Posts Tagged ‘ಉಲಿ’

ಕನ್ನಡ ನುಡಿಯ ಸೊಗಡು

ನುಡಿಯರಿಮೆಯ ಇಣುಕುನೋಟ – 33

ಎಲ್ಲಾ ನುಡಿಗಳಿಗೂ ಅವುಗಳದೇ ಆದ ಒಂದು ಸೊಗಡುಎಂಬುದಿರುತ್ತದೆ. ಇದನ್ನು ಬರಹಗಳು ಹೆಚ್ಚು ಕೆಡದಂತೆ ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವು ತಮ್ಮ ಜೀವಂತಿಕೆಯನ್ನು ಕಳೆದುಕೊಳ್ಳುತ್ತವೆ, ಮತ್ತು ಸಾಮಾನ್ಯ ಜನರಿಂದ ದೂರವಾಗುತ್ತವೆ. ಅಂತಹ ಬರಹಗಳನ್ನು ಕಲಿಯುವ ಮತ್ತು ಬಳಸುವ ಕೆಲಸವೂ ಆ ನುಡಿಯನ್ನಾಡುವ ಜನರಿಗೆ ತುಂಬಾ ತೊಡಕಿನದಾಗುತ್ತದೆ. ನುಡಿಗಳಿಗಿರುವ ಈ ಸೊಗಡು ಅವುಗಳ ಪದಗಳಲ್ಲಿ ಬರುವ ಉಲಿಗಳಲ್ಲಿ, ಉಲಿಗಳ ಓರಣಗಳಲ್ಲಿ, ಪದಗಳಿಗೆ ಒಟ್ಟು(ಪ್ರತ್ಯಯ)ಗಳನ್ನು ಇಲ್ಲವೇ ಬೇರೆ ಪದಗಳನ್ನು ಸೇರಿಸಿದಾಗ ಅವುಗಳ ಉಲಿಗಳಲ್ಲಿ ನಡೆಯುವ ಮಾರ್ಪಾಡುಗಳಲ್ಲಿ, ಪದಗಳನ್ನು ಸೇರಿಸಿ ಬೇರೆ ಪದಗಳನ್ನು ಉಂಟುಮಾಡುವ ಬಗೆಗಳಲ್ಲಿ, ಮತ್ತು ಪದಗಳಿಂದ ಪದಕಂತೆಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವ ಬಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಕನ್ನಡಕ್ಕೂ ಇಂತಹ ತನ್ನದೇ ಆದ ಒಂದು ಸೊಗಡಿದೆ, ಮತ್ತು ಅದು ಸಂಸ್ಕ್ರುತ, ಹಿಂದಿ, ಇಂಗ್ಲಿಶ್ ಮೊದಲಾದ ಬೇರೆ ನುಡಿಗಳಿಗಿರುವ ಸೊಗಡಿಗಿಂತ ತೀರ ಬೇರಾಗಿದೆ; ಕನ್ನಡದ ಉಲಿಗಳು, ಅವುಗಳ ಓರಣಗಳು, ಅವುಗಳ ಸೇರಿಕೆಯ ಮಾರ್ಪಾಡುಗಳು, ಕನ್ನಡದಲ್ಲಿ ಪದ, ಪದಕಂತೆ ಮತ್ತು ಸೊಲ್ಲುಗಳನ್ನು ಉಂಟುಮಾಡುವ ಬಗೆಗಳು ಮೊದಲಾದುವನ್ನು ಸಂಸ್ಕ್ರುತದಂತಹ ಬೇರೆ ನುಡಿಗಳಲ್ಲಿ ಕಾಣಿಸುವ ಬಗೆಗಳೊಂದಿಗೆ ಹೋಲಿಸಿ ನೋಡಿದಾಗ, ನಿಜಕ್ಕೂ ಕನ್ನಡದ ಸೊಗಡು ಎಂತಹದು ಎಂಬುದು ಗೊತ್ತಾಗುತ್ತದೆ.

(1) ಸಂಸ್ಕ್ರುತ ಪದಗಳಲ್ಲಿ ಬಳಕೆಯಾಗುವ ಖಛಠಥಫ ಮತ್ತು ಘಝಢಧಭಗಳೆಂಬ ಒತ್ತುಸಿರಿನ ಬರಿಗೆಗಳು (ಮಹಾಪ್ರಾಣಾಕ್ಶರಗಳು) ಕನ್ನಡ ಪದಗಳಲ್ಲಿಲ್ಲ; ಆದರೆ, ಸಂಸ್ಕ್ರುತ ಪದಗಳಲ್ಲಿ ಕಾಣಿಸದಿರುವ ಗಿಡ್ಡ ಎಕಾರ ಮತ್ತು ಒಕಾರಗಳು ಕನ್ನಡ ಪದಗಳಲ್ಲಿವೆ. ಸಂಸ್ಕ್ರುತದಲ್ಲಿರುವ ಋಕಾರ ಮತ್ತು ಷಕಾರಗಳು ಕನ್ನಡದಲ್ಲಿಲ್ಲ; ಆದರೆ, ಸಂಸ್ಕ್ರುತದಲ್ಲಿಲ್ಲದ ಎಯ್, ಒಯ್, ಉಯ್, ಆಯ್, ಒವ್, ಇವ್ ಮೊದಲಾದ ಹಲವು ಸ್ವರ ಮತ್ತು ಯಕಾರ ಇಲ್ಲವೇ ವಕಾರಗಳ ಜೋಡಿಗಳು ಕನ್ನಡದಲ್ಲಿವೆ.

(2) ಈ ಎರಡು ನುಡಿಗಳಿಗೂ ಸಮಾನವಾಗಿರುವ ಅಕ್ಶರಗಳು ಹಲವಿವೆಯಾದರೂ ಅವು ಒಂದೇ ರೀತಿಯಾಗಿ ಬಳಕೆಯಾಗುವುದಿಲ್ಲ. ಸಂಸ್ಕ್ರುತದಲ್ಲಿ ಒತ್ತಕ್ಶರಗಳಿಂದ ಮೊದಲಾಗುವ ಪದಗಳು ಸಾಕಶ್ಟಿವೆ (ಕ್ರಾಂತಿ, ಕ್ಷಮೆ, ಜ್ಞಾನ, ಜ್ಯೋತಿ, ದ್ವೇಷ, ಮ್ಲೇಚ್ಛ). ಆದರೆ ಕನ್ನಡದವೇ ಆದ ಪದಗಳಲ್ಲಿ ಆ ರೀತಿ ಒತ್ತಕ್ಶರಗಳು ಪದಗಳ ಮೊದಲಿಗೆ ಬರುವುದಿಲ್ಲ. ಪದಗಳ ನಡುವೆ ಬರಬಲ್ಲ ಒತ್ತಕ್ಶರಗಳಲ್ಲೂ ಸಂಸ್ಕ್ರುತ ಮತ್ತು ಕನ್ನಡ ನುಡಿಗಳ ನಡುವೆ ವ್ಯತ್ಯಾಸವಿದೆ. ಸಂಸ್ಕ್ರುತದ ಭಕ್ತ, ಅಜ್ಞಾನ, ವತ್ಸ, ಮತ್ಸ್ಯ ಮೊದಲಾದ ಪದಗಳಲ್ಲಿ ನಡುವೆ ಬಂದಿರುವ ಕ್ತ್, ಜ್ಞ್, ತ್ಸ್, ತ್ಸ್ಯ್ ಮೊದಲಾದ ಹಲವು ಬಗೆಯ ಒತ್ತಕ್ಶರಗಳು ಕನ್ನಡ ಪದಗಳಲ್ಲಿ ಕಾಣಿಸುವುದಿಲ್ಲ.

(3) ಎರಡು ಇಲ್ಲವೇ ಹೆಚ್ಚು ಪದಗಳನ್ನು ಒಟ್ಟುಸೇರಿಸಿ ಹೊಸ ಪದಗಳನ್ನು ತಯಾರಿಸುವ ಹೊಲಬುಗಳು ಈ ಎರಡು ನುಡಿಗಳಲ್ಲಿ ಬೇರೆ ಬೇರಾಗಿವೆ. ಸಂಸ್ಕ್ರುತದಲ್ಲಿ ಸಾಮಾನ್ಯವಾಗಿ ಹೆಸರುಪದಗಳನ್ನು ಮಾತ್ರ ಇಂತಹ ರಚನೆಗಳಲ್ಲಿ ಬಳಸಲಾಗುತ್ತದೆ; ಆದರೆ, ಕನ್ನಡದಲ್ಲಿ ಹೆಸರುಪದ (ತಲೆಗೂದಲು, ಬಯಲಾಟ), ಎಸಕಪದ (ಚುಚ್ಚುಮದ್ದು, ಕಡೆಗೋಲು) ಮತ್ತು ಪರಿಚೆಪದಗಳೆಂಬ (ದೊಡ್ಡಮ್ಮ, ಬಿಸಿನೀರು) ಮೂರು ಬಗೆಯ ಪದಗಳನ್ನೂ ಇಂತಹ ರಚನೆಗಳಲ್ಲಿ ಬಳಸಲು ಬರುತ್ತದೆ.

(4) ಕನ್ನಡದಲ್ಲಿ ಸಾಮಾನ್ಯವಾಗಿ ಎರಡಕ್ಕಿಂತ ಹೆಚ್ಚು ಪದಗಳನ್ನು ಈ ರೀತಿ ಜೋಡಿಸುವುದು ಅಪರೂಪ; ಆದರೆ, ಸಂಸ್ಕ್ರುತದಲ್ಲಿ ಮೂರು-ನಾಲ್ಕು ಪದಗಳನ್ನು ಸೇರಿಸಿ ರಚಿಸಿರುವ ಜೋಡುಪದಗಳೂ ಬೇಕಾದಶ್ಟಿವೆ (ಪೂರ್ವಜನ್ಮಕೃತಂ, ಮತ್ತಮಾತಂಗಗಾಮಿ, ಸಕಲನೀತಿಶಾಸ್ತ್ರತತ್ವಜ್ಞಃ).

(5) ಒಟ್ಟು(ಪ್ರತ್ಯಯ)ಗಳನ್ನು ಸೇರಿಸಿ ಹೊಸ ಪದಗಳನ್ನು ತಯಾರಿಸುವ ವಿಶಯದಲ್ಲೂ ಕನ್ನಡ ಸಂಸ್ಕ್ರುತಕ್ಕಿಂತ ಬೇರಾಗಿದೆ. ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚು ಒಟ್ಟುಗಳನ್ನು ಸೇರಿಸಿ ರಚಿಸಿರುವ ಪದಗಳು ತುಂಬಾ ಕಡಿಮೆ; ಆದರೆ, ಸಂಸ್ಕ್ರುತದ ಹೆಚ್ಚಿನ ಪದಗಳಲ್ಲೂ ಎರಡು ಇಲ್ಲವೇ ಹೆಚ್ಚು ಒಟ್ಟುಗಳು ಸೇರಿರುವುದನ್ನು ಕಾಣಬಹುದು (ಅ-ಜ್ಞಾನ್-ಇ, ಕರ್-ತೃ-ತ್ವ). ಕನ್ನಡದಲ್ಲಿ ಒಟ್ಟುಗಳನ್ನು ಪದಗಳ ಕೊನೆಯಲ್ಲಿ ಮಾತ್ರ ಬಳಸಲು ಬರುತ್ತದೆ; ಆದರೆ, ಸಂಸ್ಕ್ರುತದಲ್ಲಿ ಅವನ್ನು ಪದಗಳ ಮೊದಲಿಗೂ ಬಳಸಬಹುದು (ಸತ್ಯ-ಅಸತ್ಯ, ಸ್ವಾಗತ-ಸುಸ್ವಾಗತ, ಜೀವಿ-ನಿರ್ಜೀವಿ, ರಕ್ಷಣೆ-ಸಂರಕ್ಷಣೆ).

(6) ಪದಕ್ಕೆ ಪದ ಸೇರಿದಾಗ, ಇಲ್ಲವೇ ಪದಕ್ಕೆ ಒಟ್ಟು ಸೇರಿದಾಗ, ಅವುಗಳಲ್ಲಿ ನಡೆಯುವ ಸೇರಿಕೆಯ ಬದಲಾವಣೆಗಳು ಕನ್ನಡ ಮತ್ತು ಸಂಸ್ಕ್ರುತ ನುಡಿಗಳಲ್ಲಿ ಬೇರೆ ಬೇರಾಗಿವೆ: ಇಕಾರದ ಅನಂತರ ಅಕಾರ ಬಂದಾಗ, ಕನ್ನಡದಲ್ಲಿ ಇಕಾರ ಬಿದ್ದುಹೋಗಿ ಅಕಾರ ಉಳಿಯುತ್ತದೆ (ಅಲ್ಲಿ+ಅಲ್ಲಿ=ಅಲ್ಲಲ್ಲಿ); ಆದರೆ, ಸಂಸ್ಕ್ರುತದಲ್ಲಿ ಇಕಾರ ಯಕಾರವಾಗುತ್ತದೆ (ಅತಿ+ಅಲ್ಪ=ಅತ್ಯಲ್ಪ). ಅಕಾರದ ಅನಂತರ ಇಕಾರ ಬಂದರೂ ಕನ್ನಡದಲ್ಲಿ ಇಂತಹದೇ ಮೊದಲನೆಯ ಸ್ವರ ಬಿದ್ದುಹೋಗಿ ಎರಡನೆಯದು ಉಳಿಯುತ್ತದೆ (ಅಲ್ಲಿಂದ+ಇಳಿದು=ಅಲ್ಲಿಂದಿಳಿದು); ಆದರೆ, ಸಂಸ್ಕ್ರುತದಲ್ಲಿ ಅವೆರಡೂ ಬಿದ್ದುಹೋಗಿ ಹೊಸದೊಂದು ಸ್ವರ (ಏಕಾರ) ಬಂದುಸೇರುತ್ತದೆ (ರಾಜ+ಇಂದ್ರ=ರಾಜೇಂದ್ರ).

(7) ಒಟ್ಟುಗಳನ್ನು ಸೇರಿಸಿ ಹೊಸಪದಗಳನ್ನು ರಚಿಸುವಲ್ಲಿ ಕನ್ನಡ ಮತ್ತು ಸಂಸ್ಕ್ರುತಗಳ ನಡುವೆ ಹಲವು ಮುಕ್ಯವಾದ ವ್ಯತ್ಯಾಸಗಳಿವೆ: ಸಂಸ್ಕ್ರುತ ಪದಗಳಿಗೆ ಯ ಇಲ್ಲವೇ ಇಕ ಒಟ್ಟನ್ನು ಸೇರಿಸಿದಾಗ, ಹಲವು ತೊಡಕಾದ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಪದಗಳ ಮೊದಲಿಗೆ ಬರುವ ಗಿಡ್ಡ ಅಕಾರ ಉದ್ದ ಆ ಎಂದಾಗುವುದು (ಚಪಲ-ಚಾಪಲ್ಯ, ಪ್ರಮಾಣ-ಪ್ರಾಮಾಣಿಕ), ಇ, ಈ ಮತ್ತು ಏ ಸ್ವರಗಳು ಐ ಎಂದಾಗುವುದು (ನಿಸರ್ಗ-ನೈಸರ್ಗಿಕ, ದೀನ-ದೈನ್ಯ, ಚೇತನ-ಚೈತನ್ಯ), ಉ, ಊ ಮತ್ತು ಓ ಸ್ವರಗಳು ಔ ಎಂದಾಗುವುದು (ಸುಖ-ಸೌಖ್ಯ, ಪೂರ್ವಾಹ್ನ-ಪೌರ್ವಾಹ್ನಿಕ, ಲೋಕ-ಲೌಕಿಕ) ಮೊದಲಾದವು ಇಂತಹ ಕೆಲವು ಸಂಸ್ಕ್ರುತದ ನಿಯಮಗಳು.

ಆದರೆ, ಕನ್ನಡದಲ್ಲಿ ಒಟ್ಟುಗಳನ್ನು ಸೇರಿಸಿ ಪದಗಳನ್ನು ರಚಿಸುವಲ್ಲಿ ಇವಕ್ಕಿಂತ ತೀರ ಬೇರಾಗಿರುವ ಸೇರಿಕೆಯ ನಿಯಮಗಳು ಬಳಕೆಯಾಗುತ್ತವೆ. ಇವು (ಕನ್ನಡಿಗರ ಮಟ್ಟಿಗೆ) ಸಂಸ್ಕ್ರುತದ ಸೇರಿಕೆಯ ನಿಯಮಗಳಶ್ಟು ತೊಡಕಿನವಾಗಿಲ್ಲ. ಕನ್ನಡ ಪದಗಳಿಗೆ ಇಕೆ ಒಟ್ಟನ್ನು ಸೇರಿಸಿದಾಗ ಪದಗಳ ಕೊನೆಯ ಉಕಾರ ಬಿದ್ದುಹೋಗುತ್ತದೆ (ಬಳಲು-ಬಳಲಿಕೆ, ಹೊಗಳು-ಹೊಗಳಿಕೆ, ಅಂಜು-ಅಂಜಿಕೆ) ಮತ್ತು ಪದಗಳ ಕೊನೆಯ ಇಕಾರ ಹಾಗೆಯೇ ಉಳಿದು ಇಕೆ ಒಟ್ಟಿನ ಮೊದಲ ಸ್ವರ ಬಿದ್ದುಹೋಗುತ್ತದೆ (ಇರಿ-ಇರಿಕೆ, ತಿರಿ-ತಿರಿಕೆ, ಇಳಿ-ಇಳಿಕೆ).

ಕನ್ನಡದ ಸೊಗಡು ಸಂಸ್ಕ್ರುತದ ಸೊಗಡಿಗಿಂತ ತೀರ ಬೇರಾದುದು ಎಂಬುದನ್ನು ಅವು ಬಳಸುವ ಪದಗಳ ಸ್ವರೂಪದಲ್ಲಿ ಕಾಣಿಸುವಂತಹ ಈ ವ್ಯತ್ಯಾಸಗಳು ತುಂಬಾ ಸ್ಪಶ್ಟವಾಗಿ ತೋರಿಸಿಕೊಡುತ್ತವೆ. ಕನ್ನಡ ಬರಹದಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಅವುಗಳಲ್ಲಿ ಸ್ವಲ್ಪವೂ ಬದಲಾವಣೆಯನ್ನು ಮಾಡದೆ ಬಳಸಿದಲ್ಲಿ ಅಂತಹ ಬರಹ ತನ್ನದೇ ಆದ ಸೊಗಡನ್ನು ಪೂರ್ತಿ ಕಳೆದುಕೊಳ್ಳುತ್ತದೆ. ಈ ರೀತಿ ತನ್ನ ಹುಟ್ಟುಸೊಗಡನ್ನು ಕಳೆದುಕೊಳ್ಳುವ ಬರಹ ತನ್ನತನವನ್ನೂ ಕಳೆದುಕೊಳ್ಳುತ್ತದೆ, ಮತ್ತು ಅದರ ಜೀವಂತಿಕೆ ನಶ್ಟವಾಗಿ ಅದರಲ್ಲಿ ಕ್ರುತಕತೆ ತುಂಬಿಕೊಳ್ಳುತ್ತದೆ. ಇದಲ್ಲದೆ, ಅಂತಹ ಬರಹಕ್ಕೂ ಹೆಚ್ಚಿನ ಕನ್ನಡಿಗರ ಮಾತಿಗೂ ನಡುವೆ ದೊಡ್ಡ ಕಂದಕವೇರ್ಪಟ್ಟು, ಅದು ಅವರೆಲ್ಲರಿಂದಲೂ ದೂರವಾಗುತ್ತದೆ. ಯಾಕೆಂದರೆ, ಬರಹ ಆ ರೀತಿ ಬದಲಾದಾಗಲೂ ಜನರ ಆಡುನುಡಿ ಅದಕ್ಕನುಗುಣವಾಗಿ ಬದಲಾಗುವುದಿಲ್ಲ. ಅದು ತನ್ನ ಪದಸ್ವರೂಪವನ್ನು ಮತ್ತು ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.

ಇದಕ್ಕೆ ಕಾರಣವೇನೆಂದರೆ, ಆಡುನುಡಿಯನ್ನು ಮಕ್ಕಳು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುತ್ತಾರೆ; ಅದನ್ನು ಮಕ್ಕಳಿಗೆ ಯಾರೂ ಕಲಿಸಿಕೊಡಬೇಕಾಗಿಲ್ಲ. ಹಾಗಾಗಿ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಮಾರೆಡೆಗೊಳ್ಳುವಾಗ, ಅದು ತಿರುತಿರುಗಿ ಹೊಸತನವನ್ನು ಮತ್ತು ಜೀವಂತಿಕೆಯನ್ನು ಪಡೆಯುತ್ತಿರುತ್ತದೆ. ಆದರೆ, ಬರಹವನ್ನು ಮಕ್ಕಳು ಶಾಲೆಯಲ್ಲಿ ದೊಡ್ಡವರ ನೆರವಿನಿಂದ ಕಲಿಯಬೇಕಾಗುತ್ತದೆ; ಅದನ್ನು ಅವರು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುವುದಿಲ್ಲ.

ಹಾಗಾಗಿ, ಬರಹಗಾರರು ಕಾಲದಿಂದ ಕಾಲಕ್ಕೆ ಅದನ್ನು ಹೊಸದಾಗಿಸಿಕೊಳ್ಳದಿದ್ದರೆ, ಮತ್ತು ಆಡುನುಡಿಗೆ ಹತ್ತಿರವಾಗುವಂತೆ ಮಾರ್ಪಡಿಸಿಕೊಳ್ಳದಿದ್ದರೆ, ಅದು ಕ್ರುತಕವಾಗುತ್ತಾ ಹೋಗಿ ತನ್ನ ಹುಟ್ಟುಸೊಗಡನ್ನು ಮತ್ತು ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ. ಕನ್ನಡದಲ್ಲಿ ಕತೆ-ಕಾದಂಬರಿಗಳನ್ನು ಬರೆಯುವವರು ತಮ್ಮ ಬರಹ ಈ ರೀತಿ ಕ್ರುತಕವಾಗದಂತೆ ನೋಡಿಕೊಳ್ಳುತ್ತಾರೆ; ಆದರೆ, ಬೇರೆ ಬಗೆಯ ಬರಹಗಳನ್ನು ಬರೆಯುವವರು ಇದನ್ನು ಮಾಡಲು ಹೋಗದುದರಿಂದಾಗಿ ಇವತ್ತು ಅಂತಹ ಬರಹಗಳು ತುಂಬಾ ಕ್ರುತಕವಾಗಿದ್ದು ಸಾಮಾನ್ಯ ಜನರಿಗೆ ತಿಳಿಯದ ಹಾಗಾಗಿವೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದಗಳ ಹಿನ್ನಡವಳಿಯನ್ನು ಅರಿಯುವ ಬಗೆ

ನುಡಿಯರಿಮೆಯ ಇಣುಕುನೋಟ – 29

ಕನ್ನಡದ ಯಾವ ಪದವನ್ನು ಬೇಕಿದ್ದರೂ ಸಂಸ್ಕ್ರುತದ ಪದಗಳಿಂದ ಬಂದುವೆಂಬುದಾಗಿ ತೋರಿಸಿಕೊಡಬಲ್ಲೆವು ಎಂಬ ನಂಬಿಕೆ ಕೆಲವರಲ್ಲಿದೆ; ಹೀಗೆ ತೋರಿಸಿಕೊಡುವುದಕ್ಕಾಗಿ ಅವರು ಪದಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಕಾಣಿಸುವ ಹೋಲಿಕೆಗಳನ್ನು ಮಾತ್ರವಲ್ಲದೆ ಹಲವಾರು ಬಗೆಯ ಕಯ್ಚಳಕಗಳನ್ನೂ ಬಳಸುತ್ತಾರೆ.

ಈ ಕಯ್ಚಳಕಗಳ ಮೂಲಕ ಅವರು ಉಲಿ ಇಲ್ಲವೇ ಹುರುಳುಗಳಲ್ಲಿ ಹೋಲಿಕೆಗಳು ಕಾಣಿಸದಿದ್ದರೂ ಸಂಬಂದವನ್ನು ಕಾಣಬಲ್ಲರು; ಎತ್ತುಗೆಗಾಗಿ, ಕನ್ನಡದ ‘ನೆತ್ತರು’ ಪದವನ್ನು ಸಂಸ್ಕ್ರುತದ ‘ರುಧಿರ’ ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯಿದ್ದರೂ ಉಲಿಯ ಹೋಲಿಕೆ ತುಂಬಾ ಕಡಿಮೆ; ಕನ್ನಡದ ‘ಕಟ್ಟೆ’ ಪದವನ್ನು ಸಂಸ್ಕ್ರುತದ ‘ಕಕ್ಷಾ’ (ಕಂಕುಳು) ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯೂ ತುಂಬಾ ಕಡಿಮೆ. ಹೀಗಿದ್ದರೂ, ಕಯ್ಚಳಕಗಳ ಮೂಲಕ ಅವರು ಇವನ್ನು ಒಂದಕ್ಕೊಂದು ಜೋಡಿಸಿ ಬಿಡುತ್ತಾರೆ. ಇಂತಹ ಕಯ್ಚಳಕಗಳು ಅವರಿಗೆ ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನೆರವಾಗುತ್ತವೆಯಾದರೂ, ನಿಜಕ್ಕೂ ಆ ಪದಗಳ ಹಿನ್ನಡವಳಿ (ಚರಿತ್ರೆ) ಎಂತಹದು ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವು ಯಾವ ನೆರವನ್ನೂ ನೀಡುವುದಿಲ್ಲ.

ಕನ್ನಡದ ಪದಗಳು ಎರಡು ಬಗೆಗಳಲ್ಲಿ ಸಂಸ್ಕ್ರುತ ಪದಗಳೊಂದಿಗೆ ಸಂಬಂದಿಸಿರಬಲ್ಲುವು: ಅವೆರಡೂ ಒಂದೇ ನುಡಿಕುಟುಂಬದ ನುಡಿಗಳೆಂಬುದೊಂದು ಬಗೆ, ಮತ್ತು ಅವುಗಳಲ್ಲಿ ಒಂದು ಇನ್ನೊಂದರಿಂದ ಪದಗಳನ್ನು ಎರವಲು ಪಡೆದಿದೆಯೆಂಬುದಿನ್ನೊಂದು ಬಗೆ. ಹಾಗಾಗಿ, ಯಾವ ಬಗೆಯ ಸಂಬಂದವನ್ನು ಅವುಗಳ ಪದಗಳ ನಡುವೆ ಕಾಣಲಾಗುತ್ತದೆ ಎಂಬುದನ್ನು ಮೊದಲು ತಿಳಿಸಬೇಕಾಗುತ್ತದೆ.

ನುಡಿಗಳಲ್ಲಿ ಕಾಲದಿಂದ ಕಾಲಕ್ಕೆ ಹಲವು ಬಗೆಯ ಮಾರ್‍ಪಾಡುಗಳು ನಡೆಯುತ್ತಲೇ ಇರುತ್ತವೆ; ಇವು ಉಲಿಗಳನ್ನು ಮಾರ್‍ಪಡಿಸಬಹುದು, ಪದಗಳನ್ನು ಇಲ್ಲವೇ ಅವುಗಳ ಹುರುಳುಗಳನ್ನು ಮಾರ್‍ಪಡಿಸಬಹುದು, ಮತ್ತು ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳನ್ನು ಮಾರ್‍ಪಡಿಸಬಹುದು. ಇಂತಹ ಹಲವು ಬಗೆಯ ಮಾರ್‍ಪಾಡುಗಳು ನಡೆದುದರಿಂದಾಗಿ ಹಳೆಗನ್ನಡವಿದ್ದುದು ನಡುಗನ್ನಡವಾಗಿ ಇವತ್ತು ಹೊಸಗನ್ನಡವಾಗಿದೆ, ಮತ್ತು ಹೊಸಗನ್ನಡವೂ ಹಲವು ಬಗೆಯ ಆಡುನುಡಿಗಳಾಗಿ ಒಡೆದುಕೊಂಡಿದೆ.

ಕಾಲದಿಂದ ಕಾಲಕ್ಕೆ ನಡೆಯುವ ಇಂತಹ ಮಾರ್‍ಪಾಡುಗಳಲ್ಲಿ ನುಡಿಯ ಉಲಿಗಳಲ್ಲಿ ನಡೆಯುವ ಮಾರ್‍ಪಾಡುಗಳೇ ತುಂಬಾ ಮುಕ್ಯವಾದವುಗಳು; ಯಾಕೆಂದರೆ, ಅವುಗಳಿಂದಾಗಿ ಪದಗಳ ಮತ್ತು ಒಟ್ಟು(ಪ್ರತ್ಯಯ)ಗಳ ರೂಪದಲ್ಲಿ ಮಾತ್ರವಲ್ಲದೆ, ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲೂ ಮಾರ್‍ಪಾಡುಗಳು ನಡೆಯುತ್ತವೆ. ಕನ್ನಡದ ಹಿನ್ನಡವಳಿಯಲ್ಲಿ ಇಂತಹ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳು ನಡೆದಿವೆ.

ಹಳೆಗನ್ನಡದ ಪಕಾರ ಹಕಾರವಾಗಿರುವುದು (ಪಾಲು>ಹಾಲು, ಪಳೆ>ಹಳೆ, ಪೋಗು>ಹೋಗು); ರ-ಱ, ಳ-ೞಗಳ ನಡುವಿನ ವ್ಯತ್ಯಾಸ ಇಲ್ಲವಾಗಿರುವುದು, ಉದ್ದ ತೆರೆಯುಲಿ (ಸ್ವರ) ಮತ್ತು ತಡೆಯುಲಿ(ಸ್ಪರ‍್ಶ)ಗಳ ನಡುವಿನ ಮೂಗುಲಿ (ಅನುನಾಸಿಕ) ಬಿದ್ದುಹೋಗಿರುವುದು (ನೂಂಕು>ನೂಕು, ದಾಂಟು>ದಾಟು) ಮೊದಲಾದುವು ಇಂತಹ ಉಲಿಗಳ ಮಾರ್‍ಪಾಡುಗಳು.

ಇವು ಉಲಿಗಳ ಮಾರ್‍ಪಾಡುಗಳಲ್ಲದೆ ಪದಗಳ ಮಾರ್‍ಪಾಡುಗಳಲ್ಲ ಎಂಬುದನ್ನು ಗಮನಿಸುವುದು ಅವಶ್ಯ; ಪಕಾರ ಹಕಾರವಾಗುವಂತಹ ಒಂದು ಮಾರ್‍ಪಾಡು ನಡೆದಾಗ, ಪಕಾರವಿದ್ದ ಎಲ್ಲಾ (ಸಾವಿರಕ್ಕಿಂತಲೂ ಹೆಚ್ಚು) ಪದಗಳೂ ಅದಕ್ಕೆ ಒಳಗಾಗಿರುತ್ತವೆ. ಇಂತಹ ಮಾರ್‍ಪಾಡುಗಳು ಒಂದು ಉಲಿಯನ್ನು ಎಲ್ಲೆಡೆಗಳಲ್ಲೂ ತಾಗಬಹುದು, ಇಲ್ಲವೇ ಕೆಲವೆಡೆಗಳಲ್ಲಿ ಮಾತ್ರ ತಾಗಬಹುದು; ಪಕಾರ ಹಕಾರವಾಗುವ ಮಾರ್‍ಪಾಡು ಪಕಾರವನ್ನು ಎಲ್ಲೆಡೆಗಳಲ್ಲೂ ತಾಗಿದೆ; ಆದರೆ, ಎಕಾರ ಇಕಾರವಾಗುವ ಇನ್ನೊಂದು ಮಾರ್‍ಪಾಡು ಎಕಾರದ ಬಳಿಕ ಒತ್ತೆ ಮುಚ್ಚುಲಿ (ವ್ಯಂಜನ) ಮತ್ತು ಇಕಾರ ಇಲ್ಲವೇ ಉಕಾರ ಬಂದಿರುವಲ್ಲಿ ಮಾತ್ರ ನಡೆದಿದೆ, ಬೇರೆಡೆಗಳಲ್ಲಿ ಎಕಾರ ಮಾರ್‍ಪಡದೆ ಉಳಿದಿದೆ (ಬಿಳಿ, ಬಿಸಿ, ನಿಡು ಎಂಬಂತಹ ಪದಗಳಲ್ಲಿ ಈ ಮಾರ್‍ಪಾಡು ನಡೆದಿದೆ. ಆದರೆ ಬೆಳ್ಳಗೆ, ಬೆಚ್ಚಗೆ, ನೆಟ್ಟಗೆ ಎಂಬಂತಹ ಪದಗಳಲ್ಲಿ ನಡೆದಿಲ್ಲ). ಇದಲ್ಲದೆ, ಇಂತಹ ಮಾರ್‍ಪಾಡುಗಳಿಗೆಲ್ಲ ಒಂದು ಗಡುವಿರುತ್ತದೆ; ಈ ಗಡುವು ಮುಗಿದ ಮೇಲೆ ಹಿಂದಿನ ಬರಹಗಳಿಂದ (ಪಾಲು, ಪುಟ್ಟ, ಪೆಟ್ಟು) ಇಲ್ಲವೇ ಬೇರೆ ನುಡಿಗಳಿಂದ (ಪಾಪ, ಪುಣ್ಯ, ಪೂಜೆ) ಪದಗಳು ಎರವಲಾಗಿ ಬಂದು ಈ ಮಾರ್‍ಪಾಡಿಗೆ ಹೊರಪಡಿಕೆಗಳಾಗಿ ಕಾಣಿಸಬಲ್ಲುವು.

ಎರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ತೀರ‍್ಮಾನಿಸುವಲ್ಲೆಲ್ಲ ಇಂತಹ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯವಾದ ನೆಲೆಯಾಗಿ ಬಳಸಿಕೊಳ್ಳಲಾಗುತ್ತದೆ. ಯಾಕೆಂದರೆ, ನುಡಿಗಳಲ್ಲಿ ನಡೆಯುವ ಹಲವು ಬಗೆಯ ಮಾರ್‍ಪಾಡುಗಳಲ್ಲಿ ಉಲಿಗಳ ಮಾರ್‍ಪಾಡುಗಳ ಮೇಲೆ ಮಾತ್ರ ಪದಗಳ ಹುರುಳುಗಳು ಯಾವ ಪ್ರಬಾವವನ್ನೂ ಬೀರುವುದಿಲ್ಲ; ನೇರವಾಗಿ ಪದಗಳಲ್ಲಿ ಇಲ್ಲವೇ ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲಿ ನಡೆಯುವ ಮಾರ್‍ಪಾಡುಗಳ ಮೇಲೆ ಅವು ಹಲವು ಬಗೆಗಳಲ್ಲಿ ಪ್ರಬಾವವನ್ನು ಬೀರುತ್ತವೆ, ಮತ್ತು ಈ ರೀತಿ ಹುರುಳುಗಳಿಂದ ಪ್ರಬಾವಿತವಾಗಿರುವ ಮಾರ್‍ಪಾಡುಗಳನ್ನು ಕಚಿತವಾದ ಕಟ್ಟಲೆಗಳಲ್ಲಿ ಸೆರೆಹಿಡಿಯಲು ಬರುವುದಿಲ್ಲ; ಯಾಕೆಂದರೆ, ಹುರುಳುಗಳಿಂದ ಪ್ರಬಾವಿತವಾದ ಮಾರ್‍ಪಾಡುಗಳಿಗೆ ಹಲವಾರು ಬಗೆಯ ಹೊರಪಡಿಕೆಗಳಿರುತ್ತವೆ.

ಹಾಗಾಗಿ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂಬ ತೀರ್‍ಮಾನಕ್ಕೆ ಬರಬೇಕಿದ್ದಲ್ಲಿ ಕನ್ನಡದ ಹಿನ್ನಡವಳಿಯಲ್ಲಿ ನಡೆದ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯ ನೆಲೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಎಂದರೆ, ಕನ್ನಡ ಮತ್ತು ಸಂಸ್ಕ್ರುತ ಪದಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಕನ್ನಡದ ಹಿನ್ನಡವಳಿಯಲ್ಲಿ ನಡೆದಿದ್ದ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳಿಂದಾಗಿ ಮೂಡಿಬಂದಿವೆ ಎಂಬುದಾಗಿ ತೋರಿಸಿಕೊಡಲು ಸಾದ್ಯವಾದಾಗ ಮಾತ್ರ ಕನ್ನಡ ಸಂಸ್ಕ್ರುತದಿಂದ ಬೆಳೆದುಬಂದಿದೆ ಎಂಬುದನ್ನು ಒಪ್ಪಿಕೊಳ್ಳಲು ಬರುತ್ತದೆ. ಆದರೆ, ಇದುವರೆಗೆ ಯಾರಿಗೂ ಆ ರೀತಿ ತೋರಿಸಿಕೊಡಲು ಸಾದ್ಯವಾಗಿಲ್ಲ.

ಹಾಗಾಗಿ, ಸದ್ಯಕ್ಕಂತೂ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿಲ್ಲವೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಮತ್ತು ಕನ್ನಡದಲ್ಲಿ ಮೂಲದ್ರಾವಿಡ ನುಡಿಯಿಂದ ಬಂದ ಕನ್ನಡದವೇ ಆದ ಪದಗಳು, ಮತ್ತು ಸಂಸ್ಕ್ರುತವೇ ಮೊದಲಾದ ಬೇರೆ ನುಡಿಗಳಿಂದ ಎರವಲಾಗಿ ಬಂದ ಪದಗಳು ಎಂಬುದಾಗಿ ಎರಡು ಬಗೆಯ ಪದಗಳು ಇವೆಯೆಂಬುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.

ಕನ್ನಡದ ಪದಗಳಿಗೂ ಸಂಸ್ಕ್ರುತದ ಪದಗಳಿಗೂ ನಡುವೆ ಅವುಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಹೋಲಿಕೆಯಿದೆಯಾದರೆ, ಅದಕ್ಕೆ ಹಲವು ಕಾರಣಗಳಿರಬಲ್ಲುವು. ಎತ್ತುಗೆಗಾಗಿ, ಈ ಎಲ್ಲಾ ಪದಗಳನ್ನೂ ಉಂಟುಮಾಡಿದವರು ಮಾನವರೇ ಎಂಬುದೊಂದು ಕಾರಣ; ಹೋಲಿಕೆ ಬರಿಯ ಆಕಸ್ಮಿಕವಾಗಿರಬಹುದೆಂಬುದಿನ್ನೊಂದು ಕಾರಣ. ಹಾಗಾಗಿ, ಒಂದು ನುಡಿ ಇನ್ನೊಂದರಿಂದ ಎರವಲು ಪಡೆದಿದೆಯೆಂಬುದು ಪದಗಳ ನಡುವಿರುವ ಹೋಲಿಕೆಗಳಿಗಿರುವ ಹಲವು ಕಾರಣಗಳಲ್ಲಿ ಒಂದು ಮಾತ್ರ. ಇದಲ್ಲದೆ, ಇಲ್ಲಿಯೂ ಒಂದು ಪದವನ್ನು ಯಾವ ನುಡಿ ಯಾವ ನುಡಿಯಿಂದ ಎರವಲಾಗಿ ಪಡೆದಿದೆ ಎಂಬುದನ್ನು ತೀರ್‍ಮಾನಿಸುವಲ್ಲಿ ಅರಕೆಗೆ ನೆಲೆಯಿದೆ.

ಸಾಮಾನ್ಯವಾಗಿ, ಒಂದು ಪದದ ಹರಹು ಎಂತಹದು ಎಂಬುದರ ಮೇಲೆ ಅದರ ಹಿನ್ನಡವಳಿಯೆಂತಹದು ಎಂಬುದನ್ನು ತೀರ್‍ಮಾನಿಸಲಾಗುತ್ತದೆ; ಎತ್ತುಗೆಗಾಗಿ, ಕನ್ನಡದ ಒಂದು ಪದಕ್ಕೆ ಸಮಾನವಾದ ಪದಗಳು ತಮಿಳು, ತೆಲುಗು, ಗೋಂಡಿ, ಕುಡುಕ್ ಮೊದಲಾದ ಬೇರೆ ಹಲವು ದ್ರಾವಿಡ ನುಡಿಗಳಲ್ಲೂ ಕಾಣಿಸಿಕೊಳ್ಳುತ್ತಿವೆಯಾದರೆ, ಮತ್ತು ಸಂಸ್ಕ್ರುತವನ್ನು ಹೊರತುಪಡಿಸಿ ಉಳಿದ ಲ್ಯಾಟಿನ್, ಗ್ರೀಕ್, ಪರ್‍ಶಿಯನ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳಲ್ಲಿ ಕಾಣಿಸುವುದಿಲ್ಲವಾದರೆ, ಅದು ಕನ್ನಡದ್ದೇ ಆದ ಪದ, ಮತ್ತು ಸಂಸ್ಕ್ರುತಕ್ಕೇನೇ ಅದು ದ್ರಾವಿಡ ನುಡಿಗಳಿಂದ ಎರವಲಾಗಿ ಬಂದಿದೆ ಎಂದು ಹೇಳಬೇಕಾಗುತ್ತದೆ.

ಇಂತಹ ಅರಕೆಗಳನ್ನು ನಡೆಸದೆ ಬರಿಯ ಹೋಲಿಕೆಯ ಮೇಲೆ ಎಲ್ಲವೂ ಸಂಸ್ಕ್ರುತದಿಂದ ಬಂದಿವೆಯೆಂದು ಹೇಳುವುದನ್ನು ಒಂದು ಅರಿಮೆಯ ಹೇಳಿಕೆಯೆಂದು ತಿಳಿಯಲು ಬರುವುದಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಪದ ಮತ್ತು ಅದರ ಹುರುಳು

ನುಡಿಯರಿಮೆಯ ಇಣುಕುನೋಟ – 27

ನುಡಿಗಳಲ್ಲಿ ಬಳಕೆಯಾಗುವ ಪದಗಳನ್ನು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗುತ್ತದೆ; ಮ್, ಅ, ನ್ ಮತ್ತು ಎ ಎಂಬ ನಾಲ್ಕು ಉಲಿಗಳ ಸೇರಿಕೆಯಿಂದ ‘ಮನೆ’ ಎಂಬ ಪದವನ್ನು ಉಂಟುಮಾಡಲಾಗಿದೆ; ಆದರೆ, ಈ ಉಲಿಗಳಲ್ಲಿ ಯಾವುದಕ್ಕೂ ಅದರದೇ ಆದ ಹುರುಳಿಲ್ಲ; ಅವುಗಳ ಸೇರಿಕೆಯಿಂದ ಉಂಟಾದ ‘ಮನೆ’ ಎಂಬ ಪದಕ್ಕೆ ಮಾತ್ರ ಹುರುಳಿದೆ. ಯಾಕೆಂದರೆ, ‘ಮ್’ ಎಂಬುದು ಮನೆ ಎಂಬ ಪದದಲ್ಲಿ ಮಾತ್ರವಲ್ಲದೆ, ಮಂಗ, ಮಜ್ಜಿಗೆ, ಕಡಿಮೆ, ಮಿಂಚು, ಕಮಟು, ಅಮ್ಮ ಮೊದಲಾದ ಬೇರೆಯೂ ಹಲವು ಪದಗಳಲ್ಲಿ ಬರುತ್ತದೆ, ಮತ್ತು ಈ ಎಲ್ಲಾ ಪದಗಳಿಗೂ ಸಮಾನವಾಗಿರುವ ಹುರುಳೊಂದನ್ನು ಕಂಡುಹಿಡಿದು, ಅದು ‘ಮ್’ ಎಂಬ ಉಲಿಯ ಹುರುಳು ಎಂಬುದಾಗಿ ತೋರಿಸಿಕೊಡಲು ಸಾದ್ಯವೇ ಇಲ್ಲ.

ಇದಲ್ಲದೆ, ಪದಗಳ ಅಂಗಗಳಾಗಿರುವ ಉಲಿಗಳು ಮಾರ‍್ಪಟ್ಟಾಗಲೂ ಅವುಗಳ ಹುರುಳು ಮಾರ‍್ಪಡದೆ ಉಳಿಯುತ್ತದೆ; ಈ ವಿಶಯವೂ ಹುರುಳೆಂಬುದು ಪದಗಳಿಗಿದೆಯಲ್ಲದೆ ಉಲಿಗಳಿಗಿಲ್ಲ ಎಂಬುದನ್ನು ಬೆಂಬಲಿಸುತ್ತದೆ. ಹಳೆಗನ್ನಡದ ಪಾಲ್ ಎಂಬುದು ಹಾಲು ಎಂಬುದಾಗಿ, ಬೞ್ದುಂಕು ಎಂಬುದು ಬದುಕು ಎಂಬುದಾಗಿ, ಬೆರಲ್ ಎಂಬುದು ಬೆರಳ್ ಎಂಬುದಾಗಿ ಹೊಸಗನ್ನಡದಲ್ಲಿ ಮಾರ‍್ಪಟ್ಟಾಗ, ಅದರಿಂದಾಗಿ ಆ ಪದಗಳಿಗೆ ಮೊದಲಿಗಿದ್ದ ಹುರುಳುಗಳಲ್ಲಿ ಮಾರ‍್ಪಾಡುಗಳೇನೂ ಆಗಿರಲಿಲ್ಲ.

ಉಲಿಗಳಿಗೆ ಅವುಗಳದೇ ಆದ ಹುರುಳಿಲ್ಲದಿದ್ದರೂ ಪದಗಳಿಗೆ ಅವುಗಳದೇ ಆದ ಹುರುಳಿದೆಯೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ; ಅದರೆ, ಇಲ್ಲೂ ಕೆಲವು ಸಮಸ್ಯೆಗಳಿವೆ; ಪದನೆರಕೆ(ಡಿಕ್ಶನರಿ)ಗಳಲ್ಲಿ ಹೆಚ್ಚಿನ ಪದಗಳಿಗೂ ಎರಡು ಇಲ್ಲವೇ ಹೆಚ್ಚು ಹುರುಳುಗಳನ್ನು ಕೊಡಲಾಗುತ್ತದೆಯೆಂಬುದನ್ನು ಗಮನಿಸಬಹುದು; ಆದರೆ, ಈ ಪದಗಳನ್ನು ಸೊಲ್ಲುಗಳಲ್ಲಿ ಬಳಸಿದಾಗ, ಅವುಗಳ ಈ ಹಲವು ಹುರುಳುಗಳಲ್ಲಿ ಒಂದು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎತ್ತುಗೆಗಾಗಿ, ಕಾಯು ಎಂಬ ಪದಕ್ಕೆ ಕಾಪಾಡು ಎಂಬ ಹುರುಳೂ ಇದೆ, ಬಿಸಿಮಾಡು ಎಂಬ ಹುರುಳೂ ಇದೆ; ಆದರೆ, ‘ನಾಯಿ ಮನೆಯನ್ನು ಕಾಯುತ್ತಿದೆ’ ಎಂಬ ಸೊಲ್ಲನ್ನು ಬಳಸಿದಾಗ ಕಾಯು ಪದದ ಮೊದಲನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದಲ್ಲದೆ, ಎರಡನೆಯ ಹುರುಳು ಗಮನಕ್ಕೆ ಬರುವುದಿಲ್ಲ.

ಇದೇ ರೀತಿಯಲ್ಲಿ ‘ಹಂಡೆಯಲ್ಲಿ ನೀರು ಕಾಯುತ್ತಿದೆ’ ಎಂಬ ಬೇರೊಂದು ಸೊಲ್ಲನ್ನು ಬಳಸಿದಾಗ ಅದರ ಎರಡನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎಂದರೆ, ಒಂದು ಪದ ನಮಗೆ ಎಂತಹ ಹುರುಳನ್ನು ಕೊಡುತ್ತದೆ ಎಂಬುದು ಅದನ್ನು ಎಂತಹ ಸೊಲ್ಲಿನಲ್ಲಿ ಬಳಸಲಾಗಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ. ಕೆಲವೊಮ್ಮೆ ಈ ರೀತಿ ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದು ತೊಂದರೆಯನ್ನೂ ಕೊಡಬಲ್ಲುದು. ಎತ್ತುಗೆಗಾಗಿ, ‘ಅವನು ಕರೆಯಲು ಬಂದಿದ್ದಾನೆ’ ಎಂದಿಶ್ಟೇ ಹೇಳಿದಲ್ಲಿ ಅವನು ಎಲ್ಲಿಗಾದರೂ ಬರಬೇಕೆಂದು ಹೇಳಲು ಬಂದಿದ್ದಾನೋ ಇಲ್ಲವೇ ದನವನ್ನು ಕರೆಯಲು ಬಂದಿದ್ದಾನೋ ಎಂಬ ವಿಶಯದಲ್ಲಿ ಗೊಂದಲವುಂಟಾಗಬಲ್ಲುದು. ಆದರೆ, ಸಾಮಾನ್ಯವಾಗಿ ನಾವು ಮಾತನ್ನು ಬಳಸುವಾಗ ಆ ರೀತಿ ಗೊಂದಲವುಂಟಾಗದಂತೆ ನೋಡಿಕೊಳ್ಳುತ್ತೇವೆ.

ಮಾತಿನಲ್ಲಿ ಬಳಕೆಯಾಗುವ ಪದಗಳಲ್ಲಿ ಹಲವಕ್ಕೆ (ಹೆಸರುಪದಗಳಿಗೆ) ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುವ ಕಸುವಿರುತ್ತದೆ. ‘ಸುರೇಶ ಒಂದು ಹಣ್ಣು ತಿಂದ’ ಎಂಬ ಸೊಲ್ಲಿನಲ್ಲಿ ಎರಡು ಹೆಸರುಪದಗಳು ಬಂದಿದ್ದು, ಅವುಗಳಲ್ಲಿ ‘ಹಣ್ಣು’ ಎಂಬ ಪದ ಒಂದು ವಸ್ತುವನ್ನು ಗುರುತಿಸುತ್ತದೆ ಮತ್ತು ‘ಸುರೇಶ’ ಎಂಬ ಪದ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಪದಗಳ ಮೂಲಕ ಮಾತ್ರವಲ್ಲದೆ ಪದಕಂತೆಗಳ ಮೂಲಕವೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಬರುತ್ತದೆ. ‘ಕುರ‍್ಚಿಯಲ್ಲಿ ಕುಳಿತಿರುವ ಮುದುಕ’ ಎಂಬ ಪದಕಂತೆ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ, ಮತ್ತು ‘ರಾಜು ಕೊಟ್ಟ ಪುಸ್ತಕ’ ಎಂಬ ಇನ್ನೊಂದು ಪದಕಂತೆ ಒಂದು ವಸ್ತುವನ್ನು ಗುರುತಿಸುತ್ತದೆ.

ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ಪದಗಳ ಮೂಲಕ ಗುರುತಿಸುವುದಕ್ಕೂ ಪದಕಂತೆಗಳ ಮೂಲಕ ಗುರುತಿಸುವುದಕ್ಕೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ. ಪದಕಂತೆಗಳ ಮೂಲಕ ಗುರುತಿಸುವಾಗ ಅವುಗಳ ಹುರುಳು ಬಳಕೆಯಾಗುತ್ತದೆ, ಆದರೆ ಪದಗಳ ಮೂಲಕ ಗುರುತಿಸುವಾಗ ಆ ರೀತಿ ಅವುಗಳ ಹುರುಳು ಬಳಕೆಯಾಗುವುದಿಲ್ಲ. ಅದಕ್ಕೆ ಬದಲು, ಪದಗಳಿಗೂ ಅವು ತಿಳಿಸಬಲ್ಲ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ಸಂಬಂದ ಬಳಕೆಯಾಗುತ್ತದೆ.

ನಿಜಕ್ಕೂ ಒಂದು ಹೆಸರುಪದದ ಹುರುಳೇನು ಎಂಬುದನ್ನು ತಿಳಿಯಬೇಕಿದ್ದಲ್ಲಿ ಮೊದಲಿಗೆ ಅದು ಎಂತಹ ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ‘ನಾಯಿ’ ಎಂಬ ಪದ ಎಂತಹ ಪ್ರಾಣಿಯನ್ನು ಗುರುತಿಸಲು ಬಳಕೆಯಾಗುತ್ತದೆ, ಮತ್ತು ಆ ಪ್ರಾಣಿಯ ಪರಿಚೆ(ಗುಣ)ಗಳು ಎಂತಹವು ಎಂಬುದನ್ನು ತಿಳಿದಾಗ ಮಾತ್ರ ನಮಗೆ ಆ ಪದದ ಹುರುಳೇನು ಎಂಬುದು ಗೊತ್ತಾಗುತ್ತದೆ; ಹಾಗಾಗಿ, ಆ ಪ್ರಾಣಿಯ ಪರಿಚೆಗಳನ್ನೇ ಒಟ್ಟಾಗಿ ‘ನಾಯಿ’ ಎಂಬ ಪದದ ಹುರುಳು ಎಂದು ಹೇಳಬೇಕಾಗುತ್ತದೆ.

ಒಳರಚನೆಯಿರುವ ಪದಗಳ ಹುರುಳನ್ನೂ ಇದೇ ರೀತಿಯಲ್ಲಿ ಅವು ತಿಳಿಸುವ ವಸ್ತು, ವ್ಯಕ್ತಿ ಮೊದಲಾದವುಗಳ ಪರಿಚೆಗಳು ಎಂತಹವು ಎಂಬುದರಿಂದ ತಿಳಿಯಬೇಕಾಗುತ್ತದಲ್ಲದೆ ಅವುಗಳ ಒಳರಚನೆ ಎಂತಹದು ಎಂಬುದರಿಂದ ತಿಳಿಯಲು ಬರುವುದಿಲ್ಲ. ‘ಹೊಸಮನೆ’ ಎಂಬ ಪದದಲ್ಲಿ ‘ಹೊಸ’ ಮತ್ತು ‘ಮನೆ’ ಎಂಬ ಎರಡು ಪದಗಳು ಸೇರಿಕೊಂಡಿವೆ; ಆದರೆ, ಅದು ಗುರುತಿಸುವ ಮನೆ ಹೊಸದಾಗಿರಬಲ್ಲುದು, ಇಲ್ಲವೇ ತುಂಬಾ ಹಳೆಯದಾಗಿರಬಲ್ಲುದು; ಯಾಕೆಂದರೆ, ಒಮ್ಮೆ ಒಂದು ಮನೆಯನ್ನು ಆ ಹೆಸರಿನಿಂದ ಕರೆಯತೊಡಗಿದ ಮೇಲೆ, ಅದು ತುಂಬಾ ಹಳೆಯದಾದಾಗಲೂ ಆ ಹೆಸರನ್ನು ನಾವು ಬದಲಾಯಿಸಹೋಗುವುದಿಲ್ಲ; ಎಂದರೆ, ‘ಹೊಸಮನೆ’ ಎಂಬ ಪದದ ಹುರುಳು ಅದು ಗುರುತಿಸುವ ಮನೆಯ ಪರಿಚೆಗಳು ಬದಲಾದ ಹಾಗೆಲ್ಲ ಬದಲಾಗುತ್ತಾ ಹೋಗುತ್ತದೆ. ‘ಹಳೆಮನೆ’ ಎಂಬ ಹೆಸರಿರುವ ಇನ್ನೊಂದು ಮನೆಯನ್ನು ಕೆಡವಿ ಅಲ್ಲೊಂದು ಹೊಸಮನೆಯನ್ನು ಕಟ್ಟಿದಾಗಲೂ ಅದಕ್ಕೆ ಮೊದಲು ಬಳಕೆಯಲ್ಲಿದ್ದ ‘ಹಳೆಮನೆ’ ಎಂಬ ಹೆಸರು ಹಾಗೆಯೇ ಉಳಿದಿರುತ್ತದೆ; ಆ ಪದದ ಹುರುಳು ಮಾತ್ರ ಮಾರ‍್ಪಟ್ಟಿರುತ್ತದೆ.

ಹೆಸರುಪದಗಳಿಗೆ ಅವುಗಳ ಹುರುಳಿನೊಂದಿಗಿರುವ ಸಂಬಂದಕ್ಕಿಂತಲೂ ಅವು ಸೂಚಿಸುವ ವ್ಯಕ್ತಿ, ವಸ್ತು, ಸಂಗತಿ ಮೊದಲಾದವುಗಳೊಂದಿಗಿರುವ ಸಂಬಂದವೇ ಹೆಚ್ಚು ಮುಕ್ಯವಾದುದು ಎಂಬ ವಿಶಯ ಇದರಿಂದ ಸ್ಪಶ್ಟವಾಗುತ್ತದೆ. ಕೆಲವೆಡೆಗಳಲ್ಲಿ ಪದಗಳ ಒಳರಚನೆಯನ್ನು ಬಳಸಿ ಅವುಗಳ ಹುರುಳನ್ನು ಊಹಿಸಿಕೊಳ್ಳಬಲ್ಲೆವಾದರೂ ಈ ವಿಶಯದಲ್ಲಿ ಕೊನೆಯ ತೀರ‍್ಮಾನಕ್ಕೆ ಬರಲು ಇಂತಹ ಸಂಬಂದದ ನೆರವು ಬೇಕೇ ಬೇಕು.

ಸೊಲ್ಲುಗಳಲ್ಲಿ ಬರುವ ಎಸಕ(ಕ್ರಿಯಾ)ಪದ, ಪರಿಚೆ(ಗುಣ)ಪದ ಮೊದಲಾದವುಗಳ ಹುರುಳೇನೆಂಬುದನ್ನು ತೀರ‍್ಮಾನಿಸುವುದು ಇದಕ್ಕಿಂತಲೂ ಹೆಚ್ಚು ತೊಡಕಿನ ಕೆಲಸ. ಯಾಕೆಂದರೆ, ಅದಕ್ಕಾಗಿ ಅವು ಬರುವ ಪದಕಂತೆಗಳ ಇಲ್ಲವೇ ಸೊಲ್ಲುಗಳ ಹುರುಳೇನೆಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಆ ಹುರುಳಿನಲ್ಲಿ ಯಾವುದೇ ಒಂದು ಎಸಕಪದದ ಇಲ್ಲವೇ ಪರಿಚೆಪದದ ಕೊಡುಗೆ ಎಂತಹದು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ. ಪದಗಳೊಂದಿಗೆ ಬರುವ ಒಟ್ಟು(ಪ್ರತ್ಯಯ)ಗಳ ಹುರುಳನ್ನೂ ಇದೇ ರೀತಿಯಲ್ಲಿ ಆ ಪದಗಳ ಬಳಕೆಯಲ್ಲಿ ಅವುಗಳ ಕೊಡುಗೆ ಎಂತಹದು ಎಂಬುದನ್ನು ಪರಿಶೀಲಿಸುವ ಮೂಲಕ ತಿಳಿಯಬೇಕಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಮಂಗಗಳು ಯಾಕೆ ಮಾತನಾಡಲಾರವು?

ನುಡಿಯರಿಮೆಯ ಇಣುಕುನೋಟ – 25

ಮಂಗಗಳಿಗೆ ಮಾತನ್ನು ಕಲಿಸಬೇಕೆಂದು ಪ್ರಯತ್ನಿಸುವವರು ಅದಕ್ಕಾಗಿ ಉಲಿಗಳನ್ನು ಬಳಸುವುದಿಲ್ಲ. ಯಾಕೆಂದರೆ, ಮಂಗಗಳು ಎರಡು ಮೂರು ಉಲಿಗಳನ್ನಶ್ಟೇ ಉಲಿಯಬಲ್ಲುವು. ಆದರೆ, ಒಂದು ನುಡಿಯಲ್ಲಿ ಮಾತನಾಡಬೇಕೆಂದಿದ್ದಲ್ಲಿ, ಅದಕ್ಕಾಗಿ ಹಲವಾರು ಉಲಿಗಳನ್ನು ಉಲಿಯಲು ತಿಳಿದಿರಬೇಕಾಗುತ್ತದೆ. ಎತ್ತುಗೆಗಾಗಿ, ಕನ್ನಡದಲ್ಲಿ ನುಡಿಯಲು ಹೆಚ್ಚುಕಡಿಮೆ ಮೂವತ್ತೊಂದು ಉಲಿಗಳು ಬೇಕಾಗುತ್ತವೆ. ಹಾಗಾಗಿ, ಮಂಗಗಳಿಗೆ ಮಾತನ್ನು ಕಲಿಸುವವರು ಉಲಿಗಳ ಬದಲು ಸನ್ನೆಗಳನ್ನು ಬಳಸಬೇಕಾಗಿದೆ.

ನಮಗಿರುವಂತಹ ನೂರಾರು ಉಲಿಗಳನ್ನು ಉಲಿಯುವ ಅಳವು ಮಂಗಗಳಿಗಿಲ್ಲದಿರಲು ನಮ್ಮ ಬಾಯಿಯ ರಚನೆಗೂ ಮಂಗಗಳ ಬಾಯಿಯ ರಚನೆಗೂ ನಡುವಿರುವ ವ್ಯತ್ಯಾಸವೇ ಮುಕ್ಯ ಕಾರಣ. ಮಂಗಗಳ ಬಾಯಿಯ ಬುಡದಲ್ಲೇನೇ ದಪ್ಪವಾದ ಎಲುಬಿರುವ ಎಪಿಗ್ಲೋಟಿಸ್ ಎಂಬ ಅಂಗವಿದೆ. ಮೂಗಿನಿಂದ ಶ್ವಾಸಕೋಶದೊಳಕ್ಕೆ ಉಸಿರು ನೇರವಾಗಿ ಹೋಗುವಂತೆ ಇದು ನೋಡಿಕೊಳ್ಳುತ್ತದೆ; ತಿನ್ನುವ ಸಮಯದಲ್ಲಿ ಈ ಅಂಗ ಉಸಿರಿನ ನಾಳವನ್ನು ಪೂರ‍್ತಿ ಮುಚ್ಚಿಬಿಡುತ್ತದೆ, ಮತ್ತು ತಿಂದ ತಿಂಡಿ ನೇರವಾಗಿ ಹೊಟ್ಟೆಗೆ ಹೋಗುವಂತೆ ಮಾಡುತ್ತದೆ. ಆದರೆ, ನಮ್ಮ ಬಾಯಿಯಲ್ಲಿರುವ ಎಪಿಗ್ಲೋಟಿಸ್‌ಗೆ ಈ ಕಸುವಿಲ್ಲ. ಯಾಕೆಂದರೆ, ಅದರೊಳಗೆ ಮಂಗನ ಎಪಿಗ್ಲೋಟಿಸ್‌ನಲ್ಲಿರುವ ಹಾಗೆ ದಪ್ಪವಾದ ಎಲುಬಿಲ್ಲ.

ಇದಲ್ಲದೆ, ಈ ಅಂಗ ನಮ್ಮ ಗಂಟಲಿನಲ್ಲಿ ಬಹಳ ಕೆಳಗೆ ಉಲಿಪೆಟ್ಟಿಗೆಯ ಹತ್ತಿರ ಇದೆ. ಈ ಕಾರಣಕ್ಕಾಗಿ, ಕೆಲವೊಮ್ಮೆ ನಾವು ತಿಂದ ತಿಂಡಿ ನೇರವಾಗಿ ಹೊಟ್ಟೆಯೊಳಕ್ಕೆ ಹೋಗುವ ಬದಲು ಉಲಿಪೆಟ್ಟಿಗೆಯಿರುವಲ್ಲಿಗೆ ಹೋಗಿ ನಮಗೆ ಉಸಿರುಕಟ್ಟಿದ ಹಾಗಾಗುತ್ತದೆ. ಇದರಿಂದಾಗಿ ಕೆಲವು ಮಂದಿ ಸತ್ತು ಹೋಗುವುದೂ ಇದೆ. ಮಾತಿಗೆ ಬೇಕಾಗುವ ಹಲವಾರು ಉಲಿಗಳನ್ನು ಉಂಟುಮಾಡಲು ಬಾಯಿಯಲ್ಲಿ ಹೆಚ್ಚು ಜಾಗ ಬೇಕಾಗುತ್ತದೆಯೆಂಬ ಒಂದೇ ಕಾರಣಕ್ಕಾಗಿ, ಹೀಗೆ ನಮ್ಮ ಬಾಯಿಯಲ್ಲಿ ಉಸಿರುನಾಳ ಮತ್ತು ಆಹಾರನಾಳಗಳನ್ನು ಬೇರ‍್ಪಡಿಸುವ ಜಾಗ ತುಂಬಾ ಅಪಾಯಕರವಾದ ರೀತಿಯಲ್ಲಿ ರಚಿತವಾಗಿದೆ.

ಉಲಿಗಳ ಬದಲು ಕಯ್ಸನ್ನೆ, ಕಣ್ಣುಸನ್ನೆ ಮೊದಲಾದವುಗಳನ್ನು ಬಳಸಿಯೂ ‘ಮಾತ’ನಾಡಲು ಬರುತ್ತದೆ ಎಂಬುದನ್ನು ಕಿವುಡರ ಸನ್ನೆನುಡಿ ತೋರಿಸಿಕೊಟ್ಟಿದೆ; ಮಂಗಗಳು ಇಂತಹ ಸನ್ನೆಗಳನ್ನು ಬಳಸಬಲ್ಲುವಾದರೂ ಬೇರೆ ಕೆಲವು ಕಾರಣಗಳಿಗಾಗಿ ಅವಕ್ಕೆ ನಮ್ಮ ಹಾಗೆ ಮಾತನ್ನು ಇಲ್ಲವೇ ನುಡಿಯನ್ನು ಬಳಸಲು ಸಾದ್ಯವಾಗದು. ಎತ್ತುಗೆಗಾಗಿ, ಮಾತನ್ನು ಮತ್ತು ಅದಕ್ಕೆ ಬೇಕಾಗುವ ಸಾವಿರಾರು ಪದಗಳನ್ನು ಮತ್ತು ಸೊಲ್ಲರಿಮೆಯ ಕಟ್ಟಲೆಗಳನ್ನು ಇರಿಸಿಕೊಳ್ಳಲು, ಮತ್ತು ಬೇಕಾದಾಗ ಬೇಕಾದಂತೆ ಅವನ್ನು ಬಳಸಿಕೊಳ್ಳಲು ಮಿದುಳು ಸಾಕಶ್ಟು ದೊಡ್ಡದಾಗಿರಬೇಕಾಗುತ್ತದೆ; ಆದರೆ, ಮಂಗಗಳಿಗಿರುವ ಮಿದುಳು ನಮ್ಮ ಮಿದುಳಿನ ಕಾಲಂಶದಶ್ಟೂ ಇಲ್ಲ.

ಮಾನವನಿಗೂ ಇತರ ಪ್ರಾಣಿಗಳಿಗೂ ನಡುವೆ ಒಂದು ಮಾತನ್ನು ಯಾವಾಗ ಮತ್ತು ಎಲ್ಲಿ ಬಳಸಲು ಸಾದ್ಯ ಎಂಬ ವಿಶಯದಲ್ಲಿ ದೊಡ್ಡ ವ್ಯತ್ಯಾಸವಿದೆ. ಶಾಲೆಯಿಂದ ಬಂದ ಹುಡುಗ ಆವತ್ತು ಶಾಲೆಯಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ತನ್ನ ತಾಯಿಗೆ ಹೇಳಬಲ್ಲ; ಮಾರನೆಯ ದಿವಸ ತನ್ನ ತರಗತಿಗೆ ಯಾರು ಬರಲಿದ್ದಾರೆ, ಅದಕ್ಕಾಗಿ ತಾನು ಏನು ಮಾಡಬೇಕು ಎಂಬುದನ್ನೂ ತಿಳಿಸಬಲ್ಲ; ತನ್ನ ಗೆಳೆಯ ಈಗ ತನ್ನ ಮನೆಯಲ್ಲಿ ಏನು ಮಾಡುತ್ತಿರಬಹುದು ಎಂಬುದನ್ನೂ ಕಲ್ಪಿಸಿ ಹೇಳಬಲ್ಲ. ಬೇರೆ ಪ್ರಾಣಿಗಳು ಇದೊಂದನ್ನೂ ಮಾಡಲಾರವು.

ಬೆಕ್ಕು ಹಸಿವಾದಾಗ ಮಾತ್ರ ಮಿಯಾಂ ಎನ್ನಬಹುದಲ್ಲದೆ ತನಗೆ ಬೆಳಿಗ್ಗೆ ಹಸಿವಾಗಿತ್ತು ಎಂಬುದನ್ನು ಸೂಚಿಸಲಾರದು. ಜೇನುಹುಳುಗಳು ಮಾತ್ರ ಇದಕ್ಕೆ ಸ್ವಲ್ಪಮಟ್ಟಿಗಿನ ಹೊರಪಡಿಕೆಗಳಾಗಿವೆಯೆಂದು ಹೇಳಬಹುದು; ಅವು ತುಂಬಾ ಹೂಬಿಟ್ಟಿರುವ ಮರವೊಂದನ್ನು ನೋಡಿ ಗೂಡಿಗೆ ಮರಳಿ ಬಂದ ಮೇಲೆ ಅದು ಎಲ್ಲಿದೆಯೆಂಬುದನ್ನು ಉಳಿದ ಜೇನುಹುಳುಗಳಿಗೆ ತಮ್ಮ ಕುಣಿತದ ಮೂಲಕ ತಿಳಿಸಬಲ್ಲುವು. ಆದರೆ, ಅವುಗಳ ಈ ಕಸುವಿಗೂ ಒಂದು ಮಿತಿಯಿದೆ: ಅವು ನಮ್ಮ ಹಾಗೆ ಮುಂದೆ ಏನು ನಡೆಯಬಹುದೆಂಬುದನ್ನು ಊಹಿಸಿ ತಿಳಿಸಲಾರವು.

ಮಾತನ್ನು ಬಳಸಲು ನಮಗೆ ಹೊರಗಿನ ಉತ್ತೇಜನ ಬೇಕಾಗಿಲ್ಲ. ಕೋಪ ಬರದಿದ್ದರೂ ಕೋಪದಿಂದ ಮಾತನಾಡಬಲ್ಲೆವು; ಹೋಳಿಗೆಯನ್ನು ತಿನ್ನದಿದ್ದರೂ ಅದರ ಸವಿಯನ್ನು ತಿಂದವನ ಹಾಗೆ ವರ‍್ಣಿಸಬಲ್ಲೆವು; ಸ್ವರ‍್ಗ ನರಕಗಳನ್ನು ಕಾಣದಿದ್ದರೂ ಅಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಮನಮುಟ್ಟುವಂತೆ ವಿವರಿಸಬಲ್ಲೆವು. ಮಾನವನ ಮಾತಿನ ಬಳಕೆಯಲ್ಲಿ ಮಾತ್ರವೇ ಕಾಣಿಸುವ ಈ ಕಾಲ ಮತ್ತು ಜಾಗಗಳ ಕಟ್ಟಿಲ್ಲದಿರುವಿಕೆ ಅವನ ಮಾತಿಗೆ ಒಂದು ದೊಡ್ಡ ಕಸುವನ್ನು ತಂದುಕೊಟ್ಟಿದೆ. ನಮ್ಮ ಇಡೀ ಸಂಸ್ಕ್ರುತಿಯೇ ಈ ಕಸುವನ್ನು ಅವಲಂಬಿಸಿದೆ. ಅದಿಲ್ಲದೆ ನಾವು ಯಾವ ಸಂಶೋದನೆಯನ್ನೂ ಮಾಡಲಾರೆವು; ಸಾಹಿತ್ಯ, ನಾಟಕ, ಸಿನೆಮಾ, ಮೊದಲಾದ ನಮ್ಮ ಸಂಸ್ಕ್ರುತಿಯ ಯಾವ ಅಂಶವೂ ಅದಿಲ್ಲದೆ ಬೆಳೆದಿರಲಾರದು.

ಸಾಮಾನ್ಯವಾಗಿ, ನಾವು ನಡೆಸುವ ಹಲವಾರು ಬಗೆಯ ಕೆಲಸಗಳ ಕುರಿತಾಗಿರುವ ತಿಳುವಳಿಕೆಗಳು ನಮ್ಮ ಮಿದುಳಿನಲ್ಲಿ ಅರಿವಿಗೆ ಬಾರದ ರೂಪದಲ್ಲಿರುತ್ತವೆ. ಅವು ಎಂತಹವೆಂದು ನಮಗೆ ತಿಳಿಯದಿದ್ದರೂ ನಮ್ಮ ಕೆಲಸಗಳ ಮೇಲೆ ಅವುಗಳ ಕಯ್ವಾಡವಿದ್ದೇ ಇರುತ್ತದೆ. ಇಂತಹ ತಿಳುವಳಿಕೆಗಳಲ್ಲಿ ಹಲವನ್ನು ನಾವು ನಮ್ಮ ಅರಿವಿಗೆ ಬರುವಂತೆ ಮಾಡಬಲ್ಲೆವು, ಮತ್ತು ಮಾತಿನ ಮೂಲಕ ವಿವರಿಸಬಲ್ಲೆವು; ಆದರೆ ಬೇರೆ ಪ್ರಾಣಿಗಳು ಹಾಗೆ ಮಾಡಲಾರವು ಎಂಬುದು ಅವನ್ನು ನಮ್ಮಿಂದ ಬೇರ‍್ಪಡಿಸುವ ಇನ್ನೊಂದು ದೊಡ್ಡ ಪರಿಚೆಯಾಗಿದೆ.

ಈ ಪರಿಚೆ ನಮ್ಮ ಮಾತಿಗೆ ಒಂದು ದೊಡ್ಡ ಕಸುವನ್ನೂ ತಂದುಕೊಟ್ಟಿದೆ. ಎತ್ತುಗೆಗಾಗಿ, ಮನಸ್ಸಿಗೆ ಬಂದುದನ್ನು ನಾವು ಬರಬರನೆ ಉಸಿರಬಲ್ಲೆವು; ಇಲ್ಲವೇ ಅದನ್ನು ಮೊದಲಿಗೆ ನಮ್ಮ ಅರಿವಿಗೆ ತಂದುಕೊಂಡು, ಕೇಳುಗನ ಮೇಲೆ ಅದು ಎಂತಹ ಪರಿಣಾಮವನ್ನು ಬೀರಬಹುದು ಎಂಬುದನ್ನು ಆಲೋಚಿಸಿ, ಅನಂತರ ಅದನ್ನು ಆತನಿಗೆ ತಿಳಿಸಬಲ್ಲೆವು; ಇಲ್ಲವೇ ತಿಳಿಸದೆಯೂ ಇರಬಲ್ಲೆವು.

ಇತರ ಕೆಲಸಗಳಲ್ಲೂ ನಮ್ಮ ತಿಳುವಳಿಕೆಯನ್ನು ಅರಿವಿಗೆ ಬರುವಂತೆ ಮಾಡುವ ಮೂಲಕ ಆ ಕೆಲಸ ಮಾಡುವ ಕ್ರಮವನ್ನು ನಾವು ಹಲವು ರೀತಿಯಲ್ಲಿ ಬದಲಿಸಿನೋಡಬಲ್ಲೆವು ಮತ್ತು ಅದನ್ನು ಮಾಡಲು ಹೊಸ ಹೊಸ ಹೊಲಬುಗಳನ್ನು ಕಂಡುಹಿಡಿಯಬಲ್ಲೆವು. ಎತ್ತುಗೆಗಾಗಿ, ಕಣ್ಣಿನಿಂದ ಕಾಣಲು ಕಣ್ಣಿನ ಮಸೂರವನ್ನು ಹೇಗೆ ಹಿಗ್ಗಿಸುತ್ತೇವೆ ಇಲ್ಲವೇ ಕುಗ್ಗಿಸುತ್ತೇವೆ ಎಂಬುದನ್ನು ಅರಿವಿಗೆ ಎಟಕುವ ತಿಳುವಳಿಕೆಯಾಗಿ ಬದಲಿಸಿರುವ ಕಾರಣ, ಕಣ್ಣಿನ ದೋಶವನ್ನು ನಿವಾರಿಸುವುದಕ್ಕಾಗಿ ಕನ್ನಡಕವನ್ನು ಬಳಸುವ ಹೊಲಬನ್ನು ಕಂಡುಹಿಡಿಯಲು ನಮಗೆ ಸಾದ್ಯವಾಗಿದೆ.

ನಮ್ಮ ಮಾತಿನ ಬಳಕೆಯಲ್ಲೂ ಈ ಪರಿಚೆಯ ನೆರವಿನಿಂದ ಹಲವಾರು ಬಗೆಯ ಬದಲಾವಣೆಗಳನ್ನು ನಾವು ನಮ್ಮ ಜೀವನದಲ್ಲಿ ಮಾಡಿಕೊಂಡಿದ್ದೇವೆ. ಎತ್ತುಗೆಗಾಗಿ, ಈ  ಪರಿಚೆಯಿಲ್ಲದಿದ್ದಲ್ಲಿ ಮಾತನ್ನು ನಮಗೆ ಬರಹ ರೂಪಕ್ಕಿಳಿಸಲು ಆಗುತ್ತಿರಲಿಲ್ಲ. ನಮ್ಮ ನುಡಿಯಲ್ಲಿ ಬೇರೆ ಬೇರೆ ರೀತಿಯ ಅರಿಮೆಗಳ (ಶಾಸ್ತ್ರ ಮತ್ತು ವಿಜ್ನಾನಗಳ) ಬೆಳವಣಿಗೆಗಳುಂಟಾಗುವುದಕ್ಕೂ ಈ ಪರಿಚೆಯೇ ಕಾರಣ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಬರಹದಲ್ಲಿ ಯಾವುದು ಸರಿ, ಯಾವುದು ತಪ್ಪು?

ನುಡಿಯರಿಮೆಯ ಇಣುಕುನೋಟ – 20

ಕನ್ನಡದಲ್ಲಿ ಬಳಕೆಯಾಗುವ ಪದಗಳು ಮತ್ತು ಪದರೂಪಗಳುಸರಿಯೋ ತಪ್ಪೋ ಎಂಬುದನ್ನು ತೀರ‍್ಮಾನಿಸುವಲ್ಲಿ ನಾವು ಯಾವ ಕಟ್ಟಲೆಗಳನ್ನು ಬಳಸಬೇಕು? ಕನ್ನಡದ ಕಟ್ಟಲೆಗಳನ್ನೇ ಬಳಸಬೇಕೆಂದು ಯಾರೂ ಹೇಳಬಹುದು. ಆದರೆ, ಇವತ್ತು ಹಲವು ಮಂದಿ ಕನ್ನಡದ ವಿದ್ವಾಂಸರಿಗೆ ಇದು ಒಪ್ಪಿಗೆಯಾಗುವುದಿಲ್ಲ. ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬಳಸುವಾಗ ಸಂಸ್ಕ್ರುತದ ಕಟ್ಟಲೆಗಳನ್ನೇ ತಪ್ಪದೆ ಬಳಸಬೇಕೆಂಬುದಾಗಿ ಅವರು ಹೇಳುತ್ತಾರೆ. ಕನ್ನಡದ ವಿದ್ವಾಂಸರಲ್ಲಿ ಹಿಂದಿನ ಕಾಲದಿಂದಲೂ ಬೆಳೆದುಬಂದಿರುವ ಕನ್ನಡದ ಕುರಿತಾಗಿರುವ ಕೀಳರಿಮೆ ಮತ್ತು ಸಂಸ್ಕ್ರುತದ ಕುರಿತಾಗಿರುವ ಅತಿಯಾದ ಆದರ ಮತ್ತು ಅಬಿಮಾನಗಳೇ ಇದಕ್ಕೆ ಕಾರಣ.

ಎತ್ತುಗೆಗಾಗಿ, ಸೊಲ್ಲರಿಗರನ್ನು ಸೂಚಿಸಲು ಸಂಸ್ಕ್ರುತದಲ್ಲಿ ಎರಡು ಪದಗಳಿವೆ. ಇವುಗಳಲ್ಲಿ ‘ವಯ್ಯಾಕರಣಃ’ ಎಂಬುದು ಗಂಡಸರನ್ನು ಸೂಚಿಸುತ್ತದೆ ಮತ್ತು ‘ವಯ್ಯಾಕರಣೀ’ ಎಂಬುದು ಹೆಂಗಸರನ್ನು ಸೂಚಿಸುತ್ತದೆ. ಆದರೆ, ಕನ್ನಡದಲ್ಲಿ ಗಂಡಸರನ್ನು ಸೂಚಿಸುವುದಕ್ಕಾಗಿಯೂ ‘ವಯ್ಯಾಕರಣಿ’ ಎಂಬ ಪದವೇ ಬಳಕೆಗೆ ಬಂದಿದೆ. ಇದನ್ನು ಕಿಟ್ಟೆಲ್ ಅವರ ಡಿಕ್ಶನರಿಯಲ್ಲಿ ನೋಡಬಹುದು. ಆದರೆ ಇದು ತಪ್ಪು, ಗಂಡಸರನ್ನು ಸೂಚಿಸಲು ‘ವಯ್ಯಾಕರಣ’ ಎಂಬುದನ್ನೇ ಬಳಸಬೇಕು ಎಂಬುದಾಗಿ ಕೆಲವರು ಕನ್ನಡದ ವಿದ್ವಾಂಸರು ವಾದಿಸುತ್ತಾರೆ.

ಇದಕ್ಕೆ ಅವರಿಗೆ ಸಂಸ್ಕ್ರುತ ವ್ಯಾಕರಣದ ಕಟ್ಟಲೆಯೇ ಆದಾರ. ಆದರೆ ನಿಜಕ್ಕೂ ಇದು ಸರಿಯಲ್ಲ. ಯಾಕೆಂದರೆ, ಯಾವ ನುಡಿಯಿಂದಲೇ ಆಗಲಿ ಒಂದು ಪದವನ್ನು ಎರವಲಾಗಿ ಪಡೆದ ಮೇಲೆ, ಅದನ್ನು ಯಾವ ರೀತಿಯಲ್ಲಿ ಮತ್ತು ಯಾವ ರೂಪದಲ್ಲಿ ಬಳಸಬೇಕು ಎಂಬುದಕ್ಕೆ ಎರವಲಾಗಿ ಪಡೆದ ನುಡಿಯಲ್ಲಿರುವ ಬಳಕೆಯ ಕಟ್ಟಲೆಗಳೇ ಆದಾರವಾಗಬೇಕಲ್ಲದೆ ಎರವಲು ಕೊಟ್ಟ ನುಡಿಯ ಕಟ್ಟಲೆಗಳಲ್ಲ.

ಎತ್ತುಗೆಗಾಗಿ, ಸಂಸ್ಕ್ರುತದಿಂದ ಹಲವು ನಾಮಪದಗಳನ್ನು ನಾವು ಕನ್ನಡಕ್ಕೆ ಎರವಲಾಗಿ ಪಡೆದು ಬಳಸುತ್ತೇವೆ. ಇವುಗಳಲ್ಲಿ ಕೆಲವಕ್ಕೆ ಇಸು ಒಟ್ಟನ್ನು ಸೇರಿಸಿ ಕ್ರಿಯಾಪದಗಳಾಗಿ ಮಾಡಿಯೂ ಬಳಸುತ್ತೇವೆ (ಜಪ-ಜಪಿಸು, ಕೋಪ-ಕೋಪಿಸು, ರುಚಿ-ರುಚಿಸು). ಆದರೆ, ಈ ಬಳಕೆಗೆ ಕನ್ನಡದ ಕಟ್ಟಲೆಗಳು ಆದಾರವಲ್ಲದೆ ಸಂಸ್ಕ್ರುತದ ಕಟ್ಟಲೆಗಳಲ್ಲ.

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ಲಿಂಗವನ್ನು ನಿರ‍್ದರಿಸುವಲ್ಲೂ ನಾವು ಕನ್ನಡದ ಕಟ್ಟಲೆಗಳನ್ನು ಬಳಸುತ್ತೇವಲ್ಲದೆ ಸಂಸ್ಕ್ರುತದ ಕಟ್ಟಲೆಗಳನ್ನಲ್ಲ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಪುಲ್ಲಿಂಗದಲ್ಲಿರುವ ದೇಶ, ಮಾರ‍್ಗ, ದೀಪ ಮೊದಲಾದ ಪದಗಳನ್ನು, ಮತ್ತು ಸ್ತ್ರೀಲಿಂಗದಲ್ಲಿರುವ ನದಿ, ಲಿಪಿ, ಚರ‍್ಚೆ ಮೊದಲಾದ ಪದಗಳನ್ನು ನಾವು ನಪುಂಸಕ ಲಿಂಗದಲ್ಲಿ ಬಳಸುತ್ತೇವಲ್ಲದೆ ಪುಲ್ಲಿಂಗ ಇಲ್ಲವೇ ಸ್ತ್ರೀಲಿಂಗದಲ್ಲಲ್ಲ. ಸಂಸ್ಕ್ರುತದಲ್ಲಿ ನಾಮಪದಗಳಿಂದ ಬೇರಾದ ಗುಣಪದಗಳೆಂಬ ಪದಗಳಿಲ್ಲ.

ಹೀಗಿದ್ದರೂ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ವ್ಯಾವಹಾರಿಕ, ಸಾಮಾಜಿಕ, ಯಾಂತ್ರಿಕ ಮೊದಲಾದ ಹಲವು ಪದಗಳನ್ನು ನಾವು ನಾಮಪದಗಳಿಂದ ಬೇರಾಗಿರುವ ಗುಣಪದಗಳಾಗಿ ಬಳಸುತ್ತೇವೆ. ಹಾಗಾಗಿ, ವಯ್ಯಾಕರಣಿಯಂತಹ ಪದಗಳ ಮಟ್ಟಿಗೂ ನಾವು ಇದೇ ಕ್ರಮವನ್ನು ಅನುಸರಿಸುವುದು ಸರಿಯಾದ ದಾರಿ. ಕನ್ನಡದಲ್ಲಿ ಅವು ಯಾವ ರೀತಿಯಲ್ಲಿ ಬಳಕೆಗೆ ಬಂದಿವೆ ಎಂಬುದು ನಮಗೆ ಮುಕ್ಯವಲ್ಲದೆ ಆ ಬಳಕೆ ಸಂಸ್ಕ್ರುತದ ನಿಯಮಗಳಿಗೆ ಅನುಸಾರವಾಗಿದೆಯೇ ಇಲ್ಲವೇ ಎಂಬುದು ಮುಕ್ಯವಲ್ಲ.

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳಲ್ಲಿ ಬರುವ ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳು ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಕಾಣಿಸುವುದಿಲ್ಲ; ಹಾಗಿದ್ದರೂ ‘ಅವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು; ಇಲ್ಲವಾದರೆ ಅದು ತಪ್ಪಾಗುತ್ತದೆ’ ಎಂದು ಹೇಳುವುದೂ ಸಂಸ್ಕ್ರುತದ ಕಟ್ಟಲೆಗಳನ್ನು ಕನ್ನಡದ ಮೇಲೆ ಹೊರಿಸುವ ತಪ್ಪು ದಾರಿಯಾಗಿದೆ. ಹೆಚ್ಚಿನ ಕನ್ನಡಿಗರ ಓದಿನಲ್ಲಿ ಇಲ್ಲವೇ ಮಾತಿನಲ್ಲಿ ಈ ಎರವಲು ಪದಗಳು ಹೇಗೆ ಕಾಣಿಸುತ್ತವೆಯೋ ಹಾಗೆ ಬರೆಯುವುದೇ ಕನ್ನಡದ ಮಟ್ಟಿಗೆ ಸರಿಯಾದ ದಾರಿ.

ಇನ್ನೊಂದು ಬಗೆಯ ‘ತಪ್ಪು’ಗಳು ಆಡುನುಡಿಯಿಂದ ಪದಗಳನ್ನು ಇಲ್ಲವೇ ಪದರೂಪಗಳನ್ನು ಬರಹಕ್ಕೆ ತಂದು ಬಳಸುವಲ್ಲಿ ಕಾಣಿಸಿಕೊಳ್ಳುತ್ತವೆ. ಆಡುನುಡಿಯೆಂಬುದು ಊರಿನಿಂದ ಊರಿಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿರುತ್ತದೆ. ಆದರೆ, ಬರಹದ ನುಡಿ ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕೆಂದು ನಾವು ಬಯಸುತ್ತೇವೆ. ಯಾಕೆಂದರೆ, ಹಾಗಿಲ್ಲವಾದರೆ ಒಂದು ಊರಿನ ಮತ್ತು ಜಾತಿಯ ಬರಹಗಾರರು ಬರೆದುದನ್ನು ಇನ್ನೊಂದು ಊರಿನ ಮತ್ತು ಜಾತಿಯ ಜನರಿಗೆ ಓದಿ ಅರ‍್ತಮಾಡಿಕೊಳ್ಳಲು ಕಶ್ಟವಾಗುತ್ತದೆ.

ಈ ಸಮಾನತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಬರಹದ ನುಡಿಯಲ್ಲಿ ಎಂತಹ ಮಾರ‍್ಪಾಡನ್ನು ನಡೆಸುವುದಿದ್ದರೂ ಅದು ಎಲ್ಲಾ ಊರು ಮತ್ತು ಜಾತಿಗಳಿಗೆ ಸೇರಿದ ಜನರಿಗೂ ಒಪ್ಪಿಗೆಯಾಗುವಂತಹದಾಗಿರಬೇಕು. ಎಲ್ಲಾ ಬರಹಗಾರರೂ ತಮಗೆ ಅನಿಸಿದ ಹಾಗೆ ತಮ್ಮ ಬರಹದ ನುಡಿಯಲ್ಲಿ ಮಾರ‍್ಪಾಡುಗಳನ್ನು ಮಾಡಹೊರಟರೆ ಈ ಸಮಾನತೆ ಪೂರ‍್ತಿ ಅಳಿದು ಹೋದೀತು.

ಬರಹದಲ್ಲಿ ತಪ್ಪು-ಸರಿ ಎಂಬ ಪರಿಕಲ್ಪನೆಯನ್ನು ಈ ಅರ‍್ತದಲ್ಲಿ ಬಳಸಲು ಸಾದ್ಯವಿದೆ. ಕನ್ನಡದ ಕೆಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಬಿದ್ದುಹೋಗಿದೆ; ಹಾಲು ಎಂಬುದು ಆಲು ಎಂದಾಗಿದೆ, ಹಣ್ಣು ಎಂಬುದು ಅಣ್ಣು ಎಂದಾಗಿದೆ, ಹುಳ ಎಂಬುದು ಉಳ ಎಂದಾಗಿದೆ. ಈ ರೀತಿ ಕೆಲವರು ಕನ್ನಡಿಗರು ತಮ್ಮ ಆಡುನುಡಿಯ ಪದಗಳಲ್ಲಿದ್ದ ಹಕಾರವನ್ನು ಕಳೆದುಕೊಂಡುದರಲ್ಲಿ ತಪ್ಪಾಗಿರುವಂತಹದು ಏನೂ ಇಲ್ಲ. ಅದು ಅವರ ಆಡುನುಡಿಯಲ್ಲಿ ಸ್ವಾಬಾವಿಕವಾಗಿ ನಡೆದಿರುವ ಒಂದು ಮಾರ‍್ಪಾಡು ಮಾತ್ರ. ಇದಲ್ಲದೆ, ಅದು ಅವರ ಆಡುನುಡಿಯನ್ನು ಕೆಡಿಸಿಲ್ಲ; ಅದರ ಜೀವಂತಿಕೆಯನ್ನು ಉಳಿಸಿದೆ.

ಆದರೆ, ಕನ್ನಡದ ಬೇರೆ ಹಲವು ಆಡುನುಡಿಗಳಲ್ಲಿ ಪದಗಳ ಮೊದಲಿನ ಹಕಾರ ಈ ರೀತಿ ಬಿದ್ದುಹೋಗಿಲ್ಲ; ಹಾಗಾಗಿ, ಇವತ್ತು ಎಲ್ಲಾ ಊರು ಮತ್ತು ಜಾತಿಗಳಿಗೂ ಸಮಾನವಾಗಿರಬೇಕಾದ ಬರಹದ ಕನ್ನಡದಲ್ಲಿ ಹಕಾರವನ್ನು ಉಳಿಸಿಕೊಳ್ಳಬೇಕೇ ಇಲ್ಲವೇ ಬಿದ್ದುಹೋಗಲು ಬಿಡಬೇಕೇ ಎಂಬುದನ್ನು ನಿರ‍್ದರಿಸಬೇಕಾಗುತ್ತದೆ. ಉಳಿಸಬೇಕೆಂದು ಹೆಚ್ಚಿನ ಕನ್ನಡಿಗರೂ ಬಯಸುವುದಾದರೆ, ಬರಹದಲ್ಲಿ ಹಕಾರವನ್ನು ಬಳಸದಿರುವುದು (ಇಲ್ಲವೇ ಬೇಡದಲ್ಲಿ ಬಳಸುವುದು) ‘ತಪ್ಪಾ’ಗುತ್ತದೆ.

ಇದೇ ರೀತಿಯಲ್ಲಿ, ಇವತ್ತು ಬಡಗ ಕರ‍್ನಾಟಕದ ಕೆಲವು ಆಡುನುಡಿಗಳಲ್ಲಿ ನಾಮಪದಗಳ ಕೊನೆಯಲ್ಲಿದ್ದ ಎಕಾರ ಇಕಾರವಾಗಿದೆ. ಮನೆ ಎಂಬುದು ಮನಿ ಎಂದಾಗಿದೆ, ಕಾಗೆ ಎಂಬುದು ಕಾಗಿ ಎಂದಾಗಿದೆ, ಕುದುರೆ ಎಂಬುದು ಕುದ್ರಿ ಎಂದಾಗಿದೆ. ಆದರೆ ಕನ್ನಡದ ಬೇರೆ ಆಡುನುಡಿಗಳಲ್ಲಿ ಈ ಮಾರ‍್ಪಾಡು ನಡೆದಿಲ್ಲ. ಇಲ್ಲೂ ಕೂಡ, ಎಲ್ಲರಿಗೂ ಸಮಾನವಾಗಿರಬೇಕಾದ ಬರಹದ ಕನ್ನಡಕ್ಕೆ ಈ ಮಾರ‍್ಪಾಡನ್ನು ತರಬೇಕೇ ಬೇಡವೇ ಎಂಬುದನ್ನು ತೀರ‍್ಮಾನಿಸಬೇಕಾಗುತ್ತದೆ, ಮತ್ತು ಬೇಡವೆಂದು ತೀರ‍್ಮಾನಿಸಿದಲ್ಲಿ ಹಾಗೆ ತರುವುದು ಬರಹದ ಮಟ್ಟಿಗೆ ‘ತಪ್ಪು’ ಎಂಬುದಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಬೇಕಾಗುತ್ತದೆ.

ಆದರೆ, ಇಂತಹ ಯಾವ ಮಾರ‍್ಪಾಡೂ ಬರಹದ ಕನ್ನಡವನ್ನು ಕೆಡಿಸುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಆಲು ಇಲ್ಲವೇ ಮನಿ ಎಂಬ ಪದರೂಪದಲ್ಲಿಲ್ಲದಂತಹ ನುಡಿಯ ಬಳಕೆಗೆ ಅವಶ್ಯವಾಗಿರುವ ಯಾವ ಅಂಶವೂ ಹಾಲು ಇಲ್ಲವೇ ಮನೆ ಎಂಬ ಪದರೂಪದಲ್ಲಿಲ್ಲ. ಇಲ್ಲಿ ತಪ್ಪು ಮತ್ತು ಸರಿ ಎಂಬವುಗಳು ಎಂತಹ ಬರಹ ನಮ್ಮೊಳಗೆ ಸಮಾನವಾಗಿ ಉಳಿಯಬೇಕು ಎಂಬ ತೀರ‍್ಮಾನವನ್ನಶ್ಟೇ ಅವಲಂಬಿಸಿದೆ. ಇವತ್ತು ಬಳಕೆಯಲ್ಲಿರುವ ತೀರ‍್ಮಾನವನ್ನು ನಾವು ಅವಶ್ಯವೆಂದೆನಿಸಿದಲ್ಲಿ ಮಾರ‍್ಪಡಿಸಬಲ್ಲೆವು, ಮತ್ತು ಹಾಗೆ ಮಾರ‍್ಪಡಿಸಿದಾಗ ಇವತ್ತು ತಪ್ಪು ಎಂದು ತಿಳಿದಿರುವ ಪದರೂಪಗಳು ಸರಿಯೆಂದೆನಿಸಬಲ್ಲುವು.

ಸಂಸ್ಕ್ರುತ ಎರವಲುಗಳನ್ನು ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬ ಕಟ್ಟಲೆ ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾದುದು ಮಾತ್ರವಲ್ಲ, ಕನ್ನಡ ಬರಹವನ್ನು ಎಲ್ಲಾ ಕನ್ನಡಿಗರೂ ಸುಲಬವಾಗಿ ಕಲಿತು ತಮ್ಮದಾಗಿಸಿಕೊಳ್ಳುವಲ್ಲಿ ಒಂದು ದೊಡ್ಡ ತೊಡಕಾಗಿದೆ; ಕೆಲವೇ ಕೆಲವು ಜನರಶ್ಟೇ ಬರಹವನ್ನು ಬಳಸುತ್ತಿದ್ದ ಹಿಂದಿನ ಕಾಲದಲ್ಲಿ ಈ ಕಟ್ಟಲೆ ಹೆಚ್ಚು ತೊಡಕಿನದೆಂದು ಅನಿಸುತ್ತಿರಲಿಲ್ಲ. ಆದರೆ, ಇವತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗಬೇಕಾಗಿದೆ; ಹಾಗಾಗಿ, ಕನ್ನಡಕ್ಕೆ ಬೇಡದ ಈ ಸಂಸ್ಕ್ರುತದ ಹೊರೆಯನ್ನು ತೆಗೆದುಹಾಕುವುದೇ ಒಳ್ಳೆಯದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter