Posts Tagged ‘ನುಡಿಕುಟುಂಬ’

ಪದಗಳ ಹಿನ್ನಡವಳಿಯನ್ನು ಅರಿಯುವ ಬಗೆ

ನುಡಿಯರಿಮೆಯ ಇಣುಕುನೋಟ – 29

ಕನ್ನಡದ ಯಾವ ಪದವನ್ನು ಬೇಕಿದ್ದರೂ ಸಂಸ್ಕ್ರುತದ ಪದಗಳಿಂದ ಬಂದುವೆಂಬುದಾಗಿ ತೋರಿಸಿಕೊಡಬಲ್ಲೆವು ಎಂಬ ನಂಬಿಕೆ ಕೆಲವರಲ್ಲಿದೆ; ಹೀಗೆ ತೋರಿಸಿಕೊಡುವುದಕ್ಕಾಗಿ ಅವರು ಪದಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಕಾಣಿಸುವ ಹೋಲಿಕೆಗಳನ್ನು ಮಾತ್ರವಲ್ಲದೆ ಹಲವಾರು ಬಗೆಯ ಕಯ್ಚಳಕಗಳನ್ನೂ ಬಳಸುತ್ತಾರೆ.

ಈ ಕಯ್ಚಳಕಗಳ ಮೂಲಕ ಅವರು ಉಲಿ ಇಲ್ಲವೇ ಹುರುಳುಗಳಲ್ಲಿ ಹೋಲಿಕೆಗಳು ಕಾಣಿಸದಿದ್ದರೂ ಸಂಬಂದವನ್ನು ಕಾಣಬಲ್ಲರು; ಎತ್ತುಗೆಗಾಗಿ, ಕನ್ನಡದ ‘ನೆತ್ತರು’ ಪದವನ್ನು ಸಂಸ್ಕ್ರುತದ ‘ರುಧಿರ’ ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯಿದ್ದರೂ ಉಲಿಯ ಹೋಲಿಕೆ ತುಂಬಾ ಕಡಿಮೆ; ಕನ್ನಡದ ‘ಕಟ್ಟೆ’ ಪದವನ್ನು ಸಂಸ್ಕ್ರುತದ ‘ಕಕ್ಷಾ’ (ಕಂಕುಳು) ಪದದಿಂದ ಪಡೆಯಬಲ್ಲರು; ಇಲ್ಲಿ ಹುರುಳಿನ ಹೋಲಿಕೆಯೂ ತುಂಬಾ ಕಡಿಮೆ. ಹೀಗಿದ್ದರೂ, ಕಯ್ಚಳಕಗಳ ಮೂಲಕ ಅವರು ಇವನ್ನು ಒಂದಕ್ಕೊಂದು ಜೋಡಿಸಿ ಬಿಡುತ್ತಾರೆ. ಇಂತಹ ಕಯ್ಚಳಕಗಳು ಅವರಿಗೆ ತಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನೆರವಾಗುತ್ತವೆಯಾದರೂ, ನಿಜಕ್ಕೂ ಆ ಪದಗಳ ಹಿನ್ನಡವಳಿ (ಚರಿತ್ರೆ) ಎಂತಹದು ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವು ಯಾವ ನೆರವನ್ನೂ ನೀಡುವುದಿಲ್ಲ.

ಕನ್ನಡದ ಪದಗಳು ಎರಡು ಬಗೆಗಳಲ್ಲಿ ಸಂಸ್ಕ್ರುತ ಪದಗಳೊಂದಿಗೆ ಸಂಬಂದಿಸಿರಬಲ್ಲುವು: ಅವೆರಡೂ ಒಂದೇ ನುಡಿಕುಟುಂಬದ ನುಡಿಗಳೆಂಬುದೊಂದು ಬಗೆ, ಮತ್ತು ಅವುಗಳಲ್ಲಿ ಒಂದು ಇನ್ನೊಂದರಿಂದ ಪದಗಳನ್ನು ಎರವಲು ಪಡೆದಿದೆಯೆಂಬುದಿನ್ನೊಂದು ಬಗೆ. ಹಾಗಾಗಿ, ಯಾವ ಬಗೆಯ ಸಂಬಂದವನ್ನು ಅವುಗಳ ಪದಗಳ ನಡುವೆ ಕಾಣಲಾಗುತ್ತದೆ ಎಂಬುದನ್ನು ಮೊದಲು ತಿಳಿಸಬೇಕಾಗುತ್ತದೆ.

ನುಡಿಗಳಲ್ಲಿ ಕಾಲದಿಂದ ಕಾಲಕ್ಕೆ ಹಲವು ಬಗೆಯ ಮಾರ್‍ಪಾಡುಗಳು ನಡೆಯುತ್ತಲೇ ಇರುತ್ತವೆ; ಇವು ಉಲಿಗಳನ್ನು ಮಾರ್‍ಪಡಿಸಬಹುದು, ಪದಗಳನ್ನು ಇಲ್ಲವೇ ಅವುಗಳ ಹುರುಳುಗಳನ್ನು ಮಾರ್‍ಪಡಿಸಬಹುದು, ಮತ್ತು ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳನ್ನು ಮಾರ್‍ಪಡಿಸಬಹುದು. ಇಂತಹ ಹಲವು ಬಗೆಯ ಮಾರ್‍ಪಾಡುಗಳು ನಡೆದುದರಿಂದಾಗಿ ಹಳೆಗನ್ನಡವಿದ್ದುದು ನಡುಗನ್ನಡವಾಗಿ ಇವತ್ತು ಹೊಸಗನ್ನಡವಾಗಿದೆ, ಮತ್ತು ಹೊಸಗನ್ನಡವೂ ಹಲವು ಬಗೆಯ ಆಡುನುಡಿಗಳಾಗಿ ಒಡೆದುಕೊಂಡಿದೆ.

ಕಾಲದಿಂದ ಕಾಲಕ್ಕೆ ನಡೆಯುವ ಇಂತಹ ಮಾರ್‍ಪಾಡುಗಳಲ್ಲಿ ನುಡಿಯ ಉಲಿಗಳಲ್ಲಿ ನಡೆಯುವ ಮಾರ್‍ಪಾಡುಗಳೇ ತುಂಬಾ ಮುಕ್ಯವಾದವುಗಳು; ಯಾಕೆಂದರೆ, ಅವುಗಳಿಂದಾಗಿ ಪದಗಳ ಮತ್ತು ಒಟ್ಟು(ಪ್ರತ್ಯಯ)ಗಳ ರೂಪದಲ್ಲಿ ಮಾತ್ರವಲ್ಲದೆ, ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲೂ ಮಾರ್‍ಪಾಡುಗಳು ನಡೆಯುತ್ತವೆ. ಕನ್ನಡದ ಹಿನ್ನಡವಳಿಯಲ್ಲಿ ಇಂತಹ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳು ನಡೆದಿವೆ.

ಹಳೆಗನ್ನಡದ ಪಕಾರ ಹಕಾರವಾಗಿರುವುದು (ಪಾಲು>ಹಾಲು, ಪಳೆ>ಹಳೆ, ಪೋಗು>ಹೋಗು); ರ-ಱ, ಳ-ೞಗಳ ನಡುವಿನ ವ್ಯತ್ಯಾಸ ಇಲ್ಲವಾಗಿರುವುದು, ಉದ್ದ ತೆರೆಯುಲಿ (ಸ್ವರ) ಮತ್ತು ತಡೆಯುಲಿ(ಸ್ಪರ‍್ಶ)ಗಳ ನಡುವಿನ ಮೂಗುಲಿ (ಅನುನಾಸಿಕ) ಬಿದ್ದುಹೋಗಿರುವುದು (ನೂಂಕು>ನೂಕು, ದಾಂಟು>ದಾಟು) ಮೊದಲಾದುವು ಇಂತಹ ಉಲಿಗಳ ಮಾರ್‍ಪಾಡುಗಳು.

ಇವು ಉಲಿಗಳ ಮಾರ್‍ಪಾಡುಗಳಲ್ಲದೆ ಪದಗಳ ಮಾರ್‍ಪಾಡುಗಳಲ್ಲ ಎಂಬುದನ್ನು ಗಮನಿಸುವುದು ಅವಶ್ಯ; ಪಕಾರ ಹಕಾರವಾಗುವಂತಹ ಒಂದು ಮಾರ್‍ಪಾಡು ನಡೆದಾಗ, ಪಕಾರವಿದ್ದ ಎಲ್ಲಾ (ಸಾವಿರಕ್ಕಿಂತಲೂ ಹೆಚ್ಚು) ಪದಗಳೂ ಅದಕ್ಕೆ ಒಳಗಾಗಿರುತ್ತವೆ. ಇಂತಹ ಮಾರ್‍ಪಾಡುಗಳು ಒಂದು ಉಲಿಯನ್ನು ಎಲ್ಲೆಡೆಗಳಲ್ಲೂ ತಾಗಬಹುದು, ಇಲ್ಲವೇ ಕೆಲವೆಡೆಗಳಲ್ಲಿ ಮಾತ್ರ ತಾಗಬಹುದು; ಪಕಾರ ಹಕಾರವಾಗುವ ಮಾರ್‍ಪಾಡು ಪಕಾರವನ್ನು ಎಲ್ಲೆಡೆಗಳಲ್ಲೂ ತಾಗಿದೆ; ಆದರೆ, ಎಕಾರ ಇಕಾರವಾಗುವ ಇನ್ನೊಂದು ಮಾರ್‍ಪಾಡು ಎಕಾರದ ಬಳಿಕ ಒತ್ತೆ ಮುಚ್ಚುಲಿ (ವ್ಯಂಜನ) ಮತ್ತು ಇಕಾರ ಇಲ್ಲವೇ ಉಕಾರ ಬಂದಿರುವಲ್ಲಿ ಮಾತ್ರ ನಡೆದಿದೆ, ಬೇರೆಡೆಗಳಲ್ಲಿ ಎಕಾರ ಮಾರ್‍ಪಡದೆ ಉಳಿದಿದೆ (ಬಿಳಿ, ಬಿಸಿ, ನಿಡು ಎಂಬಂತಹ ಪದಗಳಲ್ಲಿ ಈ ಮಾರ್‍ಪಾಡು ನಡೆದಿದೆ. ಆದರೆ ಬೆಳ್ಳಗೆ, ಬೆಚ್ಚಗೆ, ನೆಟ್ಟಗೆ ಎಂಬಂತಹ ಪದಗಳಲ್ಲಿ ನಡೆದಿಲ್ಲ). ಇದಲ್ಲದೆ, ಇಂತಹ ಮಾರ್‍ಪಾಡುಗಳಿಗೆಲ್ಲ ಒಂದು ಗಡುವಿರುತ್ತದೆ; ಈ ಗಡುವು ಮುಗಿದ ಮೇಲೆ ಹಿಂದಿನ ಬರಹಗಳಿಂದ (ಪಾಲು, ಪುಟ್ಟ, ಪೆಟ್ಟು) ಇಲ್ಲವೇ ಬೇರೆ ನುಡಿಗಳಿಂದ (ಪಾಪ, ಪುಣ್ಯ, ಪೂಜೆ) ಪದಗಳು ಎರವಲಾಗಿ ಬಂದು ಈ ಮಾರ್‍ಪಾಡಿಗೆ ಹೊರಪಡಿಕೆಗಳಾಗಿ ಕಾಣಿಸಬಲ್ಲುವು.

ಎರಡು ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ತೀರ‍್ಮಾನಿಸುವಲ್ಲೆಲ್ಲ ಇಂತಹ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯವಾದ ನೆಲೆಯಾಗಿ ಬಳಸಿಕೊಳ್ಳಲಾಗುತ್ತದೆ. ಯಾಕೆಂದರೆ, ನುಡಿಗಳಲ್ಲಿ ನಡೆಯುವ ಹಲವು ಬಗೆಯ ಮಾರ್‍ಪಾಡುಗಳಲ್ಲಿ ಉಲಿಗಳ ಮಾರ್‍ಪಾಡುಗಳ ಮೇಲೆ ಮಾತ್ರ ಪದಗಳ ಹುರುಳುಗಳು ಯಾವ ಪ್ರಬಾವವನ್ನೂ ಬೀರುವುದಿಲ್ಲ; ನೇರವಾಗಿ ಪದಗಳಲ್ಲಿ ಇಲ್ಲವೇ ಅವುಗಳ ಬಳಕೆಯ ಹಿಂದಿರುವ ಕಟ್ಟಲೆಗಳಲ್ಲಿ ನಡೆಯುವ ಮಾರ್‍ಪಾಡುಗಳ ಮೇಲೆ ಅವು ಹಲವು ಬಗೆಗಳಲ್ಲಿ ಪ್ರಬಾವವನ್ನು ಬೀರುತ್ತವೆ, ಮತ್ತು ಈ ರೀತಿ ಹುರುಳುಗಳಿಂದ ಪ್ರಬಾವಿತವಾಗಿರುವ ಮಾರ್‍ಪಾಡುಗಳನ್ನು ಕಚಿತವಾದ ಕಟ್ಟಲೆಗಳಲ್ಲಿ ಸೆರೆಹಿಡಿಯಲು ಬರುವುದಿಲ್ಲ; ಯಾಕೆಂದರೆ, ಹುರುಳುಗಳಿಂದ ಪ್ರಬಾವಿತವಾದ ಮಾರ್‍ಪಾಡುಗಳಿಗೆ ಹಲವಾರು ಬಗೆಯ ಹೊರಪಡಿಕೆಗಳಿರುತ್ತವೆ.

ಹಾಗಾಗಿ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂಬ ತೀರ್‍ಮಾನಕ್ಕೆ ಬರಬೇಕಿದ್ದಲ್ಲಿ ಕನ್ನಡದ ಹಿನ್ನಡವಳಿಯಲ್ಲಿ ನಡೆದ ಉಲಿಗಳ ಮಾರ್‍ಪಾಡುಗಳನ್ನೇ ಮುಕ್ಯ ನೆಲೆಯಾಗಿ ಬಳಸಿಕೊಳ್ಳಬೇಕಾಗುತ್ತದೆ. ಎಂದರೆ, ಕನ್ನಡ ಮತ್ತು ಸಂಸ್ಕ್ರುತ ಪದಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಕನ್ನಡದ ಹಿನ್ನಡವಳಿಯಲ್ಲಿ ನಡೆದಿದ್ದ ಹಲವು ಬಗೆಯ ಉಲಿಗಳ ಮಾರ್‍ಪಾಡುಗಳಿಂದಾಗಿ ಮೂಡಿಬಂದಿವೆ ಎಂಬುದಾಗಿ ತೋರಿಸಿಕೊಡಲು ಸಾದ್ಯವಾದಾಗ ಮಾತ್ರ ಕನ್ನಡ ಸಂಸ್ಕ್ರುತದಿಂದ ಬೆಳೆದುಬಂದಿದೆ ಎಂಬುದನ್ನು ಒಪ್ಪಿಕೊಳ್ಳಲು ಬರುತ್ತದೆ. ಆದರೆ, ಇದುವರೆಗೆ ಯಾರಿಗೂ ಆ ರೀತಿ ತೋರಿಸಿಕೊಡಲು ಸಾದ್ಯವಾಗಿಲ್ಲ.

ಹಾಗಾಗಿ, ಸದ್ಯಕ್ಕಂತೂ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿಲ್ಲವೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಮತ್ತು ಕನ್ನಡದಲ್ಲಿ ಮೂಲದ್ರಾವಿಡ ನುಡಿಯಿಂದ ಬಂದ ಕನ್ನಡದವೇ ಆದ ಪದಗಳು, ಮತ್ತು ಸಂಸ್ಕ್ರುತವೇ ಮೊದಲಾದ ಬೇರೆ ನುಡಿಗಳಿಂದ ಎರವಲಾಗಿ ಬಂದ ಪದಗಳು ಎಂಬುದಾಗಿ ಎರಡು ಬಗೆಯ ಪದಗಳು ಇವೆಯೆಂಬುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.

ಕನ್ನಡದ ಪದಗಳಿಗೂ ಸಂಸ್ಕ್ರುತದ ಪದಗಳಿಗೂ ನಡುವೆ ಅವುಗಳ ಉಲಿಗಳಲ್ಲಿ ಮತ್ತು ಹುರುಳುಗಳಲ್ಲಿ ಹೋಲಿಕೆಯಿದೆಯಾದರೆ, ಅದಕ್ಕೆ ಹಲವು ಕಾರಣಗಳಿರಬಲ್ಲುವು. ಎತ್ತುಗೆಗಾಗಿ, ಈ ಎಲ್ಲಾ ಪದಗಳನ್ನೂ ಉಂಟುಮಾಡಿದವರು ಮಾನವರೇ ಎಂಬುದೊಂದು ಕಾರಣ; ಹೋಲಿಕೆ ಬರಿಯ ಆಕಸ್ಮಿಕವಾಗಿರಬಹುದೆಂಬುದಿನ್ನೊಂದು ಕಾರಣ. ಹಾಗಾಗಿ, ಒಂದು ನುಡಿ ಇನ್ನೊಂದರಿಂದ ಎರವಲು ಪಡೆದಿದೆಯೆಂಬುದು ಪದಗಳ ನಡುವಿರುವ ಹೋಲಿಕೆಗಳಿಗಿರುವ ಹಲವು ಕಾರಣಗಳಲ್ಲಿ ಒಂದು ಮಾತ್ರ. ಇದಲ್ಲದೆ, ಇಲ್ಲಿಯೂ ಒಂದು ಪದವನ್ನು ಯಾವ ನುಡಿ ಯಾವ ನುಡಿಯಿಂದ ಎರವಲಾಗಿ ಪಡೆದಿದೆ ಎಂಬುದನ್ನು ತೀರ್‍ಮಾನಿಸುವಲ್ಲಿ ಅರಕೆಗೆ ನೆಲೆಯಿದೆ.

ಸಾಮಾನ್ಯವಾಗಿ, ಒಂದು ಪದದ ಹರಹು ಎಂತಹದು ಎಂಬುದರ ಮೇಲೆ ಅದರ ಹಿನ್ನಡವಳಿಯೆಂತಹದು ಎಂಬುದನ್ನು ತೀರ್‍ಮಾನಿಸಲಾಗುತ್ತದೆ; ಎತ್ತುಗೆಗಾಗಿ, ಕನ್ನಡದ ಒಂದು ಪದಕ್ಕೆ ಸಮಾನವಾದ ಪದಗಳು ತಮಿಳು, ತೆಲುಗು, ಗೋಂಡಿ, ಕುಡುಕ್ ಮೊದಲಾದ ಬೇರೆ ಹಲವು ದ್ರಾವಿಡ ನುಡಿಗಳಲ್ಲೂ ಕಾಣಿಸಿಕೊಳ್ಳುತ್ತಿವೆಯಾದರೆ, ಮತ್ತು ಸಂಸ್ಕ್ರುತವನ್ನು ಹೊರತುಪಡಿಸಿ ಉಳಿದ ಲ್ಯಾಟಿನ್, ಗ್ರೀಕ್, ಪರ್‍ಶಿಯನ್ ಮೊದಲಾದ ಇಂಡೋ-ಯುರೋಪಿಯನ್ ನುಡಿಗಳಲ್ಲಿ ಕಾಣಿಸುವುದಿಲ್ಲವಾದರೆ, ಅದು ಕನ್ನಡದ್ದೇ ಆದ ಪದ, ಮತ್ತು ಸಂಸ್ಕ್ರುತಕ್ಕೇನೇ ಅದು ದ್ರಾವಿಡ ನುಡಿಗಳಿಂದ ಎರವಲಾಗಿ ಬಂದಿದೆ ಎಂದು ಹೇಳಬೇಕಾಗುತ್ತದೆ.

ಇಂತಹ ಅರಕೆಗಳನ್ನು ನಡೆಸದೆ ಬರಿಯ ಹೋಲಿಕೆಯ ಮೇಲೆ ಎಲ್ಲವೂ ಸಂಸ್ಕ್ರುತದಿಂದ ಬಂದಿವೆಯೆಂದು ಹೇಳುವುದನ್ನು ಒಂದು ಅರಿಮೆಯ ಹೇಳಿಕೆಯೆಂದು ತಿಳಿಯಲು ಬರುವುದಿಲ್ಲ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ನುಡಿಗಳ ನಡುವಿನ ನಂಟಸ್ತಿಕೆ

ನುಡಿಯರಿಮೆಯ ಇಣುಕುನೋಟ – 18

ಜನರ ನಡುವೆ ಕಾಣಿಸುವ ಹಾಗೆ, ಅವರಾಡುವ ನುಡಿಗಳನಡುವೆಯೂ ‘ನಂಟಸ್ತಿಕೆ’ಯನ್ನು ಕಾಣಲು ಸಾದ್ಯವಿದೆ. ಕೆಲವು ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆಯೆಂದು ಹೇಳಬಹುದು, ಮತ್ತು ಬೇರೆ ಕೆಲವು ನುಡಿಗಳ ನಡುವೆ ದೂರದ ನಂಟಸ್ತಿಕೆ ಮಾತ್ರ ಇದೆಯೆಂದು ಹೇಳಬಹುದು. ಆದರೆ, ಇನ್ನು ಕೆಲವು ನುಡಿಗಳ ನಡುವೆ ಯಾವ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳಲು ಬರುವುದಿಲ್ಲ. ಹಾಗೆ ಹೇಳಲು ಯಾವ ಆದಾರವೂ ದೊರಕದಿರುವುದೇ ಇದಕ್ಕೆ ಕಾರಣ.

ಎತ್ತುಗೆಗಾಗಿ, ಕನ್ನಡ ಮತ್ತು ತಮಿಳು ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆ; ಕನ್ನಡ ಮತ್ತು ತುಳು ನುಡಿಗಳ ನಡುವೆ ಇದಕ್ಕಿಂತ ಸ್ವಲ್ಪ ದೂರದ ನಂಟಸ್ತಿಕೆಯಿದೆ. ಇದೇ ರೀತಿಯಲ್ಲಿ, ಹಿಂದಿ ಮತ್ತು ಮರಾಟಿ ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆ; ಹಿಂದಿ ಮತ್ತು ಇಂಗ್ಲಿಶ್ ನುಡಿಗಳ ನಡುವೆ ದೂರದ ನಂಟಸ್ತಿಕೆಯಿದೆ. ಆದರೆ ಕನ್ನಡ ಮತ್ತು ಹಿಂದಿ ನುಡಿಗಳ ನಡುವೆ, ಇಲ್ಲವೇ ಕನ್ನಡ ಮತ್ತು ಇಂಗ್ಲಿಶ್ ನುಡಿಗಳ ನಡುವೆ, ಹತ್ತಿರದ್ದಾಗಲಿ ದೂರದ್ದಾಗಲಿ ಯಾವುದೇ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳುವುದಕ್ಕೆ ಯಾವ ಆದಾರವೂ ದೊರಕುವುದಿಲ್ಲ.

ನುಡಿಗಳ ನಡುವಿನ ನಂಟಸ್ತಿಕೆಯನ್ನು ಜನರ ನಡುವಿನ ನಂಟಸ್ತಿಕೆಯ ಹಾಗೆ ಅವುಗಳ ಹುಟ್ಟು ಮತ್ತು ಬೆಳವಣಿಗೆಗಳ ಆದಾರದ ಮೇಲೆ ಕಲ್ಪಿಸಿಕೊಳ್ಳಲಾಗಿದೆ. ಆದರೆ, ಜನರ ಹುಟ್ಟಿಗೂ ನುಡಿಗಳ ಹುಟ್ಟಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಎತ್ತುಗೆಗಾಗಿ, ಜನರಲ್ಲಿ ಹೆಣ್ಣು-ಗಂಡುಗಳ ಕೂಡಿಕೆಯಿಂದ ಮಗು ಹುಟ್ಟುತ್ತದೆ; ಆದರೆ ನುಡಿಗಳಲ್ಲಿ ಆ ರೀತಿ ಎರಡು ನುಡಿಗಳ ಕೂಡಿಕೆಯಿಂದ ಮೂರನೆಯ ನುಡಿ ಹುಟ್ಟಿಕೊಳ್ಳುವುದಿಲ್ಲ; ಒಂದು ನುಡಿಯಿದ್ದದ್ದು ಇನ್ನೊಂದು ನುಡಿಯಾಗಿ ಬದಲಾಗುತ್ತದೆ, ಇಲ್ಲವೇ ಎರಡು ನುಡಿಗಳಾಗಿ ಒಡೆದುಕೊಳ್ಳುತ್ತದೆ.

ಎತ್ತುಗೆಗಾಗಿ, ಸಂಸ್ಕ್ರುತ ನುಡಿ ಇವತ್ತಿನ ಮರಾಟಿ ನುಡಿಯಾಗಿ ಬದಲಾಗಿದೆಯೆಂದು ಹೇಳಬಹುದು; ಇಲ್ಲವೇ ಅದೇ ನುಡಿ ಮರಾಟಿ, ಕೊಂಕಣಿ, ಹಿಂದಿ, ಗುಜರಾತಿ, ಪಂಜಾಬಿ, ಬಂಗಾಲಿ ಮೊದಲಾದ ಇವತ್ತಿನ ಹಲವು ನುಡಿಗಳಾಗಿ ಒಡೆದುಕೊಂಡಿದೆಯೆಂದೂ ಹೇಳಬಹುದು. ಆದರೆ, ಇದೇ ರೀತಿಯಲ್ಲಿ ಸಂಸ್ಕ್ರುತ ನುಡಿ ಕನ್ನಡ ನುಡಿಯಾಗಿ ಬದಲಾಗಿದೆಯೆಂದು ಹೇಳಲು ಬರುವುದಿಲ್ಲ. ಯಾಕೆಂದರೆ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಅವುಗಳ ಪದಗಳಲ್ಲಿ ಮತ್ತು ವ್ಯಾಕರಣ ನಿಯಮಗಳಲ್ಲಿ ಹಲವು ಬುಡಕಟ್ಟಿನ ವ್ಯತ್ಯಾಸಗಳಿವೆ. ಈ ಎಲ್ಲಾ ವ್ಯತ್ಯಾಸಗಳೂ ಹೇಗೆ ಉಂಟಾಗಿವೆ ಎಂಬುದನ್ನು ವಿವರಿಸಲು ಇದುವರೆಗೆ ಯಾರಿಗೂ ಸಾದ್ಯವಾಗಿಲ್ಲ.

ಇಂತಹ ವಿವರಿಸಲು ಸಾದ್ಯವಾಗದ ವ್ಯತ್ಯಾಸಗಳಿರುವ ಕಾರಣ, ಸಂಸ್ಕ್ರುತ ಮತ್ತು ಕನ್ನಡ ನುಡಿಗಳನ್ನು ಎರಡು ತೀರ ಬೇರಾಗಿರುವ ಮೂಲನುಡಿಗಳಿಂದ ಬೆಳೆದು ಬಂದಿರುವವುಗಳೆಂಬುದಾಗಿ ಪರಿಗಣಿಸಬೇಕಾಗಿದೆ. ಸಂಸ್ಕ್ರುತ ‘ಇಂಡೋ-ಆರ‍್ಯನ್’ ಎಂಬ ಹೆಸರಿನ ಮೂಲ ನುಡಿಯಿಂದ, ಮತ್ತು ಕನ್ನಡ ಅದಕ್ಕಿಂತ ತೀರ ಬೇರಾಗಿರುವ ‘ದ್ರಾವಿಡ’ ಎಂಬ ಹೆಸರಿನ ಮೂಲ ನುಡಿಯಿಂದ ಬೆಳೆದು ಬಂದಿದೆಯೆಂಬುದಾಗಿ ಇವತ್ತು ಕಲ್ಪಿಸಿಕೊಳ್ಳಬೇಕಾಗಿದೆ.

ನುಡಿಗಳನ್ನು ಈ ರೀತಿ ಬೇರೆ ಬೇರೆ ನುಡಿಕುಟುಂಬಗಳಲ್ಲಿ ಇರಿಸಿ ಹೇಳಲು ಮುಕ್ಯವಾಗಿ ಅವುಗಳ ಚರಿತ್ರೆ ಆದಾರವಾಗಿರುತ್ತದೆ. ಒಂದು ನುಡಿಯನ್ನಾಡುವ ಜನ ದೂರ ದೂರದಲ್ಲಿರುವ ಊರುಗಳಿಗೆ ಹೋಗಿ ನೆಲೆಸಿದಾಗ, ಅವರೊಳಗಿನ ಸಂಪರ‍್ಕ ಕಡಿಮೆಯಾಗುತ್ತಾ ಹೋಗುತ್ತದೆ, ಮತ್ತು ಇದರಿಂದಾಗಿ, ಅವರು ಬಳಸುವ ನುಡಿಯಲ್ಲಿ ಬದಲಾವಣೆಗಳು ಒಂದೇ ದಿಕ್ಕಿನಲ್ಲಿ ನಡೆಯದೆ ಬೇರೆ ಬೇರೆ ದಿಕ್ಕುಗಳಲ್ಲಿ ನಡೆಯತೊಡಗುತ್ತವೆ.

ಎತ್ತುಗೆಗಾಗಿ, ಕನ್ನಡ ನುಡಿಯನ್ನಾಡುವ ಜನ ಬಡಗು ಕರ‍್ನಾಟಕ, ತೆಂಕು ಕರ‍್ನಾಟಕ ಮತ್ತು ಕರಾವಳಿ ಎಂಬ ಮೂರು ಮುಕ್ಯ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಇವರಾಡುವ ನುಡಿಯೂ ಬಡಗು, ತೆಂಕು ಮತ್ತು ಕರಾವಳಿ ಎಂಬ ಮೂರು ಮುಕ್ಯ ಒಳನುಡಿಗಳಾಗಿ ವ್ಯತ್ಯಾಸಗಳನ್ನು ತೋರಿಸುತ್ತದೆ. ಈ ಒಳನುಡಿಗಳ ನಡುವೆ ಯಾವ ಪ್ರಮಾಣದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ ಎಂಬುದು ಈ ಪ್ರದೇಶಗಳಿಗೆ ಹೋಗಿ ನೆಲೆಸಿದ ಮೇಲೆ ಇವರ ನಡುವೆ ಎಂತಹ ಸಂಪರ‍್ಕ ಸಾದ್ಯವಿತ್ತು ಎಂಬುದರ ಮೇಲೆ ಅವಲಂಬಿಸಿದೆ.

ನುಡಿಗಳೆಲ್ಲ ಈ ರೀತಿ ಅವನ್ನಾಡುವ ಜನರ ನಡುವಿರುವ ಸಂಪರ‍್ಕ ಕಡಿಮೆಯಾದಾಗ ಬೇರೆ ಬೇರೆ ಒಳನುಡಿಗಳಾಗಿ ಒಡೆದುಕೊಳ್ಳುತ್ತವೆ, ಮತ್ತು ಆಮೇಲೆ ಅವೇ ಒಳನುಡಿಗಳು ಸ್ವತಂತ್ರ ನುಡಿಗಳಾಗಿ ಬೆಳೆಯುತ್ತವೆ ಎಂಬ ಈ ಅಬಿಪ್ರಾಯದ ಮೇಲೆ ನುಡಿಕುಟುಂಬಗಳ ಕಲ್ಪನೆಯನ್ನು ನಿಲ್ಲಿಸಲಾಗಿದೆ. ಹಿಂದೆ ಒಂದು ಕಾಲದಲ್ಲಿ ಕೆಲವೇ ಕೆಲವು ಮೂಲ ನುಡಿಗಳಿದ್ದಿರಬೇಕು, ಮತ್ತು ಈ ಮೂಲ ನುಡಿಗಳು ಮೇಲೆ ಸೂಚಿಸಿದ ಹಾಗೆ ಕವಲೊಡೆದು ಬೇರೆ ಬೇರೆ ನುಡಿಗಳಾದುದರಿಂದಾಗಿ, ಇವತ್ತು ಸಾವಿರಾರು ನುಡಿಗಳು ಬಳಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ ಎಂಬುದೇ ಈ ಕಲ್ಪನೆ.

ಈ ಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿ ಇವತ್ತು ಬಳಕೆಯಲ್ಲಿರುವ ಸಾವಿರಾರು ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಾಗಿ ಹಂಚುವ ಪ್ರಯತ್ನ ನಡೆಯುತ್ತಿದೆ. ಎಂದರೆ, ಈ ಸಾವಿರಾರು ನುಡಿಗಳು ಹದಿನಯ್ದಿಪ್ಪತ್ತು ಮೂಲ ನುಡಿಗಳಿಂದ ಅವುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾಗುವುದರ ಮೂಲಕ ಹೇಗೆ ಬೆಳೆದು ಬಂದಿರಬೇಕು ಎಂಬುದನ್ನು ತೋರಿಸಿ ಕೊಡುವ ಪ್ರಯತ್ನ ನಡೆಯುತ್ತಿದೆ.

ಇವತ್ತು ಬೇರೆ ಬೇರಾಗಿ ಕಾಣಿಸುವ ಎರಡು ನುಡಿಗಳು ಒಂದೇ ಮೂಲ ನುಡಿಯಿಂದ ಬೆಳೆದು ಬಂದವುಗಳೆಂದು ನಾವು ತೋರಿಸಿಕೊಡಬೇಕಿದ್ದಲ್ಲಿ, (ಎಂದರೆ ಅವು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂದು ವಾದಿಸಬೇಕಿದ್ದಲ್ಲಿ) ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳೆಲ್ಲ ಮೂಲ ನುಡಿಯೊಂದರಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿಕೊಡಬೇಕು. ಎಂದರೆ, ಆ ಮೂಲ ನುಡಿಯನ್ನಾಡುವ ಜನರು ದೂರದ ಎರಡು ಪ್ರದೇಶಗಳಿಗೆ ಹೋಗಿ ನೆಲೆಸಿದ ಮೇಲೆ, ಅವರ ಮಾತಿನಲ್ಲಿ ಬದಲಾವಣೆಗಳು ಎರಡು ಬೇರೆ ಬೇರೆ ದಿಕ್ಕುಗಳಲ್ಲಿ ನಡೆದಿರಬೇಕು, ಮತ್ತು ಒಂದು ಪ್ರದೇಶದಲ್ಲಿ ನಡೆದ ಬದಲಾವಣೆಗಳು ಇನ್ನೊಂದು ಪ್ರದೇಶದಲ್ಲಿ ನಡೆಯದಿದ್ದುದೇ ಆ ಎರಡು ಪ್ರದೇಶಗಳ ಜನರ ಮಾತುಗಳ (ಎಂದರೆ ನುಡಿಗಳ) ನಡುವೆ ಇವತ್ತು ಕಾಣಿಸುವ ವ್ಯತ್ಯಾಸಗಳಿಗೆ ಮೂಲ ಕಾರಣ ಎಂಬುದನ್ನು ತೋರಿಸಿಕೊಡಬೇಕು.

ಹಾಗಾಗಿ, ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಾಗಿ ಹಂಚುವ ಕೆಲಸದಲ್ಲಿ ಅವುಗಳ ನಡುವೆ ಕಾಣಿಸುವ ಹೋಲಿಕೆಗಳಿಗಿಂತಲೂ ವ್ಯತ್ಯಾಸಗಳಿಗೇನೇ ಹೆಚ್ಚಿನ ಮಹತ್ವವಿದೆ. ಎರಡು ನುಡಿಗಳ ನಡುವೆ ಸ್ವಲ್ಪವೂ ಹೋಲಿಕೆ ಕಾಣಿಸದಿದ್ದರೂ, ಅವುಗಳ ನಡುವಿರುವ ವ್ಯತ್ಯಾಸಗಳೆಲ್ಲ ಆ ಎರಡು ನುಡಿಗಳ ಚರಿತ್ರೆಯಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ಮೇಲೆ ಸೂಚಿಸಿದ ಹಾಗೆ ತೋರಿಸಿಕೊಟ್ಟಲ್ಲಿ, ಅವನ್ನು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂದು ಹೇಳಲು ಬರುತ್ತದೆ. ಇದಕ್ಕೆ ಬದಲು, ಎರಡು ನುಡಿಗಳ ನಡುವೆ ಎಶ್ಟೇ ಹೋಲಿಕೆಯಿರಲಿ, ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಒಂದು ಮೂಲ ನುಡಿಯಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿಕೊಡಲು ಬರುವುದಿಲ್ಲವಾದಲ್ಲಿ, ಅವು ಒಂದೇ ನುಡಿ ಕುಟುಂಬಕ್ಕೆ ಸೇರಿದವುಗಳೆಂದು ವಾದಿಸಲು ಬರುವುದಿಲ್ಲ.

ಎರಡು ನುಡಿಗಳ ನಡುವೆ ಹೋಲಿಕೆಗಳು ಕಾಣಿಸಿಕೊಳ್ಳಲು ಬೇರೆ ಕಾರಣಗಳೂ ಇರಬಲ್ಲುವು: ಎತ್ತುಗೆಗಾಗಿ, ಅವುಗಳಲ್ಲಿ ಒಂದು ಇನ್ನೊಂದರಿಂದ ಹಲವಾರು ಪದಗಳನ್ನು ಎರವಲಾಗಿ ಪಡೆದಿದೆಯಾದರೆ, ಅವೆರಡರ ನಡುವೆ ತುಂಬಾ ಹೋಲಿಕೆಯಿದೆಯೆಂದು ಅನಿಸಬಹುದು. ಇದಲ್ಲದೆ, ಆಕಸ್ಮಿಕವಾಗಿಯೂ ಎರಡು ನುಡಿಗಳಲ್ಲಿ ಬಳಕೆಯಾಗುವ ಪದಗಳ ನಡುವೆ ಹೋಲಿಕೆಗಳು ಕಾಣಿಸಬಹುದು. ನುಡಿಗಳನ್ನು ಬಳಸುವ, ಬೆಳೆಸುವ ಮತ್ತು ಬದಲಾಯಿಸುವವರೆಲ್ಲರೂ ಮನುಶ್ಯರೇ ಆಗಿರುವುದರಿಂದ, ಇಂತಹ ಆಕಸ್ಮಿಕ ಹೋಲಿಕೆಗಳು ಕಾಣಿಸಿಕೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ.

ಹಾಗಾಗಿ, ಎರಡು ನುಡಿಗಳ ನಡುವೆ ಕಾಣಿಸುವ ಹೋಲಿಕೆಗಳ ಆದಾರದ ಮೇಲೆ ಅವು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ಹೇಳಲು ಬರುವುದಿಲ್ಲ. ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಯಾವ ರೀತಿಯಲ್ಲಿ ಮೂಡಿಬಂದಿವೆ ಎಂಬುದನ್ನು ಮೇಲೆ ಸೂಚಿಸಿದ ಹಾಗೆ ವಿವರಿಸಲು ಸಾದ್ಯವಾಗುವುದಿದ್ದಲ್ಲಿ ಮಾತ್ರ ಅವನ್ನು ಒಂದೇ ಕುಟುಂಬದ ನುಡಿಗಳೆಂದು, ಎಂದರೆ ಚಾರಿತ್ರಿಕವಾಗಿ ಅವು ಒಂದೇ ಮೂಲ ನುಡಿಯಿಂದ ಬೆಳೆದು ಬಂದವುಗಳೆಂದು ಪರಿಗಣಿಸಲು ಸಾದ್ಯವಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter