Posts Tagged ‘linguistics’

ಯಾವುದು ಕನ್ನಡ ವ್ಯಾಕರಣ?

ನುಡಿಯರಿಮೆಯ ಇಣುಕುನೋಟ – 12

ಕೇಶಿರಾಜನ ಕಾಲದಿಂದಲೂ ಕನ್ನಡ ಪಂಡಿತರು ಯಾವುದನ್ನು‘ಕನ್ನಡ ವ್ಯಾಕರಣ’ ಎಂಬುದಾಗಿ ಕರೆಯುತ್ತ ಬಂದಿದ್ದಾರೋ ಅದು ನಿಜಕ್ಕೂ ಕನ್ನಡದ ವ್ಯಾಕರಣವೇ ಅಲ್ಲ; ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳು ಕನ್ನಡದಲ್ಲೂ ಇರಬಹುದು, ಇಲ್ಲವೇ ಇರಬೇಕು ಎಂಬ ತಪ್ಪು ಕಲ್ಪನೆಯಲ್ಲಿ ಆ ಕಟ್ಟಲೆಗಳನ್ನು ಕನ್ನಡದಲ್ಲಿ ಕಾಣಲು ನಡೆಸಿದ ಒಂದು ವ್ಯರ‍್ತ ಪ್ರಯತ್ನ ಮಾತ್ರ.

ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಇದೇ ಕನ್ನಡದ್ದಲ್ಲದ ವ್ಯಾಕರಣವನ್ನು ಕಲಿಸಲಾಗುತ್ತಿದೆ. ಅದನ್ನು ಯಾಕೆ ‘ಕನ್ನಡ ವ್ಯಾಕರಣ’ವೆಂದು ಕರೆಯಬೇಕು ಎಂಬುದನ್ನು ಮಕ್ಕಳೂ ತಿಳಿಯಲಾರರು, ಅದನ್ನು ಕಲಿಸುವ ಮಾಸ್ತರರೂ ತಿಳಿಸಿಕೊಡಲಾರರು. ಇನ್ನು ಅದರಿಂದ ಪ್ರಯೋಜನವನ್ನೇನಾದರೂ ಪಡೆಯುವುದಂತೂ ದೂರವೇ ಉಳಿಯಿತು.

ನಿಜಕ್ಕೂ ಈ ‘ವ್ಯಾಕರಣ’ ಎಂಬುದು ಏನು ಮಾಡಬೇಕು? ಒಂದು ನುಡಿಯಲ್ಲಿ ಬರುವ ಪದಗಳ ಒಳರಚನೆ ಎಂತಹದು, ಪದಗಳನ್ನು ಬಳಸಿ ಆ ನುಡಿಯಲ್ಲಿ ಸೊಲ್ಲು(ವಾಕ್ಯ)ಗಳನ್ನು ಉಂಟುಮಾಡುವುದು ಹೇಗೆ, ಮತ್ತು ಸೊಲ್ಲುಗಳನ್ನು ಬಳಸಿ ಅದರಲ್ಲಿ ಬರಹಗಳನ್ನು ಬರೆಯುವುದು ಹೇಗೆ ಎಂಬಂತಹ ಸೊಲ್ಲುಗಳ ಕುರಿತಾಗಿರುವ ತಿಳಿವನ್ನು ಅದು ನಮಗೆ ಒದಗಿಸಬೇಕು.
ಕನ್ನಡದ ಕುರಿತಾಗಿರುವ ಇಂತಹ ತಿಳಿವನ್ನು ನಾವು ಇಲ್ಲಿ ‘ಕನ್ನಡದ ಸೊಲ್ಲರಿಮೆ’ ಎಂದು ಕರೆಯೋಣ; ಯಾಕೆಂದರೆ, ‘ಕನ್ನಡ ವ್ಯಾಕರಣ’ ಎಂಬುದಕ್ಕೆ ಇವತ್ತು ಮೇಲೆ ವಿವರಿಸಿದಂತಹ ಬೇರೆಯೇ ಹುರುಳಿದೆ.

ಪಾಣಿನಿಯೇ ಮೊದಲಾದ ಸಂಸ್ಕ್ರುತದ ಪಂಡಿತರು ಆ ನುಡಿಯಲ್ಲಿ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗುತ್ತದೆ, ಅವುಗಳ ಹಿಂದಿರುವ ಕಟ್ಟಲೆಗಳು ಎಂತಹವು ಎಂಬುದನ್ನು ಕಂಡುಹಿಡಿದಿದ್ದರು, ಮತ್ತು ಅಂತಹ ಕಟ್ಟಲೆಗಳನ್ನು ಒಟ್ಟುಗೂಡಿಸಿ, ಅದನ್ನು ‘ಸಂಸ್ಕ್ರುತ ವ್ಯಾಕರಣ’ ಎಂಬುದಾಗಿ ಕರೆದಿದ್ದರು; ಅಂತಹದೇ ಕೆಲಸವನ್ನು ಇವತ್ತು ನಾವು ಕನ್ನಡದಲ್ಲಿ ನಡೆಸಬೇಕಾಗಿದೆ.
ಸೊಲ್ಲುಗಳನ್ನು ಕಟ್ಟುವ ಬಗೆ ಸಂಸ್ಕ್ರುತದಲ್ಲಿರುವುದಕ್ಕಿಂತ ಕನ್ನಡದಲ್ಲಿ ತೀರ ಬೇರಾಗಿದೆ; ಹಾಗಾಗಿ, ಸಂಸ್ಕ್ರುತ ವ್ಯಾಕರಣದಲ್ಲಿ ಬರುವ ಕಟ್ಟಲೆಗಳಿಗಿಂತ ತೀರ ಬೇರಾಗಿರುವ ಕಟ್ಟಲೆಗಳು ‘ಕನ್ನಡದ ಸೊಲ್ಲರಿಮೆ’ಯಲ್ಲಿ ಬರಬೇಕಾಗುತ್ತದೆ.

ಸಂಸ್ಕ್ರುತದಲ್ಲಿ ಎರಡು (ಇಲ್ಲವೇ ಹೆಚ್ಚು) ಪದಗಳನ್ನು ಒಟ್ಟುಸೇರಿಸಿ ಹೊಸಪದವನ್ನು ಉಂಟುಮಾಡುವ ಹೊಲಬನ್ನು ‘ಸಮಾಸ’ ಎಂಬುದಾಗಿ ಕರೆಯಲಾಗುತ್ತದೆ; ನಾಮಪದಗಳನ್ನು ಮಾತ್ರ ಈ ರೀತಿ ಸಂಸ್ಕ್ರುತದಲ್ಲಿ ಒಟ್ಟುಸೇರಿಸಲು ಬರುತ್ತದೆ. ಹಾಗಾಗಿ, ಒಟ್ಟುಸೇರಿಸಿದ ಪದಗಳಲ್ಲಿ ಯಾವುದು ಮುಕ್ಯ ಎಂಬುದರ ಮೇಲೆ ಈ ಸಮಾಸಗಳನ್ನು ತತ್ಪುರುಶ (ಎರಡನೆಯದು ಮುಕ್ಯ), ಅವ್ಯಯೀಬಾವ (ಮೊದಲನೆಯದು ಮುಕ್ಯ), ದ್ವಂದ್ವ (ಎರಡೂ ಮುಕ್ಯ) ಮತ್ತು ಬಹುವ್ರೀಹಿ (ಎರಡೂ ಮುಕ್ಯವಲ್ಲ, ಬೇರೊಂದು ಪದ ಮುಕ್ಯ) ಎಂಬ ನಾಲ್ಕು ಬಗೆಗಳಲ್ಲಿ ಗುಂಪಿಸಬಹುದೆಂದು ಸಂಸ್ಕ್ರುತ ವ್ಯಾಕರಣಗಳು ಹೇಳುತ್ತವೆ.

ಆದರೆ, ಕನ್ನಡದಲ್ಲಿ ಎರಡು ಪದಗಳನ್ನು ಒಟ್ಟುಸೇರಿಸಿ ಹೊಸದೊಂದು ಪದವನ್ನು ಉಂಟುಮಾಡುವ ಬಗೆ ಇದರಿಂದ ತೀರ ಬೇರಾದುದು. ನಾಮಪದ, ಕ್ರಿಯಾಪದ, ಮತ್ತು ಗುಣಪದಗಳೆಂಬ ಮೂರು ಬಗೆಯ ಪದಗಳನ್ನು ಇಂತಹ ಹೊಸಪದಗಳ ಮೊದಲನೆಯ ಪದವಾಗಿ ಬಳಸಲು ಬರುತ್ತದೆ; ಅವುಗಳ ಎರಡನೆಯ ಪದ ಮಾತ್ರ ಯಾವಾಗಲೂ ಹೆಸರುಪದವಾಗಿರುತ್ತದೆ.

ಕಯ್ಮಗ್ಗ, ಬಯಲಾಟ, ನೆಲಗಡಲೆ ಎಂಬಂತಹ ಪದಗಳಲ್ಲಿ ಎರಡು ನಾಮಪದಗಳು ಒಟ್ಟುಸೇರಿವೆ; ಕಡೆಗೋಲು, ಸಿಡಿಮದ್ದು, ಬಿಚ್ಚುಕತ್ತಿ ಎಂಬಂತಹ ಪದಗಳಲ್ಲಿ ಕ್ರಿಯಾಪದ ಮತ್ತು ನಾಮಪದಗಳು ಒಟ್ಟುಸೇರಿವೆ (ಕಡೆ, ಸಿಡಿ ಮತ್ತು ಬಿಚ್ಚು ಎಂಬವು ಕ್ರಿಯಾಪದಗಳು); ಬಿಸಿನೀರು, ದೊಡ್ಡಮ್ಮ, ಬೆಳ್ಳುಳ್ಳಿ ಎಂಬಂತಹ ಪದಗಳಲ್ಲಿ ಗುಣಪದ ಮತ್ತು ನಾಮಪದಗಳು ಒಟ್ಟುಸೇರಿವೆ.
ಹಾಗಾಗಿ, ಕನ್ನಡದಲ್ಲಿ ಬರುವ ‘ಸಮಾಸ’ ಯಾವ ಬಗೆಯದು ಎಂಬುದನ್ನು ತಿಳಿಯಬೇಕಿದ್ದಲ್ಲಿ ಅಂತಹ ಹೊಸಪದಗಳಲ್ಲಿ ಮೊದಲಿಗೆ ಯಾವ ಬಗೆಯ ಪದ ಬಂದಿದೆ ಎಂಬುದನ್ನು ತಿಳಿಯಬೇಕಲ್ಲದೆ, ಸಂಸ್ಕ್ರುತದ ಹಾಗೆ ಯಾವ ಪದ ಮುಕ್ಯ ಎಂಬುದನ್ನಲ್ಲ.

ಇಂಗ್ಲಿಶ್‌ನಂತಹ ಬೇರೆ ನುಡಿಗಳಿಂದ ಹೊಸ ಹೊಸ ವಿಶಯಗಳನ್ನು ಕನ್ನಡಕ್ಕೆ ತರಬೇಕಾದಾಗ, ಅದಕ್ಕಾಗಿ ಹಲವಾರು ಹೊಸ ಪದಗಳನ್ನು ಕನ್ನಡದಲ್ಲಿ ಉಂಟುಮಾಡಿಕೊಳ್ಳಬೇಕಾಗುತ್ತದೆ. ನಿಜಕ್ಕೂ ಕನ್ನಡ ಪದಗಳ ಒಳರಚನೆಯೆಂತಹದು ಎಂಬುದನ್ನು ತಿಳಿದವರು ಮಾತ್ರ ಈ ಕೆಲಸವನ್ನು ಸರಿಯಾಗಿ ನಡೆಸಬಲ್ಲರು.

ಸಂಸ್ಕ್ರುತ ಪದಗಳ ಒಳರಚನೆಯೇ ಕನ್ನಡ ಪದಗಳಿಗೂ ಇದೆ ಎಂಬ ತಪ್ಪು ತಿಳಿವನ್ನು ‘ಕನ್ನಡ ವ್ಯಾಕರಣ’ಗಳಿಂದ ಪಡೆದಿರುವ ಕನ್ನಡ ಪಂಡಿತರಿಗೆ ಇಂತಹ ಹೊಸಪದಗಳನ್ನು ಕನ್ನಡದಲ್ಲೇನೇ ಉಂಟುಮಾಡುವುದು ಹೇಗೆ ಎಂಬುದು ಗೊತ್ತೇ ಇರುವುದಿಲ್ಲ. ಹಾಗಾಗಿ, ಹೊಸಪದಗಳು ಬೇಕಾದಾಗಲೆಲ್ಲ ಅವರು ಅವನ್ನು ಸಂಸ್ಕ್ರುತದಲ್ಲಿ ಉಂಟುಮಾಡಿ ಕನ್ನಡದೊಳಗೆ ತುರುಕುತ್ತಾರೆ, ಮತ್ತು ಸಂಸ್ಕ್ರುತದ ನೆರವಿಲ್ಲದೆ ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡಲು ಸಾದ್ಯವೇ ಇಲ್ಲ ಎಂಬ ತಪ್ಪು ತೀರ‍್ಮಾನಕ್ಕೆ ಬರುತ್ತಾರೆ.

ಕ್ರಿಯಾಪದಗಳನ್ನು ನಾಮಪದಗಳೊಂದಿಗೆ ಸೇರಿಸಿ ಹೊಸಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಲು ಬರುವುದಿಲ್ಲವಾದರೂ ಕನ್ನಡದಲ್ಲಿ ಬರುತ್ತದೆ ಎಂಬ ಕನ್ನಡದ್ದೇ ಆದ ಸೊಲ್ಲರಿಮೆಯ ಕಟ್ಟಲೆಯನ್ನು ತಿಳಿದವರಿಗೆ ನೂರಾರು ಹೊಸಪದಗಳನ್ನು ಕನ್ನಡದಲ್ಲೇನೇ ಉಂಟುಮಾಡಲು ಬರುತ್ತದೆ. ಇಂಗುಗುಂಡಿ, ಇಡುಗಂಟು, ಇಳಿನೀರು, ಉಜ್ಜುಗಾಯ, ಉಬ್ಬುಗನ್ನಡಿ, ಕಟ್ಟುಪಟ್ಟಿ, ಕರೆಸಾಲ, ತಡೆಯೋಟ, ತೇಲುಮನೆ, ತಳ್ಳುಗುಂಡಿ ಮೊದಲಾದ ಇಂತಹ ಪದಗಳು ಕನ್ನಡ ಬರಹದಲ್ಲೂ ತುಂಬಾ ಚನ್ನಾಗಿ ಹೊಂದಿಕೊಳ್ಳುತ್ತವೆ.

ಕನ್ನಡದ ಆಡುನುಡಿಗಳಲ್ಲಿಯೂ ಈ ಹೊಲಬನ್ನು ಬಳಸಿ ಉಂಟುಮಾಡಿರುವ ತುಂಬುಕಡಬು, ಬಿಚ್ಚೋಲೆ, ತೂಗುದೀಪ ಎಂಬಂತಹ ಹಲವಾರು ಪದಗಳು ಬಳಕೆಯಲ್ಲಿವೆ; ಆದರೆ, ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳೇ ಕನ್ನಡದಲ್ಲೂ ಇವೆಯೆಂಬುದಾಗಿ ಬ್ರಮಿಸುವ ‘ಕನ್ನಡ ವ್ಯಾಕರಣ’ಗಳಿಂದಾಗಿ ದಾರಿತಪ್ಪಿರುವ ಕನ್ನಡ ಪಂಡಿತರು ತಮ್ಮಲ್ಲಿ ಸ್ವಾಬಾವಿಕವಾಗಿ ಬೆಳೆದುಬಂದಿರಬಹುದಾದ ಈ ತಾಯ್ನುಡಿಯ ಅಳವನ್ನೇ ಕಳೆದುಕೊಂಡಿದ್ದಾರೆ.

ಸಂಸ್ಕ್ರುತದ ವಾಕ್ಯಗಳಲ್ಲಿ ಏಳು ವಿಬಕ್ತಿಗಳು ಬಳಕೆಯಾಗುತ್ತವೆ ಎಂಬುದನ್ನು ಸಂಸ್ಕ್ರುತದ ಪಂಡಿತರು ಕಂಡುಕೊಂಡಿದ್ದಾರೆ; ಕನ್ನಡದ ಸೊಲ್ಲುಗಳನ್ನು ಪರಿಶೀಲಿಸಿದೆವಾದರೆ, ಅವುಗಳಲ್ಲಿ ಬರುವ ಪದಗಳಿಗೆ ಒಟ್ಟು ನಾಲ್ಕು ವಿಬಕ್ತಿರೂಪಗಳು ಮಾತ್ರ ಕಾಣಿಸುತ್ತವಲ್ಲದೆ, ಏಳು ವಿಬಕ್ತಿ ರೂಪಗಳು ಕಾಣಿಸುವುದಿಲ್ಲ; ಹಾಗಿರುವಾಗ, ಸಂಸ್ಕ್ರುತದ ಹಾಗೆ ಕನ್ನಡದಲ್ಲೂ ಏಳು ವಿಬಕ್ತಿಗಳಿರಬೇಕು ಎಂದು ಬ್ರಮಿಸಿ, ಅವನ್ನು ಕಾಣಲು ಪ್ರಯತ್ನಿಸುವ ‘ಕನ್ನಡದ ವ್ಯಾಕರಣ’ ಕನ್ನಡದ್ದಾಗುವುದು ಹೇಗೆ?

ಕನ್ನಡದಲ್ಲಿ ಮೂರು ಕಾಲಗಳಿವೆಯೆಂದು ‘ಕನ್ನಡ ವ್ಯಾಕರಣ’ಗಳು ಹೇಳುತ್ತವೆ; ಇದರಂತೆ, ಮಾಡುತ್ತೇನೆ ಎಂಬ ರೂಪ ಈಗ ನಡೆಯುತ್ತಿರುವ ಕೆಲಸವನ್ನು ತಿಳಿಸಬೇಕು, ಮತ್ತು ಮಾಡುವೆನು ಎಂಬ ರೂಪ ಮುಂದೆ ನಡೆಯಲಿರುವ ಕೆಲಸವನ್ನು ತಿಳಿಸಬೇಕು.

ಆದರೆ, ನಿಜಕ್ಕೂ ಕನ್ನಡದಲ್ಲಿ ನಾಳೆ ಮಾಡುತ್ತೇನೆ, ಬರುವ ವರ‍್ಶ ಮಾಡುತ್ತೇನೆ ಎಂಬಂತಹ ಸೊಲ್ಲುಗಳಲ್ಲಿ ಕಾಣಿಸುವ ಹಾಗೆ, ಮಾಡುತ್ತೇನೆ ಎಂಬುದು ಮುಂದೆ ನಡೆಯಲಿರುವ ಕೆಲಸವನ್ನು ತಿಳಿಸುತ್ತದೆ; ಈಗ ನಡೆಯುತ್ತಿರುವ ಕೆಲಸವನ್ನು ತಿಳಿಸಲು ಮಾಡುತ್ತಿದ್ದೇನೆ ಎಂಬ ಮಾಡು ಪದಕ್ಕೆ ಇರು ಪದವನ್ನು ಸೇರಿಸಿರುವ ಬೇರೆಯೇ ಪದರೂಪವನ್ನು ಬಳಸಲಾಗುತ್ತದೆ. ಇಂತಹ ಕಣ್ಣಿಗೆ ಹೊಡೆದು ಕಾಣಿಸುವಂತಹ ತಪ್ಪುಗಳಿರುವ ‘ಕನ್ನಡ ವ್ಯಾಕರಣ’ ಕನ್ನಡದ್ದಾಗುವುದು ಹೇಗೆ?

ಕಂಪ್ಯೂಟರ್‌ಗಳನ್ನು ಬಳಸಿ ಒಂದು ನುಡಿಯ ಸೊಲ್ಲುಗಳನ್ನು ಇನ್ನೊಂದು ನುಡಿಗೆ ಅನುವಾದಿಸಲು ಬರುತ್ತದೆ; ಆದರೆ, ಹೀಗೆ ಮಾಡಬೇಕಿದ್ದಲ್ಲಿ, ಆ ಎರಡು ನುಡಿಗಳ ವಿವರವಾದ ಸೊಲ್ಲರಿಮೆಗಳನ್ನು ಕಂಪ್ಯೂಟರ್‌ಗಳಿಗೆ ಒದಗಿಸಿಕೊಡಬೇಕಾಗುತ್ತದೆ. ಇಂಗ್ಲಿಶ್ ನುಡಿಗೆ ಈಗಾಗಲೇ ಸಾಕಶ್ಟು ವಿವರವಾದ ವ್ಯಾಕರಣವನ್ನು ಬರೆಯಲಾಗಿದ್ದು, ಅದನ್ನು ಕಂಪ್ಯೂಟರ್‌ಗಳಿಗೆ ಒದಗಿಸಿಕೊಡಲಾಗಿದೆ; ಕನ್ನಡಕ್ಕೂ ಇಂತಹದೊಂದು ವಿವರವಾದ ಸೊಲ್ಲರಿಮೆಯನ್ನು ಬರೆದಲ್ಲಿ, ಇಂಗ್ಲಿಶ್ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವಲ್ಲಿಯೂ ಕಂಪ್ಯೂಟರನ್ನು ಬಳಸಲು ಸಾದ್ಯವಾಗಬಹುದು.

ಆದರೆ, ಇಂತಹ ಕೆಲಸಕ್ಕೆ ಸಂಸ್ಕ್ರುತ ವ್ಯಾಕರಣವನ್ನೇ ‘ಕನ್ನಡ ವ್ಯಾಕರಣ’ವೆಂದು ಬ್ರಮಿಸುವ ಕೇಶಿರಾಜನ ಕನ್ನಡ ವ್ಯಾಕರಣವಾಗಲಿ, ಇವತ್ತು ಶಾಲೆಗಳಲ್ಲಿ ಕಲಿಸುವ ‘ಕನ್ನಡ ವ್ಯಾಕರಣ’ವಾಗಲಿ ಯಾವ ನೆರವನ್ನೂ ನೀಡಲಾರದು. ಕನ್ನಡದಲ್ಲಿ ಸೊಲ್ಲುಗಳನ್ನು ಹೇಗೆ ಉಂಟುಮಾಡಲಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಬಲ್ಲ ‘ಕನ್ನಡದ ಸೊಲ್ಲರಿಮೆ’ಯೊಂದೇ ಈ ಕೆಲಸದಲ್ಲಿ ನೆರವನ್ನು ನೀಡಬಲ್ಲುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಅರಿಮೆಯ ಪದಗಳಿಗೆ ಕನ್ನಡವೇ ಮೇಲು

ನುಡಿಯರಿಮೆಯ ಇಣುಕುನೋಟ – 11

ಕನ್ನಡದಲ್ಲಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡಬೇಕಾದಾಗಲೆಲ್ಲ ಹೆಚ್ಚಿನ ಅರಿವಿಗರೂ ಸಂಸ್ಕ್ರುತ ಪದಗಳನ್ನೇ ಆರಿಸಿಕೊಳ್ಳುತ್ತಾರೆ; ಇದಕ್ಕಾಗಿ ಕನ್ನಡದವೇ ಆದ ಪದಗಳನ್ನು ಬಳಸುವುದು ತುಂಬಾ ಅಪರೂಪ.

ಈ ಕಾರಣಕ್ಕಾಗಿ, ಕನ್ನಡದವೆಂದು ಹೇಳಲಾಗುವ ಹೆಚ್ಚಿನ ಅರಿಮೆಯ ಪದಕೋಶಗಳಲ್ಲೂ ಇವತ್ತು ನೂರಕ್ಕೆ ಎಂಬತ್ತರಶ್ಟು ಇಲ್ಲವೇ ಅದಕ್ಕಿಂತಲೂ ಹೆಚ್ಚು ಸಂಸ್ಕ್ರುತ ಪದಗಳನ್ನು ಕಾಣಬಹುದು. ಕನ್ನಡ ಅರಿವಿಗರ ಈ ನಿಲುವಿನಿಂದಾಗಿ, ಇವತ್ತು ಕನ್ನಡದ ಅರಿಮೆಯ ಬರಹಗಳು ಸಂಸ್ಕ್ರುತ ಪದಗಳಿಂದ ತುಂಬಿ ತುಳುಕುತ್ತಿವೆ.

ಹಿಂದಿನ ಕಾಲದಲ್ಲಿ ಕನ್ನಡದಲ್ಲಿ ಬರೆಯುವವರಿಗೆ ಬೇಕಾಗಿರುವ ಹೆಚ್ಚಿನ ತಿಳಿವುಗಳೂ ಸಂಸ್ಕ್ರುತದಲ್ಲಿದ್ದುವು; ಹಾಗಾಗಿ, ಅವನ್ನು ಕನ್ನಡಕ್ಕೆ ತರಬೇಕಾದಾಗ, ಅದಕ್ಕೆ ಬೇಕಾಗುವ ಅರಿಮೆಯ ಪದಗಳಲ್ಲಿ ಹೆಚ್ಚಿನವನ್ನೂ ಸಂಸ್ಕ್ರುತದಿಂದಲೇನೇ ಎರವಲು ಪಡೆಯಲಾಗುತ್ತಿತ್ತು, ಮತ್ತು ಆವತ್ತಿಗೆ ಅದು ಸರಿಯಾದ ದಾರಿಯಾಗಿತ್ತು.

ಆದರೆ, ಇವತ್ತು ಅರಿಮೆಯ (ವಿಜ್ನಾನದ) ಬರಹಗಾರರಿಗೆ ಬೇಕಾಗುವ ಹೆಚ್ಚಿನ ತಿಳಿವುಗಳೂ ಇಂಗ್ಲಿಶ್‌ನಲ್ಲಿವೆ; ಹಾಗಾಗಿ, ಅವನ್ನು ಇಂಗ್ಲಿಶ್‌ನಿಂದ ಕನ್ನಡಕ್ಕೆ ತರಬೇಕಾದಾಗ, ಅದಕ್ಕೆ ಬೇಕಾಗುವ ಪದಗಳನ್ನು ಇಂಗ್ಲಿಶ್‌ನಿಂದ ಎರವಲು ಪಡೆಯುವುದು, ಇಲ್ಲವೇ ಕನ್ನಡದಲ್ಲೇನೇ ಹೊಸದಾಗಿ ಉಂಟುಮಾಡಿಕೊಳ್ಳುವುದು ಎಂಬ ಎರಡು ದಾರಿಗಳು ಇವತ್ತಿನ ಮಟ್ಟಿಗೆ ಸರಿಯಾದುವು.

ಹೀಗಿದ್ದರೂ, ಕನ್ನಡದ ಬರಹಗಾರರು ಇವತ್ತಿಗೂ ಅರಿಮೆಯ ಪದಗಳಾಗಿ ಸಂಸ್ಕ್ರುತ ಪದಗಳನ್ನು ಬಳಸುವ ಹಳೆಯ ಸಂಪ್ರದಾಯವನ್ನೇ ಮುಂದುವರಿಸುತ್ತಿದ್ದಾರೆ; ತಮಗೆ ಬೇಕಾಗಿರುವ ಪದಗಳು ಸಂಸ್ಕ್ರುತದಲ್ಲಿಲ್ಲವಾದರೆ, ಹೊಸ ಪದಗಳನ್ನು ಸಂಸ್ಕ್ರುತದಲ್ಲೇನೇ ಉಂಟುಮಾಡಿ ಕನ್ನಡಕ್ಕೆ ತರುವಂತಹ ಇನ್ನೊಂದು ವಿಚಿತ್ರವಾದ ಸಂಪ್ರದಾಯವನ್ನೂ ಅವರು ಹುಟ್ಟುಹಾಕಿಕೊಂಡಿದ್ದಾರೆ.

ಹೀಗೆ ಮಾಡುತ್ತಿರುವುದಕ್ಕಾಗಿ, ಅವರು ಕೆಲವು ನೆವಗಳನ್ನೂ ಕೊಡುತ್ತಿದ್ದಾರೆ: ಇಂಗ್ಲಿಶ್‌ನಲ್ಲಿ ಅರಿಮೆಯ ಪದಗಳಾಗಿ ಲ್ಯಾಟಿನ್ ಇಲ್ಲವೇ ಗ್ರೀಕ್ ಪದಗಳನ್ನು ಬಳಸುವ ಹಾಗೆ ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸಲಾಗುತ್ತದೆಯೆಂಬುದು ಇವುಗಳಲ್ಲೊಂದು.

ಆದರೆ, ಇಂಗ್ಲಿಶ್‌ಗೆ ಲ್ಯಾಟಿನ್ ಇರುವ ಹಾಗೆ ಕನ್ನಡಕ್ಕೆ ಸಂಸ್ಕ್ರುತ ಅಲ್ಲ; ಯಾಕೆಂದರೆ, ಇಂಗ್ಲಿಶ್ ಮತ್ತು ಲ್ಯಾಟಿನ್‌ಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆ, ಮತ್ತು ಕನ್ನಡ ಮತ್ತು ಸಂಸ್ಕ್ರುತಗಳು ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರಿವೆ. ಇಂಗ್ಲಿಶ್‌ಗೆ ಬೇಕಾಗುವ ಪದಗಳನ್ನು ಲ್ಯಾಟಿನ್‌ನಲ್ಲಿ ಉಂಟುಮಾಡಿದಾಗ ಹೆಚ್ಚಿನ ತೊಂದರೆಗಳೇನೂ ಎದುರಾಗುವುದಿಲ್ಲ; ಆದರೆ, ಕನ್ನಡಕ್ಕೆ ಬೇಕಾಗುವ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಿದಾಗ ಹಲವು ತೊಂದರೆಗಳು ಎದುರಾಗುತ್ತವೆ:

ಇಂಗ್ಲಿಶ್‌ನಲ್ಲಿ ಮುಕ್ಯವಾಗಿ ನವ್ನ್, ವರ‍್ಬ್, ಮತ್ತು ಎಜಕ್ಟಿವ್ ಎಂಬುದಾಗಿ ಮೂರು ಬಗೆಯ ಪದಗಳಿವೆ; ಕನ್ನಡದಲ್ಲೂ ಇಂತಹವೇ ಮೂರು ಬಗೆಯ ಪದಗಳಿವೆ. ಆದರೆ, ಸಂಸ್ಕ್ರುತದಲ್ಲಿ ಮುಕ್ಯವಾಗಿ ನಾಮಪದ ಮತ್ತು ಕ್ರಿಯಾಪದ ಎಂಬ ಎರಡು ಬಗೆಯ ಪದಗಳು ಮಾತ್ರ ಇವೆ.

ಹಾಗಾಗಿ, ಇಂಗ್ಲಿಶ್‌ನ ಅರಿಮೆಯ ಪದಗಳಿಗೆ ಸಮನಾದ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಿ ಕನ್ನಡಕ್ಕೆ ತರಹೋದರೆ, ನವ್ನ್ ಮತ್ತು ಎಜಕ್ಟಿವ್‌ಗಳ ನಡುವಿನ ವ್ಯತ್ಯಾಸವನ್ನು ಅವುಗಳಲ್ಲಿ ಸರಿಯಾಗಿ ತೋರಿಸಲು ಬರುವುದಿಲ್ಲ. ಈ ತೊಂದರೆಯಿಂದಾಗಿ, ಇವತ್ತು ಬಳಕೆಯಲ್ಲಿರುವ ಅರಿಮೆಯ ಪದಕೋಶಗಳಲ್ಲಿ ತುಂಬಾ ಗೊಂದಲವುಂಟಾಗಿರುವುದನ್ನು ಕಾಣಬಹುದು.

ಅರಿಮೆಯ ಬರಹಗಳಲ್ಲಿ ಕನ್ನಡ ಪದಗಳನ್ನು ಬಳಸಿದರೆ, ಅವು ಸಂಸ್ಕ್ರುತ ಪದಗಳ ಹಾಗೆ ಕಚಿತವಾದ ಹುರುಳನ್ನು ಕೊಡಲಾರವು ಎಂಬುದು ಇನ್ನೊಂದು ನೆವ; ಆದರೆ, ಸಂಸ್ಕ್ರುತ ಪದಗಳು ಕನ್ನಡದಲ್ಲಿ ಉಂಟುಮಾಡುತ್ತಿರುವ ಮೇಲಿನ ಗೊಂದಲವೇ ಇದನ್ನು ತಳ್ಳಿಹಾಕುತ್ತದೆ.

ಇವತ್ತು ಇಂಗ್ಲಿಶ್‌ನಲ್ಲಿ ಕಂಪ್ಯೂಟರ್‌ಗೆ ಸಂಬಂದಿಸಿದ ಹಲವು ಅರಿಮೆಯ ಪದಗಳನ್ನು ದಿನಬಳಕೆಯ ಪದಗಳನ್ನು ಬಳಸಿಯೇ ಉಂಟುಮಾಡಲಾಗುತ್ತಿದೆ; ಮವ್ಸ್ ‘ಇಲಿ’, ವಿಂಡೋಸ್ ‘ಕಿಟಿಕಿ’, ಟ್ರೀ ‘ಮರ’, ವೆಬ್ ‘ಬಲೆ’ ಎಂಬಂತಹ ಈ ಪದಗಳಿಂದಾಗಿ ಗೊಂದಲವೇನೂ ಉಂಟಾದ ಹಾಗೆ ಕಾಣಿಸುವುದಿಲ್ಲ.

ಹಾಗಾಗಿ, ಕನ್ನಡದ ಅರಿಮೆಯ ಪದಗಳಿಗಾಗಿ ಸಂಸ್ಕ್ರುತದ ಮೊರೆಹೊಗುವ ಇವತ್ತಿನ ಸಂಪ್ರದಾಯವನ್ನು ಬಿಟ್ಟುಕೊಡುವುದೇ ಒಳ್ಳೆಯದು. ಇಂಗ್ಲಿಶ್‌ನಿಂದ ಅರಿಮೆಯ ಬರಹಗಳನ್ನು ಕನ್ನಡಕ್ಕೆ ತರುವಾಗ, ಕನ್ನಡ ಪದಗಳ ಸೊಗಡನ್ನು ಕೆಡಿಸದಂತಹ ಇಂಗ್ಲಿಶ್ ಪದಗಳನ್ನು ಉಳಿಸಿಕೊಳ್ಳಬಹುದು, ಮತ್ತು ಅದನ್ನು ಕೆಡಿಸುವಂತಹ ಪದಗಳ ಬದಲು ಕನ್ನಡದವೇ ಆದ ಪದಗಳನ್ನು ಬಳಸಿ ಹೊಸ ಪದಗಳನ್ನು ಉಂಟುಮಾಡಿಕೊಳ್ಳಬಹುದು; ಇದೇ ಕನ್ನಡಕ್ಕೆ ಸರಿಯಾದ ದಾರಿ.

ಇಲ್ಲಿ ಇನ್ನೊಂದು ವಿಶಯವನ್ನೂ ಒತ್ತಿ ಹೇಳಬೇಕಾಗಿದೆ: ಇಂಗ್ಲಿಶ್‌ನಿಂದ ಅರಿಮೆಯ ಬರಹಗಳನ್ನು ಕನ್ನಡಕ್ಕೆ ತರುವಾಗ, ಎರಡು ಮುಕ್ಯ ಗುರಿಗಳಿಗಾಗಿ ನಾವು ಅವುಗಳಲ್ಲಿರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಬಳಸಲು ಹೋಗುತ್ತೇವೆ: ಹಾಗೆ ಮಾಡುವ ಮೂಲಕ ಬರಹ ಏನನ್ನು ತಿಳಿಸುತ್ತದೆ ಎಂಬುದು ಕನ್ನಡಿಗರಿಗೆ ಸುಲಬವಾಗಿ ತಿಳಿಯುವಂತಾಗಬೇಕು ಎಂಬುದೊಂದು, ಮತ್ತು ಕನ್ನಡದ ಸೊಗಡು ಕೆಡದಂತೆ ಉಳಿಯಬೇಕು ಎಂಬುದಿನ್ನೊಂದು.

ಇತ್ತೀಚೆಗೆ ಕಂಪ್ಯೂಟರ್‌ಗಳಿಗೆ ಸಂಬಂದಿಸಿದ ಕೆಲವು ಕಯ್ಪಿಡಿಗಳಲ್ಲಿ ಹೆಚ್ಚಿನ ಇಂಗ್ಲಿಶ್ ಪದಗಳನ್ನೂ ಹಾಗೆಯೇ ಉಳಿಸಿರುವುದನ್ನು ಕಾಣಬಹುದು. ಇಂಗ್ಲಿಶ್ ಪದಗಳ ಹುರುಳು ಗೊತ್ತಿರುವವರು ಮಾತ್ರ ಅವನ್ನು ಓದಿ ತಿಳಿದುಕೊಳ್ಳಬಲ್ಲರು, ಮತ್ತು ಅವುಗಳಲ್ಲಿ ಕನ್ನಡದ ಸೊಗಡು ಪೂರ‍್ತಿ ಕೆಟ್ಟುಹೋಗಿರುತ್ತದೆ; ಎಂದರೆ, ಮೇಲಿನ ಎರಡು ಗುರಿಗಳನ್ನೂ ಅವು ತಲಪುವುದೇ ಇಲ್ಲ.

ಇಂತಹ ಕಯ್ಪಿಡಿಗಳಲ್ಲಿ ಬರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು ಬಳಸಿದರೂ ಪರಿಣಾಮ ಒಂದೇ: ಅವನ್ನು ಓದಿ ತಿಳಿಯಲು ಇಂಗ್ಲಿಶ್ ಪದಗಳ ಬದಲು ಸಂಸ್ಕ್ರುತ ಪದಗಳ ಹುರುಳು ಗೊತ್ತಿರಬೇಕು, ಮತ್ತು ಅವು ಕನ್ನಡದ ಸೊಗಡನ್ನು ಕೆಡಿಸದಿರುವುದಿಲ್ಲ. ಎಂದರೆ, ಇಂತಹ ಬರಹಗಳೂ ಮೇಲಿನ ಎರಡು ಗುರಿಗಳನ್ನು ತಲಪುವುದೇ ಇಲ್ಲ.

ಹಲವು ಹೆಚ್ಚಿನ ಸಂಸ್ಕ್ರುತ ಪದಗಳ ಹುರುಳುಗಳನ್ನು ಕಲಿಯುವುದಕ್ಕಿಂತಲೂ ಮೂಲ ಬರಹದಲ್ಲಿದ್ದ ಇಂಗ್ಲಿಶ್ ಪದಗಳ ಹುರುಳುಗಳನ್ನು ಕಲಿಯುವುದೇ ಕನ್ನಡಿಗರ ಮಟ್ಟಿಗೆ ಒಳ್ಳೆಯದಲ್ಲವೇ? ಯಾಕೆಂದರೆ, ಮುಂದೆ ಹೆಚ್ಚಿನ ತಿಳಿವನ್ನು ಪಡೆಯಬೇಕೆಂದಿರುವವರಿಗೆ ಇಂಗ್ಲಿಶ್ ಪದಗಳ ತಿಳಿವು ನೆರವಾಗಬಲ್ಲುದು; ಆದರೆ, ಸಂಸ್ಕ್ರುತ ಪದಗಳ ತಿಳಿವು ಯಾವ ನೆರವನ್ನೂ ನೀಡಲಾರವು.

ಅರಿಮೆಯ ಬರಹಗಳಿಂದ ತಿಳಿವನ್ನು ಪಡೆಯುವುದು ಮಾತ್ರವಲ್ಲದೆ, ಅದನ್ನು ಒರೆಗೆ ಹಚ್ಚುವ ಮತ್ತು ಅವುಗಳಲ್ಲಿಲ್ಲದ ಹೊಸ ತಿಳಿವನ್ನು ಕಂಡುಹಿಡಿಯುವ ಕೆಲಸವನ್ನೂ ನಾವಿಂದು ನಡೆಸಬೇಕಾಗಿದೆ. ಹೆಚ್ಚು ಹೆಚ್ಚು ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಬಳಸಿರುವ ಬರಹಗಳನ್ನು ಕಶ್ಟಪಟ್ಟು ಅರಿಯುವುದರಲ್ಲಿಯೇ ನಮ್ಮ ಸಮಯವೆಲ್ಲ ಕಳೆದುಹೋಗುತ್ತದೆ. ಅವನ್ನು ಒರೆಗೆ ಹಚ್ಚುವ ಮತ್ತು ಹೊಸ ತಿಳಿವನ್ನು ಕಂಡುಹಿಡಿಯುವ ಕೆಲಸದಲ್ಲೂ ನಮ್ಮ ಕಲಿವಿಗರು ತೊಡಗಬೇಕಿದ್ದಲ್ಲಿ, ಅರಿಮೆಯ ಪದಗಳಲ್ಲಿ ಹೆಚ್ಚಿನವೂ ಕನ್ನಡದವೇ ಆಗಿರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಓದುವ ಹಾಗೆಯೇ ಬರೆಯುವುದು

ನುಡಿಯರಿಮೆಯ ಇಣುಕುನೋಟ – 10

ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡ ಬರಹಗಳಲ್ಲಿ ಓದುವ ಹಾಗೆಯೇ ಬರೆಯಬೇಕು ಎಂದು ಹೇಳಿದರೆ, ಎಲ್ಲರೂ ಅವರವರು ಹೇಗೆ ಓದುತ್ತಾರೋ ಹಾಗೆ ಬರೆಯಬಹುದು, ಇಲ್ಲವೇ ಎಲ್ಲರೂ ತಮಗೆ ಕುಶಿಬಂದ ಹಾಗೆ ಬರೆಯಬಹುದು ಎಂದು ಹೇಳಿದ ಹಾಗಾಗುವುದಿಲ್ಲ; ಅಂತಹ ಪ್ರತಿಕ್ರಿಯೆ ಬಾರದಂತೆ ನಾನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೋ ಹಾಗೆ ಬರೆಯಬೇಕು ಎಂಬುದಾಗಿ ಬರೆದಿದ್ದೆ. ಈ ಪದಗಳನ್ನು ಇವತ್ತು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಿದ್ದಾರೆ ಎಂಬುದನ್ನು ತಿಳಿವಿಗರು ಕಂಡುಹಿಡಿಯಬೇಕು, ಮತ್ತು ಅದಕ್ಕೆ ಅನುಸಾರವಾಗಿ, ಅವನ್ನು ಹೇಗೆ ಬರೆಯಬೇಕು ಎಂಬುದನ್ನು ತೀರ‍್ಮಾನಿಸಬೇಕು.

ಬರಹದ ಮೂಲಕ ನಾವು ನಮ್ಮ ಅನಿಸಿಕೆಗಳನ್ನು ಇನ್ನೊಬ್ಬರಿಗೆ ತಿಳಿಸುತ್ತೇವೆ, ಮತ್ತು ಬರಹ ರೂಪದಲ್ಲಿರುವ ಇನ್ನೊಬ್ಬರ ಅನಿಸಿಕೆಗಳನ್ನು ಓದಿನ ಮೂಲಕ ತಿಳಿದುಕೊಳ್ಳುತ್ತೇವೆ. ಈ ಎರಡು ಕೆಲಸಗಳೂ ಸರಿಯಾಗಿ ನಡೆಯಬೇಕಿದ್ದಲ್ಲಿ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವ ಮತ್ತು ಓದುವ ಕೆಲಸಗಳನ್ನು ನಡೆಸಬೇಕಾಗುತ್ತದೆ. ಈ ಕೆಲಸಗಳನ್ನು ಇವತ್ತು ಶಾಲೆಗಳಲ್ಲಿ ಕಲಿಸಲಾಗುತ್ತದೆಯಾದ ಕಾರಣ, ಎಲ್ಲರೂ ಹೆಚ್ಚುಕಡಿಮೆ ಒಂದೇ ಬಗೆಯಲ್ಲಿ ಬರೆಯುವಂತೆ ಮತ್ತು ಓದುವಂತೆ ಮಾಡುವುದು ತೊಡಕಿನ ಕೆಲಸವೇನಲ್ಲ.

ಶಕಾರವನ್ನು ಹೆಚ್ಚಿನ ಕನ್ನಡಿಗರೂ ಶಕಾರವಾಗಿಯೇ ಓದುತ್ತಾರಲ್ಲದೆ ಸಕಾರವಾಗಿ ಬದಲಾಯಿಸಿ ಓದುವುದಿಲ್ಲ. ಆದರೆ, ಷಕಾರವನ್ನು ಹೆಚ್ಚಿನವರೂ ಶಕಾರವಾಗಿ ಬದಲಾಯಿಸಿ ಓದುತ್ತಾರೆ. ಹಾಗಾಗಿ, ಸಂಸ್ಕ್ರುತ ಎರವಲುಗಳಲ್ಲಿ ಬರುವ ಷಕಾರವನ್ನು ಶಕಾರವಾಗಿ ಬದಲಾಯಿಸಿ ಬರೆಯಬೇಕು, ಮತ್ತು ಶಕಾರವನ್ನು ಹಾಗೆಯೇ ಉಳಿಸಬೇಕು ಎಂಬ ತೀರ‍್ಮಾನಕ್ಕೆ ಬರಬೇಕಾಗುತ್ತದೆ.

ಇದೇ ರೀತಿಯಲ್ಲಿ, ಋಕಾರ, ಮಹಾಪ್ರಾಣ, ವಿಸರ‍್ಗ ಮೊದಲಾದ ಬೇರೆ ಕೆಲವು ಬರಿಗೆಗಳ ವಿಶಯದಲ್ಲೂ ಹೆಚ್ಚಿನ ಕನ್ನಡಿಗರ ಓದು ಹೇಗಿದೆಯೆಂಬುದನ್ನು ಕಂಡುಹಿಡಿದು, ಅದಕ್ಕನುಸಾರವಾಗಿ ಬರವಣಿಗೆಯನ್ನು ಬದಲಾಯಿಸಬೇಕು. ಹೀಗೆ ಮಾಡಿದಲ್ಲಿ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಬವಾಗಬಲ್ಲುದು, ಮತ್ತು ಎಲ್ಲಾ ಕನ್ನಡಿಗರೂ ಬರಹಬಲ್ಲವರಾಗುವಂತೆ ಮಾಡುವ ಕೆಲಸವೂ ಸುಲಬವಾಗಬಲ್ಲುದು.

ಹಳೆಗನ್ನಡದ ಱಕಾರ ಮತ್ತು ೞಕಾರಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೆ ಎಂಬುದನ್ನು ಗಮನಿಸಿ, ಹೊಸಗನ್ನಡವನ್ನು ಬರಹದಲ್ಲಿ ಬಳಸಲು ತೊಡಗಿದ ಕಾಲದಲ್ಲಿ ಅವನ್ನು ರಕಾರ ಮತ್ತು ಳಕಾರಗಳಾಗಿ ಬದಲಾಯಿಸಿ ಬರೆಯಲು ತೊಡಗಲಾಯಿತು. ಈ ಮಾರ‍್ಪಾಡನ್ನು ಮಾಡಿರದಿದ್ದರೆ, ಇವತ್ತು ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಇನ್ನಶ್ಟು ತೊಡಕಿನದಾಗುತ್ತಿತ್ತು. ಸಂಸ್ಕ್ರುತ ಎರವಲುಗಳಲ್ಲಿ ಬರುವ ಬರಿಗೆಗಳನ್ನು ಓದುವ ಹಾಗೆ ಬರೆಯುವಂತೆ ಮಾರ‍್ಪಡಿಸುವುದೂ ಇಂತಹದೇ ಒಂದು ಕೆಲಸ ಎಂಬುದನ್ನು ಇಲ್ಲಿ ಗಮನಿಸಬೇಕು.

ಇಶ್ಟರ ವರೆಗೆ ಈ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯುತ್ತಿದ್ದುದಕ್ಕೆ ಎರಡು ಮುಕ್ಯ ಕಾರಣಗಳಿದ್ದುವು: ಹಿಂದಿನ ಕಾಲದಲ್ಲಿ ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದವರೆಲ್ಲ ಅದನ್ನು ಸಂಸ್ಕ್ರುತದಲ್ಲಿ ಬರೆದಿರಿಸುತ್ತಿದ್ದರು; ಹಾಗಾಗಿ, ಯಾವುದೇ ಒಂದು ವಿಶಯದಲ್ಲಿ ಹೊಸ ತಿಳಿವನ್ನು ಪಡೆಯಬೇಕಿದ್ದರೂ ಸಂಸ್ಕ್ರುತದ ಮೊರೆಹೊಗಬೇಕಾಗಿತ್ತು.

ಇದರಿಂದಾಗಿ ಸಂಸ್ಕ್ರುತ ಬರಹಕ್ಕೆ ಒಂದು ಬಗೆಯ ಮೇಲ್ಮೆ ಬಂದಿತ್ತು; ಅದರ ಪದಗಳನ್ನು ಕನ್ನಡದಲ್ಲಿಯೂ ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿಸಿಕೊಳ್ಳುವುದರಿಂದ, ಮುಂದೆ ಸಂಸ್ಕ್ರುತ ಬರಹಗಳನ್ನು ಓದಲು ಕಲಿಯುವ ಕೆಲಸ ಕನ್ನಡಿಗರಿಗೆ ಸುಲಬವಾಗಬಹುದಾಗಿತ್ತು. ಕನ್ನಡ ಓದಿನ ಕಲಿಕೆ ಮುಂದೆ ನಡೆಸಲೇಬೇಕಾಗಿದ್ದ ಸಂಸ್ಕ್ರುತ ಓದಿಗೆ ಒಂದು ಮೆಟ್ಟಲಾಗಬಹುದಾಗಿತ್ತು. ಇದು ಒಂದು ಕಾರಣ.

ಆದರೆ, ಇವತ್ತು ಹೊಸ ಹೊಸ ತಿಳಿವುಗಳನ್ನು ಕಂಡುಹಿಡಿದಿರುವವರು ಯಾರೂ ಅದನ್ನು ಸಂಸ್ಕ್ರುತದಲ್ಲಿ ಬರೆಯಲು ಹೋಗುವುದಿಲ್ಲ; ಹಾಗಾಗಿ, ಹಿಂದಿನ ಕಾಲದಲ್ಲಿ ಅದಕ್ಕಿದ್ದ ಮೇಲ್ಮೆ ಇಂದು ಉಳಿದಿಲ್ಲ, ಮತ್ತು ಅದರ ಪದಗಳನ್ನು ಅದರ ಬರಹಗಳಲ್ಲಿರುವ ಹಾಗೆ ಬರೆಯಲು ಕಲಿಯುವ ಅವಶ್ಯಕತೆಯೂ ಇವತ್ತು ಕನ್ನಡಿಗರಿಗಿಲ್ಲ.

ಹಿಂದಿನ ಕಾಲದಲ್ಲಿ ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸವನ್ನು ಮುಕ್ಯವಾಗಿ ಉತ್ತರದಿಂದ ವಲಸೆಬಂದ ಮೇಲ್ವರ‍್ಗದ ಜನರು ನಡೆಸುತ್ತಿದ್ದರು; ಆರ‍್ಯರಾಗಿದ್ದ ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಆದರ ಮತ್ತು ಪೂಜ್ಯಬಾವಗಳಿದ್ದುವು. ಹಾಗಾಗಿ, ಅದರ ಪದಗಳನ್ನು ಮಾರ‍್ಪಡಿಸದೆ ಉಳಿಸುವುದು ಅವರ ಮಟ್ಟಿಗೆ ಅವಶ್ಯವಾಗಿತ್ತು. ಇದು ಇನ್ನೊಂದು ಕಾರಣ.

ಆದರೆ, ಇವತ್ತು ಎಲ್ಲಾ ವರ‍್ಗಗಳಿಗೆ ಸೇರಿದ ಕನ್ನಡಿಗರೂ ಕನ್ನಡ ಬರಹವನ್ನು ಬಳಸಲು ಕಲಿಯಬೇಕಾಗಿದೆ. ಇವರಲ್ಲಿ ಹೆಚ್ಚಿನವರೂ ದ್ರಾವಿಡ ಮೂಲದವರಾಗಿದ್ದು, ಅವರ ಮಟ್ಟಿಗೆ ಸಂಸ್ಕ್ರುತ ಪದಗಳನ್ನು ಮಾರ‍್ಪಡಿಸದೆ ಉಳಿಸಿಕೊಳ್ಳುವುದು ಅಂತಹ ಒಂದು ಪೂಜ್ಯವಾದ ವಿಶಯವೇ ಅಲ್ಲ; ಅದರಿಂದ ಅವರಿಗೆ ಬೇರೆ ಪ್ರಯೋಜನಗಳೂ ದೊರಕುವುದಿಲ್ಲ. ಹಾಗಾಗಿ, ಸಂಸ್ಕ್ರುತ ಎರವಲುಗಳನ್ನು ಕನ್ನಡದ ಸೊಗಡನ್ನು ಕೆಡಿಸದಂತೆ ಮಾರ‍್ಪಡಿಸುವುದಕ್ಕೆ ಹೆಚ್ಚಿನ ಕನ್ನಡಿಗರಿಂದಲೂ ವಿರೋದ ಬರಲಾರದು.

ಬೇರೆ ನುಡಿಗಳಿಂದ ಎರವಲಾಗಿ ಪಡೆದ ಪದಗಳನ್ನು ಯಾವ ನುಡಿಯಲ್ಲೂ ಆ ನುಡಿಯಲ್ಲಿರುವ ಹಾಗೆ ಬರೆಯಲು ಹೋಗುವುದಿಲ್ಲ; ಇದಕ್ಕೆ ಕೆಲವೇ ಕೆಲವು ಹೊರಪಡಿಕೆಗಳು ಮಾತ್ರ ಇವೆ. ಎತ್ತುಗೆಗಾಗಿ, ಸಂಸ್ಕ್ರುತ ಇಲ್ಲವೇ ಪ್ರಾಕ್ರುತ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಬ್ರಾಹ್ಮೀ ಲಿಪಿಯನ್ನು ಕನ್ನಡದಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಸಂಸ್ಕ್ರುತದ ಎರವಲುಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಸಂಸ್ಕ್ರುತ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಇದೇ ರೀತಿಯಲ್ಲಿ, ಅರೇಬಿಕ್ ಬರವಣಿಗೆಗಳಿಗೆ ಬಳಕೆಯಾಗುತ್ತಿದ್ದ ಲಿಪಿಯನ್ನು ಟರ‍್ಕಿಶ್‌ನಂತಹ ಕೆಲವು ನುಡಿಗಳಿಗೆ ಅಳವಡಿಸುವಾಗ, ಅರೇಬಿಕ್ ಎರವಲುಗಳನ್ನು ಬರೆಯಲು ಬೇಕಾಗುವ ಕೆಲವು ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಾಯಿತು, ಮತ್ತು ಈ ಕಾರಣಕ್ಕಾಗಿ, ಈ ನುಡಿಗಳ ಬರಹಗಳಲ್ಲಿ ಅರೇಬಿಕ್ ಎರವಲುಗಳನ್ನು ಆ ನುಡಿಯಲ್ಲಿರುವ ಹಾಗೆಯೇ ಬರೆಯುವ ಹೊಲಬು ಬಳಕೆಗೆ ಬಂತು.

ಆದರೆ, ಎಲ್ಲಾ ನುಡಿಗಳೂ ಈ ರೀತಿ ಬೇರೊಂದು ನುಡಿಯ ಲಿಪಿಯನ್ನು ತಮ್ಮ ನುಡಿಗೆ ಅಳವಡಿಸಿಕೊಳ್ಳುವಾಗ ಆ ನುಡಿಯ ಪದಗಳನ್ನು ಅದರಲ್ಲಿರುವಂತೆ ಬರೆಯಲು ಬೇಕಾಗುವ ಹೆಚ್ಚಿನ ಬರಿಗೆಗಳನ್ನು ಉಳಿಸಿಕೊಳ್ಳಲಿಲ್ಲ; ಎತ್ತುಗೆಗಾಗಿ, ನಾಗರಿ ಲಿಪಿಯನ್ನು ಪಂಜಾಬಿ ನುಡಿಗೆ ಅಳವಡಿಸುವಾಗ, ಷಕಾರ, ಋಕಾರ, ಹಲವು ಬಗೆಯ ಒತ್ತುಬರಿಗೆಗಳು ಮೊದಲಾದುವನ್ನು ಉಳಿಸಿಕೊಂಡಿಲ್ಲ; ಈ ಕಾರಣಕ್ಕಾಗಿ, ಸಂಸ್ಕ್ರುತ ಎರವಲು ಪದಗಳನ್ನು ಇವತ್ತು ಪಂಜಾಬಿ ಬರಹದಲ್ಲಿ ಓದುವ ಹಾಗೆ ಬರೆಯಲಾಗುತ್ತದೆಯಲ್ಲದೆ ಸಂಸ್ಕ್ರುತದಲ್ಲಿರುವ ಹಾಗೆ ಬರೆಯುವುದಿಲ್ಲ.

ಮಲಯಾಳ ಬರಹದಲ್ಲೂ ಮೊದಲಿಗೆ ಮಹಾಪ್ರಾಣಾಕ್ಶರಗಳು, ಗಜಡದಬ ಮೊದಲಾದ ಆ ನುಡಿಗೆ ಬೇಡದಿರುವ ಹಲವು ಬರಿಗೆಗಳು ಇರಲಿಲ್ಲ; ಸಂಸ್ಕ್ರುತ ಬರಹಗಳನ್ನು ಬರೆಯಲು, ಮತ್ತು ಕೆಲವೊಮ್ಮೆ ಸಂಸ್ಕ್ರುತ ಪದಗಳನ್ನು ಮಲಯಾಳ ಬರಹಗಳಲ್ಲಿ ಬರೆಯಲು ಆ ಸಮಯದಲ್ಲಿ ಗ್ರಂತಲಿಪಿಯೆಂಬ ಬೇರೆಯೇ ಒಂದು ಲಿಪಿಯನ್ನು ಬಳಸಲಾಗುತ್ತಿತ್ತು.

ಆದರೆ, ಹದಿನೇಳನೇ ಶತಮಾನಕ್ಕಾಗುವಾಗ, ಮಲಯಾಳ ಸಾಹಿತ್ಯದಲ್ಲಿ ಬ್ರಾಹ್ಮಣರ ಪ್ರಾಬಲ್ಯ ಹೆಚ್ಚಾಯಿತು; ಇವರಿಗೆ ಸಂಸ್ಕ್ರುತದ ಮೇಲೆ ಹೆಚ್ಚಿನ ಒಲವಿದ್ದುದರಿಂದ, ಮತ್ತು ಇವರ ಬರಹಗಳಲ್ಲಿ ತುಂಬಾ ಸಂಸ್ಕ್ರುತ ಪದಗಳು ಬಳಕೆಯಾಗುತ್ತಿದ್ದುದರಿಂದ, ಇವರು ತಮ್ಮ ಮಲಯಾಳ ಬರಹಗಳಲ್ಲೂ ಗ್ರಂತ ಲಿಪಿಯನ್ನೇ ಬಳಸಲು ತೊಡಗಿದರು. ಇದರಿಂದಾಗಿ, ಇವತ್ತಿನ ಮಲಯಾಳ ಬರಹ ಕನ್ನಡ ಬರಹದ ಹಾಗೆಯೇ ಅನವಶ್ಯಕವಾಗಿ ತೊಡಕಿನದಾಗಿದೆ.

ಎಲ್ಲಾ ಜನರೂ ಬರಹಬಲ್ಲವರಾಗಬೇಕಿರುವ ಇವತ್ತಿನ ದಿನಗಳಲ್ಲಿ ಈ ರೀತಿ ಒಂದು ನುಡಿಯ ಬರವಣಿಗೆಗೆ ಅವಶ್ಯವಿಲ್ಲದ ಬರಿಗೆಗಳನ್ನು ಎರವಲು ಪದಗಳ ಬರವಣಿಗೆಗಾಗಿ ಉಳಿಸಿಕೊಳ್ಳುವುದು ಜಾಣತನವಲ್ಲ; ಇದನ್ನು ಮನಗಂಡ ತಿಳಿವಿಗರು ಟರ‍್ಕಿ, ಇಂಡೊನೇಶಿಯಾ, ಮಲಯೇಶಿಯಾ ಮೊದಲಾದ ನಾಡುಗಳಲ್ಲಿ ಅರೇಬಿಕ್ ಮೂಲದ ಲಿಪಿಯನ್ನೇ ಬಿಟ್ಟುಕೊಟ್ಟು ರೋಮನ್ ಮೂಲದ ಲಿಪಿಯನ್ನು ತಮ್ಮ ಬರಹಕ್ಕೆ ಅಳವಡಿಸಿಕೊಂಡಿದ್ದಾರೆ.

ಕೊರಿಯಾದಂತಹ ಬೇರೆ ಕೆಲವು ನಾಡುಗಳಲ್ಲಿ ಎರವಲು ಪದಗಳನ್ನು ಓದುವ ಹಾಗೆಯೇ ಬರೆಯಲು ತೊಡಗುವ ಮೂಲಕ ಈ ತೊಡಕನ್ನು ನಿವಾರಿಸಿಕೊಳ್ಳಲಾಗಿದೆ. ಕನ್ನಡದಲ್ಲಿಯೂ ಇಂತಹದೇ ಮಾರ‍್ಪಾಡನ್ನು ನಾವು ಇವತ್ತು ನಡೆಸಬೇಕಾಗಿದೆ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ನುಡಿಯ ಕಲಿಕೆ ಮತ್ತು ಕಲಿಕೆನುಡಿ

ನುಡಿಯರಿಮೆಯ ಇಣುಕುನೋಟ – 9

ಇಂಗ್ಲಿಶ್‌ನಂತಹ ಒಂದು ನುಡಿಯನ್ನು ಮಕ್ಕಳಿಗೆ ಕಲಿಸುವುದಕ್ಕೂ ಅದನ್ನೇ ಗಣಿತ, ವಿಜ್ನಾನ, ಚರಿತ್ರೆ ಮೊದಲಾದ ವಿಶಯಗಳನ್ನು ಕಲಿಸುವಲ್ಲಿ ಕಲಿಕೆನುಡಿಯಾಗಿ ಬಳಸುವುದಕ್ಕೂ ನಡುವೆ ತುಂಬಾ ವ್ಯತ್ಯಾಸವಿದೆ. ನಿಜಕ್ಕೂ ಇವತ್ತು ಹೆಚ್ಚಿನ ಜನರಿಗೂ ಬೇಕಾಗಿರುವುದು ಇಂಗ್ಲಿಶ್ ನುಡಿಯ ಕಲಿಕೆಯಲ್ಲದೆ, ಅದನ್ನು ಕಲಿಕೆನುಡಿಯಾಗಿ ಬಳಸಬೇಕೆಂಬುದಲ್ಲ. ಆದರೆ, ಈ ವ್ಯತ್ಯಾಸವನ್ನು ತಿಳಿದುಕೊಳ್ಳಲಾರದ ಜನರು ತಮ್ಮ ಮಕ್ಕಳನ್ನು ಎಶ್ಟೇ ಕಶ್ಟವಾದರೂ ಹೆದರದೆ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ‘ಇಂಗ್ಲಿಶ್ ಶಾಲೆ’ಗಳಿಗೆ ಕಳಿಸುತ್ತಿದ್ದಾರೆ.

ಆದರೆ, ಹೀಗೆ ಮಾಡುವುದರಿಂದ ಅವರಲ್ಲಿ ಹೆಚ್ಚಿನವರ ಆಸೆಯೂ ಕಯ್ಗೂಡುವುದಿಲ್ಲ. ಮೇಲ್ವರ‍್ಗದ ಮಕ್ಕಳು ಇಂತಹ ಶಾಲೆಗಳಿಗೆ ಹೋಗಿ ದೊಡ್ಡ ದೊಡ್ಡ ಕೆಲಸಗಳನ್ನು ಹಿಡಿದು ಲಕ್ಶ ಲಕ್ಶ ಸಂಪಾದಿಸುವುದನ್ನು ನೋಡಿ, ತಮ್ಮ ಮಕ್ಕಳೂ ಹಾಗೆಯೇ ಮುಂದೆ ಬರಬೇಕೆಂದು ಅವರು ಬಯಸುವುದು ಸಹಜ. ಆದರೆ, ಇಂಗ್ಲಿಶ್ ಶಾಲೆಗಳು ಅವರ ಈ ಬಯಕೆಯನ್ನು ಪೂರಯ್ಸಲಾರವು.

ಇದಕ್ಕೆ ಹಲವು ಕಾರಣಗಳಿವೆ: ಮೊದಲನೆಯದಾಗಿ, ಇಂಗ್ಲಿಶ್ ಶಾಲೆಗಳಲ್ಲೂ ಹಲವು ಬಗೆಗಳಿವೆ; ಇಂಗ್ಲಿಶ್ ನುಡಿಯನ್ನು ಮತ್ತು ಬೇರೆ ವಿಶಯಗಳನ್ನು ತುಂಬಾ ಚನ್ನಾಗಿ ಕಲಿಸಬಲ್ಲ ಶಾಲೆಗಳು ಕೆಲವಾದರೆ, ಯಾವುದನ್ನೂ ಸರಿಯಾಗಿ ಕಲಿಸಲಾಗದ ಶಾಲೆಗಳು ಹಲವು; ಕೆಳವರ‍್ಗದ ಮಕ್ಕಳಲ್ಲಿ ಹೆಚ್ಚಿನವರೂ ಇಂತಹ ಎರಡನೇ ಬಗೆಯ ಶಾಲೆಗಳಿಗೆ ಮಾತ್ರವೇ ಹೋಗಬಲ್ಲರಾದ ಕಾರಣ, ಅವರ ಕಲಿಕೆ ಅಲ್ಲಿಯೂ ಕುಂಟುತ್ತಲೇ ನಡೆಯುತ್ತದೆ.

ತಮಗೆ ಮಾತನಾಡಲು ತಿಳಿದಿರುವ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳು ತಮಗೆ ಸ್ವಲ್ಪವೂ ತಿಳಿಯದಿರುವ ಇಂಗ್ಲಿಶ್‌ನಂತಹ ನುಡಿಯನ್ನು ಕಲಿಕೆನುಡಿಯಾಗಿ ಪಡೆದಿರುವ ಮಕ್ಕಳಿಗಿಂತ ಬೇಗನೆ ತಮ್ಮ ಕಲಿಕೆಯಲ್ಲಿ ಮುಂದೆ ಹೋಗಬಲ್ಲರೆಂಬುದನ್ನು ಎಲ್ಲಾ ಬಗೆಯ ಅರಕೆಗಳೂ ತೋರಿಸಿಕೊಟ್ಟಿವೆ; ಇಂಗ್ಲಿಶ್ ನುಡಿಯನ್ನು ಕಲಿಯುವಲ್ಲಿಯೂ ಅವರು ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳ ಮಕ್ಕಳಿಗಿಂತ ಬೇಗನೆ ಮುಂದೆ ಹೋಗಬಲ್ಲರು.

ದಕ್ಶಿಣ ಆಪ್ರಿಕಾದಲ್ಲಿ ಎಂಟನೇ ತರಗತಿಯ ವರೆಗೂ ಕಲಿಕೆನುಡಿಯಾಗಿ ತಾಯ್ನುಡಿಯನ್ನು ಬಳಸುತ್ತಿದ್ದ ಶಾಲೆಗಳಲ್ಲಿ ಮಕ್ಕಳು ಹನ್ನೆರಡನೇ ತರಗತಿಯಲ್ಲಿ ನೂರಕ್ಕೆ ೮೪ರಂತೆ ಪಾಸಾಗುತ್ತಿದ್ದರು. ತಾಯ್ತಂದೆಯವರ ಒತ್ತಾಯದ ಮೇಲೆ, ಅಯ್ದನೇ ತರಗತಿಯಿಂದಲೇ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಲು 1976ರಲ್ಲಿ ತೊಡಗಲಾಯಿತು. 1992ರಲ್ಲಿ ಈ ಮಕ್ಕಳ ಕಲಿಕೆಯನ್ನು ಪರೀಕ್ಶಿಸಿದಾಗ, ಹನ್ನೆರಡನೇ ತರಗತಿಯ ಮಕ್ಕಳು ನೂರಕ್ಕೆ 44ರಂತೆ ಪಾಸಾಗುವ ಮಟ್ಟಕ್ಕೆ ಇಳಿದಿದ್ದುದು ಕಂಡುಬಂತು. ಇಂಗ್ಲಿಶ್ ನುಡಿಯ ಕಲಿಕೆಯಲ್ಲೂ ಪಾಸಾಗುವವರ ಎಣಿಕೆ ಅಶ್ಟೇ ಕೆಳಗೆ ಇಳಿದಿತ್ತು.

ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸಿಯೂ ಮೇಲ್ವರ‍್ಗದ ಮಕ್ಕಳು ಇವತ್ತು ಮುಂದೆ ಬರುತ್ತಿರುವುದಕ್ಕೆ ಕಾರಣ ಬೇರೆಯೇ ಇದೆ. ಅವರಿಗೆ ಶಾಲೆಯ ಕಲಿಕೆ ಮಾತ್ರವಲ್ಲದೆ ಬೇರೆಯೂ ಹಲವು ಬಗೆಯ ಕಲಿಕೆಗಳು ನೆರವು ನೀಡುತ್ತಿವೆ. ಇಂತಹ ನೆರವು ಕೆಳವರ‍್ಗದ ಮಕ್ಕಳಿಗೆ ಸಿಗುವುದಿಲ್ಲ. ಮಕ್ಕಳಿಗೆ ಎಶ್ಟು ಪದಗಳ ಮೇಲೆ ಹತೋಟಿಯಿದೆ ಎಂಬುದರ ಮೇಲೆ ಅವರು ತಮ್ಮ ಕಲಿಕೆಯಲ್ಲಿ ಎಶ್ಟು ಮುಂದೆ ಹೋಗಬಲ್ಲರು ಎಂಬುದು ಅವಲಂಬಿಸಿರುತ್ತದೆ, ಮತ್ತು ಸಾಮಾನ್ಯವಾಗಿ, ಮಕ್ಕಳ ಹತೋಟಿಯಲ್ಲಿರುವ ಪದಗಳ ಎಣಿಕೆ ಅವರ ತಾಯ್ತಂದೆಯರು ಬರಹಬಲ್ಲವರೋ ಇಲ್ಲವೇ ಬರಹಬಾರದವರೋ ಎಂಬುದರ ಮೇಲೆಯೂ ಅವಲಂಬಿಸಿರುತ್ತದೆ.

ಹೆಚ್ಚು ಪದಗಳ ಮೇಲೆ ಹತೋಟಿಯಿರುವ ಮಕ್ಕಳು ಹೆಚ್ಚು ಬರಹಗಳನ್ನು ಓದಿ ತಿಳಿದುಕೊಳ್ಳಬಲ್ಲರು, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ಬಹಳ ಬೇಗನೆ ಹೆಚ್ಚುತ್ತಾ ಹೋಗುತ್ತದೆ; ಇದಕ್ಕೆ ಬದಲು, ಕಡಿಮೆ ಪದಗಳ ಮೇಲೆ ಹತೊಟಿಯಿರುವ ಮಕ್ಕಳು ಪಟ್ಯಪುಸ್ತಕಗಳನ್ನು ಬಿಟ್ಟು ಬೇರೆ ಬರಹಗಳನ್ನು ಓದಲು ಹೋಗುವುದಿಲ್ಲ, ಮತ್ತು ಇದರಿಂದಾಗಿ ಅವರ ಹತೋಟಿಯಲ್ಲಿರುವ ಪದಗಳ ಎಣಿಕೆ ತುಂಬಾ ಮೆಲ್ಲಗೆ ಹೆಚ್ಚುತ್ತಿರುತ್ತದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವ ಶಾಲೆಗಳಲ್ಲಿ ಕಲಿಯುವ ಮೇಲ್ವರ‍್ಗದವರ ಮಕ್ಕಳಿಗೆ ತಮ್ಮ ಹತೋಟಿಯಲ್ಲಿರುವ ಇಂಗ್ಲಿಶ್ ಪದಗಳನ್ನು ಹೆಚ್ಚಿಸಲು ಮನೆಯಲ್ಲಿಯೂ ನೆರವು ಸಿಗುತ್ತದೆ; ಆದರೆ, ಕೆಳವರ‍್ಗದ ಮಕ್ಕಳಿಗೆ ಇಂತಹ ಮನೆಯ ನೆರವು ಸಿಗುವುದಿಲ್ಲ. ಇದರಿಂದಾಗಿಯೂ ಅವರು ಇಂತಹ ಶಾಲೆಗಳಲ್ಲಿ ಹಿಂದೆ ಬೀಳುತ್ತಾರೆ.

ಇನ್ನೊಂದು ವಿಶಯವೇನೆಂದರೆ, ಎರಡು ಇಲ್ಲವೇ ಮೂರನೇ ತರಗತಿಯ ವರೆಗೆ ಮಕ್ಕಳು ಕಲಿಯುವುದು ಓದುವುದು ಮತ್ತು ಬರೆಯುವುದು ಹೇಗೆ ಎಂಬುದನ್ನು. ತಮಗೆ ತಿಳಿಯದಿರುವ ಇಂಗ್ಲಿಶ್ ನುಡಿಯಲ್ಲಿ ಇದನ್ನು ನಡೆಸುವುದು ಅವರಿಗೆ ಅಶ್ಟೊಂದು ತೊಡಕಿನದಾಗಿರುವುದಿಲ್ಲ. ಆದರೆ, ಮೂರು ಇಲ್ಲವೇ ನಾಲ್ಕನೇ ತರಗತಿಯಿಂದ ಅವರು ತಮ್ಮ ಓದಿನ ಮೂಲಕ ಗಣಿತ, ವಿಜ್ನಾನ ಮೊದಲಾದ ಹಲವು ಬಗೆಯ ವಿಶಯಗಳನ್ನು ತಿಳಿದುಕೊಳ್ಳಲು ತೊಡಗಬೇಕಾಗುತ್ತದೆ; ಕಣ್ಣಿಗೆ ಕಾಣದ ಮತ್ತು ಕಿವಿಗೆ ಕೇಳಿಸದ ಪರಿಕಲ್ಪನೆಗಳನ್ನು ಅರಿತುಕೊಳ್ಳಬೇಕಾಗುತ್ತದೆ.

ಇಂತಹ ಕೆಲಸಗಳನ್ನು ನಡೆಸಲು ಇಂಗ್ಲಿಶ್ ನುಡಿಯನ್ನು ತುಂಬಾ ಚನ್ನಾಗಿ ಕಲಿಸುವ ಶಾಲೆಗಳಲ್ಲೂ ಮಕ್ಕಳಿಗೆ ಆರೇಳು ವರ‍್ಶಗಳ ಕಲಿಕೆ ಬೇಕಾಗುತ್ತದೆಯೆಂದು ಕಂಡುಹಿಡಿಯಲಾಗಿದೆ. ಇಂಗ್ಲಿಶ್ ಕಲಿಕೆನುಡಿಯಾಗಿರುವಲ್ಲಿ ಈ ಕೆಲಸಗಳನ್ನು ನಾಲ್ಕನೇ ತರಗತಿಯಿಂದಲೇ ನಡೆಸಬೇಕಾಗುತ್ತದೆಯಾದ ಕಾರಣ, ಹೆಚ್ಚಿನ ಮಕ್ಕಳೂ ಇದರಲ್ಲಿ ಸೋಲುತ್ತಾರೆ, ಮತ್ತು ಹಲವು ಮಂದಿ ಮಕ್ಕಳು ಈ ತೊಡಕನ್ನು ಎದುರಿಸಲಾಗದೆ ಶಾಲೆಯಿಂದ ಹೊರಬೀಳುತ್ತಾರೆ. ಇಲ್ಲಿಯೂ ಮೇಲ್ವರ‍್ಗದವರ ಮತ್ತು ಬಲ್ಲಿದರ ಮಕ್ಕಳಿಗಿಂತ ಕೆಳವರ‍್ಗದವರ ಮತ್ತು ಬಡವರ ಮಕ್ಕಳೇ ಹೆಚ್ಚು ಸೋಲುತ್ತಾರೆ.

ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಮಕ್ಕಳಿಗೆ ತಮ್ಮ ತಾಯ್ನುಡಿಯ ಮೇಲೆ, ಮತ್ತು ಅದನ್ನು ಬಳಸುವ ತಾಯ್ತಂದೆಯರು, ನೆಂಟರು, ನೆರೆಹೊರೆಯವರು ಮೊದಲಾದವರ ಮೇಲೆ ಕೀಳರಿಮೆ ಬೆಳೆಯುತ್ತದೆ; ತಮ್ಮ ಕಲಿಕೆ ಮುಂದುವರಿದಂತೆಲ್ಲ ಮಕ್ಕಳು ಇವರಿಂದ ದೂರವಾಗುತ್ತಾ ಹೋಗುತ್ತಾರೆ. ಈ ತೊಡಕು ಮೇಲ್ವರ‍್ಗದವರ ಮಕ್ಕಳಿಗಿಂತಲೂ ಕೆಳವರ‍್ಗದ ಮಕ್ಕಳನ್ನು ಹೆಚ್ಚು ಕಾಡುತ್ತದೆ. ಯಾಕೆಂದರೆ, ಮೇಲ್ವರ‍್ಗದ ಮಕ್ಕಳ ತಾಯ್ತಂದೆಯರು, ನೆಂಟರು ಮತ್ತು ನೆರೆಹೊರೆಯವರು ಸಾಮಾನ್ಯವಾಗಿ ಇಂಗ್ಲಿಶ್ ತಿಳಿದಿರುತ್ತಾರೆ.

ಇಂತಹ ಹಲವು ಸಮಸ್ಯೆಗಳಿರುವುದರಿಂದಾಗಿ, ಕೆಳವರ‍್ಗದ ಮಕ್ಕಳು ಮೇಲೆ ಬರಬೇಕಿದ್ದಲ್ಲಿ, ಮತ್ತು ತಮ್ಮೊಂದಿಗೆ ತಮ್ಮ ಸಮಾಜವನ್ನೂ ಮೇಲೆ ತರಬೇಕಿದ್ದಲ್ಲಿ, ಅವರಿಗೆ ಕಲಿಕೆನುಡಿಯಾಗಿ ಕನ್ನಡವನ್ನೇ ಬಳಸುತ್ತಿರಬೇಕು. ಇದರೊಂದಿಗೆ ಇಂಗ್ಲಿಶ್ ನುಡಿಯನ್ನೂ ಒಂದು ವಿಶಯವಾಗಿ ಮಾತ್ರ ಕಲಿಸುತ್ತಿರಬೇಕಲ್ಲದೆ ಕಲಿಕೆನುಡಿಯಾಗಿ ಬಳಸಲು ಹೋಗಬಾರದು.

ಇಂಗ್ಲಿಶ್ ನುಡಿಯ ಕಲಿಕೆಯಲ್ಲಿ ಅವರು ಹಿಂದೆ ಬೀಳುತ್ತಿರುವುದಕ್ಕೆ ಅವರ ಕಲಿಕೆನುಡಿಯಾಗಿ ಕನ್ನಡವನ್ನು ಬಳಸುತ್ತಿರುವುದು ಕಾರಣವಲ್ಲ; ಇಂಗ್ಲಿಶ್ ನುಡಿಯನ್ನು ಅವರಿಗೆ ಶಾಲೆಯಲ್ಲಿ ಸರಿಯಾಗಿ ಕಲಿಸದಿರುವುದೇ ಕಾರಣ. ಹಾಗಾಗಿ, ಕಲಿಕೆನುಡಿಯನ್ನು ಬದಲಾಯಿಸುವುದರಿಂದ ಅವರು ಇಂಗ್ಲಿಶ್ ಕಲಿಕೆಯಲ್ಲಿ ಮುಂದೆ ಹೋಗುವ ಬದಲು, ಬೇರೆ ವಿಶಯಗಳ ಕಲಿಕೆಯಲ್ಲೂ ಹಿಂದೆ ಬೀಳಲು ತೊಡಗುತ್ತಾರೆ.

ಇವತ್ತು ಮುಂದೆ ಬಂದಿರುವ ಎಲ್ಲಾ ನಾಡುಗಳಲ್ಲೂ ಮಕ್ಕಳ ಕಲಿಕೆನುಡಿ ಅವರ ತಾಯ್ನುಡಿಯಾಗಿದೆ; ಇಂಗ್ಲಿಶ್‌ನಂತಹ ಬೇರೊಂದು ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಯಾವ ನಾಡೂ ಇದುವರೆಗೆ ಮುಂದೆ ಬಂದಿಲ್ಲ. ಇದಕ್ಕೆ ಕಾರಣವೇನೆಂದರೆ, ತಮ್ಮ ನಾಡಿನದಲ್ಲದ ಕಲಿಕೆನುಡಿಯಲ್ಲಿ ಕಲಿತವರು ನಾಡಿನ ಸಾಮಾನ್ಯ ಜನರಿಂದ ಬೇರಾಗಿಯೇ ಉಳಿಯುತ್ತಾರೆ, ಮತ್ತು ಅವರ ಕಲಿಕೆಯಿಂದ ಸಾಮಾನ್ಯ ಜನರಿಗೆ ಯಾವ ಪ್ರಯೋಜನವೂ ದೊರಕುವುದಿಲ್ಲ.

ಹಾಗಾಗಿ, ಕಲಿಯುವ ಮಕ್ಕಳ ವಯ್ಯಕ್ತಿಕ ಏಳಿಗೆಗೆ ಮಾತ್ರವಲ್ಲದೆ, ಅವರ ಸಮಾಜದ ಮತ್ತು ನಾಡಿನ ಏಳಿಗೆಗಾಗಿಯೂ ಕಲಿಕೆನುಡಿಯಾಗಿ ಅವರ ತಾಯ್ನುಡಿ ಇಲ್ಲವೇ ಪರಿಸರದ ನುಡಿಯನ್ನು ಬಳಸುವುದೇ ಸರಿಯಾದ ದಾರಿ.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

ಬರಹವನ್ನು ಮಾರ‍್ಪಡಿಸಿ ಗೆದ್ದವರು

ನುಡಿಯರಿಮೆಯ ಇಣುಕುನೋಟ – 8

ಜಗತ್ತಿನ ಹಲವು ನುಡಿಗಳಲ್ಲಿ ಇತ್ತೀಚೆಗೆ, ಎಂದರೆ ಕಳೆದ ನೂರು-ನೂರಯ್ವತ್ತು ವರ‍್ಶಗಳಲ್ಲಿ, ನೂರಾರು ವರ‍್ಶಗಳಿಂದ ಬಳಕೆಯಲ್ಲಿದ್ದ ಬರಹಗಳನ್ನು ಮಾರ‍್ಪಡಿಸಿ, ಅವುಗಳಲ್ಲಿ ಹೆಚ್ಚು ಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾಡಲಾಗಿದೆ, ಮತ್ತು ಇದರಿಂದಾಗಿ ಆ ನುಡಿಗಳನ್ನಾಡುವ ಜನರಲ್ಲಿ ಬರಹಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆ.

ಜನರ ಜೀವನದಲ್ಲಿ ಇತ್ತೀಚೆಗೆ ಬರಹ ಹೆಚ್ಚು ಹೆಚ್ಚು ಮುಕ್ಯವಾಗುತ್ತಿರುವುದು, ಮತ್ತು ಒಂದು ನಾಡಿನಲ್ಲಿರುವ ಎಲ್ಲಾ ಜನರೂ ಬರಹಬಲ್ಲವರಾಗದೆ ಆ ನಾಡಿನ ಏಳಿಗೆಯಾಗಲಾರದೆಂಬ ಪರಿಸ್ತಿತಿ ಉಂಟಾಗಿರುವುದು ಅವರು ಇಂತಹ ಮಾರ‍್ಪಾಡುಗಳನ್ನು ನಡೆಸಲು ಮುಕ್ಯ ಕಾರಣ.

ಬರಹಗಳನ್ನು ಎರಡು ಬಗೆಗಳಲ್ಲಿ ಈ ಕಾರಣಕ್ಕಾಗಿ ಮಾರ‍್ಪಡಿಸಲಾಗಿದೆ: ಅವುಗಳ ಬರಿಗೆ(ಅಕ್ಶರ)ಗಳಲ್ಲಿ ಬೇಕಾದವುಗಳನ್ನು ಮಾತ್ರ ಉಳಿಸಿಕೊಂಡು ಬೇಡದವುಗಳನ್ನು ತೆಗೆದುಹಾಕಿರುವುದು ಒಂದು ಬಗೆಯ ಮಾರ‍್ಪಾಡು, ಮತ್ತು ಬಳಕೆಯಲ್ಲಿರುವ ಬರಿಗೆಗಳನ್ನೇ ಬಿಟ್ಟುಕೊಟ್ಟು, ಅವುಗಳ ಬದಲಿಗೆ ಬೇರೆ ಬಗೆಯ ಬರಿಗೆಗಳನ್ನು ಬಳಸತೊಡಗಿರುವುದು ಇನ್ನೊಂದು ಬಗೆಯ ಮಾರ‍್ಪಾಡು.

ಗ್ರೀಕ್ ಬರಹದಲ್ಲಿ ಪದಗಳನ್ನು ಹಿಂದಿನ ಕಾಲದಲ್ಲಿದ್ದಂತೆ ಬರೆಯಲು ಹಲವು ಹೆಚ್ಚಿನ ಬರಿಗೆಗಳನ್ನು ಬಳಸಲಾಗುತ್ತಿತ್ತು; ಪದಗಳನ್ನು ಓದುವ ಹಾಗೆಯೇ ಬರೆಯುವಂತೆ ಮಾಡಲು, 1982ರಲ್ಲಿ ಬೇಡದಿರುವ ಬರಿಗೆಗಳನ್ನೆಲ್ಲ ಬಿಟ್ಟುಕೊಡಲಾಯಿತು. ಇವತ್ತು ಹೆಚ್ಚಿನ ಬರಹಗಳಲ್ಲೂ ಈ ಬರಿಗೆಗಳ ಬಳಕೆಯಿಲ್ಲ; ಕೆಲವರು ಗ್ರೀಕ್ ಪಂಡಿತರು ಮಾತ್ರ ಅವನ್ನು ಬಳಸುತ್ತಿದ್ದಾರೆ.

ಜಪಾನೀಸ್ ಬರಹದ ಕನ ಬರಿಗೆಗಳು ಒಂಬತ್ತನೇ ಶತಮಾನದಲ್ಲಿ ಸರಿಯಾಗಿದ್ದುವು; ಆದರೆ, ಆಮೇಲೆ ಮಾತಿನಲ್ಲಿ ನಡೆದ ಮಾರ‍್ಪಾಡುಗಳಿಂದಾಗಿ ಅವಕ್ಕೂ ಅವುಗಳ ಓದಿಗೂ ನಡುವೆ ಹಲವು ವ್ಯತ್ಯಾಸಗಳು ಮೂಡಿಬಂದುವು. 1946ರಲ್ಲಿ ಇವನ್ನು ಹೆಚ್ಚುಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾರ‍್ಪಡಿಸಲಾಯಿತು, ಮತ್ತು ಓದಿನಲ್ಲಿಲ್ಲದ ಕೆಲವು ಬರಿಗೆಗಳನ್ನು ಬಿಟ್ಟುಕೊಡಲಾಯಿತು.

ಕೊರಿಯನ್ ಬರಹದಲ್ಲಿ ಅವರವೇ ಆದ ಪದಗಳನ್ನು ಬರೆಯಲು ಹಂಗುಲ್ ಎಂಬ ತುಂಬಾ ಚನ್ನಾಗಿರುವ ಬರಿಗೆಗಳನ್ನು ಬಳಸಲಾಗುತ್ತಿದೆ; ಆದರೆ, ಚಯ್ನೀಸ್‌ನಿಂದ ಎರವಲು ಪಡೆದ ಪದಗಳನ್ನು ಬರೆಯಲು ತೊಡಕು ತೊಡಕಾಗಿರುವ ಚಯ್ನೀಸ್ ಮೂಲದ ಹಂಜ ಎಂಬ ಬರಿಗೆಗಳನ್ನು ಬಳಸಲಾಗುತ್ತಿದೆ. 1949ರಲ್ಲಿ ಈ ಚಯ್ನೀಸ್ ಎರವಲು ಪದಗಳನ್ನೂ ಹಂಗುಲ್‌ನಲ್ಲಿಯೇ ಬರೆಯುವ ನಿರ‍್ದಾರವನ್ನು ಉತ್ತರ ಕೊರಿಯಾದಲ್ಲಿ ಮಾಡಲಾಯಿತು, ಮತ್ತು ಇದರಿಂದಾಗಿ ಆ ನಾಡಿನಲ್ಲಿ ಓದುಬಲ್ಲವರ ಎಣಿಕೆ ತುಂಬಾ ಹೆಚ್ಚಾಯಿತು.

ದಕ್ಶಿಣ ಕೊರಿಯಾದಲ್ಲೂ ಹಂಜ ಬರಿಗೆಗಳ ಎಣಿಕೆಯನ್ನು ಸಾಕಶ್ಟು ಕಡಿಮೆ ಮಾಡಲಾಗಿದೆ, ಮತ್ತು ಅವನ್ನು ಎಲಿಮೆಂಟರಿ ಶಾಲೆಗಳಲ್ಲಿ ಕಲಿಸದಿರುವಂತೆ, ಮತ್ತು ಮಕ್ಕಳ ಪುಸ್ತಕಗಳಲ್ಲಿ, ಮತ್ತು ಎಲ್ಲಾ ಜನರೂ ಓದಬೇಕಾಗಿರುವ ಬರಹಗಳಲ್ಲಿ ಬಳಸದಿರುವಂತೆ ನೋಡಿಕೊಳ್ಳಲಾಗುತ್ತಿದೆ.

ಬರಹಗಳಲ್ಲಿ ಬರುವ ಪದಗಳನ್ನು ಓದುವ ಹಾಗೆಯೇ ಬರೆಯುವಂತೆ ಮಾಡುವುದಕ್ಕಾಗಿ ಟರ‍್ಕಿ, ಇಂಡೊನೇಶ್ಯಾ, ಮಲಯೇಶ್ಯಾ, ಸೋಮಾಲಿಯಾ ಮೊದಲಾದೆಡೆಗಳಲ್ಲಿ, ಮತ್ತು ಸೋವಿಯಟ್ ಯೂನಿಯನ್‌ನ ಹಲವು ನಾಡುಗಳಲ್ಲಿ ಅರೇಬಿಕ್ ಮೂಲದ ಬರಿಗೆಗಳನ್ನು ಬಿಟ್ಟುಕೊಟ್ಟು ರೋಮನ್ ಮೂಲದ ಬರಿಗೆಗಳನ್ನು ಬಳಕೆಗೆ ತರಲಾಗಿದೆ. ಇದರಿಂದಾಗಿ ಈ ನಾಡುಗಳಲ್ಲಿಯೂ ಬರಹಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತಿದೆ.

ಇದಕ್ಕೆ ಬದಲು, ಅರೇಬಿಕ್ ಬರಿಗೆಗಳನ್ನು ಬಳಸುತ್ತಿರುವ ಇರಾನ್, ಇರಾಕ್ ಮೊದಲಾದ ಹಲವು ನಾಡುಗಳಲ್ಲಿ ಇವತ್ತಿಗೂ ಬರಹ ಬಲ್ಲವರ ಎಣಿಕೆ ತುಂಬಾ ಕಡಿಮೆಯಿದೆ. ಇದಕ್ಕೆ ಕೆಲವು ಸಾಮಾಜಿಕ ತೊಡಕುಗಳೂ ಕಾರಣವಿರಬಹುದು; ಆದರೆ, ಬರಹಗಳಲ್ಲಿ ಪದಗಳನ್ನು ಓದುವ ಹಾಗೆ ಬರೆಯದಿರುವುದು, ಮತ್ತು ಇದರಿಂದಾಗಿ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗಿರುವುದೂ ಒಂದು ಕಾರಣವೆಂಬುದರಲ್ಲಿ ಸಂಶಯವಿಲ್ಲ.

ಪದಗಳನ್ನು ಹೆಚ್ಚು ಕಡಿಮೆ ಓದುವ ಹಾಗೆಯೇ ಬರೆಯುವಂತೆ ಮಾಡಲು ಇತ್ತೀಚೆಗೆ ಬೇರೆ ಹಲವಾರು ನುಡಿಗಳ ಬರಹಗಳಲ್ಲೂ ಮಾರ‍್ಪಾಡುಗಳನ್ನು ನಡೆಸಲಾಗಿದೆ. ವಿಯೆಟ್ನಾಮ್‌ನಲ್ಲಿ ಚಯ್ನೀಸ್ ಬರಿಗೆಗಳ ಬದಲು ರೋಮನ್ ಮೂಲದ ಬರಿಗೆಗಳನ್ನು ಬಳಸಲು ತೊಡಗಿದುದರಿಂದಾಗಿ ಇವತ್ತು ವಿಯೆಟ್ನಮೀಸ್ ಬರಹಗಳಲ್ಲಿ ಚಯ್ನೀಸ್ ಎರವಲುಗಳನ್ನೂ ಓದುವ ಹಾಗೆಯೇ ಬರೆಯಲು ಸಾದ್ಯವಾಗಿದೆ; ಈ ಮಾರ‍್ಪಾಡನ್ನು ನಡೆಸಿದ ಬಳಿಕ ಅಲ್ಲಿಯೂ ಓದುಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತದೆ.

ಯುರೋಪಿನ ಹಲವಾರು ನುಡಿಗಳಲ್ಲೂ ಇತ್ತೀಚೆಗೆ ಬರಹಗಳಲ್ಲಿ ಮಾರ‍್ಪಾಡುಗಳನ್ನು ನಡೆಸುವ ಮೂಲಕ ಓದಿಗೂ ಬರಹಕ್ಕೂ ನಡುವಿರುವ ಅಂತರವನ್ನು ಕಡಿಮೆ ಮಾಡಲಾಗಿದೆ. ಹೆಸರು(ನಾಮ)ಪದಗಳನ್ನು ಬರೆಯುವಾಗ ಅವುಗಳ ಮೊದಲಿಗೆ ದೊಡ್ಡ ಬರಿಗೆಯನ್ನು ಬಳಸಬೇಕೆಂಬ ಕಟ್ಟಲೆಯನ್ನು ಡೇನಿಶ್‌ನಲ್ಲಿ ಬಿಟ್ಟುಕೊಡಲಾಗಿದೆ; ಕೊಟ್ಟಹೆಸರುಗಳಲ್ಲಿ ಮಾತ್ರ ಈ ಕಟ್ಟಲೆಯನ್ನು ಉಳಿಸಿಕೊಳ್ಳಲಾಗಿದೆ.

ಜರ‍್ಮನಿ, ಆಸ್ಟ್ರಿಯಾ, ಮತ್ತು ಸ್ವಿಜರ್‌ಲೇಂಡ್‌ಗಳಲ್ಲಿಯೂ ಜರ‍್ಮನ್ ಬರಹಗಳಲ್ಲಿರುವ ಬರಿಗೆಗಳ ಬಳಕೆಯಲ್ಲಿ ಹಲವು ಮಾರ‍್ಪಾಡುಗಳನ್ನು ನಡೆಸಬೇಕೆಂಬ ತೀರ‍್ಮಾನಕ್ಕೆ ಇತ್ತೀಚೆಗೆ ಬರಲಾಗಿತ್ತು; ಪದಗಳನ್ನು ಹೆಚ್ಚುಕಡಿಮೆ ಓದುವ ಹಾಗೆಯೇ ಬರೆಯಬೇಕೆಂಬುದೇ ಈ ಮಾರ‍್ಪಾಡುಗಳ ಮುಕ್ಯ ಉದ್ದೇಶವಾಗಿತ್ತು. ಈ ತೀರ‍್ಮಾನವನ್ನು 1996ರಲ್ಲಿ ಬಳಕೆಗೆ ತರಲಾಯಿತು.
ಆದರೆ, ಇದನ್ನು ವಿರೋದಿಸುವವರೂ ಕೆಲವರಿದ್ದು, ಜರ‍್ಮನಿಯಲ್ಲಿ ಈ ಮಾರ‍್ಪಾಡುಗಳನ್ನು ಬಳಸುವುದು ಶಾಲೆಗಳಲ್ಲಿ ಮಾತ್ರ ಕಡ್ಡಾಯವಾಗಿದೆ. ಹೀಗಿದ್ದರೂ, ಇವತ್ತು ಹೆಚ್ಚಿನ ಬರಹಗಳಲ್ಲೂ ಈ ಮಾರ‍್ಪಡಿಸಿದ ಬರಿಗೆಗಳೇ ಬಳಕೆಯಾಗುತ್ತಿವೆ; ಕೆಲವು ಪತ್ರಿಕೆಗಳು ಮತ್ತು ಪುಸ್ತಕಗಳು ಮಾತ್ರ ಹಳೇ ಬರಹಕ್ಕೆ ಜೋತುಬಿದ್ದಿವೆ.

ಪೋರ‍್ಚುಗೀಸ್ ಬರಹದಲ್ಲೂ ಅದನ್ನು ಬಳಸುವ ಹಲವು ನಾಡುಗಳು ಒಟ್ಟುಸೇರಿ ಇಂತಹದೇ ಮಾರ‍್ಪಾಡನ್ನು ಬಳಕೆಗೆ ತಂದಿವೆ; ಇದಕ್ಕೆ ಮೊದಲು, ಪದಗಳನ್ನು ಅವುಗಳ ಮೂಲರೂಪ ಎಂತಹದು ಎಂಬುದನ್ನು ಸೂಚಿಸುವಂತೆ ಬರೆಯಲಾಗುತ್ತಿತ್ತು; ಆದರೆ, ಈ ರೂಪಗಳಿಗೂ ಅವನ್ನು ಓದುವ ಬಗೆಗೂ ನಡುವೆ ಯಾವ ಹೊಂದಾಣಿಕೆಯೂ ಇರಲಿಲ್ಲ; ಹಾಗಾಗಿ, ಅವುಗಳ ಈ ಹಳೆಯ ರೂಪಗಳನ್ನು ಬಿಟ್ಟುಕೊಟ್ಟು, ಆದಶ್ಟು ಮಟ್ಟಿಗೆ ಇವತ್ತು ಅವನ್ನು ಹೇಗೆ ಓದಲಾಗುತ್ತದೆಯೋ ಹಾಗೆಯೇ ಬರೆಯುವಂತೆ ಅವುಗಳಲ್ಲಿ ಮಾರ‍್ಪಾಡುಗಳನ್ನು ಮಾಡಲಾಗಿದೆ.

ಒಂದು ನಾಡಿನಲ್ಲಿ ಓದು-ಬರಹ ಬಲ್ಲವರ ಎಣಿಕೆ ಎಶ್ಟಿದೆ ಎಂಬುದು ಆ ನಾಡಿನ ಬರಹಗಳಲ್ಲಿ ಬಳಕೆಯಾಗುತ್ತಿರುವ ಬರಿಗೆಗಳನ್ನು ಕಲಿಯಲು ಮತ್ತು ಬಳಸಲು ಎಶ್ಟು ಸುಲಬ ಎಂಬುದರ ಮೇಲೆ ಮಾತ್ರವಲ್ಲದೆ, ಅಲ್ಲಿನ ಜನರ ಮೇಲೆ ಓದಿನ ಕುರಿತಾಗಿ ಎಂತಹ ಆಳ್ವಿಕೆಯ ಒತ್ತಡ, ನೆರೆಹೊರೆಯ ಒತ್ತಡ, ಮತ್ತು ಮನೆಯವರ ಒತ್ತಡವಿದೆ ಎಂಬುದರ ಮೇಲೂ ಅವಲಂಬಿಸಿರುತ್ತದೆ; ಹಾಗಾಗಿ, ಕನ್ನಡದ ಬರಿಗೆಗಳಲ್ಲಿ ಮಾರ‍್ಪಾಡುಗಳನ್ನು ಮಾಡದಿದ್ದರೂ ಬರಹ ಬಲ್ಲವರ ಎಣಿಕೆ ಹೆಚ್ಚಬಲ್ಲುದು ಎಂಬುದಾಗಿ ಕೆಲವರಿಗೆ ಅನಿಸಬಹುದು.

ಆದರೆ, ಬರಿಗೆಗಳ ತೊಡಕೂ ಬರಹ ಬಲ್ಲವರ ಎಣಿಕೆ ಕಡಿಮೆಯಿರಲು ಒಂದು ಕಾರಣ ಎಂಬುದನ್ನು ಕಂಡುಕೊಂಡು, ಮೇಲೆ ಕೊಟ್ಟಿರುವಂತಹ ಹಲವಾರು ನುಡಿಗಳ ಬರಹಗಳಲ್ಲಿ ಬರಿಗೆಗಳನ್ನು ಮಾರ‍್ಪಡಿಸಲಾಗಿದೆ, ಮತ್ತು ಹಾಗೆ ಮಾಡುವ ಮೂಲಕ ಬರಹ ಬಲ್ಲವರ ಎಣಿಕೆಯನ್ನು ಹೆಚ್ಚಿಸಿಕೊಳ್ಳಲಾಗಿದೆ ಎಂಬುದನ್ನು ಮರೆಯಬಾರದು.

ಇಂಗ್ಲಿಶ್‌ನಲ್ಲಿ ಉಲಿಕೆಗೂ ಬರಿಗೆಗೂ ನಡುವೆ ಹೊಂದಾಣಿಕೆ ತುಂಬಾ ಕಡಿಮೆಯಿದೆಯಾದರೂ ಅದನ್ನು ಕಲಿಯುವವರ ಎಣಿಕೆ ತುಂಬಾ ಹೆಚ್ಚಿದೆಯಲ್ಲ ಎಂದು ಕೆಲವರು ಹೇಳಬಹುದು. ಆದರೆ, ಇಂಗ್ಲಿಶ್ ಬರಹದ ಈ ಸ್ಪೆಲ್ಲಿಂಗ್ ತೊಡಕಿನಿಂದಾಗಿ, ಅದನ್ನು ಕಲಿಯುವ ಮಕ್ಕಳಿಗೆ ಬೇರೆ ಬರಹಗಳನ್ನು ಕಲಿಯಲು ಬೇಕಾಗುವ ಸಮಯದ ಮೂರು ಪಾಲಶ್ಟು ಸಮಯ ಬೇಕಾಗುತ್ತದೆ.

ಇದಲ್ಲದೆ, ಹಾಗೆ ಕಶ್ಟಪಟ್ಟು ಕಲಿತವರಲ್ಲಿಯೂ ಹಲವರಿಗೆ ಸರಿಯಾಗಿ ಓದುವುದು ಹೇಗೆ ಎಂಬುದೇ ಗೊತ್ತಾಗಿರುವುದಿಲ್ಲ, ಮತ್ತು ಇದರಿಂದಾಗಿ ಅವರು ಆದಶ್ಟು ಮಟ್ಟಿಗೆ ಓದಿನಿಂದ ದೂರವೇ ಉಳಿಯಲು ಬಯಸುತ್ತಾರೆ. ಅಮೆರಿಕಾದಂತಹ ಮುಂದುವರಿದ ನಾಡುಗಳಲ್ಲೂ ಈ ತೊಂದರೆಯಿದೆ.

ಕನ್ನಡದ ಮಕ್ಕಳು ಈ ರೀತಿ ಕನ್ನಡ ಬರಹಗಳನ್ನು ಕಲಿಯುವಲ್ಲಿ ಮತ್ತು ಬಳಸುವಲ್ಲಿ ತೊಂದರೆಗೊಳಗಾಗದಂತೆ ಮಾಡಲು, ಮತ್ತು ಅವನ್ನು ಎಲ್ಲಾ ಮಕ್ಕಳೂ ಸುಲಬವಾಗಿ ಮತ್ತು ಸರಿಯಾಗಿ ಓದಲು ಸಾದ್ಯವಾಗುವಂತೆ ಮಾಡಲು ಋ, ಷ, ಮಹಾಪ್ರಾಣ ಮೊದಲಾದ ಕನ್ನಡದ ಮಟ್ಟಿಗೆ ಬೇಡದಿರುವ ಕೆಲವು ಬರಿಗೆಗಳನ್ನು ಇವತ್ತು ಬಿಟ್ಟುಕೊಡಬೇಕಾಗಿದೆ. ಕನ್ನಡಿಗರಿಗೆ ತಮ್ಮ ನುಡಿಯ ಮೇಲಿರುವ ಕೀಳರಿಮೆಯನ್ನು ಇಲ್ಲವಾಗಿಸುವಲ್ಲಿಯೂ ಇದು ನೆರವಾಗಬಲ್ಲುದು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter

1 3 4 5