ನುಡಿಯರಿಮೆಯ ಇಣುಕುನೋಟ – 24
ನಾವು ಮಾತನಾಡುವಾಗ ಉಲಿಗಳನ್ನು ಬಳಸುತ್ತೇವೆ. ಈ ಉಲಿಗಳು ಕಿವುಡರಿಗೆ ಕೇಳಿಸುವುದಿಲ್ಲವಾದ ಕಾರಣ, ಕಿವುಡರಾಗಿರುವ ಚಿಕ್ಕ ಮಕ್ಕಳು ಉಲಿಗಳಿರುವ ಮಾತುಗಳನ್ನು ಕಲಿಯಲಾರರು. ಹಾಗಾಗಿ, ದೊಡ್ಡವರಾಗುತ್ತಿರುವಂತೆ ಅಂತಹ ಮಾತುಗಳನ್ನು ಬಳಸಲೂ ಅವರಿಗೆ ಸಾದ್ಯವಾಗುವುದಿಲ್ಲ. ಹೆಚ್ಚು ಕಿವುಡಿಲ್ಲದ ಮಕ್ಕಳಿಗೆ ಚಿಕ್ಕಂದಿನಲ್ಲೇನೇ ಕೇಳಿಸುವ ಉಪಕರಣವನ್ನು ತೊಡಿಸಿದಲ್ಲಿ ಅವರೂ ಇತರ ಮಕ್ಕಳ ಹಾಗೆ ಮಾತನಾಡಲು ಕಲಿಯಬಲ್ಲರು. ಆದರೆ ಏನೂ ಕೇಳಿಸದ ಮಕ್ಕಳಿಗೆ ಹೀಗೆ ಮಾಡಲು ಸಾದ್ಯವಾಗುವುದಿಲ್ಲ. ಹೀಗಿದ್ದರೂ, ಅಂತಹ ಮಕ್ಕಳಿಗೆ ಉಲಿಗಳ ಬದಲು ಸನ್ನೆಗಳನ್ನು ಬಳಸುವ ಮಾತನ್ನು ಕಲಿಸಿದಲ್ಲಿ ಅವರು ಅದನ್ನು ಕಲಿಯಬಲ್ಲರು. ಈ ರೀತಿ ಉಲಿಗಳ ಬದಲು ಸನ್ನೆಗಳನ್ನು ಬಳಸುವ ಕಿವುಡರ ನುಡಿಯನ್ನು ಸನ್ನೆನುಡಿಯೆಂದು ಕರೆಯಬಹುದು.
ಕಿವುಡರ ಈ ಸನ್ನೆನುಡಿ ನಾವಾಡುವ ಉಲಿನುಡಿಗಿಂತ ಒಂದು ಮುಕ್ಯವಾದ ವಿಶಯದಲ್ಲಿ ಬೇರಾಗಿದೆ. ಅದು ಕಣ್ಣಿಗೆ ಕಾಣಿಸುವ ಸನ್ನೆಗಳ ನುಡಿಯಾದ ಕಾರಣ, ಅದರಲ್ಲಿ ಒಂದೇ ಬಾರಿಗೆ ಕಯ್ಸನ್ನೆ, ಕಣ್ಣುಸನ್ನೆ, ಹುಬ್ಬುಗಳ ಕುಣಿತ, ತುಟಿಗಳ ಚಲನೆ, ನಿಲ್ಲುವ ಕ್ರಮ ಮೊದಲಾದ ಹಲವು ಬಗೆಯ ಸನ್ನೆಗಳನ್ನು ಒಟ್ಟಾಗಿ ಬಳಸಿಕೊಳ್ಳಲಾಗುತ್ತದೆ. ನಮ್ಮ ಮಾತುಗಳಲ್ಲಿ ಬಳಕೆಯಾಗುವ ಉಲಿಗಳು ಒಂದರ ಅನಂತರ ಒಂದರಂತೆ ಬರಬಲ್ಲುವಲ್ಲದೆ ಹಾಗೆ ಒಟ್ಟಾಗಿ ಬರಲಾರವು. ಈ ವಿಶಯದಲ್ಲಿ ಸನ್ನೆನುಡಿಗೆ ಉಲಿನುಡಿಗಿಂತ ಹೆಚ್ಚಿನ ಕಸುವಿದೆ. ಆದರೆ, ಇನ್ನೊಂದು ವಿಶಯದಲ್ಲಿ ಉಲಿನುಡಿಗೇನೇ ಹೆಚ್ಚಿನ ಕಸುವಿದೆ; ಸನ್ನೆನುಡಿಯಲ್ಲಿ ಒಬ್ಬರು ನುಡಿದ ಮಾತನ್ನು ಇನ್ನೊಬ್ಬರು ತಿಳಿಯಬೇಕಿದ್ದಲ್ಲಿ ಅವರಿಬ್ಬರೂ ಎದುರೆದುರಿಗೇನೇ ಇರಬೇಕಾಗುತ್ತದೆ; ಆದರೆ, ಉಲಿನುಡಿಯಲ್ಲಿ ಆ ರೀತಿ ಎದುರೆದುರಿಗಿರಬೇಕಾಗಿಲ್ಲ.
ಈ ಎರಡು ವಿಶಯಗಳನ್ನು ಹೊರತುಪಡಿಸಿ, ಬೇರೆಲ್ಲಾ ವಿಶಯಗಳಲ್ಲೂ ಕಿವುಡರ ಸನ್ನೆನುಡಿಗೆ ಕಿವಿ ಕೇಳುವವರ ಉಲಿನುಡಿಯಂತಹದೇ ಕಸುವಿದೆ. ಅದರಲ್ಲಿ ಬಳಕೆಯಾಗುವ ಸನ್ನೆಗಳಿಗೆ ಉಲಿನುಡಿಯ ಉಲಿಗಳ ಹಾಗೆ ನೇರವಾದ ಅರ‍್ತವಿರುವುದಿಲ್ಲ, ಮತ್ತು ಅಂತಹ ಅರ‍್ತವಿಲ್ಲದ ಸನ್ನೆಗಳ ಮೂಲಕ ಉಲಿನುಡಿಯ ಹಾಗೆ ಸನ್ನೆನುಡಿಯಲ್ಲೂ ಸಾವಿರಾರು ಅರ‍್ತವಿರುವ ಪದಗಳನ್ನು ರಚಿಸಿಕೊಳ್ಳಲಾಗುತ್ತದೆ. ಇದಲ್ಲದೆ, ಉಲಿನುಡಿಯ ಹಾಗೆ ಸನ್ನೆನುಡಿಯಲ್ಲೂ ಬಹಳ ಸಿಕ್ಕಲು ಸಿಕ್ಕಲಾದ ನೂರಾರು ಸೊಲ್ಲರಿಮೆಯ ಕಟ್ಟಲೆಗಳನ್ನು ಬಳಸಲಾಗುತ್ತದೆ. ಅವುಗಳ ಮೂಲಕ ಎಂತಹ ವಿಶಯವನ್ನು ಬೇಕಿದ್ದರೂ ಸನ್ನೆನುಡಿಯಲ್ಲಿ ತಿಳಿಸಿ ಹೇಳಲು ಬರುತ್ತದೆ.
ಆದರೆ ಒಂದೇ ಸಮಾಜದಲ್ಲಿ ಬಳಕೆಯಾಗುವ ಉಲಿನುಡಿಯ ಕಟ್ಟಲೆಗಳಿಗೂ ಸನ್ನೆನುಡಿಯ ಕಟ್ಟಲೆಗಳಿಗೂ ನಡುವೆ ಯಾವ ಸಂಬಂದವೂ ಇರುವುದಿಲ್ಲ. ಅವೆರಡು ಒಂದಕ್ಕಿಂತ ಒಂದು ತೀರಾ ಬೇರಾಗಿರುತ್ತವೆ. ಎತ್ತುಗೆಗಾಗಿ, ಅಮೆರಿಕಾದ ಕಿವುಡರು ಬಳಸುವ ಸನ್ನೆನುಡಿಗಿರುವ ಸೊಲ್ಲರಿಮೆಯ ಕಟ್ಟಲೆಗಳು ಅಲ್ಲಿ ಇತರರು ಬಳಸುವ ಇಂಗ್ಲಿಶ್ ನುಡಿಯ ಕಟ್ಟಲೆಗಳಿಗಿಂತ ತೀರ ಬೇರಾಗಿವೆ. ಇಂಗ್ಲಿಶ್ ನುಡಿಯಲ್ಲಿ ಬಳಕೆಯಾಗುವ ಪದಗಳಿಗೆ ಹೆಚ್ಚು ಸಿಕ್ಕಲಾದ ರೂಪಾವಳಿಗಳಿಲ್ಲ. ಆದರೆ, ಅಮೆರಿಕಾದ ಸನ್ನೆನುಡಿಯಲ್ಲಿ ಬಳಕೆಯಾಗುವ ಪದಗಳಿಗೆ ಬಹಳ ಸಿಕ್ಕಲಾದ ರೂಪಾವಳಿಗಳಿವೆ. ಅವುಗಳಲ್ಲಿ ಬರುವ ಎಸಕ(ಕ್ರಿಯಾ)ಪದಗಳ ರೂಪಗಳಿಂದ ಒಂದು ಇಡೀ ಸೊಲ್ಲಿನಲ್ಲಿ ಬರುವ ವಿಶಯಗಳೆಲ್ಲವನ್ನೂ ಸೂಚಿಸಲು ಬರುತ್ತದೆ: ಒಂದು ಕೆಲಸವನ್ನು ಮಾಡಿದವನು, ಅದರಿಂದ ತೊಂದರೆಗೊಳಗಾದವನು, ಆ ಕೆಲಸಕ್ಕೆ ಬಳಸಿದ ವಸ್ತು, ಸಮಯ, ಜಾಗ ಮೊದಲಾದ ಹಲವು ವಿಶಯಗಳನ್ನು ಅಂತಹ ಒಂದೇ ಒಂದು ಎಸಕರೂಪದೊಳಗೆ ಹಿಡಿಸಲು ಬರುತ್ತದೆ.
ಇದಲ್ಲದೆ, ಅಮೆರಿಕಾದ ಈ ಸನ್ನೆನುಡಿಯಲ್ಲಿ ಪದಗಳನ್ನು ಜೋಡಿಸಿ ಸೊಲ್ಲುಗಳನ್ನಾಗಿ ಮಾಡುವ ಬಗೆ ಇಂಗ್ಲಿಶ್ ನುಡಿ ಬಳಸುವ ಹೊಲಬಿಗಿಂತ ತೀರ ಬೇರಾಗಿದೆ: ಅದರಲ್ಲಿ ಒಂದು ವಿಶಯವನ್ನು ಮೊದಲು ತಿಳಿಸಿ, ಅದರ ಕುರಿತಾಗಿ ಹೇಳಬೇಕಾಗಿರುವುದನ್ನು ಆಮೇಲೆ ಹೇಳಲಾಗುತ್ತದೆ; ಎತ್ತುಗೆಗಾಗಿ, ಆ ನುಡಿಯ ಒಂದು ಸೊಲ್ಲು ‘ಮನೆ, ನಾನು ಹೋಗುತ್ತೇನೆ’ ಎಂದಿರಬಲ್ಲುದು, ಮತ್ತು ಇನ್ನೊಂದು ‘ಹಣ್ಣು, ನಾನು ತಿಂದಿದ್ದೇನೆ’ ಎಂದಿರಬಲ್ಲುದು. ಇವುಗಳಲ್ಲಿ ಯಾವುದರ ಕುರಿತಾಗಿ ಮಾತನಾಡಬೇಕಾಗಿದೆ ಎಂಬುದನ್ನು (‘ಮನೆ’ ಇಲ್ಲವೇ ‘ಹಣ್ಣು’ ಎಂಬುದನ್ನು) ಮೊದಲು ತಿಳಿಸಲಾಗಿದೆ, ಮತ್ತು ಆಮೇಲೆ ಅದರ ಕುರಿತಾಗಿ ಏನು ಹೇಳಬೇಕಾಗಿದೆಯೋ ಅದನ್ನು ಹೇಳಲಾಗಿದೆ.
ಅಮೆರಿಕಾದ ಈ ಸನ್ನೆನುಡಿಯಲ್ಲಿ ಪದಗಳು ಸನ್ನೆರೂಪದಲ್ಲಿದ್ದು, ಅವುಗಳಿಗೆ ಸೇರಿಸಬೇಕಾಗಿರುವ ಒಟ್ಟು(ಪ್ರತ್ಯಯ)ಗಳು ಚಲನೆಗಳ ರೂಪದಲ್ಲಿರುತ್ತವೆ. ಅದರಲ್ಲಿ ಬಳಕೆಯಾಗುವ ಕಟ್ಟಲೆಗಳು ಆ ದೇಶದ ಬುಡಕಟ್ಟಿನ ಜನಾಂಗಗಳಲ್ಲಿ ಬಳಕೆಯಲ್ಲಿರುವ ಹೋಪಿ, ನವಹೋ ಮೊದಲಾದ ಕೆಲವು ಉಲಿನುಡಿಗಳ ಕಟ್ಟಲೆಗಳನ್ನು ಹೋಲುತ್ತವೆ. ಈ ಸನ್ನೆನುಡಿಯಲ್ಲಿ ಈಗಾಗಲೇ ಕತೆ, ಕವಿತೆ, ನಾಟಕ, ಪ್ರಬಂದ ಮೊದಲಾದುವನ್ನು ರಚಿಸಲಾಗಿದೆ. ಕಣ್ಣಿಗೆ ಕಾಣಿಸುವಂತಹ ಕಯ್ಸನ್ನೆ, ಕಯ್ಯ ಚಲನೆ, ಹುಬ್ಬಿನ ಕುಣಿತ, ಮೋರೆಯಲ್ಲಿ ಕಾಣಿಸುವ ಅನಿಸಿಕೆಗಳು ಮೊದಲಾದ ಉಲಿನುಡಿಗಳಿಗಿಂತ ತೀರ ಬೇರಾಗಿರುವ ಅಂಶಗಳನ್ನು ಈ ನುಡಿಗಳು ಬಳಸುವುವಾದ ಕಾರಣ, ಸಾಹಿತ್ಯ ರಚನೆಯಲ್ಲಿ ಅವುಗಳಿಗಿರುವ ಕಸುವು ಉಲಿನುಡಿಗಳ ಕಸುವಿಗಿಂತ ತೀರ ಬೇರಾದುದಾಗಿದೆ.
ಎಲ್ಲಾ ಸಮಾಜಗಳಲ್ಲಿರುವ ಕಿವುಡರೂ ಸನ್ನೆನುಡಿಯನ್ನು ಬಳಸಲು ಕಲಿತಿರುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಆ ರೀತಿ ಕಲಿಯಲು ಹಲವು ಮಂದಿ ಕಿವುಡು ಮಕ್ಕಳು ಚಿಕ್ಕಂದಿನಲ್ಲಿ ಒಟ್ಟಿಗೆ ವಾಸಿಸುತ್ತಿರುವುದು ಅವಶ್ಯ. ಬೇರೆ ಬೇರಾಗಿ ಉಲಿನುಡಿಯನ್ನು ಬಳಸುವ ತಾಯಿತಂದೆಯರೊಂದಿಗೆ ಮತ್ತು ಒಡಹುಟ್ಟಿದವರೊಂದಿಗೆ ಬೆಳೆಯುವ ಕಿವುಡು ಮಗುವಿಗೆ ಸನ್ನೆನುಡಿಯನ್ನು ಕಲಿಯಲು ಸಂದರ‍್ಬವೇ ಸಿಗುವುದಿಲ್ಲ. ಕಿವುಡರಿಗೇನೇ ಬೇರೆ ಶಾಲೆಗಳನ್ನು ತೆರೆದು ಕಿವುಡು ಮಕ್ಕಳು ಚಿಕ್ಕಂದಿನಲ್ಲೇನೇ ಒಟ್ಟಿಗೆ ಬೆಳೆಯುವಂತೆ ಮಾಡಿದಲ್ಲಿ ಅವರು ತಮ್ಮೊಳಗೆ ಸನ್ನೆನುಡಿಯನ್ನು ಬಳಸಲು ಕಲಿತುಕೊಳ್ಳಬಲ್ಲರು ಮತ್ತು ಅದರ ಮೂಲಕ ಅವರ ಜೀವನ ಹೆಚ್ಚು ಅರ‍್ತವತ್ತಾಗಬಲ್ಲುದು.
ಚಿಕ್ಕಂದಿನಲ್ಲೇನೇ ಈ ರೀತಿ ಕಿವುಡು ಮಕ್ಕಳು ಒಟ್ಟಿಗೆ ಬೆಳೆಯುವಂತೆ ಮಾಡಿದಲ್ಲಿ ಅವರು ತಾವಾಗಿಯೇ ತಮಗೊಂದು ಸನ್ನೆನುಡಿಯನ್ನು ಉಂಟುಮಾಡಿಕೊಳ್ಳಬಲ್ಲರು ಎಂಬುದನ್ನು ನಿಕಾರಗುವಾದ ಕಿವುಡು ಮಕ್ಕಳು ತೋರಿಸಿಕೊಟ್ಟಿದ್ದಾರೆ. ಆ ನಾಡಿನಲ್ಲಿ ಒಂದು ಕಿವುಡು ಮಕ್ಕಳ ಶಾಲೆಯನ್ನು ೧೯೮೧ರಲ್ಲಿ ಹೊಸದಾಗಿ ತೆರೆಯಲಾಗಿತ್ತು; ಅಲ್ಲಿದ್ದ ದೊಡ್ಡ ಮಕ್ಕಳು ತಮ್ಮ ನಡುವೆ ಕೆಲವು ಸನ್ನೆಗಳನ್ನು ಬಳಸುತ್ತಿದ್ದರಾದರೂ ಅವುಗಳ ಹಿಂದೆ ನಿಶ್ಚಿತವಾದ ಕಟ್ಟಲೆಗಳಿರಲಿಲ್ಲ. ಹಾಗಾಗಿ, ಅದನ್ನೊಂದು ಸನ್ನೆನುಡಿ ಎನ್ನಲು ಬರುವಂತಿರಲಿಲ್ಲ.
ಅದರೆ, ಅವರೊಂದಿಗೆ ಬೆಳೆಯುತ್ತಿದ್ದ ಚಿಕ್ಕ ಮಕ್ಕಳು ದೊಡ್ಡವರು ಬಳಸುತ್ತಿದ್ದ ಸನ್ನೆಗಳನ್ನೇ ಬಳಸಿ ಹೊಸದಾದ ಮತ್ತು ಸಂಪೂರ‍್ಣವಾದ ಒಂದು ಸನ್ನೆನುಡಿಯನ್ನೇ ಉಂಟುಮಾಡಿಕೊಂಡಿದ್ದರು. ಈ ಚಿಕ್ಕ ಮಕ್ಕಳ ಸನ್ನೆನುಡಿಯನ್ನು ಪರಿಶೀಲಿಸಿದ ಅರಿವಿಗರು ನಿಜಕ್ಕೂ ದಂಗಾಗಿದ್ದಾರೆ. ದೊಡ್ಡ ಮಕ್ಕಳು ಬಳಸುತ್ತಿದ್ದ ಸನ್ನೆಗಳಲ್ಲಿಲ್ಲದಿದ್ದ ನೂರಾರು ಸಿಕ್ಕಲು ಸಿಕ್ಕಲಾದ ಸೊಲ್ಲರಿಮೆಯ ಕಟ್ಟಲೆಗಳನ್ನು ಈ ಚಿಕ್ಕ ಮಕ್ಕಳು ಎಲ್ಲಿಂದ ಪಡೆದರು? ಹುಟ್ಟಿನಿಂದಲೇ ಮಕ್ಕಳು ಪಡೆದುಕೊಂಡು ಬರುವಂತಹ ‘ಮಾತು ಪಡೆಯುವ ಅಳವೇ’ ಅವರಿಗೆ ಈ ಸನ್ನೆನುಡಿಯನ್ನು ಹುಟ್ಟಿಸುವಲ್ಲಿ ನೆರವಾಗಿರಬೇಕು ಎಂಬ ತೀರ‍್ಮಾನಕ್ಕೆ ಅರಿವಿಗರು ಬರಬೇಕಾಗಿದೆ.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)
ನುಡಿಯರಿಮೆಯ ಇಣುಕುನೋಟ – 19
ಯಾವುದಾದರೂ ಒಂದು ವಿಶಯವನ್ನು ಕಲಿಯುವುದಕ್ಕೂ, ಅದರ ಮೇಲೆ ಅರಕೆ (ಸಂಶೋದನೆ) ನಡೆಸುವುದಕ್ಕೂ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ; ನಾವು ಎತ್ತಿಕೊಂಡ ವಿಶಯದ ಮೇಲೆ ಬೇರೆ ಬೇರೆ ಹೊತ್ತಗೆಗಳಲ್ಲಿ, ಬಿಡಿ ಬರಹಗಳಲ್ಲಿ, ಮತ್ತು ಅವನ್ನು ಓದಿ ತಿಳಿದುಕೊಂಡಿರುವ ತಿಳಿವಿಗರಲ್ಲಿ ಸಾಕಶ್ಟು ತಿಳಿವುಗಳು ಕಲೆತಿರುತ್ತವೆ. ಅಂತಹ ಹೊತ್ತಗೆ ಮತ್ತು ಬಿಡಿ ಬರಹಗಳನ್ನು ಓದಿ, ತಿಳಿವಿಗರು ಹೇಳುವುದನ್ನು ಕೇಳಿ, ಆ ವಿಶಯದ ಕುರಿತು ತಿಳಿವನ್ನು ಕಲೆಹಾಕುವುದಕ್ಕೆ ಕಲಿಕೆ ಎಂದು ಹೆಸರು.
ಅರಕೆ ಎಂಬುದು ಇದಕ್ಕಿಂತ ತೀರ ಬೇರಾದುದು; ಒಂದು ವಿಶಯದ ಕುರಿತು ತಮ್ಮ ಸಮಾಜದಲ್ಲಿ ಕಲೆತಿರುವ ತಿಳಿವಿನಲ್ಲಿ ತಪ್ಪುಗಳು ಏನಾದರೂ ಇವೆಯೇ, ಮತ್ತು ಆ ವಿಶಯದ ಕುರಿತಾಗಿ ಯಾರಿಗೂ ತಿಳಿಯದಿರುವಂತಹ ಹೊಸ ಸಂಗತಿಗಳೇನಾದರೂ ಇವೆಯೇ ಎಂಬುದನ್ನು ಕಂಡುಹಿಡಿಯುವುದೇ ಅರಕೆ.
ಈ ವ್ಯತ್ಯಾಸದಂತೆ, ಒಂದು ವಿಶಯವನ್ನು ನಮಗೆ ಕಲಿಯಬೇಕೆಂದಿದ್ದಲ್ಲಿ ಅದಕ್ಕೆ ಕಲಿಸುಗರ ನೆರವು ಬೇಕಾಗುತ್ತದೆ; ಆದರೆ, ಒಂದು ವಿಶಯದ ಕುರಿತು ಅರಕೆಯನ್ನು ನಡೆಸಬೇಕೆಂದಿದ್ದಲ್ಲಿ, ಅದಕ್ಕೆ ನಮಗೆ ‘ದಾರಿತೋರುಗರ’ ನೆರವು ಬೇಕಾಗುತ್ತಲ್ಲದೆ ಕಲಿಸುಗರ ನೆರವು ಬೇಕಾಗುವುದಿಲ್ಲ.
ಕಲಿಯುವವರ ಮಟ್ಟಿಗೆ ಕಲಿಸುಗರೆಂದರೆ ಎಲ್ಲವನ್ನೂ ತಿಳಿದವರು; ಕಲಿಯುವವರಲ್ಲಿ ಏಳುವ ಸಂಶಯಗಳನ್ನೆಲ್ಲ ಇಲ್ಲವಾಗಿಸುವ ಅಳವು ಅವರಿಗಿದೆ; ಹಾಗಾಗಿ, ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕಿವಿಗೊಟ್ಟು ಕೇಳಿ, ಅದನ್ನು ಸರಿಯಾಗಿ ತಿಳಿದುಕೊಳ್ಳುವುದೇ ಕಲಿಗರು ಮಾಡಬೇಕಾಗಿರುವ ಮುಕ್ಯ ಕೆಲಸ.
ಆದರೆ, ಅರಕೆಯನ್ನು ನಡೆಸುವವರ ಮಟ್ಟಿಗೆ ಎಲ್ಲವನ್ನೂ ತಿಳಿದವರು ಯಾರೂ ಇಲ್ಲ; ದಾರಿತೋರುಗರು ಅವರಿಗೆ ಯಾವ ರೀತಿಯಲ್ಲಿ ಅರಕೆಯನ್ನು ನಡೆಸಬಹುದು ಎಂಬುದನ್ನು ತಿಳಿಸಬಲ್ಲರಲ್ಲದೆ, ಅರಕೆಯ ಕೊನೆಯ ತೀರ‍್ಮಾನ ಹೇಗಿರಬಹುದು, ಇಲ್ಲವೇ ಹೇಗಿರಬೇಕು ಎಂಬುದನ್ನು ತಿಳಿಸಲಾರರು. ಅದನ್ನು ತಮ್ಮ ಅರಕೆಗಳ ಮೂಲಕ ಹೊಸದಾಗಿ ಕಂಡುಹಿಡಿಯುವುದೇ ಅರಕೆಯನ್ನು ನಡೆಸುವವರ ಮುಕ್ಯ ಕೆಲಸ. ಈ ರೀತಿ, ಯಾರಿಗೂ ಗೊತ್ತಿಲ್ಲದಿರುವ ಸಂಗತಿಗಳನ್ನು ಕಂಡುಹಿಡಿಯುವ ಮೂಲಕ, ಮತ್ತು ತಪ್ಪು ತಪ್ಪಾಗಿ ತಿಳಿದುಕೊಂಡಿರುವ ಸಂಗತಿಗಳನ್ನು ಸರಿಪಡಿಸುವ ಮೂಲಕ ಸಮಾಜದಲ್ಲಿರುವ ತಿಳಿವಿನ ಬೊಕ್ಕಸವನ್ನು ಹಿರಿದಾಗಿಸುವುದೇ ಅರಕೆ ನಡೆಸುವವರ ಕೆಲಸವಾಗಿದೆ.
ಕಲಿಕೆಗೂ ಅರಕೆಗೂ ನಡುವೆ ವ್ಯತ್ಯಾಸವಿರುವ ಹಾಗೆ, ಕಲಿಕೆಯನ್ನು ಕೊಡಿಸುವ ಕಲಿಸುಗರಿಗೂ ಅರಕೆಯನ್ನು ನಡೆಸಲು ದಾರಿತೋರುಗರಿಗೂ ನಡುವೆ ವ್ಯತ್ಯಾಸವಿರುವುದು ಅವಶ್ಯ. ಕಲಿಸುಗನೊಬ್ಬ ತಾನು ಕಲಿಸುವ ವಿಶಯವನ್ನು ಸರಿಯಾಗಿ ತಿಳಿದಿರಬೇಕು ಮಾತ್ರವಲ್ಲ, ತಾನು ತಿಳಿದಿರುವುದೆಲ್ಲವೂ ಸರಿ ಎಂಬ ಆತ್ಮವಿಶ್ವಾಸವೂ ಆತನಲ್ಲಿರಬೇಕು. ಈ ವಿಶಯದಲ್ಲಿ ಸ್ವಲ್ಪವಾದರೂ ಸಂಶಯವಿದೆಯಾದರೆ, ಆತ ಎದೆಗಾರಿಕೆಯಿಂದ ಕಲಿಗರಿಗೆ ಕಲಿಸಿಕೊಡಲಾರ.
ಆದರೆ, ಅರಕೆಯನ್ನು ನಡೆಸುವವರು, ಮತ್ತು ಅರಕೆಗೆ ದಾರಿ ತೋರಿಸುವವರು ಯಾವ ಹೇಳಿಕೆಯನ್ನೂ ಪೂರ‍್ತಿಯಾಗಿ ಸರಿಯೆಂದು ತಿಳಿದುಕೊಳ್ಳಬಾರದು. ಎಲ್ಲವನ್ನೂ ಸಂಶಯದಿಂದ ನೋಡಿದಾಗ ಮಾತ್ರ ಅವರ ಅರಕೆ ಮುಂದೆ ಹೋಗಬಲ್ಲುದು. ಎಂತಹ ದೊಡ್ಡ ತಿಳಿವಿಗರು ಹೇಳಿದ್ದನ್ನೂ ಹಾಗೆಯೇ ಒಪ್ಪಿಕೊಳ್ಳದೆ ವಿಚಾರಣೆಗೆ ಒಳಪಡಿಸಲು ಅವರು ಅಣಿಯಾಗಿರಬೇಕು.
ಈ ಕಾರಣಕ್ಕಾಗಿ, ಪರೀಕ್ಶೆಗಳಲ್ಲಿ ರ‍್ಯಾಂಕ್ ಗಳಿಸುವ ಕಲಿಗ ಉತ್ತಮ ಅರಕೆಗಾರನಾಗಬೇಕೆಂದೇನಿಲ್ಲ. ಇದೇ ರೀತಿಯಲ್ಲಿ, ಕಲಿಗರ ಅಚ್ಚುಮೆಚ್ಚಿನ ಕಲಿಸುಗ ಅರಕೆಗಳಿಗೆ ಒಳ್ಳೆಯ ದಾರಿತೋರುಗನಾಗಬೇಕೆಂದೂ ಇಲ್ಲ. ಕಲಿಯುವುದಕ್ಕೆ ಮತ್ತು ಕಲಿಸುವುದಕ್ಕೆ ಬೇಕಾಗುವ ಮನೋಬಾವ ಅರಕೆಗೆ ಮತ್ತು ಅದರ ದಾರಿತೋರಿಕೆಗೆ ಬೇಕಾಗುವ ಮನೋಬಾವಕ್ಕಿಂತ ತೀರ ಬೇರಾಗಿರುವುದೇ ಇದಕ್ಕೆ ಕಾರಣ.
ನಮ್ಮ ವಿಶ್ವವಿದ್ಯಾಲಯಗಳಲ್ಲಿ ಈ ಎರಡು ಕೆಲಸಗಳನ್ನೂ ಒಬ್ಬರೇ ಮಾಡಬೇಕಾಗುವುದರಿಂದ, ಹೆಚ್ಚಿನೆಡೆಗಳಲ್ಲೂ ಅರಕೆಯ ಹೆಸರಿನಲ್ಲಿ ಕಲಿಕೆ ಮಾತ್ರ ನಡೆಯುವುದು ಕಾಣಿಸುತ್ತದೆ. ಈ ಎರಡು ಬಗೆಯ ಕೆಲಸಗಳನ್ನು ಒಬ್ಬರಿಗೇನೇ ನಡೆಸಿಕೊಂಡು ಹೋಗಲು ಹೆಚ್ಚಿನವರಿಗೂ ಸಾದ್ಯವಾಗದಿರುವುದೇ ಇದಕ್ಕೆ ಕಾರಣ.
ಒಮ್ಮೆ ನನ್ನ ಮಿತ್ರರೊಬ್ಬರು ಡಾಕ್ಟರೇಟ್ ಪದವಿಗಾಗಿ ತಾವು ಬರೆದ ಪೆರ‍್ಬರಹವನ್ನು ನನಗೆ ತೋರಿಸಿದರು. ಅದನ್ನು ಓದಿದಾಗ ನನಗೆ ತುಂಬಾ ಆಶ್ಚರ‍್ಯವಾಯಿತು: ಮೂವತ್ತು ವರ‍್ಶಗಳಶ್ಟು ಹಳೆಯ ಸಿದ್ದಾಂತಗಳನ್ನು ಬಳಸಿ ಅವರು ಅದನ್ನು ಬರೆದಿದ್ದರು. ಆ ಸಿದ್ದಾಂತಗಳಲ್ಲಿ ಹೆಚ್ಚಿನವೂ ಸರಿಯಲ್ಲ ಎಂದು ಅವರಿಗೆ ಸ್ಪಶ್ಟವಾಗಿ ತಿಳಿದಿದ್ದರೂ ಅವರು ಹೀಗೆ ಮಾಡಿದ್ದರು. “ಇದು ಯಾಕೆ ಹೀಗೆ?” ಎಂದು ನಾನು ಕೇಳಿದಾಗ ಅವರು ಹೇಳಿದರು, “ನನ್ನ ದಾರಿತೋರುಗರು ತಮ್ಮ ಡಾಕ್ಟರೇಟ್ ಪೆರ‍್ಬರಹದಲ್ಲಿ ಈ ಸಿದ್ದಾಂತಗಳನ್ನು ಬಳಸಿದ್ದಾರೆ; ಈಗ ನಾನು ಹೊಸ ಸಿದ್ದಾಂತಗಳನ್ನು ಬಳಸಿದಲ್ಲಿ, ಅವರು ಹಿಂದೆ ಬರೆದಿದ್ದ ಪೆರ‍್ಬರಹ ಸರಿಯಲ್ಲ ಎಂಬುದಾಗಿ ನಾನು ಹೇಳಿದ ಹಾಗಾದೀತು. ಹಾಗೆ ಮಾಡಿದಲ್ಲಿ, ನನ್ನ ಪೆರ‍್ಬರಹಕ್ಕೆ ಅವರ ಒಪ್ಪಿಗೆ ಸಿಗಲಾರದು.”
ನಮ್ಮ ವಿಶ್ವವಿದ್ಯಾಲಯಗಳಲ್ಲಿ ಜಾಗತಿಕ ಮಟ್ಟದ ಅರಕೆಗಳು ನಡೆಯದಿರುವುದಕ್ಕೆ ಒಂದು ಮುಕ್ಯವಾದ ಕಾರಣವನ್ನು ಇದು ಬಹಳ ಸ್ಪಶ್ಟವಾಗಿ ತಿಳಿಸುತ್ತದೆ. ತಮ್ಮ ದಾರಿತೋರಿಕೆಯಲ್ಲಿ ಪೆರ‍್ಬರಹಗಳನ್ನು ಬರೆಯುತ್ತಿರುವ ಅರಕೆಗಾರರು ತಾವು ಬರೆದಿರುವ ಪೆರ‍್ಬರಹಕ್ಕಿಂತ ಒಂದು ಹೆಜ್ಜೆ ಮುಂದೆ ಹೋದರೂ ಬೇಸರಪಟ್ಟುಕೊಳ್ಳುವ ತಿಳಿವಿಗರಿರುವಶ್ಟು ದಿವಸ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅರಕೆಗಳನ್ನು ನಡೆಸುವುದು ಅಸಾದ್ಯವೆಂದೇ ಹೇಳಬಹುದು. ತನ್ನ ಕಲಿಗನಿಂದ ಸೋಲನ್ನು ಬಯಸುವ ತಿಳಿವಿಗರು ಮಾತ್ರ ನಿಜಕ್ಕೂ ಅರಕೆಗೆ ದಾರಿತೋರಿಸಬಲ್ಲರು. ಅಂತಹ ತಿಳಿವಿಗರು ನಮ್ಮಲ್ಲಿ ಬೆರಳೆಣಿಕೆಯಶ್ಟೂ ಇಲ್ಲ ಎಂಬುದು ಬೇಸರದ ಸಂಗತಿ.
ಈ ಮಾತು ಎಶ್ಟು ಸರಿ ಎಂಬುದನ್ನು ಕನ್ನಡದ ಸೊಲ್ಲರಿಮೆಯ (ವ್ಯಾಕರಣದ) ಕುರಿತಾಗಿ ನಡೆದಿರುವ ಅರಕೆಗಳನ್ನು ಪರಿಶೀಲಿಸಿದಲ್ಲಿ ಗೊತ್ತಾಗಬಹುದು. ಕೇಶಿರಾಜನೇ ಮೊದಲಾದ ಕನ್ನಡದ ಸೊಲ್ಲರಿಗರು ಏನು ಹೇಳಿದ್ದಾರೆ ಎಂಬುದನ್ನು ಚರ‍್ಚಿಸುವುದು ಸೊಲ್ಲರಿಮೆಯ ಕಲಿಕೆಯಲ್ಲದೆ ಅರಕೆಯಲ್ಲ. ಅವರು ಬರೆದಿರುವ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ತಪ್ಪುಗಳೇನಾದರೂ ಇವೆಯೇ? ಇದ್ದರೆ ಅವನ್ನು ಇಲ್ಲವಾಗಿಸುವುದು ಹೇಗೆ? ಅವರು ಹೇಳದೇ ಇರುವಂತಹ ಸೊಲ್ಲರಿಮೆಯ ಕಟ್ಟಲೆಗಳು ಯಾವುವಾದರೂ ಇವೆಯೇ? ಇದ್ದರೆ ಅವು ಎಂತಹವು? ಎಂಬಂತಹ ವಿಶಯಗಳ ಕುರಿತು ಚರ‍್ಚೆ ನಡೆದಲ್ಲಿ ಮಾತ್ರ ಈ ಸೊಲ್ಲರಿಮೆಗಳ ಮೇಲೆ ಅರಕೆ ನಡೆದಿದೆಯೆಂದು ಹೇಳಬಹುದು.
ಹಳೆಗನ್ನಡದಲ್ಲಿ ದ, ದಪ, ಮತ್ತು ವ ಎಂಬ ಮೂರು ಹೊತ್ತಿನ ಒಟ್ಟುಗಳು (ಕಾಲಪ್ರತ್ಯಯಗಳು) ಬಳಕೆಯಾಗುತ್ತವೆ, ಮತ್ತು ಇವು ಹಿಂಬೊತ್ತು (ಬೂತ), ಈಪೊತ್ತು (ವರ‍್ತಮಾನ), ಮತ್ತು ಮುಂಬೊತ್ತು (ಬವಿಶ್ಯತ್) ಎಂಬ ಮೂರು ಹೊತ್ತುಗಳನ್ನು ತಿಳಿಸುತ್ತವೆ ಎಂಬುದಾಗಿ ಕೇಶಿರಾಜನೇ ಮೊದಲಾದ ಎಲ್ಲಾ ಕನ್ನಡದ ಸೊಲ್ಲರಿಗರೂ ಹೇಳುತ್ತಾರೆ. ಆದರೆ, ನಿಜಕ್ಕೂ ಈ ಹೇಳಿಕೆ ಸರಿಯಲ್ಲ; ಎತ್ತುಗೆಗಾಗಿ, ಪಂಪಬಾರತದ “ಸೆರಗಂ ಬಗೆದೊಡೆ ಸಾವಾದಪುದು” ಎಂಬ ಸೊಲ್ಲಿಗೆ ‘ಸಹಾಯವನ್ನು ಬಯಸಿದರೆ ಸಾವಾಗುತ್ತದೆ’ ಎಂಬ ಹುರುಳಿದ್ದು, ಅದರಲ್ಲಿ ಬಂದಿರುವ ದಪ ಒಟ್ಟಿಗೆ ಮುಂದೆ ಏನಾಗಬಲ್ಲುದು ಎಂಬುದನ್ನು ತಿಳಿಸುವ ಮುಂಬೊತ್ತಿನ ಹುರುಳಿದೆಯಲ್ಲದೆ ಈಗ ಏನಾಗುತ್ತಿದೆ ಎಂಬುದನ್ನು ತಿಳಿಸುವ ಈಪೊತ್ತಿನ ಹುರುಳಿಲ್ಲ.
ಆದರೆ, ಹಳೆಗನ್ನಡದ ಸೊಲ್ಲರಿಮೆಯ ಕುರಿತಾಗಿ ಅರಕೆ ನಡೆಸಿದವರು ಯಾರೂ ಇದನ್ನು ಗಮನಿಸಿದ ಹಾಗೆ ಕಾಣಿಸುವುದಿಲ್ಲ. ಇಂತಹ ಇನ್ನೂ ಹಲವಾರು ತಪ್ಪುಗಳು ಕೇಶಿರಾಜನೇ ಮೊದಲಾದ ಕನ್ನಡದ ಸೊಲ್ಲರಿಗರು ತಿಳಿಸುವ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಕಾಣಿಸುತ್ತವೆ; ಇದಲ್ಲದೆ, ಅವರು ಹೇಳದಿರುವಂತಹ ಬೇರೆ ಹಲವು ಕಟ್ಟಲೆಗಳೂ ಹಳೆಗನ್ನಡದ ಸೊಲ್ಲರಿಮೆಯನ್ನು ವಿವರಿಸಲು ಬೇಕಾಗುತ್ತವೆ. ಇವುಗಳಲ್ಲಿ ಕೆಲವನ್ನಾದರೂ ಪಟ್ಟಿಮಾಡಬಲ್ಲವರು ಮಾತ್ರ ನಿಜಕ್ಕೂ ಹಳೆಗನ್ನಡದ ಮೇಲೆ ಅರಕೆ ನಡೆಸಿದ್ದಾರೆಂದು ಹೇಳಲು ಬರುತ್ತದೆ.
ಬೇರೆ ಬಗೆಯ ತಿಳಿವುಗಳ ಕುರಿತಾಗಿಯೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಮತ್ತು ಬೇರೆ ಬಗೆಯ ಅರಕೆಮನೆಗಳಲ್ಲಿ ಇವತ್ತು “ಅರಕೆ”ಗಳು ನಡೆಯುತ್ತಿವೆ; ಆದರೆ, ಇವುಗಳಲ್ಲಿ ಹೆಚ್ಚಿನವೂ ಮೇಲೆ ವಿವರಿಸಿದ ಹಾಗೆ ದಾರಿತಪ್ಪಿರುವ ಅರಕೆಗಳು; ಹೊಸ ತಿಳಿವನ್ನು ಕಂಡುಹಿಡಿಯುವ ಇಲ್ಲವೇ ಹಳೇ ತಿಳಿವನ್ನು ಸಾಣೆಗೆ ಹಿಡಿಯುವ ಉದ್ದೇಶ ಅವಕ್ಕಿಲ್ಲ. ಹಾಗಾಗಿ, ಅರಕೆಗಾರರಿಗೆ ಒಂದು ಡಿಗ್ರಿಯನ್ನು ಕೊಡಿಸುವ ಕೆಲಸವನ್ನಶ್ಟೇ ಅವು ನಡೆಸಬಲ್ಲುವು.
(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)