ಇಂಗ್ಲಿಶ್ ಪದಗಳಿಗೆ ಕನ್ನಡದ ಪದಕಟ್ಟಣೆ

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವುದು ಹೇಗೆ ಎಂಬುದರ ಕುರಿತಾಗಿ ನಾನು ಬರೆದಿರುವ, ಮತ್ತು ಇನ್ನು ಕೆಲವೇ ದಿನಗಳಲ್ಲಿ ಹೊರಬರಲಿರುವ ಕಡತದ ಕೆಲವು ಪಸುಗೆಗಳನ್ನು ಇಲ್ಲಿ ನನ್ನ ಮಿಂತಾಣದ ಓದುಗರಿಗಾಗಿ ಕೊಡುತ್ತಿದ್ದೇನೆ.

ಇಂಗ್ಲಿಶ್ ಪದಗಳಿಗೆ ಕನ್ನಡದಲ್ಲೇನೇ ಪದಗಳನ್ನು ಕಟ್ಟುವ ಬಗೆ-1

pada_kattane_sarani_dnsಕಡತದ ಗುರಿ:
ಕನ್ನಡ ಬರಹದ ಮೇಲೆ ಸಂಸ್ಕ್ರುತ ಎರವಲುಗಳ ಹೊರೆಯನ್ನು ಕಡಿಮೆ ಮಾಡಬೇಕೆಂಬ ಕಳಕಳಿಯಿರುವವರಿಗೆ ನೆರವಾಗಬೇಕೆಂಬುದೇ ಈ ಕಡತದ ಮುಕ್ಯ ಗುರಿಯಾಗಿದೆ. ಈ ಸಂಸ್ಕ್ರುತದ ಹೊರೆ ಇವತ್ತಿನ ಬರಹಗಳಲ್ಲಿ ತುಂಬಾ ಹೆಚ್ಚಿದೆ. ಅದರಲ್ಲೂ ಅರಿಮೆಯ (scientific) ಬರಹಗಳಲ್ಲಿ ಇದು ಎಲ್ಲೆಮೀರಿದೆ. ಈ ಹೊರೆಯಿಂದಾಗಿ ಅರಿಮೆಯ ತಿಳಿವುಗಳು ಹೆಚ್ಚಿನ ಕನ್ನಡಿಗರಿಂದಲೂ ದೂರ ಉಳಿದಿವೆ. ಇದಲ್ಲದೆ, ಇಂತಹ ಬರಹಗಳಲ್ಲಿ ಬರುವ ಹೊಸ ಹೊಸ ವಿಶಯಗಳನ್ನು ಎಲ್ಲರಿಗೂ ತಿಳಿಯುವಂತೆ ಸುಳುವಾಗಿ ವಿವರಿಸುವ ಅಳವನ್ನೂ ಕನ್ನಡ ಬರಹ ಪಡೆಯಲೇ ಇಲ್ಲ.

ಅರಿಮೆಯ ಬರಹಗಳಲ್ಲಿ ಕನ್ನಡದ ದಿನಬಳಕೆಯ ಪದಗಳನ್ನು ಬಳಸಿದರೆ ಓದುಗರಿಗೆ ಗೊಂದಲವಾಗುತ್ತದೆಯೆಂಬ ತಪ್ಪು ಅನಿಸಿಕೆಯ ಮೇಲೆ ಕನ್ನಡದ ಅರಿವಿಗರ ಈ ಸಂಸ್ಕ್ರುತ ಒಲವು ನೆಲೆನಿಂತಿದೆ; ಹೊಸ ಪದ ಬೇಕಾದಾಗಲೆಲ್ಲ ಅವರು ಸಂಸ್ಕ್ರುತ ಎರವಲುಗಳನ್ನು ಬಳಸುತ್ತಿದ್ದಾರೆ, ಮತ್ತು ತಮಗೆ ಬೇಕಾಗಿರುವ ಪದ ಸಂಸ್ಕ್ರುತದಲ್ಲಿಲ್ಲದಿದ್ದರೆ, ಸಂಸ್ಕ್ರುತದ್ದೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸ ಪದಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಇಂತಹ ಬರಹಗಳಲ್ಲಿ ಸಂಸ್ಕ್ರುತ ಪದಗಳು ತುಂಬಿ ತುಳುಕುತ್ತಿವೆ.

ಎತ್ತುಗೆಗಾಗಿ, ಕನ್ನಡದ ಕೆಲವು ಅರಿಮೆಯ ಪದನೆರಕೆಗಳಲ್ಲಿ ನೂರಕ್ಕೆ ಎಂಬತ್ತರಶ್ಟು ಸಂಸ್ಕ್ರುತದ ಎರವಲು ಪದಗಳಿವೆ! ನಿಜಕ್ಕೂ ಇವನ್ನು ಕನ್ನಡದ ಪದನೆರಕೆಗಳೆಂದು ಹೇಳಿಕೊಳ್ಳುತ್ತಿರುವುದೇ ಒಂದು ಅಚ್ಚರಿಯ ಸಂಗತಿಯಾಗಿದೆ! ಕನ್ನಡ ಬರಿಗೆಗಳನ್ನು ಬಳಸಿ ಅಚ್ಚುಹಾಕಲಾಗಿದೆ ಎಂಬುದರಿಂದಶ್ಟೇ ಇವನ್ನು ಕನ್ನಡ ಪದನೆರಕೆಗಳೆಂದು ಹೇಳಬೇಕಾಗಿದೆ.

ಕನ್ನಡದ ಅರಿವಿಗರಲ್ಲಿರುವ ಮೇಲಿನ ಅನಿಸಿಕೆಗೆ ಯಾವ ನೆಲೆಯೂ ಇಲ್ಲ. ಒಂದು ನುಡಿಯ ಪದಗಳಿಗಿರುವ ಹುರುಳುಗಳು ಹೆಚ್ಚಾದಶ್ಟೂ ಅವುಗಳ ಅಳವು ಹೆಚ್ಚುತ್ತದಲ್ಲದೆ ಗೊಂದಲವೇನೂ ಉಂಟಾಗುವುದಿಲ್ಲ. ಇಂಗ್ಲಿಶ್‌ನ ಹಲವು ಪದಗಳಿಗೆ ಹತ್ತಿಪ್ಪತ್ತು ಹುರುಳುಗಳಿವೆ; ಸಂಸ್ಕ್ರುತದಲ್ಲೂ ಹೀಗೆಯೇ. ಆದರೆ, ಇದರಿಂದಾಗಿ ಅವುಗಳ ಬಳಕೆಯಲ್ಲಿ ಗೊಂದಲವೇನೂ ಉಂಟಾಗಿಲ್ಲ. ಒಂದು ಪದಕ್ಕೆ ಎಶ್ಟೇ ಹುರುಳುಗಳಿರಲಿ, ಅದನ್ನು ಎಂತಹ ಕುಳ್ಳಿಹ(context)ದಲ್ಲಿ ಬಳಸಲಾಗಿದೆ ಎಂಬುದರ ಮೇಲೆ ಅದನ್ನು ಯಾವ ಹುರುಳಿನಲ್ಲಿ ಬಳಸಲಾಗಿದೆ ಎಂಬುದನ್ನು ಓದುಗರು ಸುಳುವಾಗಿ ತಿಳಿದುಕೊಳ್ಳಬಲ್ಲರು.

ಇಂಗ್ಲಿಶ್‌ನ ಅರಿಮೆಯ ಬರಹಗಳಲ್ಲಿ ಲ್ಯಾಟಿನ್ ಮತ್ತು ಗ್ರೀಕ್ ಪದಗಳನ್ನು ಬಳಸಿದ ಹಾಗೆ ತಾವು ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸುತ್ತಿದ್ದೇವೆ ಎಂಬುದು ಈ ಅರಿವಿಗರ ಇನ್ನೊಂದು ತಪ್ಪನಿಸಿಕೆ. ಇಂಗ್ಲಿಶ್ ಮತ್ತು ಲ್ಯಾಟಿನ್ (ಇಲ್ಲವೇ ಗ್ರೀಕ್) ನುಡಿಗಳು ಒಂದೇ ನುಡಿಕುಟುಂಬಕ್ಕೆ ಸೇರಿವೆ; ಆದರೆ ಕನ್ನಡ ಮತ್ತು ಸಂಸ್ಕ್ರುತ ನುಡಿಗಳು ಬೇರೆ ಬೇರೆ ನುಡಿಕುಟುಂಬಗಳಿಗೆ ಸೇರಿವೆ. ಹಾಗಾಗಿ, ಲ್ಯಾಟಿನ್ ಪದಗಳು ಇಂಗ್ಲಿಶ್ ಬರಹಗಳಲ್ಲಿ ಹೊಂದಿಕೊಳ್ಳುವ ಹಾಗೆ ಸಂಸ್ಕ್ರುತ ಪದಗಳು ಕನ್ನಡ ಬರಹಗಳಲ್ಲಿ ಹೊಂದಿಕೊಳ್ಳುವುದಿಲ್ಲ. ಅವು ಹಲವು ಬಗೆಯ ತೊಡಕುಗಳನ್ನು ತಂದೊಡ್ಡುತ್ತವೆ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಹೆಸರುಪದ (noun)-ಪರಿಚೆಪದ (adjective) ವ್ಯತ್ಯಾಸ ಇಲ್ಲದಿರುವುದು ಮತ್ತು ಕನ್ನಡದಲ್ಲಿ (ಹಾಗೂ ಇಂಗ್ಲಿಶ್‌ನಲ್ಲಿ) ಇರುವುದು ಇಂತಹದೊಂದು ತೊಡಕಿಗೆ ಎಡೆಕೊಡುತ್ತದೆ.

ಇದಲ್ಲದೆ, ಇಂಗ್ಲಿಶ್‌ನ ಇರ‍್ಪರಿಮೆ (ಕೆಮಿಸ್ಟ್ರಿ), ಗಿಡದರಿಮೆ (ಬಾಟನಿ) ಮೊದಲಾದ ಕೆಲವು ಬಗೆಯ ಅರಿಮೆಯ ಬರಹಗಳಲ್ಲಶ್ಟೇ ಲ್ಯಾಟಿನ್ ಎರವಲುಗಳನ್ನು ಹೆಚ್ಚು ಬಳಸಲಾಗಿದೆ. ಎಣಿಕೆಯರಿಮೆ, ಎಣ್ಣುಕದರಿಮೆಯಂತಹ ಬೇರೆ ಹಲವು ಬಗೆಯ ಅರಿಮೆಯ ಬರಹಗಳಲ್ಲಿ ಇವನ್ನು ತುಂಬಾ ಕಡಿಮೆ ಎಣಿಕೆಯಲ್ಲಿ ಬಳಸಲಾಗಿದೆ. ಇವುಗಳಲ್ಲೆಲ್ಲ ಹೆಚ್ಚು ಹೆಚ್ಚು ಇಂಗ್ಲಿಶ್‌ನವೇ ಆದ ಪದಗಳನ್ನು ಬಳಸಲಾಗಿದೆ.

ಆದರೆ, ಕನ್ನಡದಲ್ಲಿ ಎಲ್ಲಾ ಬಗೆಯ ಅರಿಮೆಯ ಬರಹಗಳಲ್ಲೂ ಸಂಸ್ಕ್ರುತ ಎರವಲುಗಳನ್ನು ತುಂಬಲಾಗಿದೆ. ಇಂತಹ ಬರಹಗಳಿಗೆಲ್ಲ ಕನ್ನಡ ಪದಗಳು ತಕ್ಕುವಲ್ಲ ಎಂಬ ತಪ್ಪು ಅನಿಸಿಕೆ ಅರಿವಿಗರಲ್ಲಿದ್ದುದೇ ಇದಕ್ಕೆ ಮುಕ್ಯ ಕಾರಣ. ಇಂಗ್ಲಿಶ್‌ನಿಂದ ಈ ಅರಿಮೆಗಳಿಗೆ ಸಂಬಂದಿಸಿದ ಬರಹಗಳನ್ನು ಕನ್ನಡಕ್ಕೆ ತರುವಾಗ ಹಲವಾರು ಹೊಸಪದಗಳನ್ನು ಕನ್ನಡದಲ್ಲಿ ಕಟ್ಟಿಕೊಳ್ಳಬೇಕಾಗುತ್ತದೆ. ಇಂತಹ ಕಡೆಗಳಲ್ಲೆಲ್ಲ ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಲಾಗಿದೆಯಲ್ಲದೆ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿರುವುದು ತುಂಬಾ ಕಡಿಮೆ. ಹಾಗಾಗಿ, ಕನ್ನಡ ಬರಹಗಳ ಮೇಲಿರುವ ಸಂಸ್ಕ್ರುತ ಎರವಲುಗಳ ಹೊರೆ ಇಂಗ್ಲಿಶ್‌ನ ಮೇಲಿರುವ ಲ್ಯಾಟಿನ್ ಪದಗಳ ಹೊರೆಗಿಂತ ಎಶ್ಟೋ ಪಾಲು ಹೆಚ್ಚಿನದು.

ಕನ್ನಡದ ಜಾನಪದಗಳ ಕುರಿತಾಗಿ, ಎಂದರೆ ಕನ್ನಡದ್ದೇ ಆದ ಕೊಡುಗೆಗಳ ಕುರಿತಾಗಿ, ತಾವು ಹೇಳಬೇಕಿರುವುದನ್ನು ತಿಳಿಸುವುದಕ್ಕೂ ಈ ಅರಿವಿಗರಿಗೆ ಹಲವಾರು ಸಂಸ್ಕ್ರುತ ಎರವಲುಗಳು ಬೇಕಾಗುತ್ತದೆ; ಜಾನಪದ ಎಂಬ ಪದವೇ ಇದನ್ನು ತೋರಿಸಿಕೊಡುತ್ತದೆ. ನಾವು ಕನ್ನಡವನ್ನು ಎಂತಹ ಕೀಳ್ನೆಲೆಗೆ ಇಳಿಸಿದ್ದೇವೆ ಎಂಬುದು ಇದರಿಂದ ತುಂಬಾ ಚನ್ನಾಗಿ ಗೊತ್ತಾಗುತ್ತದೆ.

ಕನ್ನಡ ಬರಹಕ್ಕೆ ಬೇಕಿಲ್ಲದಂತಹ ಈ ಹೊರೆಯಿಂದಾಗಿ ಕನ್ನಡ ಬರಹಗಳ ಮತ್ತು ಅವುಗಳಲ್ಲಿ ಬಳಕೆಯಾಗುವ ಪದಗಳ ಬೆಳವಣಿಗೆಯೇ ನಿಂತುಹೋಗಿದೆ. ಹೊಸ ಹೊಸ ವಿಶಯಗಳನ್ನು ಇಂಗ್ಲಿಶ್‌ನಲ್ಲಿ ಸುಳುವಾಗಿ ವಿವರಿಸಿ ಹೇಳಲು ಬರುತ್ತದೆ; ಆದರೆ, ಇವನ್ನೇ ಕನ್ನಡದಲ್ಲಿ ವಿವರಿಸಬೇಕೆಂದರೆ ಬರಹ ಮುಂದೆ ಹೋಗುವುದೇ ಇಲ್ಲ. ತಿರುತಿರುಗಿ ಸಂಸ್ಕ್ರುತದ ಎರವಲುಗಳನ್ನು ತಂದು ತುಂಬಬೇಕಾಗುತ್ತದೆ. ಇದರಿಂದಾಗಿ ಓದುವವರಿಗೆ ಅದು ಕನ್ನಡ ಬರಹವೆಂದೇ ಅನಿಸುವುದಿಲ್ಲ.

ಕನ್ನಡದ ಒಂದು ಪದನೆರಕೆಯನ್ನು ಇಂಗ್ಲಿಶ್‌ನ ಒಂದು ಚಿಕ್ಕ ಪದನೆರಕೆಯೊಂದಿಗೆ ಹೋಲಿಸಿ ನೋಡಿದರೂ ಈ ತೊಡಕಿನ ನೆಲೆ ಯಾವುದೆಂದು ಗೊತ್ತಾಗುತ್ತದೆ. ಇಂಗ್ಲಿಶ್‌ನ ಒಂದು ಪದಕ್ಕೆ ಏಳೆಂಟು ಹುರುಳುಗಳಿವೆಯಾದರೆ, ಅಂತಹದೇ ಕನ್ನಡ ಪದಕ್ಕೆ ಒಂದೆರಡು ಹುರುಳುಗಳು ಮಾತ್ರ ಕಾಣಿಸುತ್ತವೆ. ಇಂಗ್ಲಿಶ್ ಪದಗಳು ಹುರುಳಿನ ಹರವನ್ನು ಹೆಚ್ಚಿಸಿಕೊಂಡ ಹಾಗೆ ಕನ್ನಡ ಪದಗಳು ಹೆಚ್ಚಿಸಿಕೊಂಡಿಲ್ಲ. ಅವು ಹೆಚ್ಚಿಸಿಕೊಳ್ಳದಂತೆ ಅಡ್ಡಗಾಲಿಟ್ಟವರು ಈ ಸಂಸ್ಕ್ರುತದೊಲವಿಗರಾದ ಕನ್ನಡದ ಅರಿವಿಗರೇ!

ಇಂಗ್ಲಿಶ್‌ನ ಹಲವಾರು ಪದಗಳಿಗೆ ದಿನಬಳಕೆಯ ಹುರುಳು ಮಾತ್ರವಲ್ಲದೆ ಬೇರೆ ಬೇರೆ ಅರಿಮೆಗಳಿಗೆ ತಕ್ಕುದಾದಂತಹ ಹುರುಳುಗಳೂ ಇವೆ. ಆದರೆ, ಕನ್ನಡದ ಯಾವ ದಿನಬಳಕೆಯ ಪದಕ್ಕೂ ಇಂತಹ ಅರಿಮೆಯ ಹುರುಳಿಲ್ಲ. ಯಾಕೆಂದರೆ, ಅರಿಮೆಯ ಹುರುಳು ಬೇಕಾಗಿರುವಲ್ಲೆಲ್ಲ ಕನ್ನಡದ ಅರಿವಿಗರು ಬೇಕೆಂದೇ ಸಂಸ್ಕ್ರುತದ ಮೊರೆಹೋಗಿದ್ದಾರೆ.

ಎತ್ತುಗೆಗಾಗಿ, ಇಂಗ್ಲಿಶ್‌ನಲ್ಲಿ salt ಎಂಬ ಪದಕ್ಕೆ ಅಡಿಗೆಯ ಉಪ್ಪು ಎಂಬ ಹುರುಳು ಮಾತ್ರವಲ್ಲದೆ ಇರ‍್ಪರಿಮೆಗೆ ಸಂಬಂದಿಸಿದಂತೆ ಎಲ್ಲಾ ಬಗೆಯ saltಗಳೆಂಬ ಹುರುಳೂ ಇದೆ; ಆದರೆ, ಕನ್ನಡದ ಉಪ್ಪು ಪದಕ್ಕೆ ಈ ಎರಡನೆಯ ಹುರುಳಿಲ್ಲ; ಯಾಕೆಂದರೆ, ಈ ಹುರುಳನ್ನು ತಿಳಿಸಲು ಕನ್ನಡದ ಅರಿಮೆಯ ಬರಹಗಳಲ್ಲಿ ಲವಣ ಎಂಬ ಸಂಸ್ಕ್ರುತ ಎರವಲನ್ನು ಬಳಸಲಾಗಿದೆ. ಇಂತಹ ನೂರಾರು ಇಂಗ್ಲಿಶ್ ದಿನಬಳಕೆಯ ಪದಗಳಿಗೆ ಅರಿಮೆಯ ಹುರುಳುಗಳು ದೊರೆತಿವೆ; ಆದರೆ, ಕನ್ನಡದ ದಿನಬಳಕೆಯ ಪದಗಳನ್ನೆಲ್ಲ ಅರಿಮೆಯ ಬರಹಗಳಿಂದ ದೂರ ಇರಿಸಲಾಗಿದೆ.

ಅರಿಮೆಯ ಬರಹಗಳಲ್ಲಿ ಎಸಕಗಳನ್ನು ತಿಳಿಸುವ ಎಸಕಪದ(verb)ಗಳನ್ನು ಮಾತ್ರವಲ್ಲದೆ, ಎಸಕಗಳನ್ನು ಹೆಸರಿಸುವ ಹೆಸರುಪದ(noun)ಗಳನ್ನೂ ಆಗಾಗ ಬಳಸುತ್ತಿರಬೇಕಾಗುತ್ತದೆ. ಎತ್ತುಗೆಗಾಗಿ, ಒಂದು ಎಸಕವನ್ನು ತಿಳಿಸುವ add ಎಂಬ ಎಸಕಪದದೊಂದಿಗೆ ಅದೇ ಎಸಕವನ್ನು ಹೆಸರಿಸುವ addition ಎಂಬ ಹೆಸರುಪದವನ್ನೂ ಅರಿಮೆಯ ಬರಹಗಳಲ್ಲಿ ಆಗಾಗ ಬಳಸಲಾಗುತ್ತದೆ. ಇಂಗ್ಲಿಶ್‌ನ ಅರಿಮೆಯ ಬರಹಗಳಲ್ಲಿ ಇಂತಹ ನೂರಾರು ಎಸಕಗಳನ್ನು ಹೆಸರಿಸುವ ಹೆಸರುಪದಗಳ ಬಳಕೆಯನ್ನು ಕಾಣಬಹುದು.

ಆದರೆ, ಕನ್ನಡದ ಅರಿಮೆಯ ಬರಹಗಳಲ್ಲಿ ಈ ರೀತಿ ಎಸಕವನ್ನು ಹೆಸರಿಸುವ ಕನ್ನಡದವೇ ಆದ ಹೆಸರುಪದಗಳ ಬದಲು ಸಂಸ್ಕ್ರುತದಿಂದ ಎರವಲು ಪಡೆದ ಹೆಸರುಪದಗಳನ್ನು ಬಳಸಲಾಗುತ್ತದೆ; ಕೂಡಿಸು ಎಂಬ ಎಸಕಪದದಿಂದ ಪಡೆಯಬಲ್ಲ ಕೂಡಿಕೆ ಎಂಬ ಹೆಸರುಪದವನ್ನು ಬಳಸುವ ಬದಲು, ಸಂಕಲನ ಎಂಬ ಸಂಸ್ಕ್ರುತದ ಎರವಲು ಪದವನ್ನು ಬಳಸಲಾಗುತ್ತದೆ. ಇದರಿಂದಾಗಿಯೂ ಕನ್ನಡದ ಅರಿಮೆಯ ಬರಹಗಳಲ್ಲಿ ಸಂಸ್ಕ್ರುತ ಎರವಲುಗಳ ಹೊರೆ ತುಂಬಾ ಹೆಚ್ಚಾಗಿದೆ.

ಕನ್ನಡ ಅರಿವಿಗರ ಈ ತಪ್ಪು ಕೆಲಸದಿಂದಾಗಿ, ಕನ್ನಡ ಬರಹದ ಓದುಗರಲ್ಲೂ ಒಂದು ವಿಚಿತ್ರವಾದ ಅನಿಸಿಕೆ ಬೆಳೆದುಬಂದಿದೆ. ಒಂದು ಬರಹದಲ್ಲಿ ಹಲವಾರು ತಮಗೆ ತಿಳಿದಿಲ್ಲದಂತಹ ಸಂಸ್ಕ್ರುತ ಎರವಲುಗಳನ್ನು ಬಳಸಿದರೂ ಓದುಗರು ಅದನ್ನು ದೂರುವುದಿಲ್ಲ; ಬರಹ ಚನ್ನಾಗಿದೆ, ಆದರೆ ಅದನ್ನು ಓದಿ ತಿಳಿದುಕೊಳ್ಳುವ ಅಳವು ತನ್ನಲ್ಲಿಲ್ಲ ಎಂಬುದಾಗಿ ಅವರು ತಮ್ಮನ್ನೇ ದೂರಿಕೊಳ್ಳುತ್ತಾರೆ. ಇದಕ್ಕೆ ಬದಲು, ಇನ್ನೊಂದು ಬರಹದಲ್ಲಿ ಕೆಲವೇ ಕೆಲವು ಅವರಿಗೆ ತಿಳಿದಿಲ್ಲದಂತಹ ಕನ್ನಡ ಪದಗಳನ್ನು ಬಳಸಲಾಗಿದೆಯಾದರೆ, ಆ ಬರಹವೇ ಚನ್ನಾಗಿಲ್ಲವೆಂದು ಹೇಳುತ್ತಾರೆ!

ಇದು ಸಂಸ್ಕ್ರುತ ಪದಗಳ ಕುರಿತಾಗಿ ಓದುಗರಲ್ಲಿ ಬೆಳೆದುಬಂದಿರುವ ಮೇಲರಿಮೆ ಮತ್ತು ಕನ್ನಡ ಪದಗಳ ಕುರಿತಾಗಿ ಅವರಲ್ಲಿ ಬೆಳೆದುಬಂದಿರುವ ಕೀಳರಿಮೆಗಳನ್ನು ತಿಳಿಸುತ್ತದೆ. ಕನ್ನಡ ಓದುಗರಲ್ಲಿ ಕನ್ನಡ ಪದಗಳ ಕುರಿತಾಗಿರುವ ಈ ಕೀಳರಿಮೆ ಹೋಗಬೇಕು, ಮತ್ತು ಕನ್ನಡ ಬರಹಗಾರರೇ ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸುವ ಮೂಲಕ ಹೀಗಾಗುವಂತೆ ಮಾಡಬೇಕು. ಈ ಕೆಲಸದಲ್ಲಿ ನೆರವಾಗುವುದೇ ಈ ಕಡತದ ಮುಕ್ಯ ಗುರಿಯಾಗಿದೆ.

facebooktwitter

Comments are closed.