Posts Tagged ‘ಸಂಸ್ಕ್ರುತ’
ನುಡಿಯರಿಮೆಯ ಇಣುಕುನೋಟ – 33
ಎಲ್ಲಾ ನುಡಿಗಳಿಗೂ ಅವುಗಳದೇ ಆದ ಒಂದು ಸೊಗಡುಎಂಬುದಿರುತ್ತದೆ. ಇದನ್ನು ಬರಹಗಳು ಹೆಚ್ಚು ಕೆಡದಂತೆ ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವು ತಮ್ಮ ಜೀವಂತಿಕೆಯನ್ನು ಕಳೆದುಕೊಳ್ಳುತ್ತವೆ, ಮತ್ತು ಸಾಮಾನ್ಯ ಜನರಿಂದ ದೂರವಾಗುತ್ತವೆ. ಅಂತಹ ಬರಹಗಳನ್ನು ಕಲಿಯುವ ಮತ್ತು ಬಳಸುವ ಕೆಲಸವೂ ಆ ನುಡಿಯನ್ನಾಡುವ ಜನರಿಗೆ ತುಂಬಾ ತೊಡಕಿನದಾಗುತ್ತದೆ. ನುಡಿಗಳಿಗಿರುವ ಈ ಸೊಗಡು ಅವುಗಳ ಪದಗಳಲ್ಲಿ ಬರುವ ಉಲಿಗಳಲ್ಲಿ, ಉಲಿಗಳ ಓರಣಗಳಲ್ಲಿ, ಪದಗಳಿಗೆ ಒಟ್ಟು(ಪ್ರತ್ಯಯ)ಗಳನ್ನು ಇಲ್ಲವೇ ಬೇರೆ ಪದಗಳನ್ನು ಸೇರಿಸಿದಾಗ ಅವುಗಳ ಉಲಿಗಳಲ್ಲಿ ನಡೆಯುವ ಮಾರ್ಪಾಡುಗಳಲ್ಲಿ, ಪದಗಳನ್ನು ಸೇರಿಸಿ ಬೇರೆ ಪದಗಳನ್ನು ಉಂಟುಮಾಡುವ ಬಗೆಗಳಲ್ಲಿ, ಮತ್ತು ಪದಗಳಿಂದ ಪದಕಂತೆಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವ ಬಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಕನ್ನಡಕ್ಕೂ ಇಂತಹ ತನ್ನದೇ ಆದ ಒಂದು ಸೊಗಡಿದೆ, ಮತ್ತು ಅದು ಸಂಸ್ಕ್ರುತ, ಹಿಂದಿ, ಇಂಗ್ಲಿಶ್ ಮೊದಲಾದ ಬೇರೆ ನುಡಿಗಳಿಗಿರುವ ಸೊಗಡಿಗಿಂತ ತೀರ ಬೇರಾಗಿದೆ; ಕನ್ನಡದ ಉಲಿಗಳು, ಅವುಗಳ ಓರಣಗಳು, ಅವುಗಳ ಸೇರಿಕೆಯ ಮಾರ್ಪಾಡುಗಳು, ಕನ್ನಡದಲ್ಲಿ ಪದ, ಪದಕಂತೆ ಮತ್ತು ಸೊಲ್ಲುಗಳನ್ನು ಉಂಟುಮಾಡುವ ಬಗೆಗಳು ಮೊದಲಾದುವನ್ನು ಸಂಸ್ಕ್ರುತದಂತಹ ಬೇರೆ ನುಡಿಗಳಲ್ಲಿ ಕಾಣಿಸುವ ಬಗೆಗಳೊಂದಿಗೆ ಹೋಲಿಸಿ ನೋಡಿದಾಗ, ನಿಜಕ್ಕೂ ಕನ್ನಡದ ಸೊಗಡು ಎಂತಹದು ಎಂಬುದು ಗೊತ್ತಾಗುತ್ತದೆ.
(1) ಸಂಸ್ಕ್ರುತ ಪದಗಳಲ್ಲಿ ಬಳಕೆಯಾಗುವ ಖಛಠಥಫ ಮತ್ತು ಘಝಢಧಭಗಳೆಂಬ ಒತ್ತುಸಿರಿನ ಬರಿಗೆಗಳು (ಮಹಾಪ್ರಾಣಾಕ್ಶರಗಳು) ಕನ್ನಡ ಪದಗಳಲ್ಲಿಲ್ಲ; ಆದರೆ, ಸಂಸ್ಕ್ರುತ ಪದಗಳಲ್ಲಿ ಕಾಣಿಸದಿರುವ ಗಿಡ್ಡ ಎಕಾರ ಮತ್ತು ಒಕಾರಗಳು ಕನ್ನಡ ಪದಗಳಲ್ಲಿವೆ. ಸಂಸ್ಕ್ರುತದಲ್ಲಿರುವ ಋಕಾರ ಮತ್ತು ಷಕಾರಗಳು ಕನ್ನಡದಲ್ಲಿಲ್ಲ; ಆದರೆ, ಸಂಸ್ಕ್ರುತದಲ್ಲಿಲ್ಲದ ಎಯ್, ಒಯ್, ಉಯ್, ಆಯ್, ಒವ್, ಇವ್ ಮೊದಲಾದ ಹಲವು ಸ್ವರ ಮತ್ತು ಯಕಾರ ಇಲ್ಲವೇ ವಕಾರಗಳ ಜೋಡಿಗಳು ಕನ್ನಡದಲ್ಲಿವೆ.
(2) ಈ ಎರಡು ನುಡಿಗಳಿಗೂ ಸಮಾನವಾಗಿರುವ ಅಕ್ಶರಗಳು ಹಲವಿವೆಯಾದರೂ ಅವು ಒಂದೇ ರೀತಿಯಾಗಿ ಬಳಕೆಯಾಗುವುದಿಲ್ಲ. ಸಂಸ್ಕ್ರುತದಲ್ಲಿ ಒತ್ತಕ್ಶರಗಳಿಂದ ಮೊದಲಾಗುವ ಪದಗಳು ಸಾಕಶ್ಟಿವೆ (ಕ್ರಾಂತಿ, ಕ್ಷಮೆ, ಜ್ಞಾನ, ಜ್ಯೋತಿ, ದ್ವೇಷ, ಮ್ಲೇಚ್ಛ). ಆದರೆ ಕನ್ನಡದವೇ ಆದ ಪದಗಳಲ್ಲಿ ಆ ರೀತಿ ಒತ್ತಕ್ಶರಗಳು ಪದಗಳ ಮೊದಲಿಗೆ ಬರುವುದಿಲ್ಲ. ಪದಗಳ ನಡುವೆ ಬರಬಲ್ಲ ಒತ್ತಕ್ಶರಗಳಲ್ಲೂ ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ವ್ಯತ್ಯಾಸವಿದೆ. ಸಂಸ್ಕ್ರುತದ ಭಕ್ತ, ಅಜ್ಞಾನ, ವತ್ಸ, ಮತ್ಸ್ಯ ಮೊದಲಾದ ಪದಗಳಲ್ಲಿ ನಡುವೆ ಬಂದಿರುವ ಕ್ತ್, ಜ್ಞ್, ತ್ಸ್, ತ್ಸ್ಯ್ ಮೊದಲಾದ ಹಲವು ಬಗೆಯ ಒತ್ತಕ್ಶರಗಳು ಕನ್ನಡ ಪದಗಳಲ್ಲಿ ಕಾಣಿಸುವುದಿಲ್ಲ.
(3) ಎರಡು ಇಲ್ಲವೇ ಹೆಚ್ಚು ಪದಗಳನ್ನು ಒಟ್ಟುಸೇರಿಸಿ ಹೊಸ ಪದಗಳನ್ನು ತಯಾರಿಸುವ ಹೊಲಬುಗಳು ಈ ಎರಡು ನುಡಿಗಳಲ್ಲಿ ಬೇರೆ ಬೇರಾಗಿವೆ. ಸಂಸ್ಕ್ರುತದಲ್ಲಿ ಸಾಮಾನ್ಯವಾಗಿ ಹೆಸರುಪದಗಳನ್ನು ಮಾತ್ರ ಇಂತಹ ರಚನೆಗಳಲ್ಲಿ ಬಳಸಲಾಗುತ್ತದೆ; ಆದರೆ, ಕನ್ನಡದಲ್ಲಿ ಹೆಸರುಪದ (ತಲೆಗೂದಲು, ಬಯಲಾಟ), ಎಸಕಪದ (ಚುಚ್ಚುಮದ್ದು, ಕಡೆಗೋಲು) ಮತ್ತು ಪರಿಚೆಪದಗಳೆಂಬ (ದೊಡ್ಡಮ್ಮ, ಬಿಸಿನೀರು) ಮೂರು ಬಗೆಯ ಪದಗಳನ್ನೂ ಇಂತಹ ರಚನೆಗಳಲ್ಲಿ ಬಳಸಲು ಬರುತ್ತದೆ.
(4) ಕನ್ನಡದಲ್ಲಿ ಸಾಮಾನ್ಯವಾಗಿ ಎರಡಕ್ಕಿಂತ ಹೆಚ್ಚು ಪದಗಳನ್ನು ಈ ರೀತಿ ಜೋಡಿಸುವುದು ಅಪರೂಪ; ಆದರೆ, ಸಂಸ್ಕ್ರುತದಲ್ಲಿ ಮೂರು-ನಾಲ್ಕು ಪದಗಳನ್ನು ಸೇರಿಸಿ ರಚಿಸಿರುವ ಜೋಡುಪದಗಳೂ ಬೇಕಾದಶ್ಟಿವೆ (ಪೂರ್ವಜನ್ಮಕೃತಂ, ಮತ್ತಮಾತಂಗಗಾಮಿ, ಸಕಲನೀತಿಶಾಸ್ತ್ರತತ್ವಜ್ಞಃ).
(5) ಒಟ್ಟು(ಪ್ರತ್ಯಯ)ಗಳನ್ನು ಸೇರಿಸಿ ಹೊಸ ಪದಗಳನ್ನು ತಯಾರಿಸುವ ವಿಶಯದಲ್ಲೂ ಕನ್ನಡ ಸಂಸ್ಕ್ರುತಕ್ಕಿಂತ ಬೇರಾಗಿದೆ. ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚು ಒಟ್ಟುಗಳನ್ನು ಸೇರಿಸಿ ರಚಿಸಿರುವ ಪದಗಳು ತುಂಬಾ ಕಡಿಮೆ; ಆದರೆ, ಸಂಸ್ಕ್ರುತದ ಹೆಚ್ಚಿನ ಪದಗಳಲ್ಲೂ ಎರಡು ಇಲ್ಲವೇ ಹೆಚ್ಚು ಒಟ್ಟುಗಳು ಸೇರಿರುವುದನ್ನು ಕಾಣಬಹುದು (ಅ-ಜ್ಞಾನ್-ಇ, ಕರ್-ತೃ-ತ್ವ). ಕನ್ನಡದಲ್ಲಿ ಒಟ್ಟುಗಳನ್ನು ಪದಗಳ ಕೊನೆಯಲ್ಲಿ ಮಾತ್ರ ಬಳಸಲು ಬರುತ್ತದೆ; ಆದರೆ, ಸಂಸ್ಕ್ರುತದಲ್ಲಿ ಅವನ್ನು ಪದಗಳ ಮೊದಲಿಗೂ ಬಳಸಬಹುದು (ಸತ್ಯ-ಅಸತ್ಯ, ಸ್ವಾಗತ-ಸುಸ್ವಾಗತ, ಜೀವಿ-ನಿರ್ಜೀವಿ, ರಕ್ಷಣೆ-ಸಂರಕ್ಷಣೆ).
(6) ಪದಕ್ಕೆ ಪದ ಸೇರಿದಾಗ, ಇಲ್ಲವೇ ಪದಕ್ಕೆ ಒಟ್ಟು ಸೇರಿದಾಗ, ಅವುಗಳಲ್ಲಿ ನಡೆಯುವ ಸೇರಿಕೆಯ ಬದಲಾವಣೆಗಳು ಕನ್ನಡ ಮತ್ತು ಸಂಸ್ಕ್ರುತ ನುಡಿಗಳಲ್ಲಿ ಬೇರೆ ಬೇರಾಗಿವೆ: ಇಕಾರದ ಅನಂತರ ಅಕಾರ ಬಂದಾಗ, ಕನ್ನಡದಲ್ಲಿ ಇಕಾರ ಬಿದ್ದುಹೋಗಿ ಅಕಾರ ಉಳಿಯುತ್ತದೆ (ಅಲ್ಲಿ+ಅಲ್ಲಿ=ಅಲ್ಲಲ್ಲಿ); ಆದರೆ, ಸಂಸ್ಕ್ರುತದಲ್ಲಿ ಇಕಾರ ಯಕಾರವಾಗುತ್ತದೆ (ಅತಿ+ಅಲ್ಪ=ಅತ್ಯಲ್ಪ). ಅಕಾರದ ಅನಂತರ ಇಕಾರ ಬಂದರೂ ಕನ್ನಡದಲ್ಲಿ ಇಂತಹದೇ ಮೊದಲನೆಯ ಸ್ವರ ಬಿದ್ದುಹೋಗಿ ಎರಡನೆಯದು ಉಳಿಯುತ್ತದೆ (ಅಲ್ಲಿಂದ+ಇಳಿದು=ಅಲ್ಲಿಂದಿಳಿದು); ಆದರೆ, ಸಂಸ್ಕ್ರುತದಲ್ಲಿ ಅವೆರಡೂ ಬಿದ್ದುಹೋಗಿ ಹೊಸದೊಂದು ಸ್ವರ (ಏಕಾರ) ಬಂದುಸೇರುತ್ತದೆ (ರಾಜ+ಇಂದ್ರ=ರಾಜೇಂದ್ರ).
(7) ಒಟ್ಟುಗಳನ್ನು ಸೇರಿಸಿ ಹೊಸಪದಗಳನ್ನು ರಚಿಸುವಲ್ಲಿ ಕನ್ನಡ ಮತ್ತು ಸಂಸ್ಕ್ರುತಗಳ ನಡುವೆ ಹಲವು ಮುಕ್ಯವಾದ ವ್ಯತ್ಯಾಸಗಳಿವೆ: ಸಂಸ್ಕ್ರುತ ಪದಗಳಿಗೆ ಯ ಇಲ್ಲವೇ ಇಕ ಒಟ್ಟನ್ನು ಸೇರಿಸಿದಾಗ, ಹಲವು ತೊಡಕಾದ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಪದಗಳ ಮೊದಲಿಗೆ ಬರುವ ಗಿಡ್ಡ ಅಕಾರ ಉದ್ದ ಆ ಎಂದಾಗುವುದು (ಚಪಲ-ಚಾಪಲ್ಯ, ಪ್ರಮಾಣ-ಪ್ರಾಮಾಣಿಕ), ಇ, ಈ ಮತ್ತು ಏ ಸ್ವರಗಳು ಐ ಎಂದಾಗುವುದು (ನಿಸರ್ಗ-ನೈಸರ್ಗಿಕ, ದೀನ-ದೈನ್ಯ, ಚೇತನ-ಚೈತನ್ಯ), ಉ, ಊ ಮತ್ತು ಓ ಸ್ವರಗಳು ಔ ಎಂದಾಗುವುದು (ಸುಖ-ಸೌಖ್ಯ, ಪೂರ್ವಾಹ್ನ-ಪೌರ್ವಾಹ್ನಿಕ, ಲೋಕ-ಲೌಕಿಕ) ಮೊದಲಾದವು ಇಂತಹ ಕೆಲವು ಸಂಸ್ಕ್ರುತದ ನಿಯಮಗಳು.
ಆದರೆ, ಕನ್ನಡದಲ್ಲಿ ಒಟ್ಟುಗಳನ್ನು ಸೇರಿಸಿ ಪದಗಳನ್ನು ರಚಿಸುವಲ್ಲಿ ಇವಕ್ಕಿಂತ ತೀರ ಬೇರಾಗಿರುವ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಇವು (ಕನ್ನಡಿಗರ ಮಟ್ಟಿಗೆ) ಸಂಸ್ಕ್ರುತದ ಸೇರಿಕೆಯ ನಿಯಮಗಳಶ್ಟು ತೊಡಕಿನವಾಗಿಲ್ಲ. ಕನ್ನಡ ಪದಗಳಿಗೆ ಇಕೆ ಒಟ್ಟನ್ನು ಸೇರಿಸಿದಾಗ ಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ (ಬಳಲು-ಬಳಲಿಕೆ, ಹೊಗಳು-ಹೊಗಳಿಕೆ, ಅಂಜು-ಅಂಜಿಕೆ) ಮತ್ತು ಪದಗಳ ಕೊನೆಯ ಇಕಾರ ಹಾಗೆಯೇ ಉಳಿದು ಇಕೆ ಒಟ್ಟಿನ ಮೊದಲ ಸ್ವರ ಬಿದ್ದುಹೋಗುತ್ತದೆ (ಇರಿ-ಇರಿಕೆ, ತಿರಿ-ತಿರಿಕೆ, ಇಳಿ-ಇಳಿಕೆ).
ಕನ್ನಡದ ಸೊಗಡು ಸಂಸ್ಕ್ರುತದ ಸೊಗಡಿಗಿಂತ ತೀರ ಬೇರಾದುದು ಎಂಬುದನ್ನು ಅವು ಬಳಸುವ ಪದಗಳ ಸ್ವರೂಪದಲ್ಲಿ ಕಾಣಿಸುವಂತಹ ಈ ವ್ಯತ್ಯಾಸಗಳು ತುಂಬಾ ಸ್ಪಶ್ಟವಾಗಿ ತೋರಿಸಿಕೊಡುತ್ತವೆ. ಕನ್ನಡ ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಅವುಗಳಲ್ಲಿ ಸ್ವಲ್ಪವೂ ಬದಲಾವಣೆಯನ್ನು ಮಾಡದೆ ಬಳಸಿದಲ್ಲಿ ಅಂತಹ ಬರಹ ತನ್ನದೇ ಆದ ಸೊಗಡನ್ನು ಪೂರ್ತಿ ಕಳೆದುಕೊಳ್ಳುತ್ತದೆ. ಈ ರೀತಿ ತನ್ನ ಹುಟ್ಟುಸೊಗಡನ್ನು ಕಳೆದುಕೊಳ್ಳುವ ಬರಹ ತನ್ನತನವನ್ನೂ ಕಳೆದುಕೊಳ್ಳುತ್ತದೆ, ಮತ್ತು ಅದರ ಜೀವಂತಿಕೆ ನಶ್ಟವಾಗಿ ಅದರಲ್ಲಿ ಕ್ರುತಕತೆ ತುಂಬಿಕೊಳ್ಳುತ್ತದೆ. ಇದಲ್ಲದೆ, ಅಂತಹ ಬರಹಕ್ಕೂ ಹೆಚ್ಚಿನ ಕನ್ನಡಿಗರ ಮಾತಿಗೂ ನಡುವೆ ದೊಡ್ಡ ಕಂದಕವೇರ್ಪಟ್ಟು, ಅದು ಅವರೆಲ್ಲರಿಂದಲೂ ದೂರವಾಗುತ್ತದೆ. ಯಾಕೆಂದರೆ, ಬರಹ ಆ ರೀತಿ ಬದಲಾದಾಗಲೂ ಜನರ ಆಡುನುಡಿ ಅದಕ್ಕನುಗುಣವಾಗಿ ಬದಲಾಗುವುದಿಲ್ಲ. ಅದು ತನ್ನ ಪದಸ್ವರೂಪವನ್ನು ಮತ್ತು ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.
ಇದಕ್ಕೆ ಕಾರಣವೇನೆಂದರೆ, ಆಡುನುಡಿಯನ್ನು ಮಕ್ಕಳು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುತ್ತಾರೆ; ಅದನ್ನು ಮಕ್ಕಳಿಗೆ ಯಾರೂ ಕಲಿಸಿಕೊಡಬೇಕಾಗಿಲ್ಲ. ಹಾಗಾಗಿ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮಾರೆಡೆಗೊಳ್ಳುವಾಗ, ಅದು ತಿರುತಿರುಗಿ ಹೊಸತನವನ್ನು ಮತ್ತು ಜೀವಂತಿಕೆಯನ್ನು ಪಡೆಯುತ್ತಿರುತ್ತದೆ. ಆದರೆ, ಬರಹವನ್ನು ಮಕ್ಕಳು ಶಾಲೆಯಲ್ಲಿ ದೊಡ್ಡವರ ನೆರವಿನಿಂದ ಕಲಿಯಬೇಕಾಗುತ್ತದೆ; ಅದನ್ನು ಅವರು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುವುದಿಲ್ಲ.
ಹಾಗಾಗಿ, ಬರಹಗಾರರು ಕಾಲದಿಂದ ಕಾಲಕ್ಕೆ ಅದನ್ನು ಹೊಸದಾಗಿಸಿಕೊಳ್ಳದಿದ್ದರೆ, ಮತ್ತು ಆಡುನುಡಿಗೆ ಹತ್ತಿರವಾಗುವಂತೆ ಮಾರ್ಪಡಿಸಿಕೊಳ್ಳದಿದ್ದರೆ, ಅದು ಕ್ರುತಕವಾಗುತ್ತಾ ಹೋಗಿ ತನ್ನ ಹುಟ್ಟುಸೊಗಡನ್ನು ಮತ್ತು ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ. ಕನ್ನಡದಲ್ಲಿ ಕತೆ-ಕಾದಂಬರಿಗಳನ್ನು ಬರೆಯುವವರು ತಮ್ಮ ಬರಹ ಈ ರೀತಿ ಕ್ರುತಕವಾಗದಂತೆ ನೋಡಿಕೊಳ್ಳುತ್ತಾರೆ; ಆದರೆ, ಬೇರೆ ಬಗೆಯ ಬರಹಗಳನ್ನು ಬರೆಯುವವರು ಇದನ್ನು ಮಾಡಲು ಹೋಗದುದರಿಂದಾಗಿ ಇವತ್ತು ಅಂತಹ ಬರಹಗಳು ತುಂಬಾ ಕ್ರುತಕವಾಗಿದ್ದು ಸಾಮಾನ್ಯ ಜನರಿಗೆ ತಿಳಿಯದ ಹಾಗಾಗಿವೆ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 32
ಕನ್ನಡ ಬರಹಗಳಲ್ಲಿ ಇತ್ತೀಚೆಗೆ ಸಂಸ್ಕ್ರುತದ ‘ಕರಣ’ ಎಂಬ ಪದದ ಬಳಕೆ ತುಂಬಾ ಹೆಚ್ಚಾಗುತ್ತಿದೆ; ಅದನ್ನು ಬಳಸುವವರು ನಿಜಕ್ಕೂ ಅದು ಬೇಕೇ ಇಲ್ಲವೇ ಬೇಡವೇ ಎಂಬುದನ್ನು ಗಮನಿಸುವುದೇ ಇಲ್ಲ. ಹಲವೆಡೆಗಳಲ್ಲಿ ಅದಕ್ಕೆ ಬದಲು ಕನ್ನಡದ್ದೇ ಆದ ‘ಇಸು’ ಒಟ್ಟನ್ನು ಬಳಸುವುದೇ ಕನ್ನಡದ ಮಟ್ಟಿಗೆ ಒಳ್ಳೆಯದು. ಯಾಕೆಂದರೆ, ‘ಕರಣ’ ಪದದ ಬಳಕೆಯಿಂದಾಗಿ ಮೂಡುವ ಹಲವು ಬಗೆಯ ಗೊಂದಲಗಳು ‘ಇಸು’ ಒಟ್ಟಿನ ಬಳಕೆಯಲ್ಲಿ ಕಾಣಿಸುವುದಿಲ್ಲ. ಇದಲ್ಲದೆ, ಕನ್ನಡದ್ದೇ ಆದ ‘ಇಸು’ ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆಗಳು ಎಲ್ಲಾ ಕನ್ನಡಿಗರಿಗೂ ತಿಳಿದಿರುತ್ತವೆ; ಹಾಗಾಗಿ, ‘ಕರಣ’ ಪದದ ಬಳಕೆಯ ಹಾಗೆ ಹೊಸ ಕಟ್ಟಲೆಗಳನ್ನು ಅವರು ಕಲಿಯಬೇಕಾಗುವುದಿಲ್ಲ.
ಸಂಸ್ಕ್ರುತದ ಎರವಲುಗಳೊಂದಿಗೆ ಮಾತ್ರವಲ್ಲದೆ ಇಂಗ್ಲಿಶ್, ಪರ್ಶಿಯನ್ ಮೊದಲಾದ ಬೇರೆ ಎರವಲು ಪದಗಳೊಂದಿಗೆ, ಮತ್ತು ಕನ್ನಡದವೇ ಆದ ಪದಗಳೊಂದಿಗೂ ಈ ‘ಕರಣ’ ಎಂಬುದನ್ನು ಬಳಸಲಾಗುತ್ತದೆ; ಸಬಲೀಕರಣ, ಉದಾರೀಕರಣ, ಪ್ರಮಾಣೀಕರಣ ಎಂಬ ಪದಗಳ ಹಾಗೆ, ಡಿಜಿಟಲೀಕರಣ, ಅಯಾನೀಕರಣ, ಕಾಸಗೀಕರಣ, ದಾಕಲೀಕರಣ ಎಂಬಂತಹ ಪದಗಳನ್ನೂ ಉಂಟುಮಾಡಲಾಗಿದೆ.
ಕನ್ನಡದ ಹಸಿರು ಪದದಿಂದ ಹಸಿರೀಕರಣ, ಅಗಲ ಪದದಿಂದ ಅಗಲೀಕರಣ, ಮತ್ತು ಕಯ್ಗಾರಿಕೆ ಪದದಿಂದ ಕಯ್ಗಾರಿಕೀಕರಣ ಎಂಬಂತಹ ಪದಗಳನ್ನೂ ಉಂಟುಮಾಡಲಾಗಿದೆ. ಇಂತಹ ಹಲವು ಕಡೆಗಳಲ್ಲಿ ಸಬಲಿಸು, ಪ್ರಮಾಣಿಸು, ಡಿಜಿಟಲಿಸು, ಅಯಾನಿಸು, ದಾಕಲಿಸು, ಹಸಿರಿಸು, ಅಗಲಿಸು ಎಂಬಂತಹ ಪದಗಳನ್ನು ಮತ್ತು ಅವುಗಳ ಹೆಸರುರೂಪಗಳಾದ ಪ್ರಮಾಣಿಸುವಿಕೆ, ದಾಕಲಿಸುವಿಕೆ, ಅಯಾನಿಸುವಿಕೆ, ಹಸಿರಿಸುವಿಕೆ ಎಂಬಂತಹ ಪದಗಳನ್ನೂ ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ.
‘ಕರಣ’ ಎಂಬುದನ್ನು ಬಳಸುವವರಲ್ಲಿ ಹಲವರಿಗೆ ಅದರೊಂದಿಗೆ ಬರುವ ಹೆಸರುಪದದಲ್ಲಿ ಎಂತಹ ಮಾರ್ಪಾಡುಗಳನ್ನೆಲ್ಲ ಮಾಡಬೇಕು ಎಂಬ ವಿಶಯದಲ್ಲೂ ಗೊಂದಲಗಳಿವೆ; ಕೆಲವರು ಆದುನಿಕೀಕರಣ, ಜಾಗತಿಕೀಕರಣ, ಯಾಂತ್ರಿಕೀಕರಣ ಎಂದು ಬರೆದರೆ, ಇನ್ನು ಕೆಲವರು ಆದುನೀಕರಣ, ಜಗತೀಕರಣ, ಯಾಂತ್ರೀಕರಣ ಎಂಬುದಾಗಿ ಬರೆಯುತ್ತಾರೆ. ಸಾಮಾಜೀಕರಣವೂ ಇದೆ, ಸಮಾಜೀಕರಣವೂ ಇದೆ; ಸಾದ್ರುಶೀಕರಣವೂ ಇದೆ, ತುರ್ತುಕರಣವೂ ಇದೆ. ಮೇಲಿನ ಪದಗಳಲ್ಲಿ ಬಳಕೆಯಾಗಿರುವ ಮಹಾಪ್ರಾಣಾಕ್ಶರಗಳನ್ನು ಈ ಅಂಕಣದಲ್ಲಿ ಕಯ್ಬಿಡಲಾಗಿದೆ; ಆದರೆ, ಅದರ ಬಳಕೆಯಲ್ಲೂ ಸಾಕಶ್ಟು ಗೊಂದಲಗಳಿವೆ.
‘ಕರಣ’ ಪದವನ್ನು ಬಳಸುವವರೂ ಆ ಪದಗಳಿಂದ ಎಸಕ(ಕ್ರಿಯಾ)ಪದಗಳನ್ನು ಉಂಟುಮಾಡಬೇಕಿದ್ದಲ್ಲಿ ಕನ್ನಡದ ‘ಇಸು’ ಒಟ್ಟನ್ನು ಬಳಸಲೇಬೇಕಾಗುತ್ತದೆ; ಸಬಲೀಕರಣ, ದಾಕಲೀಕರಣ, ಡಿಜಿಟಲೀಕರಣ ಎಂಬಂತಹ ಪದಗಳನ್ನು ಬಳಸುವವರು ಅವುಗಳಿಂದ ಎಸಕಪದವನ್ನು ಪಡೆಯಬೇಕಿದ್ದಲ್ಲಿ ಸಬಲೀಕರಿಸು, ದಾಕಲೀಕರಿಸು, ಡಿಜಿಟಲೀಕರಿಸು ಎಂಬುದಾಗಿ ಇಸು ಒಟ್ಟನ್ನು ಸೇರಿಸಿಯೇ ಹೇಳಬೇಕಾಗುತ್ತದೆ; ಇದಕ್ಕೆ ಬದಲು ಸಬಲಿಸು, ದಾಕಲಿಸು, ಡಿಜಿಟಲಿಸು ಎಂದಶ್ಟೇ ಹೇಳಿದರೆ ಸಾಕಾಗುವುದಿಲ್ಲವೇ? ಅವುಗಳ ನಡುವೆ ಕರಣವನ್ನು ಯಾಕೆ ತಂದುಹಾಕಬೇಕು? ಸ್ತಿರೀಕರಣಗೊಳ್ಳು ಎಂಬುದೂ ಇಂತಹದೇ ಇನ್ನೊಂದು ಅನವಶ್ಯಕವಾದ ಕರಣ ಪದವನ್ನು ಸೇರಿಸಿರುವ ಪದರೂಪ; ಸ್ತಿರಗೊಳ್ಳು ಎಂಬುದು ಹೆಚ್ಚು ಅಡಕವಾಗಿ ಅದೇ ಹುರುಳನ್ನು ಕೊಡಬಲ್ಲುದು.
ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡುವಲ್ಲೂ ಕನ್ನಡದ ಅರಿವಿಗರು ಈ ‘ಕರಣ’ ಪದವನ್ನು ಹಲವೆಡೆಗಳಲ್ಲಿ ಬಳಸಿದ್ದಾರೆ; ಕಾರ್ಬನೀಕರಣ, ನಯ್ಟ್ರೀಕರಣ, ಪಾಲಿಮರೀಕರಣ ಎಂಬಂತಹ ಈ ಪದಗಳನ್ನು ಬಳಸಿದಲ್ಲಿ, ಅವಕ್ಕೆ ಸಂಬಂದಿಸಿದಂತೆ ಕರಿಸು (ಅಯಾನೀಕರಿಸು), ಕ್ರುತ (ಅಯಾನೀಕ್ರುತ), ಕಾರಕ (ಅಯಾನೀಕಾರಕ), ಕಾರಿ (ಅಯಾನೀಕಾರಿ) ಎಂಬಂತಹ ಕರಣ ಪದಕ್ಕೆ ಸಂಬಂದಿಸಿದಂತಹ ಬೇರೆ ಕೆಲವು ಪದಗಳನ್ನೂ ಬಳಸಬೇಕಾಗುತ್ತದೆ, ಮತ್ತು ಅವು ಕನ್ನಡದ್ದಲ್ಲವಾದ ಕಾರಣ, ಅವನ್ನು ಬಳಸುವಲ್ಲಿ ಹಲವಾರು ತಪ್ಪುಗಳೂ ಕಾಣಿಸಿಕೊಳ್ಳುತ್ತವೆ; ಇದಕ್ಕೆ ಬದಲು ಇಸು ಎಂಬುದನ್ನಶ್ಟೇ ಬಳಸಿದಲ್ಲಿ ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಮತ್ತು ಎಲ್ಲಾ ಕನ್ನಡಿಗರಿಗೂ ತಿಳಿದಿರುವ ಇಸುವಿಕೆ (ಅಯಾನಿಸುವಿಕೆ), ಇಸಿದ (ಅಯಾನಿಸಿದ), ಇಸುವ (ಅಯಾನಿಸುವ) ಎಂಬಂತಹ ರೂಪಗಳನ್ನು ಬಳಸಲು ಬರುತ್ತದೆ.
ಇಂತಹ ಕಡೆಗಳಲ್ಲಿ ಅರಿವಿಗರು ಇನ್ನೂ ಒಂದು ತೊಡಕನ್ನು ಎದುರಿಸಬೇಕಾಗುತ್ತದೆ: ಇಂಗ್ಲಿಶ್ನ ಅಯ್ಸ್ ಎಂಬ ಒಟ್ಟು ಬಂದಿರುವಲ್ಲಿ ಕರಿಸು ಎಂಬುದನ್ನು ಬಳಸುವ (ಪೋಲರಯ್ಸ್ – ದ್ರುವೀಕರಿಸು, ಅನೊಡಯ್ಸ್ – ಅನೊಡೀಕರಿಸು) ಈ ಅರಿವಿಗರು ಇಂಗ್ಲಿಶ್ನ ಅಯ್ಸ್ ಎಂಬುದಕ್ಕಿರುವ ಮಾಡುವಿಕೆ ಮತ್ತು ಆಗುವಿಕೆ ಎಂಬ ಎರಡು ಹುರುಳುಗಳಲ್ಲಿ ಒಂದನ್ನು ಮಾತ್ರ ತಿಳಿಸಬಲ್ಲರು; ಇದಕ್ಕೆ ಬದಲು ಇಸು ಎಂಬುದನ್ನಶ್ಟೇ ಬಳಸಿದರೆ ಆ ಎರಡು ಹುರುಳುಗಳನ್ನೂ ತಿಳಿಸಬಲ್ಲರು. ಯಾಕೆಂದರೆ, ಕರಣ ಎಂಬುದಕ್ಕೆ ಆಗುವಿಕೆ ಎಂಬ ಹುರುಳು ಸಿಗಲಾರದು; ಆದರೆ, ಇಸು ಎಂಬುದನ್ನು ಬಳಸಿರುವ ಅನೋಡಿಸು, ಅಲ್ಯೂಮಿನಿಸು ಎಂಬುವಕ್ಕೆ ಆಗುವಿಕೆಯ ಹುರುಳೂ ಸಿಗಬಲ್ಲುದು.
ಅರಿಮೆಯ (ಪಾರಿಬಾಶಿಕ)ಪದಗಳನ್ನು ಉಂಟುಮಾಡುವಲ್ಲಿ ಆತ್ಮಕ ಎಂಬುದನ್ನು ಬಳಸುವುದೂ ಇಂತಹದೇ ಒಂದು ಬೇಕಿಲ್ಲದ ಚಾಳಿ. ನುಡಿಯರಿಮೆಯ ಒಂದು ಪದನೆರಕೆಯಲ್ಲಿ ಈ ರೀತಿ ಆತ್ಮಕ ಎಂಬುದನ್ನು ಬಳಸಿರುವ ಇನ್ನೂರಯ್ವತ್ತಕ್ಕಿಂತಲೂ ಹೆಚ್ಚು (ಎಂದರೆ, ಸುಮಾರು ನೂರಕ್ಕೆ ಹದಿಮೂರರಶ್ಟು) ಪದಗಳಿವೆ! ಇವುಗಳಲ್ಲಿ ಹೆಚ್ಚಿನವುಗಳಲ್ಲಿಯೂ ಆತ್ಮಕ ಎಂಬುದನ್ನು ಬಳಸಬೇಕಾಗಿಯೇ ಇಲ್ಲ (ವ್ಯಾಕರಣಾತ್ಮಕ ನಿಯಮ – ವ್ಯಾಕರಣ ನಿಯಮ, ದ್ವನ್ಯಾತ್ಮಕ ರಚನೆ – ದ್ವನಿರಚನೆ, ಪ್ರೇರಣಾತ್ಮಕ ವಾಕ್ಯ – ಪ್ರೇರಣ ವಾಕ್ಯ). ಅರಿಮೆಯ ಪದಗಳು ಸಿಕ್ಕಲಾಗಿದ್ದಶ್ಟೂ ಒಳ್ಳೆಯದು ಎಂಬ ಅನಿಸಿಕೆ ಈ ಪದಗಳನ್ನು ಉಂಟುಮಾಡಿರುವ ಅರಿವಿಗರಲ್ಲಿರುವ ಹಾಗೆ ಕಾಣಿಸುತ್ತದೆ.
ಇದಲ್ಲದೆ, ತಮ್ಮ ಬರಹಗಳಲ್ಲಿ ಎಲ್ಲರಿಗೂ ಗೊತ್ತಾಗುವ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು ಸಂಸ್ಕ್ರುತದ ಎರವಲುಗಳನ್ನು ತಂದು ತುಂಬಿಸಿದರೆ ಅವುಗಳ ಮಟ್ಟ ಮೇಲೇರುತ್ತದೆಯೆಂದು ಕೆಲವರು ತಿಳಿದ ಹಾಗಿದೆ. ಆದರೆ, ಹಲವು ಮಂದಿ ಹೀಗೆ ಮಾಡುವಲ್ಲಿ ಹಲವು ಬಗೆಯ ತಪ್ಪುಗಳನ್ನೂ ಮಾಡಿ ನಗುವಿಗೆ ಎಡೆಮಾಡಿಕೊಡುತ್ತಾರೆ. ‘ಕಾರಣ’ ಎಂಬ ಪದದ ಬದಲು ಹಲವು ಮಂದಿ ‘ಸಕಾರಣ’ ಎಂಬ ಪದವನ್ನು ಬಳಸುತ್ತಾರೆ; ಆದರೆ, ಇವೆರಡರ ನಡುವೆ ಹುರುಳಿನಲ್ಲಿ ವ್ಯತ್ಯಾಸವಿದೆ ಎಂಬುದನ್ನು ಅವರು ಗಮನಿಸುವುದಿಲ್ಲ. ಸಕಾರಣ ಎಂಬುದಕ್ಕೆ ‘ಕಾರಣವಿರುವ’ ಎಂಬ ಹುರುಳಿದೆ. ಇದನ್ನು ಗಮನಿಸದ ಕೆಲವರ ಬರಹಗಳಲ್ಲಿ ಸಕಾರಣವಿಲ್ಲದೆ, ಸಕಾರಣ ನೀಡದೆ, ಸಕಾರಣಗಳಿರಲಿಲ್ಲ ಎಂಬಂತಹ ಬಳಕೆಗಳನ್ನು ಕಾಣಬಹುದು! ಆದರೆ, ಇಂತಹದೇ ಬಳಕೆ ಮುಂದುವರಿದರೆ, ಸಕಾರಣ ಎಂಬುದಕ್ಕೆ ಕನ್ನಡದಲ್ಲಿ ಬರಿಯ ಕಾರಣ ಎಂಬುದರ ಹುರುಳೇ ಇರುವಂತಾದೀತು.
ಇಹಲೋಕ ಮತ್ತು ಪರಲೋಕ ಎಂಬ ಬೇರೆ ಎರಡು ಸಂಸ್ಕ್ರುತ ಎರವಲುಗಳ ಬಳಕೆಯೂ ಇಂತಹದೇ. ಅವುಗಳ ನಿಜವಾದ ಹುರುಳು ಏನೆಂದು ತಿಳಿಯದಿದ್ದರೂ ಬಳಸುವ ಆಸೆ. ಆತನನ್ನು ಕಚ್ಚಿದ ಹಾವೇ ಸತ್ತುಹೋಯಿತು ಎಂಬುದನ್ನು ಹೇಳಬೇಕಿರುವಲ್ಲಿ ಕಚ್ಚಿದ ಹಾವೇ ಇಹಲೋಕಕ್ಕೆ ಹೋಯಿತು ಎಂಬುದಾಗಿ ಬರೆದಿರುವುದನ್ನು ಕಾಣಬಹುದು! ಇಹಲೋಕ ಮತ್ತು ಪರಲೋಕಗಳೆಂಬ ಈ ಪದಗಳ ಬದಲು ಈ ಲೋಕ ಮತ್ತು ಬೇರೆ ಲೋಕ ಎಂಬ ಎಲ್ಲರಿಗೂ ಗೊತ್ತಾಗುವ ಪದಕಂತೆಗಳನ್ನು ಬಳಸಿದ್ದರೆ, ಇಂತಹ ತಪ್ಪು ಮಾಡಿ ನಗೆಪಾಟಲಾಗುವ ಹಾಗಾಗುತ್ತಿರಲಿಲ್ಲ.
ದಿನಪತ್ರಿಕೆಗಳಲ್ಲಿ ತಲೆಬರಹವನ್ನು ಬರೆಯುವವರೂ ಇಂತಹದೇ ಕೀಳರಿಮೆಯಿಂದ ಬಳಲುತ್ತಿರುವ ಹಾಗೆ ಕಾಣಿಸುತ್ತದೆ. ಒಂದು ಬರಹದಲ್ಲಿ ಉದ್ದಕ್ಕೂ ನಾಯಿ, ಬೆಕ್ಕು, ಕೋಳಿ, ಮೀನು ಎಂಬಂತಹ ಕನ್ನಡದವೇ ಆದ ಪದಗಳನ್ನು ಬರುತ್ತವೆ; ಆದರೆ, ತಲೆಬರಹದಲ್ಲಿ ಮಾತ್ರ ಶ್ವಾನ, ಮಾರ್ಜಾಲ, ಕುಕ್ಕುಟ, ಮತ್ಸ್ಯ ಎಂಬಂತಹ ಸಂಸ್ಕ್ರುತ ಎರವಲುಗಳು ಬರುತ್ತವೆ. ತಲೆಬರಹದಲ್ಲಿ ಎಲ್ಲರಿಗೂ ಗೊತ್ತಿರುವ ನಾಯಿ, ಬೆಕ್ಕು, ಮೀನು ಮೊದಲಾದ ಕನ್ನಡ ಪದಗಳು ಬಂದರೆ ದಿನಪತ್ರಿಕೆಯ ತಕ್ಕಮೆ ಇಲ್ಲವಾಗಬಹುದೆಂಬ ಹೆದರಿಕೆ ಅವರಿಗಿರುವಂತೆ ತೋರುತ್ತದೆ. ತನ್ನ ಮುದಿ ತಂದೆಯನ್ನು ಅಪ್ಪ ಎನ್ನಲು ಹಿಂಜರಿಯುವ ದೊಡ್ಡ ಅದಿಕಾರಿಯ ಕೀಳು ಸಂಸ್ಕ್ರುತಿಯಿದು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 29
ಕನ್ನಡದ ಯಾವ ಪದವನ್ನು ಬೇಕಿದ್ದರೂ ಸಂಸ್ಕ್ರುತದ ಪದಗಳಿಂದ ಬಂದುವೆಂಬುದಾಗಿ ತೋರಿಸಿಕೊಡಬಲ್ಲೆವು ಎಂಬ ನಂಬಿಕೆ ಕೆಲವರಲ್ಲಿದೆ; ಹೀಗೆ ತೋರಿಸಿಕೊಡುವುದಕ್ಕಾಗಿ ಅವರು ಪದಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಕಾಣಿಸುವ ಹೋಲಿಕೆಗಳನ್ನು ಮಾತ್ರವಲ್ಲದೆ ಹಲವಾರು ಬಗೆಯ ಕಯ್ಚಳಕಗಳನ್ನೂ ಬಳಸುತ್ತಾರೆ.
ಈ ಕಯ್ಚಳಕಗಳ ಮೂಲಕ ಅವರು ಉಲಿ ಇಲ್ಲವೇ ಹುರುಳುಗಳಲ್ಲಿ ಹೋಲಿಕೆಗಳು ಕಾಣಿಸದಿದ್ದರೂ ಸಂಬಂದವನ್ನು ಕಾಣಬಲ್ಲರು; ಎತ್ತುಗೆಗಾಗಿ, ಕನ್ನಡದ ‘ನೆತ್ತರು’ ಪದವನ್ನು ಸಂಸ್ಕ್ರುತದ ‘ರುಧಿರ’ ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯಿದ್ದರೂ ಉಲಿಯ ಹೋಲಿಕೆ ತುಂಬಾ ಕಡಿಮೆ; ಕನ್ನಡದ ‘ಕಟ್ಟೆ’ ಪದವನ್ನು ಸಂಸ್ಕ್ರುತದ ‘ಕಕ್ಷಾ’ (ಕಂಕುಳು) ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯೂ ತುಂಬಾ ಕಡಿಮೆ. ಹೀಗಿದ್ದರೂ, ಕಯ್ಚಳಕಗಳ ಮೂಲಕ ಅವರು ಇವನ್ನು ಒಂದಕ್ಕೊಂದು ಜೋಡಿಸಿ ಬಿಡುತ್ತಾರೆ. ಇಂತಹ ಕಯ್ಚಳಕಗಳು ಅವರಿಗೆ ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನೆರವಾಗುತ್ತವೆಯಾದರೂ, ನಿಜಕ್ಕೂ ಆ ಪದಗಳ ಹಿನ್ನಡವಳಿ (ಚರಿತ್ರೆ) ಎಂತಹದು ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವು ಯಾವ ನೆರವನ್ನೂ ನೀಡುವುದಿಲ್ಲ.
ಕನ್ನಡದ ಪದಗಳು ಎರಡು ಬಗೆಗಳಲ್ಲಿ ಸಂಸ್ಕ್ರುತ ಪದಗಳೊಂದಿಗೆ ಸಂಬಂದಿಸಿರಬಲ್ಲುವು: ಅವೆರಡೂ ಒಂದೇ ನುಡಿಕುಟುಂಬದ ನುಡಿಗಳೆಂಬುದೊಂದು ಬಗೆ, ಮತ್ತು ಅವುಗಳಲ್ಲಿ ಒಂದು ಇನ್ನೊಂದರಿಂದ ಪದಗಳನ್ನು ಎರವಲು ಪಡೆದಿದೆಯೆಂಬುದಿನ್ನೊಂದು ಬಗೆ. ಹಾಗಾಗಿ, ಯಾವ ಬಗೆಯ ಸಂಬಂದವನ್ನು ಅವುಗಳ ಪದಗಳ ನಡುವೆ ಕಾಣಲಾಗುತ್ತದೆ ಎಂಬುದನ್ನು ಮೊದಲು ತಿಳಿಸಬೇಕಾಗುತ್ತದೆ.
ನುಡಿಗಳಲ್ಲಿ ಕಾಲದಿಂದ ಕಾಲಕ್ಕೆ ಹಲವು ಬಗೆಯ ಮಾರ್‍ಪಾಡುಗಳು ನಡೆಯುತ್ತಲೇ ಇರುತ್ತವೆ; ಇವು ಉಲಿಗಳನ್ನು ಮಾರ್‍ಪಡಿಸಬಹುದು, ಪದಗಳನ್ನು ಇಲ್ಲವೇ ಅವುಗಳ ಹುರುಳುಗಳನ್ನು ಮಾರ್‍ಪಡಿಸಬಹುದು, ಮತ್ತು ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳನ್ನು ಮಾರ್‍ಪಡಿಸಬಹುದು. ಇಂತಹ ಹಲವು ಬಗೆಯ ಮಾರ್‍ಪಾಡುಗಳು ನಡೆದುದರಿಂದಾಗಿ ಹಳೆಗನ್ನಡವಿದ್ದುದು ನಡುಗನ್ನಡವಾಗಿ ಇವತ್ತು ಹೊಸಗನ್ನಡವಾಗಿದೆ, ಮತ್ತು ಹೊಸಗನ್ನಡವೂ ಹಲವು ಬಗೆಯ ಆಡುನುಡಿಗಳಾಗಿ ಒಡೆದುಕೊಂಡಿದೆ.
ಕಾಲದಿಂದ ಕಾಲಕ್ಕೆ ನಡೆಯುವ ಇಂತಹ ಮಾರ್‍ಪಾಡುಗಳಲ್ಲಿ ನುಡಿಯ ಉಲಿಗಳಲ್ಲಿ ನಡೆಯುವ ಮಾರ್‍ಪಾಡುಗಳೇ ತುಂಬಾ ಮುಕ್ಯವಾದವುಗಳು; ಯಾಕೆಂದರೆ, ಅವುಗಳಿಂದಾಗಿ ಪದಗಳ ಮತ್ತು ಒಟ್ಟು(ಪ್ರತ್ಯಯ)ಗಳ ರೂಪದಲ್ಲಿ ಮಾತ್ರವಲ್ಲದೆ, ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲೂ ಮಾರ್‍ಪಾಡುಗಳು ನಡೆಯುತ್ತವೆ. ಕನ್ನಡದ ಹಿನ್ನಡವಳಿಯಲ್ಲಿ ಇಂತಹ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳು ನಡೆದಿವೆ.
ಹಳೆಗನ್ನಡದ ಪಕಾರ ಹಕಾರವಾಗಿರುವುದು (ಪಾಲು>ಹಾಲು, ಪಳೆ>ಹಳೆ, ಪೋಗು>ಹೋಗು); ರ-ಱ, ಳ-ೞಗಳ ನಡುವಿನ ವ್ಯತ್ಯಾಸ ಇಲ್ಲವಾಗಿರುವುದು, ಉದ್ದ ತೆರೆಯುಲಿ (ಸ್ವರ) ಮತ್ತು ತಡೆಯುಲಿ(ಸ್ಪರ‍್ಶ)ಗಳ ನಡುವಿನ ಮೂಗುಲಿ (ಅನುನಾಸಿಕ) ಬಿದ್ದುಹೋಗಿರುವುದು (ನೂಂಕು>ನೂಕು, ದಾಂಟು>ದಾಟು) ಮೊದಲಾದುವು ಇಂತಹ ಉಲಿಗಳ ಮಾರ್‍ಪಾಡುಗಳು.
ಇವು ಉಲಿಗಳ ಮಾರ್‍ಪಾಡುಗಳಲ್ಲದೆ ಪದಗಳ ಮಾರ್‍ಪಾಡುಗಳಲ್ಲ ಎಂಬುದನ್ನು ಗಮನಿಸುವುದು ಅವಶ್ಯ; ಪಕಾರ ಹಕಾರವಾಗುವಂತಹ ಒಂದು ಮಾರ್‍ಪಾಡು ನಡೆದಾಗ, ಪಕಾರವಿದ್ದ ಎಲ್ಲಾ (ಸಾವಿರಕ್ಕಿಂತಲೂ ಹೆಚ್ಚು) ಪದಗಳೂ ಅದಕ್ಕೆ ಒಳಗಾಗಿರುತ್ತವೆ. ಇಂತಹ ಮಾರ್‍ಪಾಡುಗಳು ಒಂದು ಉಲಿಯನ್ನು ಎಲ್ಲೆಡೆಗಳಲ್ಲೂ ತಾಗಬಹುದು, ಇಲ್ಲವೇ ಕೆಲವೆಡೆಗಳಲ್ಲಿ ಮಾತ್ರ ತಾಗಬಹುದು; ಪಕಾರ ಹಕಾರವಾಗುವ ಮಾರ್‍ಪಾಡು ಪಕಾರವನ್ನು ಎಲ್ಲೆಡೆಗಳಲ್ಲೂ ತಾಗಿದೆ; ಆದರೆ, ಎಕಾರ ಇಕಾರವಾಗುವ ಇನ್ನೊಂದು ಮಾರ್‍ಪಾಡು ಎಕಾರದ ಬಳಿಕ ಒತ್ತೆ ಮುಚ್ಚುಲಿ (ವ್ಯಂಜನ) ಮತ್ತು ಇಕಾರ ಇಲ್ಲವೇ ಉಕಾರ ಬಂದಿರುವಲ್ಲಿ ಮಾತ್ರ ನಡೆದಿದೆ, ಬೇರೆಡೆಗಳಲ್ಲಿ ಎಕಾರ ಮಾರ್‍ಪಡದೆ ಉಳಿದಿದೆ (ಬಿಳಿ, ಬಿಸಿ, ನಿಡು ಎಂಬಂತಹ ಪದಗಳಲ್ಲಿ ಈ ಮಾರ್‍ಪಾಡು ನಡೆದಿದೆ. ಆದರೆ ಬೆಳ್ಳಗೆ, ಬೆಚ್ಚಗೆ, ನೆಟ್ಟಗೆ ಎಂಬಂತಹ ಪದಗಳಲ್ಲಿ ನಡೆದಿಲ್ಲ). ಇದಲ್ಲದೆ, ಇಂತಹ ಮಾರ್‍ಪಾಡುಗಳಿಗೆಲ್ಲ ಒಂದು ಗಡುವಿರುತ್ತದೆ; ಈ ಗಡುವು ಮುಗಿದ ಮೇಲೆ ಹಿಂದಿನ ಬರಹಗಳಿಂದ (ಪಾಲು, ಪುಟ್ಟ, ಪೆಟ್ಟು) ಇಲ್ಲವೇ ಬೇರೆ ನುಡಿಗಳಿಂದ (ಪಾಪ, ಪುಣ್ಯ, ಪೂಜೆ) ಪದಗಳು ಎರವಲಾಗಿ ಬಂದು ಈ ಮಾರ್‍ಪಾಡಿಗೆ ಹೊರಪಡಿಕೆಗಳಾಗಿ ಕಾಣಿಸಬಲ್ಲುವು.
ಎರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ತೀರ‍್ಮಾನಿಸುವಲ್ಲೆಲ್ಲ ಇಂತಹ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯವಾದ ನೆಲೆಯಾಗಿ ಬಳಸಿಕೊಳ್ಳಲಾಗುತ್ತದೆ. ಯಾಕೆಂದರೆ, ನುಡಿಗಳಲ್ಲಿ ನಡೆಯುವ ಹಲವು ಬಗೆಯ ಮಾರ್‍ಪಾಡುಗಳಲ್ಲಿ ಉಲಿಗಳ ಮಾರ್‍ಪಾಡುಗಳ ಮೇಲೆ ಮಾತ್ರ ಪದಗಳ ಹುರುಳುಗಳು ಯಾವ ಪ್ರಬಾವವನ್ನೂ ಬೀರುವುದಿಲ್ಲ; ನೇರವಾಗಿ ಪದಗಳಲ್ಲಿ ಇಲ್ಲವೇ ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲಿ ನಡೆಯುವ ಮಾರ್‍ಪಾಡುಗಳ ಮೇಲೆ ಅವು ಹಲವು ಬಗೆಗಳಲ್ಲಿ ಪ್ರಬಾವವನ್ನು ಬೀರುತ್ತವೆ, ಮತ್ತು ಈ ರೀತಿ ಹುರುಳುಗಳಿಂದ ಪ್ರಬಾವಿತವಾಗಿರುವ ಮಾರ್‍ಪಾಡುಗಳನ್ನು ಕಚಿತವಾದ ಕಟ್ಟಲೆಗಳಲ್ಲಿ ಸೆರೆಹಿಡಿಯಲು ಬರುವುದಿಲ್ಲ; ಯಾಕೆಂದರೆ, ಹುರುಳುಗಳಿಂದ ಪ್ರಬಾವಿತವಾದ ಮಾರ್‍ಪಾಡುಗಳಿಗೆ ಹಲವಾರು ಬಗೆಯ ಹೊರಪಡಿಕೆಗಳಿರುತ್ತವೆ.
ಹಾಗಾಗಿ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂಬ ತೀರ್‍ಮಾನಕ್ಕೆ ಬರಬೇಕಿದ್ದಲ್ಲಿ ಕನ್ನಡದ ಹಿನ್ನಡವಳಿಯಲ್ಲಿ ನಡೆದ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯ ನೆಲೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಎಂದರೆ, ಕನ್ನಡ ಮತ್ತು ಸಂಸ್ಕ್ರುತ ಪದಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಕನ್ನಡದ ಹಿನ್ನಡವಳಿಯಲ್ಲಿ ನಡೆದಿದ್ದ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳಿಂದಾಗಿ ಮೂಡಿಬಂದಿವೆ ಎಂಬುದಾಗಿ ತೋರಿಸಿಕೊಡಲು ಸಾದ್ಯವಾದಾಗ ಮಾತ್ರ ಕನ್ನಡ ಸಂಸ್ಕ್ರುತದಿಂದ ಬೆಳೆದುಬಂದಿದೆ ಎಂಬುದನ್ನು ಒಪ್ಪಿಕೊಳ್ಳಲು ಬರುತ್ತದೆ. ಆದರೆ, ಇದುವರೆಗೆ ಯಾರಿಗೂ ಆ ರೀತಿ ತೋರಿಸಿಕೊಡಲು ಸಾದ್ಯವಾಗಿಲ್ಲ.
ಹಾಗಾಗಿ, ಸದ್ಯಕ್ಕಂತೂ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿಲ್ಲವೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಮತ್ತು ಕನ್ನಡದಲ್ಲಿ ಮೂಲದ್ರಾವಿಡ ನುಡಿಯಿಂದ ಬಂದ ಕನ್ನಡದವೇ ಆದ ಪದಗಳು, ಮತ್ತು ಸಂಸ್ಕ್ರುತವೇ ಮೊದಲಾದ ಬೇರೆ ನುಡಿಗಳಿಂದ ಎರವಲಾಗಿ ಬಂದ ಪದಗಳು ಎಂಬುದಾಗಿ ಎರಡು ಬಗೆಯ ಪದಗಳು ಇವೆಯೆಂಬುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.
ಕನ್ನಡದ ಪದಗಳಿಗೂ ಸಂಸ್ಕ್ರುತದ ಪದಗಳಿಗೂ ನಡುವೆ ಅವುಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಹೋಲಿಕೆಯಿದೆಯಾದರೆ, ಅದಕ್ಕೆ ಹಲವು ಕಾರಣಗಳಿರಬಲ್ಲುವು. ಎತ್ತುಗೆಗಾಗಿ, ಈ ಎಲ್ಲಾ ಪದಗಳನ್ನೂ ಉಂಟುಮಾಡಿದವರು ಮಾನವರೇ ಎಂಬುದೊಂದು ಕಾರಣ; ಹೋಲಿಕೆ ಬರಿಯ ಆಕಸ್ಮಿಕವಾಗಿರಬಹುದೆಂಬುದಿನ್ನೊಂದು ಕಾರಣ. ಹಾಗಾಗಿ, ಒಂದು ನುಡಿ ಇನ್ನೊಂದರಿಂದ ಎರವಲು ಪಡೆದಿದೆಯೆಂಬುದು ಪದಗಳ ನಡುವಿರುವ ಹೋಲಿಕೆಗಳಿಗಿರುವ ಹಲವು ಕಾರಣಗಳಲ್ಲಿ ಒಂದು ಮಾತ್ರ. ಇದಲ್ಲದೆ, ಇಲ್ಲಿಯೂ ಒಂದು ಪದವನ್ನು ಯಾವ ನುಡಿ ಯಾವ ನುಡಿಯಿಂದ ಎರವಲಾಗಿ ಪಡೆದಿದೆ ಎಂಬುದನ್ನು ತೀರ್‍ಮಾನಿಸುವಲ್ಲಿ ಅರಕೆಗೆ ನೆಲೆಯಿದೆ.
ಸಾಮಾನ್ಯವಾಗಿ, ಒಂದು ಪದದ ಹರಹು ಎಂತಹದು ಎಂಬುದರ ಮೇಲೆ ಅದರ ಹಿನ್ನಡವಳಿಯೆಂತಹದು ಎಂಬುದನ್ನು ತೀರ್‍ಮಾನಿಸಲಾಗುತ್ತದೆ; ಎತ್ತುಗೆಗಾಗಿ, ಕನ್ನಡದ ಒಂದು ಪದಕ್ಕೆ ಸಮಾನವಾದ ಪದಗಳು ತಮಿಳು, ತೆಲುಗು, ಗೋಂಡಿ, ಕುಡುಕ್ ಮೊದಲಾದ ಬೇರೆ ಹಲವು ದ್ರಾವಿಡ ನುಡಿಗಳಲ್ಲೂ ಕಾಣಿಸಿಕೊಳ್ಳುತ್ತಿವೆಯಾದರೆ, ಮತ್ತು ಸಂಸ್ಕ್ರುತವನ್ನು ಹೊರತುಪಡಿಸಿ ಉಳಿದ ಲ್ಯಾಟಿನ್, ಗ್ರೀಕ್, ಪರ್‍ಶಿಯನ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳಲ್ಲಿ ಕಾಣಿಸುವುದಿಲ್ಲವಾದರೆ, ಅದು ಕನ್ನಡದ್ದೇ ಆದ ಪದ, ಮತ್ತು ಸಂಸ್ಕ್ರುತಕ್ಕೇನೇ ಅದು ದ್ರಾವಿಡ ನುಡಿಗಳಿಂದ ಎರವಲಾಗಿ ಬಂದಿದೆ ಎಂದು ಹೇಳಬೇಕಾಗುತ್ತದೆ.
ಇಂತಹ ಅರಕೆಗಳನ್ನು ನಡೆಸದೆ ಬರಿಯ ಹೋಲಿಕೆಯ ಮೇಲೆ ಎಲ್ಲವೂ ಸಂಸ್ಕ್ರುತದಿಂದ ಬಂದಿವೆಯೆಂದು ಹೇಳುವುದನ್ನು ಒಂದು ಅರಿಮೆಯ ಹೇಳಿಕೆಯೆಂದು ತಿಳಿಯಲು ಬರುವುದಿಲ್ಲ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 28
ಕನ್ನಡದಲ್ಲಿ ಎಣಿಸುವುದಕ್ಕೂ ಬೇರೆ ನುಡಿಗಳಲ್ಲಿ ಎಣಿಸುವುದಕ್ಕೂ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ; ಕನ್ನಡದಲ್ಲಿ ಎಣಿಕೆಪದಗಳನ್ನು ಉಂಟುಮಾಡಲು ಮುಕ್ಯವಾಗಿ ಎರಡು ಬಗೆಯ ಹೊಲಬುಗಳನ್ನು ಬಳಸಲಾಗುತ್ತದೆ: ಒಂದು ಎಣಿಕೆಪದವನ್ನು ನೇರವಾಗಿ ಇನ್ನೊಂದು ಎಣಿಕೆಪದದೊಂದಿಗೆ ಸೇರಿಸಿ ಹೇಳುವುದು ಒಂದು ಹೊಲಬು; ಇದನ್ನು ಇಪ್ಪತ್ತು (ಎರಡು+ಹತ್ತು), ಇನ್ನೂರು (ಎರಡು+ನೂರು) ಎಂಬಂತಹ ಎಣಿಕೆಪದಗಳಲ್ಲಿ ಕಾಣಬಹುದು. ಒಂದು ಎಣಿಕೆಪದದ ಪತ್ತುಗೆ(ಸಂಬಂದ)ರೂಪವನ್ನು ಇನ್ನೊಂದು ಎಣಿಕೆಪದಕ್ಕೆ ಸೇರಿಸಿ ಹೇಳುವುದು ಇನ್ನೊಂದು ಹೊಲಬು; ಇದನ್ನು ಇಪ್ಪತ್ತಾರು (ಇಪ್ಪತ್ತರ+ಆರು), ನೂರ ಹತ್ತು (ನೂರರ+ಹತ್ತು) ಎಂಬಂತಹ ಎಣಿಕೆಪದಗಳಲ್ಲಿ ಕಾಣಬಹುದು.
ಇವುಗಳಲ್ಲಿ ಮೊದಲನೆಯದನ್ನು ಪೆಚ್ಚಿಸುವ (ಗುಣಿಸುವ) ಹುರುಳಿನಲ್ಲೂ, ಎರಡನೆಯದನ್ನು ಕೂಡಿಸುವ ಹುರುಳಿನಲ್ಲೂ ಬಳಸಲಾಗುತ್ತದೆ. ಆದರೆ, ಈ ಕಟ್ಟಲೆಗೆ ಒಂದು ಹೊರಪಡಿಕೆಯೂ ಇದೆ: ಒಂಬತ್ತು (ಒಂದು+ಹತ್ತು) ಎಂಬುದರಲ್ಲಿ ಮೊದಲನೆಯ ಹೊಲಬು ಬಳಕೆಯಾಗಿದೆಯಾದರೂ ಅದಕ್ಕೆ ‘ಹತ್ತರಿಂದ ಒಂದು ಕಡಿಮೆ’ ಎಂಬ ಕಳೆತದ ಹುರುಳಿದೆ.
ಒಂದರಿಂದ ಎಂಟರ ವರೆಗಿನ ಎಣಿಕೆಪದಗಳು, ಮತ್ತು ಹತ್ತು, ನೂರು ಎಂಬ ಪದಗಳು ಒತ್ತೆ ಪದಗಳು; ಹನ್ನೊಂದರಿಂದ ಹತ್ತೊಂಬತ್ತರ ವರೆಗಿನ ಪದಗಳಲ್ಲಿ ಹತ್ತು ಪದದ ಪತ್ತುಗೆರೂಪಕ್ಕೆ ಒಂದರಿಂದ ಒಂಬತ್ತರವರೆಗಿನ ಪದಗಳನ್ನು ಸೇರಿಸಲಾಗಿದೆ. ಅದಕ್ಕೆ ಮೇಲೆ, ಇಪ್ಪತ್ತು ಎಂಬುದರಲ್ಲಿ ಎರಡು (ಇಪ್) ಪದಕ್ಕೆ ಹತ್ತು (ಪತ್ತು) ಪದವನ್ನು ನೇರವಾಗಿ ಸೇರಿಸಲಾಗಿದೆ. ಇದೇ ರೀತಿಯಲ್ಲಿ, ಮುಂದೆಯೂ ಇಪ್ಪತ್ತರಿಂದ ಇಪ್ಪತ್ತೊಂಬತ್ತರ ವರೆಗಿನ ಪದಗಳಲ್ಲಿ ಇಪ್ಪತ್ತು ಪದದ ಪತ್ತುಗೆರೂಪಕ್ಕೆ ಒಂದರಿಂದ ಒಂಬತ್ತರ ವರೆಗಿನ ಪದಗಳನ್ನು ಸೇರಿಸಲಾಗಿದೆ (ಇಪ್ಪತ್ತೊಂದು, ಇಪ್ಪತ್ತೆರಡು), ಮತ್ತು ಮೂವತ್ತು ಪದದಲ್ಲಿ ಮೂರು ಪದಕ್ಕೆ ಹತ್ತು (ವತ್ತು) ಪದವನ್ನು ನೇರವಾಗಿ ಸೇರಿಸಲಾಗಿದೆ.
ಮುಂದೆ ತೊಂಬತ್ತೊಂಬತ್ತರ ವರೆಗೂ ಇದೇ ರೀತಿಯಲ್ಲಿ ಈ ಎರಡು ಹೊಲಬುಗಳ ಬಳಕೆಯಾಗಿದೆ: ಮೊದಲ ಒಂಬತ್ತು ಎಣಿಕೆಪದಗಳನ್ನು ಪತ್ತುಗೆರೂಪದ ಮೂಲಕ ಉಂಟುಮಾಡಲಾಗಿದೆ, ಮತ್ತು ಹತ್ತನೆಯ ಪದವನ್ನು ನಾಲ್ಕು, ಅಯ್ದು, ಆರು ಮೊದಲಾದ ಪದಗಳಿಗೆ ನೇರವಾಗಿ ಹತ್ತು ಪದವನ್ನು ಸೇರಿಸಿ ಉಂಟುಮಾಡಲಾಗಿದೆ. ನೂರು ಎಂಬುದನ್ನು ತಿಳಿಸಲು ಮಾತ್ರ ಒತ್ತೆ ಪದದ ಬಳಕೆಯಾಗಿದೆ.
ನೂರರ ಬಳಿಕವೂ ಇವೇ ಎರಡು ಹೊಲಬುಗಳನ್ನು ಬಳಸಲಾಗಿದೆ: ನೂರ ಒಂದು, ನೂರ ಎರಡು, … ನೂರ ಹತ್ತು, … ನೂರ ಮೂವತ್ತೆಂಟು … ಎಂಬುದಾಗಿ ಒಟ್ಟು ನೂರು ಎಣಿಕೆಗಳನ್ನು ನೂರು ಎಂಬ ಪದದ ಪತ್ತುಗೆ ರೂಪಕ್ಕೆ ಒಂದರಿಂದ ತೊಂಬತ್ತೊಂಬತ್ತರ ವರೆಗಿನ ಪದಗಳನ್ನು ಸೇರಿಸಿ ಹೇಳಲಾಗಿದೆ, ಮತ್ತು ಮುಂದಿನ ಎಣಿಕೆಪದಗಳನ್ನು ಎರಡು, ಮೂರು ಮೊದಲಾದ ಒಂಬತ್ತು ಪದಗಳಿಗೆ ನೇರವಾಗಿ ನೂರು ಪದವನ್ನು ಸೇರಿಸಿ ಇನ್ನೂರು, ಮುನ್ನೂರು ಮೊದಲಾದ ಪದಗಳನ್ನು ಉಂಟುಮಾಡಲಾಗಿದೆ. ಇದು ಕನ್ನಡ, ತಮಿಳು, ತೆಲುಗು ಮೊದಲಾದ ದ್ರಾವಿಡ ನುಡಿಗಳಲ್ಲಿ ಬಳಕೆಯಾಗುವ ಎಣಿಕೆಯ ಹೊಲಬಾಗಿದೆ.
ಈ ಎಣಿಕೆಪದಗಳಲ್ಲಿ ಬರುವ ಪದಗಳ ಓರಣ ಅಂಕೆಗಳಲ್ಲಿ ಕಾಣಿಸುವ ಓರಣವನ್ನೇ ಹೋಲುತ್ತದೆ; ಎತ್ತುಗೆಗಾಗಿ, ‘ಮೂವತ್ತೆಂಟು’ ಎಂಬುದರಲ್ಲಿ ‘3(ಹತ್ತು)8’ ಎಂಬ ಓರಣವಿದೆ, ಮತ್ತು ಅದನ್ನು 38 ಎಂಬುದಾಗಿ ಅಂಕೆಯಲ್ಲಿ ಬರೆಯುವಾಗಲೂ 3 ಮೊದಲು ಬರುತ್ತದೆ, ಮತ್ತು 8 ಬಳಿಕ ಬರುತ್ತದೆ. ಇದೇ ರೀತಿಯಲ್ಲಿ, ‘ಎರಡು ಸಾವಿರದ ಮುನ್ನೂರ ನಲುವತ್ತಾರು’ ಎಂಬುದರಲ್ಲಿ ಕಾಣಿಸುವ ‘2(ಸಾವಿರ)3(ನೂರು)4(ಹತ್ತು)6’ ಎಂಬ ಓರಣವೇ 2346 ಎಂಬ ಅಂಕೆಯಲ್ಲೂ ಕಾಣಿಸುತ್ತದೆ.
ಆದರೆ, ಸಂಸ್ಕ್ರುತದಲ್ಲಿ ಮತ್ತು ಅದರಿಂದ ಬೆಳೆದು ಬಂದಿರುವ ಹಿಂದಿ, ಮರಾಟಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳಲ್ಲಿ ಎಣಿಕೆಯ ಪದಗಳನ್ನು ಬೇರೆಯೇ ಬಗೆಯಲ್ಲಿ ಕಟ್ಟಲಾಗಿದ್ದು, ಅವಕ್ಕೂ ಅಂಕೆಗಳಿಗೂ ನಡುವೆ ಇಂತಹ ಹೊಂದಾಣಿಕೆ ಕಾಣಿಸುವುದಿಲ್ಲ. ಎತ್ತುಗೆಗಾಗಿ, ಹಿಂದಿಯಲ್ಲಿ ‘ಅಡ್ತೀಸ್’ ಎಂಬ ಎಣಿಕೆಪದದಲ್ಲಿ ‘8-3(ಹತ್ತು)’ ಎಂಬ ಓರಣವಿದೆ; ಈ ಓರಣ 38 ಎಂಬ ಅಂಕೆಯಲ್ಲಿರುವ ಓರಣಕ್ಕಿಂತ ಬೇರಾಗಿದೆ; ಸಂಸ್ಕ್ರುತದಲ್ಲೂ ಎಪ್ಪತ್ತಯ್ದು ಎಂಬ ಹುರುಳನ್ನು ಕೊಡುವ ‘ಪಂಚಸಪ್ತತಿ’ ಎಂಬ ಎಣಿಕೆಪದದಲ್ಲಿ 5-7(ಹತ್ತು) ಎಂಬ ಓರಣವಿದ್ದು, ಅದು 75 ಎಂಬ ಅಂಕೆಯಲ್ಲಿರುವ ಓರಣಕ್ಕಿಂತ ಬೇರಾಗಿದೆ.
ಕನ್ನಡ ಮತ್ತು ಸಂಸ್ಕ್ರುತಗಳೆರಡರಲ್ಲೂ ಹತ್ತರ ಹೊಲಬು ಬಳಕೆಯಲ್ಲಿದೆ. ಆದರೆ, ಬೇರೆ ಕೆಲವು ನುಡಿಗಳಲ್ಲಿ ಬೇರೆಯೇ ಬಗೆಯ ಹೊಲಬುಗಳು ಬಳಕೆಯಾಗುತ್ತವೆ. ಅಸ್ಸಾಮಿನಲ್ಲಿ ವಾಸಿಸುವ ಕಸಾರಿ ಜನಾಂಗದವರ ಬೋಡೊ (ಇಲ್ಲವೇ ಬೋರೊ) ಎಂಬ ನುಡಿಯಲ್ಲಿ ಎಣಿಕೆಯನ್ನು ನಾಲ್ಕರ ಗುಂಪುಗಳಲ್ಲಿ ಮಾಡಲಾಗುತ್ತದೆ. ಈ ನುಡಿಯಲ್ಲಿ ಒಂದರಿಂದ ನಾಲ್ಕರ ವರೆಗೆ ಎಣಿಸಿ, ಮುಂದಕ್ಕೆ ಒಂದ್ನಾಲ್ಕು ಒಂದು (ಎಂದರೆ ಐದು), ಒಂದ್ನಾಲ್ಕು ಎರಡು (ಎಂದರೆ ಆರು), ಒಂದ್ನಾಲ್ಕು ಮೂರು (ಎಂದರೆ ಏಳು), ಎರಡ್ನಾಲ್ಕು (ಎಂದರೆ ಎಂಟು) ಎಂಬುದಾಗಿ ಎಣಿಕೆ ಸಾಗುತ್ತದೆ. ಹನ್ನೊಂದು ಎನ್ನಲು ಈ ನುಡಿಯಲ್ಲಿ ಎರಡ್ನಾಲ್ಕು ಮೂರು ಎನ್ನಬೇಕು, ಮತ್ತು ಹದಿನಾಲ್ಕು ಎನ್ನಲು ಮೂರ್ನಾಲ್ಕು ಎರಡು ಎನ್ನಬೇಕು.
ಬೋಡೊ ನುಡಿಯಲ್ಲಿ ಐದಕ್ಕೂ ಒಂದು ಪದ ಇದೆಯಾದ ಕಾರಣ, ಈ ನಾಲ್ಕರ ಹೊಲಬಿನಲ್ಲಿ ಇಪ್ಪತ್ತರವರೆಗೆ ಲೆಕ್ಕ ಹಾಕಲು ಬರುತ್ತದೆ; ಅದಕ್ಕಿಂತ ಹೆಚ್ಚಿನ ಎಣಿಕೆಯನ್ನು ನಡೆಸಲು, ಅದಕ್ಕೆ ಹೊಸದೊಂದು ಹೊಲಬು ಬೇಕಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ ನೂರರ ಹೊಲಬಿರುವಂತೆ, ಬೋಡೊ ನುಡಿಯಲ್ಲಿ ಇಪ್ಪತ್ತರ ಹೊಲಬಿದೆ. ಈ ಹೊಲಬಿನಂತೆ, ಇಪ್ಪತ್ತಾರು ಎನ್ನಲು ‘ಒಂದಿಪ್ಪತ್ತು ಒಂದ್ನಾಲ್ಕು ಎರಡು’ ಎನ್ನಬೇಕು, ಮತ್ತು ಎಪ್ಪತ್ತಮೂರು ಎನ್ನಲು ‘ಮೂರಿಪ್ಪತ್ತು ಮೂರ್ನಾಲ್ಕು ಒಂದು’ (3 x 20) + (3 x 4) + 1 ಎನ್ನಬೇಕು. ಇಂತಹ ಎಣಿಕೆ ನಮ್ಮದರಿಂದ ತೊಡಕಾದುದೆಂದು ನಮಗೆ ತೋರಬಹುದು, ಆದರೆ ಬೋಡೊ ನುಡಿಯಲ್ಲಿ ಮಾತನಾಡುವವರಿಗೆ ನಮ್ಮಲ್ಲಿರುವ ಹತ್ತರ ಹೊಲಬಿಗಿಂತ ಅವರ ನಾಲ್ಕರ ಹೊಲಬೇ ಒಳ್ಳೆಯದೆಂದು ಅನಿಸದಿರದು.
ನಮ್ಮಲ್ಲಿ ಎಣಿಕೆಯ ಪದಗಳನ್ನು ಉಂಟುಮಾಡುವಲ್ಲಿ ಹತ್ತರ ಹೊಲಬು ಬಳಕೆಯಲ್ಲಿದೆಯಾದ ಕಾರಣ, ಅದೇ ಹತ್ತರ ಹೊಲಬಿನಲ್ಲಿ ಉಂಟುಮಾಡಿರುವ ಲೀಟರ್, ರುಪಾಯಿ, ಗ್ರಾಮ್ ಮೊದಲಾದ ಅಳತೆಪದಗಳ ಬಳಕೆ ಮೊದಲಿಗಿದ್ದ ರಾತಲು, ಸೇರು, ಅಡಿ ಮೊದಲಾದವುಗಳಿಗಿಂತ ಒಳ್ಳೆಯವೆಂದು ಅನಿಸುತ್ತದೆ; ಆದರೆ, ನಾಲ್ಕರ ಹೊಲಬನ್ನು ಬಳಸುವವರಿಗೆ ಅವು ಹಿಂದಿನವಕ್ಕಿಂತ ಒಳ್ಳೆಯವೆಂದೇನೂ ಅನಿಸಬೇಕಾಗಿಲ್ಲ.
ಎಣಿಕೆಪದಗಳ ಬಳಕೆಯಲ್ಲೂ ನುಡಿಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳನ್ನು ಕಾಣಬಹುದು: ಕನ್ನಡದಲ್ಲಿ ಎಣಿಕೆಪದಗಳನ್ನು ಮರ, ಮನೆ, ಹುಡುಗ, ಚೆಂಡು ಮೊದಲಾದ ಪದಗಳಿಗೆ ನೇರವಾಗಿ ಸೇರಿಸಲು ಬರುತ್ತದೆ (ಮೂರು ಮನೆಗಳು, ಇಪ್ಪತ್ತೊಂದು ಚೆಂಡುಗಳು); ಆದರೆ, ನೀರು, ಅಕ್ಕಿ, ಎಣ್ಣೆ, ಹಾಲು ಮೊದಲಾದ ಪದಗಳಿಗೆ ಎಣಿಕೆಪದಗಳನ್ನು ಸೇರಿಸಬೇಕಿದ್ದಲ್ಲಿ, ಮೊದಲಿಗೆ ಅವಕ್ಕೆ ಅಳತೆಯನ್ನು ತಿಳಿಸುವ ಪದಗಳನ್ನು ಸೇರಿಸಬೇಕಾಗುತ್ತದೆ (ಮೂರು ಕಿಲೋ ಅಕ್ಕಿ, ಎರಡು ಲೀಟರ್ ಹಾಲು). ಇದಕ್ಕೆ ಬದಲು, ಬೋಡೊ ನುಡಿಯಲ್ಲಿ ಯಾವ ಪದಕ್ಕೂ ಎಣಿಕೆಪದಗಳನ್ನು ನೇರವಾಗಿ ಸೇರಿಸಲು ಬರುವುದಿಲ್ಲ; ಒಂದು ಪದ ತಿಳಿಸುವ ವ್ಯಕ್ತಿ ಇಲ್ಲವೇ ವಸ್ತು ಎಂತಹದು ಎಂಬುದನ್ನು ಅಡಕವಾಗಿ ತಿಳಿಸುವ ಪದವನ್ನು ಅದಕ್ಕೆ ಮೊದಲು ಸೇರಿಸಿ, ಆಮೇಲೆ ಎಣಿಕೆ ಪದಗಳನ್ನು ಸೇರಿಸಬೇಕಾಗುತ್ತದೆ.
ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ನುಡಿಗಳಲ್ಲಿ ಬಳಕೆಯಾಗುವ ಎಣಿಕೆಯ ಹೊಲಬುಗಳ ನಡುವೆ ಕಾಣಿಸಿಕೊಳ್ಳುತ್ತವೆ. ಇವೆಲ್ಲವೂ ಎಣಿಕೆಯನ್ನು ಬಳಸುವಲ್ಲಿ ಮಾನವನು ಕಂಡುಕೊಂಡಿರುವ ಜಾಣ್ಮೆಯ ಹೊಲಬುಗಳೆಂದು ಹೇಳಬಹುದು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 22
ಅರಿಮೆಯ (ವಿಜ್ನಾನದ) ಬರಹಗಳನ್ನು ಓದುತ್ತಿರುವವರಿಗೆ ಅವು ತುಂಬಾ ತೊಡಕಿನವಾಗಿ ಕಾಣಿಸಲು ಹಲವು ಕಾರಣಗಳಿವೆ; ಇವುಗಳಲ್ಲಿ ಎಸಕ(ಕ್ರಿಯೆ)ಗಳನ್ನು ತಿಳಿಸಲು ಎಸಕಪದಗಳನ್ನು ಬಳಸುವ ಬದಲು ಅವುಗಳ ಹೆಸರುರೂಪಗಳನ್ನು ಇಲ್ಲವೇ ಬೇರೆ ಹೆಸರುಕಂತೆಗಳನ್ನು ಬಳಸುವುದು ಒಂದು ಮುಕ್ಯ ಕಾರಣ. ಓಡು ಎಂಬುದು ಒಂದು ಎಸಕವನ್ನು ತಿಳಿಸುತ್ತದೆ; ರಾಜು ಓಡುತ್ತಿದ್ದಾನೆ ಎಂಬ ಸೊಲ್ಲಿನಲ್ಲಿ ಇದನ್ನು ಒಂದು ಎಸಕಪದದ ಮೂಲಕ ಒಂದು ಎಸಕವಾಗಿ ತಿಳಿಸಲಾಗಿದೆ. ಸಾಮಾನ್ಯವಾಗಿ ಮಾತಿನಲ್ಲಿ ಈ ರೀತಿ ಎಸಕಗಳನ್ನು ಎಸಕಗಳಾಗಿಯೇ ತಿಳಿಸಲಾಗುತ್ತದೆ; ಆದರೆ, ಅದನ್ನೊಂದು ವಿಶಯವಾಗಿಯೂ ತಿಳಿಸಲು ಬರುತ್ತದೆ, ಮತ್ತು ಇದಕ್ಕಾಗಿ ಮೇಲಿನ ಸೊಲ್ಲನ್ನು ರಾಜುವಿನ ಓಡುವಿಕೆ ಇಲ್ಲವೇ ರಾಜುವಿನ ಓಟ ಎಂಬ ಒಂದು ಹೆಸರುಕಂತೆಯಾಗಿ ಮಾರ‍್ಪಡಿಸಲು ಬರುತ್ತದೆ.
ಇಂತಹ ಮಾರ‍್ಪಡಿಸಿದ ಬಳಕೆಗಳು ಮಾತಿನಲ್ಲಿ ಇಲ್ಲವೇ ಸಾಮಾನ್ಯ ಬರಹಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ; ಆದರೆ, ಅರಿಮೆಯ ಬರಹಗಳಲ್ಲಿ ಅವನ್ನು ತುಂಬಾ ಹೆಚ್ಚು ಬಳಸಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಅವನ್ನು ಬಳಸುವ ಮೂಲಕ ಹೇಳಬೇಕೆಂದಿರುವ ಸಂಗತಿಯನ್ನು ತುಂಬಾ ಅಡಕವಾಗಿ ಹೇಳಲು ಬರುತ್ತದೆ; ಎತ್ತುಗೆಗಾಗಿ, ಮಕ್ಕಳನ್ನು ತಾಯಂದಿರು ಸಾಕುತ್ತಾರೆ ಎಂಬುದನ್ನು ಒಮ್ಮೆ ಸೂಚಿಸಿದ ಮೇಲೆ, ಅದರ ಕುರಿತಾಗಿ ಬೇರೆ ಸಂಗತಿಗಳನ್ನು ತಿಳಿಸಬೇಕಾದಾಗ ಅದನ್ನು ಅಡಕವಾಗಿ ಮಕ್ಕಳ ಸಾಕುವಿಕೆ ಇಲ್ಲವೇ ಬರೀ ಸಾಕುವಿಕೆ ಎಂಬುದಾಗಿ ಮಾರ‍್ಪಡಿಸಿ ಸೂಚಿಸಲು ಬರುತ್ತದೆ.
ಇದಲ್ಲದೆ, ಅರಿಮೆಯ ಬರಹಗಳ ಇಟ್ಟಳ (ರಚನೆ) ಬೇರೆ ಬರಹಗಳ ಇಟ್ಟಳಕ್ಕಿಂತ ಈ ವಿಶಯದಲ್ಲಿ ಬೇರಾಗಿದೆ; ಸಾಮಾನ್ಯ ಬರಹಗಳಲ್ಲಿ ಉದ್ದಕ್ಕೂ ಒಬ್ಬ ವ್ಯಕ್ತಿ ಇಲ್ಲವೇ ಕೆಲವು ವ್ಯಕ್ತಿಗಳು ಏನು ಮಾಡಿದ್ದಾರೆ ಎಂಬುದಾಗಿ ಹಲವು ಬಗೆಯ ಎಸಕಗಳು ಒಂದರ ಬಳಿಕ ಒಂದರಂತೆ ನಡೆದಿರುವುದನ್ನು ತಿಳಿಸಲಾಗುತ್ತದೆ; ಇದಕ್ಕೆ ಬದಲು, ಅರಿಮೆಯ ಬರಹಗಳಲ್ಲಿ ಒಂದು ಎಸಕವನ್ನು ತಿಳಿಸಿದ ಮೇಲೆ, ಆ ಎಸಕದ ಕುರಿತಾಗಿ ಹಲವಾರು ವಿಶಯಗಳನ್ನು ತಿಳಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಆ ಎಸಕವನ್ನು ಮುಂದಿನ ಸೊಲ್ಲುಗಳ ನೆಲೆಯಾಗಿ ಬಳಸಬೇಕಾಗುತ್ತದೆ; ಆದರೆ, ಹೆಸರುಪದಗಳು ಇಲ್ಲವೇ ಎಸಕಪದಗಳ ಹೆಸರುರೂಪಗಳು ಮಾತ್ರ ಸೊಲ್ಲುಗಳ ನೆಲೆಗಳಾಗಬಲ್ಲುವು; ಹಾಗಾಗಿ, ಆ ಎಸಕವನ್ನು ತಿಳಿಸಲು ಒಂದು ಹೆಸರುಕಂತೆಯನ್ನು ಬಳಸಬೇಕಾಗುತ್ತದೆ.
ಇಂತಹ ಮಾರ‍್ಪಡಿಸಿದ ಬಳಕೆಗಳು ತೊಡಕಿನವಾಗಿ ಕಾಣಿಸಲು ಮುಕ್ಯ ಕಾರಣವೇನೆಂದರೆ, ಸಾಮಾನ್ಯವಾಗಿ ನಮ್ಮ ಮಾತಿನಲ್ಲಿ ಎಸಕಪದಗಳು ಎಸಕಗಳನ್ನು ಸೂಚಿಸುತ್ತವೆ ಮತ್ತು ಹೆಸರುಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುತ್ತವೆ; ಆದರೆ, ಈ ಮಾರ‍್ಪಡಿಸಿದ ಬಳಕೆಗಳಲ್ಲಿ ಹೆಸರುಪದಗಳ ಮೂಲಕ ಎಸಕಗಳನ್ನು ಸೂಚಿಸಲಾಗುತ್ತದೆ. ಎಂದರೆ, ಇವು ನಾವು ಜಗತ್ತನ್ನು ನೋಡುವ ಬಗೆಯನ್ನೇ ಬೇರೆ ಮಾಡುತ್ತವೆ: ಅವು ಎಸಕಗಳನ್ನು ಹೆಸರುಗಳಾಗಿ, ಎಂದರೆ ವಸ್ತು ಇಲ್ಲವೇ ವಿಶಯಗಳಾಗಿ ನೋಡುವಂತೆ ಮಾಡುತ್ತವೆ. ಅರಿಮೆಯ ಬರಹಗಳನ್ನು ಓದುವವರು ಜಗತ್ತನ್ನು ಈ ರೀತಿ ಒಂದು ಹೊಸ ಬಗೆಯಲ್ಲಿ ನೋಡಲು ಕಲಿಯಬೇಕಾಗುತ್ತದೆ. ಇದು ಸುಲಬದ ಕೆಲಸವಲ್ಲ.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಇನ್ನೊಂದು ತೊಡಕೂ ಕಾಣಿಸಿಕೊಳ್ಳುತ್ತದೆ: ಅರಿಮೆಯ ಬರಹಗಳನ್ನು ಬರೆಯುವವರು ಎಸಕಪದಗಳನ್ನು ಹೆಸರುಕಂತೆಗಳಾಗಿ ಮಾರ‍್ಪಡಿಸುವಲ್ಲಿ ಕನ್ನಡದ ಕಸುವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾಗಾಗಿ, ಅವರು ಕನ್ನಡದವೇ ಆದ ಹೆಸರುಪದಗಳನ್ನು ಇಲ್ಲವೇ ಎಸಕಪದಗಳ ಹೆಸರುರೂಪಗಳನ್ನು ಬಳಸುವ ಬದಲು, ಸಂಸ್ಕ್ರುತದ ಪದ ಮತ್ತು ಪದರೂಪಗಳನ್ನು ಅನವಶ್ಯಕವಾಗಿ ಎರವಲು ಪಡೆದು ಬಳಸಹೋಗುತ್ತಾರೆ, ಮತ್ತು ಆ ಮೂಲಕ ತಮ್ಮ ಬರಹಗಳಲ್ಲಿ ಇನ್ನಶ್ಟು ತೊಡಕುಗಳನ್ನು ಸೇರಿಸಿಕೊಳ್ಳುತ್ತಾರೆ.
ಎತ್ತುಗೆಗಾಗಿ, ಈ ಮಣ್ಣಿನಲ್ಲಿ ಕ್ಶಾರ ಇದೆ ಎಂಬ ಸೊಲ್ಲನ್ನು ಕನ್ನಡದಲ್ಲೇನೇ ಕ್ಶಾರವಿರುವ (ಇಲ್ಲವೇ ಕ್ಶಾರವುಳ್ಳ) ಮಣ್ಣು ಎಂಬುದಾಗಿ ಮಾರ‍್ಪಡಿಸಬಹುದು. ಆದರೆ ಇದು ಕನ್ನಡದಲ್ಲಿ ಅರಿಮೆಯ ಬರಹಗಳನ್ನು ಬರೆಯುವವರ ಗಮನಕ್ಕೇ ಬರುವುದಿಲ್ಲ. ಅದಕ್ಕೆ ಬದಲಾಗಿ ಅವರು ಕ್ಶಾರಯುಕ್ತ ಮಣ್ಣು ಎಂಬುದಾಗಿ ಸಂಸ್ಕ್ರುತದಿಂದ ಯುಕ್ತ ಪದರೂಪವನ್ನು ಎರವಲು ಪಡೆದು ಬಳಸುತ್ತಾರೆ. ಜೀವ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯೊಂದನ್ನು ಕೇಳಿ, ಅದರ ಮುಂದಿನ ಸೊಲ್ಲಿನಲ್ಲಿ ಜೀವದ ಹುಟ್ಟು ಎಂಬುದಾಗಿ ಅದನ್ನು ಮಾರ‍್ಪಡಿಸಿಕೊಳ್ಳುವ ಬದಲು, ಜೀವದ ಉಗಮ ಎಂಬುದಾಗಿ ಬರೆಯುತ್ತಾರೆ; ಎಂದರೆ, ಸಂಸ್ಕ್ರುತದ ಉಗಮ ಪದವನ್ನು ಅನವಶ್ಯಕವಾಗಿ ಎರವಲಾಗಿ ಪಡೆದು ಬಳಸುತ್ತಾರೆ. ಇದರಿಂದಾಗಿ, ಮೊದಲೇ ತೊಡಕಿನದಾಗಿ ಕಾಣಿಸುವ ಅರಿಮೆಯ ಬರಹ ಇನ್ನಶ್ಟು ತೊಡಕಿನದಾಗುತ್ತದೆ.
ಎಸಕಗಳನ್ನು ತಿಳಿಸಲು ಹೆಸರುಕಂತೆಗಳನ್ನು ಬಳಸಿರುವಲ್ಲಿ ಓದುಗರು ಎಸಕದಿಂದ ವಿಶಯಕ್ಕೆ ನೆಗೆಯಬೇಕಾಗುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಸಕವನ್ನು ಇಲ್ಲಿ ಎಸಕಪದದ ಮೂಲಕ ಒಂದು ಎಸಕವಾಗಿ ಸೂಚಿಸದೆ, ಹೆಸರುಪದದ ಮೂಲಕ ಒಂದು ವಿಶಯವಾಗಿ ಸೂಚಿಸಲಾಗುತ್ತದೆ. ಇದಲ್ಲದೆ, ಆ ರೀತಿ ಬದಲಾವಣೆಯನ್ನು ಮಾಡಲಾಗಿದೆ ಎಂಬುದನ್ನು ಬರಹಗಳಲ್ಲಿ ಯಾವ ರೀತಿಯಲ್ಲೂ ಸೂಚಿಸಲಾಗುವುದಿಲ್ಲ. ಓದುಗರು ಈ ನೆಗೆತವನ್ನು ತಾವೇ ಮಾಡಿಕೊಳ್ಳಬಲ್ಲರು ಎಂಬುದಾಗಿ ತಿಳಿಯಲಾಗುತ್ತದೆ.
ಆದರೆ, ಅರಿಮೆಯ ಬರಹಗಳನ್ನು ಓದಿ ಪಳಗಿಲ್ಲದ ಓದುಗರಿಗೆ ಈ ನೆಗೆತ ತೊಂದರೆಯನ್ನು ಕೊಡುತ್ತದೆ. ಕನ್ನಡದ ಅರಿಮೆಯ ಬರಹಗಳಲ್ಲಿ ಈ ನೆಗೆತದೊಂದಿಗೆ ಇನ್ನೊಂದು ನೆಗೆತವನ್ನೂ ಓದುಗರ ಮೇಲೆ ಹೊರಿಸಲಾಗುತ್ತದೆ: ಅವರು ಎಸಕದಿಂದ ಹೆಸರಿಗೆ ನೆಗೆಯಬೇಕಾಗುತ್ತದೆ ಮಾತ್ರವಲ್ಲ, ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೂ ನೆಗೆಯಬೇಕಾಗುತ್ತದೆ. ಎತ್ತುಗೆಗಾಗಿ, ಒಂದು ಜೀವಿ ಇನ್ನೊಂದು ಜೀವಿಯನ್ನು ಹುಟ್ಟಿಸುತ್ತದೆ ಎಂಬಲ್ಲಿಂದ ಹುಟ್ಟಿಸುವಿಕೆ ಎಂಬುದಕ್ಕೆ ಹೋಗದೆ ನೇರವಾಗಿ ಪ್ರಜನನ ಕ್ರಿಯೆ ಎಂಬುದಕ್ಕೆ ನೆಗೆಯಬೇಕಾಗುತ್ತದೆ.
ಚಿಕ್ಕ ಮಕ್ಕಳಿಗಾಗಿ ಬರೆದ ಅರಿಮೆಯ ಬರಹಗಳಲ್ಲೂ ಇಂತಹ ಹಲವಾರು ಸಂಸ್ಕ್ರುತದ ಪದರೂಪಗಳನ್ನು ಕಾಣಬಹುದು. ಇವನ್ನು ಮಕ್ಕಳು ಕಣ್ಣು ಮುಚ್ಚಿ ಬಾಯಿಪಾಟ ಮಾಡುತ್ತಾರಲ್ಲದೆ, ಅವು ನಿಜಕ್ಕೂ ಏನು ಹೇಳುತ್ತವೆ ಎಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಯಾಕೆಂದರೆ, ಅವರಿಗೆ ಇವುಗಳಲ್ಲಿ ಬರುವ ಎಸಕದಿಂದ ಹೆಸರಿಗೆ ಹಾರುವ ಮೊದಲ ನೆಗೆತವೇ ತೊಡಕಿನದಾಗಿ ಕಾಣಿಸುತ್ತದೆ; ಇನ್ನು ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೆ ಹಾರುವ ಎರಡನೆಯ ನೆಗೆತ ಅವರ ಅಳವಿಗೆ ಮೀರಿದ್ದು.
ಅರಿಮೆಯ ಬರಹಗಳನ್ನು ಮಂದಿ ಮೆಚ್ಚುವ (ಜನಪ್ರಿಯವಾಗುವ) ಹಾಗೆ ಇಲ್ಲವೇ ಚಿಕ್ಕ ಮಕ್ಕಳಿಗೆ ಗೊತ್ತಾಗುವ ಹಾಗೆ ಬರೆಯಬೇಕಿದ್ದಲ್ಲಿ ಬರಹಗಾರರು ಕೆಳಗೆ ಕೊಟ್ಟಿರುವ ಉಪಾಯಗಳನ್ನು ಬಳಸಿಕೊಳ್ಳಬೇಕಾಗುತ್ತದೆ: (೧) ಆದಶ್ಟು ಮಟ್ಟಿಗೆ ಅವರು ಅರಿಮೆಯ (ಪಾರಿಬಾಶಿಕ) ಪದಗಳ ಬಳಕೆಯನ್ನು ಕಡಿಮೆ ಮಾಡಬೇಕು; (೨) ಎಸಕಗಳನ್ನು ತಿಳಿಸುವ ಹೆಸರುಕಂತೆಗಳನ್ನು ಸೊಲ್ಲುಗಳಾಗಿ ಬದಲಾಯಿಸಿಕೊಳ್ಳಬೇಕು; (೩) ಸಿಕ್ಕಲು ಸೊಲ್ಲುಗಳನ್ನು ಸುಳುಸೊಲ್ಲುಗಳಾಗಿ ಬಿಡಿಸಿ ಬರೆಯಬೇಕು; ಮತ್ತು (೪) ಸಂಸ್ಕ್ರುತ (ತತ್ಸಮ) ಪದಗಳ ಬದಲು ಆದಶ್ಟು ಮಟ್ಟಿಗೆ ಕನ್ನಡದವೇ ಆದ ಪದಗಳನ್ನು ಬಳಸಬೇಕು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 20
ಕನ್ನಡದಲ್ಲಿ ಬಳಕೆಯಾಗುವ ಪದಗಳು ಮತ್ತು ಪದರೂಪಗಳುಸರಿಯೋ ತಪ್ಪೋ ಎಂಬುದನ್ನು ತೀರ‍್ಮಾನಿಸುವಲ್ಲಿ ನಾವು ಯಾವ ಕಟ್ಟಲೆಗಳನ್ನು ಬಳಸಬೇಕು? ಕನ್ನಡದ ಕಟ್ಟಲೆಗಳನ್ನೇ ಬಳಸಬೇಕೆಂದು ಯಾರೂ ಹೇಳಬಹುದು. ಆದರೆ, ಇವತ್ತು ಹಲವು ಮಂದಿ ಕನ್ನಡದ ವಿದ್ವಾಂಸರಿಗೆ ಇದು ಒಪ್ಪಿಗೆಯಾಗುವುದಿಲ್ಲ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬಳಸುವಾಗ ಸಂಸ್ಕ್ರುತದ ಕಟ್ಟಲೆಗಳನ್ನೇ ತಪ್ಪದೆ ಬಳಸಬೇಕೆಂಬುದಾಗಿ ಅವರು ಹೇಳುತ್ತಾರೆ. ಕನ್ನಡದ ವಿದ್ವಾಂಸರಲ್ಲಿ ಹಿಂದಿನ ಕಾಲದಿಂದಲೂ ಬೆಳೆದುಬಂದಿರುವ ಕನ್ನಡದ ಕುರಿತಾಗಿರುವ ಕೀಳರಿಮೆ ಮತ್ತು ಸಂಸ್ಕ್ರುತದ ಕುರಿತಾಗಿರುವ ಅತಿಯಾದ ಆದರ ಮತ್ತು ಅಬಿಮಾನಗಳೇ ಇದಕ್ಕೆ ಕಾರಣ.
ಎತ್ತುಗೆಗಾಗಿ, ಸೊಲ್ಲರಿಗರನ್ನು ಸೂಚಿಸಲು ಸಂಸ್ಕ್ರುತದಲ್ಲಿ ಎರಡು ಪದಗಳಿವೆ. ಇವುಗಳಲ್ಲಿ ‘ವಯ್ಯಾಕರಣಃ’ ಎಂಬುದು ಗಂಡಸರನ್ನು ಸೂಚಿಸುತ್ತದೆ ಮತ್ತು ‘ವಯ್ಯಾಕರಣೀ’ ಎಂಬುದು ಹೆಂಗಸರನ್ನು ಸೂಚಿಸುತ್ತದೆ. ಆದರೆ, ಕನ್ನಡದಲ್ಲಿ ಗಂಡಸರನ್ನು ಸೂಚಿಸುವುದಕ್ಕಾಗಿಯೂ ‘ವಯ್ಯಾಕರಣಿ’ ಎಂಬ ಪದವೇ ಬಳಕೆಗೆ ಬಂದಿದೆ. ಇದನ್ನು ಕಿಟ್ಟೆಲ್ ಅವರ ಡಿಕ್ಶನರಿಯಲ್ಲಿ ನೋಡಬಹುದು. ಆದರೆ ಇದು ತಪ್ಪು, ಗಂಡಸರನ್ನು ಸೂಚಿಸಲು ‘ವಯ್ಯಾಕರಣ’ ಎಂಬುದನ್ನೇ ಬಳಸಬೇಕು ಎಂಬುದಾಗಿ ಕೆಲವರು ಕನ್ನಡದ ವಿದ್ವಾಂಸರು ವಾದಿಸುತ್ತಾರೆ.
ಇದಕ್ಕೆ ಅವರಿಗೆ ಸಂಸ್ಕ್ರುತ ವ್ಯಾಕರಣದ ಕಟ್ಟಲೆಯೇ ಆದಾರ. ಆದರೆ ನಿಜಕ್ಕೂ ಇದು ಸರಿಯಲ್ಲ. ಯಾಕೆಂದರೆ, ಯಾವ ನುಡಿಯಿಂದಲೇ ಆಗಲಿ ಒಂದು ಪದವನ್ನು ಎರವಲಾಗಿ ಪಡೆದ ಮೇಲೆ, ಅದನ್ನು ಯಾವ ರೀತಿಯಲ್ಲಿ ಮತ್ತು ಯಾವ ರೂಪದಲ್ಲಿ ಬಳಸಬೇಕು ಎಂಬುದಕ್ಕೆ ಎರವಲಾಗಿ ಪಡೆದ ನುಡಿಯಲ್ಲಿರುವ ಬಳಕೆಯ ಕಟ್ಟಲೆಗಳೇ ಆದಾರವಾಗಬೇಕಲ್ಲದೆ ಎರವಲು ಕೊಟ್ಟ ನುಡಿಯ ಕಟ್ಟಲೆಗಳಲ್ಲ.
ಎತ್ತುಗೆಗಾಗಿ, ಸಂಸ್ಕ್ರುತದಿಂದ ಹಲವು ನಾಮಪದಗಳನ್ನು ನಾವು ಕನ್ನಡಕ್ಕೆ ಎರವಲಾಗಿ ಪಡೆದು ಬಳಸುತ್ತೇವೆ. ಇವುಗಳಲ್ಲಿ ಕೆಲವಕ್ಕೆ ಇಸು ಒಟ್ಟನ್ನು ಸೇರಿಸಿ ಕ್ರಿಯಾಪದಗಳಾಗಿ ಮಾಡಿಯೂ ಬಳಸುತ್ತೇವೆ (ಜಪ-ಜಪಿಸು, ಕೋಪ-ಕೋಪಿಸು, ರುಚಿ-ರುಚಿಸು). ಆದರೆ, ಈ ಬಳಕೆಗೆ ಕನ್ನಡದ ಕಟ್ಟಲೆಗಳು ಆದಾರವಲ್ಲದೆ ಸಂಸ್ಕ್ರುತದ ಕಟ್ಟಲೆಗಳಲ್ಲ.
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ಲಿಂಗವನ್ನು ನಿರ‍್ದರಿಸುವಲ್ಲೂ ನಾವು ಕನ್ನಡದ ಕಟ್ಟಲೆಗಳನ್ನು ಬಳಸುತ್ತೇವಲ್ಲದೆ ಸಂಸ್ಕ್ರುತದ ಕಟ್ಟಲೆಗಳನ್ನಲ್ಲ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಪುಲ್ಲಿಂಗದಲ್ಲಿರುವ ದೇಶ, ಮಾರ‍್ಗ, ದೀಪ ಮೊದಲಾದ ಪದಗಳನ್ನು, ಮತ್ತು ಸ್ತ್ರೀಲಿಂಗದಲ್ಲಿರುವ ನದಿ, ಲಿಪಿ, ಚರ‍್ಚೆ ಮೊದಲಾದ ಪದಗಳನ್ನು ನಾವು ನಪುಂಸಕ ಲಿಂಗದಲ್ಲಿ ಬಳಸುತ್ತೇವಲ್ಲದೆ ಪುಲ್ಲಿಂಗ ಇಲ್ಲವೇ ಸ್ತ್ರೀಲಿಂಗದಲ್ಲಲ್ಲ. ಸಂಸ್ಕ್ರುತದಲ್ಲಿ ನಾಮಪದಗಳಿಂದ ಬೇರಾದ ಗುಣಪದಗಳೆಂಬ ಪದಗಳಿಲ್ಲ.
ಹೀಗಿದ್ದರೂ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ವ್ಯಾವಹಾರಿಕ, ಸಾಮಾಜಿಕ, ಯಾಂತ್ರಿಕ ಮೊದಲಾದ ಹಲವು ಪದಗಳನ್ನು ನಾವು ನಾಮಪದಗಳಿಂದ ಬೇರಾಗಿರುವ ಗುಣಪದಗಳಾಗಿ ಬಳಸುತ್ತೇವೆ. ಹಾಗಾಗಿ, ವಯ್ಯಾಕರಣಿಯಂತಹ ಪದಗಳ ಮಟ್ಟಿಗೂ ನಾವು ಇದೇ ಕ್ರಮವನ್ನು ಅನುಸರಿಸುವುದು ಸರಿಯಾದ ದಾರಿ. ಕನ್ನಡದಲ್ಲಿ ಅವು ಯಾವ ರೀತಿಯಲ್ಲಿ ಬಳಕೆಗೆ ಬಂದಿವೆ ಎಂಬುದು ನಮಗೆ ಮುಕ್ಯವಲ್ಲದೆ ಆ ಬಳಕೆ ಸಂಸ್ಕ್ರುತದ ನಿಯಮಗಳಿಗೆ ಅನುಸಾರವಾಗಿದೆಯೇ ಇಲ್ಲವೇ ಎಂಬುದು ಮುಕ್ಯವಲ್ಲ.
ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ಬರುವ ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳು ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದಿಲ್ಲ; ಹಾಗಿದ್ದರೂ ‘ಅವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು; ಇಲ್ಲವಾದರೆ ಅದು ತಪ್ಪಾಗುತ್ತದೆ’ ಎಂದು ಹೇಳುವುದೂ ಸಂಸ್ಕ್ರುತದ ಕಟ್ಟಲೆಗಳನ್ನು ಕನ್ನಡದ ಮೇಲೆ ಹೊರಿಸುವ ತಪ್ಪು ದಾರಿಯಾಗಿದೆ. ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಈ ಎರವಲು ಪದಗಳು ಹೇಗೆ ಕಾಣಿಸುತ್ತವೆಯೋ ಹಾಗೆ ಬರೆಯುವುದೇ ಕನ್ನಡದ ಮಟ್ಟಿಗೆ ಸರಿಯಾದ ದಾರಿ.
ಇನ್ನೊಂದು ಬಗೆಯ ‘ತಪ್ಪು’ಗಳು ಆಡುನುಡಿಯಿಂದ ಪದಗಳನ್ನು ಇಲ್ಲವೇ ಪದರೂಪಗಳನ್ನು ಬರಹಕ್ಕೆ ತಂದು ಬಳಸುವಲ್ಲಿ ಕಾಣಿಸಿಕೊಳ್ಳುತ್ತವೆ. ಆಡುನುಡಿಯೆಂಬುದು ಊರಿನಿಂದ ಊರಿಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿರುತ್ತದೆ. ಆದರೆ, ಬರಹದ ನುಡಿ ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕೆಂದು ನಾವು ಬಯಸುತ್ತೇವೆ. ಯಾಕೆಂದರೆ, ಹಾಗಿಲ್ಲವಾದರೆ ಒಂದು ಊರಿನ ಮತ್ತು ಜಾತಿಯ ಬರಹಗಾರರು ಬರೆದುದನ್ನು ಇನ್ನೊಂದು ಊರಿನ ಮತ್ತು ಜಾತಿಯ ಜನರಿಗೆ ಓದಿ ಅರ‍್ತಮಾಡಿಕೊಳ್ಳಲು ಕಶ್ಟವಾಗುತ್ತದೆ.
ಈ ಸಮಾನತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಬರಹದ ನುಡಿಯಲ್ಲಿ ಎಂತಹ ಮಾರ‍್ಪಾಡನ್ನು ನಡೆಸುವುದಿದ್ದರೂ ಅದು ಎಲ್ಲಾ ಊರು ಮತ್ತು ಜಾತಿಗಳಿಗೆ ಸೇರಿದ ಜನರಿಗೂ ಒಪ್ಪಿಗೆಯಾಗುವಂತಹದಾಗಿರಬೇಕು. ಎಲ್ಲಾ ಬರಹಗಾರರೂ ತಮಗೆ ಅನಿಸಿದ ಹಾಗೆ ತಮ್ಮ ಬರಹದ ನುಡಿಯಲ್ಲಿ ಮಾರ‍್ಪಾಡುಗಳನ್ನು ಮಾಡಹೊರಟರೆ ಈ ಸಮಾನತೆ ಪೂರ‍್ತಿ ಅಳಿದು ಹೋದೀತು.
ಬರಹದಲ್ಲಿ ತಪ್ಪು-ಸರಿ ಎಂಬ ಪರಿಕಲ್ಪನೆಯನ್ನು ಈ ಅರ‍್ತದಲ್ಲಿ ಬಳಸಲು ಸಾದ್ಯವಿದೆ. ಕನ್ನಡದ ಕೆಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಬಿದ್ದುಹೋಗಿದೆ; ಹಾಲು ಎಂಬುದು ಆಲು ಎಂದಾಗಿದೆ, ಹಣ್ಣು ಎಂಬುದು ಅಣ್ಣು ಎಂದಾಗಿದೆ, ಹುಳ ಎಂಬುದು ಉಳ ಎಂದಾಗಿದೆ. ಈ ರೀತಿ ಕೆಲವರು ಕನ್ನಡಿಗರು ತಮ್ಮ ಆಡುನುಡಿಯ ಪದಗಳಲ್ಲಿದ್ದ ಹಕಾರವನ್ನು ಕಳೆದುಕೊಂಡುದರಲ್ಲಿ ತಪ್ಪಾಗಿರುವಂತಹದು ಏನೂ ಇಲ್ಲ. ಅದು ಅವರ ಆಡುನುಡಿಯಲ್ಲಿ ಸ್ವಾಬಾವಿಕವಾಗಿ ನಡೆದಿರುವ ಒಂದು ಮಾರ‍್ಪಾಡು ಮಾತ್ರ. ಇದಲ್ಲದೆ, ಅದು ಅವರ ಆಡುನುಡಿಯನ್ನು ಕೆಡಿಸಿಲ್ಲ; ಅದರ ಜೀವಂತಿಕೆಯನ್ನು ಉಳಿಸಿದೆ.
ಆದರೆ, ಕನ್ನಡದ ಬೇರೆ ಹಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಈ ರೀತಿ ಬಿದ್ದುಹೋಗಿಲ್ಲ; ಹಾಗಾಗಿ, ಇವತ್ತು ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕಾದ ಬರಹದ ಕನ್ನಡದಲ್ಲಿ ಹಕಾರವನ್ನು ಉಳಿಸಿಕೊಳ್ಳಬೇಕೇ ಇಲ್ಲವೇ ಬಿದ್ದುಹೋಗಲು ಬಿಡಬೇಕೇ ಎಂಬುದನ್ನು ನಿರ‍್ದರಿಸಬೇಕಾಗುತ್ತದೆ. ಉಳಿಸಬೇಕೆಂದು ಹೆಚ್ಚಿನ ಕನ್ನಡಿಗರೂ ಬಯಸುವುದಾದರೆ, ಬರಹದಲ್ಲಿ ಹಕಾರವನ್ನು ಬಳಸದಿರುವುದು (ಇಲ್ಲವೇ ಬೇಡದಲ್ಲಿ ಬಳಸುವುದು) ‘ತಪ್ಪಾ’ಗುತ್ತದೆ.
ಇದೇ ರೀತಿಯಲ್ಲಿ, ಇವತ್ತು ಬಡಗ ಕರ‍್ನಾಟಕದ ಕೆಲವು ಆಡುನುಡಿಗಳಲ್ಲಿ ನಾಮಪದಗಳ ಕೊನೆಯಲ್ಲಿದ್ದ ಎಕಾರ ಇಕಾರವಾಗಿದೆ. ಮನೆ ಎಂಬುದು ಮನಿ ಎಂದಾಗಿದೆ, ಕಾಗೆ ಎಂಬುದು ಕಾಗಿ ಎಂದಾಗಿದೆ, ಕುದುರೆ ಎಂಬುದು ಕುದ್ರಿ ಎಂದಾಗಿದೆ. ಆದರೆ ಕನ್ನಡದ ಬೇರೆ ಆಡುನುಡಿಗಳಲ್ಲಿ ಈ ಮಾರ‍್ಪಾಡು ನಡೆದಿಲ್ಲ. ಇಲ್ಲೂ ಕೂಡ, ಎಲ್ಲರಿಗೂ ಸಮಾನವಾಗಿರಬೇಕಾದ ಬರಹದ ಕನ್ನಡಕ್ಕೆ ಈ ಮಾರ‍್ಪಾಡನ್ನು ತರಬೇಕೇ ಬೇಡವೇ ಎಂಬುದನ್ನು ತೀರ‍್ಮಾನಿಸಬೇಕಾಗುತ್ತದೆ, ಮತ್ತು ಬೇಡವೆಂದು ತೀರ‍್ಮಾನಿಸಿದಲ್ಲಿ ಹಾಗೆ ತರುವುದು ಬರಹದ ಮಟ್ಟಿಗೆ ‘ತಪ್ಪು’ ಎಂಬುದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಬೇಕಾಗುತ್ತದೆ.
ಆದರೆ, ಇಂತಹ ಯಾವ ಮಾರ‍್ಪಾಡೂ ಬರಹದ ಕನ್ನಡವನ್ನು ಕೆಡಿಸುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಆಲು ಇಲ್ಲವೇ ಮನಿ ಎಂಬ ಪದರೂಪದಲ್ಲಿಲ್ಲದಂತಹ ನುಡಿಯ ಬಳಕೆಗೆ ಅವಶ್ಯವಾಗಿರುವ ಯಾವ ಅಂಶವೂ ಹಾಲು ಇಲ್ಲವೇ ಮನೆ ಎಂಬ ಪದರೂಪದಲ್ಲಿಲ್ಲ. ಇಲ್ಲಿ ತಪ್ಪು ಮತ್ತು ಸರಿ ಎಂಬವುಗಳು ಎಂತಹ ಬರಹ ನಮ್ಮೊಳಗೆ ಸಮಾನವಾಗಿ ಉಳಿಯಬೇಕು ಎಂಬ ತೀರ‍್ಮಾನವನ್ನಶ್ಟೇ ಅವಲಂಬಿಸಿದೆ. ಇವತ್ತು ಬಳಕೆಯಲ್ಲಿರುವ ತೀರ‍್ಮಾನವನ್ನು ನಾವು ಅವಶ್ಯವೆಂದೆನಿಸಿದಲ್ಲಿ ಮಾರ‍್ಪಡಿಸಬಲ್ಲೆವು, ಮತ್ತು ಹಾಗೆ ಮಾರ‍್ಪಡಿಸಿದಾಗ ಇವತ್ತು ತಪ್ಪು ಎಂದು ತಿಳಿದಿರುವ ಪದರೂಪಗಳು ಸರಿಯೆಂದೆನಿಸಬಲ್ಲುವು.
ಸಂಸ್ಕ್ರುತ ಎರವಲುಗಳನ್ನು ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬ ಕಟ್ಟಲೆ ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾದುದು ಮಾತ್ರವಲ್ಲ, ಕನ್ನಡ ಬರಹವನ್ನು ಎಲ್ಲಾ ಕನ್ನಡಿಗರೂ ಸುಲಬವಾಗಿ ಕಲಿತು ತಮ್ಮದಾಗಿಸಿಕೊಳ್ಳುವಲ್ಲಿ ಒಂದು ದೊಡ್ಡ ತೊಡಕಾಗಿದೆ; ಕೆಲವೇ ಕೆಲವು ಜನರಶ್ಟೇ ಬರಹವನ್ನು ಬಳಸುತ್ತಿದ್ದ ಹಿಂದಿನ ಕಾಲದಲ್ಲಿ ಈ ಕಟ್ಟಲೆ ಹೆಚ್ಚು ತೊಡಕಿನದೆಂದು ಅನಿಸುತ್ತಿರಲಿಲ್ಲ. ಆದರೆ, ಇವತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗಬೇಕಾಗಿದೆ; ಹಾಗಾಗಿ, ಕನ್ನಡಕ್ಕೆ ಬೇಡದ ಈ ಸಂಸ್ಕ್ರುತದ ಹೊರೆಯನ್ನು ತೆಗೆದುಹಾಕುವುದೇ ಒಳ್ಳೆಯದು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 18
ಜನರ ನಡುವೆ ಕಾಣಿಸುವ ಹಾಗೆ, ಅವರಾಡುವ ನುಡಿಗಳನಡುವೆಯೂ ‘ನಂಟಸ್ತಿಕೆ’ಯನ್ನು ಕಾಣಲು ಸಾದ್ಯವಿದೆ. ಕೆಲವು ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆಯೆಂದು ಹೇಳಬಹುದು, ಮತ್ತು ಬೇರೆ ಕೆಲವು ನುಡಿಗಳ ನಡುವೆ ದೂರದ ನಂಟಸ್ತಿಕೆ ಮಾತ್ರ ಇದೆಯೆಂದು ಹೇಳಬಹುದು. ಆದರೆ, ಇನ್ನು ಕೆಲವು ನುಡಿಗಳ ನಡುವೆ ಯಾವ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳಲು ಬರುವುದಿಲ್ಲ. ಹಾಗೆ ಹೇಳಲು ಯಾವ ಆದಾರವೂ ದೊರಕದಿರುವುದೇ ಇದಕ್ಕೆ ಕಾರಣ.
ಎತ್ತುಗೆಗಾಗಿ, ಕನ್ನಡ ಮತ್ತು ತಮಿಳು ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆ; ಕನ್ನಡ ಮತ್ತು ತುಳು ನುಡಿಗಳ ನಡುವೆ ಇದಕ್ಕಿಂತ ಸ್ವಲ್ಪ ದೂರದ ನಂಟಸ್ತಿಕೆಯಿದೆ. ಇದೇ ರೀತಿಯಲ್ಲಿ, ಹಿಂದಿ ಮತ್ತು ಮರಾಟಿ ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆ; ಹಿಂದಿ ಮತ್ತು ಇಂಗ್ಲಿಶ್ ನುಡಿಗಳ ನಡುವೆ ದೂರದ ನಂಟಸ್ತಿಕೆಯಿದೆ. ಆದರೆ ಕನ್ನಡ ಮತ್ತು ಹಿಂದಿ ನುಡಿಗಳ ನಡುವೆ, ಇಲ್ಲವೇ ಕನ್ನಡ ಮತ್ತು ಇಂಗ್ಲಿಶ್ ನುಡಿಗಳ ನಡುವೆ, ಹತ್ತಿರದ್ದಾಗಲಿ ದೂರದ್ದಾಗಲಿ ಯಾವುದೇ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳುವುದಕ್ಕೆ ಯಾವ ಆದಾರವೂ ದೊರಕುವುದಿಲ್ಲ.
ನುಡಿಗಳ ನಡುವಿನ ನಂಟಸ್ತಿಕೆಯನ್ನು ಜನರ ನಡುವಿನ ನಂಟಸ್ತಿಕೆಯ ಹಾಗೆ ಅವುಗಳ ಹುಟ್ಟು ಮತ್ತು ಬೆಳವಣಿಗೆಗಳ ಆದಾರದ ಮೇಲೆ ಕಲ್ಪಿಸಿಕೊಳ್ಳಲಾಗಿದೆ. ಆದರೆ, ಜನರ ಹುಟ್ಟಿಗೂ ನುಡಿಗಳ ಹುಟ್ಟಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಎತ್ತುಗೆಗಾಗಿ, ಜನರಲ್ಲಿ ಹೆಣ್ಣು-ಗಂಡುಗಳ ಕೂಡಿಕೆಯಿಂದ ಮಗು ಹುಟ್ಟುತ್ತದೆ; ಆದರೆ ನುಡಿಗಳಲ್ಲಿ ಆ ರೀತಿ ಎರಡು ನುಡಿಗಳ ಕೂಡಿಕೆಯಿಂದ ಮೂರನೆಯ ನುಡಿ ಹುಟ್ಟಿಕೊಳ್ಳುವುದಿಲ್ಲ; ಒಂದು ನುಡಿಯಿದ್ದದ್ದು ಇನ್ನೊಂದು ನುಡಿಯಾಗಿ ಬದಲಾಗುತ್ತದೆ, ಇಲ್ಲವೇ ಎರಡು ನುಡಿಗಳಾಗಿ ಒಡೆದುಕೊಳ್ಳುತ್ತದೆ.
ಎತ್ತುಗೆಗಾಗಿ, ಸಂಸ್ಕ್ರುತ ನುಡಿ ಇವತ್ತಿನ ಮರಾಟಿ ನುಡಿಯಾಗಿ ಬದಲಾಗಿದೆಯೆಂದು ಹೇಳಬಹುದು; ಇಲ್ಲವೇ ಅದೇ ನುಡಿ ಮರಾಟಿ, ಕೊಂಕಣಿ, ಹಿಂದಿ, ಗುಜರಾತಿ, ಪಂಜಾಬಿ, ಬಂಗಾಲಿ ಮೊದಲಾದ ಇವತ್ತಿನ ಹಲವು ನುಡಿಗಳಾಗಿ ಒಡೆದುಕೊಂಡಿದೆಯೆಂದೂ ಹೇಳಬಹುದು. ಆದರೆ, ಇದೇ ರೀತಿಯಲ್ಲಿ ಸಂಸ್ಕ್ರುತ ನುಡಿ ಕನ್ನಡ ನುಡಿಯಾಗಿ ಬದಲಾಗಿದೆಯೆಂದು ಹೇಳಲು ಬರುವುದಿಲ್ಲ. ಯಾಕೆಂದರೆ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಅವುಗಳ ಪದಗಳಲ್ಲಿ ಮತ್ತು ವ್ಯಾಕರಣ ನಿಯಮಗಳಲ್ಲಿ ಹಲವು ಬುಡಕಟ್ಟಿನ ವ್ಯತ್ಯಾಸಗಳಿವೆ. ಈ ಎಲ್ಲಾ ವ್ಯತ್ಯಾಸಗಳೂ ಹೇಗೆ ಉಂಟಾಗಿವೆ ಎಂಬುದನ್ನು ವಿವರಿಸಲು ಇದುವರೆಗೆ ಯಾರಿಗೂ ಸಾದ್ಯವಾಗಿಲ್ಲ.
ಇಂತಹ ವಿವರಿಸಲು ಸಾದ್ಯವಾಗದ ವ್ಯತ್ಯಾಸಗಳಿರುವ ಕಾರಣ, ಸಂಸ್ಕ್ರುತ ಮತ್ತು ಕನ್ನಡ ನುಡಿಗಳನ್ನು ಎರಡು ತೀರ ಬೇರಾಗಿರುವ ಮೂಲನುಡಿಗಳಿಂದ ಬೆಳೆದು ಬಂದಿರುವವುಗಳೆಂಬುದಾಗಿ ಪರಿಗಣಿಸಬೇಕಾಗಿದೆ. ಸಂಸ್ಕ್ರುತ ‘ಇಂಡೋ-ಆರ‍್ಯನ್’ ಎಂಬ ಹೆಸರಿನ ಮೂಲ ನುಡಿಯಿಂದ, ಮತ್ತು ಕನ್ನಡ ಅದಕ್ಕಿಂತ ತೀರ ಬೇರಾಗಿರುವ ‘ದ್ರಾವಿಡ’ ಎಂಬ ಹೆಸರಿನ ಮೂಲ ನುಡಿಯಿಂದ ಬೆಳೆದು ಬಂದಿದೆಯೆಂಬುದಾಗಿ ಇವತ್ತು ಕಲ್ಪಿಸಿಕೊಳ್ಳಬೇಕಾಗಿದೆ.
ನುಡಿಗಳನ್ನು ಈ ರೀತಿ ಬೇರೆ ಬೇರೆ ನುಡಿಕುಟುಂಬಗಳಲ್ಲಿ ಇರಿಸಿ ಹೇಳಲು ಮುಕ್ಯವಾಗಿ ಅವುಗಳ ಚರಿತ್ರೆ ಆದಾರವಾಗಿರುತ್ತದೆ. ಒಂದು ನುಡಿಯನ್ನಾಡುವ ಜನ ದೂರ ದೂರದಲ್ಲಿರುವ ಊರುಗಳಿಗೆ ಹೋಗಿ ನೆಲೆಸಿದಾಗ, ಅವರೊಳಗಿನ ಸಂಪರ‍್ಕ ಕಡಿಮೆಯಾಗುತ್ತಾ ಹೋಗುತ್ತದೆ, ಮತ್ತು ಇದರಿಂದಾಗಿ, ಅವರು ಬಳಸುವ ನುಡಿಯಲ್ಲಿ ಬದಲಾವಣೆಗಳು ಒಂದೇ ದಿಕ್ಕಿನಲ್ಲಿ ನಡೆಯದೆ ಬೇರೆ ಬೇರೆ ದಿಕ್ಕುಗಳಲ್ಲಿ ನಡೆಯತೊಡಗುತ್ತವೆ.
ಎತ್ತುಗೆಗಾಗಿ, ಕನ್ನಡ ನುಡಿಯನ್ನಾಡುವ ಜನ ಬಡಗು ಕರ‍್ನಾಟಕ, ತೆಂಕು ಕರ‍್ನಾಟಕ ಮತ್ತು ಕರಾವಳಿ ಎಂಬ ಮೂರು ಮುಕ್ಯ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಇವರಾಡುವ ನುಡಿಯೂ ಬಡಗು, ತೆಂಕು ಮತ್ತು ಕರಾವಳಿ ಎಂಬ ಮೂರು ಮುಕ್ಯ ಒಳನುಡಿಗಳಾಗಿ ವ್ಯತ್ಯಾಸಗಳನ್ನು ತೋರಿಸುತ್ತದೆ. ಈ ಒಳನುಡಿಗಳ ನಡುವೆ ಯಾವ ಪ್ರಮಾಣದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ ಎಂಬುದು ಈ ಪ್ರದೇಶಗಳಿಗೆ ಹೋಗಿ ನೆಲೆಸಿದ ಮೇಲೆ ಇವರ ನಡುವೆ ಎಂತಹ ಸಂಪರ‍್ಕ ಸಾದ್ಯವಿತ್ತು ಎಂಬುದರ ಮೇಲೆ ಅವಲಂಬಿಸಿದೆ.
ನುಡಿಗಳೆಲ್ಲ ಈ ರೀತಿ ಅವನ್ನಾಡುವ ಜನರ ನಡುವಿರುವ ಸಂಪರ‍್ಕ ಕಡಿಮೆಯಾದಾಗ ಬೇರೆ ಬೇರೆ ಒಳನುಡಿಗಳಾಗಿ ಒಡೆದುಕೊಳ್ಳುತ್ತವೆ, ಮತ್ತು ಆಮೇಲೆ ಅವೇ ಒಳನುಡಿಗಳು ಸ್ವತಂತ್ರ ನುಡಿಗಳಾಗಿ ಬೆಳೆಯುತ್ತವೆ ಎಂಬ ಈ ಅಬಿಪ್ರಾಯದ ಮೇಲೆ ನುಡಿಕುಟುಂಬಗಳ ಕಲ್ಪನೆಯನ್ನು ನಿಲ್ಲಿಸಲಾಗಿದೆ. ಹಿಂದೆ ಒಂದು ಕಾಲದಲ್ಲಿ ಕೆಲವೇ ಕೆಲವು ಮೂಲ ನುಡಿಗಳಿದ್ದಿರಬೇಕು, ಮತ್ತು ಈ ಮೂಲ ನುಡಿಗಳು ಮೇಲೆ ಸೂಚಿಸಿದ ಹಾಗೆ ಕವಲೊಡೆದು ಬೇರೆ ಬೇರೆ ನುಡಿಗಳಾದುದರಿಂದಾಗಿ, ಇವತ್ತು ಸಾವಿರಾರು ನುಡಿಗಳು ಬಳಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ ಎಂಬುದೇ ಈ ಕಲ್ಪನೆ.
ಈ ಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿ ಇವತ್ತು ಬಳಕೆಯಲ್ಲಿರುವ ಸಾವಿರಾರು ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಾಗಿ ಹಂಚುವ ಪ್ರಯತ್ನ ನಡೆಯುತ್ತಿದೆ. ಎಂದರೆ, ಈ ಸಾವಿರಾರು ನುಡಿಗಳು ಹದಿನಯ್ದಿಪ್ಪತ್ತು ಮೂಲ ನುಡಿಗಳಿಂದ ಅವುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾಗುವುದರ ಮೂಲಕ ಹೇಗೆ ಬೆಳೆದು ಬಂದಿರಬೇಕು ಎಂಬುದನ್ನು ತೋರಿಸಿ ಕೊಡುವ ಪ್ರಯತ್ನ ನಡೆಯುತ್ತಿದೆ.
ಇವತ್ತು ಬೇರೆ ಬೇರಾಗಿ ಕಾಣಿಸುವ ಎರಡು ನುಡಿಗಳು ಒಂದೇ ಮೂಲ ನುಡಿಯಿಂದ ಬೆಳೆದು ಬಂದವುಗಳೆಂದು ನಾವು ತೋರಿಸಿಕೊಡಬೇಕಿದ್ದಲ್ಲಿ, (ಎಂದರೆ ಅವು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂದು ವಾದಿಸಬೇಕಿದ್ದಲ್ಲಿ) ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳೆಲ್ಲ ಮೂಲ ನುಡಿಯೊಂದರಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿಕೊಡಬೇಕು. ಎಂದರೆ, ಆ ಮೂಲ ನುಡಿಯನ್ನಾಡುವ ಜನರು ದೂರದ ಎರಡು ಪ್ರದೇಶಗಳಿಗೆ ಹೋಗಿ ನೆಲೆಸಿದ ಮೇಲೆ, ಅವರ ಮಾತಿನಲ್ಲಿ ಬದಲಾವಣೆಗಳು ಎರಡು ಬೇರೆ ಬೇರೆ ದಿಕ್ಕುಗಳಲ್ಲಿ ನಡೆದಿರಬೇಕು, ಮತ್ತು ಒಂದು ಪ್ರದೇಶದಲ್ಲಿ ನಡೆದ ಬದಲಾವಣೆಗಳು ಇನ್ನೊಂದು ಪ್ರದೇಶದಲ್ಲಿ ನಡೆಯದಿದ್ದುದೇ ಆ ಎರಡು ಪ್ರದೇಶಗಳ ಜನರ ಮಾತುಗಳ (ಎಂದರೆ ನುಡಿಗಳ) ನಡುವೆ ಇವತ್ತು ಕಾಣಿಸುವ ವ್ಯತ್ಯಾಸಗಳಿಗೆ ಮೂಲ ಕಾರಣ ಎಂಬುದನ್ನು ತೋರಿಸಿಕೊಡಬೇಕು.
ಹಾಗಾಗಿ, ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಾಗಿ ಹಂಚುವ ಕೆಲಸದಲ್ಲಿ ಅವುಗಳ ನಡುವೆ ಕಾಣಿಸುವ ಹೋಲಿಕೆಗಳಿಗಿಂತಲೂ ವ್ಯತ್ಯಾಸಗಳಿಗೇನೇ ಹೆಚ್ಚಿನ ಮಹತ್ವವಿದೆ. ಎರಡು ನುಡಿಗಳ ನಡುವೆ ಸ್ವಲ್ಪವೂ ಹೋಲಿಕೆ ಕಾಣಿಸದಿದ್ದರೂ, ಅವುಗಳ ನಡುವಿರುವ ವ್ಯತ್ಯಾಸಗಳೆಲ್ಲ ಆ ಎರಡು ನುಡಿಗಳ ಚರಿತ್ರೆಯಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ಮೇಲೆ ಸೂಚಿಸಿದ ಹಾಗೆ ತೋರಿಸಿಕೊಟ್ಟಲ್ಲಿ, ಅವನ್ನು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂದು ಹೇಳಲು ಬರುತ್ತದೆ. ಇದಕ್ಕೆ ಬದಲು, ಎರಡು ನುಡಿಗಳ ನಡುವೆ ಎಶ್ಟೇ ಹೋಲಿಕೆಯಿರಲಿ, ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಒಂದು ಮೂಲ ನುಡಿಯಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿಕೊಡಲು ಬರುವುದಿಲ್ಲವಾದಲ್ಲಿ, ಅವು ಒಂದೇ ನುಡಿ ಕುಟುಂಬಕ್ಕೆ ಸೇರಿದವುಗಳೆಂದು ವಾದಿಸಲು ಬರುವುದಿಲ್ಲ.
ಎರಡು ನುಡಿಗಳ ನಡುವೆ ಹೋಲಿಕೆಗಳು ಕಾಣಿಸಿಕೊಳ್ಳಲು ಬೇರೆ ಕಾರಣಗಳೂ ಇರಬಲ್ಲುವು: ಎತ್ತುಗೆಗಾಗಿ, ಅವುಗಳಲ್ಲಿ ಒಂದು ಇನ್ನೊಂದರಿಂದ ಹಲವಾರು ಪದಗಳನ್ನು ಎರವಲಾಗಿ ಪಡೆದಿದೆಯಾದರೆ, ಅವೆರಡರ ನಡುವೆ ತುಂಬಾ ಹೋಲಿಕೆಯಿದೆಯೆಂದು ಅನಿಸಬಹುದು. ಇದಲ್ಲದೆ, ಆಕಸ್ಮಿಕವಾಗಿಯೂ ಎರಡು ನುಡಿಗಳಲ್ಲಿ ಬಳಕೆಯಾಗುವ ಪದಗಳ ನಡುವೆ ಹೋಲಿಕೆಗಳು ಕಾಣಿಸಬಹುದು. ನುಡಿಗಳನ್ನು ಬಳಸುವ, ಬೆಳೆಸುವ ಮತ್ತು ಬದಲಾಯಿಸುವವರೆಲ್ಲರೂ ಮನುಶ್ಯರೇ ಆಗಿರುವುದರಿಂದ, ಇಂತಹ ಆಕಸ್ಮಿಕ ಹೋಲಿಕೆಗಳು ಕಾಣಿಸಿಕೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ.
ಹಾಗಾಗಿ, ಎರಡು ನುಡಿಗಳ ನಡುವೆ ಕಾಣಿಸುವ ಹೋಲಿಕೆಗಳ ಆದಾರದ ಮೇಲೆ ಅವು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ಹೇಳಲು ಬರುವುದಿಲ್ಲ. ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಯಾವ ರೀತಿಯಲ್ಲಿ ಮೂಡಿಬಂದಿವೆ ಎಂಬುದನ್ನು ಮೇಲೆ ಸೂಚಿಸಿದ ಹಾಗೆ ವಿವರಿಸಲು ಸಾದ್ಯವಾಗುವುದಿದ್ದಲ್ಲಿ ಮಾತ್ರ ಅವನ್ನು ಒಂದೇ ಕುಟುಂಬದ ನುಡಿಗಳೆಂದು, ಎಂದರೆ ಚಾರಿತ್ರಿಕವಾಗಿ ಅವು ಒಂದೇ ಮೂಲ ನುಡಿಯಿಂದ ಬೆಳೆದು ಬಂದವುಗಳೆಂದು ಪರಿಗಣಿಸಲು ಸಾದ್ಯವಾಗುತ್ತದೆ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 13
ಕನ್ನಡ ಪದಗಳನ್ನು ಹೆಚ್ಚಿನವರೂ ಹೇಗೆ ಓದುತ್ತಾರೋ ಹಾಗೆ ಬರೆಯಲು ನಮಗೆ ಬೇಕಾಗುವುದು ಒಟ್ಟು 31 ಬರಿಗೆಗಳು ಮಾತ್ರ. ಆದರೆ, ಇವತ್ತು ನಾವು ಕನ್ನಡ ಬರಹಗಳಲ್ಲಿ 48 (ಇಲ್ಲವೇ ಅದಕ್ಕಿಂತಲೂ ಹೆಚ್ಚು) ಬರಿಗೆಗಳನ್ನು ಬಳಸುತ್ತಿದ್ದೇವೆ. ಈ ಹೆಚ್ಚಿನ ಬರಿಗೆಗಳನ್ನು ಬಿಟ್ಟುಕೊಟ್ಟಲ್ಲಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ಸುಲಬವಾಗಬಲ್ಲುದು.
ಇದನ್ನು ವಿರೋದಿಸುವವರಲ್ಲಿ ಕೆಲವರ ವಾದ ಹೀಗಿರುತ್ತದೆ: ಕನ್ನಡ ಬರಹದಲ್ಲಿ ಈ ರೀತಿ ಹೆಚ್ಚು ಬರಿಗೆಗಳಿರುವುದು ಅದರ ಶ್ರೀಮಂತಿಕೆ; ಅವನ್ನು ಕಳೆದುಕೊಳ್ಳುವುದೆಂದರೆ, ಕನ್ನಡ ಬರಹವನ್ನು ಬಡತನಕ್ಕೆ ನೂಕಿದ ಹಾಗೆ, ಮತ್ತು ಅದರ ಸಂಸ್ಕ್ರುತಿಯನ್ನು ನಾಶಮಾಡಿದ ಹಾಗೆ.
ಆದರೆ, ಈ ವಾದ ನಿಜಕ್ಕೂ ಸರಿಯಲ್ಲ; ಪದಗಳನ್ನು ಓದುವ ಹಾಗೆಯೇ ಬರೆಯಲು ಎಶ್ಟು ಬರಿಗೆಗಳು ಬೇಕಾಗುತ್ತವೆಯೋ ಅಶ್ಟನ್ನು ಮಾತ್ರ ಉಳಿಸಿಕೊಂಡಿರುವ ಬರಹವೇ ತುಂಬಾ ಒಳ್ಳೆಯ ಬರಹವೆಂದೆನಿಸುತ್ತದೆ. ಬೇಕಾದುದಕ್ಕಿಂತ ಹೆಚ್ಚು ಬರಿಗೆಗಳನ್ನು ಬಳಸುವ ಬರಹವನ್ನು ಕಲಿಯುವುದೂ ಕಶ್ಟ, ಬಳಸುವುದೂ ಕಶ್ಟ.
ಹಳೆಗನ್ನಡದಲ್ಲಿ ಱ ಮತ್ತು ೞಗಳೆಂಬ ಎರಡು ಹೆಚ್ಚಿನ ಬರಿಗೆಗಳಿದ್ದುವು; ಆ ಕಾಲದಲ್ಲಿ ರ-ಱ ಮತ್ತು ಳ-ೞಗಳ ನಡುವೆ ಓದಿನಲ್ಲಿ ವ್ಯತ್ಯಾಸವಿದ್ದ ಕಾರಣ, ಅವನ್ನು ಬರಹದಲ್ಲಿ ಬಳಸುತ್ತಿದ್ದುದು ಹಳೆಗನ್ನಡದ ಮಟ್ಟಿಗೆ ಸಿರಿತನವಾಗಿತ್ತು; ಆದರೆ, ಇವತ್ತು ನಾವು ಅವೆರಡು ಬರಿಗೆಗಳನ್ನೂ ಬಿಟ್ಟುಕೊಟ್ಟಿದ್ದೇವೆ; ಯಾಕೆಂದರೆ, ನಮ್ಮ ಓದಿನಲ್ಲಿ ಅವುಗಳ ನಡುವಿನ ವ್ಯತ್ಯಾಸ ಇಲ್ಲವಾಗಿದೆ.
ಈ ಹೆಚ್ಚಿನ ಬರಿಗೆಗಳಿರುವುದು ಸಿರಿತನವೆಂದು, ಇಲ್ಲವೇ ಕನ್ನಡ ಬರಹದ ಸಂಸ್ಕ್ರುತಿಯೆಂದು ಅವನ್ನು ಇವತ್ತಿಗೂ ಉಳಿಸಿಕೊಂಡಿದ್ದಲ್ಲಿ, ನಮ್ಮ ಓದಿನಲ್ಲಿಲ್ಲದ ಈ ಎರಡು ಬಗೆಯ ವ್ಯತ್ಯಾಸಗಳನ್ನು ಬರಹದಲ್ಲಿ ಕಾಣಿಸುವ ಒಂದು ದೊಡ್ಡ ತೊಡಕು ನಮ್ಮದಾಗುತ್ತಿತ್ತು. ಕರೆ ‘ಬರಹೇಳು’, ಕರೆ ‘ಹಾಲು ಕರೆ’, ಊರು ‘ಹಳ್ಳಿ’, ಊರು ‘ನಿಲ್ಲಿಸು’, ತೆರೆ ‘ಕಡಲಿನ ತೆರೆ’, ತೆರೆ ‘ಬಾಗಿಲು ತೆರೆ’ ಎಂಬಂತಹ ಹಲವಾರು ಪದಗಳನ್ನು ಬರೆಯುವಾಗ, ಯಾವ ಪದದಲ್ಲಿ ರಕಾರವನ್ನು ಬಳಸಬೇಕು, ಮತ್ತು ಯಾವುದರಲ್ಲಿ ಱಕಾರವನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿತ್ತು. ಯಾಕೆಂದರೆ, ಮೇಲಿನ ಪದಜೋಡಿಗಳಲ್ಲಿ ರಕಾರವನ್ನು ಮೊದಲನೆಯದರಲ್ಲೂ ಱಕಾರವನ್ನು ಎರಡನೆಯದರಲ್ಲೂ ಬಳಸಬೇಕಾಗುತ್ತಿತ್ತು.
ಇದೇ ರೀತಿಯಲ್ಲಿ, ಉಳಿ ‘ಕೆತ್ತುವ ಉಳಿ’, ಉಳಿ ‘ ಮನೆಯಲ್ಲಿ ಉಳಿ’, ಎಳೆ ‘ಎಳತು’, ಎಳೆ ‘ಎಳೆದಾಡು’, ಬಳಸು ‘ನೇರವಲ್ಲದ’, ಬಳಸು ‘ಉಪಯೋಗಿಸು’ ಎಂಬಂತಹ ಬೇರೆ ಹಲವಾರು ಪದಜೋಡಿಗಳಲ್ಲಿ ಳಕಾರವನ್ನು ಯಾವ ಪದದಲ್ಲಿ ಬಳಸಬೇಕು ಮತ್ತು ೞಕಾರವನ್ನು ಯಾವ ಪದದಲ್ಲಿ ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗಿತ್ತು (ಎರಡನೆಯ ಪದದಲ್ಲಿ ೞಕಾರವಿತ್ತು).
ಹೊಸಗನ್ನಡವನ್ನು ಬಳಕೆಗೆ ತಂದವರು ಈ ಸಿರಿತನದ ಇಲ್ಲವೇ ಸಂಸ್ಕ್ರುತಿಯ ಹೊರೆಯನ್ನು ನಮ್ಮ ಮೇಲೆ ಹೊರಿಸ ಹೋಗದೆ ಒಂದು ದೊಡ್ಡ ಉಪಕಾರವನ್ನೇ ಮಾಡಿದ್ದಾರೆ. ಆದರೆ, ಸಂಸ್ಕ್ರುತದಿಂದ ಬಂದ ಎರವಲು ಪದಗಳ ಮಟ್ಟಿಗೆ ಮಾತ್ರ, ಅವರು ಇಂತಹದೇ ಇನ್ನೊಂದು ಬಗೆಯ ತೊಡಕನ್ನು ಇಲ್ಲವಾಗಿಸದೆ ಹಾಗೆಯೇ ಉಳಿಸಿದ್ದಾರೆ. ಸಂಸ್ಕ್ರುತದ ವಿಶಯವಾಗಿ ಅವರಿಗಿದ್ದ ಮೇಲರಿಮೆಯೇ ಇದಕ್ಕೆ ಕಾರಣ.
ಈ ಎರವಲು ಪದಗಳಲ್ಲಿ ಬರುವ ರು-ಋ, ಶ-ಷ, ಅಲ್ಪಪ್ರಾಣ-ಮಹಾಪ್ರಾಣ ಮೊದಲಾದವುಗಳ ನಡುವಿನ ವ್ಯತ್ಯಾಸ ಹೆಚ್ಚಿನ ಕನ್ನಡಿಗರ ಓದಿನಲ್ಲೂ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ, ಅವನ್ನು ಬರಹದಲ್ಲಿ ಕಾಣಿಸಬೇಕಿದ್ದರೆ, ಯಾವ ಪದದಲ್ಲಿ ಯಾವುದನ್ನು ಬಳಸಬೇಕು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ. ಹಳೆಗನ್ನಡದ ರ-ಱ ಮತ್ತು ಳ-ೞ ವ್ಯತ್ಯಾಸಗಳ ಹಾಗೆಯೇ ಇವೂ ಕೂಡ ಕನ್ನಡ ಬರಹವನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ಹೆಚ್ಚಿನ ಕನ್ನಡಿಗರಿಗೂ ಅನವಶ್ಯಕವಾಗಿ ತೊಡಕನ್ನು ಉಂಟುಮಾಡುತ್ತವೆ.
ಸಂಸ್ಕ್ರುತ ಎರವಲುಗಳಾದ ಅವಶ್ಯ-ಮನುಷ್ಯ, ವಿಶಾಲ-ಕಷಾಯ, ಕೃಶ-ಕೃಷಿ, ಶಿಶು-ವಿಷು, ನಶಿಸು-ದೂಷಿಸು, ಮೊದಲಾದ ಪದಜೋಡಿಗಳ ಬರವಣಿಗೆಯಲ್ಲಿ ಶ-ಷ ವ್ಯತ್ಯಾಸ ಕಾಣಿಸುತ್ತದೆ, ಆದರೆ ಅವುಗಳ ಓದಿನಲ್ಲಿ ಕಾಣಿಸುವುದಿಲ್ಲ; ಇದೇ ರೀತಿಯಲ್ಲಿ ಬೋಧಿಸು-ಭೇದಿಸು, ವರ್ಧಿಸು-ಮರ್ದಿಸು, ವಿಧಾನ-ವಿದಾಯ, ಸಂಪಾದಿಸು-ಸಂಬಂಧಿಸು ಮೊದಲಾದ ಪದಜೋಡಿಗಳ ಬರವಣಿಗೆಯಲ್ಲಿ ಕಾಣಿಸುವ ಅಲ್ಪಪ್ರಾಣ-ಮಹಾಪ್ರಾಣ ವ್ಯತ್ಯಾಸವೂ ಓದಿನಲ್ಲಿಲ್ಲ.
ಹಳೆಗನ್ನಡದ ವ್ಯತ್ಯಾಸಗಳ ಹಾಗೆ, ಓದಿನಲ್ಲಿಲ್ಲದ ಈ ಸಂಸ್ಕ್ರುತ ಎರವಲುಗಳ ನಡುವಿನ ವ್ಯತ್ಯಾಸವನ್ನೂ ಬಿಟ್ಟುಕೊಡುವ ಮೂಲಕ ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗುವ ಹಾಗೆ ಮಾಡಬೇಕಾಗಿದೆ, ಮತ್ತು ಅದು ಎಲ್ಲಾ ಕನ್ನಡಿಗರನ್ನೂ ತಲಪುವ ಹಾಗೆ ಮಾಡಬೇಕಾಗಿದೆ. ಓದಿನಲ್ಲಿ ಕಾಣಿಸಿಕೊಳ್ಳದ ಈ ಹೆಚ್ಚಿನ ಬರಿಗೆಗಳು ಕನ್ನಡ ಬರಹದ ಸಿರಿವಂತಿಕೆಯೂ ಅಲ್ಲ, ಸಂಸ್ಕ್ರುತಿಯೂ ಅಲ್ಲ. ಕನ್ನಡ ಬರಹವನ್ನು ಬಳಸುವಲ್ಲಿ ಅವು ಒಂದು ಅವಶ್ಯವಿಲ್ಲದ ಹೊರೆ ಮಾತ್ರ.
ಓದಿನಲ್ಲಿಲ್ಲದ ಬರಿಗೆ ಒಂದು ಬರಹಕ್ಕೆ ಬೇಕಾಗುವುದಿಲ್ಲವೆಂಬುದಕ್ಕೆ ಸಂಸ್ಕ್ರುತದಿಂದಲೇ ಒಂದು ಎತ್ತುಗೆಯನ್ನು ಕೊಡಬಹುದು: ಕನ್ನಡ ಬರಹದಲ್ಲಿ ಎ-ಏ ಮತ್ತು ಒ-ಓ ಎಂಬ ವ್ಯತ್ಯಾಸ ಇದೆ; ಆದರೆ, ಸಂಸ್ಕ್ರುತ ಬರಹದಲ್ಲಿ ಈ ವ್ಯತ್ಯಾಸವಿಲ್ಲ. ಆದರೆ ಈ ಕಾರಣಕ್ಕಾಗಿ, ಕನ್ನಡ ಬರಹ ಸಂಸ್ಕ್ರುತ ಬರಹಕ್ಕಿಂತ ಹೆಚ್ಚು ಶ್ರೀಮಂತವಾದುದೆಂದು ಹೇಳಲು ಬರುವುದಿಲ್ಲ. ಯಾಕೆಂದರೆ, ಸಂಸ್ಕ್ರುತ ಪದಗಳ ಓದಿನಲ್ಲಿ ಕಾಣಿಸದಿರುವ ಈ ವ್ಯತ್ಯಾಸ ಸಂಸ್ಕ್ರುತ ಬರಹದಲ್ಲಿ ಇಲ್ಲದಿರುವುದು ಸಂಸ್ಕ್ರುತ ಬರಹದ ಸಿರಿತನವಲ್ಲದೆ ಬಡತನವಲ್ಲ.
ಪದಗಳಲ್ಲಿ ಎಶ್ಟು ಉಲಿಗಳು ಬಳಕೆಯಾಗುತ್ತವೆ, ಮತ್ತು ಯಾವ ಉಲಿಗಳು ಬಳಕೆಯಾಗುತ್ತವೆ ಎಂಬ ವಿಶಯದಲ್ಲಿ ನುಡಿಗಳು ಒಂದರಿಂದೊಂದು ತೀರಾ ಬೇರಾಗಿರಬಲ್ಲುವು. ಆಪ್ರಿಕಾದ ಬೊತ್ಸ್‌ವಾನಾದಲ್ಲಿ ಬಳಕೆಯಲ್ಲಿರುವ ಕೆಲವು ನುಡಿಗಳಲ್ಲಿ ನೂರಕ್ಕಿಂತಲೂ ಹೆಚ್ಚು ಉಲಿಗಳು ಬಳಕೆಯಲ್ಲಿದ್ದು, ಅವನ್ನು ಓದುವಂತೆ ಬರೆಯಲು ನೂರಕ್ಕಿಂತಲೂ ಹೆಚ್ಚು ಬರಿಗೆಗಳು ಬೇಕಾಗುತ್ತವೆ. ಇದಕ್ಕೆ ಬದಲು, ಪಾಪುವಾ ನ್ಯೂಗಿನಿಯ ರೋತೋಕಸ್ ಎಂಬ ನುಡಿಯಲ್ಲಿ ಹತ್ತು-ಹನ್ನೆರಡು ಉಲಿಗಳು ಮಾತ್ರ ಬಳಕೆಯಲ್ಲಿದ್ದು, ಅವನ್ನು ಓದುವ ಹಾಗೆ ಬರೆಯಲು ಹತ್ತು-ಹನ್ನೆರಡು ಬರಿಗೆಗಳು ಮಾತ್ರ ಸಾಕಾಗುತ್ತವೆ.
ಜಗತ್ತಿನಲ್ಲಿರುವ ಎಲ್ಲಾ ನುಡಿಗಳಲ್ಲೂ ಬಳಕೆಯಲ್ಲಿರುವ ಉಲಿಗಳನ್ನು ಬರೆಯಬೇಕಿದ್ದಲ್ಲಿ ನೂರಾರು ಬರಿಗೆಗಳು ಮತ್ತು ಇನ್ನೂ ಹಲವಾರು ಬಗೆಯ ಗುರುತುಗಳು ಬೇಕಾಗುತ್ತವೆ. ಹಾಗಾಗಿ, ಯಾವುದೇ ಒಂದು ನುಡಿಯಲ್ಲೂ ಬೇಕಾದುದಕ್ಕಿಂತ ಹತ್ತೋ ಇಪ್ಪತ್ತೋ ಹೆಚ್ಚು ಬರಿಗೆಗಳಿದ್ದಲ್ಲಿ, ಅವುಗಳ ನೆರವಿನಿಂದ ಬೇರೆ ನುಡಿಗಳ ಪದಗಳನ್ನು ಅವುಗಳಲ್ಲಿರುವಂತೆಯೇ ಬರೆಯಲು ಬರುತ್ತದೆಯೆಂಬುದು ಪೊಳ್ಳು ವಾದ.
ನಿಜಕ್ಕೂ ಕನ್ನಡ ಬರಹದಲ್ಲಿರುವ ಈ ಹೆಚ್ಚಿನ ಬರಿಗೆಗಳು ಸಂಸ್ಕ್ರುತ ಎರವಲುಗಳನ್ನು ಮಾತ್ರ ಹೆಚ್ಚುಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯಲು ನೆರವಾಗುತ್ತವೆ; ಬೇರೆ ನುಡಿಗಳ ಪದಗಳನ್ನು ಅವುಗಳಲ್ಲಿರುವ ಹಾಗೆ ಬರೆಯಬೇಕಿದ್ದಲ್ಲಿ, ಅದಕ್ಕಾಗಿ ಬೇರೆಯೇ ಹೆಚ್ಚಿನ ಬರಿಗೆಗಳನ್ನು ಉಂಟುಮಾಡಿಕೊಳ್ಳಬೇಕಾಗುತ್ತದೆ. ತುಳು ನುಡಿಯ ಪದಗಳನ್ನು ಅದರಲ್ಲಿರುವ ಹಾಗೆ ಬರೆಯಲು ಕನ್ನಡ ಬರಹದಲ್ಲಿ ಈಗಿರುವ ಬರಿಗೆಗಳು ಸಾಕಾಗುವುದಿಲ್ಲ; ಇನ್ನೊಂದು ಹೆಚ್ಚಿನ ಉಕಾರ ಮತ್ತು ಇನ್ನೆರಡು ಹೆಚ್ಚಿನ ಎಕಾರಗಳು ಬೇಕಾಗುತ್ತವೆ.
ನಿಜಕ್ಕೂ ಕನ್ನಡದವೇ ಆದ ಆಡುನುಡಿಗಳನ್ನೂ ಅವುಗಳಲ್ಲಿರುವ ಹಾಗೆ ಬರೆಯಲು ಕನ್ನಡ ಬರಹದಲ್ಲಿ ಈಗ ಬಳಕೆಯಾಗುತ್ತಿರುವ ಬರಿಗೆಗಳು ಸಾಕಾಗುವುದಿಲ್ಲ; ಗುಲ್ಬರ‍್ಗ ಕನ್ನಡದಲ್ಲಿ ಬರುವ ಎರಡು ಬಗೆಯ ಅಕಾರಗಳ ನಡುವಿನ ವ್ಯತ್ಯಾಸವನ್ನಾಗಲಿ, ಸುಳ್ಯದ ಗವ್ಡ ಕನ್ನಡದಲ್ಲಿ ಬರುವ ಎರಡು ಬಗೆಯ ಉಕಾರಗಳ ನಡುವಿನ ವ್ಯತ್ಯಾಸವನ್ನಾಗಲಿ ಬರೆದು ತೋರಿಸಲು ಕನ್ನಡ ಬರಹದಲ್ಲಿ ಬರಿಗೆಗಳಿಲ್ಲ.
ಹಾಗಾಗಿ, ಕನ್ನಡ ಬರಹದಲ್ಲಿ ಬರುವ ಪದಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆಯಲು ಬೇಕಾಗುವ 31 ಬರಿಗೆಗಳನ್ನು ಮಾತ್ರ ಉಳಿಸಿಕೊಳ್ಳುವುದೇ ಜಾಣತನ; ಉಳಿದುವನ್ನೆಲ್ಲ ಹೆಚ್ಚಿನ ಕನ್ನಡಿಗರೂ ಓದಬೇಕಾಗಿರುವ ಬರಹಗಳಿಂದ ತೆಗೆದುಹಾಕಬೇಕಾಗಿದೆ, ಮತ್ತು ಹಾಗೆ ಮಾಡುವ ಮೂಲಕ, ಕನ್ನಡ ಬರಹವನ್ನು ಎಲ್ಲಾ ಕನ್ನಡಿಗರೂ ಬಳಸುವಂತೆ ಮಾಡಬೇಕಾಗಿದೆ. ಸಂಸ್ಕ್ರುತಿ, ಶ್ರೀಮಂತಿಕೆ ಎಂಬಂತಹ ದೊಡ್ಡ ದೊಡ್ಡ ಪದಗಳನ್ನು ಬಳಸಿ ಓದುಗರು ಗೊಂದಲದಲ್ಲಿ ಬೀಳುವ ಹಾಗೆ ಮಾಡುವುದರಿಂದ ಕನ್ನಡಿಗರಿಗೇನೇ ಅನ್ಯಾಯವಾಗುತ್ತದೆ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 12
ಕೇಶಿರಾಜನ ಕಾಲದಿಂದಲೂ ಕನ್ನಡ ಪಂಡಿತರು ಯಾವುದನ್ನು‘ಕನ್ನಡ ವ್ಯಾಕರಣ’ ಎಂಬುದಾಗಿ ಕರೆಯುತ್ತ ಬಂದಿದ್ದಾರೋ ಅದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲ; ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳು ಕನ್ನಡದಲ್ಲೂ ಇರಬಹುದು, ಇಲ್ಲವೇ ಇರಬೇಕು ಎಂಬ ತಪ್ಪು ಕಲ್ಪನೆಯಲ್ಲಿ ಆ ಕಟ್ಟಲೆಗಳನ್ನು ಕನ್ನಡದಲ್ಲಿ ಕಾಣಲು ನಡೆಸಿದ ಒಂದು ವ್ಯರ‍್ತ ಪ್ರಯತ್ನ ಮಾತ್ರ.
ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಇದೇ ಕನ್ನಡದ್ದಲ್ಲದ ವ್ಯಾಕರಣವನ್ನು ಕಲಿಸಲಾಗುತ್ತಿದೆ. ಅದನ್ನು ಯಾಕೆ ‘ಕನ್ನಡ ವ್ಯಾಕರಣ’ವೆಂದು ಕರೆಯಬೇಕು ಎಂಬುದನ್ನು ಮಕ್ಕಳೂ ತಿಳಿಯಲಾರರು, ಅದನ್ನು ಕಲಿಸುವ ಮಾಸ್ತರರೂ ತಿಳಿಸಿಕೊಡಲಾರರು. ಇನ್ನು ಅದರಿಂದ ಪ್ರಯೋಜನವನ್ನೇನಾದರೂ ಪಡೆಯುವುದಂತೂ ದೂರವೇ ಉಳಿಯಿತು.
ನಿಜಕ್ಕೂ ಈ ‘ವ್ಯಾಕರಣ’ ಎಂಬುದು ಏನು ಮಾಡಬೇಕು? ಒಂದು ನುಡಿಯಲ್ಲಿ ಬರುವ ಪದಗಳ ಒಳರಚನೆ ಎಂತಹದು, ಪದಗಳನ್ನು ಬಳಸಿ ಆ ನುಡಿಯಲ್ಲಿ ಸೊಲ್ಲು(ವಾಕ್ಯ)ಗಳನ್ನು ಉಂಟುಮಾಡುವುದು ಹೇಗೆ, ಮತ್ತು ಸೊಲ್ಲುಗಳನ್ನು ಬಳಸಿ ಅದರಲ್ಲಿ ಬರಹಗಳನ್ನು ಬರೆಯುವುದು ಹೇಗೆ ಎಂಬಂತಹ ಸೊಲ್ಲುಗಳ ಕುರಿತಾಗಿರುವ ತಿಳಿವನ್ನು ಅದು ನಮಗೆ ಒದಗಿಸಬೇಕು.
ಕನ್ನಡದ ಕುರಿತಾಗಿರುವ ಇಂತಹ ತಿಳಿವನ್ನು ನಾವು ಇಲ್ಲಿ ‘ಕನ್ನಡದ ಸೊಲ್ಲರಿಮೆ’ ಎಂದು ಕರೆಯೋಣ; ಯಾಕೆಂದರೆ, ‘ಕನ್ನಡ ವ್ಯಾಕರಣ’ ಎಂಬುದಕ್ಕೆ ಇವತ್ತು ಮೇಲೆ ವಿವರಿಸಿದಂತಹ ಬೇರೆಯೇ ಹುರುಳಿದೆ.
ಪಾಣಿನಿಯೇ ಮೊದಲಾದ ಸಂಸ್ಕ್ರುತದ ಪಂಡಿತರು ಆ ನುಡಿಯಲ್ಲಿ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗುತ್ತದೆ, ಅವುಗಳ ಹಿಂದಿರುವ ಕಟ್ಟಲೆಗಳು ಎಂತಹವು ಎಂಬುದನ್ನು ಕಂಡುಹಿಡಿದಿದ್ದರು, ಮತ್ತು ಅಂತಹ ಕಟ್ಟಲೆಗಳನ್ನು ಒಟ್ಟುಗೂಡಿಸಿ, ಅದನ್ನು ‘ಸಂಸ್ಕ್ರುತ ವ್ಯಾಕರಣ’ ಎಂಬುದಾಗಿ ಕರೆದಿದ್ದರು; ಅಂತಹದೇ ಕೆಲಸವನ್ನು ಇವತ್ತು ನಾವು ಕನ್ನಡದಲ್ಲಿ ನಡೆಸಬೇಕಾಗಿದೆ.
ಸೊಲ್ಲುಗಳನ್ನು ಕಟ್ಟುವ ಬಗೆ ಸಂಸ್ಕ್ರುತದಲ್ಲಿರುವುದಕ್ಕಿಂತ ಕನ್ನಡದಲ್ಲಿ ತೀರ ಬೇರಾಗಿದೆ; ಹಾಗಾಗಿ, ಸಂಸ್ಕ್ರುತ ವ್ಯಾಕರಣದಲ್ಲಿ ಬರುವ ಕಟ್ಟಲೆಗಳಿಗಿಂತ ತೀರ ಬೇರಾಗಿರುವ ಕಟ್ಟಲೆಗಳು ‘ಕನ್ನಡದ ಸೊಲ್ಲರಿಮೆ’ಯಲ್ಲಿ ಬರಬೇಕಾಗುತ್ತದೆ.
ಸಂಸ್ಕ್ರುತದಲ್ಲಿ ಎರಡು (ಇಲ್ಲವೇ ಹೆಚ್ಚು) ಪದಗಳನ್ನು ಒಟ್ಟುಸೇರಿಸಿ ಹೊಸಪದವನ್ನು ಉಂಟುಮಾಡುವ ಹೊಲಬನ್ನು ‘ಸಮಾಸ’ ಎಂಬುದಾಗಿ ಕರೆಯಲಾಗುತ್ತದೆ; ನಾಮಪದಗಳನ್ನು ಮಾತ್ರ ಈ ರೀತಿ ಸಂಸ್ಕ್ರುತದಲ್ಲಿ ಒಟ್ಟುಸೇರಿಸಲು ಬರುತ್ತದೆ. ಹಾಗಾಗಿ, ಒಟ್ಟುಸೇರಿಸಿದ ಪದಗಳಲ್ಲಿ ಯಾವುದು ಮುಕ್ಯ ಎಂಬುದರ ಮೇಲೆ ಈ ಸಮಾಸಗಳನ್ನು ತತ್ಪುರುಶ (ಎರಡನೆಯದು ಮುಕ್ಯ), ಅವ್ಯಯೀಬಾವ (ಮೊದಲನೆಯದು ಮುಕ್ಯ), ದ್ವಂದ್ವ (ಎರಡೂ ಮುಕ್ಯ) ಮತ್ತು ಬಹುವ್ರೀಹಿ (ಎರಡೂ ಮುಕ್ಯವಲ್ಲ, ಬೇರೊಂದು ಪದ ಮುಕ್ಯ) ಎಂಬ ನಾಲ್ಕು ಬಗೆಗಳಲ್ಲಿ ಗುಂಪಿಸಬಹುದೆಂದು ಸಂಸ್ಕ್ರುತ ವ್ಯಾಕರಣಗಳು ಹೇಳುತ್ತವೆ.
ಆದರೆ, ಕನ್ನಡದಲ್ಲಿ ಎರಡು ಪದಗಳನ್ನು ಒಟ್ಟುಸೇರಿಸಿ ಹೊಸದೊಂದು ಪದವನ್ನು ಉಂಟುಮಾಡುವ ಬಗೆ ಇದರಿಂದ ತೀರ ಬೇರಾದುದು. ನಾಮಪದ, ಕ್ರಿಯಾಪದ, ಮತ್ತು ಗುಣಪದಗಳೆಂಬ ಮೂರು ಬಗೆಯ ಪದಗಳನ್ನು ಇಂತಹ ಹೊಸಪದಗಳ ಮೊದಲನೆಯ ಪದವಾಗಿ ಬಳಸಲು ಬರುತ್ತದೆ; ಅವುಗಳ ಎರಡನೆಯ ಪದ ಮಾತ್ರ ಯಾವಾಗಲೂ ಹೆಸರುಪದವಾಗಿರುತ್ತದೆ.
ಕಯ್ಮಗ್ಗ, ಬಯಲಾಟ, ನೆಲಗಡಲೆ ಎಂಬಂತಹ ಪದಗಳಲ್ಲಿ ಎರಡು ನಾಮಪದಗಳು ಒಟ್ಟುಸೇರಿವೆ; ಕಡೆಗೋಲು, ಸಿಡಿಮದ್ದು, ಬಿಚ್ಚುಕತ್ತಿ ಎಂಬಂತಹ ಪದಗಳಲ್ಲಿ ಕ್ರಿಯಾಪದ ಮತ್ತು ನಾಮಪದಗಳು ಒಟ್ಟುಸೇರಿವೆ (ಕಡೆ, ಸಿಡಿ ಮತ್ತು ಬಿಚ್ಚು ಎಂಬವು ಕ್ರಿಯಾಪದಗಳು); ಬಿಸಿನೀರು, ದೊಡ್ಡಮ್ಮ, ಬೆಳ್ಳುಳ್ಳಿ ಎಂಬಂತಹ ಪದಗಳಲ್ಲಿ ಗುಣಪದ ಮತ್ತು ನಾಮಪದಗಳು ಒಟ್ಟುಸೇರಿವೆ.
ಹಾಗಾಗಿ, ಕನ್ನಡದಲ್ಲಿ ಬರುವ ‘ಸಮಾಸ’ ಯಾವ ಬಗೆಯದು ಎಂಬುದನ್ನು ತಿಳಿಯಬೇಕಿದ್ದಲ್ಲಿ ಅಂತಹ ಹೊಸಪದಗಳಲ್ಲಿ ಮೊದಲಿಗೆ ಯಾವ ಬಗೆಯ ಪದ ಬಂದಿದೆ ಎಂಬುದನ್ನು ತಿಳಿಯಬೇಕಲ್ಲದೆ, ಸಂಸ್ಕ್ರುತದ ಹಾಗೆ ಯಾವ ಪದ ಮುಕ್ಯ ಎಂಬುದನ್ನಲ್ಲ.
ಇಂಗ್ಲಿಶ್‌ನಂತಹ ಬೇರೆ ನುಡಿಗಳಿಂದ ಹೊಸ ಹೊಸ ವಿಶಯಗಳನ್ನು ಕನ್ನಡಕ್ಕೆ ತರಬೇಕಾದಾಗ, ಅದಕ್ಕಾಗಿ ಹಲವಾರು ಹೊಸ ಪದಗಳನ್ನು ಕನ್ನಡದಲ್ಲಿ ಉಂಟುಮಾಡಿಕೊಳ್ಳಬೇಕಾಗುತ್ತದೆ. ನಿಜಕ್ಕೂ ಕನ್ನಡ ಪದಗಳ ಒಳರಚನೆಯೆಂತಹದು ಎಂಬುದನ್ನು ತಿಳಿದವರು ಮಾತ್ರ ಈ ಕೆಲಸವನ್ನು ಸರಿಯಾಗಿ ನಡೆಸಬಲ್ಲರು.
ಸಂಸ್ಕ್ರುತ ಪದಗಳ ಒಳರಚನೆಯೇ ಕನ್ನಡ ಪದಗಳಿಗೂ ಇದೆ ಎಂಬ ತಪ್ಪು ತಿಳಿವನ್ನು ‘ಕನ್ನಡ ವ್ಯಾಕರಣ’ಗಳಿಂದ ಪಡೆದಿರುವ ಕನ್ನಡ ಪಂಡಿತರಿಗೆ ಇಂತಹ ಹೊಸಪದಗಳನ್ನು ಕನ್ನಡದಲ್ಲೇನೇ ಉಂಟುಮಾಡುವುದು ಹೇಗೆ ಎಂಬುದು ಗೊತ್ತೇ ಇರುವುದಿಲ್ಲ. ಹಾಗಾಗಿ, ಹೊಸಪದಗಳು ಬೇಕಾದಾಗಲೆಲ್ಲ ಅವರು ಅವನ್ನು ಸಂಸ್ಕ್ರುತದಲ್ಲಿ ಉಂಟುಮಾಡಿ ಕನ್ನಡದೊಳಗೆ ತುರುಕುತ್ತಾರೆ, ಮತ್ತು ಸಂಸ್ಕ್ರುತದ ನೆರವಿಲ್ಲದೆ ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡಲು ಸಾದ್ಯವೇ ಇಲ್ಲ ಎಂಬ ತಪ್ಪು ತೀರ‍್ಮಾನಕ್ಕೆ ಬರುತ್ತಾರೆ.
ಕ್ರಿಯಾಪದಗಳನ್ನು ನಾಮಪದಗಳೊಂದಿಗೆ ಸೇರಿಸಿ ಹೊಸಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಲು ಬರುವುದಿಲ್ಲವಾದರೂ ಕನ್ನಡದಲ್ಲಿ ಬರುತ್ತದೆ ಎಂಬ ಕನ್ನಡದ್ದೇ ಆದ ಸೊಲ್ಲರಿಮೆಯ ಕಟ್ಟಲೆಯನ್ನು ತಿಳಿದವರಿಗೆ ನೂರಾರು ಹೊಸಪದಗಳನ್ನು ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ. ಇಂಗುಗುಂಡಿ, ಇಡುಗಂಟು, ಇಳಿನೀರು, ಉಜ್ಜುಗಾಯ, ಉಬ್ಬುಗನ್ನಡಿ, ಕಟ್ಟುಪಟ್ಟಿ, ಕರೆಸಾಲ, ತಡೆಯೋಟ, ತೇಲುಮನೆ, ತಳ್ಳುಗುಂಡಿ ಮೊದಲಾದ ಇಂತಹ ಪದಗಳು ಕನ್ನಡ ಬರಹದಲ್ಲೂ ತುಂಬಾ ಚನ್ನಾಗಿ ಹೊಂದಿಕೊಳ್ಳುತ್ತವೆ.
ಕನ್ನಡದ ಆಡುನುಡಿಗಳಲ್ಲಿಯೂ ಈ ಹೊಲಬನ್ನು ಬಳಸಿ ಉಂಟುಮಾಡಿರುವ ತುಂಬುಕಡಬು, ಬಿಚ್ಚೋಲೆ, ತೂಗುದೀಪ ಎಂಬಂತಹ ಹಲವಾರು ಪದಗಳು ಬಳಕೆಯಲ್ಲಿವೆ; ಆದರೆ, ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳೇ ಕನ್ನಡದಲ್ಲೂ ಇವೆಯೆಂಬುದಾಗಿ ಬ್ರಮಿಸುವ ‘ಕನ್ನಡ ವ್ಯಾಕರಣ’ಗಳಿಂದಾಗಿ ದಾರಿತಪ್ಪಿರುವ ಕನ್ನಡ ಪಂಡಿತರು ತಮ್ಮಲ್ಲಿ ಸ್ವಾಬಾವಿಕವಾಗಿ ಬೆಳೆದುಬಂದಿರಬಹುದಾದ ಈ ತಾಯ್ನುಡಿಯ ಅಳವನ್ನೇ ಕಳೆದುಕೊಂಡಿದ್ದಾರೆ.
ಸಂಸ್ಕ್ರುತದ ವಾಕ್ಯಗಳಲ್ಲಿ ಏಳು ವಿಬಕ್ತಿಗಳು ಬಳಕೆಯಾಗುತ್ತವೆ ಎಂಬುದನ್ನು ಸಂಸ್ಕ್ರುತದ ಪಂಡಿತರು ಕಂಡುಕೊಂಡಿದ್ದಾರೆ; ಕನ್ನಡದ ಸೊಲ್ಲುಗಳನ್ನು ಪರಿಶೀಲಿಸಿದೆವಾದರೆ, ಅವುಗಳಲ್ಲಿ ಬರುವ ಪದಗಳಿಗೆ ಒಟ್ಟು ನಾಲ್ಕು ವಿಬಕ್ತಿರೂಪಗಳು ಮಾತ್ರ ಕಾಣಿಸುತ್ತವಲ್ಲದೆ, ಏಳು ವಿಬಕ್ತಿ ರೂಪಗಳು ಕಾಣಿಸುವುದಿಲ್ಲ; ಹಾಗಿರುವಾಗ, ಸಂಸ್ಕ್ರುತದ ಹಾಗೆ ಕನ್ನಡದಲ್ಲೂ ಏಳು ವಿಬಕ್ತಿಗಳಿರಬೇಕು ಎಂದು ಬ್ರಮಿಸಿ, ಅವನ್ನು ಕಾಣಲು ಪ್ರಯತ್ನಿಸುವ ‘ಕನ್ನಡದ ವ್ಯಾಕರಣ’ ಕನ್ನಡದ್ದಾಗುವುದು ಹೇಗೆ?
ಕನ್ನಡದಲ್ಲಿ ಮೂರು ಕಾಲಗಳಿವೆಯೆಂದು ‘ಕನ್ನಡ ವ್ಯಾಕರಣ’ಗಳು ಹೇಳುತ್ತವೆ; ಇದರಂತೆ, ಮಾಡುತ್ತೇನೆ ಎಂಬ ರೂಪ ಈಗ ನಡೆಯುತ್ತಿರುವ ಕೆಲಸವನ್ನು ತಿಳಿಸಬೇಕು, ಮತ್ತು ಮಾಡುವೆನು ಎಂಬ ರೂಪ ಮುಂದೆ ನಡೆಯಲಿರುವ ಕೆಲಸವನ್ನು ತಿಳಿಸಬೇಕು.
ಆದರೆ, ನಿಜಕ್ಕೂ ಕನ್ನಡದಲ್ಲಿ ನಾಳೆ ಮಾಡುತ್ತೇನೆ, ಬರುವ ವರ‍್ಶ ಮಾಡುತ್ತೇನೆ ಎಂಬಂತಹ ಸೊಲ್ಲುಗಳಲ್ಲಿ ಕಾಣಿಸುವ ಹಾಗೆ, ಮಾಡುತ್ತೇನೆ ಎಂಬುದು ಮುಂದೆ ನಡೆಯಲಿರುವ ಕೆಲಸವನ್ನು ತಿಳಿಸುತ್ತದೆ; ಈಗ ನಡೆಯುತ್ತಿರುವ ಕೆಲಸವನ್ನು ತಿಳಿಸಲು ಮಾಡುತ್ತಿದ್ದೇನೆ ಎಂಬ ಮಾಡು ಪದಕ್ಕೆ ಇರು ಪದವನ್ನು ಸೇರಿಸಿರುವ ಬೇರೆಯೇ ಪದರೂಪವನ್ನು ಬಳಸಲಾಗುತ್ತದೆ. ಇಂತಹ ಕಣ್ಣಿಗೆ ಹೊಡೆದು ಕಾಣಿಸುವಂತಹ ತಪ್ಪುಗಳಿರುವ ‘ಕನ್ನಡ ವ್ಯಾಕರಣ’ ಕನ್ನಡದ್ದಾಗುವುದು ಹೇಗೆ?
ಕಂಪ್ಯೂಟರ್‌ಗಳನ್ನು ಬಳಸಿ ಒಂದು ನುಡಿಯ ಸೊಲ್ಲುಗಳನ್ನು ಇನ್ನೊಂದು ನುಡಿಗೆ ಅನುವಾದಿಸಲು ಬರುತ್ತದೆ; ಆದರೆ, ಹೀಗೆ ಮಾಡಬೇಕಿದ್ದಲ್ಲಿ, ಆ ಎರಡು ನುಡಿಗಳ ವಿವರವಾದ ಸೊಲ್ಲರಿಮೆಗಳನ್ನು ಕಂಪ್ಯೂಟರ್‌ಗಳಿಗೆ ಒದಗಿಸಿಕೊಡಬೇಕಾಗುತ್ತದೆ. ಇಂಗ್ಲಿಶ್ ನುಡಿಗೆ ಈಗಾಗಲೇ ಸಾಕಶ್ಟು ವಿವರವಾದ ವ್ಯಾಕರಣವನ್ನು ಬರೆಯಲಾಗಿದ್ದು, ಅದನ್ನು ಕಂಪ್ಯೂಟರ್‌ಗಳಿಗೆ ಒದಗಿಸಿಕೊಡಲಾಗಿದೆ; ಕನ್ನಡಕ್ಕೂ ಇಂತಹದೊಂದು ವಿವರವಾದ ಸೊಲ್ಲರಿಮೆಯನ್ನು ಬರೆದಲ್ಲಿ, ಇಂಗ್ಲಿಶ್ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವಲ್ಲಿಯೂ ಕಂಪ್ಯೂಟರನ್ನು ಬಳಸಲು ಸಾದ್ಯವಾಗಬಹುದು.
ಆದರೆ, ಇಂತಹ ಕೆಲಸಕ್ಕೆ ಸಂಸ್ಕ್ರುತ ವ್ಯಾಕರಣವನ್ನೇ ‘ಕನ್ನಡ ವ್ಯಾಕರಣ’ವೆಂದು ಬ್ರಮಿಸುವ ಕೇಶಿರಾಜನ ಕನ್ನಡ ವ್ಯಾಕರಣವಾಗಲಿ, ಇವತ್ತು ಶಾಲೆಗಳಲ್ಲಿ ಕಲಿಸುವ ‘ಕನ್ನಡ ವ್ಯಾಕರಣ’ವಾಗಲಿ ಯಾವ ನೆರವನ್ನೂ ನೀಡಲಾರದು. ಕನ್ನಡದಲ್ಲಿ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಬಲ್ಲ ‘ಕನ್ನಡದ ಸೊಲ್ಲರಿಮೆ’ಯೊಂದೇ ಈ ಕೆಲಸದಲ್ಲಿ ನೆರವನ್ನು ನೀಡಬಲ್ಲುದು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 11
ಕನ್ನಡದಲ್ಲಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ಹೆಚ್ಚಿನ ಅರಿವಿಗರೂ ಸಂಸ್ಕ್ರುತ ಪದಗಳನ್ನೇ ಆರಿಸಿಕೊಳ್ಳುತ್ತಾರೆ; ಇದಕ್ಕಾಗಿ ಕನ್ನಡದವೇ ಆದ ಪದಗಳನ್ನು ಬಳಸುವುದು ತುಂಬಾ ಅಪರೂಪ.
ಈ ಕಾರಣಕ್ಕಾಗಿ, ಕನ್ನಡದವೆಂದು ಹೇಳಲಾಗುವ ಹೆಚ್ಚಿನ ಅರಿಮೆಯ ಪದಕೋಶಗಳಲ್ಲೂ ಇವತ್ತು ನೂರಕ್ಕೆ ಎಂಬತ್ತರಶ್ಟು ಇಲ್ಲವೇ ಅದಕ್ಕಿಂತಲೂ ಹೆಚ್ಚು ಸಂಸ್ಕ್ರುತ ಪದಗಳನ್ನು ಕಾಣಬಹುದು. ಕನ್ನಡ ಅರಿವಿಗರ ಈ ನಿಲುವಿನಿಂದಾಗಿ, ಇವತ್ತು ಕನ್ನಡದ ಅರಿಮೆಯ ಬರಹಗಳು ಸಂಸ್ಕ್ರುತ ಪದಗಳಿಂದ ತುಂಬಿ ತುಳುಕುತ್ತಿವೆ.
ಹಿಂದಿನ ಕಾಲದಲ್ಲಿ ಕನ್ನಡದಲ್ಲಿ ಬರೆಯುವವರಿಗೆ ಬೇಕಾಗಿರುವ ಹೆಚ್ಚಿನ ತಿಳಿವುಗಳೂ ಸಂಸ್ಕ್ರುತದಲ್ಲಿದ್ದುವು; ಹಾಗಾಗಿ, ಅವನ್ನು ಕನ್ನಡಕ್ಕೆ ತರಬೇಕಾದಾಗ, ಅದಕ್ಕೆ ಬೇಕಾಗುವ ಅರಿಮೆಯ ಪದಗಳಲ್ಲಿ ಹೆಚ್ಚಿನವನ್ನೂ ಸಂಸ್ಕ್ರುತದಿಂದಲೇನೇ ಎರವಲು ಪಡೆಯಲಾಗುತ್ತಿತ್ತು, ಮತ್ತು ಆವತ್ತಿಗೆ ಅದು ಸರಿಯಾದ ದಾರಿಯಾಗಿತ್ತು.
ಆದರೆ, ಇವತ್ತು ಅರಿಮೆಯ (ವಿಜ್ನಾನದ) ಬರಹಗಾರರಿಗೆ ಬೇಕಾಗುವ ಹೆಚ್ಚಿನ ತಿಳಿವುಗಳೂ ಇಂಗ್ಲಿಶ್‌ನಲ್ಲಿವೆ; ಹಾಗಾಗಿ, ಅವನ್ನು ಇಂಗ್ಲಿಶ್‌ನಿಂದ ಕನ್ನಡಕ್ಕೆ ತರಬೇಕಾದಾಗ, ಅದಕ್ಕೆ ಬೇಕಾಗುವ ಪದಗಳನ್ನು ಇಂಗ್ಲಿಶ್‌ನಿಂದ ಎರವಲು ಪಡೆಯುವುದು, ಇಲ್ಲವೇ ಕನ್ನಡದಲ್ಲೇನೇ ಹೊಸದಾಗಿ ಉಂಟುಮಾಡಿಕೊಳ್ಳುವುದು ಎಂಬ ಎರಡು ದಾರಿಗಳು ಇವತ್ತಿನ ಮಟ್ಟಿಗೆ ಸರಿಯಾದುವು.
ಹೀಗಿದ್ದರೂ, ಕನ್ನಡದ ಬರಹಗಾರರು ಇವತ್ತಿಗೂ ಅರಿಮೆಯ ಪದಗಳಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಹಳೆಯ ಸಂಪ್ರದಾಯವನ್ನೇ ಮುಂದುವರಿಸುತ್ತಿದ್ದಾರೆ; ತಮಗೆ ಬೇಕಾಗಿರುವ ಪದಗಳು ಸಂಸ್ಕ್ರುತದಲ್ಲಿಲ್ಲವಾದರೆ, ಹೊಸ ಪದಗಳನ್ನು ಸಂಸ್ಕ್ರುತದಲ್ಲೇನೇ ಉಂಟುಮಾಡಿ ಕನ್ನಡಕ್ಕೆ ತರುವಂತಹ ಇನ್ನೊಂದು ವಿಚಿತ್ರವಾದ ಸಂಪ್ರದಾಯವನ್ನೂ ಅವರು ಹುಟ್ಟುಹಾಕಿಕೊಂಡಿದ್ದಾರೆ.
ಹೀಗೆ ಮಾಡುತ್ತಿರುವುದಕ್ಕಾಗಿ, ಅವರು ಕೆಲವು ನೆವಗಳನ್ನೂ ಕೊಡುತ್ತಿದ್ದಾರೆ: ಇಂಗ್ಲಿಶ್‌ನಲ್ಲಿ ಅರಿಮೆಯ ಪದಗಳಾಗಿ ಲ್ಯಾಟಿನ್ ಇಲ್ಲವೇ ಗ್ರೀಕ್ ಪದಗಳನ್ನು ಬಳಸುವ ಹಾಗೆ ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸಲಾಗುತ್ತದೆಯೆಂಬುದು ಇವುಗಳಲ್ಲೊಂದು.
ಆದರೆ, ಇಂಗ್ಲಿಶ್‌ಗೆ ಲ್ಯಾಟಿನ್ ಇರುವ ಹಾಗೆ ಕನ್ನಡಕ್ಕೆ ಸಂಸ್ಕ್ರುತ ಅಲ್ಲ; ಯಾಕೆಂದರೆ, ಇಂಗ್ಲಿಶ್ ಮತ್ತು ಲ್ಯಾಟಿನ್‌ಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆ, ಮತ್ತು ಕನ್ನಡ ಮತ್ತು ಸಂಸ್ಕ್ರುತಗಳು ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರಿವೆ. ಇಂಗ್ಲಿಶ್‌ಗೆ ಬೇಕಾಗುವ ಪದಗಳನ್ನು ಲ್ಯಾಟಿನ್‌ನಲ್ಲಿ ಉಂಟುಮಾಡಿದಾಗ ಹೆಚ್ಚಿನ ತೊಂದರೆಗಳೇನೂ ಎದುರಾಗುವುದಿಲ್ಲ; ಆದರೆ, ಕನ್ನಡಕ್ಕೆ ಬೇಕಾಗುವ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಿದಾಗ ಹಲವು ತೊಂದರೆಗಳು ಎದುರಾಗುತ್ತವೆ:
ಇಂಗ್ಲಿಶ್‌ನಲ್ಲಿ ಮುಕ್ಯವಾಗಿ ನವ್ನ್, ವರ‍್ಬ್, ಮತ್ತು ಎಜಕ್ಟಿವ್ ಎಂಬುದಾಗಿ ಮೂರು ಬಗೆಯ ಪದಗಳಿವೆ; ಕನ್ನಡದಲ್ಲೂ ಇಂತಹವೇ ಮೂರು ಬಗೆಯ ಪದಗಳಿವೆ. ಆದರೆ, ಸಂಸ್ಕ್ರುತದಲ್ಲಿ ಮುಕ್ಯವಾಗಿ ನಾಮಪದ ಮತ್ತು ಕ್ರಿಯಾಪದ ಎಂಬ ಎರಡು ಬಗೆಯ ಪದಗಳು ಮಾತ್ರ ಇವೆ.
ಹಾಗಾಗಿ, ಇಂಗ್ಲಿಶ್‌ನ ಅರಿಮೆಯ ಪದಗಳಿಗೆ ಸಮನಾದ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಿ ಕನ್ನಡಕ್ಕೆ ತರಹೋದರೆ, ನವ್ನ್ ಮತ್ತು ಎಜಕ್ಟಿವ್‌ಗಳ ನಡುವಿನ ವ್ಯತ್ಯಾಸವನ್ನು ಅವುಗಳಲ್ಲಿ ಸರಿಯಾಗಿ ತೋರಿಸಲು ಬರುವುದಿಲ್ಲ. ಈ ತೊಂದರೆಯಿಂದಾಗಿ, ಇವತ್ತು ಬಳಕೆಯಲ್ಲಿರುವ ಅರಿಮೆಯ ಪದಕೋಶಗಳಲ್ಲಿ ತುಂಬಾ ಗೊಂದಲವುಂಟಾಗಿರುವುದನ್ನು ಕಾಣಬಹುದು.
ಅರಿಮೆಯ ಬರಹಗಳಲ್ಲಿ ಕನ್ನಡ ಪದಗಳನ್ನು ಬಳಸಿದರೆ, ಅವು ಸಂಸ್ಕ್ರುತ ಪದಗಳ ಹಾಗೆ ಕಚಿತವಾದ ಹುರುಳನ್ನು ಕೊಡಲಾರವು ಎಂಬುದು ಇನ್ನೊಂದು ನೆವ; ಆದರೆ, ಸಂಸ್ಕ್ರುತ ಪದಗಳು ಕನ್ನಡದಲ್ಲಿ ಉಂಟುಮಾಡುತ್ತಿರುವ ಮೇಲಿನ ಗೊಂದಲವೇ ಇದನ್ನು ತಳ್ಳಿಹಾಕುತ್ತದೆ.
ಇವತ್ತು ಇಂಗ್ಲಿಶ್‌ನಲ್ಲಿ ಕಂಪ್ಯೂಟರ್‌ಗೆ ಸಂಬಂದಿಸಿದ ಹಲವು ಅರಿಮೆಯ ಪದಗಳನ್ನು ದಿನಬಳಕೆಯ ಪದಗಳನ್ನು ಬಳಸಿಯೇ ಉಂಟುಮಾಡಲಾಗುತ್ತಿದೆ; ಮವ್ಸ್ ‘ಇಲಿ’, ವಿಂಡೋಸ್ ‘ಕಿಟಿಕಿ’, ಟ್ರೀ ‘ಮರ’, ವೆಬ್ ‘ಬಲೆ’ ಎಂಬಂತಹ ಈ ಪದಗಳಿಂದಾಗಿ ಗೊಂದಲವೇನೂ ಉಂಟಾದ ಹಾಗೆ ಕಾಣಿಸುವುದಿಲ್ಲ.
ಹಾಗಾಗಿ, ಕನ್ನಡದ ಅರಿಮೆಯ ಪದಗಳಿಗಾಗಿ ಸಂಸ್ಕ್ರುತದ ಮೊರೆಹೊಗುವ ಇವತ್ತಿನ ಸಂಪ್ರದಾಯವನ್ನು ಬಿಟ್ಟುಕೊಡುವುದೇ ಒಳ್ಳೆಯದು. ಇಂಗ್ಲಿಶ್‌ನಿಂದ ಅರಿಮೆಯ ಬರಹಗಳನ್ನು ಕನ್ನಡಕ್ಕೆ ತರುವಾಗ, ಕನ್ನಡ ಪದಗಳ ಸೊಗಡನ್ನು ಕೆಡಿಸದಂತಹ ಇಂಗ್ಲಿಶ್ ಪದಗಳನ್ನು ಉಳಿಸಿಕೊಳ್ಳಬಹುದು, ಮತ್ತು ಅದನ್ನು ಕೆಡಿಸುವಂತಹ ಪದಗಳ ಬದಲು ಕನ್ನಡದವೇ ಆದ ಪದಗಳನ್ನು ಬಳಸಿ ಹೊಸ ಪದಗಳನ್ನು ಉಂಟುಮಾಡಿಕೊಳ್ಳಬಹುದು; ಇದೇ ಕನ್ನಡಕ್ಕೆ ಸರಿಯಾದ ದಾರಿ.
ಇಲ್ಲಿ ಇನ್ನೊಂದು ವಿಶಯವನ್ನೂ ಒತ್ತಿ ಹೇಳಬೇಕಾಗಿದೆ: ಇಂಗ್ಲಿಶ್‌ನಿಂದ ಅರಿಮೆಯ ಬರಹಗಳನ್ನು ಕನ್ನಡಕ್ಕೆ ತರುವಾಗ, ಎರಡು ಮುಕ್ಯ ಗುರಿಗಳಿಗಾಗಿ ನಾವು ಅವುಗಳಲ್ಲಿರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಬಳಸಲು ಹೋಗುತ್ತೇವೆ: ಹಾಗೆ ಮಾಡುವ ಮೂಲಕ ಬರಹ ಏನನ್ನು ತಿಳಿಸುತ್ತದೆ ಎಂಬುದು ಕನ್ನಡಿಗರಿಗೆ ಸುಲಬವಾಗಿ ತಿಳಿಯುವಂತಾಗಬೇಕು ಎಂಬುದೊಂದು, ಮತ್ತು ಕನ್ನಡದ ಸೊಗಡು ಕೆಡದಂತೆ ಉಳಿಯಬೇಕು ಎಂಬುದಿನ್ನೊಂದು.
ಇತ್ತೀಚೆಗೆ ಕಂಪ್ಯೂಟರ್‌ಗಳಿಗೆ ಸಂಬಂದಿಸಿದ ಕೆಲವು ಕಯ್ಪಿಡಿಗಳಲ್ಲಿ ಹೆಚ್ಚಿನ ಇಂಗ್ಲಿಶ್ ಪದಗಳನ್ನೂ ಹಾಗೆಯೇ ಉಳಿಸಿರುವುದನ್ನು ಕಾಣಬಹುದು. ಇಂಗ್ಲಿಶ್ ಪದಗಳ ಹುರುಳು ಗೊತ್ತಿರುವವರು ಮಾತ್ರ ಅವನ್ನು ಓದಿ ತಿಳಿದುಕೊಳ್ಳಬಲ್ಲರು, ಮತ್ತು ಅವುಗಳಲ್ಲಿ ಕನ್ನಡದ ಸೊಗಡು ಪೂರ‍್ತಿ ಕೆಟ್ಟುಹೋಗಿರುತ್ತದೆ; ಎಂದರೆ, ಮೇಲಿನ ಎರಡು ಗುರಿಗಳನ್ನೂ ಅವು ತಲಪುವುದೇ ಇಲ್ಲ.
ಇಂತಹ ಕಯ್ಪಿಡಿಗಳಲ್ಲಿ ಬರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಬಳಸಿದರೂ ಪರಿಣಾಮ ಒಂದೇ: ಅವನ್ನು ಓದಿ ತಿಳಿಯಲು ಇಂಗ್ಲಿಶ್ ಪದಗಳ ಬದಲು ಸಂಸ್ಕ್ರುತ ಪದಗಳ ಹುರುಳು ಗೊತ್ತಿರಬೇಕು, ಮತ್ತು ಅವು ಕನ್ನಡದ ಸೊಗಡನ್ನು ಕೆಡಿಸದಿರುವುದಿಲ್ಲ. ಎಂದರೆ, ಇಂತಹ ಬರಹಗಳೂ ಮೇಲಿನ ಎರಡು ಗುರಿಗಳನ್ನು ತಲಪುವುದೇ ಇಲ್ಲ.
ಹಲವು ಹೆಚ್ಚಿನ ಸಂಸ್ಕ್ರುತ ಪದಗಳ ಹುರುಳುಗಳನ್ನು ಕಲಿಯುವುದಕ್ಕಿಂತಲೂ ಮೂಲ ಬರಹದಲ್ಲಿದ್ದ ಇಂಗ್ಲಿಶ್ ಪದಗಳ ಹುರುಳುಗಳನ್ನು ಕಲಿಯುವುದೇ ಕನ್ನಡಿಗರ ಮಟ್ಟಿಗೆ ಒಳ್ಳೆಯದಲ್ಲವೇ? ಯಾಕೆಂದರೆ, ಮುಂದೆ ಹೆಚ್ಚಿನ ತಿಳಿವನ್ನು ಪಡೆಯಬೇಕೆಂದಿರುವವರಿಗೆ ಇಂಗ್ಲಿಶ್ ಪದಗಳ ತಿಳಿವು ನೆರವಾಗಬಲ್ಲುದು; ಆದರೆ, ಸಂಸ್ಕ್ರುತ ಪದಗಳ ತಿಳಿವು ಯಾವ ನೆರವನ್ನೂ ನೀಡಲಾರವು.
ಅರಿಮೆಯ ಬರಹಗಳಿಂದ ತಿಳಿವನ್ನು ಪಡೆಯುವುದು ಮಾತ್ರವಲ್ಲದೆ, ಅದನ್ನು ಒರೆಗೆ ಹಚ್ಚುವ ಮತ್ತು ಅವುಗಳಲ್ಲಿಲ್ಲದ ಹೊಸ ತಿಳಿವನ್ನು ಕಂಡುಹಿಡಿಯುವ ಕೆಲಸವನ್ನೂ ನಾವಿಂದು ನಡೆಸಬೇಕಾಗಿದೆ. ಹೆಚ್ಚು ಹೆಚ್ಚು ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಬಳಸಿರುವ ಬರಹಗಳನ್ನು ಕಶ್ಟಪಟ್ಟು ಅರಿಯುವುದರಲ್ಲಿಯೇ ನಮ್ಮ ಸಮಯವೆಲ್ಲ ಕಳೆದುಹೋಗುತ್ತದೆ. ಅವನ್ನು ಒರೆಗೆ ಹಚ್ಚುವ ಮತ್ತು ಹೊಸ ತಿಳಿವನ್ನು ಕಂಡುಹಿಡಿಯುವ ಕೆಲಸದಲ್ಲೂ ನಮ್ಮ ಕಲಿವಿಗರು ತೊಡಗಬೇಕಿದ್ದಲ್ಲಿ, ಅರಿಮೆಯ ಪದಗಳಲ್ಲಿ ಹೆಚ್ಚಿನವೂ ಕನ್ನಡದವೇ ಆಗಿರಬೇಕು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)