ಬಗೆತದ ಮೇಲೆ ನುಡಿಯ ಹತೋಟಿ

ನುಡಿಯರಿಮೆಯ ಇಣುಕುನೋಟ – 36

ನಾವು ಯಾವ ರೀತಿಯಲ್ಲಿ ಬಗೆಯಬಲ್ಲೆವು (ಆಲೋಚಿಸಬಲ್ಲೆವು) ಎಂಬುದರ ಮೇಲೆ ನಮ್ಮ ತಾಯ್ನುಡಿಯ ಹತೋಟಿಯಿದೆಯೇ, ಇದ್ದರೆ ಅದು ಎಶ್ಟರ ಮಟ್ಟಿಗೆ ಇದೆ ಎಂಬುದರ ಕುರಿತಾಗಿ ಹಲವು ಮಂದಿ ತಿಳಿವಿಗರು ಅರಕೆಗಳನ್ನು ನಡೆಸುತ್ತಿದ್ದಾರೆ. ಪ್ರಯತ್ನಪಟ್ಟರೆ ನಾವು ಯಾವ ರೀತಿಯಲ್ಲಿ ಬೇಕಿದ್ದರೂ ಬಗೆಯಬಲ್ಲೆವು; ಆದರೆ, ಸಾಮಾನ್ಯವಾಗಿ ನಮ್ಮ ಬಗೆತದಲ್ಲಿ ಎಂತಹ ವಿಶಯಗಳ ಮೇಲೆ ಒತ್ತು ಬೀಳುತ್ತದೆ, ಮತ್ತು ಎಂತಹ ವಿಶಯಗಳನ್ನು ನಾವು ಕಡೆಗಣಿಸುತ್ತೇವೆ ಎಂಬುದು ನಮ್ಮ ತಾಯ್ನುಡಿಯನ್ನು ಅವಲಂಬಿಸಿರುತ್ತದೆ ಎಂಬ ತೀರ್‍ಮಾನಕ್ಕೆ ಹೆಚ್ಚಿನವರೂ ಬಂದಿರುವ ಹಾಗೆ ಕಾಣಿಸುತ್ತದೆ.

ಎತ್ತುಗೆಗಾಗಿ, ಕನ್ನಡದಲ್ಲಿ ಮನುಶ್ಯರನ್ನು ಹೆಸರಿಸುವ ಪದಗಳ ಬಳಕೆಯಲ್ಲಿ ಮಾತ್ರ ಹೆಣ್ಣು-ಗಂಡು ವ್ಯತ್ಯಾಸವನ್ನು ಕಾಣುತ್ತೇವೆ; ಮರ, ಮೇಜು, ಪೆನ್ನು, ಗಾಡಿ, ತಿಳಿವು ಮೊದಲಾದ ಉಳಿದ ಪದಗಳ ಬಳಕೆಯಲ್ಲಿ ಇಂತಹ ವ್ಯತ್ಯಾಸವಿಲ್ಲ. ಆದರೆ, ಸಂಸ್ಕ್ರುತ, ಹಿಂದಿ ಮೊದಲಾದ ನುಡಿಗಳಲ್ಲಿ, ಮತ್ತು ಅವುಗಳೊಂದಿಗೆ ನಂಟಿರುವ ಜರ್‍ಮನ್, ಸ್ಪಾನಿಶ್ ಮೊದಲಾದ ಬೇರೆ ಹಲವು ನುಡಿಗಳಲ್ಲಿ ಎಲ್ಲಾ ಬಗೆಯ ಪದಗಳಲ್ಲೂ ಪುಲ್ಲಿಂಗ-ಸ್ತ್ರೀಲಿಂಗ ವ್ಯತ್ಯಾಸವನ್ನು ಕಾಣಲಾಗುತ್ತದೆ. ಈ ವ್ಯತ್ಯಾಸ ಇವನ್ನು ತಾಯ್ನುಡಿಯಾಗಿ ಪಡೆದಿರುವ ಜನರ ಬಗೆತದ ಮೇಲೂ ಪರಿಣಾಮಗಳನ್ನು ಬೀರುವ ಹಾಗೆ ಕಾಣಿಸುತ್ತದೆ.

ಸೇತುವೆಯನ್ನು ಹೆಸರಿಸುವ ಪದ ಜರ್‍ಮನ್ ನುಡಿಯಲ್ಲಿ ಸ್ತ್ರೀಲಿಂಗದಲ್ಲಿದೆ, ಮತ್ತು ಪ್ರೆಂಚ್ ನುಡಿಯಲ್ಲಿ ಪುಲ್ಲಿಂಗದಲ್ಲಿದೆ; ಜರ್‍ಮನರು ಒಂದು ಹೊಸ ಸೇತುವೆಯನ್ನು ಬಣ್ಣಿಸುವಾಗ ಅದರ ಅಂದ, ಮಾಟ, ಹಗುರತನ ಮೊದಲಾದ ಪರಿಚೆಗಳ ಮೇಲೆ ಒತ್ತು ಕೊಡುತ್ತಾರೆ; ಅದನ್ನೇ ಪ್ರೆಂಚರು ಬಣ್ಣಿಸುವಾಗ ಅದು ಎಶ್ಟು ದೊಡ್ಡದು, ಎಶ್ಟೊಂದು ಗಟ್ಟಿಯಾಗಿದೆ, ಹೇಗೆ ಒಂದು ದಯ್ತ್ಯ ರಕ್ಕಸನ ಹಾಗೆ ಕಾಣಿಸುತ್ತದೆ ಎಂಬುದಾಗಿ ಅದರ ಬೇರೆಯೇ ಪರಿಚೆಗಳ ಮೇಲೆ ಒತ್ತು ಕೊಡುತ್ತಾರೆ. ಸೇತುವೆ ಎಂಬ ಪದಕ್ಕೆ ಲಿಂಗವನ್ನು ಕೊಡುವಲ್ಲಿ ಅವರ ನುಡಿಗಳ ನಡುವಿರುವ ವ್ಯತ್ಯಾಸವೇ ಈ ರೀತಿ ಅದನ್ನು ಅವರು ಬೇರೆ ಬೇರೆ ಬಗೆಗಳಲ್ಲಿ ಬಣ್ಣಿಸುವ ಹಾಗೆ ಮಾಡಿದೆ.

ನುಡಿಗಳ ನಡುವೆ ಕಾಣಿಸುವ ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ಅವುಗಳನ್ನಾಡುವ ಜನರ ಬಗೆತದ ಮೇಲೆ ಪರಿಣಾಮಗಳನ್ನು ಬೀರಬಲ್ಲುವು ಎಂಬುದನ್ನು ಅರಕೆಗಳು ತೋರಿಸಿಕೊಟ್ಟಿವೆ. ಎತ್ತುಗೆಗಾಗಿ, ಒಂದು ವಸ್ತು ಎಲ್ಲಿದೆ ಎಂಬುದನ್ನು ಅದಕ್ಕೂ ನಮಗೂ (ಇಲ್ಲವೇ ಇನ್ನೊಂದು ವಸ್ತುವಿಗೂ) ನಡುವಿರುವ ಸಂಬಂದ ಎಂತಹದು ಎಂಬುದರ ಮೇಲೆ ತಿಳಿಸಬಲ್ಲೆವು: ‘ಮಾವಿನ ಮರ ಮನೆಯ ಎದುರಿಗಿದೆ’ ಎಂದು ಹೇಳುವಲ್ಲಿ, ಇಲ್ಲವೇ ‘ನಮ್ಮ ಮನೆ ಅವರ ಮನೆಯ ಎಡಕ್ಕಿದೆ’ ಎಂದು ಹೇಳುವಲ್ಲಿ ನಾವು ಈ ರೀತಿ ಮನೆಗೂ ಮರಕ್ಕೂ ನಡುವಿರುವ ಸಂಬಂದವನ್ನು ಬಳಸುತ್ತೇವೆ; ಇದಕ್ಕೆ ಬದಲು, ಮೂಡ, ತೆಂಕ, ಪಡು, ಬಡಗ ಎಂಬ ನೆಲದರಿಮೆಯ ಪದಗಳನ್ನು ಬಳಸಿಯೂ ಈ ವಿಶಯವನ್ನು ತಿಳಿಸಬಲ್ಲೆವು: ‘ಮಾವಿನ ಮರ ಮನೆಯ ತೆಂಕಕ್ಕಿದೆ’ ಎಂದು ಹೇಳುವಲ್ಲಿ, ಇಲ್ಲವೇ ‘ನಮ್ಮ ಮನೆ ಅವರ ಮನೆಯ ಪಡುವಕ್ಕಿದೆ’ ಎಂದು ಹೇಳುವಲ್ಲಿ ಇಂತಹ ನೆಲದರಿಮೆಯ ಪದಗಳನ್ನು ಬಳಸಲಾಗುತ್ತದೆ.

ಜಗತ್ತಿನಲ್ಲಿರುವ ಹೆಚ್ಚಿನ ನುಡಿಗಳಲ್ಲೂ ವಸ್ತುಗಳ ಜಾಗವನ್ನು ತಿಳಿಸಬೇಕಾದಾಗ ಅವುಗಳ ನಡುವಿರುವ ಸಂಬಂದವನ್ನು ಇಲ್ಲವೇ ಆಡುಗನಿಗೂ ಅವಕ್ಕೂ ನಡುವಿರುವ ಸಂಬಂದವನ್ನು ತಿಳಿಸುವ ಎಡಕ್ಕೆ, ಬಲಕ್ಕೆ, ಹಿಂದೆ, ಮುಂದೆ ಎಂಬಂತಹ ಪದಗಳನ್ನು ಬಳಸುವುದೇ ಹೆಚ್ಚು. ಆದರೆ, ನೆಲದರಿಮೆಯ ಮೂಡ, ತೆಂಕ, ಪಡು ಎಂಬಂತಹ ಪದಗಳನ್ನೇ ಜಾಗವನ್ನು ತಿಳಿಸಬೇಕಾಗುವ ಹೆಚ್ಚಿನ ಕಡೆಗಳಲ್ಲೂ ಬಳಸುವ ನುಡಿಗಳೂ ಹಲವಿವೆ. ಆಸ್ಟ್ರೇಲಿಯಾದ ಗೂಗು ಯಿಮ್ದಿರ್‍ನಂತಹ ಕೆಲವು ಬುಡಕಟ್ಟಿನ ನುಡಿಗಳು, ತೆಂಕು ಮೆಹಿಕೋದ ತ್ಸೆಲ್ತಲ್, ಮತ್ತು ಬೇರೆಯೂ ಹಲವು ನುಡಿಗಳು ಇಂತಹವು.

ಈ ನುಡಿಗಳಲ್ಲಿ ಚಿಕ್ಕ ಚಿಕ್ಕ ವಸ್ತುಗಳ ಜಾಗವನ್ನು ತಿಳಿಸುವಾಗಲೂ ಮೂಡ, ತೆಂಕ, ಪಡು ಎಂಬಂತಹ ಪದಗಳನ್ನು ಬಳಸಲಾಗುತ್ತದೆ; ಒಂದು ಚಿತ್ರದಲ್ಲಿ ಕಾಣಿಸುವ ಇಬ್ಬರು ವ್ಯಕ್ತಿಗಳ ಜಾಗವನ್ನು ಬಣ್ಣಿಸುವಲ್ಲೂ ಒಬ್ಬನು ಇನ್ನೊಬ್ಬನ ಮೂಡಕ್ಕಿದ್ದಾನೆ ಎನ್ನಲಾಗುತ್ತದೆ; ಚಿತ್ರವನ್ನು ತುಸು ತಿರುಗಿಸಿ ಹಿಡಿದರೆ, ಅವರ ಜಾಗ ಬದಲಾಗುತ್ತದೆ, ಮತ್ತು ಅದಕ್ಕೆ ಸರಿಯಾಗಿ ಮಾತನ್ನೂ ಬದಲಿಸಬೇಕಾಗುತ್ತದೆ (ಮೂಡಕ್ಕಿದ್ದಾನೆ ಎನ್ನುವ ಬದಲು ಪಡುವಕ್ಕಿದ್ದಾನೆ ಇಲ್ಲವೇ ತೆಂಕಕ್ಕಿದ್ದಾನೆ ಎನ್ನಬೇಕಾದೀತು). ಆದರೆ, ಈ ರೀತಿ ಎಲ್ಲೆಡೆಗಳಲ್ಲೂ ನೆಲದರಿಮೆಯ ಪದಗಳನ್ನು ಬಳಸಬೇಕಿದ್ದಲ್ಲಿ, ಈ ನುಡಿಗಳನ್ನಾಡುವವರಿಗೆ ಯಾವಾಗಲೂ ತಮ್ಮ ಮೂಡ ಯಾವುದು, ಪಡು ಯಾವುದು ಎಂಬುದು ಕಚಿತವಾಗಿ ಗೊತ್ತಿರಬೇಕು. ಆಸ್ಟೇಲಿಯಾದ ಮರಳುಗಾಡುಗಳಲ್ಲಿ ನೆಲೆಸಿರುವ ಬುಡಕಟ್ಟಿನ ಜನರಿಗೆ, ಇಲ್ಲವೇ ತೆಂಕು ಅಮೆರಿಕಾದ ದಟ್ಟವಾದ ಕಾಡುಗಳಲ್ಲಿ ನೆಲೆಸಿರುವ ಜನರಿಗೆ ಈ ರೀತಿ ಯಾವಾಗಲೂ ದಿಕ್ಕುಗಳ ಅರಿವಿರುವುದು ತುಂಬಾ ಉಪಯುಕ್ತವಾಗಿದೆ.

ನುಡಿಗಳ ನಡುವೆ ಎಣಿಕೆಪದಗಳ ಬಳಕೆಯಲ್ಲಿ ಕಾಣಿಸುವ ವ್ಯತ್ಯಾಸಗಳೂ ಆ ನುಡಿಗಳನ್ನಾಡುವ ಜನರ ಬಗೆತದ ಮೇಲೆ ಪರಿಣಾಮಗಳನ್ನು ಬೀರುವ ಹಾಗೆ ಕಾಣಿಸುತ್ತದೆ. ಪಿರಹ ಎಂಬ ನುಡಿಯೊಂದನ್ನು ಆಡುವ ಜನಾಂಗ ಅಮೆಜೋನ್ ಕಾಡುಗಳಲ್ಲಿ ನೆಲೆಸಿದೆ; ಈ ನುಡಿಯಲ್ಲಿ ಮೂರು ಎಣಿಕೆಪದಗಳು ಮಾತ್ರ ಬಳಕೆಯಲ್ಲಿವೆ: ಒಂದೆರಡು ವಸ್ತುಗಳ ಎಣಿಕೆಯನ್ನು ತಿಳಿಸುವ ಪದವೊಂದು; ತುಸು ಹೆಚ್ಚು ಎಣಿಕೆಯಲ್ಲಿರುವ ವಸ್ತುಗಳನ್ನು ಬಣ್ಣಿಸುವ ಪದ ಇನ್ನೊಂದು; ಮತ್ತು ತುಂಬಾ ಹೆಚ್ಚು ಎಣಿಕೆಯ ವಸ್ತುಗಳನ್ನು ಬಣ್ಣಿಸುವ ಪದ ಮತ್ತೊಂದು. ಇಂತಹ ಮೂರು ಪದಗಳು ಮಾತ್ರ ಈ ನುಡಿಯಲ್ಲಿ ಇರುವ ಕಾರಣ, ಅದರ ಆಡುಗರು ಯಾವುದೇ ಒಂದು ಗುಂಪಿನಲ್ಲಿರುವ ವಸ್ತುಗಳ ಎಣಿಕೆಯನ್ನು ಕಚಿತವಾಗಿ ತಿಳಿಸಲಾರರು.

ಹಾಗಾಗಿ, ಈ ನುಡಿಯನ್ನಾಡುವ ಜನರಿಗೆ ಒಂದು ಗುಂಪಿನಲ್ಲಿರುವ ವಸ್ತುಗಳ ಎಣಿಕೆ ಇನ್ನೊಂದು ಗುಂಪಿನಲ್ಲಿರುವ ವಸ್ತುಗಳ ಎಣಿಕೆಗಿಂತ ಹೆಚ್ಚಿದೆಯೇ ಇಲ್ಲವೇ ಕಡಿಮೆಯಿದೆಯೇ ಎಂಬುದನ್ನು ಆ ಎರಡು ಗುಂಪುಗಳನ್ನು ಬೇರೆ ಬೇರಾಗಿ ನೋಡಿ ಕಚಿತವಾಗಿ ಹೇಳಲು ಬರುವುದಿಲ್ಲ. ಅವುಗಳಲ್ಲಿ ಒಂದು ಗುಂಪಿನಲ್ಲಿರುವ ಒಂದೊಂದು ವಸ್ತುವನ್ನೂ ಇನ್ನೊಂದು ಗುಂಪಿನ ವಸ್ತುಗಳ ಎದುರಿಗಿರಿಸಿ ಅದನ್ನು ತಿಳಿಯಬೇಕಾಗುತ್ತದೆ. ಇದೇ ರೀತಿಯಲ್ಲಿ, ಒಂದು ಗುಂಪಿನಲ್ಲಿ ಹತ್ತು ಚೆಂಡುಗಳನ್ನಿರಿಸಿ, ಅಶ್ಟೇ ಹಣ್ಣುಗಳಿರುವ ಇನ್ನೊಂದು ಗುಂಪನ್ನು ಉಂಟುಮಾಡಲು ಹೇಳಿದರೆ, ಮೊದಲನೇ ಗುಂಪಿನಲ್ಲಿರುವ ಒಂದೊಂದು ಚೆಂಡನ್ನೂ ಎತ್ತಿಹಿಡಿದು, ಅವುಗಳೆದುರು ಒಂದೊಂದು ಹಣ್ಣನ್ನು ಇರಿಸಿ ಎರಡನೆಯ ಗುಂಪನ್ನು ಅವರು ಉಂಟುಮಾಡಬೇಕಾಗುತ್ತದೆ. ಹಾಗೆ ಮಾಡದೆ ನೇರವಾಗಿ ಹತ್ತು ಹಣ್ಣುಗಳ ಒಂದು ಗುಂಪನ್ನು ಮಾಡಲು ಅವರಿಗೆ ಬರುವುದಿಲ್ಲ.
ಒಂದು ನುಡಿಯಲ್ಲಿ ಹೊತ್ತಿನ ವ್ಯತ್ಯಾಸಗಳನ್ನು ತಿಳಿಸಲು ಎಂತಹ ಪದಗಳನ್ನು ಬಳಸಲಾಗುತ್ತದೆ ಎಂಬುದೂ ಅದರ ಆಡುಗರ ಬಗೆತದ ಮೇಲೆ ಪರಿಣಾಮ ಬೀರುವ ಹಾಗೆ ಕಾಣಿಸುತ್ತದೆ. ಇಂಗ್ಲಿಶ್ನಲ್ಲಿ ಹೊತ್ತನ್ನು ತಿಳಿಸಲು ಹೆಚ್ಚಿನೆಡೆಗಳಲ್ಲೂ ಹಿಂದೆ ಮತ್ತು ಮುಂದೆ ಎಂಬ ಪದಗಳನ್ನು ಬಳಸಲಾಗುತ್ತದೆ (ಕನ್ನಡದಲ್ಲೂ ಹೀಗೆಯೇ); ‘ಅವನು ಹಿಂದೆ ಏನು ಮಾಡುತ್ತಿದ್ದ? ಮುಂದೆ ಏನು ಮಾಡಲಿದ್ದಾನೆ?’ ಎಂಬಂತಹ ಮಾತುಗಳಲ್ಲಿ ಈ ಬಳಕೆಯನ್ನು ಕಾಣಬಹುದು; ಇದಕ್ಕೆ ಬದಲು, ಚಯ್ನೀಸ್ನಲ್ಲಿ ಹೆಚ್ಚಾಗಿ ಮೇಲೆ ಮತ್ತು ಕೆಳಗೆ ಎಂಬ ಪದಗಳನ್ನು ಬಳಸಲಾಗುತ್ತದೆ.

ಹೊತ್ತಿನ ಕುರಿತಾಗಿರುವ ಕೇಳ್ವಿಗಳಿಗೆ ಒಂದರ ಬಲಕ್ಕೆ ಒಂದರಂತಿರುವ ಚಿತ್ರಗಳನ್ನು ನೋಡಿದ ಬಳಿಕ ಇಂಗ್ಲಿಶ್ ನುಡಿಗರು ಹೆಚ್ಚು ಬೇಗನೆ ಉತ್ತರಿಸಬಲ್ಲರು, ಮತ್ತು ಒಂದರ ಕೆಳಗೆ ಒಂದರಂತಿರುವ ಚಿತ್ರಗಳನ್ನು ನೋಡಿದ ಬಳಿಕ ಚಯ್ನೀಸ್ ನುಡಿಗರು ಹೆಚ್ಚು ಬೇಗನೆ ಉತ್ತರಿಸಬಲ್ಲರು; ಈ ವ್ಯತ್ಯಾಸಕ್ಕೆ ಮೇಲೆ ತಿಳಿಸಿದ ಹೊತ್ತಿನ ಪದಗಳ ನಡುವಿನ ವ್ಯತ್ಯಾಸವೇ ಕಾರಣವಿರಬೇಕು.

(ಈ ಬರಹ ವಿಜಯ ಕರ‍್ನಾಟಕ ಸುದ್ದಿಹಾಳೆಯ ’ಎಲ್ಲರ ಕನ್ನಡ’ ಅಂಕಣದಲ್ಲಿ ಮೊದಲು ಮೂಡಿಬಂದಿತ್ತು)

facebooktwitter