Posts Tagged ‘ನುಡಿ’

ಪದ ಮತ್ತು ಅದರ ಹುರುಳು

ನುಡಿಯರಿಮೆಯ ಇಣುಕುನೋಟ – 27

ನುಡಿಗಳಲ್ಲಿ ಬಳಕೆಯಾಗುವ ಪದಗಳನ್ನು ಉಲಿಗಳ ಸೇರಿಕೆಯಿಂದ ಉಂಟುಮಾಡಲಾಗುತ್ತದೆ; ಮ್, ಅ, ನ್ ಮತ್ತು ಎ ಎಂಬ ನಾಲ್ಕು ಉಲಿಗಳ ಸೇರಿಕೆಯಿಂದ ‘ಮನೆ’ ಎಂಬ ಪದವನ್ನು ಉಂಟುಮಾಡಲಾಗಿದೆ; ಆದರೆ, ಈ ಉಲಿಗಳಲ್ಲಿ ಯಾವುದಕ್ಕೂ ಅದರದೇ ಆದ ಹುರುಳಿಲ್ಲ; ಅವುಗಳ ಸೇರಿಕೆಯಿಂದ ಉಂಟಾದ ‘ಮನೆ’ ಎಂಬ ಪದಕ್ಕೆ ಮಾತ್ರ ಹುರುಳಿದೆ. ಯಾಕೆಂದರೆ, ‘ಮ್’ ಎಂಬುದು ಮನೆ ಎಂಬ ಪದದಲ್ಲಿ ಮಾತ್ರವಲ್ಲದೆ, ಮಂಗ, ಮಜ್ಜಿಗೆ, ಕಡಿಮೆ, ಮಿಂಚು, ಕಮಟು, ಅಮ್ಮ ಮೊದಲಾದ ಬೇರೆಯೂ ಹಲವು ಪದಗಳಲ್ಲಿ ಬರುತ್ತದೆ, ಮತ್ತು ಈ ಎಲ್ಲಾ ಪದಗಳಿಗೂ ಸಮಾನವಾಗಿರುವ ಹುರುಳೊಂದನ್ನು ಕಂಡುಹಿಡಿದು, ಅದು ‘ಮ್’ ಎಂಬ ಉಲಿಯ ಹುರುಳು ಎಂಬುದಾಗಿ ತೋರಿಸಿಕೊಡಲು ಸಾದ್ಯವೇ ಇಲ್ಲ.

ಇದಲ್ಲದೆ, ಪದಗಳ ಅಂಗಗಳಾಗಿರುವ ಉಲಿಗಳು ಮಾರ‍್ಪಟ್ಟಾಗಲೂ ಅವುಗಳ ಹುರುಳು ಮಾರ‍್ಪಡದೆ ಉಳಿಯುತ್ತದೆ; ಈ ವಿಶಯವೂ ಹುರುಳೆಂಬುದು ಪದಗಳಿಗಿದೆಯಲ್ಲದೆ ಉಲಿಗಳಿಗಿಲ್ಲ ಎಂಬುದನ್ನು ಬೆಂಬಲಿಸುತ್ತದೆ. ಹಳೆಗನ್ನಡದ ಪಾಲ್ ಎಂಬುದು ಹಾಲು ಎಂಬುದಾಗಿ, ಬೞ್ದುಂಕು ಎಂಬುದು ಬದುಕು ಎಂಬುದಾಗಿ, ಬೆರಲ್ ಎಂಬುದು ಬೆರಳ್ ಎಂಬುದಾಗಿ ಹೊಸಗನ್ನಡದಲ್ಲಿ ಮಾರ‍್ಪಟ್ಟಾಗ, ಅದರಿಂದಾಗಿ ಆ ಪದಗಳಿಗೆ ಮೊದಲಿಗಿದ್ದ ಹುರುಳುಗಳಲ್ಲಿ ಮಾರ‍್ಪಾಡುಗಳೇನೂ ಆಗಿರಲಿಲ್ಲ.

ಉಲಿಗಳಿಗೆ ಅವುಗಳದೇ ಆದ ಹುರುಳಿಲ್ಲದಿದ್ದರೂ ಪದಗಳಿಗೆ ಅವುಗಳದೇ ಆದ ಹುರುಳಿದೆಯೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ; ಅದರೆ, ಇಲ್ಲೂ ಕೆಲವು ಸಮಸ್ಯೆಗಳಿವೆ; ಪದನೆರಕೆ(ಡಿಕ್ಶನರಿ)ಗಳಲ್ಲಿ ಹೆಚ್ಚಿನ ಪದಗಳಿಗೂ ಎರಡು ಇಲ್ಲವೇ ಹೆಚ್ಚು ಹುರುಳುಗಳನ್ನು ಕೊಡಲಾಗುತ್ತದೆಯೆಂಬುದನ್ನು ಗಮನಿಸಬಹುದು; ಆದರೆ, ಈ ಪದಗಳನ್ನು ಸೊಲ್ಲುಗಳಲ್ಲಿ ಬಳಸಿದಾಗ, ಅವುಗಳ ಈ ಹಲವು ಹುರುಳುಗಳಲ್ಲಿ ಒಂದು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎತ್ತುಗೆಗಾಗಿ, ಕಾಯು ಎಂಬ ಪದಕ್ಕೆ ಕಾಪಾಡು ಎಂಬ ಹುರುಳೂ ಇದೆ, ಬಿಸಿಮಾಡು ಎಂಬ ಹುರುಳೂ ಇದೆ; ಆದರೆ, ‘ನಾಯಿ ಮನೆಯನ್ನು ಕಾಯುತ್ತಿದೆ’ ಎಂಬ ಸೊಲ್ಲನ್ನು ಬಳಸಿದಾಗ ಕಾಯು ಪದದ ಮೊದಲನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದಲ್ಲದೆ, ಎರಡನೆಯ ಹುರುಳು ಗಮನಕ್ಕೆ ಬರುವುದಿಲ್ಲ.

ಇದೇ ರೀತಿಯಲ್ಲಿ ‘ಹಂಡೆಯಲ್ಲಿ ನೀರು ಕಾಯುತ್ತಿದೆ’ ಎಂಬ ಬೇರೊಂದು ಸೊಲ್ಲನ್ನು ಬಳಸಿದಾಗ ಅದರ ಎರಡನೆಯ ಹುರುಳು ಮಾತ್ರ ನಮ್ಮ ಗಮನಕ್ಕೆ ಬರುತ್ತದೆ. ಎಂದರೆ, ಒಂದು ಪದ ನಮಗೆ ಎಂತಹ ಹುರುಳನ್ನು ಕೊಡುತ್ತದೆ ಎಂಬುದು ಅದನ್ನು ಎಂತಹ ಸೊಲ್ಲಿನಲ್ಲಿ ಬಳಸಲಾಗಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ. ಕೆಲವೊಮ್ಮೆ ಈ ರೀತಿ ಒಂದು ಪದಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದು ತೊಂದರೆಯನ್ನೂ ಕೊಡಬಲ್ಲುದು. ಎತ್ತುಗೆಗಾಗಿ, ‘ಅವನು ಕರೆಯಲು ಬಂದಿದ್ದಾನೆ’ ಎಂದಿಶ್ಟೇ ಹೇಳಿದಲ್ಲಿ ಅವನು ಎಲ್ಲಿಗಾದರೂ ಬರಬೇಕೆಂದು ಹೇಳಲು ಬಂದಿದ್ದಾನೋ ಇಲ್ಲವೇ ದನವನ್ನು ಕರೆಯಲು ಬಂದಿದ್ದಾನೋ ಎಂಬ ವಿಶಯದಲ್ಲಿ ಗೊಂದಲವುಂಟಾಗಬಲ್ಲುದು. ಆದರೆ, ಸಾಮಾನ್ಯವಾಗಿ ನಾವು ಮಾತನ್ನು ಬಳಸುವಾಗ ಆ ರೀತಿ ಗೊಂದಲವುಂಟಾಗದಂತೆ ನೋಡಿಕೊಳ್ಳುತ್ತೇವೆ.

ಮಾತಿನಲ್ಲಿ ಬಳಕೆಯಾಗುವ ಪದಗಳಲ್ಲಿ ಹಲವಕ್ಕೆ (ಹೆಸರುಪದಗಳಿಗೆ) ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುವ ಕಸುವಿರುತ್ತದೆ. ‘ಸುರೇಶ ಒಂದು ಹಣ್ಣು ತಿಂದ’ ಎಂಬ ಸೊಲ್ಲಿನಲ್ಲಿ ಎರಡು ಹೆಸರುಪದಗಳು ಬಂದಿದ್ದು, ಅವುಗಳಲ್ಲಿ ‘ಹಣ್ಣು’ ಎಂಬ ಪದ ಒಂದು ವಸ್ತುವನ್ನು ಗುರುತಿಸುತ್ತದೆ ಮತ್ತು ‘ಸುರೇಶ’ ಎಂಬ ಪದ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಪದಗಳ ಮೂಲಕ ಮಾತ್ರವಲ್ಲದೆ ಪದಕಂತೆಗಳ ಮೂಲಕವೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಬರುತ್ತದೆ. ‘ಕುರ‍್ಚಿಯಲ್ಲಿ ಕುಳಿತಿರುವ ಮುದುಕ’ ಎಂಬ ಪದಕಂತೆ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ, ಮತ್ತು ‘ರಾಜು ಕೊಟ್ಟ ಪುಸ್ತಕ’ ಎಂಬ ಇನ್ನೊಂದು ಪದಕಂತೆ ಒಂದು ವಸ್ತುವನ್ನು ಗುರುತಿಸುತ್ತದೆ.

ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ಪದಗಳ ಮೂಲಕ ಗುರುತಿಸುವುದಕ್ಕೂ ಪದಕಂತೆಗಳ ಮೂಲಕ ಗುರುತಿಸುವುದಕ್ಕೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ. ಪದಕಂತೆಗಳ ಮೂಲಕ ಗುರುತಿಸುವಾಗ ಅವುಗಳ ಹುರುಳು ಬಳಕೆಯಾಗುತ್ತದೆ, ಆದರೆ ಪದಗಳ ಮೂಲಕ ಗುರುತಿಸುವಾಗ ಆ ರೀತಿ ಅವುಗಳ ಹುರುಳು ಬಳಕೆಯಾಗುವುದಿಲ್ಲ. ಅದಕ್ಕೆ ಬದಲು, ಪದಗಳಿಗೂ ಅವು ತಿಳಿಸಬಲ್ಲ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ಸಂಬಂದ ಬಳಕೆಯಾಗುತ್ತದೆ.

ನಿಜಕ್ಕೂ ಒಂದು ಹೆಸರುಪದದ ಹುರುಳೇನು ಎಂಬುದನ್ನು ತಿಳಿಯಬೇಕಿದ್ದಲ್ಲಿ ಮೊದಲಿಗೆ ಅದು ಎಂತಹ ವ್ಯಕ್ತಿ, ವಸ್ತು ಇಲ್ಲವೇ ಸಂಗತಿಯನ್ನು ಗುರುತಿಸುತ್ತದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ‘ನಾಯಿ’ ಎಂಬ ಪದ ಎಂತಹ ಪ್ರಾಣಿಯನ್ನು ಗುರುತಿಸಲು ಬಳಕೆಯಾಗುತ್ತದೆ, ಮತ್ತು ಆ ಪ್ರಾಣಿಯ ಪರಿಚೆ(ಗುಣ)ಗಳು ಎಂತಹವು ಎಂಬುದನ್ನು ತಿಳಿದಾಗ ಮಾತ್ರ ನಮಗೆ ಆ ಪದದ ಹುರುಳೇನು ಎಂಬುದು ಗೊತ್ತಾಗುತ್ತದೆ; ಹಾಗಾಗಿ, ಆ ಪ್ರಾಣಿಯ ಪರಿಚೆಗಳನ್ನೇ ಒಟ್ಟಾಗಿ ‘ನಾಯಿ’ ಎಂಬ ಪದದ ಹುರುಳು ಎಂದು ಹೇಳಬೇಕಾಗುತ್ತದೆ.

ಒಳರಚನೆಯಿರುವ ಪದಗಳ ಹುರುಳನ್ನೂ ಇದೇ ರೀತಿಯಲ್ಲಿ ಅವು ತಿಳಿಸುವ ವಸ್ತು, ವ್ಯಕ್ತಿ ಮೊದಲಾದವುಗಳ ಪರಿಚೆಗಳು ಎಂತಹವು ಎಂಬುದರಿಂದ ತಿಳಿಯಬೇಕಾಗುತ್ತದಲ್ಲದೆ ಅವುಗಳ ಒಳರಚನೆ ಎಂತಹದು ಎಂಬುದರಿಂದ ತಿಳಿಯಲು ಬರುವುದಿಲ್ಲ. ‘ಹೊಸಮನೆ’ ಎಂಬ ಪದದಲ್ಲಿ ‘ಹೊಸ’ ಮತ್ತು ‘ಮನೆ’ ಎಂಬ ಎರಡು ಪದಗಳು ಸೇರಿಕೊಂಡಿವೆ; ಆದರೆ, ಅದು ಗುರುತಿಸುವ ಮನೆ ಹೊಸದಾಗಿರಬಲ್ಲುದು, ಇಲ್ಲವೇ ತುಂಬಾ ಹಳೆಯದಾಗಿರಬಲ್ಲುದು; ಯಾಕೆಂದರೆ, ಒಮ್ಮೆ ಒಂದು ಮನೆಯನ್ನು ಆ ಹೆಸರಿನಿಂದ ಕರೆಯತೊಡಗಿದ ಮೇಲೆ, ಅದು ತುಂಬಾ ಹಳೆಯದಾದಾಗಲೂ ಆ ಹೆಸರನ್ನು ನಾವು ಬದಲಾಯಿಸಹೋಗುವುದಿಲ್ಲ; ಎಂದರೆ, ‘ಹೊಸಮನೆ’ ಎಂಬ ಪದದ ಹುರುಳು ಅದು ಗುರುತಿಸುವ ಮನೆಯ ಪರಿಚೆಗಳು ಬದಲಾದ ಹಾಗೆಲ್ಲ ಬದಲಾಗುತ್ತಾ ಹೋಗುತ್ತದೆ. ‘ಹಳೆಮನೆ’ ಎಂಬ ಹೆಸರಿರುವ ಇನ್ನೊಂದು ಮನೆಯನ್ನು ಕೆಡವಿ ಅಲ್ಲೊಂದು ಹೊಸಮನೆಯನ್ನು ಕಟ್ಟಿದಾಗಲೂ ಅದಕ್ಕೆ ಮೊದಲು ಬಳಕೆಯಲ್ಲಿದ್ದ ‘ಹಳೆಮನೆ’ ಎಂಬ ಹೆಸರು ಹಾಗೆಯೇ ಉಳಿದಿರುತ್ತದೆ; ಆ ಪದದ ಹುರುಳು ಮಾತ್ರ ಮಾರ‍್ಪಟ್ಟಿರುತ್ತದೆ.

ಹೆಸರುಪದಗಳಿಗೆ ಅವುಗಳ ಹುರುಳಿನೊಂದಿಗಿರುವ ಸಂಬಂದಕ್ಕಿಂತಲೂ ಅವು ಸೂಚಿಸುವ ವ್ಯಕ್ತಿ, ವಸ್ತು, ಸಂಗತಿ ಮೊದಲಾದವುಗಳೊಂದಿಗಿರುವ ಸಂಬಂದವೇ ಹೆಚ್ಚು ಮುಕ್ಯವಾದುದು ಎಂಬ ವಿಶಯ ಇದರಿಂದ ಸ್ಪಶ್ಟವಾಗುತ್ತದೆ. ಕೆಲವೆಡೆಗಳಲ್ಲಿ ಪದಗಳ ಒಳರಚನೆಯನ್ನು ಬಳಸಿ ಅವುಗಳ ಹುರುಳನ್ನು ಊಹಿಸಿಕೊಳ್ಳಬಲ್ಲೆವಾದರೂ ಈ ವಿಶಯದಲ್ಲಿ ಕೊನೆಯ ತೀರ‍್ಮಾನಕ್ಕೆ ಬರಲು ಇಂತಹ ಸಂಬಂದದ ನೆರವು ಬೇಕೇ ಬೇಕು.

ಸೊಲ್ಲುಗಳಲ್ಲಿ ಬರುವ ಎಸಕ(ಕ್ರಿಯಾ)ಪದ, ಪರಿಚೆ(ಗುಣ)ಪದ ಮೊದಲಾದವುಗಳ ಹುರುಳೇನೆಂಬುದನ್ನು ತೀರ‍್ಮಾನಿಸುವುದು ಇದಕ್ಕಿಂತಲೂ ಹೆಚ್ಚು ತೊಡಕಿನ ಕೆಲಸ. ಯಾಕೆಂದರೆ, ಅದಕ್ಕಾಗಿ ಅವು ಬರುವ ಪದಕಂತೆಗಳ ಇಲ್ಲವೇ ಸೊಲ್ಲುಗಳ ಹುರುಳೇನೆಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಆ ಹುರುಳಿನಲ್ಲಿ ಯಾವುದೇ ಒಂದು ಎಸಕಪದದ ಇಲ್ಲವೇ ಪರಿಚೆಪದದ ಕೊಡುಗೆ ಎಂತಹದು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ. ಪದಗಳೊಂದಿಗೆ ಬರುವ ಒಟ್ಟು(ಪ್ರತ್ಯಯ)ಗಳ ಹುರುಳನ್ನೂ ಇದೇ ರೀತಿಯಲ್ಲಿ ಆ ಪದಗಳ ಬಳಕೆಯಲ್ಲಿ ಅವುಗಳ ಕೊಡುಗೆ ಎಂತಹದು ಎಂಬುದನ್ನು ಪರಿಶೀಲಿಸುವ ಮೂಲಕ ತಿಳಿಯಬೇಕಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಉಲಿ ಮಾರ‍್ಪಾಡಿನ ಗೆರೆಗಳು

ನುಡಿಯರಿಮೆಯ ಇಣುಕುನೋಟ – 26

ಕನ್ನಡ ನುಡಿ ಹಳ್ಳಿಯಿಂದ ಹಳ್ಳಿಗೆ, ಜಿಲ್ಲೆಯಿಂದ ಜಿಲ್ಲೆಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿದೆಯೆಂಬುದು ನಮಗೆಲ್ಲ ಗೊತ್ತಿದೆ. ಮಯ್ಸೂರಿನವರ ಕನ್ನಡ ಒಂದು ತರವಾದರೆ ಮಂಗಳೂರಿನವರದು ಇನ್ನೊಂದು ತರ, ಮತ್ತು ದಾರವಾಡದವರದು ಮತ್ತೊಂದು ತರ. ಇಶ್ಟೇ ಅಲ್ಲ, ಮಯ್ಸೂರಿನಂತಹ ಒಂದೇ ಜಿಲ್ಲೆಯಲ್ಲೂ ಎಲ್ಲಾ ಕಡೆ ಒಂದೇ ರೀತಿಯ ಕನ್ನಡ ಬಳಕೆಯಲ್ಲಿಲ್ಲ. ಕೊಳ್ಳೇಗಾಲದ ಕನ್ನಡಕ್ಕೂ ನಂಜನಗೂಡಿನ ಕನ್ನಡಕ್ಕೂ ನಡುವೆ ವ್ಯತ್ಯಾಸವಿದೆ, ಮತ್ತು ಹೆಗ್ಗಡದೇವನ ಕೋಟೆಯ ಕನ್ನಡಕ್ಕೂ ಕೆ. ಆರ್. ನಗರದ ಕನ್ನಡಕ್ಕೂ ನಡುವೆ ವ್ಯತ್ಯಾಸವಿದೆ.

ಇದಲ್ಲದೆ, ಒಂದೇ ಹಳ್ಳಿಯಲ್ಲಿ ವಾಸಿಸುವ ಜನರಲ್ಲೂ ಬ್ರಾಹ್ಮಣರ ಕನ್ನಡ, ಒಕ್ಕಲಿಗರ ಕನ್ನಡ, ಆದಿಕರ‍್ನಾಟಕರ ಕನ್ನಡ ಎಂದೆಲ್ಲಾ ವ್ಯತ್ಯಾಸಗಳು ಕಾಣಿಸುತ್ತವೆ. ಆಡುಗನ್ನಡದಲ್ಲಿ ಇಂತಹ ಹಲವು ವ್ಯತ್ಯಾಸಗಳಿವೆಯೆಂಬುದನ್ನು ನಾವೆಲ್ಲ ತಿಳಿದಿರುವೆವಾದರೂ ಈ ವ್ಯತ್ಯಾಸಗಳು ನಿಜಕ್ಕೂ ಎಂತಹವು ಎಂಬುದನ್ನು ಇದುವರೆಗೆ ಯಾರೂ ಸರಿಯಾಗಿ ಮತ್ತು ವಿವರವಾಗಿ ತಿಳಿದುಕೊಳ್ಳಲು ಹೋಗಿಲ್ಲ. ಹಾಗೆ ತಿಳಿಯಲು ಹೋದಲ್ಲಿ, ಅವುಗಳ ಹಿಂದೆ ಹಲವಾರು ಕಟ್ಟುನಿಟ್ಟಾದ ಕಟ್ಟಲೆಗಳೇ ಅಡಗಿವೆ ಎಂಬುದರ ಅರಿವು ನಮಗಾಗದಿರದು.

ಎತ್ತುಗೆಗಾಗಿ, ಮಯ್ಸೂರಿನವರು ಮನೆ ಎನ್ನುವರಾದರೆ, ದಾರವಾಡದವರು ಮನಿ ಎನ್ನುತ್ತಾರೆ; ಮಯ್ಸೂರಿನ ಹಣೆ ದಾರವಾಡದಲ್ಲಿ ಹಣಿಯಾಗುತ್ತದೆ; ಕೆರೆ ಎಂಬುದು ಕೆರಿಯಾಗುತ್ತದೆ, ಗೆರೆ ಎಂಬುದು ಗೆರಿಯಾಗುತ್ತದೆ. ಎಕಾರದಲ್ಲಿ ಕೊನೆಗೊಳ್ಳುವ ಹೆಸರು(ನಾಮ)ಪದಗಳೆಲ್ಲ ದಾರವಾಡ ಕನ್ನಡದಲ್ಲಿ ಇಕಾರದಲ್ಲಿ ಕೊನೆಗೊಳ್ಳುತ್ತವೆ ಎಂಬ ಕಟ್ಟಲೆಯೊಂದು ಈ ವ್ಯತ್ಯಾಸದ ಹಿಂದೆ ಅಡಗಿದೆ. ಮಯ್ಸೂರು ಜಿಲ್ಲೆಯೊಳಗೇನೇ ಕೊಳ್ಳೇಗಾಲದಲ್ಲಿ ಬರೆ ಎಂದಿರುವುದು ನಂಜನಗೂಡಿನಲ್ಲಿ ಬರಿ ಎಂದಾಗುತ್ತದೆ, ಅಗೆ ಎಂಬುದು ಅಗಿಯಾಗುತ್ತದೆ, ಕರೆ ಎಂಬುದು ಕರಿಯಾಗುತ್ತದೆ, ಒಡೆ ಎಂಬುದು ಒಡಿಯಾಗುತ್ತದೆ. ಇದು ಅಂತಹದೇ ಇನ್ನೊಂದು ಮಾರ‍್ಪಾಡು.

ಆದರೆ ಈ ಮಾರ‍್ಪಾಡು ಎಕಾರದಲ್ಲಿ ಕೊನೆಗೊಳ್ಳುವ ಎಸಕ(ಕ್ರಿಯಾ)ಪದಗಳನ್ನು ಮಾತ್ರ ನಾಟುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳು ಮಯ್ಸೂರಿನಲ್ಲಿ ಎಲ್ಲ ಕಡೆಗಳಲ್ಲೂ (ನಂಜನಗೂಡಿನಲ್ಲೂ) ಬದಲಾಗದೆ ಉಳಿದಿವೆ. ಇದಲ್ಲದೆ, ದಾರವಾಡ ಕನ್ನಡದಲ್ಲಿ ಎಕಾರದಲ್ಲಿ ಕೊನೆಗೊಳ್ಳುವ ಹೆಸರುಪದಗಳ ಹಾಗೆ ಎಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳೂ ಇಕಾರದಲ್ಲಿ ಕೊನೆಗೊಳ್ಳುವವುಗಳಾಗಿ ಮಾರ‍್ಪಟ್ಟಿವೆ. ಎಂದರೆ, ಹೆಸರುಪದಗಳ ಮಟ್ಟಿಗೆ ಕೊಳ್ಳೇಗಾಲದೊಂದಿಗೆ ಸೇರುವ ನಂಜನಗೂಡಿನ ಕನ್ನಡ ಎಸಕಪದಗಳ ಮಟ್ಟಿಗೆ ದಾರವಾಡ ಕನ್ನಡದೊಂದಿಗೆ ಸೇರುತ್ತದೆ.

ಒಂದು ಊರಿನಿಂದ ಇನ್ನೊಂದು ಊರಿಗೆ ಆಡುಗನ್ನಡದಲ್ಲಿ ತೋರಿಬರುವ ವ್ಯತ್ಯಾಸಗಳ ಹಿಂದೆ ಈ ರೀತಿ ಹಲವು ಕಟ್ಟಲೆಗಳಿವೆ ಮಾತ್ರವಲ್ಲ, ಅವುಗಳಿಗೊಂದು ನಿಶ್ಚಿತವಾದ ಹರವೂ ಇದೆ. ಎತ್ತುಗೆಗಾಗಿ, ಪದಗಳ ಮೊದಲಿಗೆ ಬರುವ ಹಕಾರ ಬಿದ್ದುಹೋಗುತ್ತದೆಯೆಂಬ ಕಟ್ಟಲೆಯನ್ನು ಗಮನಿಸಬಹುದು. ಮಯ್ಸೂರು ಜಿಲ್ಲೆಯ ಹುಣಸೂರಿನಲ್ಲಿ ಹಕ್ಕಿ ಎಂದು ಹೇಳುವುದಕ್ಕೆ ನಂಜನಗೂಡಿನಲ್ಲಿ ಅಕ್ಕಿ ಎನ್ನುತ್ತಾರೆ; ಹುಣಸೂರಿನ ಹಾಲು ನಂಜನಗೂಡಿನಲ್ಲಿ ಆಲು ಎಂದಾಗುತ್ತದೆ; ಹಂಬು ಎಂಬುದು ಅಂಬು ಎಂದಾಗುತ್ತದೆ, ಹಾವು ಎಂಬುದು ಆವು ಎಂದಾಗುತ್ತದೆ. ಪದಗಳ ಮೊದಲಿಗೆ ಬರುವ ಹಕಾರಗಳೆಲ್ಲ ನಂಜನಗೂಡಿನ ಕನ್ನಡದಲ್ಲಿ ಬಿದ್ದುಹೋಗಿವೆ ಎಂಬ ಕಟ್ಟಲೆ ಈ ವ್ಯತ್ಯಾಸದ ಹಿಂದೆ ಅಡಗಿದೆ.

ಹಕಾರ ಬಿದ್ದುಹೋಗುವ ಈ ಮಾರ‍್ಪಾಡಿಗೆ ಒಂದು ನಿಶ್ಚಿತವಾದ ಹರವೂ ಇದೆ. ಹುಣಸೂರು, ಕೆ.ಆರ್.ನಗರ ಮತ್ತು ಪಿರಿಯಾಪಟ್ಟಣಗಳಲ್ಲಿ ಪದಗಳ ಮೊದಲಿಗೆ ಬರುವ ಹಕಾರವನ್ನು ಜನರು ಸರಿಯಾಗಿಯೇ ಉಲಿಯುತ್ತಾರೆ. ಹುಣಸೂರು ಬಿಟ್ಟು ಹೆಗ್ಗಡದೇವನ ಕೋಟೆಗೆ ಹೋದೆವಾದರೆ, ಅಲ್ಲಿ ಇಂತಹ ಹಕಾರಗಳೆಲ್ಲ ಬಿದ್ದುಹೋಗಿರುವುದನ್ನು ಕಾಣಬಹುದು. ಮುಂದೆ ಗುಂಡ್ಲುಪೇಟೆ, ಚಾಮರಾಜನಗರ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಾಲ ಮೊದಲಾದ ಕಡೆಗಳಲ್ಲೂ ಹಕಾರ ಹೀಗೆ ಬಿದ್ದುಹೋಗಿದೆ.

ಈ ರೀತಿ ಪದಗಳ ಮೊದಲಿನ ಹಕಾರ ಎಲ್ಲೆಲ್ಲ ಬಿದ್ದುಹೋಗಿದೆ ಮತ್ತು ಎಲ್ಲೆಲ್ಲ ಬಿದ್ದುಹೋಗಿಲ್ಲ ಎಂಬುದನ್ನು ಹಳ್ಳಿಯಿಂದ ಹಳ್ಳಿಗೆ ಸುತ್ತಾಡಿ ತಿಳಿದುಕೊಂಡು ಬಂದೆವಾದರೆ, ಮಯ್ಸೂರಿನ ನಕಾಶೆಯಲ್ಲಿ ಒಂದು ‘ಹಕಾರದ ಗೆರೆ’ಯನ್ನು ಎಳೆಯಲು ಸಾದ್ಯವಾದೀತು. ಈ ಗೆರೆ ನಂಜನಗೂಡು ಮತ್ತು ಹುಣಸೂರುಗಳ ನಡುವೆ ಹೆಗ್ಗಡದೇವನ ಕೋಟೆಯ ಪಡುವ ದಿಕ್ಕಿಗಾಗಿ ಹಾಯ್ದೀತು.

ಈ ಹಕಾರದ ಗೆರೆಗೆ ಬೇರೆಯೂ ಕೆಲವು ಕಟ್ಟುಗಳಿವೆ. ಎತ್ತುಗೆಗಾಗಿ, ಮಯ್ಸೂರು ಜಿಲ್ಲೆಯ ಬ್ರಾಹ್ಮಣರ ಆಡುನುಡಿಯಲ್ಲಿ ಹಕಾರ ಎಲ್ಲಿಯೂ (ನಂಜನಗೂಡು, ಕೊಳ್ಳೇಗಾಲ, ಚಾಮರಾಜಪುರ, ತಿ.ನರಸೀಪುರ ಮೊದಲಾದ ಕಡೆಗಳಲ್ಲೂ) ಬಿದ್ದುಹೋಗಿಲ್ಲ. ಹಾಗಾಗಿ ಈ ಹಕಾರದ ಗೆರೆ ಮಯ್ಸೂರು ಜಿಲ್ಲೆಯನ್ನು ಉದ್ದಕ್ಕೆ ಮಾತ್ರವಲ್ಲದೆ ನೆಟ್ಟಗೂ ಕತ್ತರಿಸುತ್ತದೆಯೆಂದು ಹೇಳಬೇಕಾಗುತ್ತದೆ. ಆಡುನುಡಿಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಇಂತಹ ಊರಿನ ಮತ್ತು ಜಾತಿಯ ಕಟ್ಟುಗಳು ಮಾತ್ರವಲ್ಲದೆ ಸಮಯದ ಕಟ್ಟೂ ಇದೆಯೆಂದು ಹೇಳಬಹುದು.

ಯಾಕೆಂದರೆ, ಎರಡು ಬೇರೆ ಬೇರೆ ಸಮಯಗಳಲ್ಲಿ ಬಳಕೆಯಲ್ಲಿದ್ದ ಆಡುನುಡಿಗಳ ನಡುವಿರುವ ವ್ಯತ್ಯಾಸಗಳ ಹಿಂದೆಯೂ ಮೇಲೆ ವಿವರಿಸಿದಂತಹ ಕಟ್ಟಲೆಗಳೇ ಕಾಣಿಸುತ್ತವೆ. ಎತ್ತುಗೆಗಾಗಿ, ಹಳೆಗನ್ನಡದ ಪಾಲ್ ಪದ ಹೊಸಗನ್ನಡದಲ್ಲಿ ಹಾಲು ಎಂಬುದಾಗಿ ಕಾಣಿಸುತ್ತದೆ; ಪಣ್ ಪದ ಹಣ್ಣು ಎಂಬುದಾಗಿ, ಪಲ್ ಪದ ಹಲ್ಲು ಎಂಬುದಾಗಿ ಮತ್ತು ಪುಲ್ ಪದ ಹುಲ್ಲು ಎಂಬುದಾಗಿ ಕಾಣಿಸುತ್ತದೆ. ಹಳೆಗನ್ನಡದ ಪದಗಳ ಮೊದಲಿಗಿದ್ದ ಪಕಾರಗಳೆಲ್ಲವೂ ಈ ರೀತಿ ಹೊಸಗನ್ನಡದಲ್ಲಿ ಹಕಾರಗಳಾಗಿ ಕಾಣಿಸಿಕೊಳ್ಳುತ್ತವೆ. ಹಳೆಗನ್ನಡ ಮತ್ತು ಹೊಸಗನ್ನಡಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಈ ಕಟ್ಟಲೆ ಮಯ್ಸೂರಿನ ಆಡುನುಡಿಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಹಕಾರದ ಕಟ್ಟಲೆಯ ಹಾಗೆಯೇ ಇದೆ.

ಆಡುನುಡಿಗಳ ನಡುವೆ ಕಾಣಿಸುವ ಇಂತಹ ವ್ಯತ್ಯಾಸಗಳು ಪದಗಳ ವ್ಯತ್ಯಾಸಗಳಲ್ಲ, ಉಲಿಗಳ ವ್ಯತ್ಯಾಸಗಳು ಎಂಬುದನ್ನು ಗಮನಿಸುವುದು ಅವಶ್ಯ. ಪದಗಳ ಮೊದಲಿನ ಪಕಾರ ಹಕಾರವಾಗುವ ಕಟ್ಟಲೆ ಹಳೆಗನ್ನಡದಲ್ಲಿ ಅಂತಹ ಪಕಾರವಿರುವ ಎಲ್ಲಾ ಎಂದರೆ ಸಾವಿರಕ್ಕೂ ಹೆಚ್ಚು ಪದಗಳನ್ನು ಮಾರ‍್ಪಡಿಸಿದೆ. ಇವತ್ತು ಈ ಕಟ್ಟಲೆಗೆ ಹೊರಪಡಿಕೆಗಳಾಗಿ ಕಾಣಿಸುವ ಪಾಲು, ಪಾರೆ, ಪೂನು ಮೊದಲಾದ ಪದಗಳು ಹಿಂದಿನ ಬರಹಗಳಿಂದ ಇಲ್ಲವೇ ಮಾರ‍್ಪಡದ ಆಡುನುಡಿಗಳಿಂದ ಎರವಲಾಗಿ ಪಡೆದ ಪದಗಳಲ್ಲದೆ ನಿಜಕ್ಕೂ ಆ ಕಟ್ಟಲೆಗೆ ಹೊರಪಡಿಕೆಗಳಲ್ಲ.

ಒಂದು ತಲೆಮಾರಿನ ಮಕ್ಕಳು ತಮ್ಮ ತಾಯ್ನುಡಿಯನ್ನು ತಮ್ಮದಾಗಿಸಿಕೊಳ್ಳುವ ಸಮಯದಲ್ಲಿ ಇಂತಹ ಮಾರ‍್ಪಾಡುಗಳು ಅವರು ಪಡೆಯುವ ಆಡುನುಡಿಯಲ್ಲಿ ನಡೆದುಹೋಗುತ್ತವೆಯೆಂದು ತೋರುತ್ತದೆ. ಈ ಮಕ್ಕಳ ನಡುವೆ ಯಾವ ರೀತಿಯ ಜಾತಿ, ಜಾಗ ಮೊದಲಾದ ಕಟ್ಟುಗಳಿದ್ದುವೋ ಅವು ಈ ಮಾರ‍್ಪಾಡುಗಳ ಹರವನ್ನು ನಿರ‍್ದರಿಸುತ್ತವೆ.

ನುಡಿಗಳಲ್ಲಿ ನಡೆಯುವ ಇಂತಹ ಕಟ್ಟುನಿಟ್ಟಾದ ಉಲಿಗಳ ಮಾರ‍್ಪಾಡುಗಳು ನುಡಿಗಳ ಹಿನ್ನಡವಳಿ(ಚರಿತ್ರೆ)ಯನ್ನು ತಿಳಿಯುವಲ್ಲಿ ಹೆಚ್ಚಿನ ನೆರವನ್ನು ನೀಡುತ್ತವೆ. ಒಂದು ಮೂಲ ನುಡಿಯಿಂದ ಹಲವಾರು ನುಡಿಗಳು ಯಾವ ರೀತಿಯಲ್ಲಿ ಕವಲೊಡೆದು ಬೇರೆ ಬೇರಾಗಿವೆ ಎಂಬುದನ್ನು ಮುಕ್ಯವಾಗಿ ಆ ನುಡಿಗಳಲ್ಲಿ ನಡೆದಿರುವ ಇಂತಹ ಕಟ್ಟುನಿಟ್ಟಾದ ಉಲಿಗಳ ಮಾರ‍್ಪಾಡುಗಳ ನೆರವಿನಿಂದ ತೀರ‍್ಮಾನಿಸಲಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ನುಡಿಗಳ ನಡುವಿನ ನಂಟಸ್ತಿಕೆ

ನುಡಿಯರಿಮೆಯ ಇಣುಕುನೋಟ – 18

ಜನರ ನಡುವೆ ಕಾಣಿಸುವ ಹಾಗೆ, ಅವರಾಡುವ ನುಡಿಗಳನಡುವೆಯೂ ‘ನಂಟಸ್ತಿಕೆ’ಯನ್ನು ಕಾಣಲು ಸಾದ್ಯವಿದೆ. ಕೆಲವು ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆಯೆಂದು ಹೇಳಬಹುದು, ಮತ್ತು ಬೇರೆ ಕೆಲವು ನುಡಿಗಳ ನಡುವೆ ದೂರದ ನಂಟಸ್ತಿಕೆ ಮಾತ್ರ ಇದೆಯೆಂದು ಹೇಳಬಹುದು. ಆದರೆ, ಇನ್ನು ಕೆಲವು ನುಡಿಗಳ ನಡುವೆ ಯಾವ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳಲು ಬರುವುದಿಲ್ಲ. ಹಾಗೆ ಹೇಳಲು ಯಾವ ಆದಾರವೂ ದೊರಕದಿರುವುದೇ ಇದಕ್ಕೆ ಕಾರಣ.

ಎತ್ತುಗೆಗಾಗಿ, ಕನ್ನಡ ಮತ್ತು ತಮಿಳು ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆ; ಕನ್ನಡ ಮತ್ತು ತುಳು ನುಡಿಗಳ ನಡುವೆ ಇದಕ್ಕಿಂತ ಸ್ವಲ್ಪ ದೂರದ ನಂಟಸ್ತಿಕೆಯಿದೆ. ಇದೇ ರೀತಿಯಲ್ಲಿ, ಹಿಂದಿ ಮತ್ತು ಮರಾಟಿ ನುಡಿಗಳ ನಡುವೆ ಹತ್ತಿರದ ನಂಟಸ್ತಿಕೆಯಿದೆ; ಹಿಂದಿ ಮತ್ತು ಇಂಗ್ಲಿಶ್ ನುಡಿಗಳ ನಡುವೆ ದೂರದ ನಂಟಸ್ತಿಕೆಯಿದೆ. ಆದರೆ ಕನ್ನಡ ಮತ್ತು ಹಿಂದಿ ನುಡಿಗಳ ನಡುವೆ, ಇಲ್ಲವೇ ಕನ್ನಡ ಮತ್ತು ಇಂಗ್ಲಿಶ್ ನುಡಿಗಳ ನಡುವೆ, ಹತ್ತಿರದ್ದಾಗಲಿ ದೂರದ್ದಾಗಲಿ ಯಾವುದೇ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳುವುದಕ್ಕೆ ಯಾವ ಆದಾರವೂ ದೊರಕುವುದಿಲ್ಲ.

ನುಡಿಗಳ ನಡುವಿನ ನಂಟಸ್ತಿಕೆಯನ್ನು ಜನರ ನಡುವಿನ ನಂಟಸ್ತಿಕೆಯ ಹಾಗೆ ಅವುಗಳ ಹುಟ್ಟು ಮತ್ತು ಬೆಳವಣಿಗೆಗಳ ಆದಾರದ ಮೇಲೆ ಕಲ್ಪಿಸಿಕೊಳ್ಳಲಾಗಿದೆ. ಆದರೆ, ಜನರ ಹುಟ್ಟಿಗೂ ನುಡಿಗಳ ಹುಟ್ಟಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಎತ್ತುಗೆಗಾಗಿ, ಜನರಲ್ಲಿ ಹೆಣ್ಣು-ಗಂಡುಗಳ ಕೂಡಿಕೆಯಿಂದ ಮಗು ಹುಟ್ಟುತ್ತದೆ; ಆದರೆ ನುಡಿಗಳಲ್ಲಿ ಆ ರೀತಿ ಎರಡು ನುಡಿಗಳ ಕೂಡಿಕೆಯಿಂದ ಮೂರನೆಯ ನುಡಿ ಹುಟ್ಟಿಕೊಳ್ಳುವುದಿಲ್ಲ; ಒಂದು ನುಡಿಯಿದ್ದದ್ದು ಇನ್ನೊಂದು ನುಡಿಯಾಗಿ ಬದಲಾಗುತ್ತದೆ, ಇಲ್ಲವೇ ಎರಡು ನುಡಿಗಳಾಗಿ ಒಡೆದುಕೊಳ್ಳುತ್ತದೆ.

ಎತ್ತುಗೆಗಾಗಿ, ಸಂಸ್ಕ್ರುತ ನುಡಿ ಇವತ್ತಿನ ಮರಾಟಿ ನುಡಿಯಾಗಿ ಬದಲಾಗಿದೆಯೆಂದು ಹೇಳಬಹುದು; ಇಲ್ಲವೇ ಅದೇ ನುಡಿ ಮರಾಟಿ, ಕೊಂಕಣಿ, ಹಿಂದಿ, ಗುಜರಾತಿ, ಪಂಜಾಬಿ, ಬಂಗಾಲಿ ಮೊದಲಾದ ಇವತ್ತಿನ ಹಲವು ನುಡಿಗಳಾಗಿ ಒಡೆದುಕೊಂಡಿದೆಯೆಂದೂ ಹೇಳಬಹುದು. ಆದರೆ, ಇದೇ ರೀತಿಯಲ್ಲಿ ಸಂಸ್ಕ್ರುತ ನುಡಿ ಕನ್ನಡ ನುಡಿಯಾಗಿ ಬದಲಾಗಿದೆಯೆಂದು ಹೇಳಲು ಬರುವುದಿಲ್ಲ. ಯಾಕೆಂದರೆ, ಕನ್ನಡ ಮತ್ತು ಸಂಸ್ಕ್ರುತ ನುಡಿಗಳ ನಡುವೆ ಅವುಗಳ ಪದಗಳಲ್ಲಿ ಮತ್ತು ವ್ಯಾಕರಣ ನಿಯಮಗಳಲ್ಲಿ ಹಲವು ಬುಡಕಟ್ಟಿನ ವ್ಯತ್ಯಾಸಗಳಿವೆ. ಈ ಎಲ್ಲಾ ವ್ಯತ್ಯಾಸಗಳೂ ಹೇಗೆ ಉಂಟಾಗಿವೆ ಎಂಬುದನ್ನು ವಿವರಿಸಲು ಇದುವರೆಗೆ ಯಾರಿಗೂ ಸಾದ್ಯವಾಗಿಲ್ಲ.

ಇಂತಹ ವಿವರಿಸಲು ಸಾದ್ಯವಾಗದ ವ್ಯತ್ಯಾಸಗಳಿರುವ ಕಾರಣ, ಸಂಸ್ಕ್ರುತ ಮತ್ತು ಕನ್ನಡ ನುಡಿಗಳನ್ನು ಎರಡು ತೀರ ಬೇರಾಗಿರುವ ಮೂಲನುಡಿಗಳಿಂದ ಬೆಳೆದು ಬಂದಿರುವವುಗಳೆಂಬುದಾಗಿ ಪರಿಗಣಿಸಬೇಕಾಗಿದೆ. ಸಂಸ್ಕ್ರುತ ‘ಇಂಡೋ-ಆರ‍್ಯನ್’ ಎಂಬ ಹೆಸರಿನ ಮೂಲ ನುಡಿಯಿಂದ, ಮತ್ತು ಕನ್ನಡ ಅದಕ್ಕಿಂತ ತೀರ ಬೇರಾಗಿರುವ ‘ದ್ರಾವಿಡ’ ಎಂಬ ಹೆಸರಿನ ಮೂಲ ನುಡಿಯಿಂದ ಬೆಳೆದು ಬಂದಿದೆಯೆಂಬುದಾಗಿ ಇವತ್ತು ಕಲ್ಪಿಸಿಕೊಳ್ಳಬೇಕಾಗಿದೆ.

ನುಡಿಗಳನ್ನು ಈ ರೀತಿ ಬೇರೆ ಬೇರೆ ನುಡಿಕುಟುಂಬಗಳಲ್ಲಿ ಇರಿಸಿ ಹೇಳಲು ಮುಕ್ಯವಾಗಿ ಅವುಗಳ ಚರಿತ್ರೆ ಆದಾರವಾಗಿರುತ್ತದೆ. ಒಂದು ನುಡಿಯನ್ನಾಡುವ ಜನ ದೂರ ದೂರದಲ್ಲಿರುವ ಊರುಗಳಿಗೆ ಹೋಗಿ ನೆಲೆಸಿದಾಗ, ಅವರೊಳಗಿನ ಸಂಪರ‍್ಕ ಕಡಿಮೆಯಾಗುತ್ತಾ ಹೋಗುತ್ತದೆ, ಮತ್ತು ಇದರಿಂದಾಗಿ, ಅವರು ಬಳಸುವ ನುಡಿಯಲ್ಲಿ ಬದಲಾವಣೆಗಳು ಒಂದೇ ದಿಕ್ಕಿನಲ್ಲಿ ನಡೆಯದೆ ಬೇರೆ ಬೇರೆ ದಿಕ್ಕುಗಳಲ್ಲಿ ನಡೆಯತೊಡಗುತ್ತವೆ.

ಎತ್ತುಗೆಗಾಗಿ, ಕನ್ನಡ ನುಡಿಯನ್ನಾಡುವ ಜನ ಬಡಗು ಕರ‍್ನಾಟಕ, ತೆಂಕು ಕರ‍್ನಾಟಕ ಮತ್ತು ಕರಾವಳಿ ಎಂಬ ಮೂರು ಮುಕ್ಯ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಇವರಾಡುವ ನುಡಿಯೂ ಬಡಗು, ತೆಂಕು ಮತ್ತು ಕರಾವಳಿ ಎಂಬ ಮೂರು ಮುಕ್ಯ ಒಳನುಡಿಗಳಾಗಿ ವ್ಯತ್ಯಾಸಗಳನ್ನು ತೋರಿಸುತ್ತದೆ. ಈ ಒಳನುಡಿಗಳ ನಡುವೆ ಯಾವ ಪ್ರಮಾಣದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ ಎಂಬುದು ಈ ಪ್ರದೇಶಗಳಿಗೆ ಹೋಗಿ ನೆಲೆಸಿದ ಮೇಲೆ ಇವರ ನಡುವೆ ಎಂತಹ ಸಂಪರ‍್ಕ ಸಾದ್ಯವಿತ್ತು ಎಂಬುದರ ಮೇಲೆ ಅವಲಂಬಿಸಿದೆ.

ನುಡಿಗಳೆಲ್ಲ ಈ ರೀತಿ ಅವನ್ನಾಡುವ ಜನರ ನಡುವಿರುವ ಸಂಪರ‍್ಕ ಕಡಿಮೆಯಾದಾಗ ಬೇರೆ ಬೇರೆ ಒಳನುಡಿಗಳಾಗಿ ಒಡೆದುಕೊಳ್ಳುತ್ತವೆ, ಮತ್ತು ಆಮೇಲೆ ಅವೇ ಒಳನುಡಿಗಳು ಸ್ವತಂತ್ರ ನುಡಿಗಳಾಗಿ ಬೆಳೆಯುತ್ತವೆ ಎಂಬ ಈ ಅಬಿಪ್ರಾಯದ ಮೇಲೆ ನುಡಿಕುಟುಂಬಗಳ ಕಲ್ಪನೆಯನ್ನು ನಿಲ್ಲಿಸಲಾಗಿದೆ. ಹಿಂದೆ ಒಂದು ಕಾಲದಲ್ಲಿ ಕೆಲವೇ ಕೆಲವು ಮೂಲ ನುಡಿಗಳಿದ್ದಿರಬೇಕು, ಮತ್ತು ಈ ಮೂಲ ನುಡಿಗಳು ಮೇಲೆ ಸೂಚಿಸಿದ ಹಾಗೆ ಕವಲೊಡೆದು ಬೇರೆ ಬೇರೆ ನುಡಿಗಳಾದುದರಿಂದಾಗಿ, ಇವತ್ತು ಸಾವಿರಾರು ನುಡಿಗಳು ಬಳಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ ಎಂಬುದೇ ಈ ಕಲ್ಪನೆ.

ಈ ಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿ ಇವತ್ತು ಬಳಕೆಯಲ್ಲಿರುವ ಸಾವಿರಾರು ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಾಗಿ ಹಂಚುವ ಪ್ರಯತ್ನ ನಡೆಯುತ್ತಿದೆ. ಎಂದರೆ, ಈ ಸಾವಿರಾರು ನುಡಿಗಳು ಹದಿನಯ್ದಿಪ್ಪತ್ತು ಮೂಲ ನುಡಿಗಳಿಂದ ಅವುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾಗುವುದರ ಮೂಲಕ ಹೇಗೆ ಬೆಳೆದು ಬಂದಿರಬೇಕು ಎಂಬುದನ್ನು ತೋರಿಸಿ ಕೊಡುವ ಪ್ರಯತ್ನ ನಡೆಯುತ್ತಿದೆ.

ಇವತ್ತು ಬೇರೆ ಬೇರಾಗಿ ಕಾಣಿಸುವ ಎರಡು ನುಡಿಗಳು ಒಂದೇ ಮೂಲ ನುಡಿಯಿಂದ ಬೆಳೆದು ಬಂದವುಗಳೆಂದು ನಾವು ತೋರಿಸಿಕೊಡಬೇಕಿದ್ದಲ್ಲಿ, (ಎಂದರೆ ಅವು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂದು ವಾದಿಸಬೇಕಿದ್ದಲ್ಲಿ) ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳೆಲ್ಲ ಮೂಲ ನುಡಿಯೊಂದರಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿಕೊಡಬೇಕು. ಎಂದರೆ, ಆ ಮೂಲ ನುಡಿಯನ್ನಾಡುವ ಜನರು ದೂರದ ಎರಡು ಪ್ರದೇಶಗಳಿಗೆ ಹೋಗಿ ನೆಲೆಸಿದ ಮೇಲೆ, ಅವರ ಮಾತಿನಲ್ಲಿ ಬದಲಾವಣೆಗಳು ಎರಡು ಬೇರೆ ಬೇರೆ ದಿಕ್ಕುಗಳಲ್ಲಿ ನಡೆದಿರಬೇಕು, ಮತ್ತು ಒಂದು ಪ್ರದೇಶದಲ್ಲಿ ನಡೆದ ಬದಲಾವಣೆಗಳು ಇನ್ನೊಂದು ಪ್ರದೇಶದಲ್ಲಿ ನಡೆಯದಿದ್ದುದೇ ಆ ಎರಡು ಪ್ರದೇಶಗಳ ಜನರ ಮಾತುಗಳ (ಎಂದರೆ ನುಡಿಗಳ) ನಡುವೆ ಇವತ್ತು ಕಾಣಿಸುವ ವ್ಯತ್ಯಾಸಗಳಿಗೆ ಮೂಲ ಕಾರಣ ಎಂಬುದನ್ನು ತೋರಿಸಿಕೊಡಬೇಕು.

ಹಾಗಾಗಿ, ನುಡಿಗಳನ್ನು ಬೇರೆ ಬೇರೆ ನುಡಿಕುಟುಂಬಗಳಾಗಿ ಹಂಚುವ ಕೆಲಸದಲ್ಲಿ ಅವುಗಳ ನಡುವೆ ಕಾಣಿಸುವ ಹೋಲಿಕೆಗಳಿಗಿಂತಲೂ ವ್ಯತ್ಯಾಸಗಳಿಗೇನೇ ಹೆಚ್ಚಿನ ಮಹತ್ವವಿದೆ. ಎರಡು ನುಡಿಗಳ ನಡುವೆ ಸ್ವಲ್ಪವೂ ಹೋಲಿಕೆ ಕಾಣಿಸದಿದ್ದರೂ, ಅವುಗಳ ನಡುವಿರುವ ವ್ಯತ್ಯಾಸಗಳೆಲ್ಲ ಆ ಎರಡು ನುಡಿಗಳ ಚರಿತ್ರೆಯಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ಮೇಲೆ ಸೂಚಿಸಿದ ಹಾಗೆ ತೋರಿಸಿಕೊಟ್ಟಲ್ಲಿ, ಅವನ್ನು ಒಂದೇ ನುಡಿಕುಟುಂಬಕ್ಕೆ ಸೇರಿದವುಗಳೆಂದು ಹೇಳಲು ಬರುತ್ತದೆ. ಇದಕ್ಕೆ ಬದಲು, ಎರಡು ನುಡಿಗಳ ನಡುವೆ ಎಶ್ಟೇ ಹೋಲಿಕೆಯಿರಲಿ, ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳನ್ನು ಒಂದು ಮೂಲ ನುಡಿಯಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ನಡೆದ ಬದಲಾವಣೆಗಳಿಂದಾಗಿ ಉಂಟಾದವುಗಳು ಎಂಬುದಾಗಿ ತೋರಿಸಿಕೊಡಲು ಬರುವುದಿಲ್ಲವಾದಲ್ಲಿ, ಅವು ಒಂದೇ ನುಡಿ ಕುಟುಂಬಕ್ಕೆ ಸೇರಿದವುಗಳೆಂದು ವಾದಿಸಲು ಬರುವುದಿಲ್ಲ.

ಎರಡು ನುಡಿಗಳ ನಡುವೆ ಹೋಲಿಕೆಗಳು ಕಾಣಿಸಿಕೊಳ್ಳಲು ಬೇರೆ ಕಾರಣಗಳೂ ಇರಬಲ್ಲುವು: ಎತ್ತುಗೆಗಾಗಿ, ಅವುಗಳಲ್ಲಿ ಒಂದು ಇನ್ನೊಂದರಿಂದ ಹಲವಾರು ಪದಗಳನ್ನು ಎರವಲಾಗಿ ಪಡೆದಿದೆಯಾದರೆ, ಅವೆರಡರ ನಡುವೆ ತುಂಬಾ ಹೋಲಿಕೆಯಿದೆಯೆಂದು ಅನಿಸಬಹುದು. ಇದಲ್ಲದೆ, ಆಕಸ್ಮಿಕವಾಗಿಯೂ ಎರಡು ನುಡಿಗಳಲ್ಲಿ ಬಳಕೆಯಾಗುವ ಪದಗಳ ನಡುವೆ ಹೋಲಿಕೆಗಳು ಕಾಣಿಸಬಹುದು. ನುಡಿಗಳನ್ನು ಬಳಸುವ, ಬೆಳೆಸುವ ಮತ್ತು ಬದಲಾಯಿಸುವವರೆಲ್ಲರೂ ಮನುಶ್ಯರೇ ಆಗಿರುವುದರಿಂದ, ಇಂತಹ ಆಕಸ್ಮಿಕ ಹೋಲಿಕೆಗಳು ಕಾಣಿಸಿಕೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ.

ಹಾಗಾಗಿ, ಎರಡು ನುಡಿಗಳ ನಡುವೆ ಕಾಣಿಸುವ ಹೋಲಿಕೆಗಳ ಆದಾರದ ಮೇಲೆ ಅವು ಒಂದೇ ನುಡಿಕುಟುಂಬಕ್ಕೆ ಸೇರಿವೆಯೆಂದು ಹೇಳಲು ಬರುವುದಿಲ್ಲ. ಅವುಗಳ ನಡುವೆ ಕಾಣಿಸುವ ವ್ಯತ್ಯಾಸಗಳು ಯಾವ ರೀತಿಯಲ್ಲಿ ಮೂಡಿಬಂದಿವೆ ಎಂಬುದನ್ನು ಮೇಲೆ ಸೂಚಿಸಿದ ಹಾಗೆ ವಿವರಿಸಲು ಸಾದ್ಯವಾಗುವುದಿದ್ದಲ್ಲಿ ಮಾತ್ರ ಅವನ್ನು ಒಂದೇ ಕುಟುಂಬದ ನುಡಿಗಳೆಂದು, ಎಂದರೆ ಚಾರಿತ್ರಿಕವಾಗಿ ಅವು ಒಂದೇ ಮೂಲ ನುಡಿಯಿಂದ ಬೆಳೆದು ಬಂದವುಗಳೆಂದು ಪರಿಗಣಿಸಲು ಸಾದ್ಯವಾಗುತ್ತದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter