Posts Tagged ‘ಹೆಸರುಪದಗಳು’

ಪರಿಚೆಪದಗಳಿಂದ ಪಡೆದ ಹೆಸರುಪದಗಳು


ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-೩

ಇಂಗ್ಲಿಶ್‌ನಲ್ಲಿ ಮುಕ್ಯವಾಗಿ ness ಮತ್ತು ity ಎಂಬ ಎರಡು ಹಿನ್ನೊಟ್ಟುಗಳನ್ನು ಬಳಸಿ ಪರಿಚೆಪದಗಳಿಂದ ಹೆಸರುಪದಗಳನ್ನು ಪಡೆಯಲಾಗುತ್ತದೆ, ಮತ್ತು ಇವು ಪರಿಚೆಪದಗಳು ತಿಳಿಸುವ ಪರಿಚೆಗಳನ್ನು ಹೆಸರಿಸಲು ಬಳಕೆಯಾಗುತ್ತವೆ:

pada_sarani_3_pic1
ಇದಕ್ಕೆ ಬದಲು, ness ಎಂಬುದು ಎಲ್ಲಾ ಬಗೆಯ ಪರಿಚೆಪದಗಳೊಂದಿಗೂ ಬರಬಲ್ಲುದಾಗಿದ್ದು, ಪರಿಚೆಯನ್ನು ಹೆಸರಿಸುವುದೇ ಅದರ ಮುಕ್ಯ ಕೆಲಸವಾಗಿದೆ. ಇದಲ್ಲದೆ, ಪರಿಚೆಪದ ತಿಳಿಸುವ ಪರಿಚೆಯನ್ನು ಅದು ಹೆಚ್ಚು ನೇರವಾಗಿ ತಿಳಿಸಬಲ್ಲುದು. ity ಎಂಬುದು ಮುಕ್ಯವಾಗಿ ಲ್ಯಾಟಿನ್‌ನಿಂದ ಎರವಲಾಗಿ ಪಡೆದ ಪರಿಚೆಪದಗಳ ಬಳಿಕ, ಅದರಲ್ಲೂ able, al ಮತ್ತು ar ಎಂಬವುಗಳಲ್ಲಿ ಕೊನೆಗೊಳ್ಳುವವುಗಳ ಬಳಿಕ ಬರುತ್ತದೆ. ಹೆಚ್ಚಿನೆಡೆಗಳಲ್ಲೂ ಈ ಒಟ್ಟಿನಿಂದ ಪಡೆದ ಹೆಸರುಪದಗಳು ಪರಿಚೆಪದ ತಿಳಿಸುವ ಪರಿಚೆಯನ್ನು ಹೆಸರಿಸುವ ಕೆಲಸವನ್ನಶ್ಟೇ ನಡೆಸುತ್ತವೆ; ಆದರೆ, ಹಲವು ಪದಗಳಲ್ಲಿ ಅವಕ್ಕೆ ಬೇರೆಯೇ ಹುರುಳು ಬಂದಿದೆ.

ಈ ಎರಡು ಒಟ್ಟುಗಳಿರುವ ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಕನ್ನಡದ ಪರಿಚೆಪದಗಳಿಗೆ ತನ ಎಂಬ ಒಟ್ಟನ್ನು ಸೇರಿಸುವ ಒಂದು ಹಮ್ಮುಗೆಯನ್ನು ಬಳಸಿದರೆ ಸಾಕು; ಆದರೆ ಬೇರೊಂದು ಕಾರಣಕ್ಕಾಗಿ, ಕನ್ನಡದಲ್ಲೂ ಎರಡು ಬಗೆಯ ಹಮ್ಮುಗೆಗಳನ್ನು ಬಳಸಬೇಕಾಗುತ್ತದೆ:

ಇಂಗ್ಲಿಶ್ ಪರಿಚೆಪದಗಳು ತಿಳಿಸುವ ಪರಿಚೆಯನ್ನು ಕನ್ನಡದಲ್ಲಿ ಪರಿಚೆಪದಗಳೇ ತಿಳಿಸುತ್ತಿರಬಲ್ಲುವು, ಇಲ್ಲವೇ ಹೆಸರುಪದಗಳೂ ತಿಳಿಸುತ್ತಿರಬಲ್ಲುವು. ಎತ್ತುಗೆಗಾಗಿ, ಇಂಗ್ಲಿಶ್‌ನ good, novel, nice ಎಂಬಂತಹ ಪರಿಚೆಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಒಳ್ಳೆ, ಹೊಸ, ಚೊಕ್ಕ ಎಂಬಂತಹ ಪರಿಚೆಪದಗಳಿವೆ; ಆದರೆ, ಇಂಗ್ಲಿಶ್‌ನ happy, regular, similar ಎಂಬಂತಹ ಪರಿಚೆಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಪರಿಚೆಪದಗಳಿಲ್ಲ; ಇದಕ್ಕೆ ಬದಲು, ಅವು ತಿಳಿಸುವ ಪರಿಚೆಯನ್ನು ಹೆಸರಿಸುವಂತಹ ಸೊಮ್ಮು, ಓಜೆ, ಹೋಲಿಕೆ ಎಂಬಂತಹ ಹೆಸರುಪದಗಳು ಬಳಕೆಯಲ್ಲಿವೆ.

ಹಾಗಾಗಿ, ಕೆಳಗೆ ವಿವರಿಸಿದ ಹಾಗೆ, ಇಂಗ್ಲಿಶ್ ಪರಿಚೆಪದಗಳಿಗೆ ಸಾಟಿಯಾಗಬಲ್ಲ ಪದಗಳು ಕನ್ನಡದಲ್ಲಿ ಇವೆಯೋ ಇಲ್ಲವೋ ಎಂಬುದರ ಮೇಲೆ ಹೊಸಪದಗಳನ್ನು ಕಟ್ಟುವಲ್ಲಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಬೇಕಾಗುತ್ತದೆ:

(ಕ) ಇಂಗ್ಲಿಶ್‌ನ ಪರಿಚೆಪದಗಳಿಗೆ ಸಾಟಿಯಾಗುವ ಪರಿಚೆಪದಗಳು ಕನ್ನಡದಲ್ಲಿ ಇವೆಯಾದರೆ, ಅವಕ್ಕೆ ತನ ಒಟ್ಟನ್ನು ಸೇರಿಸಿ ಇಂಗ್ಲಿಶ್‌ನ ness ಇಲ್ಲವೇ ity ಒಟ್ಟುಗಳಿರುವ ಪದಗಳಿಗೆ ಸಾಟಿಯಾಗಿರುವಂತಹ ಪದಗಳನ್ನು ಪಡೆಯಲು ಬರುತ್ತದೆ:

pada_sarani_3_pic2

(ಚ) ಇಂಗ್ಲಿಶ್‌ನ ಪರಿಚೆಪದಗಳು ತಿಳಿಸುವ ಪರಿಚೆಯನ್ನು ಹೆಸರಿಸುವಂತಹ ಹೆಸರುಪದಗಳೇ ಕನ್ನಡದಲ್ಲಿವೆಯಾದರೆ, ಅವನ್ನೇ ಇಂಗ್ಲಿಶ್‌ನ ness ಇಲ್ಲವೇ ity ಒಟ್ಟುಗಳಿರುವ ಪದಗಳಿಗೆ ಸಾಟಿಯಾಗುವಂತೆ ಬಳಸಬಹುದು, ಮತ್ತು ಒಟ್ಟುಗಳಿಲ್ಲದ ಇಂಗ್ಲಿಶ್ ಪರಿಚೆಪದಗಳಿಗೆ ಸಾಟಿಯಾಗುವಂತೆ ಈ ಹೆಸರುಪದಗಳಿಗೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪದರೂಪಗಳನ್ನು ಉಂಟುಮಾಡಿಕೊಳ್ಳಬಹುದು; ಎಂದರೆ, ಇಂತಹ ಕಡೆಗಳಲ್ಲಿ ness ಇಲ್ಲವೇ ity ಒಟ್ಟುಗಳಿರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದಲ್ಲಿ ಒಟ್ಟುಗಳಿಲ್ಲದ ಪದಗಳನ್ನು ಬಳಸಬೇಕಾಗುತ್ತದೆ, ಮತ್ತು ಒಟ್ಟುಗಳಿಲ್ಲದ ಪದಗಳಿಗೆ ಬದಲಾಗಿ ಒಟ್ಟುಗಳಿರುವ ಪದಗಳನ್ನು ಬಳಸಬೇಕಾಗುತ್ತದೆ:

pada_sarani_3_pic3

ಕೆಲವು ಕಡೆಗಳಲ್ಲಿ ಇಂಗ್ಲಿಶ್ ಪರಿಚೆಪದಗಳಿಗೆ ಮತ್ತು ಅವುಗಳಿಗೆ ಒಟ್ಟುಗಳನ್ನು ಸೇರಿಸಿ ಪಡೆದ ಹೆಸರುಪದಗಳಿಗೆ ಬೇರೆ ಬೇರೆ ಪದಗಳು ಕನ್ನಡದಲ್ಲಿರುವುದನ್ನು ಕಾಣಬಹುದು; ಇಂತಹ ಕಡೆಗಳಲ್ಲಿ ಪರಿಚೆಪದಗಳಿಗೆ ತನ್ನ ಒಟ್ಟನ್ನು ಸೇರಿಸಿ ಹೆಸರುಪದಗಳನ್ನು ಮತ್ತು ಹೆಸರುಪದಗಳಿಗೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪರಿಚೆಪದರೂಪಗಳನ್ನು ಬೇರೆ ಬೇರಾಗಿ ಪಡೆಯಲು ಬರುತ್ತದೆ:

pada_sarani_3_pic4

ಇಂಗ್ಲಿಶ್‌ನ ness ಇಲ್ಲವೇ ity ಒಟ್ಟುಗಳಿರುವ ಪದಗಳಿಗೆ ಸಾಟಿಯಾದ ಕನ್ನಡ ಪದಗಳಲ್ಲಿ ಬೇರೆಯೂ ಕೆಲವು ಒಟ್ಟುಗಳು ಬಳಕೆಯಾಗಿರುವುದನ್ನು ಕಾಣಬಹುದು:

pada_sarani_3_pic5

ಮೇಲಿನ ಕನ್ನಡ ಪದಗಳಲ್ಲಿ ಪು ಮತ್ತು ಮೆ ಎಂಬ ಒಟ್ಟುಗಳು ಇಂಗ್ಲಿಶ್‌ನ ness ಮತ್ತು ity ಒಟ್ಟುಗಳಿಗೆ ಬದಲಾಗಿ ಬಳಕೆಯಾಗಿವೆ. ಆದರೆ, ಇವು ತನ ಒಟ್ಟಿನಶ್ಟು ಹರವಿನವಲ್ಲ; ಹಾಗಾಗಿ, ಇಂಗ್ಲಿಶ್ ಪದಗಳಿಗೆ ಸಾಟಿಯಾಗುವ ಹೊಸ ಪದಗಳನ್ನು ಉಂಟುಮಾಡುವಲ್ಲಿ ಇವನ್ನು ಬಳಸಹೋಗುವ ಬದಲು ಉದ್ದಕ್ಕೂ ತನ ಎ೦ಬುದನ್ನೇ ಬಳಸುವುದು ಒಳ್ಳೆಯದು.
ಇಂಗ್ಲಿಶ್‌ನಲ್ಲಿಯೂ ness ಮತ್ತು ity ಎಂಬ ಹಿನ್ನೊಟ್ಟುಗಳನ್ನು ಮಾತ್ರವಲ್ಲದೆ cy/ce, ance/ence, ism ಎಂಬಂತಹ ಬೇರೆಯೂ ಕೆಲವು ಹಿನ್ನೊಟ್ಟುಗಳನ್ನು ಪರಿಚೆಪದಗಳಿಂದ ಹೆಸರುಪದಗಳನ್ನು ಪಡೆಯುವಲ್ಲಿ ಬಳಸಲಾಗುತ್ತದೆ (adequacy, convergence, importance, idealism), ಮತ್ತು ಕನ್ನಡದ ಪು, ಹು ಮತ್ತು ಮೆ ಒಟ್ಟುಗಳ ಹಾಗೆ ಅವುಗಳಿಗೆ ಹೆಚ್ಚಿನ ಹರವಿಲ್ಲ.

ಈ ಹೆಚ್ಚಿನ ಒಟ್ಟುಗಳು ಬಂದಿರುವಲ್ಲೂ (ಕ) ಇಂಗ್ಲಿಶ್ ಪರಿಚೆಪದಗಳಿಗೆ ಸಾಟಿಯಾಗಬಲ್ಲ ಪರಿಚೆಪದಗಳು ಕನ್ನಡದಲ್ಲಿದ್ದರೆ, ಅವಕ್ಕೆ ತನ ಒಟ್ಟನ್ನು ಸೇರಿಸಿ ಹೊಸ ಹೆಸರುಪದಗಳನ್ನು ಪಡೆಯಬಹುದು, ಮತ್ತು (ಚ) ಇಂಗ್ಲಿಶ್‌ನ ಹೆಸರುಪದಗಳಿಗೆ ಸಾಟಿಯಾಗಬಲ್ಲ ಹೆಸರುಪದಗಳಿದ್ದರೆ, ಅವಕ್ಕೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪರಿಚೆರೂಪಗಳನ್ನು ಪಡೆಯಬಹುದು:

pada_sarani_3_pic6

ತಿರುಳು:
ಇಂಗ್ಲಿಶ್ ಪರಿಚೆಪದ(adjective)ಗಳಿಂದ ಹೆಸರುಪದ(noun)ಗಳನ್ನು ಪಡೆಯಲು ಮುಕ್ಯವಾಗಿ ity ಮತ್ತು ness ಎಂಬ ಎರಡು ಒಟ್ಟುಗಳನ್ನು ಬಳಸಲಾಗುತ್ತದೆ; ಈ ಒಟ್ಟುಗಳಿರುವ ಹೆಸರುಪದಗಳಿಗೆ ಸಾಟಿಯಾಗಬಲ್ಲ ಹೊಸ ಪದಗಳನ್ನು ಕನ್ನಡದಲ್ಲಿ ಕಟ್ಟಲು ತನ ಎಂಬ ಒಟ್ಟನ್ನು ಬಳಸಲು ಬರುತ್ತದೆ.

ಆದರೆ, ಕೆಲವೆಡೆಗಳಲ್ಲಿ ಇಂಗ್ಲಿಶ್ ಪರಿಚೆಪದಗಳಿಗೆ ಸಾಟಿಯಾಗಬಲ್ಲ ಪರಿಚೆಪದಗಳು ಕನ್ನಡದಲ್ಲಿ ಸಿಗುವುದಿಲ್ಲ; ಇದಕ್ಕೆ ಬದಲು, ಪರಿಚೆಯನ್ನು ಹೆಸರಿಸುವ ಮತ್ತು ity ಇಲ್ಲವೇ ness ಒಟ್ಟುಗಳಿರುವ ಪದಗಳಿಗೆ ಸಾಟಿಯಾಗಬಲ್ಲ ಹೆಸರುಪದಗಳು ಕನ್ನಡದಲ್ಲಿ ಇರುತ್ತವೆ, ಇಲ್ಲವೇ ಅಂತಹವನ್ನು ಹೊಸದಾಗಿ (ಮುಕ್ಯವಾಗಿ ಎಸಕಪದ(verb)ಗಳಿಂದ) ಕಟ್ಟಲು ಬರುತ್ತದೆ; ಇಂತಹ ಕಡೆಗಳಲ್ಲಿ ಹೀಗೆ ಕಟ್ಟಿದ ಹೆಸರುಪದಗಳಿಗೆ ಪತ್ತುಗೆಯ ಅ ಒಟ್ಟನ್ನು ಸೇರಿಸಿ ಪರಿಚೆರೂಪಗಳನ್ನು ಪಡೆಯಬಹುದು.

(ಇಂಗ್ಲಿಶ್ ನುಡಿಯ ಹಿನ್ನೊಟ್ಟುಗಳು ಎಂಬ ಈ ಪಸುಗೆ ಇಂಗ್ಲಿಶ್ ಪದಗಳಿಗೆ…-೪ರಲ್ಲಿ ಮುಂದುವರಿಯುತ್ತದೆ)

<< ಬಾಗ-2

facebooktwitter

ಇಂಗ್ಲಿಶ್ ನುಡಿಯ ಹಿನ್ನೊಟ್ಟುಗಳು


ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವ ಬಗೆ-2:

kannadadalle

ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ ಎಂಬ ನನ್ನ ಈ ಕಡತದಲ್ಲಿ ಎರಡು ತುಂಡು(part)ಗಳಿವೆ; ಇವುಗಳಲ್ಲಿ ಮೊದಲನೆಯ ತುಂಡು ಕನ್ನಡದಲ್ಲಿ ಹೊಸಪದಗಳನ್ನು ಕಟ್ಟಲು ಎಂತಹ ಹಮ್ಮುಗೆ(method)ಗಳನ್ನು ಬಳಸಲಾಗುತ್ತದೆ, ಮತ್ತು ಈ ಬಳಕೆಯಲ್ಲಿ ಕನ್ನಡದ ಒಲವೇನು ಎಂಬುದನ್ನು ವಿವರಿಸಲಾಗಿದೆ.

ಎರಡನೆಯ ತುಂಡಿನಲ್ಲಿ ಬೇರೆ ಬೇರೆ ಬಗೆಯ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ. ಈ ಎರಡನೆಯ ತುಂಡಿನ ಕೆಲವು ಪಸುಗೆ(chapter)ಗಳನ್ನು ಇಲ್ಲಿ ಕೊಡಲಾಗಿದೆ. ಇವುಗಳಲ್ಲಿ ಮುಕ್ಯವಾಗಿ ಕೆಳಗೆ ಕೊಟ್ಟಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ:

(1) ಹಿನ್ನೊಟ್ಟು(suffix)ಗಳನ್ನು ಬಳಸಿ ಪಡೆದಿರುವ ಪದಗಳು
(2) ಮುನ್ನೊಟ್ಟು(prefix)ಗಳನ್ನು ಬಳಸಿ ಪಡೆದಿರುವ ಪದಗಳು
(3) ಎರಡು ಪದಗಳನ್ನು ಒಟ್ಟುಸೇರಿಸಿ ಪಡೆದಿರುವ ಜೋಡುಪದ(compound)ಗಳು
(4) ಈ ಮೂರು ಬಗೆಯ ಹಮ್ಮುಗೆಗಳನ್ನೂ ಬಳಸದಿರುವ ಉಳಿದ ಪದಗಳು

ಕಡತದಲ್ಲಿ ಈ ತಿಳುವಳಿಕೆಯನ್ನು ಕೊಡುವುದರೊಂದಿಗೆ ಹೊಸಪದಗಳನ್ನು ಕಟ್ಟುವಲ್ಲಿ ಪಳಗಿಕೆ(training)ಯನ್ನು ಪಡೆಯಬೇಕೆಂದಿರುವವರಿಗೆ ನೆರವಾಗುವಂತೆ ಕೆಲವು ಎತ್ತುಗೆಗಳನ್ನೂ ಕೊಡಲಾಗಿದೆ; ಆದರೆ, ಅವನ್ನಿಲ್ಲಿ ಕೊಟ್ಟಿಲ್ಲ.

ಇಂಗ್ಲಿಶ್ ನುಡಿಯ ಹಿನ್ನೊಟ್ಟುಗಳು:

ಇಂಗ್ಲಿಶ್ ಪದಗಳಲ್ಲಿ ಹಿನ್ನೊಟ್ಟು(suffix)ಗಳನ್ನು ಮುಕ್ಯವಾಗಿ ಒಂದು ಪದಗುಂಪಿನಲ್ಲಿರುವ ಪದಗಳನ್ನು ಇನ್ನೊಂದು ಪದಗುಂಪಿಗೆ ಮಾರೆಡೆಗೊಳಿಸುವುದಕ್ಕಾಗಿ ಬಳಸಲಾಗುತ್ತದೆ. ಎತ್ತುಗೆಗಾಗಿ, -able ಎಂಬ ಹಿನ್ನೊಟ್ಟನ್ನು ಎಸಕಪದಗಳಿಗೆ ಸೇರಿಸಿ ಅವನ್ನು ಪರಿಚೆಪದಗಳನ್ನಾಗಿ ಮಾರ್‍ಪಡಿಸಲಾಗುತ್ತದೆ:

ಎಸಕಪದಗಳು    ಪರಿಚೆಪದಗಳು
read               readable
like                 likeable
work              workable

ಇದೇ ರೀತಿಯಲ್ಲಿ, ಎಸಕಪದಗಳನ್ನು ಹೆಸರುಪದಗಳಾಗಿ ಮಾಡಲು, ಪರಿಚೆಪದಗಳನ್ನು ಹೆಸರುಪದಗಳಾಗಿ ಮಾಡಲು, ಹೆಸರುಪದಗಳನ್ನು ಎಸಕಪದಗಳಾಗಿ ಮಾಡಲು, ಮತ್ತು ಪರಿಚೆಪದಗಳನ್ನು ಎಸಕಪದಗಳಾಗಿ ಮಾಡಲು ಬೇರೆ ಬೇರೆ ಬಗೆಯ ಹಿನ್ನೊಟ್ಟುಗಳನ್ನು ಬಳಸಲಾಗುತ್ತದೆ.

ಇಂತಹ ಮಾರ್‍ಪಾಡುಗಳನ್ನು ನಡೆಸುವಲ್ಲಿ ಒಂದೊಂದು ಮಾರ್‍ಪಾಡಿಗೂ ಒಂದಕ್ಕಿಂತ ಹೆಚ್ಚು ಹಿನ್ನೊಟ್ಟುಗಳು ಬಳಕೆಯಾಗುತ್ತಿದ್ದು, ಅವುಗಳಲ್ಲಿ ಕೆಲವು ಹೆಚ್ಚುಕಡಿಮೆ ಒಂದೇ ಬಗೆಯ ಹುರುಳನ್ನು ಕೊಡುತ್ತವೆ. ಎತ್ತುಗೆಗಾಗಿ, er ಮತ್ತು or ಎಂಬ ಎರಡು ಹಿನ್ನೊಟ್ಟುಗಳೂ ಎಸಕಪದಗಳಿಂದ ಹೆಸರುಪದಗಳನ್ನು ಪಡೆಯುವುದಕ್ಕಾಗಿ ಬಳಕೆಯಾಗುತ್ತವೆ, ಮತ್ತು ಈ ಎರಡು ಬಗೆಯ ಹೆಸರುಪದಗಳೂ ಮುಕ್ಯವಾಗಿ ಎಸಕವನ್ನು ನಡೆಸುವ ಮಂದಿಯನ್ನು ಗುರುತಿಸುವಂತಹ ಹುರುಳನ್ನು ಕೊಡುತ್ತವೆ (sing > singer, sail > sailor). ಪರಿಚೆಪದಗಳಲ್ಲೇನೇ ಹೆಸರುಪರಿಚೆ(adjective)ಗಳನ್ನು ಎಸಕಪರಿಚೆ(adverb)ಗಳಾಗಿ ಮಾರ್‍ಪಡಿಸುವುದಕ್ಕೂ ly ಎಂಬ ಹಿನ್ನೊಟ್ಟಿನ ಬಳಕೆಯಾಗುತ್ತದೆ (harsh>harshly, sweet>sweetly).

ಇದಲ್ಲದೆ, ಕೆಲವು ಹಿನ್ನೊಟ್ಟುಗಳನ್ನು ಬೇರೆ ಬೇರೆ ಪದಗುಂಪಿನ ಪದಗಳು ಒಂದೇ ಪದಗುಂಪಿನಡಿಯಲ್ಲಿ ಬರುವಂತೆ ಮಾಡುವುದಕ್ಕಾಗಿಯೂ ಬಳಸಲಾಗುತ್ತದೆ. ಎತ್ತುಗೆಗಾಗಿ, ize ಹಿನ್ನೊಟ್ಟನ್ನು ಬಳಸಿ ಪರಿಚೆಪದಗಳು ಮತ್ತು ಹೆಸರುಪದಗಳು ಎಸಕಪದಗಳ ಗುಂಪಿನಡಿಯಲ್ಲಿ ಬರುವಂತೆ ಮಾಡಲಾಗುತ್ತದೆ (legal>legalize, author>authorize). ಈ ರೀತಿ, ಇಂಗ್ಲಿಶ್ನ ಒಂದು ಹಿನ್ನೊಟ್ಟು ಒಂದಕ್ಕಿಂತ ಹೆಚ್ಚು ಗುಂಪುಗಳ ಪದಗಳೊಂದಿಗೆ ಬರಬಲ್ಲುದಾದರೂ ಅದರ ಬಳಕೆಯಿಂದ ದೊರಕುವ ಪದಗಳೆಲ್ಲ ಒಂದೇ ಗುಂಪಿಗೆ ಸೇರಿದವುಗಳಾಗಿರುತ್ತವೆ.

ಕೆಲವು ಹಿನ್ನೊಟ್ಟುಗಳಿಗೆ ಪದಗಳ ಹುರುಳನ್ನು ತುಸುಮಟ್ಟಿಗೆ ಮಾರ್‍ಪಡಿಸುವ ಅಳವೂ ಇರುತ್ತದೆ. ಎತ್ತುಗೆಗಾಗಿ, -able ಎಂಬ ಹಿನ್ನೊಟ್ಟು ಎಸಕಪದಗಳನ್ನು ಪರಿಚೆಪದಗಳಾಗಿ ಮಾರ್‍ಪಡಿಸುವುದರೊಂದಿಗೆ ಅದಕ್ಕೆ ಕೆಲವು ಕಡೆಗಳಲ್ಲಿ ಬಲ್ಲ ಎಂಬ ಹುರುಳನ್ನು (imaginable ನೆನೆಸಬಲ್ಲ) ಮತ್ತು ಇನ್ನು ಕೆಲವು ಕಡೆಗಳಲ್ಲಿ ತಕ್ಕ ಎಂಬ ಹುರುಳನ್ನು (notable ಗಮನಿಸತಕ್ಕ) ಸೇರಿಸುತ್ತದೆ.

ಹಾಗಾಗಿ, ಹಿನ್ನೊಟ್ಟುಗಳಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಕಟ್ಟುವಲ್ಲಿ ಅವುಗಳ ಈ ಎರಡು ಬಗೆಯ ಪರಿಚೆಗಳನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ: ಅವು ಎಂತಹ ಪದಗುಂಪಿಗೆ ಸೇರಿದ ಪದಗಳನ್ನು ಉಂಟುಮಾಡಿವೆ ಎಂಬುದೊಂದು, ಮತ್ತು ಹೀಗೆ ಉಂಟುಮಾಡುವಲ್ಲಿ ಅವು ಪದಗಳಿಗೆ ಎಂತಹ ಹೆಚ್ಚಿನ ಹುರುಳನ್ನು ಸೇರಿಸಿವೆ ಎಂಬುದಿನ್ನೊಂದು.

ಈ ಎರಡು ಪರಿಚೆಗಳಲ್ಲಿ ಮೊದಲನೆಯದನ್ನು ಬಳಸಿ, ಕೆಳಗೆ ಹೆಸರುಪದಗಳ ಹಿನ್ನೊಟ್ಟುಗಳು, ಎಸಕಪದಗಳ ಹಿನ್ನೊಟ್ಟುಗಳು, ಮತ್ತು ಪರಿಚೆಪದಗಳ ಹಿನ್ನೊಟ್ಟುಗಳು ಎಂಬ ಮೂರು ಒಳಪಸುಗೆಗಳನ್ನು ಉಂಟುಮಾಡಲಾಗಿದೆ, ಮತ್ತು ಈ ಹಿನ್ನೊಟ್ಟುಗಳನ್ನು ಯಾವ ಗುಂಪಿನ ಪದಗಳಿಗೆ ಸೇರಿಸಲಾಗುತ್ತದೆ ಎಂಬ ಬೇರೆಯೇ ಒಂದು ವಿಶಯವನ್ನು ಬಳಸಿ ಈ ಒಳಪಸುಗೆಗಳಲ್ಲಿ ಕೆಲವು ಕೊಯ್ತಗಳನ್ನು ಉಂಟುಮಾಡಲಾಗಿದೆ.

ಇಂಗ್ಲಿಶ್ನಲ್ಲಿ ಪರಿಚೆಪದಗಳಿಗೆ ಮತ್ತು ಎಸಕಪದಗಳಿಗೆ ಮಾತ್ರವಲ್ಲದೆ, ಕೆಲವು ಹೆಸರುಪದಗಳಿಗೂ ಒಟ್ಟುಗಳನ್ನು ಸೇರಿಸಿ ಬೇರೆ ಹೆಸರುಪದಗಳನ್ನು ಉಂಟುಮಾಡಲಾಗಿದೆ; ಹಾಗಾಗಿ, ಹೆಸರುಪದಗಳನ್ನು ಉಂಟುಮಾಡಬಲ್ಲ ಹಿನ್ನೊಟ್ಟುಗಳನ್ನು ಪರಿಚೆಪದಗಳೊಂದಿಗೆ ಬರುವವು, ಎಸಕಪದಗಳೊಂದಿಗೆ ಬರುವವು, ಮತ್ತು ಹೆಸರುಪದಗಳೊಂದಿಗೆ ಬರುವವು ಎಂಬುದಾಗಿ ಮೂರು ಒಳಪಸುಗೆಗಳಲ್ಲಿ ವಿವರಿಸಲಾಗಿದೆ.

ಇವುಗಳಲ್ಲಿ ಎಸಕಪದಗಳೊಂದಿಗೆ ಬರುವ ಹಿನ್ನೊಟ್ಟುಗಳನ್ನು ಅವು ಮಂದಿಯನ್ನು ಹೆಸರಿಸುತ್ತವೆಯೋ ಇಲ್ಲವೇ ಎಸಕವನ್ನು (ಇಲ್ಲವೇ ಎಸಕದ ದೊರೆತವನ್ನು) ಹೆಸರಿಸುತ್ತವೆಯೋ ಎಂಬುದರ ಮೇಲೆ ಎರಡು ಒಳಗುಂಪುಗಳಲ್ಲಿ ಕೊಡಲಾಗಿದೆ. ಇದಲ್ಲದೆ, ಹಲವು ಎಸಕಪದಗಳನ್ನು ಅವಕ್ಕೆ ಯಾವ ಒಟ್ಟನ್ನೂ ಸೇರಿಸದೆ ಹಾಗೆಯೇ ಹೆಸರುಪದಗಳಾಗಿ ಬಳಸಲು ಬರುತ್ತಿದ್ದು, ಈ ಬಳಕೆಯಲ್ಲಿ ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನೂ ಅಲ್ಲಿಯೇ ವಿವರಿಸಲಾಗಿದೆ.

ಇಂಗ್ಲಿಶ್ ಎಸಕಪದಗಳನ್ನು ಉಂಟುಮಾಡುವಲ್ಲಿ ಕೆಲವೇ ಕೆಲವು ಒಟ್ಟುಗಳು ಬಳಕೆಯಾಗುತ್ತಿದ್ದು, ಅವುಗಳ ಬಳಕೆಯನ್ನು ಮತ್ತು ಅವುಗಳಿಗೆ ಸಾಟಿಯಾಗುವಂತೆ ಕನ್ನಡ ಪದಗಳನ್ನು ಹೊಸದಾಗಿ ಕಟ್ಟುವ ಬಗೆಯನ್ನು ಎರಡನೇ ಒಳಪಸುಗೆಯಲ್ಲಿ ವಿವರಿಸಲಾಗಿದೆ.

ಇಂಗ್ಲಿಶ್ ಪರಿಚೆಪದಗಳನ್ನು ಹೆಸರುಪರಿಚೆಗಳು (adjectives) ಮತ್ತು ಎಸಕಪರಿಚೆಗಳು (adverbs) ಎಂಬ ಎರಡು ಗುಂಪುಗಳಲ್ಲಿ ಗುಂಪಿಸಲಾಗುತ್ತದೆ; ಇವುಗಳಲ್ಲಿ ಹಲವು ಹೆಸರುಪರಿಚೆಗಳನ್ನು ಎಸಕಪದಗಳಿಗೆ ಮತ್ತು ಹೆಸರುಪದಗಳಿಗೆ ಹಿನ್ನೊಟ್ಟುಗಳನ್ನು ಸೇರಿಸಿ ಪಡೆಯಲಾಗಿದೆ, ಮತ್ತು ಈ ಪದಗಳ ಬಳಕೆಯನ್ನು ಮತ್ತು ಅವುಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಕಟ್ಟುವ ಬಗೆಯನ್ನು ಎರಡು ಒಳಪಸುಗೆಗಳಲ್ಲಿ ವಿವರಿಸಲಾಗಿದೆ.

ಇದಲ್ಲದೆ, ಇಂಗ್ಲಿಶ್ನಲ್ಲಿ ಹೆಚ್ಚಿನ ಎಸಕಪರಿಚೆಗಳನ್ನೂ ಹೆಸರುಪರಿಚೆಗಳಿಗೆ ly ಎಂಬ ಒಟ್ಟನ್ನು ಸೇರಿಸಿ ಪಡೆಯಲಾಗುತ್ತದೆ; ಕನ್ನಡದಲ್ಲಿ ಈ ಎಸಕಪರಿಚೆಗಳಿಗೆ ಸಾಟಿಯಾಗುವಂತೆ ಹೊಸಪದಗಳನ್ನು ಕಟ್ಟುವಲ್ಲಿ ಹಲವು ಬಗೆಯ ಹಮ್ಮುಗೆಗಳನ್ನು ಬಳಸಬೇಕಾಗಿದ್ದು, ಅವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕು ಎಂಬುದು ಇಂಗ್ಲಿಶ್ನಲ್ಲಿ ly ಒಟ್ಟನ್ನು ಸೇರಿಸಿರುವ ಹೆಸರುಪರಿಚೆಗೆ ಸಾಟಿಯಾಗಿ ಕನ್ನಡದಲ್ಲಿ ಎಂತಹ ಪರಿಚೆಪದ ಬರುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ.

(ಈ ಪಸುಗೆ ಇಂಗ್ಲಿಶ್ ಪದಗಳಿಗೆ…-3ರಲ್ಲಿ ಮುಂದುವರಿಯುತ್ತದೆ)

<< ಬಾಗ-1

 

facebooktwitter

ಇಂಗ್ಲಿಶ್ ಪದಗಳಿಗೆ ಕನ್ನಡದ ಪದಕಟ್ಟಣೆ

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವುದು ಹೇಗೆ ಎಂಬುದರ ಕುರಿತಾಗಿ ನಾನು ಬರೆದಿರುವ, ಮತ್ತು ಇನ್ನು ಕೆಲವೇ ದಿನಗಳಲ್ಲಿ ಹೊರಬರಲಿರುವ ಕಡತದ ಕೆಲವು ಪಸುಗೆಗಳನ್ನು ಇಲ್ಲಿ ನನ್ನ ಮಿಂತಾಣದ ಓದುಗರಿಗಾಗಿ ಕೊಡುತ್ತಿದ್ದೇನೆ.

ಇಂಗ್ಲಿಶ್ ಪದಗಳಿಗೆ ಕನ್ನಡದಲ್ಲೇನೇ ಪದಗಳನ್ನು ಕಟ್ಟುವ ಬಗೆ-1

pada_kattane_sarani_dnsಕಡತದ ಗುರಿ:
ಕನ್ನಡ ಬರಹದ ಮೇಲೆ ಸಂಸ್ಕ್ರುತ ಎರವಲುಗಳ ಹೊರೆಯನ್ನು ಕಡಿಮೆ ಮಾಡಬೇಕೆಂಬ ಕಳಕಳಿಯಿರುವವರಿಗೆ ನೆರವಾಗಬೇಕೆಂಬುದೇ ಈ ಕಡತದ ಮುಕ್ಯ ಗುರಿಯಾಗಿದೆ. ಈ ಸಂಸ್ಕ್ರುತದ ಹೊರೆ ಇವತ್ತಿನ ಬರಹಗಳಲ್ಲಿ ತುಂಬಾ ಹೆಚ್ಚಿದೆ. ಅದರಲ್ಲೂ ಅರಿಮೆಯ (scientific) ಬರಹಗಳಲ್ಲಿ ಇದು ಎಲ್ಲೆಮೀರಿದೆ. ಈ ಹೊರೆಯಿಂದಾಗಿ ಅರಿಮೆಯ ತಿಳಿವುಗಳು ಹೆಚ್ಚಿನ ಕನ್ನಡಿಗರಿಂದಲೂ ದೂರ ಉಳಿದಿವೆ. ಇದಲ್ಲದೆ, ಇಂತಹ ಬರಹಗಳಲ್ಲಿ ಬರುವ ಹೊಸ ಹೊಸ ವಿಶಯಗಳನ್ನು ಎಲ್ಲರಿಗೂ ತಿಳಿಯುವಂತೆ ಸುಳುವಾಗಿ ವಿವರಿಸುವ ಅಳವನ್ನೂ ಕನ್ನಡ ಬರಹ ಪಡೆಯಲೇ ಇಲ್ಲ.

ಅರಿಮೆಯ ಬರಹಗಳಲ್ಲಿ ಕನ್ನಡದ ದಿನಬಳಕೆಯ ಪದಗಳನ್ನು ಬಳಸಿದರೆ ಓದುಗರಿಗೆ ಗೊಂದಲವಾಗುತ್ತದೆಯೆಂಬ ತಪ್ಪು ಅನಿಸಿಕೆಯ ಮೇಲೆ ಕನ್ನಡದ ಅರಿವಿಗರ ಈ ಸಂಸ್ಕ್ರುತ ಒಲವು ನೆಲೆನಿಂತಿದೆ; ಹೊಸ ಪದ ಬೇಕಾದಾಗಲೆಲ್ಲ ಅವರು ಸಂಸ್ಕ್ರುತ ಎರವಲುಗಳನ್ನು ಬಳಸುತ್ತಿದ್ದಾರೆ, ಮತ್ತು ತಮಗೆ ಬೇಕಾಗಿರುವ ಪದ ಸಂಸ್ಕ್ರುತದಲ್ಲಿಲ್ಲದಿದ್ದರೆ, ಸಂಸ್ಕ್ರುತದ್ದೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸ ಪದಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಇಂತಹ ಬರಹಗಳಲ್ಲಿ ಸಂಸ್ಕ್ರುತ ಪದಗಳು ತುಂಬಿ ತುಳುಕುತ್ತಿವೆ.

ಎತ್ತುಗೆಗಾಗಿ, ಕನ್ನಡದ ಕೆಲವು ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ಎಂಬತ್ತರಶ್ಟು ಸಂಸ್ಕ್ರುತದ ಎರವಲು ಪದಗಳಿವೆ! ನಿಜಕ್ಕೂ ಇವನ್ನು ಕನ್ನಡದ ಪದನೆರಕೆಗಳೆಂದು ಹೇಳಿಕೊಳ್ಳುತ್ತಿರುವುದೇ ಒಂದು ಅಚ್ಚರಿಯ ಸಂಗತಿಯಾಗಿದೆ! ಕನ್ನಡ ಬರಿಗೆಗಳನ್ನು ಬಳಸಿ ಅಚ್ಚುಹಾಕಲಾಗಿದೆ ಎಂಬುದರಿಂದಶ್ಟೇ ಇವನ್ನು ಕನ್ನಡ ಪದನೆರಕೆಗಳೆಂದು ಹೇಳಬೇಕಾಗಿದೆ.

ಕನ್ನಡದ ಅರಿವಿಗರಲ್ಲಿರುವ ಮೇಲಿನ ಅನಿಸಿಕೆಗೆ ಯಾವ ನೆಲೆಯೂ ಇಲ್ಲ. ಒಂದು ನುಡಿಯ ಪದಗಳಿಗಿರುವ ಹುರುಳುಗಳು ಹೆಚ್ಚಾದಶ್ಟೂ ಅವುಗಳ ಅಳವು ಹೆಚ್ಚುತ್ತದಲ್ಲದೆ ಗೊಂದಲವೇನೂ ಉಂಟಾಗುವುದಿಲ್ಲ. ಇಂಗ್ಲಿಶ್‌ನ ಹಲವು ಪದಗಳಿಗೆ ಹತ್ತಿಪ್ಪತ್ತು ಹುರುಳುಗಳಿವೆ; ಸಂಸ್ಕ್ರುತದಲ್ಲೂ ಹೀಗೆಯೇ. ಆದರೆ, ಇದರಿಂದಾಗಿ ಅವುಗಳ ಬಳಕೆಯಲ್ಲಿ ಗೊಂದಲವೇನೂ ಉಂಟಾಗಿಲ್ಲ. ಒಂದು ಪದಕ್ಕೆ ಎಶ್ಟೇ ಹುರುಳುಗಳಿರಲಿ, ಅದನ್ನು ಎಂತಹ ಕುಳ್ಳಿಹ(context)ದಲ್ಲಿ ಬಳಸಲಾಗಿದೆ ಎಂಬುದರ ಮೇಲೆ ಅದನ್ನು ಯಾವ ಹುರುಳಿನಲ್ಲಿ ಬಳಸಲಾಗಿದೆ ಎಂಬುದನ್ನು ಓದುಗರು ಸುಳುವಾಗಿ ತಿಳಿದುಕೊಳ್ಳಬಲ್ಲರು.

ಇಂಗ್ಲಿಶ್‌ನ ಅರಿಮೆಯ ಬರಹಗಳಲ್ಲಿ ಲ್ಯಾಟಿನ್ ಮತ್ತು ಗ್ರೀಕ್ ಪದಗಳನ್ನು ಬಳಸಿದ ಹಾಗೆ ತಾವು ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸುತ್ತಿದ್ದೇವೆ ಎಂಬುದು ಈ ಅರಿವಿಗರ ಇನ್ನೊಂದು ತಪ್ಪನಿಸಿಕೆ. ಇಂಗ್ಲಿಶ್ ಮತ್ತು ಲ್ಯಾಟಿನ್ (ಇಲ್ಲವೇ ಗ್ರೀಕ್) ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆ; ಆದರೆ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರಿವೆ. ಹಾಗಾಗಿ, ಲ್ಯಾಟಿನ್ ಪದಗಳು ಇಂಗ್ಲಿಶ್ ಬರಹಗಳಲ್ಲಿ ಹೊಂದಿಕೊಳ್ಳುವ ಹಾಗೆ ಸಂಸ್ಕ್ರುತ ಪದಗಳು ಕನ್ನಡ ಬರಹಗಳಲ್ಲಿ ಹೊಂದಿಕೊಳ್ಳುವುದಿಲ್ಲ. ಅವು ಹಲವು ಬಗೆಯ ತೊಡಕುಗಳನ್ನು ತಂದೊಡ್ಡುತ್ತವೆ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಹೆಸರುಪದ (noun)-ಪರಿಚೆಪದ (adjective) ವ್ಯತ್ಯಾಸ ಇಲ್ಲದಿರುವುದು ಮತ್ತು ಕನ್ನಡದಲ್ಲಿ (ಹಾಗೂ ಇಂಗ್ಲಿಶ್‌ನಲ್ಲಿ) ಇರುವುದು ಇಂತಹದೊಂದು ತೊಡಕಿಗೆ ಎಡೆಕೊಡುತ್ತದೆ.

ಇದಲ್ಲದೆ, ಇಂಗ್ಲಿಶ್‌ನ ಇರ‍್ಪರಿಮೆ (ಕೆಮಿಸ್ಟ್ರಿ), ಗಿಡದರಿಮೆ (ಬಾಟನಿ) ಮೊದಲಾದ ಕೆಲವು ಬಗೆಯ ಅರಿಮೆಯ ಬರಹಗಳಲ್ಲಶ್ಟೇ ಲ್ಯಾಟಿನ್ ಎರವಲುಗಳನ್ನು ಹೆಚ್ಚು ಬಳಸಲಾಗಿದೆ. ಎಣಿಕೆಯರಿಮೆ, ಎಣ್ಣುಕದರಿಮೆಯಂತಹ ಬೇರೆ ಹಲವು ಬಗೆಯ ಅರಿಮೆಯ ಬರಹಗಳಲ್ಲಿ ಇವನ್ನು ತುಂಬಾ ಕಡಿಮೆ ಎಣಿಕೆಯಲ್ಲಿ ಬಳಸಲಾಗಿದೆ. ಇವುಗಳಲ್ಲೆಲ್ಲ ಹೆಚ್ಚು ಹೆಚ್ಚು ಇಂಗ್ಲಿಶ್‌ನವೇ ಆದ ಪದಗಳನ್ನು ಬಳಸಲಾಗಿದೆ.

ಆದರೆ, ಕನ್ನಡದಲ್ಲಿ ಎಲ್ಲಾ ಬಗೆಯ ಅರಿಮೆಯ ಬರಹಗಳಲ್ಲೂ ಸಂಸ್ಕ್ರುತ ಎರವಲುಗಳನ್ನು ತುಂಬಲಾಗಿದೆ. ಇಂತಹ ಬರಹಗಳಿಗೆಲ್ಲ ಕನ್ನಡ ಪದಗಳು ತಕ್ಕುವಲ್ಲ ಎಂಬ ತಪ್ಪು ಅನಿಸಿಕೆ ಅರಿವಿಗರಲ್ಲಿದ್ದುದೇ ಇದಕ್ಕೆ ಮುಕ್ಯ ಕಾರಣ. ಇಂಗ್ಲಿಶ್‌ನಿಂದ ಈ ಅರಿಮೆಗಳಿಗೆ ಸಂಬಂದಿಸಿದ ಬರಹಗಳನ್ನು ಕನ್ನಡಕ್ಕೆ ತರುವಾಗ ಹಲವಾರು ಹೊಸಪದಗಳನ್ನು ಕನ್ನಡದಲ್ಲಿ ಕಟ್ಟಿಕೊಳ್ಳಬೇಕಾಗುತ್ತದೆ. ಇಂತಹ ಕಡೆಗಳಲ್ಲೆಲ್ಲ ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಲಾಗಿದೆಯಲ್ಲದೆ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿರುವುದು ತುಂಬಾ ಕಡಿಮೆ. ಹಾಗಾಗಿ, ಕನ್ನಡ ಬರಹಗಳ ಮೇಲಿರುವ ಸಂಸ್ಕ್ರುತ ಎರವಲುಗಳ ಹೊರೆ ಇಂಗ್ಲಿಶ್‌ನ ಮೇಲಿರುವ ಲ್ಯಾಟಿನ್ ಪದಗಳ ಹೊರೆಗಿಂತ ಎಶ್ಟೋ ಪಾಲು ಹೆಚ್ಚಿನದು.

ಕನ್ನಡದ ಜಾನಪದಗಳ ಕುರಿತಾಗಿ, ಎಂದರೆ ಕನ್ನಡದ್ದೇ ಆದ ಕೊಡುಗೆಗಳ ಕುರಿತಾಗಿ, ತಾವು ಹೇಳಬೇಕಿರುವುದನ್ನು ತಿಳಿಸುವುದಕ್ಕೂ ಈ ಅರಿವಿಗರಿಗೆ ಹಲವಾರು ಸಂಸ್ಕ್ರುತ ಎರವಲುಗಳು ಬೇಕಾಗುತ್ತದೆ; ಜಾನಪದ ಎಂಬ ಪದವೇ ಇದನ್ನು ತೋರಿಸಿಕೊಡುತ್ತದೆ. ನಾವು ಕನ್ನಡವನ್ನು ಎಂತಹ ಕೀಳ್ನೆಲೆಗೆ ಇಳಿಸಿದ್ದೇವೆ ಎಂಬುದು ಇದರಿಂದ ತುಂಬಾ ಚನ್ನಾಗಿ ಗೊತ್ತಾಗುತ್ತದೆ.

ಕನ್ನಡ ಬರಹಕ್ಕೆ ಬೇಕಿಲ್ಲದಂತಹ ಈ ಹೊರೆಯಿಂದಾಗಿ ಕನ್ನಡ ಬರಹಗಳ ಮತ್ತು ಅವುಗಳಲ್ಲಿ ಬಳಕೆಯಾಗುವ ಪದಗಳ ಬೆಳವಣಿಗೆಯೇ ನಿಂತುಹೋಗಿದೆ. ಹೊಸ ಹೊಸ ವಿಶಯಗಳನ್ನು ಇಂಗ್ಲಿಶ್‌ನಲ್ಲಿ ಸುಳುವಾಗಿ ವಿವರಿಸಿ ಹೇಳಲು ಬರುತ್ತದೆ; ಆದರೆ, ಇವನ್ನೇ ಕನ್ನಡದಲ್ಲಿ ವಿವರಿಸಬೇಕೆಂದರೆ ಬರಹ ಮುಂದೆ ಹೋಗುವುದೇ ಇಲ್ಲ. ತಿರುತಿರುಗಿ ಸಂಸ್ಕ್ರುತದ ಎರವಲುಗಳನ್ನು ತಂದು ತುಂಬಬೇಕಾಗುತ್ತದೆ. ಇದರಿಂದಾಗಿ ಓದುವವರಿಗೆ ಅದು ಕನ್ನಡ ಬರಹವೆಂದೇ ಅನಿಸುವುದಿಲ್ಲ.

ಕನ್ನಡದ ಒಂದು ಪದನೆರಕೆಯನ್ನು ಇಂಗ್ಲಿಶ್‌ನ ಒಂದು ಚಿಕ್ಕ ಪದನೆರಕೆಯೊಂದಿಗೆ ಹೋಲಿಸಿ ನೋಡಿದರೂ ಈ ತೊಡಕಿನ ನೆಲೆ ಯಾವುದೆಂದು ಗೊತ್ತಾಗುತ್ತದೆ. ಇಂಗ್ಲಿಶ್‌ನ ಒಂದು ಪದಕ್ಕೆ ಏಳೆಂಟು ಹುರುಳುಗಳಿವೆಯಾದರೆ, ಅಂತಹದೇ ಕನ್ನಡ ಪದಕ್ಕೆ ಒಂದೆರಡು ಹುರುಳುಗಳು ಮಾತ್ರ ಕಾಣಿಸುತ್ತವೆ. ಇಂಗ್ಲಿಶ್ ಪದಗಳು ಹುರುಳಿನ ಹರವನ್ನು ಹೆಚ್ಚಿಸಿಕೊಂಡ ಹಾಗೆ ಕನ್ನಡ ಪದಗಳು ಹೆಚ್ಚಿಸಿಕೊಂಡಿಲ್ಲ. ಅವು ಹೆಚ್ಚಿಸಿಕೊಳ್ಳದಂತೆ ಅಡ್ಡಗಾಲಿಟ್ಟವರು ಈ ಸಂಸ್ಕ್ರುತದೊಲವಿಗರಾದ ಕನ್ನಡದ ಅರಿವಿಗರೇ!

ಇಂಗ್ಲಿಶ್‌ನ ಹಲವಾರು ಪದಗಳಿಗೆ ದಿನಬಳಕೆಯ ಹುರುಳು ಮಾತ್ರವಲ್ಲದೆ ಬೇರೆ ಬೇರೆ ಅರಿಮೆಗಳಿಗೆ ತಕ್ಕುದಾದಂತಹ ಹುರುಳುಗಳೂ ಇವೆ. ಆದರೆ, ಕನ್ನಡದ ಯಾವ ದಿನಬಳಕೆಯ ಪದಕ್ಕೂ ಇಂತಹ ಅರಿಮೆಯ ಹುರುಳಿಲ್ಲ. ಯಾಕೆಂದರೆ, ಅರಿಮೆಯ ಹುರುಳು ಬೇಕಾಗಿರುವಲ್ಲೆಲ್ಲ ಕನ್ನಡದ ಅರಿವಿಗರು ಬೇಕೆಂದೇ ಸಂಸ್ಕ್ರುತದ ಮೊರೆಹೋಗಿದ್ದಾರೆ.

ಎತ್ತುಗೆಗಾಗಿ, ಇಂಗ್ಲಿಶ್‌ನಲ್ಲಿ salt ಎಂಬ ಪದಕ್ಕೆ ಅಡಿಗೆಯ ಉಪ್ಪು ಎಂಬ ಹುರುಳು ಮಾತ್ರವಲ್ಲದೆ ಇರ‍್ಪರಿಮೆಗೆ ಸಂಬಂದಿಸಿದಂತೆ ಎಲ್ಲಾ ಬಗೆಯ saltಗಳೆಂಬ ಹುರುಳೂ ಇದೆ; ಆದರೆ, ಕನ್ನಡದ ಉಪ್ಪು ಪದಕ್ಕೆ ಈ ಎರಡನೆಯ ಹುರುಳಿಲ್ಲ; ಯಾಕೆಂದರೆ, ಈ ಹುರುಳನ್ನು ತಿಳಿಸಲು ಕನ್ನಡದ ಅರಿಮೆಯ ಬರಹಗಳಲ್ಲಿ ಲವಣ ಎಂಬ ಸಂಸ್ಕ್ರುತ ಎರವಲನ್ನು ಬಳಸಲಾಗಿದೆ. ಇಂತಹ ನೂರಾರು ಇಂಗ್ಲಿಶ್ ದಿನಬಳಕೆಯ ಪದಗಳಿಗೆ ಅರಿಮೆಯ ಹುರುಳುಗಳು ದೊರೆತಿವೆ; ಆದರೆ, ಕನ್ನಡದ ದಿನಬಳಕೆಯ ಪದಗಳನ್ನೆಲ್ಲ ಅರಿಮೆಯ ಬರಹಗಳಿಂದ ದೂರ ಇರಿಸಲಾಗಿದೆ.

ಅರಿಮೆಯ ಬರಹಗಳಲ್ಲಿ ಎಸಕಗಳನ್ನು ತಿಳಿಸುವ ಎಸಕಪದ(verb)ಗಳನ್ನು ಮಾತ್ರವಲ್ಲದೆ, ಎಸಕಗಳನ್ನು ಹೆಸರಿಸುವ ಹೆಸರುಪದ(noun)ಗಳನ್ನೂ ಆಗಾಗ ಬಳಸುತ್ತಿರಬೇಕಾಗುತ್ತದೆ. ಎತ್ತುಗೆಗಾಗಿ, ಒಂದು ಎಸಕವನ್ನು ತಿಳಿಸುವ add ಎಂಬ ಎಸಕಪದದೊಂದಿಗೆ ಅದೇ ಎಸಕವನ್ನು ಹೆಸರಿಸುವ addition ಎಂಬ ಹೆಸರುಪದವನ್ನೂ ಅರಿಮೆಯ ಬರಹಗಳಲ್ಲಿ ಆಗಾಗ ಬಳಸಲಾಗುತ್ತದೆ. ಇಂಗ್ಲಿಶ್‌ನ ಅರಿಮೆಯ ಬರಹಗಳಲ್ಲಿ ಇಂತಹ ನೂರಾರು ಎಸಕಗಳನ್ನು ಹೆಸರಿಸುವ ಹೆಸರುಪದಗಳ ಬಳಕೆಯನ್ನು ಕಾಣಬಹುದು.

ಆದರೆ, ಕನ್ನಡದ ಅರಿಮೆಯ ಬರಹಗಳಲ್ಲಿ ಈ ರೀತಿ ಎಸಕವನ್ನು ಹೆಸರಿಸುವ ಕನ್ನಡದವೇ ಆದ ಹೆಸರುಪದಗಳ ಬದಲು ಸಂಸ್ಕ್ರುತದಿಂದ ಎರವಲು ಪಡೆದ ಹೆಸರುಪದಗಳನ್ನು ಬಳಸಲಾಗುತ್ತದೆ; ಕೂಡಿಸು ಎಂಬ ಎಸಕಪದದಿಂದ ಪಡೆಯಬಲ್ಲ ಕೂಡಿಕೆ ಎಂಬ ಹೆಸರುಪದವನ್ನು ಬಳಸುವ ಬದಲು, ಸಂಕಲನ ಎಂಬ ಸಂಸ್ಕ್ರುತದ ಎರವಲು ಪದವನ್ನು ಬಳಸಲಾಗುತ್ತದೆ. ಇದರಿಂದಾಗಿಯೂ ಕನ್ನಡದ ಅರಿಮೆಯ ಬರಹಗಳಲ್ಲಿ ಸಂಸ್ಕ್ರುತ ಎರವಲುಗಳ ಹೊರೆ ತುಂಬಾ ಹೆಚ್ಚಾಗಿದೆ.

ಕನ್ನಡ ಅರಿವಿಗರ ಈ ತಪ್ಪು ಕೆಲಸದಿಂದಾಗಿ, ಕನ್ನಡ ಬರಹದ ಓದುಗರಲ್ಲೂ ಒಂದು ವಿಚಿತ್ರವಾದ ಅನಿಸಿಕೆ ಬೆಳೆದುಬಂದಿದೆ. ಒಂದು ಬರಹದಲ್ಲಿ ಹಲವಾರು ತಮಗೆ ತಿಳಿದಿಲ್ಲದಂತಹ ಸಂಸ್ಕ್ರುತ ಎರವಲುಗಳನ್ನು ಬಳಸಿದರೂ ಓದುಗರು ಅದನ್ನು ದೂರುವುದಿಲ್ಲ; ಬರಹ ಚನ್ನಾಗಿದೆ, ಆದರೆ ಅದನ್ನು ಓದಿ ತಿಳಿದುಕೊಳ್ಳುವ ಅಳವು ತನ್ನಲ್ಲಿಲ್ಲ ಎಂಬುದಾಗಿ ಅವರು ತಮ್ಮನ್ನೇ ದೂರಿಕೊಳ್ಳುತ್ತಾರೆ. ಇದಕ್ಕೆ ಬದಲು, ಇನ್ನೊಂದು ಬರಹದಲ್ಲಿ ಕೆಲವೇ ಕೆಲವು ಅವರಿಗೆ ತಿಳಿದಿಲ್ಲದಂತಹ ಕನ್ನಡ ಪದಗಳನ್ನು ಬಳಸಲಾಗಿದೆಯಾದರೆ, ಆ ಬರಹವೇ ಚನ್ನಾಗಿಲ್ಲವೆಂದು ಹೇಳುತ್ತಾರೆ!

ಇದು ಸಂಸ್ಕ್ರುತ ಪದಗಳ ಕುರಿತಾಗಿ ಓದುಗರಲ್ಲಿ ಬೆಳೆದುಬಂದಿರುವ ಮೇಲರಿಮೆ ಮತ್ತು ಕನ್ನಡ ಪದಗಳ ಕುರಿತಾಗಿ ಅವರಲ್ಲಿ ಬೆಳೆದುಬಂದಿರುವ ಕೀಳರಿಮೆಗಳನ್ನು ತಿಳಿಸುತ್ತದೆ. ಕನ್ನಡ ಓದುಗರಲ್ಲಿ ಕನ್ನಡ ಪದಗಳ ಕುರಿತಾಗಿರುವ ಈ ಕೀಳರಿಮೆ ಹೋಗಬೇಕು, ಮತ್ತು ಕನ್ನಡ ಬರಹಗಾರರೇ ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸುವ ಮೂಲಕ ಹೀಗಾಗುವಂತೆ ಮಾಡಬೇಕು. ಈ ಕೆಲಸದಲ್ಲಿ ನೆರವಾಗುವುದೇ ಈ ಕಡತದ ಮುಕ್ಯ ಗುರಿಯಾಗಿದೆ.

facebooktwitter