ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 7

shabdamanidarpana

(8) ಸೊಲ್ಲುಗಳನ್ನು ಜೋಡಿಸುವುದು:

ಎರಡು ಸೊಲ್ಲು(ವಾಕ್ಯ)ಗಳನ್ನು ಜೋಡಿಸುವುದಕ್ಕಾಗಿ ಹಳೆಗನ್ನಡದಲ್ಲಿ ಜೋಡಿಸುವ ಎಸಕರೂಪಗಳನ್ನು ಬಳಸಲಾಗುತ್ತದೆ; ಒಂದು ಎಸಕ ಇನ್ನೊಂದು ಎಸಕಕ್ಕಿಂತ ಮೊದಲು ನಡೆದಿದೆ (ಮೆಚ್ಚಿ ಪೇಳ್ದಂ, ವಂದು ಕಂಡಂ), ಬಳಿಕ ನಡೆದಿದೆ (ಕಾಣಲ್ ಪೋದಂ, ಗೆಯ್ಯಲ್ ಬಂದೆವು), ಇಲ್ಲವೇ ಅವರೆಡೂ ಒಟ್ಟಿಗೆ ನಡೆದಿವೆ (ಅಟ್ಟುತ್ತುಂ ಬಂದಂ, ನುಡಿಯುತ್ತುಂ ಪೋದಂ) ಎಂಬುದನ್ನು ತಿಳಿಸಲು ಇಂತಹ (ಎಂದರೆ, ಮೆಚ್ಚಿ, ಕಾಣಲ್, ಮತ್ತು ಅಟ್ಟುತ್ತುಂ ಎಂಬಂತಹ) ಮೂರು ಬಗೆಯ ಎಸಕರೂಪಗಳನ್ನು ಬಳಸಲಾಗುತ್ತದೆ; ಇದಲ್ಲದೆ, ಒಂದು ಎಸಕ ನಡೆಯದೆ ಇನ್ನೊಂದು ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದನ್ನು ತಿಳಿಸಲು ಇನ್ನೊಂದು (ನಾಲ್ಕನೇ ಬಗೆಯ) ಜೋಡಿಸುವ ರೂಪವೂ ಬಳಕೆಯಲ್ಲಿದೆ (ಉಸಿರದೆ ಕುಳ್ಳಿರ‍್ದಂ, ಎವೆಯಿಕ್ಕದೆ ನೋೞ್ಪಂ).

ಇವುಗಳಲ್ಲಿ ಮೊದಲಿನ ಮೂರು (ಮೊದಲು, ಬಳಿಕ ಮತ್ತು ಒಟ್ಟಿಗೆ ಎಂಬುದನ್ನು ತಿಳಿಸುವ) ರೂಪಗಳು ಆಡುಗನ ಸಮಯಕ್ಕಿಂತ ಮೊದಲೂ ಬರಬಲ್ಲುವು ಮತ್ತು ಬಳಿಕವೂ ಬರಬಲ್ಲುವು (ಎತ್ತುಗೆಗಾಗಿ, ಮೆಚ್ಚಿ ಪೇಳ್ವೆಂ ಎಂಬ ಸೊಲ್ಲಿನಲ್ಲಿ ಮೆಚ್ಚುವ ಎಸಕ (ಮತ್ತು ಹೇಳುವ ಎಸಕ) ಆಡುಗನ ಸಮಯದ ಬಳಿಕ ನಡೆಯುತ್ತದೆ); ಹಾಗಾಗಿ, ಇವನ್ನು ಹಿಂಬೊತ್ತಿನ (ಬೂತ), ಮುಂಬೊತ್ತಿನ (ಬವಿಶ್ಯತ್), ಮತ್ತು ಈಪೊತ್ತಿನ (ವರ‍್ತಮಾನ) ರೂಪಗಳೆಂದು ಕರೆಯುವುದು ಸರಿಯಲ್ಲ. ಇದಲ್ಲದೆ, ಇವುಗಳ ಮೂಲಕ ಜೋಡಿಸಿರುವ ಸೊಲ್ಲುಗಳೆರಡರಲ್ಲೂ ಮಾಡುಗರು ನಡೆಸುವ ಎಸಕಗಳನ್ನು ತಿಳಿಸಲಾಗಿದೆಯಾದರೆ, ಆ ಎರಡು ಎಸಕಗಳಿಗೂ ಮಾಡುಗ ಒಬ್ಬನೇ ಆಗಿರಬೇಕೆಂಬ ಕಟ್ಟುಪಾಡೂ ಇದೆ. ಎಸಕಗಳ ಮಾಡುಗರು ಬೇರೆ ಬೇರಾಗಿರುವಲ್ಲಿ ಬಳಸುವುದಕ್ಕಾಗಿ ಬೇರೆಯೇ ಒಂದು ಜೋಡಿಸುವ ರೂಪ ಬಳಕೆಯಲ್ಲಿದೆ (ಪಾಂಡ್ಯನ್ ತೋಮರದಿಂದ ಇಡೆ, ಗುರುತನೂಜಂ ಎಡೆಯೊಳ್ ಕಡಿದಂ).

ಒಂದು ಎಸಕಕ್ಕೆ ಇನ್ನೊಂದು ಎಸಕ ಬೇಡಿಕೆ ಎಂಬುದನ್ನು ತಿಳಿಸುವುದಕ್ಕಾಗಿಯೂ ಜೋಡಿಸುವ ಎಸಕರೂಪವನ್ನು ಬಳಸಲಾಗುತ್ತದೆ; ಇಂತಹ ಕಡೆಗಳಲ್ಲಿ ಬೇಡಿಕೆಯಾಗಿರುವ ಎಸಕವನ್ನು ತಿಳಿಸುವ ಪದದ ಪರಿಚೆರೂಪಕ್ಕೆ ಒಡೆ ಎಂಬ ಒಟ್ಟನ್ನು ಸೇರಿಸಲಾಗುತ್ತದೆ (ಪತಿ ಸತ್ತೊಡೆ ನರಕಂಗಳೊಳ್ ಅೞ್ಗುಗುಂ, ರಾಜನಪ್ಪೊಡೆ ಕುಡುವೆಂ, ಪೇೞದೊಡೆ ಪೋಗದಿರ್). ಈ ಎಸಕರೂಪದಲ್ಲಿ ಬರುವ ದ್ ಮತ್ತು ವ್(ಪ್) ಒಟ್ಟುಗಳಿಗೆ ಬೇರೆಯೇ ಹುರುಳಿರುವುದನ್ನು ಕಾಣಬಹುದು: ಸಾಮಾನ್ಯವಾಗಿ ಇವೆರಡೂ ಮುಂಬೊತ್ತಿನ ಎಸಕಗಳನ್ನೇ ತಿಳಿಸುತ್ತವೆ; ಆದರೆ, ಬೇಡಿಕೆಯನ್ನು ತಿಳಿಸುವ ಎಸಕರೂಪದಲ್ಲಿ ದ್ ಒಟ್ಟು ಬಂದಿದೆಯಾದರೆ, ಅದು ತಿಳಿಸುವ ಎಸಕ ಅದನ್ನು ಅವಲಂಬಿಸಿರುವ ಎಸಕಕ್ಕಿಂತ ಮೊದಲೇ ನಡೆದಿರಬೇಕೆಂಬ ಹುರುಳು ಸಿಗುತ್ತದೆ, ಮತ್ತು ವ್ ಒಟ್ಟು ಬಂದಿದೆಯಾದರೆ, ಅದನ್ನು ಅವಲಂಬಿಸಿರುವ ಎಸಕದ ಬಳಿಕ ನಡೆದರೆ ಸಾಕೆಂಬ ಹುರುಳು ಸಿಗುತ್ತದೆ. (ಪತಿ ಸತ್ತೊಡೆ ನರಕಂಗಳೊಳ್ ಅೞ್ಗುಗುಂ ಎಂಬಲ್ಲಿ ಪತಿ ಸಾಯುವ ಎಸಕ ಅದನ್ನು ಅವಲಂಬಿಸಿರುವ ನರಕಗಳಲ್ಲಿ ಮುಳುಗುವ ಎಸಕಕ್ಕಿಂತ ಮೊದಲು ನಡೆದಿರಬೇಕಾಗುತ್ತದೆ; ಆದರೆ, ರಾಜನಪ್ಪೊಡೆ ಕುಡುವೆಂ ಎಂಬಲ್ಲಿ ರಾಜನಾಗುವ ಎಸಕ ಅದನ್ನು ಅವಲಂಬಿಸಿರುವ ಕೊಡುವ ಎಸಕದ ಬಳಿಕ ನಡೆಯಬಲ್ಲುದು).

ಸಂಸ್ಕ್ರುತದಲ್ಲಿಯೂ ಎರಡು ಸೊಲ್ಲುಗಳನ್ನು ಜೋಡಿಸುವುದಕ್ಕಾಗಿ ಎಸಕರೂಪಗಳನ್ನು ಬಳಸಲಾಗುತ್ತದೆ; ಆದರೆ, ಇದಕ್ಕಾಗಿ ಬಳಕೆಯಾಗುವ ಎಸಕರೂಪಗಳು ಹಲವು ಬಗೆಯವಾಗಿದ್ದು, (ಅರಣ್ಯೇ ಚರನ್ ಮೃಗಮೇಕಂ ಅಪಶ್ಯಂ, ಭೋಜನಂ ಕೃತ್ವಾ ಗ್ರಾಮಂ ಗತಃ, ತಸ್ಮಿನ್ ರಾಜ್ಞಿ ಸತಿ ಕಃ ಭೂಮಿಂ ಜಯೇತ್, ವೇತ್ತಿ ಚೇತ್ ಭವಾನ್ ವಕ್ತು), ಅವುಗಳ ಹಿಂದೆ ಹಳೆಗನ್ನಡದಲ್ಲಿರುವಂತಹ ಅಚ್ಚುಕಟ್ಟು ಕಾಣಿಸುವುದಿಲ್ಲ. ಸೊಲ್ಲುಗಳನ್ನು ಜೋಡಿಸುವ ಈ ಹೊಲಬನ್ನು ಅದು ದ್ರಾವಿಡ ನುಡಿಗಳಿಂದ ಎರವಲು ಪಡೆದುದೇ ಇದಕ್ಕೆ ಕಾರಣವಿರಬೇಕೆಂದು ಹೇಳಲಾಗುತ್ತದೆ. ಇಂಡೋ-ಯುರೋಪಿಯನ್ ಮೂಲನುಡಿಯಿಂದ ಅದು ಈ ಹೊಲಬನ್ನು ಪಡೆದಿಲ್ಲ.

ಹಾಗಾಗಿ, ಹಳೆಗನ್ನಡದ ಜೋಡಿಸುವ ರೂಪಗಳ ಹಿಂದಿರುವ ಅಚ್ಚುಕಟ್ಟನ್ನು ಗಮನಿಸುವಲ್ಲಿ ಶಬ್ದಮಣಿದರ‍್ಪಣ ಸೋತುಹೋಗಿದೆ; ಇದಲ್ಲದೆ, ಈ ಪದರೂಪಗಳ ಬಳಕೆಯ ಕುರಿತಾಗಿ ಕೆಲವು ತಪ್ಪು ಹೇಳಿಕೆಗಳನ್ನೂ ಅದು ಕೊಟ್ಟಿದ್ದು, ಅದರಲ್ಲಿ ಗೊಂದಲವೇ ಕಾಣಿಸುತ್ತದೆ.

ಮೇಲೆ ಕೊಟ್ಟಿರುವ ಎಂಟು ತಳಮಟ್ಟದ ವ್ಯತ್ಯಾಸಗಳು ಮಾತ್ರವಲ್ಲದೆ ಬೇರೆಯೂ ಹಲವು ತಳಮಟ್ಟದ ವ್ಯತ್ಯಾಸಗಳು ಹಳೆಗನ್ನಡ ಮತ್ತು ಸಂಸ್ಕ್ರುತ ವ್ಯಾಕರಣಗಳ ನಡುವೆ ಇವೆ. ಇವುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ನನ್ನ ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? ಎಂಬ ಪುಸ್ತಕದಲ್ಲಿ ನೋಡಬಹುದು. ಇಂತಹ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಗಮನಿಸದ, ಮತ್ತು ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳನ್ನು ಹಳೆಗನ್ನಡದ ಪದ, ಪದರೂಪ, ಮತ್ತು ಸೊಲ್ಲುಗಳಲ್ಲಿ ಕಾಣಲು ಪ್ರಯತ್ನಿಸುವ ಶಬ್ದಮಣಿದರ‍್ಪಣ ‘ಹಳೆಗನ್ನಡದ ಒಳ್ಳೆಯ ವ್ಯಾಕರಣ’ವೆಂದೆನಿಸಲು ಸಾದ್ಯವೇ ಇಲ್ಲ.

facebooktwitter

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 6

shabdamanidarpana

(7) ಎಸಕಪದಗಳ ರೂಪಗಳು:

ಎಸಕಪದಗಳ ಬಳಕೆಯಲ್ಲೂ ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವೆ ತಳಮಟ್ಟದ ವ್ಯತ್ಯಾಸಗಳಿವೆ:

(ಕ) ಹಳೆಗನ್ನಡದ ಎಸಕರೂಪಗಳಲ್ಲಿ ಎಸಕಪದಗಳ ಬಳಿಕ ಎಸಕದ ಹೊತ್ತನ್ನು ತಿಳಿಸುವ ‘ಹೊತ್ತಿನ ಒಟ್ಟು’ ಮತ್ತು ಅದನ್ನು ನಡೆಸಿದ ಮಾಡುಗನನ್ನು ಇಲ್ಲವೇ ಆಗುಗನನ್ನು ತಿಳಿಸುವ ‘ಗುರುತಿನ ಒಟ್ಟು’ ಎಂಬುದಾಗಿ ಎರಡು ಒಟ್ಟುಗಳು ಬಳಕೆಯಾಗುತ್ತವೆ; ಎತ್ತುಗೆಗಾಗಿ, ಪಡೆದನ್ (ಪಡೆ-ದ್-ಅನ್) ಎಂಬ ಎಸಕಪದರೂಪದಲ್ಲಿ ಪಡೆ ಎಂಬುದು ಎಸಕಪದ, ದ್ ಎಂಬುದು ಹಿಂಬೊತ್ತನ್ನು ತಿಳಿಸುವ ಹೊತ್ತಿನ ಒಟ್ಟು, ಮತ್ತು ಅನ್ ಎಂಬುದು ಗುರುತಿನ ಒಟ್ಟು; ಇರ‍್ಪಂ (ಇರ್-ಪ್-ಎಂ) ಎಂಬುದರಲ್ಲಿ ಇರ್ ಎಂಬುದು ಎಸಕಪದ, ಪ್ ಎಂಬುದು ಮುಂಬೊತ್ತನ್ನು ತಿಳಿಸುವ ಹೊತ್ತಿನ ಒಟ್ಟು, ಮತ್ತು ಎಂ ಎಂಬುದು ಗುರುತಿನ ಒಟ್ಟು.

ಇದಕ್ಕೆ ಬದಲು, ಸಂಸ್ಕ್ರುತದ ಎಸಕರೂಪಗಳಲ್ಲಿ ಎಸಕಪದದ ಬಳಿಕ ಮಾಡುಗ ಇಲ್ಲವೇ ಆಗುಗನನ್ನು ತಿಳಿಸುವ ಒಂದು ಒಟ್ಟು ಮಾತ್ರ ಬರುತ್ತದೆ; ಯಜ-ತಿ ಎಂಬ ಎಸಕರೂಪದಲ್ಲಿ ಯಜ ಎಂಬುದು ಎಸಕಪದರೂಪ, ಮತ್ತು ತಿ ಎಂಬುದು ಗುರುತಿನ ಒಟ್ಟು; ಗಚ್ಛಾ-ಮಿ ಎಂಬುದರಲ್ಲಿ ಗಚ್ಛಾ ಎಂಬುದು ಎಸಕಪದರೂಪ, ಮತ್ತು ಮಿ ಎಂಬುದು ಗುರುತಿನ ಒಟ್ಟು. ಸಂಸ್ಕ್ರುತದ ಎಸಕಪದರೂಪಗಳ ಹಾಗೆ ಹಳೆಗನ್ನಡದ ಎಸಕಪದರೂಪಗಳಲ್ಲೂ ಒಂದು ಒಟ್ಟನ್ನು ಮಾತ್ರ ಕಾಣಲು ಹೊರಟಿರುವ ಶಬ್ದಮಣಿದರ‍್ಪಣದಲ್ಲಿ ಹಳೆಗನ್ನಡದ ಎರಡು ಒಟ್ಟುಗಳಲ್ಲಿ ಒಂದನ್ನು (ಗುರುತಿನ ಒಟ್ಟನ್ನು) ಮಾತ್ರ ‘ಪ್ರತ್ಯಯ’ವೆಂದು ಕರೆಯಲಾಗಿದೆ, ಮತ್ತು ಅದರ ಮೊದಲು ಬರುವ ಹೊತ್ತಿನ ಒಟ್ಟನ್ನು ‘ಆಗಮ’ವೆಂದು ಕರೆಯಲಾಗಿದೆ.

(ಚ) ಹಳೆಗನ್ನಡದಲ್ಲಿ ಎಸಕದ ಹೊತ್ತನ್ನು ತಿಳಿಸಲು ಬೇರೆಯೇ ಒಟ್ಟನ್ನು ಬಳಸಲಾಗುತ್ತದೆಯೆಂಬುದನ್ನು ಮೇಲೆ ನೋಡಿರುವೆವು; ಇದಕ್ಕೆ ಬದಲು, ಸಂಸ್ಕ್ರುತದಲ್ಲಿ ಎಸಕಪದದ ರೂಪದಲ್ಲಿ ಇಲ್ಲವೇ ಗುರುತಿನ ಒಟ್ಟಿನ ರೂಪದಲ್ಲಿ ವ್ಯತ್ಯಾಸಗಳನ್ನು ಮಾಡುವ ಮೂಲಕ ಅದನ್ನು ತಿಳಿಸಲಾಗುತ್ತದೆ; ಇದಲ್ಲದೆ, ಹಳೆಗನ್ನಡದಲ್ಲಿ ಎಸಕದ ಸಮಯಕ್ಕೂ ಆಡುಗನ ಸಮಯಕ್ಕೂ ನಡುವಿರುವ ಸಂಬಂದವನ್ನು ಎಸಕರೂಪಗಳಲ್ಲಿ ಹೊತ್ತಿನ ಒಟ್ಟನ್ನು ಬಳಸುವ ಮೂಲಕ ತಿಳಿಸಲಾಗುತ್ತದೆ; ಬಂದೆನ್ ಎಂಬ ಎಸಕರೂಪದಲ್ಲಿ ಬಳಕೆಯಾಗಿರುವ ದ್ ಎಂಬ ಒಟ್ಟು ‘ಬರುವ ಎಸಕ’ ಆಡುಗನ ಹೊತ್ತಿಗಿಂತ ಮೊದಲು ನಡೆದಿದೆಯೆಂದು ತಿಳಿಸುತ್ತದೆ, ಮತ್ತು ಬರ‍್ಪೆನ್ ಎಂಬುದರಲ್ಲಿ ಬಳಕೆಯಾಗಿರುವ ಪ್ ಎಂಬ ಒಟ್ಟು ಅದು ಆಡುಗನ ಹೊತ್ತಿನ ಬಳಿಕ ನಡೆಯುತ್ತದೆಯೆಂದು ತಿಳಿಸುತ್ತದೆ.

ಇದಕ್ಕೆ ಬದಲು, ಸಂಸ್ಕ್ರುತದ ಎಸಕಪದರೂಪಗಳಲ್ಲಿ ಎಸಕವು ಪೂರ‍್ಣವಾದುದೋ ಇಲ್ಲವೇ ಅಪೂರ‍್ಣವಾದುದೋ ಎಂಬುದನ್ನು (ಎಂದರೆ ಹೊತ್ತಿನ ವ್ಯವಸ್ತೆಯನ್ನು) ತಿಳಿಸಲಾಗುತ್ತದೆ, ಮತ್ತು ಇದಕ್ಕಾಗಿ ಎಸಕಪದಗಳ ರೂಪಗಳಲ್ಲಿ ಮತ್ತು ಅವುಗಳ ಬಳಿಕ ಬರುವ ಗುರುತಿನ ಒಟ್ಟುಗಳಲ್ಲಿ ಮಾರ‍್ಪಾಡುಗಳನ್ನು ಮಾಡುವ ಮೂಲಕ ತಿಳಿಸಲಾಗುತ್ತದೆ. ಎತ್ತಿಗೆಗಾಗಿ, ತುದ-ತಿ ಎಂಬುದು ಕೊನೆಗೊಳ್ಳದ ಎಸಕವನ್ನು ತಿಳಿಸುತ್ತದೆ, ಮತ್ತು ತುತೋ-ದ ಎಂಬುದು ಕೊನೆಗೊಂಡ ಎಸಕವನ್ನು ತಿಳಿಸುತ್ತದೆ.

ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸಲಾಗದ ಶಬ್ದಮಣಿದರ‍್ಪಣ ಸಂಸ್ಕ್ರುತದ ಕಟ್ಟಲೆಗಳನ್ನೇ ಅಲ್ಲಲ್ಲಿ ತೇಪೆಹಾಕಿ ಹಳೆಗನ್ನಡದವೆಂದು ನಮ್ಮೆದುರಿಗಿರಿಸಿದೆ.

(ಟ) ಸಂಸ್ಕ್ರುತದಲ್ಲಿ ಗುರುತಿನ ಒಟ್ಟು (ಆಖ್ಯಾತ ಪ್ರತ್ಯಯ) ಮಾಡುಗ ಇಲ್ಲವೇ ಆಗುಗನ ಕುರಿತಾಗಿ ಆಡುಗ, ಕೇಳುಗ ಮತ್ತು ಹೆರತು ಎಂಬ ಮೂರು ಬಗೆಯ ಮಾತಾಳಿನ ವ್ಯತ್ಯಾಸವನ್ನು, ಮತ್ತು ಏಕ-ದ್ವಿ-ಬಹು ಎಂಬ ಮೂರು ಬಗೆಯ ಎಣಿಕೆಯ (ವಚನದ) ವ್ಯತ್ಯಾಸವನ್ನು ತಿಳಿಸುತ್ತದೆ; ಇದಕ್ಕೆ ಬದಲು, ಹಳೆಗನ್ನಡದಲ್ಲಿ ಗುರುತಿನ ಒಟ್ಟು ಮೂರು ಬಗೆಯ ಮಾತಾಳಿನ ವ್ಯತ್ಯಾಸ ಮತ್ತು ಎರಡು ಬಗೆಯ ಎಣಿಕೆಯ ವ್ಯತ್ಯಾಸಗಳನ್ನು ಮಾತ್ರವಲ್ಲದೆ ಮೂರು ಬಗೆಯ ಗುರ‍್ತ ವ್ಯತ್ಯಾಸವನ್ನೂ (ಗಂಡು, ಹೆಣ್ಣು, ಉಳಿಕೆ) ತೋರಿಸುತ್ತದೆ. ಸಂಸ್ಕ್ರುತದ ಗಚ್ಛತಿ ಎಂಬ ಓರೆಣಿಕೆಯ ಒಂದು ರೂಪಕ್ಕೆ ಬದಲಾಗಿ ಹಳೆಗನ್ನಡದಲ್ಲಿ ಪೋದನ್, ಪೋದಳ್ ಮತ್ತು ಪೋದುದು ಎಂಬ ಮೂರು ರೂಪಗಳಿವೆ.

ಇದನ್ನು ವಿವರಿಸುವಲ್ಲಿಯೂ ಕೂಡ, ಸಂಸ್ಕ್ರುತದ ಕಟ್ಟಲೆಗಳು ಶಬ್ದಮಣಿದರ‍್ಪಣವನ್ನು ಕಟ್ಟಿಹಾಕಿವೆ: ಹಳೆಗನ್ನಡದ ಎಸಕಪದರೂಪಗಳಲ್ಲಿ ಮಾತಾಳಿನ ಮತ್ತು ಎಣಿಕೆಯ ವ್ಯತ್ಯಾಸಗಳನ್ನು ತೋರಿಸುವ ಆರು ಒಟ್ಟುಗಳನ್ನು ಮಾತ್ರ ‘ಪ್ರತ್ಯಯ’ಗಳೆಂದು ಕರೆದು, ಗುರ‍್ತವ್ಯತ್ಯಾಸವನ್ನು ತೋರಿಸುವ ಒಟ್ಟುಗಳನ್ನು ‘ಆದೇಶ’ಗಳೆಂದು ಕರೆಯಲಾಗಿದೆ.

ಮಗು ಪದಕ್ಕೆ ಇನ ಒಟ್ಟನ್ನು ಸೇರಿಸಿದಾಗ ಅವುಗಳ ನಡುವೆ ವಕಾರ ಬರುವುದು ಮಗು+ಇನ ಎಂಬುದು ಮಗುವಿನ ಎಂದಾಗುವುದು) ಆಗಮ, ಮತ್ತು ಬಂಡೆ ಪದಕ್ಕೆ ಕಲ್ಲು ಪದವನ್ನು ಸೇರಿಸಿದಾಗ ಕಕಾರದ ಬದಲು ಗಕಾರ ಬರುವುದು (ಬಂಡೆ+ಕಲ್ಲು ಎಂಬುದು ಬಂಡೆಗಲ್ಲು ಎಂದಾಗುವುದು) ಆದೇಶ; ಎಂದರೆ, ಆಗಮ ಮತ್ತು ಆದೇಶ ಎಂಬ ಈ ಸೇರಿಕೆಯ ಮಾರ‍್ಪಾಡುಗಳು ಹುರುಳಿನ ವ್ಯತ್ಯಾಸವಿಲ್ಲದಿರುವಲ್ಲೂ ಉಲಿಗಳ ವ್ಯತ್ಯಾಸ ನಡೆದಿರುವುದನ್ನು ವಿವರಿಸಲು ಬಳಕೆಯಾಗುತ್ತವೆ. ಇಂತಹ ಸೇರಿಕೆಯ ಮಾರ‍್ಪಾಡುಗಳನ್ನು ಮೇಲೆ ವಿವರಿಸಿದ ಹಾಗೆ ಹುರುಳಿನ ವ್ಯತ್ಯಾಸ ಇರುವಲ್ಲೂ ಬಳಸುವುದು ನಿಜಕ್ಕೂ ವಿಚಿತ್ರವಾಗಿದೆ. ಪೋದನ್ ಎಂಬುದರ ಬದಲು ಪೋಪನ್ ಎಂಬುದನ್ನು ಬಳಸುವುದು, ಮತ್ತು ಪೋದನ್ ಎಂಬುದರ ಬದಲು ಪೋದಳ್ ಇಲ್ಲವೇ ಪೋದುದು ಎಂಬುದನ್ನು ಬಳಸುವುದು ಬರಿಯ ಸೇರಿಕೆ(ಸಂದಿ)ಯ ವ್ಯತ್ಯಾಸ ಹೇಗಾಗುತ್ತದೆ?

ಸಂಸ್ಕ್ರುತದ ಎಸಕಪದರೂಪಗಳಲ್ಲಿಲ್ಲದ ಹೊತ್ತಿನ ಒಟ್ಟನ್ನು ಮತ್ತು ಗುರ‍್ತವ್ಯತ್ಯಾಸವನ್ನು ಹಳೆಗನ್ನಡದ ಎಸಕಪದರೂಪಗಳಲ್ಲಿ ಕಾಣಲು ಶಬ್ದಮಣಿದರ‍್ಪಣಕ್ಕೆ ಸಾದ್ಯವಾಗದಿದ್ದುದೇ ಮೇಲಿನ ವಿಚಿತ್ರ ಹೇಳಿಕೆಗೆ ಕಾರಣವಾಗಿದೆ.

facebooktwitter

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 5

shabdamanidarpana

ಹಳೆಗನ್ನಡದಲ್ಲಿ ಅನ್ (ಅಂ) ‘ಈಡು’, ಒಳ್ ‘ಜಾಗ’, ಇನ್ ‘ಸುರು’ ಮತ್ತು ಗೆ ‘ಕೊನೆ’ ಎಂಬ ನಾಲ್ಕು ಪತ್ತುಗೆ (ವಿಬಕ್ತಿ) ಒಟ್ಟುಗಳು ಮಾತ್ರ ಬಳಕೆಯಾಗುತ್ತವೆ; ಹೆಸರುಪದಗಳಿಗೂ ಎಸಕಪದಗಳಿಗೂ ನಡುವಿರುವ ಸಂಬಂದವನ್ನು ಈ ಒಟ್ಟುಗಳು ನೇರವಾಗಿ ತಿಳಿಸುತ್ತವೆ. ಹೆಸರುಪದಗಳು ಗುರುತಿಸುವ ಪಾಂಗುಗಳ ಎಣಿಕೆಯನ್ನು ತಿಳಿಸಲು ಗಳು ಮತ್ತು ರು ಎಂಬ ಬೇರೆಯೇ ಎರಡು ಒಟ್ಟುಗಳು ಬಳಕೆಯಲ್ಲಿವೆ.

(6) ಪತ್ತುಗೆ ಒಟ್ಟುಗಳು ಮತ್ತು ಕಾರಕಗಳು:

ಇದಕ್ಕೆ ಬದಲು, ಸಂಸ್ಕ್ರುತದಲ್ಲಿ ಏಳು ವಿಬಕ್ತಿಗಳು ಮತ್ತು ಮೂರು ವಚನಗಳು ಬಳಕೆಯಾಗುತ್ತಿದ್ದು, ಇವನ್ನು ಒಟ್ಟಾಗಿ ತಿಳಿಸಲು 7×3 ಎಂದರೆ ಒಟ್ಟು 21 ಒಟ್ಟುಗಳು ಬಳಕೆಯಾಗುತ್ತವೆ. ಆದರೆ, ಈ ವಿಬಕ್ತಿ-ವಚನ ಒಟ್ಟುಗಳು ಹೆಸರುಪದ ಮತ್ತು ಎಸಕಪದಗಳ ನಡುವಿನ ಸಂಬಂದವನ್ನು ನೇರವಾಗಿ ತಿಳಿಸುವುದಿಲ್ಲ. ಇದಕ್ಕೆ ಹಲವು ಕಾರಣಗಳಿವೆ:

(ಕ) ಕೆಲವು ಒಟ್ಟುಗಳು ಒಂದಕ್ಕಿಂತ ಹೆಚ್ಚು ವಿಬಕ್ತಿ-ವಚನಗಳನ್ನು ತಿಳಿಸಬಲ್ಲುವು (ಆಸ್ಯೇಭ್ಯಃ ಎಂಬ ಪದರೂಪದಲ್ಲಿ ಬಂದಿರುವ ಭ್ಯಃ ಎಂಬುದು ಚತುರ‍್ತೀ-ಬಹುವಚನವನ್ನು ಮಾತ್ರವಲ್ಲದೆ, ಪಂಚಮೀ-ಬಹುವಚನವನ್ನೂ ತಿಳಿಸಬಲ್ಲುದು; ನದೀಭ್ಯಾಂ ಎಂಬುದರಲ್ಲಿ ಬಂದಿರುವ ಭ್ಯಾಂ ಎಂಬುದು ತ್ರುತೀಯಾ-ದ್ವಿವಚನ, ಚತುರ‍್ತೀ-ದ್ವಿವಚನ ಮತ್ತು ಪಂಚಮೀ-ದ್ವಿವಚನಗಳನ್ನು ತಿಳಿಸಬಲ್ಲದು).

(ಚ) ಶಶ್ಟೀ ವಿಬಕ್ತಿಯ ಒಟ್ಟು ಹೆಸರುಪದ-ಎಸಕಪದ ಸಂಬಂದವನ್ನು ಮಾತ್ರವಲ್ಲದೆ ಹೆಸರುಪದ-ಹೆಸರುಪದ ಸಂಬಂದವನ್ನೂ ತಿಳಿಸಬಲ್ಲುದು (ಭೀಮಸ್ಯ ಅನುಕರಿಷ್ಯಾಮಿ ಎಂಬಲ್ಲಿ ಅದು ಬೀಮನಿಗೂ ಎಸಕಕ್ಕೂ ನಡುವಿರುವ ಹೆಸರುಪದ-ಎಸಕಪದ ಸಂಬಂದವನ್ನು ತಿಳಿಸುತ್ತದೆ, ಮತ್ತು ಪಶೋಃ ಪಾದಃ ಎಂಬಲ್ಲಿ ಅದೇ ಒಟ್ಟು ಪಶುವಿಗೂ ಪಾದಕ್ಕೂ ನಡುವಿರುವ ಹೆಸರುಪದ-ಹೆಸರುಪದ ಸಂಬಂದವನ್ನು ತಿಳಿಸುತ್ತದೆ).

(ಟ) ಕೆಲವು ವಿಬಕ್ತಿ ಒಟ್ಟುಗಳ ಬಳಕೆ ಹೆಸರುಪದ-ಎಸಕಪದ ಸಂಬಂದವನ್ನು ಅವಲಂಬಿಸಿರುವ ಬದಲು ಬೇರೆ ವಿಶಯಗಳನ್ನು ಅವಲಂಬಿಸಿರುತ್ತದೆ (ಪರ‍್ವತೇ ಆಸ್ತೇ, ಪರ‍್ವತಂ ಅಧ್ಯಾಸ್ತೇ ಎಂಬ ಈ ಎರಡು ಸೊಲ್ಲುಗಳಲ್ಲೂ ಒಂದು ಪಾಂಗಿನ ಜಾಗವನ್ನು ತಿಳಿಸಲಾಗುತ್ತದೆ; ಆದರೆ, ಮೊದಲನೆಯ ಸೊಲ್ಲಿನಲ್ಲಿ ಸಪ್ತಮೀ ವಿಬಕ್ತಿ ಒಟ್ಟು ಬಂದಿದೆ ಮತ್ತು ಎರಡನೆಯದರಲ್ಲಿ, ಅಧಿ ಎಂಬ ಮುನ್ನೊಟ್ಟಿನ ಬಳಕೆಯಿಂದಾಗಿ, ದ್ವಿತೀಯಾ ವಿಬಕ್ತಿ ಒಟ್ಟು ಬಂದಿದೆ).

ಇಂತಹ ಬೇರೆಯೂ ಹಲವು ಕಾರಣಗಳಿಗಾಗಿ, ಸಂಸ್ಕ್ರುತದಲ್ಲಿ ವಿಬಕ್ತಿ ಒಟ್ಟುಗಳನ್ನು ನೇರವಾಗಿ ಹೆಸರು-ಎಸಕ ಸಂಬಂದಗಳೊಂದಿಗೆ ಹೊಂದಿಸಲು ಬರುವುದಿಲ್ಲ; ಹಾಗಾಗಿ, ಹೆಸರು-ಎಸಕ ಸಂಬಂದಗಳನ್ನು ತಿಳಿಸುವುದಕ್ಕಾಗಿ ಸಂಸ್ಕ್ರುತ ವ್ಯಾಕರಣಗಳಲ್ಲಿ ‘ಕಾರಕ’ವೆಂಬ ಬೇರೆಯೇ ಒಂದು ಕಲ್ಪಿತ ತತ್ವವನ್ನು ಬಳಸಲಾಗುತ್ತದೆ; ಕರ‍್ತ್ರು, ಕರ‍್ಮ, ಕರಣ ಮೊದಲಾದ ಇಂತಹ ಆರು ಕಾರಕಗಳನ್ನು ಕಲ್ಪಿಸಿಕೊಳ್ಳಲಾಗಿದ್ದು, ಅವುಗಳ ಮೂಲಕ ನೇರವಲ್ಲದ ಬಗೆಯಲ್ಲಿ ವಿಬಕ್ತಿ ಒಟ್ಟುಗಳನ್ನು ಹೆಸರು-ಎಸಕ ಸಂಬಂದದೊಂದಿಗೆ ಹೊಂದಿಸಬೇಕಾಗಿದೆ.

ಆದರೆ, ಹಳೆಗನ್ನಡದಲ್ಲಿ ವಿಬಕ್ತಿ ಒಟ್ಟುಗಳಿಗೂ ಈಡು, ಜಾಗ, ಸುರು ಮತ್ತು ಕೊನೆಗಳೆಂಬ ಹೆಸರು-ಎಸಕ ಸಂಬಂದಗಳಿಗೂ ನಡುವೆ ನೇರವಾದ ಹೊಂದಾಣಿಕೆಯಿದೆ; ಹಾಗಾಗಿ, ಅಂತಹ ಕಾರಕವೆಂಬ ಕಲ್ಪಿತ ತತ್ವ ಹಳೆಗನ್ನಡ ವ್ಯಾಕರಣಕ್ಕೆ ಬೇಕಾಗಿಲ್ಲ. ಇದನ್ನು ಗಮನಿಸದೆ, ಹಳೆಗನ್ನಡ ವ್ಯಾಕರಣದಲ್ಲೂ ಕಾರಕವೆಂಬ ಕಲ್ಪಿತ ತತ್ವವನ್ನು ಬಳಸಹೋಗಿ, ಹಳೆಗನ್ನಡದ ಮಟ್ಟಿಗೆ ಶಬ್ದಮಣಿದರ‍್ಪಣವೆಂಬುದು ಒಂದು ಸಿಕ್ಕಲು ಸಿಕ್ಕಲಾದ ವ್ಯಾಕರಣವಾಗಿದೆ.

ಸಂಸ್ಕ್ರುತದ ಹಾಗೆ, ಲ್ಯಾಟಿನ್, ಗ್ರೀಕ್, ಇಂಗ್ಲಿಶ್ ಮೊದಲಾದ ಬೇರೆ ಇಂಡೋ-ಯುರೋಪಿಯನ್ ನುಡಿಗಳಲ್ಲೂ ಪತ್ತುಗೆ ಒಟ್ಟುಗಳನ್ನು ನೇರವಾಗಿ ಹೆಸರು-ಎಸಕ ಸಂಬಂದಗಳೊಂದಿಗೆ ಹೊಂದಿಸಲು ಬರುವುದಿಲ್ಲ, ಮತ್ತು ಈ ಕಾರಣಕ್ಕಾಗಿ, ಆ ನುಡಿಗಳ ಸೊಲ್ಲರಿಮೆಗಳಲ್ಲೂ ಸಬ್ಜೆಕ್ಟ್, ಆಬ್ಜೆಕ್ಟ್ ಎಂಬಂತಹ ಕಲ್ಪಿತ ತತ್ವಗಳನ್ನು ಬಳಸಬೇಕಾಗಿದೆ.

ಇತ್ತೀಚೆಗಿನ ಕೆಲವು ಕನ್ನಡ ಸೊಲ್ಲರಿಮೆಗಳು ಈ ಕಲ್ಪಿತ ತತ್ವಗಳನ್ನು ಕನ್ನಡಕ್ಕೂ ಅಳವಡಿಸಲು ಪ್ರಯತ್ನಿಸಿವೆ; ಆದರೆ, ರಾಜುವಿಗೆ ಹಣ ಸಿಕ್ಕಿತು ಎಂಬಂತಹ ಸೊಲ್ಲುಗಳಲ್ಲಿ ಯಾವುದನ್ನು (ರಾಜುವಿಗೆ ಎಂಬುದನ್ನೋ, ಇಲ್ಲವೇ ಹಣ ಎಂಬುದನ್ನೋ) ಸಬ್ಜೆಕ್ಟ್ ಎಂಬುದಾಗಿ ತಿಳಿಯಬೇಕು ಎಂಬುದನ್ನು ತೀರ‍್ಮಾನಿಸಲಾಗದೆ ಸೋತುಹೋಗಿವೆ. ಸಿಕ್ಕಿತು ಎಂಬ ಹೆಸರುಪದದೊಂದಿಗೆ ಹೊಂದಾಣಿಕೆಯನ್ನು ಹಣ ಎಂಬ ಹೆಸರುಪದ ತೋರಿಸುವುದರಿಂದ ಅದನ್ನೇ ಸಬ್ಜೆಕ್ಟ್ ಎನ್ನಬೇಕಾಗುತ್ತದೆ; ಆದರೆ, ಹಣವನ್ನು ಪಡೆದಿರುವುದು ರಾಜುವಾದ ಕಾರಣ, ರಾಜುವೇ ಸೊಲ್ಲಿನ ಸಬ್ಜೆಕ್ಟ್ ಎಂದೂ ಅನಿಸುತ್ತದೆ. ಸಬ್ಜೆಕ್ಟ್, ಆಬ್ಜೆಕ್ಟ್ ಎಂಬಂತಹ ಈ ತತ್ವಗಳನ್ನು ಕನ್ನಡಕ್ಕೆ ಅಳವಡಿಸುವಲ್ಲಿ ಬೇರೆಯೂ ಕೆಲವು ತೊಂದರೆಗಳಿವೆ.

ನಿಜಕ್ಕೂ ಇವನ್ನು ಬಳಸದೆಯೇ ಕನ್ನಡದ ಸೊಲ್ಲರಿಮೆಯನ್ನು ವಿವರಿಸಲು ಬರುತ್ತದೆ; ಹಾಗಾಗಿ, ಅವನ್ನು ಬಳಸಲು ಹೋಗಿ ತೊಡಕುಗಳಿಗೆ ಯಾಕೆ ಸಿಲುಕಿಕೊಳ್ಳಬೇಕು?

facebooktwitter

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 4

shabdamanidarpana

(5) ಎಣಿಕೆ ಮತ್ತು ಪತ್ತುಗೆಗಳು:

ಹಳೆಗನ್ನಡದಲ್ಲಿ ಹೆಸರುಪದಗಳ ಬಳಿಕ ಎಣಿಕೆ (ವಚನ) ಮತ್ತು ಪತ್ತುಗೆ(ವಿಬಕ್ತಿ)ಗಳನ್ನು ತಿಳಿಸಲು ಎರಡು ಬೇರೆ ಬೇರೆ ಒಟ್ಟುಗಳನ್ನು ಬಳಸಲಾಗುತ್ತದೆ; ಎತ್ತುಗೆಗಾಗಿ, ಅಂಬುಗಳಿಂದೆ ಎಂಬ ಪದರೂಪದಲ್ಲಿ ಅಂಬು ಎಂಬ ಹೆಸರುಪದದ ಬಳಿಕ ಎಣಿಕೆಯನ್ನು ತಿಳಿಸಲು ಗಳ್ ಎಂಬ ಒಟ್ಟನ್ನು ಬಳಸಲಾಗಿದೆ, ಮತ್ತು ಪತ್ತುಗೆಯನ್ನು ತಿಳಿಸಲು ಇಂದೆ ಎಂಬ ಇನ್ನೊಂದು ಬೇರೆಯೇ ಒಟ್ಟನ್ನು ಬಳಸಲಾಗಿದೆ.

ಇವುಗಳಲ್ಲಿ ಎಣಿಕೆ ಒಟ್ಟು ಹೆಸರುಪದ ತಿಳಿಸುವ ವ್ಯಕ್ತಿ ಇಲ್ಲವೇ ವಸ್ತುವಿನ ಎಣಿಕೆಯನ್ನು ತಿಳಿಸುತ್ತದೆ (ಅಂಬು ಎಂದರೆ ಒಂದು ಬಾಣ, ಮತ್ತು ಅಂಬುಗಳ್ ಎಂದರೆ ಒಂದಕ್ಕಿಂತ ಹೆಚ್ಚು ಬಾಣಗಳು), ಮತ್ತು ಪತ್ತುಗೆ ಒಟ್ಟು ಆ ಹೆಸರುಪದಕ್ಕೂ ಎಸಕ(ಕ್ರಿಯಾ)ಪದಕ್ಕೂ ನಡುವಿರುವ ಸಂಬಂದವನ್ನು ತಿಳಿಸುತ್ತದೆ (ಅಂಬುಗಳಿಂದೆ ಮರುೞ್ಚಿದಂ ಎಂಬ ಸೊಲ್ಲಿನಲ್ಲಿ ಇಂದೆ ಎಂಬ ಪತ್ತುಗೆ ಒಟ್ಟು ಅಂಬು ಎಂಬ ಹೆಸರುಪದಕ್ಕೂ ಮರುೞ್ಚು ಎಂಬ ಎಸಕಪದಕ್ಕೂ ನಡುವಿರುವ ಪತ್ತುಗೆಯನ್ನು ‘ಮರುಳುಗೊಳಿಸುವ ಎಸಕಕ್ಕೆ ಅಂಬು ಒಂದು ಮುಟ್ಟು(ಕರಣ)ವಾಗಿದೆ’ ಎಂಬುದಾಗಿ ತಿಳಿಸುತ್ತದೆ).

ಎಣಿಕೆ ಮತ್ತು ಪತ್ತುಗೆಗಳನ್ನು ತಿಳಿಸುವಲ್ಲಿ ಸಂಸ್ಕ್ರುತ ಹಳೆಗನ್ನಡಕ್ಕಿಂತ ಒಂದು ಮುಕ್ಯ ವಿಶಯದಲ್ಲಿ ಬೇರಾಗಿದೆ: ಅದರ ಹೆಸರುಪದಗಳ ಬಳಿಕ ಅವುಗಳ ಎಣಿಕೆ ಮತ್ತು ಪತ್ತುಗೆಗಳನ್ನು ತಿಳಿಸಲು ಒಂದೇ ಒಟ್ಟನ್ನು ಬಳಸಲಾಗುತ್ತದೆ; ನದೀಭಿಃ ಎಂಬ ಪದರೂಪದಲ್ಲಿ ನದೀ ಎಂಬುದು ಹೆಸರುಪದ; ಅದರ ಬಳಿಕ ಭಿಃ ಎಂಬ ಒಂದು ಒಟ್ಟು ಮಾತ್ರ ಬಂದಿದ್ದು, ಅದು ಪತ್ತುಗೆ (ತ್ರುತೀಯಾ) ಮತ್ತು ಎಣಿಕೆ(ಬಹುವಚನ)ಗಳೆರಡನ್ನೂ ಒಟ್ಟಾಗಿ ತಿಳಿಸುತ್ತದೆ; ನದೀಷು ಎಂಬ ಇನ್ನೊಂದು ಪದರೂಪದಲ್ಲಿ ಷು ಎಂಬ ಬೇರೊಂದು ಒಟ್ಟನ್ನು ಬಳಸಲಾಗಿದ್ದು, ಅದು ಸಪ್ತಮೀ ವಿಬಕ್ತಿ ಮತ್ತು ಬಹುವಚನಗಳೆರಡನ್ನೂ ಒಟ್ಟಾಗಿ ತಿಳಿಸುತ್ತದೆ. ಹಳೆಗನ್ನಡದ ಹಾಗೆ ಇಲ್ಲಿ ಎಣಿಕೆ ಮತ್ತು ಪತ್ತುಗೆಗಳನ್ನು ಬೇರ‍್ಪಡಿಸಿ ಎರಡು ಒಟ್ಟುಗಳಾಗಿ ತೋರಿಸಲು ಬರುವುದಿಲ್ಲ.

ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸದಿಂದಾಗಿ ಅವುಗಳ ನಡುವೆ ಬೇರೆಯೂ ಹಲವು ವ್ಯತ್ಯಾಸಗಳು ಮೂಡಿಬಂದಿವೆ:

(ಕ) ಹಳೆಗನ್ನಡದಲ್ಲಿ ಹೆಸರುಪದಗಳಿಗೂ ಎಸಕಪದಕ್ಕೂ ನಡುವಿರುವ ಸಂಬಂದ ಎಂತಹದು ಎಂಬುದು ಗೊತ್ತಾಗದಿರುವಲ್ಲಿ ಮಾತ್ರ ಪತ್ತುಗೆ ಒಟ್ಟನ್ನು ಬಳಸಿದರೆ ಸಾಕು; ಉಳಿದೆಡೆಗಳಲ್ಲಿ ಅದನ್ನು ಬಳಸದಿರಲು ಬರುತ್ತದೆ.

ಎತ್ತುಗೆಗಾಗಿ, ಎಸಕದ ಮಾಡುಗನನ್ನು ತಿಳಿಸುವ ಹೆಸರುಪದದೊಂದಿಗೆ ಯಾವ ಪತ್ತುಗೆ ಒಟ್ಟನ್ನೂ ಬಳಸಬೇಕಾಗಿಲ್ಲ; ಯಾಕೆಂದರೆ, ಎಸಕದ ಈಡು, ಜಾಗ, ಗುರಿ ಮೊದಲಾದ ಉಳಿದ ಪಾಂಗುಗಳನ್ನು ತಿಳಿಸಲು ಅಂ, ಒಳ್, ಗೆ ಮೊದಲಾದ ಪತ್ತುಗೆ ಒಟ್ಟುಗಳು ಬಳಕೆಯಲ್ಲಿದ್ದು, ಅವುಗಳಲ್ಲಿ ಒಂದೂ ಬಾರದಿರುವಲ್ಲಿ ಮಾಡುಗನನ್ನೇ ತಿಳಿಸಲಾಗಿದೆ ಎಂಬುದು ಗೊತ್ತಾಗುತ್ತದೆ.

(ಚ) ಹಳೆಗನ್ನಡದಲ್ಲಿ ‘ಒಂದಕ್ಕಿಂತ ಹೆಚ್ಚು’ ಎಂಬುದನ್ನು ತಿಳಿಸಬೇಕಾಗಿರುವಲ್ಲಿ ಮಾತ್ರ ಹಲವೆಣಿಕೆಯ ಗಳು ಇಲ್ಲವೇ ರು ಒಟ್ಟನ್ನು ಬಳಸಿದರೆ ಸಾಕು; ‘ಒಂದು’ ಎಂಬ ಹುರುಳು ಬರುವಲ್ಲಿ, ಇಲ್ಲವೇ ಎಣಿಕೆಯನ್ನು ಕಚಿತವಾಗಿ ತಿಳಿಸಬೇಕೆಂದಿಲ್ಲದಲ್ಲಿ ಎಣಿಕೆಯ ಒಟ್ಟನ್ನು ಬಳಸಬೇಕಾಗಿಲ್ಲ.

ಸಂಸ್ಕ್ರುತದಲ್ಲಿ ಎಣಿಕೆ ಮತ್ತು ಪತ್ತುಗೆಗಳನ್ನು ಒಂದೇ ಒಟ್ಟು ತಿಳಿಸುವ ಕಾರಣ, ಪತ್ತುಗೆಯನ್ನು ತಿಳಿಸಬೇಕಾಗಿಲ್ಲದಲ್ಲೂ ಎಣಿಕೆಯನ್ನು ತಿಳಿಸುವುದಕ್ಕಾಗಿ, ಮತ್ತು ಎಣಿಕೆಯನ್ನು ತಿಳಿಸಬೇಕಾಗಿಲ್ಲದಲ್ಲೂ ಪತ್ತುಗೆಯನ್ನು ತಿಳಿಸುವುದಕ್ಕಾಗಿ ಎಣಿಕೆ-ಪತ್ತುಗೆ ಒಟ್ಟನ್ನು ಬಳಸಬೇಕಾಗುತ್ತದೆ. ಹಾಗಾಗಿ, ಹೆಸರುಪದಗಳ ಎಲ್ಲಾ ಬಳಕೆಗಳಲ್ಲೂ ಅವುಗಳೊಂದಿಗೆ 21 ಎಣಿಕೆ-ಪತ್ತುಗೆ ಒಟ್ಟುಗಳಲ್ಲಿ ಒಂದನ್ನು ಬಳಸಲೇಬೇಕಾಗುತ್ತದೆ.

ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಶಬ್ದಮಣಿದರ‍್ಪಣ ಗಮನಿಸಿಲ್ಲ; ಪತ್ತುಗೆ (ವಿಬಕ್ತಿ) ಒಟ್ಟುಗಳ ಬಳಕೆ ಹಳೆಗನ್ನಡದಲ್ಲೂ ಸಂಸ್ಕ್ರುತದಲ್ಲಿರುವ ಹಾಗೆಯೇ ಇರಬಹುದು ಇಲ್ಲವೇ ಇರಬೇಕು ಎಂಬ ಅನಿಸಿಕೆಯ ಮೇಲೆ ಅದು ಹಳೆಗನ್ನಡದ ಮೇಲೆ ಕಟ್ಟಲೆಗಳನ್ನು ಹೇರುತ್ತದೆ. ಎತ್ತುಗೆಗಾಗಿ, ಹೆಸರುಪದಗಳ ಬಳಿಕ ಬರುವ ಎಣಿಕೆ ಒಟ್ಟು ಮತ್ತು ಪತ್ತುಗೆ ಒಟ್ಟು ಎಂಬ ಎರಡು ಒಟ್ಟುಗಳಲ್ಲಿ ಪತ್ತುಗೆ ಒಟ್ಟನ್ನು ಮಾತ್ರ ಪ್ರತ್ಯಯವೆಂದು ಕರೆದು, ಎಣಿಕೆ ಒಟ್ಟನ್ನು ಅದರ ಮೊದಲು ಬರುವ ‘ಆಗಮ’ವೆಂದು ಕರೆಯಲಾಗಿದೆ.

ಸಂಸ್ಕ್ರುತದಲ್ಲಿರುವ ಹಾಗೆ, ಹಳೆಗನ್ನಡದಲ್ಲೂ ಅದು ಮೊದಲನೆಯ (ಪ್ರತಮಾ) ವಿಬಕ್ತಿಯನ್ನು ಕಾಣಲು ಪ್ರಯತ್ನಿಸುತ್ತದೆ; ಎತ್ತುಗೆಗಾಗಿ, ಅರಸಂ ಎಂಬುದರ ಕೊನೆಯಲ್ಲಿ ಬರುವ o ಇಲ್ಲವೇ ಮ್ ಎಂಬುದನ್ನು ಮೊದಲನೆಯ ವಿಬಕ್ತಿಯ ಒಟ್ಟು ಎಂಬುದಾಗಿ ಹೇಳಲಾಗಿದೆ; ಆದರೆ, ಈ o ಎಂಬುದು ಅರಸಂಗೆ ಎಂಬ ಬೇರೊಂದು (ಚತುರ‍್ತೀ) ವಿಬಕ್ತಿಯ ರೂಪದಲ್ಲೂ ಬರುವುದು, ಪುಲ್, ಬಳ್ಳಿ, ಎರಲೆ ಮೊದಲಾದ ಅಕಾರವನ್ನು ಹೊರತುಪಡಿಸಿ ಬೇರೆ ತೆರೆಯುಲಿ(ಸ್ವರ)ಗಳಲ್ಲಿ ಕೊನೆಗೊಳ್ಳುವ ಪದಗಳ ಕೊನೆಯಲ್ಲಿ ಬಾರದಿರುವುದು, ಅರಸನಿಂ, ಅರಸನೊಳ್ ಎಂಬಂತಹ ಪದರೂಪಗಳಲ್ಲಿ ನಕಾರವಾಗಿ ಬರುವುದು ಮೊದಲಾದ ಹಲವಾರು ಬಿಡಿಸಲಾರದ ಸಮಸ್ಯೆಗಳಿಗೆ ಇದು ದಾರಿಮಾಡಿದೆ.

ಎಸಕದ ಈಡನ್ನು ತಿಳಿಸುವ ಅಂ ಒಟ್ಟನ್ನೂ ಮನುಶ್ಯರನ್ನು ಗುರುತಿಸುವ ಹೆಸರುಪದಗಳನ್ನು ಹೊರತುಪಡಿಸಿ ಬೇರೆ ಹೆಸರುಪದಗಳ ಬಳಿಕ ಹಳೆಗನ್ನಡದಲ್ಲಿ ಬಳಸಲೇಬೇಕೆಂದಿಲ್ಲ (ಪಾಲಂ ಕುಡಿದಂ, ಪಾಲ್ಕುಡಿದಂ; ಬಳೆಯಂ ತೊಟ್ಟಂ, ಬಳೆದೊಟ್ಟಂ); ಇಂತಹ ಸೊಲ್ಲುಗಳಲ್ಲಿ ಕುಡಿದುದು ಹಾಲನ್ನು, ಮತ್ತು ತೊಟ್ಟುದು ಬಳೆಯನ್ನು ಎಂಬ ಹುರುಳು ಅಂ ಒಟ್ಟನ್ನು ಬಳಸದಿದ್ದರೂ ಗೊತ್ತಾಗುತ್ತದೆ ಎಂಬುದೇ ಆ ರೀತಿ ಅದನ್ನು ಬಳಸದಿರುವುದಕ್ಕೆ ಕಾರಣ. ಇದನ್ನು ಗಮನಿಸದ ಶಬ್ದಮಣಿದರ‍್ಪಣ ಇಂತಹ ಕಡೆಗಳಲ್ಲಿ ಕ್ರಿಯಾಸಮಾಸ ಎಂಬ ಬೇರೊಂದು ಬಗೆಯ ಸಮಾಸವಾಗಿದೆ ಎಂಬ ವಿಚಿತ್ರವಾದ ಹೇಳಿಕೆಯನ್ನು ಕೊಡುತ್ತದೆ. ಈ ಹೇಳಿಕೆ ಅದಕ್ಕಿಂತ ಮೊದಲು ಕೊಟ್ಟಿರುವ ಸಮಾಸದ ವರ‍್ಣನೆಗೂ (ನಾಮಪದಂಗಳ್ ಅರ‍್ತದೊಳ್ ಅನುಗತಮಾಗೆ ಸಮಾಸಂ ಗಟಿಸುಗುಂ ಎಂಬುದಕ್ಕೂ) ಹೊರಪಡಿಕೆಯಾಗುತ್ತದೆ; ಯಾಕೆಂದರೆ, ಬಳೆದೊಟ್ಟಂ ಎಂಬುದರಲ್ಲಿ ಬಂದಿರುವ ಎರಡನೆಯ ಪದ (ತೊಟ್ಟಂ ಎಂಬುದು) ನಾಮಪದವಲ್ಲ.

ಇಂತಹ ಬೇರೆಯೂ ಹಲವು ಸಮಸ್ಯೆಗಳು ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದುದರಿಂದಾಗಿ ಶಬ್ದಮಣಿದರ‍್ಪಣದಲ್ಲಿ ತುಂಬಿಕೊಂಡಿವೆ.

facebooktwitter

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 3

shabdamanidarpana

(3) ಜೋಡುಪದಗಳು ಮತ್ತು ಪದಕಂತೆಗಳು:

ಹಳೆಗನ್ನಡದಲ್ಲಿ ಜೋಡುಪದಗಳಿಗೂ ಪದಕಂತೆಗಳಿಗೂ ನಡುವೆ ವ್ಯತ್ಯಾಸವಿದೆ; ಎರಡು ಪದಗಳು ಸೇರಿ ಹೊಸದೊಂದು ಪದವಾಗಿದೆಯಾದರೆ ಅದನ್ನೊಂದು ಜೋಡುಪದವೆಂದು ಕರೆಯಬಹುದು. ಎತ್ತುಗೆಗಾಗಿ, ಬೆಳ್ ಮತ್ತು ತಿಂಗಳ್ ಎಂಬ ಎರಡು ಪದಗಳನ್ನು ಸೇರಿಸಿ ಉಂಟುಮಾಡಿರುವ ಬೆಳ್ದಿಂಗಳ್ ಎಂಬುದು ಒಂದು ಹೊಸಪದ; ಅದು ತಿಂಗಳ ಬೆಳಕನ್ನು ತಿಳಿಸುತ್ತದಲ್ಲದೆ, ಬಿಳಿಯಾದ ತಿಂಗಳನ್ನು ತಿಳಿಸುವುದಿಲ್ಲ. ಹಾಗಾಗಿ, ಅದನ್ನೊಂದು ಜೋಡುಪದವೆಂದು ಕರೆಯಲು ಬರುತ್ತದೆ. ಆದರೆ, ಬೆಳ್ ಮತ್ತು ಮುಗಿಲ್ ಎಂಬ ಎರಡು ಪದಗಳನ್ನು ಸೇರಿಸಿ ಉಂಟುಮಾಡಿರುವ ಬೆಳ್ಮುಗಿಲ್ ಎಂಬುದು ಒಂದು ಹೆಸರುಕಂತೆಯಲ್ಲದೆ ಹೊಸಪದವಲ್ಲ; ಯಾಕೆಂದರೆ, ಅದು ಮುಗಿಲು ಎಂತಹದು ಎಂಬುದನ್ನಶ್ಟೇ ತಿಳಿಸುತ್ತದೆ.

ಇಂತಹ ಜೋಡುಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ವೇದಕಾಲದ ಸಂಸ್ಕ್ರುತದಲ್ಲಿತ್ತು; ಆದರೆ, ಕಾವ್ಯ-ಶಾಸ್ತ್ರಗಳ ಕಾಲದ ಸಂಸ್ಕ್ರುತದಲ್ಲಿ ಅದು ಹೆಚ್ಚುಕಡಿಮೆ ಅಳಿದುಹೋಗಿದೆ; ಆ ಸಮಯಕ್ಕಾಗುವಾಗ, ಬರಹದ ಸಂಸ್ಕ್ರುತಕ್ಕೂ ಆಡುನುಡಿಗಳಿಗೂ ನಡುವಿರುವ ಹೊಂದಾಣಿಕೆ ಹೆಚ್ಚುಕಡಿಮೆ ಇಲ್ಲವಾದುದೇ ಇದಕ್ಕೆ ಕಾರಣವಿರಬೇಕು; ಅಂತಹ ಹೊಂದಾಣಿಕೆಯಿದ್ದಲ್ಲಿ ಮಾತ್ರ ಒಂದು ಬರಹ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳಬಲ್ಲುದು. ಜೋಡುಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ಇಲ್ಲವಾದುದರಿಂದಾಗಿ ಕಾವ್ಯಗಳ ಕಾಲದ ಸಂಸ್ಕ್ರುತದಲ್ಲಿ ಎರಡು ಇಲ್ಲವೇ ಹೆಚ್ಚು ಪದಗಳು ಒಟ್ಟಿಗೆ ಸೇರಿಕೊಂಡಿರುವಲ್ಲೆಲ್ಲ ಸಮಾಸ ನಡೆದಿದೆಯೆಂದು ಹೇಳಬೇಕಾಗುತ್ತದೆ.

ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವಿರುವ ಈ ವ್ಯತ್ಯಾಸವನ್ನು ಗಮನಿಸದ ಶಬ್ದಮಣಿದರ‍್ಪಣ ಹಳೆಗನ್ನಡದಲ್ಲಿ ಎರಡು ಪದಗಳು ಒಟ್ಟಿಗೆ ಸೇರಿರುವಲ್ಲೆಲ್ಲ ಸಮಾಸವನ್ನು ಕಾಣಲು ಹೊರಟಿದೆ. ಎಳಗೊಂಬು, ಪೇರಾನೆ, ಪೊಸನೆತ್ತರ್, ನಿಡುಗಣ್ ಮೊದಲಾದುವು ಹಳೆಗನ್ನಡದಲ್ಲಿ ನಿಜಕ್ಕೂ ಪದಕಂತೆಗಳಲ್ಲದೆ ಜೋಡುಪದಗಳಲ್ಲ. ಇದಲ್ಲದೆ, ಹಳೆಗನ್ನಡದಲ್ಲಿ ಪೊಸ, ಕಿಱಿ, ಬೆಳ್, ನಿಡು ಮೊದಲಾದವುಗಳೇ ಪರಿಚೆಪದಗಳ ಮೂಲರೂಪಗಳು; ಪೊಸತು, ಕಿಱಿಯರ್, ಕಿಱಿದು ಮೊದಲಾದುವು ಅವುಗಳ ಹೆಸರುರೂಪಗಳು. ಇವುಗಳಲ್ಲಿ ಹೆಸರುರೂಪಗಳೇ ಮೂಲರೂಪಗಳೆಂದೂ, ಪರಿಚೆರೂಪಗಳು ಸಮಾಸದಲ್ಲಿ ಬಳಕೆಯಾಗುವ ಅವುಗಳ ಅಡಕರೂಪಗಳೆಂದೂ ಹೇಳುವುದೆಂದರೆ ಹಳೆಗನ್ನಡದ ವ್ಯಾಕರಣವನ್ನು ತಿರುಚಿ ಹೇಳಿದಂತೆ.

(4) ಗುರ‍್ತಗಳ ನಡುವಿನ ವ್ಯತ್ಯಾಸ:

ಹೆಸರುಪದಗಳನ್ನು ಅವುಗಳ ಬಳಕೆಗೆ ಸಂಬಂದಿಸಿದಂತೆ ಕೆಲವು ಮುಕ್ಯ ಗುಂಪುಗಳಲ್ಲಿ ವಿಂಗಡಿಸಲು ಬರುತ್ತದೆ; ಈ ವಿಂಗಡಣೆಯನ್ನು ಸಂಸ್ಕ್ರುತದಲ್ಲಿ ಲಿಂಗ ಎಂಬುದಾಗಿ ಕರೆಯಲಾಗುತ್ತದೆ; ಇದನ್ನು ಕನ್ನಡದಲ್ಲಿ ಗುರ‍್ತ ಎಂಬುದಾಗಿ ಕರೆಯಬಹುದು. ಈ ವಿಂಗಡಣೆಯ ವಿಶಯದಲ್ಲಿ ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವೆ ತಳಮಟ್ಟದ ವ್ಯತ್ಯಾಸಗಳಿವೆ:

ಹಳೆಗನ್ನಡದಲ್ಲಿ ಹೆಸರುಪದಗಳನ್ನು ಮೂರು ಗುರ‍್ತಗಳಲ್ಲಿ ವಿಂಗಡಿಸಲು ಬರುತ್ತದೆ: ಮನುಶ್ಯರನ್ನು ಗುರುತಿಸುವ ಹೆಸರುಪದಗಳು ಗಂಡಸರನ್ನು ಗುರುತಿಸುವುದಿದ್ದಲ್ಲಿ ಅವನ್ನು ಗಂಡುಗುರ‍್ತ(ಪುಲ್ಲಿಂಗ)ವೆಂಬ ಗುಂಪಿನಲ್ಲಿ ಗುಂಪಿಸಬಹುದು, ಮತ್ತು ಹೆಂಗಸರನ್ನು ಗುರುತಿಸುವುದಿದ್ದಲ್ಲಿ ಅವನ್ನು ಹೆಣ್ಣುಗುರ‍್ತ(ಸ್ತ್ರೀಲಿಂಗ)ವೆಂಬ ಗುಂಪಿನಲ್ಲಿ ಗುಂಪಿಸಬಹುದು; ಉಳಿದ ಎಲ್ಲಾ ಹೆಸರುಪದಗಳನ್ನೂ ಉಳಿಕೆಗುರ‍್ತ(ನಪುಂಸಕಲಿಂಗ)ವೆಂಬ ಮೂರನೆಯ ಗುಂಪಿನಲ್ಲಿ ಗುಂಪಿಸಬಹುದು. ಈ ರೀತಿ ಹಳೆಗನ್ನಡದಲ್ಲಿ ಪದಗಳ ಗುಂಪಿಸುವಿಕೆ (ಎಂದರೆ ಅವುಗಳ ಲಿಂಗಬೇದ) ಅವುಗಳ ಹುರುಳನ್ನು ಮಾತ್ರ ಅವಲಂಬಿಸಿರುತ್ತದೆ.

ಕೆಲವೊಮ್ಮೆ ಮನುಶ್ಯರಲ್ಲದವರನ್ನು ಸೂಚಿಸುವ ಪದಗಳ ಮೇಲೆ ಮನುಶ್ಯತನವನ್ನು ಹೊರಿಸಲಾಗುತ್ತದೆ (ರವಿ ಮೂಡಿದಂ, ಸಿರಿಯೊಲ್ವಳು), ಮತ್ತು ಮನುಶ್ಯರನ್ನು ಸೂಚಿಸುವ ಪದಗಳ ಮೇಲೂ ಪ್ರಾಣಿತನವನ್ನು ಹೊರಿಸಲಾಗುತ್ತದೆ (ಪೆಣ್ ಬಂದುದು); ಆದರೆ, ಇಂತಹ ಕಡೆಗಳಲ್ಲೂ ಪದಗಳಿಗೆ ಕೊಟ್ಟಿರುವ ಹುರುಳೇ ಅವುಗಳ ಗುರ‍್ತ ಎಂತಹದು ಎಂಬುದನ್ನು ತಿಳಿಸುತ್ತದೆ.

ಸಂಸ್ಕ್ರುತದಲ್ಲಿಯೂ ಹೆಸರುಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ಮತ್ತು ನಪುಂಸಕಲಿಂಗ ಎಂಬ ಮೂರು ಗುರ‍್ತಗಳಲ್ಲಿ ಗುಂಪಿಸಲಾಗುತ್ತದೆ; ಆದರೆ, ಇದು ಹಳೆಗನ್ನಡದ ಹಾಗೆ ಪದಗಳ ಹುರುಳನ್ನು ಅವಲಂಬಿಸಿಲ್ಲ; ‘ಹೆಂಡತಿ’ ಎಂಬ ಒಂದೇ ಹುರುಳಿರುವ ದಾರ ಪದ ಪುಲ್ಲಿಂಗ, ಪತ್ನಿ ಪದ ಸ್ತ್ರೀಲಿಂಗ, ಮತ್ತು ಕಲತ್ರ ಪದ ನಪುಂಸಕಲಿಂಗ. ಮನುಶ್ಯರಲ್ಲದವನ್ನು ಗುರುತಿಸುವ ಪದಗಳೂ ಈ ಮೂರು ಗುರ‍್ತಗಳಲ್ಲಿ ಬರಬಲ್ಲುವು (ಪವನ, ಪಾದ, ವಾಯು ಮೊದಲಾದವು ಪುಲ್ಲಿಂಗ; ನೌ, ನದಿ, ವಿಭಕ್ತಿ, ಮತಿ ಮೊದಲಾದವು ಸ್ತ್ರೀಲಿಂಗ; ಮತ್ತು ಹೃದಯ, ಮಧು, ಜಗತ್ ಮೊದಲಾದವು ನಪುಂಸಕಲಿಂಗ).

ಇದಲ್ಲದೆ, ಸಂಸ್ಕ್ರುತದ ಕೆಲವು ಹೆಸರುಪದಗಳು ಯಾವಾಗಲೂ ಒಂದೇ ಗುರ‍್ತದಲ್ಲಿ ಬಳಕೆಯಾಗುತ್ತವೆಯಾದರೆ, ಇನ್ನು ಕೆಲವು ಅವುಗಳೊಂದಿಗೆ ಬರುವ ಬೇರೆ ಹೆಸರುಪದಗಳ ಗುರ‍್ತವನ್ನವಲಂಬಿಸಿ ಎರಡು ಇಲ್ಲವೇ ಮೂರು ಗುರ‍್ತಗಳಲ್ಲೂ ಬರಬಲ್ಲುವು. ಈ ರೀತಿ ಒಂದಕ್ಕಿಂತ ಹೆಚ್ಚು ಗುರ‍್ತಗಳಲ್ಲಿ ಬರಬಲ್ಲ ಹೆಸರುಪದಗಳು ಒಂದೇ ಗುರ‍್ತದಲ್ಲಿ ಬರಬಲ್ಲ ಹೆಸರುಪದಗಳೊಂದಿಗೆ ಯಾವ ಗುರ‍್ತರೂಪದಲ್ಲಿ ಬರುತ್ತವೆ ಎಂಬುದರ ಮೇಲೆ ಒಂದೇ ರೂಪದಲ್ಲಿ ಬರುವ ಹೆಸರುಪದಗಳ ಗುರ‍್ತ ಯಾವುದು ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ಶುಕ್ಲ ಪದ ವರ‍್ಣ ಪದದೊಂದಿಗೆ ಪುಲ್ಲಿಂಗ ರೂಪದಲ್ಲಿ (ಶುಕ್ಲಃ ವರ‍್ಣಃ), ನೌ ಪದದೊಂದಿಗೆ ಸ್ತ್ರೀಲಿಂಗದಲ್ಲಿ (ಶುಕ್ಲಾ ನೌಃ), ಮತ್ತು ವಾಸಃ ಪದದೊಂದಿಗೆ ನಪುಂಸಕಲಿಂಗದಲ್ಲಿ (ಶುಕ್ಲಂ ವಾಸಃ) ಬರುವುದರಿಂದ ವರ‍್ಣ, ನೌ, ಮತ್ತು ವಾಸ ಪದಗಳ ಗುರ‍್ತ ಪುಂ, ಸ್ತ್ರೀ ಮತ್ತು ನಪುಂಸಕ ಎಂದು ಹೇಳಬೇಕಾಗುತ್ತದೆ.

ಸಂಸ್ಕ್ರುತದಲ್ಲಿ ಹೆಸರುಪದಗಳ ಗುರ‍್ತಗಳ ಕುರಿತಾಗಿರುವ ಕಟ್ಟಲೆಗಳು ಈ ರೀತಿ ತುಂಬಾ ಸಿಕ್ಕಲು ಸಿಕ್ಕಲಾಗಿವೆಯಾದ ಕಾರಣ, ಅದರ ಪದಕೋಶಗಳಲ್ಲಿ ಪ್ರತಿಯೊಂದು ಹೆಸರುಪದದ ಎದುರೂ ಅದು ಯಾವ ಗುರ‍್ತದಲ್ಲಿ ಇಲ್ಲವೇ ಗುರ‍್ತಗಳಲ್ಲಿ ಬರಬಲ್ಲುದು ಎಂಬುದನ್ನು ತಿಳಿಸಬೇಕಾಗುತ್ತದೆ; ಇದಕ್ಕೆ ಬದಲು, ಹಳೆಗನ್ನಡದಲ್ಲಿ ಹೆಸರುಪದಗಳ ಗುರ‍್ತ ಅವುಗಳ ಹುರುಳನ್ನವಲಂಬಿಸಿದೆಯಾದ ಕಾರಣ ಅದನ್ನು ಪದಕೋಶಗಳಲ್ಲಿ ತಿಳಿಸಬೇಕಾಗಿಲ್ಲ.

ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದೆ, ಸಂಸ್ಕ್ರುತದಂತಹದೇ ಒಂಬತ್ತು ಬಗೆಯ ಗುರ‍್ತಗಳನ್ನು ಹಳೆಗನ್ನಡದಲ್ಲೂ ಕಾಣಲು ಶಬ್ದಮಣಿದರ‍್ಪಣ ಪ್ರಯತ್ನಿಸುತ್ತದೆ; ಆದರೆ, ಹಾಗೆ ಕಾಣಲು ಬರುವುದಿಲ್ಲವಾದ ಕಾರಣ, ಈ ವಿಶಯದಲ್ಲಿ ಶಬ್ದಮಣಿದರ‍್ಪಣ ಗೊಂದಲದ ಗೂಡಾಗಿದೆ.

facebooktwitter

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 2

shabdamanidarpana

(2) ಎರಡು ಪದಗಳನ್ನು ಒಟ್ಟು ಸೇರಿಸಿ ಒಂದು ಹೊಸ ಪದವನ್ನು ಉಂಟುಮಾಡುವ ಬಗೆ:

ಹಳೆಗನ್ನಡದಲ್ಲಿ ಮೂರು ಬಗೆಯ ಪದಗಳನ್ನು ಹೆಸರು(ನಾಮ)ಪದಗಳೊಂದಿಗೆ ಸೇರಿಸಿ ಜೋಡುಪದ (ಸಮಾಸ) ಎಂಬ ಹೆಸರಿನ ಹೊಸ ಪದಗಳನ್ನು ಉಂಟುಮಾಡಲು ಬರುತ್ತದೆ:

(ಕ) ಹೆಸರುಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಬಹುದು (ಕಣ್+ನೀರ್ – ಕಣ್ಣೀರ್, ನಾಡು+ನುಡಿ – ನಾಣ್ಣುಡಿ, ಬಿಸಿಲ್+ಕುದುರೆ – ಬಿಸಿಲ್ಗುದುರೆ),

(ಚ) ಎಸಕಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಬಹುದು (ಸುಡು+ಕಾಡು – ಸುಡುಗಾಡು, ಬಿಡು+ಮುಡಿ – ಬಿಡುಮುಡಿ, ಅಡು+ಕಬ್ಬು – ಅಡುಗಬ್ಬು), ಮತ್ತು

(ಟ) ಪರಿಚೆಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಬಹುದು (ಬೆಳ್+ಉಳ್ಳಿ – ಬೆಳ್ಳುಳ್ಳಿ, ಕರ್+ಪೊನ್ – ಕರ‍್ಬೊನ್, ಕಿರು+ಕುಣಿಕೆ – ಕಿರುಕುಣಿಕೆ).

ಈ ಮೂರು ಬಗೆಯ ಜೋಡುಪದಗಳಲ್ಲೂ ಎರಡನೆಯ ಹೆಸರುಪದವೇ ಮುಕ್ಯ ಪದವಾಗಿರುತ್ತದೆ. ಹಾಗಾಗಿ, ಹಳೆಗನ್ನಡದ ಜೋಡುಪದಗಳನ್ನು ಅವುಗಳ ಮೊದಲನೆಯ ಪದ ಹೆಸರುಪದವಾಗಿದೆಯೇ, ಎಸಕಪದವಾಗಿದೆಯೇ, ಇಲ್ಲವೇ ಪರಿಚೆಪದವಾಗಿದೆಯೇ ಎಂಬ ವಿಶಯದ ಮೇಲೆ ಗುಂಪಿಸುವುದೇ ಸರಿಯಾದ ದಾರಿ.

ಮೊದಲನೆಯ ಪದ ಪರಿಚೆಪದವಾಗಿರುವ ಕೆಲವು ಜೋಡುಪದಗಳಲ್ಲಿ ಎರಡನೆಯ ಹೆಸರುಪದ ಮುಕ್ಯ ಪದವಾಗಿರುವ ಬದಲು, ಅದರಲ್ಲಿ ಬಂದಿರುವ ಎರಡು ಪದಗಳಿಗಿಂತಲೂ ಬೇರಾಗಿರುವ ಪದವೊಂದು ಮುಕ್ಯ ಪದವಾಗಿರಬಲ್ಲುದು; ಎತ್ತುಗೆಗಾಗಿ, ಕಿೞ್ಪೊಡೆ ಎಂಬ ಜೋಡುಪದದಲ್ಲಿ ಪೊಡೆ ಎಂಬುದು ಮುಕ್ಯ ಪದವಲ್ಲ; ಯಾಕೆಂದರೆ, ಅದು ಕೆಳಗಿನ ಪೊಡೆಯನ್ನು ತಿಳಿಸುವುದಿಲ್ಲ; ಇದಕ್ಕೆ ಬದಲು, ಅದು ಪೊಡೆಯ ಕೆಳಬಾಗವನ್ನು ತಿಳಿಸುತ್ತದೆ; ಹಾಗಾಗಿ, ಇಲ್ಲಿ ಜೋಡುಪದಗಳ ಎರಡು ಅಂಗಗಳಿಂದ ಬೇರಾಗಿರುವ ಬಾಗ ಎಂಬ ಪದವೇ ಮುಕ್ಯ ಪದ ಎನ್ನಲು ಬರುತ್ತದೆ. ಅಂಗಯ್, ಅಂಗಾಲ್, ಮುಂಗಯ್ ಮೊದಲಾದ ಬೇರೆ ಕೆಲವು ಜೋಡುಪದಗಳಿಗೂ ಇಂತಹದೇ ಹುರುಳು ಇರುವ ಹಾಗೆ ಕಾಣಿಸುತ್ತದೆ. ಆದರೆ, ಬೇರೆಲ್ಲಾ ಪರಿಚೆ+ಹೆಸರು ಪದಗಳಿರುವ ಜೋಡುಪದಗಳಲ್ಲಿ ಎರಡನೆಯ ಪದವೇ ಮುಕ್ಯ ಪದವಾಗಿರುತ್ತದೆ.

ಮೊದಲನೆಯ ಪದ ಹೆಸರುಪದವಾಗಿರುವ ಕಲ್ಲೆರ‍್ದೆ, ಕಿತ್ತಡಿ ಎಂಬಂತಹ ಬೇರೆ ಕೆಲವು ಜೋಡುಪದಗಳಲ್ಲೂ ಮುಕ್ಯಪದ ಅವುಗಳ ಎರಡು ಅಂಗಗಳಿಂತ ಬೇರಾದುದಾಗಿರುತ್ತದೆ. ಇಂತಹ ಕೆಲವು ಹೊರಪಡಿಕೆಗಳನ್ನು ಬದಿಗಿರಿಸಿದಲ್ಲಿ, ಹಳೆಗನ್ನಡದ ಎಲ್ಲಾ ಜೋಡುಪದಗಳನ್ನೂ ಮೇಲಿನ ಮೂರು ಮುಕ್ಯ ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ.

ಸಂಸ್ಕ್ರುತದಲ್ಲಿ ಜೋಡುಪದಗಳನ್ನು ಸಮಸ್ತಪದ ಇಲ್ಲವೇ ಸಮಾಸ ಎಂಬುದಾಗಿ ಕರೆಯಲಾಗುತ್ತದೆ, ಮತ್ತು ಇವೆಲ್ಲವನ್ನೂ ಒಂದು ಹೆಸರುಪದದೊಂದಿಗೆ ಇನ್ನೊಂದು ಹೆಸರುಪದವನ್ನು ಜೋಡಿಸುವ ಮೂಲಕ ಉಂಟುಮಾಡಲಾಗುತ್ತದೆ; ಹಳೆಗನ್ನಡದ ಹಾಗೆ ಎಸಕಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಿ ಜೋಡುಪದಗಳನ್ನು ಉಂಟುಮಾಡಲು ಬರುವುದಿಲ್ಲ, ಮತ್ತು ಪರಿಚೆಪದಗಳೆಂಬ ಹೆಸರುಪದಗಳಿಗಿಂತ ಬೇರಾಗಿರುವ ಪದಗಳು ಸಂಸ್ಕ್ರುತದಲ್ಲಿಲ್ಲ. ಹಾಗಾಗಿ, ಸಂಸ್ಕ್ರುತದ ಸಮಾಸಗಳನ್ನು ಗುಂಪಿಸಲು ಹಳೆಗನ್ನಡಕ್ಕಿಂತ ತೀರ ಬೇರಾಗಿರುವ ಹೊಲಬನ್ನು ಬಳಸಬೇಕಾಗುತ್ತದೆ. ಎರಡು ಹೆಸರುಪದಗಳನ್ನು ಜೋಡಿಸಿರುವಲ್ಲಿ

(ಕ) ಮೊದಲನೆಯ ಪದ ಮುಕ್ಯ ಪದವಾಗಿರಬಲ್ಲುದು (ಯಥಾಶಕ್ತಿ, ಪ್ರತಿದಿನ, ಉಪರಾಜ),

(ಚ) ಎರಡನೆಯ ಪದ ಮುಕ್ಯವಾಗಿರಬಲ್ಲುದು (ಕೃಷ್ಣಸರ‍್ಪ, ರಾಜರ‍್ಷಿ, ರಾಜೇಂದ್ರ),

(ಟ) ಎರಡು ಪದಗಳೂ ಮುಕ್ಯವಾಗಿರಬಲ್ಲುವು (ರಾಮಲಕ್ಷ್ಮಣೌ, ಮಾತಾಪಿತರೌ), ಮತ್ತು

(ತ) ಎರಡೂ ಮುಕ್ಯವಾಗಿಲ್ಲದೆ ಹೊರಗಿನದೊಂದು ಪದ ಮುಕ್ಯವಾಗಿರಬಲ್ಲುದು (ಚಕ್ರಪಾಣಿ, ದತ್ತಧನ, ಪೀತಾಂಬರ).

ಈ ವ್ಯತ್ಯಾಸದ ಮೇಲೆ, ಅದರಲ್ಲಿ ಬಳಕೆಯಾಗುವ ಜೋಡುಪದಗಳನ್ನು ಅವ್ಯಯೀಬಾವ, ತತ್ಪುರುಶ, ದ್ವಂದ್ವ, ಮತ್ತು ಬಹುವ್ರೀಹಿಗಳೆಂಬ ನಾಲ್ಕು ಗುಂಪುಗಳಲ್ಲಿ ಗುಂಪಿಸಲಾಗುತ್ತದೆ. (ಅವ್ಯಯೀಬಾವ ಸಮಾಸದಲ್ಲಿ ಮೊದಲಿಗೆ ಬರುವ ಯಥಾ, ಪ್ರತಿ, ಉಪ ಮೊದಲಾದವುಗಳನ್ನು ಅವ್ಯಯಗಳೆಂದು ಕರೆಯಲಾಗುವುದಾದರೂ, ಅವನ್ನು ಹೆಸರುಪದಗಳ ಒಂದು ಬಗೆಯೆಂದು ತಿಳಿಯಲಾಗುತ್ತದೆ).

ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವೆ ಜೋಡುಪದಗಳನ್ನು ಉಂಟುಮಾಡುವಲ್ಲಿ ಈ ರೀತಿ ತಳಮಟ್ಟದ ವ್ಯತ್ಯಾಸವಿದೆ; ಇದನ್ನು ಗಮನಿಸಲಾಗದ ಶಬ್ದಮಣಿದರ‍್ಪಣ ಸಂಸ್ಕ್ರುತದಲ್ಲಿರುವಂತಹ ಸಮಾಸಗಳನ್ನೇ ಹಳೆಗನ್ನಡದಲ್ಲೂ ಕಾಣಲು ಪ್ರಯತ್ನಿಸಿ, ತುಂಬಾ ಗೊಂದಲಗಳಿಗೊಳಗಾಗಿದೆ:

(ಕ) ಹಳೆಗನ್ನಡದ ಹೆಚ್ಚಿನ ಜೋಡುಪದಗಳಲ್ಲೂ ಎರಡನೆಯ ಪದ ಮುಕ್ಯವಾಗಿರುವುದರಿಂದ, ಅವೆಲ್ಲವನ್ನೂ ತತ್ಪುರುಶ ಎಂಬುದಾಗಿ ಕರೆಯಬೇಕಾದೀತು; ಆದರೆ, ಅಂತಹ ಹಲವು ಜೋಡುಪದಗಳಲ್ಲಿ ಮೊದಲನೆಯ ಪದ ಹೆಸರುಪದವಾಗಿರದೆ ಎಸಕಪದ ಇಲ್ಲವೇ ಪರಿಚೆಪದವಾದುದರಿಂದ, ಅವನ್ನು ತತ್ಪುರುಶ ಎನ್ನುವುದು ಹೇಗೆ? (ತತ್ಪುರುಶದಲ್ಲಿ ಎರಡು ಪದಗಳೂ ಹೆಸರುಪದಗಳಾಗಿರಬೇಕು).

(ಚ) ಎಣಿಕೆಪದಗಳೊಂದಿಗೆ ಹೆಸರುಪದಗಳನ್ನು ಬಳಸಿರುವ ಜೋಡುಪದಗಳು ಸಂಸ್ಕ್ರುತದಲ್ಲಿ ತತ್ಪುರುಶದ ಒಂದು ಅಂಗವಾಗಿದ್ದು ಅದನ್ನು ದ್ವಿಗು ಎಂದು ಕರೆಯಲಾಗಿದೆ; ಹಳೆಗನ್ನಡದಲ್ಲೂ ಇಂತಹದೇ ಜೋಡುಪದ ಬರುವುದೆಂದು ಶಬ್ದಮಣಿದರ‍್ಪಣ ಹೇಳುತ್ತದೆ; ಆದರೆ, ಹಳೆಗನ್ನಡದ ಎಣಿಕೆಪದಗಳು ಪರಿಚೆಪದಗಳ ಹಾಗೆ ಬಳಕೆಯಾಗುತ್ತವಲ್ಲದೆ ಹೆಸರುಪದಗಳ ಹಾಗೆ ಬಳಕೆಯಾಗುವುದಿಲ್ಲ.

(ಟ) ಕಿೞ್ಕೆರೆ ಎಂಬಂತಹ ಪದಗಳನ್ನು ಅವ್ಯಯೀಬಾವಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ; ಆದರೆ, ಹಳೆಗನ್ನಡದಲ್ಲಿ ಕಿೞ್ ಎಂಬುದು ಅವ್ಯಯವಲ್ಲ, ಪರಿಚೆಪದ; ಈ ಕಾರಣಕ್ಕಾಗಿ, ಬಟ್ಟಾಕಳಂಕನು ಇದನ್ನು ಅಂಶ-ಅಂಶಿ ಸಂಬಂದವಿರುವ ಅಂಶಿ ಸಮಾಸ ಎಂದು ಕರೆದಿದ್ದಾನೆ; ಕಿೞ್ಕೆರೆ ಎಂಬುದಕ್ಕೆ ‘ಕೆರೆಯ ಕೆಳ ಬಾಗ’ ಎಂಬ ಹುರುಳಿದೆಯಾದರೆ ಇದು ಸರಿ; ಆದರೆ, ಇಲ್ಲಿ ಕಿೞ್ ಮತ್ತು ಕೆರೆ ಎಂಬವೆರಡೂ ಮುಕ್ಯವಾಗಿಲ್ಲ, ಬಾಗ ಎಂಬ ಬೇರೊಂದು ಪದ ಮುಕ್ಯವಾಗಿದೆ, ಮತ್ತು ಈ ಕಾರಣಕ್ಕಾಗಿ, ಅದು ಅವ್ಯಯೀಬಾವವಾಗಲಾರದು, ಬಹುವ್ರೀಹಿಯಾಗಬೇಕು. ಇದಲ್ಲದೆ, ಕಿೞ್ಕೆರೆ ಎಂಬುದಕ್ಕೆ ‘ಕೆಳಗಿನ ಕೆರೆ’ ಎಂಬ ಹುರುಳೂ ಇದೆ, ಮತ್ತು ಈ ಹುರುಳಿನಲ್ಲಿ ಅದು ಅಂಶಿಯೂ ಆಗಲಾರದು.

(ತ) ಹಳೆಗನ್ನಡದ ಕರ‍್ಬುವಿಲ್ಲಂ, ಕಡುಚಾಗಿ, ಚಲವಾದಿ ಮೊದಲಾದ ಪದಗಳನ್ನು ಬಹುವ್ರೀಹಿಗೆ ಉದಾಹರಣೆಗಳನ್ನಾಗಿ ಕೊಡಲಾಗುತ್ತದೆ; ಆದರೆ, ಇಂತಹ ಪದಗಳಲ್ಲಿ ಎರಡು ಹೆಸರುಪದಗಳು ಮಾತ್ರವಲ್ಲದೆ ಒಂದು ಗುರ‍್ತ(ಲಿಂಗ)ದ ಒಟ್ಟೂ ಸೇರಿಕೊಂಡಿರುತ್ತದೆ (ಕರ‍್ಬು+ವಿಲ್+ಅಂ), ಮತ್ತು ಇವುಗಳಲ್ಲಿ ಬರುವ ಗುರ‍್ತದ ಒಟ್ಟು ಪತ್ತುಗೆ (ವಿಬಕ್ತಿ) ಒಟ್ಟಿನಿಂದ ಬೇರಾಗಿರುತ್ತದೆ; ಹಾಗಾಗಿ, ಸಂಸ್ಕ್ರುತದ ಪೀತಾಂಬರ (ಪೀತ+ಅಂಬರ) ಪದದ ಹಾಗೆ ಇಂತಹ ಪದಗಳಲ್ಲಿ ಹೊರಗಿನ ಒಂದು ಪದ ಮುಕ್ಯ ಎಂಬುದಾಗಿ ತೋರಿಸಿಕೊಡಲು ಬರುವುದಿಲ್ಲ.

ಬೇರೆಯೂ ಹಲವು ಬಗೆಯ ಗೊಂದಲಗಳು ಶಬ್ದಮಣಿದರ‍್ಪಣ ಕೊಡುವ ಹಳೆಗನ್ನಡ ಜೋಡುಪದಗಳ ವಿವರಣೆಯಲ್ಲಿದೆ ಎಂಬುದನ್ನು ಮುಂದೆ ನೋಡಲಿರುವೆವು.

facebooktwitter

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 1

shabdamanidarpana

ಹಳೆಗನ್ನಡದ ಮೇಲೆ ಕೇಶಿರಾಜನು 13ನೇ ಶತಮಾನದಲ್ಲಿ ಬರೆದಿದ್ದ ಶಬ್ದಮಣಿದರ‍್ಪಣವೆಂಬ ವ್ಯಾಕರಣ ಒಂದು ಒಳ್ಳೆಯ ಕನ್ನಡ ವ್ಯಾಕರಣವೆಂಬುದಾಗಿ ನಂಬಿಕೊಂಡಿರುವವರು ಇವತ್ತಿಗೂ ಹಲವು ಮಂದಿ ಇದ್ದಾರೆ. ಆದರೆ, ಈ ನಂಬಿಕೆಗೆ ಆದಾರವೇನಿಲ್ಲ.

ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳನ್ನು ಕನ್ನಡಕ್ಕೆ ಎಶ್ಟು ಸಾದ್ಯವೋ ಅಶ್ಟರ ಮಟ್ಟಿಗೆ ಅಳವಡಿಸುವಂತಹ ಒಂದು ಪ್ರಯತ್ನವನ್ನಶ್ಟೇ ಆತ ಈ ವ್ಯಾಕರಣದಲ್ಲಿ ನಡೆಸಿದ್ದ. ಕನ್ನಡ ವ್ಯಾಕರಣ, ಅದು ಹಳೆಗನ್ನಡದ್ದಿರಲಿ, ಹೊಸಗನ್ನಡದ್ದಿರಲಿ, ಸಂಸ್ಕ್ರುತ ವ್ಯಾಕರಣಕ್ಕಿಂತ ತೀರಾ ಬೇರಾದುದು; ಹಲವು ತಳಮಟ್ಟದ ವಿಶಯಗಳಲ್ಲೇನೇ ಈ ಎರಡು ವ್ಯಾಕರಣಗಳ ಕಟ್ಟಲೆಗಳ ನಡುವೆ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನೆಲ್ಲ ಗಮನಿಸಿ, ಹಳೆಗನ್ನಡಕ್ಕೆ ಅದರದೇ ಆದ ವ್ಯಾಕರಣವೊಂದನ್ನು ಬರೆದಲ್ಲಿ ಮಾತ್ರ ಅದನ್ನೊಂದು ಒಳ್ಳೆಯ ಹಳೆಗನ್ನಡ ವ್ಯಾಕರಣವೆಂದು ಕರೆಯಲು ಬರುತ್ತದೆ.

ಹಳೆಗನ್ನಡ ವ್ಯಾಕರಣಕ್ಕೂ ಸಂಸ್ಕ್ರುತ ವ್ಯಾಕರಣಕ್ಕೂ ನಡುವೆ ಇರುವ ಇಂತಹ ತಳಮಟ್ಟದ ವ್ಯತ್ಯಾಸಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಪರಿಶೀಲಿಸಲಾಗಿದೆ, ಮತ್ತು ಇವನ್ನು ಗಮನಿಸುವಲ್ಲಿ ಕೇಶಿರಾಜನ ಶಬ್ದಮಣಿದರ‍್ಪಣ ಹೇಗೆ ಸೋತುಹೋಗಿದೆ, ಮತ್ತು ಆ ರೀತಿ ಸೋತುಹೋದುದರಿಂದಾಗಿ ಅದು ಹೇಗೆ ಒಂದು ಒಳ್ಳೆಯ ಹಳೆಗನ್ನಡ ವ್ಯಾಕರಣವಾಗಲಾರದು ಎಂಬುದನ್ನು ಕೆಳಗೆ ವಿವರಿಸಲಾಗಿದೆ:

(1) ಪದಗಳ ಬಗೆಗಳು:

ಹಳೆಗನ್ನಡದಲ್ಲಿ ಮುಕ್ಯವಾಗಿ ಮೂರು ಬಗೆಯ ಪದಗಳು ಬಳಕೆಯಾಗುತ್ತವೆ; ಇವನ್ನು ಹೆಸರುಪದ (ಕೊಳ, ಬಿಲ್, ಕೋಂಟೆ, ತುಂಬಿ), ಎಸಕಪದ (ಎಱಗು, ಮೊಱೆ, ನೋಡು, ಎನ್), ಮತ್ತು ಪರಿಚೆಪದ (ಬಡ, ಚೆನ್ನ, ಎಳ, ನಲ್, ಪೊಸ) ಎಂಬುದಾಗಿ ಇವನ್ನು ಕರೆಯಬಹುದು. ಇದಕ್ಕೆ ಬದಲು, ಸಂಸ್ಕ್ರುತದಲ್ಲಿ ಹೆಸರು(ನಾಮ)ಪದ ಮತ್ತು ಎಸಕ(ಕ್ರಿಯಾ)ಪದ ಎಂಬುದಾಗಿ ಎರಡು ಬಗೆಯ ಪದಗಳು ಮಾತ್ರ ಇವೆ.

ಹಳೆಗನ್ನಡದಲ್ಲಿ ಪರಿಚೆಪದಗಳಿಗೂ ಉಳಿದ ಎರಡು ಬಗೆಯ ಪದಗಳಿಗೂ ನಡುವಿರುವ ಮುಕ್ಯವಾದ ವ್ಯತ್ಯಾಸವೇನೆಂದರೆ, ಪರಿಚೆಪದಗಳನ್ನು ನೇರವಾಗಿ ಹೆಸರುಪದಗಳೊಂದಿಗೆ ಅವುಗಳ ವಿಶೇಶಣಗಳಾಗಿ ಬಳಸಲು ಬರುತ್ತದೆ (ಬಡ ಪಾರ‍್ವಂ, ನಲ್ಲಂಬು, ಬೆಳ್ಮುಗಿಲ್); ಆದರೆ, ಹೆಸರುಪದ ಇಲ್ಲವೇ ಎಸಕಪದಗಳನ್ನು ಆ ರೀತಿ ನೇರವಾಗಿ ಹೆಸರುಪದಗಳೊಂದಿಗೆ ಅವುಗಳ ವಿಶೇಶಣಗಳಾಗಿ ಬಳಸಲು ಬರುವುದಿಲ್ಲ; ಇದಕ್ಕಾಗಿ ಅವಕ್ಕೆ ಪತ್ತುಗೆಯ ಅ ಒಟ್ಟನ್ನು (ಪ್ರತ್ಯಯವನ್ನು) ಸೇರಿಸಬೇಕಾಗುತ್ತದೆ (ಕೊಳನ ತಡಿ, ಬಿಲ್ಲ ಗೊಲೆ, ತುಂಬಿಯ ಬಂಬಲ್ಗಳ್; ಎಱಗಿದ ತರುಗಳ್, ಮೊರೆವ ತುಂಬಿಗಳ್, ಅಱಿಯದ ಮಾತು). ಇದಲ್ಲದೆ, ಪರಿಚೆಪದಗಳನ್ನು ಹೆಸರುಪದಗಳ ಜಾಗದಲ್ಲಿ ಬಳಸಬೇಕಿದ್ದರೆ ಅವಕ್ಕೆ ಒಟ್ಟುಗಳನ್ನು ಸೇರಿಸಿ ಹೆಸರುಪದವನ್ನಾಗಿ ಮಾರ‍್ಪಡಿಸಬೇಕಾಗುತ್ತದೆ (ಬಡವನ್ ವೇಡಿದನ್, ಇನಿಯಳ್ಗೆ ಅರಿಪಿದೊಡೆ, ಪೊಸತಂ ಮಾಡಿದುದು). ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ಹೆಸರುಪದ ಮತ್ತು ಎಸಕಪದಗಳಿಗೂ ಪರಿಚೆಪದಗಳಿಗೂ ನಡುವೆ ಹಳೆಗನ್ನಡದಲ್ಲಿವೆ.

ಸಂಸ್ಕ್ರುತದಲ್ಲಿ ಪರಿಚೆಪದಗಳೆಂಬ ಮೂರನೇ ಬಗೆಯ ಪದಗಳಿಲ್ಲ; ಹಳೆಗನ್ನಡದಲ್ಲಿ ಪರಿಚೆ ಪದಗಳು ಎಂತಹ ಕೆಲಸವನ್ನು ನಡೆಸಬೇಕಾಗಿದೆಯೋ ಅವನ್ನು ಸಂಸ್ಕ್ರುತದಲ್ಲಿ ಹೆಸರು(ನಾಮ)ಪದಗಳೇ ನಡೆಸುತ್ತವೆ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಹೆಸರುಪದಗಳ ವಿಶೇಶಣಗಳಾಗಿ ಹೆಸರುಪದಗಳನ್ನೇ ಬಳಸಲಾಗುತ್ತದೆ, ಮತ್ತು ಈ ಕಾರಣಕ್ಕಾಗಿ ಅವಕ್ಕೂ ವಿಬಕ್ತಿಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ (ಕೃಷ್ಣಃ ಸರ್ಪಃ, ಕೃಷ್ಣಂ ಸರ್ಪಂ, ಕೃಷ್ಣೇನ ಸರ್ಪೇಣ). ಅವೆರಡನ್ನೂ ಸಮಾಸದ ಮೂಲಕ ಒಂದೇ ಪದವನ್ನಾಗಿ ಮಾಡಲಾಗಿದೆಯಾದರೆ ಮಾತ್ರ ಈ ರೀತಿ ಎರಡು ಬಾರಿ ವಿಬಕ್ತಿ ಪ್ರತ್ಯಯಗಳನ್ನು ಬಳಸಬೇಕಾಗುವುದಿಲ್ಲ.

ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸುವಲ್ಲಿ ಕೇಶಿರಾಜನ ಶಬ್ದಮಣಿದರ‍್ಪಣ ಸೋತುಹೋಗಿದೆ, ಮತ್ತು ಇದರಿಂದಾಗಿ ಅದು ಹಲವಾರು ಕಡೆಗಳಲ್ಲಿ ಗೊಂದಲಕ್ಕೊಳಗಾಗಿರುವುದನ್ನು ಕಾಣಬಹುದು.

ಎತ್ತುಗೆಗಾಗಿ, ಹಳೆಗನ್ನಡದಲ್ಲಿ ಎಸಕಪದಗಳ ಪರಿಚೆರೂಪ(ಕೃದಂತ)ಗಳಿಗೂ ಹೆಸರುರೂಪ(ಕೃಲ್ಲಿಂಗ)ಗಳಿಗೂ ನಡುವೆ ವ್ಯತ್ಯಾಸವಿದೆ; ಇರ‍್ದ, ಈಯದ ಎಂಬಂತಹವು ಪರಿಚೆರೂಪಗಳು, ಮತ್ತು ಇರ‍್ದನ್, ಇರ‍್ದರ್, ಈಯದನ್, ಈಯದುದು ಎಂಬಂತಹವು ಹೆಸರುರೂಪಗಳು. ಆದರೆ, ಸಂಸ್ಕ್ರುತದಲ್ಲಿ ಇಂತಹ ವ್ಯತ್ಯಾಸವಿಲ್ಲ. ಇದನ್ನು ಗಮನಿಸಲಾಗದ ಶಬ್ದಮಣಿದರ‍್ಪಣದಲ್ಲಿ ಕೃದಂತ ಮತ್ತು ಕೃಲ್ಲಿಂಗಗಳ ಕುರಿತಾಗಿ ಕೊಡುವ ಹೇಳಿಕೆಗಳೆಲ್ಲ ಸಿಕ್ಕಲು ಸಿಕ್ಕಲಾಗಿವೆ.

ಕೊಳನ, ಮರದ, ಅರಸಿನ ಎಂಬಂತಹವು ಹಳೆಗನ್ನಡದಲ್ಲಿ ಹೆಸರುಪದಗಳ ಪರಿಚೆರೂಪಗಳಲ್ಲದೆ ವಿಬಕ್ತಿರೂಪಗಳಲ್ಲ; ಅವು ಬೇರೆ ಪರಿಚೆಪದಗಳ ಹಾಗೆ ಗುರ‍್ತ (ಲಿಂಗ) ಮತ್ತು ಎಣಿಕೆ (ವಚನ) ಒಟ್ಟುಗಳೊಂದಿಗೆ ಬಳಕೆಯಾಗಬಲ್ಲುವು (ಮನೆಯನ್ ಬಂದನ್, ರಥದನ್ ಅಶ್ವತ್ಥಾಮನ್), ಮತ್ತು ಅವುಗಳ ಹೆಸರುರೂಪಗಳ ಬಳಿಕ ಪತ್ತುಗೆ (ವಿಬಕ್ತಿ) ಒಟ್ಟುಗಳನ್ನು ಬಳಸಲು ಬರುತ್ತದೆ (ಬರ‍್ದಿನಂಗೆ ಸೆರಪು ಗೆಯ್ದರ್ – ಬರ‍್ದಿನನ್+ಗೆ). ಈ ವ್ಯತ್ಯಾಸವನ್ನು ಗಮನಿಸುವಲ್ಲಿ ಶಬ್ದಮಣಿದರ‍್ಪಣ ಸೋತುಹೋಗಿದೆ.

ಸಂಸ್ಕ್ರುತದಲ್ಲಿ ಮೃತ, ಕೃತ ಎಂಬಂತಹ ಕೃದಂತಗಳು, ಕೃಷ್ಣ, ಶ್ವೇತ ಎಂಬಂತಹ ಪರಿಚೆಯನ್ನು ತಿಳಿಸಬಲ್ಲ ಹೆಸರುಪದಗಳು, ಏಕ, ದ್ವಿ, ತ್ರಿ ಎಂಬಂತಹ ಎಣಿಕೆಪದಗಳು, ಸ, ತತ್ ಎಂಬಂತಹ ತೋರುಪದ(ಸರ‍್ವನಾಮ)ಗಳು ಇವೆಲ್ಲವೂ ಹೆಸರುಪದಗಳ ಹಾಗೆ ಬಳಕೆಯಾಗುತ್ತವೆ; ಅವನ್ನು ಇನ್ನೊಂದು ಹೆಸರುಪದದೊಂದಿಗೆ ಬಳಸಬೇಕಿದ್ದಲ್ಲಿ ಹೆಸರುಪದಗಳಿಗೆ ಮಾತ್ರವಲ್ಲದೆ ಅವಕ್ಕೂ ವಚನ-ವಿಬಕ್ತಿ ಒಟ್ಟುಗಳನ್ನು ಸೇರಿಸಬೇಕಾಗುತ್ತದೆ (ಮೃತಂ ಸರ‍್ಪಂ, ಕೃಷ್ಣಂ ಸರ‍್ಪಂ, ಏಕಂ ಸರ‍್ಪಂ, ತಂ ಸರ‍್ಪಂ); ಹಾಗಾಗಿ, ಹೆಸರುಪದಗಳೊಂದಿಗೆ ಅವನ್ನು ವಚನ-ವಿಬಕ್ತಿ ಒಟ್ಟುಗಳಿಲ್ಲದೆ ಬಳಸಿದಾಗ (ಮೃತಸರ‍್ಪಂ, ಕೃಷ್ಣಸರ‍್ಪಂ, ಏಕಸರ‍್ಪಂ) ಅಂತಹ ಬಳಕೆಗಳಲ್ಲಿ ಸಮಾಸ ನಡೆದಿದೆಯೆಂದು ಹೇಳಲು ಬರುತ್ತದೆ.

ಆದರೆ, ಹಳೆಗನ್ನಡದಲ್ಲಿ ಕೃದಂತಗಳು, ಪರಿಚೆಪದಗಳು, ಎಣಿಕೆಪದಗಳು ಇಲ್ಲವೇ ತೋರುಪದಗಳು ಹೆಸರುಪದಗಳೊಂದಿಗೆ ಬರುವಾಗ ಅವಕ್ಕೆ ವಿಬಕ್ತಿ ಒಟ್ಟುಗಳನ್ನು ಸೇರಿಸಲು ಬರುವುದಿಲ್ಲ; ಅವು ನೇರವಾಗಿ ಹೆಸರುಪದಗಳೊಂದಿಗೆ ಬರುತ್ತವೆ, ಮತ್ತು ಆ ರೀತಿ ನೇರವಾಗಿ ಬರುವವುಗಳೇ ಹಳೆಗನ್ನಡದ ಪದಕಂತೆಗಳಾಗಿರುತ್ತವೆ (ಬಂದ ಬಟ್ಟೆ, ಪೊಸ ಗೊಂಚಲು, ಓರಡಿ, ಆ ಪೂಗಳ್). ಸಂಸ್ಕ್ರುತಕ್ಕೂ ಹಳೆಗನ್ನಡಕ್ಕೂ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದೆ ಶಬ್ದಮಣಿದರ‍್ಪಣ ಈ ಎಲ್ಲಾ ಪದಕಂತೆಗಳನ್ನೂ ಸಮಾಸಗಳೆಂದು ಹೇಳುವ ಮೂಲಕ ಒಂದು ದೊಡ್ಡ ಗೊಂದಲವನ್ನೇ ಉಂಟುಮಾಡಿದೆ.

ಇಂತಹ ಬೇರೆಯೂ ಹಲವು ವಿಶಯಗಳಲ್ಲಿ ಮೇಲಿನ ಪರಿಚೆಪದ-ಹೆಸರುಪದ ವ್ಯತ್ಯಾಸವನ್ನು ಗಮನಿಸದಿರುವುದರಿಂದಾಗಿ ಶಬ್ದಮಣಿದರ‍್ಪಣ ಗೊಂದಲದ ಗೂಡಾಗಿದೆ.

facebooktwitter

ಇಂಗ್ಲಿಶ್ ನುಡಿಯ ಪರಿಚೆಪದಗಳು


ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-18

pada_kattane_sarani_dnsಇಂಗ್ಲಿಶ್ ನುಡಿಯ ಪರಿಚೆಪದಗಳು

ಮುನ್ನೋಟ

ಇಂಗ್ಲಿಶ್‌ನಲ್ಲಿ adjective ಮತ್ತು adverb ಎಂಬ ಎರಡು ಬಗೆಯ ಪರಿಚೆಪದಗಳಿವೆ; ಕನ್ನಡದಲ್ಲಿ ಇವಕ್ಕೆ ಸಾಟಿಯಾಗಬಲ್ಲ ಪದಗಳನ್ನು ಒಟ್ಟಿಗೆ ಪರಿಚೆಪದ ಎಂಬುದಾಗಿ ಕರೆಯಲಾಗಿದೆ. ಅವುಗಳ ನಡುವೆ ವ್ಯತ್ಯಾಸವನ್ನು ತೋರಿಸಬೇಕಿರುವಲ್ಲಿ ಮೊದಲನೆಯದನ್ನು ಹೆಸರುಪರಿಚೆ ಎಂದು, ಮತ್ತು ಎರಡನೆಯದನ್ನು ಎಸಕಪರಿಚೆ ಎಂದು ಕರೆಯಲಾಗುತ್ತದೆ.

ಕನ್ನಡದ ಪರಿಚೆಪದಗಳು ಇಂಗ್ಲಿಶ್‌ನ adjective ಮತ್ತು adverbಗಳ ಹಾಗೆ ಹೆಸರುಪದ (noun) ಮತ್ತು ಎಸಕಪದ(verb)ಗಳಿಗಿಂತ ಬೇರಾಗಿವೆ; ಆದರೆ, ಅವುಗಳ ಎಣಿಕೆ ಇಂಗ್ಲಿಶ್‌ನಲ್ಲಿರುವುದಕ್ಕಿಂತ ಕನ್ನಡದಲ್ಲಿ ಕಡಿಮೆ. ಕನ್ನಡದಲ್ಲಿ ಹೆಸರುಪದಗಳ ಪತ್ತುಗೆರೂಪವನ್ನು (ಮರದ wooden, ಮರುಕದ piteous) ಮತ್ತು ಎಸಕಪದಗಳ ಪರಿಚೆರೂಪಗಳನ್ನು (ಕೆಟ್ಟ bad, ತಕ್ಕ suitable, ಬಯ್ಯುವ abusive, ಕಾಣುವ visible, ಕರಗಿದ molten) ಪರಿಚೆಪದಗಳ ಜಾಗದಲ್ಲಿ ಬಳಸಲಾಗುತ್ತದೆಯೆಂಬುದು ಇದಕ್ಕೆ ಒಂದು ಕಾರಣ.

ಇಂಗ್ಲಿಶ್‌ನ ಹಲವು ಎಸಕಪರಿಚೆಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಅಣಕುಪದಗಳನ್ನು ಬಳಸಲಾಗುತ್ತದೆ (ಸರಸರನೆ hastily, ಕಚಕ್ಕನೆ forcibly) ಎಂಬುದು ಇನ್ನೊಂದು ಕಾರಣ. ಹಾಗಾಗಿ, ಇಂಗ್ಲಿಶ್ ನುಡಿಯ ಪರಿಚೆಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಹೊಸದಾಗಿ ಉಂಟುಮಾಡುವವರು ಈ ಎರಡು ವಿಶಯಗಳನ್ನು ಗಮನದಲ್ಲಿರಿಸಿಕೊಳ್ಳುವುದು ಒಳ್ಳೆಯದು.

ಇಂಗ್ಲಿಶ್ ನುಡಿಯ ಹೆಸರುಪರಿಚೆಗಳು

ಇಂಗ್ಲಿಶ್‌ನ ಹೆಸರುಪರಿಚೆಗಳಲ್ಲಿ ಒಟ್ಟುಗಳಿರುವ ಕಟ್ಟುಪದಗಳಿಗೂ ಎರಡು ಪದಗಳನ್ನು ಸೇರಿಸಿರುವ ಜೋಡುಪದಗಳಿಗೂ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಮೇಲೆ 6.3 ಮತ್ತು 8.4ರಲ್ಲಿ ವಿವರಿಸಲಾಗಿದೆ. ಈ ಎರಡು ಬಗೆಯ ಹೆಸರುಪರಿಚೆಗಳಲ್ಲದ ಬೇರೆಯೂ ಹಲವು ಹೆಸರುಪರಿಚೆಗಳು ಇಂಗ್ಲಿಶ್‌ನಲ್ಲಿವೆ. ಎತ್ತುಗೆಗಾಗಿ, pink ಎಂಬ ಹೆಸರುಪರಿಚೆ ಕಟ್ಟುಪದವೂ ಅಲ್ಲ, ಜೋಡುಪದವೂ ಅಲ್ಲ. ಇಂತಹ ಹೆಸರುಪರಿಚೆಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ.

ಕನ್ನಡದಲ್ಲಿ ಅಲು ಮತ್ತು ಕು (ಮತ್ತು ಅವೆರಡನ್ನೂ ಸೇರಿಸಿರುವ ಕಲು) ಎಂಬ ಒಟ್ಟುಗಳನ್ನು ಬಳಸಿ ಎಸಕಪದಗಳಿಂದ ಹೆಸರುಪರಿಚೆಗಳನ್ನು ಪಡೆಯಲು ಬರುತ್ತದೆ. ಇಂಗ್ಲಿಶ್‌ನ ಕೆಲವು ಹೆಸರುಪರಿಚೆಗಳಿಗೆ ಸಾಟಿಯಾಗಿ ಇಂತಹ ಹೆಸರುಪರಿಚೆಗಳನ್ನು ಕನ್ನಡದಲ್ಲಿ ಬಳಸಲು ಬರುತ್ತದೆ:

stale ಹಳಸಲು skew ತಿರುಚಲು
flabby ಸುಕ್ಕಲು morose ಸಿಡುಕಲು
trite ಸವಕಲು pallid ಬಿಳಿಚಲು

ಆದರೆ, ಈ ಒಟ್ಟುಗಳನ್ನು ಬಳಸಿರುವಲ್ಲಿ ಪದಕ್ಕೆ ಕೆಟ್ಟುಹೋದ ಎಂಬ ಹೆಚ್ಚಿನ ಹುರುಳೂ ಸೇರಿಕೊಳ್ಳುತ್ತದೆ. ಹಾಗಾಗಿ, ಅಂತಹ ಹೆಚ್ಚಿನ ಹುರುಳು ಬೇಡದಿರುವಲ್ಲಿ ಇವನ್ನು ಬಳಸಲು ಬರುವುದಿಲ್ಲ.

ಹೆಚ್ಚಿನ ಇಂಗ್ಲಿಶ್ ಹೆಸರುಪರಿಚೆಗಳಿಗೂ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವಲ್ಲಿ ಹೆಸರುಪದಗಳ ಪತ್ತುಗೆರೂಪವನ್ನು ಇಲ್ಲವೇ ಎಸಕಪದಗಳ ಪರಿಚೆರೂಪಗಳನ್ನು ಬಳಸುವುದೇ ಒಳ್ಳೆಯ ಹೊಲಬೆಂದು ತೋರುತ್ತದೆ. ಜೋಡುಪದಗಳ ಪತ್ತುಗೆರೂಪವನ್ನು ಮತ್ತು ಕೂಡುಪದಗಳ ಪರಿಚೆರೂಪಗಳನ್ನೂ ಈ ಕೆಲಸದಲ್ಲಿ ತೊಡಗಿಸಲು ಬರುತ್ತದೆ.

(1) ಪತ್ತುಗೆರೂಪದ ಬಳಕೆ:

ಹೆಸರುಪದಗಳ ಪತ್ತುಗೆರೂಪವನ್ನು ಬಳಸಿ ಹಲವು ಇಂಗ್ಲಿಶ್ ಹೆಸರುಪರಿಚೆಗಳಿಗೆ ಸಾಟಿಯಾಗುವಂತಹ ಪದಗಳನ್ನು ಪಡೆಯಲು ಬರುತ್ತದೆ:

sacred ಮದಿಪಿನ staid ನೆಮ್ಮದಿಯ
rapid ಉರುಬಿನ intrepid ಕೆಚ್ಚಿನ
florid ಬೆಡಗಿನ torrid ಕಾವರದ
fond ಮುದ್ದಿನ eerie ಗುಂಬದ

ಕೆಲವೆಡೆಗಳಲ್ಲಿ ಜೋಡುಪದಗಳ ಪತ್ತುಗೆರೂಪವನ್ನೂ ಬಳಸಲು ಬರುತ್ತದೆ:

manic ಕಡುಹುಚ್ಚಿನ kind ಕೊಡುಗಯ್ಯ
exact ಕಟ್ಟುನಿಟ್ಟಿನ ribald ಹೊಲಸುಮಾತಿನ
glum ಒಳಮುನಿಸಿನ align ಹೊರನಾಡಿನ

(2) ಪರಿಚೆರೂಪಗಳ ಬಳಕೆ:

ಎಸಕಪದಗಳಿಗೆ ಹಿಂಬೊತ್ತಿನ (ಒಡೆದ), ಮುಂಬೊತ್ತಿನ (ಒಡೆಯುವ) ಮತ್ತು ಅಲ್ಲಗಳೆಯುವ (ಒಡೆಯದ) ಎಂಬ ಮೂರು ಬಗೆಯ ಪರಿಚೆರೂಪಗಳಿದ್ದು, ಈ ಮೂರನ್ನೂ ಹೆಸರುಪರಿಚೆಗಳನ್ನು ಉಂಟುಮಾಡುವಲ್ಲಿ ಬಳಸಲು ಬರುತ್ತದೆ.

(ಕ) ಹಿಂಬೊತ್ತಿನ ಪರಿಚೆರೂಪದ ಬಳಕೆ:

rabid ಕೆರಳಿದ flaccid ಬಾಗಿದ
turgid ಬೀಗಿದ pale ಬಿಳಿಚಿದ
overt ತೆರೆದ mellow ಮಾಗಿದ
skew ತಿರುಚಿದ taut ಬಿಗಿದ
past ಕಳೆದ abstruse ಹುದುಗಿದ

(ಚ) ಮುಂಬೊತ್ತಿನ ಪರಿಚೆರೂಪದ ಬಳಕೆ:

fierce ಬೆಚ್ಚಿಸುವ lithe ಬಳುಕುವ
supple ಬಾಗುವ sad ಕೊರಗುವ
kindred ಹೋಲುವ fluid ಹರಿಯುವ
milch ಕರೆಯುವ rotary ತಿರುಗುವ
saucy ಮಲೆವ solemn ಕಡಗುವ

(ಟ) ಅಲ್ಲಗಳೆಯುವ ಪರಿಚೆರೂಪದ ಬಳಕೆ:

sound ಕೆಡದ staid ಪಸಿಯಿಸದ
intrepid ಹೆದರದ meager ಮಿಗದ
fair ತಪ್ಪದ feral ಪಳಗದ
foul ಸಯ್ಯದ firm ಅಲುಗದ
overt ಅಡಗಿಸದ steady ಅಲ್ಲಾಡದ

(ತ) ಕೂಡುಪದಗಳ ಪರಿಚೆರೂಪಗಳ ಬಳಕೆ:

ಕೂಡುಪದಗಳ ಈ ಮೂರು ಬಗೆಯ ರೂಪಗಳನ್ನೂ ಹೆಸರುಪರಿಚೆಗಳಿಗೆ ಸಾಟಿಯಾಗುವಂತೆ ಬಳಸಲು ಬರುತ್ತದೆ:

ಹಿಂಬೊತ್ತಿನ ಕೂಡುಪದಗಳು:

livid ಕನಿಪೆಕಟ್ಟಿದ genuine ನಂಬತಕ್ಕ
morbid ಕುತ್ತಹಿಡಿದ florid ಕೆಂಪಡರಿದ
hollow ಕುಳಿಬಿದ್ದ extinct ಇರವಳಿದ
passe ಬಳಕೆತಪ್ಪಿದ irate ಸಿಟ್ಟಿಗೆದ್ದ

ಮುಂಬೊತ್ತಿನ ಕೂಡುಪದಗಳು:

vivid ಎದ್ದುಕಾಣುವ kind ಮರುಕವುಳ್ಳ
finite ಹದ್ದುಳ್ಳ fickle ಮಾರ‍್ಪಡುವ

ಅಲ್ಲಗಳೆಯುವ ಕೂಡುಪದಗಳು:

safe ಗಾಸಿಗೊಳ್ಳದ fickle ನೆಲೆನಿಲ್ಲದ
placid ಅಲ್ಲಾಡದ stolid ತಲ್ಲಣಗೊಳ್ಳದ
solid ಪೊಳ್ಳಲ್ಲದ moot ತಿಳಿಯಲಾಗದ
licit ಕಟ್ಟಲೆತಪ್ಪದ frank ಮರೆಮಾಚದ

ಇಂಗ್ಲಿಶ್ ನುಡಿಯ ಎಸಕಪರಿಚೆಗಳು

ಇಂಗ್ಲಿಶ್‌ನಲ್ಲಿ ಹೆಚ್ಚಿನ ಎಸಕಪರಿಚೆ(adverb)ಗಳೂ ly ಎಂಬ ಒಟ್ಟಿನಲ್ಲಿ ಕೊನೆಗೊಳ್ಳುತ್ತಿದ್ದು, ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಪರಿಚೆಪದಗಳನ್ನು ಕಟ್ಟುವ ಬಗೆ ಹೇಗೆ ಎಂಬುದನ್ನು ಈಗಾಗಲೇ ವಿವರಿಸಲಾಗಿದೆ.

ಇಂಗ್ಲಿಶ್‌ನಲ್ಲಿ ಬೇರೆಯೂ ಹಲವು ಬಗೆಯ ಎಸಕಪರಿಚೆಗಳಿವೆ. ಆದರೆ, ಅವು ಹಲವಾರು ಗುಂಪುಗಳಲ್ಲಿ ಬರುತ್ತಿದ್ದು, ಒಂದೊಂದು ಗುಂಪಿನವಕ್ಕೂ ಸಾಟಿಯಾಗುವಂತೆ ಕನ್ನಡದಲ್ಲಿ ಬೇರೆ ಬೇರೆ ಬಗೆಯ ಪದಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ.

ಇದಲ್ಲದೆ, ಅವುಗಳ ಬಳಕೆಯೂ ಸೊಲ್ಲರಿಮೆಯ ಕಟ್ಟಲೆಗಳೊಂದಿಗೆ ಹೆಚ್ಚು ಹೆಣೆದುಕೊಂಡಿದೆ, ಮತ್ತು ಅವುಗಳಿಗೆ ಸಾಟಿಯಾಗುವಂತಹ ಕನ್ನಡ ಪದಗಳಲ್ಲಿ ಯಾವೊಂದು ಬಗೆಯ ಒಲವನ್ನೂ ಕಾಣಲು ಬರುವುದಿಲ್ಲ. ಹಾಗಾಗಿ, ಅವನ್ನು ಕಟ್ಟುವ ಕುರಿತಾಗಿ ಇಲ್ಲಿ ಹೆಚ್ಚೇನೂ ಹೇಳಿಲ್ಲ.

ತಿರುಳು

ಇಂಗ್ಲಿಶ್ ನುಡಿಯ ಹೆಸರುಪರಿಚೆಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳಿಗೆ ಅಲು ಇಲ್ಲವೇ ಕು ಒಟ್ಟನ್ನು ಸೇರಿಸಿ ಹೊಸ ಪದಗಳನ್ನು ಉಂಟುಮಾಡಲು ಬರುತ್ತದೆ; ಇದಲ್ಲದೆ, ಹೆಸರುಪದಗಳ ಪತ್ತುಗೆರೂಪವನ್ನು ಇಲ್ಲವೇ ಎಸಕಪದಗಳ ಪರಿಚೆರೂಪಗಳನ್ನೂ ಈ ಕೆಲಸಕ್ಕಾಗಿ ಬಳಸಲು ಬರುತ್ತದೆ. ಎಸಕಪರಿಚೆಗಳಿಗೆ ಸಾಟಿಯಾಗಿ ಕಟ್ಟಬಲ್ಲ ಪದಗಳ ಕುರಿತು ಇಲ್ಲಿ ಏನೂ ಹೇಳಿಲ್ಲ.

<< ಬಾಗ-17

facebooktwitter

ಇಂಗ್ಲಿಶ್ ನುಡಿಯ ಎಸಕಪದಗಳು


ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-17

pada_kattane_sarani_dnsಇಂಗ್ಲಿಶ್ ನುಡಿಯ ಎಸಕಪದಗಳು

ಮುನ್ನೋಟ
ಹಲವು ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳನ್ನೇ ಬಳಸಲು ಬರುತ್ತದೆ; come ಬರು, go ಹೋಗು, eat ತಿನ್ನು, look ನೋಡು, push ದೂಡು, flow ಹರಿ ಮೊದಲಾದ ಪದಗಳನ್ನು ಇದಕ್ಕೆ ಎತ್ತುಗೆಯಾಗಿ ಕೊಡಬಹುದು. ಆದರೆ, ಬೇರೆ ಹಲವು ಕಡೆಗಳಲ್ಲಿ ಇದಕ್ಕಾಗಿ ಒಟ್ಟನ್ನು ಸೇರಿಸಿರುವ ಕಟ್ಟುಪದಗಳನ್ನು ಇಲ್ಲವೇ ಎಸಕಪದಗಳೊಂದಿಗೆ ಹೆಸರುಪದ, ಪರಿಚೆಪದ ಇಲ್ಲವೇ ಬೇರೆ ಎಸಕಪದದ ಜೋಡಿಸುವ ರೂಪವನ್ನು ಬಳಸಿರುವ ಕೂಡುಪದಗಳನ್ನು ಬಳಸಬೇಕಾಗುತ್ತದೆ.
ಈ ಎರಡು ಬಗೆಯ ಹಮ್ಮುಗೆಗಳನ್ನು ಬಳಸಿ ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:

ಒಟ್ಟುಗಳ ಬಳಕೆ:
ಕನ್ನಡದಲ್ಲಿ ಹೊಸ ಎಸಕಪದಗಳನ್ನು ಕಟ್ಟಲು ಇಸು ಎಂಬ ಒಂದು ಒಟ್ಟನ್ನು ಮಾತ್ರ ಬಳಸಲು ಬರುತ್ತದೆ. ಇದನ್ನು ಪರಿಚೆಪದಗಳಿಗೆ, ಹೆಸರುಪದಗಳಿಗೆ, ಇಲ್ಲವೇ ನೆನಸಿನ (abstract) ಹೆಸರುಪದಗಳಿಗೆ ಸೇರಿಸಿ ಎಸಕಪದಗಳನ್ನು ಪಡೆಯಲು ಬರುತ್ತದೆ. ಕೆಲವೆಡೆಗಳಲ್ಲಿ ಇದನ್ನು ನನಸಿನ (concrete) ಹೆಸರುಪದಗಳಿಗೆ ಸೇರಿಸಿಯೂ ಎಸಕಪದಗಳನ್ನು ಪಡೆಯಲಾಗಿದೆ (ಉಗ್ರಾಣ store : ಉಗ್ರಾಣಿಸು amass). ಅರಿಮೆಯ ಬರಹಗಳಲ್ಲಿ ಇಂತಹ ನನಸಿನ ಹೆಸರುಪದಗಳಿಗೆ ಇಸು ಒಟ್ಟನ್ನು ಸೇರಿಸಿರುವ ಎಸಕಪದಗಳ ಬೇಡಿಕೆ ಹೆಚ್ಚಿದೆ.

ಕನ್ನಡದಲ್ಲಿ ಈ ಒಟ್ಟನ್ನು ಬಳಸಿ ಆಗುವಿಕೆಯನ್ನು ತಿಳಿಸುವ ಎಸಕಪದಗಳನ್ನು ಮಾಡುವಿಕೆಯನ್ನು ತಿಳಿಸುವ ಎಸಕಪದಗಳನ್ನಾಗಿ ಮಾರ‍್ಪಡಿಸಲೂ ಬರುತ್ತದೆ (ಬೀಳು : ಬೀಳಿಸು, ಅರಳು : ಅರಳಿಸು). ಇಂತಹ ಎರಡು ಎಸಕಗಳನ್ನು ತಿಳಿಸಲು ಇಂಗ್ಲಿಶ್‌ನಲ್ಲಿ ಬೇರೆ ಬೇರೆ ಎಸಕಪದಗಳಿವೆಯಾದರೆ (agree : persuade, miss : avert), ಅವುಗಳಲ್ಲಿ ಒಂದಕ್ಕೆ ಸಾಟಿಯಾಗುವಂತೆ ಕನ್ನಡದ ಒಟ್ಟಿಲ್ಲದ ಎಸಕಪದವನ್ನು, ಮತ್ತು ಇನ್ನೊಂದಕ್ಕೆ ಸಾಟಿಯಾಗುವಂತೆ ಇಸು ಒಟ್ಟನ್ನು ಸೇರಿಸಿದ ರೂಪವನ್ನು ಬಳಸಲು ಬರುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:

agree ಒಪ್ಪು persuade ಒಪ್ಪಿಸು
burn ಕತ್ತು kindle ಕತ್ತಿಸು
learn ಕಲಿ teach ಕಲಿಸು
ascend ಏರು boost ಏರಿಸು
miss ತಪ್ಪು avert ತಪ್ಪಿಸು
obtain ಗಿಟ್ಟು earn ಗಿಟ್ಟಿಸು
know ತಿಳಿ inform ತಿಳಿಸು
depart ತೊಲಗು rid ತೊಲಗಿಸು
heal ಮಾಂಜು cure ಮಾಂಜಿಸು
reach ಮುಟ್ಟು deliver ಮುಟ್ಟಿಸು
laugh ನಗು regale ನಗಿಸು
appear ತೋರು show ತೋರಿಸು

 

ಇದಲ್ಲದೆ, ಇಂಗ್ಲಿಶ್‌ನ ಬೇರೆ ಕೆಲವು ಎಸಕಪದಗಳಿಗೆ ಸಾಟಿಯಾಗುವಂತೆ ಕನ್ನಡದ ಹೆಸರುಪದಗಳಿಗೆ ಇಲ್ಲವೇ ಪರಿಚೆಪದಗಳಿಗೆ ಇಸು ಒಟ್ಟನ್ನು ಸೇರಿಸಿಯೂ ಎಸಕಪದಗಳನ್ನು ಕಟ್ಟಲು ಬರುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು:

(1) ಹೆಸರುಪದಗಳಿಗೆ ಇಸು ಒಟ್ಟನ್ನು ಸೇರಿಸಿ ಪಡೆದ ಎಸಕಪದಗಳು:

mimicry ಅಣಕ deride ಅಣಕಿಸು
deceit ಉಕ್ಕೆವ cheat ಉಕ್ಕೆವಿಸು
contempt ಕುಚ್ಚಣೆ blame ಕುಚ್ಚಣಿಸು
lesson ಕಲ್ಪಿ instruct ಕಲ್ಪಿಸು
memory ನೆನಪು remind ನೆನಪಿಸು
abode ನೆಲೆ settle ನೆಲಸು
envy ಪುರುಡು envy ಪುರುಡಿಸು
regret ಬೇಸರ regret ಬೇಸರಿಸು
fold ಮಡಿ fold ಮಡಿಸು
name ಹೆಸರು name ಹೆಸರಿಸು

 

ಕೊನೆಯ ನಾಲ್ಕು ಎತ್ತುಗೆಗಳಲ್ಲಿ ಹೆಸರುಪದ ಮತ್ತು ಎಸಕಪದಗಳೆರಡೂ ಇಂಗ್ಲಿಶ್‌ನಲ್ಲಿ ಒಂದೇ ರೂಪದಲ್ಲಿವೆ, ಮತ್ತು ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹೆಸರುಪದಗಳನ್ನು ಮತ್ತು ಅವಕ್ಕೆ ಇಸು ಒಟ್ಟನ್ನು ಸೇರಿಸಿರುವ ಎಸಕಪದಗಳನ್ನು ಬಳಸಲಾಗಿದೆ ಎಂಬುದನ್ನು ಗಮನಿಸಬಹುದು.

(2) ಪರಿಚೆಪದಗಳಿಗೆ ಇಸು ಒಟ್ಟನ್ನು ಸೇರಿಸಿ ಪಡೆದ ಎಸಕಪದಗಳು:

dry ಗಾರು fry ಗಾರಿಸು
joint ಜಂಟಿ join ಜಂಟಿಸು
itch ತುರಿ itch ತುರಿಸು
bent ಕುಡು bend ಕುಡಿಸು
front ಇದಿರು dare ಇದಿರಿಸು
piece ತುಂಡು divide ತುಂಡಿಸು

 

ಕೆಲವು ಬಗೆಯ ಅಣಕಪರಿಚೆಗಳಿಗೂ ಇಸು ಒಟ್ಟನ್ನು ಸೇರಿಸಿ ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಬಲ್ಲ ಎಸಕಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಬರುತ್ತದೆ:

hawk ಕೇಕರಿಸು doze ಜೂಗರಿಸು
lurch ತತ್ತರಿಸು alarm ತಳಮಳಿಸು
jam ತಿಂತಿಣಿಸು tinkle ಕಿಣಿಕಿಣಿಸು
rattle ದಡಬಡಿಸು smack ಚಪ್ಪರಿಸು
glisten ಮಳಮಳಿಸು blink ಮಿಟಕಿಸು

 

ಕೂಡುಪದಗಳ ಬಳಕೆ:
ಎಸಕಪದಗಳ ಮೊದಲು ಹೆಸರುಪದಗಳನ್ನು, ಪರಿಚೆಪದಗಳನ್ನು, ಇಲ್ಲವೇ ಎಸಕಪದಗಳ ಜೋಡಿಸುವ ರೂಪವನ್ನು ಬಳಸಿ ಕನ್ನಡದಲ್ಲಿ ಕೂಡುಪದಗಳನ್ನು ಉಂಟುಮಾಡಲಾಗುತ್ತದೆ (3.3 ನೋಡಿ). ಇಂಗ್ಲಿಶ್‌ನ ಹಲವು ಎಸಕಪದಗಳಿಗೆ ಸಾಟಿಯಾಗುವಂತೆ ಇಂತಹ ಕೂಡುಪದಗಳನ್ನು ಬಳಸಲು ಬರುತ್ತದೆ.

(1) ಹೆಸರುಪದಗಳನ್ನು ಬಳಸಿರುವ ಕೂಡುಪದಗಳು:

rate ಬೆಲೆಕಟ್ಟು vote ಒಪ್ಪಿತಕೊಡು
rescue ಪಾರುಮಾಡು sue ಮೊರೆಯಿಡು
rave ಹುಚ್ಚಾಡು prove ನನ್ನಿಗೆಯ್ಯು
stave ತೂತುಮಾಡು owe ಸಾಲಬೀಳು
glaze ಹೊಳಪುಕೊಡು freeze ಹೆಪ್ಪುಗಟ್ಟು
gag ಬಾಯಿಗಿಡಿ rig ಅಣಿಮಾಡು
smirch ಕೊಳೆಹಚ್ಚು shrug ಹೆಗಲುಹಾರಿಸು
fetch ಬೆಲೆಸಿಗು gnash ಹಲ್ಲುಕಡಿ
hock ಒತ್ತೆಯಿಡು strangle ಕತ್ತುಹಿಚುಕು
opine ಬಗೆಯರಿಸು gore ಕೋಡಿಡು

 

(2) ಪರಿಚೆಪದಗಳನ್ನು ಬಳಸಿರುವ ಕೂಡುಪದಗಳು:

exile ಹೊರಹಾಕು grapple ಗಟ್ಟಿಹಿಡಿ
exhume ಹೊರತೆಗೆ profane ಕೀಳುಗಳೆ
ignore ಕಡೆಗಣಿಸು zoom ಮೇಲೇರು
insure ಕಂಡಿತಪಡಿಸು heave ಮೇಲೆತ್ತು
lag ಹಿಂದೆಬೀಳು flinch ಹಿಂದೆಗೆ
flush ಕೆಂಪೇರು stroll ಅಡ್ಡಾಡು
tan ಹದಮಾಡು preen ಅಂದಗೊಳಿಸು

 

ಕನ್ನಡದಲ್ಲಿ ಅಣಕಪದಗಳೂ ಪರಿಚೆಪದಗಳಾಗಿ ಬಳಕೆಯಾಗುತ್ತಿದ್ದು, ಹಲವೆಡೆಗಳಲ್ಲಿ ಇಂತಹ ಪದಗಳನ್ನು ಬಳಸಿರುವ ಕೂಡುಪದಗಳನ್ನು ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಿ ಬಳಸಲು ಬರುತ್ತದೆ:

tingle ಜುಮ್ಮೆನ್ನು growl ಗುರುಗುಟ್ಟು
roar ಬೋರ‍್ಗರೆ twirl ಗರಗರ ತಿರುಚು
snarl ಗುರ‍್ರೆನ್ನು quaff ಗಟಗಟ ಕುಡಿ
pulsate ಗುಕ್ಕೆನ್ನು glare ದುರುಗುಟ್ಟು
guzzle ಗಟಗಟ ಕುಡಿ sizzle ಚರಚರ ಕಾಯು
hurtle ದಡದಡ ಬೀಳು gurgle ಜುಳುಜುಳು ಹರಿ

 

ಇಂತಹ ಅಣಕಪರಿಚೆಗಳನ್ನು ಬಳಸಿ ಹೊಸ ಎಸಕಪದಗಳನ್ನು ಕಟ್ಟುವವರು ಒಂದು ಮುಕ್ಯವಾದ ವಿಶಯವನ್ನು ಮರೆಯಬಾರದು: ಕನ್ನಡದಲ್ಲಿ ಎರಡು ಬಗೆಯ ಅಣಕಪದಗಳು ಬಳಕೆಯಲ್ಲಿದ್ದು, ಅವುಗಳಲ್ಲಿ ಒಂದು ಬಗೆಯವು ತುಸುಹೊತ್ತು ನಡೆಯುವ ಎಸಕದ ಪರಿಚೆಯನ್ನು ತಿಳಿಸುತ್ತವೆ, ಮತ್ತು ಇನ್ನೊಂದು ಬಗೆಯವು ಒಮ್ಮೆಗೇನೇ ನಡೆದುಹೋಗುವಂತಹ ಎಸಕದ ಪರಿಚೆಯನ್ನು ತಿಳಿಸುತ್ತವೆ.
ಇವುಗಳ ನಡುವಿನ ವ್ಯತ್ಯಾಸವೇನೆಂಬುದನ್ನು (4.3)ರಲ್ಲಿ ವಿವರಿಸಲಾಗಿದೆ.

(3) ಎಸಕಪದಗಳ ಜೋಡಿಸುವ ರೂಪವನ್ನು ಬಳಸಿರುವ ಕೂಡುಪದಗಳು:

mangle ಕೊಚ್ಚಿಹಾಕು snuggle ಅಪ್ಪಿಕೊಳ್ಳು
swipe ಬೀಸಿಹೊಡೆ wriggle ನುಣುಚಿಕೊಳ್ಳು
inquire ಕೇಳಿತಿಳಿ quote ಎತ್ತಿಹೇಳು
rove ಅಲೆದಾಡು romp ಕುಣಿದಾಡು
gallop ನೆಗೆದೋಡು plan ಹಮ್ಮಿಕೊಳ್ಳು

 

ಕೆಳಗೆ ಕೊಟ್ಟಿರುವ ಕೂಡುಪದಗಳಲ್ಲಿ ಒಂದು ಎಸಕಪದವನ್ನು ನೇರವಾಗಿ ಇನ್ನೊಂದು ಎಸಕಪದದೊಂದಿಗೆ ಸೇರಿಸಿರುವ ಹಾಗೆ ಕಾಣಿಸುತ್ತದೆ; ಆದರೆ, ನಿಜಕ್ಕೂ ಇವುಗಳಲ್ಲಿ ಮೊದಲನೆಯದು ಎಸಕಪದದ ಜೋಡಿಸುವ ರೂಪವಾಗಿದ್ದು, ಅದರ ಕೊನೆಯ ಇಕಾರ ಸೇರಿಕೆಯಲ್ಲಿ ಬಿದ್ದುಹೋಗಿದೆ (ಎತ್ತುಗೆಗಾಗಿ, ಹಾರಿ+ಆಡು ಎಂಬುದು ಹಾರಾಡು ಎಂದಾಗಿದೆ):

haggle ಕೊಸರಾಡು straggle ಹಾರಾಡು
struggle ಒದ್ದಾಡು rave ಕೂಗಾಡು
wrangle ಕಚ್ಚಾಡು revere ಕೊಂಡಾಡು
store ಕೂಡಿಡು secrete ಬಚ್ಚಿಡು

 

ತಿರುಳು
ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಬಲ್ಲ ಎಸಕಪದಗಳನ್ನು ಕನ್ನಡದಲ್ಲಿ ಹೊಸದಾಗಿ ಉಂಟುಮಾಡಲು ಎರಡು ಬಗೆಯ ಹಮ್ಮುಗೆಗಳನ್ನು ಬಳಸಲು ಬರುತ್ತದೆ; (ಕ) ಹೆಸರುಪದ, ಎಸಕಪದ ಇಲ್ಲವೇ ಪರಿಚೆಪದಗಳಿಗೆ ಇಸು ಒಟ್ಟನ್ನು ಸೇರಿಸುವುದು ಒಂದು ಹಮ್ಮುಗೆ, ಮತ್ತು (ಚ) ಹೆಸರುಪದಗಳಿಗೆ, ಪರಿಚೆಪದಗಳಿಗೆ, ಇಲ್ಲವೇ ಎಸಕಪದಗಳ ಜೋಡಿಸುವ ರೂಪಕ್ಕೆ ಇನ್ನೊಂದು ಎಸಕಪದವನ್ನು ಸೇರಿಸುವುದು ಇನ್ನೊಂದು ಹಮ್ಮುಗೆ.

<< ಬಾಗ-16

facebooktwitter

ಇಂಗ್ಲಿಶ್ ನುಡಿಯ ಹೆಸರುಪದಗಳು



pada_kattane_sarani_dnsಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವುದು-16

ಇಂಗ್ಲಿಶ್ ನುಡಿಯ ಹೆಸರುಪದಗಳು

ಮುನ್ನೋಟ

ಇಂಗ್ಲಿಶ್ ಹೆಸರುಪದಗಳಲ್ಲಿ ಮುನ್ನೊಟ್ಟು(prefix)ಗಳಿರುವ ಇಲ್ಲವೇ ಹಿನ್ನೊಟ್ಟು(suffix)ಗಳಿರುವ ಕಟ್ಟುಪದಗಳಿಗೆ ಮತ್ತು ಎರಡು ಪದಗಳು ಕೂಡಿರುವ ಜೋಡುಪದ(compound)ಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸದಾಗಿ ಹೆಸರುಪದಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಮೇಲಿನ 6, 7, ಮತ್ತು 8ನೇ ಪಸುಗೆಗಳಲ್ಲಿ ವಿವರಿಸಲಾಗಿದೆ. ಈ ಮೂರು ಗುಂಪುಗಳಿಗೂ ಸೇರದಿರುವ ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸ ಹೆಸರುಪದಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಈ ಪಸುಗೆಯಲ್ಲಿ ವಿವರಿಸಲಾಗಿದೆ.

ಇಂತಹ ಒಟ್ಟುಗಳಿಲ್ಲದ ಮತ್ತು ಜೋಡುಪದಗಳಲ್ಲದ ಹಲವು ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗಬಲ್ಲ ಅಂತಹವೇ ಹೆಸರುಪದಗಳು ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿವೆ. ಎತ್ತುಗೆಗಾಗಿ, ಇಂಗ್ಲಿಶ್‌ನ weed ಕಳೆ, end ತುದಿ, hide ತೊಗಲು, tree ಮರ, head ತಲೆ, wind ಗಾಳಿ, hood ಹೆಡೆ, ground ನೆಲ ಮೊದಲಾದ ಕಡೆಗಳಲ್ಲಿ ಇಂಗ್ಲಿಶ್‌ನ ಒತ್ತೆ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೂ ಒತ್ತೆ ಹೆಸರುಪದಗಳಿವೆ.

ಆದರೆ, ಬೇರೆ ಕೆಲವು ಕಡೆಗಳಲ್ಲಿ ಇಂಗ್ಲಿಶ್‌ನ ಒತ್ತೆ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಜೋಡುಪದಗಳನ್ನು ಬಳಸಿರುವುದೂ ಇದೆ; ಇದನ್ನು chuckle ಮೆಲುನಗೆ, clan ಬುಡಕಟ್ಟು, coffin ಹೆಣಪೆಟ್ಟಿಗೆ, colic ಹೊಟ್ಟೆನೋವು, sash ಹೆಗಲಪಟ್ಟಿ ಎಂಬಂತಹ ಕಡೆಗಳಲ್ಲಿ ಕಾಣಬಹುದು.

ಇನ್ನು ಕೆಲವು ಕಡೆಗಳಲ್ಲಿ ಇಂಗ್ಲಿಶ್‌ನ ಹೆಸರುಪದಗಳಲ್ಲಿ ಒಟ್ಟುಗಳಿಲ್ಲದಿದ್ದರೂ ಅವಕ್ಕೆ ಸಾಟಿಯಾಗುವಂತೆ ಕನ್ನಡದಲ್ಲಿ ಒಟ್ಟುಗಳನ್ನು ಸೇರಿಸಿರುವಂತಹ ಪದಗಳನ್ನು ಬಳಸಲಾಗಿದೆ; ಇದನ್ನು fear ಹೆದರಿಕೆ, excise ತೆರಿಗೆ, conduct ನಡತೆ, practice ಬಳಕೆ, award ಕೊಡುಗೆ ಮೊದಲಾದ ಕಡೆಗಳಲ್ಲಿ ಕಾಣಬಹುದು.
ಇಂತಹ ಹಲವು ಪದಗಳನ್ನು ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ಎಂಬ ನನ್ನ ಕಡತದಲ್ಲಿ ಕೊಟ್ಟಿದ್ದೇನೆ.

ಈ ರೀತಿ ಈಗಾಗಲೇ ಪದಗಳು ಬಳಕೆಯಲ್ಲಿಲ್ಲದಂತಹ ಕಡೆಗಳಲ್ಲಿ ಮಾತ್ರ ನಾವು ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗಬಲ್ಲ ಹೆಸರುಪದಗಳನ್ನು ಕನ್ನಡದಲ್ಲಿ ಹೊಸದಾಗಿ ಕಟ್ಟಬೇಕಾಗುತ್ತದೆ. ಇಂತಹ ಕೆಲವೆಡೆಗಳಲ್ಲಿ ಇಂಗ್ಲಿಶ್‌ನಿಂದ ಎರವಲು ಪಡೆದ ಬಸ್ಸು, ಕಾರು, ರೇಡಿಯೋ, ಕಂಪ್ಯೂಟರ‍್ ಮೊದಲಾದ ಪದಗಳು ಬಳಕೆಯಲ್ಲಿದ್ದು, ಮುಂದೆಯೂ ಅವನ್ನೇ ಬಳಸಲು ಬರುತ್ತದೆ; ಹೀಗಿದ್ದರೂ, ಅವಕ್ಕೆ ಸಾಟಿಯಾಗುವಂತಹ ಹೊಸಪದಗಳನ್ನು ಕಟ್ಟುವ ಮೂಲಕ ಎರವಲು ಪಡೆದಿದ್ದರೂ ಪದಕಟ್ಟುವಿಕೆಯಲ್ಲಿ ಕನ್ನಡ ಹಿಂದಿಲ್ಲ ಎಂಬುದನ್ನು ಗಟ್ಟಿಮಾಡಿಕೊಳ್ಳಬಹುದು.

ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಪದಗಳಿಗೆ ಒಟ್ಟುಗಳನ್ನು ಸೇರಿಸಿ ಕಟ್ಟುಪದಗಳನ್ನು ಉಂಟುಮಾಡುವುದು ಮತ್ತು ಹೆಸರುಪದಗಳ ಮೊದಲು ಎಸಕಪದ, ಪರಿಚೆಪದ, ಇಲ್ಲವೇ ಬೇರೆ ಹೆಸರುಪದಗಳನ್ನು ಇರಿಸಿ ಜೋಡುಪದಗಳನ್ನು ಉಂಟುಮಾಡುವುದು ಎಂಬ ಎರಡು ಬಗೆಯ ಹೊಲಬುಗಳನ್ನು ಬಳಸಿ ಹೊಸ ಹೆಸರುಪದಗಳನ್ನು ಕಟ್ಟಲು ಬರುತ್ತದೆ ಎಂಬುದನ್ನು ಮೇಲೆ ಎರಡನೇ ಪಸುಗೆಯಲ್ಲಿ ವಿವರಿಸಲಾಗಿದೆ.

ಇಂಗ್ಲಿಶ್‌ನ ಒತ್ತೆ ಹೆಸರುಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವಲ್ಲೂ ಈ ಎರಡು ಹೊಲಬುಗಳಲ್ಲಿ ಒಂದನ್ನು ಬಳಸಬೇಕಾಗುತ್ತದೆ; ಅವುಗಳಲ್ಲಿ ಯಾವುದನ್ನು ಬಳಸಬೇಕು ಎಂಬುದು ಮುಕ್ಯವಾಗಿ ನಮ್ಮ ಎದುರಿಗಿರುವ ಇಂಗ್ಲಿಶ್ ಪದ ಎಂತಹ ಹುರುಳನ್ನು ಕೊಡುತ್ತದೆ ಎಂಬುದನ್ನು ಅವಲಂಬಿಸಿದೆ.

ಆ ಹುರುಳನ್ನು ಬಳಕೆಯಲ್ಲಿರುವ ಎಸಕಪದ, ಪರಿಚೆಪದ ಇಲ್ಲವೇ ಹೆಸರುಪದಕ್ಕೆ ಒಟ್ಟುಗಳನ್ನು ಸೇರಿಸಿ ತಿಳಿಸಲು ಬರುತ್ತದೆಯಾದರೆ, ಅದೇ ಹೊಲಬನ್ನು ಬಳಸಿ ಅಡಕವಾದ ಕನ್ನಡ ಪದವನ್ನು ಹೊಸದಾಗಿ ಕಟ್ಟಬಹುದು. ಇದನ್ನು ನಡೆಸಲು ಬಾರದಿರುವಲ್ಲಿ ಮಾತ್ರ ಜೋಡುಪದಗಳನ್ನು ಕಟ್ಟುವ ಹೊಲಬನ್ನು ಬಳಸಬೇಕಾಗುತ್ತದೆ. ಯಾಕೆಂದರೆ, ಇವು ಸಾಮಾನ್ಯವಾಗಿ ಒಟ್ಟುಗಳನ್ನು ಬಳಸಿ ಪಡೆದಿರುವ ಪದಗಳಶ್ಟು ಅಡಕವಾಗಿರುವುದಿಲ್ಲ.

ಒಟ್ಟುಗಳನ್ನು ಬಳಸಿ ಹೆಸರುಪದಗಳನ್ನು ಉಂಟುಮಾಡುವುದು
ಒಟ್ಟುಗಳನ್ನು ಬಳಸಿ ಹೊಸಪದಗಳನ್ನು ಕಟ್ಟುವಲ್ಲಿ ಇಂಗ್ಲಿಶ್ ಪದಗಳ ಹುರುಳನ್ನೇ ಮುಕ್ಯವಾಗಿ ಗಮನಿಸಬೇಕಾಗಿರುವ ಕಾರಣ, ಎಂತಹ ಒಟ್ಟನ್ನು ಬಳಸಬೇಕು ಎಂಬುದನ್ನು ಕೆಳಗೆ ಇಂಗ್ಲಿಶ್ ಪದಗಳ ಹುರುಳುಗಳನ್ನು ಅವಲಂಬಿಸಿಯೇ ವಿವರಿಸಲಾಗಿದೆ:

(1) ಮಂದಿಯನ್ನು ಗುರುತಿಸುವ ಇಂಗ್ಲಿಶ್ ಹೆಸರುಪದಗಳು:
ನಮ್ಮ ಮುಂದಿರುವ ಇಂಗ್ಲಿಶ್ ಪದ ಮಂದಿಯನ್ನು ಗುರುತಿಸುತ್ತಿದೆಯಾದರೆ, ಅದಕ್ಕೆ ಸಾಟಿಯಾಗುವಂತೆ ಕನ್ನಡದಲ್ಲಿ (ಕ) ಎಸಕಪದಗಳಿಗೆ ಗ/ಇಗ ಒಟ್ಟನ್ನು ಸೇರಿಸುವುದು ಮತ್ತು (ಚ) ಹೆಸರುಪದಗಳಿಗೆ ಅದೇ ಒಟ್ಟನ್ನು ಇಲ್ಲವೇ ಗಾರ ಒಟ್ಟನ್ನು ಸೇರಿಸುವುದು ಎಂಬ ಎರಡು ಹೊಲಬುಗಳನ್ನು ಬಳಸಿ ಹೊಸ ಪದಗಳನ್ನು ಕಟ್ಟಲು ಬರುತ್ತದೆ (2.1.1 ನೋಡಿ).

(ಕ) ಎಸಕಪದಗಳಿಗೆ ಗ/ಇಗ ಒಟ್ಟನ್ನು ಸೇರಿಸುವುದು:

scribe ಬರೆಗ god ದಾಟುಗ
heir ಮರುಪಡೆಗ nurse ಆರಯ್ಗ
monk ಬಿಡುಗ genius ಪೇರರಿಗ
pupil ಕಲಿಗ champion ಗೆಲ್ಲುಗ
proud ಕೊಬ್ಬುಗ bandit ದೋಚುಗ
recluse ತೊರೆಗ clerk ಬರೆಗ

 

(ಚ) ಹೆಸರುಪದಗಳಿಗೆ ಗ/ಇಗ ಇಲ್ಲವೇ ಗಾರ ಒಟ್ಟನ್ನು ಸೇರಿಸುವುದು:

ಗ/ಇಗ ಒಟ್ಟು ಗಾರ ಒಟ್ಟು
animal ಉಸಿರುಗ peon ಕೋಲುಗಾರ
pimp ಹೆಣ್ಣುಗ apprentice ಕಲಿಕೆಗಾರ
hypocrite ತೋರ‍್ಕೆಗ umpire ತೀರ‍್ಪುಗಾರ
libertine ಹಾದರಿಗ emigre ವಲಸೆಗಾರ
native ನಾಡಿಗ honest ನಾಣ್ಯಗಾರ
friend ಅಳವಿಗ artisan ಕೆಲಸಗಾರ

 

ಮಂದಿಯನ್ನು ಹೆಸರಿಸುವ ಪದಗಳು ಹೆಂಗಸನ್ನು ಗುರುತಿಸುತ್ತಿವೆಯಾದರೆ, ಅಂತಹ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಗ/ಇಗ ಒಟ್ಟಿನ ಬಳಿಕ ಇತ್ತಿ ಒಟ್ಟನ್ನು ಮತ್ತು ಗಾರ ಒಟ್ಟಿನ ಬಳಿಕ ತಿ ಒಟ್ಟನ್ನು ಬಳಸಲು ಬರುತ್ತದೆ:

nurse ಆರಯ್ಗ, ಆರಯ್ಗಿತ್ತಿ
citizen ನಾಡಿಗ, ನಾಡಿಗಿತ್ತಿ
paramour ನಲ್ಮೆಗಾರ, ನಲ್ಮೆಗಾರ‍್ತಿ
patriot ನಾಡರ‍್ತಿಗ, ನಾಡರ‍್ತಿಗಿತ್ತಿ
deputy ನೆರವಿಗ, ನೆರವಿಗಿತ್ತಿ

 

ತನ್ನ ಅಳವಿನಿಂದಲೇ ಕೆಲಸವನ್ನು ನಡೆಸುವ ವಸ್ತುಗಳನ್ನು ಇಲ್ಲವೇ ಅಂಗಗಳನ್ನು ಹೆಸರಿಸಬೇಕಾದಲ್ಲಿ ಗ/ಇಗ ಒಟ್ಟಿನ ಬದಲು ಕ ಒಟ್ಟನ್ನು ಬಳಸಲು ಬರುತ್ತದೆ:

piston ತಳ್ಳುಕ lung ಉಸಿರುಕ
phone ಗೆಂಟುಲಿಕ pesticide ಕೇಡಳಿಕ

 

(2) ಎಸಕಗಳನ್ನು ಹೆಸರಿಸುವ ಇಂಗ್ಲಿಶ್ ಹೆಸರುಪದಗಳು:
ಎಸಕಗಳನ್ನು ಹೆಸರಿಸುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳಿಗೆ ಇಕೆ/ಕೆ ಒಟ್ಟನ್ನು ಇಲ್ಲವೇ ತ ಒಟ್ಟನ್ನು ಸೇರಿಸಿ ಹೊಸಪದಗಳನ್ನು ಉಂಟುಮಾಡಲು ಬರುತ್ತದೆ (2.1.2 ನೋಡಿ); ಇವುಗಳಲ್ಲಿ ಇಕೆ/ಕೆ ಎಂಬುದನ್ನು ಉಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಬಳಸಬಹುದು, ಮತ್ತು ತ ಎಂಬುದನ್ನು ಎಕಾರ ಇಲ್ಲವೇ ಇಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಬಳಸಬಹುದು:

idea ಹಂಚಿಕೆ trauma ಹೊಡೆತ
plea ಕೋರಿಕೆ ache ಕೊಡೆತ
notice ಎಚ್ಚರಿಕೆ jubilee ಮೆರೆತ
nausea ಉಬ್ಬಳಿಕೆ hold ಹಿಡಿತ
stamina ತಾಳಿಕೆ kick ಒದೆತ
rage ಕೆರಳಿಕೆ force ಸೆಳೆತ

 

(3) ಎಸಕದ ದೊರೆತವನ್ನು ಇಲ್ಲವೇ ಮುಟ್ಟನ್ನು ಹೆಸರಿಸುವ ಇಂಗ್ಲಿಶ್ ಹೆಸರುಪದಗಳು:
ಮೇಲೆ (2.1.3)ರಲ್ಲಿ ವಿವರಿಸಿದ ಹಾಗೆ, ಇಂತಹ ಹೆಸರುಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳಿಗೆ ಇಗೆ/ಗೆ ಒಟ್ಟನ್ನು ಸೇರಿಸಿರುವ ಪದಗಳನ್ನು ಬಳಸಲು ಬರುತ್ತದೆ:

purgative ಎಕ್ಕುಗೆ example ಎತ್ತುಗೆ
pad ಒತ್ತಿಗೆ equipment ಒದಗುಗೆ
mop ಒರಸುಗೆ drink ಕುಡಿಗೆ
party ಕೂಟಗೆ bracket ತಾಂಗುಗೆ
experience ತಾಳುಗೆ douche ಚಿಮ್ಮುಗೆ
post ನೆಡಿಗೆ booty ದೋಚುಗೆ
duty ತೆರಿಗೆ ornament ತೊಡುಗೆ

 

(4) ಪಾಂಗುಗಳ ಪರಿಚೆಯನ್ನು ಹೆಸರಿಸುವ ಇಂಗ್ಲಿಶ್ ಹೆಸರುಪದಗಳು:
ಕನ್ನಡದಲ್ಲಿ ಹೆಸರುಪದಗಳಿಗೆ ತನ ಒಟ್ಟನ್ನು ಸೇರಿಸಿ ಅವು ತಿಳಿಸುವ ಪರಿಚೆಯನ್ನು ಹೆಸರಿಸಲು ಬರುತ್ತದೆ (ಕುಡುಕ : ಕುಡುಕತನ); ಹೆಸರುಪದಗಳು ಗಾರ ಇಲ್ಲವೇ ಆಟ ಎಂಬುದರಲ್ಲಿ ಕೊನೆಗೊಂಡಿದ್ದಲ್ಲಿ ಮಾತ್ರ ಅವಕ್ಕೆ ಇಕೆ ಒಟ್ಟನ್ನು ಸೇರಿಸಲಾಗುತ್ತದೆ (ಬಿಲ್ಲುಗಾರ : ಬಿಲ್ಲುಗಾರಿಕೆ, ಬೂಟಾಟ : ಬೂಟಾಟಿಕೆ).
ಪರಿಚೆಯನ್ನು ತಿಳಿಸುವ ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಉಂಟುಮಾಡುವಲೂ ಈ ಎರಡು ಬಗೆಯ ಹಮ್ಮುಗೆಗಳನ್ನು ಬಳಸಲು ಬರುತ್ತದೆ:

ಜೋಡುಪದಗಳ ಬಳಕೆ
ಮೇಲೆ ವಿವರಿಸಿದ ಹಾಗೆ, ಒಟ್ಟುಗಳನ್ನು ಬಳಸಿ ಹೊಸಪದಗಳನ್ನು ಉಂಟುಮಾಡಲು ಬಾರದಿರುವಲ್ಲಿ ಜೋಡುಪದಗಳನ್ನು ಕಟ್ಟುವಂತಹ ಇನ್ನೊಂದು ಹೊಲಬನ್ನು ಬಳಸಬೇಕಾಗುತ್ತದೆ. ಇದಕ್ಕಾಗಿ ಕನ್ನಡದಲ್ಲಿ ಹೆಸರುಪದಗಳೊಂದಿಗೆ ಬೇರೆ ಹೆಸರುಪದಗಳನ್ನು, ಎಸಕಪದಗಳನ್ನು, ಇಲ್ಲವೇ ಪರಿಚೆಪದಗಳನ್ನು ಬಳಸಲು ಬರುತ್ತದೆ; ಇವುಗಳಲ್ಲಿ ಯಾವುದನ್ನು ಬಳಸಬೇಕು ಎಂಬುದು ಇಂಗ್ಲಿಶ್ ಹೆಸರುಪದದ ಹುರುಳನ್ನು ಕನ್ನಡದಲ್ಲಿ ತಿಳಿಸಲು ಎಂತಹ ಪದಗಳು ದೊರಕುತ್ತವೆ ಎಂಬುದರ ಮೇಲೆ ಅವಲಂಬಿಸಿದೆ.

ಎತ್ತುಗೆಗಾಗಿ, lard ಎಂಬ ಪದಕ್ಕೆ fat from the abdomen of the pig ಎಂಬ ಹುರುಳನ್ನು ಕೊಡಲಾಗಿದೆ; ಇದರಲ್ಲಿ fat ಮತ್ತು pig ಎಂಬ ಎರಡು ಹೆಸರುಪದಗಳು ಮುಕ್ಯವೆಂದು ಅನಿಸುವುದರಿಂದ ಈ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹಂದಿನೆಣ ಎಂಬ ಜೋಡುಪದವನ್ನು ಕಟ್ಟುವುದು ಸರಿಯೆಂದು ತೋರುತ್ತದೆ. ಇದರಲ್ಲಿ ಹಂದಿ ಎಂಬ ಹೆಸರುಪದವನ್ನು ನೆಣ ಎಂಬ ಇನ್ನೊಂದು ಹೆಸರುಪದದೊಂದಿಗೆ ಬಳಸಲಾಗಿದೆ.

lava ಎಂಬುದಕ್ಕೆ hot molten rock that erupts from a volcano ಎಂಬ ಹುರುಳನ್ನು ಕೊಡಲಾಗಿದ್ದು, ಇದರಲ್ಲಿ molten ಮತ್ತು rock ಎಂಬ ಪದಗಳು ಮುಕ್ಯವೆಂದು ಅನಿಸುವುದರಿಂದ, ಈ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಕರಗುಕಲ್ಲು ಎಂಬ ಜೋಡುಪದವನ್ನು ಕಟ್ಟುವುದು ಸರಿಯೆಂದು ತೋರುತ್ತದೆ; ಇದರಲ್ಲಿ ಕರಗು ಎಸಕಪದವನ್ನು ಕಲ್ಲು ಹೆಸರುಪದದೊಂದಿಗೆ ಬಳಸಲಾಗಿದೆ.

salad ಎಂಬುದಕ್ಕೆ a cold dish of raw vegetables ಎಂಬ ಹುರುಳಿದ್ದು, ಇದರಲ್ಲಿ raw ಮತ್ತು vegetable ಎಂಬ ಪದಗಳು ಮುಕ್ಯವೆಂದು ಅನಿಸುವುದರಿಂದ, ಈ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹಸಿಪಲ್ಲೆ ಎಂಬ ಜೋಡುಪದವನ್ನು ಕಟ್ಟುವುದು ಸರಿಯೆಂದು ತೋರುತ್ತದೆ; ಇದರಲ್ಲಿ ಹಸಿ ಎಂಬ ಪರಿಚೆಪದವನ್ನು ಪಲ್ಲೆ ಎಂಬ ಹೆಸರುಪದದೊಂದಿಗೆ ಬಳಸಲಾಗಿದೆ; ಹಸಿ ಎಂಬುದಕ್ಕೆ cold ಎಂಬುದರ ಹುರುಳೂ ಇದೆಯೆಂದು ಹೇಳಬಹುದು.

ಈ ರೀತಿ ಇಂಗ್ಲಿಶ್ ಹೆಸರುಪದಗಳ ಹುರುಳನ್ನವಲಂಬಿಸಿ ಅವಕ್ಕೆ ಸಾಟಿಯಾಗುವಂತೆ ಮೂರು ಬಗೆಯ ಜೋಡುಪದಗಳನ್ನು ಕನ್ನಡದಲ್ಲಿ ಉಂಟುಮಾಡಿರುವುದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:

(1) ಹೆಸರುಪದಗಳೊಂದಿಗೆ ಬೇರೆ ಹೆಸರುಪದಗಳನ್ನು ಬಳಸಿರುವುದು:

mafia ಕೇಡಿತಂಡ pergola ಬಳ್ಳಿಮನೆ
retina ಕಣ್ಣುಪರೆ pupa ಗೂಡುಹುಳು
grub ದುಂಬಿಮರಿ toad ನೆಲಗಪ್ಪೆ
lard ಹಂದಿನೆಣ parade ಸಾಲುನಡಿಗೆ
page ಹಾಳೆಬದಿ lagoon ಕಡಲ್ಕೊಳ
urine ಮಯ್ನೀರು skate ಗಾಲಿಮೆಟ್ಟು
paradise ಹೊನ್ನೂರು shingle ಮರಹಂಚು
kite ಗಾಳಿಪಟ lode ಅದುರೆಳೆ
hose ಕಾಲ್ಚೀಲ muzzle ಬಾಯಿಕುಕ್ಕೆ
mound ಕಲ್ದಿಬ್ಬ shroud ಹೆಣಹೊದಿಕೆ

 

(2) ಹೆಸರುಪದಗಳೊಂದಿಗೆ ಎಸಕಪದಗಳನ್ನು ಬಳಸಿರುವುದು:

lava ಕರಗುಕಲ್ಲು slab ಹಾಸುಕಲ್ಲು
pizza ಕೊಚ್ಚುರೊಟ್ಟಿ poniard ಕುತ್ತುಬಾಳು
movie ಓಡುತಿಟ್ಟ pie ತುಂಬುಕಡುಬು
tiffee ಅಂಟುಸಿಹಿ ode ನೆನೆಹಾಡು
souffle ಪೊಂಗಪ್ಪ missile ಬಿಟ್ಟೇರು
staple ಬಾಗುಸರಿಗೆ hone ಮಸೆಕಲ್ಲು
recipe ಮಾಡುಬಗೆ meteorite ಬೀಳ್ಕಲ್ಲು
parachute ಇಳಿಕೊಡೆ salve ಹಚ್ಚುಮದ್ದು
sleigh ಜಾರುಬಂಡಿ myth ಕಟ್ಟುಕತೆ
ski ಜಾರುಪಟ್ಟಿ sink ತೊಳೆಮರಿಗೆ

 

(3) ಹೆಸರುಪದಗಳೊಂದಿಗೆ ಪರಿಚೆಪದಗಳನ್ನು ಬಳಸಿರುವುದು:

phobia ಕಡುದಿಗಿಲು uvula ಕಿರುನಾಲಿಗೆ
siesta ಕಿತ್ತೊರಕು greed ಪೇರೆಳಸು
robe ನೀಳುಡುಪು salad ಹಸಿಪಲ್ಲೆ
sortie ಹೊರದಾಳಿ pomade ಕೆಂಪೆಣ್ಣೆ
prickle ಕಿರುಮುಳ್ಳು mantle ಮೇಲುಡುಪು
malaise ಒಳಗುದಿ empire ಪೆರ‍್ನಾಡು
nape ಹಿಂಗತ್ತು hunch ಮುನ್ನೆಣಿಕೆ
mulch ಹಸಿಗೊಬ್ಬರ wig ಮಾರ‍್ಕೂದಲು
proof ಕರಡಚ್ಚು sigh ನಿಟ್ಟುಸಿರು
plinth ಅಡಿಗಲ್ಲು foil ತೆಳುಹಾಳೆ

 

ತಿರುಳು
ಒಟ್ಟುಗಳನ್ನು ಬಳಸದಿರುವ ಮತ್ತು ಜೋಡುಪದಗಳಾಗಿಲ್ಲದಿರುವ ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೊಸ ಹೆಸರುಪದಗಳನ್ನು ಪಡೆಯಲು ಮುಕ್ಯವಾಗಿ (ಕ) ಹೆಸರುಪದ, ಎಸಕಪದ, ಇಲ್ಲವೇ ಪರಿಚೆಪದಗಳಿಗೆ ಒಟ್ಟುಗಳನ್ನು ಸೇರಿಸಿ ಕಟ್ಟುಪದಗಳನ್ನು ಕಟ್ಟುವುದು ಮತ್ತು (ಚ) ಹೆಸರುಪದಗಳಿಗೆ ಎಸಕಪದ, ಪರಿಚೆಪದ, ಇಲ್ಲವೇ ಬೇರೆ ಹೆಸರುಪದಗಳನ್ನು ಸೇರಿಸಿ ಜೋಡುಪದಗಳನ್ನು ಕಟ್ಟುವುದು ಎಂಬುದಾಗಿ ಎರಡು ಹಮ್ಮುಗೆಗಳನ್ನು ಬಳಸಲು ಬರುತ್ತದೆ.

<< ಬಾಗ-15

facebooktwitter

1 2 3 7