Posts Tagged ‘dictionary’

ಪದಗಳ ಹುರುಳು ಮತ್ತು ತಿಳಿವು

ನುಡಿಯರಿಮೆಯ ಇಣುಕುನೋಟ – 30

ಒಂದು ಪದವನ್ನು ಕೇಳಿದಾಗ ಅದರ ಅರ‍್ತವೇನೆಂದು ನಮಗೆ ಗೊತ್ತಾಗುತ್ತದೆ; ಆದರೆ, ನಿಜಕ್ಕೂ ಈ ‘ಅರ‍್ತ’ ಎಂದರೇನು? ಪದನೆರಕೆ(ಪದಕೋಶ)ಗಳಲ್ಲಿ ಪದಗಳ ಅರ‍್ತವೇನೆಂದು ಕೊಡಲಾಗುತ್ತದೆ; ಆದರೆ ಅವು ಇದಕ್ಕಾಗಿ ಒಂದು ಪದದ ಬದಲು ಅದೇ ಅರ‍್ತದ ಇಲ್ಲವೇ ಅದಕ್ಕೆ ಹತ್ತಿರದ ಅರ‍್ತದ ಬೇರೊಂದು ಪದವನ್ನು ಕೊಡುತ್ತವೆ. ‘ಎಲ್ಲೆ’ ಎಂಬ ಪದಕ್ಕೆ ಕನ್ನಡದ ಒಂದು ಪದಕೋಶ ‘ಗಡಿ’ ಎಂಬ ಇನ್ನೊಂದು ಪದವನ್ನು ಅದರ ಅರ‍್ತವೆಂದು ಕೊಡಬಹುದು.

ಆದರೆ ‘ಗಡಿ’ ಎಂಬುದೂ ಕನ್ನಡದಲ್ಲಿ ಬಳಕೆಯಾಗುವ ಒಂದು ಪದವಾದ ಕಾರಣ, ಅದಕ್ಕೂ ಅದರದೇ ಆದ ಅರ‍್ತ ಇದೆ. ಹಾಗಾಗಿ, ನಿಜಕ್ಕೂ ಅದು ‘ಎಲ್ಲೆ’ ಪದದ ಅರ‍್ತ ಏನು ಎಂಬುದನ್ನು ನಮಗೆ ತಿಳಿಸುವುದಿಲ್ಲ. ಆ ಎರಡು ಪದಗಳ ಅರ‍್ತ ಒಂದೇ ಎಂದಶ್ಟೇ ಅದು ತಿಳಿಸುತ್ತದೆ. ಹಾಗಾಗಿ, ‘ಎಲ್ಲೆ’ ಎಂಬುದಕ್ಕೆ ‘ಗಡಿ’ ಎಂಬ ಅರ‍್ತವನ್ನು ಕೊಡುವ ಪದನೆರಕೆ ‘ಗಡಿ’ ಎಂಬುದಕ್ಕೆ ‘ಎಲ್ಲೆ’ ಎಂಬ ಅರ‍್ತವನ್ನೂ ಕೊಟ್ಟಿರಬಹುದು!

ಕನ್ನಡ ಪದಕ್ಕೆ ಇಂಗ್ಲಿಶ್ ಪದ ಇಲ್ಲವೇ ಪದಕಂತೆಯ ಮೂಲಕವಾಗಲಿ ಇಲ್ಲವೇ ಬೇರೊಂದು ನುಡಿಯ ಪದದ ಮೂಲಕವಾಗಲಿ ಅರ‍್ತ ಹೇಳುವ ಪದನೆರಕೆಗಳೂ ಇವೆ. ಆದರೆ, ಇಂತಹ ಪದನೆರಕೆಗಳೂ ಎರಡು ಪದಗಳ ಅರ‍್ತ ಹೆಚ್ಚುಕಡಿಮೆ ಒಂದೇ ಎಂಬುದಾಗಿ ತಿಳಿಸುತ್ತವಲ್ಲದೆ ನಿಜಕ್ಕೂ ಆ ಅರ‍್ತ ಎಂತಹದು ಎಂಬುದನ್ನು ತಿಳಿಸುವುದಿಲ್ಲ. ನಾನು ಹೇಳಿದ್ದು ಅರ‍್ತವಾಯಿತೋ? ಎಂದು ಯಾರಾದರೂ ಕೇಳಿದರೆ ನಾವು ಅರ‍್ತವಾಯಿತು ಎಂದು ಹೇಳಬಹುದು. ಆದರೆ ಏನು ಅರ‍್ತವಾಯಿತು? ಎಂದು ಕೇಳಿದರೆ ಅಂತಹದೇ ಇನ್ನೊಂದು ಮಾತನ್ನು ಹೇಳಬಲ್ಲೆವಲ್ಲದೆ ಬೇರೇನೂ ಮಾಡಲಾರೆವು.

ಒಂದು ಮಾತನ್ನು ಕೇಳಿದ ಮೇಲೆ ನಾವು ಏನು ಮಾಡುತ್ತೇವೆ ಎಂಬುದರಿಂದ ನಮಗೆ ಆ ಮಾತು ಅರ‍್ತವಾಗಿದೆಯೋ ಇಲ್ಲವೋ ಎಂಬುದು ತಿಳಿದೀತು. ‘ಕುಳಿತುಕೊಳ್ಳಿ’ ಎಂದು ಹೇಳಿದಾಗ ಎದುರಿಗಿದ್ದವನು ಕುಳಿತುಕೊಂಡನಾದರೆ ಅವನಿಗೆ ಆ ಮಾತು ಅರ‍್ತವಾಗಿದೆಯೆಂದು ಹೇಳಬಹುದು. ಆದರೆ, ಆತ ಕುಳಿತುಕೊಳ್ಳದಿದ್ದರೂ ಆ ಮಾತು ಅವನಿಗೆ ಅರ‍್ತವಾಗಿಲ್ಲವೆಂದು ಹೇಳಲು ಬರುವುದಿಲ್ಲ. ಇದಲ್ಲದೆ ಹಾಗೆ ಮಾಡಬೇಕೆಂಬುದು ಆ ಮಾತಿನ ಅರ‍್ತವಲ್ಲದೆ ಹಾಗೆ ಮಾಡುವುದು ಅದರ ‘ಅರ‍್ತ’ವಲ್ಲ.

ಮೇಲಿನಿಂದ ಮೇಲೆ ನೋಡುವಾಗ ತೀರ ಸುಲಬವೆಂದು ಕಾಣಿಸಿದರೂ ವಿವರಿಸಹೊರಟಾಗ ತೀರ ತೊಡಕಿನದಾಗುವ ಈ ‘ಅರ‍್ತ’ ಎಂಬುದರ ಕುರಿತು ಹಲವಾರು ಮಂದಿ ತತ್ವಜ್ನಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಇಲ್ಲಿ ನಮಗೆದುರಾಗುವ ಈ ತೊಡಕಿಗೆ ಮುಕ್ಯ ಕಾರಣವೇನೆಂದರೆ, ನಾವು ಬಳಸುವ ‘ಅರ‍್ತ’ ಇಲ್ಲವೇ ‘meaning’ ಎಂಬ ಪದ ಎರಡು ತೀರ ಬೇರಾಗಿರುವ ಪರಿಕಲ್ಪನೆಗಳನ್ನು ಸೂಚಿಸುತ್ತದೆ. ಒಂದು ಮಾತನ್ನು ಕೇಳಿದಾಗ ನಮಗೆ ಅದು ಅರ‍್ತವಾಗುತ್ತದೆ, ಮತ್ತು ಇದು ನಮ್ಮ ಅರಿವಿಗೆ ಎಟಕದ ರೂಪದಲ್ಲಿರುವ ಅರ‍್ತ.

ಈ ರೀತಿ ನಾವು ಮಾಡಿಕೊಂಡಿರುವ ಅರ‍್ತವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂದಿದ್ದಲ್ಲಿ ಅದನ್ನು ಬೇರೊಂದು ರೀತಿಯ ಮಾತಿನ ಮೂಲಕವಾಗಲಿ ಇಲ್ಲವೇ ಸನ್ನೆ, ಚಿತ್ರ ಮೊದಲಾದವುಗಳ ಮೂಲಕವಾಗಲೀ ಸೂಚಿಸಬೇಕಾಗುತ್ತದೆ, ಮತ್ತು ಇದು ನಮ್ಮ ಅರಿವಿಗೆ ಎಟಕುವ ರೂಪದಲ್ಲಿರುವ ಅರ‍್ತ. ಈ ರೀತಿ ‘ಅರಿವಿಗೆ ಎಟಕದಿರುವ ಅರ‍್ತ’ ಮತ್ತು ‘ಅರಿವಿಗೆ ಎಟಕುವ ಅರ‍್ತ’ ಎಂಬುದಾಗಿ ಎರಡು ರೀತಿಯ ‘ಅರ‍್ತ’ಗಳು ಪದಗಳಿಗಿವೆ.

ಪದನೆರಕೆಗಳು ಕೊಡುವುದು ಅರಿವಿಗೆ ಎಟಕುವ ಅರ‍್ತಗಳನ್ನು ಮಾತ್ರ. ಅರಿವಿಗೆ ಎಟಕದ ಅರ‍್ತಗಳು ಅವಕ್ಕೂ ಎಟಕಲಾರವು. ಈ ಎರಡು ರೀತಿಯ ‘ಅರ‍್ತ’ಗಳ ನಡುವೆ ಹಲವು ರೀತಿಯ ವ್ಯತ್ಯಾಸಗಳಿದ್ದು ಅವನ್ನು ಸರಿಯಾಗಿ ತಿಳಿದುಕೊಳ್ಳದುದರಿಂದಾಗಿ ಅರಿವಿಗರು ಹಲವು ಬಗೆಯ ಗೊಂದಲಗಳಿಗೆ ಒಳಗಾಗಿದ್ದಾರೆ. ಅರಿವಿಗೆ ಎಟಕದ ಅರ‍್ತವನ್ನು ‘ತಿಳಿವು’ ಎಂಬುದಾಗಿ, ಮತ್ತು ಅರಿವಿಗೆ ಎಟಕುವ ಅರ‍್ತವನ್ನು ‘ಹುರುಳು’ ಎಂಬುದಾಗಿ ಹೆಸರಿಸಿದಲ್ಲಿ ಈ ಗೊಂದಲ ತಾನಾಗಿಯೇ ಇಲ್ಲವಾಗುತ್ತದೆ.

ಪದಗಳ ‘ತಿಳಿವು’ ಎನ್ನುವುದು ಅವನ್ನು ತಿಳಿದಿರುವವರ ಮಿದುಳಿನಲ್ಲಿ ಕೆಲವು ವಿಶಿಶ್ಟವಾದ ನರಗಳ ವಿನ್ಯಾಸಗಳಾಗಿ ಉಂಟಾಗಿರುತ್ತವೆ. ಯಾರಾದರೊಬ್ಬ ಆಡುಗನು ಒಂದು ಪದವನ್ನು ಬಳಸಿದಾಗ ಕೇಳುಗನ ಮಿದುಳಿನಲ್ಲಿ ಆ ಪದಕ್ಕಿರುವ ನರಗಳ ವಿನ್ಯಾಸ ಜೀವಂತವಾಗುತ್ತದೆ; ಎಂದರೆ ಅದು ಮಿಂಚುತ್ತದೆ. ನರಗಳ ವಿನ್ಯಾಸವೊಂದು ಈ ರೀತಿ ಮಿಂಚಿದಾಗ ಆತನಿಗೆ ತನಗೆ ತಿಳಿದಿರುವ ಪದವೊಂದನ್ನು ಕೇಳಿದಹಾಗಾಗುತ್ತದೆ.

ಒಂದು ನುಡಿಯನ್ನು ಕಲಿಯುವುದೆಂದರೆ ಮಿದುಳಿನಲ್ಲಿ ಇಂತಹ ಹಲವಾರು ನರಗಳ ವಿನ್ಯಾಸಗಳನ್ನು ಹೊಸದಾಗಿ ಉಂಟುಮಾಡಿಕೊಳ್ಳುವುದಲ್ಲದೆ ಬೇರೇನಲ್ಲ. ಒಬ್ಬ ವ್ಯಕ್ತಿ ಕಲಿಯದಿರುವ ನುಡಿಯ ಪದಗಳನ್ನು ಕೇಳಿದಾಗ ಅವನ ಮಿದುಳಿನಲ್ಲಿರುವ ನರಗಳ ವಿನ್ಯಾಸಗಳಲ್ಲಿ ಯಾವುದೂ ಮಿಂಚುವುದಿಲ್ಲ. ಅಂತಹ ಪದಗಳಿಗೆ ಮಿಂಚಬಲ್ಲ ನರಗಳ ವಿನ್ಯಾಸಗಳು ಆತನ ಮಿದುಳಿನಲ್ಲಿ ಉಂಟಾಗಿಲ್ಲವೆಂಬುದೇ ಇದಕ್ಕೆ ಕಾರಣ.

ಒಂದು ಪದದ ಹುರುಳು ಇದಕ್ಕಿಂತ ತೀರ ಬೇರಾದುದು. ‘ಎಲ್ಲೆ’ ಎಂಬ ಪದದ ಹುರುಳನ್ನು ‘ಗಡಿ’ ಎಂಬುದಾಗಿ ಕೊಡಬಹುದು. ಇಲ್ಲಿ ಎರಡು ಪದಗಳಿವೆ; ಅವುಗಳಲ್ಲಿ ಒಂದು ಇನ್ನೊಂದರ ಹುರುಳು. ಎರಡೂ ಪದಗಳೇ. ಆದರೆ ಅವುಗಳಲ್ಲಿ ಒಂದು ಪದದ (‘ಗಡಿ’ ಎಂಬುದರ) ತಿಳಿವು ಕೇಳುಗನಲ್ಲಿದೆ ಮತ್ತು ಇನ್ನೊಂದರ (‘ಎಲ್ಲೆ’ ಎಂಬುದರ) ತಿಳಿವು ಆತನಲ್ಲಿಲ್ಲ ಎಂಬ ಕಾರಣಕ್ಕಾಗಿ ಒಂದನ್ನು ಇನ್ನೊಂದರ ಹುರುಳು ಎಂಬುದಾಗಿ ಪರಿಗಣಿಸಲಾಗಿದೆ.

ಕೇಳುಗನಲ್ಲಿ ತಿಳಿವಿಲ್ಲದಿರುವ ಪದಕ್ಕೆ ಆತನಲ್ಲಿ ತಿಳಿವಿರುವ ಪದದ ಮೂಲಕ ಪದನೆರಕೆಗಳು ತಿಳಿವನ್ನು ಕೊಡಲು ಪ್ರಯತ್ನಿಸುತ್ತವೆ. ‘ಎಲ್ಲೆ’ ಪದದ ತಿಳಿವಿಲ್ಲದವರು ಮಾತ್ರವೇ ಪದನೆರಕೆಗಳಲ್ಲಿ ಅದರ ಅರ‍್ತವನ್ನು ಹುಡುಕಲು ಹೋಗುತ್ತಾರೆ. ಹಾಗೆ ಹುಡುಕುವವರಿಗೆ ‘ಗಡಿ’ ಎಂಬುದರ ತಿಳಿವು ಇರಬಹುದು ಎಂಬುದಾಗಿ ಪದನೆರಕೆಯನ್ನು ರಚಿಸುವವರು ಕಲ್ಪಿಸಿಕೊಂಡು ಆ ಪದವನ್ನು ಅದರ ಹುರುಳಾಗಿ ಕೊಡುತ್ತಾರೆ. ಇದಕ್ಕೆ ಬದಲು, ‘ಗಡಿ’ ಪದದ ತಿಳಿವಿಲ್ಲದವರು ಆ ಪದದ ಅರ‍್ತವನ್ನು ಪದನೆರಕೆಗಳಲ್ಲಿ ಹುಡುಕುತ್ತಾರೆ ಮತ್ತು ಅವರಿಗೆ ‘ಎಲ್ಲೆ’ ಎಂಬ ಪದದ ತಿಳಿವಿರಬಹುದೆಂದು ಪದನೆರಕೆಗಳನ್ನು ರಚಿಸುವವರು ಕಲ್ಪಿಸಿಕೊಂಡು ಆ ಪದವನ್ನು ಅದರ ಹುರುಳಾಗಿ ಕೊಡುತ್ತಾರೆ. ಎರಡರ ತಿಳಿವೂ ಇಲ್ಲದವರಿಗೆ ಅಂತಹ ಪದನೆರಕೆ ಯಾವ ನೆರವನ್ನೂ ನೀಡಲಾರದು.

ತಿಳಿವು ಮತ್ತು ಹುರುಳುಗಳ ನಡುವಿರುವ ಈ ವ್ಯತ್ಯಾಸ ಹುರುಳುಗಳ ನಡುವಿನ ಸಂಬಂದವೆಂತಹದು ಎಂಬುದನ್ನು ತಿಳಿಯುವಲ್ಲಿ ಬಹಳ ಪ್ರಯೋಜನಕ್ಕೆ ಬರುತ್ತದೆ. ಎರಡು ಪದಗಳಿಗೆ (‘ಎಲ್ಲೆ’ ಮತ್ತು ‘ಗಡಿ’ ಎಂಬವುಗಳಿಗೆ) ಒಂದೇ ಅರ‍್ತವಿದೆ ಎಂದು ಹೇಳುವಾಗ ನಾವು ಅವುಗಳಲ್ಲಿ ಒಂದನ್ನು ಇನ್ನೊಂದರ ಹುರುಳಾಗಿ ಬಳಸಬಲ್ಲೆವು ಎಂದಶ್ಟೇ ಹೇಳುತ್ತೇವಲ್ಲದೆ ನಿಜಕ್ಕೂ ಆ ಎರಡು ಪದಗಳಿಗೆ ನಮ್ಮಲ್ಲಿ ಒಂದೇ ರೀತಿಯ ತಿಳಿವಿದೆ ಎಂದೇನೂ ಹೇಳುವುದಿಲ್ಲ. ಯಾಕೆಂದರೆ, ಒಂದು ಪದದ ತಿಳಿವಿಗೆ ಹಲವು ಆಯಾಮಗಳಿದ್ದು ಅವೆಲ್ಲವುಗಳಲ್ಲೂ ಅದು ಇನ್ನೊಂದು ಪದದ ಹಾಗೆಯೇ ಇರಲು ಸಾದ್ಯವೇ ಇಲ್ಲ. ಎತ್ತುಗೆಗಾಗಿ, ‘ಗಡಿ’ ಪದವನ್ನು ಹೊತ್ತಿಗೆ ಸಂಬಂದಿಸಿದಂತೆಯೂ ‘ಗಡಿ’ ಇಲ್ಲವೇ ‘ಗಡುವು’ ಎಂಬ ರೂಪದಲ್ಲಿ ಬಳಸಲು ಬರುತ್ತದೆ; ಆದರೆ, ‘ಎಲ್ಲೆ’ ಎಂಬ ಪದಕ್ಕೆ ಅಂತಹ ಹೊತ್ತಿಗೆ ಸಂಬಂದಿಸಿದ ಬಳಕೆಯಿಲ್ಲ. ಇವೆರಡರೊಳಗೆ ಇಂತಹ ಇನ್ನೂ ಹಲವು ವ್ಯತ್ಯಾಸಗಳಿವೆಯಾದ ಕಾರಣ, ಅವೆರಡರ ಅರ‍್ತ ಒಂದೇ ಎನ್ನುವುದು ಹುರುಳಿಗೆ ಸಂಬಂದಿಸಿದ ಪರಿಕಲ್ಪನೆಯಲ್ಲದೆ ತಿಳಿವಿಗೆ ಸಂಬಂದಿಸಿದ ಪರಿಕಲ್ಪನೆಯಲ್ಲ.

ಒಂದು ಪದದ ಹುರುಳನ್ನು ಪದಕಂತೆ ಇಲ್ಲವೇ ಸೊಲ್ಲಿನ ಮೂಲಕ ವಿವರಿಸುವಲ್ಲೂ ಇಂತಹದೇ ಸಮಸ್ಯೆ ನಮ್ಮೆದುರಿಗಿದೆ. ನಾವು ಕೊಡುವ ಪದಕಂತೆ ಇಲ್ಲವೇ ಸೊಲ್ಲು ಆ ಪದದ ತಿಳಿವಿನ ಕೆಲವು ಅಂಶಗಳನ್ನು ಮಾತ್ರವೇ ಸೂಚಿಸಬಲ್ಲುದಲ್ಲದೆ ಎಲ್ಲಾ ಅಂಶಗಳನ್ನೂ ಸೂಚಿಸಲಾರದು. ಕೆಲವು ಪದಗಳ ಹಿಂದಿರುವ ತಿಳಿವನ್ನು ಸರಿಯಾಗಿ ತಿಳಿಸಬೇಕಿದ್ದಲ್ಲಿ ಒಂದು ದೊಡ್ಡ ಪ್ರಬಂದವನ್ನೇ ಬರೆಯಬೇಕಾದೀತು. ಹಾಗಾಗಿ, ಇಲ್ಲೂ ನಮ್ಮೆದುರಿಗಿರುವುದು ಹುರುಳಿಗೆ ಸಂಬಂದಿಸಿದ ಪರಿಕಲ್ಪನೆಯೇ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದ ಮತ್ತು ಅದರ ಹುರುಳು

ನುಡಿಯರಿಮೆಯ ಇಣುಕುನೋಟ – 27

ನುಡಿಗಳಲ್ಲಿ ಬಳಕೆಯಾಗುವ ಪದಗಳನ್ನು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗುತ್ತದೆ; ಮ್, ಅ, ನ್ ಮತ್ತು ಎ ಎಂಬ ನಾಲ್ಕು ಉಲಿಗಳ ಸೇರಿಕೆಯಿಂದ ‘ಮನೆ’ ಎಂಬ ಪದವನ್ನು ಉಂಟುಮಾಡಲಾಗಿದೆ; ಆದರೆ, ಈ ಉಲಿಗಳಲ್ಲಿ ಯಾವುದಕ್ಕೂ ಅದರದೇ ಆದ ಹುರುಳಿಲ್ಲ; ಅವುಗಳ ಸೇರಿಕೆಯಿಂದ ಉಂಟಾದ ‘ಮನೆ’ ಎಂಬ ಪದಕ್ಕೆ ಮಾತ್ರ ಹುರುಳಿದೆ. ಯಾಕೆಂದರೆ, ‘ಮ್’ ಎಂಬುದು ಮನೆ ಎಂಬ ಪದದಲ್ಲಿ ಮಾತ್ರವಲ್ಲದೆ, ಮಂಗ, ಮಜ್ಜಿಗೆ, ಕಡಿಮೆ, ಮಿಂಚು, ಕಮಟು, ಅಮ್ಮ ಮೊದಲಾದ ಬೇರೆಯೂ ಹಲವು ಪದಗಳಲ್ಲಿ ಬರುತ್ತದೆ, ಮತ್ತು ಈ ಎಲ್ಲಾ ಪದಗಳಿಗೂ ಸಮಾನವಾಗಿರುವ ಹುರುಳೊಂದನ್ನು ಕಂಡುಹಿಡಿದು, ಅದು ‘ಮ್’ ಎಂಬ ಉಲಿಯ ಹುರುಳು ಎಂಬುದಾಗಿ ತೋರಿಸಿಕೊಡಲು ಸಾದ್ಯವೇ ಇಲ್ಲ.

ಇದಲ್ಲದೆ, ಪದಗಳ ಅಂಗಗಳಾಗಿರುವ ಉಲಿಗಳು ಮಾರ‍್ಪಟ್ಟಾಗಲೂ ಅವುಗಳ ಹುರುಳು ಮಾರ‍್ಪಡದೆ ಉಳಿಯುತ್ತದೆ; ಈ ವಿಶಯವೂ ಹುರುಳೆಂಬುದು ಪದಗಳಿಗಿದೆಯಲ್ಲದೆ ಉಲಿಗಳಿಗಿಲ್ಲ ಎಂಬುದನ್ನು ಬೆಂಬಲಿಸುತ್ತದೆ. ಹಳೆಗನ್ನಡದ ಪಾಲ್ ಎಂಬುದು ಹಾಲು ಎಂಬುದಾಗಿ, ಬೞ್ದುಂಕು ಎಂಬುದು ಬದುಕು ಎಂಬುದಾಗಿ, ಬೆರಲ್ ಎಂಬುದು ಬೆರಳ್ ಎಂಬುದಾಗಿ ಹೊಸಗನ್ನಡದಲ್ಲಿ ಮಾರ‍್ಪಟ್ಟಾಗ, ಅದರಿಂದಾಗಿ ಆ ಪದಗಳಿಗೆ ಮೊದಲಿಗಿದ್ದ ಹುರುಳುಗಳಲ್ಲಿ ಮಾರ‍್ಪಾಡುಗಳೇನೂ ಆಗಿರಲಿಲ್ಲ.

ಉಲಿಗಳಿಗೆ ಅವುಗಳದೇ ಆದ ಹುರುಳಿಲ್ಲದಿದ್ದರೂ ಪದಗಳಿಗೆ ಅವುಗಳದೇ ಆದ ಹುರುಳಿದೆಯೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ; ಅದರೆ, ಇಲ್ಲೂ ಕೆಲವು ಸಮಸ್ಯೆಗಳಿವೆ; ಪದನೆರಕೆ(ಡಿಕ್ಶನರಿ)ಗಳಲ್ಲಿ ಹೆಚ್ಚಿನ ಪದಗಳಿಗೂ ಎರಡು ಇಲ್ಲವೇ ಹೆಚ್ಚು ಹುರುಳುಗಳನ್ನು ಕೊಡಲಾಗುತ್ತದೆಯೆಂಬುದನ್ನು ಗಮನಿಸಬಹುದು; ಆದರೆ, ಈ ಪದಗಳನ್ನು ಸೊಲ್ಲುಗಳಲ್ಲಿ ಬಳಸಿದಾಗ, ಅವುಗಳ ಈ ಹಲವು ಹುರುಳುಗಳಲ್ಲಿ ಒಂದು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎತ್ತುಗೆಗಾಗಿ, ಕಾಯು ಎಂಬ ಪದಕ್ಕೆ ಕಾಪಾಡು ಎಂಬ ಹುರುಳೂ ಇದೆ, ಬಿಸಿಮಾಡು ಎಂಬ ಹುರುಳೂ ಇದೆ; ಆದರೆ, ‘ನಾಯಿ ಮನೆಯನ್ನು ಕಾಯುತ್ತಿದೆ’ ಎಂಬ ಸೊಲ್ಲನ್ನು ಬಳಸಿದಾಗ ಕಾಯು ಪದದ ಮೊದಲನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದಲ್ಲದೆ, ಎರಡನೆಯ ಹುರುಳು ಗಮನಕ್ಕೆ ಬರುವುದಿಲ್ಲ.

ಇದೇ ರೀತಿಯಲ್ಲಿ ‘ಹಂಡೆಯಲ್ಲಿ ನೀರು ಕಾಯುತ್ತಿದೆ’ ಎಂಬ ಬೇರೊಂದು ಸೊಲ್ಲನ್ನು ಬಳಸಿದಾಗ ಅದರ ಎರಡನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎಂದರೆ, ಒಂದು ಪದ ನಮಗೆ ಎಂತಹ ಹುರುಳನ್ನು ಕೊಡುತ್ತದೆ ಎಂಬುದು ಅದನ್ನು ಎಂತಹ ಸೊಲ್ಲಿನಲ್ಲಿ ಬಳಸಲಾಗಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ. ಕೆಲವೊಮ್ಮೆ ಈ ರೀತಿ ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದು ತೊಂದರೆಯನ್ನೂ ಕೊಡಬಲ್ಲುದು. ಎತ್ತುಗೆಗಾಗಿ, ‘ಅವನು ಕರೆಯಲು ಬಂದಿದ್ದಾನೆ’ ಎಂದಿಶ್ಟೇ ಹೇಳಿದಲ್ಲಿ ಅವನು ಎಲ್ಲಿಗಾದರೂ ಬರಬೇಕೆಂದು ಹೇಳಲು ಬಂದಿದ್ದಾನೋ ಇಲ್ಲವೇ ದನವನ್ನು ಕರೆಯಲು ಬಂದಿದ್ದಾನೋ ಎಂಬ ವಿಶಯದಲ್ಲಿ ಗೊಂದಲವುಂಟಾಗಬಲ್ಲುದು. ಆದರೆ, ಸಾಮಾನ್ಯವಾಗಿ ನಾವು ಮಾತನ್ನು ಬಳಸುವಾಗ ಆ ರೀತಿ ಗೊಂದಲವುಂಟಾಗದಂತೆ ನೋಡಿಕೊಳ್ಳುತ್ತೇವೆ.

ಮಾತಿನಲ್ಲಿ ಬಳಕೆಯಾಗುವ ಪದಗಳಲ್ಲಿ ಹಲವಕ್ಕೆ (ಹೆಸರುಪದಗಳಿಗೆ) ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುವ ಕಸುವಿರುತ್ತದೆ. ‘ಸುರೇಶ ಒಂದು ಹಣ್ಣು ತಿಂದ’ ಎಂಬ ಸೊಲ್ಲಿನಲ್ಲಿ ಎರಡು ಹೆಸರುಪದಗಳು ಬಂದಿದ್ದು, ಅವುಗಳಲ್ಲಿ ‘ಹಣ್ಣು’ ಎಂಬ ಪದ ಒಂದು ವಸ್ತುವನ್ನು ಗುರುತಿಸುತ್ತದೆ ಮತ್ತು ‘ಸುರೇಶ’ ಎಂಬ ಪದ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಪದಗಳ ಮೂಲಕ ಮಾತ್ರವಲ್ಲದೆ ಪದಕಂತೆಗಳ ಮೂಲಕವೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಬರುತ್ತದೆ. ‘ಕುರ‍್ಚಿಯಲ್ಲಿ ಕುಳಿತಿರುವ ಮುದುಕ’ ಎಂಬ ಪದಕಂತೆ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ, ಮತ್ತು ‘ರಾಜು ಕೊಟ್ಟ ಪುಸ್ತಕ’ ಎಂಬ ಇನ್ನೊಂದು ಪದಕಂತೆ ಒಂದು ವಸ್ತುವನ್ನು ಗುರುತಿಸುತ್ತದೆ.

ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ಪದಗಳ ಮೂಲಕ ಗುರುತಿಸುವುದಕ್ಕೂ ಪದಕಂತೆಗಳ ಮೂಲಕ ಗುರುತಿಸುವುದಕ್ಕೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ. ಪದಕಂತೆಗಳ ಮೂಲಕ ಗುರುತಿಸುವಾಗ ಅವುಗಳ ಹುರುಳು ಬಳಕೆಯಾಗುತ್ತದೆ, ಆದರೆ ಪದಗಳ ಮೂಲಕ ಗುರುತಿಸುವಾಗ ಆ ರೀತಿ ಅವುಗಳ ಹುರುಳು ಬಳಕೆಯಾಗುವುದಿಲ್ಲ. ಅದಕ್ಕೆ ಬದಲು, ಪದಗಳಿಗೂ ಅವು ತಿಳಿಸಬಲ್ಲ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ಸಂಬಂದ ಬಳಕೆಯಾಗುತ್ತದೆ.

ನಿಜಕ್ಕೂ ಒಂದು ಹೆಸರುಪದದ ಹುರುಳೇನು ಎಂಬುದನ್ನು ತಿಳಿಯಬೇಕಿದ್ದಲ್ಲಿ ಮೊದಲಿಗೆ ಅದು ಎಂತಹ ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ‘ನಾಯಿ’ ಎಂಬ ಪದ ಎಂತಹ ಪ್ರಾಣಿಯನ್ನು ಗುರುತಿಸಲು ಬಳಕೆಯಾಗುತ್ತದೆ, ಮತ್ತು ಆ ಪ್ರಾಣಿಯ ಪರಿಚೆ(ಗುಣ)ಗಳು ಎಂತಹವು ಎಂಬುದನ್ನು ತಿಳಿದಾಗ ಮಾತ್ರ ನಮಗೆ ಆ ಪದದ ಹುರುಳೇನು ಎಂಬುದು ಗೊತ್ತಾಗುತ್ತದೆ; ಹಾಗಾಗಿ, ಆ ಪ್ರಾಣಿಯ ಪರಿಚೆಗಳನ್ನೇ ಒಟ್ಟಾಗಿ ‘ನಾಯಿ’ ಎಂಬ ಪದದ ಹುರುಳು ಎಂದು ಹೇಳಬೇಕಾಗುತ್ತದೆ.

ಒಳರಚನೆಯಿರುವ ಪದಗಳ ಹುರುಳನ್ನೂ ಇದೇ ರೀತಿಯಲ್ಲಿ ಅವು ತಿಳಿಸುವ ವಸ್ತು, ವ್ಯಕ್ತಿ ಮೊದಲಾದವುಗಳ ಪರಿಚೆಗಳು ಎಂತಹವು ಎಂಬುದರಿಂದ ತಿಳಿಯಬೇಕಾಗುತ್ತದಲ್ಲದೆ ಅವುಗಳ ಒಳರಚನೆ ಎಂತಹದು ಎಂಬುದರಿಂದ ತಿಳಿಯಲು ಬರುವುದಿಲ್ಲ. ‘ಹೊಸಮನೆ’ ಎಂಬ ಪದದಲ್ಲಿ ‘ಹೊಸ’ ಮತ್ತು ‘ಮನೆ’ ಎಂಬ ಎರಡು ಪದಗಳು ಸೇರಿಕೊಂಡಿವೆ; ಆದರೆ, ಅದು ಗುರುತಿಸುವ ಮನೆ ಹೊಸದಾಗಿರಬಲ್ಲುದು, ಇಲ್ಲವೇ ತುಂಬಾ ಹಳೆಯದಾಗಿರಬಲ್ಲುದು; ಯಾಕೆಂದರೆ, ಒಮ್ಮೆ ಒಂದು ಮನೆಯನ್ನು ಆ ಹೆಸರಿನಿಂದ ಕರೆಯತೊಡಗಿದ ಮೇಲೆ, ಅದು ತುಂಬಾ ಹಳೆಯದಾದಾಗಲೂ ಆ ಹೆಸರನ್ನು ನಾವು ಬದಲಾಯಿಸಹೋಗುವುದಿಲ್ಲ; ಎಂದರೆ, ‘ಹೊಸಮನೆ’ ಎಂಬ ಪದದ ಹುರುಳು ಅದು ಗುರುತಿಸುವ ಮನೆಯ ಪರಿಚೆಗಳು ಬದಲಾದ ಹಾಗೆಲ್ಲ ಬದಲಾಗುತ್ತಾ ಹೋಗುತ್ತದೆ. ‘ಹಳೆಮನೆ’ ಎಂಬ ಹೆಸರಿರುವ ಇನ್ನೊಂದು ಮನೆಯನ್ನು ಕೆಡವಿ ಅಲ್ಲೊಂದು ಹೊಸಮನೆಯನ್ನು ಕಟ್ಟಿದಾಗಲೂ ಅದಕ್ಕೆ ಮೊದಲು ಬಳಕೆಯಲ್ಲಿದ್ದ ‘ಹಳೆಮನೆ’ ಎಂಬ ಹೆಸರು ಹಾಗೆಯೇ ಉಳಿದಿರುತ್ತದೆ; ಆ ಪದದ ಹುರುಳು ಮಾತ್ರ ಮಾರ‍್ಪಟ್ಟಿರುತ್ತದೆ.

ಹೆಸರುಪದಗಳಿಗೆ ಅವುಗಳ ಹುರುಳಿನೊಂದಿಗಿರುವ ಸಂಬಂದಕ್ಕಿಂತಲೂ ಅವು ಸೂಚಿಸುವ ವ್ಯಕ್ತಿ, ವಸ್ತು, ಸಂಗತಿ ಮೊದಲಾದವುಗಳೊಂದಿಗಿರುವ ಸಂಬಂದವೇ ಹೆಚ್ಚು ಮುಕ್ಯವಾದುದು ಎಂಬ ವಿಶಯ ಇದರಿಂದ ಸ್ಪಶ್ಟವಾಗುತ್ತದೆ. ಕೆಲವೆಡೆಗಳಲ್ಲಿ ಪದಗಳ ಒಳರಚನೆಯನ್ನು ಬಳಸಿ ಅವುಗಳ ಹುರುಳನ್ನು ಊಹಿಸಿಕೊಳ್ಳಬಲ್ಲೆವಾದರೂ ಈ ವಿಶಯದಲ್ಲಿ ಕೊನೆಯ ತೀರ‍್ಮಾನಕ್ಕೆ ಬರಲು ಇಂತಹ ಸಂಬಂದದ ನೆರವು ಬೇಕೇ ಬೇಕು.

ಸೊಲ್ಲುಗಳಲ್ಲಿ ಬರುವ ಎಸಕ(ಕ್ರಿಯಾ)ಪದ, ಪರಿಚೆ(ಗುಣ)ಪದ ಮೊದಲಾದವುಗಳ ಹುರುಳೇನೆಂಬುದನ್ನು ತೀರ‍್ಮಾನಿಸುವುದು ಇದಕ್ಕಿಂತಲೂ ಹೆಚ್ಚು ತೊಡಕಿನ ಕೆಲಸ. ಯಾಕೆಂದರೆ, ಅದಕ್ಕಾಗಿ ಅವು ಬರುವ ಪದಕಂತೆಗಳ ಇಲ್ಲವೇ ಸೊಲ್ಲುಗಳ ಹುರುಳೇನೆಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಆ ಹುರುಳಿನಲ್ಲಿ ಯಾವುದೇ ಒಂದು ಎಸಕಪದದ ಇಲ್ಲವೇ ಪರಿಚೆಪದದ ಕೊಡುಗೆ ಎಂತಹದು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ. ಪದಗಳೊಂದಿಗೆ ಬರುವ ಒಟ್ಟು(ಪ್ರತ್ಯಯ)ಗಳ ಹುರುಳನ್ನೂ ಇದೇ ರೀತಿಯಲ್ಲಿ ಆ ಪದಗಳ ಬಳಕೆಯಲ್ಲಿ ಅವುಗಳ ಕೊಡುಗೆ ಎಂತಹದು ಎಂಬುದನ್ನು ಪರಿಶೀಲಿಸುವ ಮೂಲಕ ತಿಳಿಯಬೇಕಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಅರಿಮೆಯ ಬರಹಗಳ ತೊಡಕುಗಳು

ನುಡಿಯರಿಮೆಯ ಇಣುಕುನೋಟ – 22

ಅರಿಮೆಯ (ವಿಜ್ನಾನದ) ಬರಹಗಳನ್ನು ಓದುತ್ತಿರುವವರಿಗೆ ಅವು ತುಂಬಾ ತೊಡಕಿನವಾಗಿ ಕಾಣಿಸಲು ಹಲವು ಕಾರಣಗಳಿವೆ; ಇವುಗಳಲ್ಲಿ ಎಸಕ(ಕ್ರಿಯೆ)ಗಳನ್ನು ತಿಳಿಸಲು ಎಸಕಪದಗಳನ್ನು ಬಳಸುವ ಬದಲು ಅವುಗಳ ಹೆಸರುರೂಪಗಳನ್ನು ಇಲ್ಲವೇ ಬೇರೆ ಹೆಸರುಕಂತೆಗಳನ್ನು ಬಳಸುವುದು ಒಂದು ಮುಕ್ಯ ಕಾರಣ. ಓಡು ಎಂಬುದು ಒಂದು ಎಸಕವನ್ನು ತಿಳಿಸುತ್ತದೆ; ರಾಜು ಓಡುತ್ತಿದ್ದಾನೆ ಎಂಬ ಸೊಲ್ಲಿನಲ್ಲಿ ಇದನ್ನು ಒಂದು ಎಸಕಪದದ ಮೂಲಕ ಒಂದು ಎಸಕವಾಗಿ ತಿಳಿಸಲಾಗಿದೆ. ಸಾಮಾನ್ಯವಾಗಿ ಮಾತಿನಲ್ಲಿ ಈ ರೀತಿ ಎಸಕಗಳನ್ನು ಎಸಕಗಳಾಗಿಯೇ ತಿಳಿಸಲಾಗುತ್ತದೆ; ಆದರೆ, ಅದನ್ನೊಂದು ವಿಶಯವಾಗಿಯೂ ತಿಳಿಸಲು ಬರುತ್ತದೆ, ಮತ್ತು ಇದಕ್ಕಾಗಿ ಮೇಲಿನ ಸೊಲ್ಲನ್ನು ರಾಜುವಿನ ಓಡುವಿಕೆ ಇಲ್ಲವೇ ರಾಜುವಿನ ಓಟ ಎಂಬ ಒಂದು ಹೆಸರುಕಂತೆಯಾಗಿ ಮಾರ‍್ಪಡಿಸಲು ಬರುತ್ತದೆ.

ಇಂತಹ ಮಾರ‍್ಪಡಿಸಿದ ಬಳಕೆಗಳು ಮಾತಿನಲ್ಲಿ ಇಲ್ಲವೇ ಸಾಮಾನ್ಯ ಬರಹಗಳಲ್ಲಿ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ; ಆದರೆ, ಅರಿಮೆಯ ಬರಹಗಳಲ್ಲಿ ಅವನ್ನು ತುಂಬಾ ಹೆಚ್ಚು ಬಳಸಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಅವನ್ನು ಬಳಸುವ ಮೂಲಕ ಹೇಳಬೇಕೆಂದಿರುವ ಸಂಗತಿಯನ್ನು ತುಂಬಾ ಅಡಕವಾಗಿ ಹೇಳಲು ಬರುತ್ತದೆ; ಎತ್ತುಗೆಗಾಗಿ, ಮಕ್ಕಳನ್ನು ತಾಯಂದಿರು ಸಾಕುತ್ತಾರೆ ಎಂಬುದನ್ನು ಒಮ್ಮೆ ಸೂಚಿಸಿದ ಮೇಲೆ, ಅದರ ಕುರಿತಾಗಿ ಬೇರೆ ಸಂಗತಿಗಳನ್ನು ತಿಳಿಸಬೇಕಾದಾಗ ಅದನ್ನು ಅಡಕವಾಗಿ ಮಕ್ಕಳ ಸಾಕುವಿಕೆ ಇಲ್ಲವೇ ಬರೀ ಸಾಕುವಿಕೆ ಎಂಬುದಾಗಿ ಮಾರ‍್ಪಡಿಸಿ ಸೂಚಿಸಲು ಬರುತ್ತದೆ.

ಇದಲ್ಲದೆ, ಅರಿಮೆಯ ಬರಹಗಳ ಇಟ್ಟಳ (ರಚನೆ) ಬೇರೆ ಬರಹಗಳ ಇಟ್ಟಳಕ್ಕಿಂತ ಈ ವಿಶಯದಲ್ಲಿ ಬೇರಾಗಿದೆ; ಸಾಮಾನ್ಯ ಬರಹಗಳಲ್ಲಿ ಉದ್ದಕ್ಕೂ ಒಬ್ಬ ವ್ಯಕ್ತಿ ಇಲ್ಲವೇ ಕೆಲವು ವ್ಯಕ್ತಿಗಳು ಏನು ಮಾಡಿದ್ದಾರೆ ಎಂಬುದಾಗಿ ಹಲವು ಬಗೆಯ ಎಸಕಗಳು ಒಂದರ ಬಳಿಕ ಒಂದರಂತೆ ನಡೆದಿರುವುದನ್ನು ತಿಳಿಸಲಾಗುತ್ತದೆ; ಇದಕ್ಕೆ ಬದಲು, ಅರಿಮೆಯ ಬರಹಗಳಲ್ಲಿ ಒಂದು ಎಸಕವನ್ನು ತಿಳಿಸಿದ ಮೇಲೆ, ಆ ಎಸಕದ ಕುರಿತಾಗಿ ಹಲವಾರು ವಿಶಯಗಳನ್ನು ತಿಳಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಆ ಎಸಕವನ್ನು ಮುಂದಿನ ಸೊಲ್ಲುಗಳ ನೆಲೆಯಾಗಿ ಬಳಸಬೇಕಾಗುತ್ತದೆ; ಆದರೆ, ಹೆಸರುಪದಗಳು ಇಲ್ಲವೇ ಎಸಕಪದಗಳ ಹೆಸರುರೂಪಗಳು ಮಾತ್ರ ಸೊಲ್ಲುಗಳ ನೆಲೆಗಳಾಗಬಲ್ಲುವು; ಹಾಗಾಗಿ, ಆ ಎಸಕವನ್ನು ತಿಳಿಸಲು ಒಂದು ಹೆಸರುಕಂತೆಯನ್ನು ಬಳಸಬೇಕಾಗುತ್ತದೆ.

ಇಂತಹ ಮಾರ‍್ಪಡಿಸಿದ ಬಳಕೆಗಳು ತೊಡಕಿನವಾಗಿ ಕಾಣಿಸಲು ಮುಕ್ಯ ಕಾರಣವೇನೆಂದರೆ, ಸಾಮಾನ್ಯವಾಗಿ ನಮ್ಮ ಮಾತಿನಲ್ಲಿ ಎಸಕಪದಗಳು ಎಸಕಗಳನ್ನು ಸೂಚಿಸುತ್ತವೆ ಮತ್ತು ಹೆಸರುಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುತ್ತವೆ; ಆದರೆ, ಈ ಮಾರ‍್ಪಡಿಸಿದ ಬಳಕೆಗಳಲ್ಲಿ ಹೆಸರುಪದಗಳ ಮೂಲಕ ಎಸಕಗಳನ್ನು ಸೂಚಿಸಲಾಗುತ್ತದೆ. ಎಂದರೆ, ಇವು ನಾವು ಜಗತ್ತನ್ನು ನೋಡುವ ಬಗೆಯನ್ನೇ ಬೇರೆ ಮಾಡುತ್ತವೆ: ಅವು ಎಸಕಗಳನ್ನು ಹೆಸರುಗಳಾಗಿ, ಎಂದರೆ ವಸ್ತು ಇಲ್ಲವೇ ವಿಶಯಗಳಾಗಿ ನೋಡುವಂತೆ ಮಾಡುತ್ತವೆ. ಅರಿಮೆಯ ಬರಹಗಳನ್ನು ಓದುವವರು ಜಗತ್ತನ್ನು ಈ ರೀತಿ ಒಂದು ಹೊಸ ಬಗೆಯಲ್ಲಿ ನೋಡಲು ಕಲಿಯಬೇಕಾಗುತ್ತದೆ. ಇದು ಸುಲಬದ ಕೆಲಸವಲ್ಲ.

ಕನ್ನಡದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಇನ್ನೊಂದು ತೊಡಕೂ ಕಾಣಿಸಿಕೊಳ್ಳುತ್ತದೆ: ಅರಿಮೆಯ ಬರಹಗಳನ್ನು ಬರೆಯುವವರು ಎಸಕಪದಗಳನ್ನು ಹೆಸರುಕಂತೆಗಳಾಗಿ ಮಾರ‍್ಪಡಿಸುವಲ್ಲಿ ಕನ್ನಡದ ಕಸುವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾಗಾಗಿ, ಅವರು ಕನ್ನಡದವೇ ಆದ ಹೆಸರುಪದಗಳನ್ನು ಇಲ್ಲವೇ ಎಸಕಪದಗಳ ಹೆಸರುರೂಪಗಳನ್ನು ಬಳಸುವ ಬದಲು, ಸಂಸ್ಕ್ರುತದ ಪದ ಮತ್ತು ಪದರೂಪಗಳನ್ನು ಅನವಶ್ಯಕವಾಗಿ ಎರವಲು ಪಡೆದು ಬಳಸಹೋಗುತ್ತಾರೆ, ಮತ್ತು ಆ ಮೂಲಕ ತಮ್ಮ ಬರಹಗಳಲ್ಲಿ ಇನ್ನಶ್ಟು ತೊಡಕುಗಳನ್ನು ಸೇರಿಸಿಕೊಳ್ಳುತ್ತಾರೆ.

ಎತ್ತುಗೆಗಾಗಿ, ಈ ಮಣ್ಣಿನಲ್ಲಿ ಕ್ಶಾರ ಇದೆ ಎಂಬ ಸೊಲ್ಲನ್ನು ಕನ್ನಡದಲ್ಲೇನೇ ಕ್ಶಾರವಿರುವ (ಇಲ್ಲವೇ ಕ್ಶಾರವುಳ್ಳ) ಮಣ್ಣು ಎಂಬುದಾಗಿ ಮಾರ‍್ಪಡಿಸಬಹುದು. ಆದರೆ ಇದು ಕನ್ನಡದಲ್ಲಿ ಅರಿಮೆಯ ಬರಹಗಳನ್ನು ಬರೆಯುವವರ ಗಮನಕ್ಕೇ ಬರುವುದಿಲ್ಲ. ಅದಕ್ಕೆ ಬದಲಾಗಿ ಅವರು ಕ್ಶಾರಯುಕ್ತ ಮಣ್ಣು ಎಂಬುದಾಗಿ ಸಂಸ್ಕ್ರುತದಿಂದ ಯುಕ್ತ ಪದರೂಪವನ್ನು ಎರವಲು ಪಡೆದು ಬಳಸುತ್ತಾರೆ. ಜೀವ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯೊಂದನ್ನು ಕೇಳಿ, ಅದರ ಮುಂದಿನ ಸೊಲ್ಲಿನಲ್ಲಿ ಜೀವದ ಹುಟ್ಟು ಎಂಬುದಾಗಿ ಅದನ್ನು ಮಾರ‍್ಪಡಿಸಿಕೊಳ್ಳುವ ಬದಲು, ಜೀವದ ಉಗಮ ಎಂಬುದಾಗಿ ಬರೆಯುತ್ತಾರೆ; ಎಂದರೆ, ಸಂಸ್ಕ್ರುತದ ಉಗಮ ಪದವನ್ನು ಅನವಶ್ಯಕವಾಗಿ ಎರವಲಾಗಿ ಪಡೆದು ಬಳಸುತ್ತಾರೆ. ಇದರಿಂದಾಗಿ, ಮೊದಲೇ ತೊಡಕಿನದಾಗಿ ಕಾಣಿಸುವ ಅರಿಮೆಯ ಬರಹ ಇನ್ನಶ್ಟು ತೊಡಕಿನದಾಗುತ್ತದೆ.

ಎಸಕಗಳನ್ನು ತಿಳಿಸಲು ಹೆಸರುಕಂತೆಗಳನ್ನು ಬಳಸಿರುವಲ್ಲಿ ಓದುಗರು ಎಸಕದಿಂದ ವಿಶಯಕ್ಕೆ ನೆಗೆಯಬೇಕಾಗುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಸಕವನ್ನು ಇಲ್ಲಿ ಎಸಕಪದದ ಮೂಲಕ ಒಂದು ಎಸಕವಾಗಿ ಸೂಚಿಸದೆ, ಹೆಸರುಪದದ ಮೂಲಕ ಒಂದು ವಿಶಯವಾಗಿ ಸೂಚಿಸಲಾಗುತ್ತದೆ. ಇದಲ್ಲದೆ, ಆ ರೀತಿ ಬದಲಾವಣೆಯನ್ನು ಮಾಡಲಾಗಿದೆ ಎಂಬುದನ್ನು ಬರಹಗಳಲ್ಲಿ ಯಾವ ರೀತಿಯಲ್ಲೂ ಸೂಚಿಸಲಾಗುವುದಿಲ್ಲ. ಓದುಗರು ಈ ನೆಗೆತವನ್ನು ತಾವೇ ಮಾಡಿಕೊಳ್ಳಬಲ್ಲರು ಎಂಬುದಾಗಿ ತಿಳಿಯಲಾಗುತ್ತದೆ.

ಆದರೆ, ಅರಿಮೆಯ ಬರಹಗಳನ್ನು ಓದಿ ಪಳಗಿಲ್ಲದ ಓದುಗರಿಗೆ ಈ ನೆಗೆತ ತೊಂದರೆಯನ್ನು ಕೊಡುತ್ತದೆ. ಕನ್ನಡದ ಅರಿಮೆಯ ಬರಹಗಳಲ್ಲಿ ಈ ನೆಗೆತದೊಂದಿಗೆ ಇನ್ನೊಂದು ನೆಗೆತವನ್ನೂ ಓದುಗರ ಮೇಲೆ ಹೊರಿಸಲಾಗುತ್ತದೆ: ಅವರು ಎಸಕದಿಂದ ಹೆಸರಿಗೆ ನೆಗೆಯಬೇಕಾಗುತ್ತದೆ ಮಾತ್ರವಲ್ಲ, ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೂ ನೆಗೆಯಬೇಕಾಗುತ್ತದೆ. ಎತ್ತುಗೆಗಾಗಿ, ಒಂದು ಜೀವಿ ಇನ್ನೊಂದು ಜೀವಿಯನ್ನು ಹುಟ್ಟಿಸುತ್ತದೆ ಎಂಬಲ್ಲಿಂದ ಹುಟ್ಟಿಸುವಿಕೆ ಎಂಬುದಕ್ಕೆ ಹೋಗದೆ ನೇರವಾಗಿ ಪ್ರಜನನ ಕ್ರಿಯೆ ಎಂಬುದಕ್ಕೆ ನೆಗೆಯಬೇಕಾಗುತ್ತದೆ.

ಚಿಕ್ಕ ಮಕ್ಕಳಿಗಾಗಿ ಬರೆದ ಅರಿಮೆಯ ಬರಹಗಳಲ್ಲೂ ಇಂತಹ ಹಲವಾರು ಸಂಸ್ಕ್ರುತದ ಪದರೂಪಗಳನ್ನು ಕಾಣಬಹುದು. ಇವನ್ನು ಮಕ್ಕಳು ಕಣ್ಣು ಮುಚ್ಚಿ ಬಾಯಿಪಾಟ ಮಾಡುತ್ತಾರಲ್ಲದೆ, ಅವು ನಿಜಕ್ಕೂ ಏನು ಹೇಳುತ್ತವೆ ಎಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಯಾಕೆಂದರೆ, ಅವರಿಗೆ ಇವುಗಳಲ್ಲಿ ಬರುವ ಎಸಕದಿಂದ ಹೆಸರಿಗೆ ಹಾರುವ ಮೊದಲ ನೆಗೆತವೇ ತೊಡಕಿನದಾಗಿ ಕಾಣಿಸುತ್ತದೆ; ಇನ್ನು ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೆ ಹಾರುವ ಎರಡನೆಯ ನೆಗೆತ ಅವರ ಅಳವಿಗೆ ಮೀರಿದ್ದು.

ಅರಿಮೆಯ ಬರಹಗಳನ್ನು ಮಂದಿ ಮೆಚ್ಚುವ (ಜನಪ್ರಿಯವಾಗುವ) ಹಾಗೆ ಇಲ್ಲವೇ ಚಿಕ್ಕ ಮಕ್ಕಳಿಗೆ ಗೊತ್ತಾಗುವ ಹಾಗೆ ಬರೆಯಬೇಕಿದ್ದಲ್ಲಿ ಬರಹಗಾರರು ಕೆಳಗೆ ಕೊಟ್ಟಿರುವ ಉಪಾಯಗಳನ್ನು ಬಳಸಿಕೊಳ್ಳಬೇಕಾಗುತ್ತದೆ: (೧) ಆದಶ್ಟು ಮಟ್ಟಿಗೆ ಅವರು ಅರಿಮೆಯ (ಪಾರಿಬಾಶಿಕ) ಪದಗಳ ಬಳಕೆಯನ್ನು ಕಡಿಮೆ ಮಾಡಬೇಕು; (೨) ಎಸಕಗಳನ್ನು ತಿಳಿಸುವ ಹೆಸರುಕಂತೆಗಳನ್ನು ಸೊಲ್ಲುಗಳಾಗಿ ಬದಲಾಯಿಸಿಕೊಳ್ಳಬೇಕು; (೩) ಸಿಕ್ಕಲು ಸೊಲ್ಲುಗಳನ್ನು ಸುಳುಸೊಲ್ಲುಗಳಾಗಿ ಬಿಡಿಸಿ ಬರೆಯಬೇಕು; ಮತ್ತು (೪) ಸಂಸ್ಕ್ರುತ (ತತ್ಸಮ) ಪದಗಳ ಬದಲು ಆದಶ್ಟು ಮಟ್ಟಿಗೆ ಕನ್ನಡದವೇ ಆದ ಪದಗಳನ್ನು ಬಳಸಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter