Posts Tagged ‘ಸೊಲ್ಲು’

ಕನ್ನಡ ನುಡಿಯ ಸೊಗಡು

ನುಡಿಯರಿಮೆಯ ಇಣುಕುನೋಟ – 33

ಎಲ್ಲಾ ನುಡಿಗಳಿಗೂ ಅವುಗಳದೇ ಆದ ಒಂದು ಸೊಗಡುಎಂಬುದಿರುತ್ತದೆ. ಇದನ್ನು ಬರಹಗಳು ಹೆಚ್ಚು ಕೆಡದಂತೆ ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವು ತಮ್ಮ ಜೀವಂತಿಕೆಯನ್ನು ಕಳೆದುಕೊಳ್ಳುತ್ತವೆ, ಮತ್ತು ಸಾಮಾನ್ಯ ಜನರಿಂದ ದೂರವಾಗುತ್ತವೆ. ಅಂತಹ ಬರಹಗಳನ್ನು ಕಲಿಯುವ ಮತ್ತು ಬಳಸುವ ಕೆಲಸವೂ ಆ ನುಡಿಯನ್ನಾಡುವ ಜನರಿಗೆ ತುಂಬಾ ತೊಡಕಿನದಾಗುತ್ತದೆ. ನುಡಿಗಳಿಗಿರುವ ಈ ಸೊಗಡು ಅವುಗಳ ಪದಗಳಲ್ಲಿ ಬರುವ ಉಲಿಗಳಲ್ಲಿ, ಉಲಿಗಳ ಓರಣಗಳಲ್ಲಿ, ಪದಗಳಿಗೆ ಒಟ್ಟು(ಪ್ರತ್ಯಯ)ಗಳನ್ನು ಇಲ್ಲವೇ ಬೇರೆ ಪದಗಳನ್ನು ಸೇರಿಸಿದಾಗ ಅವುಗಳ ಉಲಿಗಳಲ್ಲಿ ನಡೆಯುವ ಮಾರ್ಪಾಡುಗಳಲ್ಲಿ, ಪದಗಳನ್ನು ಸೇರಿಸಿ ಬೇರೆ ಪದಗಳನ್ನು ಉಂಟುಮಾಡುವ ಬಗೆಗಳಲ್ಲಿ, ಮತ್ತು ಪದಗಳಿಂದ ಪದಕಂತೆಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವ ಬಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಕನ್ನಡಕ್ಕೂ ಇಂತಹ ತನ್ನದೇ ಆದ ಒಂದು ಸೊಗಡಿದೆ, ಮತ್ತು ಅದು ಸಂಸ್ಕ್ರುತ, ಹಿಂದಿ, ಇಂಗ್ಲಿಶ್ ಮೊದಲಾದ ಬೇರೆ ನುಡಿಗಳಿಗಿರುವ ಸೊಗಡಿಗಿಂತ ತೀರ ಬೇರಾಗಿದೆ; ಕನ್ನಡದ ಉಲಿಗಳು, ಅವುಗಳ ಓರಣಗಳು, ಅವುಗಳ ಸೇರಿಕೆಯ ಮಾರ್ಪಾಡುಗಳು, ಕನ್ನಡದಲ್ಲಿ ಪದ, ಪದಕಂತೆ ಮತ್ತು ಸೊಲ್ಲುಗಳನ್ನು ಉಂಟುಮಾಡುವ ಬಗೆಗಳು ಮೊದಲಾದುವನ್ನು ಸಂಸ್ಕ್ರುತದಂತಹ ಬೇರೆ ನುಡಿಗಳಲ್ಲಿ ಕಾಣಿಸುವ ಬಗೆಗಳೊಂದಿಗೆ ಹೋಲಿಸಿ ನೋಡಿದಾಗ, ನಿಜಕ್ಕೂ ಕನ್ನಡದ ಸೊಗಡು ಎಂತಹದು ಎಂಬುದು ಗೊತ್ತಾಗುತ್ತದೆ.

(1) ಸಂಸ್ಕ್ರುತ ಪದಗಳಲ್ಲಿ ಬಳಕೆಯಾಗುವ ಖಛಠಥಫ ಮತ್ತು ಘಝಢಧಭಗಳೆಂಬ ಒತ್ತುಸಿರಿನ ಬರಿಗೆಗಳು (ಮಹಾಪ್ರಾಣಾಕ್ಶರಗಳು) ಕನ್ನಡ ಪದಗಳಲ್ಲಿಲ್ಲ; ಆದರೆ, ಸಂಸ್ಕ್ರುತ ಪದಗಳಲ್ಲಿ ಕಾಣಿಸದಿರುವ ಗಿಡ್ಡ ಎಕಾರ ಮತ್ತು ಒಕಾರಗಳು ಕನ್ನಡ ಪದಗಳಲ್ಲಿವೆ. ಸಂಸ್ಕ್ರುತದಲ್ಲಿರುವ ಋಕಾರ ಮತ್ತು ಷಕಾರಗಳು ಕನ್ನಡದಲ್ಲಿಲ್ಲ; ಆದರೆ, ಸಂಸ್ಕ್ರುತದಲ್ಲಿಲ್ಲದ ಎಯ್, ಒಯ್, ಉಯ್, ಆಯ್, ಒವ್, ಇವ್ ಮೊದಲಾದ ಹಲವು ಸ್ವರ ಮತ್ತು ಯಕಾರ ಇಲ್ಲವೇ ವಕಾರಗಳ ಜೋಡಿಗಳು ಕನ್ನಡದಲ್ಲಿವೆ.

(2) ಈ ಎರಡು ನುಡಿಗಳಿಗೂ ಸಮಾನವಾಗಿರುವ ಅಕ್ಶರಗಳು ಹಲವಿವೆಯಾದರೂ ಅವು ಒಂದೇ ರೀತಿಯಾಗಿ ಬಳಕೆಯಾಗುವುದಿಲ್ಲ. ಸಂಸ್ಕ್ರುತದಲ್ಲಿ ಒತ್ತಕ್ಶರಗಳಿಂದ ಮೊದಲಾಗುವ ಪದಗಳು ಸಾಕಶ್ಟಿವೆ (ಕ್ರಾಂತಿ, ಕ್ಷಮೆ, ಜ್ಞಾನ, ಜ್ಯೋತಿ, ದ್ವೇಷ, ಮ್ಲೇಚ್ಛ). ಆದರೆ ಕನ್ನಡದವೇ ಆದ ಪದಗಳಲ್ಲಿ ಆ ರೀತಿ ಒತ್ತಕ್ಶರಗಳು ಪದಗಳ ಮೊದಲಿಗೆ ಬರುವುದಿಲ್ಲ. ಪದಗಳ ನಡುವೆ ಬರಬಲ್ಲ ಒತ್ತಕ್ಶರಗಳಲ್ಲೂ ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ವ್ಯತ್ಯಾಸವಿದೆ. ಸಂಸ್ಕ್ರುತದ ಭಕ್ತ, ಅಜ್ಞಾನ, ವತ್ಸ, ಮತ್ಸ್ಯ ಮೊದಲಾದ ಪದಗಳಲ್ಲಿ ನಡುವೆ ಬಂದಿರುವ ಕ್ತ್, ಜ್ಞ್, ತ್ಸ್, ತ್ಸ್ಯ್ ಮೊದಲಾದ ಹಲವು ಬಗೆಯ ಒತ್ತಕ್ಶರಗಳು ಕನ್ನಡ ಪದಗಳಲ್ಲಿ ಕಾಣಿಸುವುದಿಲ್ಲ.

(3) ಎರಡು ಇಲ್ಲವೇ ಹೆಚ್ಚು ಪದಗಳನ್ನು ಒಟ್ಟುಸೇರಿಸಿ ಹೊಸ ಪದಗಳನ್ನು ತಯಾರಿಸುವ ಹೊಲಬುಗಳು ಈ ಎರಡು ನುಡಿಗಳಲ್ಲಿ ಬೇರೆ ಬೇರಾಗಿವೆ. ಸಂಸ್ಕ್ರುತದಲ್ಲಿ ಸಾಮಾನ್ಯವಾಗಿ ಹೆಸರುಪದಗಳನ್ನು ಮಾತ್ರ ಇಂತಹ ರಚನೆಗಳಲ್ಲಿ ಬಳಸಲಾಗುತ್ತದೆ; ಆದರೆ, ಕನ್ನಡದಲ್ಲಿ ಹೆಸರುಪದ (ತಲೆಗೂದಲು, ಬಯಲಾಟ), ಎಸಕಪದ (ಚುಚ್ಚುಮದ್ದು, ಕಡೆಗೋಲು) ಮತ್ತು ಪರಿಚೆಪದಗಳೆಂಬ (ದೊಡ್ಡಮ್ಮ, ಬಿಸಿನೀರು) ಮೂರು ಬಗೆಯ ಪದಗಳನ್ನೂ ಇಂತಹ ರಚನೆಗಳಲ್ಲಿ ಬಳಸಲು ಬರುತ್ತದೆ.

(4) ಕನ್ನಡದಲ್ಲಿ ಸಾಮಾನ್ಯವಾಗಿ ಎರಡಕ್ಕಿಂತ ಹೆಚ್ಚು ಪದಗಳನ್ನು ಈ ರೀತಿ ಜೋಡಿಸುವುದು ಅಪರೂಪ; ಆದರೆ, ಸಂಸ್ಕ್ರುತದಲ್ಲಿ ಮೂರು-ನಾಲ್ಕು ಪದಗಳನ್ನು ಸೇರಿಸಿ ರಚಿಸಿರುವ ಜೋಡುಪದಗಳೂ ಬೇಕಾದಶ್ಟಿವೆ (ಪೂರ್ವಜನ್ಮಕೃತಂ, ಮತ್ತಮಾತಂಗಗಾಮಿ, ಸಕಲನೀತಿಶಾಸ್ತ್ರತತ್ವಜ್ಞಃ).

(5) ಒಟ್ಟು(ಪ್ರತ್ಯಯ)ಗಳನ್ನು ಸೇರಿಸಿ ಹೊಸ ಪದಗಳನ್ನು ತಯಾರಿಸುವ ವಿಶಯದಲ್ಲೂ ಕನ್ನಡ ಸಂಸ್ಕ್ರುತಕ್ಕಿಂತ ಬೇರಾಗಿದೆ. ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚು ಒಟ್ಟುಗಳನ್ನು ಸೇರಿಸಿ ರಚಿಸಿರುವ ಪದಗಳು ತುಂಬಾ ಕಡಿಮೆ; ಆದರೆ, ಸಂಸ್ಕ್ರುತದ ಹೆಚ್ಚಿನ ಪದಗಳಲ್ಲೂ ಎರಡು ಇಲ್ಲವೇ ಹೆಚ್ಚು ಒಟ್ಟುಗಳು ಸೇರಿರುವುದನ್ನು ಕಾಣಬಹುದು (ಅ-ಜ್ಞಾನ್-ಇ, ಕರ್-ತೃ-ತ್ವ). ಕನ್ನಡದಲ್ಲಿ ಒಟ್ಟುಗಳನ್ನು ಪದಗಳ ಕೊನೆಯಲ್ಲಿ ಮಾತ್ರ ಬಳಸಲು ಬರುತ್ತದೆ; ಆದರೆ, ಸಂಸ್ಕ್ರುತದಲ್ಲಿ ಅವನ್ನು ಪದಗಳ ಮೊದಲಿಗೂ ಬಳಸಬಹುದು (ಸತ್ಯ-ಅಸತ್ಯ, ಸ್ವಾಗತ-ಸುಸ್ವಾಗತ, ಜೀವಿ-ನಿರ್ಜೀವಿ, ರಕ್ಷಣೆ-ಸಂರಕ್ಷಣೆ).

(6) ಪದಕ್ಕೆ ಪದ ಸೇರಿದಾಗ, ಇಲ್ಲವೇ ಪದಕ್ಕೆ ಒಟ್ಟು ಸೇರಿದಾಗ, ಅವುಗಳಲ್ಲಿ ನಡೆಯುವ ಸೇರಿಕೆಯ ಬದಲಾವಣೆಗಳು ಕನ್ನಡ ಮತ್ತು ಸಂಸ್ಕ್ರುತ ನುಡಿಗಳಲ್ಲಿ ಬೇರೆ ಬೇರಾಗಿವೆ: ಇಕಾರದ ಅನಂತರ ಅಕಾರ ಬಂದಾಗ, ಕನ್ನಡದಲ್ಲಿ ಇಕಾರ ಬಿದ್ದುಹೋಗಿ ಅಕಾರ ಉಳಿಯುತ್ತದೆ (ಅಲ್ಲಿ+ಅಲ್ಲಿ=ಅಲ್ಲಲ್ಲಿ); ಆದರೆ, ಸಂಸ್ಕ್ರುತದಲ್ಲಿ ಇಕಾರ ಯಕಾರವಾಗುತ್ತದೆ (ಅತಿ+ಅಲ್ಪ=ಅತ್ಯಲ್ಪ). ಅಕಾರದ ಅನಂತರ ಇಕಾರ ಬಂದರೂ ಕನ್ನಡದಲ್ಲಿ ಇಂತಹದೇ ಮೊದಲನೆಯ ಸ್ವರ ಬಿದ್ದುಹೋಗಿ ಎರಡನೆಯದು ಉಳಿಯುತ್ತದೆ (ಅಲ್ಲಿಂದ+ಇಳಿದು=ಅಲ್ಲಿಂದಿಳಿದು); ಆದರೆ, ಸಂಸ್ಕ್ರುತದಲ್ಲಿ ಅವೆರಡೂ ಬಿದ್ದುಹೋಗಿ ಹೊಸದೊಂದು ಸ್ವರ (ಏಕಾರ) ಬಂದುಸೇರುತ್ತದೆ (ರಾಜ+ಇಂದ್ರ=ರಾಜೇಂದ್ರ).

(7) ಒಟ್ಟುಗಳನ್ನು ಸೇರಿಸಿ ಹೊಸಪದಗಳನ್ನು ರಚಿಸುವಲ್ಲಿ ಕನ್ನಡ ಮತ್ತು ಸಂಸ್ಕ್ರುತಗಳ ನಡುವೆ ಹಲವು ಮುಕ್ಯವಾದ ವ್ಯತ್ಯಾಸಗಳಿವೆ: ಸಂಸ್ಕ್ರುತ ಪದಗಳಿಗೆ ಯ ಇಲ್ಲವೇ ಇಕ ಒಟ್ಟನ್ನು ಸೇರಿಸಿದಾಗ, ಹಲವು ತೊಡಕಾದ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಪದಗಳ ಮೊದಲಿಗೆ ಬರುವ ಗಿಡ್ಡ ಅಕಾರ ಉದ್ದ ಆ ಎಂದಾಗುವುದು (ಚಪಲ-ಚಾಪಲ್ಯ, ಪ್ರಮಾಣ-ಪ್ರಾಮಾಣಿಕ), ಇ, ಈ ಮತ್ತು ಏ ಸ್ವರಗಳು ಐ ಎಂದಾಗುವುದು (ನಿಸರ್ಗ-ನೈಸರ್ಗಿಕ, ದೀನ-ದೈನ್ಯ, ಚೇತನ-ಚೈತನ್ಯ), ಉ, ಊ ಮತ್ತು ಓ ಸ್ವರಗಳು ಔ ಎಂದಾಗುವುದು (ಸುಖ-ಸೌಖ್ಯ, ಪೂರ್ವಾಹ್ನ-ಪೌರ್ವಾಹ್ನಿಕ, ಲೋಕ-ಲೌಕಿಕ) ಮೊದಲಾದವು ಇಂತಹ ಕೆಲವು ಸಂಸ್ಕ್ರುತದ ನಿಯಮಗಳು.

ಆದರೆ, ಕನ್ನಡದಲ್ಲಿ ಒಟ್ಟುಗಳನ್ನು ಸೇರಿಸಿ ಪದಗಳನ್ನು ರಚಿಸುವಲ್ಲಿ ಇವಕ್ಕಿಂತ ತೀರ ಬೇರಾಗಿರುವ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಇವು (ಕನ್ನಡಿಗರ ಮಟ್ಟಿಗೆ) ಸಂಸ್ಕ್ರುತದ ಸೇರಿಕೆಯ ನಿಯಮಗಳಶ್ಟು ತೊಡಕಿನವಾಗಿಲ್ಲ. ಕನ್ನಡ ಪದಗಳಿಗೆ ಇಕೆ ಒಟ್ಟನ್ನು ಸೇರಿಸಿದಾಗ ಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ (ಬಳಲು-ಬಳಲಿಕೆ, ಹೊಗಳು-ಹೊಗಳಿಕೆ, ಅಂಜು-ಅಂಜಿಕೆ) ಮತ್ತು ಪದಗಳ ಕೊನೆಯ ಇಕಾರ ಹಾಗೆಯೇ ಉಳಿದು ಇಕೆ ಒಟ್ಟಿನ ಮೊದಲ ಸ್ವರ ಬಿದ್ದುಹೋಗುತ್ತದೆ (ಇರಿ-ಇರಿಕೆ, ತಿರಿ-ತಿರಿಕೆ, ಇಳಿ-ಇಳಿಕೆ).

ಕನ್ನಡದ ಸೊಗಡು ಸಂಸ್ಕ್ರುತದ ಸೊಗಡಿಗಿಂತ ತೀರ ಬೇರಾದುದು ಎಂಬುದನ್ನು ಅವು ಬಳಸುವ ಪದಗಳ ಸ್ವರೂಪದಲ್ಲಿ ಕಾಣಿಸುವಂತಹ ಈ ವ್ಯತ್ಯಾಸಗಳು ತುಂಬಾ ಸ್ಪಶ್ಟವಾಗಿ ತೋರಿಸಿಕೊಡುತ್ತವೆ. ಕನ್ನಡ ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಅವುಗಳಲ್ಲಿ ಸ್ವಲ್ಪವೂ ಬದಲಾವಣೆಯನ್ನು ಮಾಡದೆ ಬಳಸಿದಲ್ಲಿ ಅಂತಹ ಬರಹ ತನ್ನದೇ ಆದ ಸೊಗಡನ್ನು ಪೂರ್ತಿ ಕಳೆದುಕೊಳ್ಳುತ್ತದೆ. ಈ ರೀತಿ ತನ್ನ ಹುಟ್ಟುಸೊಗಡನ್ನು ಕಳೆದುಕೊಳ್ಳುವ ಬರಹ ತನ್ನತನವನ್ನೂ ಕಳೆದುಕೊಳ್ಳುತ್ತದೆ, ಮತ್ತು ಅದರ ಜೀವಂತಿಕೆ ನಶ್ಟವಾಗಿ ಅದರಲ್ಲಿ ಕ್ರುತಕತೆ ತುಂಬಿಕೊಳ್ಳುತ್ತದೆ. ಇದಲ್ಲದೆ, ಅಂತಹ ಬರಹಕ್ಕೂ ಹೆಚ್ಚಿನ ಕನ್ನಡಿಗರ ಮಾತಿಗೂ ನಡುವೆ ದೊಡ್ಡ ಕಂದಕವೇರ್ಪಟ್ಟು, ಅದು ಅವರೆಲ್ಲರಿಂದಲೂ ದೂರವಾಗುತ್ತದೆ. ಯಾಕೆಂದರೆ, ಬರಹ ಆ ರೀತಿ ಬದಲಾದಾಗಲೂ ಜನರ ಆಡುನುಡಿ ಅದಕ್ಕನುಗುಣವಾಗಿ ಬದಲಾಗುವುದಿಲ್ಲ. ಅದು ತನ್ನ ಪದಸ್ವರೂಪವನ್ನು ಮತ್ತು ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.

ಇದಕ್ಕೆ ಕಾರಣವೇನೆಂದರೆ, ಆಡುನುಡಿಯನ್ನು ಮಕ್ಕಳು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುತ್ತಾರೆ; ಅದನ್ನು ಮಕ್ಕಳಿಗೆ ಯಾರೂ ಕಲಿಸಿಕೊಡಬೇಕಾಗಿಲ್ಲ. ಹಾಗಾಗಿ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮಾರೆಡೆಗೊಳ್ಳುವಾಗ, ಅದು ತಿರುತಿರುಗಿ ಹೊಸತನವನ್ನು ಮತ್ತು ಜೀವಂತಿಕೆಯನ್ನು ಪಡೆಯುತ್ತಿರುತ್ತದೆ. ಆದರೆ, ಬರಹವನ್ನು ಮಕ್ಕಳು ಶಾಲೆಯಲ್ಲಿ ದೊಡ್ಡವರ ನೆರವಿನಿಂದ ಕಲಿಯಬೇಕಾಗುತ್ತದೆ; ಅದನ್ನು ಅವರು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುವುದಿಲ್ಲ.

ಹಾಗಾಗಿ, ಬರಹಗಾರರು ಕಾಲದಿಂದ ಕಾಲಕ್ಕೆ ಅದನ್ನು ಹೊಸದಾಗಿಸಿಕೊಳ್ಳದಿದ್ದರೆ, ಮತ್ತು ಆಡುನುಡಿಗೆ ಹತ್ತಿರವಾಗುವಂತೆ ಮಾರ್ಪಡಿಸಿಕೊಳ್ಳದಿದ್ದರೆ, ಅದು ಕ್ರುತಕವಾಗುತ್ತಾ ಹೋಗಿ ತನ್ನ ಹುಟ್ಟುಸೊಗಡನ್ನು ಮತ್ತು ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ. ಕನ್ನಡದಲ್ಲಿ ಕತೆ-ಕಾದಂಬರಿಗಳನ್ನು ಬರೆಯುವವರು ತಮ್ಮ ಬರಹ ಈ ರೀತಿ ಕ್ರುತಕವಾಗದಂತೆ ನೋಡಿಕೊಳ್ಳುತ್ತಾರೆ; ಆದರೆ, ಬೇರೆ ಬಗೆಯ ಬರಹಗಳನ್ನು ಬರೆಯುವವರು ಇದನ್ನು ಮಾಡಲು ಹೋಗದುದರಿಂದಾಗಿ ಇವತ್ತು ಅಂತಹ ಬರಹಗಳು ತುಂಬಾ ಕ್ರುತಕವಾಗಿದ್ದು ಸಾಮಾನ್ಯ ಜನರಿಗೆ ತಿಳಿಯದ ಹಾಗಾಗಿವೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಸೊಲ್ಲರಿಮೆಯಲ್ಲಿ ತರ‍್ಕಕ್ಕೆ ನೆಲೆಯಿಲ್ಲ

ನುಡಿಯರಿಮೆಯ ಇಣುಕುನೋಟ – 31

ಕೆಲಸ ಮಾಡಿದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ, ಇಲ್ಲವೇ ‘ಕೆಲಸ ಮಾಡದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ? ಕೆಲವರು ಮೊದಲನೆಯ ಸೊಲ್ಲು ಸರಿಯೆಂದು ಹೇಳುತ್ತಾರೆ, ಮತ್ತು ಬೇರೆ ಕೆಲವರು ಎರಡನೆಯ ಸೊಲ್ಲು ಸರಿಯೆಂದು ಹೇಳುತ್ತಾರೆ. ಇಲ್ಲಿ ‘ಹಣ ಕೊಡುವುದು’ ಎಂಬ ಒಂದು ಎಸಕಕ್ಕೆ (ಕ್ರಿಯೆಗೆ) ‘ಕೆಲಸ ಮಾಡುವುದು’ ಎಂಬ ಇನ್ನೊಂದು ಎಸಕವನ್ನು ಬೇಡಿಕೆಯಾಗಿ ಮಾಡಲಾಗಿದೆ. ಇದನ್ನೇ ‘ಕೆಲಸ ಮಾಡದಿದ್ದರೆ ಹಣ ಸಿಗುವುದಿಲ್ಲ’ ಎಂಬುದಾಗಿ ಇನ್ನೊಂದು ಬಗೆಯಲ್ಲೂ ಹೇಳಲು ಬರುತ್ತದೆ.

ಈ ಎರಡನೇ ಬಗೆಯ ಸೊಲ್ಲಿನಲ್ಲಿ ಅಲ್ಲಗಳೆಯುವ ಹುರುಳಿರುವ ‘ಮಾಡದೆ (ಇದ್ದರೆ)’ ಎಂಬ ಪದವನ್ನೇ ಬಳಸಬೇಕಾಗುತ್ತದೆ; ಆದರೆ, ಅದರೊಂದಿಗೆ ‘ಹೊರತು’ ಎಂಬುದನ್ನು ಬಳಸಿರುವ ಮೊದಲನೇ ಬಗೆಯ ಸೊಲ್ಲಿನಲ್ಲಿ ಅಲ್ಲಗಳೆಯುವ ಹುರುಳಿರುವ ‘ಮಾಡದ’ ಎಂಬುದನ್ನು ಬಳಸಬೇಕೇ, ಇಲ್ಲವೇ ‘ಮಾಡಿದ’ ಎಂಬುದನ್ನು ಬಳಸಬೇಕೇ ಎಂಬುದೇ ಇಲ್ಲಿ ನಮ್ಮ ಮುಂದಿರುವ ಕೇಳ್ವಿ.

‘ಹೊರತು’ ಎಂಬ ಪದಕ್ಕೆ ಅಲ್ಲಗಳೆಯುವ ಹುರುಳಿದೆ; ಹಾಗಾಗಿ, ಅದರೊಂದಿಗೆ ‘ಮಾಡದ’ ಎಂಬ ಇನ್ನೊಂದು ಅಲ್ಲಗಳೆಯುವ ಹುರುಳಿರುವ ಪದವನ್ನು ಬಳಸಿದಲ್ಲಿ, ಒಂದು ಅಲ್ಲಗಳೆತ ಇನ್ನೊಂದು ಅಲ್ಲಗಳೆತವನ್ನು ಹೊಡೆದು ಹಾಕುವುದರಿಂದ, ಒಟ್ಟಾರೆಯಾಗಿ ಅಲ್ಲಗಳೆಯುವ ಹುರುಳು ಇಲ್ಲವಾಗುತ್ತದೆ, ಮತ್ತು ಈ ಕಾರಣಕ್ಕಾಗಿ ‘ಮಾಡದ ಹೊರತು’ ಎಂಬುದರ ಬಳಕೆ ಸರಿಯಲ್ಲ ಎಂಬುದಾಗಿ ಮೊದಲನೆಯ ಸೊಲ್ಲೇ ಸರಿ ಎಂದು ಹೇಳುವವರು ಅದಕ್ಕೆ ಉನ್ನೋಜೆಯ (ತರ‍್ಕದ) ಬೆಂಬಲವನ್ನು ಕೊಡಬಹುದು.

ಆದರೆ, ಇಲ್ಲಿ ತೊಡಕೇನೆಂದರೆ, ಸೊಲ್ಲರಿಮೆಯ ಕಟ್ಟಲೆಗಳು ಉನ್ನೋಜೆಯ ಕಟ್ಟಲೆಗಳಿಗೆ ಬೆಲೆ ಕೊಡಲೇ ಬೇಕೆಂದೇನೂ ಇಲ್ಲ. ಒಂದು ನುಡಿಯಲ್ಲಿ ಎಂತಹ ಸೊಲ್ಲು ಸರಿ ಎಂಬುದು ಎಂತಹದು ಬಳಕೆಯಲ್ಲಿದೆ ಎಂಬುದರ ಮೇಲೆ ಮಾತ್ರ ಅವಲಂಬಿಸಿರುತ್ತದೆ. ಕಿಟ್ಟೆಲ್ ಡಿಕ್ಶನರಿಯಲ್ಲಿ ಈ ಎರಡು ಬಗೆಯ ಸೊಲ್ಲುಗಳನ್ನೂ ಕೊಡಲಾಗಿದೆ; ಎಂದರೆ, ಈ ಎರಡು ಬಗೆಯ ಸೊಲ್ಲುಗಳೂ ಕನ್ನಡದಲ್ಲಿ ಬಳಕೆಯಲ್ಲಿವೆ. ಹಾಗಾಗಿ, ಎರಡೂ ಸರಿಯೆಂದೇ ಹೇಳಬೇಕಾಗುತ್ತದೆ.

ಉನ್ನೋಜೆಯ ಕಟ್ಟಲೆಗಳಿಗೂ ಸೊಲ್ಲರಿಮೆಯ ಕಟ್ಟಲೆಗಳಿಗೂ ನಡುವೆ ಹೊಂದಾಣಿಕೆಯಿಲ್ಲದಿರುವುದನ್ನು ಹಲವಾರು ಕಡೆಗಳಲ್ಲಿ ಕಾಣಬಹುದು. ‘ನಾನು ಅವನಿಗೆ ಹೊಡೆದಿದ್ದೇನೆ’ ಎಂಬುದೂ ‘ನಾನು ಅವನಿಗೆ ಹೊಡೆಯಲಿಲ್ಲವೆಂದಿಲ್ಲ’ ಎಂಬುದೂ ಉನ್ನೋಜೆಯ ಮಟ್ಟಿಗೆ ಒಂದೇ; ಆದರೆ, ಮಾತಿನಲ್ಲಿ ಅವು ಒಂದೇ ಅಲ್ಲ; ಯಾಕೆಂದರೆ, ಆ ಎರಡು ಸೊಲ್ಲುಗಳ ಹುರುಳಿನಲ್ಲಿ ವ್ಯತ್ಯಾಸವಿದೆ: ಅವುಗಳಲ್ಲಿ ಎರಡನೆಯ ಸೊಲ್ಲಿಗೆ ಮೊದಲನೆಯದು ತಿಳಿಸದಂತಹ ಕೆಲವು ಹೆಚ್ಚಿನ ಹುರುಳುಗಳಿವೆ; ‘ಹೊಡೆದಿದ್ದೇನೆ; ಆದರೆ, ಅದು ಅವನ ಒಳ್ಳೆಯದಕ್ಕೆ’ ಎಂಬುದು ಇಂತಹ ಒಂದು ಹೆಚ್ಚಿನ ಹುರುಳು.

ಅಲ್ಲಗಳೆತವನ್ನು ಒತ್ತಿಹೇಳುವುದಕ್ಕಾಗಿಯೂ ಎರಡು ಅಲ್ಲಗಳೆತಗಳನ್ನು ಒಟ್ಟಿಗೆ ಬಳಸಲಾಗುತ್ತದೆ; ‘ಬೇಡ ಬೇಡ’ ಇಲ್ಲವೇ ‘ಬೇಡವೇ ಬೇಡ’ ಎನ್ನುವುದಕ್ಕೆ ‘ಬೇಕು’ ಎಂಬ ಹುರುಳಿಲ್ಲ; ‘ಬೇಡ’ ಎಂಬುದನ್ನೇ ಒತ್ತಿಹೇಳುವ ಹುರುಳಿದೆ. ‘ಮಾಡದ ಹೊರತು’ ಎಂಬುದರ ಬಳಕೆಯಲ್ಲಿಯೂ ಇಂತಹದೇ ಎರಡು ಅಲ್ಲಗಳೆತಗಳ ಕೂಡಿಕೆ ನಡೆದಿರಬಹುದಲ್ಲವೇ?

ಹಿಂದೆ, ಈಗ, ಮತ್ತು ಮುಂದೆ ಎಂಬುದಾಗಿ ಮೂರು ಹೊತ್ತುಗಳನ್ನು ತಿಳಿಸುವ ಎಸಕ(ಕ್ರಿಯಾ)ರೂಪಗಳು ನುಡಿಗಳಲ್ಲಿರಬೇಕು ಎಂಬುದಾಗಿ ಹಿಂದಿನ ಸೊಲ್ಲರಿಗರು ಒಂದು ಉನ್ನೋಜೆಯ ಕಟ್ಟಲೆಯನ್ನು ತಮ್ಮ ಮುಂದಿರಿಸಿಕೊಂಡಿರುವ ಹಾಗೆ ಕಾಣಿಸುತ್ತದೆ; ಆದರೆ, ಕನ್ನಡದಲ್ಲಿ ‘ಇರು’ ಎಂಬ ಒಂದು ಎಸಕಪದಕ್ಕೆ ಮಾತ್ರ ‘ಇದ್ದ’, ‘ಇದ್ದಾನೆ’, ಮತ್ತು ‘ಇರುತ್ತಾನೆ’ ಎಂಬುದಾಗಿ ಮೂರು ಬಗೆಯ ಹೊತ್ತುಗಳನ್ನು ತಿಳಿಸುವ ರೂಪಗಳಿವೆ.

ಉಳಿದ ಎಸಕಪದಗಳಿಗೆಲ್ಲ ಹಿಂದಿನ ಮತ್ತು ಮುಂದಿನ ಎಸಕಗಳನ್ನು ತಿಳಿಸಬಲ್ಲ ‘ಬಂದ’ ಮತ್ತು ‘ಬರುತ್ತಾನೆ’ ಇಲ್ಲವೇ ‘ಹೋದ’ ಮತ್ತು ‘ಹೋಗುತ್ತಾನೆ’ ಎಂಬಂತಹ ಎರಡೆರಡು ಹೊತ್ತಿನ ರೂಪಗಳು ಮಾತ್ರ ಇವೆ. ಇವುಗಳಲ್ಲಿ ಎರಡನೆಯ ರೂಪಕ್ಕೆ ಈಗಿನ ಎಸಕವನ್ನು ಮಾತ್ರವಲ್ಲದೆ ಮುಂದಿನ ಎಸಕವನ್ನು ತಿಳಿಸುವ ಹುರುಳೂ ಇದೆ; ‘ನನಗೆ ಆ ರೀತಿ ಅನಿಸುತ್ತದೆ’ ಎಂಬ ಸೊಲ್ಲಿನಲ್ಲಿ ಅದು ನನ್ನಲ್ಲಿ ಈಗ ಇರುವ ಅನಿಸಿಕೆಯನ್ನು ತಿಳಿಸುತ್ತದೆ, ಮತ್ತು ‘ಅವನು ನಾಳೆ ಬರುತ್ತಾನೆ’ ಎಂಬ ಸೊಲ್ಲಿನಲ್ಲಿ ಅದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸುತ್ತದೆ.

ನುಡಿಯಲ್ಲಿಲ್ಲದಿರುವ ಮೂರು ಹೊತ್ತುಗಳನ್ನು ಕನ್ನಡದ ಎಸಕಪದಗಳಲ್ಲಿ ಕಾಣಿಸುವುದಕ್ಕಾಗಿ ಸೊಲ್ಲರಿಗರು ‘ಬರುತ್ತಾನೆ’ ಎಂಬುದು ಈಗ ನಡೆಯುವ ಎಸಕವನ್ನು ತಿಳಿಸುತ್ತದೆ, ಮತ್ತು ‘ಬರುವನು’ ಎಂಬುದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸುತ್ತದೆ ಎಂಬಂತಹ ಕಲ್ಪನೆಗೆ ಮೊರೆಹೋಗಿದ್ದಾರೆ. ಆದರೆ, ಉನ್ನೋಜೆಯ ಕಟ್ಟಲೆಯನ್ನು ನುಡಿಯ ಮೇಲೆ ಹೊರಿಸಲು ಹೊರಟಿರುವ ಈ ಪ್ರಯತ್ನ ನಿಜಕ್ಕೂ ತಪ್ಪಾಗಿದೆ. ಯಾಕೆಂದರೆ, ‘ಬರುತ್ತಾನೆ’ ಎಂಬುದು ಮುಂದೆ ನಡೆಯಲಿರುವ ಎಸಕವನ್ನು ತಿಳಿಸಬಲ್ಲುದು, ಮತ್ತು ‘ಬರುವನು’ ಎಂಬುದನ್ನು ಕನ್ನಡ ಬರಹಗಳಲ್ಲಿ ತುಂಬಾ ಅಪರೂಪವಾಗಿ ಬಳಸಲಾಗುತ್ತಿದ್ದು, ಅದರ ಹುರುಳಿಗೂ ‘ಬರುತ್ತಾನೆ’ ಎಂಬುದರ ಹುರುಳಿಗೂ ನಡುವಿರುವ ವ್ಯತ್ಯಾಸ ಹೊತ್ತಿನ ವ್ಯತ್ಯಾಸವೇ ಅಲ್ಲ. ಕೆಲವೆಡೆಗಳಲ್ಲಿ ಬರುವನು ಎಂಬುದಕ್ಕೆ ಬಳಕೆಯ ಹುರುಳಿದೆ.

‘ಅಕ್ಕ’ ಎಂಬ ಪದವನ್ನು ಬರಹದಲ್ಲಿ ಬಳಸುವಾಗ ‘ಅಕ್ಕಳನ್ನು’, ‘ಅಕ್ಕಳಿಗೆ’ ಎಂಬಂತಹ ರೂಪಗಳನ್ನು ಬಳಸಬೇಕೇ ಇಲ್ಲವೇ ‘ಅಕ್ಕನನ್ನು’, ‘ಅಕ್ಕನಿಗೆ’ ಎಂಬಂತಹ ರೂಪಗಳನ್ನು ಬಳಸಬೇಕೇ ಎಂಬ ವಿಶಯದಲ್ಲಿಯೂ ಹಲವರಿಗೆ ಗೊಂದಲವಿರುವ ಹಾಗೆ ಕಾಣಿಸುತ್ತದೆ; ‘ಅಕ್ಕ’ ಎಂಬ ಪದ ಒಬ್ಬ ಹೆಂಗುಸನ್ನು ಗುರುತಿಸುವ ಕಾರಣ, ಅದರ ಬಳಿಕ ನಕಾರದ ಬದಲು ಳಕಾರವನ್ನು ಬಳಸಬೇಕೆಂಬ ಅನಿಸಿಕೆಯೇ ಈ ಗೊಂದಲಕ್ಕೆ ಕಾರಣ. ಅಕಾರದಲ್ಲಿ ಕೊನೆಗೊಳ್ಳುವ ‘ಕಿರಣ’, ‘ರಮ್ಯ’ ಮೊದಲಾದ ಹೆಣ್ಣುಗುರ‍್ತಿನ ಇಂತಹ ಬೇರೆ ಪದಗಳನ್ನು ಬಳಸುವಲ್ಲೂ ಇಂತಹದೇ ಗೊಂದಲ ಕಾಣಿಸುತ್ತದೆ. ಆದರೆ, ‘ಅಮ್ಮ’ ಎಂಬ ಇನ್ನೊಂದು ಪದವನ್ನು ಬಳಸುವಲ್ಲಿ ಗೊಂದಲವಿರುವ ಹಾಗೆ ಕಾಣಿಸುವುದಿಲ್ಲ; ಯಾಕೆಂದರೆ, ಯಾರೂ ‘ಅಮ್ಮಳನ್ನು’ ಇಲ್ಲವೇ ‘ಅಮ್ಮಳಿಗೆ’ ಎಂಬಂತಹ ರೂಪಗಳನ್ನು ಬಳಸಿದ ಹಾಗೆ ಕಾಣಿಸುವುದಿಲ್ಲ.

ಅಕಾರದಲ್ಲಿ ಕೊನೆಗೊಳ್ಳುವ ಕೊಟ್ಟಹೆಸರುಗಳ ಬಳಕೆಯಲ್ಲಿ ಇಂತಹ ಗೊಂದಲ ಕಾಣಿಸಿಕೊಳ್ಳಲು ಬೇರೊಂದು ಕಾರಣವೂ ಇದೆ: ಇಂತಹ ಕೆಲವು ಹೆಸರುಗಳು ಹುಡುಗಿಯರನ್ನು ಮಾತ್ರವಲ್ಲದೆ ಹುಡುಗರನ್ನು ಗುರುತಿಸುವಲ್ಲೂ ಬಳಕೆಯಾಗುತ್ತಿದ್ದು, ‘ಕಿರಣನನ್ನು’ ಎಂಬುದು ಹುಡುಗರನ್ನು ಗುರುತಿಸಬಲ್ಲುದಾಗಿದ್ದು, ಹುಡುಗಿಯರನ್ನು ಗುರುತಿಸುವಲ್ಲಿ ಅದಕ್ಕಿಂತ ಬೇರಾಗಿರುವ ‘ಕಿರಣಳನ್ನು’ ಎಂಬುದನ್ನು ಬಳಸುವುದೇ ಸರಿಯೆಂದು ಕೆಲವರಿಗೆ ಅನಿಸಬಹುದು.

‘ಅವನನ್ನು’ ಮತ್ತು ‘ಅವಳನ್ನು’ ಎಂಬ ಪದಗಳ ನಡುವಿರುವ ವ್ಯತ್ಯಾಸವೇ ಇಂತಹ ಪದಗಳ ನಡುವೆಯೂ ಇರಬೇಕೆಂಬ ಅನಿಸಿಕೆಯೂ ಈ ರೀತಿ ‘ಅಕ್ಕಳನ್ನು’, ‘ರಮ್ಯಳನ್ನು’ ಎಂಬಂತಹ ರೂಪಗಳನ್ನು ಬಳಸುವುದಕ್ಕೆ ಕಾರಣವಿರಬಹುದು. ಆದರೆ, ಕನ್ನಡದಲ್ಲಿ ‘ಅನ್ನು’ ಎಂಬ ಪತ್ತುಗೆ (ವಿಬಕ್ತಿ) ಒಟ್ಟಿನ ಬಳಕೆಯ ಹಿಂದಿರುವ ಕಟ್ಟಲೆ ಬೇರೆಯೇ ಇದೆ: ಅಕಾರದಲ್ಲಿ ಕೊನೆಗೊಳ್ಳುವ ಪದಗಳು ಗಂಡುಗುರ‍್ತ(ಪುಲ್ಲಿಂಗ)ದವಾಗಲಿ, ಹೆಣ್ಣುಗುರ‍್ತ(ಸ್ತ್ರೀಲಿಂಗ)ದವಾಗಲಿ ಅವುಗಳ ಬಳಿಕ ‘ಅನ್ನು’ ಒಟ್ಟು ಸೇರುವ ಮೊದಲು ನಕಾರವೇ ಬರುತ್ತದಲ್ಲದೆ ಳಕಾರ ಬರುವುದಿಲ್ಲ.

ಹಲವೆಣಿಕೆಯ (ಬಹುವಚನದ) ‘ರು’ ಒಟ್ಟು ಮನುಶ್ಯರನ್ನು ಗುರುತಿಸುವ ಹುಡುಗ, ಹುಡುಗಿ, ಕುರುಡ, ಕುರುಡಿ, ಮುದುಕ ಮೊದಲಾದ ಪದಗಳೊಂದಿಗೆ ಬರುತ್ತದೆ, ಮತ್ತು ‘ಗಳು’ ಒಟ್ಟು ಮನುಶ್ಯರಿಗಿಂತ ಬೇರಾಗಿರುವ ಮರ, ಕಲ್ಲು, ಮನೆ, ಎಮ್ಮೆ, ಹಕ್ಕಿ ಮೊದಲಾದವುಗಳೊಂದಿಗೆ ಬರುತ್ತದೆ; ಆದರೆ, ಇಂತಹದೊಂದು ಕಟ್ಟಲೆಗೂ ಹೊರಪಡಿಕೆಗಳಿವೆ: ಇಕಾರ ಇಲ್ಲವೇ ಉಕಾರದಲ್ಲಿ ಕೊನೆಗೊಳ್ಳುವ ಗಂಡುಗುರ‍್ತದ ಪದಗಳ ಬಳಿಕ, ಮತ್ತು ಉಕಾರದಲ್ಲಿ ಕೊನೆಗೊಳ್ಳುವ ಹೆಣ್ಣುಗುರ‍್ತದ ಪದಗಳ ಬಳಿಕ ‘ಗಳು’ ಎಂಬುದೇ ಬರುತ್ತದೆ (ಕಿಡಿಗೇಡಿಗಳು, ಎದುರಾಳಿಗಳು, ಗುರುಗಳು, ಮುಂದಾಳುಗಳು; ಹೆಣ್ಣಾಳುಗಳು, ಹೆಣ್ಣುಗಳು). ಇಲ್ಲಿಯೂ ಕೂಡ, ಉನ್ನೋಜೆಯ ಕಟ್ಟಲೆಗಳಿಗೆ ಎಡೆಯಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮಕ್ಕಳಿಗೆ ಓದಲು ಕಲಿಸುವ ಬಗೆ

ನುಡಿಯರಿಮೆಯ ಇಣುಕುನೋಟ – 16

ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ತಾವಾಗಿಯೇ ಕಲಿತುಕೊಳ್ಳುತ್ತಾರೆ; ಕೆಲವರು ಈ ಕಲಿಕೆಯನ್ನು ಬೇಗನೆ ನಡೆಸಬಹುದು, ಮತ್ತು ಕೆಲವರು ಅದಕ್ಕಾಗಿ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಮಿದುಳಿನ ತೊಂದರೆಯಿಲ್ಲದ ಯಾವ ಮಗುವೂ ತನ್ನ ತಾಯ್ನುಡಿಯಲ್ಲಿ ಮಾತನಾಡಲು ಕಲಿಯದಿರುವುದಿಲ್ಲ.

ಹಾಗಾಗಿ, ಮಾತಿನ ಕಲಿಕೆಯನ್ನು ಮಕ್ಕಳು ಹುಟ್ಟಿನಿಂದಲೇ ಪಡೆದುಕೊಂಡು ಬಂದ ಅಳವೆಂದು ಹೇಳಲಾಗುತ್ತದೆ. ಆದರೆ, ಓದಿನ ಕಲಿಕೆ ಆ ರೀತಿಯದಲ್ಲ; ಹೆಚ್ಚಿನ ಮಕ್ಕಳಿಗೂ ಓದುವ ಬಗೆಯನ್ನು ಯಾರಾದರೂ ಕಲಿಸಿಕೊಟ್ಟಲ್ಲಿ ಮಾತ್ರ ಅವರು ಅದನ್ನು ಕಲಿಯುತ್ತಾರೆ. ಸಯ್ಕಲ್ ತುಳಿಯುವುದು, ಈಜುವುದು ಮೊದಲಾದವುಗಳ ಹಾಗೆ, ಓದು ಹುಟ್ಟಿನಿಂದ ಬರುವ ಅಳವಲ್ಲ; ಕಲಿತು ಪಡೆಯುವ ಅಳವು.

ಬರಹಗಳನ್ನು ಸಲೀಸಾಗಿ ಓದಲು ಕಲಿಯಬೇಕಾದರೆ, ಮಕ್ಕಳು ಕೆಲವು ಚಳಕ(ಕವ್ಶಲ್ಯ)ಗಳನ್ನು ತಮ್ಮದಾಗಿಸಿಕೊಳ್ಳಬೇಕಾಗುತ್ತದೆ: ಮಾತಿನಲ್ಲಿ ಬರುವ ಪದಗಳನ್ನೆಲ್ಲ ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬುದನ್ನು ಅವರು ಗಮನಿಸಬೇಕು, ಮತ್ತು ಪುಟಗಳಲ್ಲಿ ಬರುವ ಗುರುತುಗಳಿಗೂ ಈ ಮಾತಿನ ಉಲಿಗಳಿಗೂ ನಡುವೆ ಎಂತಹ ಸಂಬಂದವಿದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.

ಇದಲ್ಲದೆ, ಪುಟಗಳಲ್ಲಿ ಬರುವ ಈ ಗುರುತುಗಳ ಜೋಡಣೆಗಳಲ್ಲಿ ಪದ, ಪದಕಂತೆ ಮತ್ತು ಸೊಲ್ಲುಗಳನ್ನು ಕಾಣಲು, ಮತ್ತು ಅವುಗಳಿಂದ ಬರಹಗಾರನು ಏನು ಹೇಳುತ್ತಿದ್ದಾನೆ ಎಂಬುದನ್ನು (ಎಂದರೆ ಬರಹದ ಹುರುಳನ್ನು) ತಿಳಿಯಲು ಅವರು ಕಲಿಯಬೇಕು.

ಮಾತಿನಲ್ಲಿ ಬರುವ ಪದಗಳು ಉಲಿಗಳ ಸೇರಿಕೆಯಿಂದ ಉಂಟಾಗುತ್ತವೆ ಎಂಬುದನ್ನು ಗಮನಿಸುವಂತೆ ಮಾಡಲು ಮಕ್ಕಳಿಗೆ ಕೆಲವು ಆಟಗಳನ್ನು ಕಲಿಸಬಹುದು: ಮನೆ, ಮಾತು, ಮೋಡ, ಮುಗಿಲು ಎಂಬಂತಹ ಪದಗಳಲ್ಲೆಲ್ಲ ಮೊದಲಿಗೆ ಮಕಾರ ಬಂದಿದೆ, ಕೆಲವು ಪದಗಳಿಂದ ಈ ಮಕಾರವನ್ನು ತೆಗೆದು ಹಾಕಿದರೆ ಬೇರೊಂದು ಪದ ಸಿಗುತ್ತದೆ (ಮತ್ತೆ-ಅತ್ತೆ, ಮಾಡು-ಆಡು, ಮಿಡಿ-ಇಡಿ), ಕೆಲವು ಪದಗಳಲ್ಲಿ ಮಕಾರದ ಬದಲು ಕಕಾರವನ್ನು ಬಳಸಿದರೆ ಬೇರೆ ಪದ ಸಿಗುತ್ತದೆ (ಮತ್ತೆ-ಕತ್ತೆ, ಮಾಡು-ಕಾಡು, ಮಿಡಿ-ಕಿಡಿ) ಎಂಬಂತಹ ವಿಶಯಗಳನ್ನು ಅವರು ಗಮನಿಸುವ ಹಾಗೆ ಮಾಡಬಹುದು, ಮತ್ತು ಪದಗಳನ್ನು ಉಲಿಗಳಾಗಿ ಒಡೆಯುವ ಬಗೆಯನ್ನು ಕಲಿಸಬಹುದು. ಇದರಿಂದ, ಪದಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಅವರು ತಿಳಿಯುವ ಹಾಗೆ ಮಾಡಬಹುದು.

ಕನ್ನಡ ಬರಹದ ಪುಟಗಳಲ್ಲಿ ಕಾಣಿಸುವ ಗುರುತು(ಬರಿಗೆ)ಗಳಿಗೂ ಅವನ್ನು ಓದುವಲ್ಲಿ ಬಳಕೆಯಾಗುವ ಉಲಿಗಳಿಗೂ ನಡುವೆ ನೇರವಾದ ಸಂಬಂದವಿದೆ; ಇಂಗ್ಲಿಶ್ ಬರಹದಲ್ಲಿರುವ ಹಾಗೆ ಅದು ತೊಡಕು ತೊಡಕಾಗಿಲ್ಲ. ಹಾಗಾಗಿ, ಕನ್ನಡ ಬರಹಗಳನ್ನು ಓದಲು ಕಲಿಯುವ ಮಕ್ಕಳು ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ಗಮನಿಸುವಂತೆ ಮಾಡುವುದು ಹೆಚ್ಚು ತೊಡಕಿನ ಕೆಲಸವಲ್ಲ. ಆದರೆ, ಸಂಸ್ಕ್ರುತದ ಎರವಲು ಪದಗಳಲ್ಲಿ ಬಳಕೆಯಾಗುತ್ತಿರುವ ಅಲ್ಪಪ್ರಾಣ-ಮಹಾಪ್ರಾಣ, ರು-ಋ, ಶ-ಷ ಮೊದಲಾದ ಹಲವು ವ್ಯತ್ಯಾಸಗಳು ಓದಿನಲ್ಲಿ ಕಾಣಿಸುವುದಿಲ್ಲ, ಮತ್ತು ಇವುಗಳಿಂದಾಗಿ ಉಲಿಗಳಿಗೂ ಬರಿಗೆಗಳಿಗೂ ನಡುವಿರುವ ಸಂಬಂದವನ್ನು ಗಮನಿಸುವಲ್ಲಿ ಹೆಚ್ಚಿನ ಮಕ್ಕಳೂ ಗೊಂದಲದಲ್ಲಿ ಬೀಳುತ್ತಾರೆ. ಹಾಗಾಗಿ, ಕನ್ನಡದ ಮಟ್ಟಿಗೆ ಅನವಶ್ಯಕವಾಗಿರುವ ಈ ವ್ಯತ್ಯಾಸಗಳನ್ನು ಮಕ್ಕಳ ಓದಿನಿಂದ ದೂರ ಇರಿಸುವುದು ಒಳ್ಳೆಯದು.

ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಸಂಬಂದವನ್ನು ತಿಳಿಯುವುದು ಬರಹವನ್ನು ಓದಲು ಕಲಿಯುವಲ್ಲಿ ತುಂಬಾ ಮುಕ್ಯವಾದ ಕೆಲಸ. ಈ ನಂಟನ್ನು ತಿಳಿದುಕೊಂಡವರಿಗೆ ತಮಗೆ ಗೊತ್ತಿರುವ ಪದಗಳನ್ನು ಮಾತ್ರವಲ್ಲದೆ ಗೊತ್ತಿಲ್ಲದ ಪದಗಳನ್ನೂ ಓದಲು ಬರುತ್ತದೆ. ಈ ನಂಟನ್ನು ತಿಳಿಯದ ಮಕ್ಕಳು ಪದಗಳನ್ನು ಚಿತ್ರಗಳ ಹಾಗೆ ಇಡಿ ಇಡಿಯಾಗಿ ಓದಲು ಹೋಗುತ್ತಾರೆ, ಮತ್ತು ಇದರಿಂದಾಗಿ ಬರಹದಲ್ಲಿ ಹೊಸ ಪದಗಳು ಕಾಣಿಸಿಕೊಂಡಾಗ ಅವರ ಓದು ಮುಂದೆ ಸಾಗುವುದಿಲ್ಲ.

ಇತ್ತೀಚೆಗೆ ನಡೆಸಿದ ಹಲವು ಮಿದುಳಿನ ಅರಕೆಗಳು ಓದಿನಲ್ಲಿ ಬೇಗನೆ ಮುಂದೆ ಹೋಗುವ ಮಕ್ಕಳಿಗೂ ಹಿಂದೆ ಬೀಳುವ ಮಕ್ಕಳಿಗೂ ನಡುವೆ ಅವರು ಪದಗಳನ್ನು ಓದುವ ಬಗೆಯಲ್ಲೇ ಇಂತಹ ವ್ಯತ್ಯಾಸವಿದೆಯೆಂಬುದನ್ನು ಸ್ಪಶ್ಟವಾಗಿ ತೋರಿಸಿಕೊಟ್ಟಿವೆ. ಓದಿನಲ್ಲಿ ಬೇಗನೆ ಮುಂದೆ ಹೋಗುವ ಮಕ್ಕಳು ಓದುತ್ತಿರುವಾಗ, ಅವರ ಮಿದುಳಿನಲ್ಲಿ ಮೂರು ಜಾಗಗಳು ಮಿಂಚುತ್ತಿರುತ್ತವೆ: ಬರಿಗೆಗಳನ್ನು ಗುರುತಿಸುವ ಕಣ್ಣಿಗೆ ಸಂಬಂದಿಸಿದ ಜಾಗ, ಅವನ್ನು ಉಲಿಗಳೊಂದಿಗೆ ಜೋಡಿಸುವ ಕಿವಿಗೆ ಸಂಬಂದಿಸಿದ ಜಾಗ, ಮತ್ತು ಅವನ್ನು ಹುರುಳಿನೊಂದಿಗೆ ಸಂಬಂದಿಸುವ ಮಿದುಳಿನ ಹಿಂಬಾಗದಲ್ಲಿರುವ ಜಾಗ. ಓದಿನಲ್ಲಿ ಹಿಂದೆ ಬೀಳುವ ಮಕ್ಕಳು ಓದುತ್ತಿರುವಾಗ, ಅವರ ಮಿದುಳಿನಲ್ಲಿ ಕಣ್ಣಿಗೆ ಮತ್ತು ಹುರುಳಿಗೆ ಸಂಬಂದಿಸಿದ ಜಾಗಗಳು ಮಾತ್ರ ಮಿಂಚುತ್ತಿರುತ್ತವಲ್ಲದೆ, ಕಿವಿಗೆ ಸಂಬಂದಿಸಿದ ಜಾಗ ಮಿಂಚುತ್ತಿರುವುದಿಲ್ಲ. ಎಂದರೆ, ಪದಗಳನ್ನು ಬರಿಗೆಗಳಾಗಿ ಒಡೆದು, ಅವನ್ನು ಉಲಿಗಳೊಂದಿಗೆ ಸಂಬಂದಿಸಿ ಓದುವುದು ಹೇಗೆ ಎಂಬುದನ್ನು ಅವರು ಕಲಿತಿಲ್ಲ.

ಒಮ್ಮೆ ಪದಗಳನ್ನು ಬರಿಗೆಗಳಾಗಿ ಬಿಡಿಸಿ, ಅವನ್ನು ಉಲಿಗಳೊಂದಿಗೆ ಸಂಬಂದಿಸಲು ಕಲಿತಮೇಲೆ, ಆಗಾಗ ಬರುವ ಪದಗಳನ್ನು ಇಡಿ ಇಡಿಯಾಗಿ ಗುರುತಿಸಿ ಓದುವ ಬಗೆಯನ್ನೂ ಮಕ್ಕಳು ಕಲಿತುಕೊಳ್ಳಬೇಕಾಗುತ್ತದೆ; ಯಾಕೆಂದರೆ, ಬರಹಗಳನ್ನು ಬೇಗನೆ ಮತ್ತು ಸಲೀಸಾಗಿ ಓದಲು ಇಂತಹ ಕಲಿಕೆಯೂ ಬೇಕಾಗುತ್ತದೆ. ಆದರೆ, ಆಮೇಲೆಯೂ, ಅಪರೂಪಕ್ಕೆ ಬರುವ ಪದಗಳನ್ನು ಮತ್ತು ಹೊಸ ಪದಗಳನ್ನು ಓದಲು ಅವನ್ನು ಬರಿಗೆಗಳಾಗಿ ಒಡೆದು ಉಲಿಗಳೊಂದಿಗೆ ಸಂಬಂದಿಸುವ ಬಗೆ ಅವರಿಗೆ ಬೇಕಾಗುತ್ತದೆ.

ಬರಹಗಳಲ್ಲಿ ಬರುವ ಪದಗಳನ್ನು ಓದುವ ಬಗೆ ಹೇಗೆ ಎಂಬುದನ್ನು ಕಲಿತರೆ ಸಾಲದು, ಅವನ್ನು ಪದಕಂತೆಗಳಾಗಿ ಮತ್ತು ಸೊಲ್ಲುಗಳಾಗಿ ಜೋಡಿಸಿ, ಅವುಗಳಿಂದ ಹುರುಳನ್ನು ಪಡೆಯುವುದು ಹೇಗೆ ಎಂಬುದನ್ನೂ ಮಕ್ಕಳು ಕಲಿಯಬೇಕಾಗುತ್ತದೆ. ಅವರ ಓದು ಬೇಗನೆ ಮತ್ತು ಸಲೀಸಾಗಿ ನಡೆಯುತ್ತಿದೆಯಾದರೆ ಮಾತ್ರ ಅವರಿಗೆ ಈ ರೀತಿ ತಮ್ಮ ಓದಿನಿಂದ ಹುರುಳನ್ನು ಪಡೆಯಲು ಬರುತ್ತದೆ. ತುಂಬಾ ಮೆಲ್ಲಗೆ ಓದುವ ಮಕ್ಕಳಿಗೆ ಪದಗಳು ಮಾತ್ರ ಕಾಣಿಸುತ್ತವಲ್ಲದೆ ಪದಕಂತೆಗಳು ಇಲ್ಲವೇ ಸೊಲ್ಲುಗಳು ಕಾಣಿಸುವುದಿಲ್ಲ.

ಓದಲು ಕಲಿಯುತ್ತಿರುವ ಮಕ್ಕಳ ಮಿದುಳಿನಲ್ಲಿ ಮಾತಿನ ಪದನೆರಕೆ (ಪದಕೋಶ) ಮತ್ತು ಓದಿನ ಪದನೆರಕೆ ಎಂಬುದಾಗಿ ಎರಡು ಬಗೆಯ ಪದನೆರಕೆಗಳು ನೆಲೆಗೊಳ್ಳುತ್ತವೆ; ಇವುಗಳಲ್ಲಿ ಓದಿನ ಪದನೆರಕೆಯನ್ನು ಹಿಗ್ಗಿಸುವ ಮೂಲಕ ಮಕ್ಕಳು ಓದಿನಲ್ಲಿ ಮುಂದೆ ಬರುವಂತೆ ಮಾಡಬಹುದು. ಬಗೆ ಬಗೆಯ ಬರಹಗಳನ್ನು, ಮತ್ತು ಹೆಚ್ಚು ಹೆಚ್ಚು ಬರಹಗಳನ್ನು ಅವರು ಓದುವ ಹಾಗೆ ಮಾಡುವ ಮೂಲಕ ಅವರ ಈ ಓದಿನ ಪದನೆರಕೆಯನ್ನು ಹಿಗ್ಗಿಸಲು ಬರುತ್ತದೆ.

ಕೆಲವು ಮಂದಿ ತಾಯ್ತಂದೆಯರು ಪಟ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಮಕ್ಕಳು ಓದಬಾರದೆಂದು ಕಟ್ಟಲೆ ಮಾಡುತ್ತಾರೆ; ಕತೆ ಕಾದಂಬರಿಗಳನ್ನು ಓದಿ ಸಮಯ ಹಾಳುಮಾಡಬಾರದೆಂದು ಆಗಾಗ ಮಕ್ಕಳಿಗೆ ಹೇಳುತ್ತಿರುತ್ತಾರೆ. ಆದರೆ, ಬರೇ ಪಟ್ಯಪುಸ್ತಕಗಳನ್ನು ಮಾತ್ರವೇ ಓದುತ್ತಿದ್ದರೆ ಮಕ್ಕಳ ಓದಿನ ಪದನೆರಕೆ ತುಂಬಾ ಚಿಕ್ಕದಾಗಿಯೇ ಉಳಿಯುತ್ತದೆ. ಅದನ್ನು ಹಿಗ್ಗಿಸಬೇಕಿದ್ದಲ್ಲಿ ಅವರು ಎಲ್ಲಾ ಬಗೆಯ ಬರಹಗಳನ್ನೂ ಓದುತ್ತಿರಬೇಕು. ಹಾಗಾಗಿ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಮತ್ತು ಬೇರೆ ಬಗೆಯ ಬರಹಗಳನ್ನು ಅವರು ಓದುವಂತೆ ಮಾಡಬೇಕು.

ಓದಿನಲ್ಲಿ ತಮಗೆ ತಿಳಿಯದ ಪದ ಬಂದಾಗ, ಅದರ ಹುರುಳನ್ನು ಪದನೆರಕೆಯ ನೆರವಿನಿಂದ ಕಂಡುಹಿಡಿಯುವುದು ಹೇಗೆ ಎಂಬುದನ್ನೂ ಅವರಿಗೆ ತೋರಿಸಿಕೊಡಬೇಕು. ಪದನೆರಕೆಗಳಲ್ಲಿ ಪದಗಳಿಗೆ ಹಲವು ಹುರುಳುಗಳನ್ನು ಕೊಟ್ಟಿರುತ್ತಾರೆ. ಇವುಗಳಲ್ಲಿ ತಮ್ಮ ಓದಿಗೆ ಹೊಂದಿಕೆಯಾಗುವಂತಹದನ್ನು ಆರಿಸಿಕೊಳ್ಳುವುದು ಹೇಗೆ ಎಂಬುದನ್ನೂ ಅವರಿಗೆ ತೋರಿಸಿಕೊಡಬೇಕು. ಈ ರೀತಿ ತಮ್ಮ ಓದಿಗೆ ಪದನೆರಕೆಯ ನೆರವನ್ನು ಪಡೆಯಲು ಕಲಿತ ಮಕ್ಕಳ ಓದಿನ ಪದನೆರಕೆಯೂ ಬೇಗನೆ ಹಿಗ್ಗುತ್ತದೆ.

ಓದಿನಲ್ಲಿ ಹಿಂದೆ ಬೀಳುವ ಮಕ್ಕಳು ಬೇರೆ ವಿಶಯಗಳಲ್ಲೂ ಹಿಂದೆ ಬೀಳುತ್ತಾರೆ; ಯಾಕೆಂದರೆ, ಈ ಎಲ್ಲಾ ವಿಶಯಗಳ ಕಲಿಕೆಯನ್ನೂ ಅವರು ಓದಿನ ಮೂಲಕವೇ ನಡೆಸಬೇಕಾಗುತ್ತದೆ. ಹಾಗಾಗಿ, ಮಕ್ಕಳು ಬೇಗನೆ ಮತ್ತು ಸಲೀಸಾಗಿ ಓದಲು ಕಲಿಯುವಂತೆ ಮಾಡುವುದು, ಮತ್ತು ಇದಕ್ಕಾಗಿ ಅವರ ಓದು ಸರಿಯಾದ ಕ್ರಮದಲ್ಲಿ ಮುಂದುವರಿಯುವಂತೆ ಮಾಡುವುದು ತುಂಬಾ ಮುಕ್ಯವಾದ ಕೆಲಸವಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮಕ್ಕಳಿಗೆ ವ್ಯಾಕರಣ ಕಲಿಸಬೇಕೇ?

ನುಡಿಯರಿಮೆಯ ಇಣುಕುನೋಟ – 15

ಬೇಕು ಎನ್ನುತ್ತಿದ್ದಾರೆ ಇತ್ತೀಚೆಗೆ ಹಲವು ಮಂದಿ ತಿಳಿವಿಗರು; ಆದರೆ, ವ್ಯಾಕರಣವನ್ನು ಹಿಂದಿನ ಹಾಗೆ ಒಂದು ವಿಶಯವಾಗಿ ಕಲಿಸುವ ಬದಲು, ಮಕ್ಕಳ ಓದು ಮತ್ತು ಬರಹಗಳ ಕಲಿಕೆಗೆ ನೆರವಾಗುವ ಹಾಗೆ ನೇರವಲ್ಲದ ಬಗೆಯಲ್ಲಿ ಅದನ್ನು ಕಲಿಸಬೇಕು ಎಂಬುದು ಹೆಚ್ಚಿನ ತಿಳಿವಿಗರ ತೀರ‍್ಮಾನವಾಗಿದೆ.

ನಿಜಕ್ಕೂ ವ್ಯಾಕರಣದ ಕಟ್ಟಲೆಗಳನ್ನು ಮಕ್ಕಳಿಗೆ ಕಲಿಸುವುದು ತುಂಬಾ ತೊಡಕಿನ ಕೆಲಸ. ಯಾಕೆಂದರೆ, ಮೊದಲನೆಯದಾಗಿ, ಈ ಕಟ್ಟಲೆಗಳೆಲ್ಲ ತೊಡಕು ತೊಡಕಾದವುಗಳು; ಅವನ್ನು ವಿವರಿಸಲು ಬೇರೆಯೇ ಆದ ಅರಿಮೆಯ ಪದಗಳು ಬೇಕಾಗುತ್ತವೆ. ಇದಲ್ಲದೆ, ಅವುಗಳಲ್ಲಿ ಯಾವ ಕಟ್ಟಲೆಯೂ ಬೇರೆಯಾಗಿ ನಿಲ್ಲುವುದಿಲ್ಲ; ಎಲ್ಲವೂ ಒಂದರೊಡನೊಂದು ಹೆಣೆದಿರುತ್ತವೆ. ಹಾಗಾಗಿ, ವ್ಯಾಕರಣದ ಯಾವ ಕಟ್ಟಲೆಯನ್ನು ಕಲಿಸಬೇಕಿದ್ದರೂ, ಅದಕ್ಕೆ ಬೇರೆ ಕಟ್ಟಲೆಗಳೊಂದಿಗಿರುವ ಕೊಂಡಿಗಳನ್ನೂ ಕಲಿಸಿಕೊಡಬೇಕಾಗುತ್ತದೆ.

ಎರಡನೆಯದಾಗಿ, ವ್ಯಾಕರಣದ ಕಟ್ಟಲೆಗಳು ಓದಿಗೆ ಇಲ್ಲವೇ ಬರಹಕ್ಕೆ ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುವು ಎಂಬುದು ಅವನ್ನು ಕಲಿಯುವವರಿಗೆ ಸುಲಬವಾಗಿ ಗೊತ್ತಾಗುವುದಿಲ್ಲ, ಮತ್ತು ಅವು ಯಾಕೆ ಬೇಕಾಗುತ್ತವೆ ಎಂಬುದನ್ನು ತಿಳಿಯದವರಿಗೆ ಅವನ್ನು ಕಲಿಯುವಲ್ಲಿ ಯಾವ ಹುರುಪೂ ಇರುವುದಿಲ್ಲ. ಅವುಗಳ ಕಲಿಕೆ ಬರಿಯ ಒಂದು ಯಾಂತ್ರಿಕ ಕೆಲಸವಾಗಿಬಿಡುತ್ತದೆ.

ಹಿಂದಿನ ಕಾಲದ ಶಾಲೆಗಳಲ್ಲಿ ವ್ಯಾಕರಣವನ್ನು ಬೇರೆಯೇ ಒಂದು ವಿಶಯವಾಗಿ ಕಲಿಸಲಾಗುತ್ತಿತ್ತು, ಮತ್ತು ಈ ಕಾರಣದಿಂದಾಗಿ, ಅದೊಂದು ತುಂಬಾ ತೊಡಕು ತೊಡಕಾದ, ಮತ್ತು ತೀರಾ ಅನವಶ್ಯಕವಾದ ವಿಶಯವೆಂಬುದಾಗಿ ಅದನ್ನು ಕಲಿಯುವವರಿಗೆ ಮಾತ್ರವಲ್ಲ, ಅದನ್ನು ಕಲಿಸುವವರಿಗೂ ಅನಿಸುತ್ತಿತ್ತು. ಅಯ್ದಾರು ವರ‍್ಶ ಅದನ್ನು ಕಲಿಸಿದರೂ ಮಕ್ಕಳ ಓದಿನಲ್ಲಿ ಇಲ್ಲವೇ ಬರವಣಿಗೆಯಲ್ಲಿ ಅದರಿಂದಾಗಿ ಯಾವ ಮಾರ‍್ಪಾಡೂ ಉಂಟಾಗುವುದಿಲ್ಲ ಎಂಬುದನ್ನು ಸಂಶೋದನೆಗಳು ತೋರಿಸಿಕೊಟ್ಟುವು. ಇದನ್ನು ಗಮನಿಸಿದ ಹಲವು ತಿಳಿವಿಗರು ನುಡಿಯ ಕಲಿಕೆಗೆ ವ್ಯಾಕರಣದ ತಿಳಿವು ಬೇಕಾಗಿಲ್ಲ, ಮತ್ತು ಅದನ್ನು ಶಾಲೆಗಳಲ್ಲಿ ಕಲಿಸಬೇಕಾಗಿಲ್ಲ ಎಂಬ ತೀರ‍್ಮಾನಕ್ಕೆ ಬಂದಿದ್ದರು.

ಆದರೆ, ನಿಜಕ್ಕೂ ಇದೊಂದು ತಪ್ಪಾದ ತೀರ‍್ಮಾನವಾಗಿತ್ತು; ಯಾಕೆಂದರೆ, ಯಾವ ಕೆಲಸವೇ ಆಗಲಿ, ಅದನ್ನು ಜಾಣ್ಮೆಯಿಂದ ನಡೆಸಬೇಕೆಂದಿರುವವರಿಗೆ ಅದರ ಒಳಗುಟ್ಟಿನ ತಿಳಿವು ನೆರವಿಗೆ ಬಂದೇ ಬರುತ್ತದೆ. ಎತ್ತುಗೆಗಾಗಿ, ಕಾರನ್ನು ಓಡಿಸುವವರು ಅದರ ಬೇರೆ ಬೇರೆ ಅಂಗಗಳ ಗುರಿ, ಅವುಗಳ ಅಳವು-ನಲುವುಗಳು, ಅವುಗಳ ಕೆಲಸದ ಮೇಲೆ ಗಾಳಿ, ಮಳೆ, ಬಿಸಿಲು, ಮತ್ತು ದಾರಿಂii ಗೊತ್ತುಪಾಡುಗಳಿಂದ ಉಂಟಾಗಬಹುದಾದ ಅಡಚಣೆಗಳು ಮೊದಲಾದುವನ್ನು ಸರಿಯಾಗಿ ತಿಳಿದುಕೊಂಡಿರುವರಾದರೆ, ಆ ಕೆಲಸವನ್ನು ಅವರು ಹೆಚ್ಚು ಜಾಣ್ಮೆಯಿಂದ ನಡೆಸಬಲ್ಲರು.

ಓದುವ ಮತ್ತು ಬರೆಯುವ ಕೆಲಸಗಳೂ ಹೀಗೆಯೇ. ಅವುಗಳ ಒಳಗುಟ್ಟನ್ನು ತಿಳಿದುಕೊಂಡವರಿಗೆ ಅವನ್ನು ಹೆಚ್ಚು ಸುಳುವಾಗಿ ಮತ್ತು ಹೆಚ್ಚು ಚನ್ನಾಗಿ ನಡೆಸಲು ಬರುತ್ತದೆ. ಬರಹಗಳಲ್ಲಿ ಹಲವು ಬಗೆಗಳಿದ್ದು, ಅವನ್ನು ಓದಿ ತಿಳಿದುಕೊಳ್ಳುವಲ್ಲಿ ಇಲ್ಲವೇ ಅಂತಹವೇ ಬರಹಗಳನ್ನು ಹೊಸದಾಗಿ ಬರೆಯುವಲ್ಲಿ ಹಲವಾರು ಬಗೆಯ ವ್ಯಾಕರಣದ ಕಟ್ಟಲೆಗಳನ್ನು ಬಳಸಬೇಕಾಗುತ್ತದೆ; ಹಾಗಾಗಿ, ಅಂತಹ ಕಟ್ಟಲೆಗಳ ತಿಳಿವು ಈ ಕೆಲಸಗಳನ್ನು ಜಾಣ್ಮೆಯಿಂದ ನಡೆಸುವಲ್ಲಿ ನೆರವಾಗದಿರದು.

ಆದರೆ, ಮೇಲೆ ಸೂಚಿಸಿದ ಹಾಗೆ, ವ್ಯಾಕರಣದ ಕಟ್ಟಲೆಗಳನ್ನು ನೇರವಾಗಿ ಕಲಿಸಹೋಗದೆ, ಓದುವ ಮತ್ತು ಬರೆಯುವ ಕೆಲಸಗಳಲ್ಲಿ ಅವು ಹೇಗೆ ನೆರವಾಗುತ್ತವೆ ಎಂಬುದನ್ನು ತೋರಿಸಿಕೊಡುವ ಮೂಲಕ ಕಲಿಸಿದಲ್ಲಿ ಮಾತ್ರ ಅವು ಮಕ್ಕಳ ಓದು-ಬರಹದ ಕಲಿಕೆಯ ಮೇಲೆ ಪರಿಣಾಮವನ್ನು ಬೀರಬಲ್ಲುವು.

ಎತ್ತುಗೆಗಾಗಿ, ಕೆಲವು ಸೊಲ್ಲು(ವಾಕ್ಯ)ಗಳ ಹುರುಳೇನೆಂಬುದನ್ನು ತಿಳಿದುಕೊಳ್ಳುವಲ್ಲಿ ಮಕ್ಕಳಿಗೆ ತೊಂದರೆಯಾಗುತ್ತಿರಬಹುದು; ಅಂತಹ ಸೊಲ್ಲುಗಳಲ್ಲಿ ಮುಕ್ಯ ಅಂಶಗಳನ್ನು ಮುಕ್ಯವಲ್ಲದ ಅಂಶಗಳಿಂದ ಬೇರ‍್ಪಡಿಸುವುದು ಹೇಗೆ ಎಂಬುದನ್ನು ಮಕ್ಕಳಿಗೆ ತೋರಿಸಿಕೊಟ್ಟಲ್ಲಿ, ಅವರು ಅವುಗಳ ಹುರುಳನ್ನು ಸುಲಬವಾಗಿ ತಿಳಿದುಕೊಳ್ಳಬಲ್ಲರು. ಆದರೆ, ಸೊಲ್ಲುಗಳಲ್ಲಿ ಮುಕ್ಯ ಅಂಶ ಯಾವುದು ಮತ್ತು ಮುಕ್ಯವಲ್ಲದ ಅಂಶ ಯಾವುದು ಎಂಬುದನ್ನು ತೋರಿಸಿಕೊಡಬೇಕಾದರೆ, ಅವನ್ನು ಹೇಗೆ ಕಟ್ಟಲಾಗಿದೆ, ಅವುಗಳ ಒಳರಚನೆಯೆಂತಹದು ಎಂಬಂತಹ ವ್ಯಾಕರಣಕ್ಕೆ ಸಂಬಂದಿಸಿರುವ ಕಟ್ಟಲೆಗಳನ್ನು ಕಲಿಸಬೇಕಾಗುತ್ತದೆ.

ಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ತಿಳಿವಿಗರು ಓದು-ಬರಹದ ಕಲಿಕೆಯಲ್ಲಿ ವ್ಯಾಕರಣದ ಕೊಡುಗೆ ನಿಜಕ್ಕೂ ತುಂಬ ದೊಡ್ಡದು ಎಂಬುದನ್ನು ಕಂಡುಕೊಳ್ಳುತ್ತಿದ್ದಾರೆ. ಮಕ್ಕಳು ತಾವು ಓದಿ ತಿಳಿದುಕೊಳ್ಳಬೇಕಾಗಿರುವ ಇಲ್ಲವೇ ಬರೆಯಬೇಕಾಗಿರುವ ಸೊಲ್ಲುಗಳ ಒಳರಚನೆಯೆಂತಹದು ಎಂಬುದನ್ನು ಗಮನಿಸುವ ಹಾಗೆ ಮಾಡಿದಲ್ಲಿ ಅವರಿಗೆ ಆ ಕೆಲಸವನ್ನು ನಡೆಸಲು ಹೆಚ್ಚು ಸುಲಬವಾಗುತ್ತದೆ ಎಂಬುದನ್ನೂ ಅವರು ಕಂಡುಕೊಳ್ಳುತ್ತಿದ್ದಾರೆ.

ಇಂತಹ ತಿಳುವಳಿಕೆ ತರಗತಿಯಲ್ಲಿ ಮುಂದೆ ಇರುವ ಮಕ್ಕಳಿಗಿಂತಲೂ ಹಿಂದೆ ಬೀಳುವ ಮಕ್ಕಳಿಗೆ ಹೆಚ್ಚು ನೆರವಾಗುತ್ತದೆ ಎಂಬುದನ್ನೂ ಕಂಡುಕೊಳ್ಳಲಾಗಿದೆ. ಎತ್ತುಗೆಗಾಗಿ, ಮಾತಿನಲ್ಲಿ ಬರುವ ಹಾಗೆ ತುಂಡು ತುಂಡಾಗಿರುವ ಸೊಲ್ಲುಗಳು ಬರಹದಲ್ಲಿ ಬರಬಾರದು; ಅವೆಲ್ಲ ಇಡಿ ಇಡಿಯಾಗಿರಬೇಕು; ತುಂಡು ಸೊಲ್ಲುಗಳನ್ನು ಇಡೀ ಸೊಲ್ಲುಗಳ ಅಂಗಗಳನ್ನಾಗಿ ಮಾತ್ರ ಬಳಸಬಹುದು ಎಂದು ಹೇಳಿಕೊಟ್ಟಾಗ, ತರಗತಿಯಲ್ಲಿ ಮುಂದೆ ಇರುವ ಮಕ್ಕಳಿಗೆ ತಾವೇನು ಮಾಡಬೇಕು ಎಂಬುದು ಒಡನೆಯೇ ಗೊತ್ತಾಗುತ್ತದೆ.

ಆದರೆ, ತರಗತಿಯಲ್ಲಿ ಹಿಂದೆ ಬೀಳುವ ಮಕ್ಕಳಿಗೆ ಅದು ಗೊತ್ತಾಗುವುದಿಲ್ಲ. ಅವರಿಗೆ ಅದು ಗೊತ್ತಾಗುವ ಹಾಗೆ ಮಾಡಬೇಕಿದ್ದಲ್ಲಿ, ತುಂಡು ಸೊಲ್ಲುಗಳಿಗೂ ಇಡೀ ಸೊಲ್ಲುಗಳಿಗೂ ನಡುವಿರುವ ವ್ಯತ್ಯಾಸ ಎಂತಹದು ಎಂಬುದನ್ನು, ಮತ್ತು ತುಂಡು ಸೊಲ್ಲುಗಳನ್ನು ಇಡೀ ಸೊಲ್ಲುಗಳ ಅಂಗಗಳಾಗಿ ಮಾಡಿ ಬಳಸುವುದು ಹೇಗೆ ಎಂಬುದನ್ನು ತೋರಿಸಿಕೊಡಬೇಕಾಗುತ್ತದೆ. ಎಂದರೆ, ಇಡಿಯಾಗಿರುವ ಸೊಲ್ಲುಗಳ ಒಳರಚನೆಯ ಹಿಂದಿರುವ ವ್ಯಾಕರಣದ ಕಟ್ಟಲೆಗಳನ್ನು ಅವರಿಗೆ ವಿವರಿಸಬೇಕಾಗುತ್ತದೆ.

ಕನ್ನಡದ ಮಟ್ಟಿಗೆ ಹೇಳುವುದಾದರೆ, ಇನ್ನೊಂದು ಸಮಸ್ಯೆಯೂ ವ್ಯಾಕರಣದ ಕಲಿಕೆಯನ್ನು ಕಾಡುತ್ತಿದೆ; ಅದೇನೆಂದರೆ, ಇವತ್ತು ಕನ್ನಡ ವ್ಯಾಕರಣದ ಹೊತ್ತಗೆಗಳಲ್ಲಿ ಕಾಣಿಸಿಕೊಳ್ಳುವ ಕಟ್ಟಲೆಗಳಲ್ಲಿ ಹೆಚ್ಚಿನವನ್ನೂ ಕನ್ನಡ ಬರಹಗಳನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ನೆರವಾಗುವ ಹಾಗೆ ಕಲಿಸಲು ಯಾರಿಗೂ ಸಾದ್ಯವಾಗಲಾರದು. ಯಾಕೆಂದರೆ, ಈ ವ್ಯಾಕರಣಗಳನ್ನು ಬರೆದವರು ಸಂಸ್ಕ್ರುತ ವ್ಯಾಕರಣದಲ್ಲಿದ್ದ ಕಟ್ಟಲೆಗಳನ್ನು ಹಾಗೆಯೇ ಕನ್ನಡಕ್ಕೆ ತಂದುಹಾಕಿದ್ದಾರಲ್ಲದೆ, ನಿಜಕ್ಕೂ ಕನ್ನಡ ಪದಗಳ ಇಲ್ಲವೇ ಸೊಲ್ಲುಗಳ ಬಳಕೆಯ ಹಿಂದೆ ಎಂತಹ ಕಟ್ಟಲೆಗಳು ಅಡಗಿವೆ ಎಂಬುದನ್ನು ಕಂಡುಹಿಡಿಯುವ ಮೂಲಕ ಅವನ್ನು ಬರೆದಿಲ್ಲ.

ಹಾಗಾಗಿ, ಈ ಕಟ್ಟಲೆಗಳನ್ನು ಸಂಸ್ಕ್ರುತ ಬರಹಗಳನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ನೆರವಾಗುವ ಹಾಗೆ ಕಲಿಸಲು ಸಾದ್ಯವಾಗಬಹುದಲ್ಲದೆ, ಕನ್ನಡ ಬರಹಗಳನ್ನು ಓದುವಲ್ಲಿ ಮತ್ತು ಬರೆಯುವಲ್ಲಿ ನೆರವಾಗುವ ಹಾಗೆ ಕಲಿಸಲು ಸಾದ್ಯವಾಗಲಾರದು. ಕನ್ನಡ ಬರಹಗಳಲ್ಲಿ ಕನ್ನಡದವೇ ಆದ ಬೇರೆಯೇ ಕಟ್ಟಲೆಗಳು ಬಳಕೆಯಾಗುತ್ತವೆ; ಈ ಕಟ್ಟಲೆಗಳು ಎಂತಹವು ಎಂಬುದನ್ನು ಇವತ್ತು ಕಂಡುಹಿಡಿಯಬೇಕಾಗಿದೆ, ಮತ್ತು ಮಕ್ಕಳ ಓದು-ಬರಹದ ಕಲಿಕೆಗೆ ಅವು ಹೇಗೆ ನೆರವಾಗಬಲ್ಲುವು ಎಂಬುದನ್ನೂ ಕಂಡುಹಿಡಿಯಬೇಕಾಗಿದೆ. ಈ ಎರಡು ಕೆಲಸಗಳನ್ನು ನಡೆಸಿದ ಮೇಲಶ್ಟೇ ಮಕ್ಕಳಿಗೆ ಅವರ ಓದಿನ ಮತ್ತು ಬರಹದ ಕಲಿಕೆಯಲ್ಲಿ ನೆರವಾಗುವ ಹಾಗೆ ಕನ್ನಡ ವ್ಯಾಕರಣದ ಕಟ್ಟಲೆಗಳನ್ನು ಕಲಿಸಲು ಸಾದ್ಯವಾಗಬಲ್ಲುದು.

ಮಾತಿನ ಮೂಲಕ ನಾವು ನಮ್ಮ ಅನಿಸಿಕೆಗಳನ್ನು ಮತ್ತು ಅನುಬವಗಳನ್ನು ಇನ್ನೊಬ್ಬರಿಗೆ ಹೇಗೆ ತಿಳಿಸುತ್ತೇವೆ, ಮತ್ತು ಇನ್ನೊಬ್ಬರು ಬಳಸಿದ ಮಾತುಗಳಿಂದ ಅವರ ಅನಿಸಿಕೆ ಮತ್ತು ಅನುಬವಗಳು ಎಂತಹವು ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ ಎಂಬುದನ್ನು ವ್ಯಾಕರಣ ತಿಳಿಸುತ್ತದೆ. ಮನುಶ್ಯನಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಈ ಒಂದು ವಿಶಿಶ್ಟವಾದ ಅಳವಿನ ಕುರಿತಾಗಿ ಏನು ಹೇಳಬೇಕಿದ್ದರೂ ವ್ಯಾಕರಣದಲ್ಲಿ ಬಳಕೆಯಾಗುವ ಅರಿಮೆಯ ಪದಗಳನ್ನು ಬಳಸಲೇಬೇಕಾಗುತ್ತದೆ. ಹಾಗಾಗಿ, ಮಕ್ಕಳಿಗೆ ಈ ಅರಿಮೆಯ ತಿಳಿವು ದೊರಕುವಂತೆ ಮಾಡುವುದು ಬೇರೆಲ್ಲಾ ಬಗೆಯ ಅರಿಮೆ(ವಿಜ್ನಾನ)ಗಳ ತಿಳಿವು ದೊರಕುವಂತೆ ಮಾಡುವಶ್ಟೇ ಮುಕ್ಯವಾದುದು.

ಹಾಗಾಗಿ, ಅದರ ತಿಳಿವನ್ನು ಮಕ್ಕಳಿಗೆ ಯಾವಾಗ ಮತ್ತು ಹೇಗೆ ಕೊಡಿಸಬಹುದು ಎಂಬ ವಿಶಯದಲ್ಲಿ ಚರ‍್ಚೆ ನಡೆಸಬಹುದಲ್ಲದೆ, ಅದು ಬೇಕೇ ಬೇಡವೇ ಎಂಬ ವಿಶಯದಲ್ಲಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಯಾವುದು ಕನ್ನಡ ವ್ಯಾಕರಣ?

ನುಡಿಯರಿಮೆಯ ಇಣುಕುನೋಟ – 12

ಕೇಶಿರಾಜನ ಕಾಲದಿಂದಲೂ ಕನ್ನಡ ಪಂಡಿತರು ಯಾವುದನ್ನು‘ಕನ್ನಡ ವ್ಯಾಕರಣ’ ಎಂಬುದಾಗಿ ಕರೆಯುತ್ತ ಬಂದಿದ್ದಾರೋ ಅದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲ; ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳು ಕನ್ನಡದಲ್ಲೂ ಇರಬಹುದು, ಇಲ್ಲವೇ ಇರಬೇಕು ಎಂಬ ತಪ್ಪು ಕಲ್ಪನೆಯಲ್ಲಿ ಆ ಕಟ್ಟಲೆಗಳನ್ನು ಕನ್ನಡದಲ್ಲಿ ಕಾಣಲು ನಡೆಸಿದ ಒಂದು ವ್ಯರ‍್ತ ಪ್ರಯತ್ನ ಮಾತ್ರ.

ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಇದೇ ಕನ್ನಡದ್ದಲ್ಲದ ವ್ಯಾಕರಣವನ್ನು ಕಲಿಸಲಾಗುತ್ತಿದೆ. ಅದನ್ನು ಯಾಕೆ ‘ಕನ್ನಡ ವ್ಯಾಕರಣ’ವೆಂದು ಕರೆಯಬೇಕು ಎಂಬುದನ್ನು ಮಕ್ಕಳೂ ತಿಳಿಯಲಾರರು, ಅದನ್ನು ಕಲಿಸುವ ಮಾಸ್ತರರೂ ತಿಳಿಸಿಕೊಡಲಾರರು. ಇನ್ನು ಅದರಿಂದ ಪ್ರಯೋಜನವನ್ನೇನಾದರೂ ಪಡೆಯುವುದಂತೂ ದೂರವೇ ಉಳಿಯಿತು.

ನಿಜಕ್ಕೂ ಈ ‘ವ್ಯಾಕರಣ’ ಎಂಬುದು ಏನು ಮಾಡಬೇಕು? ಒಂದು ನುಡಿಯಲ್ಲಿ ಬರುವ ಪದಗಳ ಒಳರಚನೆ ಎಂತಹದು, ಪದಗಳನ್ನು ಬಳಸಿ ಆ ನುಡಿಯಲ್ಲಿ ಸೊಲ್ಲು(ವಾಕ್ಯ)ಗಳನ್ನು ಉಂಟುಮಾಡುವುದು ಹೇಗೆ, ಮತ್ತು ಸೊಲ್ಲುಗಳನ್ನು ಬಳಸಿ ಅದರಲ್ಲಿ ಬರಹಗಳನ್ನು ಬರೆಯುವುದು ಹೇಗೆ ಎಂಬಂತಹ ಸೊಲ್ಲುಗಳ ಕುರಿತಾಗಿರುವ ತಿಳಿವನ್ನು ಅದು ನಮಗೆ ಒದಗಿಸಬೇಕು.
ಕನ್ನಡದ ಕುರಿತಾಗಿರುವ ಇಂತಹ ತಿಳಿವನ್ನು ನಾವು ಇಲ್ಲಿ ‘ಕನ್ನಡದ ಸೊಲ್ಲರಿಮೆ’ ಎಂದು ಕರೆಯೋಣ; ಯಾಕೆಂದರೆ, ‘ಕನ್ನಡ ವ್ಯಾಕರಣ’ ಎಂಬುದಕ್ಕೆ ಇವತ್ತು ಮೇಲೆ ವಿವರಿಸಿದಂತಹ ಬೇರೆಯೇ ಹುರುಳಿದೆ.

ಪಾಣಿನಿಯೇ ಮೊದಲಾದ ಸಂಸ್ಕ್ರುತದ ಪಂಡಿತರು ಆ ನುಡಿಯಲ್ಲಿ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗುತ್ತದೆ, ಅವುಗಳ ಹಿಂದಿರುವ ಕಟ್ಟಲೆಗಳು ಎಂತಹವು ಎಂಬುದನ್ನು ಕಂಡುಹಿಡಿದಿದ್ದರು, ಮತ್ತು ಅಂತಹ ಕಟ್ಟಲೆಗಳನ್ನು ಒಟ್ಟುಗೂಡಿಸಿ, ಅದನ್ನು ‘ಸಂಸ್ಕ್ರುತ ವ್ಯಾಕರಣ’ ಎಂಬುದಾಗಿ ಕರೆದಿದ್ದರು; ಅಂತಹದೇ ಕೆಲಸವನ್ನು ಇವತ್ತು ನಾವು ಕನ್ನಡದಲ್ಲಿ ನಡೆಸಬೇಕಾಗಿದೆ.
ಸೊಲ್ಲುಗಳನ್ನು ಕಟ್ಟುವ ಬಗೆ ಸಂಸ್ಕ್ರುತದಲ್ಲಿರುವುದಕ್ಕಿಂತ ಕನ್ನಡದಲ್ಲಿ ತೀರ ಬೇರಾಗಿದೆ; ಹಾಗಾಗಿ, ಸಂಸ್ಕ್ರುತ ವ್ಯಾಕರಣದಲ್ಲಿ ಬರುವ ಕಟ್ಟಲೆಗಳಿಗಿಂತ ತೀರ ಬೇರಾಗಿರುವ ಕಟ್ಟಲೆಗಳು ‘ಕನ್ನಡದ ಸೊಲ್ಲರಿಮೆ’ಯಲ್ಲಿ ಬರಬೇಕಾಗುತ್ತದೆ.

ಸಂಸ್ಕ್ರುತದಲ್ಲಿ ಎರಡು (ಇಲ್ಲವೇ ಹೆಚ್ಚು) ಪದಗಳನ್ನು ಒಟ್ಟುಸೇರಿಸಿ ಹೊಸಪದವನ್ನು ಉಂಟುಮಾಡುವ ಹೊಲಬನ್ನು ‘ಸಮಾಸ’ ಎಂಬುದಾಗಿ ಕರೆಯಲಾಗುತ್ತದೆ; ನಾಮಪದಗಳನ್ನು ಮಾತ್ರ ಈ ರೀತಿ ಸಂಸ್ಕ್ರುತದಲ್ಲಿ ಒಟ್ಟುಸೇರಿಸಲು ಬರುತ್ತದೆ. ಹಾಗಾಗಿ, ಒಟ್ಟುಸೇರಿಸಿದ ಪದಗಳಲ್ಲಿ ಯಾವುದು ಮುಕ್ಯ ಎಂಬುದರ ಮೇಲೆ ಈ ಸಮಾಸಗಳನ್ನು ತತ್ಪುರುಶ (ಎರಡನೆಯದು ಮುಕ್ಯ), ಅವ್ಯಯೀಬಾವ (ಮೊದಲನೆಯದು ಮುಕ್ಯ), ದ್ವಂದ್ವ (ಎರಡೂ ಮುಕ್ಯ) ಮತ್ತು ಬಹುವ್ರೀಹಿ (ಎರಡೂ ಮುಕ್ಯವಲ್ಲ, ಬೇರೊಂದು ಪದ ಮುಕ್ಯ) ಎಂಬ ನಾಲ್ಕು ಬಗೆಗಳಲ್ಲಿ ಗುಂಪಿಸಬಹುದೆಂದು ಸಂಸ್ಕ್ರುತ ವ್ಯಾಕರಣಗಳು ಹೇಳುತ್ತವೆ.

ಆದರೆ, ಕನ್ನಡದಲ್ಲಿ ಎರಡು ಪದಗಳನ್ನು ಒಟ್ಟುಸೇರಿಸಿ ಹೊಸದೊಂದು ಪದವನ್ನು ಉಂಟುಮಾಡುವ ಬಗೆ ಇದರಿಂದ ತೀರ ಬೇರಾದುದು. ನಾಮಪದ, ಕ್ರಿಯಾಪದ, ಮತ್ತು ಗುಣಪದಗಳೆಂಬ ಮೂರು ಬಗೆಯ ಪದಗಳನ್ನು ಇಂತಹ ಹೊಸಪದಗಳ ಮೊದಲನೆಯ ಪದವಾಗಿ ಬಳಸಲು ಬರುತ್ತದೆ; ಅವುಗಳ ಎರಡನೆಯ ಪದ ಮಾತ್ರ ಯಾವಾಗಲೂ ಹೆಸರುಪದವಾಗಿರುತ್ತದೆ.

ಕಯ್ಮಗ್ಗ, ಬಯಲಾಟ, ನೆಲಗಡಲೆ ಎಂಬಂತಹ ಪದಗಳಲ್ಲಿ ಎರಡು ನಾಮಪದಗಳು ಒಟ್ಟುಸೇರಿವೆ; ಕಡೆಗೋಲು, ಸಿಡಿಮದ್ದು, ಬಿಚ್ಚುಕತ್ತಿ ಎಂಬಂತಹ ಪದಗಳಲ್ಲಿ ಕ್ರಿಯಾಪದ ಮತ್ತು ನಾಮಪದಗಳು ಒಟ್ಟುಸೇರಿವೆ (ಕಡೆ, ಸಿಡಿ ಮತ್ತು ಬಿಚ್ಚು ಎಂಬವು ಕ್ರಿಯಾಪದಗಳು); ಬಿಸಿನೀರು, ದೊಡ್ಡಮ್ಮ, ಬೆಳ್ಳುಳ್ಳಿ ಎಂಬಂತಹ ಪದಗಳಲ್ಲಿ ಗುಣಪದ ಮತ್ತು ನಾಮಪದಗಳು ಒಟ್ಟುಸೇರಿವೆ.
ಹಾಗಾಗಿ, ಕನ್ನಡದಲ್ಲಿ ಬರುವ ‘ಸಮಾಸ’ ಯಾವ ಬಗೆಯದು ಎಂಬುದನ್ನು ತಿಳಿಯಬೇಕಿದ್ದಲ್ಲಿ ಅಂತಹ ಹೊಸಪದಗಳಲ್ಲಿ ಮೊದಲಿಗೆ ಯಾವ ಬಗೆಯ ಪದ ಬಂದಿದೆ ಎಂಬುದನ್ನು ತಿಳಿಯಬೇಕಲ್ಲದೆ, ಸಂಸ್ಕ್ರುತದ ಹಾಗೆ ಯಾವ ಪದ ಮುಕ್ಯ ಎಂಬುದನ್ನಲ್ಲ.

ಇಂಗ್ಲಿಶ್‌ನಂತಹ ಬೇರೆ ನುಡಿಗಳಿಂದ ಹೊಸ ಹೊಸ ವಿಶಯಗಳನ್ನು ಕನ್ನಡಕ್ಕೆ ತರಬೇಕಾದಾಗ, ಅದಕ್ಕಾಗಿ ಹಲವಾರು ಹೊಸ ಪದಗಳನ್ನು ಕನ್ನಡದಲ್ಲಿ ಉಂಟುಮಾಡಿಕೊಳ್ಳಬೇಕಾಗುತ್ತದೆ. ನಿಜಕ್ಕೂ ಕನ್ನಡ ಪದಗಳ ಒಳರಚನೆಯೆಂತಹದು ಎಂಬುದನ್ನು ತಿಳಿದವರು ಮಾತ್ರ ಈ ಕೆಲಸವನ್ನು ಸರಿಯಾಗಿ ನಡೆಸಬಲ್ಲರು.

ಸಂಸ್ಕ್ರುತ ಪದಗಳ ಒಳರಚನೆಯೇ ಕನ್ನಡ ಪದಗಳಿಗೂ ಇದೆ ಎಂಬ ತಪ್ಪು ತಿಳಿವನ್ನು ‘ಕನ್ನಡ ವ್ಯಾಕರಣ’ಗಳಿಂದ ಪಡೆದಿರುವ ಕನ್ನಡ ಪಂಡಿತರಿಗೆ ಇಂತಹ ಹೊಸಪದಗಳನ್ನು ಕನ್ನಡದಲ್ಲೇನೇ ಉಂಟುಮಾಡುವುದು ಹೇಗೆ ಎಂಬುದು ಗೊತ್ತೇ ಇರುವುದಿಲ್ಲ. ಹಾಗಾಗಿ, ಹೊಸಪದಗಳು ಬೇಕಾದಾಗಲೆಲ್ಲ ಅವರು ಅವನ್ನು ಸಂಸ್ಕ್ರುತದಲ್ಲಿ ಉಂಟುಮಾಡಿ ಕನ್ನಡದೊಳಗೆ ತುರುಕುತ್ತಾರೆ, ಮತ್ತು ಸಂಸ್ಕ್ರುತದ ನೆರವಿಲ್ಲದೆ ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡಲು ಸಾದ್ಯವೇ ಇಲ್ಲ ಎಂಬ ತಪ್ಪು ತೀರ‍್ಮಾನಕ್ಕೆ ಬರುತ್ತಾರೆ.

ಕ್ರಿಯಾಪದಗಳನ್ನು ನಾಮಪದಗಳೊಂದಿಗೆ ಸೇರಿಸಿ ಹೊಸಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಲು ಬರುವುದಿಲ್ಲವಾದರೂ ಕನ್ನಡದಲ್ಲಿ ಬರುತ್ತದೆ ಎಂಬ ಕನ್ನಡದ್ದೇ ಆದ ಸೊಲ್ಲರಿಮೆಯ ಕಟ್ಟಲೆಯನ್ನು ತಿಳಿದವರಿಗೆ ನೂರಾರು ಹೊಸಪದಗಳನ್ನು ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ. ಇಂಗುಗುಂಡಿ, ಇಡುಗಂಟು, ಇಳಿನೀರು, ಉಜ್ಜುಗಾಯ, ಉಬ್ಬುಗನ್ನಡಿ, ಕಟ್ಟುಪಟ್ಟಿ, ಕರೆಸಾಲ, ತಡೆಯೋಟ, ತೇಲುಮನೆ, ತಳ್ಳುಗುಂಡಿ ಮೊದಲಾದ ಇಂತಹ ಪದಗಳು ಕನ್ನಡ ಬರಹದಲ್ಲೂ ತುಂಬಾ ಚನ್ನಾಗಿ ಹೊಂದಿಕೊಳ್ಳುತ್ತವೆ.

ಕನ್ನಡದ ಆಡುನುಡಿಗಳಲ್ಲಿಯೂ ಈ ಹೊಲಬನ್ನು ಬಳಸಿ ಉಂಟುಮಾಡಿರುವ ತುಂಬುಕಡಬು, ಬಿಚ್ಚೋಲೆ, ತೂಗುದೀಪ ಎಂಬಂತಹ ಹಲವಾರು ಪದಗಳು ಬಳಕೆಯಲ್ಲಿವೆ; ಆದರೆ, ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳೇ ಕನ್ನಡದಲ್ಲೂ ಇವೆಯೆಂಬುದಾಗಿ ಬ್ರಮಿಸುವ ‘ಕನ್ನಡ ವ್ಯಾಕರಣ’ಗಳಿಂದಾಗಿ ದಾರಿತಪ್ಪಿರುವ ಕನ್ನಡ ಪಂಡಿತರು ತಮ್ಮಲ್ಲಿ ಸ್ವಾಬಾವಿಕವಾಗಿ ಬೆಳೆದುಬಂದಿರಬಹುದಾದ ಈ ತಾಯ್ನುಡಿಯ ಅಳವನ್ನೇ ಕಳೆದುಕೊಂಡಿದ್ದಾರೆ.

ಸಂಸ್ಕ್ರುತದ ವಾಕ್ಯಗಳಲ್ಲಿ ಏಳು ವಿಬಕ್ತಿಗಳು ಬಳಕೆಯಾಗುತ್ತವೆ ಎಂಬುದನ್ನು ಸಂಸ್ಕ್ರುತದ ಪಂಡಿತರು ಕಂಡುಕೊಂಡಿದ್ದಾರೆ; ಕನ್ನಡದ ಸೊಲ್ಲುಗಳನ್ನು ಪರಿಶೀಲಿಸಿದೆವಾದರೆ, ಅವುಗಳಲ್ಲಿ ಬರುವ ಪದಗಳಿಗೆ ಒಟ್ಟು ನಾಲ್ಕು ವಿಬಕ್ತಿರೂಪಗಳು ಮಾತ್ರ ಕಾಣಿಸುತ್ತವಲ್ಲದೆ, ಏಳು ವಿಬಕ್ತಿ ರೂಪಗಳು ಕಾಣಿಸುವುದಿಲ್ಲ; ಹಾಗಿರುವಾಗ, ಸಂಸ್ಕ್ರುತದ ಹಾಗೆ ಕನ್ನಡದಲ್ಲೂ ಏಳು ವಿಬಕ್ತಿಗಳಿರಬೇಕು ಎಂದು ಬ್ರಮಿಸಿ, ಅವನ್ನು ಕಾಣಲು ಪ್ರಯತ್ನಿಸುವ ‘ಕನ್ನಡದ ವ್ಯಾಕರಣ’ ಕನ್ನಡದ್ದಾಗುವುದು ಹೇಗೆ?

ಕನ್ನಡದಲ್ಲಿ ಮೂರು ಕಾಲಗಳಿವೆಯೆಂದು ‘ಕನ್ನಡ ವ್ಯಾಕರಣ’ಗಳು ಹೇಳುತ್ತವೆ; ಇದರಂತೆ, ಮಾಡುತ್ತೇನೆ ಎಂಬ ರೂಪ ಈಗ ನಡೆಯುತ್ತಿರುವ ಕೆಲಸವನ್ನು ತಿಳಿಸಬೇಕು, ಮತ್ತು ಮಾಡುವೆನು ಎಂಬ ರೂಪ ಮುಂದೆ ನಡೆಯಲಿರುವ ಕೆಲಸವನ್ನು ತಿಳಿಸಬೇಕು.

ಆದರೆ, ನಿಜಕ್ಕೂ ಕನ್ನಡದಲ್ಲಿ ನಾಳೆ ಮಾಡುತ್ತೇನೆ, ಬರುವ ವರ‍್ಶ ಮಾಡುತ್ತೇನೆ ಎಂಬಂತಹ ಸೊಲ್ಲುಗಳಲ್ಲಿ ಕಾಣಿಸುವ ಹಾಗೆ, ಮಾಡುತ್ತೇನೆ ಎಂಬುದು ಮುಂದೆ ನಡೆಯಲಿರುವ ಕೆಲಸವನ್ನು ತಿಳಿಸುತ್ತದೆ; ಈಗ ನಡೆಯುತ್ತಿರುವ ಕೆಲಸವನ್ನು ತಿಳಿಸಲು ಮಾಡುತ್ತಿದ್ದೇನೆ ಎಂಬ ಮಾಡು ಪದಕ್ಕೆ ಇರು ಪದವನ್ನು ಸೇರಿಸಿರುವ ಬೇರೆಯೇ ಪದರೂಪವನ್ನು ಬಳಸಲಾಗುತ್ತದೆ. ಇಂತಹ ಕಣ್ಣಿಗೆ ಹೊಡೆದು ಕಾಣಿಸುವಂತಹ ತಪ್ಪುಗಳಿರುವ ‘ಕನ್ನಡ ವ್ಯಾಕರಣ’ ಕನ್ನಡದ್ದಾಗುವುದು ಹೇಗೆ?

ಕಂಪ್ಯೂಟರ್‌ಗಳನ್ನು ಬಳಸಿ ಒಂದು ನುಡಿಯ ಸೊಲ್ಲುಗಳನ್ನು ಇನ್ನೊಂದು ನುಡಿಗೆ ಅನುವಾದಿಸಲು ಬರುತ್ತದೆ; ಆದರೆ, ಹೀಗೆ ಮಾಡಬೇಕಿದ್ದಲ್ಲಿ, ಆ ಎರಡು ನುಡಿಗಳ ವಿವರವಾದ ಸೊಲ್ಲರಿಮೆಗಳನ್ನು ಕಂಪ್ಯೂಟರ್‌ಗಳಿಗೆ ಒದಗಿಸಿಕೊಡಬೇಕಾಗುತ್ತದೆ. ಇಂಗ್ಲಿಶ್ ನುಡಿಗೆ ಈಗಾಗಲೇ ಸಾಕಶ್ಟು ವಿವರವಾದ ವ್ಯಾಕರಣವನ್ನು ಬರೆಯಲಾಗಿದ್ದು, ಅದನ್ನು ಕಂಪ್ಯೂಟರ್‌ಗಳಿಗೆ ಒದಗಿಸಿಕೊಡಲಾಗಿದೆ; ಕನ್ನಡಕ್ಕೂ ಇಂತಹದೊಂದು ವಿವರವಾದ ಸೊಲ್ಲರಿಮೆಯನ್ನು ಬರೆದಲ್ಲಿ, ಇಂಗ್ಲಿಶ್ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವಲ್ಲಿಯೂ ಕಂಪ್ಯೂಟರನ್ನು ಬಳಸಲು ಸಾದ್ಯವಾಗಬಹುದು.

ಆದರೆ, ಇಂತಹ ಕೆಲಸಕ್ಕೆ ಸಂಸ್ಕ್ರುತ ವ್ಯಾಕರಣವನ್ನೇ ‘ಕನ್ನಡ ವ್ಯಾಕರಣ’ವೆಂದು ಬ್ರಮಿಸುವ ಕೇಶಿರಾಜನ ಕನ್ನಡ ವ್ಯಾಕರಣವಾಗಲಿ, ಇವತ್ತು ಶಾಲೆಗಳಲ್ಲಿ ಕಲಿಸುವ ‘ಕನ್ನಡ ವ್ಯಾಕರಣ’ವಾಗಲಿ ಯಾವ ನೆರವನ್ನೂ ನೀಡಲಾರದು. ಕನ್ನಡದಲ್ಲಿ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಬಲ್ಲ ‘ಕನ್ನಡದ ಸೊಲ್ಲರಿಮೆ’ಯೊಂದೇ ಈ ಕೆಲಸದಲ್ಲಿ ನೆರವನ್ನು ನೀಡಬಲ್ಲುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter