ಇಂಗ್ಲಿಶ್ ನುಡಿಯ ಹಿನ್ನೊಟ್ಟುಗಳು


ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವ ಬಗೆ-2:

kannadadalle

ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ ಎಂಬ ನನ್ನ ಈ ಕಡತದಲ್ಲಿ ಎರಡು ತುಂಡು(part)ಗಳಿವೆ; ಇವುಗಳಲ್ಲಿ ಮೊದಲನೆಯ ತುಂಡು ಕನ್ನಡದಲ್ಲಿ ಹೊಸಪದಗಳನ್ನು ಕಟ್ಟಲು ಎಂತಹ ಹಮ್ಮುಗೆ(method)ಗಳನ್ನು ಬಳಸಲಾಗುತ್ತದೆ, ಮತ್ತು ಈ ಬಳಕೆಯಲ್ಲಿ ಕನ್ನಡದ ಒಲವೇನು ಎಂಬುದನ್ನು ವಿವರಿಸಲಾಗಿದೆ.

ಎರಡನೆಯ ತುಂಡಿನಲ್ಲಿ ಬೇರೆ ಬೇರೆ ಬಗೆಯ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ. ಈ ಎರಡನೆಯ ತುಂಡಿನ ಕೆಲವು ಪಸುಗೆ(chapter)ಗಳನ್ನು ಇಲ್ಲಿ ಕೊಡಲಾಗಿದೆ. ಇವುಗಳಲ್ಲಿ ಮುಕ್ಯವಾಗಿ ಕೆಳಗೆ ಕೊಟ್ಟಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ:

(1) ಹಿನ್ನೊಟ್ಟು(suffix)ಗಳನ್ನು ಬಳಸಿ ಪಡೆದಿರುವ ಪದಗಳು
(2) ಮುನ್ನೊಟ್ಟು(prefix)ಗಳನ್ನು ಬಳಸಿ ಪಡೆದಿರುವ ಪದಗಳು
(3) ಎರಡು ಪದಗಳನ್ನು ಒಟ್ಟುಸೇರಿಸಿ ಪಡೆದಿರುವ ಜೋಡುಪದ(compound)ಗಳು
(4) ಈ ಮೂರು ಬಗೆಯ ಹಮ್ಮುಗೆಗಳನ್ನೂ ಬಳಸದಿರುವ ಉಳಿದ ಪದಗಳು

ಕಡತದಲ್ಲಿ ಈ ತಿಳುವಳಿಕೆಯನ್ನು ಕೊಡುವುದರೊಂದಿಗೆ ಹೊಸಪದಗಳನ್ನು ಕಟ್ಟುವಲ್ಲಿ ಪಳಗಿಕೆ(training)ಯನ್ನು ಪಡೆಯಬೇಕೆಂದಿರುವವರಿಗೆ ನೆರವಾಗುವಂತೆ ಕೆಲವು ಎತ್ತುಗೆಗಳನ್ನೂ ಕೊಡಲಾಗಿದೆ; ಆದರೆ, ಅವನ್ನಿಲ್ಲಿ ಕೊಟ್ಟಿಲ್ಲ.

ಇಂಗ್ಲಿಶ್ ನುಡಿಯ ಹಿನ್ನೊಟ್ಟುಗಳು:

ಇಂಗ್ಲಿಶ್ ಪದಗಳಲ್ಲಿ ಹಿನ್ನೊಟ್ಟು(suffix)ಗಳನ್ನು ಮುಕ್ಯವಾಗಿ ಒಂದು ಪದಗುಂಪಿನಲ್ಲಿರುವ ಪದಗಳನ್ನು ಇನ್ನೊಂದು ಪದಗುಂಪಿಗೆ ಮಾರೆಡೆಗೊಳಿಸುವುದಕ್ಕಾಗಿ ಬಳಸಲಾಗುತ್ತದೆ. ಎತ್ತುಗೆಗಾಗಿ, -able ಎಂಬ ಹಿನ್ನೊಟ್ಟನ್ನು ಎಸಕಪದಗಳಿಗೆ ಸೇರಿಸಿ ಅವನ್ನು ಪರಿಚೆಪದಗಳನ್ನಾಗಿ ಮಾರ್‍ಪಡಿಸಲಾಗುತ್ತದೆ:

ಎಸಕಪದಗಳು    ಪರಿಚೆಪದಗಳು
read               readable
like                 likeable
work              workable

ಇದೇ ರೀತಿಯಲ್ಲಿ, ಎಸಕಪದಗಳನ್ನು ಹೆಸರುಪದಗಳಾಗಿ ಮಾಡಲು, ಪರಿಚೆಪದಗಳನ್ನು ಹೆಸರುಪದಗಳಾಗಿ ಮಾಡಲು, ಹೆಸರುಪದಗಳನ್ನು ಎಸಕಪದಗಳಾಗಿ ಮಾಡಲು, ಮತ್ತು ಪರಿಚೆಪದಗಳನ್ನು ಎಸಕಪದಗಳಾಗಿ ಮಾಡಲು ಬೇರೆ ಬೇರೆ ಬಗೆಯ ಹಿನ್ನೊಟ್ಟುಗಳನ್ನು ಬಳಸಲಾಗುತ್ತದೆ.

ಇಂತಹ ಮಾರ್‍ಪಾಡುಗಳನ್ನು ನಡೆಸುವಲ್ಲಿ ಒಂದೊಂದು ಮಾರ್‍ಪಾಡಿಗೂ ಒಂದಕ್ಕಿಂತ ಹೆಚ್ಚು ಹಿನ್ನೊಟ್ಟುಗಳು ಬಳಕೆಯಾಗುತ್ತಿದ್ದು, ಅವುಗಳಲ್ಲಿ ಕೆಲವು ಹೆಚ್ಚುಕಡಿಮೆ ಒಂದೇ ಬಗೆಯ ಹುರುಳನ್ನು ಕೊಡುತ್ತವೆ. ಎತ್ತುಗೆಗಾಗಿ, er ಮತ್ತು or ಎಂಬ ಎರಡು ಹಿನ್ನೊಟ್ಟುಗಳೂ ಎಸಕಪದಗಳಿಂದ ಹೆಸರುಪದಗಳನ್ನು ಪಡೆಯುವುದಕ್ಕಾಗಿ ಬಳಕೆಯಾಗುತ್ತವೆ, ಮತ್ತು ಈ ಎರಡು ಬಗೆಯ ಹೆಸರುಪದಗಳೂ ಮುಕ್ಯವಾಗಿ ಎಸಕವನ್ನು ನಡೆಸುವ ಮಂದಿಯನ್ನು ಗುರುತಿಸುವಂತಹ ಹುರುಳನ್ನು ಕೊಡುತ್ತವೆ (sing > singer, sail > sailor). ಪರಿಚೆಪದಗಳಲ್ಲೇನೇ ಹೆಸರುಪರಿಚೆ(adjective)ಗಳನ್ನು ಎಸಕಪರಿಚೆ(adverb)ಗಳಾಗಿ ಮಾರ್‍ಪಡಿಸುವುದಕ್ಕೂ ly ಎಂಬ ಹಿನ್ನೊಟ್ಟಿನ ಬಳಕೆಯಾಗುತ್ತದೆ (harsh>harshly, sweet>sweetly).

ಇದಲ್ಲದೆ, ಕೆಲವು ಹಿನ್ನೊಟ್ಟುಗಳನ್ನು ಬೇರೆ ಬೇರೆ ಪದಗುಂಪಿನ ಪದಗಳು ಒಂದೇ ಪದಗುಂಪಿನಡಿಯಲ್ಲಿ ಬರುವಂತೆ ಮಾಡುವುದಕ್ಕಾಗಿಯೂ ಬಳಸಲಾಗುತ್ತದೆ. ಎತ್ತುಗೆಗಾಗಿ, ize ಹಿನ್ನೊಟ್ಟನ್ನು ಬಳಸಿ ಪರಿಚೆಪದಗಳು ಮತ್ತು ಹೆಸರುಪದಗಳು ಎಸಕಪದಗಳ ಗುಂಪಿನಡಿಯಲ್ಲಿ ಬರುವಂತೆ ಮಾಡಲಾಗುತ್ತದೆ (legal>legalize, author>authorize). ಈ ರೀತಿ, ಇಂಗ್ಲಿಶ್ನ ಒಂದು ಹಿನ್ನೊಟ್ಟು ಒಂದಕ್ಕಿಂತ ಹೆಚ್ಚು ಗುಂಪುಗಳ ಪದಗಳೊಂದಿಗೆ ಬರಬಲ್ಲುದಾದರೂ ಅದರ ಬಳಕೆಯಿಂದ ದೊರಕುವ ಪದಗಳೆಲ್ಲ ಒಂದೇ ಗುಂಪಿಗೆ ಸೇರಿದವುಗಳಾಗಿರುತ್ತವೆ.

ಕೆಲವು ಹಿನ್ನೊಟ್ಟುಗಳಿಗೆ ಪದಗಳ ಹುರುಳನ್ನು ತುಸುಮಟ್ಟಿಗೆ ಮಾರ್‍ಪಡಿಸುವ ಅಳವೂ ಇರುತ್ತದೆ. ಎತ್ತುಗೆಗಾಗಿ, -able ಎಂಬ ಹಿನ್ನೊಟ್ಟು ಎಸಕಪದಗಳನ್ನು ಪರಿಚೆಪದಗಳಾಗಿ ಮಾರ್‍ಪಡಿಸುವುದರೊಂದಿಗೆ ಅದಕ್ಕೆ ಕೆಲವು ಕಡೆಗಳಲ್ಲಿ ಬಲ್ಲ ಎಂಬ ಹುರುಳನ್ನು (imaginable ನೆನೆಸಬಲ್ಲ) ಮತ್ತು ಇನ್ನು ಕೆಲವು ಕಡೆಗಳಲ್ಲಿ ತಕ್ಕ ಎಂಬ ಹುರುಳನ್ನು (notable ಗಮನಿಸತಕ್ಕ) ಸೇರಿಸುತ್ತದೆ.

ಹಾಗಾಗಿ, ಹಿನ್ನೊಟ್ಟುಗಳಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಕಟ್ಟುವಲ್ಲಿ ಅವುಗಳ ಈ ಎರಡು ಬಗೆಯ ಪರಿಚೆಗಳನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ: ಅವು ಎಂತಹ ಪದಗುಂಪಿಗೆ ಸೇರಿದ ಪದಗಳನ್ನು ಉಂಟುಮಾಡಿವೆ ಎಂಬುದೊಂದು, ಮತ್ತು ಹೀಗೆ ಉಂಟುಮಾಡುವಲ್ಲಿ ಅವು ಪದಗಳಿಗೆ ಎಂತಹ ಹೆಚ್ಚಿನ ಹುರುಳನ್ನು ಸೇರಿಸಿವೆ ಎಂಬುದಿನ್ನೊಂದು.

ಈ ಎರಡು ಪರಿಚೆಗಳಲ್ಲಿ ಮೊದಲನೆಯದನ್ನು ಬಳಸಿ, ಕೆಳಗೆ ಹೆಸರುಪದಗಳ ಹಿನ್ನೊಟ್ಟುಗಳು, ಎಸಕಪದಗಳ ಹಿನ್ನೊಟ್ಟುಗಳು, ಮತ್ತು ಪರಿಚೆಪದಗಳ ಹಿನ್ನೊಟ್ಟುಗಳು ಎಂಬ ಮೂರು ಒಳಪಸುಗೆಗಳನ್ನು ಉಂಟುಮಾಡಲಾಗಿದೆ, ಮತ್ತು ಈ ಹಿನ್ನೊಟ್ಟುಗಳನ್ನು ಯಾವ ಗುಂಪಿನ ಪದಗಳಿಗೆ ಸೇರಿಸಲಾಗುತ್ತದೆ ಎಂಬ ಬೇರೆಯೇ ಒಂದು ವಿಶಯವನ್ನು ಬಳಸಿ ಈ ಒಳಪಸುಗೆಗಳಲ್ಲಿ ಕೆಲವು ಕೊಯ್ತಗಳನ್ನು ಉಂಟುಮಾಡಲಾಗಿದೆ.

ಇಂಗ್ಲಿಶ್ನಲ್ಲಿ ಪರಿಚೆಪದಗಳಿಗೆ ಮತ್ತು ಎಸಕಪದಗಳಿಗೆ ಮಾತ್ರವಲ್ಲದೆ, ಕೆಲವು ಹೆಸರುಪದಗಳಿಗೂ ಒಟ್ಟುಗಳನ್ನು ಸೇರಿಸಿ ಬೇರೆ ಹೆಸರುಪದಗಳನ್ನು ಉಂಟುಮಾಡಲಾಗಿದೆ; ಹಾಗಾಗಿ, ಹೆಸರುಪದಗಳನ್ನು ಉಂಟುಮಾಡಬಲ್ಲ ಹಿನ್ನೊಟ್ಟುಗಳನ್ನು ಪರಿಚೆಪದಗಳೊಂದಿಗೆ ಬರುವವು, ಎಸಕಪದಗಳೊಂದಿಗೆ ಬರುವವು, ಮತ್ತು ಹೆಸರುಪದಗಳೊಂದಿಗೆ ಬರುವವು ಎಂಬುದಾಗಿ ಮೂರು ಒಳಪಸುಗೆಗಳಲ್ಲಿ ವಿವರಿಸಲಾಗಿದೆ.

ಇವುಗಳಲ್ಲಿ ಎಸಕಪದಗಳೊಂದಿಗೆ ಬರುವ ಹಿನ್ನೊಟ್ಟುಗಳನ್ನು ಅವು ಮಂದಿಯನ್ನು ಹೆಸರಿಸುತ್ತವೆಯೋ ಇಲ್ಲವೇ ಎಸಕವನ್ನು (ಇಲ್ಲವೇ ಎಸಕದ ದೊರೆತವನ್ನು) ಹೆಸರಿಸುತ್ತವೆಯೋ ಎಂಬುದರ ಮೇಲೆ ಎರಡು ಒಳಗುಂಪುಗಳಲ್ಲಿ ಕೊಡಲಾಗಿದೆ. ಇದಲ್ಲದೆ, ಹಲವು ಎಸಕಪದಗಳನ್ನು ಅವಕ್ಕೆ ಯಾವ ಒಟ್ಟನ್ನೂ ಸೇರಿಸದೆ ಹಾಗೆಯೇ ಹೆಸರುಪದಗಳಾಗಿ ಬಳಸಲು ಬರುತ್ತಿದ್ದು, ಈ ಬಳಕೆಯಲ್ಲಿ ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನೂ ಅಲ್ಲಿಯೇ ವಿವರಿಸಲಾಗಿದೆ.

ಇಂಗ್ಲಿಶ್ ಎಸಕಪದಗಳನ್ನು ಉಂಟುಮಾಡುವಲ್ಲಿ ಕೆಲವೇ ಕೆಲವು ಒಟ್ಟುಗಳು ಬಳಕೆಯಾಗುತ್ತಿದ್ದು, ಅವುಗಳ ಬಳಕೆಯನ್ನು ಮತ್ತು ಅವುಗಳಿಗೆ ಸಾಟಿಯಾಗುವಂತೆ ಕನ್ನಡ ಪದಗಳನ್ನು ಹೊಸದಾಗಿ ಕಟ್ಟುವ ಬಗೆಯನ್ನು ಎರಡನೇ ಒಳಪಸುಗೆಯಲ್ಲಿ ವಿವರಿಸಲಾಗಿದೆ.

ಇಂಗ್ಲಿಶ್ ಪರಿಚೆಪದಗಳನ್ನು ಹೆಸರುಪರಿಚೆಗಳು (adjectives) ಮತ್ತು ಎಸಕಪರಿಚೆಗಳು (adverbs) ಎಂಬ ಎರಡು ಗುಂಪುಗಳಲ್ಲಿ ಗುಂಪಿಸಲಾಗುತ್ತದೆ; ಇವುಗಳಲ್ಲಿ ಹಲವು ಹೆಸರುಪರಿಚೆಗಳನ್ನು ಎಸಕಪದಗಳಿಗೆ ಮತ್ತು ಹೆಸರುಪದಗಳಿಗೆ ಹಿನ್ನೊಟ್ಟುಗಳನ್ನು ಸೇರಿಸಿ ಪಡೆಯಲಾಗಿದೆ, ಮತ್ತು ಈ ಪದಗಳ ಬಳಕೆಯನ್ನು ಮತ್ತು ಅವುಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಕಟ್ಟುವ ಬಗೆಯನ್ನು ಎರಡು ಒಳಪಸುಗೆಗಳಲ್ಲಿ ವಿವರಿಸಲಾಗಿದೆ.

ಇದಲ್ಲದೆ, ಇಂಗ್ಲಿಶ್ನಲ್ಲಿ ಹೆಚ್ಚಿನ ಎಸಕಪರಿಚೆಗಳನ್ನೂ ಹೆಸರುಪರಿಚೆಗಳಿಗೆ ly ಎಂಬ ಒಟ್ಟನ್ನು ಸೇರಿಸಿ ಪಡೆಯಲಾಗುತ್ತದೆ; ಕನ್ನಡದಲ್ಲಿ ಈ ಎಸಕಪರಿಚೆಗಳಿಗೆ ಸಾಟಿಯಾಗುವಂತೆ ಹೊಸಪದಗಳನ್ನು ಕಟ್ಟುವಲ್ಲಿ ಹಲವು ಬಗೆಯ ಹಮ್ಮುಗೆಗಳನ್ನು ಬಳಸಬೇಕಾಗಿದ್ದು, ಅವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕು ಎಂಬುದು ಇಂಗ್ಲಿಶ್ನಲ್ಲಿ ly ಒಟ್ಟನ್ನು ಸೇರಿಸಿರುವ ಹೆಸರುಪರಿಚೆಗೆ ಸಾಟಿಯಾಗಿ ಕನ್ನಡದಲ್ಲಿ ಎಂತಹ ಪರಿಚೆಪದ ಬರುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ.

(ಈ ಪಸುಗೆ ಇಂಗ್ಲಿಶ್ ಪದಗಳಿಗೆ…-3ರಲ್ಲಿ ಮುಂದುವರಿಯುತ್ತದೆ)

<< ಬಾಗ-1

 

facebooktwitter

Comments are closed.