Posts Tagged ‘ಶಾಲೆ’
ನುಡಿಯರಿಮೆಯ ಇಣುಕುನೋಟ – 17
ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಮಕ್ಕಳ ಮಟ್ಟಿಗೆ ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಬರೆಯಬೇಕಿದ್ದಲ್ಲಿ ಅವರು ಒಂದೇ ಬಾರಿಗೆ ಹಲವಾರು ತೀರ‍್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ: ಯಾವ ವಿಶಯಗಳ ಕುರಿತು ಬರೆಯಬೇಕು, ಆ ವಿಶಯಗಳನ್ನು ಯಾವ ರೀತಿಯಲ್ಲಿ ಜೋಡಿಸಿಕೊಳ್ಳಬೇಕು, ಎಂತಹ ಪದಗಳನ್ನು ಬಳಸಬೇಕು, ಅವನ್ನು ಒಟ್ಟುಗೂಡಿಸಿ ಸೊಲ್ಲುಗಳನ್ನು ಹೇಗೆ ಕಟ್ಟಬೇಕು, ಅವನ್ನು ಬರೆಯುವಲ್ಲಿ ಯಾವ ಬರಿಗೆಗಳನ್ನು ಬಳಸಬೇಕು ಎಂಬುದನ್ನೆಲ್ಲ ಅವರು ಒಂದೇ ಬಾರಿಗೆ ತೀರ‍್ಮಾನಿಸಿಕೊಳ್ಳಬೇಕಾಗುತ್ತದೆ. ಹೀಗೆ ಮಾಡಲು ಬರುವುದಿಲ್ಲವಾದಲ್ಲಿ, ಅವರ ಬರೆಯುವ ಕೆಲಸ ಮುಂದಕ್ಕೆ ಹೋಗುವುದೇ ಇಲ್ಲ.
ಹೆಚ್ಚಿನ ಮಕ್ಕಳಿಗೂ ಈ ತೊಡಕು ತೊಡಕಾದ ಕೆಲಸವನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ. ಅದಕ್ಕೆ ಬೇಕಾಗುವ ಚಳಕಗಳನ್ನು ಒಂದೊಂದಾಗಿ ಕಲಿಯುವಂತೆ ಯಾರಾದರೂ ಅವರಿಗೆ ನೆರವನ್ನಿತ್ತರೆ ಮಾತ್ರ, ಅವರು ಅದನ್ನು ಕಲಿಯಬಲ್ಲರು. ಇಲ್ಲವಾದರೆ, ಬರೆಯುವ ಕೆಲಸ ತಮಗೆ ಹೇಳಿದ್ದಲ್ಲ ಎಂಬುದಾಗಿ ಅವರು ಅದರಿಂದ ದೂರವೇ ಉಳಿಯುತ್ತಾರೆ. ಪರೀಕ್ಶೆಗಳಲ್ಲಿ ಬರೆಯಬೇಕಾದುದನ್ನೆಲ್ಲ ಉರುಹೊಡೆದು ಬರೆಯುವುದನ್ನಶ್ಟೇ ಅವರು ಮಾಡಬಲ್ಲರು.
ಹಾಗಾಗಿ, ಮಕ್ಕಳಿಗೆ ಬರೆಯಲು ಕಲಿಸುವವರು ಅದಕ್ಕೆ ಬೇಕಾಗುವ ಚಳಕಗಳನ್ನು ಒಂದೊಂದಾಗಿ ಹತೋಟಿಗೆ ತಂದುಕೊಳ್ಳುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕು. ಬರಿಗೆ(ಅಕ್ಶರ)ಗಳನ್ನು ಬರೆಯಲು ಕಲಿಯುವ ಸಮಯದಲ್ಲಿ ಅವರು ಈ ಕಲಿಕೆಯನ್ನು ಸರಿಯಾದ ಓರಣ(ಕ್ರಮ)ದಲ್ಲಿ ನಡೆಸುವ ಹಾಗೆ ನೋಡಿಕೊಳ್ಳಬೇಕು.
ಮಕ್ಕಳ ಕಯ್ಬರಹ ಓದಬಲ್ಲುದಾಗಿರಬೇಕು, ಮತ್ತು ಬರವಣಿಗೆ ಸಲೀಸಾಗಿರಬೇಕು. ಸಲೀಸಾಗಿ ಬರೆಯಲು ಬಾರದವರಿಗೆ ಬೇರೆ ವಿಶಯಗಳ ಕುರಿತು ಆಲೋಚಿಸಲು ಸಮಯವೇ ಸಿಗುವುದಿಲ್ಲ. ಸಲೀಸಾಗಿ ಬರೆಯಬೇಕಿದ್ದಲ್ಲಿ, ಮಕ್ಕಳು ಬರಿಗೆಗಳನ್ನು ಬರೆಯುವ ಬಗೆ, ಬಳಪವನ್ನು ಹಿಡಿಯುವ ಬಗೆ, ಮತ್ತು ಕಾಗದವನ್ನು ಎದುರು ಇರಿಸಿಕೊಳ್ಳುವ ಬಗೆ ಸರಿಯಾಗಿರಬೇಕು.
ಕೆಲವು ಮಕ್ಕಳು ಬರೆಯುವಾಗ ಬಲಗಯ್ಯನ್ನು ಬಳಸುವ ಬದಲು ಎಡಗಯ್ಯನ್ನು ಬಳಸುತ್ತಾರೆ. ಆದರೆ, ಇಂತಹ ಮಕ್ಕಳು ಬಲಗಯ್ಯಲ್ಲಿ ಬರೆಯುವವರನ್ನು ನೋಡಿ, ಅವರು ಬರೆಯುವ ಹಾಗೆಯೇ ಬರೆಯತೊಡಗುತ್ತಾರೆ. ಇದರಿಂದಾಗಿ ಅವರು ತೊಂದರೆಗೊಳಗಾಗುತ್ತಾರೆ. ಯಾಕೆಂದರೆ, ಹಾಗೆ ಬರೆಯುವಾಗ ಅವರಿಗೆ ತಮ್ಮ ಕಯ್ಬೆರಳು ಅಡ್ಡ ಬರುತ್ತದೆ, ಮತ್ತು ತಾವು ಬರೆದುದೇನೆಂಬುದು ಕಾಣಿಸುವುದಿಲ್ಲ. ಅದು ಕಾಣಿಸುವಂತೆ ಮಾಡಲು, ಅವರು ತಮ್ಮ ಮಣಿಗಂಟನ್ನು ಬಗ್ಗಿಸಿ ಬರೆಯಹೊರಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅವರ ಬರವಣಿಗೆ ತುಂಬಾ ತೊಡಕಿನದಾಗಿಬಿಡುತ್ತದೆ.
ಎಡಗಯ್ಯಲ್ಲಿ ಬರೆಯುವ ಮಕ್ಕಳಿಗೆ ಅವರು ಬರೆಯಬೇಕಾಗಿರುವ ಬಗೆ ಹೇಗೆ ಎಂಬುದನ್ನು ಕಲಿಸಿಕೊಡಬೇಕು. ಬರೆಯುವ ಕಾಗದವನ್ನು ಇಲ್ಲವೇ ಪುಸ್ತಕವನ್ನು ಅವರು ಬಲಗಯ್ಯವರ ಹಾಗೆ ಎಡಕ್ಕೆ ತಿರುಗಿಸಿ ಇರಿಸಿಕೊಳ್ಳುವ ಬದಲು, ಬಲಕ್ಕೆ ತಿರುಗಿಸಿ ಇರಿಸಿಕೊಳ್ಳುವ ಹಾಗೆ ಮಾಡಬೇಕು, ಮತ್ತು ಪೆನ್ನನ್ನು ತುದಿಯಿಂದ ತುಸು ಮೇಲೆ ಹಿಡಿದುಕೊಳ್ಳಲು ಹೇಳಬೇಕು. ಬರೆಯುವಾಗ ಅವರು ಮಣಿಗಂಟನ್ನು ಬಗ್ಗಿಸಬಾರದು. ಎಡಗಯ್ಯವರಿಗೆ ತಕ್ಕುದಾಗಿರುವಂತಹ ಈ ಬರೆಯುವ ಬಗೆಯನ್ನು ಕಲಿತುಕೊಂಡಲ್ಲಿ ಮಾತ್ರ, ಅವರಿಗೆ ಸಲೀಸಾಗಿ ಬರೆಯಲು ಬರುತ್ತದೆ.
ಮಾತಿಗೂ ಬರಹಕ್ಕೂ ನಡುವೆ ಸೊಲ್ಲುಗಳ ರಚನೆಯಲ್ಲಿ ವ್ಯತ್ಯಾಸಗಳಿವೆಯಾದ ಕಾರಣ, ಬರೆಯಲು ಕಲಿಯುವ ಮಕ್ಕಳಿಗೆ ಬರಹಗಳಲ್ಲಿ ಎಂತಹ ಸೊಲ್ಲುಗಳನ್ನು ಬಳಸಬೇಕು ಎಂಬುದನ್ನೂ ಕಲಿಸಬೇಕಾಗುತ್ತದೆ. ಇಡೀ ಸೊಲ್ಲುಗಳನ್ನು ಬರೆಯುವುದು ಹೇಗೆ, ಚಿಕ್ಕ ಚಿಕ್ಕ ಸೊಲ್ಲುಗಳನ್ನು ಜೋಡಿಸಿ ಉದ್ದ ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ, ಒಂದು ಚಿಕ್ಕ ಸೊಲ್ಲಿನ ಒಳಗೆ ಬೇರೆ ಚಿಕ್ಕ ಸೊಲ್ಲುಗಳನ್ನು ಇರಿಸಿ ಸಿಕ್ಕಲು ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕಾಗುತ್ತದೆ. ಎಲ್ಲಾ ಮಕ್ಕಳಿಗೂ ಇದನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ.
ಸೊಲ್ಲುಗಳನ್ನು ಸೇರಿಸಿ ಕುರಳು(ಪಾರಾ)ಗಳನ್ನು ರಚಿಸುವ ಬಗೆಯನ್ನೂ ಅವರಿಗೆ ಕಲಿಸಿಕೊಡಬೇಕಾಗುತ್ತದೆ. ಒಳ್ಳೇ ಮಾದರಿ ಕುರಳುಗಳಲ್ಲಿ ಮೊದಲಿಗೆ ಮುಕ್ಯ ವಿಶಯವನ್ನು ಮುಂದಿಡುವ ಚಿಕ್ಕ ಸೊಲ್ಲಿರುತ್ತದೆ; ಆಮೇಲೆ, ಅದನ್ನು ಹೆಚ್ಚು ವಿವರವಾಗಿ ತಿಳಿಸುವ, ಮತ್ತು ಅದಕ್ಕೆ ಬೆಂಬಲ ನೀಡುವ ವಿಶಯಗಳು ಬರುತ್ತವೆ; ಮತ್ತು ಕೊನೆಯಲ್ಲಿ, ಮುಕ್ತಾಯಗೊಳಿಸುವ ಸೊಲ್ಲು ಬರುತ್ತದೆ. ಸೊಲ್ಲುಗಳನ್ನು ಈ ರೀತಿ ಒಂದಕ್ಕೊಂದು ಹೊಂದಿಕೊಳ್ಳುವ ಹಾಗೆ ಬರೆಯುವುದು ಹೇಗೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.
ಬರಹದಲ್ಲಿ ಬರುವ ಕುರಳುಗಳನ್ನು ಹೇಗೆ ಅಣಿಗೊಳಿಸುವುದು ಎಂಬುದನ್ನೂ ಅವರು ಕಲಿಯಬೇಕಾಗುತ್ತದೆ. ಇದು ಬೇರೆ ಬೇರೆ ಗುರಿಗಳಿಗಾಗಿ ಬಳಕೆಯಾಗುವ ಬರಹಗಳಲ್ಲಿ ಬೇರೆ ಬೇರಾಗಿರುತ್ತದೆ. ಒಂದು ಕತೆಯನ್ನು ಬರೆಯುವವರು ಅದರ ನೆಗಳ್ತೆ ಮುಂದೆ ಹೋಗುವುದಕ್ಕೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇದಕ್ಕೆ ಬದಲು, ಒಂದು ವಿಶಯದ ಮಟ್ಟಿಗೆ ಇನ್ನೊಬ್ಬರ ಒಪ್ಪಿಗೆ ಇಲ್ಲವೇ ಒಲವನ್ನು ಪಡೆಯಬೇಕೆಂದಿರುವವರು ಆ ವಿಶಯವನ್ನು ಓದುಗರ ಮುಂದಿರಿಸುವ ಮತ್ತು ಅದನ್ನು ಬೆಂಬಲಿಸುವ ವಿಚಾರಗಳನ್ನು ಕೊಡುವ ಬಗೆ ಹೇಗೆ ಎಂಬುದಕ್ಕೆ ಗಮನ ಕೊಡಬೇಕಾಗುತ್ತದೆ.
ಒಮ್ಮೆ ಬರೆದುದನ್ನು ಓದಿ ನೋಡಿ, ಅದು ಸರಿಯಿಲ್ಲವೆಂದು ಅನಿಸಿದಲ್ಲಿ ಅದನ್ನು ತಿದ್ದಿ ಸರಿಪಡಿಸುವುದು ಹೇಗೆ ಎಂಬುದನ್ನೂ ಮಕ್ಕಳು ತಿಳಿದಿರಬೇಕು. ಇದಕ್ಕಾಗಿ ಅವರು ತಾವು ಬರೆದಿರುವ ಸೊಲ್ಲನ್ನು ಬೇರೆ ಬೇರೆ ಬಗೆಗಳಲ್ಲಿ ಮಾರ‍್ಪಡಿಸುವುದು ಹೇಗೆ ಎಂಬುದನ್ನು ಕಲಿತಿರಬೇಕಾಗುತ್ತದೆ. ತಾವು ಬರೆದಿರುವ ಸೊಲ್ಲಿನ ಇಟ್ಟಳ (ಒಳರಚನೆ) ಎಂತಹದು, ಆ ಸೊಲ್ಲನ್ನು ಬೇರೆ ಯಾವ ಇಟ್ಟಳಗಳಿಗೆ ಮಾರ‍್ಪಡಿಸಬಹುದು ಎಂಬಂತಹ ಸೊಲ್ಲರಿಮೆಯ (ವ್ಯಾಕರಣದ) ತಿಳಿವು ಅವರಿಗಿದ್ದಲ್ಲಿ, ತಾವು ಬರೆದಿರುವ ಬರಹವನ್ನು ತಿದ್ದಿ ಸರಿಪಡಿಸುವ ಕೆಲಸವನ್ನು ಅವರು ಹೆಚ್ಚು ಚನ್ನಾಗಿ ನಡೆಸಬಲ್ಲರು.
ಬರವಣಿಗೆಯಲ್ಲಿ ಮಾಡಿರುವ ತಪ್ಪನ್ನು ಬರೆದವರೇ ಓದಿ ನೋಡಿ ಕಂಡುಕೊಳ್ಳುವಂತೆ ಮಾಡಿದಲ್ಲಿ, ಮತ್ತು ಅವು ಯಾಕೆ ತಪ್ಪಾಗಿವೆ ಎಂಬುದನ್ನೂ ತಿಳಿಯುವಂತೆ ಮಾಡಿದಲ್ಲಿ ಅವರ ಬರವಣಿಗೆ ಬೇಗನೆ ಮುಂದೆ ಸಾಗುತ್ತದೆ. ಬರೆದಶ್ಟೂ ಬರವಣಿಗೆ ಚನ್ನಾಗುತ್ತಾ ಹೋಗುತ್ತದೆ. ಹಾಗಾಗಿ, ಬರೆಯುವ ಸಂದರ‍್ಬಗಳು ಮಕ್ಕಳಿಗೆ ಹೆಚ್ಚು ಹೆಚ್ಚು ದೊರಕುವಂತೆ ಮಾಡಬೇಕು.
ಮಕ್ಕಳಿಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟಬೇಕೆಂಬುದು ಎಲ್ಲಕ್ಕಿಂತಲೂ ಮುಕ್ಯವಾದ ವಿಶಯ. ಏನನ್ನೇ ಬರೆಯಲಿ, ಅದು ಅವರಿಗೆ ನಲಿವನ್ನು ಮತ್ತು ಮೆಚ್ಚುಗೆಯನ್ನು ಕೊಡುವಂತಿರಬೇಕು. ಬೇರೆಯವರ ಒತ್ತಾಯಕ್ಕೆ ಬರೆಯುವ ಬರಹದಿಂದ ಅವರ ಬರವಣಿಗೆ ಒಳ್ಳೆಯದಾಗಲಾರದು.
ಏನಾದರೂ ಒಂದು ವಿಶಯವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂಬ ತುಡಿತ ಮಕ್ಕಳಲ್ಲಿರುತ್ತದೆ. ಶಾಲೆಯಿಂದ ಮನೆಗೆ ಬಂದೊಡನೆ, ಶಾಲೆಯಲ್ಲಿ ಇಲ್ಲವೇ ಅಲ್ಲಿಂದ ಬರುವಾಗ ದಾರಿಯಲ್ಲಿ ಏನಾಯಿತು ಎಂಬುದನ್ನು ತಾಯಿಗೆ ಆದಶ್ಟು ಬೇಗನೆ ತಿಳಿಸಿಬಿಡಬೇಕೆಂಬ ಆತುರದಲ್ಲಿ ಮಕ್ಕಳಿರುತ್ತಾರೆ. ಗೆಳೆಯರನ್ನು ಕಂಡೊಡನೆ ತಮಗೆ ತಿಳಿದಿರುವ ಹೊಸ ವಿಶಯವೊಂದನ್ನು ಅವರಿಗೆ ತಿಳಿಸುವ ಆತುರವೂ ಅವರಿಗಿರುತ್ತದೆ.
ತಮ್ಮ ಮನಸ್ಸಿನಲ್ಲಿರುವ ಇಂತಹ ವಿಶಯಗಳನ್ನು ಮಾತಿನ ಮೂಲಕ ಇನ್ನೊಬ್ಬರಿಗೆ ತಿಳಿಸುವ ಹಾಗೆ ಬರಹದ ಮೂಲಕವೂ ತಿಳಿಸಲು ಬರುತ್ತದೆ ಎಂಬುದನ್ನು ಅವರಿಗೆ ತೋರಿಸಿಕೊಟ್ಟಲ್ಲಿ, ಅವರು ಬಹಳ ಬೇಗನೆ ಬರವಣಿಗೆಯಲ್ಲಿ ಮುಂದೆ ಹೋಗುತ್ತಾರೆ. ಮೊದಲಿಗೆ ಅವರ ಹತ್ತಿರ ಮಾತಿನ ಮೂಲಕ ಒಂದು ವಿಶಯವನ್ನು ತಿಳಿಸಲು ಹೇಳಿ, ಅದನ್ನು ಕಲಿಸುವವರೇ ಬರೆದು ತೋರಿಸಬಹುದು, ಮತ್ತು ಹಾಗೆ ಬರೆದುದನ್ನು ಅವರಿಗೆ ಓದಲು ಕೊಡಬಹುದು. ಹೀಗೆ ಮಾಡುವುದರಿಂದ ಅವರಿಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟುತ್ತದೆ.
ಬರೆಯಲು ಕಲಿಯಬೇಕೆಂದಿರುವವರಿಗೆ ಎರಡು ಬಗೆಯ ಕಲಿಕೆಗಳು ನೆರವು ನೀಡಬಲ್ಲುವು: ಮೊದಲನೆಯದಾಗಿ, ಬರೆಯಲಿರುವ ವಿಶಯದ ಕುರಿತು ಅವರು ಏನೆಲ್ಲಾ ಹೇಳಬಲ್ಲರೋ ಅದನ್ನೆಲ್ಲ ಹೇಳಲು ಬಿಡಬೇಕು. ಇದರಿಂದ ಅವರಲ್ಲಿ ಆಲೋಚಿಸುವ ಕಸುವು ಬೆಳೆಯುತ್ತದೆ. ಎರಡನೆಯದಾಗಿ, ಅವರಿಗೆ ಬೇರೆ ಯಾವುದಾದರೂ ಬರಹವನ್ನು ಎತ್ತಿಬರೆಯಲು ಕಲಿಸಬೇಕು. ಹೀಗೆ ಬರೆಯುವಾಗ, ಅಂತಹ ಬರಹಗಳಲ್ಲಿ ಸೊಲ್ಲುಗಳನ್ನು ಮತ್ತು ಕುರಲುಗಳನ್ನು ಯಾವ ರೀತಿಯಲ್ಲಿ ಅಳವಡಿಸಲಾಗಿದೆ ಎಂಬುದನ್ನು ಅವರು ಗಮನಿಸುವ ಹಾಗೆಯೂ ಮಾಡಬೇಕು.
ಓದುವ ಮತ್ತು ಬರೆಯುವ ಕೆಲಸಗಳೆರಡೂ ಬಹಳ ಮಟ್ಟಿಗೆ ಒಂದನ್ನೊಂದು ಅವಲಂಬಿಸಿವೆ. ಹಾಗಾಗಿ, ಅವೆರಡನ್ನೂ ಮಕ್ಕಳು ಒಟ್ಟೊಟ್ಟಾಗಿ ಕಲಿತುಕೊಳ್ಳುವಂತೆ ಮಾಡಬೇಕು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 16
ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ತಾವಾಗಿಯೇ ಕಲಿತುಕೊಳ್ಳುತ್ತಾರೆ; ಕೆಲವರು ಈ ಕಲಿಕೆಯನ್ನು ಬೇಗನೆ ನಡೆಸಬಹುದು, ಮತ್ತು ಕೆಲವರು ಅದಕ್ಕಾಗಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಮಿದುಳಿನ ತೊಂದರೆಯಿಲ್ಲದ ಯಾವ ಮಗುವೂ ತನ್ನ ತಾಯ್ನುಡಿಯಲ್ಲಿ ಮಾತನಾಡಲು ಕಲಿಯದಿರುವುದಿಲ್ಲ.
ಹಾಗಾಗಿ, ಮಾತಿನ ಕಲಿಕೆಯನ್ನು ಮಕ್ಕಳು ಹುಟ್ಟಿನಿಂದಲೇ ಪಡೆದುಕೊಂಡು ಬಂದ ಅಳವೆಂದು ಹೇಳಲಾಗುತ್ತದೆ. ಆದರೆ, ಓದಿನ ಕಲಿಕೆ ಆ ರೀತಿಯದಲ್ಲ; ಹೆಚ್ಚಿನ ಮಕ್ಕಳಿಗೂ ಓದುವ ಬಗೆಯನ್ನು ಯಾರಾದರೂ ಕಲಿಸಿಕೊಟ್ಟಲ್ಲಿ ಮಾತ್ರ ಅವರು ಅದನ್ನು ಕಲಿಯುತ್ತಾರೆ. ಸಯ್ಕಲ್ ತುಳಿಯುವುದು, ಈಜುವುದು ಮೊದಲಾದವುಗಳ ಹಾಗೆ, ಓದು ಹುಟ್ಟಿನಿಂದ ಬರುವ ಅಳವಲ್ಲ; ಕಲಿತು ಪಡೆಯುವ ಅಳವು.
ಬರಹಗಳನ್ನು ಸಲೀಸಾಗಿ ಓದಲು ಕಲಿಯಬೇಕಾದರೆ, ಮಕ್ಕಳು ಕೆಲವು ಚಳಕ(ಕವ್ಶಲ್ಯ)ಗಳನ್ನು ತಮ್ಮದಾಗಿಸಿಕೊಳ್ಳಬೇಕಾಗುತ್ತದೆ: ಮಾತಿನಲ್ಲಿ ಬರುವ ಪದಗಳನ್ನೆಲ್ಲ ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬುದನ್ನು ಅವರು ಗಮನಿಸಬೇಕು, ಮತ್ತು ಪುಟಗಳಲ್ಲಿ ಬರುವ ಗುರುತುಗಳಿಗೂ ಈ ಮಾತಿನ ಉಲಿಗಳಿಗೂ ನಡುವೆ ಎಂತಹ ಸಂಬಂದವಿದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.
ಇದಲ್ಲದೆ, ಪುಟಗಳಲ್ಲಿ ಬರುವ ಈ ಗುರುತುಗಳ ಜೋಡಣೆಗಳಲ್ಲಿ ಪದ, ಪದಕಂತೆ ಮತ್ತು ಸೊಲ್ಲುಗಳನ್ನು ಕಾಣಲು, ಮತ್ತು ಅವುಗಳಿಂದ ಬರಹಗಾರನು ಏನು ಹೇಳುತ್ತಿದ್ದಾನೆ ಎಂಬುದನ್ನು (ಎಂದರೆ ಬರಹದ ಹುರುಳನ್ನು) ತಿಳಿಯಲು ಅವರು ಕಲಿಯಬೇಕು.
ಮಾತಿನಲ್ಲಿ ಬರುವ ಪದಗಳು ಉಲಿಗಳ ಸೇರಿಕೆಯಿಂದ ಉಂಟಾಗುತ್ತವೆ ಎಂಬುದನ್ನು ಗಮನಿಸುವಂತೆ ಮಾಡಲು ಮಕ್ಕಳಿಗೆ ಕೆಲವು ಆಟಗಳನ್ನು ಕಲಿಸಬಹುದು: ಮನೆ, ಮಾತು, ಮೋಡ, ಮುಗಿಲು ಎಂಬಂತಹ ಪದಗಳಲ್ಲೆಲ್ಲ ಮೊದಲಿಗೆ ಮಕಾರ ಬಂದಿದೆ, ಕೆಲವು ಪದಗಳಿಂದ ಈ ಮಕಾರವನ್ನು ತೆಗೆದು ಹಾಕಿದರೆ ಬೇರೊಂದು ಪದ ಸಿಗುತ್ತದೆ (ಮತ್ತೆ-ಅತ್ತೆ, ಮಾಡು-ಆಡು, ಮಿಡಿ-ಇಡಿ), ಕೆಲವು ಪದಗಳಲ್ಲಿ ಮಕಾರದ ಬದಲು ಕಕಾರವನ್ನು ಬಳಸಿದರೆ ಬೇರೆ ಪದ ಸಿಗುತ್ತದೆ (ಮತ್ತೆ-ಕತ್ತೆ, ಮಾಡು-ಕಾಡು, ಮಿಡಿ-ಕಿಡಿ) ಎಂಬಂತಹ ವಿಶಯಗಳನ್ನು ಅವರು ಗಮನಿಸುವ ಹಾಗೆ ಮಾಡಬಹುದು, ಮತ್ತು ಪದಗಳನ್ನು ಉಲಿಗಳಾಗಿ ಒಡೆಯುವ ಬಗೆಯನ್ನು ಕಲಿಸಬಹುದು. ಇದರಿಂದ, ಪದಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಅವರು ತಿಳಿಯುವ ಹಾಗೆ ಮಾಡಬಹುದು.
ಕನ್ನಡ ಬರಹದ ಪುಟಗಳಲ್ಲಿ ಕಾಣಿಸುವ ಗುರುತು(ಬರಿಗೆ)ಗಳಿಗೂ ಅವನ್ನು ಓದುವಲ್ಲಿ ಬಳಕೆಯಾಗುವ ಉಲಿಗಳಿಗೂ ನಡುವೆ ನೇರವಾದ ಸಂಬಂದವಿದೆ; ಇಂಗ್ಲಿಶ್ ಬರಹದಲ್ಲಿರುವ ಹಾಗೆ ಅದು ತೊಡಕು ತೊಡಕಾಗಿಲ್ಲ. ಹಾಗಾಗಿ, ಕನ್ನಡ ಬರಹಗಳನ್ನು ಓದಲು ಕಲಿಯುವ ಮಕ್ಕಳು ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಗಮನಿಸುವಂತೆ ಮಾಡುವುದು ಹೆಚ್ಚು ತೊಡಕಿನ ಕೆಲಸವಲ್ಲ. ಆದರೆ, ಸಂಸ್ಕ್ರುತದ ಎರವಲು ಪದಗಳಲ್ಲಿ ಬಳಕೆಯಾಗುತ್ತಿರುವ ಅಲ್ಪಪ್ರಾಣ-ಮಹಾಪ್ರಾಣ, ರು-ಋ, ಶ-ಷ ಮೊದಲಾದ ಹಲವು ವ್ಯತ್ಯಾಸಗಳು ಓದಿನಲ್ಲಿ ಕಾಣಿಸುವುದಿಲ್ಲ, ಮತ್ತು ಇವುಗಳಿಂದಾಗಿ ಉಲಿಗಳಿಗೂ ಬರಿಗೆಗಳಿಗೂ ನಡುವಿರುವ ಸಂಬಂದವನ್ನು ಗಮನಿಸುವಲ್ಲಿ ಹೆಚ್ಚಿನ ಮಕ್ಕಳೂ ಗೊಂದಲದಲ್ಲಿ ಬೀಳುತ್ತಾರೆ. ಹಾಗಾಗಿ, ಕನ್ನಡದ ಮಟ್ಟಿಗೆ ಅನವಶ್ಯಕವಾಗಿರುವ ಈ ವ್ಯತ್ಯಾಸಗಳನ್ನು ಮಕ್ಕಳ ಓದಿನಿಂದ ದೂರ ಇರಿಸುವುದು ಒಳ್ಳೆಯದು.
ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ತಿಳಿಯುವುದು ಬರಹವನ್ನು ಓದಲು ಕಲಿಯುವಲ್ಲಿ ತುಂಬಾ ಮುಕ್ಯವಾದ ಕೆಲಸ. ಈ ನಂಟನ್ನು ತಿಳಿದುಕೊಂಡವರಿಗೆ ತಮಗೆ ಗೊತ್ತಿರುವ ಪದಗಳನ್ನು ಮಾತ್ರವಲ್ಲದೆ ಗೊತ್ತಿಲ್ಲದ ಪದಗಳನ್ನೂ ಓದಲು ಬರುತ್ತದೆ. ಈ ನಂಟನ್ನು ತಿಳಿಯದ ಮಕ್ಕಳು ಪದಗಳನ್ನು ಚಿತ್ರಗಳ ಹಾಗೆ ಇಡಿ ಇಡಿಯಾಗಿ ಓದಲು ಹೋಗುತ್ತಾರೆ, ಮತ್ತು ಇದರಿಂದಾಗಿ ಬರಹದಲ್ಲಿ ಹೊಸ ಪದಗಳು ಕಾಣಿಸಿಕೊಂಡಾಗ ಅವರ ಓದು ಮುಂದೆ ಸಾಗುವುದಿಲ್ಲ.
ಇತ್ತೀಚೆಗೆ ನಡೆಸಿದ ಹಲವು ಮಿದುಳಿನ ಅರಕೆಗಳು ಓದಿನಲ್ಲಿ ಬೇಗನೆ ಮುಂದೆ ಹೋಗುವ ಮಕ್ಕಳಿಗೂ ಹಿಂದೆ ಬೀಳುವ ಮಕ್ಕಳಿಗೂ ನಡುವೆ ಅವರು ಪದಗಳನ್ನು ಓದುವ ಬಗೆಯಲ್ಲೇ ಇಂತಹ ವ್ಯತ್ಯಾಸವಿದೆಯೆಂಬುದನ್ನು ಸ್ಪಶ್ಟವಾಗಿ ತೋರಿಸಿಕೊಟ್ಟಿವೆ. ಓದಿನಲ್ಲಿ ಬೇಗನೆ ಮುಂದೆ ಹೋಗುವ ಮಕ್ಕಳು ಓದುತ್ತಿರುವಾಗ, ಅವರ ಮಿದುಳಿನಲ್ಲಿ ಮೂರು ಜಾಗಗಳು ಮಿಂಚುತ್ತಿರುತ್ತವೆ: ಬರಿಗೆಗಳನ್ನು ಗುರುತಿಸುವ ಕಣ್ಣಿಗೆ ಸಂಬಂದಿಸಿದ ಜಾಗ, ಅವನ್ನು ಉಲಿಗಳೊಂದಿಗೆ ಜೋಡಿಸುವ ಕಿವಿಗೆ ಸಂಬಂದಿಸಿದ ಜಾಗ, ಮತ್ತು ಅವನ್ನು ಹುರುಳಿನೊಂದಿಗೆ ಸಂಬಂದಿಸುವ ಮಿದುಳಿನ ಹಿಂಬಾಗದಲ್ಲಿರುವ ಜಾಗ. ಓದಿನಲ್ಲಿ ಹಿಂದೆ ಬೀಳುವ ಮಕ್ಕಳು ಓದುತ್ತಿರುವಾಗ, ಅವರ ಮಿದುಳಿನಲ್ಲಿ ಕಣ್ಣಿಗೆ ಮತ್ತು ಹುರುಳಿಗೆ ಸಂಬಂದಿಸಿದ ಜಾಗಗಳು ಮಾತ್ರ ಮಿಂಚುತ್ತಿರುತ್ತವಲ್ಲದೆ, ಕಿವಿಗೆ ಸಂಬಂದಿಸಿದ ಜಾಗ ಮಿಂಚುತ್ತಿರುವುದಿಲ್ಲ. ಎಂದರೆ, ಪದಗಳನ್ನು ಬರಿಗೆಗಳಾಗಿ ಒಡೆದು, ಅವನ್ನು ಉಲಿಗಳೊಂದಿಗೆ ಸಂಬಂದಿಸಿ ಓದುವುದು ಹೇಗೆ ಎಂಬುದನ್ನು ಅವರು ಕಲಿತಿಲ್ಲ.
ಒಮ್ಮೆ ಪದಗಳನ್ನು ಬರಿಗೆಗಳಾಗಿ ಬಿಡಿಸಿ, ಅವನ್ನು ಉಲಿಗಳೊಂದಿಗೆ ಸಂಬಂದಿಸಲು ಕಲಿತಮೇಲೆ, ಆಗಾಗ ಬರುವ ಪದಗಳನ್ನು ಇಡಿ ಇಡಿಯಾಗಿ ಗುರುತಿಸಿ ಓದುವ ಬಗೆಯನ್ನೂ ಮಕ್ಕಳು ಕಲಿತುಕೊಳ್ಳಬೇಕಾಗುತ್ತದೆ; ಯಾಕೆಂದರೆ, ಬರಹಗಳನ್ನು ಬೇಗನೆ ಮತ್ತು ಸಲೀಸಾಗಿ ಓದಲು ಇಂತಹ ಕಲಿಕೆಯೂ ಬೇಕಾಗುತ್ತದೆ. ಆದರೆ, ಆಮೇಲೆಯೂ, ಅಪರೂಪಕ್ಕೆ ಬರುವ ಪದಗಳನ್ನು ಮತ್ತು ಹೊಸ ಪದಗಳನ್ನು ಓದಲು ಅವನ್ನು ಬರಿಗೆಗಳಾಗಿ ಒಡೆದು ಉಲಿಗಳೊಂದಿಗೆ ಸಂಬಂದಿಸುವ ಬಗೆ ಅವರಿಗೆ ಬೇಕಾಗುತ್ತದೆ.
ಬರಹಗಳಲ್ಲಿ ಬರುವ ಪದಗಳನ್ನು ಓದುವ ಬಗೆ ಹೇಗೆ ಎಂಬುದನ್ನು ಕಲಿತರೆ ಸಾಲದು, ಅವನ್ನು ಪದಕಂತೆಗಳಾಗಿ ಮತ್ತು ಸೊಲ್ಲುಗಳಾಗಿ ಜೋಡಿಸಿ, ಅವುಗಳಿಂದ ಹುರುಳನ್ನು ಪಡೆಯುವುದು ಹೇಗೆ ಎಂಬುದನ್ನೂ ಮಕ್ಕಳು ಕಲಿಯಬೇಕಾಗುತ್ತದೆ. ಅವರ ಓದು ಬೇಗನೆ ಮತ್ತು ಸಲೀಸಾಗಿ ನಡೆಯುತ್ತಿದೆಯಾದರೆ ಮಾತ್ರ ಅವರಿಗೆ ಈ ರೀತಿ ತಮ್ಮ ಓದಿನಿಂದ ಹುರುಳನ್ನು ಪಡೆಯಲು ಬರುತ್ತದೆ. ತುಂಬಾ ಮೆಲ್ಲಗೆ ಓದುವ ಮಕ್ಕಳಿಗೆ ಪದಗಳು ಮಾತ್ರ ಕಾಣಿಸುತ್ತವಲ್ಲದೆ ಪದಕಂತೆಗಳು ಇಲ್ಲವೇ ಸೊಲ್ಲುಗಳು ಕಾಣಿಸುವುದಿಲ್ಲ.
ಓದಲು ಕಲಿಯುತ್ತಿರುವ ಮಕ್ಕಳ ಮಿದುಳಿನಲ್ಲಿ ಮಾತಿನ ಪದನೆರಕೆ (ಪದಕೋಶ) ಮತ್ತು ಓದಿನ ಪದನೆರಕೆ ಎಂಬುದಾಗಿ ಎರಡು ಬಗೆಯ ಪದನೆರಕೆಗಳು ನೆಲೆಗೊಳ್ಳುತ್ತವೆ; ಇವುಗಳಲ್ಲಿ ಓದಿನ ಪದನೆರಕೆಯನ್ನು ಹಿಗ್ಗಿಸುವ ಮೂಲಕ ಮಕ್ಕಳು ಓದಿನಲ್ಲಿ ಮುಂದೆ ಬರುವಂತೆ ಮಾಡಬಹುದು. ಬಗೆ ಬಗೆಯ ಬರಹಗಳನ್ನು, ಮತ್ತು ಹೆಚ್ಚು ಹೆಚ್ಚು ಬರಹಗಳನ್ನು ಅವರು ಓದುವ ಹಾಗೆ ಮಾಡುವ ಮೂಲಕ ಅವರ ಈ ಓದಿನ ಪದನೆರಕೆಯನ್ನು ಹಿಗ್ಗಿಸಲು ಬರುತ್ತದೆ.
ಕೆಲವು ಮಂದಿ ತಾಯ್ತಂದೆಯರು ಪಟ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಮಕ್ಕಳು ಓದಬಾರದೆಂದು ಕಟ್ಟಲೆ ಮಾಡುತ್ತಾರೆ; ಕತೆ ಕಾದಂಬರಿಗಳನ್ನು ಓದಿ ಸಮಯ ಹಾಳುಮಾಡಬಾರದೆಂದು ಆಗಾಗ ಮಕ್ಕಳಿಗೆ ಹೇಳುತ್ತಿರುತ್ತಾರೆ. ಆದರೆ, ಬರೇ ಪಟ್ಯಪುಸ್ತಕಗಳನ್ನು ಮಾತ್ರವೇ ಓದುತ್ತಿದ್ದರೆ ಮಕ್ಕಳ ಓದಿನ ಪದನೆರಕೆ ತುಂಬಾ ಚಿಕ್ಕದಾಗಿಯೇ ಉಳಿಯುತ್ತದೆ. ಅದನ್ನು ಹಿಗ್ಗಿಸಬೇಕಿದ್ದಲ್ಲಿ ಅವರು ಎಲ್ಲಾ ಬಗೆಯ ಬರಹಗಳನ್ನೂ ಓದುತ್ತಿರಬೇಕು. ಹಾಗಾಗಿ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಮತ್ತು ಬೇರೆ ಬಗೆಯ ಬರಹಗಳನ್ನು ಅವರು ಓದುವಂತೆ ಮಾಡಬೇಕು.
ಓದಿನಲ್ಲಿ ತಮಗೆ ತಿಳಿಯದ ಪದ ಬಂದಾಗ, ಅದರ ಹುರುಳನ್ನು ಪದನೆರಕೆಯ ನೆರವಿನಿಂದ ಕಂಡುಹಿಡಿಯುವುದು ಹೇಗೆ ಎಂಬುದನ್ನೂ ಅವರಿಗೆ ತೋರಿಸಿಕೊಡಬೇಕು. ಪದನೆರಕೆಗಳಲ್ಲಿ ಪದಗಳಿಗೆ ಹಲವು ಹುರುಳುಗಳನ್ನು ಕೊಟ್ಟಿರುತ್ತಾರೆ. ಇವುಗಳಲ್ಲಿ ತಮ್ಮ ಓದಿಗೆ ಹೊಂದಿಕೆಯಾಗುವಂತಹದನ್ನು ಆರಿಸಿಕೊಳ್ಳುವುದು ಹೇಗೆ ಎಂಬುದನ್ನೂ ಅವರಿಗೆ ತೋರಿಸಿಕೊಡಬೇಕು. ಈ ರೀತಿ ತಮ್ಮ ಓದಿಗೆ ಪದನೆರಕೆಯ ನೆರವನ್ನು ಪಡೆಯಲು ಕಲಿತ ಮಕ್ಕಳ ಓದಿನ ಪದನೆರಕೆಯೂ ಬೇಗನೆ ಹಿಗ್ಗುತ್ತದೆ.
ಓದಿನಲ್ಲಿ ಹಿಂದೆ ಬೀಳುವ ಮಕ್ಕಳು ಬೇರೆ ವಿಶಯಗಳಲ್ಲೂ ಹಿಂದೆ ಬೀಳುತ್ತಾರೆ; ಯಾಕೆಂದರೆ, ಈ ಎಲ್ಲಾ ವಿಶಯಗಳ ಕಲಿಕೆಯನ್ನೂ ಅವರು ಓದಿನ ಮೂಲಕವೇ ನಡೆಸಬೇಕಾಗುತ್ತದೆ. ಹಾಗಾಗಿ, ಮಕ್ಕಳು ಬೇಗನೆ ಮತ್ತು ಸಲೀಸಾಗಿ ಓದಲು ಕಲಿಯುವಂತೆ ಮಾಡುವುದು, ಮತ್ತು ಇದಕ್ಕಾಗಿ ಅವರ ಓದು ಸರಿಯಾದ ಕ್ರಮದಲ್ಲಿ ಮುಂದುವರಿಯುವಂತೆ ಮಾಡುವುದು ತುಂಬಾ ಮುಕ್ಯವಾದ ಕೆಲಸವಾಗಿದೆ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 15
ಬೇಕು ಎನ್ನುತ್ತಿದ್ದಾರೆ ಇತ್ತೀಚೆಗೆ ಹಲವು ಮಂದಿ ತಿಳಿವಿಗರು; ಆದರೆ, ವ್ಯಾಕರಣವನ್ನು ಹಿಂದಿನ ಹಾಗೆ ಒಂದು ವಿಶಯವಾಗಿ ಕಲಿಸುವ ಬದಲು, ಮಕ್ಕಳ ಓದು ಮತ್ತು ಬರಹಗಳ ಕಲಿಕೆಗೆ ನೆರವಾಗುವ ಹಾಗೆ ನೇರವಲ್ಲದ ಬಗೆಯಲ್ಲಿ ಅದನ್ನು ಕಲಿಸಬೇಕು ಎಂಬುದು ಹೆಚ್ಚಿನ ತಿಳಿವಿಗರ ತೀರ‍್ಮಾನವಾಗಿದೆ.
ನಿಜಕ್ಕೂ ವ್ಯಾಕರಣದ ಕಟ್ಟಲೆಗಳನ್ನು ಮಕ್ಕಳಿಗೆ ಕಲಿಸುವುದು ತುಂಬಾ ತೊಡಕಿನ ಕೆಲಸ. ಯಾಕೆಂದರೆ, ಮೊದಲನೆಯದಾಗಿ, ಈ ಕಟ್ಟಲೆಗಳೆಲ್ಲ ತೊಡಕು ತೊಡಕಾದವುಗಳು; ಅವನ್ನು ವಿವರಿಸಲು ಬೇರೆಯೇ ಆದ ಅರಿಮೆಯ ಪದಗಳು ಬೇಕಾಗುತ್ತವೆ. ಇದಲ್ಲದೆ, ಅವುಗಳಲ್ಲಿ ಯಾವ ಕಟ್ಟಲೆಯೂ ಬೇರೆಯಾಗಿ ನಿಲ್ಲುವುದಿಲ್ಲ; ಎಲ್ಲವೂ ಒಂದರೊಡನೊಂದು ಹೆಣೆದಿರುತ್ತವೆ. ಹಾಗಾಗಿ, ವ್ಯಾಕರಣದ ಯಾವ ಕಟ್ಟಲೆಯನ್ನು ಕಲಿಸಬೇಕಿದ್ದರೂ, ಅದಕ್ಕೆ ಬೇರೆ ಕಟ್ಟಲೆಗಳೊಂದಿಗಿರುವ ಕೊಂಡಿಗಳನ್ನೂ ಕಲಿಸಿಕೊಡಬೇಕಾಗುತ್ತದೆ.
ಎರಡನೆಯದಾಗಿ, ವ್ಯಾಕರಣದ ಕಟ್ಟಲೆಗಳು ಓದಿಗೆ ಇಲ್ಲವೇ ಬರಹಕ್ಕೆ ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುವು ಎಂಬುದು ಅವನ್ನು ಕಲಿಯುವವರಿಗೆ ಸುಲಬವಾಗಿ ಗೊತ್ತಾಗುವುದಿಲ್ಲ, ಮತ್ತು ಅವು ಯಾಕೆ ಬೇಕಾಗುತ್ತವೆ ಎಂಬುದನ್ನು ತಿಳಿಯದವರಿಗೆ ಅವನ್ನು ಕಲಿಯುವಲ್ಲಿ ಯಾವ ಹುರುಪೂ ಇರುವುದಿಲ್ಲ. ಅವುಗಳ ಕಲಿಕೆ ಬರಿಯ ಒಂದು ಯಾಂತ್ರಿಕ ಕೆಲಸವಾಗಿಬಿಡುತ್ತದೆ.
ಹಿಂದಿನ ಕಾಲದ ಶಾಲೆಗಳಲ್ಲಿ ವ್ಯಾಕರಣವನ್ನು ಬೇರೆಯೇ ಒಂದು ವಿಶಯವಾಗಿ ಕಲಿಸಲಾಗುತ್ತಿತ್ತು, ಮತ್ತು ಈ ಕಾರಣದಿಂದಾಗಿ, ಅದೊಂದು ತುಂಬಾ ತೊಡಕು ತೊಡಕಾದ, ಮತ್ತು ತೀರಾ ಅನವಶ್ಯಕವಾದ ವಿಶಯವೆಂಬುದಾಗಿ ಅದನ್ನು ಕಲಿಯುವವರಿಗೆ ಮಾತ್ರವಲ್ಲ, ಅದನ್ನು ಕಲಿಸುವವರಿಗೂ ಅನಿಸುತ್ತಿತ್ತು. ಅಯ್ದಾರು ವರ‍್ಶ ಅದನ್ನು ಕಲಿಸಿದರೂ ಮಕ್ಕಳ ಓದಿನಲ್ಲಿ ಇಲ್ಲವೇ ಬರವಣಿಗೆಯಲ್ಲಿ ಅದರಿಂದಾಗಿ ಯಾವ ಮಾರ‍್ಪಾಡೂ ಉಂಟಾಗುವುದಿಲ್ಲ ಎಂಬುದನ್ನು ಸಂಶೋದನೆಗಳು ತೋರಿಸಿಕೊಟ್ಟುವು. ಇದನ್ನು ಗಮನಿಸಿದ ಹಲವು ತಿಳಿವಿಗರು ನುಡಿಯ ಕಲಿಕೆಗೆ ವ್ಯಾಕರಣದ ತಿಳಿವು ಬೇಕಾಗಿಲ್ಲ, ಮತ್ತು ಅದನ್ನು ಶಾಲೆಗಳಲ್ಲಿ ಕಲಿಸಬೇಕಾಗಿಲ್ಲ ಎಂಬ ತೀರ‍್ಮಾನಕ್ಕೆ ಬಂದಿದ್ದರು.
ಆದರೆ, ನಿಜಕ್ಕೂ ಇದೊಂದು ತಪ್ಪಾದ ತೀರ‍್ಮಾನವಾಗಿತ್ತು; ಯಾಕೆಂದರೆ, ಯಾವ ಕೆಲಸವೇ ಆಗಲಿ, ಅದನ್ನು ಜಾಣ್ಮೆಯಿಂದ ನಡೆಸಬೇಕೆಂದಿರುವವರಿಗೆ ಅದರ ಒಳಗುಟ್ಟಿನ ತಿಳಿವು ನೆರವಿಗೆ ಬಂದೇ ಬರುತ್ತದೆ. ಎತ್ತುಗೆಗಾಗಿ, ಕಾರನ್ನು ಓಡಿಸುವವರು ಅದರ ಬೇರೆ ಬೇರೆ ಅಂಗಗಳ ಗುರಿ, ಅವುಗಳ ಅಳವು-ನಲುವುಗಳು, ಅವುಗಳ ಕೆಲಸದ ಮೇಲೆ ಗಾಳಿ, ಮಳೆ, ಬಿಸಿಲು, ಮತ್ತು ದಾರಿಂii ಗೊತ್ತುಪಾಡುಗಳಿಂದ ಉಂಟಾಗಬಹುದಾದ ಅಡಚಣೆಗಳು ಮೊದಲಾದುವನ್ನು ಸರಿಯಾಗಿ ತಿಳಿದುಕೊಂಡಿರುವರಾದರೆ, ಆ ಕೆಲಸವನ್ನು ಅವರು ಹೆಚ್ಚು ಜಾಣ್ಮೆಯಿಂದ ನಡೆಸಬಲ್ಲರು.
ಓದುವ ಮತ್ತು ಬರೆಯುವ ಕೆಲಸಗಳೂ ಹೀಗೆಯೇ. ಅವುಗಳ ಒಳಗುಟ್ಟನ್ನು ತಿಳಿದುಕೊಂಡವರಿಗೆ ಅವನ್ನು ಹೆಚ್ಚು ಸುಳುವಾಗಿ ಮತ್ತು ಹೆಚ್ಚು ಚನ್ನಾಗಿ ನಡೆಸಲು ಬರುತ್ತದೆ. ಬರಹಗಳಲ್ಲಿ ಹಲವು ಬಗೆಗಳಿದ್ದು, ಅವನ್ನು ಓದಿ ತಿಳಿದುಕೊಳ್ಳುವಲ್ಲಿ ಇಲ್ಲವೇ ಅಂತಹವೇ ಬರಹಗಳನ್ನು ಹೊಸದಾಗಿ ಬರೆಯುವಲ್ಲಿ ಹಲವಾರು ಬಗೆಯ ವ್ಯಾಕರಣದ ಕಟ್ಟಲೆಗಳನ್ನು ಬಳಸಬೇಕಾಗುತ್ತದೆ; ಹಾಗಾಗಿ, ಅಂತಹ ಕಟ್ಟಲೆಗಳ ತಿಳಿವು ಈ ಕೆಲಸಗಳನ್ನು ಜಾಣ್ಮೆಯಿಂದ ನಡೆಸುವಲ್ಲಿ ನೆರವಾಗದಿರದು.
ಆದರೆ, ಮೇಲೆ ಸೂಚಿಸಿದ ಹಾಗೆ, ವ್ಯಾಕರಣದ ಕಟ್ಟಲೆಗಳನ್ನು ನೇರವಾಗಿ ಕಲಿಸಹೋಗದೆ, ಓದುವ ಮತ್ತು ಬರೆಯುವ ಕೆಲಸಗಳಲ್ಲಿ ಅವು ಹೇಗೆ ನೆರವಾಗುತ್ತವೆ ಎಂಬುದನ್ನು ತೋರಿಸಿಕೊಡುವ ಮೂಲಕ ಕಲಿಸಿದಲ್ಲಿ ಮಾತ್ರ ಅವು ಮಕ್ಕಳ ಓದು-ಬರಹದ ಕಲಿಕೆಯ ಮೇಲೆ ಪರಿಣಾಮವನ್ನು ಬೀರಬಲ್ಲುವು.
ಎತ್ತುಗೆಗಾಗಿ, ಕೆಲವು ಸೊಲ್ಲು(ವಾಕ್ಯ)ಗಳ ಹುರುಳೇನೆಂಬುದನ್ನು ತಿಳಿದುಕೊಳ್ಳುವಲ್ಲಿ ಮಕ್ಕಳಿಗೆ ತೊಂದರೆಯಾಗುತ್ತಿರಬಹುದು; ಅಂತಹ ಸೊಲ್ಲುಗಳಲ್ಲಿ ಮುಕ್ಯ ಅಂಶಗಳನ್ನು ಮುಕ್ಯವಲ್ಲದ ಅಂಶಗಳಿಂದ ಬೇರ‍್ಪಡಿಸುವುದು ಹೇಗೆ ಎಂಬುದನ್ನು ಮಕ್ಕಳಿಗೆ ತೋರಿಸಿಕೊಟ್ಟಲ್ಲಿ, ಅವರು ಅವುಗಳ ಹುರುಳನ್ನು ಸುಲಬವಾಗಿ ತಿಳಿದುಕೊಳ್ಳಬಲ್ಲರು. ಆದರೆ, ಸೊಲ್ಲುಗಳಲ್ಲಿ ಮುಕ್ಯ ಅಂಶ ಯಾವುದು ಮತ್ತು ಮುಕ್ಯವಲ್ಲದ ಅಂಶ ಯಾವುದು ಎಂಬುದನ್ನು ತೋರಿಸಿಕೊಡಬೇಕಾದರೆ, ಅವನ್ನು ಹೇಗೆ ಕಟ್ಟಲಾಗಿದೆ, ಅವುಗಳ ಒಳರಚನೆಯೆಂತಹದು ಎಂಬಂತಹ ವ್ಯಾಕರಣಕ್ಕೆ ಸಂಬಂದಿಸಿರುವ ಕಟ್ಟಲೆಗಳನ್ನು ಕಲಿಸಬೇಕಾಗುತ್ತದೆ.
ಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ತಿಳಿವಿಗರು ಓದು-ಬರಹದ ಕಲಿಕೆಯಲ್ಲಿ ವ್ಯಾಕರಣದ ಕೊಡುಗೆ ನಿಜಕ್ಕೂ ತುಂಬ ದೊಡ್ಡದು ಎಂಬುದನ್ನು ಕಂಡುಕೊಳ್ಳುತ್ತಿದ್ದಾರೆ. ಮಕ್ಕಳು ತಾವು ಓದಿ ತಿಳಿದುಕೊಳ್ಳಬೇಕಾಗಿರುವ ಇಲ್ಲವೇ ಬರೆಯಬೇಕಾಗಿರುವ ಸೊಲ್ಲುಗಳ ಒಳರಚನೆಯೆಂತಹದು ಎಂಬುದನ್ನು ಗಮನಿಸುವ ಹಾಗೆ ಮಾಡಿದಲ್ಲಿ ಅವರಿಗೆ ಆ ಕೆಲಸವನ್ನು ನಡೆಸಲು ಹೆಚ್ಚು ಸುಲಬವಾಗುತ್ತದೆ ಎಂಬುದನ್ನೂ ಅವರು ಕಂಡುಕೊಳ್ಳುತ್ತಿದ್ದಾರೆ.
ಇಂತಹ ತಿಳುವಳಿಕೆ ತರಗತಿಯಲ್ಲಿ ಮುಂದೆ ಇರುವ ಮಕ್ಕಳಿಗಿಂತಲೂ ಹಿಂದೆ ಬೀಳುವ ಮಕ್ಕಳಿಗೆ ಹೆಚ್ಚು ನೆರವಾಗುತ್ತದೆ ಎಂಬುದನ್ನೂ ಕಂಡುಕೊಳ್ಳಲಾಗಿದೆ. ಎತ್ತುಗೆಗಾಗಿ, ಮಾತಿನಲ್ಲಿ ಬರುವ ಹಾಗೆ ತುಂಡು ತುಂಡಾಗಿರುವ ಸೊಲ್ಲುಗಳು ಬರಹದಲ್ಲಿ ಬರಬಾರದು; ಅವೆಲ್ಲ ಇಡಿ ಇಡಿಯಾಗಿರಬೇಕು; ತುಂಡು ಸೊಲ್ಲುಗಳನ್ನು ಇಡೀ ಸೊಲ್ಲುಗಳ ಅಂಗಗಳನ್ನಾಗಿ ಮಾತ್ರ ಬಳಸಬಹುದು ಎಂದು ಹೇಳಿಕೊಟ್ಟಾಗ, ತರಗತಿಯಲ್ಲಿ ಮುಂದೆ ಇರುವ ಮಕ್ಕಳಿಗೆ ತಾವೇನು ಮಾಡಬೇಕು ಎಂಬುದು ಒಡನೆಯೇ ಗೊತ್ತಾಗುತ್ತದೆ.
ಆದರೆ, ತರಗತಿಯಲ್ಲಿ ಹಿಂದೆ ಬೀಳುವ ಮಕ್ಕಳಿಗೆ ಅದು ಗೊತ್ತಾಗುವುದಿಲ್ಲ. ಅವರಿಗೆ ಅದು ಗೊತ್ತಾಗುವ ಹಾಗೆ ಮಾಡಬೇಕಿದ್ದಲ್ಲಿ, ತುಂಡು ಸೊಲ್ಲುಗಳಿಗೂ ಇಡೀ ಸೊಲ್ಲುಗಳಿಗೂ ನಡುವಿರುವ ವ್ಯತ್ಯಾಸ ಎಂತಹದು ಎಂಬುದನ್ನು, ಮತ್ತು ತುಂಡು ಸೊಲ್ಲುಗಳನ್ನು ಇಡೀ ಸೊಲ್ಲುಗಳ ಅಂಗಗಳಾಗಿ ಮಾಡಿ ಬಳಸುವುದು ಹೇಗೆ ಎಂಬುದನ್ನು ತೋರಿಸಿಕೊಡಬೇಕಾಗುತ್ತದೆ. ಎಂದರೆ, ಇಡಿಯಾಗಿರುವ ಸೊಲ್ಲುಗಳ ಒಳರಚನೆಯ ಹಿಂದಿರುವ ವ್ಯಾಕರಣದ ಕಟ್ಟಲೆಗಳನ್ನು ಅವರಿಗೆ ವಿವರಿಸಬೇಕಾಗುತ್ತದೆ.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಇನ್ನೊಂದು ಸಮಸ್ಯೆಯೂ ವ್ಯಾಕರಣದ ಕಲಿಕೆಯನ್ನು ಕಾಡುತ್ತಿದೆ; ಅದೇನೆಂದರೆ, ಇವತ್ತು ಕನ್ನಡ ವ್ಯಾಕರಣದ ಹೊತ್ತಗೆಗಳಲ್ಲಿ ಕಾಣಿಸಿಕೊಳ್ಳುವ ಕಟ್ಟಲೆಗಳಲ್ಲಿ ಹೆಚ್ಚಿನವನ್ನೂ ಕನ್ನಡ ಬರಹಗಳನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ನೆರವಾಗುವ ಹಾಗೆ ಕಲಿಸಲು ಯಾರಿಗೂ ಸಾದ್ಯವಾಗಲಾರದು. ಯಾಕೆಂದರೆ, ಈ ವ್ಯಾಕರಣಗಳನ್ನು ಬರೆದವರು ಸಂಸ್ಕ್ರುತ ವ್ಯಾಕರಣದಲ್ಲಿದ್ದ ಕಟ್ಟಲೆಗಳನ್ನು ಹಾಗೆಯೇ ಕನ್ನಡಕ್ಕೆ ತಂದುಹಾಕಿದ್ದಾರಲ್ಲದೆ, ನಿಜಕ್ಕೂ ಕನ್ನಡ ಪದಗಳ ಇಲ್ಲವೇ ಸೊಲ್ಲುಗಳ ಬಳಕೆಯ ಹಿಂದೆ ಎಂತಹ ಕಟ್ಟಲೆಗಳು ಅಡಗಿವೆ ಎಂಬುದನ್ನು ಕಂಡುಹಿಡಿಯುವ ಮೂಲಕ ಅವನ್ನು ಬರೆದಿಲ್ಲ.
ಹಾಗಾಗಿ, ಈ ಕಟ್ಟಲೆಗಳನ್ನು ಸಂಸ್ಕ್ರುತ ಬರಹಗಳನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ನೆರವಾಗುವ ಹಾಗೆ ಕಲಿಸಲು ಸಾದ್ಯವಾಗಬಹುದಲ್ಲದೆ, ಕನ್ನಡ ಬರಹಗಳನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ನೆರವಾಗುವ ಹಾಗೆ ಕಲಿಸಲು ಸಾದ್ಯವಾಗಲಾರದು. ಕನ್ನಡ ಬರಹಗಳಲ್ಲಿ ಕನ್ನಡದವೇ ಆದ ಬೇರೆಯೇ ಕಟ್ಟಲೆಗಳು ಬಳಕೆಯಾಗುತ್ತವೆ; ಈ ಕಟ್ಟಲೆಗಳು ಎಂತಹವು ಎಂಬುದನ್ನು ಇವತ್ತು ಕಂಡುಹಿಡಿಯಬೇಕಾಗಿದೆ, ಮತ್ತು ಮಕ್ಕಳ ಓದು-ಬರಹದ ಕಲಿಕೆಗೆ ಅವು ಹೇಗೆ ನೆರವಾಗಬಲ್ಲುವು ಎಂಬುದನ್ನೂ ಕಂಡುಹಿಡಿಯಬೇಕಾಗಿದೆ. ಈ ಎರಡು ಕೆಲಸಗಳನ್ನು ನಡೆಸಿದ ಮೇಲಶ್ಟೇ ಮಕ್ಕಳಿಗೆ ಅವರ ಓದಿನ ಮತ್ತು ಬರಹದ ಕಲಿಕೆಯಲ್ಲಿ ನೆರವಾಗುವ ಹಾಗೆ ಕನ್ನಡ ವ್ಯಾಕರಣದ ಕಟ್ಟಲೆಗಳನ್ನು ಕಲಿಸಲು ಸಾದ್ಯವಾಗಬಲ್ಲುದು.
ಮಾತಿನ ಮೂಲಕ ನಾವು ನಮ್ಮ ಅನಿಸಿಕೆಗಳನ್ನು ಮತ್ತು ಅನುಬವಗಳನ್ನು ಇನ್ನೊಬ್ಬರಿಗೆ ಹೇಗೆ ತಿಳಿಸುತ್ತೇವೆ, ಮತ್ತು ಇನ್ನೊಬ್ಬರು ಬಳಸಿದ ಮಾತುಗಳಿಂದ ಅವರ ಅನಿಸಿಕೆ ಮತ್ತು ಅನುಬವಗಳು ಎಂತಹವು ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ ಎಂಬುದನ್ನು ವ್ಯಾಕರಣ ತಿಳಿಸುತ್ತದೆ. ಮನುಶ್ಯನಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಈ ಒಂದು ವಿಶಿಶ್ಟವಾದ ಅಳವಿನ ಕುರಿತಾಗಿ ಏನು ಹೇಳಬೇಕಿದ್ದರೂ ವ್ಯಾಕರಣದಲ್ಲಿ ಬಳಕೆಯಾಗುವ ಅರಿಮೆಯ ಪದಗಳನ್ನು ಬಳಸಲೇಬೇಕಾಗುತ್ತದೆ. ಹಾಗಾಗಿ, ಮಕ್ಕಳಿಗೆ ಈ ಅರಿಮೆಯ ತಿಳಿವು ದೊರಕುವಂತೆ ಮಾಡುವುದು ಬೇರೆಲ್ಲಾ ಬಗೆಯ ಅರಿಮೆ(ವಿಜ್ನಾನ)ಗಳ ತಿಳಿವು ದೊರಕುವಂತೆ ಮಾಡುವಶ್ಟೇ ಮುಕ್ಯವಾದುದು.
ಹಾಗಾಗಿ, ಅದರ ತಿಳಿವನ್ನು ಮಕ್ಕಳಿಗೆ ಯಾವಾಗ ಮತ್ತು ಹೇಗೆ ಕೊಡಿಸಬಹುದು ಎಂಬ ವಿಶಯದಲ್ಲಿ ಚರ‍್ಚೆ ನಡೆಸಬಹುದಲ್ಲದೆ, ಅದು ಬೇಕೇ ಬೇಡವೇ ಎಂಬ ವಿಶಯದಲ್ಲಲ್ಲ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 9
ಇಂಗ್ಲಿಶ್‌ನಂತಹ ಒಂದು ನುಡಿಯನ್ನು ಮಕ್ಕಳಿಗೆ ಕಲಿಸುವುದಕ್ಕೂ ಅದನ್ನೇ ಗಣಿತ, ವಿಜ್ನಾನ, ಚರಿತ್ರೆ ಮೊದಲಾದ ವಿಶಯಗಳನ್ನು ಕಲಿಸುವಲ್ಲಿ ಕಲಿಕೆನುಡಿಯಾಗಿ ಬಳಸುವುದಕ್ಕೂ ನಡುವೆ ತುಂಬಾ ವ್ಯತ್ಯಾಸವಿದೆ. ನಿಜಕ್ಕೂ ಇವತ್ತು ಹೆಚ್ಚಿನ ಜನರಿಗೂ ಬೇಕಾಗಿರುವುದು ಇಂಗ್ಲಿಶ್ ನುಡಿಯ ಕಲಿಕೆಯಲ್ಲದೆ, ಅದನ್ನು ಕಲಿಕೆನುಡಿಯಾಗಿ ಬಳಸಬೇಕೆಂಬುದಲ್ಲ. ಆದರೆ, ಈ ವ್ಯತ್ಯಾಸವನ್ನು ತಿಳಿದುಕೊಳ್ಳಲಾರದ ಜನರು ತಮ್ಮ ಮಕ್ಕಳನ್ನು ಎಶ್ಟೇ ಕಶ್ಟವಾದರೂ ಹೆದರದೆ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ‘ಇಂಗ್ಲಿಶ್ ಶಾಲೆ’ಗಳಿಗೆ ಕಳಿಸುತ್ತಿದ್ದಾರೆ.
ಆದರೆ, ಹೀಗೆ ಮಾಡುವುದರಿಂದ ಅವರಲ್ಲಿ ಹೆಚ್ಚಿನವರ ಆಸೆಯೂ ಕಯ್ಗೂಡುವುದಿಲ್ಲ. ಮೇಲ್ವರ‍್ಗದ ಮಕ್ಕಳು ಇಂತಹ ಶಾಲೆಗಳಿಗೆ ಹೋಗಿ ದೊಡ್ಡ ದೊಡ್ಡ ಕೆಲಸಗಳನ್ನು ಹಿಡಿದು ಲಕ್ಶ ಲಕ್ಶ ಸಂಪಾದಿಸುವುದನ್ನು ನೋಡಿ, ತಮ್ಮ ಮಕ್ಕಳೂ ಹಾಗೆಯೇ ಮುಂದೆ ಬರಬೇಕೆಂದು ಅವರು ಬಯಸುವುದು ಸಹಜ. ಆದರೆ, ಇಂಗ್ಲಿಶ್ ಶಾಲೆಗಳು ಅವರ ಈ ಬಯಕೆಯನ್ನು ಪೂರಯ್ಸಲಾರವು.
ಇದಕ್ಕೆ ಹಲವು ಕಾರಣಗಳಿವೆ: ಮೊದಲನೆಯದಾಗಿ, ಇಂಗ್ಲಿಶ್ ಶಾಲೆಗಳಲ್ಲೂ ಹಲವು ಬಗೆಗಳಿವೆ; ಇಂಗ್ಲಿಶ್ ನುಡಿಯನ್ನು ಮತ್ತು ಬೇರೆ ವಿಶಯಗಳನ್ನು ತುಂಬಾ ಚನ್ನಾಗಿ ಕಲಿಸಬಲ್ಲ ಶಾಲೆಗಳು ಕೆಲವಾದರೆ, ಯಾವುದನ್ನೂ ಸರಿಯಾಗಿ ಕಲಿಸಲಾಗದ ಶಾಲೆಗಳು ಹಲವು; ಕೆಳವರ‍್ಗದ ಮಕ್ಕಳಲ್ಲಿ ಹೆಚ್ಚಿನವರೂ ಇಂತಹ ಎರಡನೇ ಬಗೆಯ ಶಾಲೆಗಳಿಗೆ ಮಾತ್ರವೇ ಹೋಗಬಲ್ಲರಾದ ಕಾರಣ, ಅವರ ಕಲಿಕೆ ಅಲ್ಲಿಯೂ ಕುಂಟುತ್ತಲೇ ನಡೆಯುತ್ತದೆ.
ತಮಗೆ ಮಾತನಾಡಲು ತಿಳಿದಿರುವ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳು ತಮಗೆ ಸ್ವಲ್ಪವೂ ತಿಳಿಯದಿರುವ ಇಂಗ್ಲಿಶ್‌ನಂತಹ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳಿಗಿಂತ ಬೇಗನೆ ತಮ್ಮ ಕಲಿಕೆಯಲ್ಲಿ ಮುಂದೆ ಹೋಗಬಲ್ಲರೆಂಬುದನ್ನು ಎಲ್ಲಾ ಬಗೆಯ ಅರಕೆಗಳೂ ತೋರಿಸಿಕೊಟ್ಟಿವೆ; ಇಂಗ್ಲಿಶ್ ನುಡಿಯನ್ನು ಕಲಿಯುವಲ್ಲಿಯೂ ಅವರು ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳ ಮಕ್ಕಳಿಗಿಂತ ಬೇಗನೆ ಮುಂದೆ ಹೋಗಬಲ್ಲರು.
ದಕ್ಶಿಣ ಆಪ್ರಿಕಾದಲ್ಲಿ ಎಂಟನೇ ತರಗತಿಯ ವರೆಗೂ ಕಲಿಕೆನುಡಿಯಾಗಿ ತಾಯ್ನುಡಿಯನ್ನು ಬಳಸುತ್ತಿದ್ದ ಶಾಲೆಗಳಲ್ಲಿ ಮಕ್ಕಳು ಹನ್ನೆರಡನೇ ತರಗತಿಯಲ್ಲಿ ನೂರಕ್ಕೆ ೮೪ರಂತೆ ಪಾಸಾಗುತ್ತಿದ್ದರು. ತಾಯ್ತಂದೆಯವರ ಒತ್ತಾಯದ ಮೇಲೆ, ಅಯ್ದನೇ ತರಗತಿಯಿಂದಲೇ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಲು 1976ರಲ್ಲಿ ತೊಡಗಲಾಯಿತು. 1992ರಲ್ಲಿ ಈ ಮಕ್ಕಳ ಕಲಿಕೆಯನ್ನು ಪರೀಕ್ಶಿಸಿದಾಗ, ಹನ್ನೆರಡನೇ ತರಗತಿಯ ಮಕ್ಕಳು ನೂರಕ್ಕೆ 44ರಂತೆ ಪಾಸಾಗುವ ಮಟ್ಟಕ್ಕೆ ಇಳಿದಿದ್ದುದು ಕಂಡುಬಂತು. ಇಂಗ್ಲಿಶ್ ನುಡಿಯ ಕಲಿಕೆಯಲ್ಲೂ ಪಾಸಾಗುವವರ ಎಣಿಕೆ ಅಶ್ಟೇ ಕೆಳಗೆ ಇಳಿದಿತ್ತು.
ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಿಯೂ ಮೇಲ್ವರ‍್ಗದ ಮಕ್ಕಳು ಇವತ್ತು ಮುಂದೆ ಬರುತ್ತಿರುವುದಕ್ಕೆ ಕಾರಣ ಬೇರೆಯೇ ಇದೆ. ಅವರಿಗೆ ಶಾಲೆಯ ಕಲಿಕೆ ಮಾತ್ರವಲ್ಲದೆ ಬೇರೆಯೂ ಹಲವು ಬಗೆಯ ಕಲಿಕೆಗಳು ನೆರವು ನೀಡುತ್ತಿವೆ. ಇಂತಹ ನೆರವು ಕೆಳವರ‍್ಗದ ಮಕ್ಕಳಿಗೆ ಸಿಗುವುದಿಲ್ಲ. ಮಕ್ಕಳಿಗೆ ಎಶ್ಟು ಪದಗಳ ಮೇಲೆ ಹತೋಟಿಯಿದೆ ಎಂಬುದರ ಮೇಲೆ ಅವರು ತಮ್ಮ ಕಲಿಕೆಯಲ್ಲಿ ಎಶ್ಟು ಮುಂದೆ ಹೋಗಬಲ್ಲರು ಎಂಬುದು ಅವಲಂಬಿಸಿರುತ್ತದೆ, ಮತ್ತು ಸಾಮಾನ್ಯವಾಗಿ, ಮಕ್ಕಳ ಹತೋಟಿಯಲ್ಲಿರುವ ಪದಗಳ ಎಣಿಕೆ ಅವರ ತಾಯ್ತಂದೆಯರು ಬರಹಬಲ್ಲವರೋ ಇಲ್ಲವೇ ಬರಹಬಾರದವರೋ ಎಂಬುದರ ಮೇಲೆಯೂ ಅವಲಂಬಿಸಿರುತ್ತದೆ.
ಹೆಚ್ಚು ಪದಗಳ ಮೇಲೆ ಹತೋಟಿಯಿರುವ ಮಕ್ಕಳು ಹೆಚ್ಚು ಬರಹಗಳನ್ನು ಓದಿ ತಿಳಿದುಕೊಳ್ಳಬಲ್ಲರು, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ಬಹಳ ಬೇಗನೆ ಹೆಚ್ಚುತ್ತಾ ಹೋಗುತ್ತದೆ; ಇದಕ್ಕೆ ಬದಲು, ಕಡಿಮೆ ಪದಗಳ ಮೇಲೆ ಹತೊಟಿಯಿರುವ ಮಕ್ಕಳು ಪಟ್ಯಪುಸ್ತಕಗಳನ್ನು ಬಿಟ್ಟು ಬೇರೆ ಬರಹಗಳನ್ನು ಓದಲು ಹೋಗುವುದಿಲ್ಲ, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ತುಂಬಾ ಮೆಲ್ಲಗೆ ಹೆಚ್ಚುತ್ತಿರುತ್ತದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳಲ್ಲಿ ಕಲಿಯುವ ಮೇಲ್ವರ‍್ಗದವರ ಮಕ್ಕಳಿಗೆ ತಮ್ಮ ಹತೋಟಿಯಲ್ಲಿರುವ ಇಂಗ್ಲಿಶ್ ಪದಗಳನ್ನು ಹೆಚ್ಚಿಸಲು ಮನೆಯಲ್ಲಿಯೂ ನೆರವು ಸಿಗುತ್ತದೆ; ಆದರೆ, ಕೆಳವರ‍್ಗದ ಮಕ್ಕಳಿಗೆ ಇಂತಹ ಮನೆಯ ನೆರವು ಸಿಗುವುದಿಲ್ಲ. ಇದರಿಂದಾಗಿಯೂ ಅವರು ಇಂತಹ ಶಾಲೆಗಳಲ್ಲಿ ಹಿಂದೆ ಬೀಳುತ್ತಾರೆ.
ಇನ್ನೊಂದು ವಿಶಯವೇನೆಂದರೆ, ಎರಡು ಇಲ್ಲವೇ ಮೂರನೇ ತರಗತಿಯ ವರೆಗೆ ಮಕ್ಕಳು ಕಲಿಯುವುದು ಓದುವುದು ಮತ್ತು ಬರೆಯುವುದು ಹೇಗೆ ಎಂಬುದನ್ನು. ತಮಗೆ ತಿಳಿಯದಿರುವ ಇಂಗ್ಲಿಶ್ ನುಡಿಯಲ್ಲಿ ಇದನ್ನು ನಡೆಸುವುದು ಅವರಿಗೆ ಅಶ್ಟೊಂದು ತೊಡಕಿನದಾಗಿರುವುದಿಲ್ಲ. ಆದರೆ, ಮೂರು ಇಲ್ಲವೇ ನಾಲ್ಕನೇ ತರಗತಿಯಿಂದ ಅವರು ತಮ್ಮ ಓದಿನ ಮೂಲಕ ಗಣಿತ, ವಿಜ್ನಾನ ಮೊದಲಾದ ಹಲವು ಬಗೆಯ ವಿಶಯಗಳನ್ನು ತಿಳಿದುಕೊಳ್ಳಲು ತೊಡಗಬೇಕಾಗುತ್ತದೆ; ಕಣ್ಣಿಗೆ ಕಾಣದ ಮತ್ತು ಕಿವಿಗೆ ಕೇಳಿಸದ ಪರಿಕಲ್ಪನೆಗಳನ್ನು ಅರಿತುಕೊಳ್ಳಬೇಕಾಗುತ್ತದೆ.
ಇಂತಹ ಕೆಲಸಗಳನ್ನು ನಡೆಸಲು ಇಂಗ್ಲಿಶ್ ನುಡಿಯನ್ನು ತುಂಬಾ ಚನ್ನಾಗಿ ಕಲಿಸುವ ಶಾಲೆಗಳಲ್ಲೂ ಮಕ್ಕಳಿಗೆ ಆರೇಳು ವರ‍್ಶಗಳ ಕಲಿಕೆ ಬೇಕಾಗುತ್ತದೆಯೆಂದು ಕಂಡುಹಿಡಿಯಲಾಗಿದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವಲ್ಲಿ ಈ ಕೆಲಸಗಳನ್ನು ನಾಲ್ಕನೇ ತರಗತಿಯಿಂದಲೇ ನಡೆಸಬೇಕಾಗುತ್ತದೆಯಾದ ಕಾರಣ, ಹೆಚ್ಚಿನ ಮಕ್ಕಳೂ ಇದರಲ್ಲಿ ಸೋಲುತ್ತಾರೆ, ಮತ್ತು ಹಲವು ಮಂದಿ ಮಕ್ಕಳು ಈ ತೊಡಕನ್ನು ಎದುರಿಸಲಾಗದೆ ಶಾಲೆಯಿಂದ ಹೊರಬೀಳುತ್ತಾರೆ. ಇಲ್ಲಿಯೂ ಮೇಲ್ವರ‍್ಗದವರ ಮತ್ತು ಬಲ್ಲಿದರ ಮಕ್ಕಳಿಗಿಂತ ಕೆಳವರ‍್ಗದವರ ಮತ್ತು ಬಡವರ ಮಕ್ಕಳೇ ಹೆಚ್ಚು ಸೋಲುತ್ತಾರೆ.
ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಮಕ್ಕಳಿಗೆ ತಮ್ಮ ತಾಯ್ನುಡಿಯ ಮೇಲೆ, ಮತ್ತು ಅದನ್ನು ಬಳಸುವ ತಾಯ್ತಂದೆಯರು, ನೆಂಟರು, ನೆರೆಹೊರೆಯವರು ಮೊದಲಾದವರ ಮೇಲೆ ಕೀಳರಿಮೆ ಬೆಳೆಯುತ್ತದೆ; ತಮ್ಮ ಕಲಿಕೆ ಮುಂದುವರಿದಂತೆಲ್ಲ ಮಕ್ಕಳು ಇವರಿಂದ ದೂರವಾಗುತ್ತಾ ಹೋಗುತ್ತಾರೆ. ಈ ತೊಡಕು ಮೇಲ್ವರ‍್ಗದವರ ಮಕ್ಕಳಿಗಿಂತಲೂ ಕೆಳವರ‍್ಗದ ಮಕ್ಕಳನ್ನು ಹೆಚ್ಚು ಕಾಡುತ್ತದೆ. ಯಾಕೆಂದರೆ, ಮೇಲ್ವರ‍್ಗದ ಮಕ್ಕಳ ತಾಯ್ತಂದೆಯರು, ನೆಂಟರು ಮತ್ತು ನೆರೆಹೊರೆಯವರು ಸಾಮಾನ್ಯವಾಗಿ ಇಂಗ್ಲಿಶ್ ತಿಳಿದಿರುತ್ತಾರೆ.
ಇಂತಹ ಹಲವು ಸಮಸ್ಯೆಗಳಿರುವುದರಿಂದಾಗಿ, ಕೆಳವರ‍್ಗದ ಮಕ್ಕಳು ಮೇಲೆ ಬರಬೇಕಿದ್ದಲ್ಲಿ, ಮತ್ತು ತಮ್ಮೊಂದಿಗೆ ತಮ್ಮ ಸಮಾಜವನ್ನೂ ಮೇಲೆ ತರಬೇಕಿದ್ದಲ್ಲಿ, ಅವರಿಗೆ ಕಲಿಕೆನುಡಿಯಾಗಿ ಕನ್ನಡವನ್ನೇ ಬಳಸುತ್ತಿರಬೇಕು. ಇದರೊಂದಿಗೆ ಇಂಗ್ಲಿಶ್ ನುಡಿಯನ್ನೂ ಒಂದು ವಿಶಯವಾಗಿ ಮಾತ್ರ ಕಲಿಸುತ್ತಿರಬೇಕಲ್ಲದೆ ಕಲಿಕೆನುಡಿಯಾಗಿ ಬಳಸಲು ಹೋಗಬಾರದು.
ಇಂಗ್ಲಿಶ್ ನುಡಿಯ ಕಲಿಕೆಯಲ್ಲಿ ಅವರು ಹಿಂದೆ ಬೀಳುತ್ತಿರುವುದಕ್ಕೆ ಅವರ ಕಲಿಕೆನುಡಿಯಾಗಿ ಕನ್ನಡವನ್ನು ಬಳಸುತ್ತಿರುವುದು ಕಾರಣವಲ್ಲ; ಇಂಗ್ಲಿಶ್ ನುಡಿಯನ್ನು ಅವರಿಗೆ ಶಾಲೆಯಲ್ಲಿ ಸರಿಯಾಗಿ ಕಲಿಸದಿರುವುದೇ ಕಾರಣ. ಹಾಗಾಗಿ, ಕಲಿಕೆನುಡಿಯನ್ನು ಬದಲಾಯಿಸುವುದರಿಂದ ಅವರು ಇಂಗ್ಲಿಶ್ ಕಲಿಕೆಯಲ್ಲಿ ಮುಂದೆ ಹೋಗುವ ಬದಲು, ಬೇರೆ ವಿಶಯಗಳ ಕಲಿಕೆಯಲ್ಲೂ ಹಿಂದೆ ಬೀಳಲು ತೊಡಗುತ್ತಾರೆ.
ಇವತ್ತು ಮುಂದೆ ಬಂದಿರುವ ಎಲ್ಲಾ ನಾಡುಗಳಲ್ಲೂ ಮಕ್ಕಳ ಕಲಿಕೆನುಡಿ ಅವರ ತಾಯ್ನುಡಿಯಾಗಿದೆ; ಇಂಗ್ಲಿಶ್‌ನಂತಹ ಬೇರೊಂದು ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಯಾವ ನಾಡೂ ಇದುವರೆಗೆ ಮುಂದೆ ಬಂದಿಲ್ಲ. ಇದಕ್ಕೆ ಕಾರಣವೇನೆಂದರೆ, ತಮ್ಮ ನಾಡಿನದಲ್ಲದ ಕಲಿಕೆನುಡಿಯಲ್ಲಿ ಕಲಿತವರು ನಾಡಿನ ಸಾಮಾನ್ಯ ಜನರಿಂದ ಬೇರಾಗಿಯೇ ಉಳಿಯುತ್ತಾರೆ, ಮತ್ತು ಅವರ ಕಲಿಕೆಯಿಂದ ಸಾಮಾನ್ಯ ಜನರಿಗೆ ಯಾವ ಪ್ರಯೋಜನವೂ ದೊರಕುವುದಿಲ್ಲ.
ಹಾಗಾಗಿ, ಕಲಿಯುವ ಮಕ್ಕಳ ವಯ್ಯಕ್ತಿಕ ಏಳಿಗೆಗೆ ಮಾತ್ರವಲ್ಲದೆ, ಅವರ ಸಮಾಜದ ಮತ್ತು ನಾಡಿನ ಏಳಿಗೆಗಾಗಿಯೂ ಕಲಿಕೆನುಡಿಯಾಗಿ ಅವರ ತಾಯ್ನುಡಿ ಇಲ್ಲವೇ ಪರಿಸರದ ನುಡಿಯನ್ನು ಬಳಸುವುದೇ ಸರಿಯಾದ ದಾರಿ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 6
ಇವತ್ತು ಹಲವು ಜನರು ತಮ್ಮ ಮಕ್ಕಳನ್ನು ಇಂಗ್ಲಿಶ್ಕಲಿಕೆನುಡಿಯ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ; ಇಂತಹ ಹಲವು ಶಾಲೆಗಳಲ್ಲಿ ಮಕ್ಕಳು ಇಂಗ್ಲಿಶ್ ನುಡಿಯನ್ನು ಮಾತ್ರ ಬಳಸಬೇಕು, ಕನ್ನಡವನ್ನು ಬಳಸಲೇ ಕೂಡದು ಎಂಬ ಒಂದು ಕಟ್ಟಲೆಯನ್ನು ಮಾಡಿರುತ್ತಾರೆ. ಮಕ್ಕಳು ಶಾಲೆಯಲ್ಲಿ ಇಂಗ್ಲಿಶ್ ನುಡಿಯನ್ನು ಮಾತ್ರವೇ ಬಳಸುತ್ತಿದ್ದಲ್ಲಿ ಅವರಿಗೆ ಅದನ್ನು ಬೇಗನೆ ಮತ್ತು ತಪ್ಪಿಲ್ಲದೆ ಬಳಸಲು ಬರಬಹುದೆಂಬ ತಪ್ಪು ಅನಿಸಿಕೆಯೇ ಈ ಕಟ್ಟಲೆಗೆ ಕಾರಣ.
ಕೆಲವು ಮನೆಗಳಲ್ಲಿಯೂ ಇದೇ ಕಾರಣಕ್ಕಾಗಿ ಮಕ್ಕಳೊಂದಿಗೆ ಅವರ ತಾಯ್ತಂದೆಯರು ಇಂಗ್ಲಿಶ್ ನುಡಿಯನ್ನೇ ಬಳಸತೊಡಗುತ್ತಾರೆ. ಆದರೆ, ಹೀಗೆ ಮಾಡುವುದರಿಂದ ಮಕ್ಕಳು ಚಿಕ್ಕಂದಿನಲ್ಲಿ ಕಲಿತಿದ್ದ ಕನ್ನಡ ನುಡಿಯನ್ನು ಮರೆಯುತ್ತಾ ಹೋಗುತ್ತಾರೆ, ಮತ್ತು ಕೊನೆಗೆ ಅವರಿಗೆ ಅದರಲ್ಲಿ ಮಾತನಾಡಲು ಬರುವುದಿಲ್ಲವೆಂದೇ ಆಗುತ್ತದೆ.
ಮಕ್ಕಳ ಬೆಳವಣಿಗೆಯ ಮಟ್ಟಿಗೆ ಇದು ಸರಿಯೇ ಎಂಬುದನ್ನು ಈ ಶಾಲೆಗಳನ್ನು ನಡೆಸುವವರಾಗಲಿ, ಇಲ್ಲವೇ ಮಕ್ಕಳ ತಾಯಿತಂದೆಯರಾಗಲಿ ಪರಿಶೀಲಿಸಿದ ಹಾಗಿಲ್ಲ. ಇಂಗ್ಲಿಶ್ ಕಲಿಯುವ ಮಕ್ಕಳು ಅದರೊಂದಿಗೆ ತರಗತಿಯಲ್ಲಿ ತಮ್ಮ ತಾಯ್ನುಡಿಯನ್ನೂ ಬಳಸುತ್ತಿದ್ದರೆ ಅವರಿಗೆ ಸರಿಯಾಗಿ ಇಂಗ್ಲಿಶ್ ಕಲಿಯಲು ಬರುವುದಿಲ್ಲ ಎಂಬ ಅನಿಸಿಕೆ ಹಿಂದಿನ ಕಾಲದಲ್ಲಿತ್ತು; ಆದರೆ, ಕಳೆದ ಕೆಲವು ವರ‍್ಶಗಳಲ್ಲಿ, ಅದರಲ್ಲೂ ಕಳೆದ ಹತ್ತು-ಹದಿನಯ್ದು ವರ‍್ಶಗಳಲ್ಲಿ ನಡೆಸಿದ ಅರಕೆಗಳೆಲ್ಲವೂ ಇದು ತಪ್ಪು ಅನಿಸಿಕೆಯೆಂಬುದನ್ನು ತೋರಿಸಿಕೊಟ್ಟಿವೆ.
ಒಂದು ನುಡಿಯನ್ನು ಶಾಲೆಗೆ ಬರುವ ಮೊದಲೇ ಕಲಿತಿರುವ ಮಕ್ಕಳು ಎರಡನೇ ನುಡಿಯನ್ನು ಆ ನುಡಿಯ ಮೂಲಕವೇನೇ ಕಲಿಯಬೇಕಾಗುತ್ತದೆ; ಮೊದಲಿಗೆ ಅವರು ತಮ್ಮ ತಾಯ್ನುಡಿಯ ಪದಗಳನ್ನು ಮತ್ತು ಕಟ್ಟಲೆಗಳನ್ನು ಎರಡನೇ ನುಡಿಯ ಮಾತುಗಳಲ್ಲಿ ಸೇರಿಸಿ ಹೇಳಬಹುದು; ಆದರೆ, ಇದು ಅವರ ಕಲಿಕೆಯ ಒಂದು ಹಂತವನ್ನು ಸೂಚಿಸುತ್ತದೆಯಲ್ಲದೆ, ಅವರು ಕಲಿಕೆಯಲ್ಲಿ ಗೊಂದಲಗೊಂಡಿರುವುದನ್ನಾಗಲಿ, ತಪ್ಪು ದಾರಿ ಹಿಡಿದಿರುವುದನ್ನಾಗಲಿ ಸೂಚಿಸುವುದಿಲ್ಲ. ಕಲಿಕೆ ಮುಂದುವರಿದಂತೆಲ್ಲ ಅವರು ಈ ಎರಡು ನುಡಿಗಳ ಪದಗಳನ್ನು ಮತ್ತು ಕಟ್ಟಲೆಗಳನ್ನು ಬೇರೆ ಬೇರಾಗಿ ಇರಿಸಿಕೊಳ್ಳಲು ಕಲಿಯುತ್ತಾರೆ.
ಮೊದಲನೇ ನುಡಿಯನ್ನು ಅವರು ಶಾಲೆಯಲ್ಲಿ ಬಳಸಲೇಬಾರದೆಂಬುದಾಗಿ ಅವರ ಮೇಲೆ ಒತ್ತಾಯ ಹೇರಿದರೆ, ಅವರಿಗೆ ಅದರ ಮೇಲೆ ಕೀಳರಿಮೆಯುಂಟಾಗುತ್ತದೆ ಮಾತ್ರವಲ್ಲ, ಅವರ ಎರಡನೇ ನುಡಿಯ ಕಲಿಕೆಯೂ ತೊಡಕಿನದಾಗುತ್ತದೆ. ಮಕ್ಕಳಿಗೆ ಚನ್ನಾಗಿ ತಿಳಿದಿರುವ ನುಡಿಯನ್ನು ಉಳಿಸಿ, ಅದರ ಮೂಲಕ ಎರಡನೆಯ ನುಡಿಯನ್ನು ಕಲಿಸುವುದೇ ಸರಿಯಾದ ದಾರಿ.
ಇದಲ್ಲದೆ, ಈ ಎರಡು ನುಡಿಗಳ ಬಳಕೆಯಲ್ಲೂ ಮಕ್ಕಳು ಒಂದೇ ರೀತಿಯಲ್ಲಿ ಪಳಗುವಂತೆ ಮಾಡುವ ಮೂಲಕ, ಅವರು ಒಂದು ನುಡಿಯನ್ನು ಮಾತ್ರವೇ ಬಳಸಬಲ್ಲ ಮಕ್ಕಳಿಗಿಂತ ಜಾಣತನದಲ್ಲಿ, ಬುದ್ದಿವಂತಿಕೆಯಲ್ಲಿ, ಮತ್ತು ನುಡಿಯನ್ನು ಬಳಸಲು ಬೇಕಾಗುವ ಹಲವು ಬಗೆಯ ಚಳಕಗಳಲ್ಲಿ ಮುಂದೆ ಹೋಗುತ್ತಾರೆ ಎಂಬುದನ್ನು ಇತ್ತೀಚೆಗೆ ನಡೆಸಿದ ಹಲವು ಅರಕೆಗಳು ತೋರಿಸಿಕೊಟ್ಟಿವೆ.
ಎರಡು ನುಡಿಗಳನ್ನು ಬಳಸುವವರು ಎರಡು ಬಗೆಯ ಪದಗಳನ್ನು ಮತ್ತು ಕಟ್ಟಲೆಗಳನ್ನು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅವುಗಳಲ್ಲಿ ಒಂದು ನುಡಿಯನ್ನು ಬಳಸುವಾಗ ಆ ನುಡಿಗೆ ಸಂಬಂದಿಸಿದ ಪದಗಳು ಮತ್ತು ಕಟ್ಟಲೆಗಳು ಮಾತ್ರ ಬಳಕೆಯಾಗುವಂತೆ, ಮತ್ತು ಇನ್ನೊಂದು ನುಡಿಗೆ ಸಂಬಂದಿಸಿದ ಪದಗಳು ಮತ್ತು ಕಟ್ಟಲೆಗಳು ಬಳಕೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಮಾಡುವಲ್ಲಿ ಪಳಗಿರುವ ಮಕ್ಕಳು ತಾವು ಕಲಿತ ಈ ಚಳಕವನ್ನು ಬೇರೆ ಕೆಲಸಗಳಲ್ಲೂ ಬಳಸಬಲ್ಲರು.
ಎತ್ತುಗೆಗಾಗಿ, ಯಾವುದಾದರೊಂದು ತೊಡಕನ್ನು ಬಗೆಹರಿಸಬೇಕಾದಾಗ, ಈ ಮಕ್ಕಳು ಅದಕ್ಕೆ ಸಂಬಂದಿಸಿದ ವಿಶಯಗಳನ್ನು ಮಾತ್ರವೇ ಗಮನದಲ್ಲಿರಿಸಿಕೊಂಡು, ಅದಕ್ಕೆ ಸಂಬಂದಿಸದ ವಿಶಯಗಳನ್ನು ದೂರ ಇರಿಸಬಲ್ಲರು. ಹಾಗಾಗಿ, ತೊಡಕುಗಳನ್ನು ಬಗೆಹರಿಸುವಲ್ಲಿ ಅವರು ಒಂದು ನುಡಿಯಲ್ಲಿ ಮಾತ್ರವೇ ಪಳಗಿರುವ ಮಕ್ಕಳಿಗಿಂತ ಮುಂದಿರುತ್ತಾರೆ.
ಎರಡು ನುಡಿಗಳಲ್ಲಿ ಪಳಗಿರುವ ಮಕ್ಕಳು ಸಂದರ‍್ಬಕ್ಕನುಸಾರವಾಗಿ ಒಂದು ನುಡಿಯಿಂದ ಇನ್ನೊಂದು ನುಡಿಗೆ ನೆಗೆಯುತ್ತಿರಬಲ್ಲರು; ಒಂದು ಮಾತನ್ನು ಒಂದು ನುಡಿಯಲ್ಲಿ ಹೇಳಿ, ಒಡನೆಯೇ ಇನ್ನೊಂದು ಮಾತನ್ನು ಇನ್ನೊಂದು ನುಡಿಯಲ್ಲಿ ಹೇಳಬಲ್ಲರು; ಎಂದರೆ, ಒಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸುತ್ತಿರುವವರು ಒಡನೆಯೇ ಇನ್ನೊಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸಲು ತೊಡಗಬಲ್ಲರು. ಯಾವ ಸಂದರ‍್ಬದಲ್ಲಿ ಯಾವ ನುಡಿಯನ್ನು ಬಳಸಬೇಕು ಎಂಬುದೂ ಅವರಿಗೆ ತಿಳಿದಿರುತ್ತದೆ.
ಎರಡು ನುಡಿಗಳಲ್ಲಿ ಪಳಗುತ್ತಿರುವಾಗ ಪಡೆದ ಈ ಚಳಕವನ್ನೂ ಅವರು ಬೇರೆ ಕೆಲಸಗಳನ್ನು ನಡೆಸುವಲ್ಲಿ ಬಳಸಿಕೊಳ್ಳಬಲ್ಲರು. ಹಾಗಾಗಿ, ಒಂದು ನುಡಿಯನ್ನು ಮಾತ್ರವೇ ತಿಳಿದಿರುವ ಮಕ್ಕಳ ಮನಸ್ಸಿಗಿಂತ ಅವರ ಮನಸ್ಸು ಹೊಸ ಹೊಸ ಸಂದರ‍್ಬಗಳಿಗೆ ಹೊಂದಿಕೊಳ್ಳುವಂತಹ ಗುಣವನ್ನು ಹೆಚ್ಚು ಪಡೆದಿರುತ್ತದೆ, ಮತ್ತು ಈ ಕಾರಣಕ್ಕಾಗಿ ಅವರಿಗೆ ಹೆಚ್ಚು ತಾಳ್ಮೆಯಿರುತ್ತದೆ.
ಬೇರ‍್ಪಡಿಸುವುದು ಮತ್ತು ಒಂದೆಡೆ ಸೇರಿಸುವುದು ಎಂಬುದಾಗಿ ಎರಡು ಬಗೆಯ ಬಗೆತಗಳಿವೆ: ಒಂದು ವಸ್ತುವಿಗೆ ಎಶ್ಟೆಲ್ಲಾ ಬಳಕೆಗಳಿವೆ ಎಂಬುದನ್ನು ಕಂಡುಕೊಳ್ಳುವುದು ಬೇರ‍್ಪಡಿಸುವ ಬಗೆತ, ಮತ್ತು ಒಂದು ತೊಡಕಿಗೆ ಸಂಬಂದಿಸಿದ ಹಲವಾರು ವಿಶಯಗಳನ್ನು ಒಟ್ಟು ಸೇರಿಸಿ ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದು ಒಂದೆಡೆ ಸೇರಿಸುವ ಬಗೆತ. ಈ ಎರಡು ಬಗೆಯ ಬಗೆತಗಳನ್ನೂ ಎರಡು ನುಡಿಗಳನ್ನು ತಿಳಿದಿರುವ ಮಕ್ಕಳು ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಹೆಚ್ಚು ಚನ್ನಾಗಿ ನಡೆಸಬಲ್ಲರು.
ಒಂದೇ ನುಡಿಯನ್ನು ತಿಳಿದಿರುವ ಮಕ್ಕಳು ಓದುತ್ತಿರುವಾಗ, ಅವರ ಗಮನ ಪದಗಳ ಉಲಿಗಳ ಮೇಲಿರುತ್ತದೆ; ಇದಕ್ಕೆ ಬದಲು, ಎರಡು ನುಡಿಗಳನ್ನು ಚನ್ನಾಗಿ ತಿಳಿದಿರುವ ಮಕ್ಕಳ ಗಮನ ಪದಗಳ ಹುರುಳಿನ ಮೇಲಿರುತ್ತದೆ. ಹಾಗಾಗಿ, ಈ ಮಕ್ಕಳು ಬರಹಗಳ ಹುರುಳನ್ನು ತಿಳಿದುಕೊಳ್ಳುವಲ್ಲಿ ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಎರಡು-ಮೂರು ತರಗತಿಗಳಶ್ಟು ಮುಂದಿರುತ್ತಾರೆ.
ಎರಡು ನುಡಿಗಳ ತಿಳಿವು ಮಕ್ಕಳ ಮುಂದೆ ಎರಡು ಸಂಸ್ಕ್ರುತಿಗಳನ್ನು ತೆರೆದಿಡುತ್ತದೆ; ಆ ಎರಡು ನುಡಿಗಳ ಬರಹಗಳನ್ನೂ ಓದಲು ಕಲಿತಲ್ಲಿ, ಎರಡು ಬಗೆಯ ಬರಹ ಸಂಸ್ಕ್ರುತಿಗಳೂ ಅವರದಾಗುತ್ತವೆ. ಈ ತಿಳಿವು ಮುಂದೆ ಜೀವನದುದ್ದಕ್ಕೂ ಅವರ ನೆರವಿಗೆ ಬರುತ್ತದೆ.
ತಮಗೆ ತಿಳಿದಿರುವ ನುಡಿಯಲ್ಲಿ ಮಕ್ಕಳು ಹೆಚ್ಚು ಸುಲಬವಾಗಿ ಓದಲು ಮತ್ತು ಬರೆಯಲು ಕಲಿಯಬಲ್ಲರು. ಹಾಗಾಗಿ, ಮಕ್ಕಳಿಗೆ ಮೊದಲು ಅವರಿಗೆ ತಿಳಿದಿರುವ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಸಿ, ಆಮೇಲೆ ಇಂಗ್ಲಿಶ್‌ನಲ್ಲಿ ಕಲಿಸುವುದೇ ಸರಿಯಾದ ದಾರಿ. ಯಾಕೆಂದರೆ, ಮೊದಲನೇ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಯುವಾಗ ಪಡೆದ ಚಳಕಗಳನ್ನು ಅವರು ಸುಲಬವಾಗಿ ತಮ್ಮ ಎರಡನೇ ನುಡಿಯ ಕಲಿಕೆಯಲ್ಲೂ ಬಳಸಿಕೊಳ್ಳಬಲ್ಲರು.
ಇಂಗ್ಲಿಶ್‌ನಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆಯಿಂದಾಗಿ, ಅದರ ಪದಗಳ ಬರವಣಿಗೆಯಲ್ಲಿ ಬರುವ ಬರಿಗೆಗಳಿಗೂ ಅವುಗಳ ಓದಿನಲ್ಲಿ ಬರುವ ಉಲಿಗಳಿಗೂ ನಡುವೆ ಸಂಬಂದವಿದೆಯೆಂಬುದು ಅದನ್ನು ಓದಲು ಕಲಿಯುವವರಲ್ಲಿ ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ. ಆದರೆ, ಇದನ್ನು ಗಮನಿಸಲು ಬಾರದಿರುವ ಮಕ್ಕಳಿಗೆ ಬರಹಗಳನ್ನು ಸಲೀಸಾಗಿ ಓದಲು ಬರುವುದಿಲ್ಲ.
ಕನ್ನಡ ಬರಹದಲ್ಲಿ ಬರಿಗೆಗಳಿಗೂ ಉಲಿಗಳಿಗೂ ನಡುವೆ ನೇರವಾದ ಸಂಬಂದವಿದೆ. ಸಂಸ್ಕ್ರುತದ ಎರವಲು ಪದಗಳು ಮಾತ್ರ ಇದಕ್ಕೆ ಹೊರಪಡಿಕೆಗಳಾಗಿವೆ. ಹಾಗಾಗಿ, ಮಕ್ಕಳಿಗೆ ಮೊದಲು ಕನ್ನಡದವೇ ಆದ ಪದಗಳು ಮಾತ್ರ ಇರುವ ಬರಹಗಳನ್ನು ಓದಲು ಕಲಿಸಿದಲ್ಲಿ, ಅವರು ಬಹಳ ಬೇಗನೆ ಅವನ್ನು ಸಲೀಸಾಗಿ ಓದುವುದು ಹೇಗೆಂಬುದನ್ನು ತಿಳಿದುಕೊಳ್ಳಬಲ್ಲರು.
ಅವರಿಗೆ ಇಂಗ್ಲಿಶ್ ಬರಹಗಳನ್ನು ಓದಲು ಆಮೇಲೆ ಕಲಿಸಿದಲ್ಲಿ, ಕನ್ನಡದ ಓದಿನಲ್ಲಿ ತಾವು ಪಡೆದ ಚಳಕವನ್ನು ಅವರು ಅಲ್ಲಿಯೂ ಬಳಸಿ ಹೆಚ್ಚು ಬೇಗನೆ ಅವನ್ನು ಸರಿಯಾಗಿ ಓದಲು ಕಲಿಯಬಲ್ಲರು.
ಬರೆಯುವ ಕೆಲಸವನ್ನೂ ಮಕ್ಕಳು ತಮಗೆ ಚನ್ನಾಗಿ ತಿಳಿದಿರುವ ಕನ್ನಡದಲ್ಲಿ ಹೆಚ್ಚು ಬೇಗನೆ ನಡೆಸಲು ಕಲಿಯಬಲ್ಲರು, ಮತ್ತು ಆಮೇಲೆ ಇಂಗ್ಲಿಶ್‌ನಲ್ಲಿ ಬರೆಯಬೇಕಾದಾಗ, ಆ ಚಳಕವನ್ನೇ ಅಲ್ಲಿಯೂ ಬಳಸಿಕೊಳ್ಳಬಲ್ಲರು.
ಇಂಗ್ಲಿಶ್ ನುಡಿಯ ಮೇಲಿರುವ ವ್ಯಾಮೋಹದಿಂದಾಗಿ, ಕನ್ನಡ ನುಡಿ ಕೊಡಬಲ್ಲ ಈ ಎಲ್ಲಾ ಪ್ರಯೋಜನಗಳನ್ನೂ ಮಕ್ಕಳು ಕಳೆದುಕೊಳ್ಳುವಂತೆ ಮಾಡುವುದು ಹೆಡ್ಡತನವಲ್ಲವೇ?
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)