Posts Tagged ‘English prefix’

ಇಂಬಿನ ಮುನ್ನೊಟ್ಟುಗಳು


ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-9

pada_kattane_sarani_dnsಇಂಬಿನ ಹುರುಳನ್ನು ತಿಳಿಸಲು ಇಂಗ್ಲಿಶ್‌ನಲ್ಲಿ ಬಳಕೆಯಾಗುವ fore, inter, out, over, sub, super, trans, under, ex, ಮತ್ತು extra ಎಂಬ ಹತ್ತು ಮುನ್ನೊಟ್ಟುಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಎಂತಹ ಪದಗಳನ್ನು ಇಲ್ಲವೇ ಬೇರುಗಳನ್ನು ಬಳಸಲು ಬರುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:

(1) fore ಒಟ್ಟು:

ಈ ಒಟ್ಟಿಗೆ ಮುಂದಿನ ಎಂಬ ಇಂಬಿನ ಹುರುಳು ಮಾತ್ರವಲ್ಲದೆ, ಮೊದಲಿನ ಇಲ್ಲವೇ ಹಿಂದಿನ ಎಂಬ ಹೊತ್ತಿನ ಹುರುಳೂ ಇದೆ; ಇವುಗಳಲ್ಲಿ ಹೊತ್ತಿನ ಹುರುಳನ್ನು ಮುಂದೆ (3)ರಲ್ಲಿ ವಿವರಿಸಲಾಗಿದೆ; ಮುಂದಿನ ಎಂಬ ಇಂಬಿನ ಹುರುಳಿನಲ್ಲಿ ಇದನ್ನು ಬಳಸಿರುವಲ್ಲಿ ಮುನ್ ಎಂಬ ಪರಿಚೆಬೇರನ್ನು ಪದಗಳ ಮುಂದೆ ಬಳಸಲು ಬರುತ್ತದೆ:

land ನೆಲ foreland ಮುನ್ನೆಲ
name ಹೆಸರು forename ಮುಂಬೆಸರು
mast ಕೂವೆಮರ foremast ಮುಂಕೂವೆಮರ


(2) inter ಒಟ್ಟು:

ಈ ಒಟ್ಟಿಗೆ ಮುಕ್ಯವಾಗಿ (ಕ) ಎರಡಕ್ಕೂ ತಾಗು, ಮತ್ತು (ಚ) ಎರಡರ ನಡುವೆ ಎಂಬ ಎರಡು ಹುರುಳುಗಳಿವೆ; ಇವುಗಳಲ್ಲಿ ಮೊದಲನೆಯ ಹುರುಳಿನಲ್ಲಿ ಕನ್ನಡದ ಒಡ ಎಂಬ ಪದವನ್ನು ಮತ್ತು ಎರಡನೆಯ ಹುರುಳಿನಲ್ಲಿ ನಡು ಎಂಬ ಪದವನ್ನು ಮೊನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

(ಕ) ಎರಡನ್ನೂ ತಾಗು ಎಂಬ ಹುರುಳಿನಲ್ಲಿ:

lace ಹೆಣೆ interlace ಒಡಹೆಣೆ
mingle ಬೆರೆ intermingle ಒಡಬೆರೆ
twine ಹೊಸೆ intertwine ಒಡಹೊಸೆ

(ಚ) ಎರಡರ ನಡುವೆ ಎಂಬ ಹುರುಳಿನಲ್ಲಿ:

leaf ಹಾಳೆ interleaf ನಡುಹಾಳೆ
net ಬಲೆ internet ನಡುಬಲೆ
national ನಾಡಿನ international ನಡುನಾಡಿನ
connect ತೆರು interconnect ನಡುತೆರು
mediate ಹೊಂದಿಸು intermediate ನಡುಹೊಂದಿಸು


(3) out ಒಟ್ಟು:

ಮೇಲೆ ವಿವರಿಸಿದ ಹಾಗೆ, ಈ ಒಟ್ಟಿಗೆ ಹೊರ ಮತ್ತು ಮೀರು ಎಂಬ ಎರಡು ಹುರುಳುಗಳಲ್ಲಿ ಬಳಕೆಯಿದ್ದು, ಅವುಗಳಲ್ಲಿ ಮೊದಲನೆಯದು ಮಾತ್ರ ಇಂಬಿಗೆ ಸಂಬಂದಿಸಿದುದಾಗಿದೆ; ಈ ಹುರುಳಿನಲ್ಲಿ ಕನ್ನಡದ ಹೊರ ಎಂಬ ಪದವನ್ನೇ ಇದಕ್ಕೆ ಸಾಟಿಯಾಗಿ ಪದಗಳ ಮೊದಲಿಗೆ ಬಳಸಲು ಬರುತ್ತದೆ:

flow ಹರಿವು outflow ಹೊರಹರಿವು
house ಮನೆ outhouse ಹೊರಮನೆ
post ಪಾಳೆಯ outpost ಹೊರಪಾಳೆಯ
going ಹೋಗುವ outgoing ಹೊರಹೋಗುವ
pour ಸುರಿ outpour ಹೊರಸುರಿ
burst ಸಿಡಿ outburst ಹೊರಸಿಡಿ
cast ತಳ್ಳು outcast ಹೊರತಳ್ಳಿದ


(4) over ಒಟ್ಟು:

ಹೆಚ್ಚಿನ ಬಳಕೆಗಳಲ್ಲೂ ಮೀರು ಇಲ್ಲವೇ ಮೀರಿದ ಎಂಬ ಅಳವಿನ ಹುರುಳಿದೆ; ಆದರೆ, ಕೆಲವು ಬಳಕೆಗಳಲ್ಲಿ ಮೇಲೆ ಇಲ್ಲವೇ ಮೇಲಿನ ಎಂಬ ಇಂಬಿನ ಹುರುಳೂ ಇದೆ:

arm ತೋಳು overarm ಮೇಲ್ತೋಳಿನ (ಎಸೆತ)
ground ನೆಲ overground ಮೇಲ್ನೆಲದ
lord ಆಳ್ಮ overlord ಮೇಲಾಳ್ಮ
shoe ಕೆರ overshoe ಮೇಲ್ಕೆರ


(5) sub ಒಟ್ಟು:

ಈ ಒಟ್ಟಿಗೆ ಮುಕ್ಯವಾಗಿ ಒಳ ಮತ್ತು ಕೆಳ ಎಂಬ ಎರಡು ಹುರುಳುಗಳಿದ್ದು, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಇವೇ ಪದಗಳನ್ನು ಬಳಸಲು ಬರುತ್ತದೆ; ಕೆಳ ಎಂಬುದಕ್ಕೆ ಬದಲಾಗಿ ಕಿಳ್/ಕೀಳ್ ಎಂಬ ಪರಿಚೆಬೇರನ್ನು ಬಳಸಿ ಹೆಚ್ಚು ಅಡಕವಾದ ಪದಗಳನ್ನೂ ಪಡೆಯಲು ಬರುತ್ತದೆ:

group ಗುಂಪು subgroup ಒಳಗುಂಪು
tenant ಬಾಡಿಗೆಗಾರ subtenant ಒಳಬಾಡಿಗೆಗಾರ
total ಮೊತ್ತ subtotal ಒಳಮೊತ್ತ
routine ಹಮ್ಮುಗೆ subroutine ಒಳಹಮ್ಮುಗೆ
way ಹಾದಿ subway ಕೆಳಹಾದಿ
script ಬರಿಗೆ subscript ಕೆಳಬರಿಗೆ
soil ಮಣ್ಣು subsoil ಕೆಳಮಣ್ಣು
sonic ಉಲಿಯ subsonic ಕೀಳುಲಿಯ


(6) super ಒಟ್ಟು:

ಈ ಒಟ್ಟಿಗೆ ಮೇಲೆ ಎಂಬ ಇಂಬಿನ ಹುರುಳಿದ್ದು, ಕನ್ನಡದಲ್ಲಿ ಇದಕ್ಕೆ ಸಾಟಿಯಾಗಿ ಮೇಲೆ ಎಂಬ ಪದವನ್ನೇ ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

impose ಹೇರು superimpose ಮೇಲೆಹೇರು
script ಬರಿಗೆ superscript ಮೇಲ್ಬರಿಗೆ
structure ಕಟ್ಟಡ superstructure ಮೇಲ್ಕಟ್ಟಡ


(7) trans ಒಟ್ಟು:

ಈ ಒಟ್ಟಿಗೆ ಆಚೆ ಎಂಬ ಹುರುಳು ಮಾತ್ರವಲ್ಲದೆ ಮಾರ‍್ಪಡಿಸು ಎಂಬ ಹುರುಳೂ ಇದೆ; ಹಾಗಾಗಿ, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಆಚೆ ಎಂಬುದನ್ನು ಪದದ ಬಳಿಕ, ಮತ್ತು ಮರು/ಮಾರ್‍ ಎಂಬುದನ್ನು ಎಸಕಪದಗಳ ಮೊದಲು ಇಲ್ಲವೇ ಹೆಸರುಪದಗಳ ಬಳಿಕ ಬಳಸಲು ಬರುತ್ತದೆ:

continent ಪೆರ‍್ನೆಲ transcontinental ಪೆರ‍್ನೆಲದಾಚೆಯ
nation ನಾಡು transnational ನಾಡಿನಾಚೆಯ
plant ನಾಟು transplant ಮರುನಾಟು
act ಎಸಗು transact ಮಾರೆಸಗು
scribe ಬರೆಗ transcribe ಮಾರ‍್ಬರೆ
form ಪರಿಜು transform ಪರಿಜುಮಾರು


(8) under ಒಟ್ಟು:

ಈ ಒಟ್ಟಿಗೆ ಕೆಳ ಮತ್ತು ಒಳ ಎಂಬ ಎರಡು ಇಂಬಿನ ಹುರುಳುಗಳಿವೆ; ಇದಲ್ಲದೆ, ಕೊರೆ ಎಂಬ ಅಳವಿನ ಹುರುಳೂ ಇದಕ್ಕಿದೆ.
ಇಂಬಿನ ಹುರುಳಿನಲ್ಲಿ ಇದಕ್ಕೆ ಸಾಟಿಯಾಗಿ ಕೆಳ(ಗೆ) ಮತ್ತು ಒಳ(ಗೆ) ಎಂಬ ಪದಗಳನ್ನೇ ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

(ಕ) ಕೆಳ ಎಂಬ ಹುರುಳಿನಲ್ಲಿ ಬಳಕೆ:

lay ಇಡು underlay ಕೆಳಗಿಡು
cut ಕಡಿ undercut ಕೆಳ ಕಡಿ
belly ಹೊಟ್ಟೆ underbelly ಕೆಳ ಹೊಟ್ಟೆ
growth ಬೆಳವಿ undergrowth ಕೆಳ ಬೆಳವಿ
arm ತೋಳು underarm ಕೆಳತೋಳಿನ

(ಚ) ಒಳ ಎಂಬ ಹುರುಳಿನಲ್ಲಿ ಬಳಕೆ:

clothing ಉಡುಪು underclothing ಒಳ ಉಡುಪು
current ಹರಿವು undercurrent ಒಳ ಹರಿವು
coat ಹಚ್ಚುಗೆ undercoat ಒಳಹಚ್ಚುಗೆ

ಕೆಲವು ಕಡೆಗಳಲ್ಲಿ ಕೆಳ(ಗೆ) ಎಂಬುದನ್ನು ಹೆಸರುಪದಗಳ ಬಳಿಕ ಬಳಸಬೇಕಾಗುತ್ತದೆ:

foot ಕಾಲು underfoot ಕಾಲ್ಕೆಳಗೆ
ground ನೆಲ underground ನೆಲದ ಕೆಳಗೆ
water ನೀರು underwater ನೀರ ಕೆಳಗೆ


(9) ex ಒಟ್ಟು:

ಇಂಗ್ಲಿಶ್‌ನ ex ಒಟ್ಟನ್ನು ಮೊದಲಿನ ಎಂಬ ಹೊತ್ತಿನ ಹುರುಳಿನಲ್ಲಿ ಮಾತ್ರವಲ್ಲದೆ ಹೊರಗಿನ ಎಂಬ ಇಂಬಿನ ಹುರುಳಿನಲ್ಲೂ ಬಳಸಲಾಗುತ್ತದೆ; ಈ ಎರಡನೆಯ ಬಳಕೆಯಲ್ಲಿ ಅದು ಒಳಗಿನ ಎಂಬ ಹುರುಳಿರುವ in ಎಂಬ ಒಟ್ಟಿಗೆ ಬದಲಾಗಿ ಬರುತ್ತದೆ (import : export).

ಇಂತಹ ಕಡೆಗಳಲ್ಲಿ ಇಂಗ್ಲಿಶ್‌ನ in ಎಂಬುದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಒಳ ಎಂಬ ಪದವನ್ನು, ಮತ್ತು ex ಎಂಬುದಕ್ಕೆ ಸಾಟಿಯಾಗಿ ಹೊರ ಎಂಬ ಪದವನ್ನು ಬಳಸಲು ಬರುತ್ತದೆ; ಆದರೆ, ಕೆಲವೆಡೆಗಳಲ್ಲಿ ಈ ರೀತಿ ಒಳ-ಹೊರ ಎಂಬ ಪದಗಳನ್ನು ಬಳಸುವಲ್ಲಿ ಅವುಗಳ ಬಳಿಕ ಬರುವ ಎಸಕಪದವನ್ನೂ ಬದಲಾಯಿಸಬೇಕಾಗುತ್ತದೆ:

implode ಒಳಸಿಡಿ explode ಹೊರಸಿಡಿ
interior ಒಳಮಯ್ exterior ಹೊರಮಯ್
import ಒಳತರು export ಹೊರಕಳಿಸು
inhale ಒಳಸೆಳೆ exhale ಹೊರಬಿಡು


(10) extra ಒಟ್ಟು:

ಇದಕ್ಕೆ ಹೊರಗಿನ ಎಂಬ ಹುರುಳಿದ್ದು, ಕನ್ನಡದಲ್ಲಿ ಈ ಹುರುಳನ್ನು ಪಡೆಯಲು ಹೊರಗಿನ ಎಂಬ ಪದವನ್ನು ಹೆಸರುಪದದ ಬಳಿಕ ಬಳಸಬೇಕಾಗುತ್ತದೆ:

marital ಮದುವೆಯ extramarital ಮದುವೆಹೊರಗಿನ
intestinal ಕರುಳಿನ extraintestinal ಕರುಳುಹೊರಗಿನ
linguistic ನುಡಿಯ extralinguistic ನುಡಿಯ ಹೊರಗಿನ
official ಮಣಿಹದ extraofficial ಮಣಿಹದ ಹೊರಗಿನ


(11) tele ಒಟ್ಟು:

ದೂರದ ಎಂಬ ಹುರುಳಿರುವ ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಗೆಂಟು ಎಂಬ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

care ಆರಯ್ಕೆ telecare ಗೆಂಟಾರಯ್ಕೆ
learning ಕಲಿಕೆ telelearning ಗೆಂಟುಕಲಿಕೆ
sale ಮಾರಾಟ telesale ಗೆಂಟುಮಾರಾಟ
screen ತೆರೆ telescreen ಗೆಂಟುತೆರೆ


ತಿರುಳು:

ಇಂಗ್ಲಿಶ್‌ನಲ್ಲಿ ಹಲವು ಇಂಬಿನ ಮುನ್ನೊಟ್ಟುಗಳು ಬಳಕೆಯಾಗುತ್ತಿದ್ದು, ಇವಕ್ಕೆ ಸಾಟಿಯಾಗಿ ಹೆಚ್ಚಿನೆಡೆಗಳಲ್ಲೂ ಕನ್ನಡದ ಮುನ್, ಎಡ, ನಡು, ಹೊರ, ಒಳ, ಕೆಳ, ಮೇಲ್, ಗೆಂಟು ಎಂಬಂತಹ ಪರಿಚೆಬೇರುಗಳನ್ನು ಇಲ್ಲವೇ ಪದಗಳನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ.

<< ಬಾಗ-8

facebooktwitter

ಇಂಗ್ಲಿಶ್ ನುಡಿಯ ಮುನ್ನೊಟ್ಟುಗಳು


ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-8

pada_kattane_sarani_dnsಇಂಗ್ಲಿಶ್‌ನಲ್ಲಿ ಹಲವಾರು ಮುನ್ನೊಟ್ಟು(prefix)ಗಳು ಬಳಕೆಯಾಗುತ್ತಿದ್ದು, ಇವನ್ನು ಮುಕ್ಯವಾಗಿ ಅವು ಕೊಡುವ ಹುರುಳುಗಳ ಮೇಲೆ ನಾಲ್ಕು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ:

(1) ಅಳವಿಯ ಒಟ್ಟುಗಳು: uni (unilateral), bi (bilateral), poly (polyglot)

(2) ಇಂಬಿನ ಒಟ್ಟುಗಳು: inter (international), intra (intravenous), trans (transmigrate)

(3) ಹೊತ್ತಿನ ಒಟ್ಟುಗಳು : pre (premedical), post (postmodern), neo (neoclassical)

(4) ಅಲ್ಲಗಳೆಯುವ ಒಟ್ಟುಗಳು: in (incorrect), dis (dislike), un (unbelievable)

ಈ ನಾಲ್ಕು ಮುಕ್ಯ ಗುಂಪುಗಳಲ್ಲಿ ಸೇರದಿರುವ ಬೇರೆಯೂ ಕೆಲವು ಒಟ್ಟುಗಳಿದ್ದು, ಅವನ್ನು ಅಯ್ದನೆಯ ಗುಂಪಿನಲ್ಲಿ ಇರಿಸಬಹುದು.

ಕನ್ನಡದಲ್ಲಿ ಮುನ್ನೊಟ್ಟುಗಳ ಬಳಕೆಯಿಲ್ಲ; ಆದರೆ, ಕನ್ನಡದ ಹಲವು ಪರಿಚೆಬೇರುಗಳು ಮತ್ತು ಎಣಿಕೆಬೇರುಗಳು ಮುನ್ನೊಟ್ಟುಗಳ ಹಾಗೆ ಪದಗಳ ಮೊದಲು ಬಳಕೆಯಾಗಬಲ್ಲುವು. ಕನ್ನಡದ ಸೊಲ್ಲರಿಮೆಯಲ್ಲಿ ಇಂತಹ ಬೇರುಗಳನ್ನು ಬಳಸಿರುವ ಪದಗಳನ್ನು ಜೋಡುಪದಗಳು ಇಲ್ಲವೇ ಕೂಡುಪದಗಳು ಎಂಬುದಾಗಿ ಕರೆಯಲಾಗುತ್ತದೆ. ಇಂಗ್ಲಿಶ್‌ನಲ್ಲಿ ಮುನ್ನೊಟ್ಟುಗಳನ್ನು ಬಳಸಿ ಪಡೆದ ಪದಗಳಿಗೆ ಸಾಟಿಯಾಗುವಂತೆ ಹಲವೆಡೆಗಳಲ್ಲಿ ಇಂತಹ ಪದಗಳನ್ನು ಕಟ್ಟಲು ಬರುತ್ತದೆ.

ಆದರೆ, ಕೆಲವೆಡೆಗಳಲ್ಲಿ ಇಂಗ್ಲಿಶ್ ಮುನ್ನೊಟ್ಟುಗಳಿಗೆ ಸಾಟಿಯಾಗಬಲ್ಲ ಹುರುಳುಗಳನ್ನು ಪಡೆಯಲು ಎಸಕಪದಗಳನ್ನು ಇಲ್ಲವೇ ಅವುಗಳ ಪರಿಚೆರೂಪಗಳನ್ನು ಹೆಸರುಪದಗಳ ಬಳಿಕ ಬಳಸಬೇಕಾಗುತ್ತದೆ. ಕೆಲವು ಪರಿಚೆಪದಗಳನ್ನೂ ಈ ರೀತಿ ಹೆಸರುಪದಗಳ ಪತ್ತುಗೆರೂಪದ ಬಳಿಕ ಬಳಸಬೇಕಾಗುತ್ತದೆ.

ಇಂಗ್ಲಿಶ್‌ನ ಅಲ್ಲಗಳೆಯುವ ಮುನ್ನೊಟ್ಟುಗಳಿಗೆ ಸಾಟಿಯಾಗಬಲ್ಲ ಕನ್ನಡದ ಪದಗಳು ಇಲ್ಲವೇ ಒಟ್ಟುಗಳು ಇವೆಲ್ಲಕ್ಕಿಂತ ಬೇರಾಗಿವೆ; ಅವುಗಳಲ್ಲಿ ಹೆಚ್ಚಿನವೂ ಎಸಕಪದಗಳ ಇಲ್ಲವೇ ಹೆಸರುಪದಗಳ ಬಳಿಕ ಬರುತ್ತವೆ. ತಪ್ಪು ಇಲ್ಲವೇ ಕೆಟ್ಟ ಎಂಬಂತಹ ಕೆಲವು ಪದಗಳು ಮಾತ್ರ ಮುನ್ನೊಟ್ಟುಗಳ ಜಾಗದಲ್ಲಿ ಬಳಕೆಯಾಗುತ್ತವೆ.

ಅಳವಿಯ ಮುನ್ನೊಟ್ಟುಗಳು

ಪದಗಳು ತಿಳಿಸುವ ಪಾಂಗಿನ, ಪರಿಚೆಯ, ಇಲ್ಲವೇ ಎಸಕದ ಅಳವಿಯನ್ನು ತಿಳಿಸುವುದಕ್ಕಾಗಿ ಇಂಗ್ಲಿಶ್‌ನಲ್ಲಿ ಎಣಿಕೆಯನ್ನು ತಿಳಿಸುವ ಮುನ್ನೊಟ್ಟುಗಳು ಮತ್ತು ಬೇರೆ ಬಗೆಯ ಅಳವಿಯನ್ನು ತಿಳಿಸುವ ಮುನ್ನೊಟ್ಟುಗಳು ಎಂಬುದಾಗಿ ಎರಡು ಬಗೆಯ ಮುನ್ನೊಟ್ಟುಗಳು ಬಳಕೆಯಾಗುತ್ತವೆ; ಇವುಗಳಲ್ಲಿ ಎಣಿಕೆಯನ್ನು ತಿಳಿಸುವ ಮುನ್ನೊಟ್ಟುಗಳನ್ನು ಕೆಳಗೆ ಮೊದಲು ವಿವರಿಸಲಾಗಿದ್ದು, ಉಳಿದ ಮುನ್ನೊಟ್ಟುಗಳನ್ನು ಆಮೇಲೆ ವಿವರಿಸಲಾಗಿದೆ:

(ಕ) ಎಣಿಕೆಯ ಒಟ್ಟುಗಳು:
ಅಳವಿಯನ್ನು ತಿಳಿಸುವ ಮುನ್ನೊಟ್ಟುಗಳಲ್ಲಿ ಕೆಲವು ಎಣಿಕೆಗೆ ಸಂಬಂದಿಸಿದುವಾಗಿವೆ; ಇವಕ್ಕೆ ಸಾಟಿಯಾಗಿ ಕನ್ನಡದಲ್ಲೂ ಎಣಿಕೆಯನ್ನು ತಿಳಿಸುವ ಎಣಿಕೆಬೇರುಗಳನ್ನು ಮುನ್ನೊಟ್ಟುಗಳ ಜಾಗದಲ್ಲಿ ಬಳಸಲು ಬರುತ್ತದೆ:

(1) uni ಇಲ್ಲವೇ mono ಒಟ್ಟು:
ಈ ಎರಡು ಮುನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಒರ‍್/ಓರ‍್ ಎಂಬ ಪರಿಚೆಬೇರನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ (ಮುಚ್ಚುಲಿಗಳ ಮೊದಲು ಒರ‍್ ಮತ್ತು ತೆರೆಯುಲಿಗಳ ಮೊದಲು ಓರ‍್):

pole ಕೊನೆ unipolar ಒರ‍್ಕೊನೆಯ
lateral ಬದಿಯ unilateral ಒರ‍್ಬದಿಯ
direction ತಟ್ಟು unidirectional ಒರ‍್ತಟ್ಟು
valve ತೆರ‍್ಪು univalve ಒರ‍್ತೆರ‍್ಪಿನ
rail ಕಂಬಿ monorail ಒರ‍್ಕಂಬಿ
chrome ಬಣ್ಣ monochrome ಒರ‍್ಬಣ್ಣ
mania ಗೀಳು monomania ಒರ‍್ಗೀಳು
syllable ಉಲಿಕಂತೆ monosyllabic ಓರುಲಿಕಂತೆಯ

 

(2) bi ಇಲ್ಲವೇ di ಒಟ್ಟು:
ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಇರ‍್/ಈರ‍್ ಎಂಬ ಎಣಿಕೆಬೇರನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

lateral ಬದಿಯ bilateral ಇರ‍್ಬದಿಯ
focal ಸೇರ‍್ಮೆಯ bifocal ಇರ‍್ಸೇರ‍್ಮೆಯ
polar ಕೊನೆಯ bipolar ಇರ‍್ಕೊನೆಯ
sect ತುಂಡು bisect ಇರ‍್ತುಂಡಿಸು
pole ಕೊನೆ dipole ಇರ‍್ಕೊನೆ
morph ಪರಿಜು dimorph ಇರ‍್ಪರಿಜು

 

(3) tri ಒಟ್ಟು:
ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಮುರ‍್/ಮೂರ‍್ ಎಣಿಕೆಬೇರನ್ನು ಬಳಸಲು ಬರುತ್ತದೆ:

angle ಮೊನೆ triangle ಮುಮ್ಮೊನೆ
colour ಬಣ್ಣ tricolour ಮುಬ್ಬಣ್ಣ
lateral ಬದಿಯ trilateral ಮೂರ‍್ಬದಿಯ
part ಪಾಲು tripartite ಮೂರ‍್ಪಾಲಿನ

 

ಮೂರಕ್ಕಿಂತ ಮೇಲಿನ ಎಣಿಕೆಗಳನ್ನು ತಿಳಿಸುವ quadri, penta ಮೊದಲಾದವುಗಳ ಬಳಕೆ ಮೇಲಿನವುಗಳಿಂದ ತುಂಬಾ ಕಡಿಮೆ; ಅವನ್ನು ಬಳಸಿರುವಲ್ಲೂ ಅವಕ್ಕೆ ಸಾಟಿಯಾಗಿ ನಾಲ್, ಅಯ್ ಮೊದಲಾದ ಕನ್ನಡದ ಎಣಿಕೆಬೇರುಗಳನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ (quadrangle ನಾಲ್ಮೂಲೆ, pentangle ಅಯ್ಮೂಲೆ).

(4) semi, demi, ಇಲ್ಲವೇ hemi ಒಟ್ಟುಗಳು:
ಅರೆವಾಸಿ ಎಂಬ ಹುರುಳನ್ನು ಕೊಡುವ ಮೇಲಿನ ಇಂಗ್ಲಿಶ್ ಮೊನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಅರೆ ಎಂಬ ಎಣಿಕೆಬೇರನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

circle ಬಳಸಿ semicircle ಅರೆಬಳಸಿ
detached ಬೇರ‍್ಪಟ್ಟ semi-detached ಅರೆಬೇರ‍್ಪಟ್ಟ
final ಕೊನೆಯ semi-final ಅರೆಕೊನೆಯ
skilled ಪಳಗಿದ semi-skilled ಅರೆಪಳಗಿದ
god ಕಡವರು demigod ಅರೆಕಡವರು
relief ಒದವಿ demirelief ಅರೆ ಒದವಿ
sphere ತೆರಳೆ hemisphere ಅರೆತೆರಳೆ

 

(ಚ) ಬೇರೆ ಬಗೆಯ ಅಳವಿಯ ಮುನ್ನೊಟ್ಟುಗಳು:
ಎಣಿಕೆಯನ್ನು ತಿಳಿಸುವ ಮುನ್ನೊಟ್ಟುಗಳು ಅಳವಿಯನ್ನು ಕಚಿತವಾಗಿ ತಿಳಿಸುತ್ತವೆ; ಬೇರೆ ಹಲವು ಮುನ್ನೊಟ್ಟುಗಳು ತುಂಬಾ, ತುಸು, ಕಡಿಮೆ, ಮೀರಿ, ದೊಡ್ಡ, ಚಿಕ್ಕ, ಹಲವು ಮೊದಲಾದ ಹುರುಳುಗಳನ್ನು ಕೊಡುವ ಮೂಲಕ ಕಚಿತವಲ್ಲದ ಅಳವಿಯನ್ನು ತಿಳಿಸುವಲ್ಲಿ ಬಳಕೆಯಾಗುತ್ತವೆ. ಅಂತಹ ಮುನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಂತಹ ಪದಗಳನ್ನು ಇಲ್ಲವೇ ಪರಿಚೆಬೇರುಗಳನ್ನು ಬಳಸಲು ಬರುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:

(1) arch ಒಟ್ಟು:
ಈ ಒಟ್ಟಿಗೆ ತುಂಬಾ ಹೆಚ್ಚಿನ ಎಂಬ ಅಳವಿಯ ಹುರುಳಿದ್ದು, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಕ್ಕ ಎಂಬುದನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ.
ಈ ಹುರುಳು ಮಾತ್ರವಲ್ಲದೆ ಮುಕ್ಯವಾದ ಎಂಬ ಹುರುಳೂ ಇದಕ್ಕಿದೆ; ಕನ್ನಡದಲ್ಲಿ ಈ ಹುರುಳನ್ನು ತಿಳಿಸಲು ಮಲ್ಲ ಎಂಬ ಪದವನ್ನು ಬಳಸಬಹುದು (archbishop ಮಲ್ಲಬಿಶಪ್).

enemy ಹಗೆ arch-enemy ಎಕ್ಕಹಗೆ
traitor ನಾಡಹಗೆ arch-traitor ಎಕ್ಕನಾಡಹಗೆ
magician ಮಾಟಗಾರ arch-magician ಎಕ್ಕಮಾಟಗಾರ
murderer ಕೊಲೆಗಾರ arch-murderer ಎಕ್ಕಕೊಲೆಗಾರ

 

(2) co ಒಟ್ಟು:
ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಕೂಡು ಇಲ್ಲವೇ ಒಡ ಎಂಬುದನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

agent ಮಾರಾಳು co-agent ಕೂಡುಮಾರಾಳು
inheritor ಮರುಪಡೆಗ coinheritor ಕೂಡುಮರುಪಡೆಗ
education ಕಲಿಕೆ co-education ಕೂಡುಕಲಿಕೆ
editor ಅಳವಡಿಗ co-editor ಕೂಡಳವಡಿಗ
relation ಪತ್ತುಗೆ correlation ಒಡಪತ್ತುಗೆ
medication ಮದ್ದು co-medication ಒಡಮದ್ದು
govern ಆಳು co-govern ಒಡ ಆಳು

 

(3) hyper ಒಟ್ಟು:
ಈ ಒಟ್ಟನ್ನು ಬಳಸಿರುವಲ್ಲಿ ಅದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಮಿಗಿಲು ಎಂಬ ಪದವನ್ನು ಬಳಸಲು ಬರುತ್ತದೆ:

inflation ಉಬ್ಬರ hyperinflation ಮಿಗಿಲುಬ್ಬರ
link ಕೊಂಡಿ hyperlink ಮಿಗಿಲುಕೊಂಡಿ
market ಮಾರುಕಟ್ಟೆ hypermarket ಮಿಗಿಲುಮಾರುಕಟ್ಟೆ
sensitive ನಾಟುವ hypersensitive ಮಿಗಿಲುನಾಟುವ

 

(4) mini ಒಟ್ಟು:
ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಕಿರು ಎಂಬುದನ್ನು ಬಳಸಲು ಬರುತ್ತದೆ; ಇದಕ್ಕೆ ತೆರೆಯುಲಿಗಳ ಮೊದಲಿಗೆ ಕಿತ್ ಎಂಬ ರೂಪ ಇದೆ:

cab ಬಾಡಿಗೆಬಂಡಿ minicab ಕಿರುಬಾಡಿಗೆಬಂಡಿ
computer ಎಣ್ಣುಕ minicomputer ಕಿತ್ತೆಣ್ಣುಕ
dictionary ಪದನೆರಕ minidictionary ಕಿರುಪದನೆರಕ
camp ಬೀಡು minicamp ಕಿರುಬೀಡು

 

(5) out ಒಟ್ಟು:
ಈ ಒಟ್ಟನ್ನು ಮುಕ್ಯವಾಗಿ ಹೊರ ಮತ್ತು ಮೀರು ಎಂಬ ಎರಡು ಹುರುಳುಗಳಲ್ಲಿ ಬಳಸಲಾಗುತ್ತದೆ; ಇವುಗಳಲ್ಲಿ ಮೊದಲನೆಯ ಹುರುಳು ಇಂಬಿಗೆ ಸಂಬಂದಿಸಿದುದಾಗಿದ್ದು, ಅದರ ಬಳಕೆಯನ್ನು ಮುಂದೆ ()ರಲ್ಲಿ ವಿವರಿಸಲಾಗಿದೆ; ಎರಡನೆಯ ಹುರುಳಿನಲ್ಲಿ ಬಳಕೆಯಾಗುವ ಈ ಮುನ್ನೊಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಮೀರು ಎಂಬ ಪದವನ್ನು ಬಳಸಲು ಬರುತ್ತದೆ.
ಇಂಗ್ಲಿಶ್‌ನಲ್ಲಿ ಮೇಲಿನ ಒಟ್ಟಿನೊಂದಿಗೆ ಬರುವ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ (ಕ) ಕೆಲವೆಡೆಗಳಲ್ಲಿ ಒಂದು ಎಸಕಪದವನ್ನು ಬಳಸಬೇಕಾಗುತ್ತದೆ, ಮತ್ತು (ಚ) ಬೇರೆ ಕೆಲವು ಕಡೆಗಳಲ್ಲಿ ಒಂದು ಹೆಸರುಪದವನ್ನು ಬಳಸಬೇಕಾಗುತ್ತದೆ.
(ಕ) ಎಸಕಪದವನ್ನು ಬಳಸುವುದಿದ್ದಲ್ಲಿ, ಅದರ ಮುಂದೆ ಮೀರು ಪದದ ಜೋಡಿಸುವ ರೂಪವಾದ ಮೀರಿ ಎಂಬುದನ್ನು ಬಳಸಲು ಬರುತ್ತದೆ:

weigh ತೂಗು outweigh ಮೀರಿ ತೂಗು
sell ಮಾರು outsell ಮೀರಿ ಮಾರು
shine ಹೊಳೆ outshine ಮೀರಿ ಹೊಳೆ
last ಬಾಳು outlast ಮೀರಿ ಬಾಳು

 

(ಚ) ಹೆಸರುಪದವನ್ನು ಬಳಸುವುದಿದ್ದಲ್ಲಿ, ಅದರ ಬಳಿಕ ಮೀರು ಪದವನ್ನು ಒಂದು ಎಸಕಪದವಾಗಿ ಬಳಸಲು ಬರುತ್ತದೆ:

number ಎಣಿಕೆ outnumber ಎಣಿಕೆ ಮೀರು
rank ಮಟ್ಟ outrank ಮಟ್ಟ ಮೀರು
size ಅಳತೆ outsize ಅಳತೆ ಮೀರಿದ
law ಕಟ್ಟಲೆ outlaw ಕಟ್ಟಲೆ ಮೀರಿದ

 

(6) over ಒಟ್ಟು:
ಈ ಒಟ್ಟಿಗೆ ಅಳವಿನ ಹುರುಳೂ ಇದೆ, ಮತ್ತು ಇಂಬಿನ ಹುರುಳೂ ಇದೆ; out ಎಂಬ ಮುನ್ನೊಟ್ಟಿನ ಬಳಕೆಯಲ್ಲಿ ಕಾಣಿಸುವ ಹಾಗೆ, ಈ ಒಟ್ಟಿಗಿರುವ ಅಳವಿನ ಬಳಕೆಯಲ್ಲೂ ಕನ್ನಡದ ಮೀರು ಪದವನ್ನು ಬಳಸಲು ಬರುತ್ತದೆ:

(ಕ) ಎಸಕಪದದ ಬಳಕೆ:

achieve ಪಡೆ overachieve ಮೀರಿ ಪಡೆ
burden ಹೇರು overburden ಮೀರಿ ಹೇರು
charge ಬೆಲೆಹಾಕು overcharge ಮೀರಿ ಬೆಲೆಹಾಕು
heat ಕಾಯು overheat ಮೀರಿ ಕಾಯು

 

(ಚ) ಹೆಸರುಪದದ ಬಳಕೆ:

balance ಸರಿತೂಕ overbalance ಸರಿತೂಕ ಮೀರು
dose ಮದ್ದಳವು overdose ಮದ್ದಳವು ಮೀರು
due ತಲಪುಗೆ overdue ತಲಪುಗೆ ಮೀರಿದ
price ಬೆಲೆ overpriced ಬೆಲೆ ಮೀರಿದ

 

(7) super ಒಟ್ಟು:
ಈ ಒಟ್ಟಿಗೆ ತುಂಬಾ ಹೆಚ್ಚಿನ ಎಂಬ ಅಳವಿಯ ಹುರುಳಿದ್ದು, ಕನ್ನಡದಲ್ಲಿ ಅದಕ್ಕೆ ಸಾಟಿಯಾಗಿ ಎಕ್ಕ (ಎಕ್ಕಟ) ಎಂಬ ಪರಿಚೆಬೇರನ್ನು ಮುನ್ನೊಟ್ಟುಗಳ ಜಾಗದಲ್ಲಿ ಇರಿಸಿ ಹೇಳಲು ಬರುತ್ತದೆ:

hero ಕೆಚ್ಚುಗ superhero ಎಕ್ಕಕೆಚ್ಚುಗ
computer ಎಣ್ಣುಕ supercomputer ಎಕ್ಕೆಣ್ಣುಕ
glue ಅಂಟು superglue ಎಕ್ಕಂಟು
market ಮಾರುಕಟ್ಟೆ supermarket ಎಕ್ಕಮಾರುಕಟ್ಟೆ
brain ಮಿದುಳು superbrain ಎಕ್ಕಮಿದುಳು

 

(8) ultra ಒಟ್ಟು:
ಈ ಒಟ್ಟಿಗೂ ತುಂಬಾ ಹೆಚ್ಚು ಎಂಬ ಹುರುಳಿದ್ದು, ಇದಕ್ಕೆ ಸಾಟಿಯಾಗಿಯೂ ಕನ್ನಡದಲ್ಲಿ ಎಕ್ಕ ಎಂಬ ಪರಿಚೆಬೇರನ್ನು ಬಳಸಲು ಬರುತ್ತದೆ:

high ಎತ್ತರ ultra-high ಎಕ್ಕೆತ್ತರ
long ಉದ್ದ ultra-long ಎಕ್ಕುದ್ದ
ripe ಕಳಿತ ultra-ripe ಎಕ್ಕಕಳಿತ
secure ನೆಮ್ಮದಿಯ ultra-secure ಎಕ್ಕನೆಮ್ಮದಿಯ

 

(9) under ಒಟ್ಟು:
ಈ ಒಟ್ಟಿಗಿರುವ ಅಳವಿನ ಬಳಕೆಯಲ್ಲಿ ಕನ್ನಡದ ಕೊರೆ ಎಂಬ ಪದವನ್ನು ಅದಕ್ಕೆ ಸಾಟಿಯಾಗಿ ಬಳಸಲು ಬರುತ್ತದೆ:

dress ತೊಡು underdress ಕೊರೆತೊಡು
spend ಬಳಸು underspend ಕೊರೆಬಳಸು
perform ನೆಗಳು underperform ಕೊರೆನೆಗಳು
fed ತಿನ್ನಿಸಿದ underfed ಕೊರೆತಿನ್ನಿಸಿದ
fund ಹಣ underfund ಕೊರೆಹಣ ಕೊಡು
nourished ಆರಯ್ಕೆಯ undernourished ಕೊರೆಯಾರಯ್ಕೆಯ
pay ಕೂಲಿ underpay ಕೊರೆಕೂಲಿ
weight ತೂಕ underweight ಕೊರೆತೂಕದ

 

(10) poly ಇಲ್ಲವೇ multi ಒಟ್ಟು:
ಹಲವು ಎಂಬ ಹುರುಳನ್ನು ಕೊಡುವ ಈ ಒಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹಲ ಎಂಬ ಪರಿಚೆಬೇರನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

morph ಪರಿಜು polymorphic ಹಲಪರಿಜಿನ
phone ಉಲಿ polyphonic ಹಲವುಲಿಯ
syllable ಉಲಿಕಂತೆ polysyllabic ಹಲವುಲಿಕಂತೆಯ
technical ಅರಿವಿನ polytechnic ಹಲವರಿವಿನ
coloured ಬಣ್ಣದ multicoloured ಹಲಬಣ್ಣದ
lateral ಬದಿಯ multilateral ಹಲಬದಿಯ
party ತಂಡ multiparty ಹಲತಂಡದ
race ತಳಿ multiracial ಹಲತಳಿಯ

 

(11) pan ಒಟ್ಟು:
ಈ ಒಟ್ಟಿಗೆ ಎಲ್ಲ ಎಂಬ ಹುರುಳಿದ್ದು, ಕನ್ನಡದಲ್ಲಿ ಅದೇ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:

chromatic ಬಣ್ಣದ panchromatic ಎಲ್ಲಬಣ್ಣದ
linguistic ನುಡಿಯ panlinguistic ಎಲ್ಲನುಡಿಯ
African ಆಪ್ರಿಕದ pan-African ಎಲ್ಲಾಪ್ರಿಕದ
phobia ಅಂಜಿಕೆ panphobia ಎಲ್ಲಂಜಿಕೆಯ

 

ತಿರುಳು:

ಅಳವಿಯನ್ನು ತಿಳಿಸುವ ಮುನ್ನೊಟ್ಟುಗಳಲ್ಲಿ ಅದನ್ನು ಕಚಿತವಾಗಿ ತಿಳಿಸುವ ಎಣಿಕೆಯ ಮುನ್ನೊಟ್ಟುಗಳು ಮತ್ತು ಅಶ್ಟೊಂದು ಕಚಿತವಲ್ಲದಂತೆ ಬೇರೆ ಬಗೆಯಲ್ಲಿ ತಿಳಿಸುವ ಅಳವಿಯ ಮುನ್ನೊಟ್ಟುಗಳು ಎಂಬುದಾಗಿ ಎರಡು ಬಗೆಯವು ಇಂಗ್ಲಿಶ್‌ನಲ್ಲಿವೆ.

ಇವುಗಳಲ್ಲಿ ಎಣಿಕೆಯ ಮುನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದ ಒರ‍್/ಓರ‍್, ಇರ‍್/ಈರ‍್, ಮುರ‍್/ಮೂರ‍್, ಅರೆ ಮೊದಲಾದ ಎಣಿಕೆಬೇರುಗಳನ್ನು ಮೊನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ, ಮತ್ತು ಬೇರೆ ಬಗೆಯ ಅಳವಿಯನ್ನು ತಿಳಿಸುವ ಮುನ್ನೊಟ್ಟುಗಳಿಗೆ ಸಾಟಿಯಾಗಿ ಹೆಚ್ಚಿನೆಡೆಗಳಲ್ಲೂ ಕನ್ನಡದ ಎಕ್ಕ, ಒಡ, ಕಿರು/ಕಿತ್ತ್, ಕೊರೆ, ಹಲ ಎಂಬಂತಹ ಪರಿಚೆಬೇರುಗಳನ್ನು ಬಳಸಲು ಬರುತ್ತದೆ; ಕೆಲವೆಡೆಗಳಲ್ಲಿ ಮಾತ್ರ ಮೀರು, ಕೂಡು, ಮಿಗಿಲು ಎಂಬಂತಹ ಪದಗಳನ್ನು ಮೊನ್ನೊಟ್ಟಿನ ಜಾಗದಲ್ಲಿ ಇಲ್ಲವೇ ಪದಗಳ ಬಳಿಕ ಬಳಸಬೇಕಾಗುತ್ತದೆ.

<< ಬಾಗ-7

 

facebooktwitter