Posts Tagged ‘ಹೊಲಬು’

ಎಣಿಕೆಯಲ್ಲೂ ಹಲವು ಬಗೆಗಳಿವೆ

ನುಡಿಯರಿಮೆಯ ಇಣುಕುನೋಟ – 28

ಕನ್ನಡದಲ್ಲಿ ಎಣಿಸುವುದಕ್ಕೂ ಬೇರೆ ನುಡಿಗಳಲ್ಲಿ ಎಣಿಸುವುದಕ್ಕೂ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ; ಕನ್ನಡದಲ್ಲಿ ಎಣಿಕೆಪದಗಳನ್ನು ಉಂಟುಮಾಡಲು ಮುಕ್ಯವಾಗಿ ಎರಡು ಬಗೆಯ ಹೊಲಬುಗಳನ್ನು ಬಳಸಲಾಗುತ್ತದೆ: ಒಂದು ಎಣಿಕೆಪದವನ್ನು ನೇರವಾಗಿ ಇನ್ನೊಂದು ಎಣಿಕೆಪದದೊಂದಿಗೆ ಸೇರಿಸಿ ಹೇಳುವುದು ಒಂದು ಹೊಲಬು; ಇದನ್ನು ಇಪ್ಪತ್ತು (ಎರಡು+ಹತ್ತು), ಇನ್ನೂರು (ಎರಡು+ನೂರು) ಎಂಬಂತಹ ಎಣಿಕೆಪದಗಳಲ್ಲಿ ಕಾಣಬಹುದು. ಒಂದು ಎಣಿಕೆಪದದ ಪತ್ತುಗೆ(ಸಂಬಂದ)ರೂಪವನ್ನು ಇನ್ನೊಂದು ಎಣಿಕೆಪದಕ್ಕೆ ಸೇರಿಸಿ ಹೇಳುವುದು ಇನ್ನೊಂದು ಹೊಲಬು; ಇದನ್ನು ಇಪ್ಪತ್ತಾರು (ಇಪ್ಪತ್ತರ+ಆರು), ನೂರ ಹತ್ತು (ನೂರರ+ಹತ್ತು) ಎಂಬಂತಹ ಎಣಿಕೆಪದಗಳಲ್ಲಿ ಕಾಣಬಹುದು.

ಇವುಗಳಲ್ಲಿ ಮೊದಲನೆಯದನ್ನು ಪೆಚ್ಚಿಸುವ (ಗುಣಿಸುವ) ಹುರುಳಿನಲ್ಲೂ, ಎರಡನೆಯದನ್ನು ಕೂಡಿಸುವ ಹುರುಳಿನಲ್ಲೂ ಬಳಸಲಾಗುತ್ತದೆ. ಆದರೆ, ಈ ಕಟ್ಟಲೆಗೆ ಒಂದು ಹೊರಪಡಿಕೆಯೂ ಇದೆ: ಒಂಬತ್ತು (ಒಂದು+ಹತ್ತು) ಎಂಬುದರಲ್ಲಿ ಮೊದಲನೆಯ ಹೊಲಬು ಬಳಕೆಯಾಗಿದೆಯಾದರೂ ಅದಕ್ಕೆ ‘ಹತ್ತರಿಂದ ಒಂದು ಕಡಿಮೆ’ ಎಂಬ ಕಳೆತದ ಹುರುಳಿದೆ.

ಒಂದರಿಂದ ಎಂಟರ ವರೆಗಿನ ಎಣಿಕೆಪದಗಳು, ಮತ್ತು ಹತ್ತು, ನೂರು ಎಂಬ ಪದಗಳು ಒತ್ತೆ ಪದಗಳು; ಹನ್ನೊಂದರಿಂದ ಹತ್ತೊಂಬತ್ತರ ವರೆಗಿನ ಪದಗಳಲ್ಲಿ ಹತ್ತು ಪದದ ಪತ್ತುಗೆರೂಪಕ್ಕೆ ಒಂದರಿಂದ ಒಂಬತ್ತರವರೆಗಿನ ಪದಗಳನ್ನು ಸೇರಿಸಲಾಗಿದೆ. ಅದಕ್ಕೆ ಮೇಲೆ, ಇಪ್ಪತ್ತು ಎಂಬುದರಲ್ಲಿ ಎರಡು (ಇಪ್) ಪದಕ್ಕೆ ಹತ್ತು (ಪತ್ತು) ಪದವನ್ನು ನೇರವಾಗಿ ಸೇರಿಸಲಾಗಿದೆ. ಇದೇ ರೀತಿಯಲ್ಲಿ, ಮುಂದೆಯೂ ಇಪ್ಪತ್ತರಿಂದ ಇಪ್ಪತ್ತೊಂಬತ್ತರ ವರೆಗಿನ ಪದಗಳಲ್ಲಿ ಇಪ್ಪತ್ತು ಪದದ ಪತ್ತುಗೆರೂಪಕ್ಕೆ ಒಂದರಿಂದ ಒಂಬತ್ತರ ವರೆಗಿನ ಪದಗಳನ್ನು ಸೇರಿಸಲಾಗಿದೆ (ಇಪ್ಪತ್ತೊಂದು, ಇಪ್ಪತ್ತೆರಡು), ಮತ್ತು ಮೂವತ್ತು ಪದದಲ್ಲಿ ಮೂರು ಪದಕ್ಕೆ ಹತ್ತು (ವತ್ತು) ಪದವನ್ನು ನೇರವಾಗಿ ಸೇರಿಸಲಾಗಿದೆ.

ಮುಂದೆ ತೊಂಬತ್ತೊಂಬತ್ತರ ವರೆಗೂ ಇದೇ ರೀತಿಯಲ್ಲಿ ಈ ಎರಡು ಹೊಲಬುಗಳ ಬಳಕೆಯಾಗಿದೆ: ಮೊದಲ ಒಂಬತ್ತು ಎಣಿಕೆಪದಗಳನ್ನು ಪತ್ತುಗೆರೂಪದ ಮೂಲಕ ಉಂಟುಮಾಡಲಾಗಿದೆ, ಮತ್ತು ಹತ್ತನೆಯ ಪದವನ್ನು ನಾಲ್ಕು, ಅಯ್ದು, ಆರು ಮೊದಲಾದ ಪದಗಳಿಗೆ ನೇರವಾಗಿ ಹತ್ತು ಪದವನ್ನು ಸೇರಿಸಿ ಉಂಟುಮಾಡಲಾಗಿದೆ. ನೂರು ಎಂಬುದನ್ನು ತಿಳಿಸಲು ಮಾತ್ರ ಒತ್ತೆ ಪದದ ಬಳಕೆಯಾಗಿದೆ.

ನೂರರ ಬಳಿಕವೂ ಇವೇ ಎರಡು ಹೊಲಬುಗಳನ್ನು ಬಳಸಲಾಗಿದೆ: ನೂರ ಒಂದು, ನೂರ ಎರಡು, … ನೂರ ಹತ್ತು, … ನೂರ ಮೂವತ್ತೆಂಟು … ಎಂಬುದಾಗಿ ಒಟ್ಟು ನೂರು ಎಣಿಕೆಗಳನ್ನು ನೂರು ಎಂಬ ಪದದ ಪತ್ತುಗೆ ರೂಪಕ್ಕೆ ಒಂದರಿಂದ ತೊಂಬತ್ತೊಂಬತ್ತರ ವರೆಗಿನ ಪದಗಳನ್ನು ಸೇರಿಸಿ ಹೇಳಲಾಗಿದೆ, ಮತ್ತು ಮುಂದಿನ ಎಣಿಕೆಪದಗಳನ್ನು ಎರಡು, ಮೂರು ಮೊದಲಾದ ಒಂಬತ್ತು ಪದಗಳಿಗೆ ನೇರವಾಗಿ ನೂರು ಪದವನ್ನು ಸೇರಿಸಿ ಇನ್ನೂರು, ಮುನ್ನೂರು ಮೊದಲಾದ ಪದಗಳನ್ನು ಉಂಟುಮಾಡಲಾಗಿದೆ. ಇದು ಕನ್ನಡತಮಿಳುತೆಲುಗು ಮೊದಲಾದ ದ್ರಾವಿಡ ನುಡಿಗಳಲ್ಲಿ ಬಳಕೆಯಾಗುವ ಎಣಿಕೆಯ ಹೊಲಬಾಗಿದೆ.

ಈ ಎಣಿಕೆಪದಗಳಲ್ಲಿ ಬರುವ ಪದಗಳ ಓರಣ ಅಂಕೆಗಳಲ್ಲಿ ಕಾಣಿಸುವ ಓರಣವನ್ನೇ ಹೋಲುತ್ತದೆ; ಎತ್ತುಗೆಗಾಗಿ, ‘ಮೂವತ್ತೆಂಟು’ ಎಂಬುದರಲ್ಲಿ ‘3(ಹತ್ತು)8’ ಎಂಬ ಓರಣವಿದೆ, ಮತ್ತು ಅದನ್ನು 38 ಎಂಬುದಾಗಿ ಅಂಕೆಯಲ್ಲಿ ಬರೆಯುವಾಗಲೂ 3 ಮೊದಲು ಬರುತ್ತದೆ, ಮತ್ತು 8 ಬಳಿಕ ಬರುತ್ತದೆ. ಇದೇ ರೀತಿಯಲ್ಲಿ, ‘ಎರಡು ಸಾವಿರದ ಮುನ್ನೂರ ನಲುವತ್ತಾರು’ ಎಂಬುದರಲ್ಲಿ ಕಾಣಿಸುವ ‘2(ಸಾವಿರ)3(ನೂರು)4(ಹತ್ತು)6’ ಎಂಬ ಓರಣವೇ 2346 ಎಂಬ ಅಂಕೆಯಲ್ಲೂ ಕಾಣಿಸುತ್ತದೆ.

ಆದರೆ, ಸಂಸ್ಕ್ರುತದಲ್ಲಿ ಮತ್ತು ಅದರಿಂದ ಬೆಳೆದು ಬಂದಿರುವ ಹಿಂದಿಮರಾಟಿ ಮೊದಲಾದ ಇಂಡೋ-ಆರ‍್ಯನ್ ನುಡಿಗಳಲ್ಲಿ ಎಣಿಕೆಯ ಪದಗಳನ್ನು ಬೇರೆಯೇ ಬಗೆಯಲ್ಲಿ ಕಟ್ಟಲಾಗಿದ್ದು, ಅವಕ್ಕೂ ಅಂಕೆಗಳಿಗೂ ನಡುವೆ ಇಂತಹ ಹೊಂದಾಣಿಕೆ ಕಾಣಿಸುವುದಿಲ್ಲ. ಎತ್ತುಗೆಗಾಗಿ, ಹಿಂದಿಯಲ್ಲಿ ‘ಅಡ್ತೀಸ್’ ಎಂಬ ಎಣಿಕೆಪದದಲ್ಲಿ ‘8-3(ಹತ್ತು)’ ಎಂಬ ಓರಣವಿದೆ; ಈ ಓರಣ 38 ಎಂಬ ಅಂಕೆಯಲ್ಲಿರುವ ಓರಣಕ್ಕಿಂತ ಬೇರಾಗಿದೆ; ಸಂಸ್ಕ್ರುತದಲ್ಲೂ ಎಪ್ಪತ್ತಯ್ದು ಎಂಬ ಹುರುಳನ್ನು ಕೊಡುವ ‘ಪಂಚಸಪ್ತತಿ’ ಎಂಬ ಎಣಿಕೆಪದದಲ್ಲಿ 5-7(ಹತ್ತು) ಎಂಬ ಓರಣವಿದ್ದು, ಅದು 75 ಎಂಬ ಅಂಕೆಯಲ್ಲಿರುವ ಓರಣಕ್ಕಿಂತ ಬೇರಾಗಿದೆ.

ಕನ್ನಡ ಮತ್ತು ಸಂಸ್ಕ್ರುತಗಳೆರಡರಲ್ಲೂ ಹತ್ತರ ಹೊಲಬು ಬಳಕೆಯಲ್ಲಿದೆ. ಆದರೆ, ಬೇರೆ ಕೆಲವು ನುಡಿಗಳಲ್ಲಿ ಬೇರೆಯೇ ಬಗೆಯ ಹೊಲಬುಗಳು ಬಳಕೆಯಾಗುತ್ತವೆ. ಅಸ್ಸಾಮಿನಲ್ಲಿ ವಾಸಿಸುವ ಕಸಾರಿ ಜನಾಂಗದವರ ಬೋಡೊ (ಇಲ್ಲವೇ ಬೋರೊ) ಎಂಬ ನುಡಿಯಲ್ಲಿ ಎಣಿಕೆಯನ್ನು ನಾಲ್ಕರ ಗುಂಪುಗಳಲ್ಲಿ ಮಾಡಲಾಗುತ್ತದೆ. ಈ ನುಡಿಯಲ್ಲಿ ಒಂದರಿಂದ ನಾಲ್ಕರ ವರೆಗೆ ಎಣಿಸಿ, ಮುಂದಕ್ಕೆ ಒಂದ್ನಾಲ್ಕು ಒಂದು (ಎಂದರೆ ಐದು), ಒಂದ್ನಾಲ್ಕು ಎರಡು (ಎಂದರೆ ಆರು), ಒಂದ್ನಾಲ್ಕು ಮೂರು (ಎಂದರೆ ಏಳು), ಎರಡ್ನಾಲ್ಕು (ಎಂದರೆ ಎಂಟು) ಎಂಬುದಾಗಿ ಎಣಿಕೆ ಸಾಗುತ್ತದೆ. ಹನ್ನೊಂದು ಎನ್ನಲು ಈ ನುಡಿಯಲ್ಲಿ ಎರಡ್ನಾಲ್ಕು ಮೂರು ಎನ್ನಬೇಕು, ಮತ್ತು ಹದಿನಾಲ್ಕು ಎನ್ನಲು ಮೂರ್ನಾಲ್ಕು ಎರಡು ಎನ್ನಬೇಕು.

ಬೋಡೊ ನುಡಿಯಲ್ಲಿ ಐದಕ್ಕೂ ಒಂದು ಪದ ಇದೆಯಾದ ಕಾರಣ, ಈ ನಾಲ್ಕರ ಹೊಲಬಿನಲ್ಲಿ ಇಪ್ಪತ್ತರವರೆಗೆ ಲೆಕ್ಕ ಹಾಕಲು ಬರುತ್ತದೆ; ಅದಕ್ಕಿಂತ ಹೆಚ್ಚಿನ ಎಣಿಕೆಯನ್ನು ನಡೆಸಲು, ಅದಕ್ಕೆ ಹೊಸದೊಂದು ಹೊಲಬು ಬೇಕಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ ನೂರರ ಹೊಲಬಿರುವಂತೆ, ಬೋಡೊ ನುಡಿಯಲ್ಲಿ ಇಪ್ಪತ್ತರ ಹೊಲಬಿದೆ. ಈ ಹೊಲಬಿನಂತೆ, ಇಪ್ಪತ್ತಾರು ಎನ್ನಲು ‘ಒಂದಿಪ್ಪತ್ತು ಒಂದ್ನಾಲ್ಕು ಎರಡು’ ಎನ್ನಬೇಕು, ಮತ್ತು ಎಪ್ಪತ್ತಮೂರು ಎನ್ನಲು ‘ಮೂರಿಪ್ಪತ್ತು ಮೂರ್ನಾಲ್ಕು ಒಂದು’ (3 x 20) + (3 x 4) + 1 ಎನ್ನಬೇಕು. ಇಂತಹ ಎಣಿಕೆ ನಮ್ಮದರಿಂದ ತೊಡಕಾದುದೆಂದು ನಮಗೆ ತೋರಬಹುದು, ಆದರೆ ಬೋಡೊ ನುಡಿಯಲ್ಲಿ ಮಾತನಾಡುವವರಿಗೆ ನಮ್ಮಲ್ಲಿರುವ ಹತ್ತರ ಹೊಲಬಿಗಿಂತ ಅವರ ನಾಲ್ಕರ ಹೊಲಬೇ ಒಳ್ಳೆಯದೆಂದು ಅನಿಸದಿರದು.

ನಮ್ಮಲ್ಲಿ ಎಣಿಕೆಯ ಪದಗಳನ್ನು ಉಂಟುಮಾಡುವಲ್ಲಿ ಹತ್ತರ ಹೊಲಬು ಬಳಕೆಯಲ್ಲಿದೆಯಾದ ಕಾರಣ, ಅದೇ ಹತ್ತರ ಹೊಲಬಿನಲ್ಲಿ ಉಂಟುಮಾಡಿರುವ ಲೀಟರ್, ರುಪಾಯಿ, ಗ್ರಾಮ್ ಮೊದಲಾದ ಅಳತೆಪದಗಳ ಬಳಕೆ ಮೊದಲಿಗಿದ್ದ ರಾತಲು, ಸೇರು, ಅಡಿ ಮೊದಲಾದವುಗಳಿಗಿಂತ ಒಳ್ಳೆಯವೆಂದು ಅನಿಸುತ್ತದೆ; ಆದರೆ, ನಾಲ್ಕರ ಹೊಲಬನ್ನು ಬಳಸುವವರಿಗೆ ಅವು ಹಿಂದಿನವಕ್ಕಿಂತ ಒಳ್ಳೆಯವೆಂದೇನೂ ಅನಿಸಬೇಕಾಗಿಲ್ಲ.

ಎಣಿಕೆಪದಗಳ ಬಳಕೆಯಲ್ಲೂ ನುಡಿಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳನ್ನು ಕಾಣಬಹುದು: ಕನ್ನಡದಲ್ಲಿ ಎಣಿಕೆಪದಗಳನ್ನು ಮರ, ಮನೆ, ಹುಡುಗ, ಚೆಂಡು ಮೊದಲಾದ ಪದಗಳಿಗೆ ನೇರವಾಗಿ ಸೇರಿಸಲು ಬರುತ್ತದೆ (ಮೂರು ಮನೆಗಳು, ಇಪ್ಪತ್ತೊಂದು ಚೆಂಡುಗಳು); ಆದರೆ, ನೀರು, ಅಕ್ಕಿ, ಎಣ್ಣೆ, ಹಾಲು ಮೊದಲಾದ ಪದಗಳಿಗೆ ಎಣಿಕೆಪದಗಳನ್ನು ಸೇರಿಸಬೇಕಿದ್ದಲ್ಲಿ, ಮೊದಲಿಗೆ ಅವಕ್ಕೆ ಅಳತೆಯನ್ನು ತಿಳಿಸುವ ಪದಗಳನ್ನು ಸೇರಿಸಬೇಕಾಗುತ್ತದೆ (ಮೂರು ಕಿಲೋ ಅಕ್ಕಿ, ಎರಡು ಲೀಟರ್ ಹಾಲು). ಇದಕ್ಕೆ ಬದಲು, ಬೋಡೊ ನುಡಿಯಲ್ಲಿ ಯಾವ ಪದಕ್ಕೂ ಎಣಿಕೆಪದಗಳನ್ನು ನೇರವಾಗಿ ಸೇರಿಸಲು ಬರುವುದಿಲ್ಲ; ಒಂದು ಪದ ತಿಳಿಸುವ ವ್ಯಕ್ತಿ ಇಲ್ಲವೇ ವಸ್ತು ಎಂತಹದು ಎಂಬುದನ್ನು ಅಡಕವಾಗಿ ತಿಳಿಸುವ ಪದವನ್ನು ಅದಕ್ಕೆ ಮೊದಲು ಸೇರಿಸಿ, ಆಮೇಲೆ ಎಣಿಕೆ ಪದಗಳನ್ನು ಸೇರಿಸಬೇಕಾಗುತ್ತದೆ.

ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ನುಡಿಗಳಲ್ಲಿ ಬಳಕೆಯಾಗುವ ಎಣಿಕೆಯ ಹೊಲಬುಗಳ ನಡುವೆ ಕಾಣಿಸಿಕೊಳ್ಳುತ್ತವೆ. ಇವೆಲ್ಲವೂ ಎಣಿಕೆಯನ್ನು ಬಳಸುವಲ್ಲಿ ಮಾನವನು ಕಂಡುಕೊಂಡಿರುವ ಜಾಣ್ಮೆಯ ಹೊಲಬುಗಳೆಂದು ಹೇಳಬಹುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಓದುವ ಹಾಗೆಯೇ ಬರೆಯುವುದು

ನುಡಿಯರಿಮೆಯ ಇಣುಕುನೋಟ – 10

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ ಓದುವ ಹಾಗೆಯೇ ಬರೆಯಬೇಕು ಎಂದು ಹೇಳಿದರೆ, ಎಲ್ಲರೂ ಅವರವರು ಹೇಗೆ ಓದುತ್ತಾರೋ ಹಾಗೆ ಬರೆಯಬಹುದು, ಇಲ್ಲವೇ ಎಲ್ಲರೂ ತಮಗೆ ಕುಶಿಬಂದ ಹಾಗೆ ಬರೆಯಬಹುದು ಎಂದು ಹೇಳಿದ ಹಾಗಾಗುವುದಿಲ್ಲ; ಅಂತಹ ಪ್ರತಿಕ್ರಿಯೆ ಬಾರದಂತೆ ನಾನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆಯಬೇಕು ಎಂಬುದಾಗಿ ಬರೆದಿದ್ದೆ. ಈ ಪದಗಳನ್ನು ಇವತ್ತು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಿದ್ದಾರೆ ಎಂಬುದನ್ನು ತಿಳಿವಿಗರು ಕಂಡುಹಿಡಿಯಬೇಕು, ಮತ್ತು ಅದಕ್ಕೆ ಅನುಸಾರವಾಗಿ, ಅವನ್ನು ಹೇಗೆ ಬರೆಯಬೇಕು ಎಂಬುದನ್ನು ತೀರ‍್ಮಾನಿಸಬೇಕು.

ಬರಹದ ಮೂಲಕ ನಾವು ನಮ್ಮ ಅನಿಸಿಕೆಗಳನ್ನು ಇನ್ನೊಬ್ಬರಿಗೆ ತಿಳಿಸುತ್ತೇವೆ, ಮತ್ತು ಬರಹ ರೂಪದಲ್ಲಿರುವ ಇನ್ನೊಬ್ಬರ ಅನಿಸಿಕೆಗಳನ್ನು ಓದಿನ ಮೂಲಕ ತಿಳಿದುಕೊಳ್ಳುತ್ತೇವೆ. ಈ ಎರಡು ಕೆಲಸಗಳೂ ಸರಿಯಾಗಿ ನಡೆಯಬೇಕಿದ್ದಲ್ಲಿ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವ ಮತ್ತು ಓದುವ ಕೆಲಸಗಳನ್ನು ನಡೆಸಬೇಕಾಗುತ್ತದೆ. ಈ ಕೆಲಸಗಳನ್ನು ಇವತ್ತು ಶಾಲೆಗಳಲ್ಲಿ ಕಲಿಸಲಾಗುತ್ತದೆಯಾದ ಕಾರಣ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವಂತೆ ಮತ್ತು ಓದುವಂತೆ ಮಾಡುವುದು ತೊಡಕಿನ ಕೆಲಸವೇನಲ್ಲ.

ಶಕಾರವನ್ನು ಹೆಚ್ಚಿನ ಕನ್ನಡಿಗರೂ ಶಕಾರವಾಗಿಯೇ ಓದುತ್ತಾರಲ್ಲದೆ ಸಕಾರವಾಗಿ ಬದಲಾಯಿಸಿ ಓದುವುದಿಲ್ಲ. ಆದರೆ, ಷಕಾರವನ್ನು ಹೆಚ್ಚಿನವರೂ ಶಕಾರವಾಗಿ ಬದಲಾಯಿಸಿ ಓದುತ್ತಾರೆ. ಹಾಗಾಗಿ, ಸಂಸ್ಕ್ರುತ ಎರವಲುಗಳಲ್ಲಿ ಬರುವ ಷಕಾರವನ್ನು ಶಕಾರವಾಗಿ ಬದಲಾಯಿಸಿ ಬರೆಯಬೇಕು, ಮತ್ತು ಶಕಾರವನ್ನು ಹಾಗೆಯೇ ಉಳಿಸಬೇಕು ಎಂಬ ತೀರ‍್ಮಾನಕ್ಕೆ ಬರಬೇಕಾಗುತ್ತದೆ.

ಇದೇ ರೀತಿಯಲ್ಲಿ, ಋಕಾರ, ಮಹಾಪ್ರಾಣ, ವಿಸರ‍್ಗ ಮೊದಲಾದ ಬೇರೆ ಕೆಲವು ಬರಿಗೆಗಳ ವಿಶಯದಲ್ಲೂ ಹೆಚ್ಚಿನ ಕನ್ನಡಿಗರ ಓದು ಹೇಗಿದೆಯೆಂಬುದನ್ನು ಕಂಡುಹಿಡಿದು, ಅದಕ್ಕನುಸಾರವಾಗಿ ಬರವಣಿಗೆಯನ್ನು ಬದಲಾಯಿಸಬೇಕು. ಹೀಗೆ ಮಾಡಿದಲ್ಲಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗಬಲ್ಲುದು, ಮತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗುವಂತೆ ಮಾಡುವ ಕೆಲಸವೂ ಸುಲಬವಾಗಬಲ್ಲುದು.

ಹಳೆಗನ್ನಡದ ಱಕಾರ ಮತ್ತು ೞಕಾರಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೆ ಎಂಬುದನ್ನು ಗಮನಿಸಿ, ಹೊಸಗನ್ನಡವನ್ನು ಬರಹದಲ್ಲಿ ಬಳಸಲು ತೊಡಗಿದ ಕಾಲದಲ್ಲಿ ಅವನ್ನು ರಕಾರ ಮತ್ತು ಳಕಾರಗಳಾಗಿ ಬದಲಾಯಿಸಿ ಬರೆಯಲು ತೊಡಗಲಾಯಿತು. ಈ ಮಾರ‍್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು. ಸಂಸ್ಕ್ರುತ ಎರವಲುಗಳಲ್ಲಿ ಬರುವ ಬರಿಗೆಗಳನ್ನು ಓದುವ ಹಾಗೆ ಬರೆಯುವಂತೆ ಮಾರ‍್ಪಡಿಸುವುದೂ ಇಂತಹದೇ ಒಂದು ಕೆಲಸ ಎಂಬುದನ್ನು ಇಲ್ಲಿ ಗಮನಿಸಬೇಕು.

ಇಶ್ಟರ ವರೆಗೆ ಈ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯುತ್ತಿದ್ದುದಕ್ಕೆ ಎರಡು ಮುಕ್ಯ ಕಾರಣಗಳಿದ್ದುವು: ಹಿಂದಿನ ಕಾಲದಲ್ಲಿ ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದವರೆಲ್ಲ ಅದನ್ನು ಸಂಸ್ಕ್ರುತದಲ್ಲಿ ಬರೆದಿರಿಸುತ್ತಿದ್ದರು; ಹಾಗಾಗಿ, ಯಾವುದೇ ಒಂದು ವಿಶಯದಲ್ಲಿ ಹೊಸ ತಿಳಿವನ್ನು ಪಡೆಯಬೇಕಿದ್ದರೂ ಸಂಸ್ಕ್ರುತದ ಮೊರೆಹೊಗಬೇಕಾಗಿತ್ತು.

ಇದರಿಂದಾಗಿ ಸಂಸ್ಕ್ರುತ ಬರಹಕ್ಕೆ ಒಂದು ಬಗೆಯ ಮೇಲ್ಮೆ ಬಂದಿತ್ತು; ಅದರ ಪದಗಳನ್ನು ಕನ್ನಡದಲ್ಲಿಯೂ ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿಸಿಕೊಳ್ಳುವುದರಿಂದ, ಮುಂದೆ ಸಂಸ್ಕ್ರುತ ಬರಹಗಳನ್ನು ಓದಲು ಕಲಿಯುವ ಕೆಲಸ ಕನ್ನಡಿಗರಿಗೆ ಸುಲಬವಾಗಬಹುದಾಗಿತ್ತು. ಕನ್ನಡ ಓದಿನ ಕಲಿಕೆ ಮುಂದೆ ನಡೆಸಲೇಬೇಕಾಗಿದ್ದ ಸಂಸ್ಕ್ರುತ ಓದಿಗೆ ಒಂದು ಮೆಟ್ಟಲಾಗಬಹುದಾಗಿತ್ತು. ಇದು ಒಂದು ಕಾರಣ.

ಆದರೆ, ಇವತ್ತು ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದಿರುವವರು ಯಾರೂ ಅದನ್ನು ಸಂಸ್ಕ್ರುತದಲ್ಲಿ ಬರೆಯಲು ಹೋಗುವುದಿಲ್ಲ; ಹಾಗಾಗಿ, ಹಿಂದಿನ ಕಾಲದಲ್ಲಿ ಅದಕ್ಕಿದ್ದ ಮೇಲ್ಮೆ ಇಂದು ಉಳಿದಿಲ್ಲ, ಮತ್ತು ಅದರ ಪದಗಳನ್ನು ಅದರ ಬರಹಗಳಲ್ಲಿರುವ ಹಾಗೆ ಬರೆಯಲು ಕಲಿಯುವ ಅವಶ್ಯಕತೆಯೂ ಇವತ್ತು ಕನ್ನಡಿಗರಿಗಿಲ್ಲ.

ಹಿಂದಿನ ಕಾಲದಲ್ಲಿ ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸವನ್ನು ಮುಕ್ಯವಾಗಿ ಉತ್ತರದಿಂದ ವಲಸೆಬಂದ ಮೇಲ್ವರ‍್ಗದ ಜನರು ನಡೆಸುತ್ತಿದ್ದರು; ಆರ‍್ಯರಾಗಿದ್ದ ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಆದರ ಮತ್ತು ಪೂಜ್ಯಬಾವಗಳಿದ್ದುವು. ಹಾಗಾಗಿ, ಅದರ ಪದಗಳನ್ನು ಮಾರ‍್ಪಡಿಸದೆ ಉಳಿಸುವುದು ಅವರ ಮಟ್ಟಿಗೆ ಅವಶ್ಯವಾಗಿತ್ತು. ಇದು ಇನ್ನೊಂದು ಕಾರಣ.

ಆದರೆ, ಇವತ್ತು ಎಲ್ಲಾ ವರ‍್ಗಗಳಿಗೆ ಸೇರಿದ ಕನ್ನಡಿಗರೂ ಕನ್ನಡ ಬರಹವನ್ನು ಬಳಸಲು ಕಲಿಯಬೇಕಾಗಿದೆ. ಇವರಲ್ಲಿ ಹೆಚ್ಚಿನವರೂ ದ್ರಾವಿಡ ಮೂಲದವರಾಗಿದ್ದು, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಮಾರ‍್ಪಡಿಸದೆ ಉಳಿಸಿಕೊಳ್ಳುವುದು ಅಂತಹ ಒಂದು ಪೂಜ್ಯವಾದ ವಿಶಯವೇ ಅಲ್ಲ; ಅದರಿಂದ ಅವರಿಗೆ ಬೇರೆ ಪ್ರಯೋಜನಗಳೂ ದೊರಕುವುದಿಲ್ಲ. ಹಾಗಾಗಿ, ಸಂಸ್ಕ್ರುತ ಎರವಲುಗಳನ್ನು ಕನ್ನಡದ ಸೊಗಡನ್ನು ಕೆಡಿಸದಂತೆ ಮಾರ‍್ಪಡಿಸುವುದಕ್ಕೆ ಹೆಚ್ಚಿನ ಕನ್ನಡಿಗರಿಂದಲೂ ವಿರೋದ ಬರಲಾರದು.

ಬೇರೆ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ಯಾವ ನುಡಿಯಲ್ಲೂ ಆ ನುಡಿಯಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ; ಇದಕ್ಕೆ ಕೆಲವೇ ಕೆಲವು ಹೊರಪಡಿಕೆಗಳು ಮಾತ್ರ ಇವೆ. ಎತ್ತುಗೆಗಾಗಿ, ಸಂಸ್ಕ್ರುತ ಇಲ್ಲವೇ ಪ್ರಾಕ್ರುತ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಬ್ರಾಹ್ಮೀ ಲಿಪಿಯನ್ನು ಕನ್ನಡದಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಸಂಸ್ಕ್ರುತದ ಎರವಲುಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಸಂಸ್ಕ್ರುತ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಇದೇ ರೀತಿಯಲ್ಲಿ, ಅರೇಬಿಕ್ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಲಿಪಿಯನ್ನು ಟರ‍್ಕಿಶ್‌ನಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಅರೇಬಿಕ್ ಎರವಲುಗಳನ್ನು ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಅರೇಬಿಕ್ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಆದರೆ, ಎಲ್ಲಾ ನುಡಿಗಳೂ ಈ ರೀತಿ ಬೇರೊಂದು ನುಡಿಯ ಲಿಪಿಯನ್ನು ತಮ್ಮ ನುಡಿಗೆ ಅಳವಡಿಸಿಕೊಳ್ಳುವಾಗ ಆ ನುಡಿಯ ಪದಗಳನ್ನು ಅದರಲ್ಲಿರುವಂತೆ ಬರೆಯಲು ಬೇಕಾಗುವ ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಿಲ್ಲ; ಎತ್ತುಗೆಗಾಗಿ, ನಾಗರಿ ಲಿಪಿಯನ್ನು ಪಂಜಾಬಿ ನುಡಿಗೆ ಅಳವಡಿಸುವಾಗ, ಷಕಾರ, ಋಕಾರ, ಹಲವು ಬಗೆಯ ಒತ್ತುಬರಿಗೆಗಳು ಮೊದಲಾದುವನ್ನು ಉಳಿಸಿಕೊಂಡಿಲ್ಲ; ಈ ಕಾರಣಕ್ಕಾಗಿ, ಸಂಸ್ಕ್ರುತ ಎರವಲು ಪದಗಳನ್ನು ಇವತ್ತು ಪಂಜಾಬಿ ಬರಹದಲ್ಲಿ ಓದುವ ಹಾಗೆ ಬರೆಯಲಾಗುತ್ತದೆಯಲ್ಲದೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯುವುದಿಲ್ಲ.

ಮಲಯಾಳ ಬರಹದಲ್ಲೂ ಮೊದಲಿಗೆ ಮಹಾಪ್ರಾಣಾಕ್ಶರಗಳು, ಗಜಡದಬ ಮೊದಲಾದ ಆ ನುಡಿಗೆ ಬೇಡದಿರುವ ಹಲವು ಬರಿಗೆಗಳು ಇರಲಿಲ್ಲ; ಸಂಸ್ಕ್ರುತ ಬರಹಗಳನ್ನು ಬರೆಯಲು, ಮತ್ತು ಕೆಲವೊಮ್ಮೆ ಸಂಸ್ಕ್ರುತ ಪದಗಳನ್ನು ಮಲಯಾಳ ಬರಹಗಳಲ್ಲಿ ಬರೆಯಲು ಆ ಸಮಯದಲ್ಲಿ ಗ್ರಂತಲಿಪಿಯೆಂಬ ಬೇರೆಯೇ ಒಂದು ಲಿಪಿಯನ್ನು ಬಳಸಲಾಗುತ್ತಿತ್ತು.

ಆದರೆ, ಹದಿನೇಳನೇ ಶತಮಾನಕ್ಕಾಗುವಾಗ, ಮಲಯಾಳ ಸಾಹಿತ್ಯದಲ್ಲಿ ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾಯಿತು; ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಒಲವಿದ್ದುದರಿಂದ, ಮತ್ತು ಇವರ ಬರಹಗಳಲ್ಲಿ ತುಂಬಾ ಸಂಸ್ಕ್ರುತ ಪದಗಳು ಬಳಕೆಯಾಗುತ್ತಿದ್ದುದರಿಂದ, ಇವರು ತಮ್ಮ ಮಲಯಾಳ ಬರಹಗಳಲ್ಲೂ ಗ್ರಂತ ಲಿಪಿಯನ್ನೇ ಬಳಸಲು ತೊಡಗಿದರು. ಇದರಿಂದಾಗಿ, ಇವತ್ತಿನ ಮಲಯಾಳ ಬರಹ ಕನ್ನಡ ಬರಹದ ಹಾಗೆಯೇ ಅನವಶ್ಯಕವಾಗಿ ತೊಡಕಿನದಾಗಿದೆ.

ಎಲ್ಲಾ ಜನರೂ ಬರಹಬಲ್ಲವರಾಗಬೇಕಿರುವ ಇವತ್ತಿನ ದಿನಗಳಲ್ಲಿ ಈ ರೀತಿ ಒಂದು ನುಡಿಯ ಬರವಣಿಗೆಗೆ ಅವಶ್ಯವಿಲ್ಲದ ಬರಿಗೆಗಳನ್ನು ಎರವಲು ಪದಗಳ ಬರವಣಿಗೆಗಾಗಿ ಉಳಿಸಿಕೊಳ್ಳುವುದು ಜಾಣತನವಲ್ಲ; ಇದನ್ನು ಮನಗಂಡ ತಿಳಿವಿಗರು ಟರ‍್ಕಿ, ಇಂಡೊನೇಶಿಯಾ, ಮಲಯೇಶಿಯಾ ಮೊದಲಾದ ನಾಡುಗಳಲ್ಲಿ ಅರೇಬಿಕ್ ಮೂಲದ ಲಿಪಿಯನ್ನೇ ಬಿಟ್ಟುಕೊಟ್ಟು ರೋಮನ್ ಮೂಲದ ಲಿಪಿಯನ್ನು ತಮ್ಮ ಬರಹಕ್ಕೆ ಅಳವಡಿಸಿಕೊಂಡಿದ್ದಾರೆ.

ಕೊರಿಯಾದಂತಹ ಬೇರೆ ಕೆಲವು ನಾಡುಗಳಲ್ಲಿ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯಲು ತೊಡಗುವ ಮೂಲಕ ಈ ತೊಡಕನ್ನು ನಿವಾರಿಸಿಕೊಳ್ಳಲಾಗಿದೆ. ಕನ್ನಡದಲ್ಲಿಯೂ ಇಂತಹದೇ ಮಾರ‍್ಪಾಡನ್ನು ನಾವು ಇವತ್ತು ನಡೆಸಬೇಕಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter