ನಿಮ್ಮ ಮಗುವಿಗೆ ಇಂಗ್ಲಿಶ್ ನುಡಿ ಮಾತ್ರ ಸಾಕೇ?

ನುಡಿಯರಿಮೆಯ ಇಣುಕುನೋಟ – 6

ಇವತ್ತು ಹಲವು ಜನರು ತಮ್ಮ ಮಕ್ಕಳನ್ನು ಇಂಗ್ಲಿಶ್ಕಲಿಕೆನುಡಿಯ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ; ಇಂತಹ ಹಲವು ಶಾಲೆಗಳಲ್ಲಿ ಮಕ್ಕಳು ಇಂಗ್ಲಿಶ್ ನುಡಿಯನ್ನು ಮಾತ್ರ ಬಳಸಬೇಕು, ಕನ್ನಡವನ್ನು ಬಳಸಲೇ ಕೂಡದು ಎಂಬ ಒಂದು ಕಟ್ಟಲೆಯನ್ನು ಮಾಡಿರುತ್ತಾರೆ. ಮಕ್ಕಳು ಶಾಲೆಯಲ್ಲಿ ಇಂಗ್ಲಿಶ್ ನುಡಿಯನ್ನು ಮಾತ್ರವೇ ಬಳಸುತ್ತಿದ್ದಲ್ಲಿ ಅವರಿಗೆ ಅದನ್ನು ಬೇಗನೆ ಮತ್ತು ತಪ್ಪಿಲ್ಲದೆ ಬಳಸಲು ಬರಬಹುದೆಂಬ ತಪ್ಪು ಅನಿಸಿಕೆಯೇ ಈ ಕಟ್ಟಲೆಗೆ ಕಾರಣ.

ಕೆಲವು ಮನೆಗಳಲ್ಲಿಯೂ ಇದೇ ಕಾರಣಕ್ಕಾಗಿ ಮಕ್ಕಳೊಂದಿಗೆ ಅವರ ತಾಯ್ತಂದೆಯರು ಇಂಗ್ಲಿಶ್ ನುಡಿಯನ್ನೇ ಬಳಸತೊಡಗುತ್ತಾರೆ. ಆದರೆ, ಹೀಗೆ ಮಾಡುವುದರಿಂದ ಮಕ್ಕಳು ಚಿಕ್ಕಂದಿನಲ್ಲಿ ಕಲಿತಿದ್ದ ಕನ್ನಡ ನುಡಿಯನ್ನು ಮರೆಯುತ್ತಾ ಹೋಗುತ್ತಾರೆ, ಮತ್ತು ಕೊನೆಗೆ ಅವರಿಗೆ ಅದರಲ್ಲಿ ಮಾತನಾಡಲು ಬರುವುದಿಲ್ಲವೆಂದೇ ಆಗುತ್ತದೆ.

ಮಕ್ಕಳ ಬೆಳವಣಿಗೆಯ ಮಟ್ಟಿಗೆ ಇದು ಸರಿಯೇ ಎಂಬುದನ್ನು ಈ ಶಾಲೆಗಳನ್ನು ನಡೆಸುವವರಾಗಲಿ, ಇಲ್ಲವೇ ಮಕ್ಕಳ ತಾಯಿತಂದೆಯರಾಗಲಿ ಪರಿಶೀಲಿಸಿದ ಹಾಗಿಲ್ಲ. ಇಂಗ್ಲಿಶ್ ಕಲಿಯುವ ಮಕ್ಕಳು ಅದರೊಂದಿಗೆ ತರಗತಿಯಲ್ಲಿ ತಮ್ಮ ತಾಯ್ನುಡಿಯನ್ನೂ ಬಳಸುತ್ತಿದ್ದರೆ ಅವರಿಗೆ ಸರಿಯಾಗಿ ಇಂಗ್ಲಿಶ್ ಕಲಿಯಲು ಬರುವುದಿಲ್ಲ ಎಂಬ ಅನಿಸಿಕೆ ಹಿಂದಿನ ಕಾಲದಲ್ಲಿತ್ತು; ಆದರೆ, ಕಳೆದ ಕೆಲವು ವರ‍್ಶಗಳಲ್ಲಿ, ಅದರಲ್ಲೂ ಕಳೆದ ಹತ್ತು-ಹದಿನಯ್ದು ವರ‍್ಶಗಳಲ್ಲಿ ನಡೆಸಿದ ಅರಕೆಗಳೆಲ್ಲವೂ ಇದು ತಪ್ಪು ಅನಿಸಿಕೆಯೆಂಬುದನ್ನು ತೋರಿಸಿಕೊಟ್ಟಿವೆ.

ಒಂದು ನುಡಿಯನ್ನು ಶಾಲೆಗೆ ಬರುವ ಮೊದಲೇ ಕಲಿತಿರುವ ಮಕ್ಕಳು ಎರಡನೇ ನುಡಿಯನ್ನು ಆ ನುಡಿಯ ಮೂಲಕವೇನೇ ಕಲಿಯಬೇಕಾಗುತ್ತದೆ; ಮೊದಲಿಗೆ ಅವರು ತಮ್ಮ ತಾಯ್ನುಡಿಯ ಪದಗಳನ್ನು ಮತ್ತು ಕಟ್ಟಲೆಗಳನ್ನು ಎರಡನೇ ನುಡಿಯ ಮಾತುಗಳಲ್ಲಿ ಸೇರಿಸಿ ಹೇಳಬಹುದು; ಆದರೆ, ಇದು ಅವರ ಕಲಿಕೆಯ ಒಂದು ಹಂತವನ್ನು ಸೂಚಿಸುತ್ತದೆಯಲ್ಲದೆ, ಅವರು ಕಲಿಕೆಯಲ್ಲಿ ಗೊಂದಲಗೊಂಡಿರುವುದನ್ನಾಗಲಿ, ತಪ್ಪು ದಾರಿ ಹಿಡಿದಿರುವುದನ್ನಾಗಲಿ ಸೂಚಿಸುವುದಿಲ್ಲ. ಕಲಿಕೆ ಮುಂದುವರಿದಂತೆಲ್ಲ ಅವರು ಈ ಎರಡು ನುಡಿಗಳ ಪದಗಳನ್ನು ಮತ್ತು ಕಟ್ಟಲೆಗಳನ್ನು ಬೇರೆ ಬೇರಾಗಿ ಇರಿಸಿಕೊಳ್ಳಲು ಕಲಿಯುತ್ತಾರೆ.

ಮೊದಲನೇ ನುಡಿಯನ್ನು ಅವರು ಶಾಲೆಯಲ್ಲಿ ಬಳಸಲೇಬಾರದೆಂಬುದಾಗಿ ಅವರ ಮೇಲೆ ಒತ್ತಾಯ ಹೇರಿದರೆ, ಅವರಿಗೆ ಅದರ ಮೇಲೆ ಕೀಳರಿಮೆಯುಂಟಾಗುತ್ತದೆ ಮಾತ್ರವಲ್ಲ, ಅವರ ಎರಡನೇ ನುಡಿಯ ಕಲಿಕೆಯೂ ತೊಡಕಿನದಾಗುತ್ತದೆ. ಮಕ್ಕಳಿಗೆ ಚನ್ನಾಗಿ ತಿಳಿದಿರುವ ನುಡಿಯನ್ನು ಉಳಿಸಿ, ಅದರ ಮೂಲಕ ಎರಡನೆಯ ನುಡಿಯನ್ನು ಕಲಿಸುವುದೇ ಸರಿಯಾದ ದಾರಿ.

ಇದಲ್ಲದೆ, ಈ ಎರಡು ನುಡಿಗಳ ಬಳಕೆಯಲ್ಲೂ ಮಕ್ಕಳು ಒಂದೇ ರೀತಿಯಲ್ಲಿ ಪಳಗುವಂತೆ ಮಾಡುವ ಮೂಲಕ, ಅವರು ಒಂದು ನುಡಿಯನ್ನು ಮಾತ್ರವೇ ಬಳಸಬಲ್ಲ ಮಕ್ಕಳಿಗಿಂತ ಜಾಣತನದಲ್ಲಿ, ಬುದ್ದಿವಂತಿಕೆಯಲ್ಲಿ, ಮತ್ತು ನುಡಿಯನ್ನು ಬಳಸಲು ಬೇಕಾಗುವ ಹಲವು ಬಗೆಯ ಚಳಕಗಳಲ್ಲಿ ಮುಂದೆ ಹೋಗುತ್ತಾರೆ ಎಂಬುದನ್ನು ಇತ್ತೀಚೆಗೆ ನಡೆಸಿದ ಹಲವು ಅರಕೆಗಳು ತೋರಿಸಿಕೊಟ್ಟಿವೆ.

ಎರಡು ನುಡಿಗಳನ್ನು ಬಳಸುವವರು ಎರಡು ಬಗೆಯ ಪದಗಳನ್ನು ಮತ್ತು ಕಟ್ಟಲೆಗಳನ್ನು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅವುಗಳಲ್ಲಿ ಒಂದು ನುಡಿಯನ್ನು ಬಳಸುವಾಗ ಆ ನುಡಿಗೆ ಸಂಬಂದಿಸಿದ ಪದಗಳು ಮತ್ತು ಕಟ್ಟಲೆಗಳು ಮಾತ್ರ ಬಳಕೆಯಾಗುವಂತೆ, ಮತ್ತು ಇನ್ನೊಂದು ನುಡಿಗೆ ಸಂಬಂದಿಸಿದ ಪದಗಳು ಮತ್ತು ಕಟ್ಟಲೆಗಳು ಬಳಕೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಮಾಡುವಲ್ಲಿ ಪಳಗಿರುವ ಮಕ್ಕಳು ತಾವು ಕಲಿತ ಈ ಚಳಕವನ್ನು ಬೇರೆ ಕೆಲಸಗಳಲ್ಲೂ ಬಳಸಬಲ್ಲರು.

ಎತ್ತುಗೆಗಾಗಿ, ಯಾವುದಾದರೊಂದು ತೊಡಕನ್ನು ಬಗೆಹರಿಸಬೇಕಾದಾಗ, ಈ ಮಕ್ಕಳು ಅದಕ್ಕೆ ಸಂಬಂದಿಸಿದ ವಿಶಯಗಳನ್ನು ಮಾತ್ರವೇ ಗಮನದಲ್ಲಿರಿಸಿಕೊಂಡು, ಅದಕ್ಕೆ ಸಂಬಂದಿಸದ ವಿಶಯಗಳನ್ನು ದೂರ ಇರಿಸಬಲ್ಲರು. ಹಾಗಾಗಿ, ತೊಡಕುಗಳನ್ನು ಬಗೆಹರಿಸುವಲ್ಲಿ ಅವರು ಒಂದು ನುಡಿಯಲ್ಲಿ ಮಾತ್ರವೇ ಪಳಗಿರುವ ಮಕ್ಕಳಿಗಿಂತ ಮುಂದಿರುತ್ತಾರೆ.

ಎರಡು ನುಡಿಗಳಲ್ಲಿ ಪಳಗಿರುವ ಮಕ್ಕಳು ಸಂದರ‍್ಬಕ್ಕನುಸಾರವಾಗಿ ಒಂದು ನುಡಿಯಿಂದ ಇನ್ನೊಂದು ನುಡಿಗೆ ನೆಗೆಯುತ್ತಿರಬಲ್ಲರು; ಒಂದು ಮಾತನ್ನು ಒಂದು ನುಡಿಯಲ್ಲಿ ಹೇಳಿ, ಒಡನೆಯೇ ಇನ್ನೊಂದು ಮಾತನ್ನು ಇನ್ನೊಂದು ನುಡಿಯಲ್ಲಿ ಹೇಳಬಲ್ಲರು; ಎಂದರೆ, ಒಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸುತ್ತಿರುವವರು ಒಡನೆಯೇ ಇನ್ನೊಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸಲು ತೊಡಗಬಲ್ಲರು. ಯಾವ ಸಂದರ‍್ಬದಲ್ಲಿ ಯಾವ ನುಡಿಯನ್ನು ಬಳಸಬೇಕು ಎಂಬುದೂ ಅವರಿಗೆ ತಿಳಿದಿರುತ್ತದೆ.

ಎರಡು ನುಡಿಗಳಲ್ಲಿ ಪಳಗುತ್ತಿರುವಾಗ ಪಡೆದ ಈ ಚಳಕವನ್ನೂ ಅವರು ಬೇರೆ ಕೆಲಸಗಳನ್ನು ನಡೆಸುವಲ್ಲಿ ಬಳಸಿಕೊಳ್ಳಬಲ್ಲರು. ಹಾಗಾಗಿ, ಒಂದು ನುಡಿಯನ್ನು ಮಾತ್ರವೇ ತಿಳಿದಿರುವ ಮಕ್ಕಳ ಮನಸ್ಸಿಗಿಂತ ಅವರ ಮನಸ್ಸು ಹೊಸ ಹೊಸ ಸಂದರ‍್ಬಗಳಿಗೆ ಹೊಂದಿಕೊಳ್ಳುವಂತಹ ಗುಣವನ್ನು ಹೆಚ್ಚು ಪಡೆದಿರುತ್ತದೆ, ಮತ್ತು ಈ ಕಾರಣಕ್ಕಾಗಿ ಅವರಿಗೆ ಹೆಚ್ಚು ತಾಳ್ಮೆಯಿರುತ್ತದೆ.

ಬೇರ‍್ಪಡಿಸುವುದು ಮತ್ತು ಒಂದೆಡೆ ಸೇರಿಸುವುದು ಎಂಬುದಾಗಿ ಎರಡು ಬಗೆಯ ಬಗೆತಗಳಿವೆ: ಒಂದು ವಸ್ತುವಿಗೆ ಎಶ್ಟೆಲ್ಲಾ ಬಳಕೆಗಳಿವೆ ಎಂಬುದನ್ನು ಕಂಡುಕೊಳ್ಳುವುದು ಬೇರ‍್ಪಡಿಸುವ ಬಗೆತ, ಮತ್ತು ಒಂದು ತೊಡಕಿಗೆ ಸಂಬಂದಿಸಿದ ಹಲವಾರು ವಿಶಯಗಳನ್ನು ಒಟ್ಟು ಸೇರಿಸಿ ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದು ಒಂದೆಡೆ ಸೇರಿಸುವ ಬಗೆತ. ಈ ಎರಡು ಬಗೆಯ ಬಗೆತಗಳನ್ನೂ ಎರಡು ನುಡಿಗಳನ್ನು ತಿಳಿದಿರುವ ಮಕ್ಕಳು ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಹೆಚ್ಚು ಚನ್ನಾಗಿ ನಡೆಸಬಲ್ಲರು.

ಒಂದೇ ನುಡಿಯನ್ನು ತಿಳಿದಿರುವ ಮಕ್ಕಳು ಓದುತ್ತಿರುವಾಗ, ಅವರ ಗಮನ ಪದಗಳ ಉಲಿಗಳ ಮೇಲಿರುತ್ತದೆ;  ಇದಕ್ಕೆ ಬದಲು, ಎರಡು ನುಡಿಗಳನ್ನು ಚನ್ನಾಗಿ ತಿಳಿದಿರುವ ಮಕ್ಕಳ ಗಮನ ಪದಗಳ ಹುರುಳಿನ ಮೇಲಿರುತ್ತದೆ. ಹಾಗಾಗಿ, ಈ ಮಕ್ಕಳು ಬರಹಗಳ ಹುರುಳನ್ನು ತಿಳಿದುಕೊಳ್ಳುವಲ್ಲಿ ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಎರಡು-ಮೂರು ತರಗತಿಗಳಶ್ಟು ಮುಂದಿರುತ್ತಾರೆ.

ಎರಡು ನುಡಿಗಳ ತಿಳಿವು ಮಕ್ಕಳ ಮುಂದೆ ಎರಡು ಸಂಸ್ಕ್ರುತಿಗಳನ್ನು ತೆರೆದಿಡುತ್ತದೆ; ಆ ಎರಡು ನುಡಿಗಳ ಬರಹಗಳನ್ನೂ ಓದಲು ಕಲಿತಲ್ಲಿ, ಎರಡು ಬಗೆಯ ಬರಹ ಸಂಸ್ಕ್ರುತಿಗಳೂ ಅವರದಾಗುತ್ತವೆ. ಈ ತಿಳಿವು ಮುಂದೆ ಜೀವನದುದ್ದಕ್ಕೂ ಅವರ ನೆರವಿಗೆ ಬರುತ್ತದೆ.

ತಮಗೆ ತಿಳಿದಿರುವ ನುಡಿಯಲ್ಲಿ ಮಕ್ಕಳು ಹೆಚ್ಚು ಸುಲಬವಾಗಿ ಓದಲು ಮತ್ತು ಬರೆಯಲು ಕಲಿಯಬಲ್ಲರು. ಹಾಗಾಗಿ, ಮಕ್ಕಳಿಗೆ ಮೊದಲು ಅವರಿಗೆ ತಿಳಿದಿರುವ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಸಿ, ಆಮೇಲೆ ಇಂಗ್ಲಿಶ್‌ನಲ್ಲಿ ಕಲಿಸುವುದೇ ಸರಿಯಾದ ದಾರಿ. ಯಾಕೆಂದರೆ, ಮೊದಲನೇ ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಯುವಾಗ ಪಡೆದ ಚಳಕಗಳನ್ನು ಅವರು ಸುಲಬವಾಗಿ ತಮ್ಮ ಎರಡನೇ ನುಡಿಯ ಕಲಿಕೆಯಲ್ಲೂ ಬಳಸಿಕೊಳ್ಳಬಲ್ಲರು.

ಇಂಗ್ಲಿಶ್‌ನಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆಯಿಂದಾಗಿ, ಅದರ ಪದಗಳ ಬರವಣಿಗೆಯಲ್ಲಿ ಬರುವ ಬರಿಗೆಗಳಿಗೂ ಅವುಗಳ ಓದಿನಲ್ಲಿ ಬರುವ ಉಲಿಗಳಿಗೂ ನಡುವೆ ಸಂಬಂದವಿದೆಯೆಂಬುದು ಅದನ್ನು ಓದಲು ಕಲಿಯುವವರಲ್ಲಿ ಹೆಚ್ಚಿನವರ ಗಮನಕ್ಕೂ ಬರುವುದೇ ಇಲ್ಲ. ಆದರೆ, ಇದನ್ನು ಗಮನಿಸಲು ಬಾರದಿರುವ ಮಕ್ಕಳಿಗೆ ಬರಹಗಳನ್ನು ಸಲೀಸಾಗಿ ಓದಲು ಬರುವುದಿಲ್ಲ.

ಕನ್ನಡ ಬರಹದಲ್ಲಿ ಬರಿಗೆಗಳಿಗೂ ಉಲಿಗಳಿಗೂ ನಡುವೆ ನೇರವಾದ ಸಂಬಂದವಿದೆ. ಸಂಸ್ಕ್ರುತದ ಎರವಲು ಪದಗಳು ಮಾತ್ರ ಇದಕ್ಕೆ ಹೊರಪಡಿಕೆಗಳಾಗಿವೆ. ಹಾಗಾಗಿ, ಮಕ್ಕಳಿಗೆ ಮೊದಲು ಕನ್ನಡದವೇ ಆದ ಪದಗಳು ಮಾತ್ರ ಇರುವ ಬರಹಗಳನ್ನು ಓದಲು ಕಲಿಸಿದಲ್ಲಿ, ಅವರು ಬಹಳ ಬೇಗನೆ ಅವನ್ನು ಸಲೀಸಾಗಿ ಓದುವುದು ಹೇಗೆಂಬುದನ್ನು ತಿಳಿದುಕೊಳ್ಳಬಲ್ಲರು.

ಅವರಿಗೆ ಇಂಗ್ಲಿಶ್ ಬರಹಗಳನ್ನು ಓದಲು ಆಮೇಲೆ ಕಲಿಸಿದಲ್ಲಿ, ಕನ್ನಡದ ಓದಿನಲ್ಲಿ ತಾವು ಪಡೆದ ಚಳಕವನ್ನು ಅವರು ಅಲ್ಲಿಯೂ ಬಳಸಿ ಹೆಚ್ಚು ಬೇಗನೆ ಅವನ್ನು ಸರಿಯಾಗಿ ಓದಲು ಕಲಿಯಬಲ್ಲರು.

ಬರೆಯುವ ಕೆಲಸವನ್ನೂ ಮಕ್ಕಳು ತಮಗೆ ಚನ್ನಾಗಿ ತಿಳಿದಿರುವ ಕನ್ನಡದಲ್ಲಿ ಹೆಚ್ಚು ಬೇಗನೆ ನಡೆಸಲು ಕಲಿಯಬಲ್ಲರು, ಮತ್ತು ಆಮೇಲೆ ಇಂಗ್ಲಿಶ್‌ನಲ್ಲಿ ಬರೆಯಬೇಕಾದಾಗ, ಆ ಚಳಕವನ್ನೇ ಅಲ್ಲಿಯೂ ಬಳಸಿಕೊಳ್ಳಬಲ್ಲರು.

ಇಂಗ್ಲಿಶ್ ನುಡಿಯ ಮೇಲಿರುವ ವ್ಯಾಮೋಹದಿಂದಾಗಿ, ಕನ್ನಡ ನುಡಿ ಕೊಡಬಲ್ಲ ಈ ಎಲ್ಲಾ ಪ್ರಯೋಜನಗಳನ್ನೂ ಮಕ್ಕಳು ಕಳೆದುಕೊಳ್ಳುವಂತೆ ಮಾಡುವುದು ಹೆಡ್ಡತನವಲ್ಲವೇ?

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter