Posts Tagged ‘verbs’

ಇಂಗ್ಲಿಶ್ ನುಡಿಯ ಎಸಕಪದಗಳು


ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-17

pada_kattane_sarani_dnsಇಂಗ್ಲಿಶ್ ನುಡಿಯ ಎಸಕಪದಗಳು

ಮುನ್ನೋಟ
ಹಲವು ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳನ್ನೇ ಬಳಸಲು ಬರುತ್ತದೆ; come ಬರು, go ಹೋಗು, eat ತಿನ್ನು, look ನೋಡು, push ದೂಡು, flow ಹರಿ ಮೊದಲಾದ ಪದಗಳನ್ನು ಇದಕ್ಕೆ ಎತ್ತುಗೆಯಾಗಿ ಕೊಡಬಹುದು. ಆದರೆ, ಬೇರೆ ಹಲವು ಕಡೆಗಳಲ್ಲಿ ಇದಕ್ಕಾಗಿ ಒಟ್ಟನ್ನು ಸೇರಿಸಿರುವ ಕಟ್ಟುಪದಗಳನ್ನು ಇಲ್ಲವೇ ಎಸಕಪದಗಳೊಂದಿಗೆ ಹೆಸರುಪದ, ಪರಿಚೆಪದ ಇಲ್ಲವೇ ಬೇರೆ ಎಸಕಪದದ ಜೋಡಿಸುವ ರೂಪವನ್ನು ಬಳಸಿರುವ ಕೂಡುಪದಗಳನ್ನು ಬಳಸಬೇಕಾಗುತ್ತದೆ.
ಈ ಎರಡು ಬಗೆಯ ಹಮ್ಮುಗೆಗಳನ್ನು ಬಳಸಿ ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:

ಒಟ್ಟುಗಳ ಬಳಕೆ:
ಕನ್ನಡದಲ್ಲಿ ಹೊಸ ಎಸಕಪದಗಳನ್ನು ಕಟ್ಟಲು ಇಸು ಎಂಬ ಒಂದು ಒಟ್ಟನ್ನು ಮಾತ್ರ ಬಳಸಲು ಬರುತ್ತದೆ. ಇದನ್ನು ಪರಿಚೆಪದಗಳಿಗೆ, ಹೆಸರುಪದಗಳಿಗೆ, ಇಲ್ಲವೇ ನೆನಸಿನ (abstract) ಹೆಸರುಪದಗಳಿಗೆ ಸೇರಿಸಿ ಎಸಕಪದಗಳನ್ನು ಪಡೆಯಲು ಬರುತ್ತದೆ. ಕೆಲವೆಡೆಗಳಲ್ಲಿ ಇದನ್ನು ನನಸಿನ (concrete) ಹೆಸರುಪದಗಳಿಗೆ ಸೇರಿಸಿಯೂ ಎಸಕಪದಗಳನ್ನು ಪಡೆಯಲಾಗಿದೆ (ಉಗ್ರಾಣ store : ಉಗ್ರಾಣಿಸು amass). ಅರಿಮೆಯ ಬರಹಗಳಲ್ಲಿ ಇಂತಹ ನನಸಿನ ಹೆಸರುಪದಗಳಿಗೆ ಇಸು ಒಟ್ಟನ್ನು ಸೇರಿಸಿರುವ ಎಸಕಪದಗಳ ಬೇಡಿಕೆ ಹೆಚ್ಚಿದೆ.

ಕನ್ನಡದಲ್ಲಿ ಈ ಒಟ್ಟನ್ನು ಬಳಸಿ ಆಗುವಿಕೆಯನ್ನು ತಿಳಿಸುವ ಎಸಕಪದಗಳನ್ನು ಮಾಡುವಿಕೆಯನ್ನು ತಿಳಿಸುವ ಎಸಕಪದಗಳನ್ನಾಗಿ ಮಾರ‍್ಪಡಿಸಲೂ ಬರುತ್ತದೆ (ಬೀಳು : ಬೀಳಿಸು, ಅರಳು : ಅರಳಿಸು). ಇಂತಹ ಎರಡು ಎಸಕಗಳನ್ನು ತಿಳಿಸಲು ಇಂಗ್ಲಿಶ್‌ನಲ್ಲಿ ಬೇರೆ ಬೇರೆ ಎಸಕಪದಗಳಿವೆಯಾದರೆ (agree : persuade, miss : avert), ಅವುಗಳಲ್ಲಿ ಒಂದಕ್ಕೆ ಸಾಟಿಯಾಗುವಂತೆ ಕನ್ನಡದ ಒಟ್ಟಿಲ್ಲದ ಎಸಕಪದವನ್ನು, ಮತ್ತು ಇನ್ನೊಂದಕ್ಕೆ ಸಾಟಿಯಾಗುವಂತೆ ಇಸು ಒಟ್ಟನ್ನು ಸೇರಿಸಿದ ರೂಪವನ್ನು ಬಳಸಲು ಬರುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:

agree ಒಪ್ಪು persuade ಒಪ್ಪಿಸು
burn ಕತ್ತು kindle ಕತ್ತಿಸು
learn ಕಲಿ teach ಕಲಿಸು
ascend ಏರು boost ಏರಿಸು
miss ತಪ್ಪು avert ತಪ್ಪಿಸು
obtain ಗಿಟ್ಟು earn ಗಿಟ್ಟಿಸು
know ತಿಳಿ inform ತಿಳಿಸು
depart ತೊಲಗು rid ತೊಲಗಿಸು
heal ಮಾಂಜು cure ಮಾಂಜಿಸು
reach ಮುಟ್ಟು deliver ಮುಟ್ಟಿಸು
laugh ನಗು regale ನಗಿಸು
appear ತೋರು show ತೋರಿಸು

 

ಇದಲ್ಲದೆ, ಇಂಗ್ಲಿಶ್‌ನ ಬೇರೆ ಕೆಲವು ಎಸಕಪದಗಳಿಗೆ ಸಾಟಿಯಾಗುವಂತೆ ಕನ್ನಡದ ಹೆಸರುಪದಗಳಿಗೆ ಇಲ್ಲವೇ ಪರಿಚೆಪದಗಳಿಗೆ ಇಸು ಒಟ್ಟನ್ನು ಸೇರಿಸಿಯೂ ಎಸಕಪದಗಳನ್ನು ಕಟ್ಟಲು ಬರುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು:

(1) ಹೆಸರುಪದಗಳಿಗೆ ಇಸು ಒಟ್ಟನ್ನು ಸೇರಿಸಿ ಪಡೆದ ಎಸಕಪದಗಳು:

mimicry ಅಣಕ deride ಅಣಕಿಸು
deceit ಉಕ್ಕೆವ cheat ಉಕ್ಕೆವಿಸು
contempt ಕುಚ್ಚಣೆ blame ಕುಚ್ಚಣಿಸು
lesson ಕಲ್ಪಿ instruct ಕಲ್ಪಿಸು
memory ನೆನಪು remind ನೆನಪಿಸು
abode ನೆಲೆ settle ನೆಲಸು
envy ಪುರುಡು envy ಪುರುಡಿಸು
regret ಬೇಸರ regret ಬೇಸರಿಸು
fold ಮಡಿ fold ಮಡಿಸು
name ಹೆಸರು name ಹೆಸರಿಸು

 

ಕೊನೆಯ ನಾಲ್ಕು ಎತ್ತುಗೆಗಳಲ್ಲಿ ಹೆಸರುಪದ ಮತ್ತು ಎಸಕಪದಗಳೆರಡೂ ಇಂಗ್ಲಿಶ್‌ನಲ್ಲಿ ಒಂದೇ ರೂಪದಲ್ಲಿವೆ, ಮತ್ತು ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹೆಸರುಪದಗಳನ್ನು ಮತ್ತು ಅವಕ್ಕೆ ಇಸು ಒಟ್ಟನ್ನು ಸೇರಿಸಿರುವ ಎಸಕಪದಗಳನ್ನು ಬಳಸಲಾಗಿದೆ ಎಂಬುದನ್ನು ಗಮನಿಸಬಹುದು.

(2) ಪರಿಚೆಪದಗಳಿಗೆ ಇಸು ಒಟ್ಟನ್ನು ಸೇರಿಸಿ ಪಡೆದ ಎಸಕಪದಗಳು:

dry ಗಾರು fry ಗಾರಿಸು
joint ಜಂಟಿ join ಜಂಟಿಸು
itch ತುರಿ itch ತುರಿಸು
bent ಕುಡು bend ಕುಡಿಸು
front ಇದಿರು dare ಇದಿರಿಸು
piece ತುಂಡು divide ತುಂಡಿಸು

 

ಕೆಲವು ಬಗೆಯ ಅಣಕಪರಿಚೆಗಳಿಗೂ ಇಸು ಒಟ್ಟನ್ನು ಸೇರಿಸಿ ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಬಲ್ಲ ಎಸಕಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಬರುತ್ತದೆ:

hawk ಕೇಕರಿಸು doze ಜೂಗರಿಸು
lurch ತತ್ತರಿಸು alarm ತಳಮಳಿಸು
jam ತಿಂತಿಣಿಸು tinkle ಕಿಣಿಕಿಣಿಸು
rattle ದಡಬಡಿಸು smack ಚಪ್ಪರಿಸು
glisten ಮಳಮಳಿಸು blink ಮಿಟಕಿಸು

 

ಕೂಡುಪದಗಳ ಬಳಕೆ:
ಎಸಕಪದಗಳ ಮೊದಲು ಹೆಸರುಪದಗಳನ್ನು, ಪರಿಚೆಪದಗಳನ್ನು, ಇಲ್ಲವೇ ಎಸಕಪದಗಳ ಜೋಡಿಸುವ ರೂಪವನ್ನು ಬಳಸಿ ಕನ್ನಡದಲ್ಲಿ ಕೂಡುಪದಗಳನ್ನು ಉಂಟುಮಾಡಲಾಗುತ್ತದೆ (3.3 ನೋಡಿ). ಇಂಗ್ಲಿಶ್‌ನ ಹಲವು ಎಸಕಪದಗಳಿಗೆ ಸಾಟಿಯಾಗುವಂತೆ ಇಂತಹ ಕೂಡುಪದಗಳನ್ನು ಬಳಸಲು ಬರುತ್ತದೆ.

(1) ಹೆಸರುಪದಗಳನ್ನು ಬಳಸಿರುವ ಕೂಡುಪದಗಳು:

rate ಬೆಲೆಕಟ್ಟು vote ಒಪ್ಪಿತಕೊಡು
rescue ಪಾರುಮಾಡು sue ಮೊರೆಯಿಡು
rave ಹುಚ್ಚಾಡು prove ನನ್ನಿಗೆಯ್ಯು
stave ತೂತುಮಾಡು owe ಸಾಲಬೀಳು
glaze ಹೊಳಪುಕೊಡು freeze ಹೆಪ್ಪುಗಟ್ಟು
gag ಬಾಯಿಗಿಡಿ rig ಅಣಿಮಾಡು
smirch ಕೊಳೆಹಚ್ಚು shrug ಹೆಗಲುಹಾರಿಸು
fetch ಬೆಲೆಸಿಗು gnash ಹಲ್ಲುಕಡಿ
hock ಒತ್ತೆಯಿಡು strangle ಕತ್ತುಹಿಚುಕು
opine ಬಗೆಯರಿಸು gore ಕೋಡಿಡು

 

(2) ಪರಿಚೆಪದಗಳನ್ನು ಬಳಸಿರುವ ಕೂಡುಪದಗಳು:

exile ಹೊರಹಾಕು grapple ಗಟ್ಟಿಹಿಡಿ
exhume ಹೊರತೆಗೆ profane ಕೀಳುಗಳೆ
ignore ಕಡೆಗಣಿಸು zoom ಮೇಲೇರು
insure ಕಂಡಿತಪಡಿಸು heave ಮೇಲೆತ್ತು
lag ಹಿಂದೆಬೀಳು flinch ಹಿಂದೆಗೆ
flush ಕೆಂಪೇರು stroll ಅಡ್ಡಾಡು
tan ಹದಮಾಡು preen ಅಂದಗೊಳಿಸು

 

ಕನ್ನಡದಲ್ಲಿ ಅಣಕಪದಗಳೂ ಪರಿಚೆಪದಗಳಾಗಿ ಬಳಕೆಯಾಗುತ್ತಿದ್ದು, ಹಲವೆಡೆಗಳಲ್ಲಿ ಇಂತಹ ಪದಗಳನ್ನು ಬಳಸಿರುವ ಕೂಡುಪದಗಳನ್ನು ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಿ ಬಳಸಲು ಬರುತ್ತದೆ:

tingle ಜುಮ್ಮೆನ್ನು growl ಗುರುಗುಟ್ಟು
roar ಬೋರ‍್ಗರೆ twirl ಗರಗರ ತಿರುಚು
snarl ಗುರ‍್ರೆನ್ನು quaff ಗಟಗಟ ಕುಡಿ
pulsate ಗುಕ್ಕೆನ್ನು glare ದುರುಗುಟ್ಟು
guzzle ಗಟಗಟ ಕುಡಿ sizzle ಚರಚರ ಕಾಯು
hurtle ದಡದಡ ಬೀಳು gurgle ಜುಳುಜುಳು ಹರಿ

 

ಇಂತಹ ಅಣಕಪರಿಚೆಗಳನ್ನು ಬಳಸಿ ಹೊಸ ಎಸಕಪದಗಳನ್ನು ಕಟ್ಟುವವರು ಒಂದು ಮುಕ್ಯವಾದ ವಿಶಯವನ್ನು ಮರೆಯಬಾರದು: ಕನ್ನಡದಲ್ಲಿ ಎರಡು ಬಗೆಯ ಅಣಕಪದಗಳು ಬಳಕೆಯಲ್ಲಿದ್ದು, ಅವುಗಳಲ್ಲಿ ಒಂದು ಬಗೆಯವು ತುಸುಹೊತ್ತು ನಡೆಯುವ ಎಸಕದ ಪರಿಚೆಯನ್ನು ತಿಳಿಸುತ್ತವೆ, ಮತ್ತು ಇನ್ನೊಂದು ಬಗೆಯವು ಒಮ್ಮೆಗೇನೇ ನಡೆದುಹೋಗುವಂತಹ ಎಸಕದ ಪರಿಚೆಯನ್ನು ತಿಳಿಸುತ್ತವೆ.
ಇವುಗಳ ನಡುವಿನ ವ್ಯತ್ಯಾಸವೇನೆಂಬುದನ್ನು (4.3)ರಲ್ಲಿ ವಿವರಿಸಲಾಗಿದೆ.

(3) ಎಸಕಪದಗಳ ಜೋಡಿಸುವ ರೂಪವನ್ನು ಬಳಸಿರುವ ಕೂಡುಪದಗಳು:

mangle ಕೊಚ್ಚಿಹಾಕು snuggle ಅಪ್ಪಿಕೊಳ್ಳು
swipe ಬೀಸಿಹೊಡೆ wriggle ನುಣುಚಿಕೊಳ್ಳು
inquire ಕೇಳಿತಿಳಿ quote ಎತ್ತಿಹೇಳು
rove ಅಲೆದಾಡು romp ಕುಣಿದಾಡು
gallop ನೆಗೆದೋಡು plan ಹಮ್ಮಿಕೊಳ್ಳು

 

ಕೆಳಗೆ ಕೊಟ್ಟಿರುವ ಕೂಡುಪದಗಳಲ್ಲಿ ಒಂದು ಎಸಕಪದವನ್ನು ನೇರವಾಗಿ ಇನ್ನೊಂದು ಎಸಕಪದದೊಂದಿಗೆ ಸೇರಿಸಿರುವ ಹಾಗೆ ಕಾಣಿಸುತ್ತದೆ; ಆದರೆ, ನಿಜಕ್ಕೂ ಇವುಗಳಲ್ಲಿ ಮೊದಲನೆಯದು ಎಸಕಪದದ ಜೋಡಿಸುವ ರೂಪವಾಗಿದ್ದು, ಅದರ ಕೊನೆಯ ಇಕಾರ ಸೇರಿಕೆಯಲ್ಲಿ ಬಿದ್ದುಹೋಗಿದೆ (ಎತ್ತುಗೆಗಾಗಿ, ಹಾರಿ+ಆಡು ಎಂಬುದು ಹಾರಾಡು ಎಂದಾಗಿದೆ):

haggle ಕೊಸರಾಡು straggle ಹಾರಾಡು
struggle ಒದ್ದಾಡು rave ಕೂಗಾಡು
wrangle ಕಚ್ಚಾಡು revere ಕೊಂಡಾಡು
store ಕೂಡಿಡು secrete ಬಚ್ಚಿಡು

 

ತಿರುಳು
ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಬಲ್ಲ ಎಸಕಪದಗಳನ್ನು ಕನ್ನಡದಲ್ಲಿ ಹೊಸದಾಗಿ ಉಂಟುಮಾಡಲು ಎರಡು ಬಗೆಯ ಹಮ್ಮುಗೆಗಳನ್ನು ಬಳಸಲು ಬರುತ್ತದೆ; (ಕ) ಹೆಸರುಪದ, ಎಸಕಪದ ಇಲ್ಲವೇ ಪರಿಚೆಪದಗಳಿಗೆ ಇಸು ಒಟ್ಟನ್ನು ಸೇರಿಸುವುದು ಒಂದು ಹಮ್ಮುಗೆ, ಮತ್ತು (ಚ) ಹೆಸರುಪದಗಳಿಗೆ, ಪರಿಚೆಪದಗಳಿಗೆ, ಇಲ್ಲವೇ ಎಸಕಪದಗಳ ಜೋಡಿಸುವ ರೂಪಕ್ಕೆ ಇನ್ನೊಂದು ಎಸಕಪದವನ್ನು ಸೇರಿಸುವುದು ಇನ್ನೊಂದು ಹಮ್ಮುಗೆ.

<< ಬಾಗ-16

facebooktwitter