ಎಸಕಪದಗಳಿಂದ ಪಡೆದ ಹೆಸರುಪದಗಳು


ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವ ಬಗೆ-4

ಇಂಗ್ಲಿಶ್ ಎಸಕಪದ(verb)ಗಳಿಂದ ಹೆಸರುಪದ(noun)ಗಳನ್ನು ಪಡೆಯುವಲ್ಲಿ ಹಲವು ಹಿನ್ನೊಟ್ಟುಗಳು ಬಳಕೆಯಾಗುತ್ತವೆ. ಇವುಗಳಲ್ಲಿ er/or, ation, ಮತ್ತು ing ಎಂಬವುಗಳು ಮುಕ್ಯವಾದವುಗಳು:

ಎಸಕಪದ

ಹೆಸರುಪದ

kill

killer

select

selector

migrate

migration

teach

teaching

 

ಇದಲ್ಲದೆ, ment, ee, al, ant/ent, age ಎಂಬಂತಹ ಬೇರೆಯೂ ಕೆಲವು ಹಿನ್ನೊಟ್ಟುಗಳು ಇದೇ ಕೆಲಸದಲ್ಲಿ ಬಳಕೆಯಾಗುತ್ತವೆ:

ಎಸಕಪದ ಹೆಸರುಪದ
replace replacement
absent absentee
propose proposal
attend attendant
inform informant
waste wastage

 

ಎಸಕಪದಗಳಿಂದ ಹೆಸರುಪದಗಳನ್ನು ಉಂಟುಮಾಡುವಲ್ಲಿ ಬಳಕೆಯಾಗುವ ಈ ಒಟ್ಟುಗಳ ಕುರಿತಾಗಿ ಕೆಲವು ವಿವರಗಳನ್ನು ಕೆಳಗೆ ಕೊಡಲಾಗಿದೆ:

(1) er ಮತ್ತು or ಎಂಬವು ಒಂದೇ ಒಟ್ಟಿನ ಎರಡು ರೂಪಗಳು; ಇವುಗಳಲ್ಲಿ or ಎಂಬುದು ಲ್ಯಾಟಿನ್‌ನಿಂದ ಬಂದ, ಮತ್ತು ಮುಕ್ಯವಾಗಿ t ಇಲ್ಲವೇ s ಬರಿಗೆಯಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಬರುತ್ತದೆ (conductor, compressor). ಹೆಚ್ಚಿನೆಡೆಗಳಲ್ಲೂ er/or ಒಟ್ಟು ಎಸಕವನ್ನು ನಡೆಸುವ ಮಂದಿಯನ್ನು ಹೆಸರಿಸುತ್ತದೆ (teacher, singer, writer); ಆದರೆ, mixer, heater, retainer, wrapper, suspender ಎಂಬಂತಹ ಕೆಲವು ಪದಗಳಲ್ಲಿ ಅದು ಬೇರೆ ಬಗೆಯ ಹುರುಳುಗಳನ್ನು ಕೊಡುತ್ತದೆ.

(2) ation ಎಂಬುದು ಮುಕ್ಯವಾಗಿ ಎಸಕಪದ ತಿಳಿಸುವ ಎಸಕವನ್ನು ಹೆಸರಿಸುವುದು (isolation, penitration, hesitation), ಮತ್ತು ಎಸಕದ ದೊರೆತವನ್ನು ಹೆಸರಿಸುವುದು (regulation, accommodation, resignation) ಎಂಬುದಾಗಿ ಎರಡು ಬಗೆಯ ಹುರುಳುಗಳನ್ನು ಕೊಡಬಲ್ಲುದು.

(3) ing ಎಂಬುದು ಎಸಕವನ್ನಾಗಲಿ (begging, running, sleeping) ಇಲ್ಲವೇ ಎಸಕದ ದೊರೆತವನ್ನಾಗಲಿ (building, wrapping, stuffing) ಗುರುತಿಸುವಂತಹ ಹೆಸರುಪದಗಳನ್ನು ಪಡೆಯುವಲ್ಲಿ ಬಳಕೆಯಾಗುತ್ತದೆ. ಎಸಕದ ದೊರೆತಗಳಲ್ಲಿ ಇದು ಮುಕ್ಯವಾಗಿ ಮೊದಲನೇ ಹಂತದ (ಎಂದರೆ ನನಸಿನ) ಪಾಂಗುಗಳನ್ನು ಹೆಸರಿಸುತ್ತದೆ.

(4) ment ಎಂಬುದು ಎಸಕದ ದೊರೆತವನ್ನು ಹೆಸರಿಸುವ ಹೆಸರುಪದಗಳನ್ನು ಕೊಡುತ್ತದೆ.

(5) ee ಎಂಬುದು ಹೆಚ್ಚಿನ ಬಳಕೆಯಲ್ಲೂ ಮಂದಿಯನ್ನು ಹೆಸರಿಸುತ್ತದೆ, ಮತ್ತು ಆತ ಎಸಕಪದ ತಿಳಿಸುವ ಎಸಕಕ್ಕೆ ಒಳಗಾದವನು, ಎಂದರೆ ಎಸಕದ ಈಡು ಎಂಬುದನ್ನು ಅದು ತಿಳಿಸುತ್ತದೆ.

(6) al ಎಂಬುದು ಎಸಕವನ್ನಾಗಲಿ ಇಲ್ಲವೇ ಎಸಕದ ದೊರೆತವನ್ನಾಗಲಿ ಹೆಸರಿಸುವಂತಹ ಪದಗಳನ್ನು ಉಂಟುಮಾಡುತ್ತದೆ; ಈ ಪದಗಳು ಗುರುತಿಸುವ ಎಸಕದ ದೊರೆತಗಳು ಎರಡನೇ ಹಂತದ ಇಲ್ಲವೇ ಅದಕ್ಕೆ ಮೇಲಿನ ಹಂತಗಳ (ಎಂದರೆ ನೆನಸಿನ) ಪಾಂಗುಗಳಾಗಿರುತ್ತವೆ (proposal, recital).

(7) ant/ent ಎಂಬುದು ನನಸಿನ ಹೆಸರುಪದಗಳನ್ನು ಉಂಟುಮಾಡುತ್ತದೆ; ಈ ಪದಗಳು ಗುರುತಿಸುವ ಪಾಂಗುಗಳು ಮಂದಿಗಳಾಗಿರಬಹುದು (informant, occupant, servant) ಇಲ್ಲವೇ ಬೇರೆಯೂ ಇರಬಹುದು (lubricant, repellent).

(8) age ಎಂಬುದು ಎಸಕಪದ ತಿಳಿಸುವ ಎಸಕವನ್ನು ಇಲ್ಲವೇ ಅದರ ದೊರೆತವನ್ನು ಹೆಸರಿಸುವಲ್ಲಿ ಬಳಕೆಯಾಗುತ್ತದೆ. ಇದರ ಬಳಕೆಯಿಂದ ಪಡೆದ ಪದಗಳು ಎಸಕದ ದೊರೆತಗಳನ್ನು ಹೆಸರಿಸುವುದಿದ್ದಲ್ಲಿ, ಅವು ಮುಕ್ಯವಾಗಿ ನೆನಸಿನ ಪಾಂಗುಗಳಾಗಿರುತ್ತವೆ (marriage, leakage).

ಮೇಲಿನ ಎಂಟು ಹಿನ್ನೊಟ್ಟುಗಳು ಮಾತ್ರವಲ್ಲದೆ ಬೇರೆಯೂ ಹಲವು ಹಿನ್ನೊಟ್ಟುಗಳು ಇಂಗ್ಲಿಶ್‌ನ ಎಸಕಪದಗಳಿಂದ ಹೆಸರುಪದಗಳನ್ನು ಪಡೆಯುವಲ್ಲಿ ಬಳಕೆಯಾಗುತ್ತವೆ; ಆದರೆ, ಅವುಗಳ ಹರವು ಹೆಚ್ಚಿಲ್ಲವಾದುದರಿಂದ ಅವನ್ನಿಲ್ಲಿ ಬೇರೆ ಬೇರಾಗಿ ವಿವರಿಸಿಲ್ಲ; ಅವು ಕೊಡುವ ಹುರುಳುಗಳನ್ನವಲಂಬಿಸಿ, ಮೇಲಿನ ಹೆಸರುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಉಂಟುಮಾಡುವಂತೆಯೇ ಅವಕ್ಕೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನೂ ಉಂಟುಮಾಡಲು ಬರುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಮುಂದೆ ಕೊಡಲಾಗುವುದು.

ಕನ್ನಡದಲ್ಲಿಯೂ ಎಸಕಪದಗಳಿಂದ ಹೆಸರುಪದಗಳನ್ನು ಪಡೆಯುವಲ್ಲಿ ಗ, ಇಕೆ, ಗೆ, ತ, ತೆ, ಕ, ಅಲು, ಅ, ಪು/ವು/ಹು, ಮೆ/ವೆ, ವಳಿ ಮೊದಲಾದ ಹಲವು ಹಿನ್ನೊಟ್ಟುಗಳು ಬಳಕೆಯಾಗುತ್ತವೆ; ಹೊಸಪದಗಳನ್ನು ಉಂಟುಮಾಡುವಾಗ ಇವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕು ಎಂಬುದನ್ನು ಮುಕ್ಯವಾಗಿ ಇಂಗ್ಲಿಶ್ ಒಟ್ಟುಗಳು ಕೊಡುವ ಹುರುಳಿನ ಮೇಲೆ ತೀರ‍್ಮಾನಿಸಬೇಕಾಗುತ್ತದೆ.
ಈ ಕೆಲಸಕ್ಕೆ ಸಾಮಾನ್ಯವಾಗಿ ಗ, ಇಕೆ, ಕ, ಗೆ, ತ ಮತ್ತು ತೆ ಎಂಬ ಆರು ಒಟ್ಟುಗಳು ಸಾಕಾಗುತ್ತವೆ. ಈ ಆರು ಒಟ್ಟುಗಳು ಕೊಡಲಾಗದಂತಹ ಕೆಲವು ಹೆಚ್ಚಿನ ಹುರುಳುಗಳನ್ನು ತಿಳಿಸಬೇಕಾಗಿರುವಲ್ಲಿ ಮಾತ್ರ ಬೇರೆ ಒಟ್ಟುಗಳನ್ನು ಇಲ್ಲವೇ ಪದಗಳನ್ನು ಬಳಸಬೇಕಾಗುತ್ತದೆ.

ಎಲ್ಲಾ ಬಗೆಯ ಇಂಗ್ಲಿಶ್ ಎಸಕಪದಗಳಿಗೂ ಸಾಟಿಯಾಗಬಲ್ಲ ಎಸಕಪದಗಳು ಕನ್ನಡದಲ್ಲಿ ಸಿಗುವುದಿಲ್ಲ; ಕೆಲವೆಡೆಗಳಲ್ಲಿ ಕೂಡುಪದಗಳನ್ನು ಬಳಸಬೇಕಾಗುತ್ತದೆ (blink ಎವೆಯಿಕ್ಕು, bluff ಸುಳ್ಳಾಡು, cheat ಕಯ್ಕೊಡು, christen ಹೆಸರಿಡು), ಮತ್ತು ಇನ್ನು ಕೆಲವೆಡೆಗಳಲ್ಲಿ ಹೆಸರುಪದ ಇಲ್ಲವೇ ಪರಿಚೆಪದಗಳಿಗೆ ಇಸು ಒಟ್ಟನ್ನು ಸೇರಿಸಿ ಎಸಕಪದಗಳನ್ನು ಉಂಟುಮಾಡಬೇಕಾಗುತ್ತದೆ (warn ಎಚ್ಚರಿಸು, decide ತೀರ‍್ಮಾನಿಸು, identify ಗುರುತಿಸು). ಆದರೆ, ಈ ಎರಡು ಕಡೆಗಳಲ್ಲೂ ಹೆಸರುಪದಗಳನ್ನು ಪಡೆಯುವ ಬಗೆ ಎಸಕಪದಗಳಿರುವಲ್ಲಿ ಬಳಸುವಂತಹದೇ ಆಗಿರುತ್ತದೆ.

ಎಸಕಪದಗಳಿಂದ ಹೆಸರುಪದಗಳನ್ನು ಪಡೆಯುವಲ್ಲಿ ಬಳಕೆಯಾಗಿರುವ ಇಂಗ್ಲಿಶ್ ಒಟ್ಟುಗಳಿಗೆ ಬದಲಾಗಿ ಕನ್ನಡದಲ್ಲಿ ಎಂತಹ ಒಟ್ಟುಗಳನ್ನು (ಇಲ್ಲವೇ ಪದಗಳನ್ನು) ಬಳಸಲು ಬರುತ್ತದೆ ಎಂಬುದನ್ನು ಕೆಳಗೆ ಮುಕ್ಯವಾಗಿ ಈ ಒಟ್ಟುಗಳು ಕೊಡುವ ಹುರುಳಿನ ಮೇಲೆ ವಿವರಿಸಲಾಗಿದೆ:

(1) ಮಂದಿಯನ್ನು ಗುರುತಿಸುವ ಪದಗಳು:
ಎಸಕಪದಗಳಿಂದ ಪಡೆದ ಇಂಗ್ಲಿಶ್ ಹೆಸರುಪದಗಳು ಮಂದಿಯನ್ನು ಗುರುತಿಸುತ್ತಿವೆಯಾದರೆ, ಅವಕ್ಕೆ ಸಾಟಿಯಾದ ಪದಗಳನ್ನು ಪಡೆಯಲು ಕನ್ನಡದಲ್ಲಿ ಗ ಒಟ್ಟನ್ನು ಬಳಸಬಹುದು. ಇಂಗ್ಲಿಶ್‌ನಲ್ಲಿ ಈ ಕೆಲಸವನ್ನು ನಡೆಸಲು ಮುಕ್ಯವಾಗಿ er/or ಎಂಬ ಒಟ್ಟು ಬಳಕೆಯಾಗುತ್ತದೆ; ಮೇಲೆ ತಿಳಿಸಿದ ಹಾಗೆ, ಅದನ್ನು ಬಳಸಿ ಪಡೆದ ಪದಗಳು ಒಂದು ಎಸಕವನ್ನು ನಡೆಸುವ ಮಂದಿಯನ್ನು ಹೆಸರಿಸುತ್ತವೆ:

read ಓದು reader ಓದುಗ
purchase ಕೊಳ್ಳು purchaser ಕೊಳ್ಳುಗ
support ಬೆಂಬಲಿಸು supporter ಬೆಂಬಲಿಗ
lose ಸೋಲು loser ಸೋಲುಗ
object ಮರುನುಡಿ objector ಮರುನುಡಿಗ
narrate ಕೊಗೆ narrator ಕೊಗೆಗ
announce ಸಾರು announcer ಸಾರುಗ
teach ಕಲಿಸು teacher ಕಲಿಸುಗ
speak ಆಡು speaker ಆಡುಗ
pack ಕಟ್ಟು packer ಕಟ್ಟುಗ
advise ಅರಿವೀಯು advisor ಅರಿವೀಯುಗ
solicit ಕೋರು solicitor ಕೋರುಗ
edit ಅಳವಡಿಸು editor ಅಳವಡಿಸುಗ

 

ant/ent ಎಂಬ ಇನ್ನೊಂದು ಒಟ್ಟನ್ನು ಬಳಸಿಯೂ ಇಂಗ್ಲಿಶ್‌ನಲ್ಲಿ ಎಸಕಪದಗಳಿಂದ ಮಂದಿಯನ್ನು ಹೆಸರಿಸುವ ಹೆಸರುಪದಗಳನ್ನು ಪಡೆಯಲಾಗುತ್ತದೆ, ಮತ್ತು ಇಂತಹ ಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನೂ ಕನ್ನಡದಲ್ಲಿ ಎಸಕಪದಗಳಿಗೆ ಗ ಒಟ್ಟನ್ನು ಸೇರಿಸಿ ಪಡೆಯಬಲ್ಲೆವು:

contest ಸೆಣಸು contestant ಸೆಣಸುಗ
hesitate ಹಿಂಜರಿ hesitant ಹಿಂಜರಿಗ
reside ನೆಲಸು resident ನೆಲಸುಗ
relax ನಾಂಬು relaxant ನಾಂಬುಗ
combat ಹೋರು combatant ಹೋರುಗ
accept ಒಪ್ಪು acceptant ಒಪ್ಪುಗ
complain ದೂರು complainant ದೂರುಗ
accuse ತೆಗಳು accusant ತೆಗಳುಗ
observe ಒಮ್ಮು observant ಒಮ್ಮುಗ
tolerate ತಾಳು tolerant ತಾಳುಗ
err ತಪ್ಪು errant ತಪ್ಪುಗ
participate ಪಾಲ್ಗೊಳ್ಳು participant ಪಾಲ್ಗೊಳ್ಳುಗ

 

ee ಎಂಬ ಇನ್ನೊಂದು ಒಟ್ಟನ್ನು ಬಳಸಿಯೂ ಎಸಕಪದಗಳಿಂದ ಮಂದಿಯನ್ನು ಹೆಸರಿಸುವ ಹೆಸರುಪದಗಳನ್ನು ಪಡೆಯಲು ಬರುತ್ತದೆ; ಆದರೆ, ಇಲ್ಲಿ ಒಂದು ತೊಡಕಿದೆ: ಇಂತಹ ಹೆಸರುಪದಗಳನ್ನು ಮುಕ್ಯವಾಗಿ ಎಸಕಕ್ಕೆ ಒಳಗಾದವರನ್ನು, ಎಂದರೆ ಎಸಕದ ಈಡನ್ನು ಹೆಸರಿಸಲು ಬಳಸಲಾಗುತ್ತದೆ.

ಕೆಲವು ಎಸಕಪದಗಳ ಬಳಿಕ er ಮತ್ತು ee ಎಂಬ ಈ ಎರಡು ಒಟ್ಟುಗಳನ್ನೂ ಬಳಸಲು ಬರುತ್ತಿದ್ದು, ಅವುಗಳಿಂದ ಪಡೆದ ಪದಗಳ ನಡುವೆ ಹುರುಳಿನಲ್ಲಿ ವ್ಯತ್ಯಾಸ ಕಾಣಿಸುತ್ತದೆ: er ಎಂಬುದನ್ನು ಬಳಸಿರುವಲ್ಲಿ ಎಸಕದ ಮಾಡುಗರನ್ನು ಹೆಸರಿಸಲಾಗುತ್ತದೆ, ಮತ್ತು ee ಒಟ್ಟನ್ನು ಬಳಸಿರುವಲ್ಲಿ ಎಸಕದ ಈಡನ್ನು ಹೆಸರಿಸಲಾಗುತ್ತದೆ (employer : employee).

ಆದರೆ, ಕನ್ನಡದಲ್ಲಿ ಈ ವ್ಯತ್ಯಾಸವನ್ನು ನೇರವಾಗಿ ಒಟ್ಟುಗಳ ಬಳಕೆಯ ಮೂಲಕ ತಿಳಿಸಲು ಬರುವುದಿಲ್ಲ. ಅದರ ಗ ಒಟ್ಟು ಎಸಕದ ಮಾಡುಗರನ್ನು (ಇಲ್ಲವೇ ಆಗುಗರನ್ನು) ಹೆಸರಿಸಬಲ್ಲುದು; ಆದರೆ, ಅದಕ್ಕಿಂತ ಬೇರಾಗಿರುವ ಈಡನ್ನು ತಿಳಿಸಬಲ್ಲ ಒಟ್ಟು ಕನ್ನಡದಲ್ಲಿಲ್ಲ. ಹಾಗಾಗಿ, ಈ ವ್ಯತ್ಯಾಸವನ್ನು ತಿಳಿಸಬೇಕಾಗಿರುವ ಕಡೆಗಳಲ್ಲಿ (1) ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸುವುದು ಮತ್ತು

(2) ಕೊಡು ಇಲ್ಲವೇ ಪಡೆ ಎಂಬುದನ್ನು ಬಳಸುವುದು ಎಂಬ ಎರಡು ಹಮ್ಮುಗೆಗಳಲ್ಲಿ ಒಂದನ್ನು ಬಳಸಬೇಕಾಗುತ್ತದೆ (ಕೆಲವೆಡೆಗಳಲ್ಲಿ ಕೊಡು ಪದದ ಬದಲು ಬೇರೆ ಎಸಕಪದಗಳನ್ನು ಬಳಸಬೇಕಾಗಿಯೂ ಬರಬಲ್ಲುದು):

ಎಸಕದ ಮಾಡುಗ

ಎಸಕದ ಈಡು

provoker ಕೆರಳಿಸುಗ provokee ಕೆರಳುಗ
transferor ಮಾರೆಡೆಗೊಳಿಸುಗ transferee ಮಾರೆಡೆಗೊಳ್ಳುಗ
trainer ಪಳಗಿಸುಗ trainee ಪಳಗು
payer ಹಣ ಕೊಡುಗ payee ಹಣ ಪಡೆಗ
employer ಕೆಲಸ ಕೊಡುಗ employee ಕೆಲಸ ಪಡೆಗ
briber ಗಿಂಬಳ ಕೊಡುಗ bribee ಗಿಂಬಳ ಪಡೆಗ
examiner ಒರೆತ ಕೊಡುಗ examinee ಒರೆತ ಪಡೆಗ
interviewer ಕಾಣ್ಮೆ ಕೊಡುಗ interviewee ಕಾಣ್ಮೆ ಪಡೆಗ
questioner ಕೇಳ್ವಿ ಕೊಡುಗ questionee ಕೇಳ್ವಿ ಪಡೆಗ
protector ಕಾಪು ಕೊಡುಗ protectee ಕಾಪು ಪಡೆಗ
abuser ಕೊಂಡೆಯಿಕ್ಕುಗ abusee ಕೊಂಡೆ ಪಡೆಗ
adviser ಅರಿವು ಕೊಡುಗ advisee ಅರಿವು ಪಡೆಗ
assessor ಬೆಲೆ ಕಟ್ಟುಗ assessee ಬೆಲೆ ಪಡೆಗ

 

referee ತೀರ‍್ಪು ಕೊಡುಗ ಮತ್ತು trustee ಅಂಕ ಕೊಡುಗ ಎಂಬ ಎರಡು ಪದಗಳಲ್ಲಿ ee ಒಟ್ಟು ಬಂದಿರುವ ಪದಕ್ಕೆ ಕೊಡು ಎಂಬ ಹುರುಳು ಸಿಗುತ್ತದೆ; ಇದಲ್ಲದೆ, ಬೇರೆ ಕೆಲವು ಪದಜೋಡಿಗಳಲ್ಲಿ er ಬಂದಿರುವಲ್ಲಿ ಮಾಡು ಎಂಬುದನ್ನು ಮತ್ತು ee ಬಂದಿರುವಲ್ಲಿ ನೇರವಾಗಿ ಗೆ ಒಟ್ಟನ್ನು ಬಳಸಬೇಕಾಗುತ್ತದೆ:

rescuer ಪಾರುಮಾಡುಗ rescuee ಪಾರುಗ
addresser ಒಕ್ಕಣೆ ಮಾಡುಗ addressee ಒಕ್ಕಣೆಗ

 

er ಒಟ್ಟನ್ನು ಬಳಸಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಉಂಟುಮಾಡುವಲ್ಲಿ ಬೇರೆಯೂ ಕೆಲವು ತೊಡಕುಗಳಿವೆ:
(ಕ) ಇಂಗ್ಲಿಶ್‌ನ ಕೆಲವು ಎಸಕಪದಗಳಿಗೆ ಸಾಟಿಯಾಗುವಂತಹ ಎಸಕಪದಗಳು ಕನ್ನಡದಲ್ಲಿರುವುದಿಲ್ಲ; ಹಾಗಾಗಿ, ಅಂತಹ ಕಡೆಗಳಲ್ಲಿ ಕೂಡುಪದಗಳನ್ನು ಬಳಸಬೇಕಾಗುತ್ತದೆ; ಹೀಗೆ ಬಳಸಿರುವಲ್ಲಿ ಎಸಕವನ್ನು ನಡೆಸುವ ಮಂದಿಯನ್ನು ಹೆಸರಿಸಲು ಬೇಕಾಗುವ ಹೆಸರುಪದಗಳನ್ನು ಕೂಡುಪದಗಳಲ್ಲಿ ಬಂದಿರುವ ಹೆಸರುಪದಗಳಿಗೆ ನೇರವಾಗಿ ಗ (ಇಲ್ಲವೇ ಗಾರ) ಒಟ್ಟನ್ನು ಸೇರಿಸಿ ಪಡೆಯಲು ಬರುತ್ತದೆ (ಕನ್ನಡದಲ್ಲಿ ಹೆಸರುಪದಗಳ ಬಳಿಕ ಮಂದಿಯನ್ನು ಹೆಸರಿಸಲು ಗ ಒಟ್ಟಿನ ಹಾಗೆ ಗಾರ ಒಟ್ಟನ್ನೂ ಬಳಸಲಾಗುತ್ತದೆ):

loot ಕೊಳ್ಳೆಹೊಡೆ looter ಕೊಳ್ಳೆಗಾರ
print ಅಚ್ಚುಹಾಕು printer ಅಚ್ಚುಗಾರ
hunt ಬೇಟೆಯಾಡು hunter ಬೇಟೆಗಾರ
jest ಗೇಲಿಮಾಡು jester ಗೇಲಿಗಾರ
labour ಕೂಲಿಮಾಡು labourer ಕೂಲಿಗಾರ
speak ಮಾತನಾಡು speaker ಮಾತುಗಾರ
lodge ಬೀಡುಗೊಳ್ಳು lodger ಬೀಡುಗ
help ನೆರವಾಗು helper ನೆರವುಗ
legislate ಕಟ್ಟಲೆಕಟ್ಟು legislator ಕಟ್ಟಲೆಗ

 

ಆದರೆ, ಬೇರೆ ಕೆಲವು ಕಡೆಗಳಲ್ಲಿ ಕೂಡುಪದಗಳನ್ನು ಹಾಗೆಯೇ ಉಳಿಸಿ, ಅವಕ್ಕೆ ಗ ಒಟ್ಟನ್ನು ಸೇರಿಸಲಾಗಿದೆ:

page ಕರೆಕೂಗು pager ಕರೆಕೂಗುಗ
publish ಹೊರತರು publisher ಹೊರತರುಗ
translate ನುಡಿಮಾರು translator ನುಡಿಮಾರುಗ
prompt ಎತ್ತಿಕೊಡು prompter ಎತ್ತಿಕೊಡುಗ
advise ಅರಿವೀಯು advisor ಅರಿವೀಯುಗ

 

ಇಂಗ್ಲಿಶ್‌ನಲ್ಲಿಯೂ ಕೆಲವೆಡೆಗಳಲ್ಲಿ ಕನ್ನಡದ ಕೂಡುಪದಗಳಲ್ಲಿ ಕಾಣಿಸುವ ಹಾಗೆ ಹೆಸರುಪದ ಮತ್ತು ಎಸಕಪದಗಳೆರಡನ್ನೂ ಒಟ್ಟಾಗಿ ಬಳಸಲಾಗಿದ್ದು, ಅವಕ್ಕೆ er ಒಟ್ಟನ್ನು ಸೇರಿಸಿ ಹೊಸ ಹೆಸರುಪದಗಳನ್ನು ಉಂಟುಮಾಡಲಾಗಿದೆ. ಆದರೆ, ಇವು ಕನ್ನಡದ ಕೂಡುಪದಗಳ ಹಾಗೆ ಎಸಕಪದಗಳಾಗಿ ಬಳಕೆಯಾಗುವುದಿಲ್ಲ (fruit seller ಎಂಬ ಹೆಸರುಪದ ಇದೆ, ಆದರೆ fruit sell ಎಂಬ ಎಸಕಪದ ಇಲ್ಲ); ಇಂತಹ ಕಡೆಗಳಲ್ಲೂ ಕನ್ನಡದಲ್ಲಿ ಗ/ಇಗ ಒಟ್ಟನ್ನು ನೇರವಾಗಿ ಹೆಸರುಪದದೊಂದಿಗೆ ಬಳಸಲು ಬರುತ್ತದೆ:

fruit seller ಪಣ್ಣಿಗ
grain dealer ಕಾಳುಗ
root seller ಬೇರುಗ

 

ಬೇರೆ ಕೆಲವೆಡೆಗಳಲ್ಲಿ ಎಸಕಪದಗಳಿಗೆ ನೇರವಾಗಿ ಗ ಒಟ್ಟನ್ನು ಸೇರಿಸಿ ಮಂದಿಯನ್ನು ಹೆಸರಿಸುವ ಪದಗಳನ್ನು ಪಡೆಯುವ ಬದಲು ಅವುಗಳಿಂದ ಪಡೆದ ಹೆಸರುಪದಗಳಿಗೆ ಗಾರ ಒಟ್ಟನ್ನು ಸೇರಿಸಿ ಪಡೆಯಲಾಗಿದೆ (ಗಾರ ಒಟ್ಟನ್ನು ನೇರವಾಗಿ ಎಸಕಪದಗಳಿಗೆ ಸೇರಿಸಲು ಬಾರದಿರುವುದು ಇದಕ್ಕೆ ಕಾರಣವಿರಬಹುದು):

kill ಕೊಲ್ಲು killer ಕೊಲೆಗಾರ
run ಓಡು runner ಓಟಗಾರ
reap ಕೊಯ್ಯು reaper ಕೊಯಿಲುಗಾರ
write ಬರೆ writer ಬರಹಗಾರ
mine ಅಗೆ miner ಅಗೆತಗಾರ

 

ಹೊಸಪದಗಳನ್ನು ಕಟ್ಟುವಲ್ಲಿ ಈ ಮೂರು ಬಗೆಯ ಹಮ್ಮುಗೆಗಳನ್ನೂ ಬಳಸಿಕೊಳ್ಳಲು ಬರುತ್ತದೆ.

ಇದಲ್ಲದೆ, ಹೆಸರುಪದಗಳನ್ನು ಕಟ್ಟುವಲ್ಲಿ ಗ ಮತ್ತು ಗಾರ ಎಂಬ ಎರಡು ಒಟ್ಟುಗಳನ್ನೂ ಬಳಸಲು ಬರುತ್ತದೆ ಎಂಬ ಈ ಆಯ್ಕೆಯನ್ನು ಬಳಸಿ, ಬೇಕಿರುವಲ್ಲಿ ಒಂದು ಬಗೆಯ ಹುರುಳಿನ ವ್ಯತ್ಯಾಸವನ್ನೂ ಪಡೆಯಲು ಬರುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು:
ಗ ಎಂಬುದನ್ನು ಬಳಸಿರುವಲ್ಲಿ ಎಸಕಪದ ತಿಳಿಸುವ ಎಸಕವನ್ನು ನಡೆಸುವವನು ಎಂಬುದನ್ನಶ್ಟೇ ತಿಳಿಸಲಾಗುತ್ತಿದೆ; ಆದರೆ, ಗಾರ ಎಂಬುದನ್ನು ಬಳಸಿರುವಲ್ಲಿ ಹಾಗೆ ನಡೆಸುವುದನ್ನು ಒಂದು ಪಳಗಿಕೆ ಇಲ್ಲವೇ ಬಾಳಿಕೆಯಾಗಿ ಮಾಡಿಕೊಂಡಿರುವವನು ಎಂಬ ಹೆಚ್ಚಿನ ಹುರುಳನ್ನು ತಿಳಿಸಲಾಗುತ್ತದೆ (ಓಡುಗ : ಓಟಗಾರ, ಓದುಗ : ಓದುಗಾರ, ಬರೆಗ : ಬರಹಗಾರ).

(ಚ) ಕೆಲವು ಬಗೆಯ ಎಸಕಗಳನ್ನು ಮಂದಿಯಲ್ಲದ ಪಾಂಗುಗಳೂ ನಡೆಸಬಲ್ಲುವು, ಮತ್ತು ಇಂತಹ ಕಡೆಗಳಲ್ಲೂ ಇಂಗ್ಲಿಶ್‌ನಲ್ಲಿ er/or ಮತ್ತು ant/ent ಒಟ್ಟುಗಳನ್ನು ಬಳಸಿ ಎಸಕಪದಗಳಿಂದ ಹೆಸರುಪದಗಳನ್ನು ಪಡೆಯಲಾಗಿದೆ; ಕನ್ನಡದಲ್ಲಿ ಇವುಗಳಿಗೆ ಸಾಟಿಯಾಗುವ ಪದಗಳನ್ನು ಪಡೆಯುವಲ್ಲಿ ಕ ಎಂಬ ಬೇರೆಯೇ ಒಟ್ಟನ್ನು ಬಳಸಲು ಬರುತ್ತದೆ:

peel ಸುಲಿ peeler ಸುಲಿಕ
propel ತಳ್ಳು propeller ತಳ್ಳುಕ
painkiller ನೋವಳಿಕ
compute ಎಣ್ಣು computer ಎಣ್ಣುಕ
accelerate ಉರುಹೆಚ್ಚಿಸು accelerator ಉರುಹೆಚ್ಚುಕ
accumulate ನೆರಸು accumulator ಮಿಂಚುನರಕ
radiate ಬೀರು radiator ಬಿಸಿಬೀರುಕ

 

ಇಂತಹ ಹೆಸರುಪದಗಳನ್ನು ಉಂಟುಮಾಡುವಲ್ಲಿ er/or ಒಟ್ಟಿಗಿಂತಲೂ ant/ent ಒಟ್ಟನ್ನು ಇಂಗ್ಲಿಶ್‌ನಲ್ಲಿ ಹೆಚ್ಚು ಬಳಸಲಾಗುತ್ತದೆ; ಉಸಿರಿಯರಿಮೆ (biology), ಪುರುಳರಿಮೆ (physics), ಮತ್ತು ಇರ‍್ಪರಿಮೆ(chemistry)ಗಳಿಗೆ ಬೇಕಾಗುವ ಹಲವು ಅರಿಮೆಯ ಪದಗಳನ್ನು ಉಂಟುಮಾಡುವಲ್ಲಿ ಈ ಒಟ್ಟನ್ನು ಬಳಸಲಾಗಿದೆ. ಇಂತಹ ಹೆಸರುಪದಗಳಿಗೆ ಸಾಟಿಯಾಗುವ ಹೆಸರುಪದಗಳನ್ನು ಕನ್ನಡದಲ್ಲಿ ಹೊಸದಾಗಿ ಉಂಟುಮಾಡಲು ಕ ಒಟ್ಟನ್ನೇ ಬಳಸಲು ಬರುತ್ತದೆ:

absorb ಹೀರು absorbent ಹೀರುಕ
cool ತಣಿಸು coolant ತಣಿಸುಕ
color ಹೊಗರಿಸು colorant ಹೊಗರಿಸುಕ
seal ಮುಚ್ಚು sealant ಮುಚ್ಚುಕ
repel ಹಿಮ್ಮೆಟ್ಟಿಸು repellent ಹಿಮ್ಮೆಟ್ಟಿಸುಕ
depress ಕೊರಗು antidepressant ಕೊರಗಳಿಕ
coagulate ಹೆಪ್ಪುಗಟ್ಟು anticoagulant ಹೆಪ್ಪಳಿಕ
detoxicate ನಂಜಳಿಸು detoxicant ನಂಜಳಿಕ

 

(ಈ ಪಸುಗೆ ಇಂಗ್ಲಿಶ್ ಪದಗಳಿಗೆ…-5ರಲ್ಲಿ ಮುಂದುವರಿಯುತ್ತದೆ)

<< ಬಾಗ-3

facebooktwitter

Comments are closed.