕಳ ಓದಿನಿಂದ ದೂರ ಇರಿಸುವುದು ಒಳ್ಳೆಯದು.

ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ತಿಳಿಯುವುದು ಬರಹವನ್ನು ಓದಲು ಕಲಿಯುವಲ್ಲಿ ತುಂಬಾ ಮುಕ್ಯವಾದ ಕೆಲಸ. ಈ ನಂಟನ್ನು ತಿಳಿದುಕೊಂಡವರಿಗೆ ತಮಗೆ ಗೊತ್ತಿರುವ ಪದಗಳನ್ನು ಮಾತ್ರವಲ್ಲದೆ ಗೊತ್ತಿಲ್ಲದ ಪದಗಳನ್ನೂ ಓದಲು ಬರುತ್ತದೆ. ಈ ನಂಟನ್ನು ತಿಳಿಯದ ಮಕ್ಕಳು ಪದಗಳನ್ನು ಚಿತ್ರಗಳ ಹಾಗೆ ಇಡಿ ಇಡಿಯಾಗಿ ಓದಲು ಹೋಗುತ್ತಾರೆ, ಮತ್ತು ಇದರಿಂದಾಗಿ ಬರಹದಲ್ಲಿ ಹೊಸ ಪದಗಳು ಕಾಣಿಸಿಕೊಂಡಾಗ ಅವರ ಓದು ಮುಂದೆ ಸಾಗುವುದಿಲ್ಲ.

ಇತ್ತೀಚೆಗೆ ನಡೆಸಿದ ಹಲವು ಮಿದುಳಿನ ಅರಕೆಗಳು ಓದಿನಲ್ಲಿ ಬೇಗನೆ ಮುಂದೆ ಹೋಗುವ ಮಕ್ಕಳಿಗೂ ಹಿಂದೆ ಬೀಳುವ ಮಕ್ಕಳಿಗೂ ನಡುವೆ ಅವರು ಪದಗಳನ್ನು ಓದುವ ಬಗೆಯಲ್ಲೇ ಇಂತಹ ವ್ಯತ್ಯಾಸವಿದೆಯೆಂಬುದನ್ನು ಸ್ಪಶ್ಟವಾಗಿ ತೋರಿಸಿಕೊಟ್ಟಿವೆ. ಓದಿನಲ್ಲಿ ಬೇಗನೆ ಮುಂದೆ ಹೋಗುವ ಮಕ್ಕಳು ಓದುತ್ತಿರುವಾಗ, ಅವರ ಮಿದುಳಿನಲ್ಲಿ ಮೂರು ಜಾಗಗಳು ಮಿಂಚುತ್ತಿರುತ್ತವೆ: ಬರಿಗೆಗಳನ್ನು ಗುರುತಿಸುವ ಕಣ್ಣಿಗೆ ಸಂಬಂದಿಸಿದ ಜಾಗ, ಅವನ್ನು ಉಲಿಗಳೊಂದಿಗೆ ಜೋಡಿಸುವ ಕಿವಿಗೆ ಸಂಬಂದಿಸಿದ ಜಾಗ, ಮತ್ತು ಅವನ್ನು ಹುರುಳಿನೊಂದಿಗೆ ಸಂಬಂದಿಸುವ ಮಿದುಳಿನ ಹಿಂಬಾಗದಲ್ಲಿರುವ ಜಾಗ. ಓದಿನಲ್ಲಿ ಹಿಂದೆ ಬೀಳುವ ಮಕ್ಕಳು ಓದುತ್ತಿರುವಾಗ, ಅವರ ಮಿದುಳಿನಲ್ಲಿ ಕಣ್ಣಿಗೆ ಮತ್ತು ಹುರುಳಿಗೆ ಸಂಬಂದಿಸಿದ ಜಾಗಗಳು ಮಾತ್ರ ಮಿಂಚುತ್ತಿರುತ್ತವಲ್ಲದೆ, ಕಿವಿಗೆ ಸಂಬಂದಿಸಿದ ಜಾಗ ಮಿಂಚುತ್ತಿರುವುದಿಲ್ಲ. ಎಂದರೆ, ಪದಗಳನ್ನು ಬರಿಗೆಗಳಾಗಿ ಒಡೆದು, ಅವನ್ನು ಉಲಿಗಳೊಂದಿಗೆ ಸಂಬಂದಿಸಿ ಓದುವುದು ಹೇಗೆ ಎಂಬುದನ್ನು ಅವರು ಕಲಿತಿಲ್ಲ.

ಒಮ್ಮೆ ಪದಗಳನ್ನು ಬರಿಗೆಗಳಾಗಿ ಬಿಡಿಸಿ, ಅವನ್ನು ಉಲಿಗಳೊಂದಿಗೆ ಸಂಬಂದಿಸಲು ಕಲಿತಮೇಲೆ, ಆಗಾಗ ಬರುವ ಪದಗಳನ್ನು ಇಡಿ ಇಡಿಯಾಗಿ ಗುರುತಿಸಿ ಓದುವ ಬಗೆಯನ್ನೂ ಮಕ್ಕಳು ಕಲಿತುಕೊಳ್ಳಬೇಕಾಗುತ್ತದೆ; ಯಾಕೆಂದರೆ, ಬರಹಗಳನ್ನು ಬೇಗನೆ ಮತ್ತು ಸಲೀಸಾಗಿ ಓದಲು ಇಂತಹ ಕಲಿಕೆಯೂ ಬೇಕಾಗುತ್ತದೆ. ಆದರೆ, ಆಮೇಲೆಯೂ, ಅಪರೂಪಕ್ಕೆ ಬರುವ ಪದಗಳನ್ನು ಮತ್ತು ಹೊಸ ಪದಗಳನ್ನು ಓದಲು ಅವನ್ನು ಬರಿಗೆಗಳಾಗಿ ಒಡೆದು ಉಲಿಗಳೊಂದಿಗೆ ಸಂಬಂದಿಸುವ ಬಗೆ ಅವರಿಗೆ ಬೇಕಾಗುತ್ತದೆ.

ಬರಹಗಳಲ್ಲಿ ಬರುವ ಪದಗಳನ್ನು ಓದುವ ಬಗೆ ಹೇಗೆ ಎಂಬುದನ್ನು ಕಲಿತರೆ ಸಾಲದು, ಅವನ್ನು ಪದಕಂತೆಗಳಾಗಿ ಮತ್ತು ಸೊಲ್ಲುಗಳಾಗಿ ಜೋಡಿಸಿ, ಅವುಗಳಿಂದ ಹುರುಳನ್ನು ಪಡೆಯುವುದು ಹೇಗೆ ಎಂಬುದನ್ನೂ ಮಕ್ಕಳು ಕಲಿಯಬೇಕಾಗುತ್ತದೆ. ಅವರ ಓದು ಬೇಗನೆ ಮತ್ತು ಸಲೀಸಾಗಿ ನಡೆಯುತ್ತಿದೆಯಾದರೆ ಮಾತ್ರ ಅವರಿಗೆ ಈ ರೀತಿ ತಮ್ಮ ಓದಿನಿಂದ ಹುರುಳನ್ನು ಪಡೆಯಲು ಬರುತ್ತದೆ. ತುಂಬಾ ಮೆಲ್ಲಗೆ ಓದುವ ಮಕ್ಕಳಿಗೆ ಪದಗಳು ಮಾತ್ರ ಕಾಣಿಸುತ್ತವಲ್ಲದೆ ಪದಕಂತೆಗಳು ಇಲ್ಲವೇ ಸೊಲ್ಲುಗಳು ಕಾಣಿಸುವುದಿಲ್ಲ.

ಓದಲು ಕಲಿಯುತ್ತಿರುವ ಮಕ್ಕಳ ಮಿದುಳಿನಲ್ಲಿ ಮಾತಿನ ಪದನೆರಕೆ (ಪದಕೋಶ) ಮತ್ತು ಓದಿನ ಪದನೆರಕೆ ಎಂಬುದಾಗಿ ಎರಡು ಬಗೆಯ ಪದನೆರಕೆಗಳು ನೆಲೆಗೊಳ್ಳುತ್ತವೆ; ಇವುಗಳಲ್ಲಿ ಓದಿನ ಪದನೆರಕೆಯನ್ನು ಹಿಗ್ಗಿಸುವ ಮೂಲಕ ಮಕ್ಕಳು ಓದಿನಲ್ಲಿ ಮುಂದೆ ಬರುವಂತೆ ಮಾಡಬಹುದು. ಬಗೆ ಬಗೆಯ ಬರಹಗಳನ್ನು, ಮತ್ತು ಹೆಚ್ಚು ಹೆಚ್ಚು ಬರಹಗಳನ್ನು ಅವರು ಓದುವ ಹಾಗೆ ಮಾಡುವ ಮೂಲಕ ಅವರ ಈ ಓದಿನ ಪದನೆರಕೆಯನ್ನು ಹಿಗ್ಗಿಸಲು ಬರುತ್ತದೆ.

ಕೆಲವು ಮಂದಿ ತಾಯ್ತಂದೆಯರು ಪಟ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಮಕ್ಕಳು ಓದಬಾರದೆಂದು ಕಟ್ಟಲೆ ಮಾಡುತ್ತಾರೆ; ಕತೆ ಕಾದಂಬರಿಗಳನ್ನು ಓದಿ ಸಮಯ ಹಾಳುಮಾಡಬಾರದೆಂದು ಆಗಾಗ ಮಕ್ಕಳಿಗೆ ಹೇಳುತ್ತಿರುತ್ತಾರೆ. ಆದರೆ, ಬರೇ ಪಟ್ಯಪುಸ್ತಕಗಳನ್ನು ಮಾತ್ರವೇ ಓದುತ್ತಿದ್ದರೆ ಮಕ್ಕಳ ಓದಿನ ಪದನೆರಕೆ ತುಂಬಾ ಚಿಕ್ಕದಾಗಿಯೇ ಉಳಿಯುತ್ತದೆ. ಅದನ್ನು ಹಿಗ್ಗಿಸಬೇಕಿದ್ದಲ್ಲಿ ಅವರು ಎಲ್ಲಾ ಬಗೆಯ ಬರಹಗಳನ್ನೂ ಓದುತ್ತಿರಬೇಕು. ಹಾಗಾಗಿ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಮತ್ತು ಬೇರೆ ಬಗೆಯ ಬರಹಗಳನ್ನು ಅವರು ಓದುವಂತೆ ಮಾಡಬೇಕು.

ಓದಿನಲ್ಲಿ ತಮಗೆ ತಿಳಿಯದ ಪದ ಬಂದಾಗ, ಅದರ ಹುರುಳನ್ನು ಪದನೆರಕೆಯ ನೆರವಿನಿಂದ ಕಂಡುಹಿಡಿಯುವುದು ಹೇಗೆ ಎಂಬುದನ್ನೂ ಅವರಿಗೆ ತೋರಿಸಿಕೊಡಬೇಕು. ಪದನೆರಕೆಗಳಲ್ಲಿ ಪದಗಳಿಗೆ ಹಲವು ಹುರುಳುಗಳನ್ನು ಕೊಟ್ಟಿರುತ್ತಾರೆ. ಇವುಗಳಲ್ಲಿ ತಮ್ಮ ಓದಿಗೆ ಹೊಂದಿಕೆಯಾಗುವಂತಹದನ್ನು ಆರಿಸಿಕೊಳ್ಳುವುದು ಹೇಗೆ ಎಂಬುದನ್ನೂ ಅವರಿಗೆ ತೋರಿಸಿಕೊಡಬೇಕು. ಈ ರೀತಿ ತಮ್ಮ ಓದಿಗೆ ಪದನೆರಕೆಯ ನೆರವನ್ನು ಪಡೆಯಲು ಕಲಿತ ಮಕ್ಕಳ ಓದಿನ ಪದನೆರಕೆಯೂ ಬೇಗನೆ ಹಿಗ್ಗುತ್ತದೆ.

ಓದಿನಲ್ಲಿ ಹಿಂದೆ ಬೀಳುವ ಮಕ್ಕಳು ಬೇರೆ ವಿಶಯಗಳಲ್ಲೂ ಹಿಂದೆ ಬೀಳುತ್ತಾರೆ; ಯಾಕೆಂದರೆ, ಈ ಎಲ್ಲಾ ವಿಶಯಗಳ ಕಲಿಕೆಯನ್ನೂ ಅವರು ಓದಿನ ಮೂಲಕವೇ ನಡೆಸಬೇಕಾಗುತ್ತದೆ. ಹಾಗಾಗಿ, ಮಕ್ಕಳು ಬೇಗನೆ ಮತ್ತು ಸಲೀಸಾಗಿ ಓದಲು ಕಲಿಯುವಂತೆ ಮಾಡುವುದು, ಮತ್ತು ಇದಕ್ಕಾಗಿ ಅವರ ಓದು ಸರಿಯಾದ ಕ್ರಮದಲ್ಲಿ ಮುಂದುವರಿಯುವಂತೆ ಮಾಡುವುದು ತುಂಬಾ ಮುಕ್ಯವಾದ ಕೆಲಸವಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮಕ್ಕಳಿಗೆ ವ್ಯಾಕರಣ ಕಲಿಸಬೇಕೇ?

ನುಡಿಯರಿಮೆಯ ಇಣುಕುನೋಟ – 15

ಬೇಕು ಎನ್ನುತ್ತಿದ್ದಾರೆ ಇತ್ತೀಚೆಗೆ ಹಲವು ಮಂದಿ ತಿಳಿವಿಗರು; ಆದರೆ, ವ್ಯಾಕರಣವನ್ನು ಹಿಂದಿನ ಹಾಗೆ ಒಂದು ವಿಶಯವಾಗಿ ಕಲಿಸುವ ಬದಲು, ಮಕ್ಕಳ ಓದು ಮತ್ತು ಬರಹಗಳ ಕಲಿಕೆಗೆ ನೆರವಾಗುವ ಹಾಗೆ ನೇರವಲ್ಲದ ಬಗೆಯಲ್ಲಿ ಅದನ್ನು ಕಲಿಸಬೇಕು ಎಂಬುದು ಹೆಚ್ಚಿನ ತಿಳಿವಿಗರ ತೀರ‍್ಮಾನವಾಗಿದೆ.

ನಿಜಕ್ಕೂ ವ್ಯಾಕರಣದ ಕಟ್ಟಲೆಗಳನ್ನು ಮಕ್ಕಳಿಗೆ ಕಲಿಸುವುದು ತುಂಬಾ ತೊಡಕಿನ ಕೆಲಸ. ಯಾಕೆಂದರೆ, ಮೊದಲನೆಯದಾಗಿ, ಈ ಕಟ್ಟಲೆಗಳೆಲ್ಲ ತೊಡಕು ತೊಡಕಾದವುಗಳು; ಅವನ್ನು ವಿವರಿಸಲು ಬೇರೆಯೇ ಆದ ಅರಿಮೆಯ ಪದಗಳು ಬೇಕಾಗುತ್ತವೆ. ಇದಲ್ಲದೆ, ಅವುಗಳಲ್ಲಿ ಯಾವ ಕಟ್ಟಲೆಯೂ ಬೇರೆಯಾಗಿ ನಿಲ್ಲುವುದಿಲ್ಲ; ಎಲ್ಲವೂ ಒಂದರೊಡನೊಂದು ಹೆಣೆದಿರುತ್ತವೆ. ಹಾಗಾಗಿ, ವ್ಯಾಕರಣದ ಯಾವ ಕಟ್ಟಲೆಯನ್ನು ಕಲಿಸಬೇಕಿದ್ದರೂ, ಅದಕ್ಕೆ ಬೇರೆ ಕಟ್ಟಲೆಗಳೊಂದಿಗಿರುವ ಕೊಂಡಿಗಳನ್ನೂ ಕಲಿಸಿಕೊಡಬೇಕಾಗುತ್ತದೆ.

ಎರಡನೆಯದಾಗಿ, ವ್ಯಾಕರಣದ ಕಟ್ಟಲೆಗಳು ಓದಿಗೆ ಇಲ್ಲವೇ ಬರಹಕ್ಕೆ ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುವು ಎಂಬುದು ಅವನ್ನು ಕಲಿಯುವವರಿಗೆ ಸುಲಬವಾಗಿ ಗೊತ್ತಾಗುವುದಿಲ್ಲ, ಮತ್ತು ಅವು ಯಾಕೆ ಬೇಕಾಗುತ್ತವೆ ಎಂಬುದನ್ನು ತಿಳಿಯದವರಿಗೆ ಅವನ್ನು ಕಲಿಯುವಲ್ಲಿ ಯಾವ ಹುರುಪೂ ಇರುವುದಿಲ್ಲ. ಅವುಗಳ ಕಲಿಕೆ ಬರಿಯ ಒಂದು ಯಾಂತ್ರಿಕ ಕೆಲಸವಾಗಿಬಿಡುತ್ತದೆ.

ಹಿಂದಿನ ಕಾಲದ ಶಾಲೆಗಳಲ್ಲಿ ವ್ಯಾಕರಣವನ್ನು ಬೇರೆಯೇ ಒಂದು ವಿಶಯವಾಗಿ ಕಲಿಸಲಾಗುತ್ತಿತ್ತು, ಮತ್ತು ಈ ಕಾರಣದಿಂದಾಗಿ, ಅದೊಂದು ತುಂಬಾ ತೊಡಕು ತೊಡಕಾದ, ಮತ್ತು ತೀರಾ ಅನವಶ್ಯಕವಾದ ವಿಶಯವೆಂಬುದಾಗಿ ಅದನ್ನು ಕಲಿಯುವವರಿಗೆ ಮಾತ್ರವಲ್ಲ, ಅದನ್ನು ಕಲಿಸುವವರಿಗೂ ಅನಿಸುತ್ತಿತ್ತು. ಅಯ್ದಾರು ವರ‍್ಶ ಅದನ್ನು ಕಲಿಸಿದರೂ ಮಕ್ಕಳ ಓದಿನಲ್ಲಿ ಇಲ್ಲವೇ ಬರವಣಿಗೆಯಲ್ಲಿ ಅದರಿಂದಾಗಿ ಯಾವ ಮಾರ‍್ಪಾಡೂ ಉಂಟಾಗುವುದಿಲ್ಲ ಎಂಬುದನ್ನು ಸಂಶೋದನೆಗಳು ತೋರಿಸಿಕೊಟ್ಟುವು. ಇದನ್ನು ಗಮನಿಸಿದ ಹಲವು ತಿಳಿವಿಗರು ನುಡಿಯ ಕಲಿಕೆಗೆ ವ್ಯಾಕರಣದ ತಿಳಿವು ಬೇಕಾಗಿಲ್ಲ, ಮತ್ತು ಅದನ್ನು ಶಾಲೆಗಳಲ್ಲಿ ಕಲಿಸಬೇಕಾಗಿಲ್ಲ ಎಂಬ ತೀರ‍್ಮಾನಕ್ಕೆ ಬಂದಿದ್ದರು.

ಆದರೆ, ನಿಜಕ್ಕೂ ಇದೊಂದು ತಪ್ಪಾದ ತೀರ‍್ಮಾನವಾಗಿತ್ತು; ಯಾಕೆಂದರೆ, ಯಾವ ಕೆಲಸವೇ ಆಗಲಿ, ಅದನ್ನು ಜಾಣ್ಮೆಯಿಂದ ನಡೆಸಬೇಕೆಂದಿರುವವರಿಗೆ ಅದರ ಒಳಗುಟ್ಟಿನ ತಿಳಿವು ನೆರವಿಗೆ ಬಂದೇ ಬರುತ್ತದೆ. ಎತ್ತುಗೆಗಾಗಿ, ಕಾರನ್ನು ಓಡಿಸುವವರು ಅದರ ಬೇರೆ ಬೇರೆ ಅಂಗಗಳ ಗುರಿ, ಅವುಗಳ ಅಳವು-ನಲುವುಗಳು, ಅವುಗಳ ಕೆಲಸದ ಮೇಲೆ ಗಾಳಿ, ಮಳೆ, ಬಿಸಿಲು, ಮತ್ತು ದಾರಿಂii ಗೊತ್ತುಪಾಡುಗಳಿಂದ ಉಂಟಾಗಬಹುದಾದ ಅಡಚಣೆಗಳು ಮೊದಲಾದುವನ್ನು ಸರಿಯಾಗಿ ತಿಳಿದುಕೊಂಡಿರುವರಾದರೆ, ಆ ಕೆಲಸವನ್ನು ಅವರು ಹೆಚ್ಚು ಜಾಣ್ಮೆಯಿಂದ ನಡೆಸಬಲ್ಲರು.

ಓದುವ ಮತ್ತು ಬರೆಯುವ ಕೆಲಸಗಳೂ ಹೀಗೆಯೇ. ಅವುಗಳ ಒಳಗುಟ್ಟನ್ನು ತಿಳಿದುಕೊಂಡವರಿಗೆ ಅವನ್ನು ಹೆಚ್ಚು ಸುಳುವಾಗಿ ಮತ್ತು ಹೆಚ್ಚು ಚನ್ನಾಗಿ ನಡೆಸಲು ಬರುತ್ತದೆ. ಬರಹಗಳಲ್ಲಿ ಹಲವು ಬಗೆಗಳಿದ್ದು, ಅವನ್ನು ಓದಿ ತಿಳಿದುಕೊಳ್ಳುವಲ್ಲಿ ಇಲ್ಲವೇ ಅಂತಹವೇ ಬರಹಗಳನ್ನು ಹೊಸದಾಗಿ ಬರೆಯುವಲ್ಲಿ ಹಲವಾರು ಬಗೆಯ ವ್ಯಾಕರಣದ ಕಟ್ಟಲೆಗಳನ್ನು ಬಳಸಬೇಕಾಗುತ್ತದೆ; ಹಾಗಾಗಿ, ಅಂತಹ ಕಟ್ಟಲೆಗಳ ತಿಳಿವು ಈ ಕೆಲಸಗಳನ್ನು ಜಾಣ್ಮೆಯಿಂದ ನಡೆಸುವಲ್ಲಿ ನೆರವಾಗದಿರದು.

ಆದರೆ, ಮೇಲೆ ಸೂಚಿಸಿದ ಹಾಗೆ, ವ್ಯಾಕರಣದ ಕಟ್ಟಲೆಗಳನ್ನು ನೇರವಾಗಿ ಕಲಿಸಹೋಗದೆ, ಓದುವ ಮತ್ತು ಬರೆಯುವ ಕೆಲಸಗಳಲ್ಲಿ ಅವು ಹೇಗೆ ನೆರವಾಗುತ್ತವೆ ಎಂಬುದನ್ನು ತೋರಿಸಿಕೊಡುವ ಮೂಲಕ ಕಲಿಸಿದಲ್ಲಿ ಮಾತ್ರ ಅವು ಮಕ್ಕಳ ಓದು-ಬರಹದ ಕಲಿಕೆಯ ಮೇಲೆ ಪರಿಣಾಮವನ್ನು ಬೀರಬಲ್ಲುವು.

ಎತ್ತುಗೆಗಾಗಿ, ಕೆಲವು ಸೊಲ್ಲು(ವಾಕ್ಯ)ಗಳ ಹುರುಳೇನೆಂಬುದನ್ನು ತಿಳಿದುಕೊಳ್ಳುವಲ್ಲಿ ಮಕ್ಕಳಿಗೆ ತೊಂದರೆಯಾಗುತ್ತಿರಬಹುದು; ಅಂತಹ ಸೊಲ್ಲುಗಳಲ್ಲಿ ಮುಕ್ಯ ಅಂಶಗಳನ್ನು ಮುಕ್ಯವಲ್ಲದ ಅಂಶಗಳಿಂದ ಬೇರ‍್ಪಡಿಸುವುದು ಹೇಗೆ ಎಂಬುದನ್ನು ಮಕ್ಕಳಿಗೆ ತೋರಿಸಿಕೊಟ್ಟಲ್ಲಿ, ಅವರು ಅವುಗಳ ಹುರುಳನ್ನು ಸುಲಬವಾಗಿ ತಿಳಿದುಕೊಳ್ಳಬಲ್ಲರು. ಆದರೆ, ಸೊಲ್ಲುಗಳಲ್ಲಿ ಮುಕ್ಯ ಅಂಶ ಯಾವುದು ಮತ್ತು ಮುಕ್ಯವಲ್ಲದ ಅಂಶ ಯಾವುದು ಎಂಬುದನ್ನು ತೋರಿಸಿಕೊಡಬೇಕಾದರೆ, ಅವನ್ನು ಹೇಗೆ ಕಟ್ಟಲಾಗಿದೆ, ಅವುಗಳ ಒಳರಚನೆಯೆಂತಹದು ಎಂಬಂತಹ ವ್ಯಾಕರಣಕ್ಕೆ ಸಂಬಂದಿಸಿರುವ ಕಟ್ಟಲೆಗಳನ್ನು ಕಲಿಸಬೇಕಾಗುತ್ತದೆ.

ಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ತಿಳಿವಿಗರು ಓದು-ಬರಹದ ಕಲಿಕೆಯಲ್ಲಿ ವ್ಯಾಕರಣದ ಕೊಡುಗೆ ನಿಜಕ್ಕೂ ತುಂಬ ದೊಡ್ಡದು ಎಂಬುದನ್ನು ಕಂಡುಕೊಳ್ಳುತ್ತಿದ್ದಾರೆ. ಮಕ್ಕಳು ತಾವು ಓದಿ ತಿಳಿದುಕೊಳ್ಳಬೇಕಾಗಿರುವ ಇಲ್ಲವೇ ಬರೆಯಬೇಕಾಗಿರುವ ಸೊಲ್ಲುಗಳ ಒಳರಚನೆಯೆಂತಹದು ಎಂಬುದನ್ನು ಗಮನಿಸುವ ಹಾಗೆ ಮಾಡಿದಲ್ಲಿ ಅವರಿಗೆ ಆ ಕೆಲಸವನ್ನು ನಡೆಸಲು ಹೆಚ್ಚು ಸುಲಬವಾಗುತ್ತದೆ ಎಂಬುದನ್ನೂ ಅವರು ಕಂಡುಕೊಳ್ಳುತ್ತಿದ್ದಾರೆ.

ಇಂತಹ ತಿಳುವಳಿಕೆ ತರಗತಿಯಲ್ಲಿ ಮುಂದೆ ಇರುವ ಮಕ್ಕಳಿಗಿಂತಲೂ ಹಿಂದೆ ಬೀಳುವ ಮಕ್ಕಳಿಗೆ ಹೆಚ್ಚು ನೆರವಾಗುತ್ತದೆ ಎಂಬುದನ್ನೂ ಕಂಡುಕೊಳ್ಳಲಾಗಿದೆ. ಎತ್ತುಗೆಗಾಗಿ, ಮಾತಿನಲ್ಲಿ ಬರುವ ಹಾಗೆ ತುಂಡು ತುಂಡಾಗಿರುವ ಸೊಲ್ಲುಗಳು ಬರಹದಲ್ಲಿ ಬರಬಾರದು; ಅವೆಲ್ಲ ಇಡಿ ಇಡಿಯಾಗಿರಬೇಕು; ತುಂಡು ಸೊಲ್ಲುಗಳನ್ನು ಇಡೀ ಸೊಲ್ಲುಗಳ ಅಂಗಗಳನ್ನಾಗಿ ಮಾತ್ರ ಬಳಸಬಹುದು ಎಂದು ಹೇಳಿಕೊಟ್ಟಾಗ, ತರಗತಿಯಲ್ಲಿ ಮುಂದೆ ಇರುವ ಮಕ್ಕಳಿಗೆ ತಾವೇನು ಮಾಡಬೇಕು ಎಂಬುದು ಒಡನೆಯೇ ಗೊತ್ತಾಗುತ್ತದೆ.

ಆದರೆ, ತರಗತಿಯಲ್ಲಿ ಹಿಂದೆ ಬೀಳುವ ಮಕ್ಕಳಿಗೆ ಅದು ಗೊತ್ತಾಗುವುದಿಲ್ಲ. ಅವರಿಗೆ ಅದು ಗೊತ್ತಾಗುವ ಹಾಗೆ ಮಾಡಬೇಕಿದ್ದಲ್ಲಿ, ತುಂಡು ಸೊಲ್ಲುಗಳಿಗೂ ಇಡೀ ಸೊಲ್ಲುಗಳಿಗೂ ನಡುವಿರುವ ವ್ಯತ್ಯಾಸ ಎಂತಹದು ಎಂಬುದನ್ನು, ಮತ್ತು ತುಂಡು ಸೊಲ್ಲುಗಳನ್ನು ಇಡೀ ಸೊಲ್ಲುಗಳ ಅಂಗಗಳಾಗಿ ಮಾಡಿ ಬಳಸುವುದು ಹೇಗೆ ಎಂಬುದನ್ನು ತೋರಿಸಿಕೊಡಬೇಕಾಗುತ್ತದೆ. ಎಂದರೆ, ಇಡಿಯಾಗಿರುವ ಸೊಲ್ಲುಗಳ ಒಳರಚನೆಯ ಹಿಂದಿರುವ ವ್ಯಾಕರಣದ ಕಟ್ಟಲೆಗಳನ್ನು ಅವರಿಗೆ ವಿವರಿಸಬೇಕಾಗುತ್ತದೆ.

ಕನ್ನಡದ ಮಟ್ಟಿಗೆ ಹೇಳುವುದಾದರೆ, ಇನ್ನೊಂದು ಸಮಸ್ಯೆಯೂ ವ್ಯಾಕರಣದ ಕಲಿಕೆಯನ್ನು ಕಾಡುತ್ತಿದೆ; ಅದೇನೆಂದರೆ, ಇವತ್ತು ಕನ್ನಡ ವ್ಯಾಕರಣದ ಹೊತ್ತಗೆಗಳಲ್ಲಿ ಕಾಣಿಸಿಕೊಳ್ಳುವ ಕಟ್ಟಲೆಗಳಲ್ಲಿ ಹೆಚ್ಚಿನವನ್ನೂ ಕನ್ನಡ ಬರಹಗಳನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ನೆರವಾಗುವ ಹಾಗೆ ಕಲಿಸಲು ಯಾರಿಗೂ ಸಾದ್ಯವಾಗಲಾರದು. ಯಾಕೆಂದರೆ, ಈ ವ್ಯಾಕರಣಗಳನ್ನು ಬರೆದವರು ಸಂಸ್ಕ್ರುತ ವ್ಯಾಕರಣದಲ್ಲಿದ್ದ ಕಟ್ಟಲೆಗಳನ್ನು ಹಾಗೆಯೇ ಕನ್ನಡಕ್ಕೆ ತಂದುಹಾಕಿದ್ದಾರಲ್ಲದೆ, ನಿಜಕ್ಕೂ ಕನ್ನಡ ಪದಗಳ ಇಲ್ಲವೇ ಸೊಲ್ಲುಗಳ ಬಳಕೆಯ ಹಿಂದೆ ಎಂತಹ ಕಟ್ಟಲೆಗಳು ಅಡಗಿವೆ ಎಂಬುದನ್ನು ಕಂಡುಹಿಡಿಯುವ ಮೂಲಕ ಅವನ್ನು ಬರೆದಿಲ್ಲ.

ಹಾಗಾಗಿ, ಈ ಕಟ್ಟಲೆಗಳನ್ನು ಸಂಸ್ಕ್ರುತ ಬರಹಗಳನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ನೆರವಾಗುವ ಹಾಗೆ ಕಲಿಸಲು ಸಾದ್ಯವಾಗಬಹುದಲ್ಲದೆ, ಕನ್ನಡ ಬರಹಗಳನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ನೆರವಾಗುವ ಹಾಗೆ ಕಲಿಸಲು ಸಾದ್ಯವಾಗಲಾರದು. ಕನ್ನಡ ಬರಹಗಳಲ್ಲಿ ಕನ್ನಡದವೇ ಆದ ಬೇರೆಯೇ ಕಟ್ಟಲೆಗಳು ಬಳಕೆಯಾಗುತ್ತವೆ; ಈ ಕಟ್ಟಲೆಗಳು ಎಂತಹವು ಎಂಬುದನ್ನು ಇವತ್ತು ಕಂಡುಹಿಡಿಯಬೇಕಾಗಿದೆ, ಮತ್ತು ಮಕ್ಕಳ ಓದು-ಬರಹದ ಕಲಿಕೆಗೆ ಅವು ಹೇಗೆ ನೆರವಾಗಬಲ್ಲುವು ಎಂಬುದನ್ನೂ ಕಂಡುಹಿಡಿಯಬೇಕಾಗಿದೆ. ಈ ಎರಡು ಕೆಲಸಗಳನ್ನು ನಡೆಸಿದ ಮೇಲಶ್ಟೇ ಮಕ್ಕಳಿಗೆ ಅವರ ಓದಿನ ಮತ್ತು ಬರಹದ ಕಲಿಕೆಯಲ್ಲಿ ನೆರವಾಗುವ ಹಾಗೆ ಕನ್ನಡ ವ್ಯಾಕರಣದ ಕಟ್ಟಲೆಗಳನ್ನು ಕಲಿಸಲು ಸಾದ್ಯವಾಗಬಲ್ಲುದು.

ಮಾತಿನ ಮೂಲಕ ನಾವು ನಮ್ಮ ಅನಿಸಿಕೆಗಳನ್ನು ಮತ್ತು ಅನುಬವಗಳನ್ನು ಇನ್ನೊಬ್ಬರಿಗೆ ಹೇಗೆ ತಿಳಿಸುತ್ತೇವೆ, ಮತ್ತು ಇನ್ನೊಬ್ಬರು ಬಳಸಿದ ಮಾತುಗಳಿಂದ ಅವರ ಅನಿಸಿಕೆ ಮತ್ತು ಅನುಬವಗಳು ಎಂತಹವು ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ ಎಂಬುದನ್ನು ವ್ಯಾಕರಣ ತಿಳಿಸುತ್ತದೆ. ಮನುಶ್ಯನಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಈ ಒಂದು ವಿಶಿಶ್ಟವಾದ ಅಳವಿನ ಕುರಿತಾಗಿ ಏನು ಹೇಳಬೇಕಿದ್ದರೂ ವ್ಯಾಕರಣದಲ್ಲಿ ಬಳಕೆಯಾಗುವ ಅರಿಮೆಯ ಪದಗಳನ್ನು ಬಳಸಲೇಬೇಕಾಗುತ್ತದೆ. ಹಾಗಾಗಿ, ಮಕ್ಕಳಿಗೆ ಈ ಅರಿಮೆಯ ತಿಳಿವು ದೊರಕುವಂತೆ ಮಾಡುವುದು ಬೇರೆಲ್ಲಾ ಬಗೆಯ ಅರಿಮೆ(ವಿಜ್ನಾನ)ಗಳ ತಿಳಿವು ದೊರಕುವಂತೆ ಮಾಡುವಶ್ಟೇ ಮುಕ್ಯವಾದುದು.

ಹಾಗಾಗಿ, ಅದರ ತಿಳಿವನ್ನು ಮಕ್ಕಳಿಗೆ ಯಾವಾಗ ಮತ್ತು ಹೇಗೆ ಕೊಡಿಸಬಹುದು ಎಂಬ ವಿಶಯದಲ್ಲಿ ಚರ‍್ಚೆ ನಡೆಸಬಹುದಲ್ಲದೆ, ಅದು ಬೇಕೇ ಬೇಡವೇ ಎಂಬ ವಿಶಯದಲ್ಲಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಯಾವುದು ಕನ್ನಡ ವ್ಯಾಕರಣ?

ನುಡಿಯರಿಮೆಯ ಇಣುಕುನೋಟ – 12

ಕೇಶಿರಾಜನ ಕಾಲದಿಂದಲೂ ಕನ್ನಡ ಪಂಡಿತರು ಯಾವುದನ್ನು‘ಕನ್ನಡ ವ್ಯಾಕರಣ’ ಎಂಬುದಾಗಿ ಕರೆಯುತ್ತ ಬಂದಿದ್ದಾರೋ ಅದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲ; ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳು ಕನ್ನಡದಲ್ಲೂ ಇರಬಹುದು, ಇಲ್ಲವೇ ಇರಬೇಕು ಎಂಬ ತಪ್ಪು ಕಲ್ಪನೆಯಲ್ಲಿ ಆ ಕಟ್ಟಲೆಗಳನ್ನು ಕನ್ನಡದಲ್ಲಿ ಕಾಣಲು ನಡೆಸಿದ ಒಂದು ವ್ಯರ‍್ತ ಪ್ರಯತ್ನ ಮಾತ್ರ.

ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಇದೇ ಕನ್ನಡದ್ದಲ್ಲದ ವ್ಯಾಕರಣವನ್ನು ಕಲಿಸಲಾಗುತ್ತಿದೆ. ಅದನ್ನು ಯಾಕೆ ‘ಕನ್ನಡ ವ್ಯಾಕರಣ’ವೆಂದು ಕರೆಯಬೇಕು ಎಂಬುದನ್ನು ಮಕ್ಕಳೂ ತಿಳಿಯಲಾರರು, ಅದನ್ನು ಕಲಿಸುವ ಮಾಸ್ತರರೂ ತಿಳಿಸಿಕೊಡಲಾರರು. ಇನ್ನು ಅದರಿಂದ ಪ್ರಯೋಜನವನ್ನೇನಾದರೂ ಪಡೆಯುವುದಂತೂ ದೂರವೇ ಉಳಿಯಿತು.

ನಿಜಕ್ಕೂ ಈ ‘ವ್ಯಾಕರಣ’ ಎಂಬುದು ಏನು ಮಾಡಬೇಕು? ಒಂದು ನುಡಿಯಲ್ಲಿ ಬರುವ ಪದಗಳ ಒಳರಚನೆ ಎಂತಹದು, ಪದಗಳನ್ನು ಬಳಸಿ ಆ ನುಡಿಯಲ್ಲಿ ಸೊಲ್ಲು(ವಾಕ್ಯ)ಗಳನ್ನು ಉಂಟುಮಾಡುವುದು ಹೇಗೆ, ಮತ್ತು ಸೊಲ್ಲುಗಳನ್ನು ಬಳಸಿ ಅದರಲ್ಲಿ ಬರಹಗಳನ್ನು ಬರೆಯುವುದು ಹೇಗೆ ಎಂಬಂತಹ ಸೊಲ್ಲುಗಳ ಕುರಿತಾಗಿರುವ ತಿಳಿವನ್ನು ಅದು ನಮಗೆ ಒದಗಿಸಬೇಕು.
ಕನ್ನಡದ ಕುರಿತಾಗಿರುವ ಇಂತಹ ತಿಳಿವನ್ನು ನಾವು ಇಲ್ಲಿ ‘ಕನ್ನಡದ ಸೊಲ್ಲರಿಮೆ’ ಎಂದು ಕರೆಯೋಣ; ಯಾಕೆಂದರೆ, ‘ಕನ್ನಡ ವ್ಯಾಕರಣ’ ಎಂಬುದಕ್ಕೆ ಇವತ್ತು ಮೇಲೆ ವಿವರಿಸಿದಂತಹ ಬೇರೆಯೇ ಹುರುಳಿದೆ.

ಪಾಣಿನಿಯೇ ಮೊದಲಾದ ಸಂಸ್ಕ್ರುತದ ಪಂಡಿತರು ಆ ನುಡಿಯಲ್ಲಿ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗುತ್ತದೆ, ಅವುಗಳ ಹಿಂದಿರುವ ಕಟ್ಟಲೆಗಳು ಎಂತಹವು ಎಂಬುದನ್ನು ಕಂಡುಹಿಡಿದಿದ್ದರು, ಮತ್ತು ಅಂತಹ ಕಟ್ಟಲೆಗಳನ್ನು ಒಟ್ಟುಗೂಡಿಸಿ, ಅದನ್ನು ‘ಸಂಸ್ಕ್ರುತ ವ್ಯಾಕರಣ’ ಎಂಬುದಾಗಿ ಕರೆದಿದ್ದರು; ಅಂತಹದೇ ಕೆಲಸವನ್ನು ಇವತ್ತು ನಾವು ಕನ್ನಡದಲ್ಲಿ ನಡೆಸಬೇಕಾಗಿದೆ.
ಸೊಲ್ಲುಗಳನ್ನು ಕಟ್ಟುವ ಬಗೆ ಸಂಸ್ಕ್ರುತದಲ್ಲಿರುವುದಕ್ಕಿಂತ ಕನ್ನಡದಲ್ಲಿ ತೀರ ಬೇರಾಗಿದೆ; ಹಾಗಾಗಿ, ಸಂಸ್ಕ್ರುತ ವ್ಯಾಕರಣದಲ್ಲಿ ಬರುವ ಕಟ್ಟಲೆಗಳಿಗಿಂತ ತೀರ ಬೇರಾಗಿರುವ ಕಟ್ಟಲೆಗಳು ‘ಕನ್ನಡದ ಸೊಲ್ಲರಿಮೆ’ಯಲ್ಲಿ ಬರಬೇಕಾಗುತ್ತದೆ.

ಸಂಸ್ಕ್ರುತದಲ್ಲಿ ಎರಡು (ಇಲ್ಲವೇ ಹೆಚ್ಚು) ಪದಗಳನ್ನು ಒಟ್ಟುಸೇರಿಸಿ ಹೊಸಪದವನ್ನು ಉಂಟುಮಾಡುವ ಹೊಲಬನ್ನು ‘ಸಮಾಸ’ ಎಂಬುದಾಗಿ ಕರೆಯಲಾಗುತ್ತದೆ; ನಾಮಪದಗಳನ್ನು ಮಾತ್ರ ಈ ರೀತಿ ಸಂಸ್ಕ್ರುತದಲ್ಲಿ ಒಟ್ಟುಸೇರಿಸಲು ಬರುತ್ತದೆ. ಹಾಗಾಗಿ, ಒಟ್ಟುಸೇರಿಸಿದ ಪದಗಳಲ್ಲಿ ಯಾವುದು ಮುಕ್ಯ ಎಂಬುದರ ಮೇಲೆ ಈ ಸಮಾಸಗಳನ್ನು ತತ್ಪುರುಶ (ಎರಡನೆಯದು ಮುಕ್ಯ), ಅವ್ಯಯೀಬಾವ (ಮೊದಲನೆಯದು ಮುಕ್ಯ), ದ್ವಂದ್ವ (ಎರಡೂ ಮುಕ್ಯ) ಮತ್ತು ಬಹುವ್ರೀಹಿ (ಎರಡೂ ಮುಕ್ಯವಲ್ಲ, ಬೇರೊಂದು ಪದ ಮುಕ್ಯ) ಎಂಬ ನಾಲ್ಕು ಬಗೆಗಳಲ್ಲಿ ಗುಂಪಿಸಬಹುದೆಂದು ಸಂಸ್ಕ್ರುತ ವ್ಯಾಕರಣಗಳು ಹೇಳುತ್ತವೆ.

ಆದರೆ, ಕನ್ನಡದಲ್ಲಿ ಎರಡು ಪದಗಳನ್ನು ಒಟ್ಟುಸೇರಿಸಿ ಹೊಸದೊಂದು ಪದವನ್ನು ಉಂಟುಮಾಡುವ ಬಗೆ ಇದರಿಂದ ತೀರ ಬೇರಾದುದು. ನಾಮಪದ, ಕ್ರಿಯಾಪದ, ಮತ್ತು ಗುಣಪದಗಳೆಂಬ ಮೂರು ಬಗೆಯ ಪದಗಳನ್ನು ಇಂತಹ ಹೊಸಪದಗಳ ಮೊದಲನೆಯ ಪದವಾಗಿ ಬಳಸಲು ಬರುತ್ತದೆ; ಅವುಗಳ ಎರಡನೆಯ ಪದ ಮಾತ್ರ ಯಾವಾಗಲೂ ಹೆಸರುಪದವಾಗಿರುತ್ತದೆ.

ಕಯ್ಮಗ್ಗ, ಬಯಲಾಟ, ನೆಲಗಡಲೆ ಎಂಬಂತಹ ಪದಗಳಲ್ಲಿ ಎರಡು ನಾಮಪದಗಳು ಒಟ್ಟುಸೇರಿವೆ; ಕಡೆಗೋಲು, ಸಿಡಿಮದ್ದು, ಬಿಚ್ಚುಕತ್ತಿ ಎಂಬಂತಹ ಪದಗಳಲ್ಲಿ ಕ್ರಿಯಾಪದ ಮತ್ತು ನಾಮಪದಗಳು ಒಟ್ಟುಸೇರಿವೆ (ಕಡೆ, ಸಿಡಿ ಮತ್ತು ಬಿಚ್ಚು ಎಂಬವು ಕ್ರಿಯಾಪದಗಳು); ಬಿಸಿನೀರು, ದೊಡ್ಡಮ್ಮ, ಬೆಳ್ಳುಳ್ಳಿ ಎಂಬಂತಹ ಪದಗಳಲ್ಲಿ ಗುಣಪದ ಮತ್ತು ನಾಮಪದಗಳು ಒಟ್ಟುಸೇರಿವೆ.
ಹಾಗಾಗಿ, ಕನ್ನಡದಲ್ಲಿ ಬರುವ ‘ಸಮಾಸ’ ಯಾವ ಬಗೆಯದು ಎಂಬುದನ್ನು ತಿಳಿಯಬೇಕಿದ್ದಲ್ಲಿ ಅಂತಹ ಹೊಸಪದಗಳಲ್ಲಿ ಮೊದಲಿಗೆ ಯಾವ ಬಗೆಯ ಪದ ಬಂದಿದೆ ಎಂಬುದನ್ನು ತಿಳಿಯಬೇಕಲ್ಲದೆ, ಸಂಸ್ಕ್ರುತದ ಹಾಗೆ ಯಾವ ಪದ ಮುಕ್ಯ ಎಂಬುದನ್ನಲ್ಲ.

ಇಂಗ್ಲಿಶ್‌ನಂತಹ ಬೇರೆ ನುಡಿಗಳಿಂದ ಹೊಸ ಹೊಸ ವಿಶಯಗಳನ್ನು ಕನ್ನಡಕ್ಕೆ ತರಬೇಕಾದಾಗ, ಅದಕ್ಕಾಗಿ ಹಲವಾರು ಹೊಸ ಪದಗಳನ್ನು ಕನ್ನಡದಲ್ಲಿ ಉಂಟುಮಾಡಿಕೊಳ್ಳಬೇಕಾಗುತ್ತದೆ. ನಿಜಕ್ಕೂ ಕನ್ನಡ ಪದಗಳ ಒಳರಚನೆಯೆಂತಹದು ಎಂಬುದನ್ನು ತಿಳಿದವರು ಮಾತ್ರ ಈ ಕೆಲಸವನ್ನು ಸರಿಯಾಗಿ ನಡೆಸಬಲ್ಲರು.

ಸಂಸ್ಕ್ರುತ ಪದಗಳ ಒಳರಚನೆಯೇ ಕನ್ನಡ ಪದಗಳಿಗೂ ಇದೆ ಎಂಬ ತಪ್ಪು ತಿಳಿವನ್ನು ‘ಕನ್ನಡ ವ್ಯಾಕರಣ’ಗಳಿಂದ ಪಡೆದಿರುವ ಕನ್ನಡ ಪಂಡಿತರಿಗೆ ಇಂತಹ ಹೊಸಪದಗಳನ್ನು ಕನ್ನಡದಲ್ಲೇನೇ ಉಂಟುಮಾಡುವುದು ಹೇಗೆ ಎಂಬುದು ಗೊತ್ತೇ ಇರುವುದಿಲ್ಲ. ಹಾಗಾಗಿ, ಹೊಸಪದಗಳು ಬೇಕಾದಾಗಲೆಲ್ಲ ಅವರು ಅವನ್ನು ಸಂಸ್ಕ್ರುತದಲ್ಲಿ ಉಂಟುಮಾಡಿ ಕನ್ನಡದೊಳಗೆ ತುರುಕುತ್ತಾರೆ, ಮತ್ತು ಸಂಸ್ಕ್ರುತದ ನೆರವಿಲ್ಲದೆ ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡಲು ಸಾದ್ಯವೇ ಇಲ್ಲ ಎಂಬ ತಪ್ಪು ತೀರ‍್ಮಾನಕ್ಕೆ ಬರುತ್ತಾರೆ.

ಕ್ರಿಯಾಪದಗಳನ್ನು ನಾಮಪದಗಳೊಂದಿಗೆ ಸೇರಿಸಿ ಹೊಸಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಲು ಬರುವುದಿಲ್ಲವಾದರೂ ಕನ್ನಡದಲ್ಲಿ ಬರುತ್ತದೆ ಎಂಬ ಕನ್ನಡದ್ದೇ ಆದ ಸೊಲ್ಲರಿಮೆಯ ಕಟ್ಟಲೆಯನ್ನು ತಿಳಿದವರಿಗೆ ನೂರಾರು ಹೊಸಪದಗಳನ್ನು ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ. ಇಂಗುಗುಂಡಿ, ಇಡುಗಂಟು, ಇಳಿನೀರು, ಉಜ್ಜುಗಾಯ, ಉಬ್ಬುಗನ್ನಡಿ, ಕಟ್ಟುಪಟ್ಟಿ, ಕರೆಸಾಲ, ತಡೆಯೋಟ, ತೇಲುಮನೆ, ತಳ್ಳುಗುಂಡಿ ಮೊದಲಾದ ಇಂತಹ ಪದಗಳು ಕನ್ನಡ ಬರಹದಲ್ಲೂ ತುಂಬಾ ಚನ್ನಾಗಿ ಹೊಂದಿಕೊಳ್ಳುತ್ತವೆ.

ಕನ್ನಡದ ಆಡುನುಡಿಗಳಲ್ಲಿಯೂ ಈ ಹೊಲಬನ್ನು ಬಳಸಿ ಉಂಟುಮಾಡಿರುವ ತುಂಬುಕಡಬು, ಬಿಚ್ಚೋಲೆ, ತೂಗುದೀಪ ಎಂಬಂತಹ ಹಲವಾರು ಪದಗಳು ಬಳಕೆಯಲ್ಲಿವೆ; ಆದರೆ, ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳೇ ಕನ್ನಡದಲ್ಲೂ ಇವೆಯೆಂಬುದಾಗಿ ಬ್ರಮಿಸುವ ‘ಕನ್ನಡ ವ್ಯಾಕರಣ’ಗಳಿಂದಾಗಿ ದಾರಿತಪ್ಪಿರುವ ಕನ್ನಡ ಪಂಡಿತರು ತಮ್ಮಲ್ಲಿ ಸ್ವಾಬಾವಿಕವಾಗಿ ಬೆಳೆದುಬಂದಿರಬಹುದಾದ ಈ ತಾಯ್ನುಡಿಯ ಅಳವನ್ನೇ ಕಳೆದುಕೊಂಡಿದ್ದಾರೆ.

ಸಂಸ್ಕ್ರುತದ ವಾಕ್ಯಗಳಲ್ಲಿ ಏಳು ವಿಬಕ್ತಿಗಳು ಬಳಕೆಯಾಗುತ್ತವೆ ಎಂಬುದನ್ನು ಸಂಸ್ಕ್ರುತದ ಪಂಡಿತರು ಕಂಡುಕೊಂಡಿದ್ದಾರೆ; ಕನ್ನಡದ ಸೊಲ್ಲುಗಳನ್ನು ಪರಿಶೀಲಿಸಿದೆವಾದರೆ, ಅವುಗಳಲ್ಲಿ ಬರುವ ಪದಗಳಿಗೆ ಒಟ್ಟು ನಾಲ್ಕು ವಿಬಕ್ತಿರೂಪಗಳು ಮಾತ್ರ ಕಾಣಿಸುತ್ತವಲ್ಲದೆ, ಏಳು ವಿಬಕ್ತಿ ರೂಪಗಳು ಕಾಣಿಸುವುದಿಲ್ಲ; ಹಾಗಿರುವಾಗ, ಸಂಸ್ಕ್ರುತದ ಹಾಗೆ ಕನ್ನಡದಲ್ಲೂ ಏಳು ವಿಬಕ್ತಿಗಳಿರಬೇಕು ಎಂದು ಬ್ರಮಿಸಿ, ಅವನ್ನು ಕಾಣಲು ಪ್ರಯತ್ನಿಸುವ ‘ಕನ್ನಡದ ವ್ಯಾಕರಣ’ ಕನ್ನಡದ್ದಾಗುವುದು ಹೇಗೆ?

ಕನ್ನಡದಲ್ಲಿ ಮೂರು ಕಾಲಗಳಿವೆಯೆಂದು ‘ಕನ್ನಡ ವ್ಯಾಕರಣ’ಗಳು ಹೇಳುತ್ತವೆ; ಇದರಂತೆ, ಮಾಡುತ್ತೇನೆ ಎಂಬ ರೂಪ ಈಗ ನಡೆಯುತ್ತಿರುವ ಕೆಲಸವನ್ನು ತಿಳಿಸಬೇಕು, ಮತ್ತು ಮಾಡುವೆನು ಎಂಬ ರೂಪ ಮುಂದೆ ನಡೆಯಲಿರುವ ಕೆಲಸವನ್ನು ತಿಳಿಸಬೇಕು.

ಆದರೆ, ನಿಜಕ್ಕೂ ಕನ್ನಡದಲ್ಲಿ ನಾಳೆ ಮಾಡುತ್ತೇನೆ, ಬರುವ ವರ‍್ಶ ಮಾಡುತ್ತೇನೆ ಎಂಬಂತಹ ಸೊಲ್ಲುಗಳಲ್ಲಿ ಕಾಣಿಸುವ ಹಾಗೆ, ಮಾಡುತ್ತೇನೆ ಎಂಬುದು ಮುಂದೆ ನಡೆಯಲಿರುವ ಕೆಲಸವನ್ನು ತಿಳಿಸುತ್ತದೆ; ಈಗ ನಡೆಯುತ್ತಿರುವ ಕೆಲಸವನ್ನು ತಿಳಿಸಲು ಮಾಡುತ್ತಿದ್ದೇನೆ ಎಂಬ ಮಾಡು ಪದಕ್ಕೆ ಇರು ಪದವನ್ನು ಸೇರಿಸಿರುವ ಬೇರೆಯೇ ಪದರೂಪವನ್ನು ಬಳಸಲಾಗುತ್ತದೆ. ಇಂತಹ ಕಣ್ಣಿಗೆ ಹೊಡೆದು ಕಾಣಿಸುವಂತಹ ತಪ್ಪುಗಳಿರುವ ‘ಕನ್ನಡ ವ್ಯಾಕರಣ’ ಕನ್ನಡದ್ದಾಗುವುದು ಹೇಗೆ?

ಕಂಪ್ಯೂಟರ್‌ಗಳನ್ನು ಬಳಸಿ ಒಂದು ನುಡಿಯ ಸೊಲ್ಲುಗಳನ್ನು ಇನ್ನೊಂದು ನುಡಿಗೆ ಅನುವಾದಿಸಲು ಬರುತ್ತದೆ; ಆದರೆ, ಹೀಗೆ ಮಾಡಬೇಕಿದ್ದಲ್ಲಿ, ಆ ಎರಡು ನುಡಿಗಳ ವಿವರವಾದ ಸೊಲ್ಲರಿಮೆಗಳನ್ನು ಕಂಪ್ಯೂಟರ್‌ಗಳಿಗೆ ಒದಗಿಸಿಕೊಡಬೇಕಾಗುತ್ತದೆ. ಇಂಗ್ಲಿಶ್ ನುಡಿಗೆ ಈಗಾಗಲೇ ಸಾಕಶ್ಟು ವಿವರವಾದ ವ್ಯಾಕರಣವನ್ನು ಬರೆಯಲಾಗಿದ್ದು, ಅದನ್ನು ಕಂಪ್ಯೂಟರ್‌ಗಳಿಗೆ ಒದಗಿಸಿಕೊಡಲಾಗಿದೆ; ಕನ್ನಡಕ್ಕೂ ಇಂತಹದೊಂದು ವಿವರವಾದ ಸೊಲ್ಲರಿಮೆಯನ್ನು ಬರೆದಲ್ಲಿ, ಇಂಗ್ಲಿಶ್ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವಲ್ಲಿಯೂ ಕಂಪ್ಯೂಟರನ್ನು ಬಳಸಲು ಸಾದ್ಯವಾಗಬಹುದು.

ಆದರೆ, ಇಂತಹ ಕೆಲಸಕ್ಕೆ ಸಂಸ್ಕ್ರುತ ವ್ಯಾಕರಣವನ್ನೇ ‘ಕನ್ನಡ ವ್ಯಾಕರಣ’ವೆಂದು ಬ್ರಮಿಸುವ ಕೇಶಿರಾಜನ ಕನ್ನಡ ವ್ಯಾಕರಣವಾಗಲಿ, ಇವತ್ತು ಶಾಲೆಗಳಲ್ಲಿ ಕಲಿಸುವ ‘ಕನ್ನಡ ವ್ಯಾಕರಣ’ವಾಗಲಿ ಯಾವ ನೆರವನ್ನೂ ನೀಡಲಾರದು. ಕನ್ನಡದಲ್ಲಿ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಬಲ್ಲ ‘ಕನ್ನಡದ ಸೊಲ್ಲರಿಮೆ’ಯೊಂದೇ ಈ ಕೆಲಸದಲ್ಲಿ ನೆರವನ್ನು ನೀಡಬಲ್ಲುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter